
ಅದು 2004ನೇ ಇಸವಿ. ಕಾರ್ಕಳ ತಾಲೂಕಿನ ಮಾಳ ಕಾಲಕಾಮ ಪರಶುರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನನ್ನ ಕೊಳಲುವಾದನ ಕಾರ್ಯಕ್ರಮ ಏರ್ಪಾಡಾಗಿತ್ತು. ಊರಿನ ಹವ್ಯಾಸಿ ಹುಡುಗರದ್ದೇ ಹಿಮ್ಮೇಳ. ಇನ್ನೂ ಮೊಬೈಲ್, facebook, whatsappಗಳ ಯುಗ ಆರಂಭವಾಗಿರಲಿಲ್ಲ. ಹೀಗಾಗಿ ವೀಡಿಯೋ ಮಾಡುವವರಾಗಲಿ, ಫೋಟೊ ತೆಗೆಯುವವರಾಗಲೀ ಯಾರೂ ಇರಲಿಲ್ಲ. ವೃತ್ತಿಪರರಿಂದ ಈ ಕೆಲಸ ಮಾಡಿಸುವ ಮಟ್ಟದ ಕಾರ್ಯಕ್ರಮವೂ ಅದಾಗಿರಲಿಲ್ಲ. ಆಗ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದ ಬಗ್ಗೆ ಇತರರಿಗೆ ತಿಳಿಯುತ್ತಿದ್ದುದು ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಲ್ಲಿ ಆ ಕುರಿತು ವರದಿಗಳು ಬಂದಾಗ. ಆದರೆ ಅವೆಲ್ಲ ಪ್ರಸಿದ್ಧರಿಗೆ ಮಾತ್ರ ತಾನೇ. ಹೀಗಾಗಿ ನನ್ನ ಕಾರ್ಯಕ್ರಮದ ವರದಿಯನ್ನು ನಾನೇ ತಯಾರಿಸುವ ಒಂದು ಹೊಸ ಪ್ರಯೋಗ ಮಾಡಿದ್ದೆ. ಶ್ರೀವತ್ಸ ಜೋಶಿಯ ಸಹಕಾರದಿಂದ ದಟ್ಸ್ ಕನ್ನಡ portalನಲ್ಲೂ ಪ್ರಕಟವಾಗಿದ್ದ ಅದು ಸುಮಾರಾಗಿ ಹೀಗಿತ್ತು.
**********************
ನಿಗದಿತ ಸಮಯ - ಸಂಜೆ 7 ಗಂಟೆಗೆ ಸರಿಯಾಗಿ ವೇದಿಕೆಯನ್ನೇರಿದೆವು. ಮಹಿಳೆಯರೇ ಜಾಸ್ತಿ ಸಂಖ್ಯೆಯಲ್ಲಿದ್ದ ಸಾಕಷ್ಟು ಶ್ರೋತೃಗಳು ಆಗಲೇ ಜಮಾಯಿಸಿದ್ದರು. ಪರಶುರಾಮನಿಗೆ ಮನದಲ್ಲೇ ವಂದಿಸಿ, ಚಿರನೂತನ ಗಣೇಶ ವಂದನೆಯಾದ ವಾತಾಪಿ ಗಣಪತಿಂ ಕೀರ್ತನೆಯಾಡನೆ ಕಾರ್ಯಕ್ರಮ ಆರಂಭ. ಮುಂದಿನದು ನಾನು ಕೊಳಲು ನುಡಿಸಲು ಹೇಗೆ ಕಲಿತೆ ಎಂಬುದರ ಬಗ್ಗೆ ಒಂದು ಕಿರು ಪ್ರಾತ್ಯಕ್ಷಿಕೆ. ಧರ್ಮಸ್ಠಳ ಜಾತ್ರೆಯಿಂದ ನಾಲ್ಕಾಣೆ ಕೊಳಲು ಖರೀದಿ, ಊದಲು ಪ್ರಯತ್ನಿಸುವಾಗಿನ ಪೀ ಪೀ ರಾಗ, ಒಂದೇ ಕೈಯಿಂದ ಪಾಪಿಯ ಜೀವನ ಪಾವನಗೊಳಿಸುವ ಹಾಡು ಮೂಡಿ ಬಂದ ಬಗೆ ಮುಂತಾದವುಗಳನ್ನು ನುಡಿಸಿ ತೋರಿಸಿದೆ.
