Friday, 27 February 2026

27 ಎಂಬ ಧಾವಂತವಿಲ್ಲದ ಸಮಾಧಾನಿ ಬಸ್

ಎಲೆಕ್ಟ್ರಿಕ್ ಸ್ಕೂಟರ್, ಅಟೋರಿಕ್ಷಾಗಳು ಈಗ ಅಪರೂಪವೇನೂ ಅಲ್ಲ. ಎಲೆಕ್ಟ್ರಿಕ್ ಬಸ್ಸುಗಳೂ ಅಪರೂಪ ಅಲ್ಲ. ಆದರೆ  ರೂಟ್ ನಂಬರ್ 27ರ ಸಿಟಿ ಬಸ್ ಆಗಿ ಓಡಲು ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ಸೊಂದು ಮಂಗಳೂರಿಗೆ ಬಂದಿರುವುದು ನಮ್ಮ ಮಟ್ಟಿಗೆ ವಿಶೇಷವೇ ಸರಿ.  ಈ ಬಸ್ಸನ್ನು ಪೂನಾದಿಂದ ತರಿಸಿದ ಗಣೇಶ್ ಪ್ರಸಾದ್ ಟ್ರಾವೆಲ್ಸ್ ಸಂಸ್ಥೆಯು ಈಗಾಗಲೇ 5  ಬಸ್ಸುಗಳನ್ನು  ಈ ರೂಟಿನಲ್ಲಿ ನಿರ್ವಹಿಸುತ್ತಿದೆ.  ಎಲೆಕ್ಟ್ರಿಕ್ ಬಸ್ ಬಂದ ಸುದ್ದಿಯು  'ಬೇಗ ಬೇಗ', 'ದುಂಬು ಪೋಲೆ, ಪಿರ ಪೋಲೆ' ಎಂಬಿತ್ಯಾದಿ ಅರಚಾಟಗಳಿಲ್ಲದ ಧಾವಂತರಹಿತ ಸಮಾಧಾನಿ 27 ನಂಬರ್ ಬಸ್ಸಿನ ಹಳೆಯ ನೆನಪುಗಳು ಮುನ್ನೆಲೆಗೆ ಬರುವಂತೆ ಮಾಡಿತು.

ಮೊದಲು ಈ ರೂಟಿನಲ್ಲಿ ಪಾಪ್ಯುಲರ್ ಹೆಸರಿನ ಒಂದೇ ಬಸ್ಸು ಇತ್ತು. Fargo ಎಂಜಿನ್ ಹೊಂದಿದ್ದ ಆ ಬಸ್ಸನ್ನು ಕರ್ಕಡ ಮತ್ತು ಬಾಬಣ್ಣ ಎಂಬ ಇಬ್ಬರು ಚಾಲಕರು ದಿನ ಬಿಟ್ಟು ದಿನ ಚಲಾಯಿಸುತ್ತಿದ್ದುದು. ಅದರ ಮಾಲಕರಾಗಿದ್ದ ನಾಗೇಶ್ ಕಂಡಕ್ಟರ್ ಕೆಲಸವನ್ನೂ ಮಾಡುತ್ತಿದ್ದರು. ಹಂಪನಕಟ್ಟೆಯಲ್ಲಿದ್ದ P.V. Motorನವರ ಗ್ಯಾರೇಜನ್ನೆ ಇದು ಬಳಸುತ್ತಿತ್ತು. 1978ರಲ್ಲಿ ನಾನು ದೂರವಾಣಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆದ ಮೇಲೆ ಈ ಬಸ್ಸಿನ ಕಾಯಂ ಪ್ರಯಾಣಿಕನಾದೆ. 6-45ಕ್ಕೆ ಬಾಬುಗುಡ್ಡೆಗೆ ಬರುತ್ತಿದ್ದ ಅದು ಮಾರ್ನಿಂಗ್ ಡ್ಯೂಟಿ ಇದ್ದ ದಿನ 7 ಗಂಟೆಯೊಳಗೆ ನನ್ನನ್ನು ಟೆಲಿಫೋನ್ ಎಕ್ಸ್‌ಚೇಂಜ್‌ಗೆ ತಲುಪಿಸುತ್ತಿತ್ತು. ಆಗ ವಾರದ ಯಾವುದಾದರೊಂದು ದಿನ weekly off ಇರುತ್ತಿದ್ದ ನನಗೆ ಶನಿವಾರ ಮತ್ತು ಭಾನುವಾರ ಒಟ್ಟಿಗೆ ರಜೆ ಸಿಕ್ಕಿದರೆ ಶುಕ್ರವಾರ ಸಂಜೆ ತಾಜ್ ಮಹಲಿನಲ್ಲಿ ತುಪ್ಪದೋಸೆ ತಿಂದು ಈ ಬಸ್ಸಿನಲ್ಲಿ ಕಿಟಿಕಿ ಬದಿಯಲ್ಲಿ ಕುಳಿತು ಪ್ರಯಾಣಿಸುವುದು ಆಹ್ಲಾದಕರ ಅನುಭವ ನೀಡುತ್ತಿತ್ತು. 1980ರ ದಶಕದಲ್ಲಿ ಫಾರ್ಗೊ ಎಂಜಿನಿನ ಹಳೆ ಬಸ್ಸಿಗೆ ಬದಲಾಗಿ ಕೆಂಪು ಬಣ್ಣದ ಹೊಸ ಟಾಟಾ ಬಸ್ಸು ಬಂತು. ಈ ಬಸ್ಸಿಗೆ ಹಣೆಯ ಭಾಗದಲ್ಲಿರುವ name board ಅಲ್ಲದೆ ಎಡಗಡೆಯ windshieldನ ಕೆಳಭಾಗದಲ್ಲಿ ಬಲ್ಬ್ ಇರುವ ಇನ್ನೊಂದು name board ಇತ್ತು. ಇಂತಹ board ಆಗ ಇದೊಂದೇ ಬಸ್ಸಿಗೆ ಇದ್ದದ್ದು. ಹೀಗಾಗಿ ಮಧ್ಯಾಹ್ನದ ಡ್ಯೂಟಿ ರಾತ್ರೆ 8 ಗಂಟೆಗೆ ಮುಗಿದ ನಂತರ ಈ ಬಸ್ಸು ದೂರದಿಂದ ಬರುತ್ತಿರುವಾಗಲೇ ಗೊತ್ತಾಗುತ್ತಿತ್ತು. ಕೆಲವು ಸಲ ಬೇರೆ ಯಾವುದೋ ಬಸ್ಸು ಬರುತ್ತಿರುವಾಗ ಬಲ್ಬಿನ ಬೋರ್ಡ್ ಕಾಣಿಸಿದಂತೆ ಭ್ರಮೆ ಉಂಟಾಗುವುದೂ ಇತ್ತು! 

