Tuesday, 25 October 2022

ಭೂಮಿ, ಸೂರ್ಯ, ಚಂದ್ರರ ನೆರಳು ಬೆಳಕಿನಾಟ



ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಆತನ ನೆರಳು ಭೂಮಿಯ ಮೇಲೆ ಬಿದ್ದರೆ ಸೂರ್ಯಗ್ರಹಣವೆಂದೂ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದರೆ  ಚಂದ್ರಗ್ರಹಣವೆಂದೂ ನಾವು ಶಾಲೆಗಳಲ್ಲಿ ಕಲಿತಿರುತ್ತೇವೆ.  ಆದರೆ ಪ್ರತೀ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಅಥವಾ ವರ್ಷದ ನಿರ್ದಿಷ್ಟ ದಿನಗಳಂದು  ಏಕೆ ಗ್ರಹಣ ಸಂಭವಿಸುವುದಿಲ್ಲ,  ಎಲ್ಲ ಗ್ರಹಣಗಳು ಏಕರೂಪವಾಗಿರದೆ ವಿಭಿನ್ನವಾಗಿ ಏಕಿರುತ್ತವೆ ಮುಂತಾದ ವಿಚಾರಗಳ ಬಗ್ಗೆ ನಾವು ಆಸಕ್ತಿ ವಹಿಸುವುದು ಕಮ್ಮಿ.

ವಿವಿಧ ರೀತಿಯ ಸೂರ್ಯಗ್ರಹಣಗಳು

ಅಂಡಾಕಾರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುವ ಚಂದ್ರನು ಭೂಮಿಗೆ ಅತಿ ಸಮೀಪದಲ್ಲಿ ಅಂದರೆ Perigeeಯಲ್ಲಿ ಇದ್ದಾಗ ಸೂರ್ಯಗ್ರಹಣ ಸಂಭವಿಸಿದರೆ ಚಂದ್ರ ಭೂಮಿಯ ಮೇಲೆ  ಉಂಟುಮಾಡುವ ದಟ್ಟ ನೆರಳಿನ (Umbra) ಭಾಗದಲ್ಲಿರುವವರಿಗೆ ಖಗ್ರಾಸ ಸೂರ್ಯಗ್ರಹಣ (Total Eclipse) ಉಂಟಾಗುತ್ತದೆ. ಚಂದ್ರನು  ಭೂಮಿಗಿಂತ ಅತಿ ದೂರದಲ್ಲಿರುವ  ಅಂದರೆ  Apojeeಯಲ್ಲಿ ಇದ್ದಾಗ  ದಟ್ಟ ನೆರಳಿನ ಭಾಗದಲ್ಲಿರುವವರಿಗೆ ಕಂಕಣ ಸೂರ್ಯಗ್ರಹಣ (Annular Eclipse) ಉಂಟಾಗುತ್ತದೆ. ಈ ಎರಡು  ಸಂದರ್ಭಗಳಲ್ಲೂ   ವಿರಳ ನೆರಳಿನ (Penumbra) ಭಾಗದಲ್ಲಿರುವವರಿಗೆ ಖಂಡಗ್ರಾಸ ಗ್ರಹಣ (Partial Eclipse) ಉಂಟಾಗುತ್ತದೆ.  

ಚಂದ್ರ ಭೂಮಿಗಿಂತ ನಾಲ್ಕು ಪಾಲು ಚಿಕ್ಕವನಾಗಿರುವುದರಿಂದ ಆತ  ಸೃಷ್ಟಿಸುವ ನೆರಳೂ ಚಿಕ್ಕದಾಗಿದ್ದು ಭೂಮಿಯ ಸೀಮಿತ ಭಾಗದ ಮೇಲಷ್ಟೇ ಬೀಳುವುದರಿಂದ ಆ ಪ್ರದೇಶಗಳಲ್ಲಿ ಮಾತ್ರ ಸೂರ್ಯಗ್ರಹಣ ಸಂಭವಿಸುತ್ತದೆ ಮತ್ತು ಒಂದೊಂದು ಕಡೆ ಒಂದೊಂದು ರೀತಿ ಕಾಣಿಸುತ್ತದೆ.  




ವಿವಿಧ ರೀತಿಯ ಚಂದ್ರಗ್ರಹಣಗಳು

ಚಂದ್ರನ  ಪೂರ್ತಿ ಭಾಗದ ಮೇಲೆ ಭೂಮಿಯ ದಟ್ಟ ನೆರಳು (Umbra)  ಬಿದ್ದಾಗ ಖಗ್ರಾಸ ಚಂದ್ರಗ್ರಹಣ,  ಸ್ವಲ್ಪ ಭಾಗದ ಮೇಲೆ ಮಾತ್ರ  ದಟ್ಟ ನೆರಳು ಬಿದ್ದಾಗ ಖಂಡಗ್ರಾಸ ಗ್ರಹಣ ((Partial Eclipse) ಉಂಟಾಗುತ್ತದೆ. ಚಂದ್ರನ ಸ್ವಲ್ಪ ಅಥವಾ ಪೂರ್ತಿ ಭಾಗದ ಮೇಲೆ ಭೂಮಿಯ ವಿರಳ ನೆರಳಷ್ಟೇ (Penumbra) ಬಿದ್ದರೆ ಛಾಯಾಕಲ್ಪ (Penumbral Eclipse) ಉಂಟಾಗುತ್ತದೆ.  ಛಾಯಾಕಲ್ಪಕ್ಕೆ ಸಾಂಪ್ರದಾಯಿಕ ಮಹತ್ವ ಇಲ್ಲದಿದ್ದು ಹೆಚ್ಚಾಗಿ ಇದು ಗಮನಕ್ಕೂ ಬರುವುದಿಲ್ಲ.

ಚಂದ್ರನಿಗಿಂತ ನಾಲ್ಕು ಪಾಲು ದೊಡ್ಡದಾದ ಭೂಮಿಯು ಸೃಷ್ಟಿಸುವ ನೆರಳು   ಚಂದ್ರನ ಹೆಚ್ಚಿನ ಭಾಗವನ್ನು ಆವರಿಸುವಷ್ಟು ದೊಡ್ಡದಾಗಿರುವುದರಿಂದ ಮತ್ತು ಚಂದ್ರನು ಭೂಮಿಗೆ ಹತ್ತಿರದಲ್ಲಿರುವುದರಿಂದ ಚಂದ್ರಗ್ರಹಣವು ಭೂಮಿಯ ಒಂದು ಪಾರ್ಶ್ವದ ಎಲ್ಲ ಪ್ರದೇಶಗಳಲ್ಲಿ ಏಕಪ್ರಕಾರವಾಗಿ ಕಾಣಿಸುತ್ತದೆ.




ಭೂಮಿಯು ಸೂರ್ಯನ ಸುತ್ತ ಸುತ್ತುವ ಕಕ್ಷೆಯ ತಳ(ecliptic)  ಮತ್ತು ಚಂದ್ರನು ಭೂಮಿಯ ಸುತ್ತ ಸುತ್ತುವ ಕಕ್ಷೆಯ ತಳಗಳ ಮಧ್ಯೆ ಸುಮಾರು 5.14 ಡಿಗ್ರಿಗಳ ಕೋನವಿರುವುದೇ ಪ್ರತೀ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಗ್ರಹಣ ಸಂಭವಿಸದಿರುವುದಕ್ಕೆ ಕಾರಣ.  ಈ ಎರಡು  ತಳಗಳು  ಒಂದನ್ನೊಂದು ಛೇದಿಸುವ ಎರಡು ಸ್ಥಾನಗಳನ್ನು nodes ಎಂದು ಕರೆಯುತ್ತಾರೆ.  ಚಂದ್ರನ ಸಮೇತ ಭೂಮಿಯು ಸೂರ್ಯನನ್ನು ಸುತ್ತುವಾಗ ವರ್ಷಕ್ಕೆ ಎರಡು ಸಲ ಈ  nodeಗಳು ಸೂರ್ಯನ ಎರಡು ಪಾರ್ಶ್ವಗಳಲ್ಲಿ ತಲಾ ಸುಮಾರು  35 ದಿನಗಳಷ್ಟು ಕಾಲ ಭೂಮಿ ಮತ್ತು ಸೂರ್ಯನೊಂದಿಗೆ ಸರಳ ರೇಖೆಯಲ್ಲಿರುತ್ತವೆ. ಆ ಸಮಯದಲ್ಲಿ ಬರುವ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಚಂದ್ರನೂ ಆ ಸರಳ ರೇಖೆಯಲ್ಲಿ ಸೇರಿ ಗ್ರಹಣಗಳುಂಟಾಗುತ್ತವೆ. ಈ  ಸಮಯವನ್ನು ಗ್ರಹಣ ಋತು( eclipse season) ಎನ್ನುತ್ತಾರೆ.  ಇಂಥ ಒಂದು ಗ್ರಹಣ ಋತುವಿನಲ್ಲಿ  ಕಮ್ಮಿ ಎಂದರೆ 15 ದಿನಗಳ ಅಂತರದಲ್ಲಿ ಒಂದು ಚಂದ್ರಗ್ರಹಣ ಮತ್ತು  ಒಂದು ಸೂರ್ಯಗ್ರಹಣ ಸಂಭವಿಸಿಯೇ ತೀರುತ್ತವೆ. ಗ್ರಹಣ ಋತುವಿನ ಆರಂಭದಲ್ಲೇ ಒಂದು ಗ್ರಹಣ ಸಂಭವಿಸಿದರೆ ಮಧ್ಯದಲ್ಲಿ ಒಂದು ಮತ್ತು ಕೊನೆಯಲ್ಲಿ ಇನ್ನೊಂದು ಹೀಗೆ ಮೂರು ಗ್ರಹಣಗಳೂ ಸಂಭವಿಸಬಹುದು. ಅವು ಎರಡು ಚಂದ್ರಗ್ರಹಣ ಮತ್ತು ಒಂದು ಸೂರ್ಯಗ್ರಹಣ ಅಥವಾ  ಎರಡು ಸೂರ್ಯಗ್ರಹಣ ಮತ್ತು ಒಂದು ಚಂದ್ರಗ್ರಹಣ ಆಗಿರಬಹುದು.  ಇದೇ ವಿದ್ಯಮಾನ ವರ್ಷದ ಎರಡನೇ ಗ್ರಹಣಋತುವಿನಲ್ಲೂ ಸಂಭವಿಸುತ್ತದೆ.  ಅಂದರೆ ವರ್ಷಕ್ಕೆ ಕಮ್ಮಿ ಎಂದರೆ ತಲಾ ಎರಡು ಮತ್ತು ಜಾಸ್ತಿ ಎಂದರೆ ತಲಾ ನಾಲ್ಕು  ಸೂರ್ಯ ಮತ್ತು ಚಂದ್ರಗ್ರಹಣಗಳು ಸಂಭವಿಸಬಹುದು.  ಒಟ್ಟಿನಲ್ಲಿ ವರ್ಷಕ್ಕೆ ಕಮ್ಮಿ ಎಂದರೆ ನಾಲ್ಕು ಮತ್ತು  ಹೆಚ್ಚು ಎಂದರೆ ಆರು ಗ್ರಹಣಗಳು ಸಂಭವಿಸುತ್ತವೆ. ಆದರೆ ಗ್ರಹಣ ಋತು ಅರ್ಧ ವರ್ಷಕ್ಕಿಂತ 10 ದಿನ ಮೊದಲೇ ಮರುಕಳಿಸುವುದರಿಂದ ಕೆಲವು ಸಲ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮೂರು ಗ್ರಹಣ ಋತುಗಳು ಬಂದು  ಗ್ರಹಣಗಳ ಒಟ್ಟು ಸಂಖ್ಯೆ ಹೆಚ್ಚಾಗಬಹುದು. ಗ್ರಹಣ ಋತುವಿನ ಆರಂಭದಲ್ಲಿ ಸಂಭವಿಸುವ ಗ್ರಹಣಗಳು ಖಂಡಗ್ರಾಸವಾಗಿರುತ್ತವೆ.  ಮಧ್ಯಭಾಗದಲ್ಲಿ ಸಂಭವಿಸುವಂಥವು ಖಗ್ರಾಸವಾಗಿರುವ ಸಾಧ್ಯತೆ ಹೆಚ್ಚು.  ಅಂತೂ ಕಷ್ಟಗಳು ಬಂದರೆ ಬೆನ್ನು ಬೆನ್ನಿಗೆ ಬರುತ್ತವೆ ಅಂದಂತೆ ಗ್ರಹಣಗಳೂ ಬೆನ್ನು ಬೆನ್ನಿಗೆ ಬರುತ್ತವೆ ಎನ್ನುವುದು ನಿಜ.  ಭೂಮಿಯ ಮತ್ತು ಚಂದ್ರನ ಕಕ್ಷೆಗಳು ಛೇದಿಸುವ  ಸ್ಥಾನಗಳು ಸ್ಥಿರವಾಗಿರದೆ ನಿಧಾನವಾಗಿ ಚಂದ್ರನ ಪರಿಭ್ರಮಣದ ವಿರುದ್ಧ ದಿಕ್ಕಿನಲ್ಲಿ ಚಲಿಸುವುದರಿಂದ ಗ್ರಹಣ ಋತುಗಳು ವರ್ಷದ ನಿರ್ದಿಷ್ಟ ಕಾಲದಲ್ಲಿ ಇರದೆ ಪ್ರತಿ ಸಲ ಸುಮಾರು 10 ದಿನಗಳಷ್ಟು ಮುಂಚೆ ಆರಂಭವಾಗುತ್ತವೆ. 18 ವರ್ಷ 11 ದಿನ 8 ಗಂಟೆಗಳಲ್ಲಿ ಆ ಬಿಂದುಗಳು ಮತ್ತೆ ಮೊದಲಿದ್ದ ಸ್ಥಾನಕ್ಕೆ ಮರಳುವುದರಿಂದ ಗ್ರಹಣಗಳ ಪುನರಾವರ್ತನೆಯಾಗುತ್ತದೆ.  ಆದರೆ 8 ಗಂಟೆಗಳ ಕಾರಣದಿಂದ ಕಾಣಿಸುವ ಸ್ಥಾನ ವ್ಯತ್ಯಾಸವಾಗಬಹುದು. ಈ 18 ಚಿಲ್ಲರೆ ವರ್ಷಗಳ ಅವಧಿಯನ್ನು Saros Cycle  ಅನ್ನುತ್ತಾರೆ.




ರಾಹು ಮತ್ತು ಕೇತು
ಚಂದ್ರನ ಕಕ್ಷೆಯ ತಳವು ಭೂಮಿಯ ಕಕ್ಷೆಯ ತಳವನ್ನು ಛೇದಿಸಿ ದಕ್ಷಿಣದಿಂದ  ಉತ್ತರದತ್ತ ಸಾಗುವ ಬಿಂದುವನ್ನು ಪಾಶ್ಚಾತ್ಯರು North Node ಅಥವಾ Ascending Node ಅನ್ನುತ್ತಾರೆ.  ಭಾರತೀಯ ಸಂಸ್ಕೃತಿಯಲ್ಲಿ ಅದನ್ನು ರಾಹು ಎಂದು ಗುರುತಿಸುತ್ತಾರೆ.  ಮತ್ತೆ ಚಂದ್ರನ ಕಕ್ಷೆಯ ತಳವು  ಭೂಮಿಯ ಕಕ್ಷೆಯ ತಳವನ್ನು ಛೇದಿಸಿ ದಕ್ಷಿಣದತ್ತ ಸಾಗುವ  ಬಿಂದು South Node ಅಥವಾ Descending Node ಕೇತು ಎನ್ನಿಸಿಕೊಳ್ಳುತ್ತದೆ. 




ಸೂರ್ಯ ಮತ್ತು ಚಂದ್ರ ಪೂರ್ವ ದಿಗಂತದಲ್ಲಿ ಉದಯಿಸುವ ಸ್ಥಾನಗಳನ್ನು ತಿಂಗಳಿಗೊಮ್ಮೆ ಒಂದು ವರ್ಷ ಕಾಲ  ಗುರುತಿಸುತ್ತಾ ಹೋದರೆ ಅವರಿಬ್ಬರ ಕಕ್ಷೆಗಳು ಬದಲಾಗುತ್ತಾ ಹೋಗಿ ಸುಮಾರು ಆರು ತಿಂಗಳಿಗೊಮ್ಮೆ  ಅವು ಒಂದನ್ನೊಂದು ಛೇದಿಸುವುದನ್ನು ಗಮನಿಸಬಹುದು. ನಾನು ಸಂಗ್ರಹಿಸಿದ 2019ರ ಇಂಥ ದತ್ತಾಂಶವನ್ನು ಕ್ರೋಢೀಕರಿಸಿ ಸೂರ್ಯ ಚಂದ್ರರ ಪಥಗಳ ಗ್ರಾಫ್ ತಯಾರಿಸಿದಾಗ  ಜನವರಿ, ಜುಲೈ ಮತ್ತು ಡಿಸೆಂಬರಲ್ಲಿ ಅವು ಒಂದನ್ನೊಂದು ಛೇದಿಸಿದ್ದು ಕಂಡುಬರುತ್ತದೆ.  ಪರಸ್ಪರ ಪಥಗಳು ಛೇದಿಸಿದ ಬಿಂದುಗಳೇ ನೋಡ್‌ಗಳು.  ಅವುಗಳ ಆಚೀಚಿನ ಸುಮಾರು 35 ದಿನಗಳೇ ಗ್ರಹಣ ಋತುಗಳು.  2019ರ ಒಂದು ಋತು ಜನವರಿಯ ಮೊದಲ ಭಾಗದಲ್ಲೇ ಬಂದದ್ದರಿಂದ ಮೂರು ಋತುಗಳಲ್ಲಿ 5 ಗ್ರಹಣ ಸಂಭವಿಸಿದ್ದನ್ನು ಕಾಣಬಹುದು.  


ಚಂದ್ರಗ್ರಹಣವನ್ನು ವೀಕ್ಷಿಸಲು ಯಾವ ನಿರ್ಬಂಧವೂ ಇಲ್ಲವಾದರೂ ಸೂರ್ಯಗ್ರಹಣವನ್ನು ಎಂದೂ ಬರಿಗಣ್ಣಿನಲ್ಲಿ ನೋಡಲೇಬಾರದು ಎಂದು ಎಚ್ಚರಿಸಲಾಗುತ್ತದೆ.  ವಾಸ್ತವವಾಗಿ ಸೂರ್ಯನನ್ನು ಗ್ರಹಣದ ಸಂದರ್ಭದಲ್ಲಿ ಮಾತ್ರವಲ್ಲ, ಬೇರೆ ದಿನ ಕೂಡ ನೋಡಬಾರದು.  ಬೇರೆ ದಿನ ಯಾರೂ ನೋಡಲು ಹೋಗುವುದೂ ಇಲ್ಲ, ನೋಡ ಹೋದರೆ ಸೂರ್ಯನ ಪ್ರಖರತೆಗೆ ಕಣ್ಣು ತಾನಾಗಿ ಮುಚ್ಚಿಕೊಳ್ಳುತ್ತದೆ.  ಆದರೆ ಸೂರ್ಯಗ್ರಹಣದ ದಿನ ಕುತೂಹಲದಿಂದ ನೋಡುವ ಸಾಧ್ಯತೆ ಹೆಚ್ಚು ಇರುವುದರಿಂದ ಈ ಎಚ್ಚರಿಕೆಯನ್ನು ನೀಡಲಾಗುತ್ತದೆ. ಅಲ್ಲದೆ  ಗ್ರಹಣ ಸಂದರ್ಭದಲ್ಲಿ ಸೂರ್ಯನ ಪ್ರಖರತೆ ತುಂಬಾ ಕಮ್ಮಿಯಾಗಿರುವುದರಿಂದ ಕಣ್ಣಿನ ಕನೀನಿಕೆ ಹಿರಿದಾಗಿ ತೆರೆದಿದ್ದು  ಅಗೋಚರವಾದ ಅಲ್ಟ್ರಾ ವಯಲೆಟ್ ಕಿರಣಗಳು ಕಣ್ಣಿಗೆ  ನುಗ್ಗಿ ಶಾಶ್ವತವಾದ ಹಾನಿ ಉಂಟುಮಾಡಬಹುದು. ಗ್ರಹಣ ಬಿಡುವಾಗ ಒಮ್ಮೆಲೇ ಪ್ರಕಾಶ ಹೆಚ್ಚಾಗುವುದು ಕಣ್ಣುಗಳಿಗೆ ಮತ್ತೂ ಅಪಾಯಕಾರಿ.  ಸಾಮಾನ್ಯ ಕಪ್ಪು ಕನ್ನಡಕಗಳಿಗೂ ಹಾನಿಕಾರಕ ವಿಕಿರಣವನ್ನು ತಡೆಯುವ ಸಾಮರ್ಥ್ಯ ಇರುವುದಿಲ್ಲ.  ಹೀಗಾಗಿ ಪಿನ್ ಹೋಲ್ ಕ್ಯಾಮರಾ ತಂತ್ರದಲ್ಲಿ ಸೂರ್ಯನ ಪ್ರತಿಬಿಂಬ ಸೃಷ್ಟಿಸಿ ನೋಡುವುದೇ ಸುರಕ್ಷಿತ ಮಾರ್ಗ.  ಮನೆಯಂಗಳದಲ್ಲಿ ಸೋಗೆಯ ಚಪ್ಪರ ಇದ್ದರೆ ಅದರ ಮೂಲಕ ನೆಲದ ಮೇಲೆ ಬಿಳುವ ವೃತ್ತಾಕಾರದ ಬೆಳಕಿನ ಬಿಲ್ಲೆಗಳು ಪಿನ್ ಹೋಲ್ ಕ್ಯಾಮರಾ ತತ್ವದಲ್ಲಿ ಉಂಟಾದ ಸೂರ್ಯನ ಪ್ರತಿಬಿಂಬಗಳೇ.  ಗ್ರಹಣದ ಸಮಯದಲ್ಲಿ ಅವುಗಳನ್ನು ನೋಡಿದರೆ ಪ್ರತಿಯೊಂದು ಬಿಲ್ಲೆಯಲ್ಲೂ ಗ್ರಹಣವನ್ನು ಕಾಣಬಹುದು.  ಈ ಸಲದ ಗ್ರಹಣ ಬೆಳಗ್ಗೆ ಇರುವುದರಿಂದ ಮರಗಿಡಗಳ ಎಡೆಯಿಂದ ಸೂಸುವ ಕಿರಣಗಳು ಮನೆಯ ಗೋಡೆಯ ಮೇಲೆಯೂ ಇಂಥ ಪ್ರತಿಬಿಂಬಗಳನ್ನು ಸೃಷ್ಟಿಸುತ್ತವೆ.  ಒಂದೆರಡು ದಿನ ಮೊದಲೇ ಇಂಥ ಆಯಕಟ್ಟಿನ ಜಾಗವನ್ನು ಹುಡುಕಿಟ್ಟರೆ ಸೂರ್ಯಗ್ರಹಣದ ಸುಲಭ ದರ್ಶನ ಸಾಧ್ಯ.  ಮುಂದೆ ಈ ಭಾಗದಲ್ಲಿ ಇಂತಹ ಕಂಕಣ ಸೂರ್ಯಗ್ರಹಣ ಕಾಣ ಸಿಗುವುದು 17 ಫೆಬ್ರವರಿ  2064ರಂದು. ಅಂದು  ಅದು ನಡುಮಧ್ಯಾಹ್ನ ಸಂಭವಿಸಲಿದ್ದು ಕಂಕಣ ಭಾಗ್ಯ ಸುಮಾರು 8 ನಿಮಿಷ ಇರಲಿದೆ!

ದೃಕ್‌ಗಣಿತವನ್ನು ಬಳಸುವ  ಪಂಚಾಂಗಕರ್ತರು ಮತ್ತು ಆಧುನಿಕ ಪರಿಕರಗಳನ್ನುಪಯೋಗಿಸುವ ವಿಜ್ಞಾನಿಗಳು  ಸಿದ್ಧ ಪಡಿಸುವ ಗ್ರಹಣಗಳ ವೇಳಾಪಟ್ಟಿ ಶತ ಪ್ರತಿಶತ ಒಂದಕ್ಕೊಂದು ತಾಳೆಯಾಗುವುದು ಅಚ್ಚರಿಯ ವಿಷಯ. ಭಾರತೀಯರಿಗಿಂತಲೂ ಮೊದಲು ಗ್ರೀಕ್ ಖಗೋಳಶಾಸ್ತ್ರಜ್ಞರು ಮತ್ತು ಬೆಬಿಲೋನಿಯನ್ನರು ಗ್ರಹಣಗಳ ನಿಶ್ಚಿತ ಮರುಕಳಿಸುವಿಕೆಯನ್ನು ಗುರುತಿಸಿ ಮುಂಬರುವ ಗ್ರಹಣಗಳ ನಿಖರ ಮುನ್ಸೂಚನೆ ಕೊಡಬಲ್ಲವರಾಗಿದ್ದರಂತೆ.

ಗ್ರಹಣಗಳೆಂದರೇನೆಂದು ಗೊತ್ತಿರದಿದ್ದ ಕಾಲದಲ್ಲಿ  ಅವ್ಯಕ್ತ ಭಯದಿಂದಾಗಿ ಹುಟ್ಟಿಕೊಂಡ ಕೆಲವು ಆಚಾರ ವಿಚಾರಗಳು ಈಗಿನ ಕಾಲದಲ್ಲಿ ಎಷ್ಟು ಪ್ರಸ್ತುತ ಎಂಬುದು ಯೋಚಿಸಬೇಕಾದ ವಿಚಾರ.  ರಾಹು ಕೇತುಗಳು ಸೂರ್ಯ ಚಂದ್ರರನ್ನು  ಕಬಳಿಸಿದಾಗ ಗ್ರಹಣಗಳುಂಟಾಗುತ್ತವೆ ಎಂದುಕೊಂಡಿದ್ದ ಕಾಲ ಒಂದಿತ್ತು. ಗ್ರಹಣ ಸಮಯದಲ್ಲಿ ರಾಹು ಕೇತುಗಳನ್ನು ಬೆದರಿಸಲು ಆಕಾಶದತ್ತ ಕೋವಿಯಿಂದ ಗುಂಡು ಹಾರಿಸುವ ಕ್ರಮವೂ ಇತ್ತು!   ಆದರೆ ಅದು ಆಕಾಶಕಾಯಗಳ ಆಟ ಎಂದು ಈಗ ಎಲ್ಲರಿಗೂ ಗೊತ್ತಿದೆ. ಆದರೂ ಗ್ರಹಣಗಳ ಕುರಿತು  ಕೆಲವು ಮಿಥ್ಯೆಗಳು ಜನಮಾನಸದಲ್ಲಿ ಇನ್ನೂ ಉಳಿದಿವೆ. ಟೀವಿಯ ಭಯೋತ್ಪಾದಕ ಜ್ಯೋತಿಷಿಗಳ ಕುಮ್ಮಕ್ಕೂ ಇದಕ್ಕಿದೆ. ಸೂರ್ಯನನ್ನು ಬರಿಗಣ್ಣಿನಿಂದ ನೇರವಾಗಿ ನೋಡಬಾರದು ಎಂಬುದೊಂದನ್ನು ಬಿಟ್ಟರೆ ಗ್ರಹಣಗಳು ಯಾರಿಗೂ ಕೇಡು ಉಂಟುಮಾಡಲಾರವು.

ಮುಂದಿನ 10 ವರ್ಷಗಳಲ್ಲಿ ಈ ಭಾಗದಲ್ಲಿ ಕಾಣಿಸಲಿರುವ ಗ್ರಹಣಗಳು. ಕಂಕಣ ಸೂರ್ಯಗ್ರಹಣಕ್ಕೆ 2064ರ ವರೆಗೆ ಕಾಯಬೇಕು.  







Sunday, 16 October 2022

ಮೂರು ಲಕ್ಷ ವೀಕ್ಷಣೆಯ ಸಂಭ್ರಮ



ವಿರಾಮದ ವೇಳೆಗಾಗಿ ತಾಣಕ್ಕೆ ಈಗ ಮೂರು ಲಕ್ಷ ವೀಕ್ಷಣೆಯ ಸಂಭ್ರಮ.  ಆದರೆ ಈ ಸಂಖ್ಯೆ ದಾಖಲಾದದ್ದು  ಒಂದು ದಿನ, ಒಂದು ವಾರ  ಅಥವಾ ಒಂದು ತಿಂಗಳಲ್ಲಿ ಅಲ್ಲ, ಇದಕ್ಕಾಗಿ ಸುದೀರ್ಘ 12 ವರ್ಷಗಳು ಬೇಕಾದವು.

ವಿರಾಮದ ವೇಳೆಯಲ್ಲಿ ಅಸ್ವಾದಿಸಲು ಸೂಕ್ತವಾದ ಮನರಂಜನೆ ಮತ್ತು ಒಂದಷ್ಟು ಮಾಹಿತಿ ಒದಗಿಸುವ ಉದ್ದೇಶದ ನನ್ನ ಬ್ಲಾಗ್ ‘ವಿರಾಮದ ವೇಳೆಗಾಗಿ’ 2010ರಲ್ಲಿ ಆರಂಭವಾದಾಗ  Podbean ಎಂಬ  ತಾಣದಲ್ಲಿತ್ತು.   ಅದರಲ್ಲಿ audio ಕಡತಗಳನ್ನು ಸಂಗ್ರಹಿಸಿಟ್ಟು ಹಂಚಲು ತನ್ನದೇ ವ್ಯವಸ್ಥೆ ಇದ್ದರೂ ಅದಕ್ಕೊಂದು ಮಿತಿ ಇತ್ತು.  ಹೊರಗಿನ audio hosting ತಾಣಗಳನ್ನು ಅದು support ಮಾಡುತ್ತಿರಲಿಲ್ಲ.  ಹೀಗಾಗಿ 2011ರಲ್ಲಿ ಅದನ್ನು ಈಗಿನ blogspot ತಾಣಕ್ಕೆ ವರ್ಗಾಯಿಸಿದೆ. ಬರಹಗಳ ಮುಖ್ಯ ವಿಭಾಗದ ಜೊತೆಗೆ ನನ್ನ ಇತರ ಹವ್ಯಾಸಗಳಾದ ಕೊಳಲು ವಾದನ, ಚಿತ್ರಕಲೆ, ಚುಟುಕ ರಚನೆ, ಕವನಗಳು, ಪತ್ರಿಕೆಗೆ ಪತ್ರ, ವೀಡಿಯೊ, ಛಾಯಾಗ್ರಹಣ  ಮುಂತಾದವುಗಳಿಗೆ ಮೀಸಲಾದ  ಸ್ಥಿರ ಪುಟಗಳನ್ನೂ ಅಳವಡಿಸಿ  ವೈವಿಧ್ಯಮಯ ಸಾಮಗ್ರಿ  ಒದಗಿಸುವ ಪ್ರಯತ್ನ ಮಾಡಿದೆ.  ಹಳೆ ಚಂದಮಾಮವನ್ನು ಇಷ್ಟಪಡುವವರಿಗಾಗಿ  ಅದಕ್ಕೊಂದು ವಿಶೇಷ ಪುಟ ತೆರೆದು ವಾರಕ್ಕೊಂದು ಸಂಚಿಕೆ ಓದಲು ಸಿಗುವಂತೆ ಮಾಡಿದೆ.

ಇಲ್ಲಿಯ ಹೆಚ್ಚಿನ ಬರಹಗಳು ಹಳೇ ಹಾಡುಗಳನ್ನು ಕುರಿತಾದವುಗಳಾದರೂ ಯಾವುದೇ ಹಾಡು, ವೀಡಿಯೊ ಇಲ್ಲದವೂ ಇವೆ. ಕೆಲವು ಬರಹಗಳು  ವಿಶ್ವವಾಣಿ, ಕನ್ನಡಪ್ರಭ, ಉತ್ಥಾನ ಮುಂತಾದ ಪತ್ರಿಕೆಗಳಲ್ಲೂ ಪ್ರಕಟವಾಗಿವೆ.

ಒಮ್ಮೆ ನೊರೆಯುಕ್ಕಿಸಿ ಆ ಮೇಲೆ ತಣ್ಣಗಾಗುವ ಫೇಸ್ ಬುಕ್ ಪೋಸ್ಟುಗಳಂತಲ್ಲದೆ ಇಲ್ಲಿಯ ಅನೇಕ ಬರಹಗಳು ಮತ್ತೆ ಮತ್ತೆ ಓದಲ್ಪಡುವುದು ವಿಶೇಷ. ‘ಸಪ್ತಸ್ವರಗಳ ಸುತ್ತ’ದಂತಹ ಬರಹಗಳು encyclopedia ರೀತಿಯಲ್ಲಿ ದಿನನಿತ್ಯ refer  ಮಾಡಲ್ಪಡುವುದು ಗಮನಕ್ಕೆ ಬಂದಿದೆ.

ಈ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕೆಂದು ಕೆಲವರು ಹೇಳುವುದೂ ಇದೆ. ಆದರೆ ಇವುಗಳಲ್ಲಿ ಹೆಚ್ಚಿನವು ಆಡಿಯೊ, ವೀಡಿಯೊ ಒಳಗೊಂಡ poscast ರೀತಿಯವು ಆಗಿರುವುದರಿಂದ ನಾನು ಈ ಬಗ್ಗೆ ಸದ್ಯಕ್ಕಂತೂ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ನೋಡೋಣ,  ಮುಂದೊಂದು ದಿನ ಆಯ್ದ ಬರಹಗಳನ್ನೊಳಗೊಂಡ ಪುಸ್ತಕ ಬಂದರೂ ಬರಬಹುದು. 

ಇಲ್ಲಿಯ ಕೆಲವೊಂದು ಬರಹಗಳನ್ನು ನಾನೇ ಬರೆದೆನೇ ಎಂದು ನನಗೇ ಕೆಲವೊಮ್ಮೆ  ಅಚ್ಚರಿಯಾಗುವುದಿದೆ.  ಏಕೆಂದರೆ ನಾನು ಬರಹಗಾರ ಅಲ್ಲವೇ ಅಲ್ಲ. ಶಾಲಾ ದಿನಗಳಲ್ಲೂ ಒಂದೆರಡು ವಾಕ್ಯಗಳ ನಿಖರ ಉತ್ತರಗಳನ್ನು ಬಯಸುವ ಗಣಿತ, ವಿಜ್ಞಾನ ವಿಷಯಗಳು ನನಗೆ ಇಷ್ಟವಾಗುತ್ತಿದ್ದವೇ ಹೊರತು ಕಡ್ಡಿಯನ್ನು ಗುಡ್ಡ ಮಾಡಿ ಪುಟ ತುಂಬಿಸಬೇಕಾದ ಭಾಷಾ ವಿಷಯಗಳು, ಸೋಶಲ್ ಸ್ಟಡೀಸ್ ಇತ್ಯಾದಿಗಳಲ್ಲಿ ನಾನು ಸೋಲುತ್ತಿದ್ದೆ.  ಯಾವುದೇ ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ನಾನು additional sheet ಕೇಳಿ ಪಡೆಯುತ್ತಿದ್ದುದು ಇಲ್ಲವೆಂಬಷ್ಟು ಕಮ್ಮಿ.  ಕೊನೆಯ ಗಂಟೆ ಬಾರಿಸುವುದಕ್ಕೆ ಅರ್ಧ ತಾಸು ಮೊದಲೇ ಉತ್ತರ ಪತ್ರಿಕೆ ಒಪ್ಪಿಸಿ ನಾನು ಹೊರ ಬಂದಿರುತ್ತಿದ್ದೆ. ಮೊದಲಿನಿಂದಲೂ ನನ್ನ ಮಾತೂ ಕಮ್ಮಿಯೇ.  ಸಮೂಹ ಸಂಭಾಷಣೆಗಳಲ್ಲೂ ನನಗೆ ಗೊತ್ತಿರುವ ವಿಷಯವಾದರೆ ಸೇರಿಕೊಳ್ಳುತ್ತಿದ್ದೆನೇ ಹೊರತು ಉಳಿದಂತೆ ನನ್ನದು ಮೌನವೇ ಆಭರಣ! ಈ ರೀತಿ ನಾನು ಕಮ್ಮಿ ಶಬ್ದ ಮಾಲಿನ್ಯ  ಮಾಡುತ್ತಿದ್ದುದರಿಂದ  ಪ್ರಾಥಮಿಕ ಶಾಲೆಯಲ್ಲಿ ‘ಆದರ್ಶ ವಿದ್ಯಾರ್ಥಿ’ ಎಂಬ ವಿಶೇಷ ಪಾರಿತೋಷಕವೊಂದು ನನಗೆ ದೊರಕಿತ್ತು!

ಕ್ರಮೇಣ ಬಂಧು ಬಾಂಧವರಿಗೆ ಚಿಕ್ಕ ಚಿಕ್ಕ ಸರಳ ವಾಕ್ಯಗಳ ಪತ್ರ ಬರೆಯುವುದನ್ನು ಅಭ್ಯಾಸ ಮಾಡಿಕೊಂಡೆ.  ‘ಉಚಿತ ಪುಸ್ತಿಕೆಗಾಗಿ ಬರೆಯಿರಿ’ ಎಂದು ಪತ್ರಿಕೆಗಳಲ್ಲಿ ಜಾಹೀರಾತು ಬರುತ್ತಿದ್ದ ಫೋರ್‌ಹನ್ಸ್ ಟೂತ್ ಪೇಸ್ಟ್, ಕಿನ್ನಿಗೋಳಿಯ ಜೈಹಿಂದ್  ಲೆದರ್ ವರ್ಕ್ಸ್ ಇತ್ಯಾದಿಗಳಿಗೆ ಪತ್ರ ಬರೆದು ಅವರ ಕ್ಯಾಟಲಾಗುಗಳನ್ನು ತರಿಸುವಷ್ಟು ಪರಿಣಿತಿ ಸಾಧಿಸಿದ್ದೆ.  ಕಾಲೇಜಿನ ಕೊನೆಯ ವರ್ಷಗಳಲ್ಲಿ ಪುಟ್ಟ ಡೈರಿಯಲ್ಲಿ ದಿನಚರಿ ಬರೆಯುವುದನ್ನು ಆರಂಭಿಸಿ ಪುಟ್ಟ ವಾಕ್ಯಗಳಲ್ಲಿ ಘಟನೆಗಳನ್ನು ದಾಖಲಿಸುವುದು ರೂಢಿಸಿಕೊಂಡೆ.  ಆ ಹವ್ಯಾಸವನ್ನೂ ಇದುವರೆಗೂ ಪಾಲಿಸಿಕೊಂಡು ಬಂದಿದ್ದೇನೆ.

ನಂತರ ಪತ್ರಿಕೆಗಳ ವಾಚಕರ ವಾಣಿಗೆ ಪತ್ರ ಬರೆಯುವ ಹವ್ಯಾಸ ಬೆಳೆಸಿಕೊಂಡೆ. ಹಾಗೆ ಬರೆಯುವಾಗ ಹೇಳಬೇಕಾದ್ದನ್ನು ಎರಡು ಅಥವಾ ಮೂರು ವಾಕ್ಯಗಳಲ್ಲಿ ಅಡಕಗೊಳಿಸಲು ಪ್ರಯತ್ನಿಸಿ ಪತ್ರ ಆದಷ್ಟು ಚಿಕ್ಕದಾಗಿರುವಂತೆ ನೋಡಿಕೊಳ್ಳುತ್ತಿದ್ದೆ.  ಇಂಥ ದಿನ ಪತ್ರಿಕೆಯಲ್ಲಿ ನಿಮ್ಮ ಪತ್ರ ನೋಡಿದೆ ಎಂದು ಯಾರಾದರೂ ಹೇಳಿದಾಗ ಒಂದು ರೀತಿಯ ಥ್ರಿಲ್.  ನಾನು ಸರಳ ಭಾಷೆಯಲ್ಲಿ ಬರೆದ ತಾಂತ್ರಿಕ ವಿಷಯಗಳ ಕುರಿತಾದ ಕೆಲವು  ಲೇಖನಗಳೂ ಉದಯವಾಣಿಯಲ್ಲಿ ಪ್ರಕಟವಾಗಿ ನಾನೂ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತ್ತು.

ವಿರಾಮದ ವೇಳೆಗಾಗಿ ಕುರಿತಾದ ನಿಮ್ಮೆಲ್ಲರ ಅಭಿಮಾನ ಹೀಗೆಯೇ ಮುಂದುವರಿಯಲಿ.

ಜನ ಮೆಚ್ಚಿದ  ಸಾರ್ವಕಾಲಿಕ ಟಾಪ್ 10 ಲೇಖನಗಳು. 



ಜನಪ್ರಿಯ ವಿಭಾಗಗಳು.


ಅತಿ ಹೆಚ್ಚು ಓದುಗರಿರುವ ದೇಶಗಳು.
ಭಾರತದ ನಂತರ ಅತಿ ಹೆಚ್ಚು ಓದುಗರಿರುವುದು ಅಮೇರಿಕದಲ್ಲಿ.  



ಅತಿ ಹೆಚ್ಚು ಬಳಕೆಯಾಗುವ browserಗಳು.
ಕ್ರೋಮ್ ಪ್ರಥಮ ಸ್ಥಾನ, ಫೈರ್ ಫಾಕ್ಸ್ ದ್ವಿತೀಯ.


ಹೆಚ್ಚು ಬಳಕೆಯಾಗುವ ಆಪರೇಟಿಂಗ್ ಸಿಸ್ಟಂಗಳು.
59% ಅಂಡ್ರಾಯ್ಡ್, 28% ವಿಂಡೋಸ್ ಬಳಕೆದಾರರು. ಐ ಫೋನ್ ಬಳಸುವವರು 5%.



ಮುಖ್ಯ ಪುಟದ ಬಲ ಪಾರ್ಶ್ವದಲ್ಲಿ ಕಾಣಿಸುವ  ವಾರದ ಟಾಪ್ 5,  ಸಾರ್ವಕಾಲಿಕ ಟಾಪ್ 10 ಅಥವಾ ಹಳೆಯ ಸಂಚಿಕೆಗಳ ಅಕಾರಾದಿ  ಯಾದಿಯಿಂದ ಶೀರ್ಷಿಕೆಯನ್ನು ಆಯ್ದುಕೊಂಡು  ಲೇಖನಗಳನ್ನು ಓದಬಹುದು.



Saturday, 30 July 2022

ರಫಿ ಲತಾ ಗಾನ ಸಂಧಾನದ ನಂತರ


ಜುಲೈ 31 ಅಂದರೆ ಅಮರ ಗಾಯಕ ಮಹಮ್ಮದ್ ರಫಿ ಅವರನ್ನು ವಿಶೇಷವಾಗಿ ಸ್ಮರಿಸುವ ದಿನ. ಏಕೆಂದರೆ ಅವರು ನಿಧನರಾದದ್ದು 1980ರ ಇದೇ ದಿನದಂದು.  2022   ಲತಾ ಮಂಗೇಷ್ಕರ್ ನಿಧನರಾದ ವರ್ಷ.  ಹಾಗಾಗಿ 1964 ಮತ್ತು 66ರ ನಡುವೆ ಅವರಿಬ್ಬರ ಮಧ್ಯೆ  ಹಾಡುಗಳ ರಾಯಲ್ಟಿಗೆ ಸಂಬಂಧಿಸಿದಂತೆ ಉಂಟಾಗಿದ್ದ ವಿರಸ ಕೊನೆಗೊಂಡ ನಂತರ  ಪ್ರಮುಖ ಸಂಗೀತ ನಿರ್ದೇಶಕರಿಗಾಗಿ ಅವರು ಜೊತೆಯಾಗಿ ಹಾಡಿದ ಮೊದಲ ಯುಗಳ ಗೀತೆಗಳನ್ನು ಆಲಿಸುವ ಮೂಲಕ ಅವರಿಬ್ಬರನ್ನೂ ವಿಭಿನ್ನ ಶೈಲಿಯಲ್ಲಿ ಸ್ಮರಿಸೋಣ ಎಂಬ ಆಲೋಚನೆ ಮೂಡಿತು. ಇದಕ್ಕಾಗಿ ಕೈಗೊಂಡ ಒಂದಷ್ಟು ಸಂಶೋಧನೆಯ ಫಲಶ್ರುತಿ ಏನು ಎಂದು ನೋಡೋಣ.

1. ಶಂಕರ್ ಜೈಕಿಶನ್ - ಗಬನ್ ಚಿತ್ರದ ತುಮ್ ಬಿನ್ ಸಜನ್



ಲತಾ ರಫಿ ನಡುವೆ ರಾಜಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಲತಾ ಅವರ ಸಮವಯಸ್ಕರಾಗಿದ್ದ ಜೈಕಿಶನ್. ಅವರಿಬ್ಬರ ಮಧ್ಯೆ  ಸ್ನೇಹದ ಸಲುಗೆಯೂ ಇತ್ತು. ಹೀಗಾಗಿ ‘ನಿಮ್ಮಿಬ್ಬರ ಯುಗಳ ಗೀತೆಗಳಿಲ್ಲದೆ ನಮ್ಮಿಂದ ಕ್ರಿಯಾಶೀಲ ಕಂಪೋಸಿಷನ್ ಸಾಧ್ಯವಾಗುತ್ತಿಲ್ಲ’ ಎಂದು ಅವರಂದಾಗ ಲತಾಗೆ ಇಲ್ಲವೆಂದು ಹೇಳಲಾಗಲಿಲ್ಲ. ಈ ವಿರಸ ರಫಿಯ ಕ್ಯಾರಿಯರ್ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ ಮತ್ತು  ಅದನ್ನು  ಕೊನೆಗೊಳಿಸಲು  ಆವರ ತಕರಾರೂ ಇರಲಿಲ್ಲ. ಹೀಗಾಗಿ ಜೈಕಿಶನ್ ತಂದು ಕೊಟ್ಟ ಹೂಗುಚ್ಛಗಳನ್ನು ಅವರಿಬ್ಬರು ಬದಲಾಯಿಸಿಕೊಳ್ಳುವ ಮೂಲಕ ವರುಷಗಳ ವಿರಸ ನಿಮಿಷದಲ್ಲಿ ಕರಗಿ ಹೋಯಿತು. ಸಂಧಾನದ ನಂತರದ ಮೊದಲ ರಫಿ ಲತಾ ಯುಗಳಗೀತೆಯನ್ನು  ಪಲ್ಕೊಂ ಕಿ ಛಾವೊಂ ಮೆಂ ಎಂಬ ಚಿತ್ರಕ್ಕಾಗಿ ಶಂಕರ್ ಜೈಕಿಶನ್ 1966ರಲ್ಲಿ ರೆಕಾರ್ಡ್ ಮಾಡಿದರು. ಆದರೆ ಅದೇಕೋ ಆ ಚಿತ್ರವಾಗಲಿ ಗೀತೆಯಾಗಲಿ ಬೆಳಕು ಕಾಣಲಿಲ್ಲ. ಹೀಗಾಗಿ ಶಂಕರ್ ಜೈಕಿಶನ್ ಅವರದೇ ನಿರ್ದೇಶನದಲ್ಲಿ ಅದೇ ವರ್ಷ ಗಬನ್ ಚಿತ್ರಕ್ಕಾಗಿ ಅವರಿಬ್ಬರು ಹಾಡಿದ ತುಮ್ ಬಿನ್ ಸಜನ್ ಬರ್‌ಸೆ ನಯನ್   ಹಾಡಿಗೆ  ಮೊದಲ ಸಂಧಾನೋತ್ತರ ಯುಗಳ ಗೀತೆಯ ಸ್ಥಾನ ದೊರೆಯಿತು. ಕೆಲ ಕಾಲದ ನಂತರ ಜೈಕಿಶನ್ ನಿಧನರಾದ ಮೇಲೆ  ಶಂಕರ್ ಬೇಡಿಕೆ ಕಳೆದುಕೊಂಡುದರಿಂದ ಆ ಮೇಲೆ ಶಂಕರ್ ಜೈಕಿಶನ್ ನಿರ್ದೇಶನದಲ್ಲಿ  ಹೆಚ್ಚು ಲತಾ ರಫಿ ಯುಗಳ ಗೀತೆಗಳು ಬರಲಿಲ್ಲ.  ಆದರೂ ಮೇರೇ ಹುಜೂರ್ ಚಿತ್ರದ ಕ್ಯಾ ಕ್ಯಾನ ಸಹೇ ಹಮ್ ನೆ ಸಿತಂ, ಆಶಾ ಭೋಸ್ಲೆಯೂ ಜೊತೆಗಿದ್ದ  ಪ್ರಿನ್ಸ್ ಚಿತ್ರದ ಮುಕಾಬಲಾ ಹಮ್ ಸೆ ನ ಕರೊ, ಜಾನೆ ಅಂಜಾನೆ ಚಿತ್ರದ ತೇರಿ ನೀಲಿ ನೀಲಿ ಆಂಖೋಂ ಕೆ, ಧರ್ತಿ ಚಿತ್ರದ ಯೆ ಮೌಸಮ್ ಭೀಗಾ ಭೀಗಾ ಹೈ ಮುಂತಾದವು ಕೇಳಲು ಸಿಕ್ಕಿದವು.

2. ಸಚಿನ್ ದೇವ್ ಬರ್ಮನ್ - ಜ್ಯೂಯಲ್ ತೀಫ್ ಚಿತ್ರದ ದಿಲ್ ಪುಕಾರೆ



1958ರಿಂದ 65ರ ವರೆಗೆ ಪೂರ್ತಿ ರಫಿ ನಿಷ್ಠರಾಗಿದ್ದ ಎಸ್.ಡಿ. ಬರ್ಮನ್ 1965ರ ತೀನ್ ದೇವಿಯಾಂ ಮೂಲಕ ಮತ್ತೆ ಹಿನ್ನೆಲೆ ಗಾಯನದತ್ತ ಹೊರಳಿದ ಕಿಶೋರ್ ಕುಮಾರ್ ಕಡೆಗೆ ಹೆಚ್ಚು ಒಲವು ತೋರಿದರೂ ರಫಿಯನ್ನು ಕಡೆಗಣಿಸಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಎರಡನೇ ಸಂಧಾನೋತ್ತರ  ರಫಿ ಲತಾ ಯುಗಳಗೀತೆಯಾಗಿ 1967ರ ಜ್ಯೂಯಲ್ ತೀಫ್  ಚಿತ್ರದ  ದಿಲ್ ಪುಕಾರೆ  ಹಾಡು ಮೂಡಿ ಬಂತು. ನಂತರವೂ ಎಸ್.ಡಿ. ಬರ್ಮನ್ ಅವರು ತಲಾಶ್ ಚಿತ್ರದ ಪಲ್ಕೊಂ ಕೆ ಪೀಛೆ ಸೆ ಮತ್ತು ಆಜ್ ಕೊ ಜುನ್‌ಲಿ ರಾತ್ ಮಾ, ಇಶ್ಕ್ ಪರ್ ಜೋರ್ ನಹೀಂ ಚಿತ್ರದ ಯೇ ದಿಲ್ ದೀವಾನಾ ಹೈ, ಆರಾಧನಾದ ಬಾಗೋಂ ಮೆಂ ಬಹಾರ್ ಹೈ, ಅನುರಾಗ್ ಚಿತ್ರದ ತೇರೆ ನೈನೊಂ ಕೆ ಮೈಂ ದೀಪ್ ಜಲಾವೂಂಗಾ, ಅಭಿಮಾನ್ ಚಿತ್ರದ ತೇರೀ ಬಿಂದಿಯಾರೆ ಮುಂತಾದ ರಫಿ ಲತಾ ಗೀತೆಗಳನ್ನು ನೀಡಿದರು.

3. ಲಕ್ಷ್ಮೀಕಾಂತ್ ಪ್ಯಾರೇಲಾಲ್ - ಶಾಗಿರ್ದ್ ಚಿತ್ರದ ವೊ ಹೈಂ ಜರಾ ಖಫಾ ಖಫಾ



ರಫಿ ಲತಾ ವಿರಸ ಎಂದು ಕೊನೆಗೊಳ್ಳುವುದೋ ಎಂದು ಇತರ ಸಂಗೀತ ನಿರ್ದೇಶಕರೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಮನದಾಳದಿಂದ ರಫಿ ಪ್ರಿಯರಾಗಿದ್ದ ಲಕ್ಷ್ಮೀ ಪ್ಯಾರೇ  ತಾವು ಸಂಗೀತ ನೀಡುತ್ತಿದ್ದ  ಶಾಗಿರ್ದ್ ಚಿತ್ರಕ್ಕಾಗಿ ವೊ ಹೈಂ ಜರಾ ಖಫಾ ಖಫಾ ಹಾಡನ್ನು ಇವರಿಗಾಗಿ ಸೃಷ್ಟಿಸಿದರು. ನಾನು ಬಹುಕಾಲ ಇದನ್ನು ಮೊಹೆ (ಅಂದರೆ ಗ್ರಾಮ್ಯ ಹಿಂದಿಯಲ್ಲಿ ನನಗೆ ಎಂದರ್ಥ) ಜರಾ ಎಂದು ಹಾಡಿಕೊಳ್ಳುತ್ತಿದ್ದೆ! ಆ ವರ್ಷದ ಬಿನಾಕಾ ಗೀತ್‌ಮಾಲಾ ನಂಬರ್ ವನ್ ಹಾಡಾಗಿದ್ದ ಇದೇ ಚಿತ್ರದ ದಿಲ್ ವಿಲ್ ಪ್ಯಾರ್ ವ್ಯಾರ್ ಎಂಬ ಲತಾ ಹಾಡಿನ ಆರಂಭದಲ್ಲಿ ರಫಿ ಹಾಡಿದ ನಾಲ್ಕು ಸಾಕಿ ಸಾಲುಗಳೂ ಇದ್ದುದರಿಂದ ಅದನ್ನೂ ಯುಗಳ ಗೀತೆಯೆಂದೇ ತಿಳಿದುಕೊಳ್ಳಬಹುದು. ಮುಂದಿನ ವರ್ಷಗಳಲ್ಲಿ  ಎಲ್ಲರಿಗಿಂತ ಹೆಚ್ಚು ರಫಿ ಲತಾ ಗೀತೆಗಳು ಇವರ ನಿರ್ದೇಶನದಲ್ಲೇ ಬಂದವು. ವಾಪಸ್ ಚಿತ್ರದ ಏಕ್ ತೇರಾ ಸಾಥ್ ಹಮ್‌ ಕೊ, ಜಿಗ್ರೀ ದೋಸ್ತ್ ಚಿತ್ರದ ದಿಲ್ ಮೆಂ ಕ್ಯಾ ಹೈ ಹಾಗೂ ಫೂಲ್ ಹೈ ಬಹಾರೋಂಕಾ, ಹಮ್‌ಜೋಲಿಯ ಹಾಯ್ ರೇ ಹಾಯ್ ಮತ್ತು ಟಿಕ್ ಟಿಕ್ ಟಿಕ್ ಮೆರಾ ದಿಲ್ ಡೋಲೆ, ಏಕ ನಜರ್ ಚಿತ್ರದ ಪತ್ತಾ ಪತ್ತಾ ಬೂಟಾ ಬೂಟಾ, ಇಜ್ಜತ್ ಚಿತ್ರದ ಯೆ ದಿಲ್ ತುಮ್ ಬಿನ್ ಕಹೀಂ, ಜೀನೇ ಕೀ ರಾಹ್ ಚಿತ್ರದ ಆ ಮೇರೆ ಹಮ್‌ಜೋಲಿ ಆ, ಆಯಾ ಸಾವನ್ ಝೂಮ್ ಕೆ ಚಿತ್ರದ ಟೈಟಲ್ ಹಾಡು ಮತ್ತು ಸಾಥಿಯಾ ನಹೀಂ ಜಾನಾ, ಸಾಜನ್ ಚಿತ್ರದ ರೇಶಮ್ ಕೀ ಡೋರಿ, ದೋ ರಾಸ್ತೇಯ ಛುಪ್ ಗಯೆ ಸಾರೆ ನಜಾರೆ, ಆನ್ ಮಿಲೊ ಸಜ್‌ನಾದ ಟೈಟಲ್ ಹಾಡು, ಮನ್ ಕೀ ಆಂಖೇಂ ಚಿತ್ರದ ಚಲಾ ಭೀ ಆ, ಮೆಹಬೂಬ್ ಕೀ ಮೆಹೆಂದಿಯ ಇತನಾ ತೊ ಯಾದ್ ಹೈ ಮುಝೆ, ಪಿಯಾ ಕಾ ಘರ್ ಚಿತ್ರದ ಯೇ ಜುಲ್ಫ್ ಕೈಸೀ ಹೈ ಮುಂತಾದವನ್ನು ಪ್ರಾತಿನಿಧಿಕವಾಗಿ ನೆನಪು ಮಾಡಿಕೊಳ್ಳಬಹುದು.

4. ಕಲ್ಯಾಣಜೀ ಆನಂದಜೀ - ದಿಲ್ ನೆ ಪುಕಾರಾ ಚಿತ್ರದ ಹಮ್ ಕೊ ಹೋನೆ ಲಗಾ ಹೈ ಪ್ಯಾರ್

ಮುಕೇಶ್ ಧ್ವನಿಯಲ್ಲಿ ಹೆಚ್ಚು ಹಿಟ್ ಹಾಡುಗಳನ್ನು ನೀಡಿದವರಾದರೂ ಆರಂಭದಿಂದಲೂ ಕಲ್ಯಾಣಜೀ ಆನಂದಜೀ ಕೂಡ ರಫಿ ಲತಾ ಯುಗಳಗಾಯನದ ಲಾಭ ಪಡೆಯುತ್ತಾ ಬಂದವರೇ. ಅವರ ಸಂಗೀತದಲ್ಲಿ ಎರಡನೇ ಇನ್ನಿಂಗ್ಸಿನ ಮೊದಲ ಲತಾ ರಫಿ ಗೀತೆಯಾಗಿ 1967ರ ದಿಲ್ ನೆ ಪುಕಾರಾ ಚಿತ್ರದ ಕಭಿ ಹಮ್ ಕೊ ಹೋನೆ ಲಗಾ ಹೈ ಪ್ಯಾರ್ ದಾಖಲಾಯಿತು. ಇದು ದಕ್ಷಿಣಾದಿ ಸಂಗೀತವನ್ನು ಆಧರಿಸಿದ ಮೊದಲ ಹಿಂದಿ ಸಿನಿಮಾ ಪ್ರೇಮಗೀತೆ ಎಂದು ಪತ್ರಿಕೆಗಳಲ್ಲಿ ಬಹಳ ಪ್ರಚಾರ ಪಡೆದಿತ್ತು. ಕೆಲ ವರ್ಷಗಳ ನಂತರ ಹಮ್ ತುಮ್ ಔರ್ ವೊ ಚಿತ್ರದ ಪ್ರಿಯೆ ಪ್ರಾಣೇಶ್ವರಿ ಎಂಬ ಪ್ರೇಮಗೀತೆಯನ್ನು ಭಜನ್ ಶೈಲಿಯಲ್ಲಿ ಸಂಯೋಜಿಸಿ ಅವರು ಇಂಥ್ದೇ ಪ್ರಯೋಗ ಮಾಡಿದ್ದರು. 1967ರಲ್ಲೇ ಬಂದ ಆಮ್ನೆ ಸಾಮ್ನೆ ಚಿತ್ರದಲ್ಲಿ ಕಭಿ ರಾತ್ ದಿನ್ ಹಮ್ ದೂರ್ ಥೆ ಎಂಬ ಚಂದದ ರಫಿ ಲತಾ ಡ್ಯುಯಟ್ ಇತ್ತು.  ಹಸೀನಾ ಮಾನ್ ಜಾಯೇಗೀ ಚಿತ್ರದ ಬೇಖುದೀ ಮೆಂ ಸನಮ್ ಮತ್ತು ಏಕ್ ಥಾ ಗುಲ್ ಔರ್ ಏಕ್ ಥಿ ಬುಲ್ ಬುಲ್ ಟ್ಯೂನನ್ನು ಸ್ವಲ್ಪ ಮಟ್ಟಿಗೆ ಹೋಲುವ ಉಪಾಸನಾ ಚಿತ್ರದ ಆವೊ ತುಮ್ಹೆ ಮೈ ಪ್ಯಾರ್ ಸಿಖಾದೂಂ  ಕೂಡ ಇವರು ಕೊಟ್ಟ  ಒಳ್ಳೆಯ ರಫಿ ಲತಾ ಹಾಡುಗಳು. ಗೀತ್ ಚಿತ್ರದ ಆಜಾ ತುಝ್ ಕೊ ಪುಕಾರೆ ಮೇರೆ ಗೀತ್, ಸಚ್ಚಾ ಝೂಟಾ ಚಿತ್ರದ ಯೂಂ ಹಿ ತುಮ್ ಮುಝ್ ಸೆ ಬಾತ್ ಕರ್‌ತೀ ಹೊ ಕೂಡ ಜನಪ್ರಿಯವಾಗಿದ್ದವು. ಆದರೆ ನಂತರ ಬಂದ ಜಂಜೀರ್ ಚಿತ್ರದ ದೀವಾನೆ ಹೈಂ ದೀವಾನೊಂ ಕೊ, ಮರ್ಯಾದಾ ಚಿತ್ರದ ಢೋಲ್ ಸಜನಾ ಢೋಲ್ ಜಾನಿ ಮುಂತಾದ ಹಾಡುಗಳು ನನಗೇಕೋ ಸಪ್ಪೆ ಎನಿಸಿದವು.

5. ನೌಷಾದ್ - ರಾಮ್ ಔರ್ ಶ್ಯಾಮ್ ಚಿತ್ರದ ಮೈ ಹೂಂ ಸಾಕಿ.



1967ರಲ್ಲೇ ನೌಷಾದ್ ಅವರಿಗೆ ರಾಮ್ ಔರ್ ಶ್ಯಾಮ್ ಚಿತ್ರಕ್ಕಾಗಿ ಲತಾ ರಫಿ ಧ್ವನಿಯ  ಮೈ ಹೂಂ ಸಾಕಿ ತೂ ಹೈ ಶರಾಬಿ ಶರಾಬಿ ಹಾಡನ್ನು ಸಂಯೋಜಿಸುವ ಯೋಗ ಒದಗಿ ಬಂತು. ಇದರಲ್ಲಿ ಶರಾಬಿ, ಸಾಕಿ ಅಂದರೆ ಬಾರ್ ಗರ್ಲ್ ಎಂದೆಲ್ಲ ಇದ್ದರೂ ಇದು ಚಹಾದ ಮತ್ತಿನಲ್ಲಿ ಹಾಡುವ ಹಾಡು! ಕೆಲವೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದ ನೌಷಾದ್ ಅವರಿಗೆ  ಆ ಮೇಲೆ ಆರಂಗೇಟ್ರಮ್ ಚಿತ್ರದ ರೀಮೇಕ್ ಆದ 1977ರ ಆಯೀನಾದಲ್ಲಿ  ಜಾನೆ ಕ್ಯಾ ಹೋ ಜಾಯೆ ಎಂಬ ಒಂದು ಲತಾ ರಫಿ ಹಾಡು ಸಂಯೋಜಿಸಲಷ್ಟೇ ಸಾಧ್ಯವಾಯಿತು.

6. ಚಿತ್ರಗುಪ್ತ - ವಾಸನಾ ಚಿತ್ರದ ಯೆ ಪರ್ಬತೋಂ ಕೆ ದಾಯರೆ



ಮಾಧುರ್ಯಕ್ಕೆ ಇನ್ನೊಂದು ಹೆಸರೇ ಚಿತ್ರಗುಪ್ತ.  ಇದು ಅವರಿಗೆ ಗುರು ಎಸ್.ಎನ್. ತ್ರಿಪಾಠಿ ಅವರಿಂದ ಬಂದ ಬಳುವಳಿ. ಆರಂಭದಿಂದಲೂ ಸಾಧ್ಯವಾದಷ್ಟು ಸಂಖ್ಯೆಯ ಲತಾ ರಫಿ ಯುಗಳಗೀತೆಗಳು ತಮ್ಮ ಚಿತ್ರಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದವರು ಅವರು. ಲತಾ ರಫಿ  ರಾಜಿಯ ನಂತರದ ಪ್ರಥಮ  ಯುಗಳ ಗೀತೆಯಾಗಿ 1967ರ ವಾಸನಾ ಚಿತ್ರಕ್ಕಾಗಿ  ಯೆ ಪರ್ಬತೋಂ ಕೆ ದಾಯರೆ ಎಂಬ ಮಾಧುರ್ಯವೇ ಮೈವೆತ್ತಂತಿರುವ  ಹಾಡನ್ನು ಸೃಷ್ಟಿಸುವ ಯೋಗ ಅವರಿಗೆ ಒದಗಿತು.  ಅದೇ ವರ್ಷ ಬಂದ  ಔಲಾದ್ ಚಿತ್ರದಲ್ಲಿ ಅರಮಾಂ  ಥಾ ಹಮೆ ಜಿನ್ ಕಾ ಮತ್ತು ನಾಜುಕ್ ನಾಜುಕ್ ಬದನ್ ಮೊರಾ ಹಾಗೂ ಪ್ಯಾರ್ ಕಾ ಸಪ್ನಾ ಚಿತ್ರದಲ್ಲಿ ಏ ಮೇರಿ ಜಿಂದಗಿ ತೂ ನಹೀಂ ಅಜನಬಿ ಎಂಬ ರಫಿ ಲತಾ ಹಾಡುಗಳಿದ್ದವು.

7. ರವಿ - ದೋ ಕಲಿಯಾಂ ಚಿತ್ರದ ತುಮ್ಹಾರಿ ನಜರ್ ಕ್ಯೂಂ ಖಫಾ ಹೋಗಯಿ



ರವಿ ಅವರ ಮನ ಮೆಚ್ಚಿದ ಗಾಯಕ ರಫಿ ಆಗಿದ್ದರೂ ಬಿ.ಆರ್. ಚೋಪ್ಡಾ ಕ್ಯಾಂಪಿನಲ್ಲಿದ್ದುದರಿಂದಲೋ ಏನೋ ಅವರ ಮತ್ತು ಲತಾ ನಡುವೆ  ಅಷ್ಟೊಂದು ಉತ್ತಮ ವ್ಯಾವಹಾರಿಕ ಸಂಬಂಧ ಇರಲಿಲ್ಲ ಅನಿಸುತ್ತದೆ.  ಹೀಗಾಗಿ ರವಿ ಸಂಗೀತದಲ್ಲಿ ನಮಗೆ ಹೆಚ್ಚು ಸಿಗುವುದು ರಪಿ ಆಶಾ ಹಾಡುಗಳೇ.  ಹೀಗಿದ್ದರೂ ಲತಾ ರಫಿ ರಾಜಿಯ ಲಾಭ ಪಡೆದ ರವಿ  1968ರ ದೋ ಕಲಿಯಾಂ  ಚಿತ್ರಕ್ಕಾಗಿ ತುಮ್ಹಾರೀ ನಜರ್ ಕ್ಯೂಂ ಖಫಾ ಹೋಗಯಿ ಎಂಬ ಲವಲವಿಕೆ ತುಂಬಿದ ಸುಂದರ ಹಾಡನ್ನು ಸೃಷ್ಟಿಸಿದರು. ಆ ಚಿತ್ರದಲ್ಲಿ ಯೇ ಸಮಾ ಯೆ ರುತ್ ಯೆ ನಜಾರೆ ಎಂಬ ಅವರಿಬ್ಬರ ಯುಗಳ ಗೀತೆಯೂ ಇತ್ತು. ಇದು ತಮಿಳಿನ ಕುಳಂದೆಯುಂ ದೈವಂ ಚಿತ್ರದ ರೀಮೇಕ್.  ಆ ಮೇಲೆ ಮಕ್ಕಳ ಭಾಗ್ಯ ಹೆಸರಲ್ಲಿ ಕನ್ನಡಕ್ಕೆ ಬಂತು. 1975ರ ಎಕ್ ಮಹಲ್ ಹೊ ಸಪನೋಂ ಕಾ ಚಿತ್ರದ ಟೈಟಲ್ ಹಾಡು ಬಿಟ್ಟರೆ ರವಿ ನಿರ್ದೇಶನದಲ್ಲಿ ಲತಾ ರಫಿ ಜೊತೆಯಾಗಿ ಹಾಡಿದ ಯಾವ ಹಾಡೂ ನನಗೆ ನೆನಪಾಗುತ್ತಿಲ್ಲ. ವಿರಸಪೂರ್ವದಲ್ಲೂ ಗೃಹಸ್ಥಿ ಚಿತ್ರದ ಜಾನೆ ತೇರಿ ನಜರೋಂನೆ  ಬಿಟ್ಟರೆ ಅವರಿಬ್ಬರು ರವಿಗಾಗಿ ಹಾಡಿದ ಬೇರೆ ಯುಗಳ ಗೀತೆ ಇದ್ದಂತಿಲ್ಲ!

8. ಆರ್.ಡಿ. ಬರ್ಮನ್ - ಪ್ಯಾರ್ ಕಾ ಮೌಸಮ್ ಚಿತ್ರದ ನಿಸುಲ್ತಾನಾ ರೇ

ಮೇಲ್ನೋಟಕ್ಕೆ ಆರ್.ಡಿ. ಬರ್ಮನ್ ಅವರು ಕಿಶೋರ್ ಪಕ್ಷಪಾತಿ ಎಂದೆನ್ನಿಸಿದರೂ ಸಾಕಷ್ಟು ಸಂಖ್ಯೆಯಲ್ಲಿ ಅವರ ಲತಾ ರಫಿ ಯುಗಳ ಗೀತೆಗಳಿವೆ. ಅವರ ಮೊದಲ ಚಿತ್ರ ಛೋಟೇ ನವಾಬ್‌ನಲ್ಲಿ ಮತ್‌ವಾಲಿ ಆಂಖೊಂ ವಾಲೆ ಸೇರಿದಂತೆ ಮೂರು ಹಾಡುಗಳನ್ನು ಲತಾ ರಫಿ ಜೊತೆಯಾಗಿ ಹಾಡಿದ್ದರು. ಅವರಿಬ್ಬರು ಮತ್ತೆ ಜೊತೆಯಾಗಿ ಹಾಡತೊಡಗಿದ ಮೇಲೆ 1969ರ ಪ್ಯಾರ್ ಕಾ ಮೌಸಮ್ ಚಿತ್ರದಲ್ಲಿ ನಿಸುಲ್ತಾನಾ ರೇ ಎಂಬ ವೈಶಿಷ್ಟ್ಯಪೂರ್ಣವಾದ ಯುಗಳ ಗೀತೆಯನ್ನು ಆರ್.ಡಿ ಬರ್ಮನ್ ಅವರಿಬ್ಬರಿಗಾಗಿ ಸೃಷ್ಟಿಸಿದರು.  ಆ ಮೇಲೆ ಕಾರವಾಂ ಚಿತ್ರದ ಕಿತ್‌ನಾ ಪ್ಯಾರಾ ವಾದಾ, ದ ಟ್ರೇನ್ ಚಿತ್ರದ ತುಝ್ ಸೆ ಭಲಾ ಯೆ ಕಾಜಲ್ ತೇರಾ, ವಾರಿಸ್ ಚಿತ್ರದ ಕಭಿ ಕಭಿ ಐಸಾ ಭೀ ತೊ,  ರಾತೊಂ ಕಾ ರಾಜಾ ಚಿತ್ರದ ಮೊಹಬ್ಬತ್ ಸೆ ತುಮ್ಹೆ ದೆಖಾ ಮುಂತಾದ ರಫಿ ಲತಾ ಹಾಡುಗಳು ಅವರ ನಿರ್ದೇಶನದಲ್ಲಿ ಬಂದವು. ಆರಾಧನೋತ್ತರ ಕಾಲದಲ್ಲೂ ರಾಜೇಶ್ ಖನ್ನನ ಹಮ್‌ಶಕಲ್ ಚಿತ್ರಕ್ಕಾಗಿ ಕಾಹೆ ಕೊ ಬುಲಾಯಾ ಎಂಬ ಹಾಡನ್ನು ಅವರ ಸಂಗೀತದಲ್ಲಿ ಲತಾ ರಫಿ ಹಾಡಿದರು.

ಪ್ಯಾರ್ ಕಾ ಮೌಸಮ್ ಹೆಸರಿನ ಕುರಿತಾದ ಸ್ವಾರಸ್ಯಕರ ಮಾಹಿತಿ ಒಂದಿದೆ.  ಶಶಿ ಕಪೂರ್ ಮತ್ತು ತನುಜಾ ಮತ್ತಿತರರ ತಾರಾಗಣ ಹಾಗೂ ಶಂಕರ್ ಜೈಕಿಶನ್ ಸಂಗೀತದೊಂದಿಗೆ ಒಂದು ಚಿತ್ರ ತಯಾರಿಸಬೇಕೆಂದು ಅಮೀನ್ ಸಯಾನಿ ಅವರಿಗೆ ಉಮೇದು ಬಂದು ಈ ಟೈಟಲನ್ನು ರಿಜಿಸ್ಟರ್ ಮಾಡಿಸಿದ್ದರಂತೆ.  ಆದರೆ  ತೀಸ್ರಿ ಕಸಂ ಚಿತ್ರ ತಯಾರಿಸಲು ಹೋಗಿ ಕವಿ ಶೈಲೇಂದ್ರ ಸೋತು ಸುಣ್ಣವಾದುದನ್ನು ನೋಡಿದ ಮೇಲೆ ಚಿತ್ರ ನಿರ್ಮಾಣ ತನ್ನಂಥವರಿಗೆ ಹೇಳಿಸಿದ್ದಲ್ಲ ಎಂಬ ಜ್ಞಾನೋದಯವಾಗಿ ಪ್ಯಾರ್ ಕಾ ಮೌಸಮ್ ಟೈಟಲನ್ನು ನಿರ್ಮಾಪಕ ನಾಸಿರ್ ಹುಸೇನ್ ಅವರಿಗೆ ಬಿಟ್ಟು ಕೊಟ್ಟರಂತೆ.

9.  ಮದನ್ ಮೋಹನ್ -  ಹೀರ್ ರಾಂಝಾ ಚಿತ್ರದ ಮೇರಿ ದುನಿಯಾ ಮೆಂ ತುಮ್ ಆಯೆ



ಗಜಲ್ ಕಿಂಗ್ ಎಂದೇ ಹೆಸರಾದ ಮದನ್ ಮೋಹನ್ ಲತಾ ಮಂಗೇಶ್ಕರ್ ಅವರಿಗಾಗಿ ಆ ಶೈಲಿಯ ಗೀತೆಗಳನ್ನು ಹೆಚ್ಚು ಸಂಯೋಜಿಸುತ್ತಿದ್ದುದರಿಂದ ಅವರ ಲತಾ ರಫಿ ಯುಗಳ ಗೀತೆಗಳು ಹೆಚ್ಚಿಲ್ಲ. ಫಕ್ಕನೆ ಮನಸ್ಸಿಗೆ ಬರುವುದು 1957ರ ಗೇಟ್ ವೇ ಆಫ್ ಇಂಡಿಯಾದ ದೊ ಘಡಿ ವೊ ಜೊ ಪಾಸ್ ಆ ಬೈಠೆ ಮಾತ್ರ. ಕೆಲವು ವರ್ಷಗಳ ನಂತರ 1963ರಲ್ಲಿ  ಅಕೇಲಿ ಮತ್ ಜೈಯೊ ಚಿತ್ರದ ಯೇ ಹವಾ ಯೆ ಮಸ್ತಾನಾ ಮೌಸಮ್ ಗೀತೆಯನ್ನು ಇವರಿಬ್ಬರು ಹಾಡಿದ್ದರು.   ಸಂಧಾನದ ನಂತರ 1970ರಲ್ಲಷ್ಟೇ ಹೀರ್ ರಾಂಝಾ ಚಿತ್ರದ ಮೇರಿ ದುನಿಯಾ ಮೆಂ ತುಮ್ ಆಯೆ ಎಂಬ ಲತಾ ರಫಿ ಹಾಡು ಬಂತು. ಪಿಸುದನಿಯಲ್ಲಿ ರಫಿ ಹಾಡುವಾಗ ಉಸಿರಿನ ಸದ್ದು ಒಂದಿನಿತೂ ಕೇಳಿಸದಿರುವುದು ಅವರ ಮೈಕ್ ಸೆನ್ಸ್, ಉಸಿರಿನ ನಿಯಂತ್ರಣ ಇತ್ಯಾದಿ ಯಾವ ಮಟ್ಟದಲ್ಲಿ ಇತ್ತು ಎನ್ನುವುದಕ್ಕೆ ಸಾಕ್ಷಿ. 1976ರ ಲೈಲಾ ಮಜ್ನೂ ಚಿತ್ರದಲ್ಲಿ ಅಬ್ ಅಗರ್ ಹಮ್ ಸೆ ಖುದಾಯೀ ಭೀ ಮತ್ತು ಇಸ್ ರೇಶ್ಮಿ ಪಾಜೇಬ್ ಕಿ ಎಂಬ ಲತಾ ರಫಿ ಡ್ಯುಯೆಟುಗಳಿದ್ದವು. ಆ ಚಿತ್ರದಲ್ಲಿ ಮದನ್ ಮೋಹನ್ ಋಷಿ ಕಪೂರ್ ಅವರಿಗೆ ರಫಿಯ ಧ್ವನಿಯನ್ನು ಬಳಸಿರುವುದು ಜನರಿಗೆ ಇಷ್ಟವಾಗಿ ರಫಿ ಮತ್ತೆ ಹಿನ್ನೆಲೆ ಗಾಯನದಲ್ಲಿ ಮುಂಚೂಣಿಗೆ ಬರಲು ಕಾರಣವಾಯಿತು.  ಆದರೆ ದುರಾದೃಷ್ಟವಶಾತ್ ಈ ಚಿತ್ರ ಪೂರ್ತಿಯಾಗುವ ಮುನ್ನವೇ ಮದನ್ ಮೋಹನ್ ನಿಧನ ಹೊಂದಿದ್ದರಿಂದ ಆ ಚಿತ್ರದ ಸಂಗೀತ ನಿರ್ದೇಶನದ ಹೊಣೆಯನ್ನು ಇನ್ನೋರ್ವ ಪ್ರತಿಭಾವಂತ ಜಯದೇವ್ ಅವರು ನಿಭಾಯಿಸಬೇಕಾಯಿತು.

10. ರೇಡಿಯೊ ಸಿಲೋನಿನಲ್ಲಿ ಡ್ಯೂಯಟ್ ರೂಪದಲ್ಲಿ ಲವ್ ಇನ್ ಟೋಕಿಯೊ ಚಿತ್ರದ ಓ ಮೆರೆ ಶಾಹೆಖುಬಾ

ಲತಾ ರಫಿ ಜೊತೆಯಾಗಿ ಹಾಡುವುದನ್ನು ಆಲಿಸಲು ಕಾತರಿಸುತ್ತಿದ್ದ ಕೇಳುಗರ ಕೋರಿಕೆಯಂತೆ  ಅವರಿಬ್ಬರು ಬೇರೆ ಬೇರೆಯಾಗಿ ಹಾಡಿದ ಲವ್ ಇನ್ ಟೋಕಿಯೊ ಚಿತ್ರದ ಓ ಮೇರೆ ಶಾಹೆಖುಬಾ ಹಾಡನ್ನು ಯುಗಳ ಗೀತೆಯ ರೂಪದಲ್ಲಿ ರೇಡಿಯೊ ಸಿಲೋನ್ ತನ್ನ ಆಪ್ ಹೀ ಕೆ ಗೀತ್ ಕಾರ್ಯಕ್ರಮದಲ್ಲಿ  ಪ್ರಸಾರ ಮಾಡುತಿತ್ತು. 

ಯಾದಿಯಿಂದ ಹಾಡುಗಳನ್ನು ಆಯ್ಕೆ ಮಾಡಿ ಆಲಿಸಿ.








Sunday, 5 June 2022

ಸೈಕಲ್ ಸಹವಾಸದ ಸ್ವಾರಸ್ಯಗಳು



ಈ ಚಿತ್ರದಲ್ಲಿ ನಾನು ರೈಡ್ ಮಾಡುತ್ತಿರುವುದು ಮಡ್‌ಗಾರ್ಡ್, ಕ್ಯಾರಿಯರ್ ಯಾವುದೂ ಇಲ್ಲದ ಆಧುನಿಕ ಸೈಕಲ್. ಆದರೆ ಇಲ್ಲಿ ನಾನು ಬರೆಯುತ್ತಿರುವುದು ಕಾಲೇಜು ದಿನಗಳಲ್ಲಿ ಹಲವು ವರ್ಷ ನನ್ನ ಸಹವರ್ತಿ ಆಗಿದ್ದ Flying Pegion ಮಾದರಿಯ ಭಾರತದ ಸಾಂಪ್ರದಾಯಿಕ ಸೈಕಲ್ ಸಹವಾಸದ ಬಗ್ಗೆ.

1960ರ ದಶಕ ಅದು. ಇನ್ನೂ ಬೈಕು, ಸ್ಕೂಟರ್, ಕಾರುಗಳು ಐಷಾರಾಮಿ ಸವಲತ್ತುಗಳಾಗಿದ್ದವು. ಹೀಗಾಗಿ ಸೈಕಲ್ ಜನತಾ ಜನಾರ್ದನನ ವಾಹನ ಅನಿಸಿಕೊಂಡಿತ್ತು. ಹಾಗೆಂದು ಈಗ ಬೈಕ್, ಸ್ಕೂಟರುಗಳಿರುವಷ್ಟು ಸಂಖ್ಯೆಯ ಸೈಕಲುಗಳು ಆಗ ಇರಲಿಲ್ಲ. . ಈಗಿನಂತೆ  ಮಗು ನಡೆಯಲು ಕಲಿಯುವುದಕ್ಕೂ ಮುನ್ನ ಮನೆಗೆ ಟ್ರೈಸಿಕಲ್ ಬರುವ ಕಾಲವೂ ಅದಾಗಿರಲಿಲ್ಲ. ನಾನು ಮೊದಲು ಸೈಕಲನ್ನು ಸಮೀಪದಿಂದ ನೋಡಿದ್ದು ನಮ್ಮ ಅಜ್ಜಿ ಮನೆಯಲ್ಲಿ. ನಮ್ಮ ಸೋದರ ಮಾವ ಮನೆಯಲ್ಲಿ ಸೈಕಲ್ ಇಟ್ಟುಕೊಂಡಿದ್ದ ಕೆಲವೇ ಮಂದಿಗಳಲ್ಲಿ ಒಬ್ಬರಾಗಿದ್ದರು. ಅವರು ಅದನ್ನು  ಅಂಗಳದ ಕಂಬವೊಂದಕ್ಕೆ ಸರಪಳಿಯಿಂದ ಬಂಧಿಸಿಟ್ಟಿರುತ್ತಿದ್ದರು. ಹೀಗಾಗಿ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ ಕಟ್ಟಿಟ್ಟಲ್ಲೇ ಕೈಯಿಂದ ಪೆಡಲ್ ತಿರುಗಿಸುವ ಅವಕಾಶ ಮಾತ್ರ ನಮಗೆ ಸಿಗುತ್ತಿತ್ತು. ಅದರ ಹಿಂಭಾಗದಲ್ಲಿದ್ದ ಕೆಂಪಗಿನ ರಿಫ್ಲೆಕ್ಟರ್ ನಮಗಾಗ ಒಂದು ಆಕರ್ಷಣೆ. ಈಗ ಸ್ಕೂಟರ್, ಬೈಕುಗಳ ರಿಫ್ಲೆಕ್ಟರ್ ನೋಡಿದಾಗಲೂ ನನಗೆ ಆ ಸೈಕಲ್ ದೃಶ್ಯವೇ ನೆನಪಿಗೆ ಬರುವುದು. ಕೈಪಂಪ್ ಬಳಸಿ ಒಂದು ಬಟ್ಟೆ ಚೂರಿನ ಮೂಲಕ ಅವರು ಸೈಕಲ್ ಚಕ್ರಕ್ಕೆ ಗಾಳಿ ತುಂಬುವುದನ್ನು ನೋಡಲು ಚೋದ್ಯವೆನಿಸುತ್ತಿತ್ತು.


ಸೈಕಲ್ ಸವಾರಿಯ ಅನುಭವ ಪಡೆಯಲು ಸಾಮಾನ್ಯವಾಗಿ ಹೈಸ್ಕೂಲ್ ಮೆಟ್ಟಲೇರಿದ ಮೇಲಷ್ಟೇ ಸಾಧ್ಯವಾಗುತ್ತಿತ್ತು. ಗಂಟೆಗೆ ಕೆಲವು ಆಣೆಗಳ ಬಾಡಿಗೆಗೆ ಆಗ ಸೈಕಲುಗಳು ದೊರೆಯುತ್ತಿದ್ದವು. ಆಗಲೇ expert ಆಗಿರುತ್ತಿದ್ದ ಅಣ್ಣನನ್ನೋ, ಸ್ನೇಹಿತನನ್ನೋ ಜೊತೆಗಿಟ್ಟುಕೊಂಡು ಊರಿನ ಮೈದಾನಿನಲ್ಲಿ ಸೈಕಲ್ ಸವಾರಿ ಕಲಿಯುವಿಕೆ  ಆರಂಭವಾಗುತ್ತಿತ್ತು. ಆಗ ಸಾಮಾನ್ಯವಾಗಿ 22 ಇಂಚು ಮತ್ತು 24 ಇಂಚು ಫ್ರೇಮ್ ಸೈಜಿನ ಎತ್ತರದ ಸೈಕಲುಗಳೇ ಇರುತ್ತಿದ್ದುದು.  ವಯಸ್ಕರಿಗೂ ಸೀಟ್ ಮೇಲೆ ಕುಳಿತಾಗ ಕಾಲು ನೆಲಕ್ಕೆ ಎಟಕುತ್ತಿರಲಿಲ್ಲ. ಸೈಕಲ್ ಎತ್ತರ ಇದ್ದಷ್ಟೂ ಪೆಡಲ್ ಮಾಡುವುದು ಸುಲಭ ಎಂಬ ನಂಬಿಕೆಯೂ ಆ ಕಾಲದಲ್ಲಿತ್ತು.  ಹೀಗಾಗಿ ಕಲಿಯುವ ಹುಡುಗರು ಕ್ರಮವಾಗಿ ಪೆಡಲ್ ಬ್ಯಾಲನ್ಸ್, ರೋಲಿನ ಒಳಗಿಂದ ಕಾಲು ತೂರಿಸಿ ಪೆಡಲನ್ನು ತಿರುಗಿಸುವ ಕತ್ರಿ ಬ್ಯಾಲನ್ಸ್, ರೋಲ್ ಮೇಲಿಂದ ಕಾಲು ಆಚೆ ಹಾಕಿ ಪೆಡಲ್ ತಿರುಗಿಸುವ ರೋಲ್ ಬ್ಯಾಲನ್ಸ್, ಕ್ಯಾರಿಯರ್ ಮೇಲೆ ಕುಳಿತು ಓಡಿಸುವುದು, ನಂತರ ಸೀಟಾರೋಹಣ ಹೀಗೆ ಹಂತ ಹಂತವಾಗಿ ಪ್ರಾವೀಣ್ಯ ಸಾಧಿಸಬೇಕಾಗುತ್ತಿತ್ತು. ಇದಕ್ಕೂ ಮೊದಲು ಹಿಂದಿನ ಚಕ್ರದ ಬೋಲ್ಟಿನ ಮೇಲೆ ಕಾಲಿಟ್ಟು ನಡೆಸುವ ಕುಟ್ಟಿ ಬ್ಯಾಲೆನ್ಸ್ ಮತ್ತು ಪೆಡಲಿನ axle ಮೇಲೆ ಕಾಲಿಡುವ ಗುಮ್ಮ ಬ್ಯಾಲೆನ್ಸ್ ಎಂಬ ಇನ್ನೆರಡು ಹಂತಗಳಿದ್ದವು ಎಂದು ನಮ್ಮ ಹಿರಿಯಣ್ಣ ಹೇಳುತ್ತಿದ್ದರು. ಆದರೆ ನಮ್ಮ ಕಾಲದಲ್ಲಿ ಈ ಹಂತ ಇರಲಿಲ್ಲ.



ನನಗೆ ಸೈಕಲ್ ಸವಾರಿಯ ಮೊದಲ ಅನುಭವ  6ನೇ ತರಗತಿಯಲ್ಲಿರುವಾಗ ದೊರಕಿತು.  ಸದ್ಯದಲ್ಲೇ ನನ್ನ ಉಪನಯನ ಎಂದು ನಿರ್ಧಾರವಾಗಿದ್ದ ಕಾಲವದು.  ಅಣ್ಣನೊಂದಿಗೆ ಉಜಿರೆಗೆ ಹೋಗಿ ಸೈಕಲ್ ಕಲಿಯಬೇಕೆಂಬ ಅಭಿಲಾಷೆಯನ್ನು ತಂದೆಯವರ ಮುಂದೆ ವ್ಯಕ್ತಪಡಿಸಿದಾಗ ‘ಉಪನಯನದ ಹೊತ್ತಿಗೆ ಕೈಕಾಲು ಮುರಿದುಕೊಳ್ಳಬೇಕೆಂದು ನಿನ್ನ ಉದ್ದೇಶವೋ.  ಸೈಕಲೂ ಬೇಡ ಏನೂ ಬೇಡ’ ಎಂದು ಅವರು ನನ್ನ ಆಸೆಗೆ ತಣ್ಣೀರೆರಚಿದರು. ಆದರೂ ಅವರನ್ನು ಹೇಗೋ ಒಪ್ಪಿಸಿ ಒಂದು ದಿನ ನಾನು ಮತ್ತು ಪದ್ಮನಾಭ ಅಣ್ಣ ಉಜಿರೆಗೆ ಹೋಗಿಯೇ ಬಿಟ್ಟೆವು. ಅಲ್ಲಿ ಶೇಷಗಿರಿ ಶೆಣೈ ಅವರ ಬಾಡಿಗೆ ಸೈಕಲ್ ಶಾಪಿನಿಂದ ಕಲಿಯುವವರಿಗೆಂದೇ ಇರುವ ಸಣ್ಣ ಸೈಕಲೊಂದನ್ನು ಪಡೆದು ಜನಾರ್ದನ ದೇವಸ್ಥಾನದ ಎದುರಿನ  ರಥಬೀದಿಗೆ ಹೋದೆವು. ಸೀಮಿತ ಕಾಲಾವಕಾಶ ಇದ್ದುದರಿಂದ ಪೆಡ್ಲ್ ಬ್ಯಾಲೆನ್ಸ್, ಕತ್ರಿ ಬ್ಯಾಲೆನ್ಸ್ ಎಂದೆಲ್ಲ ಸಮಯ ವ್ಯರ್ಥ ಮಾಡದೆ ನನ್ನನ್ನು ಸೀಟಿನ ಮೇಲೆ ಕೂರಿಸಿ ಅಣ್ಣ ಹಿಂದಿನಿಂದ ತಳ್ಳುತ್ತಾ ಬಂದರು. ಕೊಂಚ ಹೊತ್ತಿನ ನಂತರ ‘ಮುಂದೆ ನೋಡುತ್ತಾ ಪೆಡಲ್ ತಿರುಗಿಸುತ್ತಿರು’ ಎಂದು ಹೇಳಿ ಕೈ ಬಿಟ್ಟರು. ಪೆಡಲ್ ತಿರುಗಿಸುವುದೋ ಮುಂದೆ ನೋಡುವುದೋ ಎಂದು ನನಗೆ ಗೊತ್ತಾಗದಿದ್ದರೂ ಯಾವುದೋ ಮಾಯದಲ್ಲಿ ಸ್ವಲ್ಪ ದೂರ ಸರಿಯಾಗಿಯೇ ಸಾಗಿದ ಸೈಕಲ್ ಆ ಮೇಲೆ ಮನಸ್ಸು ಬದಲಾಯಿಸಿ ಸಮೀಪದ ಹೊಂಡವೊಂದರ ಒಳಗೆ ಇಳಿದು ಅಡ್ಡ ಬಿದ್ದಿತು.  ಅದರೊಂದಿಗೆ ನಾನೂ ಧರಾಶಾಯಿಯಾದೆ.  ಬಿದ್ದಲ್ಲಿಂದ ಎದ್ದು  ಮತ್ತೆ ಅಭ್ಯಾಸ ಮುಂದುವರೆಸಿ ಒಂದಷ್ಟು ದೂರ ನಾನೊಬ್ಬನೇ ಹೋಗುವಷ್ಟು ಪರಿಣತಿ ಸಾಧಿಸಿದೆ. ಆಗ ರಥಬೀದಿಯ ಆಚೆ ತುದಿಯಲ್ಲಿರುವ  ತನ್ನ ಮನೆಯಿಂದ ಹೈಸ್ಕೂಲಿಗೆ ಹೊರಟು ಬಂದ  ಹೆಡ್‌ಮಾಸ್ಟರ್ ಆರ್.ಎನ್. ಭಿಡೆಯವರು ನಮ್ಮನ್ನು ಕಂಡು ಅಣ್ಣನೊಡನೆ ’ತಮ್ಮನಿಗೆ ಸೈಕಲ್ ಕಲಿಸುತ್ತಿದ್ದೀಯೇನೋ’ ಎಂದು ಕೇಳಿದ್ದು ನನಗೆ ಸರಿಯಾಗಿ ನೆನಪಿದೆ.  ಅಷ್ಟರಲ್ಲಿ ಬಾಡಿಗೆ ಕರಾರಿನ ಒಂದು ಗಂಟೆ ಮುಗಿಯುತ್ತಾ ಬಂದುದರಿಂದ ಸೈಕಲನ್ನು ಶೇಷಗಿರಿಯವರಿಗೆ ಹಿಂದಿರುಗಿಸಿ ಮನೆಗೆ ಹಿಂತಿರುಗಿದೆವು.   

ನಾನು ತೀರಾ ಚಿಕ್ಕವನಿದ್ದಾಗ  ಬಾಡಿಗೆ ಸೈಕಲೊಂದನ್ನು ತಂದು ಅಣ್ಣಂದಿರು ಮನೆಯಂಗಳದಲ್ಲಿ ಇಡೀ ರಾತ್ರಿ ಓಡಿಸಿದ ಅಸ್ಪಷ್ಟ ನೆನಪು ನನಗಿತ್ತು. ಅದೇ ಹೆಜ್ಜೆ ಜಾಡನ್ನು ಅನುಸರಿಸಿ ಆ ಮೇಲೊಮ್ಮೆ ನಾವು ಅಕ್ಕಪಕ್ಕದ ಕೆಲವು ಸ್ನೇಹಿತರು ಸೇರಿಕೊಂಡು ಒಂದೆರಡು ರೂಪಾಯಿಗಳ ಓವರ್ ನೈಟ್ ಬಾಡಿಗೆಗೆ ಸಿಗುತ್ತಿದ್ದ ಸಣ್ಣ ಸೈಜಿನ ಸೈಕಲ್ ತಂದು ಸರದಿಯಂತೆ ರಾತ್ರಿಯಿಡೀ ನಮ್ಮೂರ ದೇವಸ್ಥಾನದ ಸುತ್ತ  ಓಡಿಸಿ ಆನಂದಿಸಿದ್ದೆವು.  ದೇವಸ್ಥಾನದ ನಾಲ್ಕು ಮೂಲೆಗಳಿಗೆ ಲಾಟೀನು ತೂಗಾಡಿಸಿ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದೆವು. ಆಗ ಯಾರಾದರೂ  ಸೀಟಿನ ಮೇಲೆ ಕೂರಿಸಿ ದೂಡಿ ಬಿಟ್ಟರೆ ಮಾತ್ರ ಮುಂದೆ ಓಡಿಸಲು ನನಗೆ ಬರುತ್ತಿತ್ತು. ಇಳಿಯುವ ಹೊತ್ತಲ್ಲೂ ಯಾರಾದರೂ ಹಿಡಿದು ಸಹಾಯ ಮಾಡಬೇಕಾಗುತ್ತಿತ್ತು. ಒಂದು ಸಲ ಹ್ಯಾಂಡಲ್ ಕಂಟ್ರೋಲ್ ತಪ್ಪಿ ದೇವಸ್ಥಾನದ ಹಿಂದಿನ ಆಳವಾದ ಪ್ರಪಾತದ ಅಂಚಿನತ್ತ ಸೈಕಲ್ ಸಾಗಿದರೂ ಹೇಗೋ ಸಾವರಿಸಿಕೊಂಡಿದ್ದೆ.  ಮರುದಿನ ಬೆಳಗ್ಗೆ ಶೌಚ ಮುಗಿಸಿ ಪ್ರಕ್ಷಾಲನಕ್ಕೆಂದು  ನೀರು ತಾಗಿಸಿದಾಗ ರಾತ್ರಿಯಿಡೀ ಸೈಕಲ್ಲಿನ ಸೀಟ್ ಮೇಲೆ ಕುಳಿತ ಪರಿಣಾಮದ ಅನುಭವವಾಗಿತ್ತು!

‘ಹಿಂದಿನ ಚಕ್ರ ತಿರುಗುತ್ತಾ ಇದೆ ನೋಡೋ’ ಎಂದು ಹೊಸತಾಗಿ ಸವಾರಿ ಕಲಿತವರ ಏಕಾಗ್ರತೆ ಭಂಗಗೊಳಿಸಿ ಅವರು ಬ್ಯಾಲನ್ಸ್ ತಪ್ಪಿ ಸೈಕಲ್ ಸಮೇತ ಧೊಪ್ಪನೆ ಬೀಳುವುದನ್ನು ನೋಡಿ ಸಂತೋಷ ಪಡುವುದು ಆಗಿನ ದಿನಗಳಲ್ಲಿ ಸಾಮಾನ್ಯವಾಗಿತ್ತು! ಎಷ್ಟು ಸಲ ಬಿದ್ದು ಎದ್ದರೂ ಸೈಕಲ್ ಮೇಲಿನ ಮೋಹ ಮಾತ್ರ ಕಮ್ಮಿ ಆಗುತ್ತಿರಲಿಲ್ಲ. ಎರಡು ತೊಡೆಗಳ ನಡುವೆ ಎದುರಿನ ಚಕ್ರವನ್ನು ಒತ್ತಿ ಹಿಡಿದು,  ತಿರುಚಿ ಹೋಗಿರುತ್ತಿದ್ದ ಹ್ಯಾಂಡಲ್ ಬಾರನ್ನು  ನೇರ್ಪುಗೊಳಿಸುವ ವಿದ್ಯೆಯೂ ಸೈಕಲ್ ಕಲಿಕೆಯ ಭಾಗವೇ ಆಗಿರುತ್ತಿತ್ತು.

ನಾನು ಸೈಕಲ್ ಸವಾರಿಯ  ಪ್ರಾಥಮಿಕ ಪಾಠಗಳನ್ನು ಕಲಿಯುವಷ್ಟರೊಳಗೆ ನಮ್ಮ ಮಾಳದ ಹಿರಿಯಕ್ಕನ  ಮನೆಗೆ ಸೈಕಲ್ ಆಗಮನವಾಗಿತ್ತು. ಅಕ್ಕನ ಮಕ್ಕಳು ಹೆಚ್ಚು ಕಮ್ಮಿ ನನ್ನ ಸಮವಯಸ್ಕರೇ ಆಗಿದ್ದುದರಿಂದ ಬೇಸಿಗೆ ರಜೆಯಲ್ಲಿ ಅಲ್ಲಿಗೆ ಹೋದಾಗ ಅದನ್ನು ಉಪಯೋಗಿಸುವ ಸ್ವಾತಂತ್ರ್ಯ ನನಗಿತ್ತು. ಅಲ್ಲಿದ್ದ ಚಿಕ್ಕ ಅಂಗಳದಲ್ಲಿ ಸೈಕಲ್ ಓಡಿಸುತ್ತಾ ಪೆಡಲ್ ಮೇಲೆ ಕಾಲಿಟ್ಟು ಸೀಟ್ ಮೇಲೆ ಏರಿ ಕುಳಿತುಕೊಳ್ಳುವುದು, ಸೈಕಲ್ ವೇಗ ಕಮ್ಮಿ ಮಾಡಿ ಪೆಡಲ್ ಮೇಲೆ ಕಾಲಿರಿಸಿ ಸುರಕ್ಷಿತವಾಗಿ ಇಳಿಯುವುದು, ಅಂಗಳದಲ್ಲೇ ಎಂಟು ಬರೆಯುವುದು ಮುಂತಾದ ತರಹೆವಾರಿ ಕೌಶಲ್ಯಗಳನ್ನು ಕಲಿಯುವ ಅವಕಾಶ ನನಗೆ ಅಲ್ಲಿ ಸಿಕ್ಕಿತು. ಪೆಡಲ್ ಮೇಲೆ ಎಡ ಕಾಲಿರಿಸಿ ಬಲಕಾಲನ್ನು ಎದುರಿನ ರೋಲ್ ಮೇಲಿಂದ ಆ ಕಡೆ ಹಾಕಿ ಸೀಟ್ ಮೇಲೆ ಕುಳಿತುಕೊಳ್ಳುವ ಪದ್ಧತಿ ನನಗೆ ಅನುಕೂಲಕರ ಅನ್ನಿಸುತ್ತಿತ್ತು. ಅನೇಕರು ಬಲಕಾಲನ್ನು ಹಿಂಬದಿಯಿಂದ ಎತ್ತಿ ಕ್ಯಾರಿಯರ್ ಮೇಲಿಂದ ಆ ಕಡೆ ಹಾಕುವ ಪದ್ಧತಿಯನ್ನು ಇಷ್ಟಪಡುತ್ತಾರೆ.  ನೋಡಲು ಇದುವೇ ಚಂದ ಕೂಡ. ಹಿಂದಿನ ಮುಂದಿನ ಎರಡೂ ಬ್ರೇಕುಗಳನ್ನು ಜೊತೆಯಲ್ಲೇ ಬಳಸಬೇಕು ಎಂದುದನ್ನೂ ನಾನು ಅಲ್ಲಿಯೇ ಕಲಿತದ್ದು.  ಸೈಕಲಿನ ಮುಂದಿನ ಬ್ರೇಕನ್ನು ಬಳಸಲೇ ಬಾರದು ಎಂಬ ತಪ್ಪು ಅಭಿಪ್ರಾಯವೂ  ಕೆಲವರಲ್ಲಿದೆ.  ಅದೊಂದನ್ನೇ ಬಳಸಬಾರದು ಅಷ್ಟೇ.

ಯಾರದೋ ಒತ್ತಾಯಕ್ಕೆ ನಮ್ಮ ಹಿರಿಯಣ್ಣ  ಕಂತಿನಲ್ಲಿ ದುಡ್ಡು ಕಟ್ಟಿ ಲಕ್ಕಿ ಡಿಪ್ಪಿನಲ್ಲಿ ಸೈಕಲ್ ಸಿಗಬಹುದಾದ ಸ್ಕೀಮೊಂದಕ್ಕೆ ಸೇರಿದ್ದರು. ಆಗ ನಾನು ದಿನಾ ಬಸ್ಸಿನಲ್ಲಿ ಓಡಾಡುತ್ತಾ ಕಾಲೇಜಿಗೆ ಹೋಗುತ್ತಿದ್ದೆ. 1968ರಲ್ಲಿ ರಸ್ತೆಗಳ ರಾಷ್ಟ್ರೀಕರಣ ಆದ ಮೇಲೆ ಖಾಸಗಿ ಬಸ್ಸುಗಳೆಲ್ಲ ಸ್ಥಗಿತವಾಗಿ  ಸಮಯಪ್ರಜ್ಞೆ ಇಲ್ಲದ ಸರ್ಕಾರಿ ಬಸ್ಸುಗಳಿಂದಾಗಿ  ನನಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ತೊಂದರೆ ಆಗುತ್ತಿತ್ತು. ಇದು ಅವರಿಗೆ ತಿಳಿದು ಬಸ್ಸುಗಳ ಉಸಾಬರಿಯೇ ಬೇಡವೆಂದು ಲಕ್ಕಿ ಡಿಪ್ಪಿನ ಎಲ್ಲ ಕಂತುಗಳನ್ನು ಒಮ್ಮೆಗೇ ಕಟ್ಟಿ ನನಗೆ ಸೈಕಲ್ ತೆಗೆಸಿ ಕೊಟ್ಟರು. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮ ಇಲ್ಲದಿದ್ದ ಆ ಕಾಲದಲ್ಲೂ ಅವರು ಇಂಥ ಬೋಲ್ಡ್ ನಿರ್ಧಾರಗಳನ್ನು ಆಗಾಗ ತೆಗೆದುಕೊಳ್ಳುತ್ತಿದ್ದರು.   ಗೂಡ್ಸ್ ಆಫೀಸಿಗೆ ಬಂದಿದ್ದ ಆ ಫಿಲಿಪ್ಸ್ ಸೈಕಲನ್ನು  ಬೆಳ್ತಂಗಡಿಯಿಂದ ತರಲು ನಾನೂ ಅಣ್ಣನೊಂದಿಗೆ ಹೋಗಿದ್ದೆ.  ಅದುವರೆಗೆ ರಸ್ತೆಯಲ್ಲಿ ಸೈಕಲ್ ಓಡಿಸಿ ಅಭ್ಯಾಸವಿಲ್ಲದಿದ್ದರೂ ನಾನು ಧೈರ್ಯ ವಹಿಸಿ ಅದನ್ನೇರಿ ಮನೆಯತ್ತ ಹೊರಟೆ.  ದನಕರುಗಳಿಗೆ ಬೇಯಿಸಿ ಹಾಕಲೆಂದು ಅಣ್ಣ ಖರೀದಿಸಿದ್ದ ಹುರುಳಿಯಿದ್ದ ಚೀಲವನ್ನು ಕ್ಯಾರಿಯರಲ್ಲಿರಿಸಿಕೊಂಡೆ.  ಸ್ವಲ್ಪ ದೂರ ಸಾಗುತ್ತಲೇ ರಸ್ತೆಯ ಏರು ಎದುರಾದಾಗ ಇದು ಮೈದಾನಿನ  ಸೈಕಲ್ ಸವಾರಿಯಂತಲ್ಲ ಎಂಬ ಸತ್ಯ ಅರಿವಾಗತೊಡಗಿತು. ಕೈ ಕಾಲುಗಳ ಶಕ್ತಿಯೆಲ್ಲ ಉಡುಗಿ ಹೋದಂತಾಗಿ ಏದುಸಿರು ಬರತೊಡಗಿತು.  ಆದರೂ ಮರ್ಯಾದೆಯ ಪ್ರಶ್ನೆಯಾಗಿದ್ದರಿಂದ ಪೆಡಲ್ ತುಳಿಯುವುದನ್ನು ಮುಂದುವರಿಸಿದೆ.  ಹೀಗೆ ಉಜಿರೆ ದಾಟಿ ಸ್ವಲ್ಪ ದೂರ ಬರುತ್ತಲೇ  ಸ್ಪ್ರಿಂಗಿನ ಒತ್ತಡಕ್ಕೆ ಕ್ಯಾರಿಯರಲ್ಲಿದ್ದ ಚೀಲ ಒಡೆದು ಅದರಲ್ಲಿದ್ದ ಹುರುಳಿಯೆಲ್ಲ ರಸ್ತೆ ಪಾಲಾಯಿತು. ತುಂಬಿಸಿಕೊಳ್ಳೋಣವೆಂದರೆ ಬೇರೆ ಚೀಲ ನನ್ನಲ್ಲಿರಲಿಲ್ಲ.  ಅಲ್ಲೇ ಸಾಗುತ್ತಿದ್ದ  ಹಳ್ಳಿಗನೋರ್ವನಿಗೆ  ತನ್ನ ಅಂಗವಸ್ತ್ರದಲ್ಲಿ ಕಟ್ಟಿಕೊಂಡು ಅದನ್ನೊಯ್ಯುವಂತೆ ಹೇಳಿ ಪಯಣ ಮುಂದುವರೆಸಿದೆ.  ಈ ರೀತಿ ಹೊಸ ಸೈಕಲಿಗೆ ಪ್ರಥಮ ದಿನ ಹುರುಳಿಯ ಬಲಿ ಸಂದಿತು.

ಮರುದಿನ ಬೆಳಗ್ಗೆ ಸ್ವಲ್ಪ ಬೇಗ ಹೊರಟು ಅದರಲ್ಲೇ ಕಾಲೇಜಿಗೆ ಹೋದೆ.  ಆ ಸೈಕಲ್ಲಿಗೆ ಆಂಶಿಕ ಗೇರ್ ಕೇಸ್ ಮಾತ್ರ ಇದ್ದುದರಿಂದ ಶೇಷಗಿರಿ ಶೆಣೈ ಅವರಲ್ಲಿ ಚೈನನ್ನು ಪೂರ್ತಿ ಕವರ್ ಮಾಡುವ ಬೇರೆ ಗೇರ್ ಕೇಸ್ ಹಾಕಿಸಿದೆ. ಒಂದು ಚಂದದ ಸೀಟ್ ಕವರ್, ರೋಲ್ ಕವರ್ ಮತ್ತು ಬಣ್ಣದ ಗೊಂಡೆಗಳಂತೆ ಕಾಣಿಸುವ ಹಬ್ ಬ್ರಶ್ಯುಗಳನ್ನೂ ಖರೀದಿಸಿದೆ. ಅಸಲಿ ಹೂವಿನಂತೆ ಕಾಣಿಸುವ ಪ್ಲಾಸ್ಟಿಕ್ ಪುಷ್ಪವೊಂದನ್ನು ಹ್ಯಾಂಡಲ್ ಬಾರಿಗೆ ಸಿಕ್ಕಿಸಿದೆ. ಪ್ರಭು ಕೇನ್ ವರ್ಕ್ಸ್‌ನಿಂದ ಒಂದು ಬೆತ್ತದ ಬುಟ್ಟಿಯನ್ನೂ ಖರೀದಿಸಿ ಕ್ಯಾರಿಯರಿಗೆ ಅಳವಡಿಸಿಕೊಂಡೆ. ಇದರಿಂದ ಪುಸ್ತಕಗಳನ್ನು, ಸಣ್ಣ ಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಲು ತುಂಬಾ ಅನುಕೂಲವಾಯಿತು. ಕೆಲವು ದಿನಗಳ ನಂತರ ಕಾರ್ಕಳದಿಂದ ಒಂದು ಗಾಳಿ ಹಾಕುವ  ಪಂಪ್ ಕೂಡ ತರಿಸಿಕೊಂಡೆ. ದಿನಾ ಸಂಜೆ ಹಿಂತಿರುಗಿದೊಡನೆ ಸೈಕಲನ್ನು ಒರೆಸಿ ಶುಭ್ರವಾಗಿಡುತ್ತಿದ್ದೆ. ವಾರಕ್ಕೊಮ್ಮೆ ಚಕ್ರಗಳಿಗೆ, ಚೈನಿಗೆ ಎಣ್ಣೆ ಬಿಡುತ್ತಿದ್ದೆ. ಕಾಲೇಜು ಇಲ್ಲದಿದ್ದಾಗ ಊರಿನಲ್ಲಿದ್ದ ನಮ್ಮ ಮೂರು ಮನೆಗಳ ಮಧ್ಯೆ ಹಾಲು, ಮಜ್ಜಿಗೆಗಳ ಆದಾನ ಪ್ರದಾನದ ನೆಪದಲ್ಲಿ  ಓಡಾಡುತ್ತಿದ್ದೆ. ಪೇಟೆಯಿಂದ ದಿನಸಿ ಸಾಮಾನು ತರಲು ನಾನೇ  ಹೋಗುತ್ತಿದ್ದೆ. ಮನೆಗೆ ಬರುವ ನೆಂಟರಿಷ್ಟರನ್ನು ಕ್ಯಾರಿಯರ್ ಮೇಲೆ ಕೂರಿಸಿ ಡಬಲ್ ರೈಡ್ ಮಾಡಿಕೊಂಡು ಬಸ್ಸಿಗೆ ಬಿಡುತ್ತಿದ್ದೆ. ಹೀಗೆ ಕೂತು ಅಭ್ಯಾಸವಿಲ್ಲದವರ ಲಗೇಜನ್ನಾದರೂ ಒಯ್ದು ಕೊಡುತ್ತಿದ್ದೆ. ಉಜಿರೆಯಿಂದ ವಾಪಸು ಬರುವಾಗ ಗೋಪಾಲ ಮಾಸ್ಟ್ರ ಅಂಗಡಿಯಿಂದ ಪಾರ್ಲೆ ಗ್ಲುಕೊ ಬಿಸ್ಕೆಟ್ ಪ್ಯಾಕೆಟ್ ಒಂದನ್ನು ಕೊಂಡು ಬೆತ್ತದ ಬುಟ್ಟಿಯಲ್ಲಿರಿಸಿ ಒಂದೊಂದನ್ನೇ ಬಾಯಿಗೆ ಹಾಕುತ್ತಾ ಬಂದರೆ ದಾರಿ ಸವೆದುದೇ ಗೊತ್ತಾಗುತ್ತಿರಲಿಲ್ಲ. ಮುಂಡಾಜೆ ಮುಟ್ಟುವಾಗ ಪ್ಯಾಕೆಟ್ ಖಾಲಿಯಾಗಿರುತ್ತಿತ್ತು. ಹೀಗೆ ದಿನಗಳು ಸೈಕಲಿನ ಸಹವಾಸದಲ್ಲಿ ಸುಖವಾಗಿ ಸಾಗುತ್ತಿದ್ದವು.

ಒಂದು ದಿನ ಬೆಳಗ್ಗೆ ಎದ್ದು ನೋಡಿದಾಗ ಹಿಂಬದಿಯ ಚಕ್ರದಲ್ಲಿ ಗಾಳಿ ಕಮ್ಮಿಯಾಗಿರುವುದು ಗಮನಕ್ಕೆ ಬಂತು. ಒಮ್ಮೆ ಫುಲ್ ಗಾಳಿ ತುಂಬಿಕೊಂಡು ನಮ್ಮೂರಿನ ಸಕಲಕಲಾವಲ್ಲಭ ಎನಿಸಿಕೊಂಡಿದ್ದ ಅಸ್ರಣ್ಣರ ಬಳಿ ಹೋದೆ.   ಒಂದೋ ಪಂಕ್ಚರ್ ಆಗಿರಬಹುದು ಅಥವಾ ವಾಲ್ವ್ ಟ್ಯೂಬ್ ತೊಂದರೆ ಇರಬಹುದು ಎಂದು ಡಯಗ್ನೋಸ್ ಮಾಡಿದ ಅವರು ವಾಲ್ವ್ ಟ್ಯೂಬ್ ಹೊರತೆಗೆದು ಟ್ಯೂಬಲ್ಲಿ ಗಾಳಿ ಇಲ್ಲದಂತೆ ಮಾಡುವುದು, ಲಿವರ್‌ಗಳನ್ನು ಬಳಸಿ ಟೈರನ್ನು ರಿಮ್ಮಿನಿಂದ ಬೇರ್ಪಡಿಸುವುದು, ಟ್ಯೂಬನ್ನು ಹೊರಗೆಳೆದುಕೊಳ್ಳುವುದು, ಮತ್ತೆ ಟ್ಯೂಬಿಗೆ ವಾಲ್ವ್ ಟ್ಯೂಬ್ ಸಿಕ್ಕಿಸಿ ಗಾಳಿ ತುಂಬಿಸುವುದು, ಬೋಗುಣಿಯಲ್ಲಿರುವ ನೀರಿನಲ್ಲಿ  ಟ್ಯೂಬನ್ನು ಮುಳುಗಿಸಿ ಎಲ್ಲಿಂದಲಾದರೂ ಗಾಳಿ ಗುಳ್ಳೆಗಳು ಬರುತ್ತವೆಯೇ ಎಂದು ಪರೀಕ್ಷಿಸುವುದು ಇತ್ಯಾದಿ ಕೆಲಸಗಳನ್ನು  ಮಾಡುವಾಗ ನಾನೂ ಕುತೂಹಲದಿಂದ ಗಮನಿಸಿದೆ. ಒಂದೆಡೆ ಗಾಳಿಗುಳ್ಳೆಗಳು ಬರುತ್ತಿರುವುದನ್ನು ಕಂಡ ಅವರು ಆ ಜಾಗ ಗುರುತಿಟ್ಟುಕೊಂಡು ಟ್ಯೂಬಿನ ಗಾಳಿ ಪೂರ್ತಿ ತೆಗೆದರು.  ಆ ಭಾಗವನ್ನು ಬಟ್ಟೆಯಿಂದ ಚೆನ್ನಾಗಿ ಒರಸಿ ಸ್ಯಾಂಡ್ ಪೇಪರಿನಿಂದ ಉಜ್ಜಿದರು. ತಮ್ಮ ಬಳಿ ಇದ್ದ ಹಳೆ ಟ್ಯೂಬೊಂದರಿಂದ ವೃತ್ತಾಕಾರದ ಭಾಗವನ್ನು ಕತ್ತರಿಸಿ ತೆಗೆದು ಅದನ್ನೂ ಸ್ವಚ್ಛಗೊಳಿಸಿ ಸ್ಯಾಂಡ್ ಪೇಪರಿನಿಂದ ಉಜ್ಜಿದರು. ಟ್ಯೂಬೊಂದರಿಂದ ಸ್ವಲ್ಪ ರಬ್ಬರ್ ಸೊಲ್ಯೂಷನನ್ನು ಸೈಕಲ್ ಟ್ಯೂಬಿನ ಗುರುತಿಸಿದ ಭಾಗಕ್ಕೆ ಕೈಬೆರಳಿನಿಂದ ಸಮನಾಗಿ ಸವರಿ ಒಂದೆರಡು ನಿಮಿಷ ಒಣಗಲು ಬಿಟ್ಟರು.  ಕತ್ತರಿಸಿ ಸ್ವಚ್ಛಗೊಳಿಸಿದ್ದ ವೃತ್ತಾಕಾರದ ರಬ್ಬರನ್ನು ಆ ಭಾಗದ ಮೇಲೆ ಇಟ್ಟು ಕೈಯಿಂದ ಚೆನ್ನಾಗಿ ಒತ್ತಿದರು. ಮತ್ತೆ ಸೈಕಲ್ ಟ್ಯೂಬಿಗೆ ಗಾಳಿತುಂಬಿ ನೀರಿನಲ್ಲಿಟ್ಟು ಪರೀಕ್ಷಿಸಿದಾಗ ಗಾಳಿಗುಳ್ಳೆಗಳು ಬರುವುದು ನಿಂತಿತ್ತು. ನಂತರ ಗಾಳಿ ತೆಗೆದ ಟ್ಯೂಬನ್ನು ಟಯರಿನ ಒಳಗೆ ತೂರಿಸಿ ಲಿವರ್‌ಗಳ ಸಹಾಯದಿಂದ ಟಯರನ್ನೂ ರಿಮ್ಮಿನ ಒಳಗೆ ಸೇರಿಸಿ ಗಾಳಿ ತುಂಬಿ ಮರುದಿನಕ್ಕೆ  ಗಾಳಿ ಕಮ್ಮಿ ಆಗಿದ್ದರೆ ವಾಲ್ವ್ ಟ್ಯೂಬಿನ ರಬ್ಬರ್ ಬದಲಾಯಿಸ ನೋಡಬೇಕು ಎಂದು ಹೇಳಿದರು.  ಇನ್ನು ಮುಂದೆ ಈ ಕೆಲಸ ನಾನೂ ಮಾಡಬಲ್ಲೆ ಎಂಬ ವಿಶ್ವಾಸ ನನ್ನಲ್ಲಿ ಮೂಡಿತು.  ಶಾಲಾ ಪಠ್ಯದಲ್ಲೂ ಇಂಥ ಕೆಲಸಗಳ ಬಗ್ಗೆ ಮಾಹಿತಿ ಇದ್ದರೆ ಎಷ್ಟು  ಚೆನ್ನಾಗಿರುತ್ತಿತ್ತು ಎಂದು ನನಗಾಗ ಅನ್ನಿಸಿದ್ದುಂಟು.

ಮರುದಿನವೇ ಪಂಕ್ಚರ್ ರಿಪೇರಿಗೆ ಬೇಕಾದ ಲಿವರ್‌ಗಳು, ರಬ್ಬರ್ ಸೊಲ್ಯೂಷನ್, ಸ್ಯಾಂಡ್ ಪೇಪರ್, ಹಳೆ ಟ್ಯೂಬಿನ ಒಂದಷ್ಟು ತುಂಡುಗಳು, ಒಂದಡಿ ವಾಲ್ವ್ ಟ್ಯೂಬ್ ಇತ್ಯಾದಿಗಳನ್ನು ಜೋಡಿಸಿಕೊಂಡು ಪಂಕ್ಚರ್ ಕಿಟ್ ತಯಾರಿಸಿಟ್ಟುಕೊಂಡೆ. ಸ್ಪಾನರ್, ಇಕ್ಕುಳ ಮುಂತಾದವು ಮೊದಲೇ ಮನೆಯಲ್ಲಿದ್ದವು. ಮುಂದೆ ಲೆಕ್ಕವಿಲ್ಲದಷ್ಟು ಸಲ ಈ ಹತ್ಯಾರುಗಳು ಉಪಯೋಗಕ್ಕೆ ಬಂದವು. ಆ ಕಾಲದ ಟ್ಯೂಬು, ಟೈರುಗಳು ಅಷ್ಟೊಂದು ಉತ್ತಮ ಗುಣಮಟ್ಟದವು ಆಗಿರುತ್ತಿರಲಿಲ್ಲವೋ ಏನೋ. ಅದೂ ಅಲ್ಲದೆ ನಮ್ಮ ಮನೆಯಿಂದ ಉಜಿರೆಗೆ ಹೋಗುವ ದಾರಿಯ ಸ್ವಲ್ಪ ಭಾಗ ಕಲ್ಲು ಮಣ್ಣುಗಳ ಕಚ್ಚಾ ರಸ್ತೆ ಆಗಿದ್ದುದರಿಂದ ಮಾಮೂಲಿ ಟ್ಯೂಬ್ ಪಂಕ್ಚರ್ ಮಾತ್ರವಲ್ಲದೆ ಟೈರುಗಳೂ ಬೇಗ ಹಾಳಾಗುತ್ತಿದ್ದವು. ಕೆಲವು ಸಲ ಟೈರಿಗೆ ಗುಳ್ಳೆಗಳು ಬರುತ್ತಿದ್ದವು. ಇನ್ನು ಕೆಲವು ಸಲ ಟೈರ್ ಬದಿಯ ಸರಿಗೆ ಬಿಟ್ಟುಕೊಂಡು ಟ್ಯೂಬ್ ಹೊರಗೆ ಬರುತ್ತಿತ್ತು. ಆಗ ಹಳೆ ಟೈರಿನ ತುಂಡು ಒಳಗೆ ಇಡುವುದು, ಫ್ಯೂಸ್ ವೈರಿನಿಂದ ಬಿಚ್ಚಿದ ಸರಿಗೆಯನ್ನು ಹೊಲಿಯುವುದು ಇತ್ಯಾದಿ ತೇಪೆ ಕೆಲಸಗಳನ್ನು ಮಾಡಿ ಸಾಧ್ಯವಾದಷ್ಟು ದಿನ ದೂಡುತ್ತಿದ್ದೆ. ಕೆಲವೊಮ್ಮೆ ನಡುದಾರಿಯಲ್ಲಿ ಹೀಗಾದಾಗ ಟಯರಿಗೆ ಹಗ್ಗ ಬಿಗಿಯಾಗಿ ಸುತ್ತಿ ಪ್ರಯಾಣ ಮುಂದುವರಿಸಿದ್ದೂ ಇದೆ. ಇನ್ನು ಸಾಧ್ಯವೇ ಇಲ್ಲವೆಂದು ಅನಿಸಿದಾಗ ‘ಇದು ಎಲ್ಲ ಹೋಗಿದೆ ಭಟ್ರೇ’ ಎಂದು ಹೇಳುವ ಶೇಷಗಿರಿಯವರಲ್ಲಿಗೆ ಹೋಗಿ ಟೈರ್, ಟ್ಯೂಬುಗಳನ್ನು ಬದಲಾಯಿಸಲೇ ಬೇಕಾಗುತ್ತಿತ್ತು. ಒಮ್ಮೆ ಕಾಲೇಜಲ್ಲಿ ಪರೀಕ್ಷೆ ಇದ್ದ ದಿನ ನಡುದಾರಿಯಲ್ಲಿ ಟ್ಯೂಬಿನ ನೆಕ್ ತುಂಡಾಗಿ ಸೈಕಲ್ ಕೈ ಕೊಟ್ಟಿತ್ತು. 2 ಕಿ.ಮೀ ತಳ್ಳಿಕೊಂಡು ಹೋಗಿ ರಿಪೇರಿಗೆ ಕೊಟ್ಟು ಕಾಲೇಜು ಮುಟ್ಟುವಾಗ ಅರ್ಧ ಗಂಟೆ ತಡವಾಗಿತ್ತು. ಚೈನ್ ಸಡಿಲಗೊಂಡು ಕೇಸಿಗೆ ತಾಗಿ ಕಟ ಕಟ ಸದ್ದು ಬರತೊಡಗುವುದು, ಪೆಡಲ್ ಶಾಫ್ಟಿನ ಕ್ವಾರ್ಟರ್ ಪಿನ್ ಸಡಿಲಗೊಡು ಪ್ಲೇ ಕಾಣಿಸಿಕೊಳ್ಳುವುದು,  ಕ್ಯಾರಿಯರಿನ ಕಾಲು ತುಂಡಾಗುವುದು ಮುಂತಾದ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತವೇ ಇದ್ದವು.

ನೀರು ತಾಗಿದರೆ ಸೈಕಲ್ ತುಕ್ಕು ಹಿಡಿದು ಹಾಳಾಗುತ್ತದೆಂದು ಯಾರೋ ಹೇಳಿದ್ದರಿಂದ ಮೊದಲ ಮಳೆಗಾಲದಲ್ಲಿ ಚಕ್ರಗಳಿಗೆ ಮತ್ತು ಹ್ಯಾಂಡಲ್ ಬಾರಿಗೆ  ಗ್ರೀಸ್ ಬಳಿದು ಸೈಕಲನ್ನು ಒಳಗಿಟ್ಟಿದ್ದೆ. ಆದರೆ ಈ ಭೀತಿ ನಿರಾಧಾರ ಎಂದು ಅರಿವಾಗಿ ಮುಂದಿನ ಮಳೆಗಾಲಗಳಲ್ಲಿ ಕೆಲವೊಮ್ಮೆ ಒಂದು ಕೈಯಲ್ಲಿ ಕೊಡೆ ಹಿಡಿದು, ಕೆಲವೊಮ್ಮೆ ರೇನ್‌ಕೋಟ್  ಧರಿಸಿ, ಮಳೆ ತುಂಬಾ ಜಾಸ್ತಿ ಇದ್ದರೆ ಎರಡನ್ನೂ ಬಳಸಿ  ಸೈಕಲ್ ಸವಾರಿ ಮುಂದುವರೆಸಿದೆ.

ಅಂತೂ ಕಾಲೇಜಿಗೆ ಹೋಗಿ ಬರಲು ದಿನಕ್ಕೆ ಸರಾಸರಿ 20 ಕಿ.ಮೀ ಸವಾರಿ ಮಾಡುತ್ತಾ ಮಾಡುತ್ತಾ ಸಾಕಷ್ಟು ಪರಿಣಿತಿ ಗಳಿಸಿದೆ.  ಎಂಥ ಏರುಗಳಲ್ಲೂ ಇಳಿದು ತಳ್ಳದೆ ಪೆಡಲ್ ಮಾಡಿಯೇ ಸಾಗುತ್ತಿದ್ದೆ. ಕೆಲವು ಕಡಿದಾದ ಏರುಗಳಲ್ಲಿ ಪೆಡಲ್ ಮೇಲೆ ನಿಂತು ದೇಹದ ಭಾರವನ್ನೂ ಸದುಪಯೋಗ ಮಾಡಿಕೊಳ್ಳಬೇಕಾಗುತ್ತಿತ್ತು. ನಿಂತಲ್ಲೇ ನಿಲ್ಲುವುದು, ಪೆಡಲ್ ಮೇಲೆ ಕಾಲಿಡದೆ ನೆಲದಿಂದ ಹಾರಿ ನೇರವಾಗಿ ಸೀಟ್ ಮೇಲೆ ಕುಳಿತುಕೊಳ್ಳುವುದು, ಎರಡೂ ಕೈ ಬಿಟ್ಟು ಓಡಿಸುವುದು ಮುಂತಾದ ಸ್ಟಂಟ್‌ಗಳನ್ನೂ ಕಲಿತೆ.  ಸೋಮಂತಡ್ಕದ ನಂತರ ಸೀಟು ಎಂಬಲ್ಲಿ ಎರಡೂ ಕೈ ಬಿಟ್ಟರೆ  ಮುಂದಿನ ಹದವಾದ ಇಳಿಜಾರು ರಸ್ತೆಯಲ್ಲಿ ಸಾಗುತ್ತಾ ನಿಡಿಗಲ್ ಸೇತುವೆ ದಾಟಿದ ನಂತರವೇ ಮತ್ತೆ ಹ್ಯಾಂಡಲ್ ಹಿಡಿಯುತ್ತಿದ್ದುದು.

ಒಂದು ದಿನ ಕಾಲೇಜಿಂದ ಹಿಂತಿರುಗುತ್ತಾ ಸೋಮಂತಡ್ಕದ ಕಡಿದಾದ ಇಳಿಜಾರಲ್ಲಿ ಹೀಗೆ ಎರಡೂ ಕೈಗಳನ್ನು ಬಿಟ್ಟುಕೊಂಡು ವೇಗವಾಗಿ ಬರುತ್ತಿದ್ದೆ.  ಬಹುಶಃ ರಾಂಗ್ ಸೈಡಲ್ಲೂ ಇದ್ದೆ ಅನ್ನಿಸುತ್ತದೆ. ಇಳಿಜಾರಿನ ಕೊನೆಯಲ್ಲಿರುವ ತಿರುವಿನಲ್ಲಿ  ಒಮ್ಮೆಗೇ ಎದುರಿಂದ ಅಂಬಾಸಿಡರ್ ಕಾರೊಂದು ಪ್ರತ್ಯಕ್ಷವಾಯಿತು.  ತಕ್ಷಣ ಎರಡೂ ಬ್ರೇಕುಗಳನ್ನು ಹೇಗೆ ಒತ್ತಿದೆ ಎಂದು ಗೊತ್ತಿಲ್ಲ.  ಕಾರಿನವನೂ ಇದ್ದ ಶಕ್ತಿಯೆಲ್ಲ ಬಳಸಿ ಬ್ರೇಕ್ ಹಾಕಿದ್ದರಿಂದ ಅವಘಡವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿತು.  ಸಾವರಿಸಿಕೊಂಡ ಕಾರಿನವನು ಬೈಯಲು ಬಾಯಿ ತೆರೆಯುವಷ್ಟರಲ್ಲಿ ನಾನು ಕಾಣದಂತೆ ಮಂಗಮಾಯವಾಗಿದ್ದೆ!

ಒಂದು ಸಲ ಅಡ್ಡ ಹಾಯುತ್ತಿದ್ದ ಹಾವಿನ ಮೇಲೂ ಸೈಕಲ್ ಹರಿಸಿದ್ದುಂಟು! ಬಹುಶಃ ಅದು ಕೇರೆ ಹಾವಿರಬೇಕು.  ಆದರೂ ಎಲ್ಲಿ ಓಡಿಸಿಕೊಂಡು ಬರುತ್ತದೋ ಎಂಬ ಭಯದಿಂದ ಏನಾಯಿತೆಂದು ಹಿಂತಿರುಗಿಯೂ ನೋಡದೆ ಸ್ವಲ್ಪ ದೂರ ಎರಡೂ ಕಾಲುಗಳನ್ನು ಮೇಲೆತ್ತಿ ಹಿಡಿದು ಸಾಗಿ ಆ ಮೇಲೆ ವೇಗವಾಗಿ ಪೆಡಲ್ ಮಾಡುತ್ತಾ ಮನೆ ಮುಟ್ಟಿದ ಮೇಲೆಯೇ ನಿಟ್ಟುಸಿರು ಬಿಟ್ಟದ್ದು.

ನಮ್ಮ ಸೈಕಲಿಗೆ ಡೈನಮೋ ಇದ್ದರೂ ರಾತ್ರಿ ಸವಾರಿಯ ಸಂದರ್ಭವೇ ಇರದ್ದರಿಂದ ಅದರ ಬೆಳಕಿನಲ್ಲಿ  ಓಡಿಸುವ ಅನುಭವ ಹೊಂದಲಾಗಿರಲಿಲ್ಲ.  ಆ ವರ್ಷದ ಕಾಲೇಜು ಡೇ ದಿನ ಇದಕ್ಕೆ ಮುಹೂರ್ತ ಒದಗಿ ಬಂತು.  ರಾತ್ರೆ ಕಾರ್ಯಕ್ರಮಗಳೆಲ್ಲ ಮುಗಿದು ಸೈಕಲ್ ಹೊರಡಿಸಿ ಡೈನಮೋ ಗುಂಡಿ ಅದುಮಿದರೆ ಯಾಕೋ ಲೈಟ್ ಹೊತ್ತಲೇ ಇಲ್ಲ.  ನೋಡಿದರೆ ಯಾರೋ ಕಿಡಿಗೇಡಿಗಳು ಬಲ್ಬ್ ಹಾರಿಸಿ ರಾತ್ರಿಯ ತಂಪಾದ ವಾತಾವರಣದಲ್ಲಿ  ಡೈನಮೋ ಬೆಳಕಿನಲ್ಲಿ ಪೆಡಲ್ ಮಾಡುತ್ತಾ ಸಾಗುವ ನನ್ನ ಕನಸಿಗೆ ತಣ್ಣೀರೆರಚಿದ್ದರು. ಬೆಳದಿಂಗಳ ಬೆಳಕಿನಲ್ಲಿ ಹೇಗೋ ಮನೆ ಸೇರಿದೆನೆನ್ನಿ.

ಪಂಚಾಯತ್‌ನಿಂದ ಸೈಕಲಿಗೆ ಬ್ಯಾಡ್ಜ್  ಮಾಡಿಸಿಕೊಳ್ಳಬೇಕೆಂಬ  ನಿಯಮವಿತ್ತು.  ತಪಾಸಣೆ, ದಂಡದಂಥ ಕಠಿಣ ಕ್ರಮಗಳು ಇಲ್ಲದಿದ್ದರೂ ನಾನು ಬ್ಯಾಡ್ಜ್  ಮಾಡಿಸಿ  ಚಕ್ರದ ಕಡ್ಡಿಗೆ ಅಳವಡಿಸಿಕೊಂಡಿದ್ದೆ.
 
ಡಿಗ್ರಿ ಮುಗಿದ ನಂತರದ  ಸುಮಾರು ಒಂದು ವರ್ಷ ಉದ್ಯೋಗ ಬೇಟೆ ನಡೆಸುತ್ತಾ ಮನೆಯಲ್ಲೇ ಇದ್ದ ಸಮಯದಲ್ಲೂ ಸೈಕಲ್ ಬಳಸದ, ಅದರ ಸೇವೆ ಮಾಡದ ಒಂದು ದಿನವೂ ಇರಲಾರದು.  ಆ ವರ್ಷದ ದಿನಚರಿಯ ಪುಟಗಳಲ್ಲೆಲ್ಲ  ಒಂದಲ್ಲ ಒಂದು ಕಾರಣಕ್ಕೆ ಸೈಕಲ್ ವ್ಯಾಪಿಸಿಕೊಂಡಿದೆ   1973ರಲ್ಲಿ ನೌಕರಿಗಾಗಿ ಊರು ಬಿಡುವ ವರೆಗೂ  ನನ್ನ ನೆಚ್ಚಿನ ಸಂಗಾತಿಯಾಗಿ ಮುಂದುವರಿದ ಆ ಸೈಕಲ್  ನಂತರವೂ ಅನೇಕ ವರ್ಷ ಅಣ್ಣನ ಮಕ್ಕಳಿಗೆ ಸಾರ್ಥಕ ಸೇವೆ ಸಲ್ಲಿಸಿತು.

Monday, 23 May 2022

ಬದಲಾಗುವ ಸಿನಿಮಾಗಳು ಮತ್ತು ಹಾಡುಗಳು

 


ನವಿಲುಗರಿಯೊಂದನ್ನು ಪುಸ್ತಕದ ಎಡೆಯಲ್ಲಿಟ್ಟರೆ ಸ್ವಲ್ಪ ಸಮಯದ ನಂತರ ಅದು ಮರಿ ಹಾಕುತ್ತದೆ ಎಂಬ ನಂಬಿಕೆ ನಮ್ಮ ಶಾಲಾ ದಿನಗಳಲ್ಲಿತ್ತು. ಅದೇ ರೀತಿ ಸಿನಿಮಾಗಳನ್ನು ಕೆಲ ಕಾಲ ಹಾಗೆಯೇ ಇಟ್ಟರೆ ಅವುಗಳಲ್ಲೂ ಬದಲಾವಣೆ ಆಗುತ್ತದೆಯೇ?

ಈ ಅನುಮಾನ ಮೂಡಲು ಕಾರಣ ಇದೆ. 1973ರಲ್ಲಿ ದೂರವಾಣಿ ಇಲಾಖೆಯ ಎರಡು ತಿಂಗಳ ತರಬೇತಿಯನ್ನು ಬೆಂಗಳೂರಲ್ಲಿ ಮುಗಿಸಿ ಮಂಗಳೂರಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೆ. ಬೆಂಗಳೂರಲ್ಲಿದ್ದಾಗಲೇ ರಾಜಕುಮಾರ್, ಭಾರತಿ, ರಾಜೇಶ್, ಕಲ್ಪನಾ ಅಭಿನಯದ ಬಿಡುಗಡೆ ಮಲ್ಟಿಸ್ಟಾರರ್ ವರ್ಣಚಿತ್ರದ ಹೋರ್ಡಿಂಗ್‌ಗಳು ರಾರಾಜಿಸತೊಡಗಿದ್ದವು. ತರಬೇತಿಯಿಂದ ನಮ್ಮ ಬಿಡುಗಡೆ ಆಗುವಾಗ ಬಿಡುಗಡೆಯೂ ಬಿಡುಗಡೆ ಆಗುತ್ತದೆ ಎಂದು ನಾವು ಮಾತಾಡಿಕೊಳ್ಳುತ್ತಿದ್ದೆವು. ಇಷ್ಟೇ ಅಲ್ಲದೆ ನನ್ನ ಸ್ವಂತ ಗಳಿಕೆಯಿಂದ ನೋಡಿದ ಮೊದಲ ಕನ್ನಡ ಚಿತ್ರ ಎಂಬ ನೆಲೆಯಲ್ಲಿ ಕೂಡ 1973 ಎಪ್ರಿಲ್ 22ರಂದು ಅಮೃತ್ ಟಾಕೀಸಿನಲ್ಲಿ ಈ ಸಿನಿಮಾ ನೋಡಿದ್ದು ನನ್ನ ನೆನಪಿನಲ್ಲಿ ಶಾಶ್ವತವಾಗಿ ದಾಖಲಾಗಿದೆ.

ಬಿಡುಗಡೆ ಚಿತ್ರದ ನಾಯಕನು ಗಲ್ಲು ಶಿಕ್ಷೆ ಇರಲೇ ಬಾರದೆಂದು ಹೋರಾಡುವ ಮನೋಭಾವದವನಾಗಿದ್ದು ಸುಳ್ಳು ಸಾಕ್ಷಿಗಳು ನಿರಪರಾಧಿಗಳನ್ನು ಅಪರಾಧಿಗಳೆಂದು ಬಿಂಬಿಸಲು ಸಾಧ್ಯ ಎಂದು ನಿರೂಪಿಸಲು ತನ್ನ ಮಿತ್ರನೊಡಗೂಡಿ ತಾನೇ ಅಪರಾಧ ಮಾಡಿದಂತೆ ಒಂದು ನಾಟಕ ಹೂಡುತ್ತಾನೆ. ಸಂಯೋಗವಶಾತ್ ಆತನ ತಂದೆಯೇ ತಾನು ಮಾಡದ ಕೊಲೆಯೊಂದರ ಆರೋಪ ಹೊತ್ತು ಗಲ್ಲಿಗೇರುವ ಪ್ರಸಂಗ ಬರುತ್ತದೆ. ನಾಯಕ ಬಹಳ ಕಷ್ಟ ಪಟ್ಟು ನಿಜವಾದ ಕೊಲೆಗಾರನ ಪತ್ತೆ ಮಾಡಿ ಪುರಾವೆ ತರುವಷ್ಟರಲ್ಲಿ ತಂದೆಯನ್ನು ಗಲ್ಲಿಗೇರಿಸಿ ಆಗಿರುತ್ತದೆ.

ಸುಮಾರು 50 ವರ್ಷಗಳ ಅಂತರದ ನಂತರ ನಿನ್ನೆ ಅಂತರ್ಜಾಲದಲ್ಲಿ ಆ ಸಿನಿಮಾ ಮತ್ತೆ ನೋಡಿದೆ. ಈಗ ಅದರ ಅಂತ್ಯ ಬದಲಾಗಿದ್ದು ನಾಯಕ ಪುರಾವೆ ತರುವಾಗ ಗಲ್ಲಿಗೇರಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿರುತ್ತದಷ್ಟೇ. ಹಾಗಾಗಿ ತಂದೆ ಉಳಿಯುತ್ತಾನೆ.

ಚಿತ್ರದ ಅಂತ್ಯದಲ್ಲಿ ನಾಯಕನ ತಂದೆಯನ್ನು ಗಲ್ಲಿಗೇರಿಸಿದ್ದು ಸರಿಯೇ ಎಂಬ ಚರ್ಚೆ ಅಂದಿನ ಪತ್ರಿಕೆಗಳಲ್ಲಿ ನಡೆದಿತ್ತು. ಇದರ ಪರಿಣಾಮವಾಗಿ ಆ ಮೇಲೆ ಈ ರೀತಿ ಬದಲಾವಣೆ ಮಾಡಿದರೋ ಏನೋ.

ಅಂದು ಥಿಯೇಟರಲ್ಲಿ ಆ ಸಿನಿಮಾ ನೋಡಿದಾಗ ಅದು ನಿರೀಕ್ಷೆಯ ಮಟ್ಟಕ್ಕಿರದೆ ನಿರಾಸೆಯಾಗಿತ್ತು. ನನ್ನ ಪುಟ್ಟ ಸಂಸಾರ ಎಂಬ ಹಾಡೊಂದು ಬಿಟ್ಟರೆ ಎಂ. ರಂಗರಾವ್ ಅವರ ಸಂಗೀತವೂ ಅಷ್ಟಕ್ಕಷ್ಟೇ ಎಂದನ್ನಿಸಿತ್ತು. ಈಗ ಇಷ್ಟೊಂದು ವರ್ಷಗಳ ನಂತರ ಅದನ್ನು ಅಂತರ್ಜಾಲದಲ್ಲಿ ನೋಡಿದಾಗ ಆ ಅಭಿಪ್ರಾಯ ಹೆಚ್ಚೇನೂ ಬದಲಾಗದೆ ಚಿತ್ರಕಥೆ ಜಾಳುಜಾಳಾಗಿರುವುದು, ಕಥೆಗೆ ಸಂಬಂಧವಿಲ್ಲದಿದ್ದರೂ ನರಸಿಂಹರಾಜು ಮತ್ತು ಬಾಲಣ್ಣನ ಪಾತ್ರಗಳನ್ನು ತುರುಕಿರುವುದು ಮುಂತಾದ ಅಂಶಗಳೂ ಗಮನಕ್ಕೆ ಬಂದವು. ಆದರೆ ದಾರ್ಜಿಲಿಂಗ್‌ನ ಪ್ರಕೃತಿ ಸಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಪರಿ ಮೆಚ್ಚಿಕೆಯಾಯಿತು. ಅಣ್ಣಯ್ಯ ಅವರಿಗೆ ಈ ಚಿತ್ರಕ್ಕಾಗಿ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯೂ ದೊರಕಿತ್ತಂತೆ. ರಂಗರಾಯರ ಹಿನ್ನೆಲೆ ಸಂಗೀತವೂ ಮಾಮೂಲಿ ಜಾಡಿಗೆ ಹೊರತಾಗಿರುವುದು ಗಮನ ಸೆಳೆಯಿತು.

1946ರ The Man Who Dared ಮತ್ತು 1956ರ Beyond a Reasonable Doubt ಎಂಬ ಎರಡು ಅಮೇರಿಕನ್ ಸಿನಿಮಾಗಳು ಈ ಚಿತ್ರದ ಕಥೆಗೆ ಪ್ರೇರಕವಂತೆ. ತೆಲುಗಿನಲ್ಲಿ ಅಭಿಲಾಷಾ ಮತ್ತು ತಮಿಳಿನಲ್ಲಿ ಸಟ್ಟತ್ತೈ ತಿರುತುಂಗಳ್ ಇದೇ ಕಥಾಸೂತ್ರ ಹೊಂದಿದ್ದವು ಅನ್ನಲಾಗಿದೆ.
 
ಇದೇ ರೀತಿ ಚಿತ್ರ ಬಿಡುಗಡೆ ಆದ ಮೇಲೆ ಬದಲಾವಣೆ ಆದ ಅನೇಕ ಉದಾಹರಣೆಗಳಿವೆ. ಯಾದೋಂ ಕೀ ಬಾರಾತ್ ಚಿತ್ರ ಥಿಯೇಟರುಗಳಲ್ಲಿ ಅನೇಕ ವಾರ ಓಡಿದ ಮೇಲೆ ಅದಕ್ಕೆ ಮೇರಿ ಸೋನಿ ಮೇರಿ ತಮನ್ನಾ ಹಾಡನ್ನು ಸೇರ್ಪಡೆಗೊಳಿಸಲಾಗಿತ್ತು.  ಶೋಲೆ ಚಿತ್ರದ ಮೂಲ ಕ್ಲೈಮಾಕ್ಸ್‌ನಲ್ಲಿ ಕೈಗಳನ್ನು ಕಳೆದುಕೊಂಡ ಠಾಕುರ್ ಗಬ್ಬರ್‌ಸಿಂಗನನ್ನು ಕಾಲಿನಿಂದ ತುಳಿದು ಸಾಯಿಸುವ ದೃಶ್ಯ ಇತ್ತು.  ಆದರೆ ಇದು ಅತಿಯಾದ ಕ್ರೌರ್ಯ ಆಗುತ್ತದೆ ಎಂದು ಸೆನ್ಸಾರ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೊನೆಯಲ್ಲಿ ಪೋಲಿಸರು ಬಂದು ಗಬ್ಬರ್‌ಸಿಂಗನನ್ನು ಕೊಂಡೊಯ್ದ  ಕ್ಲೈಮಾಕ್ಸನ್ನು ನಾವು ಥಿಯೇಟರಿನಲ್ಲಿ ನೋಡಿದೆವು.  ರಾಜ್‌ಕಪೂರನ ಸಂಗಂ ಮತ್ತು ಮೇರಾ ನಾಮ್ ಜೋಕರ್ ಮೊದಲ ಸಲ ಥಿಯೇಟರುಗಳಲ್ಲಿ ಬಿಡುಗಡೆ ಆಗಿದ್ದಾಗ 4 ತಾಸುಗಳಿಗೂ ಹೆಚ್ಚಿನ ಕಾಲಾವಧಿಯವಾಗಿದ್ದು ಎರಡೆರಡು ಇಂಟರ್ವಲ್ ಹೊಂದಿದ್ದವು.  ಅವು ಥಿಯೇಟರುಗಳಲ್ಲಿ ಮತ್ತೆ ಮರುಬಿಡುಗಡೆಯಾದಾಗ ಅನೇಕ ದೃಶ್ಯಗಳನ್ನು ಕತ್ತರಿಸುವ ಮೂಲಕ ಕಮ್ಮಿ ಅವಧಿಯವಾಗಿದ್ದು  ಒಂದೇ ಇಂಟರ್ವಲ್ ಹೊಂದಿದ್ದವು. ಆಂಖೇಂ,  ಪಿಂಕ್, ಬಾಜೀಗರ್, ಪೀಕೇ, ರೋಕೀ, ಟೈಟಾನಿಕ್ ಮುಂತಾದ ಚಿತ್ರಗಳು ಕೂಡ ಮೂಲದಲ್ಲಿ ಬೇರೆಯೇ ಕ್ಲೈಮಾಕ್ಸ್ ಹೊಂದಿದ್ದವಂತೆ
 
ಸಿನಿಮಾ ಹಾಡುಗಳಲ್ಲಿ ಗ್ರಾಮೊಫೋನ್ ರೆಕಾರ್ಡಿನಲ್ಲಿರುವುದಕ್ಕಿಂತ ಹೆಚ್ಚಿನ ಚರಣಗಳು ಇರುವುದು ಸಾಮಾನ್ಯ. ಆದರೆ ಧ್ವನಿಮುದ್ರಣಗೊಂಡು ಗ್ರಾಮೊಫೋನ್ ರೆಕಾರ್ಡ್ ಬಿಡುಗಡೆ ಆಗಿ ಜನಪ್ರಿಯವಾದ ಮುಕೇಶ್ ಹಾಡೊಂದು ಸೆನ್ಸಾರ್ ಆಕ್ಷೇಪಣೆಗೊಳಗಾಗಿ ಬದಲಾಗಬೇಕಾಗಿ ಬಂದ ಸ್ವಾರಸ್ಯಕರ ಘಟನೆಯೂ ನಡೆದಿದೆ. ರಾಜ್‌ಕಪೂರ್ ನಟಿಸಿದ ಛಲಿಯಾ ಚಿತ್ರದ ಛಲಿಯಾ ಮೇರಾ ನಾಮ್ ಛಲ್‌ನಾ ಮೇರಾ ಕಾಮ್ ಎಂಬ ಹಾಡನ್ನು ರೇಡಿಯೋದಲ್ಲಿ ಕೇಳಿದ್ದು ಅನೇಕರಿಗೆ ನೆನಪಿರಬಹುದು. ಆದರೆ ಈಗ ಅಂತರ್ಜಾಲದಲ್ಲಿ ಲಭ್ಯವಿರುವ ಛಲಿಯಾ ಚಿತ್ರದಲ್ಲಿ ಕೇಳಲು ಸಿಗುವ ಆ ಹಾಡಿನಲ್ಲಿ  ಛಲ್‌ನಾ ಮೇರಾ ಕಾಮ್ ಭಾಗ ಇಲ್ಲ.  ಅದರ ಬದಲು ಛಲಿಯಾ ಮೇರಾ ನಾಮ್  ಎಂದು ಎರಡು ಸಲ ಇದೆ. 
 
ಈ ಬಗ್ಗೆ ಅಮೀನ್ ಸಯಾನಿ ಹೇಳಿದ್ದನ್ನು ಇಲ್ಲಿ ಕೇಳಿ.



ಹೇಗೂ ಪುನಃ ರೆಕಾರ್ಡ್ ಮಾಡಲಿಕ್ಕಿದೆಯಲ್ಲ ಎಂದು  ಈ ಹಾಡನ್ನು ಬರೆದ ಕಮರ್ ಜಲಾಲಾಬಾದಿ ಎಂಬ ಕಾವ್ಯನಾಮದ  ಓಂ ಪ್ರಕಾಶ್ ಭಂಡಾರಿ ಅವರು ಛಲನಾ ಮೇರಾ ಕಾಮ್ ಎಂಬುದನ್ನು ಕಿತ್ತು ಹಾಕುವುದರ ಜೊತೆಗೆ ಹಮ್ ತೊ ಖಾಲಿ ಮಾಲ್ ಕೆ ರಸಿಯಾ ಇದ್ದುದನ್ನು ಹಮ್ ತೊ ಖಾಲಿ ಬಾತ್ ಕೆ ರಸಿಯಾ ಎಂದು, ಜಹಾಂ ಭೀ ದೆಖಾ ದಾಮ್ ವಹೀಂ ನಿಕಾಲಾ ಕಾಮ್ ಇದ್ದುದನ್ನು ಜಹಾಂ ಭೀ ದೇಖಾ ಕಾಮ್ ಕರ್ತಾ ವಹೀಂ ಸಲಾಮ್ ಎಂದು, ಮೈ ಹೂಂ ಗಲಿಯೊಂ ಕಾ ಶಹಜಾದಾ ಜೋ ಚಾಹೂಂ ವೊ ಲೇಲೂಂ ಇದ್ದುದನ್ನು ಮೈ ಹೂಂ ಗರೀಬೋಂ ಕಾ ಶಹಜಾದಾ ಜೋ ಮಾಂಗೋ ವೊ ದೇ ದೂಂ ಎಂದು, ಮೈ ಕೈಂಚಿಸೆ(ಕತ್ತರಿ) ಖೇಲೂಂ ಇದ್ದುದನ್ನು ಮೈ ಅಶ್ಕೋಂಸೆ(ಕಣ್ಣೀರು) ಖೇಲೂಂ ಎಂದು ಬದಲಾಯಿಸಿದರು. 

ಗ್ರಾಮೊಫೋನ್ ವರ್ಶನ್ ಮತ್ತು ಸಿನಿಮಾ ವರ್ಶನ್ ಎರಡನ್ನೂ ಇಲ್ಲಿ ಆಲಿಸಬಹುದು.  




ನಾನು ಉಜಿರೆ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗ ಪಕ್ಕದ ಬೆಳ್ತಂಗಡಿಯಲ್ಲಿ ನಡೆದ ಜೋನಲ್ ಸ್ಪೋರ್ಟ್ಸ್ ನೋಡಲು ನಮಗೆ ಅನುಮತಿ ಕೊಟ್ಟಿದ್ದರು. ಅಲ್ಲಿ ಸೋಡಾ ನಾರಾಯಣರ  ಭಾರತ್ ಸೌಂಡ್ ಸಿಸ್ಟಂ ಅಳವಡಿಸಲಾಗಿದ್ದು ಅನೌಂಸ್‌ಮೆಂಟುಗಳು ಇಲ್ಲದ ಸಮಯದಲ್ಲಿ  ಛಲಿಯಾ ಮೇರಾ ನಾಮ್ ಹಾಡನ್ನು ಪದೇ ಪದೇ ಹಾಕುತ್ತಿದ್ದರು. ಹಾಡಿನ ಮಧ್ಯದಲ್ಲಿ ಸಣ್ಣ pause ಆದ ಮೇಲೆ ಬರುವ ಠಕ್ ಠಕ್ ಎಂಬ ಸದ್ದಿನ ಕಾರಣದಿಂದ  ಈ ಹಾಡು ಮತ್ತು ಬೆಳ್ತಂಗಡಿಯ ಜೋನಲ್ ಸ್ಪೋರ್ಟ್ಸ್ ಒಂದರೊದನೆ ಒಂದು ಸೇರಿಕೊಂಡು  ನನ್ನ ಮನದಲ್ಲಿ ಶಾಶ್ವತವಾಗಿ ರೆಕಾರ್ಡ್ ಆಗಿಬಿಟ್ಟಿವೆ.  ಮಕ್ಕಳ ರಾಜ್ಯ ಪ್ರೇಮದ ರಾಜ್ಯ ಸೌಖ್ಯವು ತುಂಬಿದ ರಾಮ ರಾಜ್ಯ ಕೂಡ ಅಲ್ಲಿ ಪದೇ ಪದೇ ಕೇಳಿಸುತ್ತಿದ್ದ ಹಾಡು.


Monday, 9 May 2022

ಹುಟ್ಟಲಿರುವ ಮಗುವಿಗಾಗಿ ಹುಟ್ಟಿದ ಹಾಡೊಂದ ಹಾಡುವೆ


ಪಲ್ಲವಿ, ಎರಡೋ ಮೂರೋ ಚರಣಗಳುಳ್ಳ ಸಾವಿರಾರು ಸಿನಿಮಾ ಹಾಡುಗಳಂತೆ ಇದೂ ಒಂದು. ಇದು ಕಥನ ಗೀತೆಯೇನೂ ಅಲ್ಲ.  ಆದರೆ ಒಂದೊಂದೇ  ಸಾಲಿನ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತಾ ಅರ್ಥೈಸಲು ಪ್ರಯತ್ನಿಸಿದರೆ ನಾಂದಿ ಸಿನಿಮಾದ ಇಡೀ ಕಥೆಯೇ ತೆರೆದುಕೊಳ್ಳುವುದು ಇದರ ವಿಶೇಷ.  ಆರ್.ಎನ್. ಜಯಗೋಪಾಲ್ ಬರೆದ ಹಾಡಿನ ಸಾಹಿತ್ಯದ ಮೇಲೊಮ್ಮೆ ಕಣ್ಣು ಹಾಯಿಸಿ.

ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ

ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರಾ ಭೋಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ

ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ
ಆ ಸುಖದೆ ನಾ ಮರೆವೆ ಈ ಬಾಳ ಚಿಂತೆ
ಅದ ಕೇಳೊ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆಯಲ್ಲ

ಇದು ನಾವು ಸಾವಿರಾರು ಬಾರಿ ಕೇಳಿರುವ,  ಈಗಲೂ ಕೇಳಿ ಆನಂದಿಸುತ್ತಿರುವ ಮೇಲ್ನೋಟಕ್ಕೆ ಸಾಮಾನ್ಯ ಜೋಗುಳವೆನ್ನಿಸಬಹುದಾದ ನಾಂದಿ ಚಿತ್ರದ ಹಾಡು.  ಆದರೆ ಇದರ ಮಾಧುರ್ಯದತ್ತ ನಮ್ಮ ಗಮನ ಕೇಂದ್ರೀಕೃತವಾಗುತ್ತದೆಯೇ ಹೊರತು ಸಾಹಿತ್ಯದ ಸಾಲುಗಳು ಮನದಾಳಕ್ಕೆ ಇಳಿಯುವುದು ಕಮ್ಮಿ.

ಈಗ ನಾಂದಿ ಚಿತ್ರದ ಕಥೆಯನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸೋಣ.  ಚಿತ್ರದ ನಾಯಕ ಓರ್ವ ಅಧ್ಯಾಪಕ.  ಆತನ ಮಡದಿ ಚೊಚ್ಚಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮವಿತ್ತು ಅಸು ನೀಗುತ್ತಾಳೆ. ಆತ ನೆರೆಹೊರೆಯವರ ಸಹಾಯದಿಂದ ಕಷ್ಟಪಟ್ಟು ಮಗುವನ್ನು ಸಾಕತೊಡಗುತ್ತಾನೆ. ದುರದೃಷ್ಟವಶಾತ್ ಅದು ಶ್ರವಣ ದೋಷದಿಂದ ಬಳಲುತ್ತಿದ್ದು ತತ್ಪರಿಣಾಮವಾಗಿ ಮಾತೂ ಬರುವುದಿಲ್ಲ.  ಹೆಚ್ಚು ದಿನ ನೆರೆಹೊರೆಯವರಿಗೆ ಹೊರೆಯಾಗಲಿಚ್ಛಿಸದೆ ಆ ಮಗುವಿನ ಯೋಗಕ್ಷೇಮಕ್ಕಾಗಿ ಆತ ಇನ್ನೊಮ್ಮೆ ಮದುವೆಯಾಗಬಯಸುತ್ತಾನೆ. ಎರಡನೇ ಮದುವೆ, ವಾಕ್ ಶ್ರವಣ ದೋಷವುಳ್ಳ ಮಗು ಬೇರೆ.  ಯಾರು ಹೆಣ್ಣು ಕೊಡುತ್ತಾರೆ.  ಹಿಂದೊಮ್ಮೆ ಇಂಥದೇ ದೋಷವುಳ್ಳ ಕನ್ಯೆಯೊಬ್ಬಳ ಮಾತಾಪಿತರು ನಿಜ ಸ್ಥಿತಿ ಅರಿತೂ ತಮ್ಮ ಮಗಳನ್ನು ಮದುವೆಯಾಗಬಯಸುವಂಥವರು ಯಾರಾದರೂ ಇದ್ದರೆ ತಿಳಿಸಿ ಎಂದು ಹೇಳಿದ್ದು ಆತನಿಗೆ ನೆನಪಾಗುತ್ತದೆ.  ತಾನೇ ಯಾಕೆ ಆಕೆಯನ್ನು ಮದುವೆಯಾಗಬಾರದು ಎಂದು ಯೋಚಿಸಿ ವಿಷಯ ಪ್ರಸ್ತಾಪಿಸಿದಾಗ ಅವರು ಸಂತೋಷದಿಂದ ಒಪ್ಪುತ್ತಾರೆ.  ಸುಗುಣವತಿಯಾದ ಆಕೆಯೊಡನೆ ಇವನ ವಿವಾಹವಾಗುತ್ತದೆ.  ಮಲಮಗುವನ್ನು ಆಕೆ ತನ್ನದೆಂದೇ ಭಾವಿಸಿ ಸಲಹುತ್ತಾಳೆ. ಸಂಸ್ಥೆಯೊಂದರ ಸಹಾಯದಿಂದ ಆತ ಮನೆಯಲ್ಲೇ ಮಡದಿ ಮತ್ತು ಮಗುವಿಗೆ ಮಾತನಾಡಲು ಕಲಿಸುವುದರಲ್ಲಿ ಸಫಲನಾಗುತ್ತಾನೆ. ಇದರ ಉಪಯೋಗ ಇಂಥ ಸಮಸ್ಯೆಯಿಂದ ಬಳಲುವ ಇತರರಿಗೂ ಸಿಗಬೇಕು ಎಂಬ ಉದ್ದೇಶದಿಂದ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ತಾನೇ ಕಿವುಡು ಮೂಕ ಮಕ್ಕಳ ಶಾಲೆಯೊಂದನ್ನು ನಡೆಸತೊಡಗುತ್ತಾನೆ. ಹೀಗಿರುತ್ತ ಒಂದು ದಿನ ಮನೆಯಲ್ಲಿ ಬೇರಾರೂ ಇಲ್ಲದಿರುವಾಗ ಅಗ್ನಿ ಆಕಸ್ಮಿಕಕ್ಕೆ ಒಳಗಾದ ಮಗು ಎಷ್ಟು ಕಿರುಚಿಕೊಂಡರೂ ಕಿವುಡಿಯಾದ ತಾಯಿಗೆ ಕೇಳಿಸದಿರುವುದರಿಂದ ಅದನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಆದರೆ ಸಮಯವು ಎಂಥ ಗಾಯಕ್ಕೂ ಮುಲಾಮು ಹಚ್ಚುತ್ತದೆ. ಕೆಲ ಕಾಲ ನಂತರ ಆಕೆಯೂ ಗರ್ಭಿಣಿಯಾಗುತ್ತಾಳೆ. ಆತನಿಗೆ ಆಗ ಮೊದಲ ಪತ್ನಿಯ ಸೀಮಂತ ನಡೆದದ್ದು, ಹೆಂಗಳೆಯರು ಹಾಡು ಹಾಡಿದ್ದು, ‘ಹುಟ್ಟುವ ಮಗುವಿಗೆ ಹೊಟ್ಟೆಯಲ್ಲಿರುವಾಗಲೇ ಸಂಗೀತ ಜ್ಞಾನ ಶಬ್ದ ಜ್ಞಾನ ಬರಲಿ ಎಂದು ಹಿರಿಯರು ಮಾಡಿದ ಸಂಪ್ರದಾಯ ಇದು’ ಎಂದು ಎಂದು ತಾನು ಹೇಳಿದ್ದೆಲ್ಲ ನೆನಪಾಗುತ್ತದೆ. ಈ ಕಿವುಡು ತಾಯಿಗೆ ಹುಟ್ಟುವ ಮಗು ಕೂಡ ಕಿವುಡಾಗಿಯೇ ಹುಟ್ಟೀತೇ ಎಂಬ ಆತಂಕವೂ ಕಾಡತೊಡಗುತ್ತದೆ. ವಿಶ್ರಾಂತಿ ಪಡೆಯುತ್ತಿರುವ ತುಂಬು ಗರ್ಭಿಣಿ ಮಡದಿಯನ್ನು ನೋಡುತ್ತಾ ರಾತ್ರಿಯ ನೀರವತೆಯಲ್ಲಿ ಟಿಕ್ ಟಿಕ್ ಅನ್ನುತ್ತಿರುವ ಗಡಿಯಾರದ ತಾಳಕ್ಕೆ ಸರಿಯಾಗಿ ತಾಯಿಯ ಹೊಟ್ಟೆಯೊಳಗಿರುವ ಮಗುವನ್ನು ಉದ್ದೇಶಿಸಿ ಮೆಲುದನಿಯಲ್ಲಿ ಹಾಡತೊಡಗುತ್ತಾನೆ...

ಈಗ ಹಾಡಿನ ಸಾಹಿತ್ಯ ಇನ್ನೊಮ್ಮೆ ನೋಡಿ.  ಮೊದಲಿನ ಮಡದಿ ಮತ್ತು ಮಗು ಹೋಗಿ ಮನೆ ಬರಿದಾಗಿರುವುದು,  ಅದನ್ನು ಮತ್ತೆ ಬೆಳಗಲು ಈ ಮಗು ಆದಷ್ಟು ಬೇಗ ಬರಲಿ ಎಂಬ ಕಾತರ, ಮೊದಲ ಮಗುವಿನಂತೆ ಈ ಸಲ ಸೀಮಂತ ಆಚರಿಸಲು ಸಾಧ್ಯವಾಗದಿರುವುದು, ಹೊಟ್ಟೆಯಲ್ಲಿರುವಾಗಲೇ  ಸಂಗೀತ ಜ್ಞಾನ, ಶಬ್ದ ಜ್ಞಾನ ಬರಲು ಮಹಿಳೆಯರು ಹಾಡಿ ಹರಸದಿರುವುದು, ಈ ಸಲವೂ ನ್ಯೂನತೆಯುಳ್ಳ ಮಗು ಜನಿಸೀತೇನೋ ಎಂಬ ಆತಂಕದ ನಡುವೆಯೂ ಹಾಗೇನೂ ಆಗದೆ ಸಹಜವಾಗಿದ್ದು ಸವಿಜೇನಿನಂಥ ಮಾತನ್ನಾಡಿ ಚಿಂತೆಗಳನ್ನೆಲ್ಲ ಮರೆಸೀತೆಂಬ  ಆಶಾ ಭಾವ,  ಆದರೆ ಆ ಅಮೃತತುಲ್ಯ ಮಾತುಗಳನ್ನು ಕೇಳುವ ಸೌಭಾಗ್ಯ ಕಿವುಡಿಯಾದ ತಾಯಿಗಿಲ್ಲವಲ್ಲ ಎನ್ನುವ  ವಿಷಾದಗಳನ್ನೊಳಗೊಂಡ ಇಡೀ ಕಥೆಯನ್ನು   ಆರ್.ಎನ್. ಜಯಗೋಪಾಲ್  ಈ ಹತ್ತು ಸಾಲುಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ ಎಂದು ಅನ್ನಿಸುವುದಿಲ್ಲವೇ.

ಮಧ್ಯಮಾವತಿ ರಾಗಕ್ಕೆ ಗ2 ಸೇರಿ ಎಂದರೋ ಮಹಾನುಭಾವುಲು  ಪಂಚರತ್ನ ಕೃತಿಯಲ್ಲಿ ಬಳಸಲಾದ ‘ಪದನಿ’ ಪ್ರಯೋಗ ರಹಿತ ಶ್ರೀ ರಾಗದಂತೆ ಭಾಸವಾಗುವ ಸ್ವರಗಳನ್ನು ಹೊಂದಿರುವ ಈ ಹಾಡಿಗೆ ವಿಜಯಭಾಸ್ಕರ್ ಅವರು ಯಾವ ತಾಳ ವಾದ್ಯವನ್ನೂ ಬಳಸಿಲ್ಲ.  ಗಡಿಯಾರದ ಟಿಕ್ ಟಿಕ್ ಲಯದೊಂದಿಗೇ ಸಾಗುವ ಹಾಡಿಗೆ ವಿರಳವಾದ guitar chords ಬೆಂಬಲ ಇದೆ.  ಮರದ ತುಂಡುಗಳಿಗೆ ಅಳವಡಿಸಿದ ಲೋಹದ ಪಟ್ಟಿಗಳನ್ನು ಚೆಂಡಿನಾಕಾರದ ತಲೆಯುಳ್ಳ ಸಣ್ಣ ಕೋಲುಗಳಿಂದ ನುಡಿಸುವ glockenspiel ಮತ್ತು ಕೊಳಲುಗಳನ್ನು  ಮಾತ್ರ ಮುಖ್ಯ ಹಿನ್ನೆಲೆ ವಾದ್ಯಗಳಾಗಿ ಉಪಯೋಗಿಸಲಾಗಿದೆ. ಹಿತಮಿತವಾಗಿ ವೈಬ್ರೊಫೋನ್  ನುಡಿಸಿರುವುದನ್ನೂ ಗಮನಿಸಬಹುದು. ಉಳಿದದ್ದನ್ನೆಲ್ಲ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯ ಆರ್ದ್ರತೆ  ತುಂಬಿ ಕೊಟ್ಟಿದೆ.


ಜೋಗುಳದ ಹಾಡುಗಳು ನೂರಾರಿವೆ.  ಹುಟ್ಟಲಿರುವ ಮಗುವಿನ ಬಗ್ಗೆ ಇರುವ ಹಾಡುಗಳೂ ಬಹಳ ಇವೆ.  ಆದರೆ ತಾಯಿ ಹೊಟ್ಟೆಯಲ್ಲಿರುವ ಮಗುವನ್ನೇ ಉದ್ದೇಶಿಸಿ ತಂದೆ ಹೇಳುವ ಹಾಡು ಬಹುಶಃ ಇದು ಒಂದೇ.

ಈ ಹಾಡನ್ನು ನಾನು ಮೊದಲು ಕೇಳಿದ್ದು 9ನೇ ತರಗತಿಯಲ್ಲಿರುವಾಗ.  ಅದರ  ‘ಬರಿದಾದ ಮನೆ ಬೆಳಗೆ ನೀನೆಂದು ಬರುವೆ’ ಎಂಬ ಸಾಲು ನನಗೆ ಅರ್ಥವೇ ಆಗುತ್ತಿರಲಿಲ್ಲ.  ಇದು ಇನ್ನು ಹುಟ್ಟಲಿರುವ ಮಗುವಿಗೆ ಹೇಳುತ್ತಿರುವುದು ಎಂಬ ಕಲ್ಪನೆಯೂ ರೇಡಿಯೊದಲ್ಲಿ ಕೇಳುವಾಗ ಬರಲು ಸಾಧ್ಯವಿರಲಿಲ್ಲ ಅಲ್ಲವೇ.  ಅದು ಬರಿದಾದ ಮನೆ ಬೆಳಗೆ ನೀನೆಂದು ತಿಳಿವೆ ಆಗಬೇಕಿತ್ತು,  ಬರುವೆ ಎಂಬ ತಪ್ಪು ಪದ ಉಪಯೋಗಿಸಿದ್ದಾರೆ ಅಂದುಕೊಳ್ಳುತ್ತಿದ್ದೆ!  ಮೇಲಾಗಿ ‘ನೀನೆಂದು’ ಎಂದರೆ ‘ನೀನು ಎಂಬುದಾಗಿ’ ಎಂದು ಅರ್ಥೈಸಿಕೊಂಡಿದ್ದೆನೇ ಹೊರತು ಅದು ‘ನೀನು ಯಾವಾಗ’ ಎಂದಾಗಿರಬಹುದೆಂದು  ನನಗೆ ಹೊಳೆದಿರಲಿಲ್ಲ.

‘ನಿಮ್ಮನ್ನೆಲ್ಲ ರಿಪೇರಿ ಮಾಡ್ತೇನೆ ಗೊತ್ತಾಯ್ತಲ್ಲ’ ಎಂದು ಗದರಿಸುತ್ತಾ ವಿದ್ಯಾರ್ಥಿಗಳನ್ನು ಆಜೀವ ಕಾರಾಗೃಹವಾಸದಲ್ಲಿರುವ ಕೈದಿಗಳಂತೆ  ಕಾಣುವ ಖಡಕ್ ಪಿ.ಟಿ. ಮಾಸ್ಟ್ರೊಬ್ಬರು ನಮಗಿದ್ದರು.  ಒಮ್ಮೆ ಯಾವುದೋ leisure  ಪೀರಿಯಡಿಗೆ ನಮ್ಮ ಕ್ಲಾಸಿಗೆ ಬಂದ ಅವರು ‘ಯಾರಾದರೂ ಹಾಡೊಂದ ಹಾಡುವೆ ನೀ ಕೇಳು ಮಗುವೆ ಹಾಡಿ ನೋಡುವಾ’ ಅಂದಾಗ ಈ ಹಾಡಿಗೆ ನಿಜವಾಗಿಯೂ ಕಲ್ಲನ್ನೂ ಕರಗಿಸುವ ಶಕ್ತಿ ಇದೆ ಅನ್ನಿಸಿತ್ತು!

ಈಗ ಕಥಾಭಾಗವನ್ನು ಇನ್ನೊಮ್ಮೆ ಓದಿ ಹೆಡ್ ಫೋನ್ ಧರಿಸಿ ಗಡಿಯಾರದ ಟಿಕ್ ಟಿಕ್ ಸದ್ದು ಗಮನಿಸುತ್ತಾ ಈ ಹಾಡು ಆಲಿಸಿ ಆನಂದಿಸಿ ಅನುಭವಿಸಿ.




ಈ ಬರಹದ ಆಯ್ದ ಅಂಶ  ಜೂನ್ 2022ರ ರೂಪತಾರಾ ಪತ್ರಿಕೆಯಲ್ಲಿ ಕಾಣಿಸಿಕೊಂಡಿತು.



24-3-19
 
 

 
 

Wednesday, 13 April 2022

ಮಂದ್ರದಲ್ಲಿ PBS ಮಾಂತ್ರಿಕತೆ




ಇಲ್ಲ, ಎಸ್. ಎಲ್. ಭೈರಪ್ಪ ಅವರ ಮಂದ್ರದಲ್ಲಿ ಯಾವ PBS ಹಾಡೂ ಇಲ್ಲ.  ಇಲ್ಲಿ ನಾವು ಚರ್ಚಿಸುತ್ತಿರುವುದು ಪಿ.ಬಿ.ಶ್ರೀನಿವಾಸ್ ಹಾಡುಗಳಲ್ಲಿ  ಮಂದ್ರಸ್ಥಾಯಿ ಮಾಂತ್ರಿಕತೆ ಬಗ್ಗೆ.  PBS ಎಲ್ಲ ರೀತಿಯ ಹಾಡುಗಳನ್ನು ಹಾಡಿದ್ದರೂ ಮಂದ್ರ ಸಪ್ತಕದಲ್ಲಿ ಸಂಚಾರವಿರುವ ಅವರ ಹಾಡುಗಳ ಸೊಗಸೇ ಬೇರೆ.  ಕೆಲವು ಹಾಡುಗಳಲ್ಲಿ ಮಧ್ಯ, ತಾರ ಸಪ್ತಕಗಳಲ್ಲೇ  ಹೆಚ್ಚಿನ ಸಂಚಾರವಿದ್ದರೂ ಯಾವುದಾದರೂ ಒಂದು ಪದ ಮಂದ್ರ ಸಪ್ತಕದಲ್ಲಿ ಬಂದರೂ ಪಾಯಸದಲ್ಲಿ ದ್ರಾಕ್ಷಿ ಸಿಕ್ಕಿದ ಅನುಭವ.  ಅಂಥ ಕೆಲವು ಹಾಡುಗಳು ಇಲ್ಲಿವೆ. ಆದರೆ ನೆನಪಿರಲಿ,  ಇವು ಬಿಂಕದ ಸಿಂಗಾರಿಆಡಿಸಿ ನೋಡು ಬೀಳಿಸಿ ನೋಡು, ನಾವಾಡುವ ನುಡಿಯೆ ಕನ್ನಡ ನುಡಿಯಂತಹ ಯಾವಾಗಲೂ ಕೇಳಸಿಗುವ ಜನಪ್ರಿಯ ಹಾಡುಗಳಲ್ಲ.  ಎಂದೋ ಕೇಳಿರಬಹುದಾದ ಅಥವಾ ಒಮ್ಮೆಯೂ ಕೇಳದೆ ಇದ್ದಿರಬಹುದಾದ ಭೂಲೇ ಬಿಸ್ರೇ ಹಾಡುಗಳು.


ರತಿಸುಖ ಸಾರೆ ಗತಮಭಿಸಾರೆ 

     ಇದು ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ.ವಿ.ಅಯ್ಯರ್ ಸೇರಿ ನಿರ್ಮಿಸಿದ ರಣಧೀರ ಕಂಠೀರವ ಚಿತ್ರದಲ್ಲಿ ಅಳವಡಿಸಲಾಗಿದ್ದ ಜಯದೇವ ಅಷ್ಟಪದಿ.  ಈ ಚಿತ್ರದ ಹಾಡುಗಳನ್ನು ಮನ್ನಾಡೇ ಅಥವಾ ರಘುನಾಥ ಪಾಣಿಗ್ರಾಹಿ ಅವರಿಂದ ಹಾಡಿಸುವ ವಿಚಾರವಿತ್ತಂತೆ.  ಆದರೆ ಕೊನೆಗೆ PBS ಅವರೇ ಇದಕ್ಕೆ ಸೂಕ್ತ ಎಂದು ತೀರ್ಮಾನಿಸಲಾಯಿತಂತೆ.  ಇದರಲ್ಲಿ ಮದನಮನೋಹರ ವೇಷಂ ರಾಧೇ ಎಂಬ ಸಾಲಿನಲ್ಲಿ ಮಂದ್ರದ ಮ್ಯಾಜಿಕ್ ಅನುಭವಿಸಬಹುದು.  ಎ.ಪಿ. ಕೋಮಲಾ ಅವರೂ ದನಿಗೂಡಿಸಿದ್ದಾರೆ.





2. ಈ ಮೂಢತನವಿದೇಕೆ

     PBS ಅವರನ್ನು ಮೊತ್ತ ಮೊದಲು ಕನ್ನಡಕ್ಕೆ ಪರಿಚಯಿಸಿದ ಆರ್ ನಾಗೇಂದ್ರ ರಾವ್ ಅವರು ನಿರ್ಮಿಸಿದ ಜಾತಕ ಫಲ ಚಿತ್ರದ  ಹಾಡು.  ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದಂತೆ ಇದು ಹಿಂದಿಯ ಮೇಲಾ ಚಿತ್ರದ ರಫಿ ಹಾಡು ಯೆ ಜಿಂದಗೀ ಕೆ ಮೇಲೆ ಧಾಟಿಯಲ್ಲಿದೆ. ಹಾಡಿನ ಬಹುತೇಕ ಭಾಗ ಮಂದ್ರ ಸ್ಥಾಯಿಯಲ್ಲೇ ಇದೆ.  ರಫಿಗಿಂತ ಒಂದು ಪಟ್ಟಿ  ಕೆಳಗೆ ಹಾಡಿದ್ದಾರೆ.


   
3.  ಗಿಳಿಯು ಪಂಜರದೊಳಿಲ್ಲ

     ಶ್ರೀ ಪುರಂದರ ದಾಸರು ಚಿತ್ರದ ಗೀತೆ. ಸಿ.ಎನ್.ಪಾಂಡುರಂಗ ಎಂಬ ಸಂಗೀತ ನಿರ್ದೇಶಕರು ಭಕ್ತ ಕನಕದಾಸದ ಹಾಡುಗಳಂತೆ ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ದಾಸರಪದಕ್ಕೆ ರಾಗ ಸಂಯೋಜಿಸಿದ್ದಾರೆ.  ಆರಂಭದಲ್ಲೇ ಮಂದ್ರದ ಮಾಂತ್ರಿಕ ಸ್ಪರ್ಶವಿದೆ.  ಮುಂದೆ ಚರಣದಲ್ಲಿ ತಾರ ಸಪ್ತಕದವರೆಗೂ ಹೋಗುವ ಸಂದರ್ಭದಲ್ಲಿ false voice ಮೂಲಕ ಧ್ವನಿ ನಿಯಂತ್ರಿಸಿರುವುದನ್ನು ಗಮನಿಸಬಹುದು.



4.  ಮನವೇ ಮಂದಿರ

     ತೂಗುದೀಪ ಚಿತ್ರಕ್ಕಾಗಿ ವಿಜಯ ಭಾಸ್ಕರ್ ಕಲಾವತಿ ರಾಗದಲ್ಲಿ ಸಂಯೋಜಿಸಿದ ಭಾವಗೀತೆಯೆಂದೇ ಅನ್ನಿಸುವ ಚಿತ್ರಗೀತೆ. ಆರಂಭದ ಆಲಾಪದಲ್ಲೇ ಮಂದ್ರದ ಜೀರಿನ ಆಹ್ಲಾದಕರ ಅನುಭವ.  ಇದೇ ಚಿತ್ರದ ಮೌನವೇ ಆಭರಣ ಕೂಡ ಇಂತಹದೇ ಇನ್ನೊಂದು ಗೀತೆ.

    
5.  ಯಾರಿಗೆ ಯಾರೋ

     ಕೇವಲ ಬೆರಳೆಣಿಕೆಯ ಚಿತ್ರಗಳಿಗೆ ಸಂಗೀತ ನೀಡಿ ಎಳೆ ಪ್ರಾಯದಲ್ಲಿ ಕಣ್ಮರೆಯಾದ ಎಂ. ವೆಂಕಟರಾಜು ಸಂಯೋಜನೆ.  ಸಾಮಾನ್ಯವಾಗಿ ದೊಡ್ಡ ಆರ್ಕೆಷ್ಟ್ರಾ ಬಯಸುವ ಅವರು ನಂದಾದೀಪ ಚಿತ್ರದ ಈ ಹಾಡಿನ ಮೂಡಿಗೆ ಸರಿಯಾಗಿ ಇಲ್ಲಿ ಬೆರಳೆಣಿಕೆಯ ವಾದ್ಯಗಳನ್ನಷ್ಟೇ ಉಪಯೋಗಿಸಿರುವುದು ಗಮನಾರ್ಹ.



6.  ವೈದೇಹಿ ಏನಾದಳು

     ದಶಾವತಾರ ಚಿತ್ರದಲ್ಲಿ ಸೀತೆಯನ್ನು ಕಳೆದುಕೊಂಡ ರಾಮನ ವಿರಹದ ಹಾಡು. ಮಂದ್ರದ ಮಾಧುರ್ಯಕ್ಕೆ ಮಸಣ ಮೌನದೆ ಸುಳಿವ ಸಾಲು ಬರುವವರೆಗೆ ಕಾಯಬೇಕು. ಹೆಚ್ಚಿನ ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ.



7.  ಗಾಳಿಯ ಪಟದಂತೆ ನಾನಯ್ಯಾ

     ದೇವರ ದುಡ್ಡು ಚಿತ್ರದಲ್ಲಿ ತರಿಕೆರೆ ಏರಿಯ ಕುರಿಗಳ ಮುಂದೆ ಮಂಕಾದಂತೆ ಕಂಡಿದ್ದ  ಈ ಹಾಡು ನಂತರ evergreen ಪಟ್ಟಿಗೆ ಸೇರಿತು.  ಶಿವರಂಜಿನಿ  ರಾಗದಲ್ಲಿ ಏರು ಧ್ವನಿಯಲ್ಲೇ ಆರಂಭವಾಗುವ ಇದು ಗೀತೆಯ ಮರ್ಮವ ಸಾಲು ತಲುಪುವಾಗ   ಕೇಳುಗರನ್ನು  ಮಂದ್ರಮುಗ್ಧಗೊಳಿಸುತ್ತದೆ.



8.  ವೇದಾಂತಿ ಹೇಳಿದನು

     80ರ ದಶಕದಲ್ಲಿ ಬಂದ ಮಾನಸ ಸರೋವರ ಚಿತ್ರದ ಈ ಹಾಡು 70ರ ದಶಕದ ಮಧ್ಯಭಾಗದ ನಂತರ ಸಕ್ರಿಯರಾಗಿ form ನಲ್ಲಿ ಇರುವಾಗಲೇ PBS ಪ್ರತಿಭೆಯನ್ನು ಕಡೆಗಣಿಸಿ ಕನ್ನಡ ಚಿತ್ರರಂಗ ಇಂತಹ ಎಷ್ಟು ಹಾಡುಗಳನ್ನು ಕಳೆದುಕೊಂಡಿತು ಎಂಬುದರ ಸೂಚಕ.  Jazz ಶೈಲಿಯ ಹಿನ್ನೆಲೆಯುಳ್ಳ ಇಡೀ ಹಾಡೇ ಮಂದ್ರದ ರಸಪಾಕ.



9.  ಮಾಲಯಿಲ್ ಮಲರ್ ಚೋಲಯಿಲ್

      ಹಿಂದಿಯಲ್ಲಿ ಪಡೋಸನ್ ಆಗಿ ಬಂದ ತಮಿಳಿನ ಅಡುತ್ತ ವೀಟ್ಟ್ ಪೆಣ್ ಚಿತ್ರದ ಹಾಡಿದು.  ಚಿತ್ರದಲ್ಲಿ ಹಿಂದಿಯ ಕಹನಾ ಹೈ ಕಹನಾ ಹೈ ಹಾಡಿನ ಸಂದರ್ಭದ್ದಂತೆ ಇದು. ಸಾಹಿತ್ಯದ ಅರ್ಥ ಗೊತ್ತಿಲ್ಲ.  ಆದರೂ ಕೇಳಲು ಆಪ್ಯಾಯಮಾನ.  ಇದರ interlude music ಓ.ಪಿ. ನಯ್ಯರ್ ಶೈಲಿಯಲ್ಲಿರುವುದನ್ನು ಗಮನಿಸಬಹುದು.



10.  ನೈನಾ ಜೊ ನೈನೊಂ ಸೆ ಮಿಲೆ

       ಮೈ ಭೀ ಲಡ್ಕೀ ಹೂಂ ಚಿತ್ರದಲ್ಲಿ PBS ಲತಾ ಮಂಗೇಶ್ಕರ್ ಜೊತೆ ಹಾಡಿರುವ  ಚಂದಾ ಸೆ ಹೋಗಾ ವೊ ಪ್ಯಾರಾ ಹಾಡು ಕೆಲವರಿಗೆ ಗೊತ್ತಿರಬಹುದು.  ಆದರೆ ಡಾಕು ಭೂಪತ್ ಎಂಬ ಚಿತ್ರದ ಈ ಹಾಡನ್ನು ಯಾರೂ ಇದುವರೆಗೆ ಕೇಳಿರಲಾರಿರಿ.  ಪಿ.ಸುಶೀಲಾ ಅವರೊಂದಿಗೆ ಹಾಡಿದ ಬಾಗೇಶ್ರೀ ರಾಗಾಧಾರಿತ ಈ ಹಾಡು ನನ್ನ ಸಂಗ್ರಹದಿಂದ ನಿಮಗಾಗಿ.




11.  ಚಂದ್ರಮಂಚಕೆ ಬಾ
         
        ಬಿಡುಗಡೆಯ ಬೆಳಕನ್ನೇ  ಕಾಣದೆ ನಿಜ ಅರ್ಥದಲ್ಲಿ ಕಾನನ ಕುಸುಮವೇ ಆದ ವನಸುಮ ಚಿತ್ರದಲ್ಲಿ ಅಳವಡಿಸಲಾದ ಕುವೆಂಪು ರಚನೆ.  ಉಪೇಂದ್ರ ಕುಮಾರ್ ರಾಗಸಂಯೋಜನೆಯಷ್ಟೇ PBS ಗಾಯನವೂ ಅತಿ ಮಧುರ. ಈ ಹಾಡಿನಲ್ಲಿ ಮಂದ್ರದ ಮಾಂತ್ರಿಕತೆ ಅಷ್ಟೊಂದಿಲ್ಲ.    ಆದರೂ  ನಿಧಾನ ಲಯದ ತಂಪೆರೆಯುವ ಮಾಧುರ್ಯವಿದ್ದುದರಿಂದ ಬೋನಸ್ ರೂಪದಲ್ಲಿ ಈ ಹಾಡು.




ಇನ್ನಷ್ಟು PBS ಹಾಡುಗಳಿಗೆ  
ಮತ್ತು
ನೋಡಿ.
 
16-9-2012

Thursday, 31 March 2022

ಲತಾ ಗಾನ ಗಾಥಾ


 
92 ಸಂವತ್ಸರಗಳ ಸುದೀರ್ಘ ಬಾಳನ್ನು ಬಾಳಿ, 8 ದಶಕಗಳಷ್ಟು ಕಾಲ ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದು 6 ಫೆಬ್ರವರಿ 2022ರಂದು ಲತಾ ಮಂಗೇಶ್ಕರ್ ಅವರು ನಿಧನರಾದದ್ದು ತುಂಬಲಾರದ ನಷ್ಟ ಎನ್ನುವುದೆಲ್ಲ ಸವಕಲು ಮಾತಾಗುತ್ತದೆ. ತಲೆಮಾರುಗಳ ಮೇಲೆ ತಲೆಮಾರುಗಳು ಸವಿದರೂ ಸವೆಯಲಾರದ ಗಾನ ಸಂಪತ್ತಿನ ರೂಪದಲ್ಲಿ  ಅವರು  ಸದಾ ನಮ್ಮೊಂದಿಗೆ ಇರುತ್ತಾರೆ.



ಲತಾ ಮಂಗೇಶ್ಕರ್ ಹುಟ್ಟಿದ್ದು 28 ಸಪ್ಟಂಬರ್ 1929ರಂದು, ಇಂದೋರ್‌ನಲ್ಲಿದ್ದ ಅಜ್ಜಿ ಮನೆಯಲ್ಲಿ. ತಂದೆ ಪಂಡಿತ್ ದೀನಾನಾಥ್ ಮಂಗೇಶ್ಕರ್, ತಾಯಿ ಶೇವಂತಿ. ದೀನಾನಾಥ್ ರಂಗಭೂಮಿ ಕಲಾವಿದರು ಮತ್ತು ಉತ್ತಮ ಹಾಡುಗಾರರು. ಬಿಡುವಿನ ವೇಳೆಯಲ್ಲಿ ಶಿಷ್ಯರಿಗೆ ಸಂಗೀತ ಪಾಠವನ್ನೂ ಹೇಳುತ್ತಿದ್ದರು. ಬಾಲಕಿ ಲತಾಗೆ ಬಾಲ್ಯದಲ್ಲೇ ಸಂಗೀತದಲ್ಲಿ ಆಸಕ್ತಿ ಹುಟ್ಟಿತು. ಆದರೆ ತಂದೆಯೆದುರು ಹಾಡುವ ಧೈರ್ಯ ಇರಲಿಲ್ಲ. ಅಡಿಗೆ ಮನೆಯಲ್ಲಿದ್ದ ಪಾತ್ರೆ ಇಡುವ ಸ್ಟಾಂಡಿನ ಮೇಲೆ ಕುಳಿತು  ತಂದೆಯವರ ಬಂದಿಶ್, ಸೈಗಲ್  ಹಾಡುಗಳನ್ನು ಗಟ್ಟಿ ದನಿಯಲ್ಲಿ ತಾಯಿಗೆ ಕೇಳಿಸುತ್ತಿದ್ದಳು. ‘ನನ್ನ ತಲೆ ತಿನ್ನಬೇಡ’ ಎಂದು ತಾಯಿ ಅಲ್ಲಿಂದ ಓಡಿಸುತ್ತಿದ್ದರು. ಒಂದು ದಿನ ಶಿಷ್ಯನೊಬ್ಬನಿಗೆ ಪಾಠ ಹೇಳುತ್ತಿದ್ದ ತಂದೆ ಅಭ್ಯಾಸ ಮುಂದುವರೆಸುವಂತೆ ತಿಳಿಸಿ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದರು. ಶಿಷ್ಯ ಹಾಡುತ್ತಿದ್ದುದನ್ನು ಗಮನವಿಟ್ಟು ಆಲಿಸುತ್ತಿದ್ದ 5 ವರ್ಷ ವಯಸ್ಸಿನ ಲತಾಗೆ ಆತ ತಂದೆ ಹೇಳಿಕೊಟ್ಟಂತೆ  ಹಾಡುತ್ತಿಲ್ಲ ಎಂದೆನಿಸಿತು. ಅದು ಹಾಗಲ್ಲ ಹೀಗೆ ಎಂದು ಸರಿಯಾಗಿ ಹಾಡಿಯೂ ತೋರಿಸಿದಳು. ಅಷ್ಟು ಹೊತ್ತಿಗೆ ಮರಳಿದ ತಂದೆಯ ಗಮನಕ್ಕೆ ಇದು ಬಂದು ‘ಮನೆಯಲ್ಲೇ ಗಾಯಕಿ ಇರುವಾಗ ನಾನು ಹೊರಗಿನ ಶಿಷ್ಯರಿಗೆ ಕಲಿಸುತ್ತಿದ್ದೇನಲ್ಲ’ ಎನಿಸಿತು.  ಮರುದಿನದಿಂದಲೇ ಮಗಳಿಗೆ ಪಾಠ ಹೇಳಲಾರಂಭಿಸಿದರು.




ರಂಗಭೂಮಿಯ ನಂಟಿದ್ದ ತಂದೆಯ ಜೊತೆ ಅವರ ಸಂಸಾರ ಊರಿಂದ ಊರಿಗೆ ತಿರುಗಬೇಕಾಗುತಿತ್ತು. ಲತಾಗೆ 9  ವರ್ಷ ವಯಸ್ಸಾಗುವಾಗ ಒಂದು ಸಲ ಶೋಲಾಪುರದಲ್ಲಿ ದೀನಾನಾಥರ ಸಂಗೀತ ಕಚೇರಿ ಇತ್ತು. ಆ ದಿನ ಹಠ ಮಾಡಿ ಆರಂಭದಲ್ಲಿ ಬಾಲಕಿ ಲತಾ ಕೂಡ  ಹಾಡಿದಳು, ಜನರಿಂದ ಮೆಚ್ಚಿಗೆಯೂ ದೊರಕಿತು.  ನಂತರ ತಂದೆ ಹಾಡುವಾಗ  ಅವರ ತೊಡೆ ಮೇಲೆ ತಲೆ ಇಟ್ಟು ವೇದಿಕೆಯಲ್ಲೇ ಮಲಗಿ ಬಿಟ್ಟಳಂತೆ.  ತಂದೆಯ ಬಲವಂತ ಸಂಗೀತ ಮಂಡಳಿ ಸಂಸ್ಥೆಯ ಕೆಲವು ನಾಟಕಗಳಲ್ಲಿ ಲತಾ ಅಭಿನಯಿಸಿದ್ದೂ ಉಂಟು. ದೀನಾನಾಥರ ಮಿತ್ರ ಸದಾಶಿವ ರಾವ್  ನಾವಡೇಕರ್ ಎಂಬವರ ಒತ್ತಾಯದಿಂದ 1942ರಲ್ಲಿ ವಸಂತ ಜೋಗಳೇಕರ್ ನಿರ್ದೇಶಿಸುತ್ತಿದ್ದ  ‘ಕಿತಿ ಹಸಾಲ್’ ಎಂಬ ಮರಾಠಿ ಚಿತ್ರಕ್ಕಾಗಿ ಪುಣೆಯ ಸರಸ್ವತಿ ಸಿನೆಟೋನ್ ಸ್ಟೂಡಿಯೊದಲ್ಲಿ ಲತಾ ಮಂಗೇಶ್ಕರ್ ಹಾಡಿದ ಮೊದಲ ಹಾಡು ರೆಕಾರ್ಡ್ ಆಯಿತು.  ಆದರೆ ಆ ಹಾಡಾಗಲಿ, ಚಿತ್ರವಾಗಲಿ ಬಿಡುಗಡೆಯ ಭಾಗ್ಯ ಕಾಣಲಿಲ್ಲ. ತಂದೆಗೆ ಲತಾ ಸಿನಿಮಾ ಜಗತ್ತನ್ನು ಪ್ರವೇಶಿಸುವುದು ಇಷ್ಟವೂ ಇರಲಿಲ್ಲ.


ಮುಂದೆ ಒಂದೇ ತಿಂಗಳಲ್ಲಿ ಲತಾ ಮಂಗೇಶ್ಕರ್ ಬಾಳಿನಲ್ಲಿ ಬರಸಿಡಿಲು ಬಡಿಯಿತು. ತಂದೆ ದೀನಾನಾಥ್ ಮಂಗೇಶ್ಕರ್ 1942ರ ಎಪ್ರಿಲ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ತಾಯಿ,  ತಂಗಿಯಂದಿರಾದ ಆಶಾ, ಉಷಾ, ಮೀನಾ ಮತ್ತು ತಮ್ಮ ಹೃದಯನಾಥ್ ಇವರನ್ನೆಲ್ಲಾ ಸಲಹುವ ಭಾರ 13  ವರ್ಷ ವಯಸ್ಸಿನ ಲತಾ ಹೆಗಲ ಮೇಲೆ ಬಿತ್ತು. ಆ ಸಮಯದಲ್ಲಿ ಸಹಾಯಕ್ಕೆ ಬಂದವರು ಮಾಸ್ಟರ್ ವಿನಾಯಕ್. ಇವರು  ಮುಂದೆ ಪ್ರಸಿದ್ಧ ನಟಿಯಾಗಿ ಹೆಸರು ಮಾಡಿದ ನಂದಾ ಅವರ ತಂದೆ. ಅವರು ‘ಪಹಲೀ ಮಂಗಳಾಗೌರ್’ ಎಂಬ ಮರಾಠಿ ಚಿತ್ರದಲ್ಲಿ ನಟಿಸುವಂತೆ ಲತಾಗೆ ಸಲಹೆ ಇತ್ತರು. ಕುಟುಂಬವನ್ನು ಸಲಹಲು ಬೇರೆ ಮಾರ್ಗ ಇಲ್ಲದ ಲತಾ ಇದಕ್ಕೆ ಒಪ್ಪಿದರು. ಆದರೆ ಮಾಸ್ಟರ್ ವಿನಾಯಕ್ ಏನೋ ವೈಮನಸ್ಯದ ಕಾರಣ ಆ ಚಿತ್ರ ತಯಾರಿಸುತ್ತಿದ್ದ  ಸಂಸ್ಥೆಯನ್ನು ತೊರೆಯಬೇಕಾಗಿ ಬಂದು ಕೊಲ್ಹಾಪುರಕ್ಕೆ ತೆರಳಿದರು. ಹೋಗುವ ಮುನ್ನ ವಹಿಸಿಕೊಂಡ ಚಿತ್ರದ ಕೆಲಸ ಮುಗಿಯುತ್ತಲೇ ಕೊಲ್ಹಾಪುರಕ್ಕೆ   ಬರುವಂತೆ ಲತಾಗೆ ಹೇಳಿದರು. ಅವರು ಹೇಳಿದ ಪ್ರಕಾರ ಮಂಗಳಾಗೌರ್ ಚಿತ್ರ ಸಂಪೂರ್ಣವಾದೊಡನೆ ಕುಟುಂಬದೊಡನೆ ಕೊಲ್ಹಾಪುರಕ್ಕೆ ಹೋಗಿ 1947ರ ವರೆಗೆ ಅವರ ಪ್ರಫುಲ್ ಪಿಕ್ಚರ್ಸ್ ಸಂಸ್ಥೆಯಲ್ಲಿ ನೌಕರಿಗೆ ಸೇರಿ ಕೆಲವು ಚಿತ್ರಗಳಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು. ಹುಬ್ಬುಗಳನ್ನು ಟ್ರಿಮ್ ಮಾಡಲು ಹೇಳಿದಾಗ, ಹಣೆಯನ್ನು ಮುಚ್ಚುವಷ್ಟಿದ್ದ ದಟ್ಟ ಕೂದಲುಗಳನ್ನು ಕತ್ತರಿಸಿಕೊಳ್ಳುವಂತೆ ಹೇಳಿದಾಗ ಬೇರೆ ಉಪಾಯವಿಲ್ಲದೆ ಒಪ್ಪಿ ಮನೆಗೆ ಹೋಗಿ  ಅಳುತ್ತಿದ್ದರಂತೆ. ಮಾಸ್ಟರ್ ವಿನಾಯಕ್ ಅಗಸ್ಟ್ 1947ರಲ್ಲಿ ನಿಧನರಾದ ಮೇಲೆ ಲತಾ ಕುಟುಂಬ ಮುಂಬಯಿಗೆ ಬಂತು.



40ರ ದಶಕ ಅಂದರೆ ನೂರ್ ಜಹಾನ್, ಸುರೈಯಾ, ಜೊಹರಾಬಾಯಿ ಅಂಬಾಲೆವಾಲಿ, ರಾಜ್‌ಕುಮಾರಿ, ಅಮೀರ್ ಬಾಯಿ ಕರ್ನಾಟಕಿ, ಶಂಶಾದ್ ಬೇಗಂ ಮುಂತಾದ ಗಾಯಕಿಯರು ಹಿಂದಿ ಚಿತ್ರಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಸಮಯ. ಆದರೂ ಲತಾಗೆ ಒಂದೆರಡು ಸಿನಿಮಾಗಳಿಗೆ ಹಾಡುವ ಸಣ್ಣ ಪುಟ್ಟ ಅವಕಾಶಗಳು ದೊರೆತವು. ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ರೀತಿಯವು. ಅಮಾನ್ ಅಲಿ ಖಾನ್ ಅವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನೂ ಮುಂದುವರೆಸಿದರು. ಒಂದು ಸಲ ಹರಿಶ್ಚಂದ್ರ ಬಾಲಿ ಎಂಬ ಸಂಗೀತ ನಿರ್ದೇಶಕರಿಗಾಗಿ ಒಂದು ಹಾಡು ರೆಕಾರ್ಡ್ ಮಾಡುತ್ತಿರುವಾಗ ಸಿನಿಮಾಗಳಿಗೆ ಜೂನಿಯರ್ ಆರ್ಟಿಸ್ಟುಗಳನ್ನು ಸರಬರಾಜು ಮಾಡುತ್ತಿದ್ದ ಒಬ್ಬ ಪಠಾಣ ಲತಾ ಧ್ವನಿಯಿಂದ ಪ್ರಭಾವಿತನಾಗಿ ಹೊಸ ಗಾಯನ ಪ್ರತಿಭೆಗಳನ್ನು ಹುಡುಕುತ್ತಿದ್ದ ಮಾಸ್ಟರ್ ಗುಲಾಮ್ ಹೈದರ್ ಅವರಿಗೆ ವಿಷಯ ತಿಳಿಸಿದ. ಅವರು ಲತಾ ಮಂಗೇಶ್ಕರ್‌ಗೆ ತಾನು ಶಹೀದ್ ಚಿತ್ರಕ್ಕಾಗಿ ಹಾಡುಗಳನ್ನು ಧ್ವನಿಮುದ್ರಿಸುತ್ತಿದ್ದ  ಫಿಲ್ಮಿಸ್ತಾನ್ ಸ್ಟುಡಿಯೊಗೆ ಬರುವಂತೆ ಸಂದೇಶ ಕಳಿಸಿದರು. ಅಲ್ಲಿ ಲತಾ ಮಂಗೇಶ್ಕರ್ ಧ್ವನಿಯಲ್ಲಿ ಒಂದು ಹಾಡನ್ನು   ಧ್ವನಿಮುದ್ರಿಸಿ ಫಿಲ್ಮಿಸ್ಥಾನ್ ಸಂಸ್ಥೆಯ  ಶಶಧರ ಮುಖರ್ಜಿ ಅವರಿಗೆ ಕೇಳಿಸಿದರು. ‘ಈಕೆಯ  ತೆಳ್ಳಗಿನ ನೂಲಿನಂಥ ಧ್ವನಿ ಸಿನಿಮಾ ಹಿನ್ನೆಲೆ ಗಾಯನಕ್ಕೆ ಹೇಳಿಸಿದ್ದಲ್ಲ, ನನ್ನ ಚಿತ್ರದ ನಾಯಕಿಗೆ ಹೊಂದುವುದೂ ಇಲ್ಲ’ ಎಂದು ಅವರು ತಿರಸ್ಕರಿಸಿದರು.  ಇದನ್ನು ಕೇಳಿದ ಗುಲಾಮ್ ಹೈದರ್ ಸಿಟ್ಟುಗೊಂಡು ಲತಾ ಅವರನ್ನು ಕರಕೊಂಡು ಅಲ್ಲಿಂದ ಹೊರ ನಡೆದರು.  ಲೋಕಲ್ ಟ್ರೈನಿನಲ್ಲಿ ಹೋಗುತ್ತಿರುವಾಗ ತನ್ನ ಕೈಯಲ್ಲಿದ್ದ 555 ಬ್ರಾಂಡಿನ ಸಿಗರೇಟ್ ಡಬ್ಬಿಗೆ ತಾಳ ಹಾಕುತ್ತಾ ‘ಎಲ್ಲಿ, ನನ್ನೊಂದಿಗೆ ಹಾಡು ನೋಡೋಣ’ ಎಂದು ‘ದಿಲ್ ಮೇರಾ ತೋಡಾ ಹೋ ಮುಝೆ ಕಹೀಂ ಕಾ ನ ಛೋಡಾ’ ಎಂಬ ಹಾಡನ್ನು ಹಾಡಿಸಿದರು. ‘ಆಹಾ, ಇದೇ ನನಗೆ ಬೇಕಿದ್ದದ್ದು.  ನೋಡುತ್ತಿರು, ನಿನ್ನ ಹಾಡು ಕೇಳಿ ಜನರು ನೂರ್ ಜಹಾನ್, ಸುರೈಯಾ, ಶಂಶಾದ್ ಬೇಗಂ ಎಲ್ಲರನ್ನೂ ಮರೆಯುತ್ತಾರೆ. ಇದೇ ಶಶಧರ ಮುಖರ್ಜಿ ಒಂದು ದಿನ ನಿನ್ನ ಮನೆ ಬಾಗಿಲ ಬಳಿ ಬಂದು ನಿಲ್ಲುತ್ತಾರೆ’ ಎಂದು ಹೇಳಿದರು. ತಾವು ಸಂಗೀತ ನೀಡುತ್ತಿದ್ದ ‘ಮಜಬೂರ್’ ಚಿತ್ರಕ್ಕಾಗಿ ಸಿಗರೇಟ್ ಡಬ್ಬಿಯ ‘ದಿಲ್ ಮೇರಾ ತೋಡಾ’ ಸೇರಿದಂತೆ ಒಟ್ಟು 6 ಹಾಡುಗಳನ್ನು ಲತಾ ಮಂಗೇಶ್ಕರ್ ಅವರಿಂದ ಗುಲಾಮ್ ಹೈದರ್ ಹಾಡಿಸಿದರು. ಈ ರೀತಿ ಚಿತ್ರ ಜಗತ್ತಿಗೆ ದೊಡ್ಡ ಮಟ್ಟಿನಲ್ಲಿ ಲತಾ ಅವರ ಪರಿಚಯವಾಗಲು ಗುಲಾಮ್ ಹೈದರ್ ಕಾರಣರಾದರು. ವೃತ್ತಿಪರ ಹಿನ್ನೆಲೆ ಗಾಯನದ ಪಟ್ಟುಗಳನ್ನು ಲತಾಗೆ ಕಲಿಸಿ ಕೊಟ್ಟವರೂ ಅವರೇ.   ಈ ಚಿತ್ರದ ನಂತರ ಅವರು ಪಾಕಿಸ್ಥಾನಕ್ಕೆ ತೆರಳಿದರು. ಆದರೆ ಅವರು ಹೇಳಿದ್ದ ಭವಿಷ್ಯವಾಣಿ ನಿಜವಾಯಿತು. ಶಶಧರ್ ಮುಖರ್ಜಿ ತಮ್ಮ ‘ನಾಗಿನ್’ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಹಾಡುಗಳನ್ನೇ  ನೆಚ್ಚಿಕೊಳ್ಳಬೇಕಾಯಿತು.



ಮಜಬೂರ್ ಚಿತ್ರದ ಹಾಡುಗಳ ರೆಕಾರ್ಡಿಂಗ್ ಸಮಯದಲ್ಲಿ ಲತಾಗೆ ಖೇಮ್ ಚಂದ್ ಪ್ರಕಾಶ್ ಮತ್ತು ಅನಿಲ್ ಬಿಸ್ವಾಸ್ ಅವರ ಪರಿಚಯ ಆಯಿತು. ಒಂದು ಸಲ ಲತಾ ಮಂಗೇಶ್ಕರ್ ಮತ್ತು ಅನಿಲ್ ಬಿಸ್ವಾಸ್ ಲೋಕಲ್ ಟ್ರೈನಿನಲ್ಲಿ ಪಯಣಿಸುತ್ತಿರುವಾಗ ದಿಲೀಪ್ ಕುಮಾರ್ ಕೂಡ ಜತೆಗಿದ್ದರು. ಆಗ ಅನಿಲ್ ಬಿಸ್ವಾಸ್ ಲತಾ ಅವರನ್ನು ದಿಲೀಪ್ ಕುಮಾರ್‌ಗೆ ಪರಿಚಯಿಸಿದರು.  ಆಕೆ ಮಹಾರಾಷ್ಟ್ರದವರೆಂದು ಅರಿತ ದಿಲೀಪ್ ಕುಮಾರ್ ‘ದಾಲ್ ಚಾವಲ್ ತಿನ್ನುವ ಈಕೆ ಉರ್ದು ಪದಗಳನ್ನು ಸರಿಯಾಗಿ ಉಚ್ಚರಿಸಲಾರಳು’ ಎಂದು ಕಮೆಂಟ್ ಮಾಡಿದರು.  ಮನ ನೊಂದ ಲತಾ ಇದನ್ನು ಸವಾಲಾಗಿ ಸ್ವೀಕರಿಸಿ  ಅಧ್ಯಾಪಕರನ್ನು ಇಟ್ಟುಕೊಂಡು ಉರ್ದು ಓದಲು, ಬರೆಯಲು, ಮಾತನಾಡಲು ಕಲಿತದ್ದು ಮಾತ್ರವಲ್ಲದೆ ಇನ್ನೂ ಅನೇಕ ಭಾಷೆಗಳನ್ನೂ ಕಲಿತರು. ತಮ್ಮ ಅನೇಕ ಚಿತ್ರಗಳಲ್ಲಿ ಹಾಡಲು ಅವಕಾಶ ಕೊಟ್ಟ ಅನಿಲ್ ಬಿಸ್ವಾಸ್  ಹಾಡುವಾಗ ಉಸಿರಿನ ಸದ್ದು ಕೇಳಿಸದಂತೆ ಶ್ವಾಸವನ್ನು ಹೇಗೆ ನಿಯಂತ್ರಿಸಬೇಕು, ಶ್ವಾಸ ಎಳೆದುಕೊಳ್ಳುವಾಗ ಮೈಕ್ರೊಫೋನಿನಿಂದ ಹೇಗೆ ಆಚೆ ಮುಖ ತಿರುಗಿಸಬೇಕು ಇತ್ಯಾದಿ ವಿಷಯಗಳನ್ನು ಲತಾಗೆ ಕಲಿಸಿದರು. ತಾವು ಮಹಾನ್ ಗಾಯಕರೆಂದು ತಿಳಿದುಕೊಂಡಿರುವ ಈಗಿನ ಅನೇಕರಿಗೆ ಈ ವಿಷಯದ ಜ್ಞಾನವೇ ಇಲ್ಲದಿದ್ದು ಹಾಡುಗಳಲ್ಲಿ ಏದುಸಿರಿನ ಸದ್ದು ಕೇಳಿಸುವುದು ಸಾಮಾನ್ಯವಾಗಿದೆ.

1949ರಲ್ಲಿ ಖೇಮ್ ಚಂದ್ ಪ್ರಕಾಶ್ ಸಂಗೀತ ನಿರ್ದೇಶನದಲ್ಲಿ ‘ಮಹಲ್’ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಹಾಡಿದ  ‘ಆಯೇಗಾ ಆನೇವಾಲಾ’ ಹಾಡು ಸುಪರ್ ಹಿಟ್ ಆಯಿತು.  ಆದರೆ ಸ್ವಾರಸ್ಯವೆಂದರೆ ಇದನ್ನು ಹಾಡಿರುವುದು ಯಾರೆಂದು ಆಗ ಜನರಿಗೆ ಗೊತ್ತೇ ಇರಲಿಲ್ಲ.  ಏಕೆಂದರೆ ಆ ಕಾಲದಲ್ಲಿ ಗ್ರಾಮೊಫೋನ್ ರೆಕಾರ್ಡಿನ ಮೇಲೆ ಗಾಯಕರಾಗಿ ಆ ಹಾಡಿಗೆ ಅಭಿನಯಿಸಿದ ಚಿತ್ರದ ಪಾತ್ರದ ಹೆಸರನ್ನು ನಮೂದಿಸಲಾಗುತ್ತಿತ್ತು. ಆ ಪ್ರಕಾರ ಈ ಹಾಡಿನ ರೆಕಾರ್ಡ್ ಮೇಲೆ ಹಾಡಿದವರು ಕಾಮಿನಿ ಎಂಬ ಉಲ್ಲೇಖ ಇತ್ತು. ಆದರೂ ಜನ ರೇಡಿಯೋ ಸ್ಟೇಷನುಗಳಿಗೆ ಪತ್ರ ಬರೆದು ನಿಜವಾದ ಗಾಯಕರು ಯಾರೆಂದು ಹೇಳುವಂತೆ ಒತ್ತಾಯಿಸುತ್ತಿದ್ದರಂತೆ. ಮುಂದೆ ಲತಾ ಮಂಗೇಶ್ಕರ್ ಅವರ ಪ್ರಯತ್ನದ ಫಲವಾಗಿ ಹಿನ್ನೆಲೆ ಗಾಯಕರ ಹೆಸರು ರೆಕಾರ್ಡುಗಳ ಮೇಲೆ ಕಾಣಿಸಿಕೊಳ್ಳುವಂತಾಯಿತು.  ‘ಆಯೇಗಾ ಆನೇವಾಲಾ’ ಧಾಟಿಯಲ್ಲಿ ಮಹಾತ್ಮಾ ಪಿಕ್ಚರ್ಸ್ ಅವರ ‘ಜಗನ್ಮೋಹಿನಿ’ ಕನ್ನಡ ಚಿತ್ರದಲ್ಲಿ ‘ಎಂದೋ ಎಂದೋ’ ಎಂಬ ಹಾಡು ಇದ್ದು ಅದು ಅತಿ ಜನಪ್ರಿಯವಾದದ್ದು ಅನೇಕರಿಗೆ ನೆನಪಿರಬಹುದು. ‘ಎಂದೋ ಎಂದೋ’ ಕನ್ನಡ ಹಾಡೇ ಮೂಲ,  ಅದರ ಧಾಟಿಯಲ್ಲಿ ‘ಮಹಲ್’ ಚಿತ್ರದ ಹಿಂದಿ ಹಾಡಿನ ರಚನೆಯಾಯಿತು ಎಂದು ತಪ್ಪಾಗಿ ತಿಳಿದುಕೊಂಡವರೂ ಅನೇಕರಿದ್ದರಂತೆ. ಅದೇ ವರ್ಷ ಈಗಿನವರಿಗೆ ಪರಿಚಯವೇ ಇಲ್ಲದ ವಿನೋದ್ ಎಂಬವರ ಸಂಗೀತ ನಿರ್ದೇಶನದ ‘ಏಕ್ ಥೀ ಲಡ್ಕೀ’ ಎಂಬ ಚಿತ್ರದಲ್ಲಿದ್ದ ‘ಲಾರಲಪ್ಪ ಲಾರಲಪ್ಪ’  ಎಂಬ ಹಾಡು ಕೂಡ ಬಲು ಜನಪ್ರಿಯವಾಯಿತು.

