ನೀವು 60ರ ದಶಕದಲ್ಲಿ ಅಥವಾ ಮುಂಚೆ ಜನಿಸಿದವರಾಗಿದ್ದು ರೇಡಿಯೊ ಸಿಲೋನಿನ ಮಧ್ಯಾಹ್ನದ ಕನ್ನಡ ಹಾಡುಗಳನ್ನು ಕೇಳುವ ಅಭ್ಯಾಸ ಇದ್ದವರಾಗಿದ್ದರೆ ಈ ಶೀರ್ಷಿಕೆ ನೋಡಿದ ತಕ್ಷಣ ನಿಮ್ಮ ಮೈಗೆಲ್ಲ ಝುಂ ಅನ್ನಿಸುವುದರಲ್ಲಿ ಅನುಮಾನವಿಲ್ಲ. ಏಕೆಂದರೆ 70ರ ದಶಕದ ಆದಿ ಭಾಗದಲ್ಲಿ ಈ ‘ನವ್ಯಗೀತೆ’ ಆ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದ್ದುದನ್ನು ನೀವು ಕೇಳಿರುತ್ತೀರಿ. ಮೊದಲು ವಾರಕ್ಕೆ ಒಂದು ದಿನ 15 ನಿಮಿಷ ಕನ್ನಡ ಹಾಡುಗಳನ್ನು ಪ್ರಸಾರಿಸುತ್ತಿದ್ದ ರೇಡಿಯೊ ಸಿಲೋನ್ ಆಗಷ್ಟೇ ನಿತ್ಯವೂ ಅರ್ಧ ಗಂಟೆ ಸಮಯವನ್ನು ಕನ್ನಡಕ್ಕಾಗಿ ಮೀಸಲಿಡತೊಡಗಿತ್ತು. ಕನ್ನಡ ಚಿತ್ರಗೀತೆಗಳೊಂದಿಗೆ ಭಾರತದ ಯಾವ ಆಕಾಶವಾಣಿ ನಿಲಯವೂ ಪ್ರಸಾರ ಮಾಡದಿದ್ದ ತುಳು ಸಿನಿಮಾ ಹಾಡುಗಳನ್ನು ಮತ್ತು ಸಿನಿಮಾದ್ದಲ್ಲದ ಇಂತಹ ಕನ್ನಡ ‘ನವ್ಯಗೀತೆ’ಗಳನ್ನು ಅಲ್ಲಿಂದ ಮಾತ್ರ ಕೇಳಲು ಸಾಧ್ಯವಿದ್ದುದು.
50ರ ದಶಕದಲ್ಲಿ ಮುಖ್ಯವಾಗಿ ಮಹಾತ್ಮಾ ಪಿಕ್ಚರ್ಸ್ ನಿರ್ಮಾಣದ ಚಿತ್ರಗಳಲ್ಲಿ ಹಿಂದಿ ಧಾಟಿಯ ಹಾಡುಗಳೇ ಇರುವುದು ಸಾಮಾನ್ಯವಾಗಿತ್ತು. ಕ್ರಮೇಣ ನಮ್ಮ ಸಂಗೀತ ನಿರ್ದೇಶಕರು ಸ್ವಂತಿಕೆ ಮೆರೆಯತೊಡಗಿ ಈ ಪದ್ಧತಿ ಮರೆಯಾಗಿತ್ತು. ಆದರೆ 70ರ ದಶಕ ಆರಂಭವಾಗುತ್ತಿದ್ದಂತೆ ಕನ್ನಡದ ಮೇಲೆ ಹಿಂದಿ ಸಿನಿಮಾ ಹಾಡುಗಳು ಮತ್ತೆ ಪ್ರಭಾವ ಬೀರತೊಡಗಿದ್ದವು. ಕಸ್ತೂರಿ ನಿವಾಸದ ನೀ ಬಂದು ನಿಂತಾಗ ಹಾಡು ಇಶ್ಕ್ ಪರ್ ಜೋರ್ ನಹೀಂ ಚಿತ್ರದ ಯೇ ದಿಲ್ ದೀವಾನಾ ಹೈ ಹಾಡಿನಿಂದ, ಪ್ರತಿಧ್ವನಿ ಚಿತ್ರದ ಸರಿ ನಾ ಹೋಗಿ ಬರುವೆ ಹಾಡು ಆನ್ ಮಿಲೋ ಸಜನಾ ಚಿತ್ರದ ಅಚ್ಛಾ ತೊ ಹಮ್ ಚಲತೇ ಹೈಂ ಹಾಡಿನಿಂದ ಪ್ರೇರಿತವಾಗಿದ್ದುದು ಸ್ಪಷ್ಟವಾಗಿ ತಿಳಿಯುತ್ತದೆ. ಆಗ ಸೀಮಿತ ಸಂಖ್ಯೆಯಲ್ಲಿ ಕನ್ನಡ ಚಿತ್ರಗಳು ತಯಾರಾಗುತ್ತಿದ್ದು ದಕ್ಷಿಣ ಭಾರತದಲ್ಲಿ ಹೆಚ್.ಎಂ.ವಿ.ಗಾಗಿ ಗ್ರಾಮೊಫೋನ್ ರೆಕಾರ್ಡುಗಳ ತಯಾರಿಯ ಜವಾಬ್ದಾರಿ ಹೊತ್ತಿದ್ದ ಮದ್ರಾಸಿನ ಸರಸ್ವತಿ ಸ್ಟೋರ್ಸ್ ಕನ್ನಡ ವಿಭಾಗವನ್ನೇ ಮುಚ್ಚುವ ತಯಾರಿ ಮಾಡಿತ್ತು. ಆಗ ಅಲ್ಲಿ ಕನ್ನಡ ವಿಭಾಗದ ಜವಾಬ್ದಾರಿ ವಹಿಸಿಕೊಂಡ ಹೆಚ್.ಎಂ. ಮಹೇಶ್ ಅವರ ಮುತುವರ್ಜಿಯಿಂದ ಕನ್ನಡ ರೆಕಾರ್ಡುಗಳ ತಯಾರಿ ಮತ್ತು ಮಾರಾಟ ಅಭಿವೃದ್ಧಿಯಾಗಿ ಪರಿಸ್ಥಿತಿ ಸುಧಾರಿಸಿತು. ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ ಮುಂತಾದವರು ಹಾಡಿದ ಅನೇಕ ಭಕ್ತಿ ಗೀತೆಗಳ ಜೊತೆಗೆ ಹಿಂದಿ ಹಾಡುಗಳ ಜನಪ್ರಿಯತೆಯ ಲಾಭ ಪಡೆದು ಅವುಗಳ ಧಾಟಿಯಲ್ಲಿ ಆರ್.ಎನ್. ಜಯಗೋಪಾಲ್ ರಚಿಸಿ ರೆಕಾರ್ಡ್ ಆದ ಕೆಲವು ಹಾಡುಗಳು ಮಾರಾಟ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಮೈಗೆಲ್ಲ ಝುಂ ಅನ್ನಿಸುವಂತೆ ಮಾಡುವ ಅಂಥ ಕೆಲವು ‘ನವ್ಯಗೀತೆ’ಗಳನ್ನು ಈಗ ಆನಂದಿಸೋಣ. ಅವುಗಳನ್ನೊದಗಿಸಿದ ಶ್ರೀನಾಥ್ ಮಲ್ಯ ಅವರಿಗೆ ಕೃತಜ್ಞತೆಗಳನ್ನೂ ಸಲ್ಲಿಸೋಣ.
01. ದಮ್ ಹೊಡಿ ದಮ್
ಹರೇ ರಾಮ ಹರೇ ಕೃಷ್ಣ ಚಿತ್ರಕ್ಕಾಗಿ ಆರ್.ಡಿ. ಬರ್ಮನ್ ಸಂಯೋಜಿಸಿದ ದಮ್ ಮಾರೋ ದಮ್ ಧಾಟಿಯ ಈ ಹಾಡನ್ನು ಆಶಾ ಭೋಸ್ಲೆಗೆ ಸರಿಸಾಟಿಯಾಗಿ ಎಲ್.ಆರ್. ಈಶ್ವರಿ ಹಾಡಿದ್ದಾರೆ. ಮಾದಕ ವ್ಯಸನದ ಕೆಡುಕುಗಳ ಬಗ್ಗೆ ಸಂದೇಶ ಸಾರುವ ಚಿತ್ರ ಮಾಡಲು ಹೊರಟಿದ್ದ ದೇವಾನಂದ್ ಅವರಿಗೆ ನಶೆಯನ್ನು ವೈಭವೀಕರಿಸುವ ದಮ್ ಮಾರೋ ದಮ್ ಹಾಡು ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ಆರ್.ಡಿ. ಬರ್ಮನ್ ಒತ್ತಾಯಕ್ಕೆ ಮಣಿದ ದೇವ್ ಕೊನೆಗೆ ಒಂದು ಚರಣವನ್ನು ಮಾತ್ರ ಚಿತ್ರದಲ್ಲಿ ಬಳಸಿಕೊಂಡರು. ಆದರೆ ಚಿತ್ರದ ಹಾಡುಗಳ ಪೈಕಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದ್ದು ಇದೇ. ಹಿಂದಿಯಲ್ಲಿ ಮೊದಲು ಈ ಹಾಡು ಆಗ ಉಷಾ ಅಯ್ಯರ್ ಆಗಿದ್ದ ಉಷಾ ಉತ್ತುಪ್ ಧ್ವನಿಯಲ್ಲಿ ರೆಕಾರ್ಡ್ ಆಗಿತ್ತಂತೆ.
02. ಕನಸಲ್ಲಿ ನಿಮ್ಮನ್ನು
ದಮ್ ಹೊಡಿ ದಮ್ ಹಾಡು ಆಗ ಏರುತ್ತಿರುವ ಸೂರ್ಯನಾಗಿದ್ದ ಆರ್.ಡಿ. ಬರ್ಮನ್ ಧಾಟಿಯನ್ನಾಧರಿಸಿದ್ದರೆ ಈ ಹಾಡು ಶಂಕರ್ ಜೈಕಿಶನ್ ಎಂಬ ಅಸ್ತಮಿಸುತ್ತಿದ್ದ ಸೂರ್ಯನ ಜಿಂದಗಿ ಎಕ್ ಸಫರ್ ಹೈ ಸುಹಾನಾ ಹಾಡಿನ ಅನುಕರಣೆ. ಇದನ್ನೂ ಎಲ್.ಆರ್. ಈಶ್ವರಿಯೇ ಹಾಡಿದ್ದಾರೆ. ಕಿಶೋರ್ ಕುಮಾರ್, ಆಶಾ ಭೋಸ್ಲೆ ಮತ್ತು ರಫಿ ಧ್ವನಿಯ ಮೂರು ಅವತರಣಿಕೆಗಳಿದ್ದ ಅಂದಾಜ್ ಚಿತ್ರದ ಈ ಹಾಡು ಆ ಸಲ ವಾರ್ಷಿಕ ಬಿನಾಕಾ ಗೀತ್ ಮಾಲಾದಲ್ಲಿ ಪ್ರಥಮ ಸ್ಥಾನವನ್ನಲಂಕರಿಸಿತ್ತು. ಕನ್ನಡ ಹಾಡಿನಲ್ಲಿ ಕಿಶೋರ್ ಮತ್ತು ಆಶಾ ಎರಡೂ ವರ್ಷನ್‌ಗಳ ಉತ್ತಮ ಅಂಶಗಳನ್ನು ಅಳವಡಿಸಿದ್ದಷ್ಟೇ ಅಲ್ಲದೆ ಹಿನ್ನೆಲೆ ವಾದ್ಯ ಸಂಗೀತದಲ್ಲಿ ಆಕರ್ಷಕವಾದ ಹೆಚ್ಚುವರಿ ಪಲುಕುಗಳನ್ನೂ ಸೇರಿಸಲಾಗಿದೆ.
