Saturday 30 July 2022

ರಫಿ ಲತಾ ಗಾನ ಸಂಧಾನದ ನಂತರ


ಜುಲೈ 31 ಅಂದರೆ ಅಮರ ಗಾಯಕ ಮಹಮ್ಮದ್ ರಫಿ ಅವರನ್ನು ವಿಶೇಷವಾಗಿ ಸ್ಮರಿಸುವ ದಿನ. ಏಕೆಂದರೆ ಅವರು ನಿಧನರಾದದ್ದು 1980ರ ಇದೇ ದಿನದಂದು.  2022   ಲತಾ ಮಂಗೇಷ್ಕರ್ ನಿಧನರಾದ ವರ್ಷ.  ಹಾಗಾಗಿ 1964 ಮತ್ತು 66ರ ನಡುವೆ ಅವರಿಬ್ಬರ ಮಧ್ಯೆ  ಹಾಡುಗಳ ರಾಯಲ್ಟಿಗೆ ಸಂಬಂಧಿಸಿದಂತೆ ಉಂಟಾಗಿದ್ದ ವಿರಸ ಕೊನೆಗೊಂಡ ನಂತರ  ಪ್ರಮುಖ ಸಂಗೀತ ನಿರ್ದೇಶಕರಿಗಾಗಿ ಅವರು ಜೊತೆಯಾಗಿ ಹಾಡಿದ ಮೊದಲ ಯುಗಳ ಗೀತೆಗಳನ್ನು ಆಲಿಸುವ ಮೂಲಕ ಅವರಿಬ್ಬರನ್ನೂ ವಿಭಿನ್ನ ಶೈಲಿಯಲ್ಲಿ ಸ್ಮರಿಸೋಣ ಎಂಬ ಆಲೋಚನೆ ಮೂಡಿತು. ಇದಕ್ಕಾಗಿ ಕೈಗೊಂಡ ಒಂದಷ್ಟು ಸಂಶೋಧನೆಯ ಫಲಶ್ರುತಿ ಏನು ಎಂದು ನೋಡೋಣ.

1. ಶಂಕರ್ ಜೈಕಿಶನ್ - ಗಬನ್ ಚಿತ್ರದ ತುಮ್ ಬಿನ್ ಸಜನ್



ಲತಾ ರಫಿ ನಡುವೆ ರಾಜಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಲತಾ ಅವರ ಸಮವಯಸ್ಕರಾಗಿದ್ದ ಜೈಕಿಶನ್. ಅವರಿಬ್ಬರ ಮಧ್ಯೆ  ಸ್ನೇಹದ ಸಲುಗೆಯೂ ಇತ್ತು. ಹೀಗಾಗಿ ‘ನಿಮ್ಮಿಬ್ಬರ ಯುಗಳ ಗೀತೆಗಳಿಲ್ಲದೆ ನಮ್ಮಿಂದ ಕ್ರಿಯಾಶೀಲ ಕಂಪೋಸಿಷನ್ ಸಾಧ್ಯವಾಗುತ್ತಿಲ್ಲ’ ಎಂದು ಅವರಂದಾಗ ಲತಾಗೆ ಇಲ್ಲವೆಂದು ಹೇಳಲಾಗಲಿಲ್ಲ. ಈ ವಿರಸ ರಫಿಯ ಕ್ಯಾರಿಯರ್ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ ಮತ್ತು  ಅದನ್ನು  ಕೊನೆಗೊಳಿಸಲು  ಆವರ ತಕರಾರೂ ಇರಲಿಲ್ಲ. ಹೀಗಾಗಿ ಜೈಕಿಶನ್ ತಂದು ಕೊಟ್ಟ ಹೂಗುಚ್ಛಗಳನ್ನು ಅವರಿಬ್ಬರು ಬದಲಾಯಿಸಿಕೊಳ್ಳುವ ಮೂಲಕ ವರುಷಗಳ ವಿರಸ ನಿಮಿಷದಲ್ಲಿ ಕರಗಿ ಹೋಯಿತು. ಸಂಧಾನದ ನಂತರದ ಮೊದಲ ರಫಿ ಲತಾ ಯುಗಳಗೀತೆಯನ್ನು  ಪಲ್ಕೊಂ ಕಿ ಛಾವೊಂ ಮೆಂ ಎಂಬ ಚಿತ್ರಕ್ಕಾಗಿ ಶಂಕರ್ ಜೈಕಿಶನ್ 1966ರಲ್ಲಿ ರೆಕಾರ್ಡ್ ಮಾಡಿದರು. ಆದರೆ ಅದೇಕೋ ಆ ಚಿತ್ರವಾಗಲಿ ಗೀತೆಯಾಗಲಿ ಬೆಳಕು ಕಾಣಲಿಲ್ಲ. ಹೀಗಾಗಿ ಶಂಕರ್ ಜೈಕಿಶನ್ ಅವರದೇ ನಿರ್ದೇಶನದಲ್ಲಿ ಅದೇ ವರ್ಷ ಗಬನ್ ಚಿತ್ರಕ್ಕಾಗಿ ಅವರಿಬ್ಬರು ಹಾಡಿದ ತುಮ್ ಬಿನ್ ಸಜನ್ ಬರ್‌ಸೆ ನಯನ್   ಹಾಡಿಗೆ  ಮೊದಲ ಸಂಧಾನೋತ್ತರ ಯುಗಳ ಗೀತೆಯ ಸ್ಥಾನ ದೊರೆಯಿತು. ಕೆಲ ಕಾಲದ ನಂತರ ಜೈಕಿಶನ್ ನಿಧನರಾದ ಮೇಲೆ  ಶಂಕರ್ ಬೇಡಿಕೆ ಕಳೆದುಕೊಂಡುದರಿಂದ ಆ ಮೇಲೆ ಶಂಕರ್ ಜೈಕಿಶನ್ ನಿರ್ದೇಶನದಲ್ಲಿ  ಹೆಚ್ಚು ಲತಾ ರಫಿ ಯುಗಳ ಗೀತೆಗಳು ಬರಲಿಲ್ಲ.  ಆದರೂ ಮೇರೇ ಹುಜೂರ್ ಚಿತ್ರದ ಕ್ಯಾ ಕ್ಯಾನ ಸಹೇ ಹಮ್ ನೆ ಸಿತಂ, ಆಶಾ ಭೋಸ್ಲೆಯೂ ಜೊತೆಗಿದ್ದ  ಪ್ರಿನ್ಸ್ ಚಿತ್ರದ ಮುಕಾಬಲಾ ಹಮ್ ಸೆ ನ ಕರೊ, ಜಾನೆ ಅಂಜಾನೆ ಚಿತ್ರದ ತೇರಿ ನೀಲಿ ನೀಲಿ ಆಂಖೋಂ ಕೆ, ಧರ್ತಿ ಚಿತ್ರದ ಯೆ ಮೌಸಮ್ ಭೀಗಾ ಭೀಗಾ ಹೈ ಮುಂತಾದವು ಕೇಳಲು ಸಿಕ್ಕಿದವು.

2. ಸಚಿನ್ ದೇವ್ ಬರ್ಮನ್ - ಜ್ಯೂಯಲ್ ತೀಫ್ ಚಿತ್ರದ ದಿಲ್ ಪುಕಾರೆ



1958ರಿಂದ 65ರ ವರೆಗೆ ಪೂರ್ತಿ ರಫಿ ನಿಷ್ಠರಾಗಿದ್ದ ಎಸ್.ಡಿ. ಬರ್ಮನ್ 1965ರ ತೀನ್ ದೇವಿಯಾಂ ಮೂಲಕ ಮತ್ತೆ ಹಿನ್ನೆಲೆ ಗಾಯನದತ್ತ ಹೊರಳಿದ ಕಿಶೋರ್ ಕುಮಾರ್ ಕಡೆಗೆ ಹೆಚ್ಚು ಒಲವು ತೋರಿದರೂ ರಫಿಯನ್ನು ಕಡೆಗಣಿಸಲಿಲ್ಲ. ಇದಕ್ಕೆ ಸಾಕ್ಷಿಯಾಗಿ ಎರಡನೇ ಸಂಧಾನೋತ್ತರ  ರಫಿ ಲತಾ ಯುಗಳಗೀತೆಯಾಗಿ 1967ರ ಜ್ಯೂಯಲ್ ತೀಫ್  ಚಿತ್ರದ  ದಿಲ್ ಪುಕಾರೆ  ಹಾಡು ಮೂಡಿ ಬಂತು. ನಂತರವೂ ಎಸ್.ಡಿ. ಬರ್ಮನ್ ಅವರು ತಲಾಶ್ ಚಿತ್ರದ ಪಲ್ಕೊಂ ಕೆ ಪೀಛೆ ಸೆ ಮತ್ತು ಆಜ್ ಕೊ ಜುನ್‌ಲಿ ರಾತ್ ಮಾ, ಇಶ್ಕ್ ಪರ್ ಜೋರ್ ನಹೀಂ ಚಿತ್ರದ ಯೇ ದಿಲ್ ದೀವಾನಾ ಹೈ, ಆರಾಧನಾದ ಬಾಗೋಂ ಮೆಂ ಬಹಾರ್ ಹೈ, ಅನುರಾಗ್ ಚಿತ್ರದ ತೇರೆ ನೈನೊಂ ಕೆ ಮೈಂ ದೀಪ್ ಜಲಾವೂಂಗಾ, ಅಭಿಮಾನ್ ಚಿತ್ರದ ತೇರೀ ಬಿಂದಿಯಾರೆ ಮುಂತಾದ ರಫಿ ಲತಾ ಗೀತೆಗಳನ್ನು ನೀಡಿದರು.

3. ಲಕ್ಷ್ಮೀಕಾಂತ್ ಪ್ಯಾರೇಲಾಲ್ - ಶಾಗಿರ್ದ್ ಚಿತ್ರದ ವೊ ಹೈಂ ಜರಾ ಖಫಾ ಖಫಾ



ರಫಿ ಲತಾ ವಿರಸ ಎಂದು ಕೊನೆಗೊಳ್ಳುವುದೋ ಎಂದು ಇತರ ಸಂಗೀತ ನಿರ್ದೇಶಕರೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಮನದಾಳದಿಂದ ರಫಿ ಪ್ರಿಯರಾಗಿದ್ದ ಲಕ್ಷ್ಮೀ ಪ್ಯಾರೇ  ತಾವು ಸಂಗೀತ ನೀಡುತ್ತಿದ್ದ  ಶಾಗಿರ್ದ್ ಚಿತ್ರಕ್ಕಾಗಿ ವೊ ಹೈಂ ಜರಾ ಖಫಾ ಖಫಾ ಹಾಡನ್ನು ಇವರಿಗಾಗಿ ಸೃಷ್ಟಿಸಿದರು. ನಾನು ಬಹುಕಾಲ ಇದನ್ನು ಮೊಹೆ (ಅಂದರೆ ಗ್ರಾಮ್ಯ ಹಿಂದಿಯಲ್ಲಿ ನನಗೆ ಎಂದರ್ಥ) ಜರಾ ಎಂದು ಹಾಡಿಕೊಳ್ಳುತ್ತಿದ್ದೆ! ಆ ವರ್ಷದ ಬಿನಾಕಾ ಗೀತ್‌ಮಾಲಾ ನಂಬರ್ ವನ್ ಹಾಡಾಗಿದ್ದ ಇದೇ ಚಿತ್ರದ ದಿಲ್ ವಿಲ್ ಪ್ಯಾರ್ ವ್ಯಾರ್ ಎಂಬ ಲತಾ ಹಾಡಿನ ಆರಂಭದಲ್ಲಿ ರಫಿ ಹಾಡಿದ ನಾಲ್ಕು ಸಾಕಿ ಸಾಲುಗಳೂ ಇದ್ದುದರಿಂದ ಅದನ್ನೂ ಯುಗಳ ಗೀತೆಯೆಂದೇ ತಿಳಿದುಕೊಳ್ಳಬಹುದು. ಮುಂದಿನ ವರ್ಷಗಳಲ್ಲಿ  ಎಲ್ಲರಿಗಿಂತ ಹೆಚ್ಚು ರಫಿ ಲತಾ ಗೀತೆಗಳು ಇವರ ನಿರ್ದೇಶನದಲ್ಲೇ ಬಂದವು. ವಾಪಸ್ ಚಿತ್ರದ ಏಕ್ ತೇರಾ ಸಾಥ್ ಹಮ್‌ ಕೊ, ಜಿಗ್ರೀ ದೋಸ್ತ್ ಚಿತ್ರದ ದಿಲ್ ಮೆಂ ಕ್ಯಾ ಹೈ ಹಾಗೂ ಫೂಲ್ ಹೈ ಬಹಾರೋಂಕಾ, ಹಮ್‌ಜೋಲಿಯ ಹಾಯ್ ರೇ ಹಾಯ್ ಮತ್ತು ಟಿಕ್ ಟಿಕ್ ಟಿಕ್ ಮೆರಾ ದಿಲ್ ಡೋಲೆ, ಏಕ ನಜರ್ ಚಿತ್ರದ ಪತ್ತಾ ಪತ್ತಾ ಬೂಟಾ ಬೂಟಾ, ಇಜ್ಜತ್ ಚಿತ್ರದ ಯೆ ದಿಲ್ ತುಮ್ ಬಿನ್ ಕಹೀಂ, ಜೀನೇ ಕೀ ರಾಹ್ ಚಿತ್ರದ ಆ ಮೇರೆ ಹಮ್‌ಜೋಲಿ ಆ, ಆಯಾ ಸಾವನ್ ಝೂಮ್ ಕೆ ಚಿತ್ರದ ಟೈಟಲ್ ಹಾಡು ಮತ್ತು ಸಾಥಿಯಾ ನಹೀಂ ಜಾನಾ, ಸಾಜನ್ ಚಿತ್ರದ ರೇಶಮ್ ಕೀ ಡೋರಿ, ದೋ ರಾಸ್ತೇಯ ಛುಪ್ ಗಯೆ ಸಾರೆ ನಜಾರೆ, ಆನ್ ಮಿಲೊ ಸಜ್‌ನಾದ ಟೈಟಲ್ ಹಾಡು, ಮನ್ ಕೀ ಆಂಖೇಂ ಚಿತ್ರದ ಚಲಾ ಭೀ ಆ, ಮೆಹಬೂಬ್ ಕೀ ಮೆಹೆಂದಿಯ ಇತನಾ ತೊ ಯಾದ್ ಹೈ ಮುಝೆ, ಪಿಯಾ ಕಾ ಘರ್ ಚಿತ್ರದ ಯೇ ಜುಲ್ಫ್ ಕೈಸೀ ಹೈ ಮುಂತಾದವನ್ನು ಪ್ರಾತಿನಿಧಿಕವಾಗಿ ನೆನಪು ಮಾಡಿಕೊಳ್ಳಬಹುದು.

4. ಕಲ್ಯಾಣಜೀ ಆನಂದಜೀ - ದಿಲ್ ನೆ ಪುಕಾರಾ ಚಿತ್ರದ ಹಮ್ ಕೊ ಹೋನೆ ಲಗಾ ಹೈ ಪ್ಯಾರ್

ಮುಕೇಶ್ ಧ್ವನಿಯಲ್ಲಿ ಹೆಚ್ಚು ಹಿಟ್ ಹಾಡುಗಳನ್ನು ನೀಡಿದವರಾದರೂ ಆರಂಭದಿಂದಲೂ ಕಲ್ಯಾಣಜೀ ಆನಂದಜೀ ಕೂಡ ರಫಿ ಲತಾ ಯುಗಳಗಾಯನದ ಲಾಭ ಪಡೆಯುತ್ತಾ ಬಂದವರೇ. ಅವರ ಸಂಗೀತದಲ್ಲಿ ಎರಡನೇ ಇನ್ನಿಂಗ್ಸಿನ ಮೊದಲ ಲತಾ ರಫಿ ಗೀತೆಯಾಗಿ 1967ರ ದಿಲ್ ನೆ ಪುಕಾರಾ ಚಿತ್ರದ ಕಭಿ ಹಮ್ ಕೊ ಹೋನೆ ಲಗಾ ಹೈ ಪ್ಯಾರ್ ದಾಖಲಾಯಿತು. ಇದು ದಕ್ಷಿಣಾದಿ ಸಂಗೀತವನ್ನು ಆಧರಿಸಿದ ಮೊದಲ ಹಿಂದಿ ಸಿನಿಮಾ ಪ್ರೇಮಗೀತೆ ಎಂದು ಪತ್ರಿಕೆಗಳಲ್ಲಿ ಬಹಳ ಪ್ರಚಾರ ಪಡೆದಿತ್ತು. ಕೆಲ ವರ್ಷಗಳ ನಂತರ ಹಮ್ ತುಮ್ ಔರ್ ವೊ ಚಿತ್ರದ ಪ್ರಿಯೆ ಪ್ರಾಣೇಶ್ವರಿ ಎಂಬ ಪ್ರೇಮಗೀತೆಯನ್ನು ಭಜನ್ ಶೈಲಿಯಲ್ಲಿ ಸಂಯೋಜಿಸಿ ಅವರು ಇಂಥ್ದೇ ಪ್ರಯೋಗ ಮಾಡಿದ್ದರು. 1967ರಲ್ಲೇ ಬಂದ ಆಮ್ನೆ ಸಾಮ್ನೆ ಚಿತ್ರದಲ್ಲಿ ಕಭಿ ರಾತ್ ದಿನ್ ಹಮ್ ದೂರ್ ಥೆ ಎಂಬ ಚಂದದ ರಫಿ ಲತಾ ಡ್ಯುಯಟ್ ಇತ್ತು.  ಹಸೀನಾ ಮಾನ್ ಜಾಯೇಗೀ ಚಿತ್ರದ ಬೇಖುದೀ ಮೆಂ ಸನಮ್ ಮತ್ತು ಏಕ್ ಥಾ ಗುಲ್ ಔರ್ ಏಕ್ ಥಿ ಬುಲ್ ಬುಲ್ ಟ್ಯೂನನ್ನು ಸ್ವಲ್ಪ ಮಟ್ಟಿಗೆ ಹೋಲುವ ಉಪಾಸನಾ ಚಿತ್ರದ ಆವೊ ತುಮ್ಹೆ ಮೈ ಪ್ಯಾರ್ ಸಿಖಾದೂಂ  ಕೂಡ ಇವರು ಕೊಟ್ಟ  ಒಳ್ಳೆಯ ರಫಿ ಲತಾ ಹಾಡುಗಳು. ಗೀತ್ ಚಿತ್ರದ ಆಜಾ ತುಝ್ ಕೊ ಪುಕಾರೆ ಮೇರೆ ಗೀತ್, ಸಚ್ಚಾ ಝೂಟಾ ಚಿತ್ರದ ಯೂಂ ಹಿ ತುಮ್ ಮುಝ್ ಸೆ ಬಾತ್ ಕರ್‌ತೀ ಹೊ ಕೂಡ ಜನಪ್ರಿಯವಾಗಿದ್ದವು. ಆದರೆ ನಂತರ ಬಂದ ಜಂಜೀರ್ ಚಿತ್ರದ ದೀವಾನೆ ಹೈಂ ದೀವಾನೊಂ ಕೊ, ಮರ್ಯಾದಾ ಚಿತ್ರದ ಢೋಲ್ ಸಜನಾ ಢೋಲ್ ಜಾನಿ ಮುಂತಾದ ಹಾಡುಗಳು ನನಗೇಕೋ ಸಪ್ಪೆ ಎನಿಸಿದವು.

5. ನೌಷಾದ್ - ರಾಮ್ ಔರ್ ಶ್ಯಾಮ್ ಚಿತ್ರದ ಮೈ ಹೂಂ ಸಾಕಿ.



1967ರಲ್ಲೇ ನೌಷಾದ್ ಅವರಿಗೆ ರಾಮ್ ಔರ್ ಶ್ಯಾಮ್ ಚಿತ್ರಕ್ಕಾಗಿ ಲತಾ ರಫಿ ಧ್ವನಿಯ  ಮೈ ಹೂಂ ಸಾಕಿ ತೂ ಹೈ ಶರಾಬಿ ಶರಾಬಿ ಹಾಡನ್ನು ಸಂಯೋಜಿಸುವ ಯೋಗ ಒದಗಿ ಬಂತು. ಇದರಲ್ಲಿ ಶರಾಬಿ, ಸಾಕಿ ಅಂದರೆ ಬಾರ್ ಗರ್ಲ್ ಎಂದೆಲ್ಲ ಇದ್ದರೂ ಇದು ಚಹಾದ ಮತ್ತಿನಲ್ಲಿ ಹಾಡುವ ಹಾಡು! ಕೆಲವೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದ ನೌಷಾದ್ ಅವರಿಗೆ  ಆ ಮೇಲೆ ಆರಂಗೇಟ್ರಮ್ ಚಿತ್ರದ ರೀಮೇಕ್ ಆದ 1977ರ ಆಯೀನಾದಲ್ಲಿ  ಜಾನೆ ಕ್ಯಾ ಹೋ ಜಾಯೆ ಎಂಬ ಒಂದು ಲತಾ ರಫಿ ಹಾಡು ಸಂಯೋಜಿಸಲಷ್ಟೇ ಸಾಧ್ಯವಾಯಿತು.

6. ಚಿತ್ರಗುಪ್ತ - ವಾಸನಾ ಚಿತ್ರದ ಯೆ ಪರ್ಬತೋಂ ಕೆ ದಾಯರೆ



ಮಾಧುರ್ಯಕ್ಕೆ ಇನ್ನೊಂದು ಹೆಸರೇ ಚಿತ್ರಗುಪ್ತ.  ಇದು ಅವರಿಗೆ ಗುರು ಎಸ್.ಎನ್. ತ್ರಿಪಾಠಿ ಅವರಿಂದ ಬಂದ ಬಳುವಳಿ. ಆರಂಭದಿಂದಲೂ ಸಾಧ್ಯವಾದಷ್ಟು ಸಂಖ್ಯೆಯ ಲತಾ ರಫಿ ಯುಗಳಗೀತೆಗಳು ತಮ್ಮ ಚಿತ್ರಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದವರು ಅವರು. ಲತಾ ರಫಿ  ರಾಜಿಯ ನಂತರದ ಪ್ರಥಮ  ಯುಗಳ ಗೀತೆಯಾಗಿ 1967ರ ವಾಸನಾ ಚಿತ್ರಕ್ಕಾಗಿ  ಯೆ ಪರ್ಬತೋಂ ಕೆ ದಾಯರೆ ಎಂಬ ಮಾಧುರ್ಯವೇ ಮೈವೆತ್ತಂತಿರುವ  ಹಾಡನ್ನು ಸೃಷ್ಟಿಸುವ ಯೋಗ ಅವರಿಗೆ ಒದಗಿತು.  ಅದೇ ವರ್ಷ ಬಂದ  ಔಲಾದ್ ಚಿತ್ರದಲ್ಲಿ ಅರಮಾಂ  ಥಾ ಹಮೆ ಜಿನ್ ಕಾ ಮತ್ತು ನಾಜುಕ್ ನಾಜುಕ್ ಬದನ್ ಮೊರಾ ಹಾಗೂ ಪ್ಯಾರ್ ಕಾ ಸಪ್ನಾ ಚಿತ್ರದಲ್ಲಿ ಏ ಮೇರಿ ಜಿಂದಗಿ ತೂ ನಹೀಂ ಅಜನಬಿ ಎಂಬ ರಫಿ ಲತಾ ಹಾಡುಗಳಿದ್ದವು.

7. ರವಿ - ದೋ ಕಲಿಯಾಂ ಚಿತ್ರದ ತುಮ್ಹಾರಿ ನಜರ್ ಕ್ಯೂಂ ಖಫಾ ಹೋಗಯಿ



ರವಿ ಅವರ ಮನ ಮೆಚ್ಚಿದ ಗಾಯಕ ರಫಿ ಆಗಿದ್ದರೂ ಬಿ.ಆರ್. ಚೋಪ್ಡಾ ಕ್ಯಾಂಪಿನಲ್ಲಿದ್ದುದರಿಂದಲೋ ಏನೋ ಅವರ ಮತ್ತು ಲತಾ ನಡುವೆ  ಅಷ್ಟೊಂದು ಉತ್ತಮ ವ್ಯಾವಹಾರಿಕ ಸಂಬಂಧ ಇರಲಿಲ್ಲ ಅನಿಸುತ್ತದೆ.  ಹೀಗಾಗಿ ರವಿ ಸಂಗೀತದಲ್ಲಿ ನಮಗೆ ಹೆಚ್ಚು ಸಿಗುವುದು ರಪಿ ಆಶಾ ಹಾಡುಗಳೇ.  ಹೀಗಿದ್ದರೂ ಲತಾ ರಫಿ ರಾಜಿಯ ಲಾಭ ಪಡೆದ ರವಿ  1968ರ ದೋ ಕಲಿಯಾಂ  ಚಿತ್ರಕ್ಕಾಗಿ ತುಮ್ಹಾರೀ ನಜರ್ ಕ್ಯೂಂ ಖಫಾ ಹೋಗಯಿ ಎಂಬ ಲವಲವಿಕೆ ತುಂಬಿದ ಸುಂದರ ಹಾಡನ್ನು ಸೃಷ್ಟಿಸಿದರು. ಆ ಚಿತ್ರದಲ್ಲಿ ಯೇ ಸಮಾ ಯೆ ರುತ್ ಯೆ ನಜಾರೆ ಎಂಬ ಅವರಿಬ್ಬರ ಯುಗಳ ಗೀತೆಯೂ ಇತ್ತು. ಇದು ತಮಿಳಿನ ಕುಳಂದೆಯುಂ ದೈವಂ ಚಿತ್ರದ ರೀಮೇಕ್.  ಆ ಮೇಲೆ ಮಕ್ಕಳ ಭಾಗ್ಯ ಹೆಸರಲ್ಲಿ ಕನ್ನಡಕ್ಕೆ ಬಂತು. 1975ರ ಎಕ್ ಮಹಲ್ ಹೊ ಸಪನೋಂ ಕಾ ಚಿತ್ರದ ಟೈಟಲ್ ಹಾಡು ಬಿಟ್ಟರೆ ರವಿ ನಿರ್ದೇಶನದಲ್ಲಿ ಲತಾ ರಫಿ ಜೊತೆಯಾಗಿ ಹಾಡಿದ ಯಾವ ಹಾಡೂ ನನಗೆ ನೆನಪಾಗುತ್ತಿಲ್ಲ. ವಿರಸಪೂರ್ವದಲ್ಲೂ ಗೃಹಸ್ಥಿ ಚಿತ್ರದ ಜಾನೆ ತೇರಿ ನಜರೋಂನೆ  ಬಿಟ್ಟರೆ ಅವರಿಬ್ಬರು ರವಿಗಾಗಿ ಹಾಡಿದ ಬೇರೆ ಯುಗಳ ಗೀತೆ ಇದ್ದಂತಿಲ್ಲ!

8. ಆರ್.ಡಿ. ಬರ್ಮನ್ - ಪ್ಯಾರ್ ಕಾ ಮೌಸಮ್ ಚಿತ್ರದ ನಿಸುಲ್ತಾನಾ ರೇ

ಮೇಲ್ನೋಟಕ್ಕೆ ಆರ್.ಡಿ. ಬರ್ಮನ್ ಅವರು ಕಿಶೋರ್ ಪಕ್ಷಪಾತಿ ಎಂದೆನ್ನಿಸಿದರೂ ಸಾಕಷ್ಟು ಸಂಖ್ಯೆಯಲ್ಲಿ ಅವರ ಲತಾ ರಫಿ ಯುಗಳ ಗೀತೆಗಳಿವೆ. ಅವರ ಮೊದಲ ಚಿತ್ರ ಛೋಟೇ ನವಾಬ್‌ನಲ್ಲಿ ಮತ್‌ವಾಲಿ ಆಂಖೊಂ ವಾಲೆ ಸೇರಿದಂತೆ ಮೂರು ಹಾಡುಗಳನ್ನು ಲತಾ ರಫಿ ಜೊತೆಯಾಗಿ ಹಾಡಿದ್ದರು. ಅವರಿಬ್ಬರು ಮತ್ತೆ ಜೊತೆಯಾಗಿ ಹಾಡತೊಡಗಿದ ಮೇಲೆ 1969ರ ಪ್ಯಾರ್ ಕಾ ಮೌಸಮ್ ಚಿತ್ರದಲ್ಲಿ ನಿಸುಲ್ತಾನಾ ರೇ ಎಂಬ ವೈಶಿಷ್ಟ್ಯಪೂರ್ಣವಾದ ಯುಗಳ ಗೀತೆಯನ್ನು ಆರ್.ಡಿ ಬರ್ಮನ್ ಅವರಿಬ್ಬರಿಗಾಗಿ ಸೃಷ್ಟಿಸಿದರು.  ಆ ಮೇಲೆ ಕಾರವಾಂ ಚಿತ್ರದ ಕಿತ್‌ನಾ ಪ್ಯಾರಾ ವಾದಾ, ದ ಟ್ರೇನ್ ಚಿತ್ರದ ತುಝ್ ಸೆ ಭಲಾ ಯೆ ಕಾಜಲ್ ತೇರಾ, ವಾರಿಸ್ ಚಿತ್ರದ ಕಭಿ ಕಭಿ ಐಸಾ ಭೀ ತೊ,  ರಾತೊಂ ಕಾ ರಾಜಾ ಚಿತ್ರದ ಮೊಹಬ್ಬತ್ ಸೆ ತುಮ್ಹೆ ದೆಖಾ ಮುಂತಾದ ರಫಿ ಲತಾ ಹಾಡುಗಳು ಅವರ ನಿರ್ದೇಶನದಲ್ಲಿ ಬಂದವು. ಆರಾಧನೋತ್ತರ ಕಾಲದಲ್ಲೂ ರಾಜೇಶ್ ಖನ್ನನ ಹಮ್‌ಶಕಲ್ ಚಿತ್ರಕ್ಕಾಗಿ ಕಾಹೆ ಕೊ ಬುಲಾಯಾ ಎಂಬ ಹಾಡನ್ನು ಅವರ ಸಂಗೀತದಲ್ಲಿ ಲತಾ ರಫಿ ಹಾಡಿದರು.

ಪ್ಯಾರ್ ಕಾ ಮೌಸಮ್ ಹೆಸರಿನ ಕುರಿತಾದ ಸ್ವಾರಸ್ಯಕರ ಮಾಹಿತಿ ಒಂದಿದೆ.  ಶಶಿ ಕಪೂರ್ ಮತ್ತು ತನುಜಾ ಮತ್ತಿತರರ ತಾರಾಗಣ ಹಾಗೂ ಶಂಕರ್ ಜೈಕಿಶನ್ ಸಂಗೀತದೊಂದಿಗೆ ಒಂದು ಚಿತ್ರ ತಯಾರಿಸಬೇಕೆಂದು ಅಮೀನ್ ಸಯಾನಿ ಅವರಿಗೆ ಉಮೇದು ಬಂದು ಈ ಟೈಟಲನ್ನು ರಿಜಿಸ್ಟರ್ ಮಾಡಿಸಿದ್ದರಂತೆ.  ಆದರೆ  ತೀಸ್ರಿ ಕಸಂ ಚಿತ್ರ ತಯಾರಿಸಲು ಹೋಗಿ ಕವಿ ಶೈಲೇಂದ್ರ ಸೋತು ಸುಣ್ಣವಾದುದನ್ನು ನೋಡಿದ ಮೇಲೆ ಚಿತ್ರ ನಿರ್ಮಾಣ ತನ್ನಂಥವರಿಗೆ ಹೇಳಿಸಿದ್ದಲ್ಲ ಎಂಬ ಜ್ಞಾನೋದಯವಾಗಿ ಪ್ಯಾರ್ ಕಾ ಮೌಸಮ್ ಟೈಟಲನ್ನು ನಿರ್ಮಾಪಕ ನಾಸಿರ್ ಹುಸೇನ್ ಅವರಿಗೆ ಬಿಟ್ಟು ಕೊಟ್ಟರಂತೆ.

9.  ಮದನ್ ಮೋಹನ್ -  ಹೀರ್ ರಾಂಝಾ ಚಿತ್ರದ ಮೇರಿ ದುನಿಯಾ ಮೆಂ ತುಮ್ ಆಯೆ



ಗಜಲ್ ಕಿಂಗ್ ಎಂದೇ ಹೆಸರಾದ ಮದನ್ ಮೋಹನ್ ಲತಾ ಮಂಗೇಶ್ಕರ್ ಅವರಿಗಾಗಿ ಆ ಶೈಲಿಯ ಗೀತೆಗಳನ್ನು ಹೆಚ್ಚು ಸಂಯೋಜಿಸುತ್ತಿದ್ದುದರಿಂದ ಅವರ ಲತಾ ರಫಿ ಯುಗಳ ಗೀತೆಗಳು ಹೆಚ್ಚಿಲ್ಲ. ಫಕ್ಕನೆ ಮನಸ್ಸಿಗೆ ಬರುವುದು 1957ರ ಗೇಟ್ ವೇ ಆಫ್ ಇಂಡಿಯಾದ ದೊ ಘಡಿ ವೊ ಜೊ ಪಾಸ್ ಆ ಬೈಠೆ ಮಾತ್ರ. ಕೆಲವು ವರ್ಷಗಳ ನಂತರ 1963ರಲ್ಲಿ  ಅಕೇಲಿ ಮತ್ ಜೈಯೊ ಚಿತ್ರದ ಯೇ ಹವಾ ಯೆ ಮಸ್ತಾನಾ ಮೌಸಮ್ ಗೀತೆಯನ್ನು ಇವರಿಬ್ಬರು ಹಾಡಿದ್ದರು.   ಸಂಧಾನದ ನಂತರ 1970ರಲ್ಲಷ್ಟೇ ಹೀರ್ ರಾಂಝಾ ಚಿತ್ರದ ಮೇರಿ ದುನಿಯಾ ಮೆಂ ತುಮ್ ಆಯೆ ಎಂಬ ಲತಾ ರಫಿ ಹಾಡು ಬಂತು. ಪಿಸುದನಿಯಲ್ಲಿ ರಫಿ ಹಾಡುವಾಗ ಉಸಿರಿನ ಸದ್ದು ಒಂದಿನಿತೂ ಕೇಳಿಸದಿರುವುದು ಅವರ ಮೈಕ್ ಸೆನ್ಸ್, ಉಸಿರಿನ ನಿಯಂತ್ರಣ ಇತ್ಯಾದಿ ಯಾವ ಮಟ್ಟದಲ್ಲಿ ಇತ್ತು ಎನ್ನುವುದಕ್ಕೆ ಸಾಕ್ಷಿ. 1976ರ ಲೈಲಾ ಮಜ್ನೂ ಚಿತ್ರದಲ್ಲಿ ಅಬ್ ಅಗರ್ ಹಮ್ ಸೆ ಖುದಾಯೀ ಭೀ ಮತ್ತು ಇಸ್ ರೇಶ್ಮಿ ಪಾಜೇಬ್ ಕಿ ಎಂಬ ಲತಾ ರಫಿ ಡ್ಯುಯೆಟುಗಳಿದ್ದವು. ಆ ಚಿತ್ರದಲ್ಲಿ ಮದನ್ ಮೋಹನ್ ಋಷಿ ಕಪೂರ್ ಅವರಿಗೆ ರಫಿಯ ಧ್ವನಿಯನ್ನು ಬಳಸಿರುವುದು ಜನರಿಗೆ ಇಷ್ಟವಾಗಿ ರಫಿ ಮತ್ತೆ ಹಿನ್ನೆಲೆ ಗಾಯನದಲ್ಲಿ ಮುಂಚೂಣಿಗೆ ಬರಲು ಕಾರಣವಾಯಿತು.  ಆದರೆ ದುರಾದೃಷ್ಟವಶಾತ್ ಈ ಚಿತ್ರ ಪೂರ್ತಿಯಾಗುವ ಮುನ್ನವೇ ಮದನ್ ಮೋಹನ್ ನಿಧನ ಹೊಂದಿದ್ದರಿಂದ ಆ ಚಿತ್ರದ ಸಂಗೀತ ನಿರ್ದೇಶನದ ಹೊಣೆಯನ್ನು ಇನ್ನೋರ್ವ ಪ್ರತಿಭಾವಂತ ಜಯದೇವ್ ಅವರು ನಿಭಾಯಿಸಬೇಕಾಯಿತು.

10. ರೇಡಿಯೊ ಸಿಲೋನಿನಲ್ಲಿ ಡ್ಯೂಯಟ್ ರೂಪದಲ್ಲಿ ಲವ್ ಇನ್ ಟೋಕಿಯೊ ಚಿತ್ರದ ಓ ಮೆರೆ ಶಾಹೆಖುಬಾ

ಲತಾ ರಫಿ ಜೊತೆಯಾಗಿ ಹಾಡುವುದನ್ನು ಆಲಿಸಲು ಕಾತರಿಸುತ್ತಿದ್ದ ಕೇಳುಗರ ಕೋರಿಕೆಯಂತೆ  ಅವರಿಬ್ಬರು ಬೇರೆ ಬೇರೆಯಾಗಿ ಹಾಡಿದ ಲವ್ ಇನ್ ಟೋಕಿಯೊ ಚಿತ್ರದ ಓ ಮೇರೆ ಶಾಹೆಖುಬಾ ಹಾಡನ್ನು ಯುಗಳ ಗೀತೆಯ ರೂಪದಲ್ಲಿ ರೇಡಿಯೊ ಸಿಲೋನ್ ತನ್ನ ಆಪ್ ಹೀ ಕೆ ಗೀತ್ ಕಾರ್ಯಕ್ರಮದಲ್ಲಿ  ಪ್ರಸಾರ ಮಾಡುತಿತ್ತು. 

ಯಾದಿಯಿಂದ ಹಾಡುಗಳನ್ನು ಆಯ್ಕೆ ಮಾಡಿ ಆಲಿಸಿ.








No comments:

Post a Comment

Your valuable comments/suggestions are welcome