ಅದು 60ರ ದಶಕದ ಪೂರ್ವಾರ್ಧ. ಕನ್ನಡ ಚಿತ್ರ ಸಂಗೀತ ಉತ್ತುಂಗದ ಹಾದಿಯಲ್ಲಿದ್ದ ಸಮಯ. ಪೇಟೆ ಪಟ್ಟಣಗಳಲ್ಲಿದ್ದವರಿಗೆ ಆಗಾಗ ಸಿನಿಮಾ ನೋಡುವ ಅವಕಾಶವಿದ್ದರೂ ಉಳಿದವರಿಗೆ ರೇಡಿಯೋ ಮಾತ್ರ ಮನರಂಜನೆಯ ಸಾಧನ. ಆಗ ಇದ್ದದ್ದು ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳು ಮಾತ್ರ. ಅಲ್ಲಿ ದಿನಕ್ಕೆ 15 ನಿಮಿಷ ಚಿತ್ರಗೀತೆಗಳ ಕಾರ್ಯಕ್ರಮ. ವಾರಕ್ಕೊಂದು ದಿನ ಅರ್ಧ ಗಂಟೆ ಮೆಚ್ಚಿನ ಚಿತ್ರಗೀತೆಗಳು. ಇದು ಬಿಟ್ಟರೆ ಗ್ರಾಮಸ್ಥರ ಕಾರ್ಯಕ್ರಮದಲ್ಲಿ ಎಂದಾದರೊಮ್ಮೆ ಒಂದು ಚಿತ್ರಗೀತೆ ಹಾಗೂ ಮಧ್ಯಾಹ್ನ ಕಾರ್ಮಿಕರಿಗಾಗಿ ಕಾರ್ಯಕ್ರಮದಲ್ಲಿ ಕೆಲವೊಮ್ಮೆ ಚಿತ್ರಗೀತೆಗಳನ್ನಾಧರಿಸಿದ ಗೀತರೂಪಕ. ಶಾರ್ಟ್ ವೇವ್ ವಿವಿಧಭಾರತಿಯಿಂದ ಮಧುರ್ ಗೀತಂ ಎಂಬ ಕಾರ್ಯಕ್ರಮದಲ್ಲಿ ದಿನಕ್ಕೆ 15 ನಿಮಿಷ ಕನ್ನಡ ಹಾಡು ಪ್ರಸಾರವಾಗುವಾಗ ಹಾಡುಗಾರರು, ಗೀತೆ ಬರೆದವರು ಮತ್ತು ಸಂಗೀತ ನಿರ್ದೇಶಕರೆಲ್ಲರ ಹೆಸರು ಹೇಳುತ್ತಿದ್ದರೂ ಬೆಂಗಳೂರು ಕೇಂದ್ರದಿಂದ ಚಿತ್ರಗೀತೆ ಪ್ರಸಾರವಾಗುವಾಗ ಗಾಯಕರು ಮತ್ತು ಗೀತೆ ಬರೆದವರ ಹೆಸರು ಮಾತ್ರ ಹೇಳುತ್ತಿದ್ದರು. ಅಲ್ಲಿಂದ ಹೆಚ್ಚು ಕೇಳ ಬರುತ್ತಿದ್ದುದು ‘ಆರ್. ಎನ್. ಜಯಗೋಪಾಲ್ ಅವರ ರಚನೆ’ ಎಂಬ ವಾಕ್ಯ. ಏಕೆಂದರೆ ಆಗ ಜನಪ್ರಿಯ ಚಿತ್ರಗೀತೆಗಳಲ್ಲಿ ಸಿಂಹಪಾಲು ಇವರದೇ ಆಗಿರುತ್ತಿತ್ತು. ನಮ್ಮ ನ್ಯಾಶನಲ್ ಎಕ್ಕೋ ರೇಡಿಯೋದಲ್ಲಿ ನಾನು ಅತಿ ಹೆಚ್ಚು ಬಾರಿ ಅವರ ಹೆಸರು ಕೇಳಿದ್ದು ಆನಂದ ಬಾಷ್ಪ ಚಿತ್ರದ ಗೀತೆಗಳೊಂದಿಗೆ. ಆಗ ಚಿತ್ರಗೀತೆಗಳಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಈ ಚಿತ್ರದ ಒಂದಲ್ಲ ಒಂದು ಹಾಡು ಇದ್ದೇ ಇರುತ್ತಿತ್ತು. ಜಯಗೋಪಾಲ್ ಎಂಬ ಹೆಸರು ಕೇಳಿದೊಡನೆ ನನ್ನ ಮನಸ್ಸಲ್ಲಿ ಮೂಡುತ್ತಿದ್ದುದು ಬಿಳಿ ಗಾಂಧಿ ಟೋಪಿ ಧರಿಸಿದ ತೆಳ್ಳನೆ ಮೈಕಟ್ಟಿನ ವ್ಯಕ್ತಿಯ ಚಿತ್ರ! ಇದಕ್ಕೆ ಕಾರಣ ಅಂತಹ ಟೋಪಿ ಧರಿಸುತ್ತಿದ್ದ ನಮ್ಮ ಸಂಸ್ಕೃತ ಅಧ್ಯಾಪಕ ಗೋಪಾಲ ಮಾಸ್ಟ್ರು!! ಆಗ ಪತ್ರಿಕೆಗಳಲ್ಲೂ ಸಿನಿಮಾ ನಟ ನಟಿಯರ ಚಿತ್ರಗಳು ನೋಡ ಸಿಗುತ್ತಿದ್ದವೇ ಹೊರತು ಇವರನ್ನೆಲ್ಲ ನಮ್ಮ ಕಲ್ಪನೆಯಲ್ಲೇ ಕಾಣಬೇಕಾಗಿತ್ತು.
ಈಗಲೂ ಬಹಳಷ್ಟು ಹಳೆಯ ಚಿತ್ರಗೀತೆಗಳು ವಿವಿಧ ರೇಡಿಯೋ ನಿಲಯಗಳಿಂದ ಕೇಳಲು ಸಿಗುತ್ತಿವೆ. ಎಷ್ಟೋ ಹಳೆಯ ಚಿತ್ರಗಳು ಹಾಗೂ ಹಾಡುಗಳ ವೀಡಿಯೊಗಳು ಅಂತರ್ಜಾಲದಲ್ಲಿ ನೋಡಲು ಸಿಗುತ್ತವೆ. ಆದರೆ ಆನಂದ ಬಾಷ್ಪದಂಥ ಕೆಲವೊಂದು ಚಿತ್ರಗಳ ವೀಡಿಯೊಗಳೂ ಇಲ್ಲ, ಹಾಡುಗಳೂ ಅವಜ್ಞೆಗೊಳಗಾಗಿ ಅಜ್ಞಾತವಾಸ ಅನುಭವಿಸುತ್ತಿವೆ.
1963ರಲ್ಲಿ ತೆರೆಕಂಡ ಆನಂದ ಬಾಷ್ಪ ಚಿತ್ರವನ್ನು ಆರ್. ನಾಗೇಂದ್ರ ರಾವ್ ನಿರ್ಮಿಸಿ ನಿರ್ದೇಶಿಸಿದ್ದರು. ಆರ್. ಎನ್. ಜಯಗೋಪಾಲ್ ಬರೆದ ಹಾಡುಗಳಿಗೆ ಜಿ.ಕೆ. ವೆಂಕಟೇಶ್ ಸ್ವರ ಸಂಯೋಜನೆ ಮಾಡಿದ್ದರು. ಆ ಚಿತ್ರದ ವಿವರಗಳು ಪತ್ರಿಕೆಯೊಂದರಲ್ಲಿ ಈ ರೀತಿ ಪ್ರಕಟವಾಗಿದ್ದವು.
ಸುದೈವವಶಾತ್ ನನ್ನ ಸಂಗ್ರಹದಲ್ಲಿ ಈ ಚಿತ್ರದ ಎಲ್ಲ ಹಾಡುಗಳೂ ಲಭ್ಯವಿದ್ದು ಆಸಕ್ತರಿಗಾಗಿ ಅವುಗಳನ್ನು ಸಾಹಿತ್ಯದೊಡನೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.
ಕನ್ನಡಿಯಲಿ ಕಾಣುತಿಹ ಕನ್ನಿಕೆ
ಹಾಡಿದವರು : ಎಸ್. ಜಾನಕಿ
ಬೇಲೂರಿನ ದರ್ಪಣ ಸುಂದರಿ ಜಯಗೋಪಾಲ್ ಅವರಿಗೆ ಈ ಹಾಡು ಬರೆಯಲು ಸ್ಪೂರ್ತಿ ನೀಡಿರಬಹುದು. ದ್ವೀತೀಯಾಕ್ಷರದ ಆದಿಪ್ರಾಸ ಹೊಂದಿರುವ ಈ ಹಾಡು ಮೇಲೆ ಈಗಾಗಲೇ ಹೇಳಿದ ಬೆಂಗಳೂರು ಆಕಾಶವಾಣಿಯ ಕಾರ್ಮಿಕರ ಕಾರ್ಯಕ್ರಮದ ಚಿತ್ರಗೀತೆಗಳನ್ನಾಧರಿಸಿದ ಗೀತ ರೂಪಕದಲ್ಲಿ ಆಗಾಗ ಕೇಳಿಬರುತ್ತಿತ್ತು. ‘ಈರಣ್ಣ’ ಎ.ಎಸ್. ಮೂರ್ತಿ ಅವರು ಪ್ರಸ್ತುತ ಪಡಿಸುತ್ತಿದ್ದ ಆ ಕಾರ್ಯಕ್ರಮ ಕೇಳಿದ ನೆನಪು ಕೆಲವರಿಗಾದರೂ ಇರಬಹುದು.
ಕನ್ನಡಿಯಲಿ ಕಾಣುತಿಹ ಕನ್ನಿಕೆ
ನಿನ್ನ ಕೆನ್ನೆಯಲಿ ಕೆಂಪಡರಿಹುದೇತಕೆ
ಬಿನ್ನವಿಸು ಈ ಪರಿ ಬಿಸುಸುಯ್ಯಲೇಕೆ
ನಿನ್ನ ಕಂಗಳಲ್ಲಿ ತೋರುತಿದೆ ತೀರದ ಬಯಕೆ
ಉದಯಿಸಲು ಮೂಡಣದಿ ದಿನಕರನು
ಪದುಮವದು ಅರಳುವುದು ತಾನೇಕೆ
ಗಗನದಲಿ ರಾಜಿಸಿರೆ ಚಂದ್ರಮನು
ಸಾಗರವು ತುಂಬುವುದು ತಾನೇಕೆ
ಲೋಹವದು ಬಳಿಸಾರೆ ಕಾಂತವನು
ಮೋಹಿಸುತೆ ತಾನೋಡಿ ಅಪ್ಪುವುದೇಕೆ
ನೇಹದಿಂದ ಬಂದ ವಸಂತನ ಕಂಡು
ಕುಹೂ ಕುಹೂ ಕೋಗಿಲೆಯೂ ಪಾಡುವುದೇಕೆ
ಈ ಹಾಡಿನಲ್ಲಿ ಒಂದೆಡೆ ಬರುವ ಬಿಸುಸುಸುಯ್ಯಲೇಕೆ ಎಂದರೇನೆಂದು ಅನೇಕರಿಗೆ ಗೊತ್ತಾಗಲಾರದು. ಈ ಹಾಡಿನಲ್ಲಿ ಜಾನಕಿ ಎಲ್ಲೂ ಬಿಸುಸುಯ್ಯಲಿಲ್ಲ. ಆದರೆ ಈಗಿನ ಗಾಯಕ ಗಾಯಕಿಯರು ಪ್ರತೀ ಹಾಡನ್ನೂ ಬಿಸುಸುಯ್ಯುತ್ತಲೇ ಹಾಡುತ್ತಾರೆ ಅಂದರೆ ನಿಮಗೆ ಅರ್ಥವಾದೀತು! ಎಸ್. ಜಾನಕಿ ಇಲ್ಲಿ ವಿವರಿಸಿದ್ದಾರೆ ಕೇಳಿ.
ಅಂದು ಮಾನಿನಿ ಮನವ
ಹಾಡಿದವರು : ಎಸ್. ಜಾನಕಿ
ಇದೊಂದು ವಿಷಾದ ಭಾವದ ಗೀತೆ. ನಾಯಕಿಯು ಇಲ್ಲಿ ಅಂದು ಮತ್ತು ಇಂದುಗಳನ್ನು ಹೋಲಿಸಿ ಸಂಕಟಪಡುತ್ತಾಳೆ. ಜಯಗೋಪಾಲ್ ಅವರು ಮಕಾರವನ್ನು ಮುಖ್ಯವಾಗಿಟ್ಟುಕೊಂಡು ಇದನ್ನು ಬರೆದಿದ್ದಾರೆ. ಹಾಡಿನ ಭಾವಕ್ಕೆ ಹೊಂದಿಕೆಯಾಗುವಂತೆ ಸಾರಂಗಿಯನ್ನು ಮುಖ್ಯ ವಾದ್ಯವಾಗಿ ಬಳಸಲಾಗಿದೆ. ಹೆಚ್ಚಾಗಿ ಹಾಡುಗಳ ಆರಂಭದಲ್ಲಿ ಆಲಾಪವಿರುತ್ತದೆ. ಆದರೆ ಈ ಹಾಡು ಆಲಾಪದೊಂದಿಗೆ ಮುಗಿಯುತ್ತದೆ.
ಅಂದು ಮಾನಿನಿ ಮನವ ಮುದದಲಿ ಸೆಳೆದ
ಮಾನವನವನಾರೋ
ಇಂದು ಮೋಹದ ಜಾಲವ ಬೀರುವ ಹೆಣ್ಣಿಗೆ
ಮಣಿಯುವನಿವನಾರೋ
ಅಂದು ಮದುಮಗಳಿಗೆ ಮಾಂಗಲ್ಯವ ಕಟ್ಟಿದ
ಮಾರನು ಅವನಾರೋ
ಇಂದು ಮದಿರೆಯಲಿ ತಾ ಸ್ವರ್ಗವ ಕಾಣುವ
ಮರುಳನು ಇವನಾರೋ
ಅಂದು ಮಡದಿಯಿತ್ತ ತಾಂಬೂಲವ ಮೆಲ್ಲುತ
ಮಿಡಿದವನವನಾರೋ
ಇಂದು ಮಡದಿಯ ಮರೆತು ಮಗುವನು ಮರೆತಿಹ
ಭ್ರಾಂತನು ಇವನಾರೋ
ವಿಭ್ರಾಂತನು ಇವನಾರೋ
ಮಲಗೊ ಮಗನೆ ಹಾಯಾಗಿ
ಹಾಡಿದವರು : ಎಸ್. ಜಾನಕಿ ಮತ್ತು ಆರ್. ನಾಗೇಂದ್ರ ರಾವ್
ಚಿತ್ರವನ್ನು ನಾನು ನೋಡಿಲ್ಲವಾದರೂ ಇದು ಪತಿಯಿಂದ ಪರಿತ್ಯಕ್ತಳಾಗಿ ತವರು ಮನೆ ಸೇರಿದ ನಾಯಕಿ ಹಾಡುವ ಹಾಡಾಗಿರಬಹುದೆಂದು ಅನ್ನಿಸುತ್ತದೆ. ಗಾನತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಈ ಹಾಡಿನ ಮಧ್ಯದಲ್ಲಿ ಬರುವ ತಾತ ಹಾಡುವ ಬಾರೋ ಬಾರೋ ಎಲೆ ಮಗುವೆ ಭಾಗ ನನಗೆ ತುಂಬಾ ಇಷ್ಟವಾಗುತ್ತಿತ್ತು. ರೇಡಿಯೋದಲ್ಲಿ ‘ಆನಂದ ಬಾಷ್ಪ ಚಿತ್ರಕ್ಕಾಗಿ ಎಸ್. ಜಾನಕಿ ಹಾಡಿದ ಹಾಡು’ ಅಂದಾಕ್ಷಣ ಆ ಭಾಗ ಆಲಿಸುವ ಸಲುವಾಗಿ ಇದೇ ಹಾಡಾಗಿರಲಿ ಎಂದು ನಾನು ಹಾರೈಸುವುದಿತ್ತು. ಆದರೆ ರೇಡಿಯೋದಲ್ಲಿ ಎಂದೂ ನಾಗೇಂದ್ರ ರಾವ್ ಹೆಸರು ಹೇಳುತ್ತಿರಲಿಲ್ಲ. ಅವರು ಹಾಡಿದ ಭಾಗವನ್ನಷ್ಟೇ ಪ್ರತ್ಯೇಕಿಸಿ ಹೆಚ್ಚು ಹಾಡದವರು ಬರಹದಲ್ಲಿ ಬಳಸಿಕೊಂಡಿದ್ದೆ.
ಮಲಗೊ ಮಗನೆ ಹಾಯಾಗಿ
ಮಾತೆಯ ಮಡಿಲ ಹೂವಾಗಿ
ಎಲೆಯ ಮರೆಯ ಕಾಯಾಗಿ
ನಿಂದೆಗೆ ಸಿಲುಕಿ ನೊಂದಿಹೆ ನಾನು
ಜನಿಸಿದೆ ಏಕೋ ಎನ್ನಲ್ಲಿ ನೀನು
ಬಾಳಿದು ಬರಡೆಂದು ಅಳಬೇಡ ಕಂದ
ನೊಂದಿಹ ತಾಯಿಯ ಮನದಾನಂದ
ಬಾರೊ ಬಾರೊ ಎಲೆ ಮಗುವೆ
ಬಣ್ಣದ ಬೊಂಬೆಯ ನಾ ತರುವೆ
ಬಾರೋ ತುಂಟರ ಗುರುವೇ ಬಾ
ಕನ್ನಡ ನಾಡಿನ ಸಿರಿಯೇ ಬಾ
ತೊಡರಗಾಲ ಹಾಕುತೆ ಬಾರೊ
ಚಿನ್ನಾರಿ ಚೆಲುವ ರಾಜಾ
ತೊದಲು ಮಾತ ಆಡುತ ಬಾರೊ
ಪನ್ನೀರು ಚೆಲ್ಲುವ ರೋಜ
ಮಾಳಿಗೆ ಮನೆಯ ಸಿರಿಯಲ್ಲಿ ಹುಟ್ಟಿ
ಬೆಳೆವ ಸ್ಥಳವು ಮುರುಕಲು ಹಟ್ಟಿ
ಮುತ್ತೇ ಮಗನೇ
ಮುತ್ತೇ ಮಗನೇ ನೀ ಎನ್ನ ಉಸಿರು
ಮರುಭೂಮಿ ನಡುವೆ ಮೆರೆವ ಹಸಿರು
ಏನೋ ಏಕೋ ಹೊಸ ಭಾವ
ಹಾಡಿದವರು : ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ
ಈ ಚಿತ್ರದ ಏಕೈಕ ಯುಗಳ ಗೀತೆ ಇದು. ಅಪರೂಪಕ್ಕೊಮ್ಮೆ ಯಾವುದಾದರೂ ರೇಡಿಯೋ ನಿಲಯದಿಂದ ಈಗಲೂ ಕೇಳಿ ಬರುವುದಿದೆ. ಪ್ರಥಮ ಚರಣ ಯಾವುದೇ interlude ಇಲ್ಲದೆ ಪಲ್ಲವಿಯ ಜೊತೆಯಲ್ಲೇ ಬರುವುದರಿಂದ ಒಂದೇ ಚರಣ ಇರುವುದೇನೋ ಎಂಬ ಭ್ರಮೆ ಉಂಟಾಗುತ್ತದೆ. ಈ ಹಾಡು ಹೊಸದಾಗಿ ಅಕ್ಕನನ್ನು ಮದುವೆಯಾದ ಭಾವನನ್ನು ಕುರಿತಾದದ್ದು ಎಂದು ಕೆಲವರು ಅಂದುಕೊಂಡದ್ದಿದೆ!
ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದೇ ಹರುಷದ ನವರಾಗ
ಒಲವಿಂದೇ ನೀ ಬಂದೆ
ಮೈ ಮರೆತು ನಾ ನಿಂದೆ
ಮೌನದೇ ಮೋದದೇ ಮೋಹದೇ
ಪ್ರೇಮದ ದೇವತೆ ಶರಣೆಂಬೆ
ಕರೆ ಕೇಳಿ ಬಂದವರೇ
ಕೈ ಹಿಡಿದ ಎನ್ನ ದೊರೆ
ದಾಸಿಯ ಆಸೆಯ ತೀರಿಸಿ
ಭಾಗ್ಯದ ಬಾಗಿಲ ತೆರೆದವರೇ
ಮೋಜಿನ ಮೋಟರು ಗಾಡಿ
ಹಾಡಿದವರು : ಪಿ. ಬಿ.ಶ್ರೀನಿವಾಸ್ ಮತ್ತು ಸಂಗಡಿಗರು
ಈ ಚಿತ್ರದಲ್ಲಿ ನಾನು ಅತಿ ಹೆಚ್ಚು ಇಷ್ಟಪಡುವ ಹಾಡಿದು. ಇದರ ಕುರಿತು ವಿಶೇಷ ವಿಶ್ಲೇಷಣೆ ಮೋಜಿನ ಮೋಟರು ಗಾಡಿ ಲೇಖನದಲ್ಲಿದೆ. ಈ ಹಾಡಿನ ಕಾಲ್ಪನಿಕ ವೀಡಿಯೋ ಕೂಡ ಅಲ್ಲಿದೆ.
ನಿಜದೆ ಯೌವನ ಮೋಜಿನ ಮೋಟರು ಗಾಡಿ
ಅದರ ಗಾಲಿಯು ಉರುಳೊ ರೀತಿಯ ನೋಡಿ
ಈ ಕಡೆ ಆ ಕಡೆ ವಾಲುತೆ ಓಡಿದೆ
ನೂಕಿದರೆ ತಾ ಸಾಗುವ ತೇರು
ಸಮಯದಲಿ ಕೈ ಕೊಡುವುದು ಗೇರು
ಲೆಕ್ಕಿಸದು ಇದು ಏರು ಪೇರು
ಸೇರುವುದು ಊರು
ನೀರು ನೀರು ನೀರು
ಬಲ್ಲವಗೆ ಈ ಓಟವೆ ಜೋಕು
ನಿಲ್ಲಿಸಲು ಇದಕಿಲ್ಲ ಬ್ರೇಕು
ಓಡಿಸಲು ಇರಬೇಕು nackಉ
ಇಲ್ಲದಿರೆ shockಉ
ಸಾಕು ಸಾಕು ಸಾಕು
ತುಂಬಾ ಚೆನ್ನಾಗಿದೆ. ಅಂದಿನ ದಿನಗಳು ಮತ್ತೊಮ್ಮೆ ಕಣ್ಮುಂದೆ ಬಂದ ಹಾಗಾಯಿತು. ಬಹಳ ವಂದನೆಗಳು
ReplyDeleteಧನ್ಯವಾದ.
Deleteದೇವರೇ!!!ನಾನಂತೂ ಕೆಲವು ಹಾಡುಗಳನ್ನು ಕೇಳಿಯೇ ಇಲ್ಲ!!
ReplyDeleteನಿಮಗಿವು ಹೊಸ ಹಳೆ ಹಾಡುಗಳು!
Deleteನಿಮ್ಮ ಬರೆಹದಲ್ಲಿರುವ ಆತ್ಮೀಯತೆ ತುಂಬಾ ಇಷ್ಟವಾಯಿತು 😊
ReplyDeleteಧನ್ಯವಾದ.
Deleteಅಪರೂಪದ ಹಾಡುಗಳು... ಹುಡುಕಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
ReplyDeleteಇವು ನಮ್ಮನ್ನು ಗತಕಾಲಕ್ಕೊಯ್ಯುವ ಟೈಮ್ ಮಷೀನುಗಳಿದ್ದ ಹಾಗೆ. ಮೆಚ್ಚುಗೆಗಾಗಿ ಧನ್ಯವಾದ.
Deleteಕನ್ನಡಿಯಲ್ಲಿ ಕಾಣುತಿಹ ಕನ್ನಿಕೆ....ಈ ಹಾಡು ಸುಮಾರು ದಿನಗಳಿಂದ ಹುಡುಕುತ್ತಿದ್ದೆ...ಯಾವ ಚಿತ್ರದ ಹಾಡಿದು ಅಂತ ತಿಳಿಯದಾಗಿತ್ತು..೯೦ರ ದಶಕದಲ್ಲಿ.ಬೆಂಗಳೂರು ವಿವಿಧ ಭಾರತಿಯ ಭಾನುವಾರದ ಹಳೆಯಚಿತ್ರದ ಗೀತೆಗಳ ನಂದನ ಕಾರ್ಯಕ್ರಮ ದಲ್ಲಿ ಖಾಯಂ ಆಗಿ ಕೇಳಿ ಬರುತ್ತಿದ್ದ ಗೀತೆ ಇದು...ಈ ಹಾಡು ಕೇಳಿಸಿದ ನಿಮಗೆ ಕೋಟಿ ವಂದನೆಗಳು ಸರ್
ReplyDeleteಎಲ್ಲರಿಗೂ ಇಂತಹ ಗೀತೆಗಳ ಬೆಲೆ ತಿಳಿಯಲಾರದು. ಪ್ರತಿಕ್ರಿಯೆಗಾಗಿ ಧನ್ಯವಾದ.
Deleteಆತ್ಮೀಯ ಚಿದಂಬರ ಕಾಕತ್ಕರ್‌ರವರಿಗೆ ನಮನಗಳು. ನಿಮ್ಮದು ಅದೆಂತಹ ತಾಳ್ಮೆ ಮತ್ತು ಸಂಗ್ರಹ !!!. ನನಗೂ ಈ ರೀತಿಯ ಹಳೆಯ ಚಿತ್ರಗೀತೆಗಳು, ಚಿತ್ರಕ್ಕೆ ಸಂಬಂದಿಸಿದ ಸಂಗತಿಗಳು, ಹಾಡು ಸಂಭಾಷಣೆ ಬರೆದವರು ಮತ್ತು ಸಂಗೀತ ನಿರ್ದೇಶಕರ ವಿಷಯದಲ್ಲಿ ಆಸಕ್ತಿ ಮತ್ತು ಹಲವಾರು ವಿಷಯಗಳನ್ನು ಓದಿ ಕ್ರೋಡಿಕರಿಸಿಕೊಂಡಿದ್ದೇನೆ. ಆದರೆ ಅವುಗಳನ್ನು ಅನುಭವದ ಭಾಗವಾಗಿ ಈ ರೀತಿ ಹಂಚಿಕೊಂಡಿಲ್ಲ. ನಿಮ್ಮದು ಅಸಾಧಾರಣ ಸಾಧನೆ. ನನಗೆ ತುಂಬಾ ದಿನದಿಂದ ತುಡಿಯುತ್ತಿದ್ದ ಹಲವಾರು ಹಾಡುಗಳು ನನಗಿಲ್ಲಿ ಸಿಕ್ಕಿವೆ. ಅದಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮ ಈ ಸಂಗ್ರಹ ನನಗೆ ಈಚೀಚೆಗೆ ಆಕಸ್ಮಿಕವಾಗಿ ಸಿಕ್ಕಿತು. ಹಾಗಾಗಿ ಈಗ ಗಮನಿಸಿ ಪ್ರತಿಕ್ರಿಯಿಸುತ್ತಿದ್ದೇನೆ. ಮುರಿಯದ ಮನೆ, ಆನಂದ ಭಾಷ್ಪ, ಮುದಕೊಟ್ಟವು. ನಿಮಗೆ ಗೊತ್ತೆ? ತೂಗು ದೀಪ ಚಿತ್ರ ನಮಗೆ ಯೂಟ್ಯೂಬ್‌ನಲ್ಲಾಗಲಿ ಬೇರಾವುದೇ ಅಂತರ್ಜಾಲದಲ್ಲಾಗಲಿ ಸಿಗುತ್ತಿಲ್ಲ. ಬಹುಷ: ಅದರ ಸೆಲುಲಾಯ್ಡ್ ಪ್ರತಿಯೂ ಲಭ್ಯವಿಲ್ಲವೇನೊ. ನಿಮ್ಮಲ್ಲಿ ಲಭ್ಯವಿದ್ದರೆ ಪೂರ್ತಿ ಚಿತ್ರವನ್ನು ಅಪ್‌ಲೋಡ್ ಮಾಡುವುದು ಸಾಧ್ಯವೆ ಪ್ರಯತ್ನಿಸಿ. ಹಾಡುಗಳು ಸಿಗುತ್ತಿವೆ. ಏನೇ ಇರಲಿ ನೀವು ನಿಮ್ಮ ಅನುಭವವನ್ನು ಅಭಿರುಚಿಯನ್ನು ಈ ರೀತಿ ಅಂತರ್ಜಾಲಕ್ಕೆ ಹಾಕಿ ಒಂದು ಶಾಶ್ವತ ಕೆಲಸ ಮಾಡಿದ್ದೀರಿ. ನಿಮ್ಮ ಪ್ರಯತ್ನ ನಮ್ಮಂತಹವರಿಗೆ ಪ್ರಯೋಜನವಾಗಿದೆ. ಧನ್ಯವಾದಗಳು. ಲಯನ್ ಕೆ.ಎ.ಸಿದ್ದಲಿಂಗಪ್ಪ, ೪೭೪, ಶಿವದರ್ಶಿನಿ, ೨೩ನೇ ಮುಖ್ಯ ರಸ್ತೆ, ೧೮ನೇ ಅಡ್ಡ ರಸ್ತೆ, ೨ನೇ ಹಂತ, ಜೆ.ಪಿ.ನಗರ, ಮೈಸೂರು -೫೭೦೦೩೧ (೯೮೮೦೮೮೩೭೭೯)
ReplyDeleteನಿಮ್ಮ ಸುದೀರ್ಘ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮಂತಹ ಆಸಕ್ತರ ಕಣ್ಣಿಗೆ ಬಿದ್ದರೆ ಇದಕ್ಕಾಗಿ ಪಟ್ಟ ಶ್ರಮ ಸಾರ್ಥಕ. ತೂಗುದೀಪದ ವೀಡಿಯೊ ಹಾಡುಗಳು ಇವೆ ಅಂದರೆ ಚಿತ್ರ VHS Tape ರೂಪದಲ್ಲಾದರೂ ಎಲ್ಲಾದರೂ ಖಂಡಿತ ಇರಬಹುದು. ನೋಡೋಣ, ಯಾರಾದರೂ ಪುಣ್ಯಾತ್ಮರು upload ಮಾಡಿಯಾರು. ಪಿ.ಬಿ.ಶ್ರೀನಿವಾಸ್ ಮೊತ್ತ ಮೊದಲು ನಮಗೆ ಕಾಣಿಸುವಂತೆ ಮಾಡಿದ ಚಿತ್ರ ಎಂದು ಇದಕ್ಕೆ ಹೆಚ್ಚು ಮಹತ್ವ. ಸುದೈವವಶಾತ್ ಆ ಹಾಡಿನ ವೀಡಿಯೊ ಇದೆ.
Delete