ಬೇಕೆನಿಸಿದಾಗ ಹೋಟಲಿಗೆ ಹೋಗಿ ತಿನ್ನುವ ಮಸಾಲೆದೋಸೆಗೂ ದೀಪಾವಳಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದೆನ್ನಿಸುತ್ತಿದೆಯೇ? ಆದರೆ ನಮ್ಮ ಮನೆಯ ಮಟ್ಟಿಗೆ ಇವೆರಡಕ್ಕೆ ಅವಿನಾಭಾವ ಸಂಬಂಧವಿದೆ. ಹಾಗೆಂದು ಇದು ಬಲು ಹಿಂದಿನಿಂದ ನಡೆದು ಬಂದದ್ದೇನೂ ಅಲ್ಲ.
ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದಿನ ನಿತ್ಯ ಬೆಳಗ್ಗೆ ಗಂಜಿ ಉಣ್ಣುವ ದಿನಚರಿಯ ಮನೆಗಳಲ್ಲಿ ಎಂದಾದರೊಮ್ಮೆ ದೋಸೆಯಂಥ ತಿಂಡಿ ಇರುತ್ತಿರಲಿಲ್ಲವೆಂದೇನೂ ಅಲ್ಲ. ಆದರೆ ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು. ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ ಬೆರೆಸಲಾಗುತ್ತಿತ್ತು. ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ. ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ. ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ. ಆಗ ನಮ್ಮಲ್ಲಿ ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ. ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು. ಗೋಪೂಜೆಯ ದಿನ ದನಕರುಗಳಿಗೂ ಎರಡೆರಡು ದೋಸೆ ತಿನ್ನುವ ಭಾಗ್ಯ. ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ ಸಿಗುತ್ತಿತ್ತು.
ಒಂದು ಗ್ರೂಪ್ ಫೊಟೋದ ಸುತ್ತ ಲೇಖನದ ಮೂಲಕ ಈಗಾಗಲೇ ಪರಿಚಿತರಾದ ನಮ್ಮ ಕುಟುಂಬದ ಹೊಸತನದ ಹರಿಕಾರ ಗಣಪತಿ ಅಣ್ಣನಿಗೆ ಈ ಮೂರು ದಿನಗಳ ದೋಸೆ ಹಬ್ಬದಲ್ಲಿ ಏನಾದರೂ ಬದಲಾವಣೆ ಬೇಕೆನ್ನಿಸಿತು. ಪ್ರತಿ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಅಲ್ಲಿಯ ಮಿತ್ರ ಸಮಾಜ ಹೋಟೆಲಿನಲ್ಲಿ ನಾವು ಮಸಾಲೆ ದೋಸೆ ತಿನ್ನುವುದಿತ್ತು. ಮೊದಲೇ ಚಿಕ್ಕ ಹೋಟೆಲು ಅದು. ಜಾತ್ರೆಯ ಜನಸಂದಣಿ ಬೇರೆ. ಹೀಗಾಗಿ ಸಪ್ಲಯರ್ ನಮ್ಮ ಟೇಬಲ್ ಬಳಿಗೆ ಬಂದು ಆರ್ಡರ್ ಪಡೆದು ಮಸಾಲೆ ದೋಸೆ ನಮ್ಮ ಮುಂದೆ ಪ್ರತ್ಯಕ್ಷವಾಗಲು ಬಹಳ ತಡವಾಗುತ್ತಿತ್ತು. ಕೆಲವೊಮ್ಮೆ ಆತ ನಮ್ಮನ್ನು ಮರೆತೇ ಬಿಟ್ಟನೇನೋ ಎಂದೂ ಅನ್ನಿಸುವುದಿತ್ತು. ಕೊನೆಗೂ ಆತ ದೋಸೆಗಳ ಪ್ಲೇಟುಗಳೊಡನೆ ನಮ್ಮತ್ತ ಬಂದಾಗ ನಿಧಿ ದೊರಕಿದಷ್ಟು ಸಂತೋಷ. ಇತರ ದಿನಗಳಲ್ಲೂ ಮನೆಗೆ ಬೇಕಾದ ದಿನಸಿ ಇತ್ಯಾದಿ ತರಲು ಬೆಳಗ್ಗಿನ ಹೊತ್ತು ಉಜಿರೆ, ಬೆಳ್ತಂಗಡಿ ಇತ್ಯಾದಿ ಕಡೆ ಹೋದಾಗ ಕೆಲವೊಮ್ಮೆ ಹೋಟೆಲಿಗೆ ಭೇಟಿ ಕೊಡುತ್ತಿದ್ದರೂ ಅಲ್ಲಿ ಗೋಳಿಬಜೆ, ಅವಲಕ್ಕಿ-ಕಡ್ಲೆಯಂಥ ತಿಂಡಿಗಳಲ್ಲೇ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತಿತ್ತು ಏಕೆಂದರೆ ಆಗ ಹೋಟೆಲುಗಳಲ್ಲಿ ಮಸಾಲೆ, ತುಪ್ಪ, ಸಾದಾ ದೋಸೆಗಳು ಸಂಜೆ ನಾಲ್ಕರ ನಂತರವಷ್ಟೇ ಇರುತ್ತಿದ್ದುದು. ನಮ್ಮಲ್ಲಿ ಅಪರಾಹ್ನದ ನಂತರ ಪೇಟೆಗೆ ಹೋಗುವ ಪದ್ಧತಿಯೇ ಇರಲಿಲ್ಲ. ಹೀಗಾಗಿ ಜಾತ್ರೆಯಂದು ಹೋಟೆಲಿನಲ್ಲಿ ಅಷ್ಟು ಹೊತ್ತು ಕಾದು ವರ್ಷಕ್ಕೊಮ್ಮೆ ತಿನ್ನುವ ಮಸಾಲೆ ದೋಸೆಯನ್ನು ಮನೆಯಲ್ಲೇ ಏಕೆ ಮಾಡಬಾರದೆಂಬ ಯೋಚನೆ ಅಣ್ಣನಿಗೆ ಮೂಡಿತು. ಇದನ್ನು ಕಾರ್ಯರೂಪಕ್ಕೆ ತರಲು ದೀಪಾವಳಿಯೇ ಸೂಕ್ತ ಎಂದೂ ಅವರಿಗೆ ಅನ್ನಿಸಿತು. ಮನಸ್ಸಿಗೆ ಅನ್ನಿಸಿದ್ದನ್ನು ಕಾರ್ಯಗತಗೊಳಿಸಲು ಮೀನ ಮೇಷ ಎಣಿಸುವವರಲ್ಲ ಅವರು. ಒಂದು ವರ್ಷ ದೀಪಾವಳಿಯ ಹಿಂದಿನ ದಿನ ಪೇಟೆಗೆ ಹೋಗಿ ಒಂದು ಚೀಲ ಬಟಾಟೆ ತಂದೇ ಬಿಟ್ಟರು. ತೂಗಾಡಿಸಿದ ನೀರುಳ್ಳಿಯ ಗೊಂಚಲು ಮನೆಯಲ್ಲಿ ಯಾವಾಗಲೂ ಇರುತ್ತಿತ್ತು. ದೀಪಾವಳಿಯಂದು ಬೆಳಗ್ಗೆ ತಾವೇ ಮುತುವರ್ಜಿ ವಹಿಸಿ ಬಟಾಟೆ ಬೇಯಿಸಿ ಸುಲಿದು, ಈರುಳ್ಳಿ ಹೆಚ್ಚಿ ಪಲ್ಯ ಮಾಡಿದರು. ಹಬ್ಬದ ದಿನ ನೀರುಳ್ಳಿಯ ಬಳಕೆಗೆ ನಮ್ಮ ತಾಯಿ ಮತ್ತು ಹಿರಿಯಣ್ಣನಿಂದ ಆಕ್ಷೇಪ ವ್ಯಕ್ತವಾದರೂ ಬೇರೆ ಒಲೆ, ಬೇರೆ ಕಾವಲಿಯನ್ನು ಬಳಸಿ ಮಸಾಲೆ ದೋಸೆ ತಯಾರಿಸಿಯೇ ಬಿಟ್ಟರು. ನಾವೆಲ್ಲ ಮತ್ತೆ ಮತ್ತೆ ಕೇಳಿ ಹಾಕಿಸಿಕೊಂಡು ತಿಂದೆವು. ಅಂದಿನಿಂದ ಸಾಂಪ್ರದಾಯಿಕ ಹಳದಿ ದೋಸೆ ಮತ್ತು ಬಾಳೆ ಹಣ್ಣಿನ ಸೀಕರಣೆಗೆ ಸಮಾನಾಂತರವಾಗಿ ಮಸಾಲೆ ದೋಸೆಯೂ ನಮ್ಮ ಮನೆ ದೀಪಾವಳಿಯ ಅವಿಭಾಜ್ಯ ಅಂಗವಾಯಿತು.
ಉದ್ಯೋಗ ನಿಮಿತ್ತ ನಮ್ಮ ಕುಟುಂಬ ಸದಸ್ಯರೆಲ್ಲ ಈಗ ಬೇರೆ ಬೇರೆ ಕಡೆ ನೆಲೆಸಿದ್ದರೂ ದೀಪಾವಳಿಯ ಸಂದರ್ಭದಲ್ಲಿ ಒಂದು ದಿನವಾದರೂ ಮನೆಯಲ್ಲೇ ಮಸಾಲೆ ದೋಸೆ ತಯಾರಿಸಿ ಈಗಿಲ್ಲದ ಅಣ್ಣನನ್ನು ನೆನಪಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ನಮ್ಮೂರ ಪ್ರಸಿದ್ಧ ಕವಿ ರಾಮಚಂದ್ರ ಮಾಸ್ತರರ ಹಳೆಯ ಚುಟುಕವೊಂದು ನೆನಪಾಗುತ್ತಿದೆ.
ನಮ್ಮ ಅಣ್ಣ ಬಂದ
ಆಲೂಗಡ್ಡೆ ತಂದ
ಉಳ್ಳಿಗಡ್ಡೆಯೊಡನೆ ಬೆರೆಸಿ
ಪಲ್ಯ ಮಾಡಿ ತಿಂದ
ಆದರೆ ಇಲ್ಲಿ ಕೊನೆಯೆ ಪದ ತಿಂದ ಎಂದಿದ್ದುದನ್ನು ತಿನ್ನಿಸಿದ ಎಂದು ಬದಲಾಯಿಸಬೇಕಾಗುತ್ತದೆ.
ಈ ಮಸಾಲೆದೋಸೆ ಪುರಾಣದ ಕೊನೆಯಲ್ಲೊಂದು ಪ್ರಶ್ನೆ. ಬಟಾಟೆ ನೀರುಳ್ಳಿ ಪಲ್ಯ ಪೂರಿಯೊಡನೆ ಸೇರಿದರೆ ಪೂರಿ ಭಾಜಿ, ದೋಸೆಯೊಡನೆ ಸೇರಿದರೆ ಮಸಾಲೆ ದೋಸೆ ಹೇಗಾಗುತ್ತದೆ? ಇದಕ್ಕೆ ಉತ್ತರ ತಿಳಿದೂ ಹೇಳದಿದ್ದರೆ ನೀವು ತಿನ್ನುವ ಗರಿ ಗರಿ ಮಸಾಲೆದೋಸೆ ಬಾಯಿ ತಲುಪುವ ಮುನ್ನವೇ ಪುಡಿ ಪುಡಿಯಾಗಿ ಕೈಯಿಂದ ಉದುರೀತು!
ಹ ಹ ಹ ನಿಮ್ಮ ಮಸಾಲದೋಸೆ ಕಥೆ ತುಂಬ ಸೊಗಸಾಗಿದೆ. ಇಂತಹ ನೆನಪುಗಳನ್ನು ಓದಿ ಮೆಲುಕು ಹಾಕುವುದೆಂದರೆ ನನಗೆ ತುಂಬ ಇಷ್ಟ. ಅದು ಬೇರೆಯವರದ್ದಾದರೂ ತೊಂದರೆಯಿಲ್ಲ. ಆಗಿನ ಕಾಲದಲ್ಲಿ ನಮ್ಮ ಮನೆಯಲೆಲ್ಲ ಈರುಳ್ಳಿ ಅಂದರೆ ಅದೇನೋ ಬಾರಿ ಅಸ್ಪಶ್ಯ. ನಾನು ಮಸಾಲ ದೋಸೆಯನ್ನು ಮೊದಲ ಭಾರಿ ತಿಂದಿದ್ದು ಹೋಟೆಲ್ ನಲ್ಲಿ ಅದೂ ಕದ್ದು ಮುಚ್ಚಿ ಏಕೆಂದರೆ ಬ್ರಾಹ್ಮಣರು ಹೋಟೆಲ್ ನಲ್ಲಿ ತಿನ್ನ ಬಾರದು ಎನ್ನುವ ಅಲಿಖಿತ ನಿಯಮ ಕಟ್ಟು ನಿಟ್ಟಾಗಿ ಜಾರಿಯಲ್ಲಿತ್ತು. ಸೋ, ಆ ಘುಟನೆಯ ಬಗೆಗೆ ಬರೆದರೆ ಒಂದು ಪ್ರಭಂದವೇ ಆದೀತು!
ReplyDeleteಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
DeleteAs usual Sir. Very nice recollection with your usual fluent flow.
ReplyDeleteಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ.
Delete