Monday, 9 May 2022

ಹುಟ್ಟಲಿರುವ ಮಗುವಿಗಾಗಿ ಹುಟ್ಟಿದ ಹಾಡೊಂದ ಹಾಡುವೆ


ಪಲ್ಲವಿ, ಎರಡೋ ಮೂರೋ ಚರಣಗಳುಳ್ಳ ಸಾವಿರಾರು ಸಿನಿಮಾ ಹಾಡುಗಳಂತೆ ಇದೂ ಒಂದು. ಇದು ಕಥನ ಗೀತೆಯೇನೂ ಅಲ್ಲ.  ಆದರೆ ಒಂದೊಂದೇ  ಸಾಲಿನ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತಾ ಅರ್ಥೈಸಲು ಪ್ರಯತ್ನಿಸಿದರೆ ನಾಂದಿ ಸಿನಿಮಾದ ಇಡೀ ಕಥೆಯೇ ತೆರೆದುಕೊಳ್ಳುವುದು ಇದರ ವಿಶೇಷ.  ಆರ್.ಎನ್. ಜಯಗೋಪಾಲ್ ಬರೆದ ಹಾಡಿನ ಸಾಹಿತ್ಯದ ಮೇಲೊಮ್ಮೆ ಕಣ್ಣು ಹಾಯಿಸಿ.

ಹಾಡೊಂದ ಹಾಡುವೆ ನೀ ಕೇಳು ಮಗುವೆ
ಬರಿದಾದ ಮನೆ ಬೆಳಗೆ ನೀನೆಂದು ಬರುವೆ

ಸೀಮಂತದಾನಂದ ನಾ ನೀಡಲಿಲ್ಲ
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
ಸಿರಿವಂತರಾ ಭೋಗ ನಿನಗಿಲ್ಲಿ ಇಲ್ಲ
ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲ

ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ
ಆ ಸುಖದೆ ನಾ ಮರೆವೆ ಈ ಬಾಳ ಚಿಂತೆ
ಅದ ಕೇಳೊ ಸೌಭಾಗ್ಯ ಈ ತಾಯಿಗಿಲ್ಲ
ಇವಳಾಸೆ ಆಕಾಂಕ್ಷೆ ನೀನಾದೆಯಲ್ಲ

ಇದು ನಾವು ಸಾವಿರಾರು ಬಾರಿ ಕೇಳಿರುವ,  ಈಗಲೂ ಕೇಳಿ ಆನಂದಿಸುತ್ತಿರುವ ಮೇಲ್ನೋಟಕ್ಕೆ ಸಾಮಾನ್ಯ ಜೋಗುಳವೆನ್ನಿಸಬಹುದಾದ ನಾಂದಿ ಚಿತ್ರದ ಹಾಡು.  ಆದರೆ ಇದರ ಮಾಧುರ್ಯದತ್ತ ನಮ್ಮ ಗಮನ ಕೇಂದ್ರೀಕೃತವಾಗುತ್ತದೆಯೇ ಹೊರತು ಸಾಹಿತ್ಯದ ಸಾಲುಗಳು ಮನದಾಳಕ್ಕೆ ಇಳಿಯುವುದು ಕಮ್ಮಿ.

ಈಗ ನಾಂದಿ ಚಿತ್ರದ ಕಥೆಯನ್ನೊಮ್ಮೆ ಸೂಕ್ಷ್ಮವಾಗಿ ಅವಲೋಕಿಸೋಣ.  ಚಿತ್ರದ ನಾಯಕ ಓರ್ವ ಅಧ್ಯಾಪಕ.  ಆತನ ಮಡದಿ ಚೊಚ್ಚಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮವಿತ್ತು ಅಸು ನೀಗುತ್ತಾಳೆ. ಆತ ನೆರೆಹೊರೆಯವರ ಸಹಾಯದಿಂದ ಕಷ್ಟಪಟ್ಟು ಮಗುವನ್ನು ಸಾಕತೊಡಗುತ್ತಾನೆ. ದುರದೃಷ್ಟವಶಾತ್ ಅದು ಶ್ರವಣ ದೋಷದಿಂದ ಬಳಲುತ್ತಿದ್ದು ತತ್ಪರಿಣಾಮವಾಗಿ ಮಾತೂ ಬರುವುದಿಲ್ಲ.  ಹೆಚ್ಚು ದಿನ ನೆರೆಹೊರೆಯವರಿಗೆ ಹೊರೆಯಾಗಲಿಚ್ಛಿಸದೆ ಆ ಮಗುವಿನ ಯೋಗಕ್ಷೇಮಕ್ಕಾಗಿ ಆತ ಇನ್ನೊಮ್ಮೆ ಮದುವೆಯಾಗಬಯಸುತ್ತಾನೆ. ಎರಡನೇ ಮದುವೆ, ವಾಕ್ ಶ್ರವಣ ದೋಷವುಳ್ಳ ಮಗು ಬೇರೆ.  ಯಾರು ಹೆಣ್ಣು ಕೊಡುತ್ತಾರೆ.  ಹಿಂದೊಮ್ಮೆ ಇಂಥದೇ ದೋಷವುಳ್ಳ ಕನ್ಯೆಯೊಬ್ಬಳ ಮಾತಾಪಿತರು ನಿಜ ಸ್ಥಿತಿ ಅರಿತೂ ತಮ್ಮ ಮಗಳನ್ನು ಮದುವೆಯಾಗಬಯಸುವಂಥವರು ಯಾರಾದರೂ ಇದ್ದರೆ ತಿಳಿಸಿ ಎಂದು ಹೇಳಿದ್ದು ಆತನಿಗೆ ನೆನಪಾಗುತ್ತದೆ.  ತಾನೇ ಯಾಕೆ ಆಕೆಯನ್ನು ಮದುವೆಯಾಗಬಾರದು ಎಂದು ಯೋಚಿಸಿ ವಿಷಯ ಪ್ರಸ್ತಾಪಿಸಿದಾಗ ಅವರು ಸಂತೋಷದಿಂದ ಒಪ್ಪುತ್ತಾರೆ.  ಸುಗುಣವತಿಯಾದ ಆಕೆಯೊಡನೆ ಇವನ ವಿವಾಹವಾಗುತ್ತದೆ.  ಮಲಮಗುವನ್ನು ಆಕೆ ತನ್ನದೆಂದೇ ಭಾವಿಸಿ ಸಲಹುತ್ತಾಳೆ. ಸಂಸ್ಥೆಯೊಂದರ ಸಹಾಯದಿಂದ ಆತ ಮನೆಯಲ್ಲೇ ಮಡದಿ ಮತ್ತು ಮಗುವಿಗೆ ಮಾತನಾಡಲು ಕಲಿಸುವುದರಲ್ಲಿ ಸಫಲನಾಗುತ್ತಾನೆ. ಇದರ ಉಪಯೋಗ ಇಂಥ ಸಮಸ್ಯೆಯಿಂದ ಬಳಲುವ ಇತರರಿಗೂ ಸಿಗಬೇಕು ಎಂಬ ಉದ್ದೇಶದಿಂದ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ತಾನೇ ಕಿವುಡು ಮೂಕ ಮಕ್ಕಳ ಶಾಲೆಯೊಂದನ್ನು ನಡೆಸತೊಡಗುತ್ತಾನೆ. ಹೀಗಿರುತ್ತ ಒಂದು ದಿನ ಮನೆಯಲ್ಲಿ ಬೇರಾರೂ ಇಲ್ಲದಿರುವಾಗ ಅಗ್ನಿ ಆಕಸ್ಮಿಕಕ್ಕೆ ಒಳಗಾದ ಮಗು ಎಷ್ಟು ಕಿರುಚಿಕೊಂಡರೂ ಕಿವುಡಿಯಾದ ತಾಯಿಗೆ ಕೇಳಿಸದಿರುವುದರಿಂದ ಅದನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಆದರೆ ಸಮಯವು ಎಂಥ ಗಾಯಕ್ಕೂ ಮುಲಾಮು ಹಚ್ಚುತ್ತದೆ. ಕೆಲ ಕಾಲ ನಂತರ ಆಕೆಯೂ ಗರ್ಭಿಣಿಯಾಗುತ್ತಾಳೆ. ಆತನಿಗೆ ಆಗ ಮೊದಲ ಪತ್ನಿಯ ಸೀಮಂತ ನಡೆದದ್ದು, ಹೆಂಗಳೆಯರು ಹಾಡು ಹಾಡಿದ್ದು, ‘ಹುಟ್ಟುವ ಮಗುವಿಗೆ ಹೊಟ್ಟೆಯಲ್ಲಿರುವಾಗಲೇ ಸಂಗೀತ ಜ್ಞಾನ ಶಬ್ದ ಜ್ಞಾನ ಬರಲಿ ಎಂದು ಹಿರಿಯರು ಮಾಡಿದ ಸಂಪ್ರದಾಯ ಇದು’ ಎಂದು ಎಂದು ತಾನು ಹೇಳಿದ್ದೆಲ್ಲ ನೆನಪಾಗುತ್ತದೆ. ಈ ಕಿವುಡು ತಾಯಿಗೆ ಹುಟ್ಟುವ ಮಗು ಕೂಡ ಕಿವುಡಾಗಿಯೇ ಹುಟ್ಟೀತೇ ಎಂಬ ಆತಂಕವೂ ಕಾಡತೊಡಗುತ್ತದೆ. ವಿಶ್ರಾಂತಿ ಪಡೆಯುತ್ತಿರುವ ತುಂಬು ಗರ್ಭಿಣಿ ಮಡದಿಯನ್ನು ನೋಡುತ್ತಾ ರಾತ್ರಿಯ ನೀರವತೆಯಲ್ಲಿ ಟಿಕ್ ಟಿಕ್ ಅನ್ನುತ್ತಿರುವ ಗಡಿಯಾರದ ತಾಳಕ್ಕೆ ಸರಿಯಾಗಿ ತಾಯಿಯ ಹೊಟ್ಟೆಯೊಳಗಿರುವ ಮಗುವನ್ನು ಉದ್ದೇಶಿಸಿ ಮೆಲುದನಿಯಲ್ಲಿ ಹಾಡತೊಡಗುತ್ತಾನೆ...

ಈಗ ಹಾಡಿನ ಸಾಹಿತ್ಯ ಇನ್ನೊಮ್ಮೆ ನೋಡಿ.  ಮೊದಲಿನ ಮಡದಿ ಮತ್ತು ಮಗು ಹೋಗಿ ಮನೆ ಬರಿದಾಗಿರುವುದು,  ಅದನ್ನು ಮತ್ತೆ ಬೆಳಗಲು ಈ ಮಗು ಆದಷ್ಟು ಬೇಗ ಬರಲಿ ಎಂಬ ಕಾತರ, ಮೊದಲ ಮಗುವಿನಂತೆ ಈ ಸಲ ಸೀಮಂತ ಆಚರಿಸಲು ಸಾಧ್ಯವಾಗದಿರುವುದು, ಹೊಟ್ಟೆಯಲ್ಲಿರುವಾಗಲೇ  ಸಂಗೀತ ಜ್ಞಾನ, ಶಬ್ದ ಜ್ಞಾನ ಬರಲು ಮಹಿಳೆಯರು ಹಾಡಿ ಹರಸದಿರುವುದು, ಈ ಸಲವೂ ನ್ಯೂನತೆಯುಳ್ಳ ಮಗು ಜನಿಸೀತೇನೋ ಎಂಬ ಆತಂಕದ ನಡುವೆಯೂ ಹಾಗೇನೂ ಆಗದೆ ಸಹಜವಾಗಿದ್ದು ಸವಿಜೇನಿನಂಥ ಮಾತನ್ನಾಡಿ ಚಿಂತೆಗಳನ್ನೆಲ್ಲ ಮರೆಸೀತೆಂಬ  ಆಶಾ ಭಾವ,  ಆದರೆ ಆ ಅಮೃತತುಲ್ಯ ಮಾತುಗಳನ್ನು ಕೇಳುವ ಸೌಭಾಗ್ಯ ಕಿವುಡಿಯಾದ ತಾಯಿಗಿಲ್ಲವಲ್ಲ ಎನ್ನುವ  ವಿಷಾದಗಳನ್ನೊಳಗೊಂಡ ಇಡೀ ಕಥೆಯನ್ನು   ಆರ್.ಎನ್. ಜಯಗೋಪಾಲ್  ಈ ಹತ್ತು ಸಾಲುಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ ಎಂದು ಅನ್ನಿಸುವುದಿಲ್ಲವೇ.

ಮಧ್ಯಮಾವತಿ ರಾಗಕ್ಕೆ ಗ2 ಸೇರಿ ಎಂದರೋ ಮಹಾನುಭಾವುಲು  ಪಂಚರತ್ನ ಕೃತಿಯಲ್ಲಿ ಬಳಸಲಾದ ‘ಪದನಿ’ ಪ್ರಯೋಗ ರಹಿತ ಶ್ರೀ ರಾಗದಂತೆ ಭಾಸವಾಗುವ ಸ್ವರಗಳನ್ನು ಹೊಂದಿರುವ ಈ ಹಾಡಿಗೆ ವಿಜಯಭಾಸ್ಕರ್ ಅವರು ಯಾವ ತಾಳ ವಾದ್ಯವನ್ನೂ ಬಳಸಿಲ್ಲ.  ಗಡಿಯಾರದ ಟಿಕ್ ಟಿಕ್ ಲಯದೊಂದಿಗೇ ಸಾಗುವ ಹಾಡಿಗೆ ವಿರಳವಾದ guitar chords ಬೆಂಬಲ ಇದೆ.  ಮರದ ತುಂಡುಗಳಿಗೆ ಅಳವಡಿಸಿದ ಲೋಹದ ಪಟ್ಟಿಗಳನ್ನು ಚೆಂಡಿನಾಕಾರದ ತಲೆಯುಳ್ಳ ಸಣ್ಣ ಕೋಲುಗಳಿಂದ ನುಡಿಸುವ glockenspiel ಮತ್ತು ಕೊಳಲುಗಳನ್ನು  ಮಾತ್ರ ಮುಖ್ಯ ಹಿನ್ನೆಲೆ ವಾದ್ಯಗಳಾಗಿ ಉಪಯೋಗಿಸಲಾಗಿದೆ. ಹಿತಮಿತವಾಗಿ ವೈಬ್ರೊಫೋನ್  ನುಡಿಸಿರುವುದನ್ನೂ ಗಮನಿಸಬಹುದು. ಉಳಿದದ್ದನ್ನೆಲ್ಲ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯ ಆರ್ದ್ರತೆ  ತುಂಬಿ ಕೊಟ್ಟಿದೆ.


ಜೋಗುಳದ ಹಾಡುಗಳು ನೂರಾರಿವೆ.  ಹುಟ್ಟಲಿರುವ ಮಗುವಿನ ಬಗ್ಗೆ ಇರುವ ಹಾಡುಗಳೂ ಬಹಳ ಇವೆ.  ಆದರೆ ತಾಯಿ ಹೊಟ್ಟೆಯಲ್ಲಿರುವ ಮಗುವನ್ನೇ ಉದ್ದೇಶಿಸಿ ತಂದೆ ಹೇಳುವ ಹಾಡು ಬಹುಶಃ ಇದು ಒಂದೇ.

ಈ ಹಾಡನ್ನು ನಾನು ಮೊದಲು ಕೇಳಿದ್ದು 9ನೇ ತರಗತಿಯಲ್ಲಿರುವಾಗ.  ಅದರ  ‘ಬರಿದಾದ ಮನೆ ಬೆಳಗೆ ನೀನೆಂದು ಬರುವೆ’ ಎಂಬ ಸಾಲು ನನಗೆ ಅರ್ಥವೇ ಆಗುತ್ತಿರಲಿಲ್ಲ.  ಇದು ಇನ್ನು ಹುಟ್ಟಲಿರುವ ಮಗುವಿಗೆ ಹೇಳುತ್ತಿರುವುದು ಎಂಬ ಕಲ್ಪನೆಯೂ ರೇಡಿಯೊದಲ್ಲಿ ಕೇಳುವಾಗ ಬರಲು ಸಾಧ್ಯವಿರಲಿಲ್ಲ ಅಲ್ಲವೇ.  ಅದು ಬರಿದಾದ ಮನೆ ಬೆಳಗೆ ನೀನೆಂದು ತಿಳಿವೆ ಆಗಬೇಕಿತ್ತು,  ಬರುವೆ ಎಂಬ ತಪ್ಪು ಪದ ಉಪಯೋಗಿಸಿದ್ದಾರೆ ಅಂದುಕೊಳ್ಳುತ್ತಿದ್ದೆ!  ಮೇಲಾಗಿ ‘ನೀನೆಂದು’ ಎಂದರೆ ‘ನೀನು ಎಂಬುದಾಗಿ’ ಎಂದು ಅರ್ಥೈಸಿಕೊಂಡಿದ್ದೆನೇ ಹೊರತು ಅದು ‘ನೀನು ಯಾವಾಗ’ ಎಂದಾಗಿರಬಹುದೆಂದು  ನನಗೆ ಹೊಳೆದಿರಲಿಲ್ಲ.

‘ನಿಮ್ಮನ್ನೆಲ್ಲ ರಿಪೇರಿ ಮಾಡ್ತೇನೆ ಗೊತ್ತಾಯ್ತಲ್ಲ’ ಎಂದು ಗದರಿಸುತ್ತಾ ವಿದ್ಯಾರ್ಥಿಗಳನ್ನು ಆಜೀವ ಕಾರಾಗೃಹವಾಸದಲ್ಲಿರುವ ಕೈದಿಗಳಂತೆ  ಕಾಣುವ ಖಡಕ್ ಪಿ.ಟಿ. ಮಾಸ್ಟ್ರೊಬ್ಬರು ನಮಗಿದ್ದರು.  ಒಮ್ಮೆ ಯಾವುದೋ leisure  ಪೀರಿಯಡಿಗೆ ನಮ್ಮ ಕ್ಲಾಸಿಗೆ ಬಂದ ಅವರು ‘ಯಾರಾದರೂ ಹಾಡೊಂದ ಹಾಡುವೆ ನೀ ಕೇಳು ಮಗುವೆ ಹಾಡಿ ನೋಡುವಾ’ ಅಂದಾಗ ಈ ಹಾಡಿಗೆ ನಿಜವಾಗಿಯೂ ಕಲ್ಲನ್ನೂ ಕರಗಿಸುವ ಶಕ್ತಿ ಇದೆ ಅನ್ನಿಸಿತ್ತು!

ಈಗ ಕಥಾಭಾಗವನ್ನು ಇನ್ನೊಮ್ಮೆ ಓದಿ ಹೆಡ್ ಫೋನ್ ಧರಿಸಿ ಗಡಿಯಾರದ ಟಿಕ್ ಟಿಕ್ ಸದ್ದು ಗಮನಿಸುತ್ತಾ ಈ ಹಾಡು ಆಲಿಸಿ ಆನಂದಿಸಿ ಅನುಭವಿಸಿ.




ಈ ಬರಹದ ಆಯ್ದ ಅಂಶ  ಜೂನ್ 2022ರ ರೂಪತಾರಾ ಪತ್ರಿಕೆಯಲ್ಲಿ ಕಾಣಿಸಿಕೊಂಡಿತು.



24-3-19
 
 

 
 

10 comments:

  1. ಅಮೃತಘಳಿಗೆ ಚಿತ್ರದ ಹಿಂದೂಸ್ಥಾನವು ಎಂದೂ ಮರೆಯದೆ ಹಾಡು ಸಹ ತಂದೆ ಹುಟ್ಟಲಿರುವ ಮಗುವನ್ನು ಕುರಿತ್ತದ್ದೆ

    ReplyDelete
  2. Amazing writeup about an amazing song. You really touched my heart, Sri Chidambara Sir! My science teacher used to talk about this song during my high school days. The memory of listening to this during late Sunday nights on Bhadravati station (Savi Nenapu program) is etched in my memory forever.

    The other song in this movie, Chandramukhi Pranasakhi (set to Malkauns and a rare duet of SJ and PS) is an amazing composition as well.

    ReplyDelete
  3. ಆದರೆ ತಾಯಿ ಹೊಟ್ಟೆಯಲ್ಲಿರುವ ಮಗುವನ್ನೇ ಉದ್ದೇಶಿಸಿ ತಂದೆ ಹೇಳುವ ಹಾಡು ಬಹುಶಃ ಇದು ಒಂದೇ.

    Neevu heegendaaga nanage "Naa Bidalaare Endoo Ninna" nenapaguttade. Amazing poem by the great Sri Vijayanarasimha.

    ReplyDelete
  4. ಹಾಡಿನ ಹಿನ್ನೆಲೆ ವಿವರಣೆ ಓದಿದಮೇಲೆ ಮರೆತು ಹೋಗಿದ್ದ ಕಥೆ ಮರೆಯಲಾಗದ ಹಾಡಿನ ಸೊಬಗನ್ನ ಇನ್ನೂ ಹೆಚ್ಚಿಸಿತು . . ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು .

    Suri Shiva Kumar (FB)

    ReplyDelete
  5. ಹಾಡಿನ ಅರ್ಥ ಬಹಳ ಚೆನ್ನಾಗಿ ವಿವರಿಸಿದ್ದೀರ.

    Asha Padmanabh (FB)

    ReplyDelete
  6. ಚಿತ್ರದಲ್ಲಿ ಮೊದಲು ಈ ಹಾಡು ಇರಲಿಲ್ಲ. ಸಂದರ್ಭದ ವಿಷಯ ಬಂದಾಗ "ಇಲ್ಲಿ ಒಂದು ಹಾಡು ಬರಬಹುದು" ಎಂದು ವಿಜಯಭಾಸ್ಕರ್ ಹೇಳಿದರು. ಆ ಮಾತನ್ನು ಪಂಥದಂತೆ ಸ್ವೀಕರಿಸಿದ ಆರ್ ಎನ್ ಜೆ "ನಾನು ಅರ್ಧ ಗಂಟೆಯ ಒಳಗೆ ಹಾಡು ಬರೆಯುತ್ತೇನೆ" ಎಂದರು. ಪಂಥ ಮುಂದುವರೆಸಿದ ವಿ ಭಾ "ಹಾಗಾದರೆ ನಾನು ನಂತರದ ಅರ್ಧ ಗಂಟೆಯ ಒಳಗೆ ಸಂಗೀತ ಸಂಯೋಜಿಸುತ್ತೇನೆ" ಎಂದರು! ಇಪ್ಪತ್ತು ನಿಮಿಷಗಳ ಒಳಗೆ ಹಾಡು ಬರೆದು ಇನ್ನು ಇಪ್ಪತ್ತು ನಿಮಿಷಗಳಲ್ಲಿ ಸಂಗೀತ ಸಂಯೋಜನೆ ಆಯಿತು ಎಂದು ಓದಿದ್ದೆ!

    Kiran Surya (FB)

    ReplyDelete
  7. ಕನ್ನಡ ಚಿತ್ರಗೀತೆಗಳಲ್ಲಿ ಅತ್ಯಂತ ಮಾಧುರ್ಯ ತುಂಬಿದ ಹಾಡುಗಳಲ್ಲಿ ಈ ಗೀತೆಯೂ ಒಂದು.ರಾಜ್ ಕುಮಾರ್ ಅವರ ಮನೋಜ್ಞ ಅಭಿನಯ ಜಯಗೋಪಾಲ್ ಅವರ ಅನುಪಮ ಸಾಹಿತ್ಯ ಪಿ ಬಿ ಶ್ರೀನಿವಾಸ್ ಅವರ ಸುಶ್ರಾವ್ಯ ಕಂಠ ಈ ಹಾಡನ್ನು ಅತುಲ್ಯವಾಗಿಸಿದೆ.ಎಲ್ಲವೂ ಒಂದಕ್ಕೊಂದು ಪೂರಕ.ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡಿನ ವಿವರಣೆ ಕೂಡ ಬಹಳ ಚೆನ್ನಾಗಿದೆ.

    Vani Jalihal (FB)

    ReplyDelete
  8. ಕೇಳುತ್ತಲೇ ಸಿನಿಮಾ ನೋಡುವಾಗ ಅತ್ತವರು ಕಡಿಮೆಯೇನಿಲ್ಲ. ಅದಕ್ಕೆ ಕಾರಣ ನಿರ್ದೇಶಕರು ಸಹಅಲ್ಲವೇ

    ReplyDelete
  9. 🙏🙏👌

    ReplyDelete

Your valuable comments/suggestions are welcome