1956ರಲ್ಲಿ ವರದಕ್ಷಿಣೆ ಎಂಬ ಚಿತ್ರ ಬಂದಿತ್ತು ಎಂದಾಗಲಿ, ಅದರಲ್ಲಿ ಪ್ಯಾಸಾ ಚಿತ್ರದ ಸರ್ ಜೊ ತೇರಾ ಚಕರಾಯೆ ಧಾಟಿಯ ಸುಂದರ್ ಟೂತ್ ಪೌಡರ್ ಎಂಬ ಹಾಡೊಂದು ಇದೆ ಎಂದಾಗಲಿ ಅಂತರ್ಜಾಲ ಕ್ರಾಂತಿಗಿಂತ ಮೊದಲು ನನಗೆ ಗೊತ್ತೇ ಇರಲಿಲ್ಲ. ಏಕೆಂದರೆ ಈ ಚಿತ್ರದ ಹಾಡುಗಳುರೇಡಿಯೋದಲ್ಲಿ ಬರುತ್ತಿರಲಿಲ್ಲ. ಆ ಮೇಲೆ ಈ ಹಾಡಿನ ಬಗ್ಗೆ ಮಾಹಿತಿ ದೊರಕಿದರೂ ಬಹಳ ಕಾಲ ಅದು ಕೇಳಲು ಸಿಕ್ಕಿರಲಿಲ್ಲ. ಅಂತೂ ಕೊನೆಗೆ ಆ ಚಿತ್ರದ ಹಾಡುಗಳು ಮಾತ್ರವಲ್ಲ, ಇಡೀ ಚಿತ್ರವೇ ಅಂತರ್ಜಾಲದಲ್ಲಿ ಲಭ್ಯವಾಯಿತು. ಚಿತ್ರದ ಟೈಟಲ್ಸ್‌ನಲ್ಲಿ ಸ್ಟೀವನ್ಸ್ ಮತ್ತು ಜ್ಯೂನಿಯರ್ ಘಂಟಸಾಲ ಎಂಬ ಪುರುಷ ಗಾಯಕರ ಹೆಸರಿದ್ದು ಈ ಹಾಡಿನ ಗಾಯಕ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಚಿತ್ರದ ಪದ್ಯಾವಳಿಯೋ, ಹಾಡಿನ ಗಾನತಟ್ಟೆಯೋ ಯಾರಲ್ಲಾದರೂ ಇದ್ದರೆ ಖಚಿತವಾಗಿ ಹೇಳಬಹುದು.
ಟೂತ್ ಪೌಡರ್ ಮಾರುವವನ ಪಾತ್ರದಲ್ಲಿ ನರಸಿಂಹರಾಜು ಈ ಹಾಡನ್ನು ತೆರೆಯ ಮೇಲೆ ಹಾಡಿದ್ದು ಎಂದು ನನಗೆ ಈ ವಿಡಿಯೊ ನೋಡಿದ ಮೇಲಷ್ಟೇ ಗೊತ್ತಾದದ್ದು. ಹಲ್ಲುಪುಡಿಯನ್ನು ಕುರಿತ ಈ ಹಾಡಿಗೆ ತನ್ನ ಹಲ್ಲುಗಳನ್ನೇ ಬಂಡವಾಳವನ್ನಾಗಿಸಿ ಸದಭಿರುಚಿಯ ಹಾಸ್ಯದ ಹರಿಕಾರನಾಗಿ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ ನರಸಿಂಹರಾಜು ಅಲ್ಲದೆ ಇನ್ಯಾರು ತಾನೇ ನ್ಯಾಯ ಒದಗಿಸಬಲ್ಲರು ಎಂದು ನನಗೆ ಅನ್ನಿಸಿತು.
ದಂತಧಾವನದ ಈ ಗಾನ ನನ್ನ ಮನಸ್ಸು ಬಾಲ್ಯಕಾಲದ ನಮ್ಮ ದಂತ ಕತೆಯ ನೆನಪಿನತ್ತ ಧಾವಿಸುವಂತೆ ಮಾಡಿತು. ತೀರಾ ಚಿಕ್ಕವರಾಗಿದ್ದಾಗ ಟೂತ್ ಪೌಡರ್, ಪೇಸ್ಟುಗಳೆಂದರೇನೆಂದೇ ನಮಗೆ ಗೊತ್ತಿರಲಿಲ್ಲ. ನಮ್ಮ ತಂದೆಯವರು ಬೆರಣಿ ಸುಟ್ಟು ತಯಾರಿಸಿದ ಪೆಂಡೊ ಎಂಬ ಕರ್ರಗಿನ ಬಿಲ್ಲೆಗಳನ್ನು ಗೆರಟೆಯೊಂದರಲ್ಲಿ ಹಾಕಿಡುತ್ತಿದ್ದರು. ಅದನ್ನು ಒಂದಿಷ್ಟು ಮುರಿದುಕೊಂಡು ನಮ್ಮ ಹಲ್ಲು ತಿಕ್ಕುತ್ತಿದ್ದರು. ತನಗಾಗಿ ಅವರು ತೆಂಗಿನ ಸಿಪ್ಪೆಯಿಂದ ತಯಾರಿಸಿದ ಬ್ರಶ್ಶೊಂದನ್ನು ಇಟ್ಟುಕೊಂಡಿರುತ್ತಿದ್ದರು. ನಮ್ಮ ತಾಯಿ ಮತ್ತು ಅತ್ತಿಗೆಯಂದಿರು ಹಲ್ಲುಜ್ಜಲು ಮಾವಿನೆಲೆ ಉಪಯೋಗಿಸುತ್ತಿದ್ದರು. ಕೆಲಕಾಲದ ನಂತರ ನಮ್ಮ ಮನೆಗೆ ಖಾಕಿ ಬಣ್ಣದ ಲಕೋಟೆಯಲ್ಲಿ ಬರುತ್ತಿದ್ದ ಗುಲಾಬಿ ಬಣ್ಣದ ನಂಜನಗೂಡು ಟೂತ್ ಪೌಡರಿನ ಪ್ರವೇಶವಾಯಿತು. ಅದನ್ನು ಒಂದು ಹಳೆಯ ಕುಟಿಕುರಾ ಫೇಸ್ ಪೌಡರಿನ ಡಬ್ಬಿಯಲ್ಲಿ ಹಾಕಿಡುತ್ತಿದ್ದರು. ಒಗರು ಮಿಶ್ರಿತ ಸಿಹಿ ರುಚಿಯ ದೊರಗಾದ ಆ ಪುಡಿಯನ್ನು ಅಂಗೈಗೆ ಸುರಿದುಕೊಂಡು ಬೆರಳಿನಿಂದ ಎದುರಿನ ಹಲ್ಲುಗಳ ಮುಂಭಾಗ ಮಾತ್ರ ತಿಕ್ಕುತ್ತಿದ್ದೆವು. ಹೀಗಾಗಿ ದವಡೆ ಹಲ್ಲುಗಳ ಸೂಕ್ತ ನಿರ್ವಹಣೆ ಇಲ್ಲದೆ ಕುಳಿಗಳುಂಟಾಗಿ ಹಲ್ಲುನೋವು ಎಲ್ಲ ಮಕ್ಕಳಲ್ಲೂ ಸಾಮಾನ್ಯವಾಗಿತ್ತು. ಪದೇ ಪದೇ ಬೆಲ್ಲವನ್ನು ಬೇಡಿ ತಿನ್ನುವ ಅಭ್ಯಾಸವೂ ನಮಗಿದ್ದುದು ಇದಕ್ಕೆ ಪೂರಕವಾಗಿತ್ತು. ಆಗ ದಂತವೈದ್ಯ ಎಂಬ ಪದವನ್ನೇ ನಾವು ಕೇಳಿರಲಿಲ್ಲ. ಲವಂಗದ ಎಣ್ಣೆಯ ಒಂದು ಬಾಟಲಿ ಯಾವಾಗಲೂ ಮನೆಯಲ್ಲಿರುತ್ತಿತ್ತು. ಹಲ್ಲು ನೋವು ತೀವ್ರವಾದಾಗ ಸ್ವಲ್ಪ ಹತ್ತಿಯನ್ನು ಅದರಲ್ಲದ್ದಿ ಹಲ್ಲಿನ ಕುಳಿಯಲ್ಲಿಡಲಾಗುತ್ತಿತ್ತು. ಕೆಲವು ಸಲ ಇಸ್ಮಾಲಿ ಎಂಬವನೊಬ್ಬ ಬಂದು ನಮ್ಮನ್ನು ಹೊರ ಜಗಲಿಯಲ್ಲಿದ್ದ ಬೆಂಚಿನ ಮೇಲೆ ಮಲಗಿಸಿ ಎಡಗಡೆಯ ಹಲ್ಲು ನೋಯುತ್ತಿದ್ದರೆ ಬಲಗಡೆ ಕಿವಿಯಲ್ಲಿ ಯಾವುದೋ ಎಲೆಗಳ ರಸವನ್ನು ಹಿಂಡುತ್ತಿದ್ದ! ಜೀವಮಾನವಿಡೀ ಒಮ್ಮೆಯೂ ನಿಜವಾದ ಬೀಡಿ ಸಿಗರೇಟು ಸೇದದಿದ್ದರೂ ಹಲ್ಲು ನೋವಿಗೆಂದು ಎಕ್ಕದ ಗಿಡದ ಟೊಳ್ಳು ಕಾಂಡವನ್ನು ಬೀಡಿಯಂತೆ ಸೇದಿದ್ದೂ ಉಂಟು!
ಕೆಲವು ವರ್ಷಗಳ ನಂತರ ನಮ್ಮಲ್ಲಿ ಕೊಲ್ಗೇಟ್ ಬಿಳಿ ಹಲ್ಲುಪುಡಿಯ ಬಳಕೆ ಆರಂಭವಾಯಿತು. ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ನಮ್ಮ ಒಬ್ಬ ಅಣ್ಣ ತನಗಾಗಿ ಮಾತ್ರ ಪೇಸ್ಟ್ ಮತ್ತು ಬ್ರಶ್ ತಂದಿಟ್ಟುಕೊಂಡು ಬಳಸುತ್ತಿದ್ದರು. ಆ ಪೇಸ್ಟನ್ನು ಮುಟ್ಟುವ ಅಧಿಕಾರ ಬೇರೆ ಯಾರಿಗೂ ಇರಲಿಲ್ಲ! ಅವರು ಹೆಚ್ಚಾಗಿ ಕೆಂಪು ಬಣ್ಣದ ಪೆಟ್ಟಿಗೆಯ ಕೋಲ್ಗೇಟ್ ಪೇಸ್ಟ್ ತರುತ್ತಿದ್ದರು. ನಾನು ನಾಲ್ಕನೇ ಕ್ಲಾಸಲ್ಲಿರುವಾಗ ನನ್ನ ಒತ್ತಾಯದ ಮೇರೆಗೆ ನಮ್ಮ ಇನ್ನೊಬ್ಬ ಅಣ್ಣ ನನಗೂ ಹಳದಿ ಬಣ್ಣದ ಪೆಟ್ಟಿಗೆಯ ಕೋಲಿನೋಸ್ ಪೇಸ್ಟ್ ಮತ್ತು ಜ್ಯೂನಿಯರ್ ಬ್ರಶ್ ಒಂದನ್ನು ತಂದುಕೊಟ್ಟಿದ್ದರು. ಅದನ್ನುಪಯೋಗಿಸಿ ಮೊದಲ ದಿನ ಅತ್ಯುತ್ಸಾಹದಿಂದ ಬ್ರಶ್ ಮಾಡಲು ಪ್ರಯತ್ನಿಸಿದಾಗ ಒಸಡುಗಳಿಂದ ರಕ್ತ ಜಿನುಗಿತ್ತು!
ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಉಜಿರೆಯಲ್ಲಿ ಹಾಸ್ಟೆಲ್ ಸೇರಿದ ಮೇಲೆ ವಿವಿಧ ಟೂತ್ ಪೇಸ್ಟುಗಳನ್ನು ಮನಸೋ ಇಚ್ಛೆ ಉಪಯೋಗಿಸಲು ನನಗೆ ಪೂರ್ಣ ಸ್ವಾತಂತ್ರ್ಯ ದೊರಕಿತು. ಕೈಯಲ್ಲಿ ಹೆಚ್ಚು ದುಡ್ಡು ಇಲ್ಲದಿರುತ್ತಿದ್ದರೂ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಅನುಕೂಲವಾಗುವಂತೆ ನಮ್ಮ ಸಂಸ್ಕೃತ ಅಧ್ಯಾಪಕರೂ ಆಗಿದ್ದ ಗೋಪಾಲ ಮಾಸ್ಟ್ರ ಅಂಗಡಿಯಲ್ಲಿ ನನ್ನ ಖಾತೆಯೊಂದನ್ನು ಮನೆಯವರು ತೆರೆದಿದ್ದರು. ಬೇಕಿದ್ದ ವಸ್ತುಗಳನ್ನು ಕೊಂಡು ಪುಸ್ತಕವೊಂದರಲ್ಲಿ ಅದನ್ನು ದಾಖಲಿಸಿ ಆಗಾಗ ಲೆಕ್ಕ ಚುಕ್ತಾ ಮಾಡುವ ವ್ಯವಸ್ಥೆಯಾಗಿತ್ತದು. ನಾವು ಬಿಸ್ಕೆಟ್, ಚಾಕಲೇಟು ಇತ್ಯಾದಿ ಕೊಂಡದ್ದು ಸುಲಭದಲ್ಲಿ ವೇದ್ಯವಾಗದಂತೆ ವಿವರಗಳನ್ನು ಮೋಡಿ ಅಕ್ಷರಗಳಲ್ಲಿ ಬರೆದು ಮೊಬಲಗು ಮಾತ್ರ ಸ್ಪಷ್ಟವಾಗಿ ಕಾಣಿಸುವಂತೆ ಅವರು ಆ ಪುಸ್ತಕದಲ್ಲಿ ಬರೆಯುತ್ತಿದ್ದರು! ಪ್ರಾಣಿಗಳ ಪುಟ್ಟ ಪ್ಲಾಸ್ಟಿಕ್ ಬೊಂಬೆಗಳೊಂದಿಗೆ ಬರುತ್ತಿದ್ದ ಬಿನಾಕಾ ಪೇಸ್ಟನ್ನು ನಾನು ಹೆಚ್ಚಾಗಿ ಕೊಳ್ಳುತ್ತಿದ್ದೆ. ಪಚ್ಚೆ ಕಲರಿನ ಕ್ಲೋರೊಫಿಲ್, ತಿಳಿ ಗುಲಾಬಿ ಬಣ್ಣದ ರೋಸ್, ಬಿಳಿ ಬಣ್ಣದ ಟಾಪ್ ಮತ್ತು ತಿಳಿ ನೀಲಿ ಬಣ್ಣದ ಫ್ಲೋರೈಡ್ ಎಂಬ ವಿವಿಧ ಬಿನಾಕಾ ಪೇಸ್ಟುಗಳು ಆಗ ದೊರಕುತ್ತಿದ್ದವು. ಬಿಳಿ ಪೇಸ್ಟಿಗೆ ಕೆಂಪು ಪಟ್ಟೆಗಳುಳ್ಳ ಸಿಗ್ನಲ್ ಟೂತ್ ಪೇಸ್ಟು ಕೂಡ ಆಗ ಜನಪ್ರಿಯವಾಗಿತ್ತು. ಪಟ್ಟೆಗಳಿಗಾಗಿ ಮುಚ್ಚಳದ ಬಳಿ ಅಳವಡಿಸಿರುತ್ತಿದ್ದ ಕೆಂಪು ಪದಾರ್ಥದ ಸಂಗ್ರಹಾಗಾರವನ್ನು ತೆರೆದು ಕೆಂಪು ಭಾಗ ಮಾತ್ರ ಮೊದಲು ಹೊರಗೆ ಬರುವಂತೆ ಕೆಲವು ಮಿತ್ರರು ಮಾಡಿಕೊಳ್ಳುತ್ತಿದ್ದರು. ಫೋರ್‍ಹನ್ಸ್ ಎಂಬ ಪೇಸ್ಟಿನ ಜಾಹೀರಾತಲ್ಲಿ ದಂತರಕ್ಷಣೆಯ ಕುರಿತಾದ ಉಚಿತ ಕಿರು ಪುಸ್ತಿಕೆಗಾಗಿ ಬರೆಯಿರಿ ಎಂಬ ಸೂಚನೆ ಇರುತ್ತಿತ್ತು. ಆ ಪೇಸ್ಟಿನ ಒಗರು ರುಚಿ ನನಗಿಷ್ಟವಾಗದಿದ್ದರೂ ನಾನು ಈ ಬಣ್ಣಬಣ್ಣದ ಪುಸ್ತಿಕೆಯನ್ನು ಅನೇಕ ಬಾರಿ ತರಿಸಿದ್ದಿದೆ.
ಇಷ್ಟೆಲ್ಲ ವಿವಿಧ ಪೇಸ್ಟುಗಳನ್ನು ಬಳಸಿ ಪ್ರಯೋಗ ಮಾಡಿದರೂ ಇವ್ಯಾವುದೂ ಒಸಡುಗಳನ್ನು ಬಲಪಡಿಸಲಿಲ್ಲ, ಹಲ್ಲಿನ ಎನಾಮಲನ್ನು ಗಟ್ಟಿಗೊಳಿಸಲಿಲ್ಲ, ಆಗಾಗ ಕಾಡುವ ಹಲ್ಲು ನೋವನ್ನು ಹೋಗಲಾಡಿಸಲಿಲ್ಲ. ಕೊನೆಗೆ ನೌಕರಿ ದೊರೆತು ಮಂಗಳೂರು ಸೇರಿ ಆರ್ಥಿಕವಾಗಿ ಸ್ವಲ್ಪ ಸಬಲನಾದ ಮೇಲೆ ದಂತವೈದ್ಯ ಮಿತ್ರರುಗಳ ನೆರವಿನಿಂದ ಹಲ್ಲುಗಳನ್ನು ಸದೃಢಗೊಳಿಸಿಕೊಂಡು ಬೇನೆ ಬೇಗುದಿಗಳಿಂದ ಮುಕ್ತಿ ಹೊಂದಿ ಆನಂದವಾಗಿದ್ದೇನೆ ಎಂಬಲ್ಲಿಗೆ ಈ ದಂತಕತೆಯು ಮುಕ್ತಾಯವಾದುದು.
ನಾನು 1960 ರಿಂದ 1963 ವರೆಗೆ ವಿದ್ಯಾಭ್ಯಾಸದ ಸಲುವಾಗಿ ಉಜಿರೆ ಹಾಸ್ಟೆಲ್ ನಲ್ಲಿದ್ದೆ .ನಾವು ರಾತ್ರಿಯೇ ಮಲಕೊಳ್ಳುವ ಮೊದಲೇ ಬ್ರಷ್ ಗೆ ಪೇಸ್ಟ್ ಹಚ್ಹಿ ರೆಡಿ ಮಾಡಿ ಇಡುತ್ತಿದ್ದೆವು.ಕಾರಣ ಬೆಳಿಗ್ಗೆ ಐದೂವರೆ ಗಂಟೆಗೆ ಯಾರು ಇಷ್ಟೆಲ್ಲಾ ಕೆಲಸ ಮಾಡೋದು ಅಂತ ಆಲಸ್ಯ ಮಾಡುತ್ತಿದ್ದೆವು!
ReplyDeleteಬಹಳ ಸೊಗಸಾಗಿದೆ! ನೆನಪುಗಳ ಮಾಯಾಜಾಲವೇ ಹಾಗೆ - ಅನಾಯಾಸವಾಗಿ ಗತಕಾಲಕ್ಕೆ ಮನಸ್ಸನ್ನು ಒಯ್ದುಬಿಡುತ್ತದೆ. ಆ ಪೇಸ್ಟ್ ಗಳ ಚಿತ್ರಣವನ್ನು ಎಷ್ಟು ಯಥಾವತ್ತಾಗಿ ಕೊಟ್ಟಿದ್ದೀರಿ ಎಂದರೆ, ಅವುಗಳ ಒಗರಿನ ರುಚಿ ನಾಲಗೆಯ ಮೇಲೆ ಮತ್ತೆ ನಲಿದಾಡಿದಂತೆ ಆಯಿತು!
ReplyDeleteKiran Surya (FB)