Sunday 24 November 2019

ಧರ್ಮಸ್ಥಳ ದೀಪ ಅಂದು


ಕಾರ್ತಿಕ ಮಾಸದ ಕೃಷ್ಣಪಕ್ಷದಲ್ಲಿ ಜರಗುವ ಧರ್ಮಸ್ಥಳ ಲಕ್ಷದೀಪೋತ್ಸವವನ್ನು ನಾವು ಧರ್ಮಸ್ಥಳ ದೀಪ ಎಂದೇ ಕರೆಯುತ್ತಿದ್ದುದು.  ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಮತ್ತು  ಆಗ ತಾನೇ ಮುಗಿದಿರುತ್ತಿದ್ದ ನಮ್ಮೂರಿನ ಗುಂಡಿ ದೀಪದ ನಂತರ ಇದು ನಮಗೆಲ್ಲ  ಸಂಭ್ರಮದ ಇನ್ನೊಂದು ರಸಘಟ್ಟ. ಆ ಹೊತ್ತಿಗೆ ಮನೆಮುಂದಿನ ಅಂಗಳ, ಅಡಿಕೆ ಒಣಗಿಸುವ ಮೇಲಿನಂಗಳಗಳು ಕೆತ್ತಲ್ಪಟ್ಟು ಚೊಕ್ಕಟವಾಗಿರುತ್ತಿದ್ದವು. ಚುಮು ಚುಮು ಚಳಿಯ ಬೆಳಗುಗಳಲ್ಲಿ ಕಾಣಿಸುವ ಶುಭ್ರ ನೀಲಾಕಾಶ ಮತ್ತು   ಎಲೆಗಳ ಮೇಲಿನ ಇಬ್ಬನಿ ಹನಿಗಳು ಮನೋಲ್ಲಾಸವನ್ನು ಉಕ್ಕಿಸುವ ವರ್ಷದ ಆ ಸಮಯ ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರಿಯವಾದದ್ದು.  ಅರಿವು ಮೂಡಿದಾಗಿನಿಂದ ಉದ್ಯೋಗ ನಿಮಿತ್ತ ಊರು ತೊರೆಯುವ ವರೆಗೆ ಇಂಥ ಕಾಲ ಘಟ್ಟದಲ್ಲಿ ಬರುವ  ಧರ್ಮಸ್ಥಳ ದೀಪವನ್ನು ಒಮ್ಮೆಯೂ ನಾನು ತಪ್ಪಿಸಿಕೊಂಡದ್ದಿಲ್ಲ. ತೀರಾ ಚಿಕ್ಕವನಿದ್ದಾಗ ತಂದೆಯವರ ಜೊತೆ ಹಗಲು ಹೊತ್ತು ಹೋಗಿ ಬರುತ್ತಿದ್ದೆ.  ನಂತರ ಅಣ್ಣಂದಿರು ಮತ್ತು ಅಕ್ಕಪಕ್ಕದ ಮನೆಯವರೊಡನೆ ಸಂಜೆ ಹೊರಟು ರಾತ್ರಿಯ ಜಾತ್ರೆಯನ್ನು ಆನಂದಿಸಿ ಬೆಳಗಿನ ಜಾವ ಮನೆಗೆ ಮರಳುವ ಪರಿಪಾಠ ಆರಂಭವಾಯಿತು. ಕೆಲವು ಸಲ ತಂದೆಯವರು ರಾತ್ರೆಯ ಜಾತ್ರೆಗೂ ಬರುತ್ತಿದ್ದರು.  ಸುಮಾರು ಏಳು ಕಿಲೋ ಮೀಟರ್ ದೂರದಲ್ಲಿರುವ ಧರ್ಮಸ್ಥಳಕ್ಕೆ ನಾವು ನಡೆದುಕೊಂಡೇ ಹೋಗುತ್ತಿದ್ದುದು.  
  
ಮೊದಲ ಕೆಲವು ವರ್ಷ ಗುಡ್ಡ ಮತ್ತು ಗದ್ದೆಗಳ ಸರಣಿಯ ಕಾಲುದಾರಿಯಲ್ಲಿ ಸಾಗಿ ಹೋಗುವಾಗಿನ  ಅನುಭವ ಅನನ್ಯವಾಗಿರುತ್ತಿತ್ತು.  ಊರ ಪರಿಧಿ ದಾಟಿದೊಡನೆ ಸಿಗುವ ಒಂದು ಮೈದಾನಿನಲ್ಲಿ ಆಳೆತ್ತರಕ್ಕೆ ಮುಳಿಹುಲ್ಲು ಬೆಳೆದಿರುತ್ತಿತ್ತು.  ಅದರ ನಡುವೆ ಕಿರಿದಾದ ಕಾಲುದಾರಿಯಲ್ಲಿ ಸಾಗುವಾಗ ಹೆಚ್ಚಿನ ಎಚ್ಚರ ಬೇಕಾಗುತ್ತಿತ್ತು.  ಹಾವು ಹುಳು ಹುಪ್ಪಟೆಗಳ ಭಯಕ್ಕಲ್ಲ.  ಕಿಲಾಡಿ ಹುಡುಗರು ಕೆಲವೊಮ್ಮೆ ದಾರಿಯ ಆಚೀಚೆ ಇರುವ ಮುಳಿಹುಲ್ಲನ್ನು ಸೇರಿಸಿ ಗಂಟು ಹಾಕಿಡುತ್ತಿದ್ದರು.  ಇದನ್ನು ಗಮನಿಸದೆ ನೇರವಾಗಿ ನಡೆದರೆ ಮುಗ್ಗರಿಸಿ  ಮೂಗು ಮುರಿಸಿಕೊಳ್ಳಬೇಕಾಗುತ್ತಿತ್ತು. ಸಮವಯಸ್ಕ ಹುಡುಗರು ಜೊತೆಗಿದ್ದರೆ ಬಾಣದಂತೆ ಚೂಪಾದ ಮುಳಿಹುಲ್ಲಿನ ಕುಸುಮಗಳನ್ನು ಕಿತ್ತು ಬೆನ್ನಿಗೆಸೆಯುವ ಆಟ ನಾವು ಆಡುವುದಿತ್ತು. ಇದನ್ನು ನಾವು ಏಟುಕೋಳಿ ಎಂದು ಕರೆಯುತ್ತಿದ್ದೆವು. ಮುಂದೆ ಸಿಗುವ  ಭತ್ತದ ಗದ್ದೆಗಳ ಅಗಲ ಕಿರಿದಾದ ಬದುಗಳಲ್ಲಿ ಸಾಗುವಾಗ ಪ್ರಕೃತಿ ಸೌಂದರ್ಯವನ್ನು ಸವಿಯಲೆಂದು ಅಚೀಚೆ ನೋಡಿದರೆ ಗದ್ದೆಯಲ್ಲಿ  ಬಿದ್ದು ಮೈಗೆಲ್ಲ ಕೆಸರು ಮೆತ್ತಿಸಿಕೊಳ್ಳುವುದು ಖಚಿತವಾಗಿತ್ತು.  ಒಂದು ಕಡೆಯಂತೂ ಕುತ್ತಿಗೆವರೆಗೆ ಹೂತು ಹೋಗುವಷ್ಟು ಗಂಪವೆಂದು ಕರೆಯುತ್ತಿದ್ದ ಕೆಸರು. ಊರವರೊಬ್ಬರು ಅಜಾಕರೂಕತೆಯಿಂದ ಹಾಗೆ ಹೂತು ಹೋಗಿ ಅವರನ್ನು ಮೇಲೆಳೆಯಲು ಹರಸಾಹಸ ಪಡಬೇಕಾಗಿ ಬಂದಿತ್ತಂತೆ. ಅರ್ಧದಾರಿಯಲ್ಲಿ ಸಿಗುವ ಕಟ್ಟದ ಬೈಲು ಎಂಬಲ್ಲಿ ಅಗಲವಾದ ತೋಡಿಗಡ್ಡವಾಗಿ ಒಂದು ಬಡಿಗೆಯ ಸಂಕವೊಂದಿತ್ತು.  ಯಾರೋ ಪುಣ್ಯಾತ್ಮರು  ಆಧಾರವಾಗಿ ಕೈ ಸಾಂಕನ್ನು ಕಟ್ಟಿದ್ದರೂ ಬಡಿಗೆಯ ಮೇಲಿನಿಂದ ಸಾಗುವಾಗ ಹೆದರಿ ಹೃದಯ ಬಾಯಿಗೆ ಬರುತ್ತಿತ್ತು.  ನಮ್ಮ ತಂದೆಯವರು ಮತ್ತು ನಮ್ಮೊಡನೆ ಸೇರಿಕೊಳ್ಳುತ್ತಿದ್ದ ಅವರ ಸಮವಯಸ್ಕ ಮತ್ತು ಸಮಾನ ವ್ಯಸನಿಯಾಗಿದ್ದು ನಮ್ಮ ಸಂಬಂಧಿಯೂ ಆಗಿದ್ದ ಊರ ಇನ್ನೊಬ್ಬ ಹಿರಿಯರಿಗೆ ಅದು ಎಲೆ ಅಡಿಕೆಗೆ ಬ್ರೇಕ್ ತೆಗೆದುಕೊಳ್ಳುವ ತಾಣವೂ ಆಗಿತ್ತು. ಆಗ ಸುಮಾರು 50ರ ಆಸುಪಾಸು ವಯಸ್ಸು  ಇದ್ದಿರಬಹುದಾದ ಅವರಿಬ್ಬರಿಗೂ ನಡೆಯುವಾಗ ಕೋಲಿನ ಸಹಾಯ ಬೇಕಾಗುತ್ತಿದ್ದುದು ಏಕೆ ಎಂದು ಗೊತ್ತಿಲ್ಲ.  ಧರ್ಮಸ್ಥಳ ತಲುಪಿದೊಡನೆ ಚರ್ಮದ ಚಪ್ಪಲಿಗಳು ಮತ್ತು  ಕೈಯ ಕೋಲುಗಳನ್ನು ಪರಿಚಯದ ಶೆಟ್ಟರ ಅಂಗಡಿಯಲ್ಲಿ ಇಡುತ್ತಿದ್ದರು. ಪ್ರತೀ ವರ್ಷ ಮನೆಬಳಕೆಯ ಯಾವುದಾದರೂ ವಸ್ತುವನ್ನು ಅವರಲ್ಲಿ ಖರೀದಿಸುತ್ತಿದ್ದುದರಿಂದ ಅವರೂ ಬೇಡವೆನ್ನುತ್ತಿರಲಿಲ್ಲ.  50ರ ದಶಕದಲ್ಲಿ ಅಲ್ಲಿ ಕೊಂಡ ಸ್ಟೇನ್‌ಲೆಸ್ ಸ್ಟೀಲಿನ ದಪ್ಪದ ತಟ್ಟೆಯನ್ನು ನಾನು ಈಗಲೂ ಉಣ್ಣಲು ಉಪಯೋಗಿಸುತ್ತಿದ್ದೇನೆ. ಆ ಮೇಲೆ ಕೂಡ ವರ್ಷಕ್ಕೊಂದರಂತೆ ಮನೆಯ ಎಲ್ಲರಿಗೂ  ಸ್ಟೀಲ್ ತಟ್ಟೆಗಳನ್ನು  ಅವರ ಅಂಗಡಿಯಿಂದಲೇ  ಖರೀದಿಸಲಾಗಿತ್ತು.  ಆದರೆ ಐವತ್ತರ ದಶಕದಲ್ಲಿದ್ದ ತಟ್ಟೆಗಳ ಗುಣಮಟ್ಟ ಆ ಮೇಲಿನವುಗಳಿಗಿರಲಿಲ್ಲ. ಅಲ್ಲಿಂದ ಖರೀದಿಸಿದ ಅತ್ಯುತ್ತಮವಾದ ಫೌಂಟನ್ ಪೆನ್ನೊಂದನ್ನು ನಮ್ಮ ಅಣ್ಣ ಬಹಳ ವರ್ಷ ಬಳಸಿದ್ದರು. ಅಗತ್ಯವಿದ್ದಾಗ ಹಿತ್ತಾಳೆಯ ಎವರೆಡಿ ಟಾರ್ಚುಗಳನ್ನೂ ಅಲ್ಲಿಂದಲೇ ಕೊಳ್ಳಲಾಗುತ್ತಿತ್ತು ಎಂದು ನೆನಪು.

