Monday, 8 June 2026

ಮನದಲ್ಲಿ ಮನೆ ಮಾಡಿರುವ ಸುಮನ್ ಕಲ್ಯಾಣ್‌ಪುರ್


ಚಿತ್ರಸಂಗೀತದ ಸ್ವರ್ಣಯುಗವನ್ನು  ಶ್ರೀಮಂತಗೊಳಿಸಿದವರಲ್ಲಿ ಓರ್ವರಾದ ಗಾಯಕಿ ಸುಮನ್ ಕಲ್ಯಾಣ್‌ಪುರ್ ಮದುವೆಗೆ ಮುನ್ನ ಸುಮನ್ ಹೆಮ್ಮಾಡಿ ಆಗಿದ್ದವರು. ಬ್ಯಾಂಕ್ ನೌಕರಿ ನಿಮಿತ್ತ ಢಾಕಾದಲ್ಲಿ ನೆಲೆಸಿದ್ದ ಅವರ ತಂದೆ ಶಂಕರ ರಾವ್ ಮೂಲತಃ ಕುಂದಾಪುರ ಸಮೀಪದ ಹೆಮ್ಮಾಡಿಯವರು. 1937ರಲ್ಲಿ ಸುಮನ್ ಜನಿಸಿದ ಕೆಲವು ವರ್ಷಗಳ ನಂತರ ಅವರ ಕುಟುಂಬ ಮುಂಬಯಿಗೆ ಸ್ಥಳಾಂತರಗೊಂಡಿತು. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಸುಮನ್  ಹೈಸ್ಕೂಲ್ ಶಿಕ್ಷಣದ ನಂತರ  ಪ್ರಸಿದ್ಧ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್  ಸೇರಿದರು. ಗಾಯನದಲ್ಲೂ ಆಸಕ್ತಿ ಹೊಂದಿದ್ದ ಅವರು ಶಾಸ್ತ್ರೀಯ ಸಂಗೀತ ತರಬೇತಿಯನ್ನೂ ಪಡೆದರು. ಜೆ.ಜೆ. ಸ್ಕೂಲಿನ ಸಮಾರಂಭವೊಂದರಲ್ಲಿ ಹಾಡುತ್ತಿದ್ದಾಗ ಮುಖ್ಯ ಅತಿಥಿಯಾಗಿದ್ದ ತಲತ್ ಮಹಮೂದ್ ಇವರ ಗಾಯನವನ್ನು ಮೆಚ್ಚಿ HMVಗೆ ಪರಿಚಯಿಸಿದರು. ಆ ಮೇಲೆ ಆಕಾಶವಾಣಿಯಲ್ಲೂ ಹಾಡತೊಡಗಿದ ಅವರಿಗೆ ಮರಾಠಿ ಚಿತ್ರ ಶುಕ್ರಾಚಿ ಚಾಂದಣಿಯಲ್ಲಿ ಹಾಡುವ ಅವಕಾಶ ದೊರೆಯಿತು. ಆ ಚಿತ್ರ ಬಿಡುಗಡೆಯಾಗದಿದ್ದರೂ ಅದರ ಹಾಡುಗಳಿಂದ  ಆಕರ್ಷಿತರಾದ ಶೇಖ್ ಮುಖ್ತಾರ್, ಮಂಗೂ ಎಂಬ ಹೆಸರಿನ  ತಮ್ಮ ಚಿತ್ರಕ್ಕಾಗಿ ಮಹಮ್ಮದ್ ಶಫಿ ಅವರ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳನ್ನು ಹಾಡಿಸಿದರು. ಆದರೆ ಕಾರಣಾಂತರದಿಂದ ಮಹಮ್ಮದ್ ಶಫಿ ಆ ಚಿತ್ರವನ್ನು ಬಿಡಬೇಕಾಗಿ ಬಂತು. ಅವರ ಜಾಗಕ್ಕೆ ಬಂದ ಓ.ಪಿ. ನಯ್ಯರ್ ಸುಮನ್ ಅವರ   ಒಂದು ಹಾಡು ಮಾತ್ರ ಉಳಿಸಿಕೊಂಡು ಬೇರೆ ಹಾಡುಗಳನ್ನು ತಮ್ಮಿಷ್ಟದ ಇತರ ಗಾಯಕರಿಂದ ಹಾಡಿಸಿದರು. ನಂತರ ಸುಮನ್ ನೌಷಾದ್ ಸಂಗೀತ ನಿರ್ದೇಶನವಿದ್ದ ದರ್ವಾಜಾ ಚಿತ್ರಕ್ಕೆ ಹಾಡಿದರು. ಕ್ರಮೇಣ  ಅವರಿಗೆ ಒಂದರ ಹಿಂದೆ ಒಂದು ಅವಕಾಶಗಳು ಬರತೊಡಗಿದವು.

ಪತಿ ರಮಾನಂದ ಕಲ್ಯಾಣ್‌ಪುರ್ ಅವರೊಂದಿಗೆ ಸುಮನ್.


ಸುಮನ್ ಹೆಮ್ಮಾಡಿ  1958ರಲ್ಲಿ ಮುಂಬಯಿಯ ಉದ್ಯಮಿ ರಮಾನಂದ ಕಲ್ಯಾಣ್‌ಪುರ್ ಅವರನ್ನು ವಿವಾಹವಾದ ಮೇಲೆ  ಸುಮನ್ ಕಲ್ಯಾಣ್‌ಪುರ್ ಆದರು. ಅದು ವರೆಗೆ ಸುಮನ್ ಅವರ ತಂದೆ ನಿರ್ವಹಿಸುತ್ತಿದ್ದ  ರೆಕಾರ್ಡಿಂಗಿಗೆ ಕರೆದೊಯ್ಯುವ ಕೆಲಸವನ್ನು ಮದುವೆಯ ನಂತರ ಪತಿ ಮುಂದುವರಿಸಿದರು. ಅವರು ಸುಮನ್ ಗಾಯನದ ಪ್ರಶಂಸಕರೂ ಆಗಿದ್ದರು. ಅವರ ಹೆಸರಿನಲ್ಲಿರುವ ಕಲ್ಯಾಣಪುರಕ್ಕೂ ಉಡುಪಿ ಸಮೀಪದ ಕಲ್ಯಾಣಪುರಕ್ಕೂ ಸಂಬಂಧವಿದೆಯೇ ಎಂಬ ಮಾಹಿತಿ ಲಭ್ಯವಿಲ್ಲ. ಇವರ ಪುತ್ರಿ ಚಾರುಲ್ ವಿವಾಹವಾಗಿ ಅಮೇರಿಕದಲ್ಲಿ ನೆಲೆಸಿದ್ದಾರೆ. ರಮಾನಂದ ಕಲ್ಯಾಣ್‌ಪುರ್ 2008ರಲ್ಲಿ ನಿಧನರಾದರು. ಪುತ್ರಿ ಚಾರುಲ್ ಅವರೊಂದಿಗೆ.


50-60ರ ದಶಕಗಳಲ್ಲಿ ಸುಮನ್ ಕಲ್ಯಾಣಪುರ್ ಮತ್ತು ಲತಾ ಮಂಗೇಷ್ಕರ್ ಅವರ ಧ್ವನಿ  ಮತ್ತು ಹಾಡುವ ಶೈಲಿಗಳು   ಬಹುವಾಗಿ ಹೋಲುತ್ತಿದ್ದವು. ಅವರಿಬ್ಬರು ಜೊತೆಯಲ್ಲಿ ಹಾಡಿದ ಕಭಿ ಆಜ್ ಕಭಿ ಕಲ್ ಕಭಿ ಪರ್‌ಸೋಂ ಎಂಬ ಏಕೈಕ ಹಾಡು 1959ರಲ್ಲಿ ತಯಾರಾದ ಚಂದಾ ಎಂಬ ಚಿತ್ರದಲ್ಲಿ ಇದೆ. ಅದರಲ್ಲಿ ಯಾವ ಸಾಲಿನಲ್ಲಿ ಯಾರ ಧ್ವನಿ ಇರುವುದೆಂದು ಕಂಡು ಹಿಡಿಯಲು ಪರಿಣತ ಕಾನ್‌ಸೇನರಿಂದ ಮಾತ್ರ ಸಾಧ್ಯವಾಗಬಹುದು.  ಇಬ್ಬರೂ ಏಕ ಕಾಲದಲ್ಲಿ ಹಾಡಿದ ಕೆಲವು ಸಾಲುಗಳು ಇರದಿರುತ್ತಿದ್ದರೆ ಇದೊಂದು ಯುಗಳ ಗೀತೆ ಎಂದು ಗುರುತಿಸಲೂ ಕಷ್ಟವಾಗುತ್ತಿತ್ತೋ ಏನೋ! ಆದರೆ ಲತಾ ಧ್ವನಿ ವರ್ಷಗಳು ಕಳೆದಂತೆ ಬದಲಾಗುತ್ತಾ ಹೋಯಿತು. ಸುಮನ್ ಧ್ವನಿ ಕೊನೆವರೆಗೂ ಬಹುತೇಕ ಮೊದಲಿನಂತೆಯೇ ಇತ್ತು.


ಕಭಿ ಆಜ್ ಕಭಿ ಕಲ್ ಕಭಿ ಪರ್‌ಸೋಂ.

ಲತಾ ಮಂಗೇಶ್ಕರ್ ಗಾಯನವೆಂದರೆ ಅದು ಪೈಲಟ್ ಪೆನ್ನಿನ ಬರವಣಿಗೆಯಂತೆ  ಸರಾಗ ಸುಂದರ ಎಂದಾದರೆ ಸುಮನ್ ಕಲ್ಯಾಣಪುರ್ ಅವರ ಗಾಯನವನ್ನು ಸ್ವಾನ್ ಪೆನ್ನಿನ ಬರವಣಿಗೆಗೆ ಹೋಲಿಸಬಹುದು.  ಶಂಕರ್ ಜೈಕಿಶನ್ ಅವರಿಂದ ಲಕ್ಷ್ಮಿಪ್ಯಾರೆ ವರೆಗೆ, ಸಲಿಲ್ ಚೌಧರಿಯಿಂದ ನೌಷಾದ್ ವರೆಗೆ ಎಲ್ಲರ ಅಚ್ಚು ಮೆಚ್ಚಿನವರಾಗಿದ್ದ  ಇವರು ಹೆಚ್ಚಿನ ರಿಹರ್ಸಲ್ ಇಲ್ಲದೆ  ಸ್ಟುಡಿಯೊದಲ್ಲೇ ಹಾಡನ್ನು ಒಂದೆರಡು ಸಲ ಕೇಳಿ ರೆಕಾರ್ಡಿಂಗಿಗೆ ತಯಾರಾಗುತ್ತಿದ್ದರಂತೆ. ಲತಾ ಮಂಗೇಷ್ಕರ್ ಮುಂಚೂಣಿಯಲ್ಲಿರುವಾಗಲೇ ಇಷ್ಟೊಂದು ಹಾಡುಗಳು ಇವರ ಕಂಠದಿಂದ ಹೊರಹೊಮ್ಮಲು ಇದೂ ಒಂದು ಕಾರಣವಿರಬಹುದು. 


