ಕನ್ನಡದಲ್ಲಿ ಜಾನಕಿ ರಹಿತ ಸುಶೀಲಾ ಸಿನಿಮಾಗಳು ಮತ್ತು ಸುಶೀಲಾ ರಹಿತ ಜಾನಕಿ ಸಿನಿಮಾಗಳ ಜೊತೆಗೆ ಜಾನಕಿ-ಸುಶೀಲಾ ಇಬ್ಬರೂ ಇದ್ದ ಸಿನಿಮಾಗಳೂ ಬಹಳ ಇದ್ದರೂ ಯಾಕೋ ಸುಶೀಲಾ-ಜಾನಕಿ ಜಂಟಿ ಹಾಡುಗಳು ಬಂದದ್ದು ಕಮ್ಮಿ ಎಂದೇ ಹೇಳಬೇಕು. ಆದರೂ ‘ಎಸ್.ಜಾನಕಿ ಮತ್ತು ಪಿ.ಸುಶೀಲಾ ಜೊತೆಯಾಗಿ ಹಾಡಿರುವ ಕೆಲ ಕನ್ನಡ ಹಾಡುಗಳ ಪಟ್ಟಿ ಮಾಡಬಲ್ಲಿರಾ’ ಎಂದು ಯಾರನ್ನಾದರೂ ಕೇಳಿದರೆ ನೀ ನಡೆವ ಹಾದಿಯಲ್ಲಿ, ಮಮತೆಯ ತೋಟದ ಮಲ್ಲಿಗೆಯೇ, ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ, ದೀನಳ ಮೊರೆಯ ಆಲಿಸೆ ಏಕೆ, ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ಆಸೆ ಹೇಳುವಾಸೆ ಇತ್ಯಾದಿ ಹಾಡುಗಳನ್ನು ನೆನಪು ಮಾಡಿಕೊಂಡು ಕೂಡಲೇ ಹೇಳಿಯಾರು. ‘ಅಷ್ಟೇನಾ’ ಎಂದರೆ ಕಿಟ್ಟು ಪುಟ್ಟು, ಸಿಂಗಾಪುರ್‌ನಲ್ಲಿ ರಾಜಾ ಕುಳ್ಳ ಸಿನಿಮಾಗಳ ಹಾಡುಗಳ ಬಗ್ಗೆಯೂ ಹೇಳಿಯಾರು. ಆದರೆ ನಾನು ಈಗ ಇಲ್ಲಿ ಉಲ್ಲೇಖಿಸಲಿರುವ ಆಶಾಸುಂದರಿ ಚಿತ್ರದ ಅಮೃತಮಯವೀ ಸ್ನೇಹ ಎಂಬ ಹಾಡು ಯಾರಿಗಾದರೂ ನೆನಪಾಗುವ ಸಾಧ್ಯತೆ ಕಮ್ಮಿ.
ಆಶಾಸುಂದರಿ 1960ರಲ್ಲಿ ಬಿಡುಗಡೆಯಾದ ಜಾನಪದ ಕಥಾವಸ್ತುವಿದ್ದ ಹುಣಸೂರ್ ಕೃಷ್ಣಮೂರ್ತಿ ನಿರ್ದೇಶನದ ಚಿತ್ರ. ರಾಜಕುಮಾರ್, ಹರಿಣಿ, ಕೃಷ್ಣಕುಮಾರಿ, ನರಸಿಂಹರಾಜು ಮುಂತಾದವರ ತಾರಾಗಣವಿತ್ತು. ಈ ಚಿತ್ರಕ್ಕೆ ಸಂಗೀತ ಒದಗಿಸಿದವರು ಕನ್ನಡಕ್ಕೆ ಬಲು ಅಪರೂಪದವರೇ ಆದ ಎಸ್.ದಕ್ಷಿಣಾಮೂರ್ತಿ. ತೆಲುಗು, ತಮಿಳಿನ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ ಇವರು ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳಲ್ಲೂ ಕೈ ಆಡಿಸಿದವರು. ಶಾಸ್ತ್ರೀಯ ಸಂಗೀತದಲ್ಲಿ ಪದವಿಯನ್ನೂ ಹೊಂದಿದ್ದರು. ಉತ್ತಮ ಹಾರ್ಮೋನಿಯಮ್, ವಯಲಿನ್ ವಾದಕರಾಗಿದ್ದು HMVಯಲ್ಲೂ ಸೇವೆ ಸಲ್ಲಿಸಿದ್ದ ಇವರು ಸಿನಿಮಾ ವಾದ್ಯವೃಂದವನ್ನು ಕಂಡಕ್ಟ್ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದವರು. 50ರ ದಶಕದಲ್ಲೇ ಲತಾ ಮಂಗೇಶ್ಕರ್ ಅವರಿಂದ ಸಂತಾನಂ ಚಿತ್ರಕ್ಕಾಗಿ ತೆಲುಗು ಹಾಡು ಹಾಡಿಸಿದ್ದರು. (ಈ ಸಂತಾನಂ ಚಿತ್ರವೇ ಮುಂದೆ ಹಿಂದಿಯಲ್ಲಿ ಬೇಟಿ ಬೇಟೆ ಮತ್ತು ಕನ್ನಡದಲ್ಲಿ ತಂದೆ ಮಕ್ಕಳು ಹೆಸರಲ್ಲಿ ಬಂತು). ಸ್ವತಃ ಕೆಲವು ಹಾಡುಗಳನ್ನೂ ಹಾಡಿದ್ದ ಇವರು ಕೆಲ ಹಾಲಿವುಡ್ ಚಿತ್ರಗಳಲ್ಲೂ ರೆಕಾರ್ಡಿಸ್ಟ್ ಮತ್ತು music conductor ಆಗಿ ಕೆಲಸ ಮಾಡಿದ್ದರಂತೆ.
ಅಮೃತಮಯವೀ ಸ್ನೇಹ
ಆಶಾಸುಂದರಿ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಧ್ವನಿಯಲ್ಲಿರುವ ಶೃಂಗಾರ ಸಾರೇ ಸೇರಿದಂತೆ ಅನೇಕ ಹಾಡುಗಳಿದ್ದರೂ ಕೇಳುಗರಿಗೆ ಅಮೃತಪಾನದ ಅನುಭವ ನೀಡುವುದು ಈ ಯುಗಳಗೀತೆ. ಇದು ಕನ್ನಡದಲ್ಲಿ ಸುಶೀಲಾ ಮತ್ತು ಜಾನಕಿ ಜೊತೆಯಾಗಿ ಹಾಡಿದ ಮೊದಲ ಗೀತೆ. ಹೇಳಿಕೊಳ್ಳುವಂಥ ಸಾಹಿತ್ಯದ ಬಲವಿಲ್ಲದ ಈ ಹಾಡು ಗೆದ್ದದ್ದು 22ನೇ ಮೇಳಕರ್ತ ಖರಹರಪ್ರಿಯ ಜನ್ಯ ಮಾಧುರ್ಯದ ವೈಶಿಷ್ಟ್ಯಪೂರ್ಣ ರಾಗಸಂಯೋಜನೆ ಮತ್ತು ಈ ಇಬ್ಬರು ಗಾನಸರಸ್ವತಿಯರಿಂದಾಗಿ. ಶಂಕರ್ ಜೈಕಿಶನ್, ಒ.ಪಿ.ನಯ್ಯರ್, ಸಲಿಲ್ ಚೌಧರಿ ಎಲ್ಲರೂ ತನ್ನಲ್ಲೇ ಇದ್ದಾರೆ ಎಂದು ಸಂಗೀತ ನಿರ್ದೇಶಕರಾದ ದಕ್ಷಿಣಾಮೂರ್ತಿ ಈ ಹಾಡಿನಲ್ಲಿ ಸಾಬೀತುಪಡಿಸಿದ್ದಾರೆ. ತಬಲಾ ಲಯದೊಂದಿಗಿನ ಆಲಾಪ್ ಶೈಲಿಯ ಆರಂಭದ ನಂತರ ಒಂದು ಆಕರ್ಷಕವಾದ ದೀರ್ಘ prelude ಬರುತ್ತದೆ. ನಂತರ ಢೋಲಕ್‌ನೊಂದಿಗೆ ಮುಖ್ಯ ಪಲ್ಲವಿ ಆರಂಭವಾಗ ಹಾಡಿನ ಬಣ್ಣವೇ ಬದಲಾಗುತ್ತದೆ. ಮಧ್ಯದಲ್ಲಿ ಬರುವ ಒಂದು pause ಪಲ್ಲವಿ ಭಾಗಕ್ಕೊಂದು ವಿಶೇಷ ಮೆರುಗು ನೀಡಿದೆ. ಹಾಡಿನ ಉಲ್ಲಾಸದ ಮೂಡಿಗೆ ಸರಿಹೊಂದುವ ದ್ರುತಲಯದ ದೀರ್ಘವಲ್ಲದ interlude ಮತ್ತು link pieceಗಳಿವೆ ಕೊನೆಯ ಭಾಗದಲ್ಲಿ ಸ್ನೇಹಪೂರ್ವಕ ಸ್ಪರ್ಧಾರೂಪದ ಆಲಾಪ್ ಜುಗಲ್ ಬಂದಿ ಇದೆ. ಅತಿದ್ರುತ ಲಯದೊಂದಿಗೆ ಹಾಡು ಮುಕ್ತಾಯವಾಗುತ್ತದೆ.
ಸಾಧ್ಯವಾದರೆ ಹೆಡ್ ಫೋನಿನಲ್ಲಿ ಆಲಿಸುತ್ತಾ ಈ ಅಮೃತವನ್ನು ಆಸ್ವಾದಿಸಿ.
No comments:
Post a Comment
Your valuable comments/suggestions are welcome