Saturday, 27 February 2021

ವಸುಂಧರೆಯ ನೆರೆಯ ಶುಕ್ರ

ಅಸ್ತದ ನೆಪದಲ್ಲಿ ಶುಕ್ರನ ಬಗ್ಗೆ ಅರಿಯುವ ಪ್ರಯತ್ನದ ಈ ಬರಹಕ್ಕೆ ‘ಬೆಳ್ಳಿ ತೆರೆಮರೆಗೆ ಸರಿದಾಗ’ ಎಂಬ ಶೀರ್ಷಿಕೆ ಕೂಡ ಕೊಡಬಹುದಿತ್ತು. ಏಕೆಂದರೆ ಯಾವುದೇ ಶಬ್ದಕೋಶದಲ್ಲಿ ಹಾಗೆಂದು ಉಲ್ಲೇಖ ಇಲ್ಲದಿದ್ದರೂ ವರ್ಷದ ಕೆಲವು ತಿಂಗಳು ಮಾತ್ರ ಸೂರ್ಯೋದಯಕ್ಕಿಂತ ಮುಂಚೆ ಪೂರ್ವ ದಿಗಂತದಲ್ಲಿ ಪ್ರಕಾಶಮಾನವಾಗಿ ಬೆಳಗುವ ಶುಕ್ರನನ್ನು ಜನಪದರು ಕರೆಯುವುದು ಬೆಳ್ಳಿ ಎಂದೇ.  ಕೆಲವು ತಿಂಗಳು ಆತ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಕಾಣಿಸುವುದಾದರೂ ‘ಬೆಳ್ಳಿ ಮೂಡಿತು ಕೋಳಿ ಕೂಗಿತು’ ಹಾಡಿನಲ್ಲಿರುವಂತೆ ಬೆಳ್ಳಿ ಮೂಡಿತು ಎಂದರೆ ಇನ್ನೇನು ಬೆಳಗಾಗುತ್ತದೆ ಎಂದೇ ಅರ್ಥ. ತಮಿಳು ಭಾಷೆಯಲ್ಲಿ ಶುಕ್ರವಾರದ ಅಧಿಕೃತ ಹೆಸರೇ ವೆಳ್ಳಿಕಳಮೈ. ಅಂಥ ಬೆಳ್ಳಿ ಅರ್ಥಾತ್ ಶುಕ್ರ ಈಗ ತೆರೆಮರೆಗೆ ಸರಿದಿದ್ದಾನೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ 2021ರ ಫೆಬ್ರವರಿ ಮೂರನೆಯ ವಾರದಿಂದ ಎಪ್ರಿಲ್ ಮಧ್ಯದ ವರೆಗೆ ಶುಕ್ರನಿಗೆ ಅಸ್ತ ಅಥವಾ ಮೌಢ್ಯ. ಸನಾತನ ಸಂಸ್ಕೃತಿಯನ್ನು ಪಾಲಿಸುವವರಿಗೆ ಈ ಅವಧಿಯಲ್ಲಿ ಮದುವೆ ಮುಂಜಿಗಳಂಥ ಶುಭಕಾರ್ಯಗಳಿಗೆ ನಿಷೇಧ. ಹಾಗಿದ್ದರೆ ಅಸ್ತ ಅಥವಾ ಮೌಢ್ಯ ಎಂದರೆ ಏನು ಎಂಬ ಪ್ರಶ್ನೆ ಬರುತ್ತದೆ.  ಆಕಾಶಕಾಯಗಳು ದಿನ ನಿತ್ಯ ಹಗಲು ಕಾಣಿಸಿ ರಾತ್ರೆ ಅಸ್ತವಾಗುವುದು ಅಥವಾ ರಾತ್ರೆ ಕಾಣಿಸಿ ಹಗಲು ಅಸ್ತವಾಗುವುದು ಸಹಜ ಪ್ರಕ್ರಿಯೆಯಾದ್ದರಿಂದ ಅವುಗಳಿಗೆ ಅಂತಹ ಮಹತ್ವವಿಲ್ಲ.  ಆದರೆ ದಿನಾ ಕಾಣಿಸುವ  ಆಕಾಶಕಾಯ ದೀರ್ಘ ಸಮಯದ ವರೆಗೆ ಆಕಾಶದಿಂದ ಮರೆಯಾದರೆ ಮಾನವನಿಗೆ ದಿಗಿಲಾಗುತ್ತದೆ.  ಈ ರೀತಿ ತನ್ನ ಪಥದಲ್ಲಿ ಸುತ್ತುತ್ತಾ ಶುಕ್ರ ಭೂಮಿಯಿಂದ ನೋಡಿದಂತೆ ಈಗ ಸೂರ್ಯನ ಅತಿ ಸಮೀಪಕ್ಕೆ ಬಂದು ನಮ್ಮ ಕಣ್ಣೆದುರೇ ಇದ್ದರೂ ನಮ್ಮ ದೃಷ್ಟಿಯಿಂದ ಮರೆಯಾಗಿದ್ದಾನೆ.  ಅದೇ ಅಸ್ತ ಅಥವಾ ಮೌಢ್ಯ. ಎಲ್ಲ ಆಕಾಶ ಕಾಯಗಳು ಈ ರೀತಿ ಕಣ್ಮರೆಯಾಗುತ್ತವಾದರೂ ನವಗ್ರಹಗಳ ಪೈಕಿ ಶುಕ್ರ ಮತ್ತು ಗುರು ಗ್ರಹಗಳ ಅಸ್ತಕ್ಕೆ ಮಾತ್ರ ಧಾರ್ಮಿಕ ಮಹತ್ವವಿರುವುದು.

ಒಮ್ಮೆ ಪೂರ್ವ ದಿಗಂತದಲ್ಲಿ ಕಾಣುತ್ತಾ, ಕೆಲ ಕಾಲ ಮರೆಯಾಗಿ ಮತ್ತೆ  ಪಶ್ಚಿಮ ದಿಗಂತದಲ್ಲಿ  ಕಾಣಿಸುತ್ತಾ ಆಕಾಶದಲ್ಲಿ ಆಟವಾಡುವ ಶುಕ್ರನನ್ನು ಹಿಂದಿನ ಕಾಲದಲ್ಲಿ  ಪಾಶ್ಚಾತ್ಯರು ಎರಡು ಬೇರೆ ಬೇರೆ ನಕ್ಷತ್ರಗಳೆಂದು ಭಾವಿಸಿ Morning Star, Evening Star ಎಂದು ಗುರುತಿಸುತ್ತಿದ್ದರಂತೆ. ಈಗಲೂ ಹಾಗೆ ಕರೆಯುವ ಪದ್ಧತಿ ಇದ್ದು ನಾವು ಬೇಕಾದರೆ ಅದನ್ನು ಉಷಾ ನಕ್ಷತ್ರ, ಸಂಧ್ಯಾ ನಕ್ಷತ್ರ ಎನ್ನಬಹುದು. ವರ್ಷದ ಕೆಲ ಕಾಲ ಪ್ರಖರ ಬೆಳಕಿನೊಂದಿಗೆ ಹೊಳೆಯುವ ಆತನನ್ನು ಕೆಲವರು ಹಾರುವ ತಟ್ಟೆ ಎಂದು ತಪ್ಪಾಗಿ ತಿಳಿದದ್ದೂ ಉಂಟು.

ಬುಧನ ನಂತರದ ಎರಡನೇ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವ, ಸುಮಾರು ಭೂಮಿಯಷ್ಟೇ ಗಾತ್ರದ ಶುಕ್ರ ಸೂರ್ಯನ ದಿಶೆಯಲ್ಲಿ ನಮ್ಮ ನೆರೆಯವನು. ಸೂರ್ಯನ ಸುತ್ತ ಪರಿಭ್ರಮಿಸಲು 224.7 ಭೂಮಿಯ ದಿನಗಳನ್ನು ತೆಗೆದುಕೊಳ್ಳುವ ಆತನಿಗೆ ತನ್ನ ಅಕ್ಷದಲ್ಲಿ ಒಂದು ಸುತ್ತು ತಿರುಗಲು 243 ದಿನಗಳು ಬೇಕಾಗುತ್ತವೆ. ಅಂದರೆ ಆತನ ಒಂದು ದಿನ ಒಂದು ವರ್ಷಕ್ಕಿಂತ ದೊಡ್ಡದು! ಎಲ್ಲಾ ಗ್ರಹಗಳಿಗೆ ತಮ್ಮ ಅಕ್ಷದಲ್ಲಿ ಸುತ್ತುವ ಸ್ಪರ್ಧೆ ಏರ್ಪಡಿಸಿದರೆ ಶುಕ್ರನಿಗೆ ಸಿಗುವುದು ಕೊನೆಯ ಸ್ಥಾನ.  ಆತ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವುದು ಇತರ ಗ್ರಹಗಳಂತೆ ಅಪ್ರದಕ್ಷಿಣಾಕಾರದಲ್ಲೇ.  ಆದರೆ ತನ್ನ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತಾನೆ.  ಹೀಗಾಗಿ ಶುಕ್ರನಲ್ಲಿ ನಿಂತು ನೋಡಿದ್ದೇ ಆದರೆ ಸೂರ್ಯ ಸೇರಿದಂತೆ ಎಲ್ಲ ಆಕಾಶ ಕಾಯಗಳು ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಅಸ್ತಮಿಸಿದಂತೆ ಕಾಣಿಸುತ್ತವೆ. ಈ ರೀತಿ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವ ಇನ್ನೊಂದು ಗ್ರಹ ಫ್ಲೂಟೋ. ಶುಕ್ರ ಗ್ರಹದ ಸರಾಸರಿ ತಾಪಮಾನ ಸುಮಾರು 460 ಡಿಗ್ರಿ ಸೆಂಟಿಗ್ರೇಡ್. ಆತನ ಮೇಲ್ಮೈಯನ್ನು ಬಿಳಿಯ ಮೋಡಗಳು ಸುತ್ತುವರಿದಿರುವುದರಿಂದ ಹೆಚ್ಚು ಬೆಳಕು ಪ್ರತಿಫಲಿಸಲ್ಪಟ್ಟು ಆಕಾಶದಲ್ಲಿ ಆತ ಉಜ್ವಲವಾಗಿ ಕಾಣಿಸುತ್ತಾನೆ. 

ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವ ಶುಕ್ರ 224.7 ದಿನಗಳಲ್ಲಿ ಸೂರ್ಯನನ್ನು ಸುತ್ತು ಹಾಕುತ್ತಾ ತನಗಿಂತ ನಿಧಾನವಾಗಿ ಅಂದರೆ 365.26 ದಿನಗಳಲ್ಲಿ ಸೂರ್ಯನನ್ನು ಸುತ್ತುವ ಭೂಮಿಯನ್ನು 584 ದಿನಗಳಿಗೊಮ್ಮೆ ಹಿಂದಿಕ್ಕುತ್ತಾನೆ. ಹೀಗಾಗಿ ಭೂಮಿಯಿಂದ ನೋಡಿದಂತೆ ಆತ ಕೆಲವು ದಿನ ಸೂರ್ಯನ ಮುಂದೆ ಅಂದರೆ ಪಶ್ಚಿಮದ ಕಡೆಗೆ, ಕೆಲವು ದಿನ ಸೂರ್ಯನ ಹಿಂದೆ ಅಂದರೆ ಪೂರ್ವದ ಕಡೆಗೆ ಇರುವಂತೆ ಭಾಸವಾಗುತ್ತದೆ. ಸೂರ್ಯನ ಪಶ್ಚಿಮ ದಿಕ್ಕಿಗೆ ಇರುವಾಗ ಬೆಳಗಿನ ಜಾವ ಸೂರ್ಯೋದಯಕ್ಕಿಂತ ಮೊದಲು ಪೂರ್ವ ದಿಗಂತದಲ್ಲಿ, ಸೂರ್ಯನ ಪೂರ್ವ ದಿಕ್ಕಿಗೆ ಇರುವಾಗ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಬರಿಗಣ್ಣಿಗೆ ಗೋಚರಿಸುತ್ತಾನೆ. ಆತ ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವುದರಿಂದ ಮತ್ತು ಸೂರ್ಯನಿಗಿಂತ ಅತಿ ಹೆಚ್ಚು ಅಂದರೆ 47 ಡಿಗ್ರಿಯಷ್ಟು ಮಾತ್ರ ದೂರಕ್ಕೆ ಸರಿಯುವುದರಿಂದ ಏನಿದ್ದರೂ ಆತ ಹಗಲಿನ ತಾರೆ. ತಡ ರಾತ್ರಿ ಎಂದೂ ಕಾಣಿಸಲಾರ.

ಶುಕ್ರನು ಸೂರ್ಯನನ್ನು ಸುತ್ತುತ್ತಾ 584 ದಿನಗಳಿಗೊಮ್ಮೆ ಭೂಮಿಯನ್ನು ಹಿಂದಿಕ್ಕುತ್ತಾನೆ ಎಂದು ಈಗಾಗಲೇ ನೋಡಿದೆವಷ್ಟೇ. ಆ ಪಯಣದಲ್ಲಿ ಆತ ಸೂರ್ಯ ಮತ್ತು ಭೂಮಿಯ ಸರಿ ನಡುವೆ ಬರುವುದನ್ನು ನಿಮ್ನತಮ ಸಂಯೋಗ(Inferior Conjunction) ಎನ್ನುತ್ತಾರೆ. ಆಗ ಆತ ಭೂಮಿಗೆ ಅತಿ ಸಮೀಪವಾಗಿದ್ದರೂ ಆತನ ಸೂರ್ಯನ ವಿರುದ್ಧ ದಿಕ್ಕಿನ ಅಂದರೆ ರಾತ್ರಿಯ ಮುಖ ನಮಗೆದುರಾಗಿರುವುದರಿಂದ ಅಂದು ನಮಗೆ ಶುಕ್ರನ ಅಮಾವಾಸ್ಯೆ. ಈ ಅಮಾವಾಸ್ಯೆಗಿಂತ 4 ದಿನ ಹಿಂದೆ ಮತ್ತು 4 ದಿನ ಮುಂದೆ ಒಟ್ಟು   8 ದಿನ ಆತ ನಮಗೆ ಕಾಣಿಸಲಾರ. ಭೂಮಿಯನ್ನು ಹಿಂದಿಕ್ಕಿದ ಆತ ತನ್ನ ಕಕ್ಷೆಯಲ್ಲಿ ಮತ್ತೂ ಮುಂದೆ ಮುಂದೆ ಹೋಗುತ್ತಾ elongation ಎನ್ನಲಾಗುವ ಭೂಮಿ, ಸೂರ್ಯ ಮತ್ತು ಶುಕ್ರನ ನಡುವಿನ ಕೋನವು ವೃದ್ಧಿಸುತ್ತಾ  47 ಡಿಗ್ರಿಯಷ್ಟು ಆಗಿ ಮತ್ತೆ ಕಮ್ಮಿಯಾಗುತ್ತಾ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ  ಶೂನ್ಯ ಡಿಗ್ರಿ ಆಗುತ್ತದೆ. ಈ ರೀತಿ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಭೂಮಿಯ ಎದುರು ಬರುವುದನ್ನು ಉಚ್ಚತಮ ಸಂಯೋಗ(Superior Conjuction) ಅನ್ನುತ್ತಾರೆ. ನಿಮ್ನತಮ ಸಂಯೋಗ ಸ್ಥಾನದಿಂದ ಹೊರಟು ಉಚ್ಚತಮ ಸಂಯೋಗ ಸ್ಥಾನದ ಶೂನ್ಯಕ್ಕೆ ತಲುಪಲು ಇನ್ನೂ 8 ಡಿಗ್ರಿ ಇರುವಲ್ಲಿ ವರೆಗೆ ತಲುಪಲು ಆತ ತೆಗೆದುಕೊಳ್ಳುವ  263 ದಿನ ಆತ ಸೂರ್ಯನ ಪಶ್ಚಿಮ ದಿಕ್ಕಿನಲ್ಲಿದ್ದು ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಪೂರ್ವದಿಗಂತದಲ್ಲಿ ಕಾಣಿಸಿಕೊಳ್ಳುತ್ತಾನೆ.  ಈ ಭಾಗದ ಪಯಣದಲ್ಲಿ ಸೂರ್ಯನ ಬೆಳಕನ್ನು  ಪ್ರತಿಫಲಿಸುವ ಭಾಗ ಹೆಚ್ಚು ಹೆಚ್ಚು ಕಾಣಿಸುತ್ತಾ ಹೋಗುತ್ತದೆ.  ಆದರೆ ಆತ ಭೂಮಿಯಿಂದ ದೂರ ದೂರ ಸಾಗುವುದರಿಂದ ಆತನ ಗಾತ್ರ ಚಿಕ್ಕದಾಗುತ್ತಾ ಹೋಗುತ್ತದೆ.  ಆತನ ಪ್ರತಿಫಲಿತ ಭಾಗ  ಆಂಶಿಕವಾಗಿದ್ದರೂ   ನಿಮ್ನತಮ ಸಂಯೋಗದಿಂದ 36ನೇ ದಿನ ಆತ ಭೂಮಿಗೆ ಇನ್ನೂ ಸಾಕಷ್ಟು ಸಮೀಪದಲ್ಲೇ ಇರುವುದರಿಂದ ಅತ್ಯಂತ ಹೆಚ್ಚು  ಪ್ರಕಾಶಮಾನನಾಗಿ ಕಾಣಿಸುತ್ತಾನೆ.

ಉಚ್ಚತಮ ಸಂಯೋಗದ(Superior Conjuction) 8 ಡಿಗ್ರಿ ಈಚೆಯಿಂದ 8 ಡಿಗ್ರಿ ಆಚೆ ವರೆಗೆ ಸಾಗಲು ಆತನಿಗೆ 50 ದಿನಗಳು ಬೇಕಾಗುತ್ತವೆ ಮತ್ತು ಆ ಸಮಯದಲ್ಲಿ ಸೂರ್ಯನ ಸಾಮೀಪ್ಯದ ಪ್ರಭೆಯ ಕಾರಣ ನಮಗೆ ಆತನನ್ನು ನೋಡಲು ಸಾಧ್ಯವಾಗುವುದಿಲ್ಲ.  ಇದನ್ನೇ ಅಸ್ತ ಅಥವಾ ಮೌಢ್ಯ ಅನ್ನುವುದು. ಉಚ್ಚತಮ ಸಂಯೋಗದಂದು(Superior Conjuction)ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ ಗಾತ್ರದಲ್ಲಿ ಚಿಕ್ಕದಾಗುವ ಆತನ ಪೂರ್ಣ ಬೆಳಗಿದ ದುಂಡು ಮುಖ ಭೂಮಿಯ ಕಡೆ ಇದ್ದು ಅದು ಆತನ ಹುಣ್ಣಿಮೆ ಎನಿಸಿದರೂ ನಾವದನ್ನು ಕಾಣಲಾರೆವು.  ನಿಮ್ನತಮ ಸಂಯೋಗದ(Inferior Conjuction) 8 ಡಿಗ್ರಿ ಆಚೆಯಿಂದ 8 ಡಿಗ್ರಿ ಈಚೆ ವರೆಗೆ ಸಾಗಲು ಬರೇ 8 ದಿನ ಮತ್ತು ಉಚ್ಚತಮ ಸಂಯೋಗದ(Superior Conjuction) ಅಷ್ಟೇ ಕೋನಕ್ಕೆ 50 ದಿನ ಏಕೆ ಎಂಬ ಸಂದೇಹ ಮೂಡಬಹುದು.  ಹತ್ತಿರದಲ್ಲಿರುವ ಬಸ್ಸು ವೇಗವಾಗಿ ಸಾಗಿದಂತೆ ಮತ್ತು ದೂರದ ವಿಮಾನ ನಿಧಾನವಾಗಿ ಚಲಿಸಿದಂತೆ ನಮಗೆ ಅನಿಸುವ ಹಾಗೇ ಇದು. ಎರಡು ಕಡೆಯೂ ಆತ ಚಲಿಸುವ ವೇಗ ಒಂದೇ.  ನಮ್ಮ ಲೆಕ್ಕಾಚಾರ ಏನಿದ್ದರೂ ನಮಗೆ ಕಂಡಂತೆ.

ಉಚ್ಚತಮ ಸಂಯೋಗದ ನಂತರ ಆತ ಸೂರ್ಯನ ಪೂರ್ವ ಭಾಗಕ್ಕೆ ಚಲಿಸಿ  ಮುಂದಿನ 263 ದಿನ ಆತನ ಬೆನ್ನ ಹಿಂದೆ ಸಾಗುತ್ತಾ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಸಂಧ್ಯಾ ತಾರೆಯಾಗಿ ಸ್ವಲ್ಪ ಹೊತ್ತು ಕಾಣಿಸುತ್ತಿರುತ್ತಾನೆ.  ಈ ಪಯಣದಲ್ಲೂ ಭೂಮಿ, ಸೂರ್ಯ, ಶುಕ್ರರ ನಡುವಿನ ಕೋನ ವೃದ್ಧಿಸುತ್ತಾ  47 ಡಿಗ್ರಿ ತಲುಪಿ ಮತ್ತೆ ಕಮ್ಮಿಯಾಗುತ್ತಾ ಶೂನ್ಯವಾಗುವಾಗ ಮತ್ತೆ ನಿಮ್ನತಮ ಸಂಯೋಗ ಸಂಭವಿಸಿ 263+50+263+8 = 584 ದಿನಗಳ ಚಕ್ರ ಪೂರ್ಣವಾಗುತ್ತದೆ. ಈ ಭಾಗದ ಪಯಣದಲ್ಲಿ ಆತ ಸೂರ್ಯನ ಬೆಳಕನ್ನು  ಪ್ರತಿಫಲಿಸುವ ಭಾಗ ಕಡಿಮೆಯಾಗುತ್ತಾ  ಹೋಗುತ್ತದೆ. ಇಲ್ಲೂ  ನಿಮ್ನತಮ ಸಂಯೋಗಕ್ಕೆ 36 ದಿನ ಇರುವಂದು ಆತ ಆಂಶಿಕವಾಗಿ ಆದರೂ ಅತಿ ಉಜ್ವಲನಾಗಿ ಗೋಚರಿಸುತ್ತಾನೆ.

ಮೇಲೆ ಹೇಳಿದ ವಿವರಗಳನ್ನೆಲ್ಲ ಈ ಅನಿಮೇಟೆಡ್ ವೀಡಿಯೊದಲ್ಲಿ  ಸರಳವಾಗಿ ಮತ್ತು ಬಹಳ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಇದನ್ನು ಒಂದೆರಡು ಸಲ ವೀಕ್ಷಿಸಿ ವಿವರಗಳನ್ನೆಲ್ಲ ಇನ್ನೊಮ್ಮೆ ಓದಿದರೆ ವಿಷಯ ಇನ್ನೂ ಚೆನ್ನಾಗಿ ಮನದಟ್ಟಾಗಬಹುದು. ಬೇಕಿದ್ದರೆ ಸೆಟ್ಟಿಂಗ್ ಬಟನ್ ಒತ್ತಿ ವೀಡಿಯೊ ವೇಗ ಕಮ್ಮಿ ಮಾಡಿಕೊಳ್ಳಬಹುದು.


ನಿಮ್ನತಮ ಸಂಯೋಗದ 8 ದಿನಗಳಂದು ಕೂಡ ಆತ ಕಾಣಿಸದಿದ್ದರೂ ಉಚ್ಚತಮ ಸಂಯೋಗ ಸಮಯದ 50 ದಿನಗಳ ಅಗೋಚರತೆಯನ್ನು ಮಾತ್ರ ಅಸ್ತ ಅಥವಾ ಮೌಢ್ಯ ಎಂದು ಧಾರ್ಮಿಕವಾಗಿ ಪರಿಗಣಿಸುವುದು ವಾಡಿಕೆ.  584 ದಿನಗಳಿಗೊಮ್ಮೆ ಸಂಭವಿಸುವ ಶುಕ್ರಾಸ್ತದ ಚಕ್ರ 8 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ. ಅಂದರೆ ಸುಮಾರು 8 ವರ್ಷಗಳಿಗೊಮ್ಮೆ ವರ್ಷದ ಅದೇ ಕಾಲದಲ್ಲಿ ಶುಕ್ರಾಸ್ತ ಸಂಭವಿಸುತ್ತದೆ.  ಭೂಮಿಯ ವರ್ಷದ 365 ದಿನಗಳು ಮತ್ತು ಶುಕ್ರನ ವರ್ಷದ 584 ದಿನಗಳು 5:8ರ ದಾಮಾಶಯದಲ್ಲಿರುವುದು ಇದಕ್ಕೆ ಕಾರಣ.

ಅಗೋಚರತೆಯ ಈ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಂದು ಸೂರ್ಯೋದಯಕ್ಕಿಂತ ಮೊದಲು ಅಥವಾ ಸೂರ್ಯಾಸ್ತದ ನಂತರ ಕೊಂಚ ಹೊತ್ತು ಮಾತ್ರ ಆತ ಸ್ಪಷ್ಟವಾಗಿ ಗೋಚರಿಸುವುದು. ದಿನದ ಉಳಿದ ಸಮಯದಲ್ಲೂ ಸೂರ್ಯನ ಹಿಂದೆ  ಅಥವಾ ಮುಂದೆ  ಆತ ಆಗಸದಲ್ಲಿ ಸಾಗುತ್ತಿರುವುದರಿಂದ ದಿಟ್ಟಿಸಿ ನೋಡಿದರೆ   ಹಗಲಿಡೀ ಆತನನ್ನು ಬರಿಗಣ್ಣಿನಲ್ಲಿ ವೀಕ್ಷಿಸಲು ಸಾಧ್ಯವಂತೆ.

ನಿಮ್ನತಮ ಸಂಯೋಗದ ಸಮಯ ಶುಕ್ರನು ಸರಿಯಾಗಿ ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಆತ ಸೂರ್ಯನಿಗೆ ಗ್ರಹಣ ಉಂಟುಮಾಡುತ್ತಾನೆಯೇ ಎಂಬ ಸಂದೇಹ ಮೂಡಬಹುದು. ಭೂಮಿ ಚಂದ್ರರ ಕಕ್ಷೆಯ ನಡುವೆ ಕೆಲವು ಡಿಗ್ರಿಗಳಷ್ಟು  ಕೋನ ಇರುವ ಕಾರಣ ಪ್ರತಿ ಅಮಾವಾಸ್ಯೆಯಂದು ಹೇಗೆ ಸೂರ್ಯಗ್ರಹಣ ಸಂಭವಿಸುವುದಿಲ್ಲವೋ ಹಾಗೆಯೇ ಭೂಮಿ ಶುಕ್ರರ ಕಕ್ಷೆಯ ಮಧ್ಯೆಯೂ ಇರುವುದರಿಂದ ಪ್ರತಿ ನಿಮ್ನತಮ ಸಂಯೋಗದಂದು ಶುಕ್ರನು ನೇರವಾಗಿ ಸೂರ್ಯನ ಎದುರು ಇರದೆ ಸ್ವಲ್ಪ ಆಚೆ ಅಥವಾ ಈಚೆ ಇರುತ್ತಾನೆ.  ಸುಮಾರು  125  ವರ್ಷಗಳಿಗೊಮ್ಮೆ ಮಾತ್ರ ಆತ ನೇರವಾಗಿ ಸೂರ್ಯನೆದುರು ಬಂದು 8  ವರ್ಷಗಳ ಅಂತರದ ಎರಡು ಶುಕ್ರ ಸಂಕ್ರಮಣಗಳು  ಉಂಟಾಗುತ್ತದೆ.   ಇತ್ತೀಚೆಗೆ 2004ರ ಜೂನ್ 8 ಮತ್ತು 2012ರ ಜೂನ್ 5ರಂದು ಶುಕ್ರ ಸಂಕ್ರಮಣಗಳು ಸಂಭವಿಸಿದ್ದವು.  ಆದರೆ  ಶುಕ್ರನು ಚಂದ್ರನಿಗಿಂತ 100 ಪಾಲು ಹೆಚ್ಚು ದೂರ ಇರುವುದರಿಂದ ಆತ ಗ್ರಹಣದ ಚಂದ್ರನಂತೆ ಸೂರ್ಯನನ್ನು ಮರೆ ಮಾಡದೆ ಆತನೆದುರು ಒಂದು ಸಣ್ಣ ಕಪ್ಪು ಚುಕ್ಕಿಯಂತೆ ಮಾತ್ರ ಕಾಣಿಸುತ್ತಾನೆ. ಮುಂದಿನ ಶುಕ್ರ ಸಂಕ್ರಮಣಗಳು ಡಿಸೆಂಬರ್ 2117 ಮತ್ತು ಡಿಸೆಂಬರ್ 2125ರಲ್ಲಿ ಸಂಭವಿಸಲಿವೆ.

ಪಾಶ್ಚಾತ್ಯರು ಶುಕ್ರನಿಗೆ  ಪ್ರೇಮ ಮತ್ತು ಸೌಂದರ್ಯದ ಪ್ರತೀಕವಾದ ರೋಮನ್ ದೇವತೆ ವೀನಸ್ ಹೆಸರಿಟ್ಟಿದ್ದಾರೆ. ನಮ್ಮ ಬೆಳ್ಳಿ ಇದಕ್ಕೆ ಸಂವಾದಿಯಾಗಬಹುದೇನೋ.

**********

ಈ ಲೇಖನ ಎಪ್ರಿಲ್ 2021ರ ಉತ್ಥಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.




9 comments:

  1. ಅಸ್ತದ ಬಗ್ಗೆ ಇರುವ ಅಜ್ನಾನವು ದೂರವಾಯಿತು.ಎನಿಮೇಶನ್ ವೀಕ್ಷಿಸಿದಾಗ ಎಲ್ಲಾ ಶಂಕೆ ಕುಶಂಕೆಗಳ ನಿರಸನವಾಯಿತು.

    ReplyDelete
  2. ಸುಲಭವಾಗಿ ಅರ್ಥವಾಗುವಂತೆ ವಿವರಿಸಿದ ತುಂಬಾ ಉಪಯುಕ್ತವಾದ ಮಾಹಿತಿ.

    Narahari Joshi. UK

    ReplyDelete
  3. ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚು ಗೊತ್ತಿಲ್ಲದ ನನಗೂ ಅಸ್ತವೆಂದರೆ ಏನು ಎಂದು ಸುಲಭವಾಗಿ ಅರ್ಥವಾಯಿತು.

    Srikara Paranjape. Udupi

    ReplyDelete
  4. An excellent article on the scientific aspects of 'Shukra Asta'.

    As I understand like your thinking, the timings of Asta has to definitely depend on the Elongation angle. I am not quite familiar with calculations in Panchanga. But all calculations of time and position have to be based on modeling of motion of the planets and Sun.

    P. J. Bhat
    Distinguished Scientist(Retd), ISRO/ISAC
    Deputy Director, MDA (Retd) , ISRO/ISAC
    Bangalore

    ReplyDelete
  5. ಅದ್ಭುತವಾದ ವಿವರಣೆ, ದೃಶ್ಯದೊಂದಿಗೆ.ಧನ್ಯವಾದಗಳು ಉತ್ತಮವಾದ ಜ್ಞಾನಸುಧೆಯುಣಬಡಿಸಿದ್ದಕ್ಕೆ.

    Vasatha Kumar (FB)

    ReplyDelete
  6. ನಿಜಕ್ಕೂ ಅತಿ ಸುಂದರ..
    Very educative.

    Chadrashekhara Kukkaje (FB)

    ReplyDelete
  7. Pictorial illustration ಬಹಳ ಅದ್ಭುತವಾಗಿದೆ. ಸೂರ್ಯ , ಭೂಮಿ , ಶುಕ್ರರ ನಡುವಿನ ಕೋನ 47° ಗಿಂತ ಅಧಿಕವಾಗುವುದೇ ಇಲ್ಲ. ಆದ್ದರಿಂದಲೇ ಅದು ದಿಗಂತದಲ್ಲಿ ಮಾತ್ರ ಗೋಚರಿಸುವುದು ಎಂದು ಮನದಟ್ಟು ಮಾಡಿಸುತ್ತದೆ. ಈವರೆಗೆ ನನಗೆ ಇಷ್ಟು ಸ್ಪಷ್ಟವಾಗಿ ಮನದಟ್ಟಾಗಿರಲಿಲ್ಲ.
    ಧನ್ಯವಾದಗಳು , ಅಭಿನಂದನೆಗಳು .
    ��������������

    Subrahmanya Bhat (FB)

    ReplyDelete
  8. Another lucid and informative article from you. Kudos.

    ReplyDelete

Your valuable comments/suggestions are welcome