Monday 17 September 2018

ವಿರಸವೆಂಬ ವಿಷ


ಒಂದಲ್ಲ ಒಂದು ಸಂದರ್ಭದಲ್ಲಿ ವಿರಸವೆಂಬ ವಿಷಕ್ಕೆ ಬಲಿಯಾಗದವರು ಯಾರೂ ಇರಲಾರರು. ಕೆಲವು ಸಲ ಈ ವಿರಸದ ವಿಷ ದೀರ್ಘಕಾಲೀನ ಪರಿಣಾಮ ಬೀರುವಂಥದ್ದಿರಬಹುದು.  ಇನ್ನು ಕೆಲವು ಸಲ ಸರಸವೆಂಬ  ಅಮೃತದ ಪ್ರಭಾವದಿಂದ ವಿರಸದ  ವಿಷ ಸರ್ರನೆ ಇಳಿದು ಹೋಗಲೂಬಹುದು.  ನಮ್ಮ ನಿಮ್ಮಂಥ ಜನಸಾಮಾನ್ಯರ ಸರಸ ವಿರಸಗಳಿಂದ ಬೇರೆಯವರ ಮೇಲೆ ಹೆಚ್ಚು ಪರಿಣಾಮವೇನೂ ಆಗದು. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರಸಿದ್ಧರು ವಿರಸವೆಂಬ ವಿಷಕ್ಕೆ ಬಲಿಯಾದಾಗ ಆ ಕ್ಷೇತ್ರದ ಚಿತ್ರಣವೇ ಬದಲಾಗಬಹುದು.  ಹಿಂದಿ ಚಿತ್ರರಂಗದಲ್ಲಿ ಇಂಥ ಅನೇಕ ಘಟನೆಗಳು ನಡೆದಿವೆ.

ಲತಾ ಮಂಗೇಷ್ಕರ್ - ಓ.ಪಿ. ನಯ್ಯರ್


ಎಲ್ಲರಿಗೂ ಗೊತ್ತಿರುವಂತೆ ಹಿಂದಿ ಚಿತ್ರರಂಗದಲ್ಲಿ ಲತಾ ಮಂಗೇಷ್ಕರ್ ಅವರಿಂದ ಒಂದೂ ಹಾಡು ಹಾಡಿಸದೆ  ಎರಡು ದಶಕಗಳ ಕಾಲ ಮಿಂಚಿದವರು ಓ.ಪಿ. ನಯ್ಯರ್. ತನ್ನ ಸಂಗೀತಕ್ಕೆ ಗೀತಾ ದತ್ತ್, ಶಂಶಾದ್ ಬೇಗಂ, ಆಶಾ ಭೋಸ್ಲೆಯಂಥವರ  seductive ಧ್ವನಿ ಹೊಂದುತ್ತದೆಯೇ ಹೊರತು   ಲತಾ ಅವರ ಪೈಲಟ್ ಪೆನ್ನಿನ ತೆಳು ಗೆರೆಯಂಥ ಧ್ವನಿ ಅಲ್ಲ ಎನ್ನುವುದಷ್ಟೇ ಇದಕ್ಕೆ ಕಾರಣವೇ ಹೊರತು ಬೇರೇನೂ ಅಲ್ಲ ಎಂದು ಓ.ಪಿ. ನಯ್ಯರ್ ಹೇಳಿದರೂ ಇದನ್ನು ನಂಬುವುದು ಕಷ್ಟ.  ಲತಾ ಮಂಗೇಷ್ಕರ್ ಹೇಳುವ ಪ್ರಕಾರ ಅವರಿಗಾಗಿ 1952ರ ಆಸ್‌ಮಾನ್ ಎಂಬ ಚಿತ್ರದಲ್ಲಿ  ನಯ್ಯರ್ ಒಂದು ಹಾಡು ಕಂಪೋಸ್ ಮಾಡಿದ್ದರು.  ಆದರೆ ಆಗ ಲತಾ ಟಾನ್ಸಿಲ್ಸ್ ಬೇನೆಯಿಂದ ಬಳಲುತ್ತಿದ್ದುದರಿಂದ ರೆಕಾರ್ಡಿಂಗಿಗೆ ಹೋಗಲಾಗಲಿಲ್ಲ.  ಆ ಹಾಡನ್ನು ರಾಜಕುಮಾರಿ ಅವರಿಂದ ಹಾಡಿಸಲಾಯಿತು. ಅಹಂಗೆ ಸ್ವಲ್ಪ ಹೆಚ್ಚೇ ಪ್ರಾಮುಖ್ಯ ಕೊಡುತ್ತಿದ್ದ ನಯ್ಯರ್ ಇದನ್ನು ಗಂಭೀರವಾಗಿ ಪರಿಗಣಿಸಿ  ಮತ್ತೆಂದೂ ಲತಾ ಅವರನ್ನು ಕರೆಯುವ ಗೋಜಿಗೆ ಹೋಗದಿರಲು ನಿಶ್ಚಯಿಸಿರಬಹುದು.  ಇದಕ್ಕೆ ಪೂರಕವಾಗಿ 1954ರಲ್ಲಿ ಇನ್ನೊಂದು ಘಟನೆ ನಡೆಯಿತು.  ರೋಶನ್ ಅವರು 3 ಲತಾ ಹಾಡುಗಳನ್ನು ಧ್ವನಿಮುದ್ರಿಸಿದ್ದ ಮೆಹಬೂಬಾ ಮತ್ತು ನೌಶಾದ್ ಅವರ ಸಹಾಯಕ ಮಹಮ್ಮದ್ ಶಫಿ ಎನ್ನುವವರು 3 ಹಾಡುಗಳನ್ನು ಧ್ವನಿಮುದ್ರಿಸಿದ್ದ ಮಂಗೂ ಎಂಬ ಎರಡು ಚಿತ್ರಗಳ ನಿರ್ಮಾಪಕರು ಯಾವುದೋ ಕಾರಣಕ್ಕೆ ಆ ಸಂಗೀತ ನಿರ್ದೇಶಕರನ್ನು ಅರ್ಧಕ್ಕೆ ಕೈಬಿಟ್ಟುದರಿಂದ ಓ.ಪಿ. ನಯ್ಯರ್ ಅವರಿಗೆ ಆ ಅರೆ ಬರೆ ಕೆಲಸ ಉಳಿದ ಚಿತ್ರಗಳು ದೊರೆತವು.  ತಾನು ಉಳಿದುಕೊಂಡಿದ್ದ ಹೋಟೆಲಿನ ಬಾಡಿಗೆಯನ್ನು ಕೊಡಲೂ ಕಾಸಿಲ್ಲದ ನಯ್ಯರ್ ಅವರ ಪಾಲಿಗೆ  ಇದು ಹಸಿದವನಿಗೆ ಸಿಕ್ಕಿದ ಮೃಷ್ಟಾನ್ನದಂತಾಯಿತು.  ಆದರೆ ಅಷ್ಟರಲ್ಲಿ ಅನಿಲ್ ಬಿಸ್ವಾಸ್, ನೌಶಾದ್ ಮತ್ತು ಲತಾ ಮಂಗೇಷ್ಕರ್ ನಯ್ಯರ್ ಬಳಿ ಬಂದು ‘ಈಗಾಗಲೇ ಇವರಿಬ್ಬರು ಅರ್ಧ ಕೆಲಸ ಮಾಡಿದ ಚಿತ್ರಗಳನ್ನು ಅವರ ಅನುಮತಿ ಇಲ್ಲದೆ ನೀವು ತೆಗೆದುಕೊಂಡದ್ದು ತಪ್ಪು’ ಎಂದು ತಗಾದೆ ತೆಗೆದರು. ಅದಕ್ಕೆ ನಯ್ಯರ್ ‘ಇದರಲ್ಲಿ ನನ್ನ ತಪ್ಪೇನಿದೆ. ನಾನೇನು ಅವರನ್ನು ಚಿತ್ರದಿಂದ ತೆಗೆಯುವಂತೆ ಹೇಳಲಿಲ್ಲ. ನನಗೀಗ ಜರೂರಾಗಿ ಹಣದ ಅವಶ್ಯಕತೆ ಇದೆ. ನನ್ನ ಹೋಟೆಲ್ ಬಿಲ್ಲನ್ನು ನೀವು ಮೂವರು ಪಾವತಿಸುವುದಾದರೆ ನಾನು ಚಿತ್ರಗಳನ್ನು ಬಿಡಲು ಸಿದ್ದ’ ಎಂದು ಖಡಕ್ ಉತ್ತರ ನೀಡಿದರು.  ಇದನ್ನು ಕೇಳಿದ ಮೂವರೂ ಬಂದ ದಾರಿಗೆ ಸುಂಕ ಇಲ್ಲ ಎಂದು ಮರುಮಾತಾಡದೆ ಹಿಂತಿರುಗಿದರು.  ಈ ಘಟನೆ ಅವರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿರಬಹುದು.

ಅದು ವರೆಗೆ ಲತಾ ಮಂಗೇಷ್ಕರ್ ಹಾಡುಗಳಿಲ್ಲದ ಯಾವುದೇ ಚಿತ್ರ ನಿರ್ಮಿಸದಿದ್ದ   ಬಿ.ಆರ್. ಛೋಪ್ರಾ ಪಂಜಾಬ್ ಪೃಷ್ಟಭೂಮಿಯ ನಯಾ ದೌರ್ ಚಿತ್ರಕ್ಕೆ ಓ.ಪಿ. ನಯ್ಯರ್  ಸಂಗೀತ ಬೇಕೆಂದು ನಿರ್ಧರಿಸಿದರು. ಲತಾ ಜೊತೆ  ಭಿನ್ನಾಭಿಪ್ರಾಯವೇನಾದರೂ ಇದ್ದರೆ ತಾನು ಮಧ್ಯಸ್ತಿಕೆ ವಹಿಸುವುದಾಗಿ ಛೋಪ್ರಾ  ಹೇಳಿದಾಗ ‘ಅಂಥದ್ದೇನೂ ಇಲ್ಲ. ತನ್ನ ಟ್ಯೂನ್‌ಗಳಿಗೆ ಲತಾಧ್ವನಿ ಹೊಂದುವುದಿಲ್ಲ ಅಷ್ಟೇ’ ಎಂದು ಹಳೆ ರಾಗ ಹಾಡಿದ  ನಯ್ಯರ್ ಆ ಚಿತ್ರ ಬಿಡಲು ತಯಾರಾದರೇ ಹೊರತು ತನ್ನ ಪಟ್ಟು ಬಿಡಲಿಲ್ಲ.  ಬೇರೆ ಉಪಾಯವಿಲ್ಲದೆ ಛೋಫ್ರಾ ಅವರು ಒಪ್ಪಲೇಬೇಕಾಯಿತು.  ಈ ಚಿತ್ರ ಹಾಗೂ ಅದರ ಸಂಗೀತ ಜಯಭೇರಿ ಬಾರಿಸಿ ಅದುವರೆಗೆ ದ್ವಿತೀಯ ದರ್ಜೆ ಹಾಡುಗಳನ್ನು ಮಾತ್ರ ಹಾಡುತ್ತಿದ್ದ ಆಶಾ ಭೋಸ್ಲೆ ನಾಯಕಿಯ ಗಾಯಕಿಯಾಗಿ ಪದೋನ್ನತಿ ಹೊಂದಿ ಮುಂಚೂಣಿಗೆ ಬಂದರು.  ಇದರ ಇನ್ನೊಂದು ಫಲಶ್ರುತಿಯಾಗಿ ಮುಂದೆ ಬಿ.ಆರ್. ಫಿಲ್ಮ್ಸ್ ನಿರ್ಮಿಸಿದ ಚಿತ್ರಗಳಲ್ಲಿ ಅನೇಕ ವರ್ಷ  ಲತಾ ಧ್ವನಿ ಇರಲಿಲ್ಲ. ಅಷ್ಟೇ ಅಲ್ಲ ಛೋಪ್ರಾ ಜೊತೆ ನಿಕಟ ಸಂಬಂಧ ಹೊಂದಿದರೆಂಬ ಕಾರಣಕ್ಕೆ ಸಂಗೀತ ನಿರ್ದೇಶಕ ರವಿ ಅವರ ಇತರ ಚಿತ್ರಗಳಲ್ಲೂ ಲತಾಗಿಂತ ಆಶಾ ಹಾಡುಗಳೇ ಹೆಚ್ಚು ಕೇಳಿಸಿದವು.

ತನ್ನ ಉತ್ತುಂಗದ ದಿನಗಳ ನಶೆ ಇಳಿದ ಮೇಲೆ ಓ.ಪಿ. ನಯ್ಯರ್ ಕೆಲವು ಇಂಟರ್‍ವ್ಯೂಗಳಲ್ಲಿ ‘ನನ್ನ ಚಿತ್ರಗಳಲ್ಲಿ ಲತಾ ಹಾಡದಿದ್ದರೇನಂತೆ.  ಗಾಯಕಿಯರಲ್ಲಿ ಯಾವಾಗಲೂ ಅವರೇ ನಂಬರ್ ವನ್’ ಎಂದು ಹೇಳಿದ್ದಿದೆ.  ಅಷ್ಟೇ ಅಲ್ಲ ತನ್ನ ಅತಿ ಮೆಚ್ಚಿನದೆಂದು ಬರಸಾತ್ ಚಿತ್ರದ ಜಿಯಾ ಬೇಕರಾರ್ ಹೈ ಛಾಯಿ ಬಹಾರ್ ಹೈ ಹಾಡನ್ನು ಕೇಳಿಸಿದ್ದಿದೆ.  ಹಾಗೆಯೇ ಲತಾ ಮಂಗೇಷ್ಕರ್ ಕೂಡ ‘ನಯ್ಯರ್ ಅವರ ಸಂಗೀತಕ್ಕೆ ಬಹುಶಃ ನನ್ನ ಧ್ವನಿ ಹೊಂದುತ್ತಿರಲಿಲ್ಲ ಎಂದು ನನಗೂ ಈಗ ಅನ್ನಿಸುತ್ತಿದೆ’ ಎಂದು ಹೇಳಿ ಅವರ ನಿರ್ದೇಶನದಲ್ಲಿ ಆಶಾ ಹಾಡಿದ ಯೆ ಹೈ ರೇಶ್ಮೀ ಜುಲ್ಫೋಂ ಕಾ ಅಂಧೇರಾ ನ ಘಬರಾಯಿಯೆ ಹಾಡನ್ನು ಹೊಗಳಿದ್ದಿದೆ.

ಅಂತೂ ನಯ್ಯರ್ ಸಂಗೀತದಲ್ಲಿ ಲತಾ ಹಾಡೊಂದೂ ಮೂಡಿ ಬರಲಿಲ್ಲ.  ಆದರೆ ಅಂಥ ಹಾಡುಗಳು ಇರುತ್ತಿದ್ದರೆ ಹೇಗಿರುತ್ತಿದ್ದವು ಎಂಬ ಕುತೂಹಲ ಇದ್ದರೆ ನಯ್ಯರ್ ಅವರ ಸಹಾಯಕನಾಗಿದ್ದು ಅವರದೇ ಶೈಲಿಯಲ್ಲಿ ಶಿಕಾರಿ ಚಿತ್ರಕ್ಕಾಗಿ ಜಿ.ಎಸ್ ಕೊಹ್ಲಿ ಅವರು ಸಂಯೋಜಿಸಿದ   ಉಷಾ ಮಂಗೇಷ್ಕರ್- ಲತಾ ಮಂಗೇಷ್ಕರ್ ಜೊತೆಯಾಗಿ ಹಾಡಿದ ಈ ಹಾಡನ್ನು ಕೇಳಬಹುದು.


ಲತಾ ಮಂಗೇಷ್ಕರ್ - ಎಸ್.ಡಿ ಬರ್ಮನ್



ಹೌದು, ವಯಸ್ಸಲ್ಲಿ ಪಿತೃ ಸಮಾನರಾಗಿದ್ದ ಎಸ್.ಡಿ. ಬರ್ಮನ್ ಮತ್ತು ಲತಾ ನಡುವೆಯೂ ವಿರಸ ಮೂಡಿತ್ತು.  1957ರ ಮಿಸ್ ಇಂಡಿಯಾ ಚಿತ್ರಕ್ಕಾಗಿ ಬರ್ಮನ್ ದಾದಾ  ಲತಾ ಧ್ವನಿಯಲ್ಲಿ ಒಂದು ಹಾಡನ್ನು ಧ್ವನಿಮುದ್ರಿಸಿ OK  ಮಾಡಿದ್ದರು. ಆದರೆ ಅದೇನನ್ನಿಸಿತೋ,  ಅದನ್ನು ಇನ್ನೊಮ್ಮೆ ಧ್ವನಿ ಮುದ್ರಿಸುವ ಇಚ್ಛೆ ಅವರಿಗಾಯಿತು.  ಇದನ್ನು ತಿಳಿಸಲು ತನ್ನಲ್ಲಿಗೆ ಬಂದ ವ್ಯಕ್ತಿಯ   ಬಳಿ ಒಂದು ವಾರ ತನಗೆ ಆಗಲೇ ವಹಿಸಿಕೊಂಡ ರೆಕಾರ್ಡಿಂಗುಗಳು ಇರುವುದರಿಂದ ತಕ್ಷಣಕ್ಕೆ ತನಗೆ ಬರಲು ಸಾಧ್ಯವಾಗದು ಎಂದು ಲತಾ ಹೇಳಿದರಂತೆ.  ಆ ವ್ಯಕ್ತಿ ಇದನ್ನು ಸ್ವಲ್ಪ ಉಪ್ಪು ಖಾರ ಹಚ್ಚಿ ಬರ್ಮನ್ ದಾದಾಗೆ ಹೇಳಿದಾಗ ಅವರು ಸಿಟ್ಟುಗೊಂಡು ಆ ಹಾಡನ್ನು ಆಶಾ ಭೋಸ್ಲೆಯ ಧ್ವನಿಯಲ್ಲಿ ಧ್ವನಿಮುದ್ರಿಸಿಕೊಂಡರು.  ಆ ವ್ಯಕ್ತಿ ಮತ್ತೆ ಲತಾ ಬಳಿ ಬಂದು  ‘ಇನ್ನು ದಾದಾ ನಿಮ್ಮಿಂದ ಹಾಡಿಸುವುದಿಲ್ಲವಂತೆ’ ಎಂದು ಹೇಳಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದ.  ಆಗ ಲತಾ  ‘ಅವರಿಗೇಕೆ ಕಷ್ಟ.  ನಾನೇ ಅವರ ಹಾಡುಗಳನ್ನು ಹಾಡುವುದಿಲ್ಲ’ ಅಂದರು.  ಕೊನೆಗೆ 1962ರಲ್ಲಿ  ಮೆಹಮೂದ್ ಅವರ ಛೋಟೆ ನವಾಬ್ ಚಿತ್ರಕ್ಕಾಗಿ  ಪ್ರಥಮ ಬಾರಿಗೆ ಆರ್.ಡಿ ಬರ್ಮನ್ ಸಂಗೀತ ನಿರ್ದೇಶನ ಮಾಡಲು ಹೊರಟಾಗ ದಾದಾ ಬರ್ಮನ್ ಲತಾಗೆ ಫೋನ್ ಮಾಡಿ ‘ಲೊತಾ, ಪೊಂಚಮ್ ಮ್ಯೂಸಿಕ್ ಡೈರೆಕ್ಟರ್ ಬನ್ ಗಯಾ ಹೈ. ಮೈ ಕಹತಾ ಹೂಂ ತೂ ಉಸ್ ಕೆ ಲಿಯೆ ಗಾ’ ಅಂದರಂತೆ.  ಇದನ್ನೇ ಕಾಯುತ್ತಿದ್ದ ಲತಾ ಕೂಡಲೇ ಒಪ್ಪಿ ಘರ್ ಆಜಾ ಘಿರ್ ಆಯೆ ಬದರಾ ಸಾವರಿಯಾ ಹಾಡನ್ನು ಹಾಡುವ ಮೂಲಕ ಈ ವಿರಸಕ್ಕೆ ತೆರೆ ಬಿತ್ತು.  ದಾದಾ ಬರ್ಮನ್ ಕೂಡ ತನ್ನ ಸಂಗೀತ ನಿರ್ದೇಶನದ  ಬಂದಿನಿ ಚಿತ್ರಕ್ಕಾಗಿ ಗುಲ್ಜಾರ್ ಮೊತ್ತಮೊದಲು ಬರೆದ ಮೊರಾ ಗೋರಾ ರಂಗ್ ಲೈ ಲೈ ಮೊಹೆ ಶಾಮ್  ರಂಗ್ ದೈ ದೈ ಗೀತೆಯನ್ನು ಲತಾ ಅವರಿಂದ ಹಾಡಿಸಿದರು. ಆ ಮೇಲೆ  ಅವರ ಸಂಗೀತದಲ್ಲಿ ಸಾಲು ಸಾಲಾಗಿ ಸುಮಧುರ ಲತಾ ಗೀತೆಗಳು  ಬರತೊಡಗಿದವು.  ಆದರೆ 5 ವರ್ಷ ಅವರಿಬ್ಬರ ನಡುವೆ ಇದ್ದ ವಿರಸದ ವಿಷ ಆಗಲೇ ಓ.ಪಿ. ನಯ್ಯರ್ ಮೂಲಕ ಮುಂಚೂಣಿಗೆ ಬರತೊಡಗಿದ್ದ ಆಶಾ ಭೋಸ್ಲೆಗೆ ಅಮೃತತುಲ್ಯವಾಗಿ ಪರಿಣಮಿಸಿ ಎಸ್.ಡಿ. ಬರ್ಮನ್ ಅವರ ಅನೇಕ ಹಾಡುಗಳು ಅವರ ಕಂಠದಲ್ಲಿ ಮೂಡಿಬರುವಂತಾಯಿತು.  ಮಂಗಳೂರು ಆಕಾಶವಾಣಿಯ ಟೆಲಿಫೋನ್ ಸಂದರ್ಶನವೊಂದರಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದ್ದನ್ನು ಇಲ್ಲಿ ಕೇಳಬಹುದು.



ಲತಾ ಮಂಗೇಷ್ಕರ್ - ಆಶಾ ಭೋಸ್ಲೆ



ತನ್ನ ಸ್ವಂತ ತಂಗಿ ಆಶಾ ಭೋಸ್ಲೆಯೊಡನೆ ಕೂಡ ಲತಾಗೆ ವಿರಸವುಂಟಾಗಿತ್ತು.  ಆಶಾ 14-15ರ ಎಳೆ ಪ್ರಾಯದಲ್ಲೇ ಲತಾ ಅವರ ಸೆಕ್ರೆಟರಿ ಆಗಿದ್ದ ಮೂವತ್ತರ ಹರೆಯದ ಗಣಪತ್ ರಾವ್ ಭೋಸ್ಲೆಯೊಡನೆ ಓಡಿ ಹೋಗಿ ಯಾರಿಗೂ ಹೇಳದೆ ಮದುವೆ ಮಾಡಿಕೊಂಡದ್ದೇ ಈ ವಿರಸಕ್ಕೆ ಹೇತು. ಆಶಾಗೆ ಮನಸ್ಸಿದ್ದರೂ ಗಣಪತ್ ರಾವ್ ಲತಾ ಅವರಿಂದ ದೂರವೇ ಇರುವಂತೆ ಒತ್ತಡ ಹೇರುತ್ತಿದ್ದರು ಎಂದು ಲತಾ ಅವರ ಅಂಬೋಣ.  ಆಶಾಗೆ ಮಕ್ಕಳು ಮರಿ ಆದ ಮೇಲೆ ಮನೆಯ ಇತರ ಸದಸ್ಯರೊಂದಿಗೆ ರಾಜಿ ಆಯಿತು.  ಇಬ್ಬರು ಸೇರಿ ಅನೇಕ ಯುಗಳ ಗೀತೆಗಳನ್ನು ಹಾಡಿದರೂ ಅನೇಕ ವರ್ಷ ಲತಾ ಜೊತೆ ಆಕೆಗೆ ಮಾತುಕತೆ ಇರಲಿಲ್ಲವಂತೆ.  ಕೊನೆಗೆ 1960ರಲ್ಲಿ ಭೋಸ್ಲೆಯೊಂದಿಗಿನ ಸಂಬಂಧ ಕಡಿದುಹೋದ ಮೇಲಷ್ಟೇ ಅವರಿಬ್ಬರಿಗೆ ರಾಜಿಯಾಗಿ ಅವರನ್ನು ಮನೆಗೆ ಸೇರಿಸಿಕೊಂಡದ್ದು.

ಲತಾ - ರಫಿ



ಸೂರ್ಯಂಗೂ ಚಂದ್ರಂಗೂ ಮುನಿಸು ಬಂದ ಹಾಗೆ ಹಿನ್ನೆಲೆ ಗಾಯಕರ ಷಹನ್‌ಷಾಹ ರಫಿ ಮತ್ತು ಹಿನ್ನೆಲೆ ಗಾಯಕಿಯರ ಮಲ್ಲಿಕಾ ಲತಾ ಅವರ ನಡುವೆ ಹಾಡುಗಳ ರಾಯಲ್ಟಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ವಿರಸ ಉಂಟಾಗಿತ್ತು.   ಹಾಡುಗಳ ಜನಪ್ರಿಯತೆಯಲ್ಲಿ ಹಾಡುಗಾರರ ಪಾತ್ರವೂ ಇದ್ದು ರೆಕಾರ್ಡುಗಳ ಮಾರಾಟದಿಂದ ಸಿಗುವ ರಾಯಲ್ಟಿಯಲ್ಲಿ  ಗಾಯಕರಿಗೂ ಪಾಲು ಸಿಗಬೇಕು ಎಂದು ಲತಾ ಅವರ ಅಭಿಪ್ರಾಯವಾಗಿತ್ತು. ಮುಕೇಶ್, ತಲತ್ ಮಹಮೂದ್ ಮುಂತಾದ ಇತರ ಗಾಯಕರ ಸಹಮತವೂ ಇದಕ್ಕಿತ್ತು.  ಆದರೆ ಒಮ್ಮೆ ಹಾಡಿ ನಿರ್ಮಾಪಕರಿಂದ ಸಂಭಾವನೆ ಪಡೆದರೆ ನಮಗೂ ಹಾಡಿಗೂ ಸಂಬಂಧವೇ ಇಲ್ಲ ಎಂದು ರಫಿಯ ವಾದವಾಗಿತ್ತು.  ರಾಯಲ್ಟಿ ಕೊಡುವುದಿದ್ದರೂ ಗ್ರಾಮಫೋನ್ ಕಂಪೆನಿಯವರು ಕೊಡಬೇಕೆಂದು ನಿರ್ಮಾಪಕರೂ, ನಿರ್ಮಾಪಕರು ಕೊಡಬೇಕೆಂದು  ಗ್ರಾಮಫೋನ್ ಕಂಪೆನಿಯವರೂ ವಾದಿಸುತ್ತಿದ್ದರು.  ಹೀಗಿರುವಾಗ ರಾಯಲ್ಟಿ ವಿಷಯ ಇತ್ಯರ್ಥವಾಗುವವರೆಗೆ ಸಿನಿಮಾಗಳಿಗೆ ಹಾಡಿದರೂ ಗ್ರಾಮಫೋನ್ ರೆಕಾರ್ಡುಗಳಿಗೆ ನಾವು ಯಾರೂ ಹಾಡಬಾರದು ಎಂದು ಲತಾ ಬಣ ನಿರ್ಧರಿಸಿತು.  ಆಗ ರೆಕಾರ್ಡುಗಳಿಗಾಗಿ ಬೇರೆಯಾಗಿಯೇ ಹಾಡುವ ಪದ್ಧತಿ ಇತ್ತು.  ಹೀಗಾಗಿ ಪ್ರೇಮಪತ್ರ ಎಂಬ ಚಿತ್ರದ ರೆಕಾರ್ಡುಗಳೇ ಬರಲಿಲ್ಲ.  ಆದರೆ ಕೆಲವು ಗಾಯಕರು ರೆಕಾರ್ಡುಗಳಿಗೂ ಹಾಡತೊಡಗಿದರು.  ಮತ್ತೆ ಹಾಡುಗಾರರ ಎಸೋಸಿಯೇಶನಿನ ಮೀಟಿಂಗ್ ಕರೆಯಲಾಯಿತು.  ಸಾಕಷ್ಟು ಚರ್ಚೆ ನಡೆದು ಆಗ ಅತಿ ಹೆಚ್ಚು ಹಾಡುಗಳನ್ನು ಹಾಡುತ್ತಿದ್ದ  ರಫಿ ಅವರೊಡನೆ ‘ನೀವೇನು ಹೇಳುತ್ತೀರಿ’ ಎಂದು ಮುಕೇಶ್ ಕೇಳಿದಾಗ ಅವರು ಲತಾ ಕಡೆಗೆ ಕೈ ತೋರಿಸಿ ‘ಅಲ್ಲಿ ಮಹಾರಾಣಿ ಕೂತಿದ್ದಾರಲ್ಲ, ಅವರನ್ನೇ ಕೇಳಿ’ ಅಂದರಂತೆ.  ಇದರಿಂದ ಲತಾ ಕೆರಳಿ ಮಾತಿಗೆ ಮಾತು ಬೆಳೆದಾಗ ಎಂದೂ ತಾಳ್ಮೆ ಕಳೆದುಕೊಳ್ಳದ  ರಫಿ ಅಂದೇಕೋ ‘ಹಾಗಿದ್ದರೆ ನಾನಿನ್ನು ನಿಮ್ಮ ಜೊತೆ ಹಾಡುವುದಿಲ್ಲ’ ಅಂದು ಬಿಟ್ಟರು.  ‘ಓಹೋ, ಹಾಗೇನು’ ಎಂದ ಲತಾ ಸಭಾತ್ಯಾಗ ಮಾಡಿ ಪ್ರಮುಖ ಸಂಗೀತ ನಿರ್ದೇಶಕರೆಲ್ಲರಿಗೆ ಫೋನ್ ಮಾಡಿ ರಫಿ ಜೊತೆ ಡ್ಯುಯಟ್ ಹಾಡಲು ತನ್ನನ್ನು ಕರೆಯದಿರುವಂತೆ ಸೂಚಿಸಿದರು.  ಇದು ನಡೆದದ್ದು 1964ರಲ್ಲಿ.  ಹೀಗಾಗಿ ಆವೊ ಪ್ಯಾರ್ ಕರೇಂ ಚಿತ್ರದ ತುಮ್ ಅಕೇಲೇ ತೊ ಕಭೀ ಬಾಗ್ ಮೆಂ ಆಯಾ ನ ಕರೊ ಹಾಡು ಅವರಿಬ್ಬರು ಸೇರಿ ಹಾಡಿದ ಕೊನೆಯ ಹಾಡಾಯಿತು.  ಮುಂದೆ ಸುಮಾರು ಎರಡು ವರ್ಷ ಅವರು ಜೊತೆಯಾಗಿ ಹಾಡಲಿಲ್ಲ.  ಆದರೆ ಇದರಿಂದಾಗಿ ಲತಾ ಹಾಡುಗಳು ಕಮ್ಮಿಯಾದವೇ ಹೊರತು ಜನಪ್ರಿಯತೆಯ ತುತ್ತತುದಿಯಲ್ಲಿದ್ದ ರಫಿಯ ಮೇಲೆ ಯಾವ ಪರಿಣಾಮವೂ ಆಗಲಿಲ್ಲ.  ರಫಿಯೊಡನೆ ಹೆಚ್ಚು ಹೆಚ್ಚು ಹಾಡುವ ಅವಕಾಶ ದೊರಕಿ ಆಶಾ ಭೋಸ್ಲೆಯ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದದ್ದಷ್ಟೇ ಅಲ್ಲದೆ ಸುಮನ್ ಕಲ್ಯಾಣ್‌ಪುರ್ ಅವರ ಅದೃಷ್ಟವೂ ಮತ್ತಷ್ಟು ಖುಲಾಯಿಸಿತು. ಶಾರದಾ ಎಂಬ ಹೊಸ ಗಾಯಕಿಯೂ ಕಾಣಿಸಿಕೊಂಡರು.  ಕೊನೆಗೆ 1966ರಲ್ಲಿ ಜೈಕಿಶನ್ ಅವರ ಮಧ್ಯಸ್ತಿಕೆಯಿಂದ ಸಂಧಾನವೇರ್ಪಟ್ಟು ಪಲ್‌ಕೊಂ ಕೀ ಛಾವೊ ಮೆಂ ಎಂಬ ಚಿತ್ರಕ್ಕೆಂದು ಅವರಿಬ್ಬರ ಧ್ವನಿಯಲ್ಲಿ ಯುಗಳಗೀತೆಯೊಂದರ .ಧ್ವನಿಮುದ್ರಣವಾಯಿತು.  ಆದರೆ ಆ ಚಿತ್ರವಾಗಲಿ ಆ ಹಾಡಾಗಲಿ ಬೆಳಕು ಕಾಣದೆ ಇದ್ದುದರಿಂದ ಶಂಕರ್ ಜೈಕಿಶನ್ ಅವರ ಸಂಗೀತವೇ ಇದ್ದ  ಗಬನ್ ಚಿತ್ರದ ತುಮ್ ಬಿನ್ ಸಜನ್ ಬರ್‌ಸೆ ನಯನ್ ಹಾಡು  ರಫಿ-ಲತಾ ವಿರಸದ ನಂತರ ಜೊತೆಯಾಗಿ ಹಾಡಿದ ಮೊದಲ ಹಾಡೆಂದು ದಾಖಲಾಯಿತು. ಸಚಿನ್ ದೇವ್ ಬರ್ಮನ್ ಸಂಗೀತದ ಜ್ಯುಯಲ್ ತೀಫ್ ಚಿತ್ರದ ದಿಲ್ ಪುಕಾರೇ ಹಾಡು ಅವರ ವಿರಸದ ನಂತರದ ಮೊದಲ ಹಾಡೆಂದು ಕೆಲವರು ತಪ್ಪಾಗಿ ಉಲ್ಲೇಖಿಸುವುದಿದೆ.  ಸಂಧಾನಕ್ಕೆ ಮೊದಲು ತಪ್ಪೊಪ್ಪಿಗೆಯ ಪತ್ರವೊಂದನ್ನು ರಫಿ ಅವರಿಂದ ಬರೆಸಿಕೊಂಡಿದ್ದೆ ಎಂಬ ವಿವಾದಾತ್ಮಕ ಹೇಳಿಕೆಯೊಂದನ್ನು ಲತಾ ಇತ್ತೀಚೆಗೆ ನೀಡಿದ್ದರು.  ಆದರೆ ಈ ವಿರಸದಿಂದ ಎಳ್ಳಷ್ಟೂ ಜನಪ್ರಿಯತೆ ಕಳೆದುಕೊಳ್ಳದ ರಫಿ ಈ ರೀತಿ ಪತ್ರ ಬರೆದು ಕೊಟ್ಟರು ಅಂದರೆ ಯಾರೂ ನಂಬುವ ಮಾತಲ್ಲ.  ಲತಾ ರಫಿ ವಿರಸದ ಸಮಯದಲ್ಲಿ ಲವ್ ಇನ್ ಟೋಕಿಯೋ ಚಿತ್ರದಲ್ಲಿ ಅವರು ಬೇರೆಬೇರೆಯಾಗಿ ಹಾಡಿದ್ದ ಓ ಮೇರೆ ಶಾಹೆಖುಬಾ ಹಾಡನ್ನು ರೇಡಿಯೊ ಸಿಲೋನಿನವರು ಎರಡು ರೆಕಾರ್ಡುಗಳನ್ನು ಬಳಸಿ ಈ ರೀತಿ ಯುಗಳಗೀತೆಯಾಗಿಸಿ ಪ್ರಸಾರ ಮಾಡುತ್ತಿದ್ದರು.


ಲತಾ ಮಂಗೇಷ್ಕರ್ - ಸಿ. ರಾಮಚಂದ್ರ



50ರ ದಶಕದಲ್ಲಿ ಅನಾರ್ಕಲಿ, ಆಜಾದ್, ಅಲಬೇಲಾ ಮುಂತಾದ  ಬಹಳಷ್ಟು ಚಿತ್ರಗಳಲ್ಲಿ ತನಗೆ ಮಧುರ ಗೀತೆಗಳನ್ನು ಹಾಡಲು ಅವಕಾಶ ನೀಡಿದ್ದ ಸಂಗೀತ ನಿರ್ದೇಶಕ ಸಿ. ರಾಮಚಂದ್ರ ಅವರ ನಂಟನ್ನು  ಲತಾ 1958ರ ಅಮರದೀಪ್ ಚಿತ್ರದ ನಂತರ ಕಡಿದುಕೊಂಡರು. ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ ರೆಕಾರ್ಡಿಸ್ಟ್ ಒಬ್ಬರನ್ನು ಲತಾ ಕೋರಿಕೆಯಂತೆ ಸಿ. ರಾಮಚಂದ್ರ ಅವರು ಕೈಬಿಡಲು ನಿರಾಕರಿಸಿದ್ದೇ ಇದಕ್ಕೆ ಕಾರಣ.  ಕಾಲಕ್ಕೆ ತಕ್ಕ ಕೋಲ ಕಟ್ಟುವಲ್ಲಿ ಸೋತ ಸಿ. ರಾಮಚಂದ್ರ ಅವರ ವೃತ್ತಿಜೀವನವೂ ನಂತರ ಅವನತಿಯ ಹಾದಿ ಹಿಡಿಯಿತು. ಆದರೆ 1962ರ ಚೀನಾ ಯುದ್ಧದ ಸಂದರ್ಭದಲ್ಲಿ ಕವಿ ಪ್ರದೀಪ್ ಅವರು ಬರೆದ ಏ ಮೇರೆ ವತನ್ ಕೆ ಲೋಗೊ ಹಾಡಿಗೆ ಸ್ವರ ಸಂಯೋಜಿಸುವ ಸುವರ್ಣಾವಕಾಶವೊಂದು ಅವರ ಪಾಲಿಗೆ  ಒದಗಿಬಂತು. 1963ರ ಗಣರಾಜ್ಯೋತ್ಸವದಂದು ಜವಾಹರಲಾಲ್ ನೆಹರೂ ಅವರ ಉಪಸ್ಥಿತಿಯಲ್ಲಿ ಪ್ರಸ್ತುತಪಡಿಸಲುದ್ದೇಶಿಸಿದ್ದ  ಈ ಹಾಡನ್ನು ಆಶಾ ಭೋಸ್ಲೆ ಹಾಡುವುದೆಂದು ನಿಶ್ಚಯವಾಗಿ ರಿಹರ್ಸಲ್ ಕೂಡ ನಡೆಯಿತು. ಆದರೆ ರಾಷ್ಟ್ರೀಯ ವೇದಿಕೆಯೊಂದರಲ್ಲಿ ಮಿಂಚುವ ಅವಕಾಶವನ್ನು ಕಳೆದುಕೊಳ್ಳಲು ಸಿದ್ಧರಿಲ್ಲದ ಲತಾ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ಸಿ. ರಾಮಚಂದ್ರ ಅವರೊಂದಿಗೆ ರಾಜಿ ಮಾಡಿಕೊಂಡು ಆ ಹಾಡು ತನ್ನದಾಗುವಂತೆ ಮಾಡಿಕೊಳ್ಳುವಲ್ಲಿ ಸಫಲರಾದರು.  ಅದರ ಧ್ವನಿಮುದ್ರಿಕೆ ತಯಾರಾಗಿ ಚಲನಚಿತ್ರ ಗೀತೆಗಳಂತೆ ಬಲು ಜನಪ್ರಿಯವೂ ಆಯಿತು. ಆದರೆ ಈ ಮರು ಮೈತ್ರಿ ಕೇವಲ ತಾತ್ಕಾಲಿಕವಾಗಿತ್ತು.  ನಂತರದ ವರ್ಷಗಳಲ್ಲಿ ಸಿ.ರಾಮಚಂದ್ರ ಅವರ ಹೆಚ್ಚು ಚಿತ್ರಗಳೇನೂ ಬರಲಿಲ್ಲ.  ಬಂದ ಒಂದರಲ್ಲೂ ಲತಾ ಧ್ವನಿ ಇರಲಿಲ್ಲ.




ಓ.ಪಿ. ನಯ್ಯರ್ - ಗುರುದತ್



Mr and Mrs55, ಆರ್ ಪಾರ್,  ಸಿ.ಐ.ಡಿ ಮುಂತಾದ ಚಿತ್ರಗಳ ಮೂಲಕ ನಯ್ಯರ್ ಅವರ ಯಶಸ್ಸಿಗೆ ಕಾರಣರಾದ ಗುರುದತ್ ಅವರ ಚಿತ್ರಗಳಿಂದ ಆ ಮೇಲೆ ನಯ್ಯರ್ ಸಂಗೀತ ಮಾಯವಾಗಿ ಆ ಸ್ಥಾನಕ್ಕೆ ಚೌದವೀಂ ಕಾ ಚಾಂದ್ ಚಿತ್ರದ ಮೂಲಕ ರವಿ ಮತ್ತು ಪ್ಯಾಸಾ, ಕಾಗಜ್ ಕೆ ಫೂಲ್ ಚಿತ್ರಗಳ ಮೂಲಕ ಎಸ್.ಡಿ ಬರ್ಮನ್ ಬಂದರು.  ಸಿ.ಐ.ಡಿ ಹಿಟ್ ಆದರೆ ನಯ್ಯರ್, ವಹೀದಾ ರಹಮಾನ್ ಮತ್ತು ರಾಜ್ ಖೋಸ್ಲಾ ಅವರಿಗೆ ಹೊಸ ಕಾರುಗಳನ್ನು ನೀಡುವುದಾಗಿ ಘೋಷಿಸಿದ್ದ ಗುರುದತ್ ಉಳಿದಿಬ್ಬರಿಗೆ ಮಾತ್ರ ಕೊಟ್ಟು ತನಗೆ ಮೋಸ ಮಾಡಿದ್ದು ಇದಕ್ಕೆ ಕಾರಣ ಎಂದು ನಯ್ಯರ್ ಹೇಳುತ್ತಾರೆ.  ಆದರೆ ಬಹಾರೇಂ ಫಿರ್ ಭೀ ಆಯೇಂಗೀ ಚಿತ್ರಕ್ಕೆ ಕೆಲವು ಹಾಡುಗಳನ್ನು ಧ್ವನಿಮುದ್ರಿಸುವಷ್ಟರಲ್ಲಿ ಅಸೌಖ್ಯಕ್ಕೆ ಒಳಗಾದ ಎಸ್.ಡಿ ಬರ್ಮನ್ ಸ್ಥಾನಕ್ಕೆ ಮತ್ತೆ ನಯ್ಯರ್ ಅವರನ್ನು ಕರೆತರುವ ಮೂಲಕ ಈ ಮೈತ್ರಿ ಮತ್ತೆ ಚಿಗುರೊಡೆಯಿತು.  ಆದರೆ ದುರದೃಷ್ಟವಶಾತ್ ಆ ಚಿತ್ರ ಸಂಪೂರ್ಣವಾಗುವ ಮುನ್ನವೇ ಗುರುದತ್ ಇಹಲೋಕ ತ್ಯಜಿಸಿದರು.

ಓ.ಪಿ. ನಯ್ಯರ್ - ರಫಿ



ರಫಿ ಹಾಡುಗಳಿಂದಲೇ ತಾನು ಕೀರ್ತಿಯ ಉತ್ತುಂಗಕ್ಕೇರಿದ್ದರೂ 1966ರ ಲವ್ ಎಂಡ್ ಮರ್ಡರ್ ಎಂಬ ಚಿತ್ರದ  ಒಂದು ರೆಕಾರ್ಡಿಂಗಿಗೆ ಕೊಂಚ ತಡವಾಗಿ ಬಂದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಅವರೊಡನೆ ವಿರಸ ಕಟ್ಟಿಕೊಂಡ ನಯ್ಯರ್ ನಡೆಯನ್ನು ತಾನು ಕುಳಿತಿರುವ ಗೆಲ್ಲಿಗೇ ಕೊಡಲಿಯೇಟು ಹಾಕಿಕೊಂಡಂತೆ ಅನ್ನಬೇಕೋ, ವಿನಾಶ ಕಾಲೇ ವಿಪರೀತ ಬುದ್ಧಿ ಅನ್ನಬೇಕೋ ತಿಳಿಯದು. ಆದರೂ ಅಷ್ಟರಲ್ಲೇ ರೆಕಾರ್ಡ್ ಆಗಿದ್ದ ಕೆಲವು ರಫಿ ಹಾಡುಗಳು ಬಹಾರೇ ಫಿರ್ ಭೀ ಆಯೇಂಗೀ, ಯೆ ರಾತ್ ಫಿರ್ ನ ಆಯೇಗಿ , ಸಾವನ್ ಕೀ ಘಟಾ, ಹಮ್ ಸಾಯಾ ಮುಂತಾದ ಚಿತ್ರಗಳಲ್ಲಿ ಮುಂದಿನ ಒಂದೆರಡು ವರ್ಷ ಕೇಳಲು ಸಿಕ್ಕಿದವು.  ಆ ಮೇಲೆ ಅವರ ಸ್ಥಾನಕ್ಕೆ ಮಹೇಂದ್ರ ಕಪೂರ್ ಅವರನ್ನು ಕರೆತಂದು ಕೆಲವು ಸಿ ಗ್ರೇಡ್ ಸಿನಿಮಾಗಳಲ್ಲಿ ಒಳ್ಳೆಯ ಹಾಡುಗಳನ್ನು ನೀಡುವ  ಪ್ರಯತ್ನ ಮಾಡಿದರೂ ಅವರೆಂದೂ ಮತ್ತೆ ಮೊದಲಿನ ಓ.ಪಿ. ನಯ್ಯರ್ ಆಗಲಿಲ್ಲ.  ಮತ್ತೆ ರಫಿಯೊಡನೆ ರಾಜಿ ಮಾಡಿಕೊಂಡದ್ದೂ ಅವರಿಗೆ ನೆರವಾಗಲಿಲ್ಲ.

ಓ.ಪಿ. ನಯ್ಯರ್ - ಆಶಾ



1960ರಲ್ಲಿ ತನ್ನ ಪತಿ ಭೋಸ್ಲೆ ಅವರೊಂದಿಗಿನ ನಂಟು ಕಡಿದುಕೊಂಡ ಆಶಾ ಜೊತೆ ಸಂಗೀತ ಸಂಬಂಧ ಮಾತ್ರವಲ್ಲದೆ ವೈಯುಕ್ತಿಕ ಬಂಧವನ್ನೂ ಬೆಳೆಸಿಕೊಂಡ ನಯ್ಯರ್ 60ರ ದಶಕದಲ್ಲಿ ಅವರ ಪ್ರತಿಭೆಯ ವಜ್ರವನ್ನು ಸಾಣೆ ಹಿಡಿಯುವ ಜೋಹರಿಯಾದರು. ಆದರೆ ಆ ವಜ್ರವನ್ನೆಲ್ಲಿ ಕಳೆದುಕೊಳ್ಳುತ್ತೇನೋ ಎಂಬ ಭಯದಿಂದ ತನ್ನ ಆರಂಭದ ದಿನಗಳ ಯಶಸ್ಸಿಗೆ ಕಾರಣರಾಗಿದ್ದ ಅನನುಕರಣೀಯ ಧ್ವನಿಯೊಡತಿ ಗೀತಾ ದತ್ ಮತ್ತು ಟೆಂಪಲ್ ಬೆಲ್‌ನಂಥ ಕಂಚಿನ ಕಂಠದ ಗಾಯಕಿ ಎಂದು  ಎಂದು ತಾನೇ ಹೊಗಳುತ್ತಿದ್ದ ಶಂಶಾದ್ ಬೇಗಂ ಅವರನ್ನು ಮರೆತೇ ಬಿಟ್ಟರು.  ಕಷ್ಟ ಕಾಲದಲ್ಲಿದ್ದ ಗೀತಾ ದತ್ ಒಮ್ಮೆ ಈ ಬಗ್ಗೆ ನಯ್ಯರ್ ಅವರನ್ನು ಕೇಳಿಯೂ ಇದ್ದರಂತೆ.  ಆದರೆ ನಯ್ಯರ್ ಮನೆದೇವರ ಸಹಮತಿಯಿಲ್ಲದೆ  ಏನೂ ಮಾಡಲಾರದ ಸ್ಥಿತಿಯಲ್ಲಿದ್ದರು. ಎಷ್ಟೋ ವರ್ಷಗಳ ನಂತರ ಕಿಸ್ಮತ್ ಚಿತ್ರದಲ್ಲಿ ಕಜ್‌ರಾ ಮುಹಬ್ಬತ್ ವಾಲಾ ಹಾಡಿಗೆ ಮಾತ್ರ ಶಂಷಾದ್ ಧ್ವನಿಯನ್ನು ಮತ್ತೆ ಬಳಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಆದರೆ  1972ರ ಪ್ರಾಣ್ ಜಾಯೇ ಪರ್ ವಚನ್ ಜಾಯೇ ಚಿತ್ರದ ನಂತರ ಆಶಾ ಭೋಸ್ಲೆಯೊಂದಿಗಿನ ಅವರ ಸಂಬಂಧವೂ ಹಠಾತ್ತಾಗಿ ಕಡಿದು ಹೋಗಿ ಅವರ ಸಂಗೀತದಲ್ಲಿ ಟೊಳ್ಳಾದ ಡೋಲುಗಳು ಮಾತ್ರ ಉಳಿದವು.  ವಿಪರ್ಯಾಸವೆಂದರೆ ಆ ಚಿತ್ರದ ಚೈನ್ ಸೆ ಹಮ್ ಕೊ ಕಭೀ ಆಪ್ ನೆ ಜೀನೆ ನ ದಿಯಾ ಹಾಡಿಗೆ ಆ ವರ್ಷದ ಫಿಲ್ಮ್ ಫೇರ್ ಅವಾರ್ಡ್ ದೊರಕಿತು.  ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಶಾ ಬರದಿದ್ದರೂ ನಯ್ಯರ್ ಆ ಪ್ರಶಸ್ತಿ ಸ್ವೀಕರಿಸಿ ಬರುತ್ತಾ ಅದನ್ನು ಕಾರಿನಿಂದ  ಹೊರಕ್ಕೆಸೆದು ಅದು ನೆಲಕ್ಕೆ ಬಿದ್ದ ಸದ್ದು ಕೇಳಿ ಸಂತಸಪಟ್ಟರಂತೆ. ಆದರೆ ಈ ಘಟಸ್ಪೋಟಕ್ಕೆ ಕಾರಣವೇನೆಂಬುದು ನಿಗೂಢ. ಇಲ್ಲಿ ಬರೆಯಲಾಗದ ಘಟನೆಯೊಂದು ಇದಕ್ಕೆ ಹೇತು ಎಂದು ಕೆಲವರ ಊಹೆ. ಈಗಲೂ ಆಶಾ ಭೋಸ್ಲೆ ತನ್ನ ಯಶಸ್ಸಿಗೆ ಕಾರಣರಾದವರನ್ನು ನೆನಪಿಸಿಕೊಳ್ಳುವಾಗ ತಪ್ಪಿಯೂ ನಯ್ಯರ್ ಅವರ ಉಲ್ಲೇಖ ಮಾಡುವುದಿಲ್ಲ.  ಆದರೆ ನಯ್ಯರ್ ಕೊನೆ ವರೆಗೂ ಆಶಾ ಧ್ವನಿಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಲೇ ಇದ್ದರು!

ಲತಾ ಮಂಗೇಷ್ಕರ್ - ಶಂಕರ್ - ರಾಜಕಪೂರ್



ಲತಾ ರಫಿ ವಿರಸದ ಸಮಯದಲ್ಲಿ  ತಿತ್‌ಲಿ ಉಡಿ ಖ್ಯಾತಿಯ ಶಾರದಾ  ಶಂಕರ್ ಜೈಕಿಶನ್ ಪಾಳೆಯವನ್ನು ಸೇರಲು ಕಾರಣ ರಾಜಕಪೂರ್. ಟೆಹರಾನ್‌ನಲ್ಲಿ ಶ್ರೀಚಂದ್ ಆಹೂಜಾ ಎಂಬವರ ಪಾರ್ಟಿಯೊಂದರಲ್ಲಿ ಆಕೆ ಹಾಡಿದ್ದನ್ನು ಕೇಳಿದ ರಾಜ್ ಆಕೆಯನ್ನು ಮುಂಬಯಿಗೆ ಕರೆತಂದು ತನ್ನ ಚಿತ್ರಗಳಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಶಂಕರ್ ಅವರಿಗೆ ಪರಿಚಯಿಸಿದರು. ಶಂಕರ್  ಸೂಕ್ತ ತರಬೇತಿ ಮೂಲಕ ಆಕೆಯ ವಿಶಿಷ್ಟ ಧ್ವನಿಯನ್ನು ತಿದ್ದಿ ತೀಡಿ ಗುಮ್‌ನಾಮ್, ಸೂರಜ್, ಅರೌಂಡ್ ದ ವರ್ಲ್ಡ್, ಶತ್ರಂಜ್ ಮುಂತಾದ ಚಿತ್ರಗಳಲ್ಲಿ ಆಕೆಯಿಂದ ಹಿಟ್ ಹಾಡುಗಳನ್ನು ಹಾಡಿಸಿದರು. ರಾಜ್ ಕಪೂರ್ ಅವರ magnum opus ಮೇರಾ ನಾಮ್ ಜೋಕರ್ ಚಿತ್ರಕ್ಕೂ ಆಕೆಯ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಲಾಯಿತು.  ಅದುವರೆಗೆ ರಾಜ್ ಚಿತ್ರಗಳಿಗೆ ಅನಿವಾರ್ಯವೇ ಆಗಿದ್ದ ಲತಾಗೆ ಸಹಜವಾಗಿಯೇ ಇದು ರುಚಿಸಲಿಲ್ಲ.  ರಾಜ್, ಶಂಕರ್ ಇಬ್ಬರಿಂದಲೂ ದೂರ ಇರಲು ನಿರ್ಧರಿಸಿದ ಲತಾ ಜೋಕರ್ ಮತ್ತು ಕಲ್ ಆಜ್ ಔರ್ ಕಲ್ ಚಿತ್ರಗಳಲ್ಲಿ ಹಾಡಲಿಲ್ಲ.  ಜೋಕರ್ ವ್ಯಾವಹಾರಿಕವಾಗಿ ದಯನೀಯವಾಗಿ ಸೋತು ರಾಜ್ ಹೊಸ ಜನಾಂಗದ ಬಾಬ್ಬಿ ನಿರ್ಮಾಣಕ್ಕೆ ಕೈ ಹಾಕಿದಾಗ ಅವರಿಗೆ ಜೈಕಿಶನ್ ನಿಧನದಿಂದ ಒಬ್ಬಂಟಿಯಾಗಿದ್ದ ಶಂಕರ್ ಮತ್ತು ಲತಾ ಇವರಿಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳುವ ಸಂದಿಗ್ಧ ಎದುರಾಗಿರಬಹುದು. ವ್ಯಾವಹಾರಿಕವಾಗಿ  ಎರಡನೇ ಆಯ್ಕೆ ಸೂಕ್ತವೆನ್ನಿಸಿ ಅವರು ಶಂಕರ್ ಅವರನ್ನು ಕೈಬಿಟ್ಟಿರಬಹುದು ಎಂದು ಊಹಿಸಬೇಕಾಗುತ್ತದೆ.  ಕೆಲ ವರ್ಷಗಳ ನಂತರ ಶಂಕರ್ ಮತ್ತು ಲತಾ ಮಂಗೇಷ್ಕರ್ ಮಧ್ಯೆ ರಾಜಿ ಆಗಿ ಅವರು  ಸನ್ಯಾಸಿ ಮುಂತಾದ ಚಿತ್ರಗಳಲ್ಲಿ ಹಾಡಿದರೂ ಇದು ಶಂಕರ್ ಅವರಿಗೆ ಅಷ್ಟೇನೂ ಪ್ರಯೋಜನಕಾರಿ ಆಗಲಿಲ್ಲ.



ಮೇರಾ ನಾಮ್ ಜೋಕರ್‌ಗಾಗಿ ಶಾರದಾ ಅವರ ಧ್ವನಿಯಲ್ಲಿ ಧ್ವನಿಮುದ್ರಿಸಲಾಗಿದ್ದ ಆದರೆ ಚಿತ್ರದಲ್ಲಿ ಸೇರ್ಪಡೆಯಾಗದ ಬೇರೆಲ್ಲೂ ಕೇಳಲು ಸಿಗದ ಹಾಡು  ಇಲ್ಲಿದೆ.


ಶಂಕರ್ - ಜೈಕಿಶನ್



ತಮ್ಮ ವೃತ್ತಿ ಜೀವನದ ಉತ್ತರಾರ್ಧದಲ್ಲಿ  ಶಂಕರ್ ಮತ್ತು ಜೈಕಿಶನ್ ನಡುವೆಯೂ ಬೂದಿ ಮುಚ್ಚಿದ ಕೆಂಡದಂಥ ವಿರಸ ಹೊಗೆಯಾಡಲು ಶುರು ಮಾಡಿತ್ತು. ಮೊದಲ ಒಂದೆರಡು ಚಿತ್ರಗಳ  ನಂತರ ಕೆಲಸದ ಹೊರೆ ಹೆಚ್ಚಾದ  ಕಾರಣ ಶಂಕರ್ ಮತ್ತು ಜೈಕಿಶನ್ ಚಿತ್ರಗಳ ಹಾಡುಗಳನ್ನು ಹಂಚಿಕೊಂಡು ಬೇರೆಬೇರೆಯಾಗಿ ಕಂಪೋಸಿಂಗ್ ಮಾಡುತ್ತಿದ್ದರು.  ಆದರೆ ಹೊರ ಜಗತ್ತಿಗೆ ಯಾವುದು ಶಂಕರ್ ಹಾಡು ಯಾವುದು ಜೈಕಿಶನ್ ಹಾಡು ಎಂದು ತಿಳಿಯುತ್ತಿರಲಿಲ್ಲ.  ಕೆಲವರು ಶೈಲೇಂದ್ರ ಬರೆದ ಹಾಡುಗಳನ್ನು ಶಂಕರ್ ಸಂಯೋಜಿಸುತ್ತಿದ್ದರು  ಮತ್ತು ಹಸರತ್ ಜೈಪುರಿ ಬರೆದ ಹಾಡುಗಳು ಜೈಕಿಶನ್ ಅವರದಾಗಿರುತ್ತಿದ್ದವು ಎಂದು ಊಹಿಸುವುದಿತ್ತು. ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂದು ಮುಂದೆ ತಿಳಿಯಿತು.  1964ರ ಸಂಗಂ ಸಂಗೀತ ಅಭೂತಪೂರ್ವ ಯಶಸ್ಸು ಕಂಡಾಗ ಫಿಲ್ಮ್ ಫೇರ್ ಇಂಟರ್‌ವ್ಯೂ ಒಂದರಲ್ಲಿ ಆ ಚಿತ್ರದ ಯೆ ಮೇರಾ ಪ್ರೇಮ್ ಪತ್ರ ಪಢ್ ಕರ್ ತನ್ನ ಸಂಯೋಜನೆ  ಎಂದು ಜೈಕಿಶನ್ ಜಗಜ್ಜಾಹೀರುಗೊಳಿಸಿದ್ದು ಶಂಕರ್ ಅವರಿಗೆ ಇಷ್ಟವಾಗಲಿಲ್ಲ.  ಪ್ರೇಮ್ ಪತ್ರ ಮತ್ತು ಮೇರೇ ಮನ್ ಕೀ ಗಂಗಾ  ಆ ವರ್ಷದ ವಾರ್ಷಿಕ ಬಿನಾಕಾ ಗೀತ್ ಮಾಲಾದ ಟಾಪ್ ಹಾಡುಗಳಾದಾಗ ಶಂಕರ್ ಅವರಿಗೆ ಇನ್ನಷ್ಟು ಮುನಿಸು ಬಂದು ‘ಈ ಎರಡು ಹಾಡುಗಳು ಟಾಪ್ ಎಂದು ಯಾರು ನಿಮಗೆ ಹೇಳಿದ್ದು.  ಸಂಗಂ ಚಿತ್ರದ ಶ್ರೇಷ್ಠ ಹಾಡು ದೋಸ್ತ್ ದೋಸ್ತ್ ನ ರಹಾ’ ಎಂದು ಅಮೀನ್ ಸಯಾನಿಯನ್ನು ತರಾಟೆಗೆ ತೆಗೆದುಕೊಂಡರಂತೆ.  ಇದರಿಂದ ಹಸರತ್ ಬರೆದ ಪ್ರೇಮ್ ಪತ್ರ ಮತ್ತು ಶೈಲೇಂದ್ರ ಬರೆದ ಮೇರೆ ಮನ್ ಕೀ ಗಂಗಾ ಎರಡೂ ಜೈಕಿಶನ್ ಸಂಯೋಜನೆಗಳೆಂದೂ ದೋಸ್ತ್ ದೋಸ್ತ್ ಶಂಕರ್ ಅವರದೆಂದೂ ತಿಳಿಯುವಂತಾದುದಷ್ಟೇ ಅಲ್ಲದೆ ಅವರಿಬ್ಬರ ನಡುವಿನ ಶೀತಲ ಸಮರದ ಸೂಚನೆಯೂ ಸಿಕ್ಕಿತು. ಶಂಕರ್ ಅವರು ಹೊಸ ಗಾಯಕಿ ಶಾರದಾ ಅವರನ್ನು ಪರಿಚಯಿಸಿದ್ದೂ ಜೈಕಿಶನ್‌ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.  ಆದರೆ ವ್ಯವಹಾರ ನಿಪುಣರಾಗಿದ್ದ   ಜೈಕಿಶನ್ ಈ ವಿರಸದಿಂದ ತಮ್ಮ ವೃತ್ತಿಜೀವನಕ್ಕೆ ಹಾನಿಯಾಗದಂತೆ  ನೋಡಿಕೊಂಡರು.  ಅತಿಯಾದ ಕುಡಿತದಿಂದ ಲಿವರ್ ಸಿರೋಸಿಸ್‍ಗೆ ಒಳಗಾಗಿ 1971ರಲ್ಲಿ 42 ವರ್ಷ ವಯಸ್ಸಿನ ಜೈಕಿಶನ್ ತೀರಿಕೊಂಡ ಮೇಲೆ ಸ್ವಭಾವತಃ ಮುಂಗೋಪಿಯೂ ಆಗಿದ್ದು ವ್ಯವಹಾರ ಸೂಕ್ಷ್ಮಗಳನ್ನು ಅರಿಯದಿದ್ದ ಶಂಕರ್ ಕ್ರಮೇಣ ಹಿನ್ನೆಲೆಗೆ ಸರಿಯತೊಡಗಿದರು. ಅವರು ಸಂಗೀತ ನೀಡಬೇಕಿದ್ದ ಜಿ.ಪಿ. ಸಿಪ್ಪಿ ಅವರಂಥವರ ಚಿತ್ರಗಳು ಇತರರ ಪಾಲಾದವು. ಸಾಲದ್ದಕ್ಕೆ ಏರಿದ ಏಣಿಯನ್ನು ಒದ್ದಂತೆ ರಾಜಕಪೂರ್ ಕೂಡ ಅವರ  ಕೈಬಿಟ್ಟು ಬಾಬ್ಬಿ ಚಿತ್ರಕ್ಕೆ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರನ್ನು ಬಳಸಿಕೊಂಡರು. ಕೊನೆಯ ದಿನಗಳಲ್ಲಿ ಬಹುತೇಕ ಅನಾಮಿಕರಾಗಿ ಬದುಕಿದ ಶಂಕರ್ 1987ರಲ್ಲಿ ಇಹಲೋಕ ತ್ಯಜಿಸಿದ ವಿಷಯ ಪ್ರಪಂಚಕ್ಕೆ ತಿಳಿದದ್ದು ಅವರ ಅಂತಿಮ ಸಂಸ್ಕಾರ ನಡೆದ ನಂತರ.

ಎಸ್.ಡಿ. ಬರ್ಮನ್ - ಆರ್.ಡಿ. ಬರ್ಮನ್



ತ್ರಿಪುರಾದ ರಾಜಮನೆತನಕ್ಕೆ ಸೇರಿದ ಸಚಿನ್ ದೇವ್ ಬರ್ಮನ್ ತನ್ನ ಸ್ವಂತ ಮಗ ಸೇರಿದಂತೆ ಯಾರಿಗೂ ಸೊಪ್ಪು ಹಾಕದ ಮಹಾ ಸ್ವಾಭಿಮಾನಿಯಾಗಿದ್ದರು.  70ರ ದಶಕದಲ್ಲಿ ಆರ್.ಡಿ. ಬರ್ಮನ್ ಅವರಿಗೂ ತುಂಬಾ ಚಿತ್ರಗಳು ಸಿಗತೊಡಗಿದ್ದವು. ಆದರೂ ದಾದಾ ಅವರ ಚಿತ್ರಗಳಲ್ಲಿ ಪಂಚಮ್ ಸಹಾಯಕ ಸಂಗೀತ ನಿರ್ದೇಶಕರೆಂದು ಗುರುತಿಸಿಕೊಳ್ಳುತ್ತಿದ್ದರು.  ಇಬ್ಬರಿಗೂ  ಬಾಸು ಚಕ್ರವರ್ತಿ, ಮನೋಹಾರಿ ಮತ್ತು ಮಾರುತಿ ರಾವ್ ಅವರೇ ಅರೇಂಜರ್ ಆಗಿದ್ದರು.  ದಾದಾ ಬರ್ಮನ್ ದೇವಾನಂದ್ ಅವರ ತೇರೆ ಮೇರೆ ಸಪ್‌ನೆ ಚಿತ್ರದ ಕೆಲಸ ಮಾಡುತ್ತಿದ್ದಾಗ ಪಂಚಮ್ ಈ ಸಹಾಯಕರನ್ನೆಲ್ಲ ಜೆಮಿನಿಯ ಲಾಖೋಂ ಮೆ ಏಕ್ ಚಿತ್ರದ ರೆಕಾರ್ಡಿಂಗಿಗಾಗಿ ಮದರಾಸಿಗೆ ಕರಕೊಂಡು ಹೋದರು.  ಇದರಿಂದ ಕೆರಳಿದ ದಾದಾ ಬರ್ಮನ್ ಪಂಚಮ್ ಸೇರಿದಂತೆ ಆ ಎಲ್ಲರನ್ನು ತನ್ನ ತಂಡದಿಂದ ಹೊರಗೆ ಹಾಕಿದರು.  ಹೀಗಾಗಿ  ನಂತರದ  ಎಲ್ಲ ಚಿತ್ರಗಳಲ್ಲಿ ಅವರ ಪತ್ನಿ ಮೀರಾ ಬರ್ಮನ್  ಸಹಾಯಕಿಯಾಗಿಯೂ  ಅರುಣ್-ಅನಿಲ್  ಅನ್ನುವವರು ಅರೇಂಜರ್ಸ್ ಆಗಿಯೂ ಕಾಣಿಸಿಕೊಳ್ಳತೊಡಗಿದರು.

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಸಂಗೀತ ಕ್ಷೇತ್ರದಲ್ಲೂ ಇಂತಹ ಸರಸ ವಿರಸದ ಘಟನೆಗಳು ಅನೇಕ ಇರಬಹುದು.  ಅವುಗಳ ಬಗ್ಗೆ ಅಧಿಕೃತ ಮಾಹಿತಿ ಇಲ್ಲದ್ದರಿಂದ ಇಲ್ಲಿ ಉಲ್ಲೇಖಿಸಿಲ್ಲ.
* * * * * * * * *

ಇದು ಜೂನ್ 2021ರ  ಉತ್ಥಾನ ಮಾಸಪತ್ರಿಕೆಯಲ್ಲಿ ಚಂದಮಾಮ ಪುಟಗಳ ಮಾದರಿಯಲ್ಲಿ ಪ್ರತೀ ಪುಟಗಳಲ್ಲಿ ಚಿತ್ರಗಳ ಅಳವಡಿಕೆಯೊಂದಿಗೆ ಹತ್ತು ಪುಟಗಳ ಲೇಖನವಾಗಿ ಪ್ರಕಟವಾಯಿತು.

 




 

3 comments:

  1. ತುಂಬಾ ಉತ್ತಮವಾದ ಲೇಖನ. ಹಿಂದಿ ಚಿತ್ರರಂಗದ ಬಗೆಗಿನ ತಮ್ಮ ಆಳವಾದ ಜ್ಞಾನಕ್ಕೆ ನನ್ನ ದೊಡ್ಡ ಸಲಾಂ...

    ReplyDelete

Your valuable comments/suggestions are welcome