ಒಂದೇ ಬಸ್ಸು ಇದ್ದ ಆ ಕಾಲದಲ್ಲಿ ಹಂಪನಕಟ್ಟೆಯಿಂದ ಅತ್ತಾವರ, ಮಂಗಳಾದೇವಿ ಕಡೆಗೆ ಹೋಗುವವರು ಬಸ್ ಸ್ಟೇಟ್ ಬ್ಯಾಂಕ್ ಕಡೆ ಹೋಗುವಾಗಲೇ ತಾಜಮಹಲ್ ಬಳಿ  ಹತ್ತಿ ಬಿಡುತ್ತಿದ್ದರು.

ಕೆಲ ಕಾಲದ ನಂತರ ಸ್ವಾಮಿ ತಿಲಕ್ ಎಂಬ ಎರಡನೆಯ ಬಸ್ಸು ಈ ರೂಟಲ್ಲಿ ಓಡಾಡ ತೊಡಗಿ ಪಾಪ್ಯುಲರ್ ಬಸ್ಸಿಗೆ ಸ್ಪರ್ಧೆ ಒಡ್ಡಿತು. ಅದು ನಿಗದಿತ ಸಮಯಪಾಲನೆ ಮಾಡದೆ ಓಡಾಡಿದರೆ ಕಲಾವಿದರೂ ಆಗಿದ್ದ ಪಾಪ್ಯುಲರ್ ಬಸ್ಸಿನ ನಾಗೇಶ್ ಅವರು 'ಚಟ್ಣಿಯ ಕಾಸು ಹೋಗಲಿ, ನಮಗೆ ಗಂಜಿಯ ಕಾಸೂ ಆಗುತ್ತಿಲ್ಲಣ್ಣ' ಎಂದು ಆ ಬಸ್ಸಿನವರಿಗೆ ಕಾವ್ಯಮಯವಾಗಿ ಹೇಳುತ್ತಿದ್ದರು! ಆ ಮೇಲೆ ಸ್ವಾಮಿ ತಿಲಕ್ ಬದಲಿಗೆ ನಿತ್ಯಾದರ್ ಹೆಸರಿನ ಬಸ್ ಬಹಳ ಸಮಯ ಪಾಪ್ಯುಲರ್‌ನ ಪ್ರತಿಸ್ಪರ್ಧಿಯಾಗಿ ಓಡಾಡುತ್ತಿತ್ತು. ನಿತ್ಯಾದರ್ ಬ್ಯಾಟರಿ ವ್ಯವಹಾರದ ಸಂಸ್ಥೆಯಾಗಿದ್ದುದರಿಂದ ಆ ಬಸ್ಸನ್ನು 'ಬ್ಯಾಟರಿ ಬಸ್ಸು' ಎಂದೂ ಹೇಳುತ್ತಿದ್ದರು! ಈಗ ನಿಜವಾಗಿಯೂ ಬ್ಯಾಟರಿ ಬಸ್ಸೊಂದು ಈ ರೂಟಿಗೆ ಸೇರ್ಪಡೆಯಾಗುತ್ತಿರುವುದು ಕಾಕತಾಳೀಯವೇ ಆಗಿರಬಹುದು!

ಪಾಪ್ಯುಲರ್ ಬಸ್ಸು ರೂಟ್ 27ನ್ನು ಗಣೇಶ್ ಪ್ರಸಾದ್ ಸಂಸ್ಥೆಗೆ ಯಾವಾಗ ಬಿಟ್ಟುಕೊಟ್ಟಿತೆಂದು ನೆನಪಿಲ್ಲ. ಅನೇಕ ವರ್ಷಗಳಿಂದ ಆ ಸಂಸ್ಥೆ ಪ್ರಯಾಣಿಕರಿಗೆ ಧಾವಂತ ರಹಿತವಾದ ಉತ್ತಮ ಸೇವೆ ಒದಗಿಸುತ್ತಿದೆ.  ತನ್ನ ಬಸ್ಸುಗಳಿಗೆ ಸಾಧ್ಯವಾದಷ್ಟು 27ರಲ್ಲಿ ಕೊನೆಗೊಳ್ಳುವ ರಿಜಿಸ್ಟೇಶನ್ ನಂಬರ್ ಹೊಂದಿಸಿಕೊಳ್ಳುವುದು ಆ ಸಂಸ್ಥೆಯ ಹವ್ಯಾಸ.

No comments: