Monday 23 May 2022

ಬದಲಾಗುವ ಸಿನಿಮಾಗಳು ಮತ್ತು ಹಾಡುಗಳು

 


ನವಿಲುಗರಿಯೊಂದನ್ನು ಪುಸ್ತಕದ ಎಡೆಯಲ್ಲಿಟ್ಟರೆ ಸ್ವಲ್ಪ ಸಮಯದ ನಂತರ ಅದು ಮರಿ ಹಾಕುತ್ತದೆ ಎಂಬ ನಂಬಿಕೆ ನಮ್ಮ ಶಾಲಾ ದಿನಗಳಲ್ಲಿತ್ತು. ಅದೇ ರೀತಿ ಸಿನಿಮಾಗಳನ್ನು ಕೆಲ ಕಾಲ ಹಾಗೆಯೇ ಇಟ್ಟರೆ ಅವುಗಳಲ್ಲೂ ಬದಲಾವಣೆ ಆಗುತ್ತದೆಯೇ?

ಈ ಅನುಮಾನ ಮೂಡಲು ಕಾರಣ ಇದೆ. 1973ರಲ್ಲಿ ದೂರವಾಣಿ ಇಲಾಖೆಯ ಎರಡು ತಿಂಗಳ ತರಬೇತಿಯನ್ನು ಬೆಂಗಳೂರಲ್ಲಿ ಮುಗಿಸಿ ಮಂಗಳೂರಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದೆ. ಬೆಂಗಳೂರಲ್ಲಿದ್ದಾಗಲೇ ರಾಜಕುಮಾರ್, ಭಾರತಿ, ರಾಜೇಶ್, ಕಲ್ಪನಾ ಅಭಿನಯದ ಬಿಡುಗಡೆ ಮಲ್ಟಿಸ್ಟಾರರ್ ವರ್ಣಚಿತ್ರದ ಹೋರ್ಡಿಂಗ್‌ಗಳು ರಾರಾಜಿಸತೊಡಗಿದ್ದವು. ತರಬೇತಿಯಿಂದ ನಮ್ಮ ಬಿಡುಗಡೆ ಆಗುವಾಗ ಬಿಡುಗಡೆಯೂ ಬಿಡುಗಡೆ ಆಗುತ್ತದೆ ಎಂದು ನಾವು ಮಾತಾಡಿಕೊಳ್ಳುತ್ತಿದ್ದೆವು. ಇಷ್ಟೇ ಅಲ್ಲದೆ ನನ್ನ ಸ್ವಂತ ಗಳಿಕೆಯಿಂದ ನೋಡಿದ ಮೊದಲ ಕನ್ನಡ ಚಿತ್ರ ಎಂಬ ನೆಲೆಯಲ್ಲಿ ಕೂಡ 1973 ಎಪ್ರಿಲ್ 22ರಂದು ಅಮೃತ್ ಟಾಕೀಸಿನಲ್ಲಿ ಈ ಸಿನಿಮಾ ನೋಡಿದ್ದು ನನ್ನ ನೆನಪಿನಲ್ಲಿ ಶಾಶ್ವತವಾಗಿ ದಾಖಲಾಗಿದೆ.

ಬಿಡುಗಡೆ ಚಿತ್ರದ ನಾಯಕನು ಗಲ್ಲು ಶಿಕ್ಷೆ ಇರಲೇ ಬಾರದೆಂದು ಹೋರಾಡುವ ಮನೋಭಾವದವನಾಗಿದ್ದು ಸುಳ್ಳು ಸಾಕ್ಷಿಗಳು ನಿರಪರಾಧಿಗಳನ್ನು ಅಪರಾಧಿಗಳೆಂದು ಬಿಂಬಿಸಲು ಸಾಧ್ಯ ಎಂದು ನಿರೂಪಿಸಲು ತನ್ನ ಮಿತ್ರನೊಡಗೂಡಿ ತಾನೇ ಅಪರಾಧ ಮಾಡಿದಂತೆ ಒಂದು ನಾಟಕ ಹೂಡುತ್ತಾನೆ. ಸಂಯೋಗವಶಾತ್ ಆತನ ತಂದೆಯೇ ತಾನು ಮಾಡದ ಕೊಲೆಯೊಂದರ ಆರೋಪ ಹೊತ್ತು ಗಲ್ಲಿಗೇರುವ ಪ್ರಸಂಗ ಬರುತ್ತದೆ. ನಾಯಕ ಬಹಳ ಕಷ್ಟ ಪಟ್ಟು ನಿಜವಾದ ಕೊಲೆಗಾರನ ಪತ್ತೆ ಮಾಡಿ ಪುರಾವೆ ತರುವಷ್ಟರಲ್ಲಿ ತಂದೆಯನ್ನು ಗಲ್ಲಿಗೇರಿಸಿ ಆಗಿರುತ್ತದೆ.

