Sunday, 20 February 2022

ವೀರ ಸಂಕಲ್ಪ

ಹುಣಸೂರು ಕೃಷ್ಣಮೂರ್ತಿ ಅವರು  ತಮ್ಮ ಎವರ್‌ಗ್ರೀನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಿಸಿದ ವೀರ ಸಂಕಲ್ಪ 1964ರಲ್ಲಿ ತುಂಬಾ ಸದ್ದು ಮಾಡಿದ ಚಿತ್ರ.  ಆಗಿನ ಎಲ್ಲ ಪತ್ರಿಕೆಗಳ ಸಿನಿಮಾ ಪುಟಗಳಲ್ಲಿ ಪ್ರತೀ ವಾರವೂ ಈ ಚಿತ್ರದ ಬಗ್ಗೆ ಏನಾದರೊಂದು ಸುದ್ದಿ ಇದ್ದೇ ಇರುತ್ತಿತ್ತು. ಆಗ ಮಂಗಳೂರಿನಲ್ಲಿದ್ದ ನಮ್ಮ ಅಣ್ಣ ಆ ಚಿತ್ರ ನೋಡಿ ತಂದಿದ್ದ ಪದ್ಯಾವಳಿಯೂ ನಮ್ಮಲ್ಲಿತ್ತು.  ಚಿತ್ರ  ಬಿಡುಗಡೆ ಆಗಿ ಸುಮಾರು ಎರಡು ತಿಂಗಳುಗಳ ನಂತರ  ರೇಡಿಯೋದಲ್ಲೂ ಈ ಚಿತ್ರದ ಹಾಡು ಬಾ ಕೋಗಿಲೆ ಮತ್ತು ಸಿಟ್ಯಾಕೊ ಸಿಡುಕ್ಯಾಕೊ ಹಾಡುಗಳು ದಿನ ನಿತ್ಯ ಬರತೊಡಗಿದವು. ಎಲ್ಲೋ ಒಂದೆರಡು ಸಲ ದುಡುಕದಿರು ಹೃದಯೇಶ ಕೇಳಿದ ನೆನಪಿದೆ. ಚಿತ್ರದ ಒಟ್ಟು ಏಳು ಹಾಡುಗಳ  ಪೈಕಿ ಉಳಿದ ನಾಲ್ಕು ಪದ್ಯಾವಳಿಯಲ್ಲಿ ಮತ್ತು ಅವು ಹೇಗಿರಬಹುದೆಂಬ ಕುತೂಹಲ ಮನಸ್ಸಿನಲ್ಲಿ ಭದ್ರವಾಗಿ ಕುಳಿತಿದ್ದವು. ಅಂತರ್ಜಾಲವೆಂಬ ಅಂಗೈನೆಲ್ಲಿಯಲ್ಲಿ ಹುಡುಕಿದರೆ ಅವುಗಳ ಪೈಕಿ ಯಾವುದಾದರೂ ಸಿಗುತ್ತಿತ್ತೋ ಏನೋ.  ಆದರೆ ನಾನೇಕೋ ಆ ಕಡೆ ಗಮನವನ್ನೇ ಹರಿಸಿರಲಿಲ್ಲ. ನಿನ್ನೆ ಇನ್ನೇನನ್ನೋ ಹುಡುಕುತ್ತಿರಬೇಕಾದರೆ ವೀರಸಂಕಲ್ಪ ಚಿತ್ರದ ಉತ್ತಮ ಕಾಪಿ ಅಂತರ್ಜಾಲದಲ್ಲಿ ಇರುವುದು ಗಮನಕ್ಕೆ ಬಂತು. ಹೇಗಿದೆ ನೋಡೋಣ ಎಂದು ನೋಡಲು ಆರಂಭಿಸಿದರೆ ಪ್ರತಿ ಪಾತ್ರಧಾರಿಯ ಸ್ವಚ್ಛ ಸ್ಪಷ್ಟ ಕನ್ನಡ ಉಚ್ಚಾರ ವೀಕ್ಷಣೆಯನ್ನು ನಡುವಿನಲ್ಲಿ ನಿಲ್ಲಿಸಲು ಬಿಡಲಿಲ್ಲ. ಹಾಡುಗಳೆಲ್ಲವೂ ಕ್ಷತಿರಹಿತವಾಗಿ ಇರುವುದನ್ನು ತಿಳಿದು ಅವುಗಳೆಲ್ಲವನ್ನೂ ಧ್ವನಿಮುದ್ರಿಸಿಕೊಂಡೆ. ಹಾಡುಗಳ ಪೂರ್ತಿ ಆಲ್ಬಂ ಒಳಗೊಂಡ ಲೇಖನವನ್ನು ಬರೆಯಬೇಕೆಂದು ವೀರಸಂಕಲ್ಪವನ್ನೂ ಮಾಡಿದೆ. ಅದರ ಪರಿಣಾಮವೇ  ಈ ಬರಹ.

ಚಿತ್ರವನ್ನು ವೀಕ್ಷಿಸಿದ ಮೇಲೆ ಹುಣಸೂರು ಕೃಷ್ಣಮೂರ್ತಿಯವರು ಮಾಡಿದ್ದುಣ್ಣೋ ಮಹರಾಯಾ, ಮುತ್ತೈದೆ ಭಾಗ್ಯ, ಅಡ್ಡದಾರಿ ಮತ್ತು ಈ ಚಿತ್ರ ಬಿಟ್ಟರೆ ಬೇರೆ ಯಾವುದರಲ್ಲೂ ಸ್ವತಃ ಅಭಿನಯಿಸಲ್ಲಿಲ್ಲವೇಕೆ ಎಂಬ ಸಂದೇಹ  ನನ್ನಲ್ಲಿ ಮೂಡಿತು.  ಈ ಚಿತ್ರದಲ್ಲಿ ಬೇರೆ ಕೆಲವು ವಿಶೇಷತೆಗಳೂ ನನಗೆ ಕಂಡವು.  ಚಿತ್ರದ ತಾರಾಗಣದಲ್ಲಿ ಆದವಾನಿ ಲಕ್ಷ್ಮೀ ದೇವಿ, ಜಯಶ್ರೀ ಮತ್ತು ತಮ್ಮ ಹಿಂದಿನ ಚಿತ್ರ ರತ್ನಮಂಜರಿಯಲ್ಲಿ ಪರಿಚಯಿಸಿದ್ದ ಎಂ.ಪಿ. ಶಂಕರ್ ಬಿಟ್ಟರೆ ಉಳಿದವರೆಲ್ಲರೂ ಅಪರಿಚಿತರೇ.  ಅವರ ಪೈಕಿ ವಿದ್ಯಾಸಾಗರ್ ಹೆಸರಿನೊಂದಿಗೆ ಕಾಣಿಸಿಕೊಂಡವರು ಮುಂದೆ ರಾಜೇಶ್ ಆಗಿ, ಬಿ.ಎಸ್. ದ್ವಾರಕಾನಾಥ್ ಹೆಸರಿನೊಂದಿಗೆ ಪಾತ್ರ ವಹಿಸಿದ ಹುಣಸೂರರ ಸೋದರಳಿಯ ಮುಂದೆ ದ್ವಾರಕೀಶ್   ಆಗಿ ಮಿಂಚಿದರು.  ನಾಯಕ ನಟನಾಗಿ ಪರಿಚಯಿಸಲ್ಪಟ್ಟ ಬಿ.ಎಂ ವೆಂಕಟೇಶ್ ಮುಂದೆಯೂ ಕೆಲವು ಚಿತ್ರಗಳಲ್ಲಿ ನಟಿಸಿದರೂ ಆ ಮೇಲೆ ನಿರ್ಮಾಣ ಕ್ಷೇತ್ರವನ್ನು ಆಯ್ದುಕೊಂಡರು.   ಉಳಿದ ಅಪರಿಚಿತರೆಲ್ಲರೂ ರಂಗಭೂಮಿ ಕಲಾವಿದರಿರಬಹುದು ಅನ್ನಿಸುತ್ತದೆ. ಹೀಗಾಗಿ ಅತಿ ಸಣ್ಣ ಪಾತ್ರ ವಹಿಸಿದ ಕಲಾವಿದರು ಕೂಡ ಸ್ಪಷ್ಟ ಕನ್ನಡ ಮಾತನಾಡಿದ್ದಾರೆ. ಸ್ವಂತ ತಯಾರಿಕೆಯ ಸೀಮಿತ ಬಜೆಟ್ ಖ್ಯಾತನಾಮರನ್ನು ಬಳಸಿಕೊಳ್ಳದಿರಲು ಕಾರಣವಾಗಿರಬಹುದು.

ಗಮನಕ್ಕೆ ಬಂದ ಇನ್ನೊಂದು ವಿಷಯವೆಂದರೆ ಹಿನ್ನೆಲೆ ಗಾಯಕ ಗಾಯಕಿಯರ ಉಲ್ಲೇಖ ಚಿತ್ರದ ಟೈಟಲ್ಸಲ್ಲಾಗಲಿ ಪದ್ಯಾವಳಿಯಲ್ಲಾಗಲಿ  ಇಲ್ಲದಿರುವುದು. ಹೀಗಾಗಿ  ಪರಿಚಯದ ಪೀಠಾಪುರಂ, ಎಲ್.ಆರ್. ಈಶ್ವರಿ ಮತ್ತು ಎಸ್. ಜಾನಕಿ ಬಿಟ್ಟರೆ ಇತರ ಗಾಯಕರು ಯಾರೆಂಬ ಕುತೂಹಲ ಹಾಗೆಯೇ ಉಳಿಯುತ್ತದೆ.  ಹಾಡುಗಳ ಗ್ರಾಮೊಫೋನ್ ಡಿಸ್ಕ್ ದೊರಕಿದರೆ ವಿವರ ಗೊತ್ತಾಗಬಹುದು. ಪ್ರತಿಯೊಬ್ಬ ಕಲಾವಿದ ನಿರ್ವಹಿಸಿದ ಪಾತ್ರದ ಹೆಸರು ಪದ್ಯಾವಳಿಯಲ್ಲಿರುವುದು ಉತ್ತಮ ಅಂಶ.

ಈಗ ಪದ್ಯಾವಳಿಯಲ್ಲಿರುವ ಪಾತ್ರವರ್ಗ, ಪಾರಿಭಾಷಿಕ ವಿವರಗಳು, ಕಥಾ ಸಾರಾಂಶ ಮತ್ತು  ಹಾಡುಗಳತ್ತ ದೃಷ್ಟಿ ಹರಿಸೋಣ. ಅಂದಿನ ಪದ್ಯಾವಳಿಗಳಲ್ಲಿ ಕಥಾಭಾಗದ ಸುಂದರ ನಿರೂಪಣೆ ಮಾಡುತ್ತಿದ್ದವರು ಯಾರೋ ಏನೋ. ಇತರ ಭಾಷೆಯ ಚಿತ್ರಗಳ ಪದ್ಯಾವಳಿಗಳೂ ಸೊಗಸಾಗಿರುತ್ತಿದ್ದವು. ಮುಂದಿನ ಕಥೆಯನ್ನು ರಜತ ಪರದೆಯ ಮೇಲೆ ನೋಡಿ ಆನಂದಿಸಿ ಎಂಬುದು ಕಥೆಯ ಕೊನೆಯಲ್ಲಿ ಇರುತ್ತಿದ್ದ ಸಾಲು.   ಪದ್ಯಾವಳಿಯಲ್ಲಿ ಇರಬಹುದಾದ ಚಿಕ್ಕಪುಟ್ಟ ಮುದ್ರಣದೋಷಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕಾಗುತ್ತದೆ.




 
 
 
 
 


ಹಾಡುಗಳು

ಈ ಚಿತ್ರದ ಎರಡು ಹಾಡುಗಳು ಮಾತ್ರ ಚಲಾವಣೆಯಲ್ಲಿರುವ ವಿಷಯ ಆಗಲೇ ಪ್ರಸ್ತಾಪಿಸಿದ್ದೇನೆ.  ಹುಣಸೂರರ ಹಿಂದಿನ ಚಿತ್ರ ರತ್ನಮಂಜರಿಯಲ್ಲೂ ಎರಡೇ ಹಾಡುಗಳು ಜನಪ್ರಿಯವಾದದ್ದು ಕಾಕತಾಳೀಯ ಆಗಿರಬಹುದು.  ಆದರೆ ಅವರು ಇತರರಿಗಾಗಿ ನಿರ್ದೇಶಿಸಿದ ಚಿತ್ರಗಳ ಹಾಡುಗಳೆಲ್ಲವೂ ಹಿಟ್ ಆಗುತ್ತಿದ್ದವು!  ಈಗ ಚಿತ್ರದ  ಏಳೂ ಹಾಡುಗಳತ್ತ ಗಮನ ಹರಿಸೋಣ.

1. ಹಾಡು ಬಾ ಕೋಗಿಲೆ.
ರೇಡಿಯೋದಲ್ಲಿ ಈ ಹಾಡು ಬರುತ್ತಿದ್ದುದರಿಂದ ಪೀಠಾಪುರಂ ನಾಗೇಶ್ವರ ರಾವ್ ಜೊತೆಗೆ ದನಿಗೂಡಿಸಿದ ಗಾಯಕಿಯ ಹೆಸರು ಸತ್ಯವತಿ ಎಂದು ಗೊತ್ತಿದೆ. ಚಿತ್ರದಲ್ಲಿ ಈ ಹಾಡು ಎರಡು ಸಲ ಬರುತ್ತದೆ.  ಹೆಚ್ಚಾಗಿ ಕಾಮಿಡಿ ಹಾಡುಗಳನ್ನು ಹಾಡುತ್ತಿದ್ದ ಪೀಠಾಪುರಂ ಅವರನ್ನು ರಾಜನ್ ನಾಗೇಂದ್ರ ಬಳಸಿಕೊಂಡದ್ದು ಬಹುಶಃ ಹುಣಸೂರರ ಚಿತ್ರಗಳಲ್ಲಿ ಮಾತ್ರ.   ಅಂಥ ಹಾಡುಗಳನ್ನು ಹೆಚ್ಚಾಗಿ  ನಾಗೇಂದ್ರ ಅವರೇ ಹಾಡುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು.

2. ಪರಶಿವನೊ ಸಿರಿವರನೊ.

ಚಾರಿತ್ರಿಕ, ಪೌರಾಣಿಕ ಚಿತ್ರಗಳಲ್ಲಿ ಸಾಮಾನ್ಯವಾಗಿ ಇರುವಂಥ ಸಂತಾನ ಸಂಭ್ರಮ ಸಂದರ್ಭದ ಹಾಡು. ಗಾಯಕಿ ಯಾರೆಂದು ಗೊತ್ತಿಲ್ಲ. ನಾನಿದನ್ನು ನಿನ್ನೆ ಚಿತ್ರ ನೋಡುವಾಗ ಮೊದಲ ಬಾರಿ ಕೇಳಿದೆ.

3. ದುಡುಕದಿರು ಹೃದಯೇಶ.
ಎಸ್. ಜಾನಕಿ ಹಾಡಿದ್ದಾರೆ. ರೇಡಿಯೊದಲ್ಲಿ ಒಂದೆರಡು ಸಲ ಕೇಳಿದ್ದಿದೆ. ಚಿತ್ರದಲ್ಲಿ ಶ್ರೀರಂಗರಾಯ ಯುದ್ಧಕ್ಕೆ ಹೊರಟಾಗ ಆತನ ಪತ್ನಿ ಮಲ್ಲೇಶ್ವರಿ ಹಾಡುತ್ತಾಳೆ.

4. ಸಿಟ್ಯಾಕೊ ಸಿಡುಕ್ಯಾಕೊ.
ಎಲ್. ಆರ್. ಈಶ್ವರಿ ಹಾಡಿದ ಇದು ಎಲ್ಲರಿಗೂ ಗೊತ್ತಿರುವಂಥದ್ದು. ಚಿತ್ರದಲ್ಲಿ ಈ ಹಾಡಿಗೆ ಚೆನ್ನಿಯಾಗಿ ಅಭಿನಯಿಸಿದ ರತ್ನಕುಮಾರಿ ಆ ಮೇಲೆ ವಾಣಿಶ್ರೀ ಆಗಿ ತೆಲುಗಿನಲ್ಲಿ ಪ್ರಸಿದ್ಧರಾದರು.

5.  ಯಾವೂರಯ್ಯ.
ಇದು ಕೂಡ ಎಲ್.ಆರ್. ಈಶ್ವರಿ ಅವರು ಚೆನ್ನಿಗಾಗಿ ಹಾಡಿರುವುದು. ಆದರೆ ಅಜ್ಞಾತವಾಗಿ ಉಳಿದಿದೆ.  ಸೆರೆಮನೆಯ ಕಾವಲುಗಾರರನ್ನು ಯಾಮಾರಿಸಲು ಹೆಣ್ಣೊಬ್ಬಳು  ಹಾಡುವ ಇಂಥ ಹಾಡು ಅಂದಿನ ಚಿತ್ರಗಳಲ್ಲಿ ಸಾಮಾನ್ಯವೇ ಆಗಿತ್ತು.

6.  ಕನ್ನಡದ ತಾಯಿ ಭುವನೇಶ್ವರಿ.
ಭಾರತೀಂದ್ರ ಸ್ವಾಮಿಗಳ ರಚನೆ ಇದು ಎಂಬ ಉಲ್ಲೇಖ ಇದೆ. ಗಾಯಕರ ಕುರಿತಾದ ಮಾಹಿತಿ ಇಲ್ಲ. ಧ್ವನಿ ಕೇಳಿದರೆ ಜೆ.ವಿ. ರಾಘವುಲು ಇರಬಹುದೇನೋ ಅನ್ನಿಸುತ್ತದೆ.  ಚಿತ್ರದಲ್ಲಿ ಎರಡು ಸಲ ಇದೆ.  ಒಮ್ಮೆ ಟೈಟಲ್ಸ್‌ಗೆ ಹಿನ್ನೆಲೆಯಾಗಿ, ಇನ್ನೊಮ್ಮೆ ಚಿತ್ರದೊಳಗೆ. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಮತ್ತು ಕನ್ನಡವೇ ತಾಯ್ನುಡಿಯು ಕೂಡ ಇದೇ ರೀತಿ ಕಣ್ತೆರೆದು ನೋಡು ಮತ್ತು ಅನ್ನಪೂರ್ಣ ಚಿತ್ರಗಳಲ್ಲಿ ಎರಡೆರಡು ಸಲ  ಇರುವುದು ಗಮನಾರ್ಹ. ನಾಡು ನುಡಿಯ ಕುರಿತಾದ ಹಾಡಾದರೂ ನವಂಬರ್ ತಿಂಗಳಲ್ಲೂ ಇದನ್ನು ಕೇಳಿದಂತಿಲ್ಲ!

7.  ಯುದ್ಧ ಯುದ್ಧ.
ಇಷ್ಟು ದಿನ ಪದ್ಯಾವಳಿಯಲ್ಲಿ ಅಡಗಿದ್ದು ಕೇಳಲು ಹೇಗಿರಬಹುದೆಂದು ನನ್ನಲ್ಲಿ ಕುತೂಹಲ ಉಳಿಸಿದ್ದ ಹಾಡಿದು. ಇದನ್ನು ನಾಗೇಂದ್ರ ಸ್ವತಃ ಹಾಡಿದ್ದಿರಬಹುದು ಎಂದುಕೊಂಡಿದ್ದೆ.  ಆದರೆ ಯಾವುದೋ ಅಪರಿಚಿತ ಧ್ವನಿ ಎಂದು ಈಗ ತಿಳಿಯಿತು.  ಆಸಕ್ತ ಮಿತ್ರವರ್ಗದ ಸಹಕಾರದಿಂದ ಕೊಂಚ ಸಂಶೋಧನೆ ನಡೆಸಿದಾಗ ಗಾಯಕನ ಹೆಸರು ಎಸ್.ಸಿ. ಕೃಷ್ಣನ್ ಎಂಬ ಮಾಹಿತಿ ದೊರಕಿತು. ನಾನು ಆ ಹೆಸರು ಕೇಳಿದ್ದು ಇದೇ ಮೊದಲು.  ಬಹಳಷ್ಟು ತಮಿಳು ಚಿತ್ರಗಳಲ್ಲಿ  ಹಾಡಿದ ಗಾಯಕರಿವರೆಂದು ಗೂಗಲೇಶ್ವರ ತಿಳಿಸಿದ. ಕನ್ನಡದಲ್ಲಿ ಹಾಡಿದ್ದು ಬಹುಶಃ ಇದೊಂದೇ ಹಾಡು ಇರಬಹುದು. ಚಿತ್ರದಲ್ಲಿ ಚಿಕ್ಕರಾಯನಾದ ದ್ವಾರಕಾನಾಥ್ ಉರುಫ್ ದ್ವಾರಕೀಶ್ ಈ ಹಾಡಿಗೆ  ಅಭಿನಯಿಸಿದ್ದಾರೆ.

 
 

ಕೆಳಗಿನ ಜ್ಯೂಕ್ ಬಾಕ್ಸಿನಿಂದ ಬೇಕಿದ್ದ ಹಾಡು ಆರಿಸಿ ಆಲಿಸಿ.


 


 

 

 

 


 

No comments:

Post a Comment

Your valuable comments/suggestions are welcome