Friday, 26 August 2011

ಬಾರೊ ಬಾರೊ ಬಾರೊ ಗಣಪ


    
      60ರ ದಶಕದ ನಮ್ಮ ಶಾಲಾ ದಿನಗಳಲ್ಲಿ   ಬಹು ಪ್ರಸಿದ್ಧವಾಗಿದ್ದ  ಹಾಡು ಇದು.   ಪ್ರಾಸದ ಯಾವುದೇ ಕಟ್ಟುಪಾಡು ಇಲ್ಲದೆ ಗೇಯತೆಗೆ ಪ್ರಾಧಾನ್ಯವಿರುವ ಈ ಹಾಡಿನಲ್ಲಿ  ನಡುವೆ ಕೆಲವು ಇಂಗ್ಲಿಷ್ ಶಬ್ದಗಳೂ ಇವೆ.  ಪುಟ್ಟ ಮಕ್ಕಳನ್ನು ತೊಟ್ಟಿಲಲ್ಲಿ ಕೂರಿಸಿ  ಆಚೆ ಈಚೆ ಅಂಚುಗಳ ಮೇಲೆ  ಇನ್ನಿಬ್ಬರು ಕುಳಿತು ಈ ಹಾಡು ಹಾಡುತ್ತಾ ಜೋಕಾಲಿ ಆಡುವುದೆಂದರೆ ನಮಗೆಲ್ಲ ಆಗ ಬಲು ಖುಶಿ. ಇದರ ಕವಿ ಯಾರು ಎಂಬುದರ ಬಗ್ಗೆ ಮಾಹಿತಿ ಇಲ್ಲ.  ಗೊತ್ತಿದ್ದವರು ದಯವಿಟ್ಟು ತಿಳಿಸಿ.

      ಮುಂಡಾಜೆ ಆನಂಗಳ್ಳಿಯ ನಮ್ಮ ಹಿರಿಯರ ಮನೆಯ ಕೋರಲ್ ಗ್ರೂಪ್  ಕೆಲವು  ವರ್ಷಗಳ ಹಿಂದೆ ಹಾಡಿದ್ದ ಈ ಹಾಡನ್ನು ಕೇಳುತ್ತಾ ಚತುರ್ಥಿ ಸಮೀಪಿಸುತ್ತಿರುವ  ಈ ಸಂದರ್ಭದಲ್ಲಿ  ಗಣಪನನ್ನು ಕರೆಯೋಣ.





ಬಾರೊ ಬಾರೊ ಬಾರೊ ಗಣಪ                                 
ಸೊಂಡಿಲ ಮೇಲಕೆ ಎತ್ತಿಕೊಂಡು
ಕಾಲಿಗೆ ಗೆಜ್ಜೆಯ ಕಟ್ಟಿಕೊಂಡು
ಹಾವನು ಹೊಟ್ಟೆಗೆ ಬಿಗಿದುಕೊಂಡು

ಬಾರೊ ಬಾರೊ ಬಾರೊ ಗಣಪ

ಅಕ್ಕ ಬಂದಳು ಪಾಪು ಬಂತು
ಪಕ್ಕದ ಮನೆಯ ಪುಟಾಣಿಬಂತು
ಏನೇನಾಟವನಾಡೋಣಪ್ಪ
ಹೋಗೊ ಹೋಗೊ ಆಟ ಬೇಡ

ಗೌರಿ ನಿನ್ನನು ಬೈದಾಳೇನೊ
ಕಡಬು ಹೂರಣ ಕೊಡಲಿಲ್ಲವೇನೊ
ಅಮ್ಮನು ಮಾಡಿದ ಹೋಳಿಗೆ ರಾಶಿ
ಎಲ್ಲ ನಿನಗೆ ಕೊಡಿಸುವೆ ಬಾರೊ

ಎಲ್ಲಿ ಬಿದ್ದೆಯೊ ಮುರಿದಿದೆ ದಂತ
ವಾಹನ ಇಲಿಯು ಎಲ್ಲಿಗೆ ಹೋಯ್ತು
ಹೋದರೆ ಹೋಗಲಿ ಬೈಸ್ಕಲ್ ಕೊಡುವೆ
ಟಿಂ ಟಿಂ ಟಿಂ ಟಿಂ ಬಾರಿಸೊ ಬೆಲ್ಲ

ಥೈ ಥೈ ಥೈ ಥೈ ತಾಳ ಹಾಕೊ
ಧೀಂ ಧೀಂ ಧೀಂ ಧೀಂ ನಗಾರಿ ಹೊಡೆಯೊ
ಭೊಂ ಭೊಂ ಭೊಂ ಭೊಂ ಉರಿಗೊ ಶಂಖ
ತದಿನಾಂ ತಕ ತಕ ಕುಣಿಯೋಣ ಬಾರೊ

ಯುದ್ಧವಾದರೆ ನಮಗೇನಾಯ್ತು
ಅಪ್ಪನ ದುಡ್ಡಿಗೆ ಲೋಪ ಬಂತು
ಅಮ್ಮನು ತಿಂಡಿಯ ಕೊಟ್ಟೇ ಕೊಡುವಳು
ಬೈಗು ಬೆಳಗು ಕುಣಿಯೋಣ ಬಾರೊ

ಹಗಲು ಕಳೆಯಿತು ಶಾಂತಿ ನೆಲೆಸಿತು
ಮಂಗಳ ಜಗಕೆ ಮಂಗಳವಾಯ್ತು
ಭಾರತ ಮಾತೆಗೆ ಶಾಂತಿಯು ಇಂದು
ಎಲ್ಲ ಕೂಡಿ ನಲಿಯೋಣ ಬಾರೊ








No comments: