Monday, 7 August 2017

ರಿಟೈರ್ ಆಗದ ಸ್ಕೂಲ್ ಮಾಸ್ಟರ್ ಸಂಗೀತ


ನಿಜ ಜೀವನದಲ್ಲಿ ಸ್ವಲ್ಪ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿ ಪಂತುಲು ಎಂಬ ಗೌರವ ಸೂಚಕ ಪದವನ್ನು ಬಡಗೂರು ರಾಮಕೃಷ್ಣ ಎಂಬ ತನ್ನ ಹೆಸರಿಗೆ ಶಾಶ್ವತವಾಗಿ ಅಂಟಿಸಿಕೊಂಡ ಬಿ.ಆರ್. ಪಂತುಲು ನಿರ್ಮಿಸಿ ತಾನೇ ಮುಖ್ಯ ಪಾತ್ರದಲ್ಲಿ ನಟಿಸಿದ   ಸ್ಕೂಲ್ ಮಾಸ್ಟರ್ 1958ರಲ್ಲಿ ಬಿಡುಗಡೆ ಆಗಿ ಜಯಭೇರಿ ಬಾರಿಸಿದ ಚಿತ್ರ.  ಅವರ ಜೊತೆ ಎಂ.ವಿ. ರಾಜಮ್ಮ, ಉದಯಕುಮಾರ್, ಸೂರ್ಯಕುಮಾರ್, ಬಾಲಕೃಷ್ಣ, ನರಸಿಂಹರಾಜು, ಡಿಕ್ಕಿ ಮಾಧವ ರಾವ್, ಬಿ.ಸರೋಜಾದೇವಿ, ಸಾಹುಕಾರ್ ಜಾನಕಿ ಮುಂತಾದವರು ತಾರಾಗಣದಲ್ಲಿದ್ದರು. ಶಿವಾಜಿ ಗಣೇಶನ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದ ಪಂತುಲು ಈ ಚಿತ್ರವನ್ನು  ತಮಿಳು ಭಾಷೆಯಲ್ಲಿ ಎಂಗಳ್ ಕುಟುಂಬಮ್ ಪೆರಿಸು ಎಂಬ ಹೆಸರಲ್ಲಿ ಹಾಗೂ ಹಿಂದಿಯಲ್ಲಿ ಸ್ಕೂಲ್ ಮಾಸ್ಟರ್ ಹೆಸರಲ್ಲೇ ಮರು ನಿರ್ಮಿಸಿದರು. ತೆಲುಗಿಗೆ ಈ ಚಿತ್ರ ನೇರವಾಗಿ ಡಬ್ ಆಗಿತ್ತು. ತಮಿಳು ಮತ್ತು ತೆಲುಗಲ್ಲಿ ಎಲ್ಲ ಹಾಡುಗಳು ಮೂಲ ಕನ್ನಡ ಧಾಟಿಯಲ್ಲೇ ಇದ್ದವು.   ಹಿಂದಿಯಲ್ಲಿ ವಸಂತ ದೇಸಾಯಿ ಸ್ವತಂತ್ರವಾಗಿ ರಾಗ ಸಂಯೋಜಿಸಿದರು.   ಕೆಲವು ವರ್ಷಗಳ ನಂತರ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಈ ಚಿತ್ರದ ಮಲಯಾಳಂ ಆವೃತ್ತಿ ತೆರೆ ಕಂಡಿತು. 70ರ ದಶಕದಲ್ಲಿ ಇದೇ ಹೆಸರಿನಲ್ಲಿ ತಯಾರಾದ ಚಿತ್ರದಲ್ಲಿ ಎನ್.ಟಿ. ರಾಮರಾವ್ ನಟಿಸಿದ್ದರು. ಇತ್ತೀಚಿನ ಬಾಗ್‌ಬಾನ್ ಚಿತ್ರ ಇದೇ ಕಥೆಯ ಎಳೆಯನ್ನು ಹೊಂದಿತ್ತು.  ಬಾಗ್‌ಬಾನ್ ಮತ್ತೆ ಈ ಬಂಧನ ಎಂಬ ಹೆಸರಲ್ಲಿ ಕನ್ನಡಕ್ಕೆ ಬಂದು ವೃತ್ತ ಪೂರ್ಣಗೊಳಿಸಿತು.  ಇವೆಲ್ಲಕ್ಕೆ ಮೂಲ ಕುಸುಮಾಗ್ರಜ ಕಾವ್ಯನಾಮದ ವಿ.ವಿ. ಶಿರ್ವಾಡ್‌ಕರ್ ಎಂಬವರು ಮರಾಠಿಯಲ್ಲಿ ಬರೆದ ವೈಷ್ಣವಿ ಎಂಬ ಕಥೆ.  ಈ ಬಗ್ಗೆ ಸ್ಕೂಲ್ ಮಾಸ್ಟರ್ ಚಿತ್ರದ ಟೈಟಲ್‌ನಲ್ಲಿ ಉಲ್ಲೇಖ ಇದೆ. 1954ರ ಮರಾಠಿ ಚಿತ್ರ  ಊನ್ ಪಾವುಸ್ ಕೂಡ ಇದನ್ನೇ ಹೋಲುವ ಕಥೆ ಹೊಂದಿತ್ತು. 1937ರ  Make Way for Tomorrow  ಎಂಬ ಇಂಗ್ಲಿಷ್ ಚಿತ್ರ ಕೂಡ ಮಕ್ಕಳು ಹೆತ್ತವರನ್ನು ದೂರ ಮಾಡುವ ಸಮಸ್ಯೆಯನ್ನು ಕುರಿತಾಗಿತ್ತು ಎನ್ನಲಾಗಿದೆ.

ಆಂಗ್ಲ ಶೀರ್ಷಿಕೆ ಹೊಂದಿದ ಮೊದಲ ಕನ್ನಡ ಚಿತ್ರ ಇದು. ದಕ್ಷಿಣ ಕನ್ನಡ ಭಾಗದಲ್ಲಿ ಅಧ್ಯಾಪಕರನ್ನು ಮಾಸ್ಟ್ರು ಎನ್ನುವ ರೂಢಿ ಇದೆಯಾದರೂ ಸ್ಟೇಷನ್ ಮಾಸ್ಟರ್, ಪೋಸ್ಟ್ ಮಾಸ್ಟರ್‌ಗಳಂತೆ ಸ್ಕೂಲ್ ಮಾಸ್ಟರ್ ಪದದ ಬಳಕೆ ಇಲ್ಲವೆನ್ನುವಷ್ಟು ಕಮ್ಮಿ. ಬಯಲು ಸೀಮೆಯಲ್ಲಂತೂ ಮೇಷ್ಟ್ರು ಅನ್ನುವುದೇ ಹೆಚ್ಚು. ಚಿತ್ರದಲ್ಲೂ ಮೇಷ್ಟ್ರು ಎಂಬ ಉಲ್ಲೇಖವೇ ಇರುವುದು. ಶಾಲಾ ಮೇಷ್ಟ್ರು, ಉಪಾಧ್ಯಾಯ, ಅಧ್ಯಾಪಕ ಇತ್ಯಾದಿಗಳಿಗಿಂತ ಸ್ಕೂಲ್ ಮಾಸ್ಟರ್ ಅನ್ನುವ ಶೀರ್ಷಿಕೆ ಆಕರ್ಷಕ ಅನ್ನಿಸಿದ್ದರಿಂದ ಅದನ್ನೇ ಆಯ್ಕೆ ಮಾಡಿದರೋ ಏನೋ.

ಶಾಲೆಗಳಲ್ಲಿ ಮತ್ತು ಇತರೆಡೆ 16mm ಪ್ರೊಜೆಕ್ಟರ್ ಮೂಲಕ ಈ ಚಿತ್ರದ  ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. 70ರ ದಶಕದಲ್ಲಿ ಬೆಂಗಳೂರಿನ MNK ಪಾರ್ಕಿನಲ್ಲಿ ಇಂತಹ ಒಂದು ಪ್ರದರ್ಶನ ನಾನು ನೋಡಿದ್ದೇನೆ.  

ಆಗಿನ್ನೂ ಶೈಶವಾವಸ್ಥೆಯಲ್ಲಿದ್ದ  ಕನ್ನಡ ಚಿತ್ರ ಸಂಗೀತವನ್ನು ahead of time ಅನ್ನಿಸುವಂಥ ರಾಗ ಸಂಯೋಜನೆ ಮತ್ತು  orchestration ಮೂಲಕ ಉನ್ನತ ಮಟ್ಟಕ್ಕೊಯ್ದು ಕನ್ನಡದವರು ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಿದವರು ಈ ಚಿತ್ರದ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪ. ಇದರಲ್ಲಿ ಅವರು ಮೂರು ಹಾಡುಗಳನ್ನೂ ಸ್ವತಃ ಹಾಡಿದ್ದೂ ಒಂದು ವಿಶೇಷ.   ಅವರು ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ಎಲ್ಲ ಕನ್ನಡ ಚಿತ್ರಗಳಿಗೂ ಸಂಗೀತ ನೀಡಿ ದಾಖಲೆ ನಿರ್ಮಿಸಿದವರೂ ಹೌದು.  ಪಂತುಲು ಅವರ ನಿಧನದ ಬಳಿಕ ಅವರ ಶಿಷ್ಯ ಪುಟ್ಟಣ್ಣ ಕಣಗಾಲ್  ತನ್ನ ಗುರುವಿಗಾಗಿ ನಿರ್ದೇಶಿಸಿದ ಕಾಲೇಜು ರಂಗ ಚಿತ್ರಕ್ಕೂ ಲಿಂಗಪ್ಪ ಅವರನ್ನೇ ಬಳಸಿಕೊಂಡು ಆ ದಾಖಲೆಯನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೊಯ್ದರು.  ಕನ್ನಡ ಮಾತ್ರವಲ್ಲ, ಬೇರೆ ಯಾವ ಭಾಷೆಯ ಚಿತ್ರರಂಗದಲ್ಲೂ ಒಂದು ಸಂಸ್ಥೆ ತನ್ನ ಸಂಗೀತ ನಿರ್ದೇಶಕನಿಗೆ ಇಷ್ಟು ನಿಷ್ಠೆ ತೋರಿಸಿದ ಉದಾಹರಣೆ ಸಿಗುವುದು ಕಷ್ಟ. ತನ್ನ ಚಿತ್ರಗಳ ಯಶಸ್ಸಿನ ಬಹು ದೊಡ್ಡ ಪಾಲುದಾರರಾಗಿರುತ್ತಿದ್ದ ಶಂಕರ್ ಜೈಕಿಶನ್ ಅವರನ್ನೂ  ಕಲ್ ಆಜ್ ಔರ್ ಕಲ್ ನಂತರ  ರಾಜ ಕಪೂರ್ ಕೈ ಬಿಡಲಿಲ್ಲವೇ?  

ಈ ಚಿತ್ರದಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿ ರಚಿಸಿದ ಒಟ್ಟು ಒಂಬತ್ತು ಹಾಡುಗಳಿದ್ದು ಅವುಗಳ ಪೈಕಿ ಎಂಟು ಹಾಡುಗಳು ಸಾಹಿತ್ಯ ಸಮೇತ ಇಲ್ಲಿವೆ.  ಚಿಕ್ಕಂದಿನಲ್ಲಿ ನಾವು ದೇವರ ಪೂಜೆಗಾಗಿ ಹೂ ಕೊಯ್ಯುವಾಗ ಗಿಡದಲ್ಲಿ ಸೂರ್ಯನಿಗಾಗಿ ಕನಿಷ್ಠ ಒಂದನ್ನಾದರೂ ಉಳಿಸಬೇಕೆಂದು ಹಿರಿಯರು ಹೇಳುತ್ತಿದ್ದರು.  ಹಾಗಾಗಿ ಈ ಸಲ ಒಂದು ಹಾಡನ್ನು  ಉಳಿಸಿದ್ದೇನೆ!

ಸ್ವಾಮಿ ದೇವನೆ ಲೋಕಪಾಲನೆ

ಇದರ ಪಲ್ಲವಿ ಮತ್ತು ‘ಕರಚರಣ ಕೃತಂ ವಾ ಮಾನಸಂವಾಪರಾಧಂ ವಿಹಿತಮವಿಹಿತಂ ವಾ ಸರ್ವಮೇತಂ ಕ್ಷಮಸ್ವ’ ಎಂಬ ಕ್ಷಮಾಪಣಾ ಶ್ಲೋಕದ ಸರಳ ಭಾವಾನುವಾದದಂತಿರುವ ಒಂದು ಚರಣವನ್ನು ಮಾತ್ರ ಸೋಸಲೆ ಅಯ್ಯ ಶಾಸ್ತ್ರಿ ಅವರ ರಚನೆಯಿಂದ ಆಯ್ದುಕೊಳ್ಳಲಾಗಿದ್ದು ಎರಡನೇ ಚರಣವನ್ನು ಪ್ರಭಾಕರ ಶಾಸ್ತ್ರಿಗಳು ಸೇರಿಸಿದ್ದಾರೆ.  ಬಹಳಷ್ಟು ವರ್ಷ ಇದು ಅನೇಕ ಶಾಲೆಗಳಲ್ಲಿ ಪ್ರಾರ್ಥನಾರೂಪದಲ್ಲಿ ಹಾಡಲ್ಪಡುತ್ತಿತ್ತು. ಎ.ಪಿ.ಕೋಮಲ, ರಾಣಿ ಮತ್ತಿತರರೊಂದಿಗೆ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪ  ಸ್ವತಃ ದನಿಗೂಡಿಸಿದ್ದಾರೆ.  ಪ್ರಥಮ ಎರಡು ಸಾಲುಗಳನ್ನು ಮಾತ್ರ ಗುರುಗಳು ಆರಂಭಿಸಿ ನಂತರ ಮುಂದುವರಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ಬಿಟ್ಟುಕೊಟ್ಟು ತಾನು ಅವರ ಜೊತೆಯಲ್ಲಿಯೇ ಹಾಡುವ ಮೂಲಕ  ಮಾರ್ಗವನ್ನು ತೋರಿಸುವುದಷ್ಟೇ ಗುರುವಿನ ಕೆಲಸ, ಮುಂದೆ ಆ ಪಥದಲ್ಲಿ ಮುನ್ನಡೆಯುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂಬ  ಸಂದೇಶವನ್ನು ಇಲ್ಲಿ ಸಾರಲಾಗಿದೆ.  ಯಾವ ದೇವರನ್ನೂ ನಿರ್ದಿಷ್ಟವಾಗಿ ಸಂಬೋಧಿಸದೆ ಇರುವುದರಿಂದ ಎಲ್ಲೂ ಸಲ್ಲುವ ಪ್ರಾರ್ಥನೆ ಇದು. ಇತ್‌ನಿ ಶಕ್ತಿ ಹಮೆಂ ದೇನಾ ದಾತಾ ಕೂಡ ಪ್ರಾರ್ಥನೆಯಾಗಿ ಬಳಸಲ್ಪಡುವ ಗೌರವ ಪಡೆದ ಇನ್ನೊಂದು ಚಿತ್ರಗೀತೆ.  ಮೈಸೂರಿನಲ್ಲಿರುವ ಬಿ.ಎಸ್.ಎನ್.ಎಲ್. ತರಬೇತಿ ಕೇಂದ್ರದ ದಿನ ಆರಂಭವಾಗುವುದು  ಈ ಪ್ರಾರ್ಥನೆಯ ಮೂಲಕವೇ.  ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿರುವ ಮಾಲ್ ಒಂದರಲ್ಲೂ ದಿನದ ವ್ಯವಹಾರ ಆರಂಭದ ಮೊದಲು ಮಾಲೀಕ, ನೌಕರರೆಲ್ಲರೂ ಸೇರಿ ಇತ್‌ನಿ ಶಕ್ತಿ  ಹಾಡುವುದನ್ನು ನೋಡಿದ್ದೇನೆ.

ಈ ಹಾಡನ್ನು ಕಿತ್ತೂರು ಚೆನ್ನಮ್ಮ ಚಿತ್ರದ ಆರಂಭದಲ್ಲೂ ಯಥಾವತ್ ಬಳಸಿಕೊಳ್ಳಲಾಗಿತ್ತು. ಪಂತುಲು ಅವರು ಸ್ಕೂಲ್ ಮಾಸ್ಟರ್ ರೂಪದ ನಿರೂಪಕನಾಗಿ ಮಕ್ಕಳೊಡನೆ ಪ್ರಾರ್ಥನೆ ಹಾಡುವ ದೃಶ್ಯ ಅದಾಗಿತ್ತು.
ಸ್ವಾಮಿ ದೇವನೆ


ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತು ತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತು ತೇ

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ದೇವನೆ

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ


 ಎಲ್ಲಾರೂ ನಮ್ಮವರೇ

ಎ.ಪಿ.ಕೋಮಲ ಹಾಡಿರುವ ಅಷ್ಟೊಂದು ಪ್ರಚಲಿತವಲ್ಲದ ಈ ಹಾಡಿನಲ್ಲಿ ಆ ಚಿತ್ರದ ಕಥೆಯ ಸೂಕ್ಷ್ಮ  ಎಳೆಯನ್ನು ಗುರುತಿಸಬಹುದು.  ಬಾಗೇಶ್ರೀ ರಾಗಾಧಾರಿತವಾದ್ದರಿಂದ ಇದನ್ನು ಕೇಳಿದಾಗ ಆಜಾದ್ ಚಿತ್ರದ ನ ಬೋಲೆ ನ ಬೋಲೆ ನೆನಪಾಗುತ್ತದೆ.  
ಎಲ್ಲಾರೂ ನಮ್ಮವರೇ


ಎಲ್ಲಾರೂ ನಮ್ಮವರೇ ಜಗದಿ
ಗುಣಕಿಂತ ಮಿಗಿಲಾದ ಹಣವಂತರಾದರೆ
ಎಲ್ಲಾರೂ ನಮ್ಮವರೇ

ಒಲಿದು ಒಂದಾದ ಮನೆಯನ್ನೆ ನೋಡಿ
ಒಡೆದು ಹನ್ನೆರಡು ಭಾಗವ ಮಾಡಿ
ಒಡನಾಡೋ ನೆಂಟರು ಕೊಂಡಾಡೋ ಬೀಗರು
ನಮಗಲ್ಲ ಗಾಂಧಾರಿ ಎನ್ನುವರು ಕೇಳಿ

ಪ್ರೀತಿ ವಾತ್ಸಲ್ಯನಿಧಿಯಾದ ಮಕ್ಕಳು
ಮನೆಗೆ ಮಾಣಿಕ್ಯ ಸಿರಿಯಾದ ಸೊಸೆಯರು
ಅತ್ತೆ ಮಾವಂದಿರ ಬಹುದೂರ ಮಾಡಿ
ಬೇಯ್ಸೊಲ್ಲ ಹೊಂದೊಲ್ಲ ಎನ್ನುವರು ಕೇಳಿ

ಭಾಮೆಯ ನೋಡಲು ತಾ ಬಂದ

ಸಾಮಾನ್ಯವಾಗಿ ಪಲ್ಲವಿ ಮತ್ತು ಎರಡೋ ಮೂರೋ ಚರಣಗಳನ್ನು ಹೊಂದಿರುವ ಚಿತ್ರಗೀತೆಗಳಿಗಿಂತ ಭಿನ್ನವಾಗಿ  ಎರಡು ಸಾಲುಗಳ ಪಲ್ಲವಿ  ಮತ್ತು ಅನುಪಲ್ಲವಿ ಹಾಗೂ ನಾಲ್ಕು ಸಾಲುಗಳ ಚರಣ ಹೊಂದಿರುವ ಇದರ ಉತ್ಕೃಷ್ಟ ಸಾಹಿತ್ಯ ಇದೊಂದು  ವಾಗ್ಗೇಯಕಾರರ ಕೃತಿಯಿರಬಹುದೇನೋ ಎಂಬ ಭ್ರಮೆ ಮೂಡಿಸುತ್ತದೆ.  ಹಿಂದೋಳ ರಾಗಾಧಾರಿತವಾದ ಇದನ್ನು ಆಲಾಪ ಹಾಗೂ ವೈವಿಧ್ಯಮಯ ಸಂಗತಿಗಳೊಂದಿಗೆ ಸೂಲಮಂಗಲಂ ರಾಜಲಕ್ಷ್ಮಿ ಅವರು ಬಲು ಚೆನ್ನಾಗಿ ಹಾಡಿದ್ದಾರೆ.  ಕೇಳಿದವರಿಗೆ ತಾವೂ ಶಾಸ್ತ್ರೀಯ ಸಂಗೀತ ಕಲಿಯಬೇಕು ಎಂದೆನಿಸುವಷ್ಟು ಆಕರ್ಷಣೆ ಈ ರಚನೆಯಲ್ಲಿದೆ.  ಇದರಲ್ಲಿ ಹಿನ್ನೆಲೆ ವಾದ್ಯಗಳನ್ನು ಪ್ರಸಿದ್ಧ ವಿದ್ವಾಂಸರೇ ನುಡಿಸಿರಬಹುದು.
ಭಾಮೆಯ ನೋಡಲು


ಭಾಮೆಯ ನೋಡಲು ತಾ ಬಂದ
ವೃಂದಾವನದಿಂದ ಮುಕುಂದ

ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀ ಗೋವಿಂದ

ಬಾಗಿಲ ಮರೆಯಾಗಿ ನಾಗೋಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ಕೂಗಿಗೆ ಮನ ಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೇ ಜನಾರ್ದನ

ಹಿಂದಿನ ಕಾಲದ ಹಾಡುಗಳು ಕೇಳಲು ಮಧುರವಾಗಿದ್ದರೂ ದೃಶ್ಯಗಳು ಆಕರ್ಷಕವಾಗಿರುತ್ತಿದ್ದುದು ಅಪರೂಪ. ಈ ಹಾಡು ಅದಕ್ಕೊಂದು ಅಪವಾದ. ಆಗಿನ ಕಾಲದ ವಧು ಪರೀಕ್ಷೆಯ ಒಂದು ಸ್ಯಾಂಪಲ್ ಆಗಿ ಮತ್ತು ನರಸಿಂಹರಾಜು ಮತ್ತು ಬಾಲಕೃಷ್ಣ ಅವರು ಕೂತಲ್ಲೇ ಪ್ರದರ್ಶಿಸಿದ ಅಪಹಾಸ್ಯವಲ್ಲದ ಹಾಸ್ಯವನ್ನು ಆನಂದಿಸಲು ಈ ಹಾಡಿನ ವೀಡಿಯೋ ಕೂಡ ನೋಡಲೇ ಬೇಕಾದ್ದು. ಆ ಹೆಣ್ಣು ಮಗಳು ಕುಳಿತ ಭಂಗಿ ಎಷ್ಟೊಂದು ಗೌರವ ಮೂಡಿಸುತ್ತದೆ!



ನಾನೂ ನೀನೂ ಜೋಡಿ

ಲಘು ಶೈಲಿಯ ಈ ರಚನೆಯನ್ನು ಪೀಠಾಪುರಂ ನಾಗೇಶ್ವರ ರಾವ್ ಮತ್ತು ಸೂಲಮಂಗಲಂ ರಾಜಲಕ್ಷ್ಮಿ ಹಾಡಿದ್ದಾರೆ. ವೇಗವಾಗಿ ಸಾಗುವ ಎತ್ತಿನ ಗಾಡಿಯ ನಡೆಯ ಕಲ್ಪನೆಯನ್ನು ಕೇಳುಗರ ಮನದಲ್ಲಿ ಮೂಡಿಸುವ ಆಕರ್ಷಕ  ಢೋಲಕ್ ನುಡಿತವಿದೆ.  ಗಂಡ ಹೆಂಡತಿ ಸಂಸಾರ ರಥದ ಎರಡು ಗಾಲಿಗಳು, ಗೋವು  ಕೃಷಿಪ್ರಧಾನವಾದ  ನಮ್ಮ ದೇಶದ ಬೆನ್ನೆಲುಬು ಎಂಬ ನಿತ್ಯ ಸತ್ಯವೂ ಇದರಲ್ಲಿ ಅಡಕವಾಗಿದೆ.
ನಾನೂ ನೀನೂ ಜೋಡಿ


ನಾನೂ ನೀನೂ ಜೋಡಿ ಈ ಜೀವನ ಎತ್ತಿನ ಗಾಡಿ
ಹಳ್ಳಿ ಹಾದಿಯಲ್ಲೂ ಹೊಸ ಡಿಲ್ಲಿ ಬೀದಿಯಲ್ಲೂ
ಹಳ್ಳ ದಿನ್ನೆ ಎಲ್ಲ ದಾಟಿ ಒಂದೇ ರೀತಿ ಓಡೋ ಗಾಡಿ

ರೈಲು ಕಾರು ಮೋಟರು ಗಾಡಿ
ಬಾರದ ಊರಿಗೂ ನಡೆಯೋ ಗಾಡಿ
ಜೋಡೆತ್ತಿನ ಗಾಡಿ
ತೌರಿಗೆ ದಾರಿ ತೋರೋ ಗಾಡಿ
ಅತ್ತೆ ಮನೆಯ ಮುತ್ತಿನ ಜೋಡಿ

ಹೆಣ್ಣು ಗಂಡು ಪ್ರೇಮದಿ ಕೂಡಿ
ಮದುವೆಯ ಪುರವಣಿ ಹೋಗೋ ಗಾಡಿ
ಈ ಕಾಮನ ಗಾಡಿ
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ

ಇನ್ನೇನು ಆನಂದ ಬೇಕಾಗಿದೆ

ನವ ವಧುವೊಬ್ಬಳು ನೂತನ ದಾಂಪತ್ಯದ   ಆನಂದೋಲ್ಲಾಸದಲ್ಲಿ ತೇಲುತ್ತಾ ತನ್ನಂತೆಯೇ ಹೊಸ ಅನುಭವಕ್ಕೆ ತೆರೆದುಕೊಳ್ಳಲಿರುವ ಪತಿಗೆ  ಉಲ್ಲಾಸ  ತುಂಬುವ ಭಾವದ    ಈ ಹಾಡನ್ನೂ ಸೂಲಮಂಗಲಂ ರಾಜಲಕ್ಷ್ಮಿ ಹಾಡಿದ್ದಾರೆ.  ಮ್ಯಾಂಡೊಲಿನ್, ಪಿಯಾನೋ, ಗಿಟಾರ್ ಮುಂತಾದವುಗಳನ್ನೊಳಗೊಂಡ ಸುದೀರ್ಘ prelude ಹಾಡಿನಲ್ಲಿ ಅಡಕವಾಗಿರುವ ಸಂಭ್ರಮಕ್ಕೆ ಸೂಕ್ತ  ಮುನ್ನುಡಿ ಬರೆಯುತ್ತದೆ.
ಇನ್ನೇನು ಆನಂದ


ಇನ್ನೇನು ಆನಂದ ಬೇಕಾಗಿದೆ
ಸವಿಯೂಟವ ನಾ ನೀಡುವೆ
ಮಾತಾಡಿ ಉಲ್ಲಾಸದೇ

ಕನಸಾದ ಆಸೆ ನನಸಾಗಿದೆ
ಕೆನೆಹಾಲು ಬೆಲ್ಲ ಅಣಿಯಾಗಿದೆ
ಹುಳಿಯಾದ ಹಣ್ಣು ಸಿಹಿಯಾಗಿದೆ
ಕಣ್ಣೀರ ಬಾಳೆಲ್ಲ ಕಥೆಯಾಗಿದೆ
ಸಂಕೋಚದೆ ತಡ ಮಾಡದೆ
ಮಾತಾಡಿ ಉಲ್ಲಾಸದೆ

ಪ್ರೇಮಾನುರಾಗ ಒಂದಾಗಿದೆ
ಏಕಾಂತ ವೇಳೆ ಹಾಯಾಗಿದೆ
ನೂರಾರು ಚಿಂತೆ ಕಳೆದಂತಿದೆ
ಮನಸೆಲ್ಲ ಮಲ್ಲಿಗೆ ಹೂವಾಗಿದೆ
ಸಂಕೋಚದೆ ತಡ ಮಾಡದೆ
ಮಾತಾಡಿ ಉಲ್ಲಾಸದೆ

ಸೊಂಪಾದ ಸಂಜೆ ವೇಳೆ

ಮೌತ್ ಆರ್ಗನ್ ಮುಖ್ಯವಾಗಿರುವ prelude ಮತ್ತು  interlude ಹೊಂದಿರುವ ಈ ಹಾಡು ಸ್ವತಃ ಟಿ.ಜಿ.ಲಿಂಗಪ್ಪ ಮತ್ತು ಪಿ.ಸುಶೀಲ ಧ್ವನಿಗಳಲ್ಲಿದೆ.  ಗಿಟಾರ್, ಬಾಸ್, ಡಬಲ್ ಬಾಸ್ ಇತ್ಯಾದಿಗಳನ್ನೊಳಗೊಂಡ ಹಿನ್ನೆಲೆ ಸಂಗೀತ ಮುಗಿದು ಚರಣ ಆರಂಭವಾಗುತ್ತಿದ್ದಂತೆ ಪಲ್ಲವಿ ಭಾಗದಲ್ಲಿ ಜೊತೆಗಿದ್ದ ಢೋಲಕ್ ಮತ್ತೆ  ಆಕರ್ಷಕ ಉರುಳಿಕೆಯೊಂದಿಗೆ  ರಿದಂ ಅನ್ನು take off ಮಾಡುವುದು ಆಗಿನ ಸಂಗೀತ ರಚನೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು.
ಸೊಂಪಾದ ಸಂಜೆ ವೇಳೆ


ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೊ ವೇಳೆ
ಇಂಪಾದ ರಾಗಮಾಲೆ
ಹೂ ಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
ಒಂದಾಗಿ ಆಡೋಣ

ಹೂಬಾಣ ಹೂಡಬೇಡಿ ಲಾವಣ್ಯ ನೋಡಿ
ದಮ್ಮಯ್ಯೊ ಕಾಡಬೇಡಿ ಓಡಾಡೊ ಹಾದಿ
ನೀನೇ ಎನ್ನ ಸಿಂಗಾರವಾಣಿ
ಜೀರಿಗೆ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ

ನೀರಾಜಿ ಕಂಬಿ ಸೀರೆ ನಾನೊಲ್ಲೆ ನೋಡಿ
ಬಂಗಾರ ಬೆಳ್ಳಿ ಒಡವೆ ಬೇಕಿಲ್ಲ ಕೇಳಿ
ಇನ್ನೇನಾಸೆ ಪನ್ನೀರ ಜಾಜಿ
ಎಲ್ಲ ಭಾಗ್ಯ ಗೆಲ್ಲೋವಂಥ ಒಲುಮೆ ನೀಡಿ

ರಾಧಾ ಮಾಧವ ವಿನೋದ ಹಾಸ

ಆರಂಭದ ಆಲಾಪದ ಮಾಧುರ್ಯದಿಂದಲೇ ಕೇಳುಗರನ್ನು ನೇರವಾಗಿ ಯಮುನಾ ತೀರಕ್ಕೆ ಕರೆದೊಯ್ದು ರಾಧಾ ಮಾಧವರ  ದರ್ಶನ ಮಾಡಿಸುವ ಈ ಹಾಡೂ ಟಿ.ಜಿ.ಲಿಂಗಪ್ಪ ಮತ್ತು ಪಿ.ಸುಶೀಲ ಹಾಡಿರುವುದು. ಸುಮಾರು ಅದೇ ಕಾಲಕ್ಕೆ ಬಂದ ಮಾಯಾ ಬಜಾರ್ ಚಿತ್ರದ ಸಾಗಲಿ ತೇಲಿ ತರಂಗದೊಳು ಹಾಡಿನ ಛಾಯೆ ಇದರಲ್ಲಿ ಗೋಚರಿಸಲು ಎರಡರಲ್ಲೂ ಸಾಮಾನ್ಯವಾಗಿರುವ ಮೋಹನ ರಾಗ ಕಾರಣವಾಗಿರಬಹುದು.  ವಿಶಿಷ್ಟ ಧ್ವನಿಯ ಶ್ರುತಿಬದ್ಧ ಢೋಲಕ್ ಬಳಕೆ ಹಾಡಿನ ಅಂದ ಹೆಚ್ಚಿಸಿದೆ.
ರಾಧಾ ಮಾಧವ


ರಾಧಾ ಮಾಧವ ವಿನೋದ ಹಾಸ
ಯಾರೂ ಮರೆಯದ ಪ್ರೇಮ ವಿಲಾಸ

ಮಾಗಿ ಮಲ್ಲಿಗೆ ಹೂಬನದಲ್ಲಿ
ಬೋಗಿ ಹುಣ್ಣಿಮೆ ರಾತ್ರಿಯಲಿ
ಸ್ವರ್ಗ ಭೂಮಿ ಎಲ್ಲ ದಾಟಿ
ಆಡಿದ ಮಾತೆ ರಾಗ ವಿಲಾಸ

ಜೀವನವೆಲ್ಲ ಗೋಕುಲವಾಗಿ
ಒಲವೇ ಯಮುನಾ ನದಿಯಾಗಿ
ನಾವೇ ರಾಧಾ ಮಾಧವರಾಗಿ
ಆಡುವ ಮಾತೇ ಪ್ರೇಮ ವಿಲಾಸ

ಅತಿ ಮಧುರ ಅನುರಾಗ

ಆಗಿನ ಕಾಲದ ಪ್ರಸಿದ್ಧ ಗಾಯಕ  ಎ.ಎಂ.ರಾಜಾ ಮತ್ತು ಜಮುನಾರಾಣಿ   ಹಾಡಿರುವ ನಿಜಕ್ಕೂ ಅತಿ ಮಧುರವಾದ ಹಾಡಿದು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದ  ಎ.ಎಂ.ರಾಜಾ ಅವರ ಪ್ರತಿಭೆ ಹಿಂದಿ ವಲಯವನ್ನೂ ಆಕರ್ಷಿಸಿ ರಾಜ ಕಪೂರ್ ಅವರ ಆಹ್ ಚಿತ್ರ ಅವನ್ ಎಂಬ ಹೆಸರಲ್ಲಿ ತಮಿಳಿಗೆ ಡಬ್ ಆದಾಗ ಶಂಕರ್ ಜೈಕಿಶನ್ ಸಲಹೆಯ ಮೇರೆಗೆ ಎಲ್ಲ ಮುಕೇಶ್ ಹಾಡುಗಳನ್ನೂ ಅವರೇ ಹಾಡಿದ್ದರು.  ಇಷ್ಟೊಂದು ಪ್ರತಿಭಾವಂತರಾಗಿದ್ದರೂ ಎ.ಎಂ.ರಾಜಾ ತನ್ನ ವಿಕ್ಷಿಪ್ತ ಸ್ವಬಾವದಿಂದಾಗಿ ಉದ್ದಿಮೆಯ ವೈರ ಕಟ್ಟಿಕೊಂಡು ಹಿನ್ನೆಲೆಗೆ ಸರಿಯುವಂತಾಯಿತು ಅನ್ನುತ್ತಾರೆ. ಸೊಂಪಾದ ಸಂಜೆ ವೇಳೆ ಮತ್ತು ರಾಧಾ ಮಾಧವ ಹಾಡುಗಳು ಎ.ಎಂ.ರಾಜಾ ಅವರಿಗಾಗಿಯೇ ಸಂಯೋಜಿಸಲ್ಪಟ್ಟಿದ್ದು ಯಾವುದೋ ಭಿನ್ನಾಭಿಪ್ರಾಯದಿಂದಾಗಿ ಕೊನೆ ಗಳಿಗೆಯಲ್ಲಿ ಅವರು  ಅಲಭ್ಯರಾದ ಕಾರಣ ಟಿ.ಜಿ.ಲಿಂಗಪ್ಪ ಸ್ವತಃ ಹಾಡಿರಬಹುದು ಎಂದು ನನ್ನ ಊಹೆ.  ಟಿ.ಜಿ. ಲಿಂಗಪ್ಪ ಚೆನ್ನಾಗಿಯೇ ಹಾಡಿರುವುದರ ಬಗ್ಗೆ ಎರಡು ಮಾತಿಲ್ಲ. ಆದರೆ ಆ ಮೇಲೆ ಅವರು ಯಾವ ಚಿತ್ರದಲ್ಲೂ ಹಾಡದಿರುವುದು ನನ್ನ ಈ ಊಹೆಗೆ ಕಾರಣ.   ಚಿತ್ರದ ಟೈಟಲ್ಸ್‌ನಲ್ಲಿ ಹಿನ್ನೆಲೆ ಗಾಯಕನಾಗಿ ಎ.ಎಂ. ರಾಜಾ ಹೆಸರಿಲ್ಲದೇ ಇರುವುದು ಈ ಮಾತಿಗೆ ಪೂರಕ.



ಬೇರೊಂದು ಸಂದರ್ಭದಲ್ಲಿ ಈ ಹಾಡಿನ ಉಲ್ಲೇಖ ಬಂದಾಗ ನವಿಲು ಕರಿ ಮುಗಿಲನ್ನು ನೋಡಿ ನಾಟ್ಯವಾಡುತ್ತದೆಯೇ ಹೊರತು ಬೆಳ್ಮುಗಿಲನ್ನಲ್ಲವಲ್ಲ ಎಂದೊಬ್ಬರು ಪ್ರತಿಕ್ರಿಯಿಸಿದ್ದರು.  ಅದಕ್ಕೆ ಬೆಳ್ಮುಗಿಲು ನವಿಲಿನ ನಾಟ್ಯಕ್ಕೆ ಕರೆಯೋಲೆ ಅಷ್ಟೇ.  ಕರೆಸಿಕೊಂಡವರು ತಯಾರಾಗಿ ಬರುವಷ್ಟರಲ್ಲಿ ಅದು ಕರಿ ಮುಗಿಲಾಗಿ ಪರಿವರ್ತನೆ ಹೊಂದಿ ನವಿಲಿನ ನಾಟ್ಯ ಆರಂಭವಾಗಿರುತ್ತದೆ ಎಂದು ನಾನಂದಿದ್ದೆ!
ಅತಿ ಮಧುರ


ಅತಿ ಮಧುರ ಅನುರಾಗ
ಜೀವನ ಸಂಧ್ಯಾ ರಾಗ
ಸಮರಸದ ವೈಭೋಗ
ಸಂಗ ಸಮಾಗಮ ರಾಗ

ನೀಲಿಯ ಬಾನಿನ ಬೆಳ್ಮುಗಿಲೆ
ನವಿಲಿನ ನಾಟ್ಯಕೆ ಕರೆಯೋಲೆ
ಜೇನಿನ ಹೊನಲೇ ಉಕ್ಕುವ ವೇಳೆ
ಒಲವೇ ಸುಖದ ಉಯ್ಯಾಲೆ

ಯೌವನ ಬಾಳಿನ ಹೊಂಬಾಳೆ
ಪ್ರೀತಿಯೆ ಬಾಡದ ಪೂ ಮಾಲೆ
ನಲ್ಮೆಯ ನೀಡೊ ಪ್ರೇಮದ ಲೀಲೆ
ಒಲವೇ ಸುಖದ ಉಯ್ಯಾಲೆ

ಅಂತರ್ಜಾಲದಲ್ಲಿ 7 ಭಾಗಗಳಾಗಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.  ಆದರೆ ದುರದೃಷ್ಟವಶಾತ್ ಅದರಲ್ಲಿ ರಾಧಾ ಮಾಧವ ವಿನೋದ ಹಾಸ, ನಾನೂ ನೀನೂ ಜೋಡಿ, ಇನ್ನೇನು ಆನಂದ ಬೇಕಾಗಿದೆ ಹಾಡುಗಳು ಇಲ್ಲ. ಕೆಲ ವರ್ಷಗಳ ಹಿಂದೆ ದೂರದರ್ಶನದಲ್ಲಿ ಈ ಚಿತ್ರ ಪ್ರಸಾರವಾದಾಗಲೂ ಆ ಹಾಡುಗಳು ಇರಲಿಲ್ಲವೆಂದು ನೆನಪು.


7 comments:

  1. ಸ್ಕೂಲ್ ಮಾಸ್ಟರ್ ಅಂತಹ ಅಮೂಲ್ಯ ರತ್ನ ಹಾರಕ್ಕೆ ಅಳವಡಿಸಿದಂತ ವಜ್ರಗಳು ಈ ಚಿತ್ರದ ಎಲ್ಲ ಹಾಡುಗಳು. ಒಂದೊಂದು ಹಾಡು u ಒಂದೊಂದು masterpiece . ಈ ಸಿನಿಮಾ ಬಂದಾಗ ನಾನಿನ್ನು ತುಂಬ ಚಿಕ್ಕ ವಯಸ್ಸಿನವಳು. ಹಾಗಾಗಿ ಈ ಸಿನೆಮಾವನ್ನು ನಾನು ನೋಡಿದ್ದು ದೂರದರ್ಶನದಲ್ಲಿ ವಾರಕ್ಕೊಮ್ಮೆ ಕನ್ನಡ ಚಿತ್ರ ಪ್ರಸಾರವಾಗುತ್ತಿದ್ದಾಗ. ಅಂದಿನಿಂದ ಇಂದಿನವರೆಗೂ ಈ ಚಿತ್ರ ಮತ್ತು ಹಾಡುಗಳು ಕಾಡುತ್ತಲೇ ಇವೆ. ೫೦ -೬೦ ರ ದಶಕದ ಸ್ಕೂಲ್ ಮಾಸ್ಟರ್ಗಳ ಚಿಕ್ಕ ಸಂಬಳ ದೊಡ್ಡ ಸಂಸಾರ ಅದಕ್ಕಿಂತಲೂ ದೊಡ್ಡ ಒಳ್ಳೆಯ ಪರೋಪಕಾರಿ ಗುಣ ಎಲ್ಲ ಆ ಕಾಲಕ್ಕೆ ಪ್ರಸ್ತುತವಿದ್ದು ಅವರ ಕಷ್ಟ ಕಾರ್ಪಣ್ಯ ,ಪಾಡುಗಳನ್ನು ಅದೆಷ್ಟು ಮನೋಜ್ಞವಾಗಿ ಚಿತ್ರಿಸಿದ್ದಾರೆ ಪಂತುಲು ಅವರು. ಅವರ ಮತ್ತು ಅವರ ಹೆಂಡತಿಯಾಗಿ ನಟಿಸಿದ m v
    ರಾಜಮ್ಮ ಅವರ ಅಭಿನಯವಂತೂ ಅದ್ಭುತ. ಮುಂದೆ ಸ್ವಾರ್ಥಿ ಮಕ್ಕಳು ಅವರಿಬ್ಬರನ್ನು ಅಗಲಿಸಿ ಹೀನಾಯವಾಗಿ ನಡೆಸಿಕೊಂಡಾಗಂತೂ ಅಳದೆ ಇರುವವರೇ ಇಲ್ಲ. ಅವರ ಕನ್ನಡಕ ಒಡೆದು ಹೋದಾಗ ಅವರು ಹೆಂಡತಿಯ ಪಾತ್ರ ಓದಲು ಪಡುವ ಕಷ್ಟ ಯಾವ ಶತ್ರುವಿಗೂ ಬೇಡ ಅನ್ನಿಸಿತ್ತು. ಮಧ್ಯೆ ಮಧ್ಯೆ ಬರುತ್ತಿದ್ದ ಹಾಡುಗಳಂತೂ ಇನ್ನಷ್ಟು ಮಧುರ. ಅಂತ ಚಿತ್ರ ಹಿಂದೆ ಬಂದೂ ಇಲ್ಲ ಮುಂದೆ ಬರೋದು ಇಲ್ಲ. ನೀವು ಹೇಳಿದ ಬ್ಯಾಗ್ಬ್ಯಾನ್ ಚಿತ್ರ ಇದೇ ಕಥೆ ಇದ್ದರೂ ನಂಬುವುದು ಕಷ್ಟ ಅನ್ನಿಸಿತು. ಅಮಿತಾಭ್ರ ವೈಭವದ ಜೀವನ ಅವರ ಹೆಂಡತಿಯ ವೇಷಭೂಷಣಗಳು ನೋಡಿದ್ರೆ ಅವರು ಮಕ್ಕಳ ಮನೆಗೆ ವಿಧಿಯಿಲ್ಲದೇ ಯಾಕೆ ಹೋದ್ರೋ ಅಂತ ನಂಬೋಕ್ಕೆ ಅಸಾಧ್ಯವಾದಷ್ಟು ಕೃತಕವಾಗಿತ್ತು. ಅದಕ್ಕಿಂತ ಮುಂಚೆ ಬಂದ ಇದೇ ಕಥೆಯ ಮಾಲಾ ಸಿನ್ಹಾ ಮತ್ತು ಸಂಜೀವ್ ಕುಮಾರ್ ಚಿತ್ರ ಎಷ್ಟೋ ವಾಸಿ. ಏನೇ ಆಗ್ಲಿ ಹಿಂದಿ ಚಿತ್ರರಂಗದವರ ಬಡತನದ ಕಲ್ಪನೆಯೇ ಬೇರೆ . ನಮ್ಮ ಸೀಮೆಯದ್ದಲ್ಲ. ನಮ್ಮಕ್ಕ ಹೇಳಿದಂತೆ ಸ್ವಾಮಿದೇವನೇ ಹಾಡು ಹೇಗೆ ಶಾಲಾ ಪ್ರಾರ್ಥನೆ ಆಗಿತ್ತೋ ಹಾಗೆ ವಧುಪರೀಕ್ಷೆಗೆ ಬಂದಾಗ ಭಾಮೆಯ ನೋಡಲು ಹಾಡು ಮ್ಯಾಂಡೇಟರಿ ಆಗಿತ್ತಂತೆ. ರಾಧಾ ಮಾಧವ ಹಾಡಂತೂ ಎಲ್ಲರ ಬಾಯಲ್ಲೂ ದೇವರ ಣಾಮಕ್ಕಿಂತ ಹೆಚ್ಚಾಗಿತ್ತಂತೆ. ಅಂದ ಹಾಗೆ ನೀವು ಬಿಟ್ಟಿರುವ ಹಾಡು ಬನ್ನಿರೈ ಅಂತ ಮಕ್ಕಳು ಹೇಳೋ ಹಾಡು ತಾನೇ?

    Lakshmi GN (FB)

    ReplyDelete
  2. ಕರೋನ ಕರಾಳತೆಯ ಮಧ್ಯೆಯೂ ಹುಣ್ಣಿಮೆ ಬೆಳಕಿನ ಎಂದಿಗೂ ಸವೆಯದ ಸವಿ ಗೀತೆಗಳ ಆಲಿಸಿ ಗೀತೆಯ ಸಾರವನ್ನು ಅಕ್ಷರಗಳಲ್ಲಿ ಆಸ್ವಾದಿಸಿ ಆನಂದಪರವಶಗೊಂಡೆ. ಚಿದಂಬರ ಕಾಕೋತ್ಕರ್ ರವರಿಗೆ ಪ್ರಣಾಮಗಳು ☺️🙏

    ReplyDelete
    Replies
    1. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ತಮ್ಮ ಪರಿಚಯ ತಿಳಿಸಿದರೆ ಹೆಚ್ಚು ಸಂತೋಷವಾಗುತ್ತದೆ. ತಮ್ಮ ವಿರಾಮದ ವೇಳೆಯಲ್ಲಿ ಇನ್ನಷ್ಟು ಬರಹಗಳನ್ನು ಓದಿ, ಆಲಿಸಿ ಅಭಿಪ್ರಾಯ ತಿಳಿಸಿ.

      ಚಿದಂಬರ ಕಾಕತ್ಕರ್

      Delete
    2. ನಮಸ್ಕಾರ ಸರ್. ನಿಮ್ಮ ಬ್ಲಾಗ್ ಸ್ಪಾಟ್ ಅನ್ನು ಕಳೆದ ಎರಡು ವರ್ಷಗಳಲ್ಲಿ ರಿಪೀಟ್ ಶೋ ರೀತಿಯಲ್ಲಿ ನೋಡಿ ಆನಂದಿಸಿ ನನ್ನ ಗೆಳೆಯರಿಗೆ ಶೇರ್ ಮಾಡಿರುವೆ. ನಿಮ್ಮ ಜ್ಞಾನ ಭಂಡಾರದ ಸವಿಯನ್ನು ಅನುಭವುಸುತ್ತಿರುವೆ. ಹೆಚ್ಚು ಪಾಲು ಎಲ್ಲಾ ಹಾಡುಗಳು, ಚಂದಮಾಮದಫೋಟೋಗಳು, ರೇಡಿಯೋ ಸಿಲೋನ್, ‌ಬಿನಾಕಾ ಗೀತಮಾಲ ಎಲ್ಲವನ್ನೂ ಆನಂದಿಸಿರುವೆ. ಧನ್ಯವಾದಗಳು ಸರ್.
      ಮುರಳೀ ಮೋಹನ್, ಬೆಂಗಳೂರು.

      Delete
    3. ನಿಮ್ಮಂಥ ಆಸಕ್ತರು ಆನಂದಿಸಿದರೆ ನನ್ನ ಶ್ರಮ ಸಾರ್ಥಕ. ಅನಿಸಿಕೆ ಇಲ್ಲಿ ದಾಖಲಿಸಿದ್ದಕ್ಕೆ ಧನ್ಯವಾದಗಳು.

      Delete
  3. Idu sakath aagi ide. Namma school nalli swami devane prayer song aagittu. Very good nenapugalu. Nimma blog collection thumba chennagide. Yestu vishayagalu thiliyatte.

    ReplyDelete
  4. ಹಳೆಯ ಕನ್ನಡ ಚಿತ್ರ ಗೀತೆಗಳ ಬಗೆಗಿನ ಮಾಹಿತಿ ಚೆನ್ನಾಗಿದೆ

    ReplyDelete

Your valuable comments/suggestions are welcome