ಕೆಲವು ಹಾಡುಗಳು ನಮ್ಮ ಮನಸ್ಸಲ್ಲಿ ಹೇಗೆ ಅಚ್ಚೊತ್ತಿವೆಯೋ ಹಾಗೆಯೇ ಕೇಳಿದರೆ ಮಾತ್ರ ಕೇಳಿದಂತಾಗುವುದು. ಉದಾಹರಣೆಗೆ ರತ್ನಗಿರಿ ರಹಸ್ಯದ ಅಮರ ಮಧುರ ಪ್ರೇಮ ಹಾಡು ಆರಂಭವಾಗುವ ಮೊದಲು ಒಂದಷ್ಟು ಹೊತ್ತು ಗ್ರಾಮೋಫೋನಿನ ಚರಚರ ಕೇಳಿಸಬೇಕು ಮತ್ತು ಕೊನೆಯಲ್ಲಿ ಗಾಜು ಒಡೆಯುವ ಸದ್ದು ಹಾಗೂ ಕಿಟಾರನೆ ಕಿರಿಚುವಿಕೆ ಇರಲೇಬೇಕು. ಕನ್ಯಾರತ್ನದ ಬಿಂಕದ ಸಿಂಗಾರಿ ಹಾಡು ಗಿಟಾರಿನ ಝೇಂಕಾರದೊಂದಿಗೆ ಆರಂಭವಾಗುವ ಪೂರ್ತಿ prelude ಸಮೇತ ಕೇಳಿಬಂದರೆ ಮಾತ್ರ ಈ ಹಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ನಮ್ಮ ಅಂದಿನ ಹೊಸ ನ್ಯಾಶನಲ್ ಎಕ್ಕೋ ರೇಡಿಯೋದ ವಾರ್ನಿಶ್ ಪರಿಮಳ ನನ್ನ ಮೂಗಿಗೆ ಅಡರುವುದು. ಈ ಬಿಂಕದ ಸಿಂಗಾರಿ ಹಾಡು ಚಿತ್ರಗೀತೆಗಳಲ್ಲೇ ನನಗೆ ಅತ್ಯಂತ ಪ್ರೀತಿಪಾತ್ರವಾದದ್ದು. ಸಾಮಾನ್ಯವಾಗಿ ಶಂಕರ್ ಜೈಕಿಶನ್ ರಚನೆಗಳನ್ನು ಹೊರತುಪಡಿಸಿದರೆ prelude ಮತ್ತು interludeಗಳು ಹಾಡಿನ ಅವಿಭಾಜ್ಯ ಅಂಗವಾಗಿರುವುದು ಕಮ್ಮಿ. ತಮಿಳಿನ ಶಂಕರ್ ಜೈಕಿಶನ್ ಅನ್ನಬಹುದಾದ ವಿಶ್ವನಾಥನ್ ರಾಮಮೂರ್ತಿಯವರ ಬಳಿ ಸಹಾಯಕರಾಗಿದ್ದು ನಂತರ ಕನ್ನಡದ ಶಂಕರ್ ಜೈಕಿಶನ್ ಅನ್ನಿಸಿಕೊಂಡ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಈ ಹಾಡನ್ನು ಕೂಡ prelude ಮತ್ತು interludeಗಳಿಲ್ಲದೆ ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ಕೆಲ ವರ್ಷ ಹಿಂದೆ ಆಕಾಶವಾಣಿ ಮಂಗಳೂರಿಂದ ಪ್ರಸಾರವಾಗಿದ್ದ ನನ್ನ ಮೆಚ್ಚಿನ ಹಾಡುಗಳನ್ನೊಳಗೊಂಡ ವಿಶೇಷ ಚಿಟ್ ಚಾಟ್ ಅತಿಥಿ ಕಾರ್ಯಕ್ರಮವನ್ನು ಈ ಹಾಡಿನೊಂದಿಗೇ ಆರಂಭಿಸಿದ್ದೆ. ಅದರ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನೂ ಮಾಡಿದ್ದೆ. ಈಗ ಜಿ.ಕೆ.ವೆಂಕಟೇಶ್, ಕು.ರ.ಸೀ, ಪಿ.ಬಿ.ಶ್ರೀನಿವಾಸ್ ಕಾಂಬಿನೇಶನ್ನಿನ ಅದೇ ಹಾಡಿನ ಬಗ್ಗೆ ಇನ್ನೂ ಒಂದಿಷ್ಟು ವಿವರಗಳು.
ಸಂಗೀತ
ಸಾಮಾನ್ಯವಾಗಿ ಲಘು ಧಾಟಿಯ ಚಿತ್ರಗೀತೆಗಳಿಗೆ ಒಂದು ರಾಗವನ್ನು ಆಧಾರವಾಗಿಟ್ಟುಕೊಂಡು ಮಾಧುರ್ಯವನ್ನು ಹೆಚ್ಚಿಸುವುದಕ್ಕಾಗಿ ಅಲ್ಲಲ್ಲಿ ಅನ್ಯ ಸ್ವರಗಳ ಪ್ರಯೋಗ ಮಾಡುವುದು ವಾಡಿಕೆ. ಆದರೆ ಈ ಹಾಡಿನಲ್ಲಿ 8ನೇ ಮೇಳಕರ್ತ ಹನುಮತೋಡಿ ರಾಗದ ಸರಿ1ಗ2ಮ1ಪದ1ನಿ2 ಸ್ವರಗಳನ್ನು ಮಾತ್ರ ಬಳಸಿಕೊಳ್ಳಲಾಗಿರುವುದು ವಿಶೇಷ. ಇದರ 38 ಸೆಕೆಂಡುಗಳಷ್ಟು ದೀರ್ಘವಾದ prelude ರಿದಂ ಗಿಟಾರುಗಳ ಮಧ್ಯ ಷಡ್ಜದ ಝೇಂಕಾರದೊಂದಿಗೆ ಆರಂಭವಾಗುತ್ತದೆ. ಝೇಂಕಾರದ ಕೊನೆಯ noteನೊಡನೆ vibraphone ಮೇಳೈಸುತ್ತದೆ. ಈ ಭಾಗವು 78rpm ರೆಕಾರ್ಡಲ್ಲಿ ಮಾತ್ರ ಇದ್ದು ಚಲನಚಿತ್ರ , ನೆಟ್ ಹಾಗೂ ಈಗ ರೇಡಿಯೋದಲ್ಲಿ ಕೇಳಲು ಸಿಗುವ ಆವೃತ್ತಿಯಲ್ಲಿ ಇಲ್ಲ. ನಂತರ group violinಗಳು ಒಂದನೇ ಕಾಲದಲ್ಲಿ ರಾಗದ ಆವರೋಹಣ ಸಾ ನೀ ದಾ ಪಾ ಮಾ ಗಾ ರೀ ಸಾ ನುಡಿಸುವಾಗ ಅತಿ ಮಂದ್ರದ ಡಬಲ್ ಬೇಸ್ ಗಿಟಾರುಗಳು ಅನುಸರಿಸುತ್ತವೆ. ಸಾಮಾನ್ಯವಾಗಿ ಒಂದೆರಡು counter noteಗಳನ್ನಷ್ಟೇ ಹಿನ್ನೆಲೆಯಲ್ಲಿ ನುಡಿಸುತ್ತಾ ಇರುವ ಡಬಲ್ ಬೇಸ್ ಗಿಟಾರ್ ರೀತಿ ಮುಖ್ಯ ಮೆಲೊಡಿಯನ್ನು ಅನುಸರಿಸುವ ಉದಾಹರಣೆ ಕಮ್ಮಿ. ಮುಂದೆ ಕ್ಲಾರಿನೆಟ್ ಮತ್ತು ಕೊಳಲು ಜೊತೆಯಾಗಿ ಮೂರನೇ ಕಾಲದಲ್ಲಿ ದಾಟು ವರಸೆ ರೀತಿಯ ಸರಿಗರಿಸರಿಮಾಗರಿಸಾ ಮಪದಮಪಮನೀದಪಮಾವನ್ನು ನುಡಿಸುವಾಗ ಬೊಂಗೋ,maracas ಮತ್ತು ಕಿಟಿ ಕಿಟಿ ಕಿಟಿಕ್ ಎಂಬ ಸದ್ದು ಹೊರಡಿಸುವ temple blockಗಳ ರಿದಂ ಆರಂಭವಾಗುತ್ತದೆ. ಇದರ ಕೊನೆಗೆ violinಗಳು ನುಡಿಸುವ ಸಸಮಾ ಮತ್ತು ಮಮನೀ ಎಂಬ ಸಣ್ಣ ತುಣುಕುಗಳು ಕ್ಲಾರಿನೆಟ್ ಮತ್ತು ಕೊಳಲುಗಳು ಏನೋ ಕೇಳಿದ್ದಕ್ಕೆ ಹೇಳುವ ಉತ್ತರವೇನೋ ಎಂದು ಭಾಸವಾಗುತ್ತದೆ! ನಂತರ ಅದೇ ರಿದಂನಲ್ಲಿ ಮ್ಯಾಂಡೊಲಿನ್ ಕತ್ತಿಯ ಅಂಚಿನಂತಹ ಹರಿತವಾದ toneನಲ್ಲಿ ನೀಸಾ ನೀರೀ ಸಗಾಗ ರೀಗಾರೀಮಾಗರಿಸಾ ನುಡಿಸುತ್ತದೆ. ಮುಂದೆ ಬರುವುದು ಹೊಟ್ಟೆಯೊಳಗೆ ಕೈ ಹಾಕಿ ಕಲಸಿದಂಥ ಅನುಭವ ನೀಡುವ group violinಗಳು ನುಡಿಸುವ ಸಾರೀಸಾಮಾಮಾ ಗಾಮಾಗಾಸಾರೀ ನೀಸಾನೀಗಾಗಾ ರೀಗಾರೀನಿಸಾ. ಇದರ ಪ್ರತೀ ಭಾಗದ ಕೊನೆಯ noteನೊಂದಿಗೆ ಮೇಳೈಸುವ vibraphone ಉಂಟುಮಾಡುವ ಪರಿಣಾಮ ಅತ್ಯದ್ಭುತ. ಇದರ ಮುಂದುವರಿದ ಭಾಗದಲ್ಲಿ ಚೇಲೊ ಮತ್ತು violinಗಳು ಇವೇ ಸ್ವರಗಳನ್ನು ಹಿನ್ನೆಲೆಯಲ್ಲಿ ನುಡಿಸುತ್ತಿರುವಾಗ ಕೊಳಲು ಮತ್ತು ಕ್ಲಾರಿನೆಟ್ ಮೂರನೇ ಕಾಲದಲ್ಲಿ ಮದನಿಸಾ ಮದನಿಸಾ ಗಮದನೀ ಗಮದನೀ ಮದಸಗಾ ಮದಸಗಾ ಸರಿಸನಿದನಿದಪಮಪದನಿಸಾ ನುಡಿಸುತ್ತವೆ. ಅಲ್ಲಿಗೆ ಬೋಂಗೋ, maracas ಮತ್ತು temple block ರಿದಂ break ಆಗಿ ಡಬಲ್ ಬೇಸ್ , ಕೊಳಲು, ಕ್ಲಾರಿನೆಟ್, ಮ್ಯಾಂಡೊಲಿನ್ ಜೊತೆಯಾಗಿ ಸಾ...ಪ ನೀ...ಮ ದಾಪಾಮಾಗರಿಸಾ ನುಡಿಸಿ prelude ಮುಗಿದಾಗ ಎಲ್ಲೋ ಕಳೆದು ಹೋಗಿದ್ದ ನಾವು ಮರಳಿಬಂದು ಪಿ.ಬಿ.ಶ್ರೀನಿವಾಸ್ ಗಂಧರ್ವ ಗಾಯನದ ಸಾಹಿತ್ಯ ಭಾಗ ಕೇಳಲು ಸಿದ್ಧವಾಗುತ್ತೇವೆ. 28 ಸೆಕೆಂಡುಗಳ ಪಲ್ಲವಿ ಭಾಗದಲ್ಲಿ ಸಮಯೋಚಿತ break ಮತ್ತು take off ಗಳೊಂದಿಗೆ preludeನಲ್ಲಿದ್ದ ರಿದಂ ವಾದ್ಯಗಳೇ ಮುಂದುವರಿಯುತ್ತವೆ.
ಪಲ್ಲವಿ ಮುಗಿಯುತ್ತಲೇ ರಿದಂ break ಆಗಿ ಚೇಲೋ ಮತ್ತು vibraphoneಗಳ ಚಿಕ್ಕ bridge piece ಇದೆ. ಮತ್ತೆ take off ಆಗುವ ಅದೇ ರಿದಂನೊಡನೆ Interludeನಲ್ಲಿ violinಗಳು ಮೂರನೇ ಕಾಲದಲ್ಲಿ ದಪಮಾ ನೀದಪಾ ಸನಿದಪದನಿಸಾ ರಿಸನೀ ಗರಿಸಾ ಮಗರಿಸರಿಗಮಾ ನುಡಿಸಿದ ಮೇಲೆ ಮ್ಯಾಂಡೊಲಿನ್ ಮಾಮದಪಾಮಾ ಅಂದಾಗ ಚೇಲೋ ಮಾ ಸಸ ಸಾ ಎಂದು ಉತ್ತರಿಸುತ್ತದೆ. ನಂತರ violinಗಳ ಮಾದಾಪಾಮಾ ಸಾ.... ಆದ ಮೇಲೆ ಮ್ಯಾಂಡೊಲಿನ್, ಕೊಳಲು, ಕ್ಲಾರಿನೆಟ್ ಜೊತೆಯಾಗಿ ಸಾಮಾಮಾಮಾ ನೀಗಾಗಾಗಾ ಸಾರೀನೀಸಾದಾನೀ ಪಾದಾಮಾ ನುಡಿಸಿದಾಗ 14 ಸೆಕೆಂಡುಗಳ interlude ಮುಕ್ತಾಯವಾಗುತ್ತದೆ.
ಚರಣ ಆರಂಭವಾಗುವಾಗ ಅಲ್ಲಿವರೆಗೆ ರಿದಂ ನಿಭಾಯಿಸಿದ ಎಲ್ಲ ವಾದ್ಯಗಳು ಬದಿಗೆ ಸರಿದು ಢೋಲಕ್ ಮತ್ತು ತಬ್ಲಾಗಳಿಗೆ ಜಾಗ ಬಿಟ್ಟುಕೊಡುತ್ತವೆ.. ಸರಳ ನಡೆಯ ರಿದಂ ಆದರೂ ಎಡದ ಗುಂಕಿಗಳು ಅತ್ಯಾಕರ್ಷಕವಾಗಿವೆ. ಹಾಗೇ ಕೇಳಿದರೆ ಇದರ ಅನುಭವವಾಗದು. ಹೆಡ್ ಫೋನ್ ಅಥವಾ ಉತ್ತಮ music systemನಲ್ಲಿ ಆಲಿಸಬೇಕು. ಚರಣದ ಸಾಲುಗಳು ಪುನರಾವರ್ತನೆ ಆಗುವಾಗ ಮಧ್ಯದಲ್ಲಿ ಚೇಲೋದ ಚಿಕ್ಕದಾದ ಸುಂದರ bridge music ಇದೆ. ಪಲ್ಲವಿ ಮತ್ತು ಚರಣಗಳ ಗಾಯನ ಭಾಗದಲ್ಲಿ counter melody, vibraphone, ಬೇಸ್ ಗಿಟಾರ್ ಇತ್ಯಾದಿ ಯಾವುದನ್ನೂ ಬಳಸಲಾಗಿಲ್ಲ. ಚರಣ ಮುಗಿಯುವಾಗ ಸರಳ ಮುಕ್ತಾಯದೊಡನೆ ಢೋಲಕ್ ತಬ್ಲಾ ರಿದಂ break ಆಗಿ ಚೇಲೊ ಮತ್ತು vibraphoneಗಳ bridge ನಂತರ ತನ್ನ ಮೊದಲಿನ ರಿದಂನೊಡನೆ ಪಲ್ಲವಿ ಭಾಗ ಬರುತ್ತದೆ. ಎರಡು ಚರಣಗಳಿಗೂ ಅದೇ interlude ಇದೆ. Preludeನ ಅತ್ಯಂತ ಪ್ರಭಾವಶಾಲಿ ಭಾಗ ಡಬಲ್ ಬೇಸ್ vibra phoneಗಳೊಂದಿಗಿನ group violinಗಳ ಸಾರೀಸಾಮಾಮಾ ಗಾಮಾಗಾಸಾರೀ ನೀಸಾನೀಗಾಗಾ ರೀಗಾರೀನಿಸಾ fadeoutನೊಂದಿಗೆ ಹಾಡು ಮುಗಿಯುತ್ತದೆ.
D sharp ಶ್ರುತಿಯ ಈ ಹಾಡಿನ prelude ಮತ್ತು interludeಗಳು ತಾರ ಸಪ್ತಕದ ಮಧ್ಯಮವನ್ನು ಮುಟ್ಟಿದರೂ ಮಧ್ಯಮ ಲಯದ ಗಾಯನ ಭಾಗ ಮಧ್ಯ ಸಪ್ತಕದಲ್ಲೇ ಸಂಚರಿಸುತ್ತದೆ. ತೋರಿಕೆಗೆ ಸರಳವೆಂದು ಅನ್ನಿಸಿದರೂ ಪಿ.ಬಿ.ಶ್ರೀನಿವಾಸ್ ಅವರು ಪ್ರತಿ ಸಾಲನ್ನೂ ಸ್ಪಟಿಕ ಸ್ವಚ್ಛ ಉಚ್ಚಾರ ಹಾಗೂ ತಮ್ಮ ವಿಶಿಷ್ಟ ಮುರ್ಕಿಗಳೊಡನೆ ಇತರರು ಅನುಕರಿಸಲಾಗದಂತೆ ಹಾಡಿದ್ದಾರೆ. ಯಾರೂ ಯಥಾವತ್ತಾಗಿ ಮರುಸೃಷ್ಟಿಸಲು ಸಾಧ್ಯವಾಗದ ಹಾಡಿದು. ಇಂತಹ ರಚನೆಗಳನ್ನು ಕಲ್ಪಿಸಿದವರ, ಹಾಡಿದವರ, ವಾದ್ಯಗಳನ್ನು ನುಡಿಸಿದವರ ಮೈ ಮನಗಳಲ್ಲಿ ಆ ಕ್ಷಣಕ್ಕೆ ಗಂಧರ್ವ ಲೋಕದ ಸಂಗೀತ ದೇವತೆಗಳ ಆವಾಹನೆಯಾಗುತ್ತಿದ್ದಿರಬಹುದು ಎಂದು ನನಗೆ ಅನ್ನಿಸುವುದಿದೆ.
ಸಾಹಿತ್ಯ
ಇದು ಪ್ರಾಸಬದ್ಧ ಸಂಭಾಷಣೆ ಮತ್ತು ಹಾಡುಗಳಿಗೆ ಹೆಸರಾದ ಕು.ರ.ಸೀತಾರಾಮ ಶಾಸ್ತ್ರಿ ಅವರ ರಚನೆ. ಕನ್ನಡ ಚಿತ್ರಗೀತೆಗಳಲ್ಲಿ ಸಾಮಾನ್ಯವಾಗಿ ಅಂತ್ಯಪ್ರಾಸವಿರುತ್ತದೆ. ಆದರೆ ಅಂತ್ಯಪ್ರಾಸದ ಜೊತೆಗೆ ಈ ಹಾಡಿನ ಪದ ಪದಗಳೂ ಆದಿಪ್ರಾಸ, ಒಳಪ್ರಾಸ ಹೊಂದಿವೆ. ಇಡೀ ಹಾಡು ನಾಯಕಿಯ ವರ್ಣನೆಗೆ ಮೀಸಲಾಗಿದ್ದು ಇಲ್ಲಿ ಅವರು ಉಪಯೋಗಿಸಿದ ಉಪಮೆಗಳೂ ಅನನ್ಯ. ಡೊಂಕು ಇದ್ದರೆ ಕೊಂಕು ಮಾತಾಡುವವರೇ ಜಾಸ್ತಿ. ಆದರೆ ಇಲ್ಲಿ ಮೈಯ ಡೊಂಕು ಸೌಂದರ್ಯದ ಪ್ರತೀಕವಾಗಿದೆ. ನಾಯಕಿಯ ತೆಳು ನಡುವನ್ನು ವರ್ಣಿಸಲು ಮಧುಪಾನಪಾತ್ರೆ ಎಂಬ ವಿಶಿಷ್ಟ ಪದಪುಂಜವನ್ನೂ ಅವರು ಬಳಸಿದ್ದಾರೆ. ಹಿಂದಿ, ಉರ್ದು ಸಾಹಿತ್ಯದಲ್ಲಿ ಮದ್ಯಪಾನ ಮಾಡಲು ಬಳಸುವ, ಮರಳು ಗಡಿಯಾರದಂತೆ ನಡು ತೆಳ್ಳಗಾಗಿರುವ ice cream bowlನಂತಹ ಪೈಮಾನಾ ಎಂಬ ಗಾಜಿನ ಪಾತ್ರೆಯ ಉಲ್ಲೇಖ ಇರುತ್ತದೆ. ಆ ಪೈಮಾನಾವನ್ನು ಅವರು ಈ ರೀತಿ ಕನ್ನಡೀಕರಿಸಿದ್ದಾರೆ. ಆಕೆಯನ್ನು ಸಿಂಹಕಟಿ ಅಂದ ಹಾಗೂ ಆಯಿತು, ನಿನ್ನಂತರಂಗ ಮಧುರಂಗ ಅನ್ನುವುದಕ್ಕೆ ಪೂರಕವೂ ಆಯಿತು.
ತೆರೆಮರೆಯ ಕಲಾವಿದರು
ಇಂತಹ ಸುಂದರ ಹಾಡುಗಳ ಗಾಯಕರು, ಸಂಗೀತಗಾರರು ಮತ್ತು ಗೀತರಚನೆಕಾರರ ಬಗೆಗಷ್ಟೇ ನಮಗೆ ತಿಳಿದಿರುವುದು. ಅತ್ಯದ್ಭುತವಾಗಿ ವಿವಿಧ ವಾದ್ಯಗಳನ್ನು ನುಡಿಸಿದ ಕಲಾವಿದರು, ಯಾವ ವಾದ್ಯ ಎಲ್ಲಿ ನುಡಿಯಬೇಕೆಂದು ನಿರ್ಧರಿಸುವ arrangers ಬಗ್ಗೆ ಗೊತ್ತೇ ಇಲ್ಲ. ನಂತರದ ದಿನಗಳಲ್ಲಿ ಎಲ್.ವೈದ್ಯನಾಥನ್ ಮತ್ತು ಇಳೆಯರಾಜಾ ಅವರು ಜಿ.ಕೆ.ವೆಂಕಟೇಶ್ ಅವರಿಗೆ ಸಹಾಯಕರಾಗಿದ್ದರೂ 60ರ ದಶಕದ ಪೂರ್ವಾರ್ಧದಲ್ಲಿ ಅವರ ಆರ್ಕೆಷ್ಟ್ರಾ ನಿರ್ವಹಣೆ ಯಾರು ಮಾಡುತ್ತಿದ್ದರು ಎಂದು ತಿಳಿದಿಲ್ಲ. ಹಿಂದಿ ಚಿತ್ರರಂಗದ ಇಂಥವರ ಬಗ್ಗೆ ಇತ್ತೀಚೆಗೆ ಒಂದಷ್ಟು ಮಾಹಿತಿ ದೊರಕತೊಡಗಿದ್ದು ಅಕಾರ್ಡಿಯನ್ ನುಡಿಸುತ್ತಿದ್ದ ಗೂಡಿ ಸಿರ್ವಾಯಿ, ಕೊಳಲು ವಾದಕ ಸುಮಂತ್ ರಾಜ್, ಸರೋದ್ ನುಡಿಸುವ ಜರೀನ್ ಶರ್ಮಾ, ಸಿತಾರ್ ನುಡಿಸುವ ರಯೀಸ್ ಖಾನ್, saxophone ಕಲಾವಿದ ಮನೋಹಾರಿ ಸಿಂಗ್, castanets ನುಡಿಸುವ ಹೋಮಿ ಮುಲ್ಲ ಮುಂತಾದವರ ಬಗ್ಗೆ ನಾವು ತಿಳಿಯುವಂತಾಗಿದೆ. ಇನ್ನೂ ನಮ್ಮೊಡನಿರುವ ದಕ್ಷಿಣ ಭಾರತ ಚಿತ್ರಸಂಗೀತ ಕ್ಷೇತ್ರದ ಕೆಲ ಹಿರಿಯ ಸಂಗೀತ ನಿರ್ದೇಶಕರ ನೆನಪುಗಳನ್ನು ಕೆದಕಿ ನಮ್ಮಲ್ಲೂ ಇಂತಹ ಮಾಹಿತಿಯ ಕ್ರೋಢೀಕರಣ ಆಗಬೇಕಾಗಿದೆ. ವಾಹನ ಚಾಲಕರು, ಅಡುಗೆಯವರು, ಕಸ ಗುಡಿಸುವವರು ಎಲ್ಲರನ್ನೂ ಸ್ಮರಿಸುವ ಚಿತ್ರಗಳ titleಗಳಲ್ಲಿ ವಿವಿಧ ವಾದ್ಯಗಳನ್ನು ನುಡಿಸಿದ ಕಲಾವಿದರೆಲ್ಲರ ವಿವರಗಳೂ ದಾಖಲಾಗುವ ಪರಿಪಾಠ ಹಿಂದಿನಿಂದಲೂ ಬೆಳೆದು ಬಂದಿದ್ದರೆ ಎಷ್ಟು ಒಳ್ಳೆಯದಿತ್ತು!
ಈಗ ಹಾಡು ಕೇಳಿ
ಇಷ್ಟೆಲ್ಲ ಓದಿದ ಮೇಲೆ ನೀವು ನೂರಾರು ಬಾರಿ ಕೇಳಿರಬಹುದಾದ ಈ ಹಾಡನ್ನು ಇನ್ನೊಮ್ಮೆ ಕೇಳಿ. ಸಾಧ್ಯವಾದರೆ ಹೆಡ್ ಫೋನ್ ಬಳಸಿ. ಆರಂಭದ ಗಿಟಾರ್ ಝೇಂಕಾರದಿಂದ ಮೊದಲ್ಗೊಂಡು ಪ್ರತೀ ತುಣುಕನ್ನೂ ಆಲಿಸಿ ಆನಂದಿಸಿ. ವಿಶಿಷ್ಟ ಅನುಭವ ನಿಮ್ಮದಾಗಿಸಿಕೊಳ್ಳಿ.
ಸಾಸಸ ಸಾಸಸ ಸಾ
ಸಾ ನೀ ದಾ ಪಾ ಮಾ ಗಾ ರೀ ಸಾ
ಸರಿಗರಿಸರಿಮಾಗರಿಸಾ
ಸಸಮಾ
ಮಪದಮಪಮನೀದಪಮಾ
ಮಮನೀ
ಸರಿಗರಿಸರಿಮಾಗರಿಸಾ
ಸಸಮಾ
ಮಪದಪಮಪನೀದಪಮಾ
ಮಮನೀ
ನೀಸಾ ನೀರೀಸಗಾಗ ರೀಗಾರೀಮಾಗರಿಸಾಸ
ನೀಸಾ ನೀರೀಸಗಾಗ ರೀಗಾರೀಮಾಗರಿಸಾ
ಸಾರೀಸಾಮಾಮಾ ಗಾಮಾಗಾಸಾರೀ ನೀಸಾನೀಗಾಗಾ ರೀಗಾರೀನಿಸಾ
ಮದನಿಸಾ ಮದನಿಸಾ ಗಮದನೀ ಗಮದನೀ ಮದಸಗಾ ಮದಸಗಾ ಸರಿಸನಿದನಿದಪಮಪದನಿಸಾ
ಸಾ...ಪ ನೀ...ಮ ದಾಪಾಮಾಗರಿಸಾ
ಬಿಂಕದ ಸಿಂಗಾರಿ
ಮೈ ಡೊಂಕಿನ ವೈಯಾರಿ
ಈ ಸವಿಗಳಿಗೆ ರಸದೀವಳಿಗೆ
ನಿನ್ನಂತರಂಗ ಮಧುರಂಗ
ದಪಮಾ ನೀದಪಾ ಸನಿದಪದನಿಸಾ
ರಿಸನೀ ಗರಿಸಾ ಮಗರಿಸರಿಗಮಾ
ಮಾಮದಪಾಮಾ ಮಾ ಸಸ ಸಾ
ಮಾಮದಪಾಮಾ ಮಾ ಸಸ ಸಾ
ಮಾದಾಪಾಮಾ ಸಾ....
ಸಾಮಾಮಾಮಾ ನೀಗಾಗಾಗಾ ಸಾರೀನೀಸಾದಾನೀ ಪಾದಾಮಾ
ಬಳಿ ನೀನಿರಲು
ಬಿಸಿಲೇ ನೆರಳು
ಮಧುಪಾನಪಾತ್ರೆ ನಿನ್ನೊಡಲು
ಮಧುವಿಲ್ಲದೆ ಮದವೇರಿಪ
ನಿನ್ನಂದಚಂದ ಮಕರಂದ
ದಪಮಾ ನೀದಪಾ ಸನಿದಪದನಿಸಾ
ರಿಸನೀ ಗರಿಸಾ ಮಗರಿಸರಿಗಮಾ
ಮಾಮದಪಾಮಾ ಮಾ ಸಸ ಸಾ
ಮಾಮದಪಾಮಾ ಮಾ ಸಸ ಸಾ
ಮಾದಾಪಾಮಾ ಸಾ....
ಸಾಮಾಮಾಮಾ ನೀಗಾಗಾಗಾ ಸಾರೀನೀಸಾದಾನೀ ಪಾದಾಮಾ
ನಿನ್ನೀ ವದನ ಅರವಿಂದವನ
ಹೂಬಾಣ ನಿನ್ನ ಬಿನ್ನಾಣ
ಒಲವೆಂಬ ಧನ ಬಿಡೆ ಹುಂಬತನ
ಬಾ ಚಿನ್ನ ರನ್ನ ವರಿಸೆನ್ನ
ಸಾರೀಸಾಮಾಮಾ ಗಾಮಾಗಾಸಾರೀ
ನೀಸಾನೀಗಾಗಾ ರೀಗಾರೀನಿಸಾ
ಸಾರೀಸಾಮಾಮಾ ಗಾಮಾಗಾಸಾರೀ
ನೀಸಾನೀಗಾಗಾ ರೀಗಾರೀನಿಸಾ
******
Note:- ಬಿಂಕದ ಎಂಬುದನ್ನು ಸಾಸಸಕ್ಕೆ ಬದಲಾಗಿ ಪಾಪಪ ಎಂದು ಎತ್ತಿಕೊಂಡರೆ ಈ ಹಾಡಿನ ರಾಗ 20ನೇ ಮೇಳಕರ್ತ ನಟಭೈರವಿ ಆಗಿ ಸ್ವರಗಳೆಲ್ಲ ಬದಲಾಗುತ್ತವೆ.
*********
ತುಂಬಾ ಚೆನ್ನಾದ ವಿಶ್ಲೇಷಣೆ ಮತ್ತು ಸ್ವರ ವಿವರಣೆ ಮಾನ್ಯ ಕಾಕತ್ಕರರವರೆ. ಸಂಗೀತ ಗಾಳಿ ಗಂಧ ಇಲ್ಲದ ನಮ್ಮಂತಹವರಿಗೆ ಇಂತಹ ಇನ್ನೂ ಅನೇಕ ಹಾಡುಗಳ ವಿವರಣೆ ಅಗತ್ಯವಿದೆ. ಯಾವುದೇ ಅತಿರೇಕವಾಗಲಿ ಭಾವವೇಶವಾಗಲಿ ಮತ್ತು ವಾದ್ಯಗೋಷ್ಠಿಯ ಗದ್ದಲವಿಲ್ಲದೆ ಇರುವ ಹಾಡು "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ" ನನ್ನ ದೃಷ್ಟಿಯಲ್ಲಿ ಎಸ್ ಜಾನಕಿಯವರು ಹಾಡಿರುವ ಅತ್ಯುತ್ತಮ ಹಾಡುಗಳಲ್ಲಿ ಇದು ಅತ್ಯಂತ ಪ್ರಮುಖವಾದುದು. ವಿಜಯಭಾಸ್ಕರರ ಸ್ವರ ಸಂಯೋಜನೆ ಸಂಗೀತ ನಿರ್ವಹಣೆ, ಆರ್ ಎನ್ ಜಯಗೋಪಾಲ್ ರವರ ಸಾಹಿತ್ಯ ಹಾಡುಗಾರಿಕೆ ಎಲ್ಲವೂ ಅಚ್ಚುಕಟ್ಟಾಗಿರುವ ಹಾಡಿದು. ಇದರ ಕುರಿತು ನಿಮ್ಮ ವಿವರಣೆ ಸಿಗುವಂತಾಗಲಿ
ReplyDeleteನಿಮ್ಮ ಆಸಕ್ತಿಗೆ ಕೃತಜ್ಞತೆಗಳು. ‘ಬರೆದೆ ನೀನು’ ಜಾನಕಿ ಮತ್ತು ಪಿ.ಬಿ.ಎಸ್ ಎರಡು ಆವೃತ್ತಿಗಳೂ ವಿಭಿನ್ನವಾಗಿ ಚೆನ್ನಾಗಿವೆ. ಮುಂದೊಮ್ಮೆ ಇವುಗಳ ಬಗ್ಗೆಯೂ ಅವಲೋಕನ ಮಾಡೋಣವಂತೆ.
Delete👌👌👌
ReplyDeleteಧನ್ಯವಾದ ಮಾನ್ಯ XX ಅವರೇ!
Deleteಧನ್ಯವಾದಗಳು ಸರ್. ಇದೇ ರೀತಿ "ಸಾಕ್ಷಾತ್ಕಾರ" ಮತ್ತು "ದೇವರ ಮಕ್ಕಳು" ಕ್ರಮವಾಗಿ 'ಓಲವೇ ಜೀವನ ಸಾಕ್ಷಾತ್ಕಾರ' ಮತ್ತು 'ಓ ಅಯ್ಯ ಅಮ್ಮಯ್ಯ' ಗೀತೆಗಳ ಸ್ವರ ಲಿಪಿ ತಿಳಿಸಿ ಕೂಡಿ ಸರ್.
ReplyDelete