Friday 4 February 2022

ಟಾಕೀಸ್ ಟಾಕ್


ಇತ್ತೀಚೆಗೆ ಮಂಗಳೂರಿನ ಜ್ಯೋತಿ ಚಿತ್ರಮಂದಿರ ಧರಾಶಾಯಿಯಾದದ್ದು ದೊಡ್ಡ ಸುದ್ದಿಯಾಯಿತು. ನಾನು ಆ ಚಿತ್ರಮಂದಿರದಲ್ಲಿ ಸ್ವರ್ಣಗೌರಿ, ಕೃಷ್ಣಾರ್ಜುನ ಯುದ್ಧ, ಮುರಿಯದ ಮನೆ, ರೌಡಿ ರಂಗಣ್ಣ, ತುಂಬಿದ ಕೊಡ, ಸೂರಜ್, ಬಿಸತ್ತಿ ಬಾಬು,  ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಕೋಟಿ ಚೆನ್ನಯ, ಎಡಕಲ್ಲುಗುಡ್ಡದ ಮೇಲೆ,   ಗಂಧದ ಗುಡಿ, ಬಂಗಾರದ ಪಂಜರ, ಬೂತಯ್ಯನ   ಮಗ ಅಯ್ಯು, ಉಪಾಸನೆ,    ಬಯ್ಯ ಮಲ್ಲಿಗೆ, ಚಿರಂಜೀವಿ,    ಬಯಲುದಾರಿ, ವಿಜಯವಾಣಿ, ನಾನಿನ್ನ ಮರೆಯಲಾರೆ,   ಬಬ್ರುವಾಹನ, ನಾಗರಹಾವು, ಎರಡು ಕನಸು, ಶ್ರೀನಿವಾಸ ಕಲ್ಯಾಣ ಇತ್ಯಾದಿ ಚಿತ್ರಗಳನ್ನು ನೋಡಿದ್ದರೂ 1978ರ ನಂತರ ಅಲ್ಲಿಗೆ ಒಮ್ಮೆಯೂ ಹೋಗದಿದ್ದ  ನನಗೆ ಈಗ ಅದೇಕೆ ಮುಚ್ಚಿತು ಎಂದು ಕೇಳುವ ಹಕ್ಕಿಲ್ಲ!


1926ರಲ್ಲಿ ಹಿಂದುಸ್ಥಾನ್ ಸಿನೆಮಾ ಎಂಬ ಹೆಸರಲ್ಲಿ ಆರಂಭಗೊಂಡು ಮೂಕಿ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದು ಆಮೇಲೆ 1936ರಲ್ಲಿ ಹೊಸ ನಾಮಧೇಯ  ಹೊಂದಿ ಕರಾವಳಿ ಭಾಗದ ಮೊತ್ತ ಮೊದಲ ಸಿನಿಮಾ ಟಾಕೀಸು ಎನ್ನಿಸಿಕೊಂಡಿದ್ದ ನ್ಯೂಚಿತ್ರಾ ಕೆಲ ಕಾಲ ಹಿಂದೆ  ಫರ್ನಿಚರ್ ಮಾರ್ಟ್ ಆಗಿ ಪರಿವರ್ತನೆ ಹೊಂದಿತು. ಹಳೆ ಚಂದಮಾಮಗಳಲ್ಲಿರುವ ಅನೇಕ ಸಿನಿಮಾ ಜಾಹೀರಾತುಗಳಲ್ಲಿ ಈ ಟಾಕೀಸಿನ ಹೆಸರು ಕಾಣಸಿಗುತ್ತದೆ.   ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳನ್ನೇ ಪ್ರದರ್ಶಿಸುತ್ತಿದ್ದ ಅದು ನನ್ನ ಮೆಚ್ಚಿನ ಟಾಕೀಸೇನೂ ಆಗಿರಲಿಲ್ಲ.  ಆದರೂ ದೂರದ ದಾರಿ ಬದಿಯ ಬೃಹತ್ ಪುರಾತನ ಮರವೊಂದು ಫರ್ನಿಚರಿಗಾಗಿ ಧರೆಗುರುಳಿದಂತೆ ನನಗನ್ನಿಸಿತು.  ಅಲ್ಲಿದ್ದ ಅತ್ಯಂತ ಪುರಾತನ ಸೆಂಚುರಿ ಪ್ರಾಜೆಕ್ಟರ್ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯ ಸೇರಿ ಈ ಭಾಗದ ಪ್ರಥಮ  ಟಾಕೀಸಿನ ನೆನಪು ಶಾಶ್ವತವಾಗಿ ಉಳಿಯುವಂತಾಗಿರುವುದು ಸ್ತ್ಯುತ್ಯರ್ಹ.


ಎಲ್ಲೆಡೆಯಂತೆ ಮಂಗಳೂರಿನಲ್ಲೂ ಹಳೆ ಸಿನಿಮಾ ಮಂದಿರಗಳು ಒಂದೊಂದಾಗಿ ಮುಚ್ಚುತ್ತಿವೆ.  ನಾನು ಅನೇಕ ಮೆಚ್ಚಿನ ಚಿತ್ರಗಳನ್ನು ನೋಡಿದ್ದ ಅಮೃತ್ ಸಿನಿಮಾ ಇದ್ದ ಜಾಗದಲ್ಲಿ ಬೃಹತ್ ವಸತಿ ಸಂಕೀರ್ಣವೊಂದು ತಲೆಯೆತ್ತಿ ವರ್ಷಗಳೇ ಆದವು.  ಹಿಂದಿ ಚಿತ್ರಗಳಿಗಾಗಿ ನಂ 1 ಆಯ್ಕೆಯಾಗಿದ್ದ ಸೆಂಟ್ರಲ್ ಟಾಕೀಸ್ ಇತಿಹಾಸ ಸೇರಿದೆ.  ಮಂಗಳೂರಿನ ಪ್ರಥಮ  ಹವಾನಿಯಂತ್ರಿತ ಥಿಯೇಟರ್ ಪ್ಲಾಟಿನಮ್  ಕೂಡ ಈಗ  ಪ್ರದರ್ಶನ ಸ್ಥಗಿತಗೊಳಿಸಿದೆ.  ಈ  ಥಿಯೇಟರ್ 17-5-1974ರಂದು ಹಿಂದಿ ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡು ಪ್ರಥಮ ಚಿತ್ರವಾಗಿ ಕನ್ನಡ ರಾಜ್‌ಕುಮಾರ್ ಅಭಿನಯದ ಎರಡು ಕನಸು ಪ್ರದರ್ಶಿತವಾಗಿತ್ತು .  ಪ್ರಥಮ ದಿನದ ಪ್ರಥಮ ದೇಖಾವೆಯಲ್ಲಿ ಆ ಚಿತ್ರವನ್ನು ನಮ್ಮ ಆಫೀಸಿನ ಮಿತ್ರ ಗಡಣದೊಂದಿಗೆ  ನಾನೂ ನೋಡಿದ್ದೆ. ವಾಡಿಕೆಗಿಂತ ಭಿನ್ನವಾಗಿ ಅಲ್ಲಿಯ ಬಾಲ್ಕನಿಯಲ್ಲಿ ಮುಂದಿನ ಸೀಟುಗಳಿಗೆ  ಹಿಂಬದಿಯವುಗಳಿಗಿಂತ ಹೆಚ್ಚಿನ ದರ ಇದ್ದುದು ನಮಗೆಲ್ಲ ಅಚ್ಚರಿಯ ವಿಷಯವಾಗಿತ್ತು.  ಹೊಸ ಥಿಯೇಟರಿನ ಪ್ರಥಮ ಚಿತ್ರ ಎಂದು ಬಂದಿದ್ದ ಎಂದೂ ಕನ್ನಡ ಸಿನಿಮಾ ನೋಡದಿದ್ದ  ಕೆಲವು ಪಡ್ಡೆ ಹುಡುಗರು ಇಂದು ಎನಗೆ ಗೋವಿಂದ ಹಾಡು ಬಂದಾಗ ಗೊಣಗುತ್ತಾ ಎದ್ದು ಹೊರಗೆ ಹೋಗಿದ್ದರು!