ಲತಾ ಮಂಗೇಶ್ಕರ್ ಹೆಸರು ಎಲ್ಲರ ನಾಲಿಗೆ ಮೇಲೆ ನಲಿಯುವಂತಾದ್ದು 1949ರಲ್ಲಿ ರಾಜ್ ಕಪೂರ್ ನಿರ್ಮಿಸಿದ ‘ಬರಸಾತ್ ’ ಚಿತ್ರದ ಹಾಡುಗಳಿಂದ. ‘ಆಗ್’ ಎಂಬ ತನ್ನ ಮೊದಲ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದ ಪೃಥ್ವಿ ಥಿಯೇಟರ್ಸಿನ ರಾಮ್ ಗಂಗುಲಿ ಅವರೊಂದಿಗೆ ಏನೋ ಮನಸ್ತಾಪ ಉಂಟಾಗಿ ರಾಜ್ ಕಪೂರ್ ಅವರು ‘ಬರಸಾತ್ ’ ಸಂಗೀತದ ಹೊಣೆಯನ್ನು ಶಂಕರ್ ಮತ್ತು ಜೈಕಿಶನ್ ಎಂಬ ಇಬ್ಬರು ಹೊಸ ಹುಡುಗರಿಗೆ ವಹಿಸಿದರು. ಗೀತ ರಚನಕಾರರಾಗಿ ಹಸರತ್ ಜೈಪುರಿ ಮತ್ತು ಶೈಲೇಂದ್ರ  ಸೇರಿಕೊಂಡರು. ಈ ಚಿತ್ರದ ನಾಯಕಿ ಮತ್ತು ಉಪನಾಯಕಿಯ ಎಲ್ಲ ಹಾಡುಗಳನ್ನು ಹಾಡುವ ಅವಕಾಶ ಲತಾ ಮಂಗೇಶ್ಕರ್ ಅವರಿಗೆ ದೊರಕಿತು.  ‘ಬರಸಾತ್’ ಚಿತ್ರದ ಹಾಡುಗಳ ಸುರಿಮಳೆ ಅದೆಂಥ ಮೋಡಿ ಮಾಡಿತೆಂದರೆ ಆ ಮೇಲೆ ಲತಾ ಮಂಗೇಶ್ಕರ್ ಹಿಂತಿರುಗಿ ನೋಡಬೇಕಾಗಿ ಬರಲಿಲ್ಲ. ಈ ಚಿತ್ರದ ಒಂದು ಹಾಡು ಬಿಟ್ಟರೆ ಉಳಿದವೆಲ್ಲ ಭೈರವಿ ರಾಗದಲ್ಲೇ ಇದ್ದರೂ ಒಂದರಂತೆ ಇನ್ನೊಂದು ಇಲ್ಲದಿದ್ದುದು ವಿಶೇಷ. ಮುಂದೆ ಶಂಕರ್ ಜೈಕಿಶನ್ ಅವರ ಮುಖ್ಯ ಗಾಯಕಿಯಾಗಿ ಅನೇಕ ವರ್ಷ ಮುಂದುವರಿದ ಲತಾ ಮಂಗೇಶ್ಕರ್ ಅವರ ನಿರ್ದೇಶನದಲ್ಲಿ ಎಲ್ಲ ಬಗೆಯ ಹಾಡುಗಳನ್ನೂ ಹಾಡಿದರು. ಅವರ ಸಮವಯಸ್ಕರಾಗಿದ್ದ ಜೈಕಿಶನ್ ನಿಧನರಾದ ಮೇಲೆ  ಶಂಕರ್ ಒಬ್ಬಂಟಿಯಾಗಿ ಸಂಗೀತ ನೀಡಿದ ಚಿತ್ರಗಳಲ್ಲಿ  ಲತಾ ಹಾಡುಗಳು ಜಾಸ್ತಿ ಇರಲಿಲ್ಲ.



ಚಿತ್ರಸಂಗೀತದ ಸುವರ್ಣಯುಗ ಎಂದು ಎನಿಸಿಕೊಳ್ಳುವ 1950-60ರ ದಶಕಗಳಲ್ಲಿ ಶಂಕರ್ ಜೈಕಿಶನ್, ನೌಶಾದ್, ಸಿ. ರಾಮಚಂದ್ರ, ಎಸ್. ಡಿ. ಬರ್ಮನ್, ಸುಧೀರ್ ಫಡ್ಕೆ, ರೋಶನ್, ಮದನ್ ಮೋಹನ್, ಹೇಮಂತ್ ಕುಮಾರ್, ಎನ್. ದತ್ತಾ, ಚಿತ್ರಗುಪ್ತ, ರವಿ, ಸಲಿಲ್ ಚೌಧರಿ, ಖಯ್ಯಾಮ್, ಎಸ್.ಎನ್.ತ್ರಿಪಾಠಿ, ಎಸ್. ಮೊಹಿಂದರ್, ಕಲ್ಯಾಣಜೀ ಆನಂದಜೀ, ಲಕ್ಷ್ಮೀಕಾಂತ್  ಪ್ಯಾರೇಲಾಲ್, ಆರ್. ಡಿ ಬರ್ಮನ್  ಮುಂತಾದವರ ಸಂಗೀತ ನಿರ್ದೇಶನದಲ್ಲಿ ಲತಾ ಹಾಡಿದ ಸೋಲೊ ಹಾಗೂ ವಿಶೇಷವಾಗಿ ರಫಿ ಅವರ ಜೊತೆಗಿನ ಯುಗಳ ಗೀತೆಗಳು ಜನರನ್ನು ಮೋಡಿ ಮಾಡಿದವು. ರಫಿ 1980ರಲ್ಲೇ ನಿಧನರಾದರೂ, ಮಧ್ಯೆ ಒಂದೆರಡು ವರ್ಷ ಅವರಿಬ್ಬರೂ ಜೊತೆಯಾಗಿ ಹಾಡದಿದ್ದರೂ ಲತಾ ಮಂಗೇಶ್ಕರ್ ಅತಿ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ್ದು ರಫಿ ಅವರೊಂದಿಗೆಯೇ ಎಂಬುದು ಈ ಜುಗಲ ಜೋಡಿಯ ಜನಪ್ರಿಯತೆಯನ್ನು ಜಾಹೀರುಗೊಳಿಸುತ್ತದೆ. 1947ರ ‘ಶಾದೀ ಸೆ ಪಹಲೆ’ ಎಂಬ ಚಿತ್ರದಲ್ಲಿ   ಅವರು ಮೊಟ್ಟಮೊದಲ ಯುಗಳಗೀತೆಯನ್ನು ಹಾಡಿದ್ದೂ ರಫಿ ಜೊತೆಯಲ್ಲೇ. 1954ರಲ್ಲಿ ಮುಂಬಯಿಯಲ್ಲಿ ತಯಾರಾಗುತ್ತಿದ್ದ ‘ಆಶಾ ನಿರಾಶಾ’ ಎಂಬ  ಕಲ್ಯಾಣ್ ಕುಮಾರ್ ಅಭಿನಯದ   ಕನ್ನಡ ಚಿತ್ರಕ್ಕಾಗಿ ರಫಿ ಲತಾ ಯುಗಳಗೀತೆಯೊಂದು ರೆಕಾರ್ಡ್ ಆದುದರ ಬಗ್ಗೆ ದಾಖಲೆ ಇದೆ. ಆದರೆ  ಚಿತ್ರ ಅರ್ಧಕ್ಕೆ ನಿಂತು ಆ ಹಾಡು ಕಾಲಗರ್ಭದ ಕತ್ತಲಲ್ಲಿ  ಕಾಣೆಯಾಗಿ ಹೋಯಿತು. ಹೀಗಾಗಿ ‘ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕಾಗಿ ಅವರು ಹಾಡಿದ ಎರಡು ಕನ್ನಡ ಹಾಡುಗಳು ಮಾತ್ರ ನಮಗೆ ದಕ್ಕಿದವು.

ಲತಾ ಧ್ವನಿಯನ್ನು ಬಳಸದೆಯೇ ಗೆದ್ದವರು ಓ.ಪಿ. ನಯ್ಯರ್ ಮಾತ್ರ. ಈ ಸುವರ್ಣ ಯುಗದ ಸಂಗೀತ ನಿರ್ದೇಶಕರ ಪೈಕಿ ಲತಾ ಧ್ವನಿಯಲ್ಲಿ  ಅತಿ ಹೆಚ್ಚು ಮಾಧುರ್ಯಭರಿತ ಗೀತೆಗಳನ್ನು  ನೀಡಿದವರೆಂದು ಸಿ. ರಾಮಚಂದ್ರ ಹಾಗೂ ಚಿತ್ರಗುಪ್ತ ಅವರನ್ನು, ಶಾಸ್ತ್ರೀಯ ರಂಗು ತುಂಬಿದವರೆಂದು ನೌಶಾದ್ ಅವರನ್ನು, ಗಜಲ್‌ಗಳನ್ನು ಸಂಯೋಜಿಸಿದವರೆಂದು ಮದನ್ ಮೋಹನ್ ಅವರನ್ನು, ಜಾನಪದ ರಂಗು ಬಳಿದವರೆಂದು ಎಸ್.ಡಿ. ಬರ್ಮನ್ ಮತ್ತು ಸಲಿಲ್ ಚೌಧರಿ ಅವರನ್ನು , ಎಲ್ಲ ಶೈಲಿಗಳಲ್ಲೂ ದುಡಿಸಿಕೊಂಡವರೆಂದು ಶಂಕರ್ ಜೈಕಿಶನ್ ಅವರನ್ನು ಹಾಗೂ ಅವರಿಂದ ಅತಿ ಹೆಚ್ಚು ಹಾಡುಗಳನ್ನು ಹಾಡಿಸಿದವರೆಂದು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರನ್ನು ನಾವು ಸ್ಮರಿಸಿಕೊಳ್ಳಬಹುದು. ಈ ಹಂತದಲ್ಲಿ ಹಳೆಯ ಕಾಲದ ಗಾಯಕಿಯರೆಲ್ಲ ಹಿನ್ನೆಲೆಗೆ ಸರಿದು  ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಜೊತೆಗೆ  ಆಗೊಮ್ಮೆ ಈಗೊಮ್ಮೆ ಹಾಡುತ್ತಿದ್ದ ಸುಮನ್ ಕಲ್ಯಾಣ್‌ಪುರ್ ಮಾತ್ರ ರಂಗದಲ್ಲಿ ಉಳಿದರು. ಕೆಲವು ಹೊಸ ಗಾಯಕಿಯರನ್ನು ಪರಿಚಯಿಸುವ ಪ್ರಯತ್ನ ನಡೆದರೂ ಅದು ಅಷ್ಟೊಂದು ಫಲಪ್ರದವಾಗಲಿಲ್ಲ.

70ರ ದಶಕದಲ್ಲಿ ರಫಿ ಹಿನ್ನೆಲೆಗೆ ಸರಿದು ಕಿಶೋರ್ ಕುಮಾರ್ ಮುಂಚೂಣಿಗೆ ಬಂದ ಮೇಲೂ ಲತಾ ಮಂಗೇಶ್ಕರ್ ಮತ್ತು  ಆಶಾ ಭೋಸ್ಲೆ ಪಾರಮ್ಯ ಹಾಗೆಯೇ ಮುಂದುವರೆಯಿತು.  ಕನ್ನಡ ಚಿತ್ರಸಂಗೀತ ಕ್ಷೇತ್ರದಲ್ಲೂ ಪಿ.ಬಿ. ಶ್ರೀನಿವಾಸ್ ಹಿಂದೆ ಸರಿದು  ಡಾ| ರಾಜಕುಮಾರ್ ಮತ್ತು ಎಸ್.ಪಿ. ಬಾಲಸುಬ್ರಮಣ್ಯಮ್ ಯುಗ ಬಂದರೂ ಎಸ್. ಜಾನಕಿ ಮತ್ತು ಪಿ.ಸುಶೀಲಾ ಅವರು ಜನಪ್ರಿಯರಾಗಿಯೇ ಮುಂದುವರಿದ ವಿದ್ಯಮಾನವನ್ನು ಇದಕ್ಕೆ ಹೋಲಿಸಬಹುದು. 1980ರ ನಂತರ ಅಲ್ಕಾ ಯಾಜ್ಞಿಕ್, ಅನುರಾಧಾ ಪೊದುವಾಳ್ ಮುಂತಾದ ನವಯುಗದ ಗಾಯಕಿಯರು ಬಂದ ಮೇಲಷ್ಟೇ ಲತಾ ಮಂಗೇಶ್ಕರ್ ಹಾಡುವುದನ್ನು ಕಮ್ಮಿ ಮಾಡತೊಡಗಿದ್ದು. ರಾಜಶ್ರೀ ಪ್ರೊಡಕ್ಷನ್ಸ್ ಅವರ  ‘ಮೈನೆ ಪ್ಯಾರ್ ಕಿಯಾ’ ಹಾಗೂ ‘ಹಮ್ ಆಪ್ ಕೇ ಹೈಂ ಕೌನ್’ ಚಿತ್ರಗಳಲ್ಲಿ ಎಳೆ ಪ್ರಾಯದ ನಟಿಯರಿಗೆ ಹಿಟ್ ಹಾಡುಗಳನ್ನು ಹಾಡುವ ಮೂಲಕ  ಅವರ ಎರಡನೇ ಇನ್ನಿಂಗ್ಸ್ ಶುರುವಾಯಿತು ಎನ್ನಬಹುದು.  ಹೊಸ ಪೀಳಿಗೆಯವರಾದ  ಎ.ಆರ್. ರಹಮಾನ್,  ಉತ್ತಮ್ ಸಿಂಗ್, ಜತಿನ್ ಲಲಿತ್ ಮುಂತಾದವರ ಆಯ್ದ ಚಿತ್ರಗಳಲ್ಲಿ ಹಾಡುವುದರ ಮೂಲಕ ಅವರು ಗಾಯನವನ್ನು ಮುಂದುವರಿಸಿದರು. ಆದರೆ 50, 60ರ ದಶಕಗಳಲ್ಲಿ ಅವರ ಧ್ವನಿಯಲ್ಲಿದ್ದ ಎಳೆ ಸಿಯಾಳದ ತಿರುಳಿನಂಥ ಕೋಮಲತೆ ವರ್ಷಗಳು ಕಳೆದಂತೆ ಕ್ರಮೇಣ ಕಮ್ಮಿಯಾಗುತ್ತಾ ಬಂದದ್ದನ್ನು  ಅಲ್ಲಗಳೆಯಲಾಗದು.  90ರ ದಶಕದ ನಂತರವಂತೂ ಕಂಠವನ್ನು ಒತ್ತಾಯಪೂರ್ವಕವಾಗಿ ಆಕುಂಚನಗೊಳಿಸಿ ಹಾಡುತ್ತಾರೇನೋ ಅನ್ನಿಸುತ್ತಿತ್ತು.

ಲತಾ ಮಂಗೇಶ್ಕರ್ ತನ್ನ ಮಧುರ ಹಾಡುಗಳಿಗಾಗಿ ಎಷ್ಟು ಪ್ರಸಿದ್ಧರೋ ತನ್ನ ಸಿಡುಕುತನಕ್ಕಾಗಿಯೂ ಅಷ್ಟೇ ಹೆಸರು ಮಾಡಿದವರು. ತಾನು ಅನಿಸಿದ್ದನ್ನು ನೇರವಾಗಿ ಹೇಳುವವಳು, ಇದಕ್ಕಾಗಿ ತನ್ನನ್ನು ಜಗಳಗಂಟಿ ಎಂದರೂ ಪರವಾಗಿಲ್ಲ ಎಂದು ಅವರೇ ಹೇಳುತ್ತಿದ್ದರು. ಬಾಲ್ಯದಲ್ಲೇ ಹೆಗಲನ್ನೇರಿದ ಜವಾಬ್ದಾರಿ, ಅನುಭವಿಸಿದ ಕಷ್ಟ, ಎದುರಿಸಿದ ಅವಮಾನ  ಇವುಗಳೆಲ್ಲ ಇದಕ್ಕೆ ಕಾರಣವಾಗಿರಬಹುದು. ಬಾಲ್ಯದಲ್ಲೇ ಅವರ ಸಿಟ್ಟು ಪ್ರಕಟವಾದ ಪ್ರಸಂಗ ಒಂದಿದೆ. ಸಾಂಗಲಿಯಲ್ಲಿರುವಾಗ ಮನೆ ಪಕ್ಕದಲ್ಲಿರುವ ಶಾಲೆಗೆ ಅವರು ಹೋಗುತ್ತಿದ್ದರು. ಒಂದು ದಿನ ಅಕ್ಷರಗಳನ್ನು ಬಹಳ ಚಂದವಾಗಿ ಬರೆದು ತೋರಿಸಿದ್ದಕ್ಕೆ ಅಧ್ಯಾಪಕರ ಶಹಬ್ಬಾಸ್‌ಗಿರಿ ಸಿಕ್ಕಿತಂತೆ. ಮರುದಿನ ಪುಟ್ಟ ಮಗುವಾಗಿದ್ದ ಆಶಾಳನ್ನು ತನ್ನೊಡನೆ ಶಾಲೆಗೆ ಕರೆದುಕೊಂಡು ಹೋದಾಗ ಅದೇ ಅಧ್ಯಾಪಕರು ಆಕ್ಷೇಪಿಸಿದ್ದಕ್ಕೆ ಕೋಪಗೊಂಡು ತಾನಿನ್ನು ಶಾಲೆಗೇ ಹೋಗುವುದಿಲ್ಲ ಎಂದು ನಿರ್ಧರಿಸಿದರಂತೆ. ನಂತರ ಅವರು ಮನೆಯಲ್ಲೇ ಮೇಸ್ಟರನ್ನಿಟ್ಟುಕೊಂಡು ಕಲಿತದ್ದು.  ಪ್ರಸಿದ್ಧ ಬ್ರಾಡ್‌ಕಾಸ್ಟರ್ ಅಮೀನ್ ಸಯಾನಿ ಒಮ್ಮೆ ಈ ಮನಸ್ತಾಪಗಳ ಕುರಿತೇ ಅವರ ಸಂದರ್ಶನ ನಡೆಸಿದ್ದು ಅದು ಎರಡು ಭಾಗಗಳಲ್ಲಿ ಪ್ರಸಾರವಾಗಿತ್ತು. ಓ.ಪಿ. ನಯ್ಯರ್, ಎಸ್.ಡಿ. ಬರ್ಮನ್, ಸಿ.ರಾಮಚಂದ್ರ,  ಆಶಾ ಭೋಸ್ಲೆ, ರಾಜಕಪೂರ್, ಶಂಕರ್, ಮಹಮ್ಮದ ರಫಿ ಮುಂತಾದವರೊಡನೆ ಅವರಿಗೆ ಉಂಟಾಗಿದ್ದ ಮನಸ್ತಾಪದ ವಿವರಗಳು ಜೂನ್ 2021ರ ಉತ್ಥಾನ ಸಂಚಿಕೆಯಲ್ಲಿ ಪ್ರಕಟವಾದ ‘ವಿರಸವೆಂಬ ವಿಷ’ ಲೇಖನದಲ್ಲಿವೆ.  ಅನೇಕ ಸಮಕಾಲೀನ ಗಾಯಕಿಯರ ಅವಕಾಶಗಳನ್ನು ಕಸಿದು ಅವರು ಮುಂದೆ ಬರದಂತೆ ತಡೆದರೆಂಬ ಅಪವಾದ ಕೂಡ ಲತಾ ಮಂಗೇಶ್ಕರ್  ಮೇಲಿದೆ. ಆದರೆ ಅವರಂತೆಯೇ ಧ್ವನಿಯಿದ್ದ ಸುಮನ್ ಕಲ್ಯಾಣಪುರ್ ಅವರಿಗೆ ಲತಾ ಪಾರಮ್ಯದ ಕಾಲದಲ್ಲೂ   ಬಹಳಷ್ಟು ಜನಪ್ರಿಯ ಹಾಡುಗಳನ್ನು  ಹಾಡಲು ಸಾಧ್ಯವಾಗಿದೆ. ವಾಸ್ತವವಾಗಿ ಇಂಥ ವಿಷಯಗಳಲ್ಲಿ ಡಿಸ್ಟ್ರಿಬ್ಯೂಟರುಗಳ, ತೆರೆಯ ಮೇಲೆ ಕಾಣಿಸುವ ನಟ ನಟಿಯರ ಒತ್ತಡ, ಪ್ರಭಾವ ಹೆಚ್ಚಿರುತ್ತವೆ. ಯಾರು ಹೇಳಿ ಕೊಟ್ಟದ್ದನ್ನು ಅತಿ ಶೀಘ್ರವಾಗಿ ಕಲಿತು ನಿಗದಿತ ಸಮಯಕ್ಕೆ ರೆಕಾರ್ಡಿಂಗಿಗೆ ಬರುತ್ತಾರೋ ಅಂಥ ಗಾಯಕ ಗಾಯಕಿಯರನ್ನೇ ಸಂಗೀತ ನಿರ್ದೇಶಕರು ಹೆಚ್ಚು ನೆಚ್ಚಿಕೊಳ್ಳುವುದು ಸಹಜ ಪ್ರಕ್ರಿಯೆ.

ಅವರು ಕೊನೆಯ ವರೆಗೆ ಮದುವೆ ಆಗದೆ ಏಕೆ ಉಳಿದರೆಂದು ಎಲ್ಲರನ್ನೂ ಕಾಡುವ ಇನ್ನೊಂದು ಪ್ರಶ್ನೆ. ತಾನು ಮದುವೆಯಾದರೆ ತನ್ನ ಆರಾಧ್ಯ ದೈವ ಕುಂದನ್ ಲಾಲ್ ಸೈಗಲರನ್ನೇ ಎಂದು ಅವರು ಬಾಲ್ಯದಲ್ಲಿ ಹೇಳುವುದಿತ್ತಂತೆ. ಆರಂಭದ ಕಷ್ಟಗಳು ಕಳೆದು ಬದುಕು ಸ್ಥಿರಗೊಂಡ ಮೇಲೆ ಅವರಿಗಾಗಿ ರಾಜಮನೆತನವೊಂದಕ್ಕೆ ಸೇರಿದ ಹುಡುಗನನ್ನು  ಕುಟುಂಬದವರು ನೋಡಿದ್ದರು.  ಇಬ್ಬರೂ ಪರಸ್ಪರ ಒಪ್ಪಿಯೂ ಇದ್ದರು.  ಆದರೆ ಅದೇಕೋ ಆ ವಿಷಯ ಅಲ್ಲಿಗೇ ನಿಂತು ಬಿಟ್ಟಿತು.  ಕಾರ್ಯಬಾಹುಳ್ಯದ ಕಾರಣದಿಂದ ಆ ಮೇಲೆ ತನಗೆ ಮದುವೆಯ ಬಗ್ಗೆ ಯೋಚಿಸಲು ಸಮಯವೇ ಸಿಗಲಿಲ್ಲ ಎಂದು ಲತಾ ಹೇಳುತ್ತಿದ್ದರು. ಹುಟ್ಟು, ಮದುವೆ, ಸಾವು ಇವು ಮೂರನ್ನು ಬ್ರಹ್ಮ ಮೊದಲೇ ಬರೆದಿಟ್ಟಿರುತ್ತಾನೆ ಎಂದೂ ಹೇಳುತ್ತಿದ್ದರು.



ಅವರು ಆನಂದಘನ್ ಎಂಬ ಹೆಸರಿನಲ್ಲಿ ಕೆಲವು ಮರಾಠಿ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದರು.  ಫೋಟೊಗ್ರಫಿಯ ಹವ್ಯಾಸವೂ ಅವರಿಗಿತ್ತು. ಬೆಲೆಬಾಳುವ ಕ್ಯಾಮರಾಗಳು ಅವರಲ್ಲಿದ್ದವು. ಕ್ರಿಕೆಟ್ಟಲ್ಲೂ ಆಸಕ್ತಿ ಇದ್ದ ಅವರು ಸುನಿಲ್ ಗವಾಸ್ಕರ್, ತೆಂಡುಲ್ಕರ್ ಮುಂತಾದವರೊಡನೆ ನಿಕಟ ಬಾಂಧವ್ಯ ಹೊಂದಿದ್ದರು. ಶಿವಾಜಿಯ ಪರಮ ಭಕ್ತರಾದ ಅವರ ಕುಟುಂಬಕ್ಕೆ ಸಾವರ್ಕರ್ ಅವರ ಒಡನಾಟವೂ ಇತ್ತು. ಲತಾ 6 ವರ್ಷದವರಾಗಿರುವಾಗ ಸಾವರ್ಕರ್ ಅವರ ಮನೆಗೆ ಬಂದಿದ್ದರಂತೆ. ಸಾವರ್ಕರ್ ಅನಾರೋಗ್ಯ ಪೀಡಿತರಾಗಿದ್ದಾಗ ಸೇವೆ ಮಾಡುವ ಅವಕಾಶವೂ ಲತಾಗೆ ದೊರಕಿತ್ತಂತೆ. ತಾನೂ ಚಳವಳಿಯಲ್ಲಿ ಭಾಗವಹಿಸಬೇಕೆಂಬ ಇಚ್ಛೆ ಪ್ರಕಟಪಡಿಸಿದಾಗ ಸಂಗೀತ ಕ್ಷೇತ್ರದಲ್ಲೇ ಮುಂದುವರಿಯುವಂತೆ ಸಾವರ್ಕರ್ ಸಲಹೆ ನೀಡಿದರಂತೆ.  ಬಾಳ್ ಠಾಕ್ರೆ ಅವರೊಂದಿಗೆ ನಿಕಟ ಸಂಪರ್ಕ ಇದ್ದರೂ ಎಂದೂ ರಾಜಕೀಯದ ವಿಷಯ ತಮ್ಮ ನಡುವಿನ ಮಾತುಕತೆಯಲ್ಲಿ ಬರುತ್ತಿರಲಿಲ್ಲ, ರಾಜಕೀಯ ತನಗೆ ಅರ್ಥವೂ ಆಗುವುದಿಲ್ಲ ಎಂದು ಒಂದು ಇಂಟರ್‌ವ್ಯೂದಲ್ಲಿ ಲತಾ ಹೇಳಿದ್ದಾರೆ. ಕೆಲವರ ಒತ್ತಾಯಕ್ಕೆ ಇಲ್ಲವೆನ್ನಲಾಗದೆ 6 ವರ್ಷ ರಾಜ್ಯ ಸಭೆಯ ಸದಸ್ಯರಾಗಿದ್ದರೂ  ಒಟ್ಟು 6 ಸಲ ಮಾತ್ರ ಕಲಾಪದಲ್ಲಿ ಭಾಗವಹಿಸಿರುವುದನ್ನು ಹಾಗೂ ಅಲ್ಲಿ ಒಮ್ಮೆಯೂ ಮಾತನಾಡದಿರುವುದನ್ನು ಕೂಡ  ಹೇಳಿದ್ದಾರೆ.



ಅತಿ ಹೆಚ್ಚು ಹಾಡುಗಳನ್ನು ಹಾಡಿದವರೆಂದು ಒಮ್ಮೆ ಅವರ ಹೆಸರು ಗಿನ್ನೆಸ್ ದಾಖಲೆಗೂ ಸೇರಿತ್ತು.  ಆದರೆ ಆ ಮೇಲೆ ಅದನ್ನು ಹಿಂದೆ ಪಡೆಯಲಾಯಿತು. ಕನ್ನಡದ ಎರಡು ಹಾಡುಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಅವರು ಸುಮಾರು 30 ಸಾವಿರ ಹಾಡುಗಳನ್ನು  ಹಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸುವವರೂ ಇದ್ದಾರೆ. ಒಂದು ಅಂದಾಜಿನ ಪ್ರಕಾರ ಅವರು ವಿವಿಧ ಸಹಗಾಯಕ ಗಾಯಕಿಯರೊಡನೆ ಹಾಡಿದ  ಯುಗಳ ಗೀತೆಗಳ ಸಂಖ್ಯೆ ಸುಮಾರು 1530. ಲೆಕ್ಕಕ್ಕೆ ಸಿಗದ್ದು ಎಂದು ಇನ್ನೂ 70 ಬೇಕಿದ್ದರೆ ಸೇರಿಸೋಣ. ಹಾಗಿದ್ದರೆ ಉಳಿದ 28,400 ಹಾಡುಗಳನ್ನು ಅವರೊಬ್ಬರೇ ಹಾಡಿದರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೆ ನೋಡಿದರೆ ಚಿತ್ರಗಳಲ್ಲಿ ಅವರ ಸೊಲೊ ಹಾಡುಗಳಿಗಿಂತ ಡ್ಯುಯಟ್ ಮತ್ತು ಪುರುಷ ಗಾಯಕರ ಹಾಡುಗಳೇ ಹೆಚ್ಚು ಇರುತ್ತಿದ್ದುದು.  ವಿವಿಧ ಪ್ರಸಿದ್ಧ ಸಂಗೀತ ನಿರ್ದೇಶಕರಿಗಾಗಿ ಅವರು ಹಾಡಿದ ಹಾಡುಗಳ ಒಟ್ಟು ಸಂಖ್ಯೆ 3800 ಎಂದು ಇನ್ನೊಂದು ಅಂದಾಜು.  ಇನ್ನೂ 200 ಸೇರಿಸಿದರೂ ಉಳಿದ 26 ಸಾವಿರದ ಲೆಕ್ಕ ಸಿಗುವುದಿಲ್ಲ. ಕಾನ್ಪುರದ ಹರ್ಮಂದಿರ್ ಸಿಂಗ್ ಹಮ್‌ರಾಜ್ ಎಂಬ ಸಂಶೋಧಕರು ಸಂಪಾದಿಸಿದ ಗೀತ್ ಕೋಶ್ ಎಂಬ ಹಿಂದಿ ಹಾಡುಗಳ ಎನ್‌ಸೈಕ್ಲೊಪಿಡಿಯಾ ಪ್ರಕಾರ 1991ರ ವರೆಗೆ ಲತಾ ಮಂಗೇಶ್ಕರ್ ಹಾಡಿದ ಒಟ್ಟು ಹಾಡುಗಳ ಸಂಖ್ಯೆ ಸುಮಾರು 5250. ಒಟ್ಟಿನಲ್ಲಿ ಈ 30000, 50000ಗಳ ಲೆಕ್ಕಗಳು ಉತ್ಪ್ರೇಕ್ಷಿತ ಎಂದೇ ಹೇಳಬೇಕಾಗುತ್ತದೆ. ಲೆಕ್ಕಾಚಾರ ಎಷ್ಟೇ ಇದ್ದರೂ ಅವರ ಹಾಡುಗಳ  ಗುಣಮಟ್ಟದ ಗುಣಕದಿಂದ ಗುಣಿಸಿದರೆ ಸಿಗುವ ಸಂಖ್ಯೆ ಇನ್ನು ಬರಬಹುದಾದ  ಲಕ್ಷ ಹಾಡುಗಳಿಗೂ ಮೀರಿದ್ದು ಎಂಬುದಂತೂ ನಿರ್ವಿವಾದ.


ಚಿದಂಬರ ಕಾಕತ್ಕರ್
ಮಂಗಳೂರು

ಇದು ಉತ್ಥಾನ ಮಾಸ ಪತ್ರಿಕೆಯ ಎಪ್ರಿಲ್ 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ.