ನೆನೆಸಿಕೊಂಡಾಗ ಝುಮ್ಮನೆ ಇರುವ ಎಷ್ಟೋ ಸಂಗತಿಗಳು ನಿಜವಾಗಿ ದೊರಕಿದಾಗ ಇಷ್ಟೇನೆ ಅನ್ನಿಸುವುದಿದೆ. ಅನೇಕ ಸಲ ವಾಸ್ತವಕ್ಕಿಂತ ಕಲ್ಪನೆಯೇ ರಮ್ಯವಾಗಿರುವುದುಂಟು. ಆದರೆ ನೆನೆಸಿದೊಡನೆ ನಾಲಗೆಯಲ್ಲಿ ನೀರೂರಿಸಿ ಕಮ್ಮಗೆ ಕುಣಿಯುವಂತೆ ಮಾಡುವ ಶ್ರಾದ್ಧದೂಟ ಮಾತ್ರ ಕಲ್ಪನೆಗಿಂತಲೂ ಹೆಚ್ಚು ರುಚಿಕರವಾಗಿರುವುದು ಅದನ್ನು ಸವಿದವರೆಲ್ಲರೂ ಬಲ್ಲ ವಿಚಾರ. ಶ್ರಾದ್ಧದೂಟದ ಸವಿಯನ್ನು ಕಲ್ಪಿಸುತ್ತಾ ಬಣ್ಣಿಸುವ ಸತ್ಯ ಹರಿಶ್ಚಂದ್ರ ಚಿತ್ರದ ಶ್ರಾದ್ಧದೂಟ ಸುಮ್ಮನೆ ಹಾಡು ಕೂಡ ಆ ಕಲ್ಪನೆಯಷ್ಟೇ ಮಧುರ. ಶ್ರಾದ್ಧ, ಪಿತೃಪಕ್ಷ ಇತ್ಯಾದಿಗಳನ್ನು ಅಶುಭ ಎಂದು ಪರಿಗಣಿಸುವವರಿದ್ದಾರೆ. ಆದರೆ ಪಿತೃಗಳು ಬಂದು ನಮ್ಮನ್ನು ಹರಸುತ್ತಾರೆ ಎಂದು ನಂಬಲಾಗುವ ಈ ಸಂದರ್ಭಗಳು ಶುಭಕರವೇ ಹಾಗೂ ಕೆಲವರು ಮಾಡುವಂತೆ ಈ ಹಾಡನ್ನು ಹಬ್ಬದೂಟ ಸುಮ್ಮನೆ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾಗಿಲ್ಲ ಎಂದು ನನ್ನ ಅನ್ನಿಸಿಕೆ.
ಮಾಯಾ ಬಜಾರ್ ಚಿತ್ರದ ವಿವಾಹ ಭೋಜನವಿದು ಹಾಡಿನ ಜನಪ್ರಿಯತೆಯಿಂದ ಪ್ರೇರೇಪಿತವಾಗಿರಬಹುದಾದ ಈ ಹಾಡನ್ನು ವಿಭಿನ್ನ ಶೈಲಿಯಲ್ಲಿ ಪರಿಕಲ್ಪಿಸಿದ ಹುಣಸೂರು ಕೃಷ್ಣಮೂರ್ತಿ ನಿಜಕ್ಕೂ great. ವಿವಾಹ ಭೋಜನ ಹಾಡಿನಲ್ಲಿ ಬಣ್ಣಿಸಲ್ಪಟ್ಟ ಭಕ್ಷಗಳೆಲ್ಲ ಪರದೆಯ ಮೇಲೆ ವಸ್ತುಶಃ ಕಾಣಿಸಿಕೊಳ್ಳುತ್ತವೆ. ಆದರೆ ಇಲ್ಲಿ ಎಲ್ಲವೂ ಮನಸ್ಸಿನ ಮಂಡಿಗೆ ಮಾತ್ರ. ಜನಪ್ರಿಯವಾಗಬೇಕಾದರೆ ಪ್ರಸಿದ್ಧ ಗಾಯಕರೇ ಹಾಡಬೇಕೆಂದೇನೂ ಇಲ್ಲ ಎಂದು ಸಾಬೀತುಗೊಳಿಸಿದ ಹಾಡೂ ಹೌದು ಇದು. ಪೆಂಡ್ಯಾಲ ನಾಗೇಶ್ವರ ರಾವ್ ಅವರು ಶಂಕರಾಭರಣ ರಾಗದ ಸ್ವರಗಳಲ್ಲಿ ಸಂಯೋಜಿಸಿದ ಇದನ್ನು ಹಾಡಿದವರು ಹೆಸರೇ ಕೇಳಿರದ ಬಿ.ಗೋಪಾಲಂ ಎಂಬವರು ಮತ್ತು ಹೆಸರೇ ದಾಖಲಾಗದ ಇನ್ನೂ ಒಂದಿಬ್ಬರು. ಒಂದೆರಡು ಕಡೆ ನಟ ದ್ವಾರಕೀಶ್ ಅವರ ಧ್ವನಿಯನ್ನು ಕೇಳಿದಂತೆನಿಸಿತು.
ಅತಿ ಚಿಕ್ಕ prelude ಮತ್ತು interlude ಹೊಂದಿರುವುದರಿಂದ ಸುಮಾರು ಎರಡೂವರೆ ನಿಮಿಷ ಅವಧಿಯ ಈ ಹಾಡಿನಲ್ಲಿ 3 ಚರಣಗಳನ್ನು ಅಡಕಗೊಳಿಸಲು ಸಾಧ್ಯವಾಗಿದೆ. ಚರಣಗಳು ಒಂದೇ ರೀತಿ ಇರದೆ ಒಂದೊಂದೂ ವಿಭಿನ್ನ ಶೈಲಿಯಲ್ಲಿರುವುದರಿಂದ ಏಕತಾನತೆ ಇಲ್ಲ. ಚಿತ್ರದ ಸನ್ನಿವೇಶದಲ್ಲಿ ಇದನ್ನು ಮರುದಿನದ ಶ್ರಾದ್ಧಕ್ಕೆ ದರ್ಭೆ ತರಲು ಕಾಡಿಗೆ ಹೊರಟ ಕಾಲಕೌಶಿಕನ ಶಿಷ್ಯರು ಮತ್ತು ಲೋಹಿತಾಸ್ಯ ಹಾಡುವುದರಿಂದ ಬಾಲಕನಿಗೆ ಹೊಂದಿಕೆಯಾಗುವ ಧ್ವನಿಯೊಂದನ್ನು chorusನೊಂದಿಗೆ ಸೇರಿಸಲಾಗಿದೆ. ತಂದೆಯು ಇನ್ನೆಲ್ಲೋ ಇದ್ದು ತಾಯಿಯು ಇನ್ನೊಬ್ಬರ ಮನೆಯ ಊಳಿಗದವಳಾಗಿರುವಾಗ ಅದುವರೆಗೆ ಅರಮನೆಯಲ್ಲಿ ಬೆಳೆದ ಆ ಮಗುವು ಈ ರೀತಿ ಕಾಡಿನಲ್ಲಿ ಕುಣಿದು ಕುಪ್ಪಳಿಸಿ ಹಾಡುವುದು ಅಸಹಜವೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಪುಟ್ಟ ಮಕ್ಕಳು ಎಲ್ಲವನ್ನು ಮರೆತು ಕ್ಷಣಮಾತ್ರದಲ್ಲಿ ಹೊಸ ಪರಿಸರಕ್ಕೆ ಒಗ್ಗಿಕೊಳ್ಳುತ್ತಾರೆ ಎಂಬ ಸತ್ಯ ಅರಿತರೆ ಇದು ಸಹಜವೇ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.
ಸತ್ಯ ಹರಿಶ್ಚಂದ್ರ ಚಿತ್ರದ ನಮೋ ಭೂತನಾಥ, ತಿಲ್ಲಾನ, ನೀನು ನಮಗೆ ಸಿಕ್ಕಿ ಬಿದ್ದೆಯೋ ರಾಜ, ಆನಂದ ಸದನ, ನನ್ನ ನೀನು, ವಿಧಿ ವಿಪರೀತ, ಕಾಲಕೌಶಿಕನ ಮುಂದೆ, ಕುಲದಲ್ಲಿ ಕೀಳ್ಯಾವುದೋ ಮತ್ತು ಈ ಹಾಡು ಸಮಾನವಾಗಿ ಜನಪ್ರಿಯವಾಗಿದ್ದು ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಂತೂ ಸರದಿಯಂತೆ ಎಲ್ಲವೂ ದಿನಕ್ಕೊಂದರಂತೆ ಪ್ರಸಾರವಾಗುತ್ತಿದ್ದವು. ಕಾಲಕ್ರಮೇಣ ಕುಲದಲ್ಲಿ ಕೀಳ್ಯಾವುದೋ ಮುಂಚೂಣಿಯಲ್ಲುಳಿದು ಉಳಿದವು ಹಿನ್ನೆಲೆಗೆ ಸರಿದವು.
ಸತ್ಯ ಹರಿಶ್ಚಂದ್ರ ಇತ್ತೀಚೆಗೆ ಬಣ್ಣ ಬಳಿದುಕೊಂಡು ಬಂದಾಗ ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಅದರ audio ತನ್ನ ಮೂಲ ಶುದ್ಧ ರೂಪ ಕಳೆದುಕೊಂಡದ್ದನ್ನು ಅನೇಕರು ಗಮನಿಸಿರಬಹುದು. ಕತ್ತರಿ ಪ್ರಯೋಗಕ್ಕೆ ಒಳಗಾದ ಶ್ರಾದ್ಧದೂಟ ಹಾಡಿನ ಒಂದು ಚರಣ ಮಾತ್ರ ಚಿತ್ರದಲ್ಲಿ ಉಳಿದಿತ್ತು. ಕಪ್ಪು ಬಿಳುಪು ಚಿತ್ರದ Original ಹಾಡು ಇಲ್ಲಿದೆ.
ಶ್ರಾದ್ಧದೂಟ ಸುಮ್ಮನೆ
ರಚನೆ : ಹುಣಸೂರು ಕೃಷ್ಣಮೂರ್ತಿ
ಸಂಗೀತ : ಪೆಂಡ್ಯಾಲ ನಾಗೇಶ್ವರ ರಾವ್
ಗಾಯಕರು : ಬಿ. ಗೋಪಾಲಂ ಮತ್ತು ಸಂಗಡಿಗರು
* * *
ತದ್ದಿನ ಧಿನ ಧಿನ ತದ್ದಿನ
ನಾಳೆ ನಮ್ಮ ತಿಥಿ ದಿನ
ಶ್ರಾದ್ಧದೂಟ ಸುಮ್ಮನೆ
ನೆನೆಸಿಕೊಂಡ್ರೆ ಝುಮ್ಮನೆ
ನೀರೂರಿ ನಾಲಗೆ
ಕುಣಿವುದಯ್ಯ ಕಮ್ಮಗೆ
ಲಲಲಲ್ಲ ಲಲ್ಲಲ
ಇಂಗು ತೆಂಗು ತಿರುವಿ ಬೆರೆತ
ವಡೆ ಗೊಜ್ಜು ಮಜ್ಜಿಗೆ ರಾಯ್ತ
ಜಂಗಿ ಜಗಿದು ಚಪ್ಪರಿಸಿ
ನಂಜಿಕೊಂಡು ತಿಂದರೆ
ಹೇ ಪಾಪ ರೀ ಪಾಪ
ಹೇ ಪಾಪ ರೀ ಪಾಪ
ಶ್ರಾದ್ಧದೂಟ ಸುಮ್ಮನೆ
ಪಾಯ್ಸ ಖೀರು ನಿಂಬೆ ಸಾರು
ಪೂರಿ ಹೋಳ್ಗೆ ಹಪ್ಳ ಸಂಡ್ಗೆ
ಪಟ್ಟಾಗಿಳಿಸೆ ಹೊಟ್ಟೆ ಒಳಗೆ
ಜುಟ್ಟು ನಿಲ್ವುದು ನೆಟ್ಟಗೆ
ಹೇ ಪಾಪ ರೀ ಪಾಪ
ಹೇ ಪಾಪ ರೀ ಪಾಪ
ಕೈಗೂ ಬಾಯ್ಗು ಹೂಡಿ ಜಗಳ
ಕೂರಿ ಕೂರಿ ರಸದ ಕವಳ
ತಿಂದು ತೇಗು ಬಂದ ಹೊರ್ತು
ಇಲ್ಲ ತೃಪ್ತಿಯಾದ ಗುರ್ತು
ಹೇ ಪಾಪ ರೀ ಪಾಪ
ಹೇ ಪಾಪ ರೀ ಪಾಪ
No comments:
Post a Comment
Your valuable comments/suggestions are welcome