ಇತ್ತೀಚಿನ ವರ್ಷಗಳಲ್ಲಿ ಟಿ.ವಿಯ ಪ್ರಭಾವದಿಂದ ಮನೆಯ ಡ್ರಾಯಿಂಗ್ ರೂಮ್, ಆ ಮೇಲೆ ಅಂತರ್ಜಾಲ ಮತ್ತು ಸ್ಮಾರ್ಟ್ ಫೋನುಗಳಿಂದಾಗಿ ಅಂಗೈಯೇ ಸಿನಿಮಾ ಮಂದಿರವಾಗಿ ಪರಿವರ್ತನೆ ಹೊಂದಿವೆ. ಹೊಸ ಪೀಳಿಗೆಯವರು ಆಗಾಗ ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡುತ್ತಾರಾದರೂ  ನಾನೂ ಸೇರಿದಂತೆ ಅನೇಕರು ಟಾಕೀಸುಗಳಲ್ಲಿ ಸಿನಿಮಾ ನೋಡದೆ ದಶಕಗಳೇ ಕಳೆದಿವೆ. ಆದರೆ   ಸುಮಾರು 1945ರಿಂದ 1970ರ ಮಧ್ಯೆ  ಜನಿಸಿದವರೆಲ್ಲರೂ ಬಾಲ್ಯದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂರುವ ಕನಸು ಮತ್ತು ಯೌವನದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂತು ಕನಸು ಕಂಡವರೇ.  ಹೆಚ್ಚಿನವರು ತಾನೂ ಹೀರೋ/ಹಿರೋಯಿನ್‌ನಂತೆ ಕಾಣಿಸಬೇಕು,  ಅಂತಹ ಬಟ್ಟೆಗಳನ್ನೇ ಧರಿಸಬೇಕು ಎಂಬಿತ್ಯಾದಿ ಕನಸು ಕಂಡರೆ ನಾನು ಮಾತ್ರ ಸಿನಿಮಾಗಳಲ್ಲಿ ಆಗಾಗ ಕಾಣಿಸುವ ವಾದ್ಯಗಳನ್ನು ನಾನೂ ಅವರಂತೆ ನುಡಿಸಬೇಕು ಎಂದು ಕನಸು ಕಾಣುತ್ತಿದ್ದೆ.  ಅದರಲ್ಲೂ ನಾಯಕನು ಕೊಳಲೊಂದನ್ನು ತುಟಿಗೆ ತಾಗಿಸಿದೊಡನೆ ಅದರಿಂದ ಮಧುರ ನಾದದ ಅಲೆಗಳು ಹೊರಟು ಸುತ್ತಲಿನವರನ್ನು ಆಕರ್ಷಿಸುವುದು,  ನಾಯಕಿಯು ಆ ನಾದಕ್ಕೆ ಮರುಳಾಗುವುದು ನನ್ನನ್ನೂ ಮರುಳು ಮಾಡುತ್ತಿತ್ತು!

ನನಗೆ ಅರಿವು ಮೂಡುವುದಕ್ಕೂ ಮುನ್ನ ನಾನು ಮನೆ ಮಂದಿಯೊಡನೆ ನೋಡಿದ ಮೊದಲ ಸಿನಿಮಾ ಜಗನ್ಮೋಹಿನಿ ಆಗಿರಬಹುದು.  ಏನೂ ಅರ್ಥವಾಗದಿದ್ದರೂ ಅದರೊಳಗಿನ ಜನರೆಲ್ಲ ಬೂದಿ ರಾಶಿಯ ಮೇಲೇಕೆ ಓಡಾಡುತ್ತಾರೆ ಎಂದು ನನಗನ್ನಿಸಿದ್ದು ನೆನಪಿದೆ.  ಕಪ್ಪು ಬಿಳುಪಿನ ಆ ಸಿನಿಮಾದಲ್ಲಿನ ನೆಲ, ಬೆಟ್ಟ, ಗುಡ್ಡಗಳೆಲ್ಲ ನನಗೆ ಹಾಗೆ ಕಂಡಿರಬಹುದು.  ಆ  ಮೇಲೆ ಅಣ್ಣಂದಿರೊಡನೆ ಕಾರ್ಕಳ ಸಮೀಪದ ಅಕ್ಕನ ಮನೆಗೆ ಹೋಗುವಾಗ ಅಲ್ಲಿಯ ಜೈಹಿಂದ್ ಟಾಕೀಸಿನಲ್ಲಿ ವರ್ಷಕ್ಕೊಂದು ಸಿನಿಮಾ ನೋಡುವ ಅವಕಾಶ ಸಿಗುತ್ತಿತ್ತು. ಅಲ್ಲಿ ಮೊತ್ತ ಮೊದಲು ಬರ್‌ಸಾತ್ ಕೀ ರಾತ್  ನೋಡಿದ್ದು ನೆನಪಿದೆ. ಆ ಸಿನಿಮಾ ಏನೇನೂ ಅರ್ಥವಾಗದಿದ್ದರೂ ಅದರಲ್ಲಿ ಟೊಪ್ಪಿ ಧರಿಸಿದ ಕೆಲವರು ತಲೆ ಅಲ್ಲಾಡಿಸುತ್ತಾ ತಬಲಾ ನುಡಿಸುತ್ತಿದ್ದುದು, ಪರದೆ ತುಂಬಾ ತುಂಬಿಕೊಂಡ ದಪ್ಪ ಮುಖದವನೊಬ್ಬ ಮೈಕ್ ಎದುರು ಹಾಡು ಹಾಡಿದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.  ಬಹುಶಃ ಅವು ಆ ಚಿತ್ರದ ನ ತೊ ಕಾರವಾಂ ಕೀ ತಲಾಶ್ ಹೈ ಕವ್ವಾಲಿ ಮತ್ತು ಜಿಂದಗೀ ಭರ್ ನಹೀಂ ಭೂಲೇಗಿ ಹಾಡಿನ ಕ್ಲೋಸ್ ಅಪ್ ದೃಶ್ಯಗಳಿರಬಹುದು.  ಮುಂದೆ  ಕಿತ್ತೂರು ಚೆನ್ನಮ್ಮ, ಜೇನುಗೂಡು, ಕನ್ಯಾರತ್ನ ಮುಂತಾದ ಒಳ್ಳೊಳ್ಳೆಯ ಚಿತ್ರಗಳನ್ನು ಅಲ್ಲಿ ನೋಡುವ ಅವಕಾಶ ಸಿಕ್ಕಿತ್ತು.  ಕನ್ಯಾರತ್ನ ಚಿತ್ರವನ್ನು ಒಂದೇ ದಿನ ಎರಡು ಬಾರಿ ನೋಡಿದ್ದೆ! ಆಗ ನಾನಿನ್ನೂ ಆರನೇ ಕ್ಲಾಸ್. ಆ ಸಲ ಅಕ್ಕನ ಮನೆಗೆ ಹೋಗಿದ್ದಾಗ ಯಾವುದೋ ಕಾರಣದಿಂದ ಅಣ್ಣನಿಗೆ ನನ್ನೊಂದಿಗೆ ಸಿನಿಮಾಗೆ ಬರಲು  ಸಾಧ್ಯವಾಗದೆ  ಕಸಿನ್ ಒಬ್ಬರೊಡನೆ   ಆ ಚಿತ್ರ ನೋಡಿ ಕಾರ್ಕಳದಲ್ಲಿ ಯಾರದೋ ಮನೆಯಲ್ಲಿ halt ಮಾಡುವ ಪ್ರಸಂಗ ಬಂದೊದಗಿತು.  ಆದರೆ  ನಾವು ಪ್ರಥಮ ದೇಖಾವೆಯಲ್ಲಿ ಆ ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ   ಹೊರಗಡೆ ಅಣ್ಣ ಮತ್ತು ಭಾವ ಹಾಜರ್!  ನಾನು ಇನ್ನೊಬ್ಬರ ಮನೆಯಲ್ಲಿ halt ಮಾಡುವುದು ಇಷ್ಟವಾಗದೆ ಅಕ್ಕ ಅವರನ್ನು ಕಳಿಸಿದ್ದರಂತೆ.  ಅವರಿಬ್ಬರೊಡನೆ ಮತ್ತೆ ಆ ಚಿತ್ರದ 2nd show  ನೋಡಿ ರಾತ್ರೆಯೇ ಅಕ್ಕನ ಮನೆ ಸೇರಿದೆವು. ಹೀಗೆ ಅನೇಕ ನೆನಪುಗಳಿಗೆ ಸಾಕ್ಷಿಯಾಗಿದ್ದ ಕಾರ್ಕಳದ ಜೈಹಿಂದ್ ಟಾಕೀಸ್ ಇತಿಹಾಸದ ಪುಟ ಸೇರಿ ವರ್ಷಗಳೇ ಕಳೆದಿವೆ.  ಕೆಲವು ವರ್ಷಗಳ ನಂತರ ಒಮ್ಮೆ ಅಣ್ಣನೊಡನೆ ಮಂಗಳೂರಿಗೆ ಹೋಗಿದ್ದಾಗ ಇದೇ ರೀತಿಯ ಅನುಭವ ಮರುಕಳಿಸಿತ್ತು.  ಅಲ್ಲಿಯ ಸೆಂಟ್ರಲ್  ಟಾಕೀಸಿನಲ್ಲಿ ಅಂದು ಆರಾಧನಾ ಬಿಡುಗಡೆಗೊಂಡಿತ್ತು.  ಗೇಟು ತೆರೆಯುವುದನ್ನೇ ಕಾದು ಕೂಡಲೇ ಒಳನುಗ್ಗಿ ಕ್ಯೂನಲ್ಲಿ ಸೇರಿಕೊಂಡದ್ದೂ ಆಯಿತು.  ಹೇಗೂ ಒಬ್ಬರಿಗೆ ಎರಡು ಟಿಕೇಟು ಕೊಡುತ್ತಾರಲ್ಲ ಎಂದು ಅಣ್ಣನನ್ನು ಕ್ಯೂನಲ್ಲಿ ನಿಲ್ಲಿಸಿ ನಾನು ಆರಾಧನಾದ lobby cards ನೋಡುತ್ತಾ ಮೈ ಮರೆತೆ. ಆದರೆ ಅಂದು ಚಿತ್ರದ ಪ್ರಥಮ ದಿನವಾದ್ದರಿಂದ ಒಬ್ಬರಿಗೆ ಒಂದೇ ಟಿಕೇಟು ಕೊಟ್ಟರು.  ಕ್ಯೂನಲ್ಲಿ ನಿಲ್ಲದ್ದಕ್ಕೆ ನನಗೆ ಒಮ್ಮೆ ಬೈದ ಅಣ್ಣ  ಟಿಕೆಟು ನನಗೆ ಕೊಟ್ಟು ಸಮೀಪದ ಇನ್ನೊಂದು ಟಾಕೀಸಿನಲ್ಲಿ ಬೇರೆ ಯಾವುದೋ ಚಿತ್ರ ನೋಡಿದರು.  ನಾನು ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ ಅವರು ಮತ್ತು ಆರಾಧನಾ ನೋಡಲೆಂದೇ ಬಂದ ಇನ್ನೊಬ್ಬ ಸೋದರ ಸಂಬಂಧಿ ಜೊತೆಯಲ್ಲಿ ಬರುವುದು ಕಾಣಿಸಿತು.   ಸೋದರ ಸಂಬಂಧಿಯ ಒತ್ತಾಯದ ಮೇಲೆ ಈ ಸಲ  ಮೂವರೂ ಕ್ಯೂನಲ್ಲಿ ನಿಂತು ಟಿಕೆಟು ಪಡೆದು ಮತ್ತೆ ಆರಾಧನಾ ನೋಡಿದೆ.  ಈಗ ಹಾಡುಗಳನ್ನು ಹೊರತುಪಡಿಸಿದರೆ ಆರಾಧನಾ ಬರೀ ಬೋರ್ ಅನ್ನಿಸುತ್ತಿದ್ದರೂ ಅಂದು  ಎರಡು ಸಲ ನೋಡಿದಾಗಲೂ ಬಲು ಆಪ್ಯಾಯಮಾನವೆನ್ನಿಸಿತ್ತು.


ಆರನೇ ತರಗತಿಯಲ್ಲಿರುವಾಗ ಬೆಳ್ತಂಗಡಿಯ ಮರುಳ ಸಿದ್ದೇಶ್ವರ ಎಂಬ ಟೂರಿಂಗ್ ಟಾಕೀಸಿನಲ್ಲಿಯೂ ಮಹಿಷಾಸುರ ಮರ್ದಿನಿ ಮತ್ತು ತೆಲುಗಿನಿಂದ ಡಬ್ ಆದ ಮೋಹಿನಿ ರುಕ್ಮಾಂಗದ ಎಂಬ ಚಿತ್ರಗಳನ್ನು ನೋಡಿದ್ದೆ.  ನಮ್ಮನ್ನು ಕರೆದೊಯ್ದಿದ್ದ ಸಹಪಾಠಿ  ಮುಂದಿನ ದೇಖಾವೆ ಆರಂಭವಾಗುವವರೆಗೆ ಕಾದು ನಮ್ಮನ್ನು ಟೆಂಟಿನ ಹಿಂಬದಿಗೆ ಕರೆದೊಯ್ದು ಅಲ್ಲಿ  ಕಾಣಿಸುತ್ತಿದ್ದ ಪರದೆಯ ಹಿಂಭಾಗದಲ್ಲಿ free ಉಲ್ಟಾ ಸಿನಿಮಾ ತೋರಿಸಿದ್ದ!  ರಾತ್ರಿ ಆ ಸಹಪಾಠಿಯ ಮನೆಯಲ್ಲೇ ಉಳಿದಿದ್ದೆವು. ಈ ಮರುಳ ಸಿದ್ದೇಶ್ವರ ಟೂರಿಂಗ್ ಟಾಕೀಸನ್ನು ಬೆಳ್ತಂಗಡಿಯ ಉದ್ಯಮಿಯೋರ್ವರು ಖರೀದಿಸಿ ಸ್ಥಾಪಿಸಿದ ಭಾರತ್ ಟಾಕೀಸ್ ಈಗಲೂ ಅಲ್ಲಿದೆ. 

ಮನೆಗೆ ರೇಡಿಯೋ ಬಂದ ಮೇಲೆ ಸಿನಿಮಾ ಜಾಹೀರಾತು ಮತ್ತು ಹಾಡುಗಳನ್ನು ಕೇಳುತ್ತಾ ಸಿನಿಮಾ ಟಾಕೀಸಿನ ಕನಸುಗಳು ಜಾಸ್ತಿಯಾಗತೊಡಗಿದ್ದವು. ನಮ್ಮಣ್ಣ ವಾರ್ಷಿಕ ಖರೀದಿಗಾಗಿ ಮಂಗಳೂರಿಗೆ ಹೋಗುವಾಗ ಜೊತೆಗಾರನ ನೆಲೆಯಲ್ಲಿ ನನ್ನನ್ನೂ ಕರೆದೊಯ್ಯುತ್ತಿದ್ದರು. ಅಂಥ ಭೇಟಿಗಳಲ್ಲಿ ಕನಿಷ್ಠ ಒಂದು ಸಿನಿಮಾ ನೋಡಿಯೇ ನೋಡುತ್ತಿದ್ದೆವು. ಕೆಲವೊಮ್ಮೆ ಒಂದು ಥಿಯೇಟರಿನಲ್ಲಿ ಮ್ಯಾಟಿನಿ ಮತ್ತು ಇನ್ನೊಂದರಲ್ಲಿ ಮೊದಲ ದೇಖಾವೆ ನೋಡುವುದೂ ಇತ್ತು. ಕೆಲವು ಸಲ ನಾನು ಹೋಗದಿದ್ದರೂ ಅವರು ನೋಡಿದ ಸಿನಿಮಾದ ಪದ್ಯಾವಳಿ ತಪ್ಪದೆ ತರುತ್ತಿದ್ದರು.  ಅದನ್ನು ನೋಡಿ ನಾನೆ ಸ್ವತಃ ಸಿನಿಮಾ ನೋಡಿದಷ್ಟು ಖುಶಿಪಡುತ್ತಿದ್ದೆ. ಜಾತ್ರೆಯಲ್ಲಿ ಕೊಳ್ಳಲು ಸಿಗುತ್ತಿದ್ದ ಬಯೋಸ್ಕೋಪ್‌ನಲ್ಲಿ  ಹಳೆ ಫಿಲ್ಮಿನ ತುಂಡುಗಳನ್ನು ನೋಡಿ  ನಿಜವಾದ ಸಿನಿಮಾ ನೋಡಿದಂತೆ ಆನಂದಿಸುತ್ತಿದ್ದೆ.  ಟಾರ್ಚ್ ಉಪಯೋಗಿಸಿದರೆ ಬ್ಯಾಟರಿ ಮುಗಿಯುತ್ತದೆಂಬ ಭಯದಿಂದ    ಕಿಟಿಕಿಯಿಂದ ಒಳನುಗ್ಗುತ್ತಿದ್ದ ಬಿಸಿಲುಕೋಲಿನ ಎದುರು ಆ ಫಿಲ್ಮ್ ತುಂಡುಗಳನ್ನು ಹಿಡಿದು ಪೀನಮಸೂರವೊಂದರ ಮೂಲಕ ಗೋಡೆಯ ಮೇಲೆ ದೊಡ್ಡ ಚಿತ್ರ ಮೂಡಿಸುವ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದೆ.


ಹೈಸ್ಕೂಲ್ ವಿಧ್ಯಾಭ್ಯಾಸಕ್ಕಾಗಿ ಉಜಿರೆ ಹಾಸ್ಟೆಲ್ ಸೇರಿದ್ದಾಗ ಬೆಳ್ತಂಗಡಿ ಟಾಕೀಸಿಗೆ ಬಂದ ಸಂತ ತುಕಾರಾಂ ಚಿತ್ರ ನೋಡಲು ವಾರ್ಡನ್ ವಿಶೇಷ ಅನುಮತಿ ನೀಡಿದ್ದರು. ನಂತರ ನಾವು ಕೆಲವು ಮಿತ್ರರು  ಅವರ ಕಣ್ಣು ತಪ್ಪಿಸಿ ಜಂಗ್ಲಿ, ಸುಬ್ಬಾಶಾಸ್ತ್ರಿ, ಪೂರ್ಣಿಮಾ, ತೂಗುದೀಪ ಮುಂತಾದ ಚಿತ್ರಗಳನ್ನು ಅಲ್ಲಿ ನೋಡಿದ್ದಿದೆ.  ಇದಕ್ಕಾಗಿ ರೂಮಿನ ಬಾಗಿಲನ್ನು ಒಳಗಿನಿಂದ ಬಂದು ಮಾಡಿಕೊಂಡು ಸರಳು ಕೀಳಲು ಬರುತ್ತಿದ್ದ ಒಂದು ಕಿಟಿಕಿಯ ಮೂಲಕ ಹೊರಬಿದ್ದು ಬಸ್ಸಿನಲ್ಲಿ ಬೆಳ್ತಂಗಡಿಗೆ ಹೋಗುತ್ತಿದ್ದೆವು. ಸಿನಿಮಾ ಮುಗಿದ ಮೇಲೆ ಮಧ್ಯರಾತ್ರೆ ಸಿಕ್ಕಿದ ವಾಹನದಲ್ಲಿ ಉಜಿರೆಗೆ ಬಂದು ಮತ್ತೆ ಅದೇ ದಾರಿಯ ಮೂಲಕ ಒಳಸೇರಿ ಏನೂ ಅರಿಯದವರಂತೆ ಮಲಗಿ ಬಿಡುತ್ತಿದ್ದೆವು.


1973ರಲ್ಲಿ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರೆತು ಮಂಗಳೂರು ಸೇರಿದ ಮೇಲೆ ಹಸಿದವನಿಗೆ ಮೃಷ್ಟಾನ್ನ ಬಡಿಸಿದಂತಾಯಿತು. ಆಗ ವಾರಾಂತ್ಯದಲ್ಲಿ   ಹಳೆ ಚಿತ್ರಗಳ ಇಳಿಸಿದ ದರದ ಬೆಳಗಿನ ದೇಖಾವೆಗಳಿರುತ್ತಿದ್ದವು. ಇವುಗಳ ವಿವರ ಇರುತ್ತಿದ್ದ ಶುಕ್ರವಾರದ ಪತ್ರಿಕೆ  ಈ ಮೃಷ್ಟಾನ್ನ ಭೋಜನಕ್ಕೆ ಆಹ್ವಾನಪತ್ರಿಕೆಯಾಗಿರುತ್ತಿತ್ತು. ಕೆಲವು ಹಳೆ ಚಿತ್ರಗಳ ಹೊಸ ಪ್ರಿಂಟುಗಳೂ regular ದೇಖಾವೆಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು.  ಅತ್ಯುತ್ತಮ ಧ್ವನಿ ವ್ಯವಸ್ಥೆಯ ಕಾರಣದಿಂದ  ನನ್ನ ಮೆಚ್ಚಿನದಾಗಿದ್ದ ರೂಪವಾಣಿ ಟಾಕೀಸಿನಲ್ಲಿ ಮುಂಬರುವ ಬೆಳಗಿನ ದೇಖಾವೆಯ ಪೋಸ್ಟರನ್ನು ಒಂದು ವಾರ ಮುಂಚಿತವಾಗಿಯೇ ಒಂದು ನಿರ್ದಿಷ್ಟ  ಜಾಗದಲ್ಲಿ ಹಚ್ಚಿಡುತ್ತಿದ್ದರು. ಅದು ನನ್ನ ಮೆಚ್ಚಿನ ಚಿತ್ರವಾಗಿದ್ದರೆ ಆ ಒಂದು ವಾರದ ಕಾಯುವಿಕೆ ಬಲು ರೋಮಾಂಚಕವಾಗಿರುತ್ತಿತ್ತು.   ಆಗ ಬಾಲ್ಕನಿಗೆ regular ದರ 5 ರೂಪಾಯಿ ಮತ್ತು ಇಳಿಸಿದ ದರ 2 ರೂಪಾಯಿ ಇತ್ತು. ಆ ವರ್ಷ ನಾನು ಮೇ ತಿಂಗಳಿಂದ ಡಿಸೆಂಬರ್ ವರೆಗೆ  ಅಲ್ಲಿ ತನಕ  ಕನಸಿನಲ್ಲಿ ಕಾಣುತ್ತಿದ್ದ 56  ಸಿನಿಮಾಗಳನ್ನು ನೋಡಿದೆ!  ಈ trend ಮುಂದುವರಿದು 1974ರಲ್ಲಿ  69  ಮತ್ತು  1975ರಲ್ಲಿ  63  ಬಾರಿ ಟಾಕೀಸುಗಳಿಗೆ ಹಾಜರಿ ಹಾಕಿದೆ!! ಆಗ ನಾನು ನೋಡಿದ ಚಿತ್ರಗಳ ಲಿಖಿತ ದಾಖಲೆ ಇರಿಸುತ್ತಿದ್ದುದರಿಂದ ಈ ನಿಖರ ಅಂಕಿ ಅಂಶಗಳನ್ನು ಒದಗಿಸಲು ಸಾಧ್ಯವಾಯಿತು.  ಆಗ ನನ್ನ ಮೆಚ್ಚಿನ ಗಾಯಕರಾದ  ರಫಿ ಹಿನ್ನೆಲೆಗೆ ಸರಿದಿದ್ದರು. ಕೆಲವೇ ಸಮಯದಲ್ಲಿ ಪಿ.ಬಿ.ಶ್ರೀನಿವಾಸ್ ಕೂಡ ಅದೇ ಹಾದಿ ಹಿಡಿಯಬೇಕಾಯಿತು.  ಅವರ ಹಾಡುಗಳಿಲ್ಲ ಎಂಬ ಕಾರಣಕ್ಕಾಗಿ ನಾನು ಅನೇಕ ಹೊಸ ಚಿತ್ರಗಳನ್ನು ನೋಡುತ್ತಿರಲಿಲ್ಲ.  ಇಲ್ಲದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತಿತ್ತು.  ಮುಂದೆ ಜೂನಿಯರ್ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿ ತರಬೇತಿಗಾಗಿ ಬೆಂಗಳೂರಿಗೆ ಹೋದಾಗ ಅಲ್ಲಿಯ ಪರಿಮಳ, ಪ್ರದೀಪ್ ಮುಂತಾದ ಟಾಕೀಸುಗಳಲ್ಲಿಯೂ ಬಹಳ ಸಮಯದಿಂದ ನೋಡಲು ಕಾತರಿಸುತ್ತಿದ್ದ ಅನೇಕ ಹಳೆ ಚಿತ್ರಗಳು ನೋಡಲು ಸಿಕ್ಕಿದವು.  ಒಮ್ಮೆ ಪ್ರದೀಪ್ ಟಾಕೀಸಿನಲ್ಲಿ ಧೂಲ್ ಕಾ ಫೂಲ್ ಚಿತ್ರ ನೋಡಲು ಹೋದಾಗ ದೊಡ್ಡ ಕ್ಯೂ ಇದ್ದರೂ ಸುಲಭವಾಗಿ ಟಿಕೇಟು ಸಿಕ್ಕಿದ ಖುಶಿಯಲ್ಲಿ ಕೊಟ್ಟ ದೊಡ್ಡ ನೋಟಿಗೆ ಬಾಕಿ ಚಿಲ್ಲರೆ ಪಡೆಯುವುದನ್ನು ಮರೆತು ಮುಂದೆ ಸಾಗಿದ್ದೆ.  ಮತ್ತೆ ಹಿಂದೆ ಬಂದು ಕ್ಯೂ ಒಳಗೆ ತೂರಿ ಕೌಂಟರಿನವನೊಡನೆ ವಿಚಾರಿಸಲು ಪ್ರಯತ್ನಿಸಿದಾಗ ಆತ ಸಿಟ್ಟುಗೊಂಡು  ಇಂಟರ್‌ವಲ್ ಹೊತ್ತಿಗೆ ಬರಬೇಕೆಂದೂ ಕೊನೆಯಲ್ಲಿ ಎಣಿಸಿ ತಾಳೆ ಮಾಡುವಾಗ ಹೆಚ್ಚುವರಿ ದುಡ್ಡು ಉಳಿದರೆ ಕೊಡುವುದಾಗಿಯೂ ತಿಳಿಸಿದ.  ಇಂಟರ್‌ವಲ್‌ನಲ್ಲಿ ಹೋಗಿ ವಿಚಾರಿಸಿದಾಗ ಹೇಳಿದಂತೆಯೇ ಚಿಲ್ಲರೆ ದುಡ್ಡಿನ ಅಷ್ಟು  ರಾಶಿ ಕೊಟ್ಟ.  ಎಣಿಸುವ ಗೋಜಿಗೆ ಹೋಗದೆ ಕಿಸೆಗೆ ಹಾಕಿದೆ.  ಒಂದೆರಡು ಮಾರ್ನಿಂಗ್ ಶೋಗಳಲ್ಲಿ ಅರ್ಧ ಸಿನಿಮಾ ಆಗುವಾಗ ಪ್ರಾಜೆಕ್ಟರ್ ಕೈ ಕೊಟ್ಟು ಮುಂದಿನ ವಾರದ ಸಿನಿಮಾಗೆ  ಪಾಸ್ ಪಡೆದದ್ದೂ ಇದೆ. 

ಟಾಕೀಸುಗಳಲ್ಲಿ ಪೇವ್‌ಮೆಂಟ್   ಎದುರಿನ ಹಿಂಬದಿಯ ಕೊನೇ ಸಾಲಿನ  ಸೀಟು ಯಾವಾಗಲೂ ನನ್ನ ಆದ್ಯತೆಯಾಗಿರುತ್ತಿತ್ತು. ಏಕೆಂದರೆ ಅಲ್ಲಿ  ಮುಂದೆ ಕೂತವರ ತಲೆ ಅಡ್ಡಬರುವ ಸಮಸ್ಯೆ ಇರುತ್ತಿರಲಿಲ್ಲ. ತೆರೆಯ ಹಿಂದಿನಿಂದ ಕೇಳಿಬರುವ ಅಚ್ಚ ಹೊಸ ಚಿತ್ರಗೀತೆಗಳನ್ನು ಕೇಳುತ್ತಾ ತೆರೆಯ ಮೇಲೆ Welcome ಸ್ಲೈಡ್ ಬೀಳುವುದನ್ನು ಕಾಯುವುದು ಹಿತಕರವಾದ ಅನುಭವವಾಗಿರುತ್ತಿತ್ತು. ಕೆಲವು ಟಾಕೀಸುಗಳಲ್ಲಿ ದೀಪಗಳು ಆರಿ ತೆರೆಯೆ ಮೇಲೆ ಚಿತ್ರಮೂಡಲು ಆರಂಭಿಸುವ ಹೊತ್ತಲ್ಲಿ ಒಂದು ನಿರ್ದಿಷ್ಟ ಗೀತೆ ಅಥವಾ ಟ್ಯೂನ್ ಕೇಳಿಬರುತ್ತಿತ್ತು.    ಜಾಹೀರಾತಿನ slides ಮತ್ತು ಕಿರುಚಿತ್ರಗಳ ನಂತರ ಮುಂಬರುವ ಚಿತ್ರಗಳ ಟ್ರೈಲರ್ ತೋರಿಸುತ್ತಿದ್ದರು.  ಅವುಗಳನ್ನು ಅನೇಕ ಸಲ ನೋಡಿ ಸಿನಿಮಾ ಬರುವುದಕ್ಕೆ ಮೊದಲೇ ಕೆಲವು ಡಯಲಾಗುಗಳು ನಮಗೆ ಕಂಠಪಾಠವಾಗಿರುತ್ತಿದ್ದವು. ಕೆಲವು ಸಲ ಟ್ರೈಲರಲ್ಲಿ ಇದ್ದ ದೃಶ್ಯ ಸಿನಿಮಾದಲ್ಲಿ ಇಲ್ಲದಿರುವುದೂ ಇತ್ತು. ಸಾಮಾನ್ಯವಾಗಿ ಟ್ರೈಲರ್‍ಗಳ ಗುಣಮಟ್ಟ ಕಳಪೆಯಾಗಿರುತ್ತಿತ್ತು. ಅಂದಿನ ದಿನಗಳಲ್ಲಿ ಸಿನಿಮಾ ಆರಂಭದ ಮೊದಲು ವಾರ್ತಾ ಇಲಾಖೆಯ ನ್ಯೂಸ್ ರೀಲ್ ಪ್ರದರ್ಶನ ಕಡ್ಡಾಯವಾಗಿತ್ತು.  ಕೆಲವು ನ್ಯೂಸ್ ರೀಲುಗಳು ಅತಿ ದೀರ್ಘವಾಗಿ ಬೋರ್ ಹೊಡೆಸುವಂತಿರುತ್ತಿದ್ದವು.  ಆಗ ಪ್ರೇಕ್ಷಕರ ಸಿಳ್ಳೆಗಳಿಗೆ ಮಣಿದು ಅದನ್ನು ಅಲ್ಲಿಗೇ ಮೊಟಕುಗೊಳಿಸಿ ಮುಖ್ಯ ಚಿತ್ರ ಆರಂಭಿಸಿದಾಗ ನನಗೂ ಖುಶಿ ಆಗುತ್ತಿತ್ತು. ಕೆಲವು ಇಂಗ್ಲಿಷ್ ಸಿನಿಮಾಗಳ ಅವಧಿ ತುಂಬಾ ಕಮ್ಮಿ ಇರುತ್ತಿದ್ದುದರಿಂದ ಜಾಹೀರಾತು , ಟ್ರೈಲರ್ ಮತ್ತು ನ್ಯೂಸ್ ರೀಲು ಇತ್ಯಾದಿಗಳಗಳ ನಂತರ ಕಾರ್ಟೂನ್ ಚಿತ್ರ ತೋರಿಸುತ್ತಿದ್ದರು.  ಅಷ್ಟರಲ್ಲಿ ಇಂಟರ್‌ವಲ್ ಆಗುತ್ತಿತ್ತು. ಸಿನಿಮಾ ಶುರುವಾದ ಮೇಲೆ ಆಗಾಗ ಹಿಂದೆ ತಿರುಗಿ ಯಾವ ಕಂಡಿಯ ಮೂಲಕ ಪ್ರಾಜೆಕ್ಟರ್ ಬೆಳಕು ಬರುತ್ತಿದೆ ಎಂದೂ ನಾನು ನೋಡುವುದಿತ್ತು.   ನಾವು ಮುಂಗಡ ಬುಕಿಂಗ್ ಮಾಡಿದ ದಿನ ಟಾಕೀಸು ತುಂಬು ತುಳುಕುತ್ತಿದ್ದರೆ, ಬುಕಿಂಗ್ ಮಾಡದ ದಿನ ಖಾಲಿಯಾಗಿದ್ದರೆ ಖುಶಿ ಆಗುತ್ತಿತ್ತು.  ಸಿನಿಮಾ ನೋಡುವಾಗ ಕೆಲವೊಮ್ಮೆ ಅತೀ ಬಾಯಾರಿಕೆಯಾಗುವುದಿತ್ತು.  ಆಗ ಸಿನಿಮಾದಲ್ಲಿ ತಿಳಿ ನೀರ ತೊರೆ ಕಂಡರೆ ಅಥವಾ ಪಾತ್ರವೊಂದು ತಂಪು ಪಾನೀಯ ಕುಡಿಯುವ  ದೃಶ್ಯ ಬಂದರೆ ಬಾಯಾರಿಕೆ ಮತ್ತೂ ಹೆಚ್ಚಾಗುತ್ತಿತ್ತು! 

ಅಂದಿನ ಸಿನಿಮಾಗಳಲ್ಲಿ  ಆಪ್ಟಿಕಲ್ track ಮೂಲಕ ಪುನರುತ್ಪತ್ತಿಯಾಗುತ್ತಿದ್ದ ಆಡಿಯೊ  ಇರುತ್ತಿದ್ದುದರಿಂದ ಟಾಕೀಸುಗಳು ಮಾತ್ರವಲ್ಲ, ಟೆಂಟ್ ಸಿನಿಮಾಗಳಲ್ಲೂ ಸುಸ್ಪಷ್ಟ ಶ್ರೀಮಂತ ಧ್ವನಿ ಕೇಳಿಸುತ್ತಿತ್ತು. ಮೊದಲೇ ರೇಡಿಯೋದಲ್ಲಿ, ಧ್ವನಿವರ್ಧಕಗಳಲ್ಲಿ ಹಾಡುಗಳನ್ನು ಕೇಳಿರುತ್ತಿದ್ದರೂ ಸಿನಿಮಾದ ಭಾಗವಾಗಿ  ಅವುಗಳನ್ನು ಕೇಳುವುದು ಅನನ್ಯ ಅನುಭವ ನೀಡುತ್ತಿತ್ತು.  ಈಗಿನ ಡಿ.ಟಿ.ಎಸ್ , Dolby ಮುಂತಾದ ಯಾವ  ತಂತ್ರಜ್ಞಾನವೂ ಅದನ್ನು ಸರಿಗಟ್ಟಲಾರದು.  ಮೂರು ಗಂಟೆಗಳ ಕಾಲ ಹೊರಗಿನ ಪ್ರಪಂಚವನ್ನು ಮರೆಸಿ ನಮ್ಮನ್ನು ಕನಸಿನ ಲೋಕಕ್ಕೆ ಒಯ್ಯುತ್ತಿದ್ದ ಆ ಸಿನಿಮಾಗಳು ಅಂದಿನ ಆ  ಟಾಕೀಸುಗಳು ಇನ್ನು ಕನಸು ಮಾತ್ರ.


11-2-2018






15 comments:

  1. ನಾನು ಕುಶಾಲನಗರದಲ್ಲಿ ಏಳನೇ ತರಗತಿಯಲ್ಲಿ ಕಲಿಯುತಿದ್ದಾಗ ಮೈಸೂರಿಗೆ ಟ್ರಿಪ್ ಕರೆದುಕೊಂಡು ಬಂದಿದ್ದರು. ಆಗ ನೋಡಿದ ಸಿನಿಮಾ ಆರಾಧನಾ. ಒಲಂಪಿಯಾದಲ್ಲಿ. ನಾನು ಮೊದಲ ಬಾರಿಗೆ ಒಂದು ಥೀಯೇಟರ್ ನಲ್ಲಿ ನೋಡಿದ ಸಿನಿಮಾ. ಆ ಹಾಡುಗಳಂತೂ ಮೊದಲ ಬಾರಿಗೆ ಕೇಳಿದಾಗಲೇ ಒಂದು ಕಿನ್ನರ ಲೋಕವನ್ನು ಸೃಷ್ಟಿ ಮಾಡಿದ್ದವು.

    ReplyDelete
  2. ಸುಂದರ ವಿವರಣೆ. ಸಿನಿಮಾ ಥಿಯೇಟರ್ ಗೆ ಸಂಬಂಧಿಸಿದ ಎಲ್ಲಾ ವಿವರಗಳೂ, ಕಣ್ಮುಂದೆಯೇ ಬಂದಂತಾಗಿ, ನಾನೂ ನನ್ನ ಬಾಲ್ಯದ ಸಿನಿಮಾ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಮತ್ತೊಮ್ಮೆ ಆ ಅನುಭವಗಳನ್ನು ಪುನಃ ತಾಜಾ ಮಾಡಿಕೊಂಡೆ. ನಿಮ್ಮ ಹಾಗೂ ನಿಮ್ಮ ಅಣ್ಣನ ಆತ್ಮೀಯ ಬಾಂಧವ್ಯದ ಬಗ್ಗೆಯೂ ಈ ಪ್ರಸಂಗಗಳು ಬೆಳಕು ಚೆಲ್ಲಿವೆ. ಹೈಸ್ಕೂಲ್ ಹಾಸ್ಟೆಲ್ ನಲ್ಲಿದ್ದಾಗ ನೀವು ಸಿನಿಮಾ ನೋಡಲು ಮಾಡಿದ್ದ ಕಸರತ್ತುಗಳಂತೂ ನಗೆ ಉಕ್ಕಿಸಿದವು. ಹೀಗೆಲ್ಲಾ ಏನಾದರೊಂದು ತರಲೆಗಳನ್ನು ಮಾಡದಿದ್ದರೆ ಅದೆಂತಾ ಹಾಸ್ಟೆಲ್ ಲೈಫು? ನಾನು ಡಿಗ್ರಿ ಓದುತ್ತಿದ್ದಾಗ, ಮೈಸೂರು ಮಹಾರಾಣೀಸ್ ಹಾಸ್ಟೆಲ್ಲಿನ ಗೇಟುಗಳು ಸಂಜೆ ಆರೂವರೆಗೆ ಮುಚ್ಚಿ ಬಿಡುತ್ತಿದ್ದವು. ನಾನು, ಗೆಳತಿಯರೊಂದಿಗೆ ಮ್ಯಾಟಿನಿ ಶೋ ನೋಡಿ ಬರುವಾಗ ಕೆಲವು ಸಲ current ಹೋಗಿ ಬಿಡುತ್ತಿತ್ತು. ಆಗ ಜೆನರೇಟರ್ ಗಳು ಇರುತ್ತಿರಲಿಲ್ಲ. ಕರೆಂಟ್ ಬರುವವರೆಗೂ ಕಾದು, ನಂತರ ಮತ್ತೊಮ್ಮೆ ಸಿನಿಮಾ ಶುರುವಾಗಿ, ಮುಗಿದು, ನಾವು ಹಾಸ್ಟೆಲ್ ಸೇರುವ ಹೊತ್ತಿಗೆ ಮುಚ್ಚಿದ್ದ ಗೇಟ್ಗಳನ್ನು ನೋಡಿ, ಎದೆ ಬಡಿತಹೆಚ್ಚಾಗಿ, ಯಾರೂ ನೋಡುತ್ತಿಲ್ಲವೆಂದು ಖಚಿತಪಡಿಸಿಕೊಂಡು, ಆ ದೊಡ್ಡ ಗೇಟನ್ನು ಹತ್ತಿ, ನಂತರ ಹಾರಿ, ಇಳಿದು, ನಮ್ಮ ರೂಮ್ ಗಳನ್ನು ಸೇರುತ್ತಿದ್ದ ನೆನಪುಗಳು ಬಂದು, ನನ್ನ ಮುಖದಲ್ಲಿ ಮಂದಹಾಸ ಮೂಡಿತು. ನಂತರದ ದಿನಗಳಲ್ಲಿ ಹೆದರಿಕೆ ಹೋಗಿ, ಹತ್ತಿ ಹಾರಿ ಇಳಿಯುವ ಕಲೆ ಕರತಲಾಮಲಕವಾಗಿ ಬಿಟ್ಟಿತ್ತು.

    Mangala Gundappa (FB)

    ReplyDelete
  3. ನೆನಪಿನ ಬುತ್ತಿಯನ್ನು ಬಹಳ ಚೆನ್ನಾಗಿ ಹೆಕ್ಕಿ ಬರೆದಿದ್ದೀರಾ... ಕೆಲವು ವಿಚಾರಗಳಲ್ಲಿ ನಿಮ್ಮ ಮಂಗಳೂರಿನವರು ನಮಗಿಂತಲೂ ವಾಸಿ. ನಮಗೆ ಆಗ ಕೊಡುತ್ತಿದ್ದದ್ದು ಒಬ್ಬರಿಗೆ ಒಂದೇ ಟಿಕೆಟ್. ಹಾಗಾಗಿ ನಮ್ಮ ಮನೆ ಕೆಲಸದ ಅಜ್ಜಿಯ ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಗೂ ಒಂದು ಟಿಕೆಟ್‌ ಖರಿದಿಸಲು ಹೇಳುತ್ತಿದ್ದೆವು. ಈ ಅಜ್ಜಿ, ಅವಳ ಮೊಮ್ಮಕ್ಕಳು ನಮ್ಮ ಮನೆಯ ಸದಸ್ಯರ೦ತೇ ಆಗಿಹೋಗಿದ್ದರು. ಟಿಕೆಟ್‌ ತೆಗೆದುಕೊಳ್ಳಲು ಲೈನ್ ನಲ್ಲಿ ನಿಂತಾಗ, ಎಲ್ಲಾ ಸ್ತೋತ್ರಗಳೂ ಪಠಣವಾಗುತ್ತಿತ್ತು. ಸಿಕ್ಕ ನಂತರ ಪರಾರಿ. ಇದು ಸಾಲದೆಂಬಂತೆ ಅದೇ ಚಿತ್ರವು ಟೆಂಟ್ ನಲ್ಲಿ ಬಿಡುಗಡೆಯಾದಾಗ, ಮತ್ತೆ ೨-೩ ಬಾರಿ ನೋಡುತ್ತಿದ್ದೆ. Of course, ಎಲ್ಲವೂ ಕನ್ನಡ ಚಿತ್ರಗಳೇ.....ಎಲ್ಲಿ ಹೋದವು ಆ ಸುಂದರ ದಿನಗಳು ?...
    ಸರಸ್ವತಿ ವಟ್ಟಂ.

    ReplyDelete
  4. ಮೈಸೂರಲ್ಲಿ ಶಿವರಾಂ ಪೇಟೆ ಯಲ್ಲಿರುವ ರಾಜಕಮಲ್ ಟಾಕೀಸ್ನ ಸಾಲಿನಲ್ಲಿ ಇದ್ದ ಮನೆಯಲ್ಲಿ ಹುಟ್ಟಿ ಬೆಳೆದ ನಮಗಂತೂ ಅದು ಎರಡನೇ ಮನೆ ಆಗಿತ್ತು. ಆ ಟಾಕೀಸ್ ಮಾಲೀಕರೇ ನಮ್ಮ ಮನೆ ಮಾಲೀಕರು. ಅಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್, ಟಿಕೆಟ್ ಕೊಡುವವರು, ಕ್ಯಾಂಟೀನ್ ನಡೆಸುತ್ತಿದ್ದವರು ಎಲ್ಲರೂ ನಮ್ಮ ನೆರೆಯವರು. ಹಾಗಾಗಿ ನಾವು ಚಿಕ್ಕವರಾಗಿದ್ದಾಗ ನಮಗೆ ಎಲ್ಲಾ ಸಿನಿಮಾಗಳಿಗೆ ಉಚಿತ ಪ್ರವೇಶ. ಬರೀ ತಮಿಳು ಸಿನಿಮಾ ಅದೂ MGR ಅವರ ಚಿತ್ರಗಳು. ಅದೂ ಬಿಟ್ರೆ ರಾಜಕುಮಾರ್ ಅವರ ಚಿತ್ರಗಳು. ತಮಿಳು ಸಿನಿಮಾ ನೋಡಿ ನೋಡಿ ತಮಿಳು ಭಾಷಾ ಪಾರಂಗತರಾಗಿ ಹೋಗಿದ್ದೆವು. ಅಲ್ಲಿ ಸಿಗುತ್ತಿದ್ದ 5, 10 ಪೈಸೆಗೆ ಸಿಗುತ್ತಿದ್ದ ಚಕ್ಕುಲಿ ಕೋಡುಬಳೆ ಕಡ್ಲೆ ಚಿಕ್ಕಿ ಇವುಗಳ ರುಚಿ ಮರೆಯಲಾಗದು. ಮನೆಯಲ್ಲಿ ಶುದ್ಧವಾಗಿ ಬೀಸಿ ಹಿಟ್ಟುಮಾಡಿದ್ದ ಚಕ್ಕುಲಿಯಲ್ಲೂ ಅಷ್ಟು ರುಚಿ ಇರುತ್ತಿರಲಿಲ್ಲ. ಅಲ್ಲಿ ಬರುತ್ತಿದ್ದ ಒಂದೊಂದು ಸಿನಿಮಾಗಳನ್ನು ಅದೆಷ್ಟು ಸಲ ನೋಡುತ್ತಿದ್ದೀವಿ ಅಂತಾ ಲೆಕ್ಕವೇ ಇಲ್ಲ. ಮುಂದೆ ಮಾರುತ್ತಿದ್ದ ಸೌತೆಕಾಯಿ ಮಾವಿನಕಾಯಿ ಸೀಬೆಕಾಯಿ ಉಪ್ಪು ಕಾರ ಹಚ್ಚಿಕೊಂಡು ತಿಂದದ್ದು ಲೆಕ್ಕವೇ ಇಲ್ಲ ಅದೂ ಮನೆಯ ದೊಡ್ಡವರಿಗೆ ಗೊತ್ತಾಗದಂತೆ. ಹೊರಗಡೆ ಮಾರುವುದನ್ನು ತಿನ್ನುವುದು ನಿಷಿದ್ಧ ಆಗೆಲ್ಲ. ನಮಗೇ ಬುದ್ಧಿ ಬಂದು ಸಂಕೋಚ ಪಡುವವರೆಗೆ ಟಿಕೆಟ್ ಇಲ್ಲದೆ ಸಿನಿಮಾ ನೋಡಿದ್ದೇವೆ. ಸೆಕೆಂಡ್ ಶೋ ನಲ್ಲಿ ಸಿನಿಮಾ ಸಂಭಾಷಣೆ ಹಾಡು ಎಲ್ಲಾ ಕೇಳಿಸುತ್ತಿತ್ತು. ಹೀಗಾಗಿ ನಮ್ಮೆಲ್ಲರ ಅಂದರೆ ಅಕ್ಕತಂಗಿ ಮತ್ತು ಅಲ್ಲೇ ಇದ್ದ ಗೆಳತಿಯರ ಬಾಲ್ಯಕ್ಕೂ ರಾಜಕಮಲ್ ಟಾಕೀಸ್ಗೂ ಬಿಡಿಸಲಾರದ ಬಂಧ. ಮೂರ್ನಾಲ್ಕು ವರ್ಷಗಳ ಹಿಂದೆ ಆ ರಸ್ತೆಯಲ್ಲಿರುವ ಒಬ್ಬರ ಮನೆಗೆ ಹೋದಾಗ ಅದನ್ನು ಒಡೆದು ಹಾಕುತ್ತಿದ್ದ ದೃಶ್ಯ ನೋಡಿ ಸಂಕಟವಾಯಿತು. ನಿಮ್ಮ ಲೇಖನ ಓದಿ ಇದೆಲ್ಲ ನೆನಪುಗಳ ಮೆರವಣಿಗೆ ಸಾಲಾಗಿ ಬಂತು. ಧನ್ಯವಾದಗಳು.