03. ಹರೆಯ ಅದು ಬಂದಂಥ ಸಮಯ
ಯುವ ಪ್ರೇಮಿಗಳ ಕಥೆ ಬಾಬ್ಬಿಯ ಹಂ ತುಮ್ ಎಕ್ ಕಮರೇ ಮೆಂ ಬಂದ್ ಹೋಂ ಧಾಟಿಯ ಈ ಗೀತೆಯನ್ನು ಬಿ.ಕೆ. ಸುಮಿತ್ರಾ ಮತ್ತು ಸಿದ್ಧಾರ್ಥ್ ಬಲು ಸೊಗಸಾಗಿ ಹಾಡಿದ್ದಾರೆ. ಶಂಕರ್ ಮತ್ತು ರಾಜ್‌ಕಪೂರ್ ಅವರಿಗೆ ಕೊನೆ ಕೊನೆಗೆ ಅಷ್ಟೇಕೋ ಹೊಂದಿ ಬರುತ್ತಿರಲಿಲ್ಲ. ಜೈಕಿಶನ್ ಆಗಷ್ಟೇ ತೀರಿ ಹೋಗಿದ್ದರು. ಹೀಗಾಗಿ ಬಾಬ್ಬಿ ಚಿತ್ರ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಪಾಲಾಯಿತು. ಅವರು ಒಪ್ಪದೆ ಇದ್ದರೆ ರಾಜ್ ಕಪೂರ್ ಅವರ ಎರಡನೇ ಆಯ್ಕೆ ಕಲ್ಯಾಣ್‌ಜೀ ಆನಂದ್‌ಜೀ ಆಗಿದ್ದರಂತೆ.
04. ಚಂದಿರ ವದನೆ ಸುಂದರ ನಯನೆ
ಮೇರಾ ನಾಮ್ ಜೋಕರ್ ಚಿತ್ರದ ಕಹತಾ ಹೈ ಜೋಕರ್ ಧಾಟಿಯ ಚಂದಿರ ವದನೆ ಸುಂದರ ನಯನೆ ಎಂಬ ಈ ಹಾಡನ್ನೂ ನಾನು 50 ವರ್ಷ ಹಿಂದೆ ರೇಡಿಯೊ ಸಿಲೋನಿನಲ್ಲಿ ಮಾತ್ರ ಒಂದೆರಡು ಸಾರಿ ಕೇಳಿದ್ದೆ. ಇದರ ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಕೆಲವು ಪದಗಳೂ ಇವೆ. ಹಾಡಿದವರು ಅಂಬರ್ ಕುಮಾರ್ ಎಂಬ ಮುಂಬಯಿಯ ಹಾಡುಗಾರ. ಇವರು HMVಗಾಗಿ ಕೆಲವು ಅಧಿಕೃತ ‘ವರ್ಷನ್’ ಹಾಡುಗಳನ್ನು ಹಾಡಿದ ವಿವರ ಮುಂದೆ ಇದೆ. ಕನ್ನಡದ ಕಲ್ಪವೃಕ್ಷ ಚಿತ್ರದ ಜಯತೇ ಜಯತೇ ಹಾಡಲ್ಲಿ ಮನ್ನಾಡೇ ಅವರೊಂದಿಗೆ ಇವರ ಧ್ವನಿಯೂ ಇದೆ. ಮೇರಾ ನಾಮ್ ಜೋಕರ್ ಚಿತ್ರ ಮತ್ತು ಅದರ ಹಾಡುಗಳಿಗಾಗಿ ನಾವು ಸುಮಾರು ಏಳು ವರ್ಷ ಪ್ರತೀಕ್ಷೆ ಮಾಡಬೇಕಾಗಿ ಬಂದಿತ್ತು. ಸಂಗಂ ಚಿತ್ರದ ಯಶಸ್ಸಿನ ನಂತರ 1964ರಲ್ಲೇ ಮೇರಾ ನಾಮ್ ಜೋಕರ್ ಚಿತ್ರದ ಘೋಷಣೆಯಾಗಿತ್ತು. ಮುಂದಿನ ವರ್ಷಗಳಲ್ಲಿ ಮುಕೇಶ್ ಹಾಡಿದ ಯಾವ ಹೊಸ ಹಾಡು ರೇಡಿಯೋದಲ್ಲಿ ಕೇಳಿಸಿದರೂ ಜೋಕರ್ ಚಿತ್ರದ್ದಿರಬಹುದೇ ಎಂದು ಕಿವಿ ಅಗಲ ಮಾಡಿ ಆಲಿಸುವುದಿತ್ತು. ರಾಜ್ ಚಿತ್ರದ ದಿಲ್ ಸಂಭಾಲೇ ಸಂಭಲ್‌ತಾ ನಹೀಂ ರಾಜ್ ಕೋ ಎಂಬ ಹಾಡು ಕಲ್ಯಾಣ್‌ಜೀ ಆನಂದಜೀ ಅವರದಾದರೂ ಶಂಕರ್ ಜೈಕಿಶನ್ ಶೈಲಿಯಲ್ಲಿ ಇದ್ದುದರಿಂದ ಅದು ಜೋಕರ್ ಚಿತ್ರದ್ದೇ ಇರಬಹುದು ಎಂದು ಊಹಿಸಿ ನಾನು ಬೇಸ್ತು ಬಿದ್ದಿದ್ದೆ. ಕೊನೆಗೆ 1971ರಲ್ಲಿ ಜೋಕರ್ ಚಿತ್ರದ ಹಾಡುಗಳು ಬಿಡುಗಡೆ ಆದಾಗ ನಾನು ಮೊದಲು ಕೇಳಿದ್ದು ಈ ಕಹತಾ ಹೈ ಜೋಕರ್ ಹಾಡೇ.
ಈ ಎಲ್ಲ ಹಾಡುಗಳನ್ನು ಹೆಚ್.ಎಂ.ವಿ ಸಂಸ್ಥೆ ಅಧಿಕೃತವಾಗಿ ಬಿಡುಗಡೆ ಮಾಡಿರುವುದು ಗಮನಿಸಬೇಕಾದ ಅಂಶ. ಕೇಳುಗರನ್ನು ಆಕರ್ಷಿಸಲು ಹೆಚ್.ಎಂ.ವಿ ಈ ಮೊದಲೂ ಇಂಥ ತಂತ್ರಗಳನ್ನು ಅನುಸರಿಸಿದ್ದುಂಟು. ಇನೋಕ್ ಡೇನಿಯಲ್ಸ್ ಅವರು ಪಿಯಾನೋ ಎಕಾರ್ಡಿಯನ್, ಮಾಸ್ಟರ್ ಇಬ್ರಾಹಿಂ ಅವರು ಕ್ಲಾರಿನೆಟ್, ಹಜಾರಾ ಸಿಂಗ್ ಅವರು ಎಲೆಕ್ಟ್ರಿಕ್ ಗಿಟಾರ್ ಇತ್ಯಾದಿಗಳಲ್ಲಿ ನುಡಿಸಿದ ಪ್ರಸಿದ್ಧ ಹಿಂದಿ ಹಾಡುಗಳನ್ನು ಅವರು ತಮ್ಮ ಸ್ಟುಡಿಯೋದ ವಾದ್ಯವೃಂದದೊಡನೆ ಧ್ವನಿಮುದ್ರಿಸಿ ಲಾಗಾಯ್ತಿನಿಂದಲೂ ರೆಕಾರ್ಡುಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಇವುಗಳನ್ನು ಬಳಸಿ ರೇಡಿಯೋ ಸಿಲೋನ್ ಪ್ರತಿನಿತ್ಯ ಬೆಳಗ್ಗೆ 7 ರಿಂದ 7-15ರ ವರೆಗೆ ವಾದ್ಯಸಂಗೀತ್ ಎಂಬ ಕಾರ್ಯಕ್ರಮವನ್ನು ನಿಯಮಿತವಾಗಿ ಪ್ರಸಾರ ಮಾಡುತ್ತಿತ್ತು. ಅಪರೂಪಕ್ಕೆ ಪ್ರಸಿದ್ಧ ಹಿಂದಿ ಹಾಡುಗಳ ಧಾಟಿಯಲ್ಲಿ ಕನ್ನಡ ಹಾಡುಗಳನ್ನು ಹಾಡಿಸಿ ರೆಕಾರ್ಡ್ ತಯಾರಿಸಿದ್ದೂ ಉಂಟು.
05. ನಿನ್ನನೆ ನೆನೆಯುತ ರಾತ್ರಿಯ ಕಳೆದೆ
ರೋಶನ್ ಸಂಗೀತವಿದ್ದ ಅಜೀ ಬಸ್ ಶುಕ್ರಿಯಾ ಚಿತ್ರದ ಸಾರಿ ಸಾರಿ ರಾತ್ ತೇರಿ ಯಾದ್ ಸತಾಯೆ ಧಾಟಿಯಲ್ಲಿ ಇದನ್ನು ಅಮೀರ್ ಬಾಯಿ ಕರ್ನಾಟಕಿ ಹಾಡಿದ್ದರು
06. ವಾರಿ ನೋಟ ನೋಡಿ
ಓ.ಪಿ. ನಯ್ಯರ್ ಸಂಗೀತದ ಫಾಗುನ್ ಹಾಡು ಎಕ್ ಪರ್‌ದೇಸಿ ಮೇರಾ ದಿಲ್ ಲೇ ಗಯಾ ಧಾಟಿಯಲ್ಲಿ ಇದನ್ನೂ ಅಮೀರ್ ಬಾಯಿ ಕರ್ನಾಟಕಿ ಹಾಡಿದ್ದರು.
07. ತಲತ್ ಧ್ವನಿಯಲ್ಲಿ ಚಲ್ ಉಡ್ ಜಾರೇ ಪಂಛಿ
ಹೆಚ್.ಎಂ.ವಿ ಇನ್ನೊಂದು ಪ್ರಯೋಗ ಮಾಡಿ ಭಾಭಿ ಚಿತ್ರಕ್ಕಾಗಿ ರಫಿ ಹಾಡಿದ ಚಲ್ ಉಡ್ ಜಾರೇ ಪಂಛಿ ಹಾಡನ್ನು ತಲತ್ ಮಹಮೂದ್ ಅವರಿಂದಲೂ ಹಾಡಿಸಿ ಧ್ವನಿಮುದ್ರಿಕೆ ಬಿಡುಗಡೆ ಮಾಡಿತ್ತು.
ಹಮ್ ಕಾಲೇ ಹೈಂ ತೊ ಕ್ಯಾ ಹುವಾ ದಿಲ್‌ವಾಲೆ ಹೈ ಧಾಟಿಯಲ್ಲಿ The she I love is the beautiful beautiful dream comes true ಹಾಗೂ ಬಹಾರೋ ಫೂಲ್ ಬರ್‌ಸಾವೊ ಧಾಟಿಯಲ್ಲಿ Although we hail from different lands ಎಂದು ರಫಿಯೇ ಹಾಡಿದ ಇಂಗ್ಲಿಷ್ ಧ್ವನಿಮುದ್ರಿಕೆಗಳು ತಯಾರಾದದ್ದು ಇನ್ನೂ ಕೆಲವು ಉದಾಹರಣೆಗಳು.
ಅದುವರೆಗೆ ಏಕಸ್ವಾಮ್ಯ ಹೊಂದಿದ್ದ ಹೆಚ್.ಎಂ.ವಿ.ಗೆ ಪ್ರತಿಸ್ಪರ್ಧಿಯಾಗಿ 70ರ ದಶಕದಲ್ಲಿ ಪೊಲಿಡೋರ್ ಎಂಬ ರೆಕಾರ್ಡ್ ತಯಾರಿಸುವ ಸಂಸ್ಥೆ ಹುಟ್ಟಿಕೊಂಡಿತು. ಸಚ್ಚಾ ಝೂಟಾ, ಗ್ಯಾಂಬ್ಲರ್, ಜೋನಿ ಮೇರಾ ನಾಮ್, ತೇರೇ ಮೇರೆ ಸಪ್‌ನೇ ಮುಂತಾದ ಚಿತ್ರಗಳ ರೆಕಾರ್ಡುಗಳನ್ನು ಆ ಕಂಪೆನಿ ತಯಾರಿಸಿತು. ಸೋಲೊಪ್ಪಿಕೊಳ್ಳದ ಹೆಚ್.ಎಂ.ವಿ ಕಾಪಿ ರೈಟ್ ಕಾಯಿದೆಯ ಲೂಪ್ ಹೋಲ್ ಬಳಸಿ ಆ ಚಿತ್ರಗಳ ಹಾಡುಗಳನ್ನು ಬೇರೆ ಕಲಾವಿದರಿಂದ ಹಾಡಿಸಿ ಬಿಡುಗಡೆ ಮಾಡಿತು. ಆಕಾಶವಾಣಿಗೆ ಹೆಚ್.ಎಂ.ವಿ.ಯೇ ಹಾಡುಗಳನ್ನು ಒದಗಿಸುತ್ತಿದ್ದುದರಿಂದ ಈ ನಕಲಿ ಹಾಡುಗಳೇ ಅಲ್ಲಿಂದ ಪ್ರಸಾರವಾಗತೊಡಗಿದವು. ಕೇಳುಗರಿಗೆ ಈ ವಿಷಯ ತಿಳಿದು ಪ್ರತಿರೋಧ ವ್ಯಕ್ತವಾದಾಗ ಕಂಪನಿ ಈ ರೆಕಾರ್ಡುಗಳನ್ನು ಹಿಂತೆಗೆದುಕೊಂಡಿತು. ಅಂಥ ಎರಡು ನಕಲಿ ಹಾಡುಗಳು ಇಲ್ಲಿವೆ.
08. ಓ ಮೇರೆ ರಾಜಾ
ಜಾನಿ ಮೇರಾ ನಾಮ್ ಚಿತ್ರದಲ್ಲಿ ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಹಾಡಿದ್ದ ಈ ಹಾಡನ್ನು ಹೆಚ್.ಎಂ.ವಿ ಸಂಸ್ಥೆ ಅಂಬರ್ ಕುಮಾರ್ ಮತ್ತು ಕೃಷ್ಣಾ ಕಲ್ಲೆ ಧ್ವನಿಯಲ್ಲಿ ತನ್ನ ಸ್ಟುಡಿಯೊದಲ್ಲಿ ತನ್ನದೇ ವಾದ್ಯವೃಂದ ಬಳಸಿ ಧ್ವನಿಮುದ್ರಿಸಿತು.
09. ಮೈನೆ ಕಸಮ್ ಲೀ
ತೇರೇ ಮೇರೇ ಸಪ್‌ನೆ ಚಿತ್ರದಲ್ಲಿ ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಹಾಡಿದ್ದ ಈ ಹಾಡನ್ನು ಹೆಚ್.ಎಂ.ವಿ.ಗಾಗಿಯೂ ಕಿಶೋರ್ ಕುಮಾರ್ ಅವರೇ ಹಾಡಿದರು. ಆದರೆ ಜೊತೆಗೆ ಲತಾ ಬದಲಿಗೆ ಸುಲಕ್ಷಣಾ ಪಂಡಿತ್ ಇದ್ದರು.
ಆ ಮೇಲೆ ಹೆಚ್.ಎಂ.ವಿ.ಯ ಈ ಉಪಾಯವನ್ನು ಟಿ.ಸೀರೀಸ್ ಸಂಸ್ಥೆ ಅದರ ವಿರುದ್ಧವೇ ಬಳಸಿ ಪುಂಖಾನುಪುಂಖವಾಗಿ ಕಿಶೋರ್ ಮತ್ತು ರಫಿಯ ಕವರ್ ವರ್ಷನ್ ಹಾಡುಗಳನ್ನು ಹರಿಯ ಬಿಟ್ಟಿತು. ಕುಮಾರ್ ಸಾನು, ಸೋನು ನಿಗಮ್ ಮುಂತಾದವರು ಮುಂಚೂಣಿಗೆ ಬರಲು ಈ ಕವರ್ ವರ್ಷನ್‌ಗಳು ಮೆಟ್ಟುಗಲ್ಲಾದವು.
ಈ ಪಟ್ಟಿಯಿಂದ ಹಾಡು ಆರಿಸಿ ಆಲಿಸಿ.
ಸರ್, 70 ರ ದಶಕದಲ್ಲಿ ಪ್ರಥಮ ಪ್ರೇಮದ ಚುಂಬನದಂತೆ ಸವಿದ ಗೀತೆಗಳನ್ನು ಈಗ 57ರ ಹರೆಯದಲ್ಲಿ ಕನ್ನಡ ಭಾಷೆಯಲ್ಲಿ ಅದೇ ಗೀತೆಗಳನ್ನು ಕೇಳುವಾಗ ಏನೋ ಹೊಸದಾದ ಅನುಭವ. ಈ ರೀತಿಯಲ್ಲಿ ಆ ಗೀತೆಗಳು ಡಬ್ ಆಗಿವೆ ಅನ್ನುವುದು ತಿಳಿದಿರಲಿಲ್ಲ. ಹೊಸ ಹುರುಪನ್ನು ಮರಳಿ ನೀಡಿದ ನಿಮಗೆ ನಾ ಶರಣು 😊🙏
ReplyDeleteಆನಂದಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ನಿಮಗೆ ವಂದನೆಗಳು.
DeleteYou deserve a Doctorate for the kind of work you are doing (in the real sense) Thanks for the information
ReplyDeleteThanks. ನಿಮ್ಮೆಲ್ಲರ ಮೆಚ್ಚುಗೆಯೇ ನನಗೆ ಡಾಕ್ಟರೇಟ್.
Deleteಮಾಹಿತಿಗಳ ಕಣಜ ಸಾರ್, ನೀವು. ಅದ್ಭುತ ರೋಮಾಂಚನ ಕೊಡುವ ಅನುಭವ..
ReplyDeleteವಾರೆ ನೋಟ ಹಾಡು ಕೇಳಿದಾಗ, ನಮ್ಮ ಕೆನರಾ ಶಾಲೆಯಲ್ಲಿ ಕನ್ನಡ ಕಲಿಸುತ್ತಿದ್ದ ಅಧ್ಯಾಪಕ ಶ್ರೀ ಚಂದ್ರಶೇಖರ್ ಕೇದಿಲಾಯ ರವರ ಅದೇ ಧಾಟಿಯಲ್ಲಿ ಬೇಂದ್ರೆ ಯವರ ಇನ್ನೂ ಯಾಕಾ ಬರಲಿಲ್ಲವಾ, ಹುಬಳ್ಳಿ ಯಾವ್ವ ಹಾಡುತ್ತಿದ್ದ ಹಾಡು ನೆನಪಾಯಿತು,ಸಾರ್. ತುಂಬಾ ತುಂಬಾ ಧನ್ಯವಾದಗಳು.
ReplyDeleteಬಹಳ ಸಮಯದ ಬಳಿಕ ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ನಿಮಗೂ ಮೈಗೆಲ್ಲ ಝುಂ ಅನಿಸಿದ್ದು ಮತ್ತೂ ಸಂತೋಷ. ಕೆದಿಲಾಯರು ಕೆನರಾ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು ಎಂದು ಗೊತ್ತಿರಲಿಲ್ಲ. ಎಕ್ ಪರದೇಸಿ ಮೇರಾ ದಿಲ್ ಲೇ ಗಯಾದಿಂದ ಇನ್ನೂ ಯಾಕ ಬರಲಿಲ್ಲ ಹುಬ್ಬಳ್ಳಿಯೋ ಅಥವಾ ತಿರುವು ಮುರುವೋ ಎಂಬ ಅನುಮಾನ ನನಗಿದೆ.
Delete