Wednesday, 27 May 2026

ಕಾಲ್ಪನಿಕ ಋತುಮಾನ ಸ್ನೇಹಿ ಪಂಚಾಂಗ

ಸುಮಾರು ಮೂರು ವರ್ಷಕ್ಕೊಮ್ಮೆ ಬರುವ ಅಧಿಕ  ಮಾಸದ ಉದ್ದೇಶ  ಶಿಥಿಲವಾದ ಚಾಂದ್ರ ಸೌರ ಕಾಲಗಣನೆಯ ಸಮನ್ವಯವನ್ನು  ಮತ್ತೆ ಸಮಸ್ಥಿತಿಗೆ ತರುವುದು ಎಂಬುದು ತಿಳಿದ ವಿಚಾರವೇ ಆಗಿದೆ.  ಆದರೆ ಭೂಮಿಯ ಓಲಾಡುವಿಕೆಯಿಂದ ಉಂಟಾಗಿರುವ precession ಪ್ರಭಾವದಿಂದ ನಕ್ಷತ್ರ ಸ್ಥಾನಗಳು ಕ್ರಮೇಣ ಬದಲಾಗುತ್ತಾ ಬಂದು ಸಂಕ್ರಾಂತಿ ಆಧರಿಸಿದ ಸೌರ ಕಾಲಗಣನೆಯೇ ಕ್ರಾಂತಿವೃತ್ತದಲ್ಲಿ ಸೂರ್ಯನ ವಾರ್ಷಿಕ ಚಲನೆಯನ್ನು ಹೊಂದಿಕೊಂಡ ಋತುಮಾನ ಚರ್ಯೆಗಳೊಂದಿಗಿನ ಸಮನ್ವಯವನ್ನು ಕಳೆದುಕೊಂಡಿದೆ.  ಹೀಗಾಗಿ ಸಂಕ್ರಾಂತಿಗಳೊಂದಿಗೆ ತಳಕು ಹಾಕಿಕೊಂಡಿರುವ   ಚಾಂದ್ರಮಾನ ಮಾಸಗಳ ಆಧಾರದಲ್ಲಿ ಗುರುತಿಸಲಾಗುವ   ವಸಂತ, ಗ್ರೀಷ್ಮಾದಿ ಋತುಗಳು ಮತ್ತು ಆ ಸಮಯದಲ್ಲಿ ಪ್ರಕೃತಿಯಲ್ಲಿ   ಇರಬೇಕಾದ ಲಕ್ಷಣಗಳ ಮಧ್ಯೆ ಕೂಡ ತಾಳಮೇಳ ಇಲ್ಲ.

ವಾಸ್ತವವಾಗಿ ಕ್ರಾಂತಿವೃತ್ತದಲ್ಲಿ ಸೂರ್ಯನು 330 ಡಿಗ್ರಿಯಲ್ಲಿರುವ ಫೆಬ್ರವರಿ 18ರ ಸುಮಾರಿಗೆ ಪ್ರಕೃತಿಯಲ್ಲಿ ವಸಂತದ ಲಕ್ಷಣಗಳು ಕಾಣಿಸತೊಡಗುತ್ತವೆ. ಅಷ್ಟರಲ್ಲಿ ಚೈತ್ರ ಮಾಸ ಆರಂಭವಾಗಿ  ಮುಂದೆ ಎರಡೆರಡು ತಿಂಗಳಿಗೊಂದರಂತೆ ಗ್ರೀಷ್ಮ, ವರ್ಷಾ, ಶರತ್, ಹೇಮಂತ  ಶಿಶಿರ ಋತುಗಳು ಬರಬೇಕು. ಆದರೆ ಈಗ ಚಾಂದ್ರಮಾನ ತಿಂಗಳುಗಳನ್ನು ಸೌರ ಸಂಕ್ರಾಂತಿಗಳೊಂದಿಗೆ ಸಮನ್ವಯಗೊಳಿಸುತ್ತಿರುವುದರಿಂದ ಚೈತ್ರಾದಿ ತಿಂಗಳುಗಳೊಂದಿಗೆ ತಳಕು ಹಾಕಿಕೊಂಡಿರುವ ಋತುಗಳು ಇರಬೇಕಾದ ಸಮಯದಲ್ಲಿ  ಇರುವುದಿಲ್ಲ. ಹೀಗಾಗದೆ ಇರಬೇಕಿದ್ದರೆ  ಚಾಂದ್ರಮಾನ ತಿಂಗಳುಗಳನ್ನು ಸಂಕ್ರಾಂತಿಗಳೊಂದಿಗೆ ಸಮನ್ವಯಿಸದೆ ಕ್ರಾಂತಿವೃತ್ತದಲ್ಲಿ ಸೂರ್ಯನ ಸ್ಥಾನವನ್ನು ಆಧರಿಸುವಂತೆ ಮಾಡಬೇಕು.

ಸೈದ್ಧಾಂತಿಕವಾಗಿ ಹೀಗೆ ಮಾಡಲು ಕಷ್ಟವೇನೂ ಇಲ್ಲ. ಪ್ರತೀ ವರ್ಷ ಫೆಬ್ರವರಿ 18ರ ನಂತರ ಆರಂಭವಾಗುವ ತಿಂಗಳನ್ನು ಚೈತ್ರ ಎಂದು ಪರಿಗಣಿಸಿದರಾಯಿತು. ಮುಂದೆ ಸಾಗುತ್ತಾ ಸುಮಾರು 33 ತಿಂಗಳುಗಳಾಗುವಾಗ ಫೆಬ್ರವರಿ 18ಕ್ಕೆ ಮೊದಲೇ ಚೈತ್ರ ಆರಂಭವಾದಾಗ ಅದನ್ನು ಅಧಿಕ ಚೈತ್ರವಾಗಿಸಿ  ನಂತರದ ತಿಂಗಳನ್ನು ನಿಜ ಚೈತ್ರ ಎಂದು ಪರಿಗಣಿಸಬೇಕು. ಈ ಪದ್ಧತಿಯಲ್ಲಿ ಚೈತ್ರ ಮಾತ್ರ ಅಧಿಕಮಾಸ ಆಗುತ್ತದೆ. ಎಂದಾದರೂ ಫೆಬ್ರವರಿ 18ರ ನಂತರ ಫಾಲ್ಗುಣ ಆರಂಭವಾದರೆ ಅದನ್ನು ಕ್ಷಯಮಾಸ ಮಾಡಿದರಾಯಿತು.

ಒಂದು ವೇಳೆ  2027ರ ಫೆಬ್ರವರಿಯಿಂದ ಈ ರೀತಿಯ ಪಂಚಾಂಗಗಳು ಬರತೊಡಗಿದರೆ ಹೇಗಿರಬಹುದು ಎಂಬ ಕುತೂಹಲ ನನ್ನಲ್ಲಿ ಮೂಡಿ ಈ ನಿಯಮದಂತೆ  ತಿಂಗಳುಗಳ ಪಟ್ಟಿ ಮಾಡುತ್ತಾ ಹೋದಾಗ  ಇಲ್ಲಿ ಕಾಣಿಸುತ್ತಿರುವ ಕಾಲ್ಪನಿಕ ಋತುಮಾನ ಸ್ನೇಹಿ ಪಂಚಾಂಗದ ಮುನ್ನೋಟ ತಯಾರಾಯಿತು!

ಈ ಕಲ್ಪನೆಯಂತೆ 2027ರಲ್ಲಿ ಫೆಬ್ರವರಿ 18ರ ನಂತರ ಮಾರ್ಚ್  9ಕ್ಕೆ ಆರಂಭವಾಗುವ ಫಾಲ್ಗುಣ ತಿಂಗಳು ಕ್ಷಯವಾಗಿ ಅದು ಚೈತ್ರ ಆಗುತ್ತದೆ.  ಹಾಗೆಯೇ ಮುಂದೆ ಸಾಗಿದಾಗ  2029ರಲ್ಲಿ ಫೆಬ್ರವರಿ 18ಕ್ಕಿಂತ ಮೊದಲೇ 14 ತಾರೀಕಿಗೆ ಆರಂಭವಾಗುವ ಚೈತ್ರವು ಅಧಿಕ ಮಾಸವಾಗಿ ಮಾರ್ಚ್ 16ರಿಂದ ನಿಜ ಚೈತ್ರ ಆರಂಭವಾಗುತ್ತದೆ. ಮುಂದೆ ಕೂಡ ಎಂದಾದರೂ ಫೆಬ್ರವರಿ 18ರ ನಂತರ ಫಾಲ್ಗುಣ ಆರಂಭವಾದರೆ ಅದು ಕ್ಷಯವಾಗಿ ಆ ತಿಂಗಳು  ಚೈತ್ರ ಆಗುತ್ತದೆ.  

ಈ ರೀತಿಯ ಪಂಚಾಂಗದಲ್ಲಿ ಆಯಾ ತಿಂಗಳುಗಳ ತಿಥಿ ಪ್ರಕಾರ ಹಬ್ಬ ಹರಿದಿನಗಳು ಈಗಿನಂತೆಯೇ, ಆದರೆ ಋತುಮಾನ ಪ್ರಕಾರ ಇರುತ್ತವೆ. ಹೋಲಿಕೆಗಾಗಿ ವಾಸ್ತವ  ಮತ್ತು ಕಾಲ್ಪನಿಕ ತಿಂಗಳುಗಳನ್ನು ಅಕ್ಕಪಕ್ಕದಲ್ಲಿ ಕಾಣಿಸಲಾಗಿದೆ. ಚಾಂದ್ರಮಾನ ಗಣನೆ ಒಂದು ತಿಂಗಳಷ್ಟು ಹಿಂದೆ ಬಂದಿರುವುದು ಬಿಟ್ಟರೆ ಎರಡರ ನಡುವೆ ಬೇರೇನೂ ವ್ಯತ್ಯಾಸ ಇಲ್ಲದಿರುವುದನ್ನು ಗಮನಿಸಬಹುದು.

ಯಾರಿಗೆ ಗೊತ್ತು, ಮುಂದೊಂದು ದಿನ ನಿಜವಾಗಿಯೂ ಫೆಬ್ರವರಿ 18ರ ಸುಮಾರಿಗೆ ಸೂರ್ಯನು ವಾರ್ಷಿಕ ಪಯಣದಲ್ಲಿ 330 ಡಿಗ್ರಿ ದಾಟಿದ ಮೇಲೆ ಮೊದಲಿಗೆ  ಬರುವ ತಿಂಗಳೇ ಚೈತ್ರ ಮಾಸವೆನಿಸುವ  ಇಂಥ ಋತುಮಾನ ಸ್ನೇಹಿ ಪಂಚಾಂಗಗಳು ಬಂದರೂ ಬರಬಹುದು. ಬರಲಿ ಎಂದು ಹಾರೈಸೋಣ.



No comments: