ಲತಾ ಮಂಗೇಶ್ಕರ್ ಹುಟ್ಟಿದ್ದು 28 ಸಪ್ಟಂಬರ್ 1929ರಂದು, ಇಂದೋರ್‌ನಲ್ಲಿದ್ದ ಅಜ್ಜಿ ಮನೆಯಲ್ಲಿ. ತಂದೆ ಪಂಡಿತ್ ದೀನಾನಾಥ್ ಮಂಗೇಶ್ಕರ್, ತಾಯಿ ಶೇವಂತಿ. ದೀನಾನಾಥ್ ರಂಗಭೂಮಿ ಕಲಾವಿದರು ಮತ್ತು ಉತ್ತಮ ಹಾಡುಗಾರರು. ಬಿಡುವಿನ ವೇಳೆಯಲ್ಲಿ ಶಿಷ್ಯರಿಗೆ ಸಂಗೀತ ಪಾಠವನ್ನೂ ಹೇಳುತ್ತಿದ್ದರು. ಬಾಲಕಿ ಲತಾಗೆ ಬಾಲ್ಯದಲ್ಲೇ ಸಂಗೀತದಲ್ಲಿ ಆಸಕ್ತಿ ಹುಟ್ಟಿತು. ಆದರೆ ತಂದೆಯೆದುರು ಹಾಡುವ ಧೈರ್ಯ ಇರಲಿಲ್ಲ. ಅಡಿಗೆ ಮನೆಯಲ್ಲಿದ್ದ ಪಾತ್ರೆ ಇಡುವ ಸ್ಟಾಂಡಿನ ಮೇಲೆ ಕುಳಿತು ತಂದೆಯವರ ಬಂದಿಶ್, ಸೈಗಲ್ ಹಾಡುಗಳನ್ನು ಗಟ್ಟಿ ದನಿಯಲ್ಲಿ ತಾಯಿಗೆ ಕೇಳಿಸುತ್ತಿದ್ದಳು. ‘ನನ್ನ ತಲೆ ತಿನ್ನಬೇಡ’ ಎಂದು ತಾಯಿ ಅಲ್ಲಿಂದ ಓಡಿಸುತ್ತಿದ್ದರು. ಒಂದು ದಿನ ಶಿಷ್ಯನೊಬ್ಬನಿಗೆ ಪಾಠ ಹೇಳುತ್ತಿದ್ದ ತಂದೆ ಅಭ್ಯಾಸ ಮುಂದುವರೆಸುವಂತೆ ತಿಳಿಸಿ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದರು. ಶಿಷ್ಯ ಹಾಡುತ್ತಿದ್ದುದನ್ನು ಗಮನವಿಟ್ಟು ಆಲಿಸುತ್ತಿದ್ದ 5 ವರ್ಷ ವಯಸ್ಸಿನ ಲತಾಗೆ ಆತ ತಂದೆ ಹೇಳಿಕೊಟ್ಟಂತೆ ಹಾಡುತ್ತಿಲ್ಲ ಎಂದೆನಿಸಿತು. ಅದು ಹಾಗಲ್ಲ ಹೀಗೆ ಎಂದು ಸರಿಯಾಗಿ ಹಾಡಿಯೂ ತೋರಿಸಿದಳು. ಅಷ್ಟು ಹೊತ್ತಿಗೆ ಮರಳಿದ ತಂದೆಯ ಗಮನಕ್ಕೆ ಇದು ಬಂದು ‘ಮನೆಯಲ್ಲೇ ಗಾಯಕಿ ಇರುವಾಗ ನಾನು ಹೊರಗಿನ ಶಿಷ್ಯರಿಗೆ ಕಲಿಸುತ್ತಿದ್ದೇನಲ್ಲ’ ಎನಿಸಿತು. ಮರುದಿನದಿಂದಲೇ ಮಗಳಿಗೆ ಪಾಠ ಹೇಳಲಾರಂಭಿಸಿದರು.
ರಂಗಭೂಮಿಯ ನಂಟಿದ್ದ ತಂದೆಯ ಜೊತೆ ಅವರ ಸಂಸಾರ ಊರಿಂದ ಊರಿಗೆ ತಿರುಗಬೇಕಾಗುತಿತ್ತು. ಲತಾಗೆ 9 ವರ್ಷ ವಯಸ್ಸಾಗುವಾಗ ಒಂದು ಸಲ ಶೋಲಾಪುರದಲ್ಲಿ ದೀನಾನಾಥರ ಸಂಗೀತ ಕಚೇರಿ ಇತ್ತು. ಆ ದಿನ ಹಠ ಮಾಡಿ ಆರಂಭದಲ್ಲಿ ಬಾಲಕಿ ಲತಾ ಕೂಡ ಹಾಡಿದಳು, ಜನರಿಂದ ಮೆಚ್ಚಿಗೆಯೂ ದೊರಕಿತು. ನಂತರ ತಂದೆ ಹಾಡುವಾಗ ಅವರ ತೊಡೆ ಮೇಲೆ ತಲೆ ಇಟ್ಟು ವೇದಿಕೆಯಲ್ಲೇ ಮಲಗಿ ಬಿಟ್ಟಳಂತೆ. ತಂದೆಯ ಬಲವಂತ ಸಂಗೀತ ಮಂಡಳಿ ಸಂಸ್ಥೆಯ ಕೆಲವು ನಾಟಕಗಳಲ್ಲಿ ಲತಾ ಅಭಿನಯಿಸಿದ್ದೂ ಉಂಟು. ದೀನಾನಾಥರ ಮಿತ್ರ ಸದಾಶಿವ ರಾವ್ ನಾವಡೇಕರ್ ಎಂಬವರ ಒತ್ತಾಯದಿಂದ 1942ರಲ್ಲಿ ವಸಂತ ಜೋಗಳೇಕರ್ ನಿರ್ದೇಶಿಸುತ್ತಿದ್ದ ‘ಕಿತಿ ಹಸಾಲ್’ ಎಂಬ ಮರಾಠಿ ಚಿತ್ರಕ್ಕಾಗಿ ಪುಣೆಯ ಸರಸ್ವತಿ ಸಿನೆಟೋನ್ ಸ್ಟೂಡಿಯೊದಲ್ಲಿ ಲತಾ ಮಂಗೇಶ್ಕರ್ ಹಾಡಿದ ಮೊದಲ ಹಾಡು ರೆಕಾರ್ಡ್ ಆಯಿತು. ಆದರೆ ಆ ಹಾಡಾಗಲಿ, ಚಿತ್ರವಾಗಲಿ ಬಿಡುಗಡೆಯ ಭಾಗ್ಯ ಕಾಣಲಿಲ್ಲ. ತಂದೆಗೆ ಲತಾ ಸಿನಿಮಾ ಜಗತ್ತನ್ನು ಪ್ರವೇಶಿಸುವುದು ಇಷ್ಟವೂ ಇರಲಿಲ್ಲ.
