Saturday, 18 August 2018

ಮೋಡಿ ಮಾಡಿದ ಬೇಡಿ ಬಂದವಳ ಹಾಡುಗಳು


1968 ಎಪ್ರಿಲ್ ತಿಂಗಳ ಒಂದು  ಸುಧಾ  ಸಂಚಿಕೆಯಲ್ಲಿದ್ದ ಈ ಸುದ್ದಿ ತುಣುಕನ್ನು ಆಗ ಓದಿದವರಿಗೆ ಬೇಡಿ ಬಂದವಳು ಚಿತ್ರಕ್ಕಾಗಿ ಧ್ವನಿಮುದ್ರಿಸಲ್ಪಟ್ಟಿರುವ ಈ ಏಳು ಸ್ವರದ ಹಾಡು ಹೇಗಿರಬಹುದೆಂಬ ಕಲ್ಪನೆಯೂ ಇದ್ದಿರಲಾರದು.  ಮುಂದೊಂದು ದಿನ ಇದು ಮಾತ್ರವಲ್ಲ,  ಇಲ್ಲಿ ಉಲ್ಲೇಖಿಸಲ್ಪಟ್ಟಿರದ ಆ ಚಿತ್ರದ ಇನ್ನೊಂದು ಹಾಡು ಕೂಡ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆಯಲಿವೆ ಎಂದು ಕೂಡ ಯಾರೂ ಗ್ರಹಿಸಿರಲಾರರು. ಆ ಇನ್ನೊಂದು ಹಾಡು ನೀರಿನಲ್ಲಿ ಅಲೆಯ ಉಂಗುರ ಎಂದು ನೀವು ಸರಿಯಾಗಿ ಊಹಿಸಿದಿರಿ. ಎವರ್ ಗ್ರೀನ್ ಹಾಡುಗಳ ಸಾಲಿಗೆ ಸೇರಿದ  ಏಳು ಸ್ವರದ ವಿಜ್ಞಾನಗಾನ ಮತ್ತು ಉಂಗುರದ ಪ್ರೇಮಾಯಣದ ಜೊತೆಗೆ ಆ ಚಿತ್ರದಲ್ಲಿ ಇನ್ನೂ ನಾಲ್ಕು ಹಾಡುಗಳಿದ್ದು ಇಲಿಗಳು ಮತ್ತು ಬೆಕ್ಕಿನ ಕಥನಗಾನವಾದ ಒಂದಾನೊಂದು ಊರು ಸ್ವಲ್ಪ ಮಟ್ಟಿಗೆ ಮೆಚ್ಚುಗೆ ಗಳಿಸಿದರೂ ಕನ್ನಡದಾ ತಾಯೆ, ಯೌವನ ಮೂಡಿದೆ ಮತ್ತು ಟೈಟಲ್ ಹಾಡು ಬೇಡಿ ಬಂದವಳು ಜನಪ್ರಿಯತೆಯ  ಓಟದಲ್ಲಿ ಹಿಂದೆ ಉಳಿದವು.  ಚಿತ್ರಮಂದಿರದಲ್ಲಿ ಈ ಹಾಡುಗಳನ್ನು ನೋಡಿ ಆಲಿಸಲು ಮುಂದಿನ ಒಂದೇ ತಿಂಗಳಲ್ಲಿ ಅಂದರೆ ಮೇ 1968ರಲ್ಲಿ ಸಾಧ್ಯವಾಗಿತ್ತಾದರೂ ಅಂದಿನ ದಿನಗಳಲ್ಲಿ ಕನ್ನಡ ಹಾಡುಗಳ ಮಟ್ಟಿಗೆ ಸಾಮಾನ್ಯವಾಗಿದ್ದಂತೆ ರೇಡಿಯೋದಲ್ಲಿ ಕೇಳಲು ಕೆಲವು ತಿಂಗಳುಗಳು ಬೇಕಾದವು.  ಅದೃಷ್ಟವಶಾತ್ ವಾರ್ಷಿಕ ಖರೀದಿಗಾಗಿ  ಅಣ್ಣನೊಡನೆ ಬಂದಿದ್ದ ನನಗೆ ಮಂಗಳೂರಿನ ರಾಮಕಾಂತಿ ಟಾಕೀಸಲ್ಲಿ  ಈ ಚಿತ್ರ ವೀಕ್ಷಿಸುವ ಅವಕಾಶ ಸಿಕ್ಕಿತ್ತು.

ಮೇಲಿನ ಸುದ್ದಿ ತುಣುಕಲ್ಲಿ ಕಾಣುವಂತೆ ಈ ಚಿತ್ರಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆದವರು ಆರ್.ಎನ್. ಜಯಗೋಪಾಲ್ ಹಾಗೂ ಸಂಗೀತ ನಿರ್ದೇಶನ ಮಾಡಿದವರು ಆರ್. ಸುದರ್ಶನಂ.  ಈ ಸುದರ್ಶನಂ ಅವರನ್ನು ಅನೇಕರು ಜಯಗೋಪಾಲ್ ಅವರ ಸೋದರ ಆರ್.ಎನ್. ಸುದರ್ಶನ್ ಎಂದು ತಪ್ಪಾಗಿ ತಿಳಿಯುವುದಿದೆ. ಆರ್ ಮತ್ತು ಸುದರ್ಶನ್ ಇಬ್ಬರಲ್ಲೂ common ಆದ್ದರಿಂದ ಈ ಗೊಂದಲ. ಕೆಲವು ಹಾಡುಗಳನ್ನು ಹಾಡಿರುವರಾದರೂ ಆರ್.ಎನ್. ಸುದರ್ಶನ್ ಎಂದೂ ಸಂಗೀತ ನಿರ್ದೇಶನ ಮಾಡಿಲ್ಲ.  ಸಂಗೀತ ನಿರ್ದೇಶಕ ಆರ್. ಸುದರ್ಶನಂ ಅವರನ್ನು ಹಿಂದಿಯ ಸಚಿನ್ ದೇವ್ ಬರ್ಮನ್ ಅವರಂತೆ ದಕ್ಷಿಣ ಭಾರತ ಚಿತ್ರಸಂಗೀತದ ಭೀಷ್ಮ ಪಿತಾಮಹ ಎಂದರೆ ತಪ್ಪಾಗಲಾರದು.  ಇವರು 1940ರ ದಶಕದಿಂದ 70ರ ದಶಕದ ಮಧ್ಯ ಭಾಗದ ವರೆಗೆ ಈ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು.  ಬರ್ಮನ್ ಅವರಂತೆಯೇ ಇವರು ಕೂಡ ವರ್ಷಕ್ಕೆ ಒಂದೋ ಎರಡೋ ಚಿತ್ರಗಳಿಗೆ ಮಾತ್ರ  ಸಂಗೀತ ನೀಡುತ್ತಿದ್ದುದು.  ಆದರೆ ತನ್ನ ಬಹುತೇಕ ಚಿತ್ರಗಳಲ್ಲಿ ಒಂದಾದರೂ ಎವರ್ ಗ್ರೀನ್ ಹಾಡು ಇರುತ್ತಿದ್ದುದು ಇವರ ಹೆಗ್ಗಳಿಕೆ.  ಎ.ವಿ.ಎಂ ಸ್ಟುಡಿಯೋದ ಆಸ್ಥಾನ  ಸಂಗೀತ ನಿರ್ದೇಶಕರಾಗಿದ್ದ ಇವರು ಆ ಸಂಸ್ಥೆಯ ಬಹುಪಾಲು ಚಿತ್ರಗಳಿಗೆ ಸಂಗೀತ ಒದಗಿಸಿದರು. ಆರಂಭದ ಕೆಲ ವರ್ಷ  ಕಿರಿಯ ಸೋದರ ಆರ್. ಗೋವರ್ಧನ್ ಕೂಡ ಇವರ ಜೊತೆಗಿದ್ದರು.  ಕನ್ನಡ ಚಿತ್ರರಂಗದ ಶೈಶವಾವಸ್ಥೆಯಲ್ಲಿ ಎಲ್ಲರೂ ಹಿಂದಿಯ ಪ್ರಸಿದ್ಧ ಟ್ಯೂನುಗಳಿಗೇ ಮೊರೆ ಹೋಗುತ್ತಿದ್ದಾಗ ಮೊತ್ತ ಮೊದಲು ಸ್ವಂತ ಧಾಟಿಗಳ ರುಚಿ ತೋರಿಸಿದವರು ಇವರೇ.  ಪಿ.ಬಿ. ಶ್ರೀನಿವಾಸ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಜಾತಕ ಫಲ ಚಿತ್ರದ ಈ ಮೂಢತನವಿದೇಕೆ ಹಿಂದಿ ಧಾಟಿ ಹೊಂದಿದ್ದರೂ ಚಿಂತಿಸದಿರು ರಮಣಿ ಅವರ ಸ್ವಂತ ಟ್ಯೂನ್ ಆಗಿತ್ತು.  1950ರ ದಶಕದಲ್ಲಿ ಕನ್ನಡಕ್ಕೆ ರಾಜಕುಮಾರ್ ಅವರನ್ನು ಕೊಟ್ಟ ಬೇಡರ ಕಣ್ಣಪ್ಪ, ಕಲ್ಯಾಣ್ ಕುಮಾರ್ ಅಭಿನಯದ ಸದಾರಮೆ, ಆರ್. ನಾಗೇಂದ್ರ ರಾವ್ ಮುಖ್ಯ ಭೂಮಿಕೆಯಲ್ಲಿದ್ದ ಆದರ್ಶ ಸತಿ,   ರಾಜಕುಮಾರ್ ರಾವಣನಾಗಿ ಅಭಿನಯಿಸಿದ್ದ ಭೂ ಕೈಲಾಸ ಮುಂತಾದ ಇವರ ಸಂಗೀತವಿದ್ದ ಪ್ರತೀ ಚಿತ್ರದಲ್ಲಿ  chart buster ಹಾಡುಗಳು ಇದ್ದದ್ದು ಗೊತ್ತೇ ಇದೆ. ಈ ಪರಂಪರೆ 60ರ ದಶಕದಲ್ಲೂ ಮುಂದುವರಿದು ಮಿಸ್. ಲೀಲಾವತಿ, ಪ್ರೇಮಮಯಿ, ಅರುಣೋದಯ, ನಾವೀಗ ಚರ್ಚಿಸುತ್ತಿರುವ ಬೇಡಿ ಬಂದವಳು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ,  ಮೂರುವರೆ ವಜ್ರಗಳು, ಭಾರತದ ರತ್ನ ಮುಂತಾದ ಚಿತ್ರಗಳಲ್ಲೂ ಹಿಟ್ ಹಾಡುಗಳಿದ್ದವು.


ಸಿ.ಎಸ್. ಜಯರಾಮನ್, ಸೀರ್ಕಾಳಿ ಗೋವಿಂದರಾಜನ್,  ಟಿ. ಎಂ. ಸೌಂದರರಾಜನ್  ಮುಂತಾದ ಕನ್ನಡಕ್ಕೆ ಅಪರೂಪದವರಾದ ಗಾಯಕರ ಧ್ವನಿಯಲ್ಲಿ ಹಿಟ್ ಗೀತೆಗಳನ್ನು ನೀಡಿದ್ದು ಇವರ ವಿಶೇಷತೆ.  ಪ್ರೇಮಮಯಿ ಚಿತ್ರದಲ್ಲಿ ಜೇಸುದಾಸ್ ಅವರ ಧ್ವನಿಯನ್ನು ರಾಜ್ ಅವರಿಗೆ ಬಳಸಿದವರು ಇವರು.  ಆ ಚಿತ್ರದ ಟೂ ಟೂ ಟೂ ಬೇಡಪ್ಪ ಮತ್ತು ಹೆಣ್ಣೆ ನಿನ್ನ ಕಣ್ಣ ನೋಟ ಹಾಡುಗಳು ಹಿಟ್ ಆದರೂ ನಂತರ ರಾಜ್ ಅವರ ಧ್ವನಿಯಾಗಿ  ಪಿ.ಬಿ.ಎಸ್ ಅವರೇ ಮುಂದುವರಿದರು.  ಘಂಟಸಾಲ ಕೂಡ ರಾಜ್ ಅವರಿಗೆ ಅನೇಕ ಹಿಟ್ ಹಾಡುಗಳನ್ನು ಹಾಡಿದರೂ ಪಿ.ಬಿ.ಎಸ್ ಸ್ಥಾನಕ್ಕೆ ಚ್ಯುತಿ ಬಂದಿರಲಿಲ್ಲ ಅಲ್ಲವೇ.  ದೋಣಿ ಸಾಗಲಿ ಹಾಡಿಗೆ ಎಸ್. ಜಾನಕಿ ಜೊತೆಗೆ ರಾಮಚಂದ್ರ ರಾವ್ ಎಂಬ ಅಜ್ಞಾತ ಗಾಯಕನನ್ನು ಬಳಸಿಯೂ ಅದನ್ನು ಜನಪ್ರಿಯತೆಯ ತುತ್ತತುದಿಗೇರಿಸಿದ್ದು ಇವರ ಸಾಧನೆ.

ಹೆಚ್ಚಿನ ಸಂಖ್ಯೆಯಲ್ಲಿ  ತಮಿಳು ಚಿತ್ರಗಳಿಗೆ ಹಾಗೂ ಒಂದೆರಡು  ಹಿಂದಿ ಚಿತ್ರಗಳಿಗೂ ಇವರು ಸಂಗೀತ ನಿರ್ದೇಶನ ಮಾಡಿದ್ದಾರೆ.  ಎ.ವಿ.ಎಂ. ನ ಕೆಲವು ಚಿತ್ರಗಳು ಹಿಂದಿಯಲ್ಲಿ ಮರು ನಿರ್ಮಾಣಗೊಂಡಾಗ ಸಂಗೀತ ನಿರ್ದೇಶಕರು ಬದಲಾದರೂ ಕೆಲವು ಹಾಡುಗಳಿಗೆ ಇವರ ಮೂಲ  ಧಾಟಿಯನ್ನು ಉಳಿಸಿಕೊಂಡದ್ದಿದೆ. ಮೈ ಚುಪ್ ರಹೂಂಗಿ ಚಿತ್ರದ ತುಮ್ಹೀ ಹೊ ಮಾತಾ, ಮೈ ಭೀ ಲಡಕೀ ಹೂಂ ಚಿತ್ರದಲ್ಲಿ ಪಿ.ಬಿ.ಎಸ್ ಮತ್ತು ಲತಾ ಮಂಗೇಶ್ಕರ್ ಹಾಡಿದ ಚಂದಾ ಸೆ ಹೋಗಾ ವೊ ಪ್ಯಾರಾ ಮತ್ತು ಅದೇ ಚಿತ್ರದ ಕೃಷ್ಣಾ ಓ ಕಾಲೇ ಕೃಷ್ಣಾ ಇದಕ್ಕೆ ಒಂದೆರಡು ಉದಾಹರಣೆಗಳು.

ಇಂಥ ಪ್ರತಿಭಾವಂತ ತನ್ನ 54ರ ವಯಸ್ಸಲ್ಲಿ 24ರ ಹುಮ್ಮಸ್ಸನ್ನುಳಿಸಿಕೊಂಡು ಸೃಷ್ಟಿಸಿದ ಬೇಡಿ ಬಂದವಳು ಚಿತ್ರದ ಎರಡು ಹಾಡುಗಳತ್ತ ಈಗ ಗಮನ ಹರಿಸೋಣ.

ಏಳು ಸ್ವರವು ಸೇರಿ ಸಂಗೀತವಾಯಿತು.



ಓರ್ವ ನುರಿತ ಅಧ್ಯಾಪಕರೂ  ಈ ಹಾಡಿನಷ್ಟು ಪರಿಣಾಮಕಾರಿಯಾಗಿ ವಿಜ್ಞಾನ ಪಾಠ ಮಾಡಲಾರರೇನೋ! ಅದೂ ಒಮ್ಮೆ ಕೇಳಿದರೆ ಸುಲಭವಾಗಿ ಕಂಠಪಾಠವಾಗಬಹುದಾದ ಸರಳ ಶಬ್ದಗಳಲ್ಲಿ. ಶಂಕರಾಭರಣದ ಆರೋಹಣ ಅವರೋಹಣದ ಸ್ವರಗಳೊಂದಿಗೆ ಆರಂಭವಾಗುವ  ಹಾಡಲ್ಲಿ ಆ ರಾಗದ ಜೊತೆಗೆ ಅಲ್ಲಲ್ಲಿ ಅನ್ಯ ಸ್ವರಗಳಾಗಿ ರಿ1 ಮತ್ತು ನಿ2 ಕೂಡ ಬಳಕೆಯಾಗಿವೆ. ತಿಶ್ರ ನಡೆಯ 6/8 ರಿದಂ ಹೊಂದಿರುವ ಇದು ಮಕ್ಕಳೂ ಸುಲಭವಾಗಿ ಹಾಡಲಾಗುವಂತೆ  ಹೆಚ್ಚು ಮುರ್ಕಿ, ಗಮಕಗಳಿಲ್ಲದ ರೀತಿಯಲ್ಲಿ ಸಂಯೋಜಿಸಲ್ಪಟ್ಟಿದೆ.  ಹಾಡಿನ ಮೊದಲ ಎರಡು ಸಾಲುಗಳಿಗೆ ಗಿಟಾರ್ ಮತ್ತು ಗೆಜ್ಜೆಯ ಹಿಮ್ಮೇಳ ಮಾತ್ರವಿದ್ದು ಆ ಮೇಲೆ ಢೋಲಕ್, ತಬ್ಲಾ  ಸೇರಿಕೊಳ್ಳುತ್ತವೆ.  ಸರಳವಾದ interludeಗೆ ಹಿನ್ನೆಲೆಯಾಗಿ ಗಿಟಾರ್ ಮಾತ್ರ ಇದೆ.  Interludeನ ಉತ್ತರಾರ್ಧ ಕುಲವಧು ಚಿತ್ರದ ತಾಯೆ ಬಾರ ಮೊಗವ ತೋರ ಹಾಡನ್ನು ನೆನಪಿಸುವಂತಿದೆ.  ಎರಡನೆಯ ಚರಣದ ಮುನ್ನವೂ ಅದೇ interlude ಬಳಕೆಯಾಗಿದೆ.




ಏಳು ಸ್ವರ ಮತ್ತು ಏಳು ಬಣ್ಣಗಳನ್ನು ಬಣ್ಣಿಸುವ ಇಂತಹುದೇ ಸಾಲುಗಳನ್ನು ಜಯಗೋಪಾಲ್ ಈ ಮೊದಲೇ ಇನ್ನೊಂದು ಹಾಡಿನಲ್ಲಿ  ಬಳಸಿದ್ದರು. ಒಂದು ಹಾಡಿನ ಟ್ಯೂನ್ ಇನ್ನೊಂದು ಹಾಡಿನಲ್ಲಿ ಇಣುಕುವುದುಂಟು.  ಆದರೆ ಒಂದರ ಸಾಹಿತ್ಯದ ಸಾಲು ಇನ್ನೊಂದರಲ್ಲಿ ಕಾಣಿಸುವುದು ಅಪರೂಪ.  ಪಿ.ಬಿ.ಎಸ್ ಧ್ವನಿಯಲ್ಲಿರುವ ಆ ತುಣುಕನ್ನು ಆಲಿಸಿ ಯಾವ ಹಾಡೆಂದು ಗುರುತಿಸಿ.




ನೀರಿನಲ್ಲಿ ಅಲೆಯ ಉಂಗುರ




ಈ ಹಾಡನ್ನಂತೂ ನೀವೆಲ್ಲ ನೂರಾರು ಬಾರಿ ಕೇಳಿದ್ದೀರಿ, ಈಗಲೂ ಕೇಳುತ್ತಲೇ ಇದ್ದೀರಿ.  ಈ ಹಾಡಿನ ರಚನೆಯ ಕುರಿತು ಅನೇಕ ಕತೆಗಳನ್ನೂ ಓದಿದ್ದೀರಿ.  ಆ ಕತೆಗಳಲ್ಲಿ ಜಯಗೋಪಾಲ್ ಅವರು ಹಾಡು ಬರೆಯುವಾಗ ಪದಗಳು ಹೊಳೆಯದಿದ್ದರೆ ಕೈ ಬೆರಳ ಉಂಗುರ ತಿರುಗಿಸುತ್ತಿದ್ದರು ಮತ್ತು ಈ ಹಾಡು ಬರೆಯುವ ದಿನ ಅವರು ಉಂಗುರ ಮರೆತು ಬಂದಿದ್ದರು ಎಂಬ ಅಂಶ ಸತ್ಯವೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.  ಅಂದು ತಿರುಗಿಸಲು ಕೈಯಲ್ಲಿ ಉಂಗುರವಿಲ್ಲದ್ದರಿಂದ 26 ಉಂಗುರಗಳನ್ನು ಬಳಸಿ ಅವರು ಈ ಹಾಡು ರಚಿಸಿದರು!  ಬೇಕಿದ್ದರೆ ಹಾಡು ಕೇಳುತ್ತಾ ಎಣಿಸಿ ನೋಡಿ.  ತನ್ನಲ್ಲಿಲ್ಲದ ಉಂಗುರ ಆ ಪ್ರೇಮಿಗಳಿಗೇಕೆ ಎಂದೆಣಿಸಿ ಬೆರಳಿನಲ್ಲಿ ಚಿನ್ನದುಂಗುರ ಎಂದು ಬರೆಯಬಹುದಾಗಿದ್ದ  ಸಾಲನ್ನು ಅವರು ಬರೆಯಲಿಲ್ಲ!  ಪ್ರಾಸಕ್ಕೆ ಮತ್ತು ಲಯಕ್ಕೆ ಹೊಂದಿಸಲು ಸಂಚರ ಮತ್ತು ಗುಂಗುರ ಎಂಬ ಎರಡು ಪದಗಳನ್ನು ಟಂಕಿಸುವ ಸ್ವಾತಂತ್ರ್ಯವನ್ನೂ ಅವರು ವಹಿಸಿದ್ದಾರೆ.


ಆರ್. ಸುದರ್ಶನಂ  ಅವರಂತೂ ತನ್ನ ಜೀವಮಾನದ ಶ್ರೇಷ್ಠ ನಿರ್ವಹಣೆ ಎನ್ನುವಂಥ ರೀತಿಯಲ್ಲಿ ಈ ಹಾಡಿನ ರಾಗ ಸಂಯೋಜನೆ ಮಾಡಿದ್ದಾರೆ.  ನಠಭೈರವಿ ರಾಗದ ಸ ರಿ2 ಗ2 ಮ1 ಪ  ದ1  ನಿ2  ಸ್ವರಗಳನ್ನು ಮುಖ್ಯವಾಗಿಟ್ಟುಕೊಂಡು ಹೆಚ್ಚುವರಿಯಾಗಿ ಮ2 ಮತ್ತು   ದ2 ಸ್ವರಗಳನ್ನೂ ಬಳಸಲಾಗಿದೆ.  ಈ ಹಾಡು ಕೂಡ ತಿಶ್ರ ಜಾತಿಯ 6/8 ನಡೆಯಲ್ಲಿದ್ದು ಜನಪ್ರಿಯ swing ರೀತಿಯ ರಿದಂ ಹೊಂದಿದೆ. ಈ swing ನಡೆಗೆ ಹೊಂದುವಂತೆ ಜಯಗೋಪಾಲ್ ಅವರು  ಗುರು ಲಘು, ಗುರು ಲಘು ಮಾತ್ರಾಕಾಲ ಅಂದರೆ 2 - 1. 2 - 1 ಅಕ್ಷರಕಾಲದ ಪದಗಳನ್ನೇ ಹೆಚ್ಚು ಬಳಸಿದ್ದು ಹಾಡಿಗೆ ಹೆಚ್ಚಿನ ಮೆರುಗು ನೀಡಿದೆ. ಉದಾ : ಭೂ(2) ಮಿ(1)  ಮೇ(2)  ಲೆ(1) ಹೂ(2) ವಿ(1) ನುಂ(2) ಗು(1) ರ. ಈ ಹಾಡಲ್ಲಿ ಕೆಲವೆಡೆ ಬೇಕರಾರ್ ಕರಕೆ ಹಮೆ ಯೂ ನ ಜಾಯಿಯೇ, ಕಿಸೀ ಕಿ ಮುಸ್ಕುರಾಹಟೋಂಪೆ ಹೋ ನಿಸಾರ್ ಅಥವಾ ತುಟಿಯ ಮೇಲೆ ತುಂಟ ಕಿರುನಗೆ ಹಾಡುಗಳ ಛಾಯೆ ಗೋಚರಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಆ ಹಾಡುಗಳೂ swing  ಮಾದರಿಯಲ್ಲೇ ಇರುವುದು. ಕೊಳವೊಂದರಲ್ಲಿ ಕಲ್ಲೆಸೆದಾಗ ನೀರಿಲ್ಲೇಳುವ ಅಲೆಗಳ ಉಂಗುರದ ಅನುಭವ ನೀಡುವ ಗಿಟಾರ್ ಮತ್ತು ಕೊಳಲುಗಳ preludeನೊಂದಿಗೆ ಹಾಡು ಆರಂಭವಾಗುತ್ತದೆ. ಪಲ್ಲವಿ ಭಾಗಕ್ಕೆ ಬೊಂಗೋ ಮತ್ತು ಚರಣ ಭಾಗಕ್ಕೆ ತಬ್ಲಾ ಹಿನ್ನೆಲೆ ಇದೆ.  ಗಿಟಾರ್ ಮತ್ತು ಅಕಾರ್ಡಿಯನ್ ಬಳಕೆ extra ordinary.  ಮೂರು ಚರಣಗಳಿಗೆ ಬೇರೆ ಬೇರೆ interlude ಇದೆ. ಮೊದಲ interludeನಲ್ಲಿ ಗಿಟಾರ್ ಮತ್ತು ಗೆಜ್ಜೆಯ ಸದ್ದಿನ ಸಂಗಮ ಆ ಚರಣದಲ್ಲಿ ಬರುವ ಅಂದಿಗೆಯ ಉಲ್ಲೇಖಕ್ಕೆ ಮುನ್ನುಡಿ ಬರೆಯುತ್ತದೆ. ಎರಡನೇ ಚರಣದ ಧಾಟಿ ಒಂದು ಮತ್ತು ಮೂರನೆಯದಕ್ಕಿಂತ ಭಿನ್ನವಾಗಿದೆ. ಸಿನಿಮಾದಲ್ಲಿರುವ  ಹಾಡಿನ ಚರಣಗಳ ಮೊದಲ ಎರಡು ಸಾಲುಗಳ ಪುನರಾವರ್ತನೆ  ಗ್ರಾಮಫೋನ್ ಅಥವಾ ರೇಡಿಯೊದಲ್ಲಿ ಕೇಳಿ ಬರುವ ವರ್ಶನ್‍ನಲ್ಲಿಲ್ಲ.   ಪುನರಾವರ್ತನೆಯಾಗುವ ಸಾಲುಗಳನ್ನು ಕೊಂಚ ಭಿನ್ನವಾಗಿ ಹಾಡುವ ರಫಿ ಸ್ಟೈಲನ್ನು ಪಿ.ಬಿ.ಎಸ್ ಮತ್ತು ಪಿ.ಸುಶೀಲಾ ಇಬ್ಬರೂ ಅನುಸರಿಸಿದ್ದಾರೆ.  ಪುನರಾವರ್ತನೆಯಾಗುವ ಸಾಲಿನ ಕೊನೆಯನ್ನು ಮುಂದಿನ ಸಾಲಿನ ಎತ್ತುಗಡೆಗೆ ಸರಿಯಾಗುವಂತೆ ಮಾರ್ಪಡಿಸಿ ಹಾಡಿದ ರೀತಿ ಅನನ್ಯ.  ಸಾಮಾನ್ಯವಾಗಿ ಇದನ್ನು ಹಿನ್ನೆಲೆ ವಾದ್ಯಗಳು ಮಾಡುತ್ತವೆ. ಪಲ್ಲವಿ ಮತ್ತು ಚರಣಗಳ ಕೊನೆಯಲ್ಲಿ ಬರುವ ಸಾ  ನೀ  ದಾ  ಪಾ  ಸ್ವರಸ್ಥಾನಗಳ phrase ಅತ್ಯಾಕರ್ಷಕವಾಗಿದ್ದು ಹಾಡಿನ ಹೈ ಲೈಟ್ ಅನ್ನಬಹುದು.  ಈಗ ಸಿನಿಮಾದಲ್ಲಿರುವ ಹಾಡಿನ ವರ್ಷನ್ ಇಲ್ಲಿ ಕೇಳಿ.



ಕಲ್ಯಾಣ್ ಕುಮಾರ್ ಚಂದ್ರಕಲಾ ಅಭಿನಯದ ಸದಭಿರುಚಿಯ ಸಿನಿಮಾ ಬೇಡಿ ಬಂದವಳು ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು  ಈ ಚಿತ್ರದ ಮೇಲೆ ಕ್ಲಿಕ್ಕಿಸಿ ವೀಕ್ಷಿಸಬಹುದು.
https://youtu.be/Sqy4yja-O04


***********************************

ಇನ್ನು ಮುಂದಿನ ಭಾಗ  ಸ್ವರಲಿಪಿಯಲ್ಲಿ ಆಸಕ್ತಿಯಿದ್ದು ಈ ಹಾಡುಗಳನ್ನು ಕಲಿಯಬಯಸುವವರಿಗೆ ಮಾತ್ರ.

ಏಳು ಸ್ವರವು ಸೇರಿ
ಮುಖ್ಯ ರಾಗ ಶಂಕರಾಭರಣ - ಸ ರಿ2 ಗ3 ಮ1 ಪ ದ2 ನಿ3
ಅನ್ಯ ಸ್ವರಗಳು  ರಿ1 ಮತ್ತು ನಿ2
ಪ್ರತಿ ಸಾಲು ತಿಶ್ರ ನಡೆಯ 24 ಅಕ್ಷರಗಳನ್ನು ಹೊಂದಿದೆ.


ನೀರಿನಲ್ಲಿ ಅಲೆಯ ಉಂಗುರ
ಮುಖ್ಯ ರಾಗ : ನಠಭೈರವಿ ಸ ರಿ2 ಗ2 ಮ1 ಪ ದ1 ನಿ2
ಅನ್ಯ ಸ್ವರಗಳು  ಮ2 ಮತ್ತು  ದ2
ಇಲ್ಲೂ ಪ್ರತಿ ಸಾಲು ತಿಶ್ರ ನಡೆಯ 24 ಅಕ್ಷರಗಳನ್ನು ಹೊಂದಿದೆ.

9 comments:

  1. ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು. ಒಂದು ಚಲನಚಿತ್ರದಲ್ಲಿ ಎಷ್ಟು ಬಗೆಯ ಗೀತೆಗಳಿರುತ್ತಿದ್ದವು ಆಗ. ಈಗ.... ????

    R. Srinath (FB)

    ReplyDelete
  2. ಕೀಬೋರ್ಡ್ ಉಪಯೋಗಿಸಿ ಹೇಗೆ ನುಡಿಸಬಹುದು ಎಂದು
    ಇಷ್ಟು ಸರಳವಾಗಿ notations ನಿರೂಪಿಸಿದ್ದನ್ನು ನೋಡಿಯೇ ಇರಲಿಲ್ಲ.
    ನಿಮಗೆ ಧನ್ಯವಾದಗಳು.

    Simha Melkote (FB)

    ReplyDelete
  3. ಈ ಹಾಡಿಗೆ 50 ವರ್ಷ. ಅಂದರೆ ಸುವರ್ಣ ಮಹೋತ್ಸವ. ಇಂದಿಗೂ ಉಂಗುರದ ಧ್ವನಿ ಕಿವಿಯಲ್ಲಿ ಅನುರಣಿಸುತ್ತಲೇ ಇದೆ. ಅದಕ್ಕೆ ಕಾರಣ ನಠಭೈರವಿಯ ಮಾಂತ್ರಿಕ ಸ್ಪರ್ಶ. ಬೆಸುಗೆ 54 ಸಲ ಅಂತ ಎಣಿಸಿದ ಸವಿಸವಿನೆನಪು ಸಾವಿರ ನೆನಪು ಎದೆಯಾಳದಲ್ಲಿ ಅಚ್ಚಳಿಯದೆ ಉಳಿದಿದೆ. ಉಂಗುರ 26 ಸಲ ಉಲ್ಲೇಖಿಸಲ್ಪಟ್ಟಿದೆಯೆಂದು ಇದೀಗ ತಿಳಿಯಿತು.

    K. Rajakumar Kolar (FB)

    ReplyDelete
  4. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಏಳು ಸ್ವರವು ಸೇರಿ ಸಂಗೀತವಾಯಿತು ಎಂಬ ಸಾಲುಗಳನ್ನು ಕೆಲ ವರ್ಷ ಮೊದಲೇ ಆರ್. ಎನ್. ಜಯಗೋಪಾಲ್ ಅವರು ಪಿ.ಬಿ.ಎಸ್ ಧ್ವನಿಯಲ್ಲಿದ್ದ ಹಾಡೊಂದರಲ್ಲಿ ಬಳಸಿದ್ದು ಅದು ಯಾವುದು ಎಂಬ ರಸಪ್ರಶ್ನೆಗೆ ನಾಂದಿ ಚಿತ್ರದ ನಮ್ಮ ತಾಯಿ ಭಾರತಿ ಎಂದು ತ್ರಿವೇಣಿ ರಾವ್ ಮತ್ತು ಆರ್. ಶ್ರೀನಾಥ್ ಸರಿ ಉತ್ತರ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು. ಪ್ರಯತ್ನಿಸಿದ ಸುದರ್ಶನ ರೆಡ್ಡಿ ಅವರಿಗೂ ಅಭಿನಂದನೆಗಳು.

    ReplyDelete
  5. Entaha adbhuta hadugaLu haagu maahiti. These are evergreen songs. UNgurada haadina background gottiralilla. Apporvavaada maahitigaagi dhanyavadagalu 🙏🙏🙏

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದ.

      Delete
  6. ಸುದರ್ಶನಂ ಅವರಂತಹ ಉತ್ಕೃಷ್ಟ ಸಂಗೀತ ನಿರ್ದೇಶಕರ ಪರಿಚಯ ಅವರ ಕಾಲ ಮುಗಿದು ಇಷ್ಟು ವರ್ಷಗಳ ನಂತರ ಮಾಡಿಕೊಟ್ಟ ತಮಗೆ ಧನ್ಯವಾದಗಳು. ನಿಜವಾದ ಪ್ರತಿಭೆಗೆ ಎಂದೂ ಸಾವಿಲ್ಲ. ಅದರಲ್ಲೂ ಸಂಗೀತವಾದ್ಯಗಳ ಬಳಕೆಯ ಬಗೆಗಿನ ನಿಮ್ಮ ಒಳನೋಟಗಳು ಅನನ್ಯ.

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದ.

      Delete
  7. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete

Your valuable comments/suggestions are welcome