    Lakshmi GN (FB)

    ReplyDelete
  5. ಉತ್ತಮ ಅನುಭವ. ಬಹಳ ಇಷ್ಟವಾಯಿತು ಲೇಖನ.

    Ganesh Bhat (FB)

    ReplyDelete
  6. ನಮ್ಮಕಡೆ ಟೂರಿಂಗ್ ಟಾಕೀಸುಗಳನ್ನು ಜಾನುವಾರು ಜಾತ್ರೆಯಲ್ಲಿ ಹಾಕುತ್ತಿದ್ದರು.

    ನಮ್ಮೂರಿನ ಸಮೀಪ ಇದ್ದ ಸಪ್ಪಲಮ್ಮನ ಜಾತ್ರೆಯಲ್ಲಿ ಮರಳಿನ ಗುಡ್ಡೆಯ ಮೇಲೆ ಕುಳಿತು 'ಬಾಲನಾಗಮ್ಮ' ನೋಡಿದ ನೆನಪು ಇದೆ.

    ಇನ್ನು ವರ್ಷಕ್ಕೊಮ್ಮೆ ನಮ್ಮಮ್ಮನ ಜೊತೆ ಅವರ ತವರೂರಿಗೆ ಬಂದರೆ ನಮ್ಮ ಸೋದರ ಮಾವ ತಪ್ಪದೆ ಒಂದು ಸಿನಿಮಾ ತೋರಿಸುತ್ತಿದ್ದರು. 1955 ಕ್ಕೇ ಕಟ್ಟಿದ್ದ ಸುಸಜ್ಜಿತ 'ಸಂಗಮ್' ಟಾಕೀಸಿನಲ್ಲಿ ಸಿನಿಮಾ ವೀಕ್ಷಣೆ ಒಳ್ಳೆ ಹಿತ ಕೊಡುತ್ತಿತ್ತು. ನಾಗೇಶ್ವರ ರಾವ್ ಮತ್ತು ಎನ್ ಟಿ ಆರ್ ಸಿನಿಮಾಗಳನ್ನೇ ಆಗ ನಾವು ಹೆಚ್ಚಾಗಿ ನೋಡಿದ್ದು.
    Sudarshan Reddi - FB

    ReplyDelete
  7. ನಾನೂ ಸಿನೀಮಾದ ದೊಡ್ಡ ಹುಚ್ಚನೇ ಆಗಿದ್ದೆ. ಜ್ಯೋತಿಯಲ್ಲಿ ನಾನು ನೋಡಿದ ಮೊದಲ ಸಿನೇಮ "ಜೇನುಗೂಡು".

    ಮೈಸೂರಲ್ಲಿ ಡಿಗ್ರಿ ಮಾಡ್ತಾ ಇದ್ದಾಗ
    ಮೊದಲ ವರ್ಷ 39
    ಎರಡನೇ ವರ್ಷ 70
    ಮೂರನೇ ವರ್ಷ 138
    ಸಿನೇಮ ನೋಡಿದ್ದೆ.
    ಹೆಸರು, ಟಾಕೀಸಿನ ಹೆಸರುಗಳನ್ನು
    ಸಿನೇಮಾಕ್ಕೆ ರೇಟಿಂಗ್ ಕೊಟ್ಟು ಬರೆದಿಟ್ಟದ್ದು ಈಗಲೂ ಇದೆ.

    ಹಿಂದಿ ಮತ್ತೆ ಇಂಗ್ಲಿಷ್ ಅಪರೂಪಕ್ಕೆ ಕನ್ನಡ.

    ಪದವಿ ಕೊನೆಯ ವರ್ಷ ಮಾರ್ಚ್ ತಿಂಗಳಿನಲ್ಲೇ 30 ಸಿನೇಮ.

    ದಾಖಲೆಗೆಂದು ಒಂದೇ ದಿನ 5 ಸಿನೇಮ ನೋಡಿದ್ದೆ. ಅಂದರೆ ಸಾಮಾನ್ಯವಾಗಿ
    ನಾಲ್ಕು ನೋಡಲು ಸಾದ್ಯ.
    ನಾನು ಒಂದು ಫಿಲ್ಮ್ ಸೊಸೈಟಿಯ
    ಸದಸ್ಯನಾಗಿದ್ದುದರಿಂದ
    ಮ್ಯಾಟಿನಿ ಮತ್ತು ಫಸ್ಟ್ ಶೋಗಳ ನಡುವೆ
    ಒಂದು ಆರ್ಟ್ ಫಿಲ್ಮ್.

    " ಮೂರ್ತಿ ಸಿಗಬೇಕಿದ್ದರೆ ಯಾವುದಾದರೂ
    ಸಿನೇಮಾ ಟಾಕೀಸ್ ಬಳಿ ಹುಡುಕಿ"
    ಎನ್ನುವ ಮಾತು ಚಲಾವಣೆಯಲ್ಲಿತ್ತು.

    Murthy Deraje - FB

    ReplyDelete
  8. ನನಗೆ ಥಿಯೇಟರ್ನಲ್ಲಿ ಮೂವಿ ನೋಡುವ ಹುಚ್ಚು ಈಗಲೂ ಇದೆ. ನನ್ನಿಷ್ಟದ ಕೆಲ ಮೂವಿಗಳನ್ನು theater ನಲ್ಲೆ ನೋಡುತ್ತೇನೆ. ಇಲ್ಲಿ ಕನ್ನಡ ಚಿತ್ರಗಳು ಅಪರೂಪವಾದ್ದರಿಂದ, ಭಾಷಾಭಿಮಾನ ಹಾಗು ಚಿತ್ರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚಿತ್ರಮಂದಿರಕ್ಕೆ ಹೋಗುತ್ತೇನೆ . ನಿಮಗೆ ವಾದ್ಯಗಳು ಮನ ಸೆಳೆದರೆ
    ನನಗೆ ನಟನೆ ಬಗ್ಗೆ ಒಲವಿತ್ತು. ಇತ್ತೀಚೆಗಿನ ದಿನಗಳಲ್ಲಿ ಚಿತ್ರಕಥೆ ಹಾಗು ಸಂಭಾಷಣೆ ಬರೆಯುವ ಆಸೆ ಹುಟ್ಟಿತ್ತು
    ಕನ್ನಡ ಹಿಂದಿ ಬಿಟ್ಟರೆ ಬೇರೆ ಭಾಷೆ ಚಿತ್ರಗಳಿಗೆ ದುಡ್ಡು ಖರ್ಚು ಮಾಡುವುದಿಲ್ಲ ಅನ್ನುವ policy ಅಂದಿಂದ ಇಲ್ಲಿಯವರೆಗೆ. ಸಾಗರಸಂಗಮಮ್ ಮತ್ತು ನಾಯಗನ್ ನಾ ಥಿಯೇಟರ್ ಲಿ ಬಲವಂತವಾಗಿ ನೋಡಿದ ಚಿತ್ರ
    ಅದಕ್ಕೆ ದುಡ್ಡು ನನ್ನನ್ನು ಬಲವಂತ ಮಾಡಿದ ಸ್ನೇತೆಯರೇ ಕೊಟ್ಟಿದ್ದು
    ಕೋವಿಡ್ ಟೈಮ್ ನಲ್ಲೂ ನಾನು ಎರಡು ಕನ್ನಡ ಚಿತ್ರ theater ಲಿ ನೋಡಿದ್ದೆ. ಅಣ್ಣಾವ್ರ ಚಿತ್ರಗಳು ಹಾಗು ಪುನೀತ್ ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೆ . Puneet ಗೆ ನಾವು ಫಸ್ಟ್ ಡೇ ಫಸ್ಟ್ ಶೋ ಗಿರಾಕಿಗಳು ಅಂತಾನೆ ಪರಿಚಯಿಸಿಕೊಂಡಿದ್ದೆ. ಅಭಿಮಾನಿ ದೇವ್ರು ಪಟ್ಟ ಸುಮ್ಮನೇ ನೇ ?😃
    ಟೂರಿಂಗ್ ಟೆಂಟ್ನಲ್ಲಿ ನಾನು ನನ್ನ ಅಣ್ಣ ರಾಜದುರ್ಗದ ರಹಸ್ಯ ಹಾಗು ರತ್ನಮಂಜರಿ ನೋಡಿದ್ದೆವು.

    mEEna Bharadwaj - FB

    ReplyDelete
  9. You have an amazing memory! Your style of writing is also equally amazing 🤩. Thoroughly enjoyed the article. I remember seeing a couple of movies in the ‘Tent cinema’ in Belthangady.

    Govinda Hebbar - FB

    ReplyDelete
  10. ಬೆಳ್ತಂಗಡಿಯ ಮರಳು ಸಿದ್ದೇಶ್ವರ ಟೂರಿಂಗ್ ಟಾಕೀಸ್ ಹೋಳೆ ಬದಿಯ ಟೆಂಟ್ ನಲ್ಲಿತ್ತು, ಆರು ತಿಂಗಳ ಪರವಾನಿಗೆ, ಮಳೆ ಬಂದರೆ ಕೋಡೆಯು ಬೇಕು,ಒಮ್ಮೆ ಇದರ ಪರದೆಗೆ ಬೆಂಕಿ ಹಿಡಿದಿತ್ತು, ಎತ್ತಿನ ಗಾಡಿಗೆ ಮೈಕ್ ಕಟ್ಟಿ ಊರೆಲ್ಲಾ ನೋಟಿಸು ಬಿಸಾಡುತ್ತಾ ಹೋಗುತ್ತಿದ್ದರು, ಅದನ್ನು ಹೆಕ್ಕಿ ತರುವುದು ಒಂದು ಖುಷಿ, ವಾರಕ್ಕೆರಡು ಬಾರಿ ಬದಲಾಗುವ ಸಿನೆಮಾ. ಹೀಗೆ ಚ್ಚಾಗಿ ಬರುತ್ತಿದ್ದದ್ದು mg ರಾಮಚಂದ್ರನ್, ಶಿವಾಜಿ ಗಣೀಷನ್,ಜಯಲಲಿತಾ ,ತಮಿಳು ಸಿನೆಮಾಗಳೇ.
    ಅಲ್ಲಿ ಒಬ್ಬ ಬಾಬು ಎಂಬವ ರೀಲ್ ಬಿಡುವವನನಿದ್ದ ಅವನೀಗೆ ಎಂಟಾಣೆ ಕೊಟ್ಟು ತುಂಡಾದ ರೀಲು ತರುತ್ತಿದ್ದೆ ಅದರ ಬಿಂಬವನ್ನು ಗೋಡೆಮೇಲೆ ಕಾಣಿಸುವ ಟೆಕ್ನಿಕ್ ಇತ್ತು. ಸಂಜೆ ಆರು ಗಂಟೆಗೆ ದೊಡ್ಡದಾಗಿ ದಿನಕರಾ ಶುಭಕರಾ ಕೇಳಿಸುತ್ತಿತ್ತು, ಶಬ್ದ ಮಾಲಿನ್ಯ ಎಂಬ ಕಾನೂನು ಇರಲಿಲ್ಲ.

    Shankar Hebbar - FB

    ReplyDelete
  11. ನನ್ನ ಮಂಗಳೂರು ವಾಸ್ತವ್ಯದ ದಿನಗಳಲ್ಲಿ ನನ್ನ ಫೇವರಿಟ್ ಚಿತ್ರಮಂದಿರ ನ್ಯೂಚಿತ್ರ. ಕಾರಣ, ಮೂರು ದಿನಗಳಿಗೊಮ್ಮೆ ಬದಲಾಗುತ್ತಿದ್ದ ಇಂಗ್ಲಿಷ್ ಸಿನಿಮಾಗಳು. ಹಾಗಾಗಿ ವಾರಕ್ಕೆರಡು ಇಂಗ್ಲಿಷ್ ಸಿನಿಮಾಗಳು ಖಾಯಂ. ಸೆಂಟ್ರಲ್ ನಲ್ಲಿ ವಿಷ್ಣುವರ್ಧನ್ ಸಿನಿಮಾಗಳನ್ನು ನೋಡುತ್ತಿದ್ದೆ. ಹಾಗೆಯೇ ಪ್ಲಾಟಿನಂ, ರೂಪವಾಣಿ, ರಮಾಕಾಂತಿ, ಪ್ರಭಾತ್, ಅಮೃತ್ ಗಳಲ್ಲಿಯೂ ಸಿನಿಮಾ ನೋಡಿದ್ದಿದೆ.
    'ಸಮಯದಗೊಂಬೆ', ನಾನು ಮಂಗಳೂರಿಗೆ ಬಂದ ಮೇಲೆ ಮೊದಲು ನೋಡಿದ ಸಿನಿಮಾ (ಪ್ಲಾಟಿನಂ).

    Singer Shrinath - FB

    ReplyDelete
  12. ನಾನು ಜ್ಯೋತಿಯಲ್ಲಿ ನೋಡಿದ ಮೊದಲನೆಯ ಚಿತ್ರ ಸ್ವರ್ಣಗೌರಿ.ತಂದೆಯವರೇ ಕರೆದುಕೊಂಡು ಹೋಗಿದ್ದರು!

    Shivashankar. K - FB

    ReplyDelete
  13. ನಿಮ್ಮ ಬರೆಹ ಓದೋದುತ್ತಾ Nostalgic ಆದೆ. ಎಂಬತ್ತರ ದಶಕದ Newsreel ಗಳಲ್ಲಿ ಕೇಳಿಬರುತ್ತಿದ್ದ ಕನ್ನಡದ ಹಿನ್ನೆಲೆ ಧ್ವನಿ ಅದ್ಭುತವಾಗಿದ್ದು, ಈಗಲೂ ಕಿವಿಯಲ್ಲಿ ಅನುರಣಿಸಿದಂತೆ ಭಾಸವಾಗುತ್ತದೆ.

    Vyomakesh M - FB

    ReplyDelete
  14. ಹಳೆಯ ಚಿತ್ರಗಳ ನೆನಪಿನೋಲೆ ಮರಳಿ ಯವ್ವನ ತಂದಿತು.

    Edward Thokkottu - FB

    ReplyDelete
  15. ಸರ್, ತಮ್ಮ ಬಾಲ್ಯದ ಸಿನೆಮಾ ವೀಕ್ಷಣೆಯ ಅನುಭವಗಳನ್ನು ಹಂಚಿಕೊಂಡಿದ್ದು ನಮ್ಮೆಲ್ಲರ ಆ ಕಾಲದ ಅನನ್ಯ ಅನುಭವದ ಬಯೊಸ್ಕೋಪ್ ತೋರಿಸಿದಂತಾಯಿತು. ಟಾಕೀಸ್ ಹೆಸರುಗಳು ಮತ್ತು ಊರುಗಳು ಮಾತ್ರ ಬೇರೆ. ಈ ಲೇಖನದಲ್ಲಿ ನಮ್ಮಲ್ಲರ ಬಾಲ್ಯ, ಯೌವನದ ದಿನಗಳ ಮನೋಭಾವ, ಕೌತುಕಗಳ ಅನಾವರಣವಾಯಿತು. ಹೆಚ್ಚೂ ಕಡಿಮೆ ನಮ್ಮ ತಲೆಮಾರಿನವರಿಗೆ ಟಾಕೀಸಿನಲ್ಲಿ ಸಿನೆಮಾ ನೋಡುವ ಆಸಕ್ತಿಯೇ ಇಲ್ಲದಂತಾಗಿದೆ. ಅಂತೆಯೇ ಟಾಕೀಸ್ ಗಳೂ ಈಗ ವಾಣಿಜ್ಯ ಸಂಕೀರ್ಣಗಳಾಗಿವೆ. ಎಲ್ಲವೂ ಈಗ ಮಧುರ ನೆನಪು ಮಾತ್ರ. ಸುಂದರ ಲೋಕದ ಪ್ರಯಾಣ ಮಾಡಿಸಿದ್ದಕ್ಕೆ ಧನ್ಯವಾದಗಳು.

    Mahesh Deshpande - FB

    ReplyDelete

Your valuable comments/suggestions are welcome