ನಂತರ ನೇರವಾಗಿ ದೇವಸ್ಥಾನಕ್ಕೆ ಭೇಟಿ. ಅಲ್ಲಿ ಬಣ್ಣ ಬಣ್ಣದ ದಿರಿಸು ಧರಿಸಿರುತ್ತಿದ್ದ ಪಟ್ಟೆಪಟ್ಟೆಯ ಪೇಟದ ಪಹರೆಯವರನ್ನು ಕಂಡು ಚಿಕ್ಕವರಾದ ನಮಗೆ ಭಯವಾಗುವುದೂ ಇತ್ತು.  ಆಗ ಪ್ರವೇಶಕ್ಕೆ ಸರತಿಯ ಸಾಲು ಇತ್ಯಾದಿ ಇರಲಿಲ್ಲ. ಅಲ್ಲಿ ಅಮ್ಮನವರಿಗೆ ಕುಂಕುಮಾರ್ಚನೆ ಮತ್ತು ಗಣಪತಿಗೆ ಪಂಚಕಜ್ಜಾಯ ಸೇವೆ ಮಾಡಿಸುತ್ತಿದ್ದರು. ಕೂವೆಯ ಎಲೆಯಲ್ಲಿ ಕಟ್ಟಿಕೊಡುತ್ತಿದ್ದ ಆ ಪಂಚ ಕಜ್ಜಾಯದ ಕಂಪು ಈಗಲೂ ನನಗೆ ನೆನಪಿದೆ. ಅಲ್ಲಿಂದ ನೇರವಾಗಿ ಊಟದ ಛತ್ರದತ್ತ ಪಯಣ.  ತಡವಾದರೆ ಜಾಗ ಸಿಗುವುದು ಕಷ್ಟವಾದ್ದರಿಂದ ಸಾಕಷ್ಟು ಮುಂಚಿತವಾಗಿಯೇ ಛತ್ರ ಪ್ರವೇಶಿಸಿ ಸಾಲು ಕಟ್ಟಿ ಕುಳಿತುಕೊಳ್ಳುವುದು ಆಗ ರೂಢಿಯಾಗಿತ್ತು.  ದೇವಸ್ಥಾನದಲ್ಲಿ ಮಹಾಮಂಗಳಾರತಿ ಆಗಿ ಛತ್ರದ ಗಣಪತಿಯ ಪೂಜೆ ಆದ ಮೇಲಷ್ಟೇ ಊಟಕ್ಕೆ ಎಲೆ ಹಾಕುತ್ತಿದ್ದುದು. ಊಟ ನಡೆಯುತ್ತಿರುವಾಗ ಗಣಪತಿಯ ಗಂಟೆಯನ್ನು ನುಡಿಸುತ್ತಾ ಇರುವುದು ಅಲ್ಲಿಯ ಸಂಪ್ರದಾಯ. ಊಟ ಮುಗಿದ ಮೇಲೆ ಎಂಜಲು ಇನ್ನೊಬ್ಬರಿಗೆ ತಾಗದಂತೆ ಕೈ ಮೇಲೆತ್ತಿ  ಸೀಮಿತ ಸಂಖ್ಯೆಯಲ್ಲಿದ್ದ  ನೀರಿನ ಕೊಳಾಯಿಗಳತ್ತ ಎಲ್ಲರೂ ಸಾಗುತ್ತಿದ್ದರು. ನಂತರ ಹೂವಿನ ಕೊಪ್ಪಲೆಂದು ಕರೆಯುತ್ತಿದ್ದ ಲಲಿತೋದ್ಯಾನಕ್ಕೆ ಒಮ್ಮೆ ಭೇಟಿ.  ಅಲ್ಲಿದ್ದ ಅಂಚೆಯಣ್ಣ ಮತ್ತು ತಲೆ ಮೇಲೆ ಕೈ ಹೊತ್ತು ಕುಳಿತ ದಫೇದಾರನ ಮೂರ್ತಿಗಳು ನಮಗಾಗ ಆಕರ್ಷಣೆಯ ಕೇಂದ್ರಗಳು. ಕೊಡದಿಂದ ನಿರಂತರವಾಗಿ ನೀರು ಸುರಿಸುತ್ತಿದ್ದ ಮೂರ್ತಿಯೂ ಅಚ್ಚರಿ ಮೂಡಿಸುತ್ತಿತ್ತು. ದೇವಸ್ಥಾನದ ಎದುರಿಗೆ ನಿಂತ ಆನೆಗಳಿಗೆ ಫುಟ್‌ಬಾಲ್ ಗಾತ್ರದ ಅನ್ನದ ಉಂಡೆಗಳನ್ನು ತಿನ್ನಿಸುವುದನ್ನು ಬೆರಗಾಗಿ ನೋಡುತ್ತಿದ್ದೆವು.  ಆ ಮೇಲೆ ಜಾತ್ರೆಗೊಂದು ಸುತ್ತು.  ತಂದೆಯವರು ಹೆಚ್ಚಾಗಿ ನಮ್ಮ ಕೂಡು ಕುಟುಂಬದ ಎಲ್ಲರಿಗೂ ಸಾಕಾಗುವಷ್ಟು ಕಿತ್ತಳೆ ಹಣ್ಣುಗಳು ಅಥವಾ ಖರ್ಜೂರ ಕೊಳ್ಳುತ್ತಿದ್ದರು. ಗುಂಡ್ರಾಯರ ಅಂಗಡಿಯಿಂದ ಸಕ್ಕರೆ ಪಾಕದಲ್ಲಿ ಮುಳುಗಿಸಿದ ಕಡಲೆಗಳ ಗೋಣಿ ಮಿಠಾಯಿ ಮತ್ತು ಸಕ್ಕರೆ ಕೋಟಿಂಗಿನ ಉದ್ದುದ್ದ ಖಾರಕಡ್ಡಿಯನ್ನೂ ಮನೆಗೆ ಒಯ್ಯುವುದಿತ್ತು. ಅವರ ಅಂಗಡಿಯಲ್ಲಿ ಪೇರಿಸಿಟ್ಟಿರುತ್ತಿದ್ದ ಆಯತಾಕಾರದ ಬಣ್ಣಬಣ್ಣದ ಸಕ್ಕರೆ ಅಚ್ಚುಗಳನ್ನು ಕೊಳ್ಳುವ ಅನುಮತಿ ನಮಗೆ ಸಿಗುತ್ತಿರಲಿಲ್ಲ.  ತಿರುಗಿಸಿದಾಗ ಕಿರ್ರೆಂದು ಸದ್ದು ಮಾಡುವ ಜೀರುಂಡೆ ಆಟಿಕೆಯೊಂದನ್ನು ನಾನು ಕೊಳ್ಳುತ್ತಿದ್ದೆ.  ಆ ಮೇಲೆ ವಸಂತ ಮಹಲಿನಲ್ಲಿ ನಡೆಯುತ್ತಿದ್ದ ನಾಗಸ್ವರ ವಾದನ ಇತ್ಯಾದಿಗಳನ್ನು ಸ್ವಲ್ಪ ಹೊತ್ತು ಆಲಿಸಿ ಸಂಜೆಯೊಳಗೆ ಮನೆಗೆ ಮರಳುತ್ತಿದ್ದೆವು.

ಕ್ರಮೇಣ ಈ ರೀತಿಯ ಹಗಲು ಭೇಟಿಯ ಕಾರ್ಯಕ್ರಮ ಕಮ್ಮಿಯಾಗಿ ರಾತ್ರಿಯ ಜಾತ್ರಾವೈಭವದ ಆಕರ್ಷಣೆ ಹೆಚ್ಚಾಯಿತು.  ಅಷ್ಟರಲ್ಲಿ ನಮ್ಮೂರ ಮೂಲಕ ಧರ್ಮಸ್ಥಳಕ್ಕೆ  ಒಂದು ಒಳರಸ್ತೆಯ ನಿರ್ಮಾಣ ಆರಂಭವಾಗಿ ವಾಹನ ಸಂಚಾರಕ್ಕೆ ಯೋಗ್ಯವಲ್ಲದಿದ್ದರೂ ನಡೆದುಕೊಂಡು ಹೋಗಲು ಸ್ವಲ್ಪ ಸುತ್ತಾದರೂ ಸುಲಭವಾದ ಪರ್ಯಾಯವೊಂದು ಲಭಿಸಿತು.  ಅಣ್ಣ ಅಕ್ಕಂದಿರು, ಅಕ್ಕ ಪಕ್ಕದ ಮನೆಯವರು ಎಲ್ಲ ಸೇರಿ ಸುಮಾರು ಹತ್ತು ಹನ್ನೆರಡು ಮಂದಿಯ ತಂಡ ಪೂರ್ವ ನಿಗದಿತ ದಿನದಂದು ಹೊರಡಲು ಸಿದ್ಧವಾಗುತ್ತಿತ್ತು. ಆಗ ಧರ್ಮಸ್ಥಳ ದೀಪಕ್ಕೆಂದು ಶಾಲೆಗೆ ರಜೆ ಇಲ್ಲದಿರುತ್ತಿದ್ದುದರಿಂದ ಇದಕ್ಕಾಗಿ ಆದಿತ್ಯವಾರವೇ ಆಯ್ಕೆಯಾಗುತ್ತಿತ್ತೆಂದು ನೆನಪು. ಹಿಂತಿರುವಾಗ ಬೆಳಕಿನ ಆಸರೆಗಾಗಿ  ಟಾರ್ಚ್ ಲೈಟುಗಳು, ಲಾಟೀನುಗಳು ಮತ್ತು ಅಡಿಕೆ ಮರದ ಸಲಾಕೆಗಳ ಸೂಟೆಗಳನ್ನು ಹೊಂದಿಸಿಕೊಂಡ ನಮ್ಮ ಪಟಾಲಂ ಸಂಜೆ ಸುಮಾರು ನಾಲ್ಕು ಗಂಟೆಗೆ ಹೊರಟು ಸಂಜೆಯೊಳಗೆ ಧರ್ಮಸ್ಥಳ ಸೇರುತ್ತಿತ್ತು.  ಕೆಲವು ವರ್ಷಗಳ ನಂತರ ಇವುಗಳೆಲ್ಲವುಗಳ ಬದಲಾಗಿ ಉಪಯೋಗಿಸಲೆಂದು  ಸೆಕೆಂಡ್ ಹ್ಯಾಂಡ್ ಗ್ಯಾಸ್ ಲೈಟೊಂದನ್ನು ನಮ್ಮ ಅಣ್ಣ ಖರೀದಿಸಿದ್ದರು.  ಮಾಮೂಲಿನಂತೆ  ಈ ಪರಿಕರಗಳನ್ನೆಲ್ಲ  ಶೆಟ್ಟರ ಅಂಗಡಿಯಲ್ಲಿ ಇರಿಸಿ ನಮ್ಮ ಪರ್ಯಟನೆ ಆರಂಭವಾಗುತ್ತಿತ್ತು. 


ಧರ್ಮಸ್ಥಳ ದೀಪ ಅಂದರೆ ನಮಗೆ ಅನೇಕ ಪ್ರಥಮಗಳನ್ನು ಪರಿಚಯಿಸಿದ ತಾಣ.  ಊರಿಗೆ ವಿದ್ಯುತ್ ಸಂಪರ್ಕ ಬರುವ ಎಷ್ಟೋ ವರ್ಷ ಮೊದಲೇ ಬೃಹದಾಕಾರದ ಜನರೇಟರುಗಳನ್ನು ಉಪಯೋಗಿಸಿ ದೇವಸ್ಥಾನ ಮಾತ್ರವಲ್ಲ, ಸುತ್ತಮುತ್ತಲಿನ ಕಟ್ಟಡಗಳನ್ನೂ  ಜಗಮಗಿಸಲಾಗುತ್ತಿತ್ತು.  ಮೊತ್ತ ಮೊದಲು ಬಲ್ಬು, ಟ್ಯೂಬ್ ಲೈಟುಗಳನ್ನು ನಾವು ನೋಡಿದ್ದು ಅಲ್ಲಿ.  ಆಗ ನಾವು ಟ್ಯೂಬ್ ಲೈಟನ್ನು ರೋಲ್ ಬಲ್ಬು ಅನ್ನುತ್ತಿದ್ದೆವು!  ಐಸ್  ಕ್ಯಾಂಡಿಯ ಪ್ರಥಮ ಪರಿಚಯ ನಮಗಾದದ್ದೂ ಅಲ್ಲಿಯೇ.  ತಲುಪಿದಾಕ್ಷಣ 5 ಪೈಸೆಗೆ ದೊರಕುತ್ತಿದ್ದ ನಮ್ಮಿಷ್ಟದ ಬಣ್ಣದ ಐಸ್ ಕ್ಯಾಂಡಿ ಕೊಳ್ಳುವುದು ಒಂದು ಪರಿಪಾಠವೇ ಆಗಿತ್ತು. ನನ್ನ ಆಯ್ಕೆ ತಿಳಿ ನೇರಳೆ ಬಣ್ಣದ ಕ್ಯಾಂಡಿ ಆಗಿರುತ್ತಿತ್ತು. ಸ್ವಾರಸ್ಯವೆಂದರೆ ಆಗ ನಾವು ಅದನ್ನು ಐಸ್ ಕಡ್ಡಿ ಅನ್ನುತ್ತಿದ್ದುದು! ಐಸಿಗೆ ಕಡ್ಡಿ ಚುಚ್ಚಿರುತ್ತಿದ್ದುದರಿಂದ ಆ ಹೆಸರು. ನಂತರ ವಿವಿಧ ಅಂಗಡಿಗಳ ವೀಕ್ಷಣೆ ಶುರು. ಆಗ ಹೆಚ್ಚು ಅಂಗಡಿಗಳಿರುತ್ತಿದ್ದುದು ದೇವಸ್ಥಾನದ ಎದುರಿನ ಬೀದಿ ಮತ್ತು ಹೂವಿನ ಕೊಪ್ಪಲಿನ ಪೂರ್ವ ಭಾಗದ ಅಗಲ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ. ಪ್ರತಿ ವರ್ಷ ಅಲ್ಲಿರುತ್ತಿದ್ದ ಒಂದಾಣೆ ಮಹಲು ಕೆಲವು ವರ್ಷಗಳ ನಂತರ  ಆರೂವರಾಣೆ ಮಹಲು ಆಗಿ ಆ ಮೇಲೆ `ಅರ್ಧ ಬೆಲೆ 95'  ಆಗಿ ಭಡ್ತಿ ಹೊಂದಿತ್ತು. ಅಲ್ಲಿ ಜನರು ಕೊಳ್ಳುತ್ತಿದ್ದುದು ಆ ಬೆಲೆಗೆ ಅಗ್ಗ ಅನಿಸಿದ ಸರಕುಗಳನ್ನು ಮಾತ್ರ.   ಗಂಟೆಯ ಮುಳ್ಳು ಮತ್ತು ಮಿನಿಟಿನ ಮುಳ್ಳು ಒಟ್ಟಿಗೆ ತಿರುಗುವ ಕೈಗಡಿಯಾರ, ಕೆಂಪು ಕನ್ನಡಕ(ತಂಪು ಅಲ್ಲ!), ಲೋಹದ ಉಂಗುರ, ತಗಡಿನ ಮೋಟರು ಕಾರು, ಪಟ್ಟೆ ಪಟ್ಟೆಗಳ ರಬ್ಬರ್ ಚೆಂಡು, ಒಡಲಲ್ಲಿ ನೀರು ತುಂಬಿ ಪೀಪಿಯಂತೆ ಊದಿದಾಗ ಚಿವ್ ಚಿವ್ ಅನ್ನುವ ಗುಬ್ಬಿ, ಬಿದಿರಿನ ಪೀಪಿಗೆ ಸಿಕ್ಕಿಸಿದ ಪುಗ್ಗೆ, ಕಾಳು ತಿನ್ನುವ ಕೋಳಿ, ಒಂದು ಲಿವರ್ ಒತ್ತಿ ಬಿಟ್ಟರೆ ಓಡುವ ದೊಡ್ಡ ಚಕ್ರಗಳ ಫಿರಂಗಿ ಗಾಡಿ, ಹೆಬ್ಬೆರಳಿನಿಂದ ಒತ್ತುವ ಕಿಟಿಕಿಟಿ, ಕಡ್ಡಿಯ ರೂಪದ ತೆಂಗಿನ ಮರದಿಂದ  ಸರಸರನೆ ಕೆಳಗಿಳಿಯುವ ಸ್ಪ್ರಿಂಗಿನ ಮಂಗ, ಕ್ಯಾಂಡಲಿನಿಂದ ಓಡುವ ಸ್ಟೀಮ್ ಬೋಟ್, ಸಿನಿಮಾ ರೀಲಿನ ತುಂಡುಗಳನ್ನು ಸಿಕ್ಕಿಸಿ ವೀಕ್ಷಿಸುವ ವ್ಯೂಮಾಸ್ಟರನ್ನು ಹೋಲುವ ಆಟಿಕೆ ಮುಂತಾದವುಗಳಲ್ಲಿ ಯಾವುದಾದರೊಂದು ನಮ್ಮ ವರ್ಷದ ಆಯ್ಕೆಗಳಾಗಿರುತ್ತಿದ್ದವು.  ನಾವು ‘ಸಿನಿಮಾ’ ಎಂದೇ ಕರೆಯುತ್ತಿದ್ದ ಆ ಆಟಿಕೆಯಲ್ಲಿ   ಹಳೆ ಅಜ್ಞಾತ ಸಿನಿಮಾಗಳ ದೃಶ್ಯಗಳನ್ನು ನೋಡುವಾಗಿನ ಕಲ್ಪನಾಲೋಕದ ಆನಂದ ಆ ಮೇಲೆ  ಥಿಯೇಟರುಗಳಲ್ಲಿ  ಸಿನಿಮಾಗಳನ್ನು ನೋಡುವಾಗಲೂ ಸಿಗಲಿಲ್ಲ.  ಮನೆಯ ಕೋಣೆಯ ಕಿಟಿಕಿಯಿಂದ ನುಸುಳುತ್ತಿದ್ದ ಬಿಸಿಲುಕೋಲಿನ ಮುಂದೆ ಆ ರೀಲಿನ ತುಂಡುಗಳನ್ನು ಹಿಡಿದು ಭೂತಕನ್ನಡಿಯ ಸಹಾಯದಿಂದ ಎದುರಿನ ಗೋಡೆಯ ಮೇಲೆ ದೊಡ್ಡ ಬಿಂಬವನ್ನು ಮೂಡಿಸುವುದನ್ನೂ ನಾನು ಕಲಿತುಕೊಂಡಿದ್ದೆ.


ಹೈಯರ್ ಎಲಿಮೆಂಟರಿಗೆ ಸೇರಿದ ಮೇಲೆ ಆದ್ಯತೆ ಬದಲಾಗಿ ಆರಾಣೆಯ ಏರ್‌ಮೇಲ್ ಪೆನ್, ಅಗ್ಗದ ಹವಾಯಿ ಚಪ್ಪಲ್ ಮುಂತಾದವು ನಮ್ಮ ವಿಶ್ ಲಿಸ್ಟಿಗೆ ಸೇರಿದವು.  ಅಂಗಡಿಯವನು ಶಾಯಿ ತುಂಬಿಸಿ ಚಂದವಾಗಿ ಅಕ್ಷರ ಮೂಡಿಸಿ ತೋರಿಸುತ್ತಿದ್ದ ಪೆನ್ನು ಮನೆಗೆ ಹೋಗುವಷ್ಟರಲ್ಲಿ ಬರೆಯಲಾರೆನೆಂದು ಮುಷ್ಕರ ಹೂಡುತ್ತಿತ್ತು, ಹಿಡಿದರೆ ಕೈಗೆಲ್ಲ ಶಾಯಿಯೂ ಮೆತ್ತುತ್ತಿತ್ತು.   ಕೊಂಡ ತಪ್ಪಿಗೆ ಥ್ರೆಡ್ಡಿಗೆ ವ್ಯಾಸಲೀನ್ ಸವರಿ ನಿಬ್ಬಲ್ಲಿ ಬ್ಲೇಡ್ ತೂರಿಸಿ ಹೇಗೋ ಸುಧಾರಿಸುತ್ತಿದ್ದೆವು. ಕನ್ನಡಿಯ ಮೇಲೆ ಗೀಚಿ ನಿಬ್ಬನ್ನು ನಯಗೊಳಿಸುವ  ಚಿಕಿತ್ಸೆಯ ಪ್ರಯೋಗವೂ ನಡೆಯುತ್ತಿತ್ತು.  ಹೈಸ್ಕೂಲ್ ಹಂತಕ್ಕೆ ತಲುಪಿದ ಮೇಲೆ  ಆಟಿಕೆಗಳ ಸಂಚಾರಿ ಅಂಗಡಿಯಿಂದ ವರ್ಷಕ್ಕೊಂದು ಕೊಳಲು ಕೊಳ್ಳಲು ಆರಂಭಿಸಿ ಪಾಪಿಯ ಜೀವನ ಪಾವನಗೊಳಿಸುವ ಹಾಡು ನುಡಿಸಲು ಪ್ರಯತ್ನಿಸುತ್ತಾ ನಾನು ಏಕಲವ್ಯನಾದದ್ದು.


