ಈಗ ಗಂಟು ಹಾಕಿದ ಜನಿವಾರಗಳು ಅಂಗಡಿಯಲ್ಲಿ ಕೊಳ್ಳಲು ಸಿಗುವುದರಿಂದ ಯಾರೂ ಮನೆಯಲ್ಲಿ ಜನಿವಾರ ತಯಾರಿಸಲಾರರು. ಆದರೆ ಹಿಂದಿನ ಕಾಲದಲ್ಲಿ ಸ್ವತಃ ತಕಲಿಯಲ್ಲಿ ನೂಲು ತೆಗೆದು ತಮ್ಮ ಬಳಕೆಗೆ ಬೇಕಾಗುವಷ್ಟು ಜನಿವಾರ ತಯಾರಿಸುವ ಕ್ರಮ ಅನೇಕ ಮನೆಗಳಲ್ಲಿತ್ತು. ನಮ್ಮಲ್ಲೂ ಇತ್ತು. ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗ ಬೇಟೆ ನಡೆಸುತ್ತಾ ಮನೆಯಲ್ಲೇ ಇದ್ದ ಒಂದು ವರ್ಷ ನಾನೂ 50 ಜನಿವಾರ ತಯಾರಿಸಲಿಕ್ಕಾಗುವಷ್ಟು ನೂಲು ತೆಗೆದಿದ್ದೆ. ನಮ್ಮ ತಂದೆ ಮತ್ತು ಅಣ್ಣಂದಿರು ಈ ಕೆಲಸ ಮಾಡುತ್ತಿದ್ದುದನ್ನು ನೋಡುತ್ತಾ ನಾನು ಬಾಲ್ಯ ಕಳೆದವನು. ಅಂದು ಕಂಡದ್ದನ್ನು ಇಂದು ಅಕ್ಷರರೂಪಕ್ಕಿಳಿಸಲು ಪ್ರಯತ್ನಿಸಿದ್ದೇನೆ. ನಿರೂಪಣೆಯಲ್ಲಿ ಕೆಲವು ಚಿತ್ಪಾವನಿ ಶಬ್ದಗಳು ಇವೆ. ಸ್ವತಃ ಕಣ್ಣಿಂದ ನೋಡದಿದ್ದವರಿಗೆ ಈ ಪ್ರಕ್ರಿಯೆ ಮನದಟ್ಟಾಗುವುದು ತುಸು ಕಷ್ಟವೇ.
====
1. ನೂಲು ತೆಗೆಯುವುದು.
---------
ಇದಕ್ಕಾಗಿ ಕಡೆಚ್ಚಿಲ್ ಬಳಸಿ ಗೆರಟೆಯಿಂದ ತಯಾರಿಸಿದ ಕಪ್ಪು ಚಕ್ರದ ನಡುವೆ ಅಡಿಕೆ ಮರದ ಸಪುರ ಕಡ್ಡಿಯನ್ನು ತೂರಿಸಿದ ತಕಲಿಯನ್ನು ಬಳಸಲಾಗುತ್ತಿತ್ತು. ಇದನ್ನು ಮರದ ಸೇರನ್ನು ಹೋಲುವ ಹಾನ್ನೆಯ ಮೇಲೆ ಇರಿಸಿದ ನಯಗೊಳಿಸಿದ ಗೆರಟೆಯೊಳಗೆ ಕೈಯಿಂದ ತಿರುಗಿಸುವುದು. ಒಮ್ಮೆ ಕೈಯಿಂದ ಜೋರಾಗಿ ತಿರುಪು ಕೊಟ್ಟರೆ fly wheel ಪರಿಣಾಮದಿಂದ ತಕಲಿ ಬಹಳ ಹೊತ್ತು ತಿರುಗುತ್ತಿತ್ತು. ತಕಲಿಗೆ ಮೊದಲೇ ಸುತ್ತಿರುವ ನೂಲಿನ ಎಳೆಯನ್ನು ಎಡಗೈಯಲ್ಲಿ ಹಿಡಿದಿರುವ ಹತ್ತಿಯ ದಪ್ಪದ ಬತ್ತಿಗೆ ತಾಗಿಸಿ ತಕಲಿಗೆ ತಿರುಪು ಕೊಟ್ಟು ಬಲಗೈಯ ಹೆಬ್ಬೆಟ್ಟು ಮತ್ತು ತೋರುಬೆರಳುಗಳಿಂದ ಹದವಾಗಿ ಎಳೆದರೆ ಸಪುರವಾರ ನೂಲು ಬರುತ್ತದೆ. ಎಡಗೈಯಲ್ಲಿ ಇರುವ ಹತ್ತಿಯ ಬತ್ತಿಯನ್ನು ಮೇಲೆತ್ತುತ್ತಾ ಬಲಗೈಯಿಂದ ನೂಲು ಎಳೆಯುವ ವೇಗ ಜಾಸ್ತಿಯೂ ಆಗಬಾರದು ಕಮ್ಮಿಯೂ ಆಗಬಾರದು. ನೂಲು ಪೈಲಟ್ ಪೆನ್ನಿನ ಬರವಣಿಗೆಯಂತೆ ಸರಾಗವಾಗಿ ಬರಬೇಕು. ಮಧ್ಯದಲ್ಲಿ ಮೆಂಢೆ ಅಂದರೆ ಹತ್ತಿಯ ದಪ್ಪ ಉಂಡೆ ಬರಬಾರದು. ಎಡಗೈ ಹೋಗುವಷ್ಟು ಮೇಲೆ ಹೋದ ಮೇಲೆ ತಕಲಿಗೆ ತಿರುಪು ಕೊಡುವುದನ್ನು ನಿಲ್ಲಿಸಿ ನೂತ ನೂಲನ್ನು ತಕಲಿಯ ಕಡ್ಡಿಗೆ ಸುತ್ತುವುದು. ಆ ಮೇಲೆ ಮತ್ತೆ ಒಂದು ಮಾರು ನೂಲುವುದು. ತಕಲಿಗೆ ಸುತ್ತುವುದು. ಹೀಗೆ ಸುತ್ತಿದ ನೂಲು ಕೆಳಭಾಗದಲ್ಲಿ ತಕಲಿಯ ಚಕ್ರದ ಅಂಚಿನವರೆಗೆ ಬರುವಲ್ಲಿ ವರೆಗೆ ಇದೇ ಕ್ರಮ ಮುಂದುವರೆಸುವುದು. ಈ ಘಟ್ಟದಲ್ಲಿ ತಕಲಿಗೆ ಸುತ್ತಿದ ನೂಲಿಗೆ ಶಂಕುವಿನಾಕಾರ ಬಂದಿರುತ್ತದೆ. ಪರಿಣಿತಿ ಸಾಧಿಸಿದವರು ಮಧ್ಯ ಭಾಗದಲ್ಲಿ ಇನ್ನಷ್ಟು ನೂಲು ಸುತ್ತಿ ಜಂಬನೇರಳೆ ಆಕಾರ ಬರುವಂತೆಯೂ ಮಾಡಬಹುದು. ತಕಲಿ ಸುತ್ತುವ ಗೆರಟೆಯಲ್ಲಿ ಸ್ವಲ್ಪ ವಿಭೂತಿ ಹಾಕಿಕೊಳ್ಳುವ ಕ್ರಮವೂ ಇದೆ. ಆಗಾಗ ಇದನ್ನು ಕೈಬೆರಳುಗಳಿಗೆ ಹಚ್ಚಿಕೊಂಡರೆ ನೂಲು ಎಳೆಯುವುದು ಸುಲಭ. ಸಾಕಷ್ಟು ನೂಲು ಸುತ್ತಿ ಭಾರವಾದ ತಕಲಿ ಹಾನ್ನೆಯ ಮೇಲಿನ ಗೆರಟೆಯಲ್ಲಿ ತಿರುಗುವಾಗ ಉಂಟಾಗುವ ಕರ್ರ್ ಎಂಬ ಶಬ್ದ ಕೇಳಲು ಬಲು ಆಪ್ಯಾಯಮಾನ. ಹತ್ತಿಯಿಂದ ನೂಲು ಎಳೆಯುವಾಗ ಒಮ್ಮೊಮ್ಮೆ ಮಧ್ಯದಲ್ಲಿ ತುಂಡಾಗುವ ಸಂದರ್ಭಗಳೂ ಇರುತ್ತವೆ. ಆಗ ಹತ್ತಿಯ ಎರಡು ಎಳೆಗಳನ್ನು ಬಳಸಿ ತುಂಡಾದ ತುದಿಗಳನ್ನು ಸೇರಿಸಿ ತಕಲಿಯಿಂದ ಸ್ವಲ್ಪ ತಿರುಪು ಕೊಟ್ಟರೆ ಸಂದು ಗೊತ್ತಾಗದರೀತಿ ನೂಲು ಕೂಡಿಕೊಳ್ಳುತ್ತದೆ. ನೂಲುವಿಕೆಯ ಒಂದು ಅಧ್ಯಾಯ ಮುಗಿದಾಗ ಹತ್ತಿಯ ಬತ್ತಿಯಿಂದ ನೂಲನ್ನು ಬೇರ್ಪಡಿಸಿ ತಕಲಿಯ ಚಕ್ರದ ಕೆಳಭಾಗ ದಂಡಿಗೆ ಸುತ್ತಿಡುವುದು. ಸಾಧ್ಯವಾದಷ್ಟು ನೂಲು ಸುತ್ತಿ ಒಂದು ತಕಲಿಯು ಫುಲ್ ಆಯಿತು ಅನ್ನಿಸಿದೊಡನೆ ಇನ್ನೊಂದು ತಕಲಿಯಲ್ಲಿ ನೂಲುವಿಕೆಯನ್ನು ಮುಂದುವರೆಸುವುದು. ಗೆರಟೆಯ ಕೆಳಗಿನ ಹಾನ್ನೆಯ ಟೊಳ್ಳು ಭಾಗವನ್ನು ಸಿದ್ಧ ಮಾಡಿಟ್ಟ ಹತ್ತಿಯ ಬತ್ತಿಗಳನ್ನು ದಾಸ್ತಾನಿರಿಸಿಕೊಳ್ಳಲು ಬಳಸುವುದು ನಮ್ಮಲ್ಲಿ ಅಣ್ಣಂದಿರು ಮುಖ್ಯ ನೂಲುಗಾರರು. ತಂದೆಯವರು ಕೂಡ ಅವರ ಯೌವನದಲ್ಲಿ ನೂಲುತ್ತಿದ್ದಿರಬಹುದು. ನನ್ನ ನೆನಪಿನಲ್ಲಿ ಅವರು ಮುಂದಿನ ಕೆಲಸಗಳಾದ ತಿಸ್ತ್ಯೊ ಮಾಡುವುದು, ಜನಿವಾರಗಳಿಗೆ ತಿರುಪು ಕೊಡುವುದು ಮುಂತಾದವುಗಳನ್ನು ಮಾತ್ರ ಮಾಡುತ್ತಿದ್ದುದು. ವಟಸಾವಿತ್ರಿ ವ್ರತದಿಂದದಿಂದ ಉಪಾಕರ್ಮದ ಕೆಲವು ದಿನ ಮೊದಲಿನವರೆಗೆ ಮಾತ್ರ ನಮ್ಮಲ್ಲಿ ನೂಲುವಿಕೆಯ ಸೀಸನ್ ಇರುತ್ತಿದ್ದುದು.
2. ತಿಸ್ತಿ ಮಾಡುವುದು.
-----------
ತಿಸ್ತಿ ಅಂದರೆ ನೂಲಿನ ಮೂರು ಎಳೆಗಳನ್ನು ಒಟ್ಟು ಸೇರಿಸುವುದು ಎಂದರ್ಥ. ಇದನ್ನು ತಂದೆಯವರು ಮಾಡುತ್ತಿದ್ದುದು. ಒಂದು ಜನಿವಾರಕ್ಕೆ ಬೇಕಾಗುವ ಸೂಕ್ತ ಅಳತೆಯ ನೂಲನ್ನು ಅಳೆಯಲು ಬಿದಿರಿನ ತೆಳ್ಳನೆಯ ಭೀಂಟ ಎಂಬ ಅಳತೆಗೋಲನ್ನು ಬಳಸುವುದು. ತುಂಬಿದ ಎರಡು ತಕಲಿಗಳ ಇನ್ನೊಂದು ಬದಿಗೆ ಮಧ್ಯದಲ್ಲಿ ತೂತು ಮಾಡಿದ ರುವಿ ನಾಣ್ಯ ಸಿಕ್ಕಿಸಿ ಅವು ಸುಲಭವಾಗಿ ಉರುಳುವಂತೆ ಮಾಡಿ ಒಂದು ಗೆರಸೆಯಲ್ಲಿ ಇಟ್ಟುಕೊಳ್ಳುವುದು. ಎರಡು ತಕಲಿಗಳ ನೂಲಿನ ತುದಿಗಳನ್ನು ಒಟ್ಟು ಸೇರಿಸಿ ಭೀಂಟಕ್ಕೆ 30 ಸುತ್ತು ಸುತ್ತುವುದು. ನಂತರ ಭೀಂಟದಲ್ಲಿರುವ ಎರಡು ನೂಲಿನೆಳೆಗಳ ತುದಿಗಳು ಮತ್ತು ಒಂದು ತಕಲಿಯ ನೂಲಿನ ತುದಿಯನ್ನು ಒಟ್ಟು ಮಾಡಿ ಮೂರು ಎಳೆಗಳನ್ನು ಅಂಗೈಗೆ ಸುತ್ತುತ್ತಾ ಹೋಗುವುದು. ಹೀಗೆ ಮಾಡುವಾಗ ಭೀಂಟ ಗೆರಸೆಯಲ್ಲಿ ಅಂತರ್ಲಾಗ ಹಾಕುವುದನ್ನು ನೋಡಲು ತುಂಬಾ ಚೆನ್ನಾಗಿರುತ್ತದೆ. ಭೀಂಟದಲ್ಲಿರುವ ನೂಲು ಮುಗಿದಾಗ ತಕಲಿಯ ನೂಲನ್ನು ಕತ್ತರಿಸಿ ನೂಲಿನ ಮೂರು ಎಳೆಗಳನ್ನು ಅಂಗೈಯಿಂದ ಬೇರ್ಪಡಿಸಿ ಒಮ್ಮೆ ತೊಡೆಯ ಮೇಲೆ ಹೊಸೆದು ಗೆರಸೆಯ ಬದಿಯಲ್ಲಿ ಇಡುವುದು. ತಕಲಿಗಳ ನೂಲು ಮುಗಿಯುವ ವರೆಗೆ ಈ ಕಾರ್ಯ ಮುಂದುವರೆಸುವುದು. ನಂತರ ಹೊಸೆದು ಇಟ್ಟ ತಿಸ್ತಿಗಳನ್ನು ಅವುಗಳಿಗೆ ತಿರುಪು ಕೊಡಲು ಉಪಯೋಗಿಸುವ ಕೆಂಪು ಬಣ್ಣದ ಹಾನ್ನೆಯಲ್ಲಿ ಶೇಖರಿಸಿಡುವುದು.
3. ತಿಸ್ತಿಗಳಿಗೆ ತಿರುಪು ಕೊಡುವುದು.
------------
ಇದಕ್ಕೆ ಮರದ ಆಟಿಕೆಯೊಂದರ ಹಸುರು ಬಣ್ಣದ ಚಕ್ರವನ್ನು fly wheel ಆಗಿ ಬಳಸಿದ ದೊಡ್ಡ ತಕಲಿಯನ್ನು ತಂದೆಯವರು ಬಳಸುತ್ತಿದ್ದರು. ಹಾನ್ನೆಯ ಗೆರಟೆಯ ಕೆಳಭಾಗದಲ್ಲಿ ಶೇಖರಿಸಿಟ್ಟ ಒಂದು ತಿಸ್ತಿಯನ್ನು ತೆಗೆದುಕೊಂಡು ಎಡ ಅಂಗೈಗೆ ಸಿಕ್ಕಿಸಿಕೊಂಡು ನೂಲಿನ ಮೂರೆಳೆಗಳ ತುದಿಯನ್ನು ತಕಲಿಗೆ ಒಂದೆರಡು ಸುತ್ತು ಸುತ್ತುವುದು. ನಂತರ ಎಡಗೈಯನ್ನು ಮೇಲೆತ್ತುತ್ತಾ ಒಂದು ಮಾರು ನೂಲನ್ನು ಬಿಚ್ಚಿಕೊಂಡು ಬಲಗೈಯಿಂದ ತಕಲಿಗೆ ಅಪ್ರದಕ್ಷಿಣಾಕಾರವಾಗಿ ತಿರುಪು ಕೊಡುವುದು. (ಹತ್ತಿಯಿಂದ ನೂಲುವಾಗ ತಕಲಿಯನ್ನು ಪ್ರದಕ್ಷಿಣಾಕಾರದಲ್ಲಿ ತಿರುಗಿಸುವುದು). ನೂಲಿಗೆ ಸಾಕಷ್ಟು ತಿರುಪು ಸಿಕ್ಕಿದ ಮೇಲೆ ಅದನ್ನು ತಕಲಿಗೆ ಸುತ್ತಿ ಮತ್ತೊಂದು ಮಾರು ಬಿಚ್ಚಿಕೊಂಡು ತಿರುಪು ಕೊಡುವುದು. ಅಂಗೈಗೆ ಸಿಕ್ಕಿಸಿಕೊಂಡ ತಿಸ್ತಿ ಸಂಪೂರ್ಣ ಮುಗಿದ ಮೇಲೆ ತುದಿಯನ್ನು ತಕಲಿಯಲ್ಲಿ ನೂಲು ಉಂಟುಮಾಡಿದ ಶಂಕುವಿನಾಕಾರದ ಸಪುರ ಭಾಗದಲ್ಲಿ ಸುತ್ತಿಡುವುದು. ತಕಲಿ ಪೂರ್ಣ ತುಂಬುವ ವರೆಗೆ ಇನ್ನಷ್ಟು ತಿಸ್ತಿಗಳಿಗೂ ಹೀಗೆಯೇ ಮಾಡುವುದು.
4. ಜನಿವಾರಗಳಿಗೆ ತಿರುಪು ಕೊಡುವುದು.
-------------
ಇದಕ್ಕೆ ಒಬ್ಬ ಸಹಾಯಕನೂ ಬೇಕು. ತಂದೆಯವರ ಕಾಲದಲ್ಲಿ ಅಣ್ಣಂದಿರು ಸಹಾಯಕರಾಗಿರುತ್ತಿದ್ದರು. ಅಣ್ಣನ ಕಾಲದಲ್ಲಿ ನಾನೂ ಸಹಾಯಕನಾದದ್ದಿದೆ. ಒಂದು ಕೈಯಲ್ಲಿ ತಿಸ್ತಿ ಸುತ್ತಿರುವ ತಕಲಿ ಮತ್ತು ಇನ್ನೊಂದು ಕೈಯಲ್ಲಿ ಖಾಲಿ ತಕಲಿಯೊಂದನ್ನು ಹಿಡಿದ, ತಿಸ್ತಿಗೆ ತಿರುಪು ಕೊಡುವ ಮುಖ್ಯ ವ್ಯಕ್ತಿ ಜಗಲಿಯಲ್ಲಿ ಒಂದು ಬದಿಯಲ್ಲಿ ನಿಲ್ಲುವುದು. ಸಹಾಯಕನಿಗೆ ನೂಲಿನ ತುದಿ ಕೊಟ್ಟು ಖಾಲಿ ತಕಲಿಯ ಕಡ್ಡಿಯ ಮೂಲಕ ನೂಲು ಹಾದು ಹೋಗುವ ಹಾಗೆ ಮಾಡುವುದು. ಸಹಾಯಕನು ಎಡ ಕೈಯಲ್ಲಿ ನೂಲಿನ ತುದಿ ಮತ್ತು ಬಲಗೈಯಲ್ಲಿ ನೂಲು ಹಾದು ಹೋಗುವ ಖಾಲಿ ತಕಲಿ ಹಿಡಿದು ಹಿಂದೆ ಹಿಂದೆ ಸಾಗುತ್ತ ಜಗಲಿಯ ಇನ್ನೊಂದು ತುದಿಗೆ ಮುಟ್ಟುವಾಗ ಒಂದು ತಿಸ್ತಿ ತಕಲಿಯಿಂದ ಪೂರ್ತಿ ಹೊರಬರುತ್ತಿತ್ತು. ಈಗ ಖಾಲಿ ತಕಲಿಗಳಿಂದ ನೂಲನ್ನು ಹೊರಗೆ ತೆಗೆದಾಗ ತಿಸ್ತಿಯ ಮೂರು ಎಳೆಗಳ ಒಂದು ತುದಿ ಮುಖ್ಯ ವ್ಯಕ್ತಿಯ ಕೈಯಲ್ಲೂ ಇನ್ನೊಂದು ತುದಿ ಸಹಾಯಕನ ಕೈಯಲ್ಲೂ ಇರುತ್ತದೆ. ಈಗ ತಿರುಪು ಕೊಡುವವರು ತಮ್ಮ ಕೈಯಲ್ಲಿರುವ ತುದಿಯನ್ನು ಲೋಹದ ವಿಶೇಷ ತಕಲಿಯ ಕೊಕ್ಕೆಗೆ ಸಿಕ್ಕಿಸಿ ನೂಲನ್ನು ಎಡಗೈಯಲ್ಲಿ ಹಿಡಿದು ತಕಲಿಯ ದಂಡಿಯನ್ನು ಬಲ ತೊಡೆಯ ಮೇಲಿಟ್ಟು ಬಲ ಅಂಗೈಯಿಂದ ಉಜ್ಜಿ ತಿರುಪು ಕೊಡುವುದು. ತಿರುಪು ಪಡೆದ ತಿಸ್ತಿಯ ಮೂರು ಎಳೆಗಳು ಗಿಡ್ಡವಾಗುತ್ತಾ ಹೋಗುತ್ತವೆ. ಈ ಹಂತದಲ್ಲಿ ಸಹಾಯಕನು ತನ್ನ ಕೈಯಲ್ಲಿರುವ ತುದಿಯನ್ನು ಮೊದಲೇ ಮಾಡಿಟ್ಟಿರುವ ಸುಣ್ಣದ ಗುರುತೊಂದಕ್ಕೆ ಹಿಡಿದು ಸಾಕಷ್ಟು ತಿರುಪು ಆಯಿತೇ ಎಂದು ಪರೀಕ್ಷಿಸುವುದು. ಸರಿಯಾದ ಪ್ರಮಾಣದ ತಿರುಪು ಆಯಿತು ಎಂದು ಖಾತ್ರಿ ಆದ ಮೇಲೆ ತಿರುಪು ಕೊಡುವವರು ತಿಸ್ತಿಯನ್ನು ಅಂಗೈ ಬೆರಳುಗಳಿಗೆ ಸುತ್ತಿ ತೊಡೆಗೆ ಹೊಸೆದು ಜೋಪಾನವಾಗಿ ತೆಗೆದಿರಿಸುವುದು. ಈ ರೀತಿ ತಿಸ್ತಿ ಸುತ್ತಿಟ್ಟ ತಕಲಿ ಖಾಲಿ ಆಗುವ ವರೆಗೆ ಮಾಡುವುದು. ಒಂದು ಕೈಯಲ್ಲಿ ತಿಸ್ತಿಯ ತುದಿ ಮತ್ತು ಇನ್ನೊಂದು ಕೈಯಲ್ಲಿ ದಂಡಿಯ ಮೂಲಕ ತಿಸ್ತಿ ಹಾದು ಹೋದ ಖಾಲಿ ತಕಲಿ ಹಿಡಿದು ಹಿಂದೆ ಹಿಂದೆ ಸಾಗುವಾಗ ಕೆಲವೊಮ್ಮೆ ಸಹಾಯಕನ ಕೈ ಜಾರಿ ತಿಸ್ತಿಯ ನೂಲು ನೆಲಕ್ಕೆ ಬೀಳುವುದಿತ್ತು. ಆಗ ತಿಸ್ತಿ ಮಾಡುವ ಮುಖ್ಯ ವ್ಯಕ್ತಿಯ ಬೈಗುಳಗಳನ್ನು ಅರಗಿಸಿಕೊಂಡು ಕೆಲಸವನ್ನು ಮತ್ತೆ ಆರಂಭಿಸಬೇಕಾಗುತ್ತಿತ್ತು.
5. ಜನಿವಾರಕ್ಕೆ ಗಂಟು ಹಾಕುವುದು.
---------
ಇದನ್ನು ಮುಂಚಿತವಾಗಿ ಮಾಡಿ ಇಡಲಿಕ್ಕಿಲ್ಲ. ಜನಿವಾರ ಬದಲಾಯಿಸಬೇಕಾದ ಮುನ್ನಾ ದಿನವಷ್ಟೇ ಮಾಡುವುದು. ತಿರುಪು ಹಾಕಿದ ಜನಿವಾರ ತೆಗೆದುಕೊಂಡು ಪದ್ಮಾಸನ ಭಂಗಿಯಲ್ಲಿರುವ ತೊಡೆಗಳ ಸುತ್ತ ಮೂರು ಸುತ್ತು ಬರುವಂತೆ ಹೊಂದಿಸುವುದು. ಎರಡು ತುದಿಗಳನ್ನು ಸೇರಿಸಿ ಬ್ರಹ್ಮಗಂಟು ಹಾಕಿ ಆದಷ್ಟು ಚಿಕ್ಕ ಕೊಸರು ಉಳಿಯುವಂತೆ ಜೋಡಿಸುವುದು. ಉಳಿದ ಕೊಸರನ್ನು ಗಂಟಿನೊಳಗೆ ಅಡಗಿಸುವುದು.
----------
ಮನೆ ಮಠ ತೊರೆದು ಗಡ್ಡ ಮೀಸೆ ಜಟೆ ಬೆಳೆಸಿ ಪರಿವ್ರಾಜಕರಂತೆ ಊರೂರು ತಿರುಗುವ ನಾವಡ ಎಂಬುವರು ನಮ್ಮೂರಿಗೂ ಬರುತ್ತಿದ್ದರು. ಹೆಚ್ಚಾಗಿ ಊರ ದೇವಸ್ಥಾನದ ಅಂಬಲದ ಮೇಲೆ ಠಿಕಾಣಿ ಹೂಡುತ್ತಿದ್ದ ಅವರು ರಾತ್ರೆ ದತ್ತ ಭಜನೆ ಮಾಡಿ ನಮಗೆಲ್ಲ ದ್ರಾಕ್ಷಿ, ಕಲ್ಲುಸಕ್ಕರೆಗಳ ಪ್ರಸಾದ ಕೊಡುತ್ತಿದ್ದರು. ಹಗಲು ಹೊತ್ತು ತಕಲಿಯಲ್ಲಿ ನೂಲು ತೆಗೆದು ಯಾವ ಅಳತೆಯ ಪರಿಕರವೂ ಇಲ್ಲದೆ, ಇನ್ನೊಬ್ಬರ ಸಹಾಯವೂ ಇಲ್ಲದೆ ಜನಿವಾರ ತಯಾರಿಸುತ್ತಿದ್ದರು.
ಅವರೊಮ್ಮೆ ನಮ್ಮ ಮನೆಗೆ ಬಂದಾಗ ಹಪ್ಪಳ ತಿನ್ನುವ ಭಂಗಿಯ ಸ್ಕೆಚ್ ಒಂದು ಬಿಡಿಸಿದ್ದೆ!
--------
ಈಗ ಒಂದು ಪ್ರಶ್ನೆ.
ಮಂತ್ರಿಸಿ ಧರಿಸಲು ಸಿದ್ಧವಾದ ಗಂಟು ಹಾಕಿದ ಜನಿವಾರದಲ್ಲಿ ನೂಲಿನ ಎಷ್ಟು ಎಳೆಗಳಿರುತ್ತವೆ?
No comments:
Post a Comment
Your valuable comments/suggestions are welcome