Monday 22 August 2011

ರಫಿ ಏಕ್ ಔರ್ ಅನೇಕ್




ದಿಲ್ ಏಕ್ ಮಂದಿರ್ ಚಿತ್ರಕ್ಕಾಗಿ ರಫಿ ಮತ್ತು ಸುಮನ್ ಕಲ್ಯಾಣಪುರ್ ಹಾಡಿದ ಜಾನೆ ವಾಲೆ ಕಭೀ ನಹೀಂ ಆತೆ.  ಲತಾ ಮಂಗೇಶ್ಕರ್ ದನಿಯ ತದ್ರೂಪು ಎನ್ನಿಸಬಹುದಾದ ಸುಮನ್ ಕಲ್ಯಾಣಪುರ್ ಹಾಡಿದ solo ಹಾಡುಗಳಿಗಿಂತ ಅವರು ರಫಿ ಜತೆ ಹಾಡಿದ ಯುಗಳ ಗೀತೆಗಳೇ ಹೆಚ್ಚು ಪ್ರಸಿದ್ಧವಾದವು.  ಶಂಕರ್ ಜೈಕಿಶನ್  ಇವರೀರ್ವರನ್ನು ಬಳಸಿ ನೀಡಿದಷ್ಟು ಹಿಟ್ ಗೀತೆಗಳನ್ನು ಇನ್ಯಾರೂ ನೀಡಿರಲಾರರು.  ಸಾಮಾನ್ಯವಾಗಿ ಚಿತ್ರಗಳ ಕೊನೆಯಲ್ಲಿ ಯಾವುದಾದರೊಂದು ಹಿಟ್ ಹಾಡಿನ ಒಂದೆರಡು ಸಾಲುಗಳನ್ನು repeat ಮಾಡುವುದನ್ನು ನಾವು ಕಾಣುತ್ತೇವೆ.  ಆದರೆ ದಿಲ್ ಏಕ್ ಮಂದಿರ್ ನಲ್ಲಿ ಈ ಹಾಡು ಬರುವುದೇ ಚಿತ್ರದ ಕೊನೆಗೆ.   ಹೆಚ್ಚಾಗಿ ಚಿತ್ರ ಕೊನೆಯಾಗುತ್ತಾ ಬಂದಂತೆ ಪ್ರೇಕ್ಷಕರು ಒಬ್ಬೊಬ್ಬರಾಗಿ ಎದ್ದು ಹೊರಡತೊಡಗುವುದು ಸಾಮಾನ್ಯ.  ಆದರೆ ಈ ಹಾಡಿನಿಂದಾಗಿ ಪರದೆಯ ಮೇಲೆ The End ಬೀಳುವವರೆಗೂ  ಯಾರೊಬ್ಬರೂ ಸೀಟ್ ಬಿಟ್ಟು ಎದ್ದಿರಲಿಕ್ಕಿಲ್ಲ.









ದೇಗುಲದ ಗಂಟೆಯಂತಹ ಧ್ವನಿ ಎಂದು ಒ. ಪಿ. ನಯ್ಯರ್ ಅವರಿಂದ ಪ್ರಶಂಸಿಸಲ್ಪಟ್ಟ ಶಂಶಾದ್ ಬೇಗಂ ಮತ್ತು ರಫಿ C I D ಚಿತ್ರಕ್ಕಾಗಿ ಹಾಡಿದ ಲೆಕೆ ಪೆಹಲಾ ಪೆಹಲಾ ಪ್ಯಾರ್.  ಅಂದಿನ ಕಾಲದಲ್ಲಿ ಆಕಾಶವಾಣಿಯಲ್ಲಿ ಪ್ರತಿಬಂಧಿಸಲ್ಪಟ್ಟಿದ್ದ ಹಾರ್ಮೋನಿಯಂ ಬಳಕೆಯಿಂದಾಗಿ ಈ ಹಾಡು ಹೆಚ್ಚು ಆಪ್ತವೆನಿಸುತ್ತಿತ್ತು.  ಆ ಮೇಲೆ ಕೂಡ ನಯ್ಯರ್ ಅವರು ಸುಭಾನಲ್ಲಾ ಹಸೀಂ ಚೆಹೆರಾ, ಕಜರಾ ಮುಹಬ್ಬತ್ ವಾಲಾ ಮುಂತಾದ ಹಾಡುಗಳಲ್ಲಿ ಹಾರ್ಮೋನಿಯಮ್ ಬಳಸಿದ್ದಾರೆ.  ನಾಯಕನಿಗಾಗಿ street singer ಗಳು ಹಾಡುವ ಈ ತಂತ್ರವನ್ನು ಅಮಿತಾಭ್ ನ ಜಂಜೀರ್ ಚಿತ್ರದ ದಿವಾನೆ ಹೈಂ ದೀವಾನೊಂ ಕೊ ನ ಘರ್ ಚಾಹಿಯೆ ದಲ್ಲಿ ಮತ್ತೆ ಬಳಸಲಾಗಿತ್ತು.





ಏಕತಾನತೆಯಿಂದ ಕೂಡಿದ್ದ ಚಿತ್ರ ಸಂಗೀತಕ್ಕೆ ಲವಲವಿಕೆಯನ್ನು ತುಂಬಿದ ಮೊದಲ ಚಿತ್ರ ತನ್ನ  ಪತಿ ಗುರು ದತ್ ಅವರ ಆರ್ ಪಾರ್ ನಲ್ಲಿ  ಗೀತಾ ದತ್ತ್ ಅವರು ರಫಿಯೊಡನೆ ಹಾಡಿದ ಮುಹಬ್ಬತ್ ಕರ್ ಲೊ ಜೀ ಭರ್ ಲೊ.  O P ನಯ್ಯರ್ ಹೇಳುವಂತೆ ಗೀತಾ ದತ್ತ್ ಮತ್ತು ಶಂಶಾದ್ ಬೇಗಂ ಅವರದ್ದು  original voice. ಅವರನ್ನು ಯಾರೂ ಅನುಕರಣೆ ಮಾಡಲಾರರು.   ಈ ಹಾಡಿನ ಸಂಗೀತದಲ್ಲಿ ಎಸ್. ಹಜಾರಾ ಸಿಂಗ್ ನುಡಿಸಿದ electric guitar ನದ್ದು ವಿಶೇಷ ಪಾತ್ರ.  ಹಾಗೆಯೇ ಬೋಲ್ ಗಳನ್ನು ಅನುಸರಿಸುವ ಢೋಲಕ್  ನಡೆಗಳೂ ಬಹಳ ಚಂದ.  ಮಜರೂಹ್ ಸುಲ್ತಾನ್ ಪುರಿ ಅವರ ಸಾಹಿತ್ಯವೂ ಕೊಂಚ ಭಿನ್ನ.  ಸಾಮಾನ್ಯವಾಗಿ ಯುಗಳ ಗೀತೆಗಳಲ್ಲಿ ‘ನಿನ್ನ ಕಣ್ಣು ಕಮಲ, ನಿನೇ ನನ್ನ ಜೀವ, ನಿನ್ನನ್ನು ಬಿಟ್ಟು ಅರೆ ಕ್ಷಣವೂ ಇರಲಾರೆ’ ಇತ್ಯಾದಿ ಅರ್ಥ ಕೊಡುವ ಸಾಲುಗಳನ್ನು ಹೆಚ್ಚಾಗಿ ಕಾಣುತ್ತೇವೆ.  ಆದರೆ ಇಲ್ಲಿ ನಾಯಕ ‘ಬೇಕಾದಷ್ಟು ಪ್ರೀತಿ ಮಾಡು, ಯಾರು ಬೇಡ ಅಂತಾರೆ, ಆದರೆ ನೆನಪಿಟ್ಟುಕೋ ಇದು ಬರೀ ಮೋಸ ’ ಅಂದರೆ ನಾಯಕಿಯು ‘ಬೇಕಾದಷ್ಟು ತೆಗಳು, ಯಾರು ಬೇಡ ಅಂತಾರೆ, ಆದರೆ ನಿನ್ನಿಂದ ಪ್ರಪಂಚವನ್ನೇ ತೊರೆಯಲು ಸಾಧ್ಯವೇ. ಯಾಕೆಂದರೆ ಇಲ್ಲೂ ಎಲ್ಲಾ ಕಡೆ ಮೋಸವೇ’ ಅನ್ನುತ್ತಾಳೆ. ಬನ್ನಿ ಕೇಳೋಣ ಈ ಹಾಡು.





ಮನ್ನಾಡೆ ಜತೆ ಹಾಡಿದ ರಾಗಿನಿ ಚಿತ್ರದ ತೂ ಹೈ ಮೇರಾ ಪ್ರೇಮ್ ದೇವತಾ. ಪುರುಷರು ಹಾಡಿದ ಯುಗಳ ಗೀತೆಗಳಲ್ಲಿ ರಫಿ-ಮನ್ನಾಡೆ ಯವರದ್ದೇ ಸಿಂಹ ಪಾಲು.  ವೈಯುಕ್ತಿಕವಾಗಿಯೂ ಅವರಿಬ್ಬರೂ ಆತ್ಮೀಯ ಮಿತ್ರರು ಹಾಗೂ ಒಬ್ಬರು ಇನ್ನೊಬ್ಬರ ಅಭಿಮಾನಿ.  ದುನಿಯಾ ಹೈ ಮೇರೆ ಪೀಛೆ ಲೇಕಿನ್ ಮೈ ತೇರೆ ಪೀಛೆ ಎಂಬಂತೆ ‘ಜಗತ್ತಿಗೆಲ್ಲ ನನ್ನ ಹಾಡುಗಳು ಇಷ್ಟವಾದರೂ ನನಗೆ ಮನ್ನಾಡೆ ಹಾಡುಗಳು ಇಷ್ಟ’ ಅನ್ನುತ್ತಿದ್ದರಂತೆ ರಫಿ.  ‘ರಫಿಯಂತೆ ಸ್ಪಷ್ಟ ಉಚ್ಚಾರ ಹಾಗೂ voice throw ನನ್ನಿಂದ ಎಂದೂ ಸಾಧ್ಯವಾಗದು. ಒಂದು ವೇಳೆ ನಾನು ಸಂಗೀತ ನಿರ್ದೇಶಕ ಆಗಿದ್ದರೆ ಪ್ಯಾರ್ ಹುವಾ ಇಕರಾರ್ ಹುವಾ ಹಾಡಿಗೆ ನನ್ನ ಮೊದಲ ಆಯ್ಕೆ  ರಫಿ ಆಗಿರುತ್ತಿದ್ದರು’ ಎಂದು ಮನ್ನಾಡೆ ಒಂದು interview ನಲ್ಲಿ ಹೇಳಿದ್ದಾರೆ.  ರಫಿ ಮತ್ತು ಮನ್ನಾಡೆ ನಿವಾಸಗಳು ಅಕ್ಕ ಪಕ್ಕ ಇದ್ದುವಂತೆ.  ಇಬ್ಬರಿಗೂ ತಮ್ಮ ಮನೆಗಳ ತಾರಸಿ ಮೇಲಿಂದ ಗಾಳಿಪಟ ಹಾರಿಸುವ ಹುಚ್ಚು.   ಮನ್ನಾಡೆ ಗಾಳಿಪಟ ಯಾವಾಗಲೂ ಹೆಚ್ಚು ಎತ್ತರಕ್ಕೇರುತ್ತಿತ್ತಂತೆ.  ‘ಗಾಳಿಪಟದಲ್ಲಿ ನನ್ನನ್ನು ಸೋಲಿಸಿದಿಯಲ್ಲ.  ನಾಳೆ ಹಾಡಿನಲ್ಲಿ ನೊಡ್ಕೋತೀನಿ!’ ಎನ್ನುತ್ತಿದ್ದರಂತೆ ರಫಿ.  ಇಂದು ನಾವು ಕೇಳಲಿರುವ ರಾಗಿನಿ ಚಿತ್ರದ ಹಾಡಿನಲ್ಲಿ ಒಂದು ವಿಶೇಷ ಇದೆ.  ತೆರೆಯ ಮೇಲೆ ಇದನ್ನು ಇಬ್ಬರು ನರ್ತಕಿಯರು ಹಾಡುತ್ತಾರೆ ಹಾಗೂ ಹಾಡಿನ ಸಾಹಿತ್ಯವೂ ಅವರೇ ಹಾಡಿದಂತೆ ಇದೆ. ಆದರೆ ಹಿನ್ನೆಲೆ ಹಾಡುಗಾರಿಕೆ ರಫಿ ಮತ್ತು ಮನ್ನಾಡೆ!  ಇದಕ್ಕೆ ಕಾರಣವೇನಿರಬಹುದು?  ಲಲಿತ್ ರಾಗದ ಕ್ಲಿಷ್ಟಕರವಾದ ಈ ಹಾಡನ್ನು  O P  ನಯ್ಯರ್ ಅವರ ಮೆಚ್ಚಿನ ಆಶಾ ಭೋಸ್ಲೆ ಖಂಡಿತವಾಗಿಯೂ ಹಾಡಬಲ್ಲವರಾಗಿದ್ದರು. ಆದರೆ ಇನ್ನೊಂದು ಧ್ವನಿ? ಅದು ಲತಾ ಮಂಗೇಶ್ಕರ್ ಮಾತ್ರ!  ಗೀತಾ ದತ್ತ್ ಹಾಗೂ ಶಂಶಾದ್ ಬೇಗಂ ಈ ಹಾಡಿನ ಹತ್ತಿರಕ್ಕೂ ಸುಳಿಯಲಾರರು.  ಹಾಗಾಗಿ ಹಠಮಾರಿ O P ನಯ್ಯರ್ ಪುರುಷ ಧ್ವನಿಗಳಿಗೆ ಒಲವು ತೋರಿಸಿರಬಹುದು ಎಂದು ನನ್ನ ಅನಿಸಿಕೆ.  ಅಂತೂ ಈ ರೀತಿಯಲ್ಲಿ ಒಂದು master piece ಜನ್ಮ ತಾಳಿದ್ದಂತೂ ನಿಜ.





ಹಮ್ ರಾಹೀ ಚಿತ್ರಕ್ಕಾಗಿ ಮುಬಾರಕ್ ಬೇಗಂ ಜತೆ ಹಾಡಿದ ಮುಝಕೊ ಅಪನೆ ಗಲೆ ಲಗಾಲೊ.  ಅಂದಿನ ಕಾಲದಲ್ಲಿ ರಫಿ ಯಾರ ಜತೆ ಹಾಡಿದರೂ ಸುಪರ್ ಹಿಟ್ ಆಗುತ್ತಿತ್ತು ಎನ್ನುವುದಕ್ಕೆ ಈ ಹಾಡು ಸಾಕ್ಷಿ.  ಮುಬಾರಕ್ ಬೇಗಂ ಮತ್ತು ಶಂಷಾದ್ ಬೇಗಮ್ ಬಗ್ಗೆ confuse ಮಾಡಿಕೊಳ್ಳುವವರು ಬಹಳ ಮಂದಿ ಇದ್ದಾರೆ.  ಮುಬಾರಕ್ ಬೇಗಂ ಅವರ ಇನ್ನು ಕೆಲವು ಹಿಟ್ ಹಾಡುಗಳು - ಕಭೀ ತನಹಾಯಿಯೊಂ ಮೆ ಹಮಾರೀ ಯಾದ್ ಆಯೇಗೀ, ಆರಜೂ ಚಿತ್ರದ ಕವ್ವಾಲಿ ಶೈಲಿಯ ಜಬ್ ಇಶ್ಕ್ ಕಹೀಂ ಹೊ ಜಾತಾ ಹೈ ಇತ್ಯಾದಿ.  ಮುಂದೆ ಶಂಕರ್ ಅವರು ಪರಿಚಯಿಸಿದ  ತಿತಲಿ ಉಡಿ  ಯ ಶಾರದಾ ಧ್ವನಿಯಲ್ಲಿ ಮುಬಾರಕ್ ಬೇಗಂ ಛಾಯೆಯನ್ನು  ಗುರುತಿಸಬಹುದು.  ಪಕ್ಕದ ಚಿತ್ರದಲ್ಲಿ ಅಂದಿನ ಕಾಲದ ಗಾಯಕರ ಗಡಣವೇ ಇದೆ.  ರಫಿ ಹಾಗೂ ಮುಬಾರಕ್ ಅವರನ್ನು ಕೆಂಬಣ್ಣದಿಂದ ಗುರುತಿಸಲಾಗಿದೆ..  ಉಳಿದವರನ್ನು ಗುರುತಿಸಲು ಪ್ರಯತ್ನಿಸಬಹುದು.





ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರದ ಆಶಾ ಭೋಸ್ಲೆ ಜತೆ ಹಾಡಿದ ಮೈ ಪ್ಯಾರ್ ಕಾ ರಾಹೀ ಹೂಂ. O P ನಯ್ಯರ್ ಅವರ ಮಾಸ್ಟರ್ ಪೀಸ್ ಗಳಲ್ಲಿ ಒಂದು.   ಇದರಲ್ಲಿ ಢೋಲಕ್, ತಬ್ಲಾಗಳಂತಹ ತಾಳ ವಾದ್ಯಗಳೇ ಇಲ್ಲ.  ಕೇವಲ ಗಿಟಾರ್ ರಿದಂ ಮಾತ್ರ.   ಆರಂಭದ ಗಿಟಾರ್ stroke ಗಳು ಹಾಡಿಗೆ ಎಂತಹ ಉಠಾವ್  ಕೊಟ್ಟಿವೆ !  ಚರಣದಲ್ಲಿ ಬರುವ  ಸ್ಯಾಕ್ಸೊಫೋನ್ ನ ಚಿಕ್ಕ ಲಿಂಕ್ ಪೀಸ್ ನಮ್ಮನ್ನು ಇನ್ನಾವುದೋ ಲೋಕಕ್ಕೆ ಕರೆದೊಯ್ಯುತ್ತದೆ. SPB ಯವರ ಮೆಚ್ಚಿನ ಹಾಡು  ಇದು.  ಆಗಾಗ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡುತ್ತಿರುತ್ತಾರೆ.  ಆದರೆ ಚಿತ್ರದಲ್ಲಿ ಈ ಹಾಡೇ ಇಲ್ಲ!









ಲತಾ ಮಂಗೇಶ್ಕರ್ ಜತೆಗೆ  ಹಾಡಿದ ತಾಜ್ ಮಹಲ್ ಚಿತ್ರದ ಜೊ ವಾದಾ ಕಿಯಾ ವೊ ನಿಭಾನಾ ಪಡೇಗಾ ಹಾಡು.  ಇದರ ಆರಂಭದ ಸಂಗೀತವೇ ಇದ ಟ್ರಂಪ್ ಕಾರ್ಡ್. ಅದನ್ನು ಕೇಳಿದಾಕ್ಷಣ ಮನಸ್ಸಲ್ಲಿ ಏನೋ ಒಂದು ವಿಚಿತ್ರ ತಳಮಳ. ಎಲ್ಲೋ ತೇಲಾಡುತ್ತಿರುವ ಅನುಭವ. ಹಿಂದಿ ಚಿತ್ರಸಂಗೀತದ ಇತಿಹಾಸದಲ್ಲೇ ಮಾಧುರ್ಯದಲ್ಲಿ ಇದನ್ನು ಮೀರಿಸುವ ಬೇರೆ ಹಾಡಿಲ್ಲವೆಂದರೆ ತಪ್ಪಾಗಲಾರದು. ಈ ಹಾಡು ಹೊಸದಾಗಿ ಬಂದಿದ್ದಾಗ ಶಮ್ಮಿ ಕಪೂರ್ ಅವರು ಟೇಪ್ ರೆಕಾರ್ಡರಿನಲ್ಲಿ ಇಡೀ ರಾತ್ರಿ ಕೇಳುತ್ತಾ  ಕಣ್ಣೀರು ಸುರಿಸಿದ್ದರಂತೆ.







2 comments:

Your valuable comments/suggestions are welcome