ಮರೆಯಾಗಿ ದಶಕಗಳೇ ಸಂದರೂ ಇಂದಿಗೂ ಮಧುರ ಚಿತ್ರ ಸಂಗೀತಪ್ರಿಯರ ಮನವನ್ನು ಆಳುತ್ತಿರುವ ಮಹಮ್ಮದ್ ರಫಿ ಬಗ್ಗೆ ಪತ್ರಿಕೆಗಳಲ್ಲಿ ಬಂದದ್ದು ಬಲು ಕಮ್ಮಿ. ಯಾವ ಪತ್ರಕರ್ತನಿಗೂ ಅವರ ಸಂದರ್ಶನ ನಡೆಸಲು ಸಾಧ್ಯವಾಗಿರಲಿಲ್ಲ. ಎಂಥೆಂಥವರಿಗೋ ಗಾಳ ಹಾಕಿ interview ನಡೆಸಿ ರೇಡಿಯೊ ಸಿಲೋನಿಗಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಅಮೀನ್ ಸಯಾನಿ ಕೈಗೂ ಅವರು ಸಿಕ್ಕಿರಲಿಲ್ಲ. ಬರ್ಮನ್ ದಾದಾ ದಿವಂಗತರಾದಾಗ ರಫಿಯ ಧ್ವನಿಯಲ್ಲಿ ಒಂದೆರಡು ವಾಕ್ಯಗಳನ್ನಷ್ಟೇ ಧ್ವನಿಮುದ್ರಿಸಿ ಪ್ರಸಾರ ಮಾಡಲು ಅವರಿಗೆ ಸಾಧ್ಯವಾಗಿತ್ತು. ಒಮ್ಮೆ ರಫಿ ಲಂಡನ್ ಪ್ರವಾಸಗೈದಿದ್ದಾಗ ಬಿ.ಬಿ.ಸಿ. ಹಿಂದಿ ವಿಭಾಗದವರು ಅವರೊಡನೆ ಮಾತುಕತೆ ನಡೆಸಿ ಪ್ರಸಾರ ಮಾಡುವಲ್ಲಿ ಸಫಲರಾಗಿದ್ದರು. ಉಳಿದಂತೆ ರಫಿ ತಾನಾಯಿತು ತನ್ನ ಹಾಡುಗಾರಿಕೆಯಾಯಿತು ಎಂದು ನಿರ್ಲಿಪ್ತರಾಗಿ ಇದ್ದವರು.
ಹೀಗಿರುವಾಗ 1970ರ ದಶಕದಲ್ಲಿ ಶಮಾ ಎಂಬ ಪ್ರಸಿದ್ಧ ಉರ್ದು ಪತ್ರಿಕೆಯಲ್ಲಿ ರಫಿಯ ಮನದಾಳದ ಮಾತುಗಳನ್ನೊಳಗೊಂಡ ಲೇಖನವೊಂದು ಪ್ರಕಟವಾಯಿತು. ಅದರ ಕನ್ನಡ ಭಾವಾನುವಾದ ಇಲ್ಲಿದೆ.
ಒಂದು ಕಾರ್ಯಕ್ರಮದಲ್ಲಿ ಸೈಗಲ್ ಹಾಡುತ್ತಿರುವಾಗ ವಿದ್ಯುತ್ ಕೈ ಕೊಟ್ಟಿತು. ಆಗ ರಫಿ ಮೈಕ್ ಇಲ್ಲದೆಯೇ ಉಚ್ಚ ಕಂಠದಲ್ಲಿ ಹಾಡಿ ಜನರನ್ನು ರಂಜಿಸಿದರು ಎಂಬ ಜನಜನಿತ ಕತೆಯ ಉಲ್ಲೇಖ ಇದರಲ್ಲಿಲ್ಲದಿರುವುದು ಗಮನಾರ್ಹ.
ಒಂದು ಕಾರ್ಯಕ್ರಮದಲ್ಲಿ ಸೈಗಲ್ ಹಾಡುತ್ತಿರುವಾಗ ವಿದ್ಯುತ್ ಕೈ ಕೊಟ್ಟಿತು. ಆಗ ರಫಿ ಮೈಕ್ ಇಲ್ಲದೆಯೇ ಉಚ್ಚ ಕಂಠದಲ್ಲಿ ಹಾಡಿ ಜನರನ್ನು ರಂಜಿಸಿದರು ಎಂಬ ಜನಜನಿತ ಕತೆಯ ಉಲ್ಲೇಖ ಇದರಲ್ಲಿಲ್ಲದಿರುವುದು ಗಮನಾರ್ಹ.
***********
ಅಮೃತಸರ ಜಿಲ್ಲೆಯ ಕೋಟ್ಲಾ ಸುಲ್ತಾನ್ ಸಿಂಗ್ ಎಂಬಲ್ಲಿ ನೆಲೆಸಿದ್ದ ನಮ್ಮದು ತೀರಾ ಸಂಪ್ರದಾಯಸ್ಥ ಕುಟುಂಬ. ಹಾಡು, ಸಂಗೀತಗಳಿಗೆ ಮನೆಯಲ್ಲಿ ಸ್ಥಾನವೇ ಇರಲಿಲ್ಲ. ನನ್ನ ತಂದೆ ಹಾಜಿ ಅಲಿ ಮೊಹಮ್ಮದ್ ಸಾಹೇಬರು ತುಂಬಾ ಮಡಿವಂತಿಕೆಯುಳ್ಳವರಾಗಿದ್ದರು. ಅವರ ಹೆಚ್ಚಿನ ಸಮಯ ಆಧ್ಯಾತ್ಮದಲ್ಲೇ ಕಳೆಯುತ್ತಿತ್ತು. ನಾನು ಏಳರ ವಯಸ್ಸಿನಲ್ಲೇ ಗುಣುಗುಣಿಸಲು ಆರಂಭಿಸಿದ್ದೆ. ಸಹಜವಾಗಿಯೇ ನಾನಿದನ್ನು ತಂದೆಯವರ ಕಣ್ತಪ್ಪಿಸಿ ಮಾಡುತ್ತಿದ್ದೆ. ವಾಸ್ತವವಾಗಿ ನನಗೆ ಈ ಹಾಡುವ ಹುಚ್ಚು ಹಿಡಿಯಲು ಓರ್ವ ಫಕೀರ ಕಾರಣ. ‘ಖೇಲನ್ ದೇ ದಿನ್ ಚಾರನೀ ಮಾಯೇ ಖೇಲನ್ ದೇ.." ಎಂದು ಹಾಡುತ್ತಾ ಆತ ಜನರನ್ನು ರಂಜಿಸುತ್ತಿದ್ದ. ಅವನು ಹೀಗೇ ಹಾಡುತ್ತಿದ್ದರೆ ಅದನ್ನೇ ಪುನರಾವರ್ತಿಸುತ್ತಾ ನಾನು ಅವನ ಹಿಂದೆ ದೂರ ದೂರದ ವರೆಗೆ ಹೋಗುತ್ತಿದ್ದೆ.
ಬರಬರುತ್ತಾ ನನ್ನ ಧ್ವನಿ ಊರಿನವರಿಗೆ ಇಷ್ಟವಾಗತೊಡಗಿತು. ನಾನು ಕದ್ದು ಮುಚ್ಚಿ ಹಾಡುತ್ತಿದ್ದುದನ್ನು ಅವರೆಲ್ಲ ಖುಶಿಯಿಂದ ಕೇಳುತ್ತಿದ್ದರು.
ಒಮ್ಮೆ ನನಗೆ ಲಾಹೋರಿಗೆ ಹೋಗುವ ಅವಕಾಶ ಬಂದೊದಗಿತು. ಅಲ್ಲಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ಅಂದು ಪ್ರಸಿದ್ಧರಾಗಿದ್ದ ಮಾಸ್ಟರ್ ನಜೀರ್ ಮತ್ತು ಸ್ವರ್ಣಲತಾ ಎಂಬ ಕಲಾವಿದರ ಗಾಯನವಿತ್ತು. ಆಗ 15ರ ಹರೆಯದವನಾದ ನನ್ನನ್ನೂ ಒಂದೆರಡು ಹಾಡು ಹಾಡುವಂತೆ ಕೇಳಿಕೊಳ್ಳಲಾಯಿತು. ನನ್ನ ಹಾಡು ನಜೀರ್ ಸಾಹೇಬರಿಗೆ ತುಂಬಾ ಇಷ್ಟವಾಯಿತು. ಆಗ ಅವರು ಲೈಲಾ ಮಜನೂ ಎಂಬ ಚಿತ್ರ ತಯಾರಿಯಲ್ಲಿ ತೊಡಗಿದ್ದರು. ಆ ಚಿತ್ರಕ್ಕಾಗಿ ಹಾಡುವಂತೆ ನನ್ನನ್ನವರು ಕೇಳಿಕೊಂಡರು. ಆದರೆ ತಕ್ಷಣ ಅವರ ಕೋರಿಕೆಯನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ‘ನೀವು ತಂದೆಯವರನ್ನು ಒಪ್ಪಿಸುವುದಾದರೆ ನಾನು ಹಾಡಲು ಸಿದ್ಧ’ ಎಂದು ನಾನಂದೆ. ಊಹಿಸಿದ್ದಂತೆ ಮೊದಲು ತಂದೆಯವರು ಇದಕ್ಕೆ ಸುತರಾಂ ಒಪ್ಪಲಿಲ್ಲ. ಆದರೆ ನನ್ನ ಹಿರಿಯಣ್ಣ ಹಾಜಿ ಮಹಮ್ಮದ್ ದೀನ್ ಅದೇನೋ ಜಾದೂ ಮಾಡಿ ಲೈಲಾ ಮಜನೂ ಚಿತ್ರದಲ್ಲಿ ಹಾಡಲು ಕೊನೆಗೂ ತಂದೆಯವರ ಅನುಮತಿ ಕೊಡಿಸಿಯೇ ಬಿಟ್ಟ. ಈ ಚಿತ್ರದ ಮೂಲಕ ನನ್ನ ಧ್ವನಿ ಮೊತ್ತಮೊದಲು ಜನರನ್ನು ತಲುಪಿತು. ನಂತರ ಗಾವ್ ಕೀ ಗೋರಿ ಚಿತ್ರದಲ್ಲೂ ನಾನು ಕೆಲವು ಹಾಡುಗಳನ್ನು ಹಾಡಿದೆ. ಆದರೆ ನಿಜ ಅರ್ಥದಲ್ಲಿ ನನ್ನ ಯಶಸ್ಸಿನ ಪಯಣ ಜುಗ್ನೂ ಚಿತ್ರದ ಹಾಡುಗಳಿಂದ ಆರಂಭವಾಯಿತು. ನಂತರ ನನಗೆ ಚಿತ್ರಗಳಲ್ಲಿ ನಟಿಸುವ ಹುಚ್ಚೂ ಆರಂಭವಾಯಿತು. ಆದರೆ ಮುಖಕ್ಕೆ ‘ಸುಣ್ಣ’ ಹಚ್ಚಿಕೊಳ್ಳಬೇಕಾದ ಈ ಕಾಯಕ ನನಗೆ ಹಿಡಿಸಲಿಲ್ಲ. ಆದರೂ ಚಿತ್ರಗಳಲ್ಲಿ ನಟಿಸುವಂತೆ ಮತ್ತು ಸಂಗೀತ ನಿರ್ದೇಶಕನಾಗುವಂತೆ ನನಗೆ ಆಹ್ವಾನ ಬರತೊಡಗಿತು. ಆದರೆ ಗಾಯನವೇ ನನ್ನ ಕ್ಷೇತ್ರ ಮತ್ತು ನನ್ನ ಜೀವನ ಎಂದು ನಾನಾಗಲೇ ನಿರ್ಧರಿಸಿ ಆಗಿತ್ತು. ಈ ಪಯಣ 60ರ ದಶಕದ ಕೊನೆವರೆಗೆ ನಿರ್ವಿಘ್ನವಾಗಿ ಸಾಗಿತು.
ಆರಾಧನಾ ಚಿತ್ರದ ಎರಡು ಹಾಡುಗಳನ್ನು ಧ್ವನಿ ಮುದ್ರಿಸಿ ನಾನು ಮೊದಲ ಹಜ್ ಯಾತ್ರೆಗೆ ತೆರಳಿದೆ. ಈ ಸಂದರ್ಭದಲ್ಲಿ ಹಾಡು ಹಾಡಿ ಸಂಪತ್ತು ಗಳಿಸುವುದು ಪಾಪ ಕಾರ್ಯವೆಂದು ಕೆಲವರು ನನಗೆ ಉಪದೇಶಿಸಿದರು. ನನಗೂ ಅದು ಹೌದೆನ್ನಿಸಿತು. ಅಲ್ಲಾಹುವಿನ ಧ್ಯಾನ ಮಾಡುತ್ತಾ ಮುಂದಿನ ಜೀವನ ಕಳೆಯಬೇಕೆಂದು ನನಗನ್ನಿಸತೊಡಗಿತು. ಹೀಗಾಗಿ ಹಜ್ ಯಾತ್ರೆಯಿಂದ ಮರಳಿದ ಮೇಲೆ ನಾನು ಹಾಡುವುದನ್ನು ಕಮ್ಮಿ ಮಾಡಿದೆ. ನನ್ನ ಮಾರ್ಕೆಟ್ ಬಿದ್ದು ಹೋಯಿತು , ನನ್ನನ್ನು ಈಗ ಯಾರೂ ಕೇಳುವುದೂ ಇಲ್ಲ ಎಂದು ಈ ಸಮಯದಲ್ಲಿ ಕೆಲವರು ಪುಕಾರು ಹಬ್ಬಿಸತೊಡಗಿದರು. ಆದರೆ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರು ಹಾಡುವಂತೆ ನನ್ನನ್ನು ಒತ್ತಾಯಿಸುತ್ತಲೇ ಇದ್ದರು. ಆ ಒಂದೆರಡು ವರ್ಷ ಕೆಲವು ದೊಡ್ಡ ಚಿತ್ರಗಳಲ್ಲಿ ನನ್ನ ಧ್ವನಿ ಗೈರಾಗಿದ್ದುದನ್ನು ನೀವು ಗಮನಿಸಿರಬಹುದು. ಆದರೆ ಸಂಗೀತ ನಿರ್ದೇಶಕ ನೌಶಾದ್ ನನ್ನನ್ನು ಮತ್ತೆ ಗಾಯನದತ್ತ ಎಳೆದುಕೊಂಡು ಬಂದರು. ‘ನಿಮ್ಮ ಧ್ವನಿ ದೇಶದ ಜನತೆಯ ಸೊತ್ತು. ಅದನ್ನು ಅವರಿಂದ ಕಿತ್ತುಕೊಳ್ಳುವ ಹಕ್ಕು ನಿಮಗಿಲ್ಲ’ ಎಂಬ ಅವರ ವಾದವನ್ನು ನಾನು ತಳ್ಳಿಹಾಕಲಾರದೆ ಮತ್ತೆ ಹಾಡತೊಡಗಿದೆ ಮತ್ತು ಕೊನೆ ಉಸಿರಿರುವವರೆಗೂ ಅದನ್ನು ಬಿಡುವುದಿಲ್ಲ ಎಂದು ನಿರ್ಧರಿಸಿದೆ.
ನನಗೆ ಚಲನಚಿತ್ರಗಳನ್ನು ನೋಡುವ ಅಭ್ಯಾಸವೇ ಇಲ್ಲವೆಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅನಿವಾರ್ಯವಾಗಿ ಚಿತ್ರ ನೋಡುವ ಸಂದರ್ಭ ಬಂದರೆ ನಾನು ಟಾಕಿಸಲ್ಲೇ ನಿದ್ದೆ ಮಾಡಿಬಿಡುತ್ತೇನೆ! ನಾನು ಆಸಕ್ತಿಯಿಂದ ಪೂರ್ತಿ ನೋಡಿದ ಚಿತ್ರ ಎಂದರೆ ಅದು ಶೋಲೆ ಮಾತ್ರ. ಅದರ ಸ್ಟಂಟ್ ದೃಶ್ಯಗಳು ನನಗೆ ಇಷ್ಟವಾದವು.
ಜನರಿಗೆ ಇಷ್ಟವಾದ ಹಾಡುಗಳೇ ನನಗೂ ಇಷ್ಟ. ನನ್ನ ಹಾಡು ಜನಪ್ರಿಯವಾದಾಗ ನನ್ನ ಶ್ರಮ ಸಾರ್ಥಕವಾಯಿತು ಎಂದು ನನಗನ್ನಿಸುತ್ತದೆ. ದುಲಾರಿ ಚಿತ್ರದ ಸುಹಾನಿ ರಾತ್ ಢಲ್ ಚುಕೀ ನನಗೆ ತುಂಬಾ ಇಷ್ಟವಾದ ಹಾಡು.
ನೀಲ್ ಕಮಲ್ ಚಿತ್ರದ ಬಾಬುಲ್ ಕೀ ದುವಾಯೆಂ ಲೇತಿ ಜಾ ಹಾಡಿನ ರೆಕಾರ್ಡಿಂಗ್ ನಡೆಯುತ್ತಿರುವಾಗ ಎರಡು ದಿನಗಳಲ್ಲಿ ನಡೆಯಲಿದ್ದ ನನ್ನ ಮಗಳ ಮದುವೆಯ ದೃಶ್ಯಗಳು ಪೂರ್ವಭಾವಿಯಾಗಿ ನನಗೆ ಗೋಚರಿಸಿದವು. ರೆಕಾರ್ಡಿಂಗ್ ಮುಗಿಯುವ ವರೆಗೂ ನನ್ನ ಕಣ್ಣುಗಳಿಂದ ಅಶ್ರುಧಾರೆ ಹರಿಯುತ್ತಲೇ ಇತ್ತು.
ಕೆಲವು ನೆನಪುಗಳು ಜೀವನ ಪೂರ್ತಿ ನಮ್ಮೊಡನಿರುತ್ತವೆ. ಒಮ್ಮೆ ನಾನು ಕಶ್ಮೀರ್ ಕೀ ಕಲಿ ಚಿತ್ರದ ಹಾಡಿನ ರೆಕಾರ್ಡಿಂಗಲ್ಲಿ ವ್ಯಸ್ತನಾಗಿದ್ದೆ. ಆ ಹೊತ್ತಿಗೆ ಪುಟ್ಟ ಮಗುವಿನಂತೆ ಕುಣಿದಾಡುತ್ತಾ ಅಲ್ಲಿಗೆ ಅಲ್ಲಿಗೆ ಬಂದ ಶಮ್ಮಿ ಕಪೂರ್ ಮಗುವಿನದೇ ಧ್ವನಿಯಲ್ಲಿ ‘ರಫಿ ಜೀ ರಫಿ ಜೀ, ಈ ಹಾಡಿಗೆ ನಾನು ಕುಣಿದು ಕುಫ್ಫಳಿಸುತ್ತಾ ನಟಿಸುವವನಿದ್ದೇನೆ. ಆ ಚೇಷ್ಟೆಗಳನ್ನೆಲ್ಲ ಹಾಡಿನಲ್ಲಿ ತುಂಬಿ ಪ್ಲೀಸ್’ ಎಂದು ಗೋಗರೆದರು. ಆ ಹಾಡೇ ಸುಭಾನಲ್ಲಾ ಹಸೀಂ ಚೆಹರಾ.
***********
BBCಯಿಂದ ಪ್ರಸಾರವಾಗಿದ್ದ interview. ಹಾಡುವಾಗ ಆಕಾಶದೆತ್ತರಕ್ಕೆ ಏರುತ್ತಿದ್ದ ಅವರ ಧ್ವನಿ ಇಲ್ಲಿ ಮಾತನಾಡುವಾಗ ಎಷ್ಟು down to earth ಇದೆ ನೋಡಿ.
ಹಿಂದೆ ಇದನ್ನ ಓದಿರಲಿಲ್ಲ. ಇದಕ್ಕಾಗಿ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.
ReplyDeleteGananatha SN(FB)
ಹೌದು ಸಾರ್...ರಫಿಯವರ ಕುರಿತು ಹೆಚ್ಚಿನ ಮಾಹಿತಿ ಎಲ್ಲೂ ಸಿಗೊಲ್ಲ...
ReplyDeleteಅವರ ಅಂತಿಮಯಾತ್ರೆಯಲ್ಲಿ 'ಏ ದುನಿಯಾ...ಏ ಮೆಹಫಿಲ್...ಮೇರಿ ಕಾಮ್ ಕೀ ನಹೀ...' ಹಾಡು ಪ್ಲೇ ಮಾಡಿಕೊಂಡು ಅಭಿಮಾನಿಗಳೆಲ್ಲಾ ಅಶ್ರುಧಾರೆಯೊಂದಿಗೆ ಸಾಗಿದರು ... ಅಂತ ನಮ್ಮಪ್ಪನ ಗೆಳೆಯ ಒಬ್ಬರು ಹೇಳಿದ್ದು ಕೇಳಿದ್ದೆ...
ಸುದರ್ಶನ ರೆಡ್ಡಿ (FB)
ಆ ಚಿತ್ರದ ನಾಯಕರ ರೀತಿಯೇ ಹಾಡುತ್ತಿದ್ದ ಗಾಯಕ ರತ್ನ ರಫಿ.ಅವರು ಬೇಗನೆ ಅಗಲಿದ್ದು ನಮ್ಮ ದುರ್ದೈವ.
ReplyDeleteನರೇಂದ್ರನಾಥ ಮಂಜುನಾಥ್ (FB)
ಬಹಳ ಸೊಗಸಾದ ಭಾವಾನುವಾದ. ಧನ್ಯವಾದಗಳು ಸರ್
ReplyDeleteKiran Surya (FB)
ರಫೀಯವರ ಹಾಡು ಕೇಳದೆ ಒಂದೂ ದಿವಸ ಹೋಗುವುದಿಲ್ಲ ಎಂಬುದು ನನ್ನ ಮಟ್ಟಿಗೆ ಖಂಡಿತ.ಅವರ mesmerizing ಧ್ವನಿಯಲ್ಲಿ ಏನೂ ಅಡಗಿದೆಯೋ ಗೊತ್ತಿಲ್ಲ!
ReplyDelete