Tuesday, 13 December 2011

ವಿವಿಧ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಪಿ.ಬಿ.ಎಸ್ Top Ten




ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ ವೃತ್ತಿ ಜೀವನದಲ್ಲಿ ಹಿನ್ನೆಲೆಗೆ ಸರಿದು ದಶಕಗಳೇ ಸಂದಿರಬಹುದು, ಅವರ ಹೊಸ ಹಾಡುಗಳು ಬರದೇ ಇರಬಹುದು. ಆದರೆ ಚಿತ್ರ ಸಂಗೀತದ ಸ್ವರ್ಣಯುಗದಲ್ಲಿ ಅವರು ಹಾಡಿದ್ದ ಹಾಡುಗಳು ಪ್ರತಿಸಲ ಕೇಳುವಾಗಲೂ ಹೊಸ ಹಾಡುಗಳೇ. ವಿವಿಧ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಅವರು ಹಾಡಿದ ಒಂದಷ್ಟು ಹಾಡುಗಳನ್ನು ನೆನಪಿಸಿಕೊಳ್ಳುವ ಪ್ರಯತ್ನವೊಂದು ಇಲ್ಲಿದೆ.

1.  ಜಿ.ಕೆ. ವೆಂಕಟೇಶ್ - ದಶಾವತಾರ ಚಿತ್ರದ ವೈದೇಹಿ ಏನಾದಳು
ಹಕ್ಕಿಗಳ ಚಿಲಿಪಿಲಿ, ಅರಣ್ಯದ ಮೌನ, ಜಾನಪದ ತಾಳವಾದ್ಯಗಳು, ವೈಬ್ರೊಫೋನ್ ಇತ್ಯಾದಿಗಳನ್ನೊಳಗೊಂಡ ವಿಶಿಷ್ಟ ಸಂಗೀತ ಸಂಯೋಜನೆಯುಳ್ಳ ಈ ಹಾಡಿಗೆ ಪಿ.ಬಿ.ಎಸ್ ತಮ್ಮ ಪೂರ್ಣ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ.  ಜಿ.ವಿ ಅಯ್ಯರ್ ಅವರ ಈ ರಚನೆಯು  5 ಅಕ್ಷರಗಳ ಜಂಪೆ ತಾಳದಲ್ಲಿದ್ದು ಆಲಿಸಲು ಎಷ್ಟು ಮಧುರವೋ ಹಾಡಲು, ನುಡಿಸಲು ಅಷ್ಟೇ ಕಠಿಣ. (ಪಿ.ಬಿ.ಎಸ್ ಅವರು ಹಾಡಿದ ಬಾಗಿಲನು ತೆರೆದು, ಬಾ ತಾಯಿ ಭಾರತಿಯೆಕನ್ನಡದ ಕುಲದೇವಿ ಕಾಪಾಡು ಬಾ ತಾಯಿ, ನಿನ್ನೊಲುಮೆ ನಮಗಿರಲಿ ತಂದೆ ಇಂದು ಎನಗೆ ಗೋವಿಂದ ಮುಂತಾಗಿ ಬಹಳಷ್ಟು ಹಾಡುಗಳು 5 ಅಕ್ಷರಗಳ ಜಂಪೆ ತಾಳದಲ್ಲಿರುವುದು ವಿಶೇಷ).  ಜಿ.ಕೆ. ವೆಂಕಟೇಶ್ ನೀಡಿದಷ್ಟು PBS Hits ಇನ್ಯಾವ ಸಂಗೀತ ನಿರ್ದೇಶಕರೂ ನೀಡಿರಲಾರರು. ಇವರ ಕನ್ಯಾರತ್ನಬಿಂಕದ ಸಿಂಗಾರಿಯಂತೂ ಪ್ರೇಮಗೀತೆಗಳ ರಾಜ  ಓಹಿಲೇಶ್ವರದಲ್ಲಿ ರಾಜ್ ಅವರೊಡನೆ ಪಿ.ಬಿ.ಎಸ್ ನಂಟು ಬೆಸೆದ ಇವರದ್ದೇ ಎಮ್ಮೆ ಹಾಡು ಈ ನಂಟನ್ನು ಶಿಥಿಲಗೊಳಿಸಿದ್ದು ಮಾತ್ರ ವಿಪರ್ಯಾಸ.  ಆದರೂ ಮುಂದೆ ಸನಾದಿ ಅಪ್ಪಣ್ಣನಾನೆ ತಾಯಿ ನಾನೆ ತಂದೆ ಯಂತಹ ಕೆಲವು ಮಧುರ ಹಾಡುಗಳನ್ನು ನೀಡಲು ಇವರಿಗೆ ಸಾಧ್ಯವಾಯಿತು.



