Wednesday 1 January 2020

ವಾರ ಯಾವುದಯ್ಯಾ


ಕಾಲದ ಗಣನೆಯಲ್ಲಿ ದಿನ, ಪಕ್ಷ, ಮಾಸ, ವರ್ಷಗಳಿಗೆ ಸೂರ್ಯ ಚಂದ್ರರ ಚಲನೆ ಮತ್ತು ಋತುಗಳೊಂದಿಗೆ ಬಿಡಿಸಲಾರದ ನಂಟಿದೆ. ಕಾಲಕ್ರಮೇಣ ಶಿಥಿಲವಾಗಬಹುದಾದ ನಂಟನ್ನು ಅಧಿಕ ಮಾಸ, ಅಧಿಕ ವರ್ಷ  ಮುಂತಾದ ಲೆಕ್ಕಾಚಾರಗಳ ಮೂಲಕ ಮತ್ತೆ ಹೊಂದಿಸುವ ವ್ಯವಸ್ಥೆಯೂ ಇದೆ. ಆದರೆ ವಾರಗಳಿಗೆ ಇಂಥ ಯಾವ ಮುಲಾಜೂ ಇಲ್ಲ.  ‘ಏಳು ದಿನವು ಸೇರಿ ಒಂದು ವಾರವಾಯಿತು’ ಎಂದು ಹಾಡಿಕೊಳ್ಳುತ್ತಾ ತಮ್ಮ ಪಾಡಿಗೆ ನೆಟ್ಟಗೆ ನಡೆಯುತ್ತಲೇ ಇರುತ್ತವೆ.   ಪುರಾತನ ಕಾಲದಲ್ಲಿ ವಾರ,  ವಾರದ ದಿನಗಳಿಗೆ ಒಂದೊಂದು ಹೆಸರು ಎಂಬ  ಪರಿಕಲ್ಪನೆಯೇ  ಇರಲಿಲ್ಲ.  ವೇದಗಳಲ್ಲಿ, ರಾಮಾಯಣ  ಮಹಾಭಾರತಗಳಲ್ಲಿ ವಾರಗಳ ಉಲ್ಲೇಖ ಇಲ್ಲ ಎಂದು ಕೇಳಿದ್ದೇನೆ. ಈಗಲೂ ವೇದಾಧ್ಯಯನ ಮಾಡುವವರು ಚತುರ್ದಶಿ, ಹುಣ್ಣಿಮೆ/ಅಮಾವಾಸ್ಯೆ ಮತ್ತು ಪಾಡ್ಯದಂದು ಅನಧ್ಯಾಯ ಆಚರಿಸುವುದೇ ಹೊರತು ವಾರದ ಯಾವುದೇ ನಿಶ್ಚಿತ ದಿನದಂದು ಅಲ್ಲ.  ಕ್ರಿಸ್ತ ಪೂರ್ವದ ಕೊನೆಯ ಶತಮಾನಗಳಲ್ಲೇ ಬೆಬಿಲೋನಿಯನ್ನರು ವಾರಗಳನ್ನು ಪರಿಕಲ್ಪಿಸಿದ್ದು ನಂತರ   ಭಾರತಕ್ಕೆ ಈ ಪದ್ಧತಿ ಈಜಿಪ್ಟ್‌ನಿಂದ ಬಂತು ಎನ್ನಲಾಗಿದೆ. ಭಾರತದಲ್ಲಿ ಅತ್ಯಂತ ಪ್ರಾಚೀನ ಎಂದರೆ ಗುಪ್ತರ ಕಾಲಕ್ಕೆ ಸೇರಿದ ಕ್ರಿಸ್ತ ಶಕ 484ರ ಶಾಸನವೊಂದರಲ್ಲಿ ಗುರುವಾರ, ಆಷಾಢ ಶುಕ್ಲ ದ್ವಾದಶಿ ಎಂಬ ಉಲ್ಲೇಖ ಇದೆಯಂತೆ.  ವಾರದ ದಿನಗಳ ಹೆಸರುಗಳು ಸೂರ್ಯ ಮತ್ತು ಗ್ರಹಗಳಿಗೆ ಬಹುತೇಕ ಎಲ್ಲ ಸಂಸ್ಕೃತಿಗಳಲ್ಲಿ ಸಮಾನವಾಗಿ ಸಂಬಂಧಿಸಿರುವುದು ಕುತೂಹಲಕರ ಅಂಶ.  ಒಂದು ಕಾಲದಲ್ಲಿ ಏಳು, ಎಂಟು, ಒಂಭತ್ತು ಮತ್ತು ಹತ್ತನೇ ತಿಂಗಳುಗಳಾಗಿದ್ದ ಸಪ್ಟಂಬರ್, ಅಕ್ಟೋಬರ್, ನವಂಬರ್ ಮತ್ತು ಡಿಸೆಂಬರ್‌ಗಳಲ್ಲೂ  ಸಂಸ್ಕೃತದ ಸಪ್ತ, ಅಷ್ಟ, ನವ ಮತ್ತು ದಶಗಳು ಇರುವುದು ಕಾಲಮಾಪನದಲ್ಲಿ ಭಾರತ ಮತ್ತು ಇತರರೊಳಗೆ ಕೊಡು ಕೊಳ್ಳುವಿಕೆ ಇದ್ದುದರ ದ್ಯೋತಕವಾಗಿರಬಹುದು.

ಹೀಗೆ  ಬಹು ತಡವಾಗಿ ಕಾಲಮಾಪನಕ್ಕೆ ಸೇರಿಕೊಂಡ ವಾರಗಳ ಹೆಸರುಗಳು ಈಗ ಜನಜೀವನದ ಅವಿಭಾಜ್ಯ ಅಂಗವಾಗಿವೆ.  ಸಾಂಪ್ರದಾಯಿಕ ಪಂಚಾಂಗಗಳಲ್ಲೂ ತಿಥಿ, ನಕ್ಷತ್ರ, ಯೋಗ, ಕರಣಗಳೊಂದಿಗೆ ವಾರವೂ ಸೇರಿಕೊಂಡಿದೆ. ವಾರದ ದಿನಗಳಿಗೆ ವಿವಿಧ ದೇವರುಗಳೊಡನೆ ನಂಟು ಬೆಳೆದಿದೆ.  ಶುಭಾಶುಭಗಳೂ ಅಂಟಿಕೊಂಡಿವೆ. ವ್ಯಾವಹಾರಿಕವಾಗಿ ಬ್ಯಾಂಕಿನ ಚೆಕ್ಕಿನಲ್ಲಿ ಅಂಕೆ ಮತ್ತು ಅಕ್ಷರಗಳಲ್ಲಿ ಮೊಬಲಗನ್ನು ನಮೂದಿಸಿದಂತೆ ಯಾವುದೇ ಘಟನೆಯನ್ನು ಉಲ್ಲೇಖಿಸುವಾಗ  ದಿನದ ವಿವರಗಳೊಂದಿಗೆ ವಾರದ ದಿನವೂ ಜತೆಗಿದ್ದರೆ ಅದಕ್ಕೊಂದು ಅಧಿಕೃತ ಠಸೆ ಬಿದ್ದಂತೆ. ಕನ್ನಡದಲ್ಲಿ ವಾರಗಳಿಗೆ ಸಂಬಂಧಿಸಿದಂತೆ  ಒಂದು ವಿಶೇಷ ಇದೆ.  ಇಲ್ಲಿ ಏಳು ದಿನಗಳ ಸಪ್ತಾಹವೂ ವಾರ.  ಅದರೊಳಗಿನ ಒಂದೊಂದು ದಿನವೂ ವಾರ.  ಅಂದರೆ ವಾರದೊಳಗೆ ವಾರ!

ಈಗೇನೋ ಗೂಗಲೇಶ್ವರನಲ್ಲಿ ವಿಚಾರಿಸಿದರೆ ಯಾವ ದಿನಾಂಕದಂದು ಯಾವ ವಾರವಾಗಿತ್ತು ಎಂಬುದು ಕ್ಷಣಾರ್ಧದಲ್ಲಿ ತಿಳಿಯುತ್ತದೆ.  ಆದರೆ ಕಂಪ್ಯೂಟರುಗಳಿಲ್ಲದಿದ್ದ ಕಾಲದಲ್ಲಿ ಇದಕ್ಕಾಗಿ ಹಳೆಯ ಪಂಚಾಂಗ ಅಥವಾ ಕ್ಯಾಲೆಂಡರುಗಳ ಮೊರೆ ಹೋಗಬೇಕಾಗುತ್ತಿತ್ತು.  ಇವ್ಯಾವುದು ಇಲ್ಲದೆಯೂ 4 ಮತ್ತು  7ರ ಮಗ್ಗಿ ಬಳಸಿ ಸರಳ ಲೆಕ್ಕಾಚಾರದ ಮೂಲಕ ಈ ಮಾಹಿತಿ ಪಡೆಯಲು ಸಾಧ್ಯವಿದೆ.  ಇದಕ್ಕಾಗಿ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಈಗ ನಾವು ಕ್ರಿಸ್ತ ಶಕವನ್ನು ಅನುಸರಿಸುವ ಗ್ರೆಗೊರಿಯನ್ ಕ್ಯಾಲೆಂಡರ್ ಬಳಸುತ್ತಿದ್ದೇವೆ.  ಆರಂಭದ ದಿನಗಳಲ್ಲಿ ಖಗೋಳ ವಿದ್ಯಮಾನಗಳೊಂದಿಗಿನ ತಾಳ ಮೇಳ ತಪ್ಪಿ ಅನೇಕ ಬದಲಾವಣೆಗಳನ್ನು ಈ ಕ್ಯಾಲೆಂಡರ್ ಕಾಣಬೇಕಾಯಿತು.  ಉದಾಹರಣೆಗೆ ಕ್ರಿ.ಶ. 1752ರ ಸಪ್ಟಂಬರ್‌ನಲ್ಲಿ 3 ರಿಂದ  13ರ ವರೆಗಿನ ದಿನಾಂಕಗಳೇ ಇರಲಿಲ್ಲ!


ಇಂಥ ವಿವರಗಳ ಬಗ್ಗೆ ಹೆಚ್ಚು ಯೋಚಿಸದೆ ನಮ್ಮ ಲೆಕ್ಕಾಚಾರಕ್ಕಾಗಿ ಈ ರೀತಿ ಕಲ್ಪನೆ ಮಾಡಿಕೊಳ್ಳಬೇಕು.

ಕ್ರಿಸ್ತ ಶಕ ಭಾನುವಾರ ಆರಂಭವಾಯಿತು.
ಮರುದಿನ ಸೋಮವಾರ
2ನೇ ದಿನ ಮಂಗಳವಾರ.
.
.
6ನೇ ದಿನ ಶನಿವಾರ
7ನೇ ದಿನ ಮತ್ತೆ ಭಾನುವಾರ,  8ನೇ ದಿನ ಮತ್ತೆ ಸೋಮವಾರ ಇತ್ಯಾದಿ.

ಅಂದರೆ ಯಾವುದೇ ದಿನಾಂಕದಂದು ಕ್ರಿಸ್ತ ಶಕ ಆರಂಭವಾಗಿ  ಎಷ್ಟು ದಿನ ಆಯಿತು ಎಂದು ಲೆಕ್ಕ ಹಾಕಿ ಅದರಿಂದ ಏಳೇಳು ದಿನಗಳ ವಾರಗಳನ್ನು ತೆಗೆದಾಗ

0 ಬಿಡಿ ದಿನ ಉಳಿದರೆ ಅಂದು ಭಾನುವಾರ
1 ಬಿಡಿ ದಿನ ಉಳಿದರೆ ಸೋಮವಾರ
2 ಬಿಡಿ ದಿನ ಉಳಿದರೆ ಮಂಗಳವಾರ
3 ಬಿಡಿ ದಿನ ಉಳಿದರೆ ಬುಧವಾರ
4 ಬಿಡಿ ದಿನ ಉಳಿದರೆ ಗುರುವಾರ
5 ಬಿಡಿ ದಿನ ಉಳಿದರೆ ಶುಕ್ರವಾರ
6 ಬಿಡಿ ದಿನ ಉಳಿದರೆ ಶನಿವಾರ

ಆದರೆ ಸಾವಿರಾರು ವರ್ಷ ಹಿಂದೆ  ಕ್ರಿಸ್ತ ಶಕ ಆರಂಭವಾಗಿದ್ದು ಇತ್ತೀಚಿನ ಯಾವುದೋ ದಿನಾಂಕದ ವರೆಗೆ ಅಂದಿನಿಂದ ಎಷ್ಟು ದಿನಗಳಾದವು ಎಂದು ಲೆಕ್ಕ ಮಾಡುವುದು ಹೇಗೆ ಅನ್ನಿಸಬಹುದಲ್ಲವೇ.  ಅದಕ್ಕೆ ಈ ಕೆಳಗಿನ ವಿಷಯಗಳನ್ನು ತಿಳಿದಿರಬೇಕು.

1. ಸಾಮಾನ್ಯ ವರ್ಷಗಳಲ್ಲಿ 365 ದಿನಗಳಿರುತ್ತವೆ.  ಇವುಗಳಲ್ಲಿ 7 ದಿನಗಳ ವಾರಗಳನ್ನು ತೆಗೆದರೆ 1 ಬಿಡಿ ದಿನ ಉಳಿಯುತ್ತದೆ.
    365 = (52 x 7) + 1

2. ನಾಲ್ಕು ವರ್ಷಗಳಿಗೊಮ್ಮೆ ಬರುವ ಅಧಿಕ ವರ್ಷದಲ್ಲಿ(leap year) 366 ದಿನಗಳಿರುತ್ತವೆ. ಹೀಗಾಗಿ ಫೆಬ್ರವರಿಯ ಒಂದು ಜಾಸ್ತಿ ಸೇರಿಸಿ  2 ಬಿಡಿ ದಿನಗಳು ಉಳಿಯುತ್ತವೆ.
     366 = (52 x 7) + 2

3. ಯಾವುದೇ ಇಸವಿಯನ್ನು 4 ರಿಂದ ನಿಶ್ಶೇಷವಾಗಿ ಭಾಗಿಸಲು ಸಾಧ್ಯವಾದರೆ ಅದು ಅಧಿಕ ವರ್ಷ.  ಇಲ್ಲವಾದರೆ ಸಾಮಾನ್ಯ ವರ್ಷ. ಆದರೆ ಕ್ರಿ.ಶ.100, 200, 300, 400, 500... ಇತ್ಯಾದಿ ಶತಮಾನಗಳ ಸಂದರ್ಭದಲ್ಲಿ ಆ ಇಸವಿಯನ್ನು 400ರಿಂದ ನಿಶ್ಶೇಷವಾಗಿ ಭಾಗಿಸಲು ಸಾಧ್ಯವಾದರೆ ಮಾತ್ರ ಅದು ಅಧಿಕ ವರ್ಷ.
ಉದಾ:  4ರಿಂದ ನಿಶ್ಶೇಷವಾಗಿ ಭಾಗವಾದರೂ ಕ್ರಿ ಶ. 100 ಅಧಿಕ ವರ್ಷ ಅಲ್ಲ.
            ಕ್ರಿ.ಶ  400 ಅಧಿಕ ವರ್ಷ.
ನಮ್ಮ ಜೀವಿತ ಕಾಲದಲ್ಲಿ ಬಂದ  ಕ್ರಿ.ಶ. 2000 ಶತಮಾನ ವರ್ಷವಾದರೂ ಈ ನಿಯಮದಂತೆ  ಅಧಿಕ ವರ್ಷವೇ ಆಗಿತ್ತು. ಈ ಶತಮಾನದಲ್ಲಿ ಜನಿಸಿದವರನ್ನು ಹೊರತುಪಡಿಸಿ ನಾವು ಯಾರೂ ಕಾಣಲು ಸಾಧ್ಯವಾಗದ ಕ್ರಿ.ಶ. 2100 ಅಧಿಕ ವರ್ಷವಾಗಿರುವುದಿಲ್ಲ.

ಈಗ ದೀರ್ಘ ಅವಧಿಯ ದಿನಗಳನ್ನು ಹೇಗೆ ಲೆಕ್ಕ ಮಾಡುವುದೆಂದು ತಿಳಿಯಲು ಕ್ರಿಸ್ತ ಶಕದ ಮೊದಲ 100 ವರ್ಷಗಳನ್ನು ಗಣನೆಗೆ ತೆಗೆದುಕೊಳ್ಳೋಣ.

ಈ 100 ವರ್ಷಗಳಲ್ಲಿ 24 ಅಧಿಕ ವರ್ಷಗಳಿರುತ್ತವೆ.  (25 ಅಲ್ಲ.  ಏಕೆಂದರೆ ಕೊನೆಯ ಕ್ರಿ.ಶ. 100 ಅಧಿಕ ವರ್ಷ ಅಲ್ಲ.)
24 ಅಧಿಕ ವರ್ಷಗಳು - 24 x 2 =  48 ಬಿಡಿ ದಿನಗಳು.
76 ಸಾಮಾನ್ಯ ವರ್ಷಗಳು -  76 x 1 = 76 ಬಿಡಿ ದಿನಗಳು.
ಒಟ್ಟು  48 + 76 =  124 ಬಿಡಿ ದಿನಗಳು.

ಇವುಗಳಲ್ಲಿ 7 ದಿನಗಳ ವಾರಗಳನ್ನು ತೆಗೆದಾಗ 5 ಬಿಡಿ ದಿನಗಳು ಉಳಿಯುತ್ತವೆ.
124 = (7 x  17) + 5

ಅಂದರೆ
100 ವರ್ಷಗಳಿಗೆ 5  ಬಿಡಿ ದಿನ.
200 ವರ್ಷಗಳಿಗೆ 10 ಅಂದರೆ 3  ಬಿಡಿ ದಿನ.
300 ವರ್ಷಗಳಿಗೆ 15 ಅಂದರೆ 1  ಬಿಡಿ ದಿನ.
400 ವರ್ಷಗಳಿಗೆ 20+1 ಅಂದರೆ 0  ಬಿಡಿ ದಿನ.
ಹಾಗೂ 400ರ ಗುಣಲಬ್ಧಗಳಿಗೆಲ್ಲ  0  ಬಿಡಿ ದಿನ.

ಇದೆಲ್ಲ  ಮೇಲ್ನೋಟಕ್ಕೆ ಕಬ್ಬಿಣದ ಕಡಲೆ ಎಂದೆನ್ನಿಸಿದರೂ ಒಂದು ಉದಾಹರಣೆ ನೋಡಿದರೆ ಅಷ್ಟೇನೂ ಕಷ್ಟ ಅಲ್ಲ ಎಂದು ತಿಳಿಯುವುದು.

ಉದಾ: ನಮಗೆ ಸ್ವಾತಂತ್ರ್ಯ ದೊರಕಿದ 15 ಅಗಸ್ಟ್  1947 ಯಾವ ವಾರ?
ಈ ದಿನಾಂಕ   ಅಂದರೆ ಕ್ರಿಸ್ತ ಶಕ ಆರಂಭವಾಗಿ 1946  ವರ್ಷ,  7 ತಿಂಗಳು ಹಾಗೂ 15ನೇ ದಿನ .
1946ನ್ನು 1600 + 300 + 46 ಎಂದು ಬರೆಯಬಹುದಲ್ಲವೇ.

1600 - 0 ಬಿಡಿ ದಿನ.(400ರ ಗುಣಕವಾದ್ದರಿಂದ)
300 - 5x3 = 15 ಅಂದರೆ 1 ಬಿಡಿ ದಿನ.
46 - 11 ಅಧಿಕ ವರ್ಷಗಳಿಗೆ 22  ಅಂದರೆ 1
ಉಳಿದ 35 ಸಾಮಾನ್ಯ ವರ್ಷಗಳಿಗೆ  35 ಅಂದರೆ 0
ಜನವರಿ 1947 - 3
ಫೆಬ್ರವರಿ - 0 (ಅಧಿಕ ವರ್ಷ ಅಲ್ಲ)
ಮಾರ್ಚ್ -3
ಎಪ್ರಿಲ್ - 2
ಮೇ - 3
ಜೂನ್ - 2
ಜುಲೈ - 3
ಅಗಸ್ಟ್ - 15 ಅಂದರೆ 1
0+1+1+0+3+0+3+2+3+2+3+1= 19 ಅಂದರೆ 5
5 ಬಿಡಿ ದಿನ ಅಂದರೆ ಶುಕ್ರವಾರ.

ತಿಂಗಳುಗಳಲ್ಲಿರುವ ದಿನ ನೆನಪಿಟ್ಟುಕೊಳ್ಳಲು ಮುಚ್ಚಿದ ಮುಷ್ಟಿಯ ಈ  knuckle mnemonic ಎಲ್ಲರಿಗೂ ಗೊತ್ತಿರುವಂಥದ್ದೇ.

ಈಗ ಇನ್ನೊಂದೆರಡು ಉದಾಹರಣೆಗಳ ಮೂಲಕ ವಿಷಯವನ್ನು ಇನ್ನಷ್ಟು ವಿಶದಪಡಿಸಿಕೊಳ್ಳೋಣ.

1. ಮೊನ್ನೆ ಕಂಕಣ ಸೂರ್ಯಗ್ರಹಣ ಸಂಭವಿಸಿದ 26 ಡಿಸೆಂಬರ್ 2019.

ಪೂರ್ತಿಯಾದ ವರ್ಷಗಳು 2018 = 2000 + 18
ಆ ಮೇಲೆ 2019ರ ಜನವರಿಯಿಂದ 26 ಡಿಸೆಂಬರ್ ವರೆಗೆ.

2000 - 0 ಬಿಡಿ ದಿನ.(400ರ ಗುಣಕವಾದ್ದರಿಂದ)

18 - 4 ಅಧಿಕ ವರ್ಷಗಳಿಗೆ 8  ಅಂದರೆ 1
ಉಳಿದ 14 ಸಾಮಾನ್ಯ ವರ್ಷಗಳಿಗೆ  14 ಅಂದರೆ 0
ಜನವರಿ  - 3
ಫೆಬ್ರವರಿ - 0 (ಅಧಿಕ ವರ್ಷ ಅಲ್ಲ)
ಮಾರ್ಚ್ -3
ಎಪ್ರಿಲ್ - 2
ಮೇ - 3
ಜೂನ್ - 2
ಜುಲೈ - 3
ಅಗಸ್ಟ್ - 3
ಸಪ್ಟಂಬರ್ - 2
ಅಕ್ಟೋಬರ್ - 3
ನವಂಬರ್ - 2
ಡಿಸೆಂಬರ್ - 26 ಅಂದರೆ 5

0+1+0+3+0+3+2+3+2+3+3+2+3+2+5 = 32 ಅಂದರೆ 4
4 ಬಿಡಿ ದಿನ ಅಂದರೆ ಗುರುವಾರ.

2. ಈ ಸಲದ ನವವರ್ಷ - 1 ಜನವರಿ 2020.
ಪೂರ್ತಿಯಾದ ವರ್ಷಗಳು - 201 9= 2000+19
2000 - 0
19 - 4x2=8 + 15= 23 ಅಂದರೆ 2
2020 ಜನವರಿ - 1
0+2+1 = 3 ಅಂದರೆ ಬುಧವಾರ.

ನೀವೂ ಒಂದೆರಡು ದಿನಾಂಕಗಳ ವಾರ  ಹುಡುಕಿ ಗೂಗಲ್ಲಿನಲ್ಲಿ ಕ್ರಾಸ್ ಚೆಕ್ ಮಾಡಿ ನೋಡಿ. ಈ ರೀತಿ ಜನಿಸಿದ ದಿನಾಂಕದ ವಾರ ತಿಳಿಸಿ ನಾನು ಸಹೋದ್ಯೋಗಿಗಳನ್ನು ದಂಗುಬಡಿಸುತ್ತಿದ್ದೆ.

* * * * *

ಇದು ಲಿಫ್ಟ್ ವ್ಯವಸ್ಥೆ ಇರುವ ಬಹುಮಹಡಿ ಕಟ್ಟಡವನ್ನು ಮೆಟ್ಟಲುಗಳ ಮೂಲಕ ಏರಿದಂತೆ.  ಆದರೂ ಆಸಕ್ತರಿಗೆ ಉಪಯೋಗವಾಗುವುದಾದರೆ ಆಗಲಿ ಎಂದು ಇಲ್ಲಿ  ದಾಖಲಿಸಿದ್ದೇನೆ. ನಾನು ಇದನ್ನು ಕಲಿತದ್ದು 1960ರ ದಶಕದ ಸುಧಾ ಪತ್ರಿಕೆಯಲ್ಲಿ  ಪ್ರಕಟವಾಗಿದ್ದ ಒಂದು ಲೇಖನದಿಂದ. ಯಾರು ಬರೆದಿದ್ದರೆಂದು ನೆನಪಿಲ್ಲ.








.
.
.



2 comments:

Your valuable comments/suggestions are welcome