Saturday 22 October 2016

ಬೆರೆತ ಜೀವದ ಸವಿ ಹಾಡು


      ಈ ಶೀರ್ಷಿಕೆ ಬೆರೆತ ಜೀವ ಚಿತ್ರದ ಒಂದು ಹಾಡಿನದೇ ಸಾಲು.  ಚಿತ್ರ ಸಂಗೀತದ ಸುವರ್ಣಯುಗವೆಂದು ಅನಿಸಿಕೊಂಡಿರುವ 60ರ ದಶಕದಲ್ಲೂ, ಅದು ಕನ್ನಡ ಇರಲಿ, ಹಿಂದಿ ಇರಲಿ ಅಥವಾ ಬೇರೆ ಭಾಷೆ ಇರಲಿ, ಎಲ್ಲ  ಸಿನಿಮಾಗಳ ಎಲ್ಲ ಹಾಡುಗಳು ಚೆನ್ನಾಗಿಯೇ ಇರುತ್ತಿದ್ದವು ಎಂದೇನಿಲ್ಲ. ಹಿಂದಿಯಲ್ಲಿ ಶಂಕರ್ ಜೈಕಿಶನ್ ಅಥವಾ ಓ. ಪಿ. ನಯ್ಯರ್ ಸಂಗೀತದ ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದ ಎಲ್ಲ ಭಾಷೆಗಳ ಚಿತ್ರಗಳಲ್ಲಿ ಒಂದೋ ಎರಡೋ ಹಾಡುಗಳಷ್ಟೇ ಉತ್ತಮ ಅನ್ನಿಸಿಕೊಳ್ಳುತ್ತಿದ್ದವು. ಕನ್ನಡದಲ್ಲಂತೂ ಎಲ್ಲ ಹಾಡುಗಳು ಅತ್ಯುತ್ತಮ ಅನ್ನಿಸಿಕೊಂಡದ್ದು ಕೆಲವೇ ಕೆಲವು ಚಿತ್ರಗಳಲ್ಲಿ. ಬೆರೆತ ಜೀವ ಅವುಗಳ ಪೈಕಿ ಒಂದು. 

     1965ರಲ್ಲಿ ಬಂದ ಬೆರೆತ ಜೀವ ತಮಿಳಿನ ಪಾಲುಂ ಪಳಮುಂ ಚಿತ್ರದ ಕನ್ನಡ ರೂಪ. ಕನ್ನಡ, ತಮಿಳು ಎರಡರಲ್ಲೂ ಬಿ.ಸರೋಜಾದೇವಿ ನಾಯಕಿ. ಅಲ್ಲಿ ಶಿವಾಜಿ ಗಣೇಶನ್ ನಾಯಕನಾದರೆ ಇಲ್ಲಿ ಕಲ್ಯಾಣ್ ಕುಮಾರ್ ಹೀರೊ. ಮುಂದೆ ಇದೇ ಚಿತ್ರ ಹಿಂದಿಯಲ್ಲಿ ಸಾಥಿ ಎಂಬ ಹೆಸರಿನಲ್ಲಿ ತಯಾರಾದಾಗ ಸರೋಜಾದೇವಿಯನ್ನು ಬಹಳಷ್ಟು ಹೋಲುತ್ತಿದ್ದ ವೈಜಯಂತಿಮಾಲಾ ನಾಯಕಿಯಾಗಿದ್ದದ್ದು ಕಾಕತಾಳೀಯವೇ ಇರಬಹುದು. ಅಂದಿನ ದಿನಗಳಲ್ಲಿ ಮಧ್ಯ ವಯಸ್ಸಿನ ಹೀರೊಗಳು ಕಾಲೇಜು ಹುಡುಗರ ಪಾತ್ರ ವಹಿಸುತ್ತಿದ್ದುದು ಸಾಮಾನ್ಯವಾಗಿದ್ದರೂ ಈ ಚಿತ್ರದ ನಾಯಕ ತಲೆಗೂದಲು ಹಣ್ಣಾಗತೊಡಗಿದ್ದ ಮಧ್ಯವಯಸ್ಕನೇ ಆಗಿದ್ದುದು ಒಂದು ವಿಶೇಷ. ವಿಶ್ವನಾಥನ್ ರಾಮಮೂರ್ತಿ ಸಂಗೀತವಿದ್ದ ಪಾಲುಂ ಪಳಮುಂ ಚಿತ್ರದ  ನಾನ್ ಪೇಸ ನಿನೈಪದೆಲ್ಲಾಂ, ಪೋನಾಲ್ ಪೋಗಟ್ಟುಂ ಪೋಡಾ ಮುಂತಾದ ಹಾಡುಗಳು ಬಲು ಜನಪ್ರಿಯವಾಗಿದ್ದು ವಿವಿಧಭಾರತಿಯಲ್ಲಿ ಪ್ರಸಾರವಾಗುತ್ತಿದ್ದ ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಿನನಿತ್ಯವೆಂಬಂತೆ ಕೇಳಿ ಬರುತ್ತಿದ್ದವು. ಕನ್ನಡ ಅವತರಣಿಕೆಯಲ್ಲಿ  ಈ ಜನಪ್ರಿಯ ಧಾಟಿಗಳನ್ನೇ ಬಳಸುವ ಅವಕಾಶವಿದ್ದರೂ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್  ನನ್ನ ಧಾಟಿಯ ನೀನರಿಯೆ ನನ್ನ ಹಾಡೇ ಬೇರೆ ಎಂದು ಸವಾಲು ಹಾಕಿ   ಬೆರೆತ ಜೀವ ಚಿತ್ರದ ನಿರ್ಮಾಪಕ ನಿರ್ದೇಶಕರೂ ಆಗಿದ್ದ ಕು.ರ.ಸೀತಾರಾಮ ಶಾಸ್ತ್ರಿ ಅವರು ಬರೆದ ಅರ್ಥಪೂರ್ಣ ಪ್ರಾಸಬದ್ಧ ಹಾಡುಗಳನ್ನು ಬೇರೆಯೇ ಧಾಟಿಯಲ್ಲಿ ಸಂಯೋಜಿಸಿ ಗೆದ್ದಿದ್ದರು. (ಕೆಲವು ವರ್ಷಗಳ ನಂತರ ಭಲೇ ಭಾಸ್ಕರ್ ಎಂಬ ಚಿತ್ರದ ನನ್ನೆದೆಯ ಹಾಡೆಲ್ಲ ನೀನಾಗಬೇಕು ಎಂಬ ಹಾಡಿಗೆ ಸತ್ಯಂ ಅವರು ನಾನ್ ಪೇಸ ನಿನೈಪದೆಲ್ಲಾಂ ಧಾಟಿಯನ್ನು ಬಳಸಿಕೊಂಡರು). ಬೆರೆತ ಜೀವದ ಹಾಡುಗಳಿಗೆ ಧ್ವನಿಯಾಗಿದ್ದವರು ಆಗ ಕನ್ನಡದಲ್ಲಿ ಏಕವೇವಾದ್ವಿತೀಯರಾಗಿದ್ದ ಪಿ.ಬಿ.ಶ್ರೀನಿವಾಸ್ ಮತ್ತು ಸರೋಜಾದೇವಿ ಅಭಿನಯದ ಚಿತ್ರಗಳಲ್ಲಿ ಹೆಚ್ಚಾಗಿ ಹಾಡುತ್ತಿದ್ದ ಪಿ.ಸುಶೀಲ. ಆ ಕಾಲದಲ್ಲಿ ರೇಡಿಯೋ ನಿಲಯಗಳಿಂದ ಅದರಲ್ಲೂ ನಮ್ಮ ಮನೆಯ ನ್ಯಾಶನಲ್ ಎಕ್ಕೊ ರೇಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದ್ದ ಆಕಾಶವಾಣಿ ಭದ್ರಾವತಿ  ನಿಲಯದದಿಂದ ಪದೇ ಪದೇ ಬಿತ್ತರವಾಗುತ್ತಿದ್ದ  ಬೆರೆತ ಜೀವದ ಸವಿ ಹಾಡುಗಳು ಈಗ ನಿಮಗಾಗಿ ಇಲ್ಲಿವೆ.

ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
     ಇದು ಆದರ್ಶ ದಂಪತಿಗಳ ಹಾಡು.  ಹೆಚ್ಚಿನ ದಾಂಪತ್ಯಗಳಲ್ಲಿ ಪತಿಯು ಪತ್ನಿಯ ಬೇಕು ಬೇಡಗಳನ್ನು ಗಮನಿಸದೆ ತನ್ನದೇ ಸಾಮ್ರಾಜ್ಯದಲ್ಲಿ ಮುಳುಗಿರುತ್ತಾನೆಂಬ ಆರೋಪ ಸಾಮಾನ್ಯವಾಗಿದ್ದರೂ ಇಲ್ಲಿ ಪತ್ನಿಯು ಏನು ಬೇಕು ಎಂದು ಪದೇ ಪದೇ ಏಕೆ ಕೇಳುತ್ತಿರುವೆ ಎಂದು ಪತಿಯನ್ನು  ಪ್ರಶ್ನಿಸುತ್ತಾಳೆ.  ಅದಕ್ಕೆ ಪತಿಯು ಜೀವ ಜೀವಗಳು ಬೆರೆಯುವ ಮುನ್ನ ಆಕೆಯ ಬಯಕೆ ಹರಕೆಗಳನ್ನು ಅರಿಯುವುದು ತನ್ನ ಕರ್ತವ್ಯ ಅನ್ನುತ್ತಾನೆ.  ಕಥೆಯಲ್ಲಿ ಪತಿಯು ದೃಷ್ಟಿಯನ್ನು ಕಳೆದುಕೊಳ್ಳಲಿರುವ ಬಗ್ಗೆ ಮುನ್ಸೂಚನೆಯೂ ಒಂದು ಸಾಲಿನಲ್ಲಿದೆ. ಎರಡನೇ ಚರಣ ಆಗಿ ಹಾಡು ಇನ್ನೇನು ಮುಗಿಯಿತು ಅನ್ನಿಸಿದರೂ ಮತ್ತೂ ಮುಂದುವರಿದು ಕ್ಲೈಮ್ಯಾಕ್ಸ್  ತಲುಪುವುದು ಇದರ ವಿಶೇಷ. ಹಾಡಿನ ನಡೆಯು ಮನ ಮೆಚ್ಚಿದ ಮಡದಿತುಟಿಯ ಮೇಲೆ ತುಂಟ ಕಿರುನಗೆಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ.



ಬಂದದ್ದೆಲ್ಲ ಬರಲಿ
     ಬಂದದ್ದೆಲ್ಲ ಬರಲಿ ಗೋವಿಂದನ ದಯೆಯಿರಲಿ ಎಂಬ ಗಾದೆ ಮಾತೇ ಇಲ್ಲಿ ಹಾಡಿನ ಪಲ್ಲವಿಯಾಗಿದೆ.  ಬಯಸಿದ್ದನ್ನು ಗಳಿಸುವ ಛಲವಿರಬೇಕು.  ಆದರೆ ಅದು ಅಳಿದರೆ ಹಲುಬದ ಸ್ಥಿತಪ್ರಜ್ಞತೆಯೂ ಇರಬೇಕು ಎಂಬ ನೀತಿ ಬೋಧೆ ಇದರಲ್ಲಿದೆ.  ಹಾಡಿನ interludeನಲ್ಲಿ ಶಂಕರ್ ಜೈಕಿಶನ್ ಸಂಗೀತದ ಛಾಯೆ ಗೋಚರಿಸುತ್ತದೆ.  ಮೂರು ಚರಣಗಳನ್ನು ಹೊಂದಿದ್ದು ಸುಮಾರು ನಾಲ್ಕು ನಿಮಿಷ ಅವಧಿಯ ಈ ಹಾಡು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದಿರಬಹುದು.



ನನ್ನ ಧಾಟಿಯ ನೀನರಿಯೆ
     ವಾಸ್ತವವಾಗಿ ಈ ಹಾಡು ಯಾವುದೇ ಹಾಡಿನ ಧಾಟಿಯ ಬಗ್ಗೆ ಅಲ್ಲ.  ನಾಯಕ ಬಾಳಿನಲ್ಲಿ ತಾನು ಅನುಸರಿಸುತ್ತಿರುವ ದಾರಿಯನ್ನು ಬೇರೆ ಧಾಟಿಯ ಹಾಡಿಗೆ ಹೋಲಿಸುತ್ತಾನೆ.  ನಾಯಕನ ತಪ್ಪಿನ ಬಗ್ಗೆ ಅರಿವಿರುವ ನಾಯಕಿ ಆತನದು ಶ್ರುತಿ ತೊರೆದ ಲಯವಿರದ ಹರಕು ಧಾಟಿಯ ಹಾಡು ಎಂದು ಆತನನ್ನು ಎಚ್ಚರಿಸಲು ಪ್ರಯತ್ನಿಸುತ್ತಾಳೆ. ಸಿತಾರ್, ಸಂತೂರ್, ಗ್ರೂಪ್ ವಯಲಿನ್ಸ್, ಗಿಟಾರ್, ತಬ್ಲಾಗಳನ್ನೊಳಗೊಂಡ ಆಕರ್ಷಕ ಆರ್ಕೆಸ್ಟ್ರೇಶನ್ ಈ ಹಾಡಿನಲ್ಲಿದೆ.



ಅಂಕದ ಪರದೆ ಜಾರಿದ ಮೇಲೆ
     ಇದು ಈ ಚಿತ್ರದ ಅತ್ಯಂತ ಜನಪ್ರಿಯ ಗೀತೆ. ಎರಡು ಗಂಧಾರ, ಎರಡು ಮಧ್ಯಮ, ಎರಡು ದೈವತಗಳನ್ನೊಳಗೊಂಡ ಕ್ಲಿಷ್ಟವಾದ  ಕ್ರೋಮ್ಯಾಟಿಕ್ ಸಂಯೋಜನೆ ಇದು.  ಕೇಳಲು ಬಲು ಇಂಪು. ಹಾಡಲು, ನುಡಿಸಲು ಬಲು ಕಠಿಣ.  ವಿಷಾದದ ಹಾಡುಗಳಿಗೆ ಹೇಳಿಸಿದ ಚೇಲೊ, ಮಂದ್ರ ಕೊಳಲು, ಕ್ಲಾರಿನೆಟ್, ಗ್ರೂಪ್ ವಯಲಿನ್ಸ್ ಇತ್ಯಾದಿಗಳ ಸುಂದರ ಸಮ್ಮಿಶ್ರಣ  ತುಂಬಾ ಪರಿಣಾಮಕಾರಿಯಾಗಿ ಬಳಸಲ್ಪಟ್ಟಿದೆ.   ಬೈಜು ಬಾವ್ರಾ ಚಿತ್ರದ ಮೊಹೆ ಭೂಲ್ ಗಯೆ ಸಾವರಿಯಾ ಹಾಡಿನ ಅಪರೋಕ್ಷ ಪ್ರಭಾವ ಇದರ ಮೇಲಿದೆಯೇನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ.



ಕಂಡಂಥ ಕನಸೆಲ್ಲ ನನಸಾಗಲಿ
     ಪಿ.ಬಿ.ಶ್ರೀನಿವಾಸ್ ಅವರ ಕಂಠದ ಮಂದ್ರ ಮಾಧುರ್ಯವನ್ನು ಪೂರ್ಣ ಬಳಸಿಕೊಂಡ ಬಲು ಸುಂದರ ಹಾಡಿದು. ಪಿ.ಬಿ.ಎಸ್ ಗಾಯನದ ಹೆಗ್ಗುರುತಾದ ವಿಶಿಷ್ಟ ಮುರ್ಕಿ ಅರ್ಥಾತ್ ಧ್ವನಿಯ ಬಳುಕುಗಳನ್ನೊಳಗೊಂಡ  ಈ ಹಾಡು ಕೇಳಲು ಸಿಗುವುದು ಬಲು ಕಮ್ಮಿ.  ಕೆಲ ವರ್ಷಗಳ ನಂತರ ಬಂದ ನಮ್ಮ ಮಕ್ಕಳು ಚಿತ್ರದ ನಿನ್ನೊಲುಮೆ ನಮಗಿರಲಿ ತಂದೆ ಹಾಡಿನಲ್ಲಿ ಇದರ ಛಾಯೆಯನ್ನು  ಗುರುತಿಸಬಹುದು.  ಕಿತ್ತೂರು ಚೆನ್ನಮ್ಮಅಹೋರಾತ್ರಿ ನಿಲದೋಡಿ ತಾ ಬಂದಿದೆ ಮತ್ತು ಈ ಹಾಡಿನ ಎತ್ತುಗಡೆಯಲ್ಲೂ ಸಾಮ್ಯವಿದೆ.



ಬೀಳಲು ಮಾಗಿದ ಹಣ್ಣಲ್ಲ
     ಇದು ಹಾಡಲ್ಲ.  ಬರೇ ನಾಲ್ಕು ಸಾಲಿನ ಚೌಪದಿ.  ಕಣ್ಣು ಮುಚ್ಚಿ ಆಲಿಸಿ ನೋಡಿ.  ಮೂರುವರೆ ನಿಮಿಷದ ಹಾಡೊಂದು ಉಂಟುಮಾಡಬಲ್ಲ  ಪರಿಣಾಮ ಈ  ಮೂವತ್ತು ಸೆಕೆಂಡುಗಳಲ್ಲಿ ಅಡಕವಾಗಿದೆ.



     ಆಗಿನ ಕಾಲದ ಬಹುತೇಕ ಚಿತ್ರಗಳ ಒಂದಾದರೂ ಹಾಡಿನಲ್ಲಿ ಆ ಚಿತ್ರದ ಹೆಸರು ಅಡಕವಾಗಿದ್ದು ಅದನ್ನು ಟೈಟಲ್ ಹಾಡು ಎಂದು ಕರೆಯಲಾಗುತ್ತಿತ್ತು.  ರಾಜ್ ಕಪೂರ್ ಅವರ ಸಂಗಂನಲ್ಲಂತೂ ಮೂರು ಹಾಡುಗಳಲ್ಲಿ ಚಿತ್ರದ ಹೆಸರಿನ  ಉಲ್ಲೇಖವಿತ್ತು.  ಈ ಚಿತ್ರದ ಎಷ್ಟು ಹಾಡುಗಳಲ್ಲಿ  ಬೆರೆತ ಜೀವದ ಉಲ್ಲೇಖವಿದೆ ಎಂದು ಅವುಗಳನ್ನು ಗಮನವಿಟ್ಟು ಪೂರ್ತಿ ಕೇಳಿದವರಿಗೆ ತಿಳಿಯುವುದರಿಂದ ನಾನು ಹೇಳುವುದಿಲ್ಲ. ಈ ಚಿತ್ರದ ಎರಡು ರೀಲುಗಳ negetiveಗಳೇ ಕಳೆದು ಹೋಗಿವೆಯಂತೆ!  ಉಳಿದ ಭಾಗ  youtubeನಲ್ಲಿ ಲಭ್ಯವಿದ್ದು  ಆಸಕ್ತರು ವೀಕ್ಷಿಸಬಹುದು.

     ಕೆಳಗಿನ Scrollable  ಪದ್ಯಾವಳಿಯಲ್ಲಿ ಎಲ್ಲ ಹಾಡುಗಳ ಸಾಹಿತ್ಯ ಇದೆ.  ಓದುತ್ತಾ ಹಾಡುಗಳನ್ನು ಆಲಿಸಿ, ಆನಂದ ದ್ವಿಗುಣಗೊಳಿಸಿ.



1 comment:

  1. ಹಾಲು ಜೇನು ಸವಿದ ಹಾಗಿದೆ.
    ಅದರಲ್ಲೂ ಕಂಡಂತ ಕನಸೆಲ್ಲಾ ನನಸಾಗಲಿ ಹಾಡನ್ನು ಚಿಕ್ಕ ಹುಡುಗನಿದ್ದಾಗ ಕೇಳಿದ ನೆನಪು ಚೆನ್ನಾಗಿದೆ. ಆ ಹಾಡನ್ನು ಕೇಳುತ್ತಾ ಹಳೆಯ ದಿನಗಳಿಗೆ ಜಾರಿದೆ.

    B.P. Jagannatha Bajje (FB)

    ReplyDelete

Your valuable comments/suggestions are welcome