ಸಂಪ್ರದಾಯಬದ್ಧ ಸಂಗೀತ ಕಛೇರಿಯನ್ನು ನಿರೀಕ್ಷಿಸಿದ್ದವರಿಗೆ ಏನೋ ವಿಚಿತ್ರವೆನ್ನಿಸಿರಬಹುದು. ಅಂತೂ ಎಲ್ಲರೂ ಕಣ್ಣು ಬಾಯಿ ಬಿಟ್ಟು ಗಮನವಿಟ್ಟು ಕೇಳುತ್ತಿದ್ದರು. ನನ್ನ ಕಾಲೇಜು ವಿದ್ಯಾಭ್ಯಾಸದ ನಂತರ ಮಂಗಳೂರು ಸೇರಿದ ಮೇಲೆ ಕಲಾನಿಕೇತನದಲ್ಲಿ ಶಾಸ್ತ್ರೀಯ ತರಬೇತಿ ಇತ್ಯಾದಿಗಳ ಬಗ್ಗೆ ತಿಳಿಸಿ ಎರಡನೆಯ ಹಾಡು ಹಿಂದೋಳ ರಾಗದ ಸಾಮಜವರ ಗಮನ ನುಡಿಸಿದೆ. ಮುಂದಿನ ಸಾಲಿನಲ್ಲಿ ಕುಳಿತ ವಿದ್ವಾಂಸರು ತಾಳ ಹಾಕುತ್ತಾ ನನಗೆ ಸಹಾಯ ಮಾಡುತ್ತಿದ್ದರು. (ಅದು ಒಂದು ರೀತಿಯ ಪರೀಕ್ಷೆಯೂ ಹೌದು! ) ಇನ್ನು ಪಂಡಿತರಿಗಿಂತ ಪಾಮರರತ್ತ ಹೆಚ್ಚು ಗಮನ ಕೊಡುವುದು ಸೂಕ್ತವೆಂದೆಣಿಸಿ, ಮಾಧುರ್ಯಕ್ಕೆ ಶಾಸ್ತ್ರೀಯ, ಲಘು, ಭಾವ ಗೀತೆ, ಭಕ್ತಿ ಗೀತೆ, ಚಿತ್ರ ಗೀತೆ ಎಂಬ ಯಾವ ವ್ಯತ್ಯಾಸವೂ ಇಲ್ಲ , ಶಾಸ್ತ್ರೀಯವೆಂದಾಕ್ಷಣ ಎಲ್ಲವೂ ಅತ್ಯುತ್ತಮ, ಉಳಿದದ್ದೆಲ್ಲಾ ಕಳಪೆ ಎಂಬುದು ಸರಿಯಲ್ಲ, ಕಾಳು-ಜೊಳ್ಳು ಎಲ್ಲ ಕಡೆಯೂ ಇದೆ, ಒಂದು ಉತ್ತಮ ಮೌಲ್ಯವುಳ್ಳ ಹಾಡು ಚಲನಚಿತ್ರದಲ್ಲಿ ಬಂದರೆ ಅದು ಸ್ವೀಕಾರಾರ್ಹವಲ್ಲ ಎಂಬ ಮಡಿವಂತಿಕೆ ಸಲ್ಲ, ಜೇನ್ನೊಣವು ವಿವಿಧ ಜಾತಿಯ ಹೂಗಳಿಂದ ಮಕರಂದವನ್ನು ಸಂಗ್ರಹಿಸಿ ಜೇನು ತಯಾರಿಸುವಂತೆ ಯಾವುದೇ ಮೂಲದಿಂದ ಬಂದರೂ ಮಾಧುರ್ಯವನ್ನು ಸ್ವೀಕರಿಸುವವರೇ ನಿಜವಾದ ಸಹೃದಯರು... - ಮುಂತಾದ ವಿಚಾರಗಳನ್ನು ತಿಳಿಸಿ ನುಡಿಸಿದ ಸಂತ ತುಕಾರಾಂ ಚಿತ್ರದ ಮೋಹನ ರಾಗದ ಜಯತು ಜಯ ವಿಠಲಾ ಹಾಡು ಎಲ್ಲರಿಗೂ ಮೆಚ್ಚಿಗೆಯಾಯಿತು. ಆ ಮೇಲಿನದು ಶ್ರೋತೃಗಳೂ ನೇರವಾಗಿ ಭಾಗವಹಿಸುವಂತಹ ಐಟಂ. ಮುಂದೆ ನುಡಿಸಲಿರುವ ಹಾಡು ಯಾವುದೆಂದು ಗುರುತಿಸಿದವರಿಗೆ ಅವರು ಮೆಚ್ಚಿದ ಒಂದು ಹಾಡನ್ನು ನುಡಿಸುವ ವಿಶೇಷ ಬಹುಮಾನದ ಘೋಷಣೆ. ನುಡಿಸಿದ್ದು ನೀ ಮಾಯೆಯಾಳಗೋ ನಿನ್ನೊಳು ಮಾಯೆಯೋ..., ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ... , ಯಾಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೆ... ಮುಂತಾದ ಅನೇಕ ಭಜನೆ ಹಾಡುಗಳಿಗೆ ಅನ್ವಯಿಸಬಹುದಾದ ಕಾಂಬೋಧಿ ರಾಗದ ಧಾಟಿ. ನಿರೀಕ್ಷಿಸಿದಂತೆಯೇ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಕೊನೆಗೆ ಬಹುಮಾನ ದಕ್ಕಿದ್ದು ಯಾಕೆನ್ನ ಈ ರಾಜ್ಯ ಎಂದು ನನ್ನ ಮನಸ್ಸಿನಲ್ಲಿದ್ದ ಹಾಡನ್ನು ಗುರುತಿಸಿದ ಒಬ್ಬ ಸಭಿಕ ಮಹಾನುಭಾವರಿಗೆ! ಆವರ ಇಷ್ಟದ ಒಂದು ಹಾಡನ್ನು ಕಾರ್ಯಕ್ರಮದ ಕೊನೆಯ ಭಾಗದಲ್ಲಿ ನುಡಿಸುವ ಆಶ್ವಾಸನೆ ಕೊಟ್ಟೆ. ಮುಂದೆ ಅಲ್ಲಿ ಬಹುಸಂಖ್ಯಾಕರಾಗಿದ್ದ ಮಹಿಳೆಯರತ್ತ ಗಮನ. ಹಿಂದಿನ ಕಾಲದಲ್ಲಿ ಮದುವೆ, ಮುಂಜಿಗಳಲ್ಲಿ ಹೆಣ್ಣು ಮಕ್ಕಳು ಹಾಡುತ್ತಿದ್ದುದನ್ನು ನೆನಪಿಸಿ ಅಂತಹುದೇ ಒಂದು ಹಾಡು ಪಾಲಿಸೆಮ್ಮ ಶ್ರೀ ಮೂಕಾಂಬಿಕೆಯೆ ನುಡಿಸಿದಾಗ ಎಲ್ಲರಿಗೂ ಖುಷಿಯೋ ಖುಷಿ. ಆನಂತರ ಎಲ್ಲರನ್ನೂ ತಂತಮ್ಮ ಬಾಲ್ಯಕ್ಕೆ ಕರೆದೊಯ್ದದ್ದು - ತಮ್ಮನನ್ನೋ, ತಂಗಿಯನ್ನೋ ಮಲಗಿಸುವ ನೆವದಲ್ಲಿ ತೊಟ್ಟಿಲಿನ ಎರಡೂ ಬದಿಗಳಲ್ಲಿ ಒಬ್ಬೊಬ್ಬರು ಕುಳಿತು ಉಯ್ಯಾಲೆಯಾಡುತ್ತಾ ಹಾಡಿಕೊಳ್ಳುತ್ತಿದ್ದ ಹಾಡು ಬಾರೊ ಬಾರೊ ಬಾರೋ ಗಣಪ . ಮತ್ತೆ ಶಾಸ್ತ್ರೀಯ ಸಂಗೀತದತ್ತ ಹೊರಳಿ ರಾರಾ ವೇಣು ಗೋಪಾಬಾಲ ಜತಿಸ್ವರ. ತಕ್ಷಣ ಇದೇ ಧಾಟಿಯನ್ನು ಹೋಲುವ ಛುಪ್‌ನೇ ವಾಲೇ ಸಾಮ್‌ನೆ ಆ... ನುಡಿಸಿ ಎಲ್ಲ ಸಂಗೀತವೂ ಒಂದೇ ಎಂಬ ವಾದಕ್ಕೆ ಪುಷ್ಟಿ. ಇದಾದೊಡನೆ ಕನ್ನಡವಾದರೆ ಕನ್ನಡ, ಮರಾಠಿಯಾದರೆ ಮರಾಠಿ ಆಗಬಹುದಾದ ಭೀಮ ಪಲಾಸ್ ರಾಗದ ಎರಡು ರಚನೆಗಳು. ಮೊದಲನೆಯದು ಆನಂದಾಚಾ ಕಂದ ಹರಿಲಾ (ಮರಾಠಿಯಲ್ಲಿ), ಮಾನವ ಜೀವನ ಸುಖಮಯವಾಗಿ (ಕನ್ನಡದಲ್ಲಿ). ಹಾಗೆಯೇ ಇನ್ನೊಂದು ಅಮೃತಾಹುನೀ ಗೋಡ ಅಭಂಗ ಮತ್ತು ಅದರ ಕನ್ನಡ ರೂಪಾಂತರ ಅಮೃತಕ್ಕೂ ತಾ ರುಚಿ ನಾಮ ನಿನ್ನ ದೇವ... ಹಾಡು. ಆರಂಭದಲ್ಲಿ ಶ್ರೋತೃಗಳೊಡನೆ ಸಂವಹನಕ್ಕೆ ಉಪಯೋಗಿಸಿದ ಒಂದೇ ಧಾಟಿ - ಹಲವು ಹಾಡು ತತ್ವಕ್ಕೆ ವಿರುದ್ಧವಾದ ಒಂದೇ ಹಾಡು-ಹಲವು ಧಾಟಿಗೆ ಉದಾಹರಣೆಯಾಗಿ ಭಾಗ್ಯದಾ ಲಕ್ಷ್ಮಿ ಬಾರಮ್ಮದ ವಿವರಣೆಯೊಡನೆ ನುಡಿಸಲು ನಾನು ಆಯ್ದುಕೊಂಡದ್ದು ಭಾಗ್ಯದಾ ಲಕ್ಷ್ಮೀ ಬಾರಮ್ಮ ಚಿತ್ರದ ಟೈಟಲ್ ಹಾಡು, ಮಧ್ಯಮಾವತಿ ರಾಗದಲ್ಲಿ. ಜತೆಯಲ್ಲೇ ಪುರಂದರದಾಸರ ಮೂಲ ರಚನೆ ಶ್ರೀ ರಾಗದಲ್ಲಿ. ಮುಂದೆ ಜನಪದ ಜಗತ್ತಿಗೆ ಪ್ರವೇಶಿಸಿ ಜನಪ್ರಿಯ ಭಾಗ್ಯದ ಬಳೆಗಾರದ ಸರದಿ. ನಂತರ ಬಂದವುಗಳು ಕೆಲ ಹಿಂದಿ ಚಿತ್ರಗೀತೆಗಳು - ತೊರಾ ಮನ್ ದರ್‌ಪನ್ ಕಹಲಾಯೆ , ಜ್ಯೋತಿ ಕಲಶ್ ಛಲ್‌ಕೇ , ಕುಹೂ ಕುಹೂ ಬೋಲೆ ಕೋಯಲಿಯಾ ಮುಂತಾದವು. ಹಾಗೆಯೇ ಈ ಮೊದಲು, ಟ್ಯೂನ್ ಕೇಳಿ ಹಾಡು ಗುರುತಿಸಿ ಸ್ಪರ್ಧೆಯನ್ನು ಗೆದ್ದಿದ್ದ ಶ್ರೋತೃವಿನ ಕೋರಿಕೆ - ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ ಚಿತ್ರದ ಮೇರಾ ನಾಮ್ ರಾಜು ಹಾಡು. ಶಂಕರ್ ಅವರ ಗಿಲಿ ಗಿಲಿ ಮ್ಯಾಜಿಕ್ ಸಂದರ್ಭವೊಂದಕ್ಕೆ ಈ ಹಾಡಿನ ತುಣುಕೊಂದನ್ನು ಉಪಯೋಗಿಸುತ್ತಿರುವುದನ್ನೂ ನೆನಪಿಸಿ ಭೈರವಿ ರಾಗದ ಈ ಹಾಡು ಪ್ರಸ್ತುತಗೊಂಡಿತು. ಅಷ್ಟರಲ್ಲಿ ಕೀ ಬೋರ್ಡ್‌ನಲ್ಲಿ ಸಹಕರಿಸುತ್ತಿದ್ದ ಗಜಾನನ ಮರಾಠೆಯವರ ಕೋರಿಕೆಯೊಂದನ್ನು ತೀರಿಸುವುದೂ ಅನಿವಾರ್ಯವಾಯಿತು. ಅವರಿಗಾಗಿ ಸೆಹ್ರಾ ಚಿತ್ರದ ಪಂಖ್ ಹೊತೆತೊ ಉಡ್ ಆತೀರೆ ನುಡಿಸುತ್ತಿದ್ದಂತೆ ಎರಡು ಗಂಟೆಯ ಕಾರ್ಯಕ್ರಮದ ಕೊನೆಯ ಹಂತ ಬಂದೇ ಬಿಟ್ಟಿತ್ತು. ಕೊನೆಗೆ ನುಡಿಸಿದ್ದು ಇತ್ತೀಚಿನ ದಿನಗಳಲ್ಲಿ ಬಹುಜನಪ್ರಿಯವಾಗಿರುವ ಪವಮಾನ... ಜಗದಾ ಪ್ರಾಣ ಹಾಡು.
ಕಾರ್ಯಕ್ರಮದುದ್ದಕ್ಕೂ ಯಾರೊಬ್ಬರೂ ಕೂತಲ್ಲಿಂದ ಮಿಸುಕಾಡಿರಲಿಲ್ಲ. ವಿಶೇಷವಾಗಿ ಸಭಿಕರ ಗುಜು ಗುಜು ಸದ್ದೂ ಇರಲಿಲ್ಲ. ಮಾತೆಯರ ಮಾತೂ ಇರಲಿಲ್ಲ. ಹಾಡಿನಿಂದ ಹಾಡಿಗೆ ಶ್ರೋತೃಗಳ ಸಂಖ್ಯೆ ಏರುತ್ತಲೇ ಇತ್ತು. ಮಹೇಶ ಕಾಕತ್ಕರ್ ತನ್ನ ಯಕ್ಷಗಾನದ ಮೃದಂಗದಲ್ಲಿ, ವೆಂಕಟೇಶ ಡೋಂಗ್ರೆ ತಬ್ಲಾದಲ್ಲಿ, ಗಜಾನನ ಮರಾಠೆ ಕೀ ಬೋರ್ಡ್‌ನಲ್ಲಿ ತಾವು ಎಂದೂ ಕೇಳಿರಲಾರದ ಹಾಡುಗಳಿಗೂ ಉತ್ತಮ ಹಿಮ್ಮೇಳ ಒದಗಿಸಿದರು. ಎಂದೂ ಕೇಳಿರಲಾರದ ಎಂದು ಯಾಕಂದೆ ಅಂದರೆ ನಾವೆಲ್ಲರೂ ನೇರವಾಗಿ ವೇದಿಕೆಯಲ್ಲೇ ಒಟ್ಟು ಸೇರಿದ್ದು! ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ ಅದರ ಹಿಂದಿನ ದಿನವೂ ಸಂಗೀತ ಕಾರ್ಯಕ್ರಮವೇ ಇದ್ದುದರಿಂದ ಮೊದಲು ‘ಇವತ್ತೂ ಶಾಸ್ತ್ರೀಯ ಸಂಗೀತವೇ?...’ ಎಂದು ಮೂಗೆಳೆಯುತ್ತಿದ್ದ ಕೆಲವರೂ ವಿಭಿನ್ನ ಶೈಲಿಯ ಪ್ರಸ್ತುತಿಯಿಂದಾಗಿ ತಮ್ಮ ಅಭಿಪ್ರಾಯ ಬದಲಿಸಿದರೆಂದು ಕೆಲವು ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದುದು ಕೇಳಿಸುತ್ತಿತ್ತು. ಬೆರಳೆಣಿಕೆಯ ಕೆಲವು ತೀರಾ ಸಂಪ್ರದಾಯಸ್ಥರಿಗೆ ಕಾರ್ಯಕ್ರಮದ ಶೈಲಿ ಇಷ್ಟವಾಗದೇ ಇದ್ದಿರಬಹುದಾದ ಸಾಧ್ಯತೆ ಇದ್ದರೂ ಬಹುತೇಕ ಮಂದಿಯ ಮನದಲ್ಲಿ ಒಂದು ನೆನಪಿಡಬಹುದಾದ ಸಂಜೆಯನ್ನು ಕಳೆದ ಭಾವನೆ ಇತ್ತೆಂದು ನನ್ನ ಅನಿಸಿಕೆ.
No comments:
Post a Comment