ಪುಸ್ತಕದ ಅಂಗಡಿಗಳು ಯಾವುದೇ ಜಾತ್ರೆಯ ಅವಿಭಾಜ್ಯ ಅಂಗ.  ನಮ್ಮ ಅಣ್ಣನಿಗೆ ಉತ್ತಮ ಪುಸ್ತಕಗಳನ್ನು ಕೊಂಡು ಸಂಗ್ರಹಿಸುವ ಹವ್ಯಾಸವಿತ್ತು.  ವರ್ಷಕ್ಕೊಂದು ಆಯ್ದ ಪುಸ್ತಕವನ್ನು ತಪ್ಪದೆ ಕೊಳ್ಳುತ್ತಿದ್ದರು. ಇಸೋಪನ ನೀತಿ ಕಥೆಗಳು, ಅರೇಬಿಯನ್ ನೈಟ್ಸ್, ಸರ್ವಜ್ಞ ವಚನಗಳು, ಯೋಗಾಸನಗಳು,  ಸಚಿತ್ರ ಯಮಶಾಸನ ಮುಂತಾದವು ನನಗೆ ನೆನಪಿರುವಂತೆ ಅವರು ಕೊಂಡ, ನಾನೂ ಓದಿ ಆನಂದಿಸಿದ ಪುಸ್ತಕಗಳು. ಅವರ ಬಾಲ್ಯದಲ್ಲಿ ಮನೆಯಲ್ಲೇ ‘ಗಣೇಶ ಲೈಬ್ರರಿ’ ಎಂಬ ಹೆಸರಿನ ಪುಸ್ತಕಾಲಯವನ್ನು ಸ್ಥಾಪಿಸಿ ಪುಸ್ತಕಗಳಿಗೆ ಗುರುತಿನ ಸಂಖ್ಯೆಗಳನ್ನು ನೀಡಿ ಅಚ್ಚುಕಟ್ಟಾಗಿ ಸಂಗ್ರಹಿಸಿಡುತ್ತಿದ್ದರಂತೆ.  

ಜಾತ್ರೆಯಲ್ಲಿ ಒಂದೆರಡು ಕಂಬಳಿಗಳ ಸ್ಟಾಲುಗಳೂ ಇರುತ್ತಿದ್ದವು.  ಅವುಗಳ ಛಾವಣಿ, ಗೋಡೆ, ನೆಲದ ಹಾಸು ಎಲ್ಲವೂ ಕಂಬಳಿಗಳದ್ದೇ ಆಗಿರುತ್ತಿದ್ದುದು ವಿಶೇಷ. ನಮ್ಮಲ್ಲಿ ಕಂಬಳಿಗಳ ಉಪಯೋಗ ಕಮ್ಮಿ.  ಆದರೆ ಆಗ ಹೆರಿಗೆಗಳು ಮನೆಯಲ್ಲೇ ಆಗುತ್ತಿದ್ದುದರಿಂದ ಬಾಣಂತಿಯರಿಗಾಗಿ ಒಂದೆರಡು ವರ್ಷಕ್ಕೊಮ್ಮೆ ಹೊಸ ಕಂಬಳಿಯ ಅಗತ್ಯ ಬೀಳುತ್ತಿತ್ತು. ಅಣ್ಣಂದಿರು ಮತ್ತು ತಂದೆಯವರು  ಅಂಗಡಿಯ ಕಂಬಳಿ ಹಾಸಿನ ಮೇಲೆ ಕೂತು ಅಷ್ಟು ಹೊತ್ತು ನಡೆದಾಡಿದ ಕಾಲುಗಳಿಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ಕಂಬಳಿ ಗೌಡರೊಡನೆ ಚರ್ಚೆ ಮಾಡಿ ಬಣ್ಣದ ಉಲ್ಲನ್ ದಾರದಿಂದ ಅಂಚನ್ನು ಹೆಣೆಯಲು ಹೇಳಿ ಅಗ್ಗದ ದರದಲ್ಲಿ ಗಿಟ್ಟಿಸುತ್ತಿದ್ದರು.

ನಾವು ಮೊದಲ ಬಾರಿಗೆ ಮಸಾಲೆ ದೋಸೆ ಸವಿದದ್ದೂ ಧರ್ಮಸ್ಥಳದಲ್ಲೇ.  ಆಗ ಅಲ್ಲಿ ಮಿತ್ರ ಸಮಾಜ ಎಂಬ ಒಂದೇ ಒಂದು ಚಿಕ್ಕ ಹೋಟೆಲು ಇದ್ದದ್ದು. ಜಾತ್ರೆಯ ಜನಸಂದಣಿಯಿಂದಾಗಿ ಅಲ್ಲಿ ಕುಳಿತುಕೊಳ್ಳಲು ಜಾಗ ಸಿಗುವುದೇ ಕಷ್ಟ. ಒಂದೊಮ್ಮೆ ಜಾಗ ಸಿಕ್ಕಿದರೂ  ಸಪ್ಲಯರ್ ನಮ್ಮ ಟೇಬಲ್ ಬಳಿಗೆ ಬಂದು  ಆರ್ಡರ್ ಪಡೆದು ಮಸಾಲೆ ದೋಸೆ ನಮ್ಮ ಮುಂದೆ ಪ್ರತ್ಯಕ್ಷವಾಗಲು ಬಹಳ ತಡವಾಗುತ್ತಿತ್ತು. ಕೆಲವೊಮ್ಮೆ ಆತ ನಮ್ಮನ್ನು ಮರೆತೇ ಬಿಟ್ಟನೇನೋ ಎಂದೂ ಅನ್ನಿಸುವುದಿತ್ತು. ಕೊನೆಗೂ ಆತ ದೋಸೆಗಳ ಪ್ಲೇಟುಗಳೊಡನೆ ನಮ್ಮತ್ತ ಬಂದಾಗ ನಿಧಿ ದೊರಕಿದಷ್ಟು ಸಂತೋಷ.  ಆಗ ಮಸಾಲೆ ದೋಸೆಯ ಜೊತೆ ಚಟ್ನಿ, ಸಾಂಬಾರ್ ಇತ್ಯಾದಿ ಕೊಡುವ ಕ್ರಮ ಇರಲಿಲ್ಲ.

ಈಗ ಶಾಲಾ ಕಾಲೇಜುಗಳ ವಾರ್ಷಿಕೋತ್ಸವದ ಅವಿಭಾಜ್ಯ ಅಂಗವಾಗಿರುವ ಫಿಲ್ಮಿ ಡಾನ್ಸಿನ ಪರಿಚಯ ನಮಗಾದದ್ದೂ ಧರ್ಮಸ್ಥಳ ದೀಪದಲ್ಲೇ.  ಆಗ ಈಗಿನಂತೆ ಮೈದಾನದಲ್ಲಿ ನಡೆಯುವ ವಸ್ತು ಪ್ರದರ್ಶನ ಇತ್ಯಾದಿ ಇರಲಿಲ್ಲ.  ಮಹಾದ್ವಾರದ ಪರಿಸರದಲ್ಲಿ ಮೋಟಾರ್ ಬೈಕಿನ ಮೃತ್ಯು ಕೂಪ,  ಅದ್ಭುತ ಮತ್ಸ್ಯಕನ್ಯೆ, ಬೊಂಬೆಯಾಟ, ಮ್ಯಾಜಿಕ್ ಶೋ ಮುಂತಾದವುಗಳ ಟೆಂಟುಗಳಿರುತ್ತಿದ್ದವು.  ಜನರನ್ನು ತಮ್ಮತ್ತ ಆಕರ್ಷಿಸಲು  ಟೆಂಟಿನ ಎದುರು ಎತ್ತರವಾದ ಅಟ್ಟಳಿಗೆಯ ಮೇಲೆ ಗ್ರಾಮೊಫೋನಿನಲ್ಲಿ  ಜನಪ್ರಿಯ ಸಿನಿಮಾ ಹಾಡುಗಳನ್ನು ಹಚ್ಚಿ ಚಿತ್ರ ವಿಚಿತ್ರ ಉಡುಗೆ ಧರಿಸಿದ ನರ್ತಕ ನರ್ತಕಿ ಕುಣಿಯುತ್ತಿದ್ದರು. ಒಂಟೆಗೆ ಮೂತಿ ಒಳಗಿಡಲು ಜಾಗ ಕೊಟ್ಟರೆ ಟೆಂಟಿನ ಮಾಲೀಕನನ್ನೇ ಹೊರಗೆ ಹಾಕಿತ್ತಂತೆ ಎಂಬ ಗಾದೆಯಂತೆ  ನಾನು ಕಾಲೇಜು ಸೇರುವ ಹೊತ್ತಿಗೆ  ಟಿಕೆಟಿಟ್ಟು ಇಂತಹ ಫಿಲ್ಮಿ ಡಾನ್ಸುಗಳನ್ನು ತೋರಿಸುವ ಟೆಂಟೇ ಕಾಣಿಸಿಕೊಂಡಿತ್ತು. ಅದರಲ್ಲಿ ದಸ್ ಲಾಖ್ ಚಿತ್ರದ ಆಗ್ರೇಕಾ ಲಾಲಾ ಅಂಗ್ರೇಜಿ ದುಲ್ಹನ್ ಲಾಯಾರೇ ಮತ್ತು ತೇರಿ ಪತ್ಲಿ ಕಮರ್ ತೇರಿ ಬಾಲಿ ಉಮರ್ ಹಾಡುಗಳಿಗೆ ಇಬ್ಬರು ಯುವತಿಯರು ಮತ್ತು ಓರ್ವ ಯುವಕ ದಪ್ಪ ಮೇಕಪ್ ಮೆತ್ತಿಕೊಂಡು ಕುಣಿದದ್ದನ್ನು ದುಡ್ಡು ಕೊಟ್ಟು ನೋಡಿದ್ದು ನೆನಪಿದೆ!

ಆಗ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದುದು ಮಳೆಗಾಲದಲ್ಲಿ ಭತ್ತ ಬೆಳೆಯುವ  ಗದ್ದೆಯಲ್ಲಿ ಕಟ್ಟಿದ ತಾತ್ಕಾಲಿಕ ಸಭಾ ಭವನದಲ್ಲಿ. ಆದರೆ ಮರದ ಚೌಕಟ್ಟು ಮತ್ತು ಬಿಳಿ ಬಟ್ಟೆ ಬಳಸಿ ರಚಿಸಿದ ಅದರ ಕಂಬ ಮತ್ತು ಛಾವಣಿಗಳು  ಅದು ವಾಸ್ತವವಾದ ತಾರಸಿ ಕಟ್ಟಡವೇನೋ ಎಂಬ ಭ್ರಮೆ ಮೂಡಿಸುತ್ತಿತ್ತು.  ನಾವು ಆಗ ಅಲ್ಲಿ ಕೂತು ಕಾರ್ಯಕ್ರಮಗಳನ್ನೇನೂ ಆಸ್ವಾದಿಸುತ್ತಿರಲಿಲ್ಲ.  ಆದರೂ ಅಲ್ಲಿಯ ಕಲಾಪಗಳು ಹೊರಗೆ ಅಡ್ಡಾಡುವವರ ಕಿವಿಗೂ ಬೀಳುತ್ತಿದ್ದವು.  ಒಂದು ವರ್ಷ ಯಾರೋ ಕಲಾವಿದರು ಕಂಚಿನ ಕಂಠದಲ್ಲಿ ಮಾತಾಡ್ ಮಾತಾಡು ಮಲ್ಲಿಗೆ ಸೇವಂತಿಗೆ ಎಂದು ಹಾಡಿದ್ದು ನನ್ನ ಮನದಲ್ಲಿ ಅಚ್ಚು ಮೂಡಿಸಿದೆ.  ಧರ್ಮಸ್ಥಳ ದೀಪದೊಡನೆ ನಂಟು ಹೊಂದಿರುವ ಒಂದೆರಡು ಸಿನಿಮಾ ಹಾಡುಗಳೂ ಇವೆ.  ಒಂದು ವರ್ಷ ಅಲ್ಲಿ ಯಾವುದೋ ಧ್ವನಿ ವರ್ಧಕದಲ್ಲಿ ಪದೇ ಪದೇ ಕೇಳಿ ಬರುತ್ತಿದ್ದ ಶ್ರೀ ಶೈಲ ಮಹಾತ್ಮೆ ಚಿತ್ರದ ಮಲ್ಲಿಕಾರ್ಜುನನು ನೆಲೆಸಿಹ ಹಾಡಿನ ಏನೆಂಬೆ ಗಿರಿಯ ಮಹಿಮೆ ಎಂಬ ಸಾಲು ಮತ್ತು ಧರ್ಮಸ್ಥಳ ಮಹಾತ್ಮೆ ಚಿತ್ರದ ಜಗ ಹಿತಕಾಗಿ ತಾಮಸ ನ್ಯಾಯವೇ ಹಾಡಿನ ಮಂಜುನಾಥಾ ಮಂಜುನಾಥಾ ಎಂಬ ಪುನರಾವರ್ತನೆಗೊಳ್ಳುವ ಸಾಲುಗಳು ಏಕೋ ನನ್ನ ಮನದಲ್ಲಿ ಶಾಶ್ವತವಾಗಿ ನೆಲೆಗೊಂಡಿವೆ.  ಎರಡೂ ಪಿ.ಬಿ. ಶ್ರೀನಿವಾಸ್  ಹಾಡಿದವುಗಳು.  ಬಂಬಯಿ ದೇಖೊ ಮದ್ರಾಸ್ ದೇಖೊ ಎನ್ನುತ್ತಾ  ಒಂದು ಪೆಟ್ಟಿಗೆಯೊಳಗೆ ಚಿಮಿಣಿ ದೀಪದ ಬೆಳಕಿನಲ್ಲಿ ಕೆಲವು ದೃಶ್ಯಗಳನ್ನು ತೋರಿಸುತ್ತಿದ್ದವನು ಗ್ರಾಮೊಫೋನಿನ ಹಾರ್ನ್ ಬದಲಿಗೆ ಕಾಗದದ ಕೋನ್ ಒಂದನ್ನು ಸಿಕ್ಕಿಸಿ ನುಡಿಸುತ್ತಿದ್ದ  ಕನ್ಯಾರತ್ನ ಚಿತ್ರದ ಒಂದೇ ಮಾತು ಒಂದೇ ಮನಸು ಇಂಥ ಇನ್ನೊಂದು ಹಾಡು.  ಇವುಗಳನ್ನು ಕೇಳಿದಾಗ ಈಗಲೂ ಆ ದೃಶ್ಯಗಳೇ ಕಣ್ಣೆದುರು ಬರುವುದು.

ಬಹುತೇಕ ದೇವಸ್ಥಾನಗಳ ದೀಪೋತ್ಸವಗಳ ಸಂದರ್ಭದಲ್ಲಿರುವ ಸುಡುಮದ್ದುಗಳ ಸಂಭ್ರಮ ಧರ್ಮಸ್ಥಳದಲ್ಲಿಲ್ಲದಿರುವುದು ಗಮನಾರ್ಹ.  ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ  ಒಮ್ಮೆ ಅಗ್ನಿ ಆಕಸ್ಮಿಕ ಉಂಟಾದ ಮೇಲೆ ಇದಕ್ಕೆ ಅಲ್ಲಿ ನಿಷೇಧ ಹೇರಲಾಯಿತು ಎಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿದ್ದೇನೆ.

ರಾತ್ರಿಯ ಸಮಯದಲ್ಲಿ ದೀಪೋತ್ಸವಕ್ಕೆ ಹೋದಾಗ ನಾವು ದೇವಸ್ಥಾನದ ಒಳಗೆ ಹೋಗುತ್ತಿದ್ದುದು ಕಮ್ಮಿ.  ಹೋದರೂ ಒಂದೈದು ನಿಮಿಷ ಅಲ್ಲಿದ್ದು ದೇವರಿಗೆ ಕೈ ಮುಗಿದು ಹೊರಗೆ ಬರುತ್ತಿದ್ದೆವು.  ಕಾಲು ನೋಯುವ ವರೆಗೆ  ಮತ್ತೆ ಪ್ರದಕ್ಷಿಣಾಕಾರ ಮತ್ತು ಅಪ್ರದಕ್ಷಿಣಾಕಾರವಾಗಿ ಅಂಗಡಿಗಳನ್ನು ಸುತ್ತಿ ದೇವರು ತೇರನ್ನೇರುವ ಹೊತ್ತಿಗೆ ಮನೆಯತ್ತ ಮುಖ ಮಾಡುತ್ತಿದ್ದೆವು. ಮೊದಲ ಕೆಲವು ವರ್ಷಗಳು ಸೂಟೆ ನಂತರ ಗ್ಯಾಸ್ ಲೈಟಿನ  ಬೆಳಕಿನಲ್ಲಿ ಬೇತಾಳನಂತೆ ಕಾಣುವ ಕಾಲುಗಳ ಉದ್ದುದ್ದ ನೆರಳುಗಳನ್ನು ನೋಡುತ್ತಾ, ಅದು ಇದು ಮಾತನಾಡುತ್ತಾ ಏಳು ಕಿಲೋ ಮೀಟರ್ ನಡೆದು ಮನೆ ಸೇರುವಾಗ ಬೆಳಗಿನ ಜಾವ ಮೂರು ಮೂರುವರೆ ಆಗುತ್ತಿತ್ತು.  ತಣ್ಣೀರಿನಲ್ಲಿ ಕೈಕಾಲು ಮುಖ ತೊಳೆದು  ಹಾಸಿಗೆ ಹಾಸಿ ಒರಗಿದಾಗ ದಣಿದ ಕಾಲುಗಳಿಗೆ ಸಿಗುತ್ತಿದ್ದ ಸುಖವನ್ನು ವರ್ಣಿಸಲಸಾಧ್ಯ.  ಕ್ಷಣಾರ್ಧದಲ್ಲಿ ನಿದ್ರೆ ಆವರಿಸಿ ನಾವು ಕೊಂಡು ತಂದ ವಸ್ತು ವಿಶೇಷದ ಕುರಿತಾದ ಕನಸು ಬೀಳುತ್ತಿತ್ತು.