
ಗೆಳೆಯನೆ ಪೇಳುವೆ ಕೇಳಣ್ಣ

ಈ ಕಥನ ಕವನದಲ್ಲಿ ಬಾಲಕನೊಬ್ಬನು ತಾನು ಕನಸಿನಲ್ಲಿ ಕೈಗೊಂಡ ಬೊಂಬಾಯಿ ರೈಲುಯಾನವನ್ನು ಗೆಳೆಯನೆದುರು ವರ್ಣಿಸುತ್ತಾನೆ. ಆತ ಅಪ್ಪನ ಕೋಟಿನಿಂದ ಪಚ್ಚೆಯ ನೋಟು ತೆಗೆದುಕೊಂಡು ಹೊರಡುವುದು ಆದರ್ಶ ನಡವಳಿಕೆ ಅಲ್ಲದಿದ್ದರೂ ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ರೀತಿ ಕೈಗೆ ಸಿಕ್ಕ ದುಡ್ಡು ತೆಗೆದುಕೊಂಡು ಬೊಂಬಾಯಿಗೆ ಓಡಿ ಹೋಗುವುದು ಸಾಮಾನ್ಯವಾಗಿದ್ದುದನ್ನು ಕವಿ ಸೂಚ್ಯವಾಗಿ ಇಲ್ಲಿ ನಿರೂಪಿಸಿರಬಹುದು. ಕೇರಳದ ಕಡೆಗೆ ಪ್ರಯಾಣಿಸಬೇಕಾದರೆ ದೂರದ ಮಂಗಳೂರಿಗೆ ಮತ್ತು ಉತ್ತರದ ಕಡೆಗೆ ಹೋಗಬೇಕಾದರೆ ಘಟ್ಟ ಹತ್ತಿ ಕಡೂರಿಗೆ ಹೋಗಿ ರೈಲು ಹಿಡಿಯಬೇಕಾಗಿದ್ದರೂ ಆಕಾಲದಲ್ಲೂ ರೈಲು ಪ್ರಯಾಣ ಮಾಡುವವರು ಸಾಕಷ್ಟು ಮಂದಿ ನಮ್ಮೂರಲ್ಲಿ ಇದ್ದರು. ನಮ್ಮ ಚಿಕ್ಕಪ್ಪನಿಗೂ ರೈಲಲ್ಲಿ ದೂರ ಪ್ರಯಾಣ ಮಾಡುವ ಹವ್ಯಾಸವಿತ್ತು. ಅನೇಕ ಸಲ ನಮ್ಮ ಹಿರಿಯಣ್ಣನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಅವರು ಉಪಯೋಗಿಸುತ್ತಿದ್ದ ತಿರುಗಣೆಯ ರೈಲು ಚೊಂಬು ಮತ್ತು ಎಂಜಿನಿನ ಇದ್ದಲು ಕಣ್ಣಲ್ಲಿ ಬೀಳದಂತೆ ರಕ್ಷಣೆಗಾಗಿ ಉಪಯೋಗಿಸುತ್ತಿದ್ದ ಕಣ್ಣನ್ನು ಪೂರ್ತಿ ಮುಚ್ಚುತ್ತಿದ್ದ ವಿಶೇಷ ಕಪ್ಪು ಕನ್ನಡಕ ಬಹಳ ಕಾಲ ನಮ್ಮ ಮನೆಯಲ್ಲಿತ್ತು. ಈ ಕವನದ ಕಥಾನಾಯಕನಾದ ಬಾಲಕನೂ ಕಡೂರಿಗೆ ಹೋಗಿ ರೈಲು ಹಿಡಿದಿರಬಹುದೇನೋ. ಅಥವಾ ಆತನ ಕನಸಿನಲ್ಲಿ ಉಜಿರೆ, ಮುಂಡಾಜೆ ಮೂಲಕ ಸಾಗುವ ರೈಲು ಆಗಲೇ ಇದ್ದಿರಬಹುದು. ಬೊಂಬಾಯಿಗೆ ಟಿಕೇಟು ಪಡೆದುಕೊಂಡು ರೈಲಲ್ಲಿ ಕುಳಿತೊಡನೆ ಅಪ್ಪನ ಜೇಬಿನಿಂದ ದುಡ್ಡು ತೆಗೆದುಕೊಂಡಿದ್ದರೂ ಆತ ಅಮ್ಮನನ್ನು ಮನದಲ್ಲಿ ನೆನೆಯುವುದನ್ನು ಗಮನಿಸಬೇಕು. ಅಪ್ಪನ ಜೇಬಿನಲ್ಲಿ ದುಡ್ಡು ಇರುವ ವಿಷಯವನ್ನು ಅಮ್ಮನೇ ಆತನಿಗೆ ಹೇಳಿರಬಹುದೇ ಎಂಬ ಸಂಶಯ ನನ್ನನ್ನು ಕಾಡುತ್ತಿದೆ! ಕೊಂಚ ಹೊತ್ತು ಹೊರಗಿನ ಸೂರ್ಯೋದಯ, ಹಿಂದಕ್ಕೆ ಸಾಗುವ ಮರಗಿಡ ಇತ್ಯಾದಿಗಳನ್ನು ನೋಡಿದ ಬಾಲಕನ ದೃಷ್ಟಿ ತೂಗುತ್ತಿದ್ದ ಸರಪಳಿಯ ಕಡೆ ಹೊರಳುವುದು ಮಕ್ಕಳಲ್ಲಿರುವ ಕುತೂಹಲ ಪ್ರವೃತ್ತಿಯ ದ್ಯೋತಕ. ಎಳೆಯಿರಿ ಸರಪಳಿ ಎಂದಿದ್ದುದನ್ನು ಓದಿ ಪೂರ್ವಾಪರ ಯೋಚಿಸದೆ ಕಾರ್ಯ ಪ್ರವೃತ್ತನಾದದ್ದು ಬಾಲ್ಯ ಸಹಜವಾದ ಅಪಕ್ವತೆಯ ಪ್ರತೀಕ. ರೈಲು ಒಮ್ಮೆಗೇ ನಿಂತಾಗ ಆತನಿಗೆ ಮೋಜೂ ಅನ್ನಿಸುತ್ತದೆ ಕುಳಿತಿದ್ದವರೆಲ್ಲರೂ ಆತನನ್ನೇ ನೋಡಿದಾಗ ಹೆದರಿಕೆಯೂ ಆಗುತ್ತದೆ. ಮುಂದೆ ಆತನನ್ನು ವಿಚಾರಿಸಲು ಬರುವ ವ್ಯಕ್ತಿಯನ್ನು ವರ್ಣಿಸಲು ಕವಿ ಸಂದರ್ಭಕ್ಕೆ ಬಲು ಸೂಕ್ತವಾದ ಟೊಣಪ್ಪ ಎಂಬ ಪದ ಬಳಸಿದ್ದಾರೆ. ಆ ಪದ ಕೇಳಿದೊಡನೆ ಗಂಟು ಮೋರೆಯ ಢೃಢಕಾಯನಾದ ಕಠೋರ ವ್ಯಕ್ತಿಯೊಬ್ಬ ತಾನೆ ತಾನಾಗಿ ಕಣ್ಣೆದುರು ಬರುತ್ತಾನೆ. ಆತನನ್ನು ಕಂಡೊಡನೆ ಬಾಲಕನ ಕನಸು ಭಗ್ನವಾಗಿ ಭಯಗೊಂಡ ಆತನನ್ನು ಅಮ್ಮ ಸಮಾಧಾನಗೊಳಿಸುತ್ತಾಳೆ.

70ರ ದಶಕದಲ್ಲಿ ನಮ್ಮ ಮನೆಯ ಮಕ್ಕಳ ಕೋರಲ್ ಗ್ರೂಪ್ ಹಾಡಿದ್ದ ಈ ಹಾಡಿನ ಧ್ವನಿಮುದ್ರಣವೊಂದು ನನ್ನಲ್ಲಿತ್ತು. ಅದಕ್ಕೆ ಒಂದಿಷ್ಟು ಮಸಾಲೆ ಸೇರಿಸಿ ಬೆಂಗಳೂರು-ಮಂಗಳೂರು ಹಗಲು ರೈಲುಪ್ರಯಾಣದ ಸುಂದರ ಪ್ರಕೃತಿ ದೃಶ್ಯಗಳ ವೀಡಿಯೊ ಒಂದರೊಡನೆ ಸಂಯೋಜಿಸಿದ ಪ್ರಸ್ತುತಿಯೊಂದು ಇಲ್ಲಿದೆ. ಬರೇ audio ಬೇಕಿದ್ದರೂ ಇದೆ. ಸಾಧ್ಯವಾದರೆ headphone ಬಳಸಿ.

70ರ ದಶಕದಲ್ಲಿ ನಮ್ಮ ಮನೆಯ ಮಕ್ಕಳ ಕೋರಲ್ ಗ್ರೂಪ್ ಹಾಡಿದ್ದ ಈ ಹಾಡಿನ ಧ್ವನಿಮುದ್ರಣವೊಂದು ನನ್ನಲ್ಲಿತ್ತು. ಅದಕ್ಕೆ ಒಂದಿಷ್ಟು ಮಸಾಲೆ ಸೇರಿಸಿ ಬೆಂಗಳೂರು-ಮಂಗಳೂರು ಹಗಲು ರೈಲುಪ್ರಯಾಣದ ಸುಂದರ ಪ್ರಕೃತಿ ದೃಶ್ಯಗಳ ವೀಡಿಯೊ ಒಂದರೊಡನೆ ಸಂಯೋಜಿಸಿದ ಪ್ರಸ್ತುತಿಯೊಂದು ಇಲ್ಲಿದೆ. ಬರೇ audio ಬೇಕಿದ್ದರೂ ಇದೆ. ಸಾಧ್ಯವಾದರೆ headphone ಬಳಸಿ.
ಗೆಳೆಯನೆ ಪೇಳುವೆ ಕೇಳಣ್ಣ
ರೈಲು ಪ್ರವಾಸದ ಕನಸನ್ನ
ನಿನ್ನೆಯ ರಾತ್ರಿಯ ಕನಸಿನಲಿ
ಕುಳಿತೆನು ನಾ ರೈಲ್ ಬಂಡಿಯಲಿ
ತೂಗುತಲಿತ್ತು ಅಪ್ಪನ ಕೋಟು
ಅದರಿಂ ತೆಗೆದೆನು ಪಚ್ಚೆಯ ನೋಟು
ಇನ್ನೂ ಸುತ್ತಲೂ ಕತ್ತಲೆ ಇತ್ತು
ಮನದಲಿ ಹೆದರಿಕೆ ಆಗುತಲಿತ್ತು
ನಡೆದೆನು ರೈಲಿನ ಸ್ಟೇಶನಿಗೆ
ಪಡೆದೆನು ಟಿಕೆಟು ಬೊಂಬಯಿಗೆ
ಕುಳಿತೆನು ಹರುಷದಿ ರೈಲೊಳಗೆ
ಅಮ್ಮನ ನೆನೆದೆನು ಮನದೊಳಗೆ
ಬಂಡಿಯು ಮುಂದಕೆ ಓಡುತಲಿತ್ತು
ಹಿಂದಕೆ ಗಿಡಮರ ಸಾಗುತಲಿತ್ತು
ಸೂರ್ಯನು ಬಾನಿಗೆ ಏರುತಲಿದ್ದ
ಬೆಳಕಿನ ಚೆಲುವನು ಬೀರುತಲಿದ್ದ
ನೋಡಿದೆ ಸುತ್ತಲು ಬೇಸರವಾಯ್ತು
ಮೇಲ್ಗಡೆ ಒಂದು ಸರಪಳಿ ಇತ್ತು
ಅಕ್ಷರ ಏನೋ ಬರೆದಿತ್ತು
ಎಳೆಯಿರಿ ಸರಪಳಿ ಎಂದಿತ್ತು
ಕೂತಲ್ಲಿಂದ ಬೇಗನೆ ಎದ್ದೆ
ತೂಗುವ ಸರಪಳಿಯನು ನಾನೆಳೆದೆ
ಕುಳಿತಿದ್ದ ಜನ ನನ್ನನೆ ನೋಡಲು
ಬಂಡಿಯು ಒಂದೇ ಬಾರಿಗೆ ನಿಲ್ಲಲು
ಆಗಿನ ಮೋಜನು ಕೇಳಣ್ಣ
ಬಲು ಹೆದರಿಕೆ ತಾನಾಯ್ತಣ್ಣ
ಟೊಣಪ್ಪನೊಬ್ಬ ನನ್ನೆಡೆ ಬಂದ
ಸರಪಳಿ ಏತಕೆ ಎಳೆದೆ ಎಂದ
ಅವನ ಕರಿಉಡುಪನು ನಾ ನೋಡಿ
ಅಮ್ಮ ಎಂದೆನು ಭಯದಿಂ ಕೂಡಿ
ಏನೋ ಎಂದಳು ನನ್ನಮ್ಮ
ತಟ್ಟುತ ನನ್ನ ತಲೆಯನ್ನ
ಆಗಲೆ ಕೂಗಿತು ಕೊಕ್ಕೊ ಕೋಳಿ
ಕಣ್ಣುಜ್ಜುತ ನಾ ನೋಡಿದೆ ಪಿಳಿಪಿಳಿ
ಅಮ್ಮನ ಕೇಳಿದೆ ಎಲ್ಲಿದೆ ಸರಪಳಿ
ಅಮ್ಮನು ನುಡಿದಳು ಭಯವಾಯ್ತೇ ಗಿಳಿ
ಅಹುದಹುದಮ್ಮ ಭಯವಾಯ್ತು
ರೈಲುಪ್ರವಾಸದ ಕನಸಾಯ್ತು
No comments:
Post a Comment
Your valuable comments/suggestions are welcome