ಮುಂದೆ ಒಂದೇ ತಿಂಗಳಲ್ಲಿ ಲತಾ ಮಂಗೇಶ್ಕರ್ ಬಾಳಿನಲ್ಲಿ ಬರಸಿಡಿಲು ಬಡಿಯಿತು. ತಂದೆ ದೀನಾನಾಥ್ ಮಂಗೇಶ್ಕರ್ 1942ರ ಎಪ್ರಿಲ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ತಾಯಿ, ತಂಗಿಯಂದಿರಾದ ಆಶಾ, ಉಷಾ, ಮೀನಾ ಮತ್ತು ತಮ್ಮ ಹೃದಯನಾಥ್ ಇವರನ್ನೆಲ್ಲಾ ಸಲಹುವ ಭಾರ 13 ವರ್ಷ ವಯಸ್ಸಿನ ಲತಾ ಹೆಗಲ ಮೇಲೆ ಬಿತ್ತು. ಆ ಸಮಯದಲ್ಲಿ ಸಹಾಯಕ್ಕೆ ಬಂದವರು ಮಾಸ್ಟರ್ ವಿನಾಯಕ್. ಇವರು ಮುಂದೆ ಪ್ರಸಿದ್ಧ ನಟಿಯಾಗಿ ಹೆಸರು ಮಾಡಿದ ನಂದಾ ಅವರ ತಂದೆ. ಅವರು ‘ಪಹಲೀ ಮಂಗಳಾಗೌರ್’ ಎಂಬ ಮರಾಠಿ ಚಿತ್ರದಲ್ಲಿ ನಟಿಸುವಂತೆ ಲತಾಗೆ ಸಲಹೆ ಇತ್ತರು. ಕುಟುಂಬವನ್ನು ಸಲಹಲು ಬೇರೆ ಮಾರ್ಗ ಇಲ್ಲದ ಲತಾ ಇದಕ್ಕೆ ಒಪ್ಪಿದರು. ಆದರೆ ಮಾಸ್ಟರ್ ವಿನಾಯಕ್ ಏನೋ ವೈಮನಸ್ಯದ ಕಾರಣ ಆ ಚಿತ್ರ ತಯಾರಿಸುತ್ತಿದ್ದ ಸಂಸ್ಥೆಯನ್ನು ತೊರೆಯಬೇಕಾಗಿ ಬಂದು ಕೊಲ್ಹಾಪುರಕ್ಕೆ ತೆರಳಿದರು. ಹೋಗುವ ಮುನ್ನ ವಹಿಸಿಕೊಂಡ ಚಿತ್ರದ ಕೆಲಸ ಮುಗಿಯುತ್ತಲೇ ಕೊಲ್ಹಾಪುರಕ್ಕೆ ಬರುವಂತೆ ಲತಾಗೆ ಹೇಳಿದರು. ಅವರು ಹೇಳಿದ ಪ್ರಕಾರ ಮಂಗಳಾಗೌರ್ ಚಿತ್ರ ಸಂಪೂರ್ಣವಾದೊಡನೆ ಕುಟುಂಬದೊಡನೆ ಕೊಲ್ಹಾಪುರಕ್ಕೆ ಹೋಗಿ 1947ರ ವರೆಗೆ ಅವರ ಪ್ರಫುಲ್ ಪಿಕ್ಚರ್ಸ್ ಸಂಸ್ಥೆಯಲ್ಲಿ ನೌಕರಿಗೆ ಸೇರಿ ಕೆಲವು ಚಿತ್ರಗಳಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು. ಹುಬ್ಬುಗಳನ್ನು ಟ್ರಿಮ್ ಮಾಡಲು ಹೇಳಿದಾಗ, ಹಣೆಯನ್ನು ಮುಚ್ಚುವಷ್ಟಿದ್ದ ದಟ್ಟ ಕೂದಲುಗಳನ್ನು ಕತ್ತರಿಸಿಕೊಳ್ಳುವಂತೆ ಹೇಳಿದಾಗ ಬೇರೆ ಉಪಾಯವಿಲ್ಲದೆ ಒಪ್ಪಿ ಮನೆಗೆ ಹೋಗಿ ಅಳುತ್ತಿದ್ದರಂತೆ. ಮಾಸ್ಟರ್ ವಿನಾಯಕ್ ಅಗಸ್ಟ್ 1947ರಲ್ಲಿ ನಿಧನರಾದ ಮೇಲೆ ಲತಾ ಕುಟುಂಬ ಮುಂಬಯಿಗೆ ಬಂತು.
40ರ ದಶಕ ಅಂದರೆ ನೂರ್ ಜಹಾನ್, ಸುರೈಯಾ, ಜೊಹರಾಬಾಯಿ ಅಂಬಾಲೆವಾಲಿ, ರಾಜ್‌ಕುಮಾರಿ, ಅಮೀರ್ ಬಾಯಿ ಕರ್ನಾಟಕಿ, ಶಂಶಾದ್ ಬೇಗಂ ಮುಂತಾದ ಗಾಯಕಿಯರು ಹಿಂದಿ ಚಿತ್ರಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಸಮಯ. ಆದರೂ ಲತಾಗೆ ಒಂದೆರಡು ಸಿನಿಮಾಗಳಿಗೆ ಹಾಡುವ ಸಣ್ಣ ಪುಟ್ಟ ಅವಕಾಶಗಳು ದೊರೆತವು. ಅವು ಆಟಕ್ಕುಂಟು ಲೆಕ್ಕಕ್ಕಿಲ್ಲ ರೀತಿಯವು. ಅಮಾನ್ ಅಲಿ ಖಾನ್ ಅವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನೂ ಮುಂದುವರೆಸಿದರು. ಒಂದು ಸಲ ಹರಿಶ್ಚಂದ್ರ ಬಾಲಿ ಎಂಬ ಸಂಗೀತ ನಿರ್ದೇಶಕರಿಗಾಗಿ ಒಂದು ಹಾಡು ರೆಕಾರ್ಡ್ ಮಾಡುತ್ತಿರುವಾಗ ಸಿನಿಮಾಗಳಿಗೆ ಜೂನಿಯರ್ ಆರ್ಟಿಸ್ಟುಗಳನ್ನು ಸರಬರಾಜು ಮಾಡುತ್ತಿದ್ದ ಒಬ್ಬ ಪಠಾಣ ಲತಾ ಧ್ವನಿಯಿಂದ ಪ್ರಭಾವಿತನಾಗಿ ಹೊಸ ಗಾಯನ ಪ್ರತಿಭೆಗಳನ್ನು ಹುಡುಕುತ್ತಿದ್ದ ಮಾಸ್ಟರ್ ಗುಲಾಮ್ ಹೈದರ್ ಅವರಿಗೆ ವಿಷಯ ತಿಳಿಸಿದ. ಅವರು ಲತಾ ಮಂಗೇಶ್ಕರ್‌ಗೆ ತಾನು ಶಹೀದ್ ಚಿತ್ರಕ್ಕಾಗಿ ಹಾಡುಗಳನ್ನು ಧ್ವನಿಮುದ್ರಿಸುತ್ತಿದ್ದ ಫಿಲ್ಮಿಸ್ತಾನ್ ಸ್ಟುಡಿಯೊಗೆ ಬರುವಂತೆ ಸಂದೇಶ ಕಳಿಸಿದರು. ಅಲ್ಲಿ ಲತಾ ಮಂಗೇಶ್ಕರ್ ಧ್ವನಿಯಲ್ಲಿ ಒಂದು ಹಾಡನ್ನು ಧ್ವನಿಮುದ್ರಿಸಿ ಫಿಲ್ಮಿಸ್ಥಾನ್ ಸಂಸ್ಥೆಯ ಶಶಧರ ಮುಖರ್ಜಿ ಅವರಿಗೆ ಕೇಳಿಸಿದರು. ‘ಈಕೆಯ ತೆಳ್ಳಗಿನ ನೂಲಿನಂಥ ಧ್ವನಿ ಸಿನಿಮಾ ಹಿನ್ನೆಲೆ ಗಾಯನಕ್ಕೆ ಹೇಳಿಸಿದ್ದಲ್ಲ, ನನ್ನ ಚಿತ್ರದ ನಾಯಕಿಗೆ ಹೊಂದುವುದೂ ಇಲ್ಲ’ ಎಂದು ಅವರು ತಿರಸ್ಕರಿಸಿದರು. ಇದನ್ನು ಕೇಳಿದ ಗುಲಾಮ್ ಹೈದರ್ ಸಿಟ್ಟುಗೊಂಡು ಲತಾ ಅವರನ್ನು ಕರಕೊಂಡು ಅಲ್ಲಿಂದ ಹೊರ ನಡೆದರು. ಲೋಕಲ್ ಟ್ರೈನಿನಲ್ಲಿ ಹೋಗುತ್ತಿರುವಾಗ ತನ್ನ ಕೈಯಲ್ಲಿದ್ದ 555 ಬ್ರಾಂಡಿನ ಸಿಗರೇಟ್ ಡಬ್ಬಿಗೆ ತಾಳ ಹಾಕುತ್ತಾ ‘ಎಲ್ಲಿ, ನನ್ನೊಂದಿಗೆ ಹಾಡು ನೋಡೋಣ’ ಎಂದು ‘ದಿಲ್ ಮೇರಾ ತೋಡಾ ಹೋ ಮುಝೆ ಕಹೀಂ ಕಾ ನ ಛೋಡಾ’ ಎಂಬ ಹಾಡನ್ನು ಹಾಡಿಸಿದರು. ‘ಆಹಾ, ಇದೇ ನನಗೆ ಬೇಕಿದ್ದದ್ದು. ನೋಡುತ್ತಿರು, ನಿನ್ನ ಹಾಡು ಕೇಳಿ ಜನರು ನೂರ್ ಜಹಾನ್, ಸುರೈಯಾ, ಶಂಶಾದ್ ಬೇಗಂ ಎಲ್ಲರನ್ನೂ ಮರೆಯುತ್ತಾರೆ. ಇದೇ ಶಶಧರ ಮುಖರ್ಜಿ ಒಂದು ದಿನ ನಿನ್ನ ಮನೆ ಬಾಗಿಲ ಬಳಿ ಬಂದು ನಿಲ್ಲುತ್ತಾರೆ’ ಎಂದು ಹೇಳಿದರು. ತಾವು ಸಂಗೀತ ನೀಡುತ್ತಿದ್ದ ‘ಮಜಬೂರ್’ ಚಿತ್ರಕ್ಕಾಗಿ ಸಿಗರೇಟ್ ಡಬ್ಬಿಯ ‘ದಿಲ್ ಮೇರಾ ತೋಡಾ’ ಸೇರಿದಂತೆ ಒಟ್ಟು 6 ಹಾಡುಗಳನ್ನು ಲತಾ ಮಂಗೇಶ್ಕರ್ ಅವರಿಂದ ಗುಲಾಮ್ ಹೈದರ್ ಹಾಡಿಸಿದರು. ಈ ರೀತಿ ಚಿತ್ರ ಜಗತ್ತಿಗೆ ದೊಡ್ಡ ಮಟ್ಟಿನಲ್ಲಿ ಲತಾ ಅವರ ಪರಿಚಯವಾಗಲು ಗುಲಾಮ್ ಹೈದರ್ ಕಾರಣರಾದರು. ವೃತ್ತಿಪರ ಹಿನ್ನೆಲೆ ಗಾಯನದ ಪಟ್ಟುಗಳನ್ನು ಲತಾಗೆ ಕಲಿಸಿ ಕೊಟ್ಟವರೂ ಅವರೇ. ಈ ಚಿತ್ರದ ನಂತರ ಅವರು ಪಾಕಿಸ್ಥಾನಕ್ಕೆ ತೆರಳಿದರು. ಆದರೆ ಅವರು ಹೇಳಿದ್ದ ಭವಿಷ್ಯವಾಣಿ ನಿಜವಾಯಿತು. ಶಶಧರ್ ಮುಖರ್ಜಿ ತಮ್ಮ ‘ನಾಗಿನ್’ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಹಾಡುಗಳನ್ನೇ ನೆಚ್ಚಿಕೊಳ್ಳಬೇಕಾಯಿತು.
ಮಜಬೂರ್ ಚಿತ್ರದ ಹಾಡುಗಳ ರೆಕಾರ್ಡಿಂಗ್ ಸಮಯದಲ್ಲಿ ಲತಾಗೆ ಖೇಮ್ ಚಂದ್ ಪ್ರಕಾಶ್ ಮತ್ತು ಅನಿಲ್ ಬಿಸ್ವಾಸ್ ಅವರ ಪರಿಚಯ ಆಯಿತು. ಒಂದು ಸಲ ಲತಾ ಮಂಗೇಶ್ಕರ್ ಮತ್ತು ಅನಿಲ್ ಬಿಸ್ವಾಸ್ ಲೋಕಲ್ ಟ್ರೈನಿನಲ್ಲಿ ಪಯಣಿಸುತ್ತಿರುವಾಗ ದಿಲೀಪ್ ಕುಮಾರ್ ಕೂಡ ಜತೆಗಿದ್ದರು. ಆಗ ಅನಿಲ್ ಬಿಸ್ವಾಸ್ ಲತಾ ಅವರನ್ನು ದಿಲೀಪ್ ಕುಮಾರ್‌ಗೆ ಪರಿಚಯಿಸಿದರು. ಆಕೆ ಮಹಾರಾಷ್ಟ್ರದವರೆಂದು ಅರಿತ ದಿಲೀಪ್ ಕುಮಾರ್ ‘ದಾಲ್ ಚಾವಲ್ ತಿನ್ನುವ ಈಕೆ ಉರ್ದು ಪದಗಳನ್ನು ಸರಿಯಾಗಿ ಉಚ್ಚರಿಸಲಾರಳು’ ಎಂದು ಕಮೆಂಟ್ ಮಾಡಿದರು. ಮನ ನೊಂದ ಲತಾ ಇದನ್ನು ಸವಾಲಾಗಿ ಸ್ವೀಕರಿಸಿ ಅಧ್ಯಾಪಕರನ್ನು ಇಟ್ಟುಕೊಂಡು ಉರ್ದು ಓದಲು, ಬರೆಯಲು, ಮಾತನಾಡಲು ಕಲಿತದ್ದು ಮಾತ್ರವಲ್ಲದೆ ಇನ್ನೂ ಅನೇಕ ಭಾಷೆಗಳನ್ನೂ ಕಲಿತರು. ತಮ್ಮ ಅನೇಕ ಚಿತ್ರಗಳಲ್ಲಿ ಹಾಡಲು ಅವಕಾಶ ಕೊಟ್ಟ ಅನಿಲ್ ಬಿಸ್ವಾಸ್ ಹಾಡುವಾಗ ಉಸಿರಿನ ಸದ್ದು ಕೇಳಿಸದಂತೆ ಶ್ವಾಸವನ್ನು ಹೇಗೆ ನಿಯಂತ್ರಿಸಬೇಕು, ಶ್ವಾಸ ಎಳೆದುಕೊಳ್ಳುವಾಗ ಮೈಕ್ರೊಫೋನಿನಿಂದ ಹೇಗೆ ಆಚೆ ಮುಖ ತಿರುಗಿಸಬೇಕು ಇತ್ಯಾದಿ ವಿಷಯಗಳನ್ನು ಲತಾಗೆ ಕಲಿಸಿದರು. ತಾವು ಮಹಾನ್ ಗಾಯಕರೆಂದು ತಿಳಿದುಕೊಂಡಿರುವ ಈಗಿನ ಅನೇಕರಿಗೆ ಈ ವಿಷಯದ ಜ್ಞಾನವೇ ಇಲ್ಲದಿದ್ದು ಹಾಡುಗಳಲ್ಲಿ ಏದುಸಿರಿನ ಸದ್ದು ಕೇಳಿಸುವುದು ಸಾಮಾನ್ಯವಾಗಿದೆ.
1949ರಲ್ಲಿ ಖೇಮ್ ಚಂದ್ ಪ್ರಕಾಶ್ ಸಂಗೀತ ನಿರ್ದೇಶನದಲ್ಲಿ ‘ಮಹಲ್’ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಹಾಡಿದ ‘ಆಯೇಗಾ ಆನೇವಾಲಾ’ ಹಾಡು ಸುಪರ್ ಹಿಟ್ ಆಯಿತು. ಆದರೆ ಸ್ವಾರಸ್ಯವೆಂದರೆ ಇದನ್ನು ಹಾಡಿರುವುದು ಯಾರೆಂದು ಆಗ ಜನರಿಗೆ ಗೊತ್ತೇ ಇರಲಿಲ್ಲ. ಏಕೆಂದರೆ ಆ ಕಾಲದಲ್ಲಿ ಗ್ರಾಮೊಫೋನ್ ರೆಕಾರ್ಡಿನ ಮೇಲೆ ಗಾಯಕರಾಗಿ ಆ ಹಾಡಿಗೆ ಅಭಿನಯಿಸಿದ ಚಿತ್ರದ ಪಾತ್ರದ ಹೆಸರನ್ನು ನಮೂದಿಸಲಾಗುತ್ತಿತ್ತು. ಆ ಪ್ರಕಾರ ಈ ಹಾಡಿನ ರೆಕಾರ್ಡ್ ಮೇಲೆ ಹಾಡಿದವರು ಕಾಮಿನಿ ಎಂಬ ಉಲ್ಲೇಖ ಇತ್ತು. ಆದರೂ ಜನ ರೇಡಿಯೋ ಸ್ಟೇಷನುಗಳಿಗೆ ಪತ್ರ ಬರೆದು ನಿಜವಾದ ಗಾಯಕರು ಯಾರೆಂದು ಹೇಳುವಂತೆ ಒತ್ತಾಯಿಸುತ್ತಿದ್ದರಂತೆ. ಮುಂದೆ ಲತಾ ಮಂಗೇಶ್ಕರ್ ಅವರ ಪ್ರಯತ್ನದ ಫಲವಾಗಿ ಹಿನ್ನೆಲೆ ಗಾಯಕರ ಹೆಸರು ರೆಕಾರ್ಡುಗಳ ಮೇಲೆ ಕಾಣಿಸಿಕೊಳ್ಳುವಂತಾಯಿತು. ‘ಆಯೇಗಾ ಆನೇವಾಲಾ’ ಧಾಟಿಯಲ್ಲಿ ಮಹಾತ್ಮಾ ಪಿಕ್ಚರ್ಸ್ ಅವರ ‘ಜಗನ್ಮೋಹಿನಿ’ ಕನ್ನಡ ಚಿತ್ರದಲ್ಲಿ ‘ಎಂದೋ ಎಂದೋ’ ಎಂಬ ಹಾಡು ಇದ್ದು ಅದು ಅತಿ ಜನಪ್ರಿಯವಾದದ್ದು ಅನೇಕರಿಗೆ ನೆನಪಿರಬಹುದು. ‘ಎಂದೋ ಎಂದೋ’ ಕನ್ನಡ ಹಾಡೇ ಮೂಲ, ಅದರ ಧಾಟಿಯಲ್ಲಿ ‘ಮಹಲ್’ ಚಿತ್ರದ ಹಿಂದಿ ಹಾಡಿನ ರಚನೆಯಾಯಿತು ಎಂದು ತಪ್ಪಾಗಿ ತಿಳಿದುಕೊಂಡವರೂ ಅನೇಕರಿದ್ದರಂತೆ. ಅದೇ ವರ್ಷ ಈಗಿನವರಿಗೆ ಪರಿಚಯವೇ ಇಲ್ಲದ ವಿನೋದ್ ಎಂಬವರ ಸಂಗೀತ ನಿರ್ದೇಶನದ ‘ಏಕ್ ಥೀ ಲಡ್ಕೀ’ ಎಂಬ ಚಿತ್ರದಲ್ಲಿದ್ದ ‘ಲಾರಲಪ್ಪ ಲಾರಲಪ್ಪ’ ಎಂಬ ಹಾಡು ಕೂಡ ಬಲು ಜನಪ್ರಿಯವಾಯಿತು.
ಲತಾ ಮಂಗೇಶ್ಕರ್ ಹೆಸರು ಎಲ್ಲರ ನಾಲಿಗೆ ಮೇಲೆ ನಲಿಯುವಂತಾದ್ದು 1949ರಲ್ಲಿ ರಾಜ್ ಕಪೂರ್ ನಿರ್ಮಿಸಿದ ‘ಬರಸಾತ್ ’ ಚಿತ್ರದ ಹಾಡುಗಳಿಂದ. ‘ಆಗ್’ ಎಂಬ ತನ್ನ ಮೊದಲ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದ ಪೃಥ್ವಿ ಥಿಯೇಟರ್ಸಿನ ರಾಮ್ ಗಂಗುಲಿ ಅವರೊಂದಿಗೆ ಏನೋ ಮನಸ್ತಾಪ ಉಂಟಾಗಿ ರಾಜ್ ಕಪೂರ್ ಅವರು ‘ಬರಸಾತ್ ’ ಸಂಗೀತದ ಹೊಣೆಯನ್ನು ಶಂಕರ್ ಮತ್ತು ಜೈಕಿಶನ್ ಎಂಬ ಇಬ್ಬರು ಹೊಸ ಹುಡುಗರಿಗೆ ವಹಿಸಿದರು. ಗೀತ ರಚನಕಾರರಾಗಿ ಹಸರತ್ ಜೈಪುರಿ ಮತ್ತು ಶೈಲೇಂದ್ರ ಸೇರಿಕೊಂಡರು. ಈ ಚಿತ್ರದ ನಾಯಕಿ ಮತ್ತು ಉಪನಾಯಕಿಯ ಎಲ್ಲ ಹಾಡುಗಳನ್ನು ಹಾಡುವ ಅವಕಾಶ ಲತಾ ಮಂಗೇಶ್ಕರ್ ಅವರಿಗೆ ದೊರಕಿತು. ‘ಬರಸಾತ್’ ಚಿತ್ರದ ಹಾಡುಗಳ ಸುರಿಮಳೆ ಅದೆಂಥ ಮೋಡಿ ಮಾಡಿತೆಂದರೆ ಆ ಮೇಲೆ ಲತಾ ಮಂಗೇಶ್ಕರ್ ಹಿಂತಿರುಗಿ ನೋಡಬೇಕಾಗಿ ಬರಲಿಲ್ಲ. ಈ ಚಿತ್ರದ ಒಂದು ಹಾಡು ಬಿಟ್ಟರೆ ಉಳಿದವೆಲ್ಲ ಭೈರವಿ ರಾಗದಲ್ಲೇ ಇದ್ದರೂ ಒಂದರಂತೆ ಇನ್ನೊಂದು ಇಲ್ಲದಿದ್ದುದು ವಿಶೇಷ. ಮುಂದೆ ಶಂಕರ್ ಜೈಕಿಶನ್ ಅವರ ಮುಖ್ಯ ಗಾಯಕಿಯಾಗಿ ಅನೇಕ ವರ್ಷ ಮುಂದುವರಿದ ಲತಾ ಮಂಗೇಶ್ಕರ್ ಅವರ ನಿರ್ದೇಶನದಲ್ಲಿ ಎಲ್ಲ ಬಗೆಯ ಹಾಡುಗಳನ್ನೂ ಹಾಡಿದರು. ಅವರ ಸಮವಯಸ್ಕರಾಗಿದ್ದ ಜೈಕಿಶನ್ ನಿಧನರಾದ ಮೇಲೆ ಶಂಕರ್ ಒಬ್ಬಂಟಿಯಾಗಿ ಸಂಗೀತ ನೀಡಿದ ಚಿತ್ರಗಳಲ್ಲಿ ಲತಾ ಹಾಡುಗಳು ಜಾಸ್ತಿ ಇರಲಿಲ್ಲ.
ಚಿತ್ರಸಂಗೀತದ ಸುವರ್ಣಯುಗ ಎಂದು ಎನಿಸಿಕೊಳ್ಳುವ 1950-60ರ ದಶಕಗಳಲ್ಲಿ ಶಂಕರ್ ಜೈಕಿಶನ್, ನೌಶಾದ್, ಸಿ. ರಾಮಚಂದ್ರ, ಎಸ್. ಡಿ. ಬರ್ಮನ್, ಸುಧೀರ್ ಫಡ್ಕೆ, ರೋಶನ್, ಮದನ್ ಮೋಹನ್, ಹೇಮಂತ್ ಕುಮಾರ್, ಎನ್. ದತ್ತಾ, ಚಿತ್ರಗುಪ್ತ, ರವಿ, ಸಲಿಲ್ ಚೌಧರಿ, ಖಯ್ಯಾಮ್, ಎಸ್.ಎನ್.ತ್ರಿಪಾಠಿ, ಎಸ್. ಮೊಹಿಂದರ್, ಕಲ್ಯಾಣಜೀ ಆನಂದಜೀ, ಲಕ್ಷ್ಮೀಕಾಂತ್ ಪ್ಯಾರೇಲಾಲ್, ಆರ್. ಡಿ ಬರ್ಮನ್ ಮುಂತಾದವರ ಸಂಗೀತ ನಿರ್ದೇಶನದಲ್ಲಿ ಲತಾ ಹಾಡಿದ ಸೋಲೊ ಹಾಗೂ ವಿಶೇಷವಾಗಿ ರಫಿ ಅವರ ಜೊತೆಗಿನ ಯುಗಳ ಗೀತೆಗಳು ಜನರನ್ನು ಮೋಡಿ ಮಾಡಿದವು. ರಫಿ 1980ರಲ್ಲೇ ನಿಧನರಾದರೂ, ಮಧ್ಯೆ ಒಂದೆರಡು ವರ್ಷ ಅವರಿಬ್ಬರೂ ಜೊತೆಯಾಗಿ ಹಾಡದಿದ್ದರೂ ಲತಾ ಮಂಗೇಶ್ಕರ್ ಅತಿ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ್ದು ರಫಿ ಅವರೊಂದಿಗೆಯೇ ಎಂಬುದು ಈ ಜುಗಲ ಜೋಡಿಯ ಜನಪ್ರಿಯತೆಯನ್ನು ಜಾಹೀರುಗೊಳಿಸುತ್ತದೆ. 1947ರ ‘ಶಾದೀ ಸೆ ಪಹಲೆ’ ಎಂಬ ಚಿತ್ರದಲ್ಲಿ ಅವರು ಮೊಟ್ಟಮೊದಲ ಯುಗಳಗೀತೆಯನ್ನು ಹಾಡಿದ್ದೂ ರಫಿ ಜೊತೆಯಲ್ಲೇ. 1954ರಲ್ಲಿ ಮುಂಬಯಿಯಲ್ಲಿ ತಯಾರಾಗುತ್ತಿದ್ದ ‘ಆಶಾ ನಿರಾಶಾ’ ಎಂಬ ಕಲ್ಯಾಣ್ ಕುಮಾರ್ ಅಭಿನಯದ ಕನ್ನಡ ಚಿತ್ರಕ್ಕಾಗಿ ರಫಿ ಲತಾ ಯುಗಳಗೀತೆಯೊಂದು ರೆಕಾರ್ಡ್ ಆದುದರ ಬಗ್ಗೆ ದಾಖಲೆ ಇದೆ. ಆದರೆ ಚಿತ್ರ ಅರ್ಧಕ್ಕೆ ನಿಂತು ಆ ಹಾಡು ಕಾಲಗರ್ಭದ ಕತ್ತಲಲ್ಲಿ ಕಾಣೆಯಾಗಿ ಹೋಯಿತು. ಹೀಗಾಗಿ ‘ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕಾಗಿ ಅವರು ಹಾಡಿದ ಎರಡು ಕನ್ನಡ ಹಾಡುಗಳು ಮಾತ್ರ ನಮಗೆ ದಕ್ಕಿದವು.
ಲತಾ ಧ್ವನಿಯನ್ನು ಬಳಸದೆಯೇ ಗೆದ್ದವರು ಓ.ಪಿ. ನಯ್ಯರ್ ಮಾತ್ರ. ಈ ಸುವರ್ಣ ಯುಗದ ಸಂಗೀತ ನಿರ್ದೇಶಕರ ಪೈಕಿ ಲತಾ ಧ್ವನಿಯಲ್ಲಿ ಅತಿ ಹೆಚ್ಚು ಮಾಧುರ್ಯಭರಿತ ಗೀತೆಗಳನ್ನು ನೀಡಿದವರೆಂದು ಸಿ. ರಾಮಚಂದ್ರ ಹಾಗೂ ಚಿತ್ರಗುಪ್ತ ಅವರನ್ನು, ಶಾಸ್ತ್ರೀಯ ರಂಗು ತುಂಬಿದವರೆಂದು ನೌಶಾದ್ ಅವರನ್ನು, ಗಜಲ್‌ಗಳನ್ನು ಸಂಯೋಜಿಸಿದವರೆಂದು ಮದನ್ ಮೋಹನ್ ಅವರನ್ನು, ಜಾನಪದ ರಂಗು ಬಳಿದವರೆಂದು ಎಸ್.ಡಿ. ಬರ್ಮನ್ ಮತ್ತು ಸಲಿಲ್ ಚೌಧರಿ ಅವರನ್ನು , ಎಲ್ಲ ಶೈಲಿಗಳಲ್ಲೂ ದುಡಿಸಿಕೊಂಡವರೆಂದು ಶಂಕರ್ ಜೈಕಿಶನ್ ಅವರನ್ನು ಹಾಗೂ ಅವರಿಂದ ಅತಿ ಹೆಚ್ಚು ಹಾಡುಗಳನ್ನು ಹಾಡಿಸಿದವರೆಂದು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರನ್ನು ನಾವು ಸ್ಮರಿಸಿಕೊಳ್ಳಬಹುದು. ಈ ಹಂತದಲ್ಲಿ ಹಳೆಯ ಕಾಲದ ಗಾಯಕಿಯರೆಲ್ಲ ಹಿನ್ನೆಲೆಗೆ ಸರಿದು ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಜೊತೆಗೆ ಆಗೊಮ್ಮೆ ಈಗೊಮ್ಮೆ ಹಾಡುತ್ತಿದ್ದ ಸುಮನ್ ಕಲ್ಯಾಣ್‌ಪುರ್ ಮಾತ್ರ ರಂಗದಲ್ಲಿ ಉಳಿದರು. ಕೆಲವು ಹೊಸ ಗಾಯಕಿಯರನ್ನು ಪರಿಚಯಿಸುವ ಪ್ರಯತ್ನ ನಡೆದರೂ ಅದು ಅಷ್ಟೊಂದು ಫಲಪ್ರದವಾಗಲಿಲ್ಲ.
70ರ ದಶಕದಲ್ಲಿ ರಫಿ ಹಿನ್ನೆಲೆಗೆ ಸರಿದು ಕಿಶೋರ್ ಕುಮಾರ್ ಮುಂಚೂಣಿಗೆ ಬಂದ ಮೇಲೂ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಪಾರಮ್ಯ ಹಾಗೆಯೇ ಮುಂದುವರೆಯಿತು. ಕನ್ನಡ ಚಿತ್ರಸಂಗೀತ ಕ್ಷೇತ್ರದಲ್ಲೂ ಪಿ.ಬಿ. ಶ್ರೀನಿವಾಸ್ ಹಿಂದೆ ಸರಿದು ಡಾ| ರಾಜಕುಮಾರ್ ಮತ್ತು ಎಸ್.ಪಿ. ಬಾಲಸುಬ್ರಮಣ್ಯಮ್ ಯುಗ ಬಂದರೂ ಎಸ್. ಜಾನಕಿ ಮತ್ತು ಪಿ.ಸುಶೀಲಾ ಅವರು ಜನಪ್ರಿಯರಾಗಿಯೇ ಮುಂದುವರಿದ ವಿದ್ಯಮಾನವನ್ನು ಇದಕ್ಕೆ ಹೋಲಿಸಬಹುದು. 1980ರ ನಂತರ ಅಲ್ಕಾ ಯಾಜ್ಞಿಕ್, ಅನುರಾಧಾ ಪೊದುವಾಳ್ ಮುಂತಾದ ನವಯುಗದ ಗಾಯಕಿಯರು ಬಂದ ಮೇಲಷ್ಟೇ ಲತಾ ಮಂಗೇಶ್ಕರ್ ಹಾಡುವುದನ್ನು ಕಮ್ಮಿ ಮಾಡತೊಡಗಿದ್ದು. ರಾಜಶ್ರೀ ಪ್ರೊಡಕ್ಷನ್ಸ್ ಅವರ ‘ಮೈನೆ ಪ್ಯಾರ್ ಕಿಯಾ’ ಹಾಗೂ ‘ಹಮ್ ಆಪ್ ಕೇ ಹೈಂ ಕೌನ್’ ಚಿತ್ರಗಳಲ್ಲಿ ಎಳೆ ಪ್ರಾಯದ ನಟಿಯರಿಗೆ ಹಿಟ್ ಹಾಡುಗಳನ್ನು ಹಾಡುವ ಮೂಲಕ ಅವರ ಎರಡನೇ ಇನ್ನಿಂಗ್ಸ್ ಶುರುವಾಯಿತು ಎನ್ನಬಹುದು. ಹೊಸ ಪೀಳಿಗೆಯವರಾದ ಎ.ಆರ್. ರಹಮಾನ್, ಉತ್ತಮ್ ಸಿಂಗ್, ಜತಿನ್ ಲಲಿತ್ ಮುಂತಾದವರ ಆಯ್ದ ಚಿತ್ರಗಳಲ್ಲಿ ಹಾಡುವುದರ ಮೂಲಕ ಅವರು ಗಾಯನವನ್ನು ಮುಂದುವರಿಸಿದರು. ಆದರೆ 50, 60ರ ದಶಕಗಳಲ್ಲಿ ಅವರ ಧ್ವನಿಯಲ್ಲಿದ್ದ ಎಳೆ ಸಿಯಾಳದ ತಿರುಳಿನಂಥ ಕೋಮಲತೆ ವರ್ಷಗಳು ಕಳೆದಂತೆ ಕ್ರಮೇಣ ಕಮ್ಮಿಯಾಗುತ್ತಾ ಬಂದದ್ದನ್ನು ಅಲ್ಲಗಳೆಯಲಾಗದು. 90ರ ದಶಕದ ನಂತರವಂತೂ ಕಂಠವನ್ನು ಒತ್ತಾಯಪೂರ್ವಕವಾಗಿ ಆಕುಂಚನಗೊಳಿಸಿ ಹಾಡುತ್ತಾರೇನೋ ಅನ್ನಿಸುತ್ತಿತ್ತು.
ಲತಾ ಮಂಗೇಶ್ಕರ್ ತನ್ನ ಮಧುರ ಹಾಡುಗಳಿಗಾಗಿ ಎಷ್ಟು ಪ್ರಸಿದ್ಧರೋ ತನ್ನ ಸಿಡುಕುತನಕ್ಕಾಗಿಯೂ ಅಷ್ಟೇ ಹೆಸರು ಮಾಡಿದವರು. ತಾನು ಅನಿಸಿದ್ದನ್ನು ನೇರವಾಗಿ ಹೇಳುವವಳು, ಇದಕ್ಕಾಗಿ ತನ್ನನ್ನು ಜಗಳಗಂಟಿ ಎಂದರೂ ಪರವಾಗಿಲ್ಲ ಎಂದು ಅವರೇ ಹೇಳುತ್ತಿದ್ದರು. ಬಾಲ್ಯದಲ್ಲೇ ಹೆಗಲನ್ನೇರಿದ ಜವಾಬ್ದಾರಿ, ಅನುಭವಿಸಿದ ಕಷ್ಟ, ಎದುರಿಸಿದ ಅವಮಾನ ಇವುಗಳೆಲ್ಲ ಇದಕ್ಕೆ ಕಾರಣವಾಗಿರಬಹುದು. ಬಾಲ್ಯದಲ್ಲೇ ಅವರ ಸಿಟ್ಟು ಪ್ರಕಟವಾದ ಪ್ರಸಂಗ ಒಂದಿದೆ. ಸಾಂಗಲಿಯಲ್ಲಿರುವಾಗ ಮನೆ ಪಕ್ಕದಲ್ಲಿರುವ ಶಾಲೆಗೆ ಅವರು ಹೋಗುತ್ತಿದ್ದರು. ಒಂದು ದಿನ ಅಕ್ಷರಗಳನ್ನು ಬಹಳ ಚಂದವಾಗಿ ಬರೆದು ತೋರಿಸಿದ್ದಕ್ಕೆ ಅಧ್ಯಾಪಕರ ಶಹಬ್ಬಾಸ್‌ಗಿರಿ ಸಿಕ್ಕಿತಂತೆ. ಮರುದಿನ ಪುಟ್ಟ ಮಗುವಾಗಿದ್ದ ಆಶಾಳನ್ನು ತನ್ನೊಡನೆ ಶಾಲೆಗೆ ಕರೆದುಕೊಂಡು ಹೋದಾಗ ಅದೇ ಅಧ್ಯಾಪಕರು ಆಕ್ಷೇಪಿಸಿದ್ದಕ್ಕೆ ಕೋಪಗೊಂಡು ತಾನಿನ್ನು ಶಾಲೆಗೇ ಹೋಗುವುದಿಲ್ಲ ಎಂದು ನಿರ್ಧರಿಸಿದರಂತೆ. ನಂತರ ಅವರು ಮನೆಯಲ್ಲೇ ಮೇಸ್ಟರನ್ನಿಟ್ಟುಕೊಂಡು ಕಲಿತದ್ದು. ಪ್ರಸಿದ್ಧ ಬ್ರಾಡ್‌ಕಾಸ್ಟರ್ ಅಮೀನ್ ಸಯಾನಿ ಒಮ್ಮೆ ಈ ಮನಸ್ತಾಪಗಳ ಕುರಿತೇ ಅವರ ಸಂದರ್ಶನ ನಡೆಸಿದ್ದು ಅದು ಎರಡು ಭಾಗಗಳಲ್ಲಿ ಪ್ರಸಾರವಾಗಿತ್ತು. ಓ.ಪಿ. ನಯ್ಯರ್, ಎಸ್.ಡಿ. ಬರ್ಮನ್, ಸಿ.