ಇದು ಚಂದಮಾಮದಲ್ಲಿರುತ್ತಿದ್ದ ಚಿತ್ರಾ ಅಥವಾ ಶಂಕರ್ ಅವರ ಚಿತ್ತಾಕರ್ಷಕ ಚಿತ್ರಗಳ ಬಗ್ಗೆ ಅಲ್ಲ. ನಾನು ಹೇಳುತ್ತಿರುವುದು ಚೊಕ್ಕತನದ ಬಗ್ಗೆ ಹೆಸರಾದ ಚಂದಮಾಮದ ರೂವಾರಿಗಳಾದ ನಾಗಿರೆಡ್ಡಿ ಮತ್ತು ಚಕ್ರಪಾಣಿ ಅವರು ಅಷ್ಟೇ ಚೊಕ್ಕವಾಗಿ ನಿರ್ಮಿಸಿ 1957ರಲ್ಲಿ ತೆರೆಗರ್ಪಿಸಿದ ಮಾಯಾಬಜಾರ್ ಚಿತ್ರದ ಬಗ್ಗೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕ ಕಾಲಕ್ಕೆ ತಯಾರಾಗಿದ್ದ ಇದು ತೆಲುಗಿನಿಂದ ಕನ್ನಡಕ್ಕೆ ಡಬ್ ಆಗಿತ್ತು. ತೆಲುಗು ಮತ್ತು ಕನ್ನಡ ಪದಗಳನ್ನು ಉಚ್ಚರಿಸುವಾಗಿನ ತುಟಿಚಲನೆ ಬಹುತೇಕ ಒಂದನ್ನೊಂದು ಹೋಲುವುದು ಇದಕ್ಕೆ ಕಾರಣವಾಗಿರಬಹುದು. ತೆಲುಗು ಅವತರಣಿಕೆ ಮಾರ್ಚ್ ತಿಂಗಳಲ್ಲಿ, ತಮಿಳು ಎಪ್ರಿಲ್ ಹಾಗೂ ಕನ್ನಡ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿದ್ದವು. ತಾಂತ್ರಿಕತೆಯಲ್ಲಿ ಸಮಯಕ್ಕಿಂತ ಬಹಳ ಮುಂದಿದ್ದ ಮಾಯಾಬಜಾರ್ ಎಲ್ಲ ಭಾಷೆಗಳಲ್ಲೂ ಜಯಭೇರಿ ಬಾರಿಸಿತ್ತು. ಮುಂದೆ ಇವರೇ ನಿರ್ಮಿಸಿದ ಜಗದೇಕವೀರನ ಕಥೆ, ಕೃಷ್ಣಾರ್ಜುನ ಯುದ್ಧ ಕೂಡ ಇದೇ ರೀತಿ ಕನ್ನಡಕ್ಕೆ ಡಬ್ ಆಗಿದ್ದವು. ಆದರೆ ಡಬ್ಬಿಂಗಿಗೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದ ಕಾರಣ ಆ ಮೇಲಿನ ಸತ್ಯ ಹರಿಶ್ಚಂದ್ರ ಮಾತ್ರ ಈ ರೀತಿ ಡಬ್ ಆಗದೆ ಕನ್ನಡ ಮತ್ತು ತೆಲುಗಿನಲ್ಲಿ ಬೇರೆ ಬೇರೆಯಾಗಿ ತಯಾರಾಗಿ ಡಾ|| ರಾಜ್ ಅಭಿನಯದ ಕನ್ನಡ ಅವತರಣಿಕೆ ಇನ್ನೊಂದು ಮೇರು ಕೃತಿಯಾಗಿ ಮೂಡಿ ಬಂದದ್ದು ಎಲ್ಲರಿಗೂ ತಿಳಿದಿರುವ ವಿಷಯ.
ಮಾಯಾಬಜಾರ್ ಚಿತ್ರಕ್ಕೆ ವರ್ಧಿಸುವೆ ಮಹಾತಾಯಿ ವರ್ಧಿಸೆಮ್ಮಮ್ಮ,ನೋಟವು ಕಲೆತಿಹ ಶುಭವೇಳೆ, ಸಾಗಲಿ ತೇಲಿ ತರಂಗದೊಳು ಮತ್ತು ನಿನಗೋಸುಗವೇ ಜೀವಿಸಿರುವೆ ನಾ ಹಾಡುಗಳನ್ನು ಸಂಯೋಜನೆ ಮಾಡಿದ ಎಸ್. ರಾಜೇಶ್ವರ ರಾವ್ ಅವರು ಆ ಮೇಲೆ ಏಕೋ ಹಿಂದೆ ಸರಿದರೆಂದು ಕೆಲವರು ಹೇಳುತ್ತಾರೆ. ನಂತರ ಘಂಟಸಾಲ(ವೆಂಕಟೇಶ್ವರ ರಾವ್) ಸಂಗೀತದ ಹೊಣೆ ಹೊತ್ತರು. ಎಲ್ಲರಿಗೂ ಗೊತ್ತಿರುವ ವಿವಾಹ ಭೋಜನವಿದು ಮತ್ತು ಆಹಾ ನನ್ ಮದ್ವೆಯಂತೆ ಸೇರಿದಂತೆ ಈ ಚಿತ್ರದ ಹಾಡುಗಳೆಲ್ಲವೂ ಅತಿ ಮಧುರ. ಈ ಎಲ್ಲ ಹಾಡುಗಳ ವಾದ್ಯವೃಂದ ಸಂಯೋಜಕರು ವಿಜಯಾ ಸ್ಟುಡಿಯೋದ ಕಾಯಂ arranger ಆಗಿದ್ದ ಎ. ಕೃಷ್ಣಮೂರ್ತಿ. ಮುಂದೆ ಇವರು ವಿಜಯಾ ಕೃಷ್ಣಮೂರ್ತಿ ಎಂಬ ಹೆಸರಿನಲ್ಲಿ ಜೇನುಗೂಡು, ಮುರಿಯದ ಮನೆ, ವಾತ್ಸಲ್ಯ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದರು.
ಚಿತ್ರವೊಂದು ಬಿಡುಗಡೆ ಆಗುವಾಗ ಪತ್ರಿಕೆಗಳಲ್ಲಿ ಜಾಹೀರಾತು ಇರುವುದು ಸಾಮಾನ್ಯ. ಆದರೆ ಮಾಯಾಬಜಾರ್ ಚಿತ್ರದ ಜಾಹೀರಾತಿನೊಡನೆ ಇಡೀ ಕಥಾಹಂದರವೇ ಚಂದಮಾಮದ 1957 ಎಪ್ರಿಲ್ ಸಂಚಿಕೆಯ 7 ಪುಟಗಳಲ್ಲಿವಿಸ್ತಾರವಾಗಿ ಪ್ರಕಟವಾಗಿತ್ತು! ಪತ್ರಿಕೆಯೂ ಚಿತ್ರ ನಿರ್ಮಾಪರದ್ದೇ ಆಗಿರುವುದು ಇದಕ್ಕೆ ಕಾರಣವಾಗಿರಬಹುದು.
ಚಂದಮಾಮದ ಪ್ರತಿ ಪುಟದಲ್ಲೂ ಆ ಪುಟದಲ್ಲಿರುವ ಕಥಾಭಾಗಕ್ಕೆ ಸಂಬಂಧಿಸಿದ ಒಂದು ಚಿತ್ರವಿರುತ್ತಿತ್ತಲ್ಲವೇ. ಅಂತಹುದೇ ಅನುಭವಕ್ಕಾಗಿ ಮಾಯಾ ಬಜಾರ್ ಕತೆಯ 7 ಪುಟಗಳ ಕೆಳಗೆ ಆ ಪುಟಕ್ಕೆ ಸಂಬಂಧಿಸಿದಂತೆ ಒಂದೊಂದು ಕಿರು ವಿಡಿಯೋ ಕಿಂಡಿ ಅಳವಡಿಸಿದ್ದೇನೆ. ಕತೆ ಓದುತ್ತಾ ದೃಶ್ಯರೂಪದಲ್ಲಿ ನೋಡಿ ಆನಂದಿಸಿ. ತೆಲುಗು ಕಲರ್ ವೀಡಿಯೊಗೆ ಕನ್ನಡ ಸಂಭಾಷಣೆ ಸಂಯೋಜಿಸಿದ ದೃಶ್ಯಗಳವು.
ಇತ್ತೀಚೆಗೆ ವರ್ಣಲೇಪನದೊಂದಿಗೆ ತೆಲುಗಿನಲ್ಲಿ ಈ ಚಿತ್ರ ಮರುಬಿಡುಗಡೆಗೊಂಡಿತ್ತು. ಆದರೆ ಹೀಗೆ ಹಳೆಯ ಚಿತ್ರಗಳು ಹೊಸ ಅವತಾರದಲ್ಲಿ ಬಂದಾಗ ಬಣ್ಣಗಳು ಕಣ್ಣಿಗೆ ಹಿತವೆನ್ನಿಸಿದರೂ improvisation ಹೆಸರಿನಲ್ಲಿ ಮೂಲ ಸಂಗೀತವನ್ನು ಹಾಳುಗೆಡವುತ್ತಾರೆ ಎಂದು ಅನೇಕರ ಆರೋಪ ಇದೆ. ಕನ್ನಡದ ಸತ್ಯ ಹರಿಶ್ಚಂದ್ರ ಬಣ್ಣದಲ್ಲಿ ಬಂದಾಗ ನನಗೂ ಹಾಗೆಯೇ ಅನ್ನಿಸಿತ್ತು. ಹೀಗಾಗಿ ತೆಲುಗಿನ ಬಣ್ಣಕ್ಕೆ ಕನ್ನಡದ original ಹಾಡುಗಳನ್ನು ಕಸಿ ಕಟ್ಟಿ ನಾನು ತಯಾರಿಸಿದ ಇನ್ನಷ್ಟು ವಿಡಿಯೋಗಳು ಇಲ್ಲಿವೆ.
ನೀನೋ ನನ್ನನು ನೆನೆಸುತಿಹೆ
ಈ ಹಾಡಿನಲ್ಲಿ ಆ ಕಾಲದ ಪ್ರಿಯದರ್ಶಿನಿ ಎಂಬ lap top ಹಾಗೂ video chat ನೋಡಬಹುದು. ಹಾಡಿನ ಕೊನೆ ಭಾಗದಲ್ಲಿ ಶಶಿರೇಖೆಯು ಈಗಿನವರಂತೆಯೇ logout ಆಗಿ ತಕ್ಷಣ ಮತ್ತೆ login ಆಗುವುದನ್ನು ಗಮನಿಸಬಹುದು! ಘಂಟಸಾಲ ಮತ್ತು ಪಿ.ಲೀಲ ಧ್ವನಿಯಲ್ಲಿರುವ ಈ ಹಾಡು ಅಭೇರಿ ರಾಗದಲ್ಲಿದೆ.
ನೋಟವು ಕಲೆತಿಹ ಶುಭ ವೇಳೆ
ವೃಂದಾವನಿ ಸಾರಂಗ್ ರಾಗಾಧಾರಿತ ಇನ್ನೊಂದು ಹಾಡು. ಇದರ ಸ್ವರ ಸಂಯೋಜನೆ ಎಸ್.ರಾಜೇಶ್ವರ ರಾವ್ ಅವರದ್ದಂತೆ. ಧ್ವನಿಗಳು ಘಂಟಸಾಲ ಮತ್ತು ಪಿ.ಲೀಲ.
ಆಹಾ ನನ್ ಮದ್ವೆಯಂತೆ
ಇದು ಘಟೋತ್ಗಜನು ಶಶಿರೇಖೆಯ ರೂಪ ತಾಳಿ ಹಾಡುವ ಹಾಡು. ನಡುವೆ ಒಮ್ಮೆ ಮರೆತು ಗಂಡುದನಿಯಲ್ಲಿ ಹಾಡುತ್ತಾನೆ!
ಗಾಯಕರು ಸ್ವರ್ಣಲತಾ ಮತ್ತು ಘಂಟಸಾಲ. ಸತ್ಯಹರಿಶ್ಚಂದ್ರ ಚಿತ್ರದ ನನ್ನ ನೀನು ನಿನ್ನ ನಾನು ಹಾಡು ಕೂಡ ಸ್ವರ್ಣಲತಾ ಅವರೇ ಹಾಡಿದ್ದು. ಹಿಂದಿಯ ಶಂಶಾದ್ ಬೇಗಂ ಅವರಂತೆ ಕಂಚಿನ ಕಂಠ ಇದ್ದ ಈ ಗಾಯಕಿಗೆ ಹೆಚ್ಚಿನ ಅವಕಾಶಗಳು ಯಾಕೆ ಸಿಗಲಿಲ್ಲ ಎಂದು ತಿಳಿಯದು. ಈ ಹಾಡಿನ ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಗಳನ್ನು ಒಂದೇ ವೀಡಿಯೊದಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ.
ಗಾಯಕರು ಸ್ವರ್ಣಲತಾ ಮತ್ತು ಘಂಟಸಾಲ. ಸತ್ಯಹರಿಶ್ಚಂದ್ರ ಚಿತ್ರದ ನನ್ನ ನೀನು ನಿನ್ನ ನಾನು ಹಾಡು ಕೂಡ ಸ್ವರ್ಣಲತಾ ಅವರೇ ಹಾಡಿದ್ದು. ಹಿಂದಿಯ ಶಂಶಾದ್ ಬೇಗಂ ಅವರಂತೆ ಕಂಚಿನ ಕಂಠ ಇದ್ದ ಈ ಗಾಯಕಿಗೆ ಹೆಚ್ಚಿನ ಅವಕಾಶಗಳು ಯಾಕೆ ಸಿಗಲಿಲ್ಲ ಎಂದು ತಿಳಿಯದು. ಈ ಹಾಡಿನ ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಗಳನ್ನು ಒಂದೇ ವೀಡಿಯೊದಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ.
ವಿವಾಹ ಭೋಜನವಿದು
ಮಾಯಾಬಜಾರ್ ಚಿತ್ರದ ಸದಾ ಬಹಾರ್ ಟ್ರಂಪ್ ಕಾರ್ಡ್ ಹಾಡಿದು. ಇದನ್ನು ಹಾಡಿದ ಮಾಧವಪೆದ್ದಿ ಸತ್ಯಂ ಅವರು ಈ ಚಿತ್ರದಲ್ಲಿ ಸುಭದ್ರೆ ಮತ್ತು ಅಭಿಮನ್ಯುವನ್ನು ಹಿಡಿಂಬಿಯ ಆಶ್ರಮಕ್ಕೆ ಗಾಡಿಯಲ್ಲಿ ಕೊಂಡೊಯ್ಯುವ ದಾರುಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸತ್ಯ ಪೀಠ
ಶಕುನಿಯ ಬಾಯಿಯಿಂದ ನಿಜವನ್ನೇ ನುಡಿಸಿದ ಸತ್ಯಪೀಠದಂಥಾದ್ದು ಈಗಲೂ ಇರುತ್ತಿದ್ದರೆ ಮಂಪರು ಪರೀಕ್ಷೆ ಇತ್ಯಾದಿಗಳ ಅಗತ್ಯವೇ ಇರುತ್ತಿರಲಿಲ್ಲ!
ಕನ್ನಡದ ಪ್ರಸಿದ್ಧ ಕಲಾವಿದರು ಆಗ ಡಬ್ಬಿಂಗ್ ಚಿತ್ರಗಳಿಗೆ ಧ್ವನಿ ದಾನ ಮಾಡುತ್ತಿದ್ದಿರಬೇಕು. ಈ ಬಗ್ಗೆ ಅಧಿಕೃತ ದಾಖಲೆ ಇಲ್ಲದಿದ್ದರೂ ಈ ತುಣುಕಿನಲ್ಲಿ ಕೇಳಿಸುವ ಕೃಷ್ಣನ ಧ್ವನಿ ಕೆ.ಎಸ್. ಅಶ್ವತ್ಥ್ ಅವರದ್ದೆಂದು ಅನಿಸುತ್ತದೆ.
ಚಿತ್ರದ ಒಂದು ಜಾಹೀರಾತು.
ಮಾಯಾ ಬಜಾರ್ ಶೂಟಿಂಗ್ ಸಮಯದ ಒಂದು ಅಪರೂಪದ ಚಿತ್ರ. ಇದರಲ್ಲಿ ಶಶಿರೇಖೆ ಪಾತ್ರ ವಹಿಸಿದ ನಟಿ ಸಾವಿತ್ರಿ ಪ್ರಿಯದರ್ಶಿನಿ ಎಂಬ ಮಹಾಭಾರತ ಕಾಲದ laptop ವೀಕ್ಷಿಸುವುದನ್ನು ಕಾಣಬಹುದು! ಅವರ ಬಯೋಪಿಕ್ ಮಹಾನಟಿಯಲ್ಲಿ ಮಾಯಾ ಬಜಾರ್ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳಿವೆ.
ಆಡಿಯೊ ರೂಪದಲ್ಲಿ ಹಾಡುಗಳನ್ನು ಕೇಳುವ ಇಚ್ಛೆ ಇದ್ದರೆ ಕೆಳಗಿನ ಲಿಸ್ಟಿನಿಂದ ಒಂದೊಂದಾಗಿ ಆರಿಸಿ ಆಲಿಸಬಹುದು.
Very nicely synchronized.
ReplyDeleteನನಗಂತೂ ವಿರಾಮದ ವೇಳೆ ಒಳ್ಳೆ ಟೈಂಪಾಸ್ . ಅದರಲ್ಲಿರೋ ಒಂದೊಂದು ಲೇಖನವನ್ನು ಎಷ್ಟೆಷ್ಟು ಸಲ ಓದಿದ್ದೇನೋ ನನಗೆ ನೆನಪಿಲ್ಲ. ಕನ್ನಡ ಹಿಂದಿ ತೆಲುಗು ತಮಿಳು ಎಲ್ಲ ಭಾಷೆಯ ಹಾಡುಗಳು ಮತ್ತು ಚಿತ್ರಗಳ ವಿಶ್ವಕೋಶ ಎಂದರೆ ತಪ್ಪಾಗಲಾರದು. ಜೊತೆಯಲ್ಲಿ ನಿಮ್ಮ ಬಾಲ್ಯದ ದಕ್ಷಿಣ ಕನ್ನಡದ ಸಮೃದ್ಧ ಹಚ್ಚಹಸಿರು ನೆನಪುಗಳು ಓದುವುದೇ ಚೆಂದ. ಇನ್ನು ಮಾಯಾ ಬಾಝರ್ ಚಿತ್ರದ ಬಗ್ಗೆಯಂತೂ ಅದೆಷ್ಟು ವಿವರಗಳಿವೆ. ಓದಿ ಓದಿ ಚಿತ್ರದ ಬಗ್ಗೆ ರಿಫ್ರೆಶ್ ಮಾಡಿಕೊಂಡಾಯ್ತು . ನನಗೆ ಮಾಯಾ ಬಜಾರ್ ಚಿತ್ರದ ತೆಲುಗು ವರ್ಷನ್ ಇಷ್ಟ. ಯಾವುದೇ ಚಿತ್ರವನ್ನು ಅದರ ಮೂಲ ಭಾಷೆಯಲ್ಲಿ ನೋಡಬೇಕು ಎನ್ನುವುದೇ ನನ್ನ ಅಭಿಪ್ರಾಯ. ಅದರ ಕನ್ನಡ ವರ್ಷನ್ ಅಷ್ಟೇ ಚೆನ್ನಾಗಿದ್ದರೂ ತೆಲುಗು ನೋಡಿದಷ್ಟು ತೃಪ್ತಿಯಾಗುವುದಿಲ್ಲ. ವಾಯ್ಸ್ ಡಬ್ ಮಾಡಿರುವುದು ಅಸಮರ್ಪಕ ಎನಿಸುತ್ತದೆ. ಆದರೆ ನನ್ನ ಸ್ನೇಹಿತರೆಲ್ಲರೂ ನಿನಗೆ ತೆಲುಗು ಬರೋದರಿಂದ ಹಾಗೆನ್ನುತ್ತೀಯಾ . ತೆಲುಗು ಬಾರದ ಸರಿಯಾಗಿ ಅರ್ಥವೂ ಆಗದ ನಮಗೆ ಕನ್ನಡವೇ ಸರಿ ಅಂತಾರೆ. ಅದೂ ಸರೀನೇ . ಈ ಚಿತ್ರದ ಒಂದೊಂದು ಸನ್ನಿವೇಶ ಸಂಭಾಷಣೆ ಅರಮನೆ ಸೆಟ್ಟಿಂಗ್ ಇದೆಲ್ಲ ಎಷ್ಟು ಅದ್ಭುತ . ಆ ಕಾಲದಲ್ಲಿ ತಾಂತ್ರಿಕವಾಗಿ ಅಷ್ಟೊಂದು ಮುಂದುವರೆಯದೆ ಇದ್ದ ಕಾಲದಲ್ಲೂ ಅದೆಂಥ ಮಹೋನ್ನತ ಚಿತ್ರ ತೆಗೆದರಲ್ಲ ಎಂದು ಅಚ್ಚರಿ ಆಗುತ್ತದೆ. ರಂಗರಾಯರ ಘಟೋತ್ಕಚ ರಾಮರಾಯರ ಕೃಷ್ಣ ನಾಗೇಶ್ವರ ರಾಯರ ಅಭಿಮನ್ಯು ಸಾವಿತ್ರಿಯ ಶಶಿರೇಖೆ ಅಬ್ಬಬ್ಬಾ ! ಎಂಥ ನಟನೆ ಅಭಿನಯ ! ಇಂದಿಗೂ ಇಂಥ ಸಿನಿಮಾ ತೆಗೆಯುವುದು ಸಾಧ್ಯವೇ ಅನ್ನಿಸುತ್ತದೆ. ಹಾಡುಗಳಂತೂ ಒಂದೊಂದು ಅನರ್ಘ್ಯ ರತ್ನಗಳು. ಹಾಡುಗಳ ಬಗ್ಗೆಯೇ ಒಂದು ಪುಸ್ತಕ ಬರೆಯಬಹುದು. ಆದರೂ ನೀವೇನಾ ನನ್ನು ಪಿಲಿಚಿನದಿ , ನೀಕೋಸಮೆ ನಾ , ಲಾಹಿರಿ ಲಾಹಿರಿ, ಅಹ ನಾಪೆಳ್ಳಂಟ , ವಿವಾಹ ಭೋಜನಮು ನನ್ನ ಅಚ್ಚುಮೆಚ್ಚಿನ ಹಾಡುಗಳು. ಚೂಪುಲು ಕಲಿಸಿನ ಶುಭವೇಳ ಅಂತೂ ತುಂಬಾ ಇಂಪು. ಘಂಟಸಾಲ ಪಿ ಲೀಲಾ ಅವರ ಯುಗಳಗೀತೆಗಳೆಷ್ಟು ಚೆಂದ! ಧನ್ಯವಾದಗಳು ಸರ್ !
ReplyDeleteLakshmi G.N (FB)