60ರ ದಶಕ ಅಂದರೆ ಅದು ಚಿತ್ರ ಸಂಗೀತ ಕ್ಷೇತ್ರದಲ್ಲಿ ಅನೇಕ ಅಲಿಖಿತ ನಿಯಮಗಳು ಪಾಲಿಸಲ್ಪಡುತ್ತಿದ್ದ ಕಾಲ. ಹಿಂದಿಯಲ್ಲಿ ರಾಜ್ ಕಪೂರ್ ಅವರಿಗೆ ಮುಕೇಶ್, ದೇವಾನಂದ್ ಅವರಿಗೆ ಕಿಶೋರ್ ಕುಮಾರ್, ಉಳಿದವರೆಲ್ಲರಿಗೆ ರಫಿ ಇದ್ದಂತೆ ಕನ್ನಡದಲ್ಲಿ ಹಾಸ್ಯದ ಹಾಗೂ ಹಿನ್ನೆಲೆಯ ಹಾಡುಗಳನ್ನು ಪೀಠಾಪುರಂ ಹಾಡುತ್ತಿದ್ದುದು ಬಿಟ್ಟರೆ ಕುಮಾರತ್ರಯರಾದ ರಾಜ್, ಕಲ್ಯಾಣ್, ಉದಯ್ ಸಹಿತ ಎಲ್ಲರ ಧ್ವನಿಯಾಗುತ್ತಿದ್ದುದು ಪಿ.ಬಿ.ಶ್ರೀನಿವಾಸ್. ತೆಲುಗಿನಲ್ಲಿ ಘಂಟಸಾಲ, ಮಲಯಾಳಂನಲ್ಲಿ ಜೇಸುದಾಸ್ ಹಾಗೂ ತಮಿಳಿನಲ್ಲಿ ಸೌಂದರರಾಜನ್ ಅವರಿಗೆ ಸಂಬಂಧಿಸಿದಂತೆ ಕೂಡ ಸುಮಾರಾಗಿ ಇದೇ ರೀತಿಯ ನಿಯಮ ಜಾರಿಯಲ್ಲಿತ್ತು. ಆದರೆ ಆಗೊಮ್ಮೆ ಈಗೊಮ್ಮೆ ಈ ನಿಯಮಗಳು ಮುರಿಯಲ್ಪಡುವುದೂ ಇತ್ತು. ಪೆಂಡ್ಯಾಲ ನಾಗೇಶ್ವರ ರಾವ್ ಅವರ ಸಂಗೀತವಿದ್ದ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ರಾಜ್ ಅವರಿಗೆ ಘಂಟಸಾಲ ಧ್ವನಿಯಾಗಿದ್ದರು. ಟಿ.ಜಿ.ಲಿಂಗಪ್ಪ ಸಂಗೀತವಿದ್ದ ಗಾಳಿಗೋಪುರ ಚಿತ್ರದಲ್ಲೂ ರಾಜ್ ಹಾಡುಗಳನ್ನು ಘಂಟಸಾಲ ಹಾಗೂ ಕಲ್ಯಾಣ್ ಹಾಡುಗಳನ್ನು ಪಿ.ಬಿ.ಎಸ್ ಹಾಡಿದ್ದರು. ವಿಜಯಾ ಕೃಷ್ಣಮೂರ್ತಿ ಸಂಗೀತದ ಮುರಿಯದ ಮನೆಯಲ್ಲಿ ರಾಜ್ ಅವರಿಗೆ ಘಂಟಸಾಲ, ಪಿ.ಬಿ.ಎಸ್ ಇಬ್ಬರೂ ಹಾಡಿದ್ದರು. ಜೇಸುದಾಸ್ ಅವರು ರಾಜ್ ಧ್ವನಿಯಾದದ್ದು ಪ್ರೇಮಮಯಿ ಚಿತ್ರದಲ್ಲಿ. ನಿಯಮ ಮುರಿತದ ಇಂತಹ ಇನ್ನೂ ಹಲವು ಉದಾಹರಣೆಗಳಿವೆ. ಆದರೆ ಗಾಯಕಿಯರಿಗೆ ಸಂಬಂಧಿಸಿದಂತೆ ಈ ತರಹ ನಿಯಮಗಳು ಇಲ್ಲದಿದ್ದಿದು ಗಮನಾರ್ಹ. ಬಿ.ಸರೋಜಾದೇವಿ ನಾಯಕಿಯಾಗಿದ್ದಾಗ ಪಿ.ಸುಶೀಲ ಅವರೇ ಹಾಡುತ್ತಿದ್ದುದನ್ನು ಬಿಟ್ಟರೆ ಬಹುತೇಕ ಚಿತ್ರಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಜಾನಕಿ ಮಾತ್ರ, ಸುಶೀಲ ಮಾತ್ರ ಅಥವಾ ಇಬ್ಬರೂ ಹಾಡುತ್ತಿದ್ದರು. ಕ್ಯಾಬರೇ ಸ್ಪೆಷಲಿಸ್ಟ್ ಅನ್ನಿಸಿದ್ದ ಎಲ್.ಆರ್.ಈಶ್ವರಿ ಕೂಡ ಸಂತ ತುಕಾರಾಂ, ಮಹಾಸತಿ ಅನಸೂಯ ಮುಂತಾದ ಚಿತ್ರಗಳಲ್ಲಿ ಮುಖ್ಯ ಗಾಯಕಿಯಾದದ್ದುಂಟು. ಅಲಿಖಿತ ನಿಯಮಗಳ ಕುರಿತು ಈ ಪೀಠಿಕೆಗೆ ಕಾರಣ ಇಲ್ಲೀಗ ಚರ್ಚಿಸಲ್ಪಡುವ, ಇಂತಹ ಅನೇಕ ನಿಯಮಗಳನ್ನು ಮುರಿದಿದ್ದ ಅನ್ನಪೂರ್ಣ ಚಿತ್ರದ ಒಂದು ಮಧುರವಾದ ಹಾಡು.
ಅನ್ನಪೂರ್ಣ 1964ರಲ್ಲಿ ತೆರೆಕಂಡ ಚಿತ್ರ. ಎಂ.ಪಂಢರಿಬಾಯಿ ಇದರ ನಿರ್ಮಾಪಕಿ. ಆರೂರು ಪಟ್ಟಾಭಿ ನಿರ್ದೇಶಕರು. ಕೆ.ಎಸ್. ಅಶ್ವಥ್ ಮತ್ತು ಸ್ವತಃ ಪಂಢರಿಬಾಯಿ ಮುಖ್ಯ ಕಲಾವಿದರು. ರಾಜಕುಮಾರ್, ಕಲ್ಯಾಣ್ ಕುಮಾರ್, ಆರ್. ನಾಗೇಂದ್ರ ರಾವ್, ಪಂಢರಿಬಾಯಿಯ ತಂಗಿ ಮೈನಾವತಿ, ತೆಲುಗಿನ ಪ್ರಸಿದ್ಧ ನಟ ವಿ. ನಾಗಯ್ಯ ಮುಂತಾದವರು ಅತಿಥಿ ಕಲಾವಿದರು! ಪಂಢರಿಬಾಯಿ ಮೇಲಿನ ಅಭಿಮಾನದಿಂದ ಇವರೆಲ್ಲ ಅತಿಥಿ ಕಲಾವಿದರಾಗಿ ಸಹಕರಿಸಿರಬಹುದು.
ಉದಯಶಂಕರ್ ಗೀತರಚನೆಕಾರರಾಗಿ ಹೊಮ್ಮಿದ ಮೊದಲ ಚಿತ್ರ
ಚಿ.ಉದಯಶಂಕರ್ ಅವರು ಅದಾಗಲೇ ಸಂತ ತುಕಾರಾಂ ಚಿತ್ರದ ಸಂಭಾಷಣೆ ಹಾಗೂ ಶಿವರಾತ್ರಿ ಮಹಾತ್ಮೆ ಚಿತ್ರಕ್ಕಾಗಿ ಒಂದು ಹಾಡನ್ನು ಬರೆದಿದ್ದರೂ ಅವರೇ ಎಲ್ಲ ಹಾಡುಗಳನ್ನು ಬರೆದ ಪ್ರಥಮ ಚಿತ್ರ ಈ ಅನ್ನಪೂರ್ಣ. ಅವರ ತಂದೆ ಚಿ. ಸದಾಶಿವಯ್ಯ ಈ ಚಿತ್ರಕ್ಕೆ ಸಂಭಾಷಣೆ ಬರೆದವರು. ಅಂದರೆ ಸಂತ ತುಕಾರಾಂ ಚಿತ್ರದಲ್ಲಿ ತಂದೆಯ ಹಾಡುಗಳು ಮತ್ತು ಮಗನ ಸಂಭಾಷಣೆ ಇದ್ದರೆ ಇಲ್ಲಿ ಅದು ಅದಲು ಬದಲಾಗಿ ಮಗನ ಹಾಡುಗಳು ಮತ್ತು ತಂದೆಯ ಸಂಭಾಷಣೆ! ಚಿತ್ರದ ಸಂಗೀತ ನಿರ್ದೇಶಕರು ರಾಜನ್ ನಾಗೇಂದ್ರ. ಶಂಕರ್ ಜೈಕಿಶನ್ ಅವರಂತೆ ಅತಿ ದೊಡ್ಡ ಆರ್ಕೆಷ್ಟ್ರಾ ನಿರ್ವಹಿಸಬಲ್ಲವರಾಗಿದ್ದ ಇವರು ಅತಿ ಕಡಿಮೆ ವಾದ್ಯಗಳನ್ನು ಉಪಯೋಗಿಸಿಯೂ ಅದೇ ಪರಿಣಾಮ ಉಂಟು ಮಾಡುವುದರಲ್ಲಿ ನಿಷ್ಣಾತರು.
ಉದಯಶಂಕರ್ ಗೀತರಚನೆಕಾರರಾಗಿ ಹೊಮ್ಮಿದ ಮೊದಲ ಚಿತ್ರ
ಮುರಿದ ನಿಯಮಗಳು
ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕ ನಾಯಕಿಯರು ಬಹುತೇಕ ಹಾಡುಗಳನ್ನು ಹಾಡುತ್ತಾರೆ. ಆದರೆ ಇಲ್ಲಿ ಮುಖ್ಯ ಕಲಾವಿದರಾದ ಅಶ್ವಥ್ ಮತ್ತು ಪಂಢರಿಬಾಯಿ ಅಂದ ಚಂದದ ಮಗುವೆ ಎಂಬ ಪಹಾಡಿ ರಾಗದ ಹಾಡನ್ನು ಪಿ.ಲೀಲ ಮತ್ತು ಟಿ.ಆರ್. ಜಯದೇವ್ ಎಂಬ ನವ ಗಾಯಕರ ಧ್ವನಿಯಲ್ಲಿ ಹಾಡಿದ್ದು ಬಿಟ್ಟರೆ ಉಳಿದೆಲ್ಲ ಹಾಡುಗಳನ್ನು ಹಾಡಿದ್ದು ಅತಿಥಿ ಕಲಾವಿದರು! ಮೋಹ ಸಿಹಿ ಸಿಹಿ ಮತ್ತು ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಎಂಬ ಹಾಡುಗಳನ್ನು ಜಾನಕಿ ಧ್ವನಿಯಲ್ಲಿ ಮೈನಾವತಿ ಹಾಡಿದರೆ ಇನ್ನೊಬ್ಬ ಅತಿಥಿ ಕಲಾವಿದ ರಾಜಕುಮಾರ್ ಹಾಡಿದ್ದು ಚೆಲುವಿನ ಸಿರಿಯೇ ಬಾರೆಲೇ ಎಂಬ ಹಾಡನ್ನು. ಆದರೆ ಧ್ವನಿ ನೀಡಿದ್ದು ಪಿ.ಬಿ.ಶ್ರೀನಿವಾಸ್ ಅಲ್ಲ. ಬದಲಾಗಿ ಎ.ಎಲ್.ರಾಘವನ್! ಶೀನು ಸುಬ್ಬು ಸುಬ್ಬು ಶೀನು ಹಾಡನ್ನು ಪಿ.ಬಿ.ಎಸ್ ಜೊತೆಗೆ ಹಾಡಿದವರು ಎಂದರೆ ಎ.ಎಲ್.ರಾಘವನ್ ಪರಿಚಯ ಸುಲಭವಾಗಿ ಆದೀತು. ಬಹಳ ಸಮಯ ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಹಾಡಿದ ಜೆ.ವಿ.ರಾಘವಲು ಅವರೇ ಇದನ್ನು ಹಾಡಿದ್ದು ಎಂದೇ ನಾನು ಅಂದುಕೊಂಡಿದ್ದೆ! ರಾಘವ ಎಂಬುದಷ್ಟೇ ಮನಸ್ಸಲ್ಲಿ ರಿಜಿಸ್ಟರ್ ಆಗಿದ್ದುದು ಇದಕ್ಕೆ ಕಾರಣವಿರಬಹುದು. ಚಿತ್ರದ ಎರಡು ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿದ್ದು ಅವುಗಳಲ್ಲೊಂದು ಅತಿ ಜನಪ್ರಿಯವಾದ ಕನ್ನಡವೇ ತಾಯ್ನುಡಿಯು ಮತ್ತು ಇನ್ನೊಂದು ಅತಿ ಮಧುರವಾದ ಹೃದಯವೀಣೆ ಮಿಡಿಯೆ ತಾನೆ. ಈ ಎರಡೂ ಹಾಡುಗಳನ್ನು ತೆರೆಯ ಮೇಲೆ ನಿರ್ವಹಿಸಿದ, ಕೆಲವು ಕೋನಗಳಲ್ಲಿ ಆರ್.ಎನ್.ಸುದರ್ಶನ್ ಅವರನ್ನು ಹೋಲುವ ಸ್ಪುರದ್ರೂಪಿ ನಟ ಯಾರೆಂಬುದರ ಬಗ್ಗೆ ಇಷ್ಟು ವರ್ಷ ಯೋಚಿಸಿರಲೇ ಇಲ್ಲ. ಈ ಬರಹ ಸಿದ್ಧಪಡಿಸುವಾಗ ಕೆಲವರನ್ನು ಆ ಬಗ್ಗೆ ಕೇಳಿದರೂ ಸೂಕ್ತ ಮಾಹಿತಿ ಸಿಗಲಿಲ್ಲ. ಕೊನೆಗೆ facebook ಮಿತ್ರ ಸಿಂಗರ್ ಶ್ರೀನಾಥ್ ಆತ ಕೆ.ಎಸ್. ಅಶ್ವಥ್ ಅವರ ಸಂಬಂಧಿ ಭಾಸ್ಕರ್ ಎಂದು ತಿಳಿಸಿ ಅನುಮಾನ ಪರಿಹರಿಸಿದರು. ಅವರಿಗೆ ವಿಶೇಷ ಧನ್ಯವಾದ. ಕಲಾವತಿ ಚಿತ್ರದಲ್ಲೂ ಭಾಸ್ಕರ್ ಅಭಿನಯಿಸಿರುವುದು ಆ ಮೇಲೆ ತಿಳಿಯಿತು. ಕನ್ನಡವೇ ತಾಯ್ನುಡಿಯು ಮತ್ತು ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಹಾಡುಗಳಲ್ಲಿ ಕೆಲವು ಸಮಾನ ಅಂಶಗಳನ್ನು ಗುರುತಿಸಬಹುದು. ಎರಡೂ ನಾಡು ನುಡಿಯ ಬಗೆಗಿನ ಹಾಡುಗಳು, ಚಿತ್ರದಲ್ಲಿ ಆಕಾಶವಾಣಿಯಿಂದ ನೇರ ಪ್ರಸಾರಗೊಳ್ಳುತ್ತವೆ, ಎರಡರಲ್ಲೂ ಹಾಡಿನ ಸಂಗೀತ ನಿರ್ದೇಶಕರು ಕಾಣಿಸಿಕೊಂಡಿದ್ದಾರೆ, ಎರಡನ್ನೂ ಚಿತ್ರದ ಟೈಟಲ್ಸ್ ಜೊತೆಗೂ ಬಳಕೆ ಮಾಡಿಕೊಳ್ಳಲಾಗಿದೆ.
ಹೃದಯವೀಣೆ ಮಿಡಿಯೆ ತಾನೆ
ಬಹುಶಃ ಇದು ಕನ್ನಡದಲ್ಲಿ ಬಂದ ಮೊದಲ ಗಜಲ್ ಶೈಲಿಯ ಪ್ರೇಮ ಗೀತೆ. ಹಿಂದಿಯ ಆನಂದ್ ಬಕ್ಷಿ ಅವರಂತೆ ಆಡುಮಾತಿನ ಶೈಲಿಯಲ್ಲಿ ಚಿ.ಉದಯಶಂಕರ್ ಬರೆದ ಸಾಹಿತ್ಯವನ್ನು ರಾಜನ್ ನಾಗೇಂದ್ರ ಅವರು ಬಾಗೇಶ್ರೀ ರಾಗದಲ್ಲಿ ಎಷ್ಟು ಸುಂದರವಾಗಿ ಸಂಯೋಜಿಸಿದ್ದಾರೋ, ಪಿ.ಬಿ.ಶ್ರೀನಿವಾಸ್ ಕೇಳುವವರ ಹೃದಯ ವೀಣೆ ಮಿಡಿಯುವಂತೆ ಅಷ್ಟೇ ಮಧುರವಾಗಿ ಹಾಡಿದ್ದಾರೆ. ಮಂದ್ರದ ಮಧ್ಯಮವನ್ನು ಸ್ಪರ್ಶಿಸುವ ಆರಂಭದ ಆಲಾಪಕ್ಕೇ ಮನಸೋಲುವ ಕೇಳುಗರು ತಬ್ಲಾದ ದಾದ್ರಾ ಠೇಕಾದೊಂದಿಗಿನ ಪಲ್ಲವಿ ಆರಂಭವಾಗುತ್ತಿದ್ದಂತೆ ಯಾವುದೋ ಲೋಕಕ್ಕೆ ಹೊರಟು ಹೋಗುತ್ತಾರೆ. Vibraphone, ವೀಣೆ, ಕೊಳಲು ಮುಂತಾದ ವಾದ್ಯಗಳ ಹಿತಮಿತವಾದ ಹಿಮ್ಮೇಳದೊಂದಿಗೆ ಕೋಗಿಲೆ ಗಾನ, ಸಮುದ್ರದ ಅಬ್ಬರ, ದುಂಬಿಯ ಮೊರೆತಗಳು ಮೇಳೈಸಿದ ಚರಣಗಳ ನಂತರ ಕಾರಣ ನೀನೆ ಓ ಜಾಣೆ ಎಂಬ ಕೊನೆಯ ಸಾಲು Vibraphoneನೊಂದಿಗೆ ಮುಗಿದು ಮೌನ ಆವರಿಸಿದಾಗಲೆ ಮತ್ತೆ ಇಹಲೋಕದ ಪರಿವೆಯುಂಟಾಗುವುದು. ಈ ಹಾಡು ಆರಂಭವಾಗುವ ಮೊದಲು ನಾಯಕಿ ‘ನಾನು ಎಷ್ಟೋ ಜನರ ಸಂಗೀತ ಕೇಳಿದ್ದೇನೆ.ಆದರೆ ನಿಮ್ಮ ಹಾಗೆ ಕೇಳುವವರು ಮೈ ಮರೆಯುವಂತೆ ಹಾಡುವವರನ್ನು ನೋಡೆ ಇರ್ಲಿಲ್ಲ. ನೀವು ಹಾಡುವಾಗ ಸಂಗೀತದ ಜತೆಗೆ ರಾಗಮಾಧುರ್ಯಕ್ಕೂ, ಭಾವಕ್ಕೂ, ಸಾಹಿತ್ಯಕ್ಕೂ ಕೊಡುವ ಸಮಾನ ಪ್ರಾಧಾನ್ಯತೆಯಿಂದಾನೇ ನಿಮ್ಮ ಗೀತೆ ಕೇಳುವವರ ಹೃದಯ ಮುಟ್ಟೋದು’ ಎಂದು ಹೇಳುತ್ತಾಳೆ. ಈ ಮಾತುಗಳು ಪಿ.ಬಿ.ಶ್ರೀನಿವಾಸ್ ಅವರನ್ನು ಕುರಿತೇ ಹೇಳಿದಂತಿವೆ! ಕ್ಲಿಷ್ಟಕರವಾದ ಪದಪುಂಜಗಳನ್ನು ಹೊಂದಿದ್ದ ಹಾಡುಗಳನ್ನಷ್ಟೇ ಕೇಳಿ ಗೊತ್ತಿದ್ದ ಆಗಿನ ಪೀಳಿಗೆಗೆ ಉದಯಶಂಕರ್ ಅವರ ಸರಳ ಶಬ್ದಗಳ ಸಾಹಿತ್ಯವಂತೂ ಒಂದು ಹೊಸ ಲೋಕವನ್ನೇ ತೆರೆದಿಟ್ಟಿತ್ತು. ಚಂದ್ರ ಮತ್ತು ಕಡಲಿನ ಸ್ನೇಹ, ಮಾಮರ ಮತ್ತು ಕೋಗಿಲೆಯ ಸಂಬಂಧ ಮುಂತಾದವುಗಳ ಉಲ್ಲೇಖ ಉದಯಶಂಕರ್ ಅವರ ಮೇಲೆ ಆಗಲೇ ವಚನಗಳ ಪ್ರಭಾವ ಬಹಳಷ್ಟಿದ್ದುದನ್ನು ಸ್ಪಷ್ಟಪಡಿಸುತ್ತದೆ. ಪಲ್ಲವಿ ಭಾಗದಲ್ಲಿರುವ ಪದಗಳ ಒಳಪ್ರಾಸ ಕು.ರ.ಸೀ ಶೈಲಿಯನ್ನು ನೆನಪಿಸುತ್ತದೆ. ಇಬ್ಬರೂ ಸಮ ಶ್ರುತಿಯಲ್ಲಿದ್ದರೆ ಮಾತ್ರ resonance ಮೂಲಕ ಹೃದಯ ವೀಣೆ ತಾನಾಗಿ ಮಿಡಿದೀತು ಎಂಬ ವೈಜ್ಞಾನಿಕ ತಥ್ಯವೂ ಈ ಹಾಡಿನಲ್ಲಿದೆ. ‘ಬಿದುರಿನ ಕೊಳಲು ಗಾನದ ಹೊನಲು ಹರಿಸದೇ ಕೃಷ್ಣನ ಕರ ಸೋಕಲು’ - ಇದು ಈ ಕವನದ ಅತ್ಯುತ್ತಮ ಸಾಲು. ಕೊಳಲು ಅದೇ ಆದರೂ ಹೊರಡುವ ನಾದವು ಅದನ್ನು ನುಡಿಸುವವರ ಮೇಲೆ ಹೊಂದಿಕೊಂಡಿರುವಂತೆ ಜೀವನವೆಂಬ ಕೊಳಲು ಶ್ರುತಿಯಲ್ಲಿರುತ್ತದೋ ಅಥವಾ ಅಪಸ್ವರ ಹೊರಡಿಸುತ್ತದೋ ಎಂಬುದು ಜೀವನ ನಡೆಸುವವರ ಮೇಲೆ ನಿರ್ಭರವಾಗಿರುತ್ತದೆ ಎಂದು ಇದನ್ನು ಅರ್ಥೈಸಬಹುದೋ ಏನೋ!
ಇದು ಉದಯಶಂಕರ್ ಅವರ ಆರಂಭದ ದಿನಗಳ ರಚನೆಯಾದ್ದರಿಂದ ಚಲನ ಚಿತ್ರ ಭಾಷೆಯಲ್ಲಿ ಮೀಟರ್ ಅನ್ನಲಾಗುವ ಹಾಡಿನ ಪ್ರತಿ ಸಾಲಿನ ಮಾತ್ರೆಗಳ ಹರಹು ಒಂದೇ ರೀತಿ ಇಲ್ಲದಿರುವುದನ್ನು ಗಮನಿಸಬಹುದು. ಹೀಗಿದ್ದಾಗ ಹಾಡನ್ನು ಲಯಕ್ಕೆ ಹೊಂದಿಸಲು ಸಂಗೀತ ನಿರ್ದೇಶಕ ಮತ್ತು ಹಾಡಲು ಗಾಯಕ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ರಾಜನ್ ನಾಗೇಂದ್ರ ಮತ್ತು ಪಿ.ಬಿ.ಶ್ರೀನಿವಾಸ್ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಒಂದು ಉಪಕಥೆ
ಇದು ಉದಯಶಂಕರ್ ಅವರ ಆರಂಭದ ದಿನಗಳ ರಚನೆಯಾದ್ದರಿಂದ ಚಲನ ಚಿತ್ರ ಭಾಷೆಯಲ್ಲಿ ಮೀಟರ್ ಅನ್ನಲಾಗುವ ಹಾಡಿನ ಪ್ರತಿ ಸಾಲಿನ ಮಾತ್ರೆಗಳ ಹರಹು ಒಂದೇ ರೀತಿ ಇಲ್ಲದಿರುವುದನ್ನು ಗಮನಿಸಬಹುದು. ಹೀಗಿದ್ದಾಗ ಹಾಡನ್ನು ಲಯಕ್ಕೆ ಹೊಂದಿಸಲು ಸಂಗೀತ ನಿರ್ದೇಶಕ ಮತ್ತು ಹಾಡಲು ಗಾಯಕ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ರಾಜನ್ ನಾಗೇಂದ್ರ ಮತ್ತು ಪಿ.ಬಿ.ಶ್ರೀನಿವಾಸ್ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಒಂದು ಉಪಕಥೆ
ವರ್ಷಕ್ಕೊಂದೆರಡು ಬಾರಿ ಯಾವುದಾದರೂ ನೆಪದಲ್ಲಿ ಕಾರ್ಕಳಕ್ಕೋ ಮಂಗಳೂರಿಗೋ ಹೋಗಿ ಒಂದೆರಡು ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ನನಗೆ ಸಿಗುತ್ತಿತ್ತು. ಆದರೆ ಈ ಅನ್ನಪೂರ್ಣ ಚಿತ್ರ ನೋಡಿದ ಸಂದರ್ಭ ಮಾತ್ರ ಕೊಂಚ ಭಿನ್ನ. ನಾನು ಆಗಷ್ಟೇ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಏಳನೆ ತರಗತಿ ಮುಗಿಸಿ ಹೈಸ್ಕೂಲ್ ಸೇರಿದ್ದೆ. ಅಲ್ಲಿಯ ದೊಡ್ಡ ದೊಡ್ಡ ಕೊಠಡಿಗಳಲ್ಲಿ ಸಾಕಷ್ಟು ದೂರದಲ್ಲಿರುತ್ತಿದ್ದ ಬೋರ್ಡಲ್ಲಿ ಬರೆದುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲವೆಂದು ಗಮನಕ್ಕೆ ಬಂದುದರಿಂದ ಕಣ್ಣು ಪರೀಕ್ಷೆ ಮಾಡಿಸಲು ಮಂಗಳೂರಿಗೆ ಹೋಗಬೇಕಾಯಿತು. ಆಗ ಈಗಿನಂತೆ ಕಣ್ಣನ್ನು ನೇರವಾಗಿ ಪರೀಕ್ಷಿಸಲು ಸಾಧ್ಯವಾಗುವ ಆಧುನಿಕ ಉಪಕರಣಗಳೆಲ್ಲಿದ್ದವು? ಹೀಗಾಗಿ ಕಣ್ಣಿನ ಒಳ ಭಾಗ ವೀಕ್ಷಿಸಲು ಸುಲಭವಾಗುವಂತೆ ಬೆಳಕಿನ ತೀಕ್ಷ್ಣತೆಗನುಸಾರವಾಗಿ ಹಿರಿದು ಕಿರಿದಾಗುವ ಕನೀನಿಕೆಯನ್ನು ಸದಾಕಾಲ ಹಿರಿದಾಗುವಂತೆ ಮಾಡುವ ಒಂದು ಅಂಜನ ಕೊಟ್ಟು ಹುಲ್ಲಿನ ಕಡ್ಡಿಯಿಂದ ಕಣ್ಣಿಗೆ ಹಚ್ಚಲು ತಿಳಿಸಿ ಮೂರು ದಿನ ಬಿಟ್ಟು ಬರುವಂತೆ ಹೇಳುತ್ತಿದ್ದರು. ಅದನ್ನು ಹಚ್ಚಿದ ಮೇಲೆ ಕೆಲವು ದಿನ ಬೆಳಕಿನತ್ತ ನೋಡುವುದೇ ಕಷ್ಟವಾಗುತ್ತದೆ. ಈ ರೀತಿ ಮೂರು ದಿನದ ನಂತರ ಮತ್ತೆ ಮಂಗಳೂರಿಗೆ ಹೋದಾಗ ಪ್ರಭಾತ್ ಟಾಕೀಸಿನಲ್ಲಿ ಅನ್ನಪೂರ್ಣ ಸಿನಿಮಾ ಪ್ರದರ್ಶಿಸಲ್ಪಡುತ್ತಿತ್ತು! ನನ್ನನ್ನು ಕರೆದುಕೊಂಡು ಹೋದ ಅಣ್ಣ ಬೇಡವೆಂದರೂ ಕೇಳದೆ ಅರ್ಧ ಕಣ್ಣು ತೆರೆದು ಆ ಸಿನಿಮಾ ಹೇಗೆ ನೋಡಿದೆನೋ ಎಂದು ಈಗ ಆಶ್ಚರ್ಯವಾಗುತ್ತಿದೆ! ಆ ಪರಿಸ್ಥಿತಿಯಲ್ಲೂ ಚಿತ್ರವನ್ನು ಸಂಪೂರ್ಣ ಆನಂದಿಸಿದ್ದಂತೂ ಹೌದು. ಆಗಲೇ ರೇಡಿಯೋ ಮತ್ತು ವಿವಿಧ ವಾದ್ಯಗಳ ಕಡು ಅಭಿಮಾನಿಯಾಗಿದ್ದ ನನಗೆ ಕನ್ನಡವೇ ತಾಯ್ನುಡಿಯು ಹಾಡಿನಲ್ಲಿ ಆಕಾಶವಾಣಿಯ ಸ್ಟುಡಿಯೊ, ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು, ಪ್ರಸಾರ ಗೋಪುರದಿಂದ ಸೂಸುವ ತರಂಗಗಳು ಮುಂತಾದವನ್ನು ತೋರಿಸಿದ್ದು ಥ್ರಿಲ್ ಉಂಟುಮಾಡಿತ್ತು. ಆದರೆ ಆ ದೃಶ್ಯದಲ್ಲಿ ಸ್ವತಃ ರಾಜನ್ ಮತ್ತು ನಾಗೇಂದ್ರ ಕೂಡ ಇದ್ದರೆಂದು ಆಗ ಗೊತ್ತಾಗಿರಲಿಲ್ಲ. ಸಿನಿಮಾದ ಸಂಭ್ರಮ ಮುಗಿದ ಮೇಲೆ ಡಾಕ್ಟರ ಬಳಿ ಹೋದೆವು. ಅವರು short sight ಎಂದು ನಿರ್ಧರಿಸಿ ಕೊಟ್ಟ ಕನ್ನಡಕ ಬಹಳಷ್ಟು ವರ್ಷ ನನ್ನ ಮೂಗಿನ ಮೇಲೆ ರಾರಾಜಿಸುತ್ತಿತ್ತು. ಆದರೆ ಎಲ್ಲರಿಗೂ ಚಾಳೀಸು ಬರುವ ಕಾಲಕ್ಕೆ ನನ್ನ short sight neutralize ಆಗಿ ಈಗ ಬಹಳ ವರ್ಷಗಳಿಂದ ದೂರದ ವಸ್ತುಗಳನ್ನು ಬರಿಗಣ್ಣಿಂದ ಸ್ಪಷ್ಟವಾಗಿ ನೋಡಬಲ್ಲವನಾಗಿದೇನೆ. ಇದಕ್ಕಾಗಿ ನಾನು ಆ ಅಂತರ್ಯಾಮಿಗೆ ಕೃತಜ್ಞ. ಈಗ ನಾನು ಅಕ್ಷರಗಳನ್ನೋದುವ ಸಲುವಾಗಿ reading glass ಮಾತ್ರ ಉಪಯೋಗಿಸುತ್ತಿರುವುದು.
ಇರಲಿ. ಈಗ ಹಾಡಿನ ಸಾಹಿತ್ಯದ ಮೇಲೆ ಕಣ್ಣಾಡಿಸುತ್ತಾ ಕಿರು ಡಯಲಾಗಿನೊಂದಿಗಿನ ಹಾಡು ಆಲಿಸಿ ಮಾಧುರ್ಯದಲ್ಲಿ ಮೀಯಲು ತಯಾರಾಗಿ. ಸಾಧ್ಯವಾದರೆ headphone ಬಳಸಿ.
ಹೃದಯವೀಣೆ
ಹೃದಯವೀಣೆ
ಹೃದಯವೀಣೆ ಮಿಡಿಯೆ ತಾನೆ
ಕಾರಣ ನೀನೆ ಓ ಜಾಣೆ ಕಾರಣ ನೀನೆ ಓ ಜಾಣೇ
ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲು ||2||
ಚಂದ್ರನ ಕಾಣಲು ಮೊರೆಯದೇ ಕಡಲು
ತಿಂಗಳ ಬೆಳಕಿನ ರಾತ್ರಿಯೊಳೂ
ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು ||2||
ಹೂವು ಅರಳಲು ಕಂಪು ಚೆಲ್ಲಲು
ದುಂಬಿಯು ನಲಿಯದೆ ಗಾನದೊಳು
******
ಸದಭಿರುಚಿಯ ಈ ಪೂರ್ತಿ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.
ಈಗ ಕೊನೆಗೊಂದು ಬೋನಸ್. 1951ನೇ ಇಸವಿಯ ಚಂದಮಾಮದಲ್ಲಿ ಬಾಲಕ ಚಿ.ಉದಯಶಂಕರ್ ಬರೆದ ಚುಟುಕವೊಂದು ಪ್ರಕಟವಾದದ್ದು ಇಲ್ಲಿದೆ ನೋಡಿ. ಬೆಳೆಯ ಗುಣ ಮೊಳಕೆಯಲ್ಲಿ ಅನ್ನುವಂತೆ ಸರಳ ಪದಗಳನ್ನುಪಯೋಗಿಸಿ ಹೇಳಬೇಕಾದ್ದನ್ನು ಹೇಳುವ ಕಲೆ ಆಗಲೇ ಆತನಿಗೆ ಸಿದ್ಧಿಸಿತ್ತು ಎಂದು ಇದರಿಂದ ಅರಿವಾಗುತ್ತದೆ.
4-5-2017
ಅಬ್ಬಾ ಎಂಥಾ ಮಾಹಿತಿಯ ಕಣಜವಿದು, ಸರ್.
ReplyDeleteನೀವು ಆಸ್ವಾದಿಸಿದ ಆನಂದ ನೀವು ಹಂಚುವ ರೀತಿ ತುಂಬಾ ಖುಷಿ ಕೊಡುತ್ತದೆ.
ರಾಜನ್-ನಾಗೇಂದ್ರರನ್ನು ಹಾಡಿನ ಫೋಟೋದಲ್ಲಿ ನೋಡಿ ಇನ್ನಷ್ಟೂ ಮುದ ಕೊಟ್ಟಿರಿ, ಸರ್. ನಿಮಗೆ ತುಂಬಾ ತುಂಬಾ ಆಭಾರಿ.
ಮಧುಸೂದನ ಭಟ್
Sir is hrudaya veene midide Bhagesri na sir
ReplyDeleteಹೌದು. ಬಾಗೇಶ್ರೀ ಎಂದು ಲೇಖನದಲ್ಲೇ ಉಲ್ಲೇಖ ಇದೆಯಲ್ಲ.
Delete