ರಾಮಚಂದ್ರ, ಆಶಾ ಭೋಸ್ಲೆ, ರಾಜಕಪೂರ್, ಶಂಕರ್, ಮಹಮ್ಮದ ರಫಿ ಮುಂತಾದವರೊಡನೆ ಅವರಿಗೆ ಉಂಟಾಗಿದ್ದ ಮನಸ್ತಾಪದ ವಿವರಗಳು ಜೂನ್ 2021ರ ಉತ್ಥಾನ ಸಂಚಿಕೆಯಲ್ಲಿ ಪ್ರಕಟವಾದ ‘ವಿರಸವೆಂಬ ವಿಷ’ ಲೇಖನದಲ್ಲಿವೆ. ಅನೇಕ ಸಮಕಾಲೀನ ಗಾಯಕಿಯರ ಅವಕಾಶಗಳನ್ನು ಕಸಿದು ಅವರು ಮುಂದೆ ಬರದಂತೆ ತಡೆದರೆಂಬ ಅಪವಾದ ಕೂಡ ಲತಾ ಮಂಗೇಶ್ಕರ್ ಮೇಲಿದೆ. ಆದರೆ ಅವರಂತೆಯೇ ಧ್ವನಿಯಿದ್ದ ಸುಮನ್ ಕಲ್ಯಾಣಪುರ್ ಅವರಿಗೆ ಲತಾ ಪಾರಮ್ಯದ ಕಾಲದಲ್ಲೂ ಬಹಳಷ್ಟು ಜನಪ್ರಿಯ ಹಾಡುಗಳನ್ನು ಹಾಡಲು ಸಾಧ್ಯವಾಗಿದೆ. ವಾಸ್ತವವಾಗಿ ಇಂಥ ವಿಷಯಗಳಲ್ಲಿ ಡಿಸ್ಟ್ರಿಬ್ಯೂಟರುಗಳ, ತೆರೆಯ ಮೇಲೆ ಕಾಣಿಸುವ ನಟ ನಟಿಯರ ಒತ್ತಡ, ಪ್ರಭಾವ ಹೆಚ್ಚಿರುತ್ತವೆ. ಯಾರು ಹೇಳಿ ಕೊಟ್ಟದ್ದನ್ನು ಅತಿ ಶೀಘ್ರವಾಗಿ ಕಲಿತು ನಿಗದಿತ ಸಮಯಕ್ಕೆ ರೆಕಾರ್ಡಿಂಗಿಗೆ ಬರುತ್ತಾರೋ ಅಂಥ ಗಾಯಕ ಗಾಯಕಿಯರನ್ನೇ ಸಂಗೀತ ನಿರ್ದೇಶಕರು ಹೆಚ್ಚು ನೆಚ್ಚಿಕೊಳ್ಳುವುದು ಸಹಜ ಪ್ರಕ್ರಿಯೆ.
ಅವರು ಕೊನೆಯ ವರೆಗೆ ಮದುವೆ ಆಗದೆ ಏಕೆ ಉಳಿದರೆಂದು ಎಲ್ಲರನ್ನೂ ಕಾಡುವ ಇನ್ನೊಂದು ಪ್ರಶ್ನೆ. ತಾನು ಮದುವೆಯಾದರೆ ತನ್ನ ಆರಾಧ್ಯ ದೈವ ಕುಂದನ್ ಲಾಲ್ ಸೈಗಲರನ್ನೇ ಎಂದು ಅವರು ಬಾಲ್ಯದಲ್ಲಿ ಹೇಳುವುದಿತ್ತಂತೆ. ಆರಂಭದ ಕಷ್ಟಗಳು ಕಳೆದು ಬದುಕು ಸ್ಥಿರಗೊಂಡ ಮೇಲೆ ಅವರಿಗಾಗಿ ರಾಜಮನೆತನವೊಂದಕ್ಕೆ ಸೇರಿದ ಹುಡುಗನನ್ನು ಕುಟುಂಬದವರು ನೋಡಿದ್ದರು. ಇಬ್ಬರೂ ಪರಸ್ಪರ ಒಪ್ಪಿಯೂ ಇದ್ದರು. ಆದರೆ ಅದೇಕೋ ಆ ವಿಷಯ ಅಲ್ಲಿಗೇ ನಿಂತು ಬಿಟ್ಟಿತು. ಕಾರ್ಯಬಾಹುಳ್ಯದ ಕಾರಣದಿಂದ ಆ ಮೇಲೆ ತನಗೆ ಮದುವೆಯ ಬಗ್ಗೆ ಯೋಚಿಸಲು ಸಮಯವೇ ಸಿಗಲಿಲ್ಲ ಎಂದು ಲತಾ ಹೇಳುತ್ತಿದ್ದರು. ಹುಟ್ಟು, ಮದುವೆ, ಸಾವು ಇವು ಮೂರನ್ನು ಬ್ರಹ್ಮ ಮೊದಲೇ ಬರೆದಿಟ್ಟಿರುತ್ತಾನೆ ಎಂದೂ ಹೇಳುತ್ತಿದ್ದರು.
ಅವರು ಆನಂದಘನ್ ಎಂಬ ಹೆಸರಿನಲ್ಲಿ ಕೆಲವು ಮರಾಠಿ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದರು. ಫೋಟೊಗ್ರಫಿಯ ಹವ್ಯಾಸವೂ ಅವರಿಗಿತ್ತು. ಬೆಲೆಬಾಳುವ ಕ್ಯಾಮರಾಗಳು ಅವರಲ್ಲಿದ್ದವು. ಕ್ರಿಕೆಟ್ಟಲ್ಲೂ ಆಸಕ್ತಿ ಇದ್ದ ಅವರು ಸುನಿಲ್ ಗವಾಸ್ಕರ್, ತೆಂಡುಲ್ಕರ್ ಮುಂತಾದವರೊಡನೆ ನಿಕಟ ಬಾಂಧವ್ಯ ಹೊಂದಿದ್ದರು. ಶಿವಾಜಿಯ ಪರಮ ಭಕ್ತರಾದ ಅವರ ಕುಟುಂಬಕ್ಕೆ ಸಾವರ್ಕರ್ ಅವರ ಒಡನಾಟವೂ ಇತ್ತು. ಲತಾ 6 ವರ್ಷದವರಾಗಿರುವಾಗ ಸಾವರ್ಕರ್ ಅವರ ಮನೆಗೆ ಬಂದಿದ್ದರಂತೆ. ಸಾವರ್ಕರ್ ಅನಾರೋಗ್ಯ ಪೀಡಿತರಾಗಿದ್ದಾಗ ಸೇವೆ ಮಾಡುವ ಅವಕಾಶವೂ ಲತಾಗೆ ದೊರಕಿತ್ತಂತೆ. ತಾನೂ ಚಳವಳಿಯಲ್ಲಿ ಭಾಗವಹಿಸಬೇಕೆಂಬ ಇಚ್ಛೆ ಪ್ರಕಟಪಡಿಸಿದಾಗ ಸಂಗೀತ ಕ್ಷೇತ್ರದಲ್ಲೇ ಮುಂದುವರಿಯುವಂತೆ ಸಾವರ್ಕರ್ ಸಲಹೆ ನೀಡಿದರಂತೆ. ಬಾಳ್ ಠಾಕ್ರೆ ಅವರೊಂದಿಗೆ ನಿಕಟ ಸಂಪರ್ಕ ಇದ್ದರೂ ಎಂದೂ ರಾಜಕೀಯದ ವಿಷಯ ತಮ್ಮ ನಡುವಿನ ಮಾತುಕತೆಯಲ್ಲಿ ಬರುತ್ತಿರಲಿಲ್ಲ, ರಾಜಕೀಯ ತನಗೆ ಅರ್ಥವೂ ಆಗುವುದಿಲ್ಲ ಎಂದು ಒಂದು ಇಂಟರ್‌ವ್ಯೂದಲ್ಲಿ ಲತಾ ಹೇಳಿದ್ದಾರೆ. ಕೆಲವರ ಒತ್ತಾಯಕ್ಕೆ ಇಲ್ಲವೆನ್ನಲಾಗದೆ 6 ವರ್ಷ ರಾಜ್ಯ ಸಭೆಯ ಸದಸ್ಯರಾಗಿದ್ದರೂ ಒಟ್ಟು 6 ಸಲ ಮಾತ್ರ ಕಲಾಪದಲ್ಲಿ ಭಾಗವಹಿಸಿರುವುದನ್ನು ಹಾಗೂ ಅಲ್ಲಿ ಒಮ್ಮೆಯೂ ಮಾತನಾಡದಿರುವುದನ್ನು ಕೂಡ ಹೇಳಿದ್ದಾರೆ.
ಅತಿ ಹೆಚ್ಚು ಹಾಡುಗಳನ್ನು ಹಾಡಿದವರೆಂದು ಒಮ್ಮೆ ಅವರ ಹೆಸರು ಗಿನ್ನೆಸ್ ದಾಖಲೆಗೂ ಸೇರಿತ್ತು. ಆದರೆ ಆ ಮೇಲೆ ಅದನ್ನು ಹಿಂದೆ ಪಡೆಯಲಾಯಿತು. ಕನ್ನಡದ ಎರಡು ಹಾಡುಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಅವರು ಸುಮಾರು 30 ಸಾವಿರ ಹಾಡುಗಳನ್ನು ಹಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಖ್ಯೆಯನ್ನು 50 ಸಾವಿರಕ್ಕೆ ಏರಿಸುವವರೂ ಇದ್ದಾರೆ. ಒಂದು ಅಂದಾಜಿನ ಪ್ರಕಾರ ಅವರು ವಿವಿಧ ಸಹಗಾಯಕ ಗಾಯಕಿಯರೊಡನೆ ಹಾಡಿದ ಯುಗಳ ಗೀತೆಗಳ ಸಂಖ್ಯೆ ಸುಮಾರು 1530. ಲೆಕ್ಕಕ್ಕೆ ಸಿಗದ್ದು ಎಂದು ಇನ್ನೂ 70 ಬೇಕಿದ್ದರೆ ಸೇರಿಸೋಣ. ಹಾಗಿದ್ದರೆ ಉಳಿದ 28,400 ಹಾಡುಗಳನ್ನು ಅವರೊಬ್ಬರೇ ಹಾಡಿದರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೆ ನೋಡಿದರೆ ಚಿತ್ರಗಳಲ್ಲಿ ಅವರ ಸೊಲೊ ಹಾಡುಗಳಿಗಿಂತ ಡ್ಯುಯಟ್ ಮತ್ತು ಪುರುಷ ಗಾಯಕರ ಹಾಡುಗಳೇ ಹೆಚ್ಚು ಇರುತ್ತಿದ್ದುದು. ವಿವಿಧ ಪ್ರಸಿದ್ಧ ಸಂಗೀತ ನಿರ್ದೇಶಕರಿಗಾಗಿ ಅವರು ಹಾಡಿದ ಹಾಡುಗಳ ಒಟ್ಟು ಸಂಖ್ಯೆ 3800 ಎಂದು ಇನ್ನೊಂದು ಅಂದಾಜು. ಇನ್ನೂ 200 ಸೇರಿಸಿದರೂ ಉಳಿದ 26 ಸಾವಿರದ ಲೆಕ್ಕ ಸಿಗುವುದಿಲ್ಲ. ಕಾನ್ಪುರದ ಹರ್ಮಂದಿರ್ ಸಿಂಗ್ ಹಮ್‌ರಾಜ್ ಎಂಬ ಸಂಶೋಧಕರು ಸಂಪಾದಿಸಿದ ಗೀತ್ ಕೋಶ್ ಎಂಬ ಹಿಂದಿ ಹಾಡುಗಳ ಎನ್‌ಸೈಕ್ಲೊಪಿಡಿಯಾ ಪ್ರಕಾರ 1991ರ ವರೆಗೆ ಲತಾ ಮಂಗೇಶ್ಕರ್ ಹಾಡಿದ ಒಟ್ಟು ಹಾಡುಗಳ ಸಂಖ್ಯೆ ಸುಮಾರು 5250. ಒಟ್ಟಿನಲ್ಲಿ ಈ 30000, 50000ಗಳ ಲೆಕ್ಕಗಳು ಉತ್ಪ್ರೇಕ್ಷಿತ ಎಂದೇ ಹೇಳಬೇಕಾಗುತ್ತದೆ. ಲೆಕ್ಕಾಚಾರ ಎಷ್ಟೇ ಇದ್ದರೂ ಅವರ ಹಾಡುಗಳ ಗುಣಮಟ್ಟದ ಗುಣಕದಿಂದ ಗುಣಿಸಿದರೆ ಸಿಗುವ ಸಂಖ್ಯೆ ಇನ್ನು ಬರಬಹುದಾದ ಲಕ್ಷ ಹಾಡುಗಳಿಗೂ ಮೀರಿದ್ದು ಎಂಬುದಂತೂ ನಿರ್ವಿವಾದ.
ಚಿದಂಬರ ಕಾಕತ್ಕರ್
ಮಂಗಳೂರು
ಇದು ಉತ್ಥಾನ ಮಾಸ ಪತ್ರಿಕೆಯ ಎಪ್ರಿಲ್ 2022ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
ನಿಜಕ್ಕೂ ಅಪರೂಪದ ಲೇಖನ. ಅದೆಷ್ಟೋ ವಿವರಗಳನ್ನು ಎಷ್ಟೊಂದು ಆಸಕ್ತಿಕರವಾಗಿ ಹಿಡಿದಿಟ್ಟಿದ್ದೀರಿ!
ReplyDeleteನಿಮ್ಮ ಅಗಾಧ ಜ್ಞಾನಕ್ಕೆ ಹೋಲಿಸಿದರೆ ನೀವು ಬರೆದಿರುವುದು ತೀರಾ ಕಡಿಮೆ. ನೀವು ಇನ್ನಷ್ಟು ಬರೆಯಬೇಕು. ಹಾಗೆ ಬರೆಯುತ್ತಲೇ ಓದುಗರ ಅರಿವಿನ ಪರಿಧಿಯನ್ನು ಹೆಚ್ಚಿಸಬೇಕು.
Gananatha S.N (FB)
ಇದು ಬರೀ ಲೇಖನವಲ್ಲ. ತಾವು ಆ ಮಹಾನ್ ಚೇತನಕ್ಕೆ ಕೊಟ್ಟ ಗೌರವಪೂರ್ವಕ ನುಡಿಗಳೇ ಆಗಿ, ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದೀರಿ. ಇಂತಹ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದಿಕ್ಕಾಗಿ ನಿಮಗೆ ಧನ್ಯವಾದಗಳು ಸರ್.
ReplyDeleteShashidharan C.G (FB)