ಸುಮಾರು 50 ವರ್ಷಗಳ ಅಂತರದ ನಂತರ ನಿನ್ನೆ ಅಂತರ್ಜಾಲದಲ್ಲಿ ಆ ಸಿನಿಮಾ ಮತ್ತೆ ನೋಡಿದೆ. ಈಗ ಅದರ ಅಂತ್ಯ ಬದಲಾಗಿದ್ದು ನಾಯಕ ಪುರಾವೆ ತರುವಾಗ ಗಲ್ಲಿಗೇರಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿರುತ್ತದಷ್ಟೇ. ಹಾಗಾಗಿ ತಂದೆ ಉಳಿಯುತ್ತಾನೆ.

ಚಿತ್ರದ ಅಂತ್ಯದಲ್ಲಿ ನಾಯಕನ ತಂದೆಯನ್ನು ಗಲ್ಲಿಗೇರಿಸಿದ್ದು ಸರಿಯೇ ಎಂಬ ಚರ್ಚೆ ಅಂದಿನ ಪತ್ರಿಕೆಗಳಲ್ಲಿ ನಡೆದಿತ್ತು. ಇದರ ಪರಿಣಾಮವಾಗಿ ಆ ಮೇಲೆ ಈ ರೀತಿ ಬದಲಾವಣೆ ಮಾಡಿದರೋ ಏನೋ.

ಅಂದು ಥಿಯೇಟರಲ್ಲಿ ಆ ಸಿನಿಮಾ ನೋಡಿದಾಗ ಅದು ನಿರೀಕ್ಷೆಯ ಮಟ್ಟಕ್ಕಿರದೆ ನಿರಾಸೆಯಾಗಿತ್ತು. ನನ್ನ ಪುಟ್ಟ ಸಂಸಾರ ಎಂಬ ಹಾಡೊಂದು ಬಿಟ್ಟರೆ ಎಂ. ರಂಗರಾವ್ ಅವರ ಸಂಗೀತವೂ ಅಷ್ಟಕ್ಕಷ್ಟೇ ಎಂದನ್ನಿಸಿತ್ತು. ಈಗ ಇಷ್ಟೊಂದು ವರ್ಷಗಳ ನಂತರ ಅದನ್ನು ಅಂತರ್ಜಾಲದಲ್ಲಿ ನೋಡಿದಾಗ ಆ ಅಭಿಪ್ರಾಯ ಹೆಚ್ಚೇನೂ ಬದಲಾಗದೆ ಚಿತ್ರಕಥೆ ಜಾಳುಜಾಳಾಗಿರುವುದು, ಕಥೆಗೆ ಸಂಬಂಧವಿಲ್ಲದಿದ್ದರೂ ನರಸಿಂಹರಾಜು ಮತ್ತು ಬಾಲಣ್ಣನ ಪಾತ್ರಗಳನ್ನು ತುರುಕಿರುವುದು ಮುಂತಾದ ಅಂಶಗಳೂ ಗಮನಕ್ಕೆ ಬಂದವು. ಆದರೆ ದಾರ್ಜಿಲಿಂಗ್‌ನ ಪ್ರಕೃತಿ ಸಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಪರಿ ಮೆಚ್ಚಿಕೆಯಾಯಿತು. ಅಣ್ಣಯ್ಯ ಅವರಿಗೆ ಈ ಚಿತ್ರಕ್ಕಾಗಿ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯೂ ದೊರಕಿತ್ತಂತೆ. ರಂಗರಾಯರ ಹಿನ್ನೆಲೆ ಸಂಗೀತವೂ ಮಾಮೂಲಿ ಜಾಡಿಗೆ ಹೊರತಾಗಿರುವುದು ಗಮನ ಸೆಳೆಯಿತು.

1946ರ The Man Who Dared ಮತ್ತು 1956ರ Beyond a Reasonable Doubt ಎಂಬ ಎರಡು ಅಮೇರಿಕನ್ ಸಿನಿಮಾಗಳು ಈ ಚಿತ್ರದ ಕಥೆಗೆ ಪ್ರೇರಕವಂತೆ. ತೆಲುಗಿನಲ್ಲಿ ಅಭಿಲಾಷಾ ಮತ್ತು ತಮಿಳಿನಲ್ಲಿ ಸಟ್ಟತ್ತೈ ತಿರುತುಂಗಳ್ ಇದೇ ಕಥಾಸೂತ್ರ ಹೊಂದಿದ್ದವು ಅನ್ನಲಾಗಿದೆ.
 
ಇದೇ ರೀತಿ ಚಿತ್ರ ಬಿಡುಗಡೆ ಆದ ಮೇಲೆ ಬದಲಾವಣೆ ಆದ ಅನೇಕ ಉದಾಹರಣೆಗಳಿವೆ. ಯಾದೋಂ ಕೀ ಬಾರಾತ್ ಚಿತ್ರ ಥಿಯೇಟರುಗಳಲ್ಲಿ ಅನೇಕ ವಾರ ಓಡಿದ ಮೇಲೆ ಅದಕ್ಕೆ ಮೇರಿ ಸೋನಿ ಮೇರಿ ತಮನ್ನಾ ಹಾಡನ್ನು ಸೇರ್ಪಡೆಗೊಳಿಸಲಾಗಿತ್ತು.  ಶೋಲೆ ಚಿತ್ರದ ಮೂಲ ಕ್ಲೈಮಾಕ್ಸ್‌ನಲ್ಲಿ ಕೈಗಳನ್ನು ಕಳೆದುಕೊಂಡ ಠಾಕುರ್ ಗಬ್ಬರ್‌ಸಿಂಗನನ್ನು ಕಾಲಿನಿಂದ ತುಳಿದು ಸಾಯಿಸುವ ದೃಶ್ಯ ಇತ್ತು.  ಆದರೆ ಇದು ಅತಿಯಾದ ಕ್ರೌರ್ಯ ಆಗುತ್ತದೆ ಎಂದು ಸೆನ್ಸಾರ್ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೊನೆಯಲ್ಲಿ ಪೋಲಿಸರು ಬಂದು ಗಬ್ಬರ್‌ಸಿಂಗನನ್ನು ಕೊಂಡೊಯ್ದ  ಕ್ಲೈಮಾಕ್ಸನ್ನು ನಾವು ಥಿಯೇಟರಿನಲ್ಲಿ ನೋಡಿದೆವು.  ರಾಜ್‌ಕಪೂರನ ಸಂಗಂ ಮತ್ತು ಮೇರಾ ನಾಮ್ ಜೋಕರ್ ಮೊದಲ ಸಲ ಥಿಯೇಟರುಗಳಲ್ಲಿ ಬಿಡುಗಡೆ ಆಗಿದ್ದಾಗ 4 ತಾಸುಗಳಿಗೂ ಹೆಚ್ಚಿನ ಕಾಲಾವಧಿಯವಾಗಿದ್ದು ಎರಡೆರಡು ಇಂಟರ್ವಲ್ ಹೊಂದಿದ್ದವು.  ಅವು ಥಿಯೇಟರುಗಳಲ್ಲಿ ಮತ್ತೆ ಮರುಬಿಡುಗಡೆಯಾದಾಗ ಅನೇಕ ದೃಶ್ಯಗಳನ್ನು ಕತ್ತರಿಸುವ ಮೂಲಕ ಕಮ್ಮಿ ಅವಧಿಯವಾಗಿದ್ದು  ಒಂದೇ ಇಂಟರ್ವಲ್ ಹೊಂದಿದ್ದವು. ಆಂಖೇಂ,  ಪಿಂಕ್, ಬಾಜೀಗರ್, ಪೀಕೇ, ರೋಕೀ, ಟೈಟಾನಿಕ್ ಮುಂತಾದ ಚಿತ್ರಗಳು ಕೂಡ ಮೂಲದಲ್ಲಿ ಬೇರೆಯೇ ಕ್ಲೈಮಾಕ್ಸ್ ಹೊಂದಿದ್ದವಂತೆ
 
ಸಿನಿಮಾ ಹಾಡುಗಳಲ್ಲಿ ಗ್ರಾಮೊಫೋನ್ ರೆಕಾರ್ಡಿನಲ್ಲಿರುವುದಕ್ಕಿಂತ ಹೆಚ್ಚಿನ ಚರಣಗಳು ಇರುವುದು ಸಾಮಾನ್ಯ. ಆದರೆ ಧ್ವನಿಮುದ್ರಣಗೊಂಡು ಗ್ರಾಮೊಫೋನ್ ರೆಕಾರ್ಡ್ ಬಿಡುಗಡೆ ಆಗಿ ಜನಪ್ರಿಯವಾದ ಮುಕೇಶ್ ಹಾಡೊಂದು ಸೆನ್ಸಾರ್ ಆಕ್ಷೇಪಣೆಗೊಳಗಾಗಿ ಬದಲಾಗಬೇಕಾಗಿ ಬಂದ ಸ್ವಾರಸ್ಯಕರ ಘಟನೆಯೂ ನಡೆದಿದೆ. ರಾಜ್‌ಕಪೂರ್ ನಟಿಸಿದ ಛಲಿಯಾ ಚಿತ್ರದ ಛಲಿಯಾ ಮೇರಾ ನಾಮ್ ಛಲ್‌ನಾ ಮೇರಾ ಕಾಮ್ ಎಂಬ ಹಾಡನ್ನು ರೇಡಿಯೋದಲ್ಲಿ ಕೇಳಿದ್ದು ಅನೇಕರಿಗೆ ನೆನಪಿರಬಹುದು. ಆದರೆ ಈಗ ಅಂತರ್ಜಾಲದಲ್ಲಿ ಲಭ್ಯವಿರುವ ಛಲಿಯಾ ಚಿತ್ರದಲ್ಲಿ ಕೇಳಲು ಸಿಗುವ ಆ ಹಾಡಿನಲ್ಲಿ  ಛಲ್‌ನಾ ಮೇರಾ ಕಾಮ್ ಭಾಗ ಇಲ್ಲ.  ಅದರ ಬದಲು ಛಲಿಯಾ ಮೇರಾ ನಾಮ್  ಎಂದು ಎರಡು ಸಲ ಇದೆ. 
 
ಈ ಬಗ್ಗೆ ಅಮೀನ್ ಸಯಾನಿ ಹೇಳಿದ್ದನ್ನು ಇಲ್ಲಿ ಕೇಳಿ.



ಹೇಗೂ ಪುನಃ ರೆಕಾರ್ಡ್ ಮಾಡಲಿಕ್ಕಿದೆಯಲ್ಲ ಎಂದು  ಈ ಹಾಡನ್ನು ಬರೆದ ಕಮರ್ ಜಲಾಲಾಬಾದಿ ಎಂಬ ಕಾವ್ಯನಾಮದ  ಓಂ ಪ್ರಕಾಶ್ ಭಂಡಾರಿ ಅವರು ಛಲನಾ ಮೇರಾ ಕಾಮ್ ಎಂಬುದನ್ನು ಕಿತ್ತು ಹಾಕುವುದರ ಜೊತೆಗೆ ಹಮ್ ತೊ ಖಾಲಿ ಮಾಲ್ ಕೆ ರಸಿಯಾ ಇದ್ದುದನ್ನು ಹಮ್ ತೊ ಖಾಲಿ ಬಾತ್ ಕೆ ರಸಿಯಾ ಎಂದು, ಜಹಾಂ ಭೀ ದೆಖಾ ದಾಮ್ ವಹೀಂ ನಿಕಾಲಾ ಕಾಮ್ ಇದ್ದುದನ್ನು ಜಹಾಂ ಭೀ ದೇಖಾ ಕಾಮ್ ಕರ್ತಾ ವಹೀಂ ಸಲಾಮ್ ಎಂದು, ಮೈ ಹೂಂ ಗಲಿಯೊಂ ಕಾ ಶಹಜಾದಾ ಜೋ ಚಾಹೂಂ ವೊ ಲೇಲೂಂ ಇದ್ದುದನ್ನು ಮೈ ಹೂಂ ಗರೀಬೋಂ ಕಾ ಶಹಜಾದಾ ಜೋ ಮಾಂಗೋ ವೊ ದೇ ದೂಂ ಎಂದು, ಮೈ ಕೈಂಚಿಸೆ(ಕತ್ತರಿ) ಖೇಲೂಂ ಇದ್ದುದನ್ನು ಮೈ ಅಶ್ಕೋಂಸೆ(ಕಣ್ಣೀರು) ಖೇಲೂಂ ಎಂದು ಬದಲಾಯಿಸಿದರು. 

ಗ್ರಾಮೊಫೋನ್ ವರ್ಶನ್ ಮತ್ತು ಸಿನಿಮಾ ವರ್ಶನ್ ಎರಡನ್ನೂ ಇಲ್ಲಿ ಆಲಿಸಬಹುದು.  




ನಾನು ಉಜಿರೆ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗ ಪಕ್ಕದ ಬೆಳ್ತಂಗಡಿಯಲ್ಲಿ ನಡೆದ ಜೋನಲ್ ಸ್ಪೋರ್ಟ್ಸ್ ನೋಡಲು ನಮಗೆ ಅನುಮತಿ ಕೊಟ್ಟಿದ್ದರು. ಅಲ್ಲಿ ಸೋಡಾ ನಾರಾಯಣರ  ಭಾರತ್ ಸೌಂಡ್ ಸಿಸ್ಟಂ ಅಳವಡಿಸಲಾಗಿದ್ದು ಅನೌಂಸ್‌ಮೆಂಟುಗಳು ಇಲ್ಲದ ಸಮಯದಲ್ಲಿ  ಛಲಿಯಾ ಮೇರಾ ನಾಮ್ ಹಾಡನ್ನು ಪದೇ ಪದೇ ಹಾಕುತ್ತಿದ್ದರು. ಹಾಡಿನ ಮಧ್ಯದಲ್ಲಿ ಸಣ್ಣ pause ಆದ ಮೇಲೆ ಬರುವ ಠಕ್ ಠಕ್ ಎಂಬ ಸದ್ದಿನ ಕಾರಣದಿಂದ  ಈ ಹಾಡು ಮತ್ತು ಬೆಳ್ತಂಗಡಿಯ ಜೋನಲ್ ಸ್ಪೋರ್ಟ್ಸ್ ಒಂದರೊದನೆ ಒಂದು ಸೇರಿಕೊಂಡು  ನನ್ನ ಮನದಲ್ಲಿ ಶಾಶ್ವತವಾಗಿ ರೆಕಾರ್ಡ್ ಆಗಿಬಿಟ್ಟಿವೆ.  ಮಕ್ಕಳ ರಾಜ್ಯ ಪ್ರೇಮದ ರಾಜ್ಯ ಸೌಖ್ಯವು ತುಂಬಿದ ರಾಮ ರಾಜ್ಯ ಕೂಡ ಅಲ್ಲಿ ಪದೇ ಪದೇ ಕೇಳಿಸುತ್ತಿದ್ದ ಹಾಡು.


No comments:

Post a Comment

Your valuable comments/suggestions are welcome