Wednesday 15 February 2017

ಗ್ರಾಮೊಫೋನ್ ಗಾಥೆ


ಇತ್ತೀಚೆಗೆ ಅತ್ಯಂತ ಹಳೆಯ ಹಾಡೊಂದನ್ನು  ಗ್ರಾಮೊಫೋನ್ ವೀಡಿಯೊ ಒಂದಕ್ಕೆ ಅಳವಡಿಸಿ ಹಂಚಿಕೊಂಡಿದ್ದೆ.  ಆದರೆ ಅದು ನಾನೆಣಿಸಿದಷ್ಟು ಮಂದಿಯ ಗಮನ ಸೆಳೆಯಲಿಲ್ಲ. ಕ್ಯಾಸೆಟ್ಟುಗಳನ್ನೇ ನೋಡಿರದ ಈಗಿನ ಜನಾಂಗದ ಅನೇಕರಿಗೆ  ಗ್ರಾಮೊಫೋನಿನ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು ಅಂದುಕೊಂಡಿದ್ದೇನೆ.  ಥಾಮಸ್ ಅಲ್ವಾ ಎಡಿಸನ್ ಗ್ರಾಮೊಫೋನನ್ನು ಆವಿಷ್ಕರಿಸಿದನು ಎಂದು ಈಗಿನ  ಶಾಲಾ ಪಠ್ಯದಲ್ಲಿ ಇದೆಯೋ ಗೊತ್ತಿಲ್ಲ.


ಕ್ಯಾಸೆಟ್, CD, DVD, Blue Ray Disk ಇತ್ಯಾದಿಗಳಿಗೆ ಹೋಲಿಸಿದರೆ ಅತ್ಯಂತ ದೀರ್ಘ ಆಯುಸ್ಸು ಅನುಭವಿಸಿದ ಗ್ರಾಮೋಫೋನಿಗೆ ಆರಂಭದಲ್ಲಿ ಫೋನೋಗ್ರಾಫ್ ಎಂಬ ಹೆಸರಿತ್ತು ಮತ್ತು ಅದು ತಟ್ಟೆಯ ಬದಲು ಸಿಲಿಂಡರ್ ಹೊಂದಿತ್ತು.  ನಂತರದ ದಿನಗಳಲ್ಲಿ ಅದನ್ನು  ರೆಕಾರ್ಡ್ ಪ್ಲೇಯರ್ ಮತ್ತು ಟರ್ನ್ ಟೇಬಲ್ ಎಂದೂ ಗುರುತಿಸುವ ಪರಿಪಾಠ ಆರಂಭವಾಯಿತು.  ಧ್ವನಿಯ ತರಂಗಗಳಿಗನುಸಾರವಾಗಿ  ಅರಗಿನ ತಟ್ಟೆಯ ತಿರುಗಣೆಯಲ್ಲಿ ಕುಳಿಗಳನ್ನು ನಿರ್ಮಿಸಿ ಆ ಕುಳಿಗಳಿಂದ  ಗ್ರಾಮೊಫೋನಿನ ಸೂಜಿ ಅರ್ಥಾತ್ ಸ್ಟೈಲಸ್ ಮೂಲಕ  ಅದೇ ಧ್ವನಿ ತರಂಗಗಳನ್ನು ಮರುಸೃಷ್ಟಿಸುವುದು ಸ್ಥೂಲವಾಗಿ ಇಲ್ಲಿ ಬಳಸಲಾಗುವ ತಂತ್ರಜ್ಞಾನ. ಇದಕ್ಕಾಗಿ ಮೊದಲು ಮಯಣದ ಅಚ್ಚು ತಯಾರಿಸಿಕೊಳ್ಳಲಾಗುತ್ತದೆ.  ಧ್ವನಿಮುದ್ರಣ ಮಾಡುವಾಗ ತಟ್ಟೆಯು ಯಾವ ವೇಗದಲ್ಲಿ ತಿರುಗುತ್ತಿತ್ತೋ playback ಮಾಡುವಾಗಲೂ ಅದೇ ವೇಗದಲ್ಲಿ ತಿರುಗುವುದು ತುಂಬಾ ಮುಖ್ಯ. ಆರಂಭದ ದಿನಗಳಲ್ಲಿ ಗಡಿಯಾರಕ್ಕೆ ಕೀಲಿ ಕೊಡುವಂತೆ ಹ್ಯಾಂಡಲ್ ಮೂಲಕ ಸ್ಪ್ರಿಂಗೊಂದನ್ನು ಬಿಗಿಗೊಳಿಸಿ ಅದರ ಶಕ್ತಿಯಿಂದ ತಟ್ಟೆ ಸಮವೇಗದಲ್ಲಿ ತಿರುಗುವಂತೆ  ಮಾಡಿ ತಿರುಗಣೆಯಲ್ಲಿರಿಸಿದ ಗ್ರಾಮೊಫೋನಿನ ಸೂಜಿ ಕೆಲವು ‘ಸನ್ನೆ’ಗಳ ಮೂಲಕ  ನೇರವಾಗಿ ಧ್ವನಿಪೆಟ್ಟಿಗೆಯ ತೆಳು ಪದರವನ್ನು ಕಂಪಿಸುವಂತೆ ಮಾಡಿ ಧ್ವನಿಯನ್ನು ಮರುಸೃಷ್ಟಿಸಲಾಗುತ್ತಿತ್ತು.  ಅದಕ್ಕೆ ಶಂಕುವಿನಾಕಾರದ ರಚನೆಯನ್ನು ಅಳವಡಿಸಿ ಧ್ವನಿಯು ಸಾಧ್ಯವಾದಷ್ಟು ಶಕ್ತಿಶಾಲಿಯಾಗುವಂತೆ ಮಾಡುವ ವ್ಯವಸ್ಥೆಯೂ ಇರುತ್ತಿತ್ತು.  ಕ್ರಮೇಣ ಹ್ಯಾಂಡಲ್ ತಿರುಗಿಸುವ ಬದಲು ವಿದ್ಯುತ್ ಮೋಟಾರು ಅಳವಡಿಕೆ  ಮತ್ತು ಸೂಜಿಯಿಂದ ನೇರ ಧ್ವನಿಪೆಟ್ಟಿಗೆಯಲ್ಲಿ ಕಂಪನ ಉಂಟುಮಾಡುವುದರ ಬದಲು ಸೂಜಿ ಗ್ರಹಿಸಿದ ತರಂಗಗಳನ್ನು ವಿದ್ಯುತ್ತಿಗೆ ಪರಿವರ್ತಿಸಿ  ಆ ವಿದ್ಯುತ್ತಿನಿಂದ ಮತ್ತೆ  ಧ್ವನಿಯನ್ನು ಸೃಷ್ಟಿಸುವ ತಂತ್ರಜ್ಞಾನದ ಬಳಕೆ ಆರಂಭವಾಯಿತು.  ಧ್ವನಿಮುದ್ರಣಕ್ಕಾಗಿ ಅರಗಿನ ತಟ್ಟೆಯ ಎರಡೂ ಬದಿಗಳನ್ನು ಆರಂಭದಿಂದಲೂ ಬಳಸಲಾಗುತ್ತಿತ್ತು. ಈ ರೆಕಾರ್ಡುಗಳನ್ನು ಗ್ರಾಮೊಫೋನ್ ಪ್ಲೇಟ್ ಎಂದೂ ಅನ್ನಲಾಗುತ್ತಿತ್ತು.

ಸುಮಾರು 1925ರ ವರೆಗೆ ಒಂದು hornನ ಎದುರು ಮಾತನಾಡಿದ್ದು ಸನ್ನೆಗಳ ಮೂಲಕ ನೇರವಾಗಿ ಮಯಣದ ಮಾಸ್ಟರ್ ಡಿಸ್ಕಿನ ಮೇಲೆ ಅಚ್ಚೊತ್ತುವ ಪದ್ಧತಿ ಇತ್ತು. ನಂತರ ಈ ಪದ್ಧತಿಯಲ್ಲಿ ಸುಧಾರಣೆಯಾಗಿ ಶಬ್ದವು microphone ಮೂಲಕ amplifierಗೆ ಹೋಗಿ ವಿದ್ಯುತ್ ತರಂಗಗಳಾಗಿ ಪರಿವರ್ತಿತ ಶಬ್ದವು ಮತ್ತೆ ಒಂದು ಸನ್ನೆಯ ಮೂಲಕ master diskನ ಮೇಲೆ ಅಚ್ಚು ಮೂಡಿಸುವ ತಂತ್ರ ಬಳಸಲ್ಪಡತೊಡಗಿತು. ಇದನ್ನು ಆಗ electrical recording ಅನ್ನುತ್ತಿದರು.

ಮೊದಲಿನ ಅನೇಕ ವರ್ಷಗಳ ಕಾಲ ನಿಮಿಷಕ್ಕೆ 78 ಸುತ್ತುಗಳ ವೇಗದ ಅರ್ಥಾತ್ 78 rpmನ ರೆಕಾರ್ಡುಗಳೇ ಚಾಲ್ತಿಯಲ್ಲಿದ್ದವು. ಅವುಗಳ ಒಂದು ಬದಿಯಲ್ಲಿ ಸುಮಾರು ಮೂರುವರೆ ನಿಮಿಷದ ಧ್ವನಿಮುದ್ರಣವನ್ನು ಅಳವಡಿಸಲು ಸಾಧ್ಯವಾಗುತ್ತಿತ್ತು.  ನಮ್ಮ ದೇಶದಲ್ಲಿ 30ರ ದಶಕದಿಂದಲೂ ಸಿನಿಮಾ ಹಾಡುಗಳ ಜೊತೆಗೆ ಶಾಸ್ತ್ರೀಯ ಸಂಗೀತ, ನಾಟಕ, ಭಕ್ತಿ ಸಂಗೀತ ಇತ್ಯಾದಿಗಳ ಧ್ವನಿ ಮುದ್ರಿಕೆಗಳು ತಯಾರಾಗುತ್ತಿದ್ದವು.  ಯಾವುದೇ ಹಾಡು ಮೂರುವರೆ ನಿಮಿಷಕ್ಕಿಂತ ಜಾಸ್ತಿ ಅವಧಿಯದ್ದಾದರೆ  ಅದನ್ನು ಎರಡು ಭಾಗ ಮಾಡಿ ರೆಕಾರ್ಡಿನ ಎರಡೂ ಬದಿಗಳಿಗೆ ಹಂಚಲಾಗುತ್ತಿತ್ತು.  ದೀರ್ಘವಾದ ನಾಟಕ ಇತ್ಯಾದಿಗಳಾದರೆ ಒಂದಕ್ಕಿಂತ ಹೆಚ್ಚು ರೆಕಾರ್ಡುಗಳ ಸೆಟ್ಟುಗಳನ್ನೇ ಬಿಡುಗಡೆಗೊಳಿಸಲಾಗುತ್ತಿತ್ತು.  ರಾಮನ ಅವತಾರ ರಘುಕುಲ ಸೋಮನ ಅವತಾರ, ನಾವಾಡುವ ನುಡಿಯೇ ಕನ್ನಡ ನುಡಿ, ಶಿವಶಂಕರಿ, ಲಾಗಾ ಚುನರಿ ಮೆಂ ದಾಗ್ ಛುಪಾವೂಂ ಕೈಸೆ  ಮುಂತಾದವು ರೆಕಾರ್ಡಿನ ಎರಡೂ ಬದಿಗಳನ್ನು ಆವರಿಸಿದ್ದ ಪ್ರಸಿದ್ಧವಾದ ದೀರ್ಘ ಹಾಡುಗಳು.  ರೇಡಿಯೋದಲ್ಲಿ ಇಂಥವುಗಳನ್ನು ಪ್ರಸಾರಮಾಡುವಾಗ ಮಧ್ಯದಲ್ಲಿ ‘ನೀವು ಈಗ ಭೂ ಕೈಲಾಸ ಚಿತ್ರದ ಹಾಡನ್ನು ಕೇಳುತ್ತಿರುವಿರಿ’ ಎಂಬಂಥ ಅತಿರಿಕ್ತ announcement ಬೇಕಾಗುತ್ತಿತ್ತು.  ಸಿನಿಮಾ ಹಾಡುಗಳ ಧ್ವನಿಮುದ್ರಣ ಮ್ಯಾಗ್ನೆಟಿಕ್ ಟೇಪುಗಳಲ್ಲಿ ಆರಂಭವಾಗುವ ಮೊದಲು ಫಿಲ್ಮಿನ ರೀಲುಗಳಲ್ಲೇ optical ರೆಕಾರ್ಡಿಂಗ್ ನಡೆಯುತ್ತಿತ್ತು.   ಹೀಗಾಗಿ ಕಲಾವಿದರೆಲ್ಲ ಗ್ರಾಮೊಫೋನ್ ಕಂಪೆನಿಯ ಸ್ಟುಡಿಯೋಗೆ ಹೋಗಿ ಮತ್ತೆ ಹಾಡುಗಳನ್ನು ಧ್ವನಿಮುದ್ರಿಸಬೇಕಾಗುತ್ತಿತ್ತು.  ಇದೇ ಕಾರಣದಿಂದಾಗಿ ಕೆಲವು ಹಳೆ ಹಾಡುಗಳನ್ನು ಸಿನಿಮಾದಲ್ಲಿ ಮತ್ತು ರೆಕಾರ್ಡಿನಲ್ಲಿ ಆಲಿಸುವಾಗ  ಕೆಲವು ಸೂಕ್ಷ್ಮ ವ್ಯತ್ಯಾಸಗಳು ಗೋಚರಿಸುವುದುಂಟು.  ರೆಕಾರ್ಡುಗಳ ಮಧ್ಯಭಾಗದಲ್ಲಿ ವೃತ್ತಾಕಾರದ ಕಾಗದದ ಲೇಬಲ್ ಇರುತ್ತಿದ್ದು ಅದರಲ್ಲಿ ಹಾಡಿಗೆ ಸಂಬಂಧಿಸಿದ ವಿವರಗಳೆಲ್ಲವೂ ಮುದ್ರಿತವಾಗಿರುತ್ತಿದ್ದವು.  ಹೀಗಾಗಿ ವಿಸ್ತೃತ ವಿವರಗಳನ್ನೊಳಗೊಂಡಿರುವ ಕಾಗದದ ಸ್ಲೀವ್ ಕಳೆದು ಹೋದರೂ ಮುಖ್ಯ  ವಿವರಗಳು  ಶಾಶ್ವತವಾಗಿ ಉಳಿಯುತ್ತಿದ್ದವು.  ಆದರೆ ಆರಂಭದ ಕೆಲವು ವರ್ಷ ಸಿನಿಮಾ ಹಾಡುಗಳ ರೆಕಾರ್ಡುಗಳಲ್ಲಿ  ಹಾಡುಗಾರರ ಹೆಸರೇ ಇರುತ್ತಿರಲಿಲ್ಲ. ಇದ್ದರೂ ನಿಜವಾಗಿ ಹಾಡಿದವರ ಹೆಸರಿನ ಬದಲಾಗಿ ಪರದೆಯ ಮೇಲಿನ  ಪಾತ್ರದ  ಹೆಸರು ನಮೂದಾಗಿರುತ್ತಿತ್ತಂತೆ. ಹೀಗಾಗಿ ಇಂತಹ ಕೆಲವು ಹಳೆಯ ಹಾಡುಗಳನ್ನು ನಿಜವಾಗಿ ಹಾಡಿದವರು ಯಾರು ಎಂದು ಕಂಡು ಹಿಡಿಯಲು ರೇಡಿಯೋ ನಿಲಯದವರಿಗೆ ಕಷ್ಟವಾಗುತ್ತಿತ್ತಂತೆ.  ಚಿತ್ರದಲ್ಲಿ ಕಾಣುತ್ತಿರುವ ಪಾಪಿಯ ಜೀವನ ಹಾಡಿನ ರೆಕಾರ್ಡಿನಲ್ಲಿ ಗಾಯಕ ಪಿ.ಬಿ.ಶ್ರೀನಿವಾಸ್ ಹೆಸರೇ ಇಲ್ಲದಿರುವುದನ್ನು ಗಮನಿಸಬಹುದು.



ಹಿಂದಿ  ಹಾಡುಗಳು ಚಿತ್ರ ಬಿಡುಗಡೆಯಾಗುವ ಕೆಲ ತಿಂಗಳ ಮೊದಲೇ ತಯಾರಾಗುತ್ತಿದ್ದರೆ ಕನ್ನಡ ಹಾಡುಗಳು  ಚಿತ್ರ ಬಿಡುಗಡೆಯಾಗಿ ಬಹಳ ಸಮಯದ ನಂತರವಷ್ಟೇ ಹೊರಬರುತ್ತಿದ್ದವು.  ರೆಕಾರ್ಡು ಬಿಡುಗಡೆಯಾದ ಕೂಡಲೇ  ಅವು ರೇಡಿಯೋ ಸಿಲೋನ್ ಮತ್ತು ವಿವಿಧಭಾರತಿಗೆ ತಲುಪುವಂತೆ  ನಿರ್ಮಾಪಕರು ನೋಡಿಕೊಳ್ಳುತ್ತಿದ್ದರು ಏಕೆಂದರೆ  ಚಿತ್ರ ಜನಪ್ರಿಯವಾಗಲು ರೇಡಿಯೋದಲ್ಲಿ ಹಾಡುಗಳು ಪ್ರಸಾರವಾಗುವುದು  ಬಲು ಮುಖ್ಯವಾಗಿರುತ್ತಿತ್ತು.  ರೇಡಿಯೋ ಸಿಲೋನಿನ ಬಿನಾಕಾ ಗೀತ್ ಮಾಲಾ ರೆಕಾರ್ಡುಗಳ ಮಾರಾಟದ ಅಂಕೆ ಸಂಖ್ಯೆಗಳನ್ನಾಧರಿಸಿಯೇ ಹಾಡುಗಳ ಜನಪ್ರಿಯತೆಯನ್ನು ನಿರ್ಧರಿಸುವ ಕಾರ್ಯಕ್ರಮವಾಗಿತ್ತು.   ಈಗ  ಎಲ್ಲ ಕಡೆ ಸಂಗೀತ digitize ಆಗತೊಡಗಿದ್ದರೂ ರೇಡಿಯೋ ಸಿಲೋನ್ ಈಗಲೂ  78  rpm ರೆಕಾರ್ಡುಗಳಿಂದ ಹಾಡುಗಳನ್ನು ಕೇಳಿಸುತ್ತಿದೆ.  ಏಷ್ಯಾದಲ್ಲೆ ಅತಿ ದೊಡ್ಡದು ಎಂಬ ಖ್ಯಾತಿ  ಹೊಂದಿದ  ರೆಕಾರ್ಡುಗಳ ಲೈಬ್ರರಿಯೂ ಅಲ್ಲಿದೆ.  ಆ ರೆಕಾರ್ಡುಗಳನ್ನು ಆಲಿಸುವಾಗಿನ ಶ್ರವಣ ಸುಖ ಈಗಿನ ಎಂಥ digital ಮಲ್ಟಿ ಚಾನಲ್ ಸ್ಟೀರಿಯೋ ಸಿಸ್ಟಂಗಳಲ್ಲೂ  ಸಿಗದು. ವಾಸ್ತವವಾಗಿ ನಾವು ಈಗಿನ ಕಾಲದಲ್ಲಿ ಕೇಳುವ mp3 ಅಂದರೆ ಕೆನೆ ತೆಗೆದ toned ಹಾಲಿನಂತೆ. ಗ್ರಾಮೊಫೋನಿಂದ ನೇರವಾಗಿ analog ರೂಪದಲ್ಲಿ ಕೇಳುವುದೆಂದರೆ ಮನೆಯ ಹಸುವಿನ ಹಾಲನ್ನು ಕಾಸಿ ಕುಡಿದಂತೆ.  ಕೆಳಗಿನ ಚಿತ್ರದಲ್ಲಿ ರೇಡಿಯೋ ಸಿಲೋನಿನ ರೆಕಾರ್ಡ್ ಲೈಬ್ರರಿಯ ಒಂದು ಭಾಗವನ್ನು ನೋಡಬಹುದು.  ಅಲ್ಲಿ ನಿಂತಿರುವವರು ಅಲ್ಲಿಯ announcer ಜ್ಯೋತಿ ಪರಮಾರ್.  ಆಕೆ 60-70ರ ದಶಕದಲ್ಲಿ ಅಲ್ಲಿದ್ದ ದಲವೀರ್ ಸಿಂಗ್ ಪರಮಾರ್ ಅವರ ಪುತ್ರಿ.  ರೇಡಿಯೋ ಸಿಲೋನ್ ಸಂಪೂರ್ಣವಾಗಿ ಗ್ರಾಮೊಫೋನ್ ರೆಕಾರ್ಡುಗಳ ಮೇಲೇ ಅವಲಂಬಿತವಾದ್ದರಿಂದ ಅಲ್ಲಿ  turn tableನಲ್ಲಿ  ರೆಕಾರ್ಡುಗಳನ್ನು ನುಡಿಸಲು spinner ಎಂಬ ಬೇರೆ ಸಹಾಯಕರಿರುತ್ತಾರೆ. ಅಲ್ಲಿಂದ ಪ್ರಸಾರವಾಗುತ್ತಿದ್ದ ಜಾಹೀರಾತುಗಳ jingleಗಳೂ ಕ್ಲಪ್ತ ಸಮಯದಲ್ಲಿ ವಿಳಂಬವಿಲ್ಲದೆ play ಮಾಡಲಾಗುವಂತೆ ಪುಟ್ಟ ಗ್ರಾಮೋಫೋನ್ ರೆಕಾರ್ಡುಗಳ ರೂಪದಲ್ಲೇ ಇರುತ್ತಿದ್ದುದು.   ವಿವಿಧಭಾರತಿ ಮತ್ತು ಆಕಾಶವಾಣಿಯ ಇತರ ನಿಲಯಗಳಲ್ಲಿ  ಅನೌಂಸರ್ consoleನಲ್ಲೇ turn table ಅಳವಡಿಸಲಾಗಿರುತ್ತದೆ. ಕಾರ್ಯಕ್ರಮ ಪ್ರಸ್ತುತ ಪಡಿಸುವವರೇ ರೆಕಾರ್ಡ್ ನುಡಿಸುತ್ತಾರೆ.  ಇನ್ನೊಂದು ಚಿತ್ರದಲ್ಲಿ ವಿವಿಧಭಾರತಿಯ ಜಯಮಾಲಾ ಕಾರ್ಯಕ್ರಮದಲ್ಲಿ ಗಾಯಕ ಮುಕೇಶ್  ರೆಕಾರ್ಡ್ ನುಡಿಸಲು ಸಿದ್ಧವಾಗಿರುವುದನ್ನು ನೋಡಬಹುದು.

60ರ ದಶಕದ ಮಧ್ಯಭಾಗದಲ್ಲಿ 45 rpmನ extended play ಅರ್ಥಾತ್ EP ರೆಕಾರ್ಡುಗಳು ಮತ್ತು 33 1/3 rpmನ long play ಅರ್ಥಾತ್ LP ರೆಕಾರ್ಡುಗಳು ಬರತೊಡಗಿದವು.  EPಗಳ ಒಂದು ಬದಿಯಲ್ಲಿ  ಕೊನೆಯನ್ನು ಒಂದಷ್ಟು trim ಮಾಡಿದ ಎರಡು ಚರಣಗಳ  ಎರಡು ಹಾಡು ಹಾಗೂ LPಗಳಲ್ಲಿ 3 ಚರಣಗಳ 4 ರಿಂದ 5 ಹಾಡುಗಳು ಹಿಡಿಸುತ್ತಿದ್ದವು.  ಹೀಗಾಗಿ ಒಂದೇ LPಯಲ್ಲಿ ಒಂದು ಚಿತ್ರದ  7 ರಿಂದ 8 ದೀರ್ಘ ಹಾಡುಗಳನ್ನು ಅಳವಡಿಸಲು ಸಾಧ್ಯವಾಗತೊಡಗಿತು. 78 rpm ರೆಕಾರ್ಡು ತಯಾರಿಗೆ  ಬಳಸುತ್ತಿದ್ದ ಅರಗಿಗೆ ಬದಲಾಗಿ EP, LP ಗಳನ್ನು venylನಿಂದ ತಯಾರಿಸಲಾಗುತ್ತಿತ್ತು. ಕನ್ನಡದಲ್ಲಿ ಇಂಥ micro grooveಗಳ EP ಯುಗ ಆರಂಭವಾದದ್ದು ಪರೋಪಕಾರಿ ಚಿತ್ರದ ಹಾಡುಗಳ ಮೂಲಕ. 60ರ ದಶಕದ ಬಹುತೇಕ ಎಲ್ಲ ಹಿಂದಿ ಹಾಡುಗಳಲ್ಲಿ 3 ಚರಣಗಳಿರುತ್ತಿದ್ದವು.  ಹೀಗಾಗಿ ಮೊದಲು ಎಲ್ಲ ಹಾಡುಗಳ ಎರಡೆರಡು ಚರಣಗಳುಳ್ಳ 78 rpm ರೆಕಾರ್ಡುಗಳು ಬಿಡುಗಡೆಯಾಗುತ್ತಿದ್ದವು. ಕೊಂಚ ಸಮಯದ ನಂತರ ಅವುಗಳ ಪೈಕಿ ಹೆಚ್ಚು ಜನಪ್ರಿಯತೆ ಗಳಿಸಿದ ನಾಲ್ಕು ಹಾಡುಗಳನ್ನು ಆಯ್ದು  EP  ತಯಾರಿಸಲಾಗುತ್ತಿತ್ತು. ಆಮೇಲೆ ಎಲ್ಲ ಹಾಡುಗಳ ಮೂರೂ ಚರಣಗಳನ್ನೊಳಗೊಂಡ LP ಬರುತ್ತಿತ್ತು. ಆದರೆ ಕನ್ನಡ ಹಾಡುಗಳ ಮಾರುಕಟ್ಟೆ ಸೀಮಿತವಾಗಿದ್ದುದರಿಂದ ಸಾಮಾನ್ಯವಾಗಿ ಎಲ್ಲ ಹಾಡುಗಳ 78 rpm ಮತ್ತು ಆಯ್ದ ನಾಲ್ಕು ಹಾಡುಗಳ  EP ಮಾತ್ರ ಬಿಡುಗಡೆಯಾಗುತ್ತಿತ್ತು. ಈ ರೀತಿ ವಿವಿಧ ವೇಗಗಳ ರೆಕಾರ್ಡುಗಳು ಬರತೊಡಗಿದ ಮೇಲೆ ಕೆಲವೊಮ್ಮೆ ಅಚಾತುರ್ಯದಿಂದ  ತಪ್ಪು ವೇಗ ಆಯ್ಕೆ ಆಗಿ ಹಾಡುಗಳು ಚಿತ್ರ ವಿಚಿತ್ರವಾಗಿ ಕೇಳಿಸುವುದೂ ಇತ್ತು.  ರೆಕಾರ್ಡಿನ ಮೇಲ್ಮೈಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ತಿರುಗಣೆಯಲ್ಲಿ ಸೂಜಿ ಸಿಕ್ಕಿಹಾಕಿಕೊಂಡು ‘ವಾತಾಪಿ ಗಣಪತಿಂ ಪತಿಂ ಪತಿಂ ಪತಿಂ ಪತಿಂ ಭಜೇ’ ಯಂತಹ  special effect ಉಂಟಾಗುವುದೂ  ಅಪರೂಪವೇನೂ ಆಗಿರಲಿಲ್ಲ.  78 rpmನ ಅರಗಿನ ಪ್ಲೇಟುಗಳಿಗೆ ಹೆಚ್ಚು  ಹಾನಿಯಾಗದಂತಿರಲು ತನ್ನಲ್ಲೇ sound box ಹೊಂದಿದ್ದು ಭಾರವಾದ  arm ಇದ್ದ ಹಿಂದಿನ ಕಾಲದ ಗ್ರಾಮೊಫೋನುಗಳಲ್ಲಿ  ಒಮ್ಮೆ ಮಾತ್ರ ಉಪಯೋಗಿಸಬಹುದಾದ ಮೆದು ಲೋಹದ ಸೂಜಿಗಳನ್ನು ಉಪಯೋಗಿಸುತ್ತಿದ್ದರು.   Venyl ರೆಕಾರ್ಡುಗಳು ಬಂದ ಮೇಲೆ ಹೆಚ್ಚು ಭಾರವಿಲ್ಲದ arm ಉಳ್ಳ ಸುಧಾರಿತ ರೆಕಾರ್ಡ್ ಪ್ಲೇಯರುಗಳಲ್ಲಿ ದೀರ್ಘ ಕಾಲ ಉಪಯೋಗಿಸಬಹುದಾದ crystal stylusಗಳ ಬಳಕೆ ಆರಂಭವಾಯಿತು.


ಆದರೆ ರೇಡಿಯೊ ಮತ್ತು ನಂತರದ ದಿನಗಳಲ್ಲಿ ಟೇಪ್ ರೆಕಾರ್ಡರುಗಳಂತೆ ಗ್ರಾಮೋಫೋನುಗಳು  ಮನೆಮನೆಗಳಲ್ಲಿ  ಇರುತ್ತಿರಲಿಲ್ಲ.  ಮೈಕ್ ಸೆಟ್ಟಿನವರು ಮತ್ತು ಸಿನಿಮಾ ಟಾಕೀಸು  ಬಿಟ್ಟರೆ ಎಲ್ಲೋ ಕೆಲವು ಅನುಕೂಲಸ್ಥರು ಮಾತ್ರ ಗ್ರಾಮೋಫೋನ್ ಹೊಂದಿರುತ್ತಿದ್ದರು. ಕೆಲವು ಸಿರಿವಂತರ ಮನೆಗಳಲ್ಲಿ ರೇಡಿಯೊ ಮತ್ತು ಗ್ರಾಮೋಫೋನ್ ಜೊತೆಯಲ್ಲೇ ಇರುವ ದೊಡ್ಡ radiogramಗಳೂ ಇರುತ್ತಿದ್ದವು.  ಆಗಿನ ರೇಡಿಯೋಗಳಲ್ಲೂ  ಗ್ರಾಮೊಫೋನನ್ನು ಕೇಳಲು ಆಗುವಂತೆ ಮಾಡುವ ಪಿಕ್ ಅಪ್ ಎಂಬ ವ್ಯವಸ್ಥೆ ಇರುತ್ತಿದ್ದರೂ ಈ ಸೌಲಭ್ಯ ಉಪಯೋಗಿಸುತ್ತಿದ್ದವರು ಬಲು ವಿರಳ ಎಂದೇ ನನ್ನ ಅನಿಸಿಕೆ.  ಆದರೂ  ಯಾರಾದರೂ ಥಟ್ಟನೆ ಅಭಿಪ್ರಾಯ ಬದಲಿಸಿದರೆ ‘ಪ್ಲೇಟು ಬದಲಿಸಿದ’ ಅನ್ನುವಷ್ಟು ಸಾಮಾನ್ಯ ಜನಜೀವನದಲ್ಲೂ  ಗ್ರಾಮೊಫೋನ್ ಪ್ರಭಾವ ಇತ್ತು.  ನಮಗೆ ಗ್ರಾಮೊಫೋನ್ ನೋಡಲು ಸಿಗುತ್ತಿದ್ದುದು ಶಾಲಾ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಬಯಲಾಟಗಳ ಸಂದರ್ಭದಲ್ಲಿ ಮಾತ್ರ.  ವಾರ್ಷಿಕೋತ್ಸವಗಳಂದು ಮೈಕ್ ಸೆಟ್ಟಿನವರ  ಗೆಳೆತನ ಸಂಪಾದಿಸಿ ಅವರ  ರೆಕಾರ್ಡ್ ಸಂಗ್ರಹವನ್ನು ಪರಿಶೀಲಿಸಿ ನಮ್ಮಿಷ್ಟದ ಹಾಡುಗಳನ್ನು ಮತ್ತೆ ಮತ್ತೆ ನುಡಿಸಲು ಹೇಳುವುದಿತ್ತು. ಸಾಮಾನ್ಯವಾಗಿ ಅವರು ಪ್ರತೀ 78 rpm ಪ್ಲೇಟಿನ ಎರಡೂ ಬದಿಗಳನ್ನು ನುಡಿಸುತ್ತಿದ್ದುದರಿಂದ ಅಲ್ಲಿ ನಮಗೆ ಒಂದು ಹಾಡಿನ ಇನ್ನೊಂದು ಬದಿ ಯಾವ ಹಾಡಿದೆ ಎನ್ನುವ ಮಾಹಿತಿಯೂ ತಾನಾಗಿ ಸಿಗುತ್ತಿತ್ತು. ಬಾಗಿಲನು ತೆರೆದು ಹಾಡಿನ ಹಿಂದೆ ಚಿನ್ನದಂತೆ ಚಿನ್ನದಂತೆ ಚಿನ್ನ, ಬೊಂಬೆಯಾಟವಯ್ಯಾ ಹಾಡಿನ ಹಿಂದೆ ಭಲೇ ಭಲೇ ಗಾರುಡಿ, ಜಯತು ಜಯ ವಿಠಲ ಹಾಡಿನ ಹಿಂದೆ ಬೇಡ ಕೃಷ್ಣ ರಂಗಿನಾಟ, ಕಿಶೋರ್ ಕುಮಾರನ ಪ್ರಸಿದ್ಧ ಇನ್ ಕಮ್ ಟಾಕ್ಸಂ  ಹಾಡಿನ ಹಿಂದೆ ಮಹೇಂದ್ರ ಕಪೂರನ ನೇಕಿ ತೇರೆ ಸಾಥ್ ಚಲೆಗಿ ಬಾಬಾ ಇದ್ದದ್ದು ಈಗಲೂ ನನಗೆ ನೆನಪಿದೆ!  ಹೀಗೆ ಅನೇಕ ಸಲ ಒಂದು ಬದಿಯ ಅತಿ ಜನಪ್ರಿಯ ಹಾಡಿನಿಂದಾಗಿ ಅದರ ಹಿಂಬದಿಯಲ್ಲಿರುವ ಸುಮಾರಾದ ಹಾಡಿನ ಅದೃಷ್ಟವೂ ಖುಲಾಯಿಸುತ್ತಿತ್ತು. ಕೆಲವು ಕಡೆ ಒಂದು ರೂಪಾಯಿ ನಾಣ್ಯ ಹಾಕಿ ಬೇಕಿದ್ದ ಹಾಡು ಕೇಳಲಾಗುವಂತಹ juke boxಗಳು ಇರುತ್ತಿದ್ದವು. ಮಂಗಳೂರಿನ ರೆಡ್ ರೋಸ್ ರೆಸ್ಟೋರೆಂಟಿನಲ್ಲಿ ಅಂಥದ್ದೊಂದು juke box ಇತ್ತು. ನಾವು ಕೆಲವು ಗೆಳೆಯರು ಅಲ್ಲಿ ಕಳ್ಳ ಕುಳ್ಳ ಚಿತ್ರದ ನಾ ಹಾಡಲು ನೀವು ಆಡಬೇಕು ಹಾಡು ಕೇಳುತ್ತಾ ನೇಂದ್ರ ಬಾಳೆ ಹಣ್ಣಿನಿಂದ ತಯಾರಿಸಿದ banana flitters ಎಂಬ dish ಸವಿಯುತ್ತಿದ್ದೆವು. ಈಗಲೂ ಆ ಹಾಡು ಆಲಿಸಿದರೆ  juke box ಮತ್ತು   banana flitters ನೆನಪಾಗುತ್ತವೆ.


ನಮ್ಮ ದೇಶದ ಗ್ರಾಮೊಫೋನ್ ಉದ್ದಿಮೆಯಲ್ಲಿ ಅಂತರರಾಷ್ಟ್ರೀಯ ಕಂಪನಿಗಳದ್ದೇ ಸಿಂಹಪಾಲಿದ್ದರೂ   ಬೆಂಗಳೂರಿನ ಚಿಕ್ಕಪೇಟೆಯ ಅವೆನ್ಯೂ ರೋಡಲ್ಲಿ ಈಗಲೂ ಕಾರ್ಯಾಚರಿಸುತ್ತಿರುವ  ಸೀತಾ ಫೋನ್ ಕಂಪನಿ ಗ್ರಾಮೊಫೋನ್ ಮತ್ತು  ರೆಕಾರ್ಡುಗಳ ತಯಾರಿ ಹಾಗೂ ಮಾರಾಟದಲ್ಲಿ  1920ರ ದಶಕದಿಂದಲೂ ತೊಡಗಿಸಿಕೊಂಡಿದ್ದ ಸಂಸ್ಥೆ.  ಚಂದಮಾಮದ ಪ್ರತಿ ಸಂಚಿಕೆಯಲ್ಲೂ ಇವರ ಜಾಹೀರಾತು ಇರುತ್ತಿತ್ತು.   ಈಗಲೂ ಅನೇಕ ಕಡೆ antique ರೂಪದಲ್ಲಿ ಗ್ರಾಮೊಫೋನುಗಳು  ತಯಾರಾಗುತ್ತಿದ್ದು ದುಬಾರಿ ಬೆಲೆ ತೆತ್ತರೆ  ಕೊಳ್ಳಲು  ಸಿಗುತ್ತವೆ.


ಈಗ ಗ್ರಾಮೊಫೋನಿನಲ್ಲಿ ಇದೊಂದು ಹಾಡು ಕೇಳಿ. ಹಾಡಿದವರು ಯಾರೆಂದು ಗುರುತಿಸಲು ಪ್ರಯತ್ನಿಸಿ.



7 comments:

  1. There was one hotel 'Staylong' in front of Government College (Now I think it is called University College) near Clock Tower....I vaguely remember that hotel too had one rupee jukebox.....your article always touch with its information treasury and language of warmth...

    ReplyDelete

  2. ನಿಮ್ಮ ಸಂಗೀತದ ಮೇಲಿನ ಪ್ರೀತಿ, ಜತನದಿಂದ ಸಂಪಾದಿಸಿದ ಆಳವಾದ ಜ್ಞಾನ ಮತ್ತು ಅದನ್ನು ಸರಳವಾಗಿ ಪ್ರಸ್ತುತ ಪಡಿಸುವ ರೀತಿ ಬಹಳ ಖುಷಿ ಕೊಡುತ್ತದೆ, ಸರ್.

    ReplyDelete
  3. ಈ ಹಾಡು ಹಾಡಿದವರ ಹೆಸರು ಜಯಂತಿ ದೇವಿ ಅಲ್ಲವೇ ...??
    70ರ ದಶಕದಲ್ಲಿ ಮೈಸೂರಿನಲ್ಲಿ 100 ಫೀಟ್ ರಸ್ತೆಯಲ್ಲಿ ಗಾಯತ್ರಿ ಟಾಕೀಸ್ ನಲ್ಲಿ ಗಾಯತ್ರಿ ಐಸ್ ಹೌಸ್ ಅಂತ ಇತ್ತು. (ಈಗ ಗೊತ್ತಿಲ್ಲ)... ಅದರ ಓನರ್ ನೋದಲು ಥೇಟ್ ಆರ್ ಡಿ ಬರ್ಮನ್ ರಂತೆ ...ಅವರ ಮನೆ ತುಂಬಾ ಸಿನೀಮಾ ಸಂಗೀತದ ತಟ್ಟೆಗಳು....ದಿನಕ್ಕೊಂದಿಷ್ಟು ತಂದು ... ಸಂಗೀತ ಹಾಕ್ತಾ ಇರ್ತಿದ್ರು....ರಾತ್ರಿ 8.30 ರಿಂದ ಒಂದೆರಡು ಗಂಟೆ ...ಹಳೆಯ ಹಿಂದಿ ಸಿನೇಮಾದ ಹಾಡುಗಳು.... ಖ್ಯಾತ ಸಂಗೀತಜ್ಞ - ಮೆಂಡೊಲಿನ್ ವಾದಕ ಮೈಸೂರು ರತನ್ ಅವರ ಜೊತೆ ನಾನು ಗೆಳೆಯ ಸುರೇಶ .... ಗಾಯತ್ರಿ ಐಸ್ ಹೌಸಿಗೆ ಹಾಲು ಕುಡಿಯಲೆಂದು ರಾತ್ರಿ 8.30ರ ಹೊತ್ತಿಗೆ ಹೋಗಿ ಬೀಗ ಹಾಕುವ ತನಕ ಅಲ್ಲಿರುತ್ತಿದ್ದೆವು...ನನಗೆ ಒಂದಿಷ್ಟು ಮೆಂಡೊಲಿನ್ ಪಾಠ ಹೇಳಿದ ರತನ್ ಅವರು ... ಅಲ್ಲಿ ಕೇಳುತ್ತಿದ್ದ ಹಳೆಯ ಹಾಡುಗಳು ಯಾವ ಯಾವ ರಾಗದಲ್ಲಿ ಸಂಯೋಜಿಸಲ್ಪಟ್ಟಿವೆ ಎಂದೆಲ್ಲಾ ಪಾಠ ಮಾಡುತ್ತಿದ್ದರು.... ಅಲ್ಲಿ ಹಾಡು ನಮ್ಮ ಆಯ್ಕೆಯದ್ದು ಸಿಗುತ್ತಿರಲಿಲ್ಲ.... ಆದರೆ ಎಲ್ಲವೂ ನಮ್ಮ ಇಷ್ಟದ್ದೇ ಆಗಿರ್ತಿತ್ತು.

    ಮೈಸೂರಿನ ಶಿವರಾಂ ಪೇಟೆಯ ಚಂದ್ರು ಸೋಡಾ ಫೇಕ್ಟರಿಯವರಿಗೆ ...ಸೌಂಡ್ ಸಿಸ್ಟಮ್ ಇದ್ದುದರಿಂದ ...ಅಲ್ಲಿ 10ಪೈಸೆಗೆ ಒಂದರಂತೆ ನಮ್ಮ ಇಷ್ಟದ ಹಾಡುಗಳನ್ನು (ಹೆಚ್ಚಿನವು ಕನ್ನಡ) ಕೇಳಬಹುದಿತ್ತು. ... ಹಾಗೆ ನನಗೆ ದಿನಕ್ಕೆ ಒಂದೆರಡು ರೂಪಾಯಿ ಅಲ್ಲಿ ಖರ್ಚಾಗುತ್ತಿತ್ತು..... ಹಾಗೆ ಅಲ್ಲಿನ ಗ್ರಾಮಾಫೋನ್ ತಟ್ಟೆಗಳಿಂದ ಕ್ಯಾಸೆಟ್ ನಲ್ಲಿ ಸಂಗ್ರಹಿಸಿದ ಕನ್ನಡ ಹಾಡುಗಳು ..ಮೂರು ನಾಲ್ಕು ಕ್ಯಾಸೆಟ್ಟಿನಲ್ಲಿವೆ ... ಪ್ರಾಯಷಃ ನಿಮಗೂ ಅದನ್ನು ಕೊಟ್ಟಿದ್ದೆ... ಮತ್ತೆ ನೀವು ನಿಮ್ಮಲ್ಲಿರುವುದನ್ನೆಲ್ಲಾ DVD ಮಾಡಿ ಕೊಟ್ಟಿರಿ..... ಜಾಗ್ರತೆಯಿಂದ ತೆಗೆದಿಟ್ಟಿದ್ದೇನೆ. .... ಆದರೆ ..ಗಾಯತ್ರಿ ಐಸ್ ಹೌಸ್ ನಲ್ಲಿ ಕೇಳಿದಾಗ ಅಥವಾ ಇಂದಿಗೂ ರೇಡಿಯೋದಲ್ಲಿ ಕೇಳಿದಾಗ ಸಿಗುವ ಸುಖ ...ಡಿವಿಡಿ ಯಲ್ಲಿ ಸಿಗುವುದಿಲ್ಲ..... ಇವೆಲ್ಲಾ ನಾವು ಎಷ್ಟೋ ಸಾರಿ ಮಾತಾಡಿದ್ದೇವೆ ಅಲ್ಲವೇ ... - ಮೂರ್ತಿ ದೇರಾಜೆ

    ReplyDelete
  4. ಸರ್ ನಿಮ್ಮಂತೆಯೆ ನನಗೂ ದೂರದ ರೇಡಿಯೊ ಸ್ಟೇಷನ್‌ಗಳನ್ನು ಕೇಳೋ ಹವ್ಯಾಸ ತುಂಬಾ ಇತ್ತು..ನಾನಿರುವುದು ಬೆಂಗಳೂರು ಚಾಮರಾಜಪೇಟೆಯಲ್ಲಿ..ಹೆಚ್ಚು ಟ್ಯೂನ್ ಮಾಡಿ ಕೇಳುತ್ತಿದ್ದದ್ದು ಧಾರವಾಡ್ ವಿವಿಧ ಭಾರತಿ ...ಪಕ್ಕದಲ್ಲೆ ಭದ್ರಾವತಿ ಸ್ಟೇಷನ್ ಬರ್ತಿತ್ತು...ಸಿಲೋನ್ ನ ಕನ್ನಡ ಕಾರ್ಯಕ್ರಮದ ಉದ್ಗೋಷಕಿ ತುಳಸಿದಾಸ್ ಅವರ ಮಾತುಗಳ ದ್ವನಿಯ ವಿಶಿಷ್ಟತೆ ಈಗಲೂ ನೆನಪಾಗುತ್ತದೆ..
    ನನಗೂ ಗ್ರಾಮೋಫೋನ್ ರೆಕಾರ್ಡ್‌ಗಳನ್ನ್ನ ಸಂಗ್ರಹಿಸುವ ಹವ್ಯಾಸ ತುಂಬಾನೆ ಜಾಸ್ತಿ ಇತ್ತು..ಈಗಲೂ ನನ್ನಬಳಿ ನೂರಾರು 78 rpm,ಹಾಗೂ EP ಕನ್ನಡ ಹಾಡುಗಳ ಪ್ಲೇಟ್‌ಗಳ ಸಂಗ್ರಹವಿದೆ
    ಸೀತಾಫೋನ್ ಅಂಗಡಿಯಂತೆ ಬೆಂಗಳೂರಿನ ಚಿಕ್ಕಪೇಟೆ ಪೋಲಿಸ್ ರಸ್ತೆಯಲ್ಲಿ ರೆಕಾರ್ಡ್ ಸೆಂಟರ್ ಅಂತ ಇನ್ನೊಂದು ಅಂಗಡಿ ಇತ್ತು...ಹಳೆಯ ರೆಕಾರ್ಡ್ಗಳನ್ನು ಸುಮಾರು ಹುಡುಕಿ ಹುಡುಕಿ ಕೊಂಡಿದ್ದೆ.. ಹಳೇ ಹಾಡುಗಳಿಗಾಗಿ ಅನೇಕ ಸೌಂಡ್‌ಸಿಸ್ಟಂ ಅಪರೇಟರ್‌ಗಲ ಬಳಿ ಹೆಚ್ಚು ಹಣ ಕೊಟ್ಟು ಕೊಂಡಿದ್ದು ಉಂಟು...ಈಗಲೂ ಒಮ್ಮೊಮ್ಮೆ ಅದನ್ನು ಪ್ಲೇ ಮಾಡಿ ಕೇಳಿದಾಗ ಸಿಗುವ ಆನಂದ ...ಹೇಳಲಾಗದು..ಆದರ್ಶಸತಿಯ ಪ್ರಭು ನಿನ್ನೆದೆಯೆ ನನ್ನೆಯ ಮಹಾಮಂದಿರ,ವಸಂತಸೇನ ಚಿತ್ರದ ಹಾಡುಗಳು ,ಜಗದೇಕವೀರನ ಕತೆ ಮುಂತಾದ ಹಾಡುಗಳಿವೆ

    ReplyDelete
    Replies
    1. ನೀವೂ ರೇಡಿಯೊ ಪ್ರಿಯರೆಂದು ತಿಳಿದು ಖುಶಿ ಆಯಿತು. ನಿಮ್ಮಲ್ಲಿ ಅನೇಕ ದುರ್ಲಭ ರೆಕಾರ್ಡುಗಳ ಸಂಗ್ರಹ ಇರುವುದೆಂದು ತಿಳಿದು ನಾನು ಬಹಳ ಸಮಯದಿಂದ ಹುಡುಕುತ್ತಿರುವ ಕೆಲವು ಹಾಡುಗಳು ನಿಮ್ಮಲ್ಲಿ ಇರಬಹುದೆಂಬ ಆಸೆ ಮೂಡಿದೆ.

      Delete
  5. This comment has been removed by the author.

    ReplyDelete
  6. ಸರ ತುಂಬಾ ಮಾಹಿತಿ ನೀಡಿದ್ದಿರಿ. ಧನ್ಯವಾದಗಳು.

    ReplyDelete

Your valuable comments/suggestions are welcome