ರಫಿ - ಸುಮನ್. ಸುಮನ್ ಕಲ್ಯಾಣಪುರ್ ಡ್ಯುಯೆಟ್ ಸ್ಪೆಷಲಿಸ್ಟ್ ಎಂದರೆ ತಪ್ಪಾಗಲಾರದು. ಇವರು ರಫಿ  ಜತೆಗೂಡಿ ಹಾಡಿದರೆಂದರೆ ಆ ಹಾಡು ಸುಪರ್ ಹಿಟ್ ಎಂದೇ ಅರ್ಥ.   ತುಝೆ ಪ್ಯಾರ್ ಕರತೆ ಹೈಂ ಕರತೆ ರಹೇಂಗೆ ಮತ್ತು ಕಹದೊ ಕಹದೊ ಜಹಾಂ ಸೆ ಕಹದೊ - ಎಪ್ರಿಲ್ ಫೂಲ್, ಅಗರ್ ತೇರಿ ಜಲ್ವಾನುಮಾಯಿ ನ ಹೋತಿ - ಬೇಟಿ ಬೇಟೆ, ಆಜ್ ಹುನ ಆಯೆ ಬಾಲಮಾ - ಸಾಂಝ್ ಔರ್  ಸವೇರಾ,  ತುಮನೆ ಪುಕಾರಾ ಔರ್ ಹಮ್ ಚಲೆ ಆಯೆ - ರಾಜ್ ಕುಮಾರ್, ಜಬ್ ಸೆ ಹಮ್ ತುಮ್ ಬಹಾರೊಂ ಮೆಂ - ಮೈಂ ಶಾದಿ ಕರನೆ ಚಲಾ, ಠಹರಿಯೆ ಹೋಶ್ ಮೆಂ ಆ ಲೂಂ -  ಮೊಹಬ್ಬತ್ ಇಸಕೊ ಕಹತೆ  ಹೈಂ, ರಾತ್ ಸುಹಾನೀ ಜಾಗ್ ರಹೀ ಹೈ - ಜಿಗ್ರೀ ದೋಸ್ತ್,   ಕ್ಯಾ ಕಹನೆ ಮಾಶ ಅಲ್ಲಾ -  ಜೀ ಚಾಹತಾ ಹೈ, ಆಜ್ ಕಲ್ ತೆರೆ ಮೇರೆ ಪ್ಯಾರ್ ಕೆ - ಬ್ರಹ್ಮಚಾರಿ,  ನಾ ನಾ ಕರತೆ ಪ್ಯಾರ್ ತುಮ್ಹೀ ಸೆ - ಜಬ್ ಜಬ್ ಫೂಲ್ ಖಿಲೆ, ದಿಲ್ ಏಕ್ ಮಂದಿರ್ ಹೈ - ಟೈಟಲ್ ಹಾಡು, ಪರ್‌ಬತೊಂ ಕೆ ಪೇಡೊಂ ಪರ್ - ಶಗೂನ್, ತುಮ್ ಸೆ ಓ ಹಸೀನಾ ಮೊಹಬ್ಬತ್ ನ ಮೈನೆ - ಫರ್ಜ್, ದಿಲ್ ಎ ಬೇತಾಬ್ ಕೊ ಸೀನೇ ಸೆ - ಪಾಲಕಿ, ಇತನಾ ಹೈ ತುಮ್ ಸೆ ಪ್ಯಾರ್ ಮುಝೆ - ಸೂರಜ್, ತುಝೆ ದೇಖಾ, ತುಝೇ ಚಾಹಾ - ಛೋಟೀಸೀ ಮುಲಾಕಾತ್ ಇವು ಕೆಲವು ಉದಾಹರಣೆಗಳು. ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ಇವರಿಬ್ಬರ ಒಂದೇ ಡ್ಯುಯೆಟ್ ಇರುತ್ತಿದ್ದುದಾದರೂ ಎಪ್ರಿಲ್ ಫೂಲ್ ಚಿತ್ರದಲ್ಲಿ ಎರಡು ಡ್ಯುಯೆಟ್ ಇದ್ದದ್ದು ವಿಶೇಷ. ಅವರಿಬ್ಬರ ಡ್ಯೂಯೆಟ್ ಇರುವ ಹೆಚ್ಚಿನ ಚಿತ್ರಗಳು ಜ್ಯುಬಿಲಿ ಆಚರಿಸುತ್ತಿದ್ದವು.

ಶಗೂನ್ ಚಿತ್ರದ ಪರ್‌ಬತೊಂ ಕೆ ಪೇಡೊಂ ಪರ್ ಹಾಡಿನ ಧ್ವನಿಮುದ್ರಣದ ವೇಳೆ ಮಹಮ್ಮದ್ ರಫಿಯೊಂದಿಗೆ.

ಮುಕೇಶ್ - ಸುಮನ್.
ಮುಕೇಶ್ ಜೊತೆಗಿನ ಅವರ ಹಿಟ್ ಹಾಡುಗಳು ಮೇರಾ ಪ್ಯಾರ್ ಭೀ ತೂ ಹೈ - ಸಾಥಿ, ಚುರಾ ಲೇನ ತುಮ್ ಕೋ ಯೇ - ದಿಲ್ ಹೀ ತೊ ಹೈ, ಯೇ ಕಿಸ್ ನೆ ಗೀತ್ ಛೇಡಾ - ಮೇರೀ ಸೂರತ್ ತೆರೀ ಆಂಖೆಂ, ಆಯಾ ನ ಹಮ್ ಕೋ ಪ್ಯಾರ್ ಜತಾನಾ - ಪಹಚಾನ್, ಹಾಂ ಮೈ ನೆ ಭೀ ಪ್ಯಾರ್ ಕಿಯಾ - ಬೂಂದ್ ಜೋ ಬನ್ ಗಯೇ ಮೋತಿ , ಶಮಾ ಸೆ ಕೋಯಿ ಕಹ ದೋ - ಜೈ ಭವಾನಿ, ಯೇ ಮೌಸಮ್ ರಂಗೀನ್ ಸಮಾ - ಮಾಡರ್ನ್ ಗರ್ಲ್ ಇತ್ಯಾದಿ. ಪಹಚಾನ್ ಚಿತ್ರಕ್ಕಾಗಿ ಮುಕೇಶ್ ಮತ್ತು ಶಾರದಾ ಜೊತೆ ಅವರು ಹಾಡಿದ ವೋ ಪರಿ ಕಹಾಂ ಸೆ ಲಾವೂಂ ಚಾರ್ಟ್ ಬಸ್ಟರ್ ಆಗಿತ್ತು. ರಫಿ ಬಿಟ್ಟರೆ ಅವರು ಹೆಚ್ಚು ಹಾಡಿದ್ದು ಮುಕೇಶ್ ಜೊತೆಯೇ.

ಪಹಚಾನ್ ಚಿತ್ರದ ಆಯಾ ನ ಹಮ್ ಕೋ ಪ್ಯಾರ್ ಜತಾನಾ ಹಾಡಿನ ಧ್ವನಿಮುದ್ರಣದ ವೇಳೆ ಮುಕೇಶ್ ಅವರೊಂದಿಗೆ. ಹಾರ್ಮೋನಿಯಮ್ ನುಡಿಸುತ್ತಿರುವವರು ಸಂಗೀತ ನಿರ್ದೇಶಕ ಶಂಕರ್.


ಇತರರೊಂದಿಗೆ.

ಅವರು ರಫಿ ಮತ್ತು ಮುಕೇಶ್ ಇಬ್ಬರ ಜತೆ ಹಾಡಿದ ದಿಲ್ ನೆ ಫಿರ್ ಯಾದ್ ಕಿಯಾ ಚಿತ್ರದ ಟೈಟಲ್ ಹಾಡು, ಹೇಮಂತ್ ಕುಮಾರ್ ಜೊತೆ ಹಾಡಿದ ಬಾತ್ ಏಕ್ ರಾತ್ ಕೀ ಚಿತ್ರದ ನ ತುಮ್ ಹಮೆಂ ಜಾನೋ, ಮನ್ನಾಡೆ ಜೊತೆ ಹಾಡಿದ ಜಿಂದಗೀ ಔರ್ ಖ್ವಾಬ್ ಚಿತ್ರದ ನ ಜಾನೆ ಕಹಾಂ ತುಮ್ ಥೆ ಮತ್ತು ಜಬ್ ಸೆ ತುಮ್ಹೆ ದೇಖಾ ಹೈ ಚಿತ್ರದ ಯೇ ದಿನ್ ದಿನ್ ಹೈಂ ಖುಶೀ ಕೆ, ಮನ್‌ಹರ್ ಉಧಾಸ್ ಜೊತೆ ಹಾಡಿದ ವಿಶ್ವಾಸ್ ಚಿತ್ರದ ಆಪ್ ಕೊ ಹಮ್ ಸೆ ಬಿಛ್‌ಡೆ ಹುವೆ, ಕಿಶೋರ್ ಕುಮಾರ್ ಜೊತೆ ಹಾಡಿದ ಸಾಸ್ ಭೀ ಕಭೀ ಬಹು ಥೀ ಚಿತ್ರದ ಸುನೋ ಜೀ ತುಮ್ ತುಮ್ ಬಡೆ ವೊ ಹೋ    ಕೂಡ ಹಿಟ್ ಹಾಡುಗಳೇ.  ನಸೀಬ್ ಚಿತ್ರದಲ್ಲಿ  ರಫಿ ಧ್ವನಿಗೆ ಸಮೀಪದ ಅನ್ವರ್ ಮತ್ತು ಮುಕೇಶ್ ಧ್ವನಿಯನ್ನು ಅನುಕರಿಸುವ ಕಮಲೇಶ್ ಅವಸ್ಥಿ ಜೊತೆ ಅವರು ಹಾಡಿದ ಜಿಂದಗೀ ಇಂತಿಹಾನ್ ಲೇತೀ ಹೈ ಹಾಡು ಅನೇಕರಿಗೆ ನೆನಪಿರಬಹುದು.


ಸೋಲೋ ಹಾಡುಗಳು.

ಅವರ ಸೋಲೋ ಹಾಡುಗಳಲ್ಲಿ ದಿಲ್ ಏಕ್ ಮಂದಿರ್ ಚಿತ್ರದ ಜೂಹಿ ಕೀ ಕಲಿ ಮೇರಿ ಲಾಡಲಿ, ಕಣ್ ಕಣ್ ಮೆಂ ಭಗವಾನ್ ಚಿತ್ರದ ಅಪನೆ ಪಿಯಾ ಕೀ ಮೈ ತೋ ಬನಿರೆ  ಜೋಗನಿಯಾ, ನೂರ್ ಮಹಲ್ ಚಿತ್ರದ ಮೇರೆ ಮೆಹಬೂಬ್ ನ ಜಾ, ಬಾಲಕ್ ಚಿತ್ರದ ಸುನ್ ಲೇ ಬಾಪೂ ಯೆ ಪೈಗಾಮ್, ರೇಶಮ್ ಕೀ ಡೋರಿಯ ಬಹನಾ ನೆ ಭಾಯಿ ಕೀ ಕಲಾಯಿ ಸೇ, ಗೀತ್ ಚಿತ್ರದ ಕಭೀ ಹೋಟೊಂ ಪೆ ಮುಝೆ ಭೀ ಲಗಾ ಲೆ, ರಫಿ ಮತ್ತು ಅವರು ಬೇರೆ ಬೇರೆಯಾಗಿ ಹಾಡಿದ ಜಹಾಂ ಪ್ಯಾರ್ ಮಿಲೆ ಚಿತ್ರದ  ಚಲೇ ಜಾ ಚಲೇಜಾ ಹಾಡುಗಳು ನೆನಪಿನಲ್ಲುಳಿಯುವಂಥವು. ತೀಸ್ರೀ ಕಸಮ್ ಚಿತ್ರದ ದುನಿಯಾ ಬನಾನೆವಾಲೆ ಮುಕೇಶ್ ಧ್ವನಿಯಲ್ಲೇ ಪ್ರಚಲಿತವಾಗಿರುವುದಾದರೂ ಅದರ ಸುಮನ್ ಕಲ್ಯಾಣಪುರ್ version ಕೂಡ ಇರುವುದು ಕೆಲವರಿಗಷ್ಟೇ ಗೊತ್ತಿರಬಹುದು. ಸಬಕ್ ಚಿತ್ರದ ಬರ್ಖಾ ರಾನಿ ಹಾಡನ್ನೂ ಮುಕೇಶ್ ಮತ್ತು ಸುಮನ್ ಬೇರೆ ಬೇರೆಯಾಗಿ ಹಾಡಿದ್ದಾರೆ. Come September ಚಿತ್ರದ ಥೀಮ್ ಮ್ಯೂಸಿಕ್ ಆಧರಿಸಿ ಶಂಕರ್ ಜೈಕಿಶನ್ ನೇತೃತ್ವದಲ್ಲಿ ರಿಮ್ ಝಿಮ್ ರಿಮ್ ಝಿಮ್ ನ ಬರ್‌ಸೆ ಮೋತಿ ಕೆ ದಾನೆ ಎಂಬ non filmy  ಹಾಡನ್ನು ಸುಮನ್ ಕಲ್ಯಾಣಪುರ್ ಹಾಡಿದ್ದು ಅದು ರೇಡಿಯೋ ಸಿಲೋನಿನಲ್ಲಿ ಮಾತ್ರ ಕೇಳಲು ಸಿಗುತ್ತಿತ್ತು. ಕವಿ ಶೈಲೇಂದ್ರ ಅವರ ಸಾಹಿತ್ಯವಿರುವ ಆ ಹಾಡು ನಿಮಗಾಗಿ ಇಲ್ಲಿದೆ.

ಕಲಾವತಿ ಚಿತ್ರದ ಒಡನಾಡಿ ಬೇಕೆಂದು , ಕಲ್ಪವೃಕ್ಷದ ಹನಿ ಹನಿ ಹೀರಿ ತನಿ ಹರೆಯ ಮತ್ತು ತಲ್ಲಣ ನೂರು ಬಗೆ ಅವರು ಹಾಡಿದ  ಕನ್ನಡ  ಹಾಡುಗಳು. ಅವರ ಮಧುರ ಮರಾಠಿ ಹಾಡುಗಳಲ್ಲಿ ಥಟ್ಟನೆ ನೆನಪಿಗೆ ಬರುವುದು ಬೆಳಗ್ಗೆ ರೇಡಿಯೋ ಮೂಲಕ ಕಿವಿಗೆ ಬೀಳುತ್ತಿದ್ದ ಕೇಶವಾ ಮಾಧವಾ ತುಝ ನಾಮಾಚ ವೇ ಗೋಡವಾ. ರಾಷ್ಟ್ರಪತಿಗಳು ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು.


2023ರಲ್ಲಿ ಪದ್ಮಭೂಷಣ ನೀಡಿ ಅವರನ್ನು ಗೌರವಿಸಲಾಗಿತ್ತು. ಸಂಗೀತ ತನ್ನ ಪ್ರವೃತ್ತಿಯೇ ಹೊರತು ವೃತ್ತಿ ಅಲ್ಲ ಎಂದು ಅವರೊಮ್ಮೆ ವಿವಿಧಭಾರತಿಯ ಜಯಮಾಲಾ ಕಾರ್ಯಕ್ರಮದಲ್ಲಿ ಹೇಳಿದ್ದುಂಟು. ಅವರು ಸೀಮಿತ ಸಂಖ್ಯೆಯ ಹಾಡುಗಳನ್ನು ಹಾಡಿರಬಹುದು. ಆದರೆ ಅವುಗಳಲ್ಲಿ ಶೇಕಡಾ ತೊಭತ್ತಕ್ಕಿಂತಲೂ ಹೆಚ್ಚಿನವು ಸಾರ್ವಕಾಲಿಕ ಹಿಟ್ ಹಾಡುಗಳು. ಡ್ಯುಯೆಟ್‌ಗಳಂತೂ ನೂರಕ್ಕೆ ನೂರು ಸೂಪರ್ ಹಿಟ್. ಯಾವುದೇ ವಿವಾದಗಳಿಗೆ ಸಿಲುಕದೆ ತಾನಾಯಿತು, ತನ್ನ ಹಾಡುಗಾರಿಕೆಯಾಯಿತು ಎಂದು ಕೂಡು ಕುಟುಂಬದೊಂದಿಗೆ ಸಂತೃಪ್ತ ಜೀವನ ನಡೆಸಿ 31-05-2026ರಂದು ನಮ್ಮನ್ನಗಲಿದ ಸುಮನ್ ಕಲ್ಯಾಣಪುರ್ ತಮ್ಮ ಹಾಡುಗಳ ರೂಪದಲ್ಲಿ  ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ.

No comments: