
ಇಲ್ಲ ಇಲ್ಲ. ಕೊಹಿನೂರ್ ವಜ್ರ ಅಥವಾ ಟಿಪ್ಪು ಖಡ್ಗದಂತೆ ಜಗನ್ಮೋಹಿನಿಯನ್ನು ಯಾರೂ ಹಾರಿಸಿಕೊಂಡು ಹೋಗಲಿಲ್ಲ. ವಾಸ್ತವವಾಗಿ ಮೂಲ ಜಗನ್ಮೋಹಿನಿ ಲಂಡನ್‌ನಲ್ಲಿ ಇಲ್ಲ ಕೂಡ. ರಾಮಾಯಣದ ಕೆಲವು ಪಾಠಾಂತರಗಳ ಪ್ರಕಾರ ರಾವಣನ ಅಶೋಕವನದಲ್ಲಿದ್ದ ಛಾಯಾ ಸೀತೆಯಂತೆ ಅಲ್ಲಿ ಇರುವುದು ಜಗನ್ಮೋಹಿನಿಯ ಛಾಯಾ ರೂಪ ಮಾತ್ರ! ಯಾರಪ್ಪಾ ಈ ಜಗನ್ಮೋಹಿನಿ ಎಂದು ಯೋಚಿಸುತ್ತಿದ್ದೀರಾ? ಈಕೆ ಬೇರಾರೂ ಅಲ್ಲ. 50ರ ದಶಕದಲ್ಲಿ ಎಂದೋ ಎಂದೋ ಎಂದು ಹಾಡಿ ಎಲ್ಲರನ್ನೂ ಸಮ್ಮೋಹನಗೊಳಿಸಿದ್ದವಳು. ಅರ್ಥಾತ್ ನಾನು ಅನೇಕ ವರ್ಷಗಳಿಂದ ಹುಡುಕಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದ ಜಗನ್ಮೋಹಿನಿ ಚಿತ್ರದ ಕೆಲವು ಹಾಡುಗಳು ಕೊನೆಗೂ ಲಂಡನ್‌ನಲ್ಲಿರುವ ಬ್ರಿಟಿಷ್ ಲೈಬ್ರರಿಯಲ್ಲಿ ಪತ್ತೆಯಾದವು. ಅಷ್ಟೇ ಅಲ್ಲ. ನಾನು ನಿರೀಕ್ಷಿಸದಿದ್ದ ಇನ್ನೂ ಅನೇಕ ಹಳೆ ಹಾಡುಗಳ ಭಂಡಾರದ ಕೀಲಿ ಕೈಯೇ ದೊರಕಿದಂತಾಯಿತು. ಮಿತ್ರರೊಬ್ಬರು ನೀಡಿದ ಸಣ್ಣ ಸುಳಿವೊಂದು ಇದಕ್ಕೆ ಕಾರಣವಾಯಿತು.
ಬ್ರಿಟಿಷ್ ಲೈಬ್ರರಿ ಹಮ್ಮಿಕೊಂಡ Endangered Archives Programme ಅಡಿಯಲ್ಲಿ ಯಂಗ್ ಇಂಡಿಯಾ ಲೇಬಲ್ ಹೊಂದಿ ಮುಂಬಯಿಯ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ ಸುಮಾರು 1935 ರಿಂದ 1955ರ ವರೆಗೆ ತಯಾರಿಸಿದ್ದ ಸಾವಿರಾರು 78 rpm ರೆಕಾರ್ಡುಗಳನ್ನು digitised ರೂಪದಲ್ಲಿ ಸಂಗ್ರಹಿಸಲಾಗಿದ್ದು ನಾವು ಚಂದಮಾಮ ಜಾಹೀರಾತುಗಳಲ್ಲಿ ನೋಡುತ್ತಾ ಬಂದಿರುವ ಅನೇಕ ಕನ್ನಡ ಚಿತ್ರಗಳ ಹಾಡುಗಳು ಮುಕ್ತವಾಗಿ ಆಲಿಸಲು ಅಲ್ಲಿ ಲಭ್ಯವಿವೆ. ಜಗನ್ಮೋಹಿನಿಯ ಕೆಲವು ಹಾಡುಗಳ ಜೊತೆಗೆ ಶ್ರೀನಿವಾಸ ಕಲ್ಯಾಣ, ದಳ್ಳಾಳಿ, ಆಶಾಢಭೂತಿ, ಗಂಧರ್ವ ಕನ್ಯೆ, ಚಂಚಲ ಕುಮಾರಿ ಮುಂತಾದವು ಅಲ್ಲದೆ ಅನೇಕ ನಾಟಕಗಳು, ಲಾವಣಿಗಳು, ರಂಗ ಗೀತೆಗಳು, ಶಾಸ್ತ್ರೀಯ ಸಂಗೀತ ಇತ್ಯಾದಿಗಳ ದೊಡ್ಡ ಖಜಾನೆಯೇ ಇದೆ. ಆಗಲೇ ಹೇಳಿದಂತೆ ಇವುಗಳ ಪ್ರತಿ ಮಾತ್ರ ಅಲ್ಲಿದ್ದು ಮೂಲ ಸಾಮಗ್ರಿ ಆಯಾ ಸಂಗ್ರಾಹಕರ ಬಳಿಯಲ್ಲೇ ಇರುತ್ತದೆ. ಈ ಕನ್ನಡ ಖಜಾನೆ ಅಲ್ಲಿ ಸೇರ್ಪಡೆಯಾದದ್ದು ವೆಂಕಟಮೂರ್ತಿ ಮತ್ತು ಕೊಚ್ಚಿಯ ಸಮೀಪದ ಪಾಲ ಎಂಬಲ್ಲಿ ಹಳೆ ಗ್ರಾಮೊಫೋನ್ ಮತ್ತು ರೆಕಾರ್ಡುಗಳ ಬೃಹತ್ ಸಂಗ್ರಹಾಲಯವನ್ನೇ ಹೊಂದಿರುವ ಸನ್ನಿ ಮಾಥ್ಯೂ ಎಂಬ ಮಹಾನುಭಾವರ ಸಹಕಾರದಿಂದ. ಇತರ ಅನೇಕರೂ ವಿವಿಧ ಭಾಷೆಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.

ಬ್ರಿಟಿಷ್ ಮತ್ತು ಜರ್ಮನ್ ರೆಕಾರ್ಡಿಂಗ್ ಕಂಪನಿಗಳ ತೀವ್ರ ಸ್ಪರ್ಧೆ ಎದುರಿಸಿಯೂ ಈ ಅಪ್ಪಟ ಸ್ವದೇಶಿ ಸಂಸ್ಥೆಯಾದ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ ಸುಮಾರು ಎರಡು ದಶಕಗಳ ಕಾಲ 10000ಕ್ಕೂ ಹೆಚ್ಚು 78 rpm ರೆಕಾರ್ಡುಗಳನ್ನು ಬಿಡುಗಡೆ ಮಾಡಿತ್ತು. ಸಿನಿಮಾ ಸಂಗೀತದ ಜೊತೆಗೆ ಹವ್ಯಾಸಿ ಕಲಾವಿದರಿಗೂ ಅವಕಾಶ ನೀಡುತ್ತಿದ್ದ ಇದು 1948ರ ಹೊತ್ತಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲತೊಡಗಿ 1955ರಲ್ಲಿ ಬಾಗಿಲು ಮುಚ್ಚಿತು. ಕನ್ನಡದಲ್ಲಿ ಮಹಾತ್ಮಾ ಸಂಸ್ಥೆ ಬಿಟ್ಟರೆ ಇನ್ಯಾವ ಚಿತ್ರ ನಿರ್ಮಾಪಕರೂ ಈ ಲೇಬಲ್‌ನಲ್ಲಿ ರೆಕಾರ್ಡು ಬಿಡುಗಡೆ ಮಾಡಿದಂತಿಲ್ಲ.

ಹಳೆ ಗ್ರಾಮೊಫೋನ್ ರೆಕಾರ್ಡು ಸಂಗ್ರಹದ ಹವ್ಯಾಸ ಇರುವ ಎಷ್ಟೋ ಮಂದಿ ಇದ್ದಾರೆ. ಬೆಂಕಿ ಪೆಟ್ಟಿಗೆ ಸಂಗ್ರಹದಿಂದ ಕಡ್ಡಿ ಗೀರಲಾಗದು, ಸ್ಟಾಂಪ್ ಸಂಗ್ರಹದಿಂದ ಅಂಚೆಯಲ್ಲಿ ಕಾಗದ ಕಳಿಸಲಾಗದು, ನಾಣ್ಯ ಸಂಗ್ರಹದಿಂದ ಏನನ್ನೂ ಕೊಳ್ಳಲಾಗದು. ಆದರೆ ಗ್ರಾಮೊಫೋನ್ ರೆಕಾರ್ಡುಗಳನ್ನು ಸುಮ್ಮನೆ ಕಪಾಟಿನಲ್ಲಿ ಇಟ್ಟುಕೊಳ್ಳುವ ಬದಲು ಈ ರೀತಿ ಡಿಜಿಟೈಸ್ ಮಾಡಿ ಈ ಮಹನೀಯರಂತೆ ಪ್ರಪಂಚಕ್ಕೆ ಹಂಚಬಹುದು. ಎಲ್ಲ ಸಂಗ್ರಾಹಕರು ಬ್ರೀಟಿಷ್ ಲೈಬ್ರರಿ ಜೊತೆ ಕೈ ಜೋಡಿಸಿ ಅಥವಾ ತಮ್ಮದೇ ರೀತಿಯಲ್ಲಿ ಈ ದಿಸೆಯಲ್ಲಿ ಮುಂದುವರಿಯಲಿ ಎಂದು ಹಾರೈಸೋಣ.
ಬ್ರಿಟಿಷ್ ಲೈಬ್ರರಿಯ ಮಹಾನ್ ಸಮುದ್ರವನ್ನು ಜಾಲಾಡಬಯಸುವವರು ಇಲ್ಲಿ ಕ್ಲಿಕ್ಕಿಸಬಹುದು. ನಾನು ಅಲ್ಲಿ ಮುಳುಗು ಹಾಕಿ ತಂದಿರುವ ಕೆಲವು ಅನರ್ಘ್ಯ ಮುತ್ತು ರತ್ನಗಳನ್ನು ಸಾಧ್ಯವಾದಷ್ಟು ಸ್ವಚ್ಛಗೊಳಿಸಿ ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದೇನೆ. ಇವುಗಳೆಲ್ಲ ಡಿ.ಶಂಕರ್ ಸಿಂಗ್ ಅವರ ಚಿತ್ರಗಳ ಹಾಡುಗಳಾಗಿದ್ದು ಹೆಚ್ಚಿನವು ಅಕ್ಕನ ಅಂಗಿ ತೊಟ್ಟ ತಂಗಿಯಂತೆ ಜನಪ್ರಿಯ ಹಿಂದಿ ಟ್ಯೂನ್ ಹೊಂದಿವೆ. ಅಂದಿನ ರೆಕಾರ್ಡುಗಳಲ್ಲಿ ಚಿತ್ರದ ಹೆಸರು ಮತ್ತು ಸಂಗೀತ ನಿರ್ದೇಶಕರ ಹೆಸರುಗಳು ಮಾತ್ರ ಅಂಕಿತವಾಗುತ್ತಿದ್ದು ಗಾಯಕರು ಮತ್ತು ಗೀತ ರಚನೆಕಾರ ಕುರಿತ ಮಾಹಿತಿ ಇರುತ್ತಿರಲಿಲ್ಲ. ಮಹಾತ್ಮಾ ಫಿಲಂಸ್ ಸಂಸ್ಥೆಯ ಆಗಿನ ಬಹುತೇಕ ಚಿತ್ರಗಳಿಗೆ ಹುಣಸೂರ್ ಕೃಷ್ಣಮೂರ್ತಿ ಅವರ ಸಾಹಿತ್ಯ ಮತ್ತು ಹಾಡುಗಳಿರುತ್ತಿದ್ದುದು. ಆಗ ಅವರು ಕೆ.ಎಂ. ಹುಣಸೂರ್ ಆಗಿದ್ದರು. ಪಿ.ಶ್ಯಾಮಣ್ಣ ಎಂದೇ ಗುರುತಿಸಲ್ಪಡುತ್ತಿದ್ದ ಪಲವಂಗುಡಿ ಶ್ಯಾಮ ಐಯರ್ ಅವರ ಸಂಗೀತವಿರುತ್ತಿತ್ತು. ಟಿ. ಕಲ್ಯಾಣಂ ಎಂಬವರು arranger ರೂಪದಲ್ಲಿ ಅವರಿಗೆ ಸಹಾಯಕರಾಗಿರುತ್ತಿದ್ದರು.
ಚಂದಮಾಮದ ಪ್ರತಿ ಸಂಚಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗನ್ಮೋಹಿನಿ ಹಾಡುಗಳ ಜಾಹೀರಾತು.


ಜಗನ್ಮೋಹಿನಿಯ 12 ಹಾಡುಗಳ ಪೈಕಿ 4 ಮಾತ್ರ ಆ ಲೈಬ್ರರಿಯಲ್ಲಿವೆ. ನನ್ನ ಮುಖ್ಯ ಗುರಿಯಾಗಿದ್ದ ಆಯೇಗಾ ಆನೇವಾಲಾ ಧಾಟಿಯ ಎಂದೋ ಎಂದೊ, ಓ ಮುಝೆ ಕಿಸೀಸೆ ಪ್ಯಾರ್ ಹೋಗಯಾ ಧಾಟಿಯ ವಸಂತ ಮಾಸ ಓಡಿ ಬಂದಿದೆ, ಓ ದಿಲ್‌ವಾಲೋ ದಿಲ್ ಕಾ ಲಗಾನಾ ಧಾಟಿಯ ಕರೆಯುವೆ ನಿನ್ನ ಇತ್ಯಾದಿ ಇಲ್ಲ.
ನೀ ಎನ್ನ ಜೀವನ
ಬಹುಕಾಲದಿಂದ ಚಂದಮಾಮದ ಜಾಹೀರಾತಿನಲ್ಲಿ ಈ ಸಾಲುಗಳನ್ನು ನೋಡುತ್ತಿದ್ದರೂ ಈ ಯುಗಳ ಗೀತೆ ದಿಲ್ಲಗಿ ಚಿತ್ರದ ತೂ ಮೇರಾ ಚಾಂದ್ ಮೈ ತೆರೀ ಚಾಂದನೀ ಧಾಟಿಯನ್ನು ಹೊಂದಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಪುರುಷ ಧ್ವನಿ ಯಾರದ್ದೆಂದು ಗೊತ್ತಿಲ್ಲ. ಸ್ತ್ರೀ ಕಂಠ ನೀಲಮ್ಮ ಕಡಾಂಬಿ ಅಥವಾ ಸರೋಜಾ ಅವರದ್ದಿರಬಹುದೆನ್ನಿಸುತ್ತದೆ.
ಮನದೊಳತಿ ಚಿಂತೆ
ಇದೊಂದು ವಿಷಾದ ಭಾವದ ಗೀತೆಯಾಗಿದ್ದು ಹೆಚ್ಚಿನ ಭಾಗ ಆಲಾಪ ಶೈಲಿಯಲ್ಲಿದ್ದು ಬರ್‌ಸಾತ್ ಚಿತ್ರದ ಅಬ್ ಮೇರಾ ಕೌನ್ ಸಹಾರಾ ಧಾಟಿಯನ್ನಾಧರಿಸಿದೆ.
ಎಂದೋ ಎಂದೋ
ಈ ಹಾಡಿಲ್ಲದೆ ಜಗನ್ಮೋಹಿನಿಯ ನೆನಪೇ ಅಪೂರ್ಣ. ಮೂಲ ಹಾಡು ಲಭ್ಯವಿಲ್ಲದ್ದರಿಂದ ನಾನು ಮರುಸೃಷ್ಟಿಗೊಳಿಸಿದ ವರ್ಷನ್ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಇದರಲ್ಲಿ ಕೇಳುತ್ತಿರುವುದು ನನ್ನ ಮಗಳು ಪಲ್ಲವಿಯ ಧ್ವನಿ.
ಜಗನ್ಮೋಹಿನಿ ಚಿತ್ರದ ರೀಲುಗಳು ನಾಶವಾಗಿ ಹೋಗಿವೆಯಂತೆ. ಹೀಗಾಗಿ ಆ ಚಿತ್ರ ಎಂದೂ ನೋಡಲು ಸಿಗಲಾರದು. ಇಲ್ಲಿರುವ ಅದರ ಪದ್ಯಾವಳಿಯಲ್ಲಿ ಹಾಡುಗಳ ಸಾಹಿತ್ಯ ಮತ್ತು ಪಾರಿಭಾಷಿಕ ವರ್ಗದ ವಿವರಗಳು ಲಭ್ಯವಿವೆ. ನೋಡಲು ಒಮ್ಮೆ ಕ್ಲಿಕ್ಕಿಸಿ scroll ಮಾಡಿ.
ಜಗನ್ಮೋಹಿನಿಯ ಒಂದು ಜಾಹೀರಾತು.

ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ವಿಮರ್ಶೆ ಆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಒದಗಿಸುತ್ತದೆ.



ಅನೇಕ ಕೇಂದ್ರಗಳಲ್ಲಿ 25 ವಾರ ಪ್ರದರ್ಶನ ಕಂಡಿದ್ದ ಜಗನ್ಮೋಹಿನಿ ಚಿತ್ರ ಪ್ರೇಕ್ಷಕರ ಮೇಲೆ ಎಷ್ಟೊಂದು ಪರಿಣಾಮ ಬೀರಿತ್ತೆಂದರೆ ದಾವಣಗೆರೆಯ ಓರ್ವ ವ್ಯಕ್ತಿ ಈ ಚಿತ್ರವನ್ನು ಪ್ರತೀ ದಿನ ನೋಡಿ ಮತಿಭ್ರಮಣೆಗೊಂಡಿದ್ದನಂತೆ. ಈ ಚಿತ್ರ ನೋಡಲು ಹಣ ಹೊಂದಿಸುವುದಕ್ಕಾಗಿ ಹಸು, ಎಮ್ಮೆ, ಕೋಣ, ಕುರಿ ಮಾರಿದವರೂ ಇದ್ದರಂತೆ. ಈ ಚಿತ್ರವನ್ನು ಪ್ರದರ್ಶಿಸದಂತೆ ಕೋರ್ಟಿನಿಂದ ತಡೆಯಾಜ್ಞೆಯೂ ಬಂದಿತ್ತಂತೆ.
ಅಬ್ಬಾ, ಬಹುಶಃ ಭಗಿರಥ ಪ್ರಯತ್ನ ಅಂದರೆ ಇದು. ನಿಮ್ಮ ಸಂತೋಷ ಮತ್ತು ಅದನ್ನು ಹಂಚುವ ರೀತಿ ಯಾವಾಗಲು ಮುದ ನೀಡುವ ಸಂಗತಿ. ವೆಂಕಟಮೂರ್ತಿ ಮತ್ತು ಸನ್ನಿ ಮಾಥ್ಯೂ ಅಂಥ ಅನಾಮಿಕ ಮಹಾನುಭಾವರು ಇರುವುದು ನಮ್ಮ ಸೌಭಾಗ್ಯವೇ ಸರಿ. ರಾಜನ್-ನಾಗೇಂದ್ರ ಜೋಡಿಯ ರಾಜನ್ ರವರು ಇನ್ನೂ ನಮ್ಮ ನಡುವೆ ಇರುವುದರಿಂದ ಅವರ ಮೂಲಕ ಇನ್ನಷ್ಟೂ ಪೂರಕ ಮಾಹಿತಿ ಪಡೆಯಬಹುದೋ ಏನೋ.
ReplyDeleteಅನರ್ಘ್ಯ ರತ್ನಗಳು..
ReplyDeleteಜಗನ್ಮೋಹಿನಿ - ಗಾಯನ: ಎಂ.ಜಿ.ಸರೋಜ, ನೀಲಮ್ಮ ಕಡಾಂಬಿ.
ಶ್ರೀ ಶ್ರೀನಿವಾಸ ಕಲ್ಯಾಣ - ಗಾಯನ: ಅಮೀರ್ ಬಾಯಿ ಕರ್ನಾಟಕಿ, ಸರೋಜಾ, ರಾಮಚಂದ್ರ
ದಳ್ಳಾಳಿ - ಗಾಯನ: ಎ.ಎಂ.ರಾಜ, ಹುಣಸೂರು, ಸರೋಜಾ, ಅಮೀರ್ ಬಾಯಿ ಕರ್ನಾಟಕಿ
ಗಂಧರ್ವ ಕನ್ಯೆ - ಗಾಯನ: ಪಿ.ಸುಶೀಲ, ರಾಜಾ, ಗಾನ ಸರಸ್ವತಿ, ನಾಗೇಂದ್ರ
ಚಂಚಲಕುಮಾರಿ - ಗಾಯನ: ರಾಜಾ, ಪಿ.ಲೀಲಾ, ಸಿ.ಎಸ್.ಸರೋಜಿನಿ
ಸೌಭಾಗ್ಯ ಲಕ್ಷ್ಮಿ - ಗಾಯನ: ದೇವಿಕಾ, ನಾಗೇಂದ್ರ, ಪಿ. ಲೀಲಾ.
ಶ್ರೀನಾಥ್ (FB)
ಹಳೆ ಹಾಡುಗಳನ್ನು ಹುಡುಕಿ, ದಾಖಲಿಸಿ ವಿವರಣೆಯೊಂದಿಗೆ ನಮಗೆ ನೀಡುವ ನಿಮ್ಮ ಹುಮ್ಮಸ್ಸಿಗೆ, ಪರಿಶ್ರಮಕ್ಕೆ ನನ್ನ ಒಂದು ಸಲಾಂ....ಅತ್ಯಂತ ಪ್ರಶಂಸಾರ್ಹ ಕಾರ್ಯ... .
ReplyDeleteVinod Phadke (FB)
I liked the song "ಇಂದಿನ ದಿನ ಮನ". Appreciate your effort in preserving and sharing the same.
ReplyDelete