2.  ಎಂ. ವೆಂಕಟರಾಜು - ಭಕ್ತ ಕನಕದಾಸ ಚಿತ್ರದ ಬಾಗಿಲನು ತೆರೆದು.
ದಾಸರ ಪದವೊಂದಕ್ಕೆ ಇಷ್ಟು ಆಕರ್ಷಕವಾಗಿ ರಾಗ ಸಂಯೋಜನೆ ಮಾಡಬಹುದೆಂಬ ಕಲ್ಪನೆಯಾದರೂ ಆ ಪುಣ್ಯಾತ್ಮ ವೆಂಕಟರಾಜು ಅವರಿಗೆ  ಹೇಗೆ ಬಂತೆಂದು ಅಚ್ಚರಿಯೆನಿಸುತ್ತದೆ. ಈ  ಚಿತ್ರದ ಉಳಿದ  ಹಾಡುಗಳೂ ತಮಗೆ ತಾವೇ ಸಾಟಿ.  ಇದರ ನಂತರ ಅಥವಾ ಮೊದಲು ಬಂದ ಯಾವುದೆ ದಾಸರ ಬಗೆಗಿನ ಚಿತ್ರಗಳಲ್ಲಿ ಇಂತಹ ಸಂಗೀತ  ಸಂಯೋಜನೆ ಕಾಣಸಿಗದು.  ಇದರಲ್ಲಿ ಪಿ.ಬಿ.ಎಸ್ ದನಿಯ ಆರ್ದ್ರತೆ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹುದು.  ಚಲನ ಚಿತ್ರಗಳನ್ನು ಇಷ್ಟ ಪಡದ ಅದೆಷ್ಟೋ ಹಿರಿಯರು ಸಹ ಈ ಹಾಡು ಕೇಳಿ ಕಣ್ಣೀರು ಸುರಿಸುತ್ತಿದ್ದರಂತೆ.  ಮೊದಲು ಈ ಚಿತ್ರದ ಎಲ್ಲ ಹಾಡುಗಳನ್ನು ರಘುನಾಥ ಪಾಣಿಗ್ರಾಹಿ(ಖ್ಯಾತ ಒಡಿಸ್ಸಿ ಪಟು ಸಂಯುಕ್ತಾ ಪಾಣಿಗ್ರಾಹಿಯವರ ಪತಿ) ಅವರು ಹಾಡುವುದೆಂದಿತ್ತಂತೆ.  ಕೊನೆಗೆ ಪಿ.ಬಿ.ಎಸ್ ಪಾಲಿಗೆ ಬಂದ ಈ ಅವಕಾಶ ಈ ಮೊದಲೇ ಓಹಿಲೇಶ್ವರ ಚಿತ್ರದಲ್ಲಿ ನಾ ಪಾಪವದೇನಾ ಮಾಡಿದೆನೋ ಎಂದು ರಾಜ್ ಕುಮಾರ್ ಅವರಿಗಾಗಿ ಒಂದು ಹಾಡು ಹಾಡಿದ್ದರೂ  ಅವರಿಗಾಗಿ ಎಲ್ಲ ಹಾಡುಗಳನ್ನು ಹಾಡಿದ ಮೊದಲ ಚಿತ್ರ ಎಂಬ ದಾಖಲೆ ಬರೆಯಿತು.



3.  ಟಿ.ಜಿ.ಲಿಂಗಪ್ಪ - ಬೆಟ್ಟದ ಹುಲಿ ಚಿತ್ರದ ಆಡುತಿರುವ ಮೋಡಗಳೆ
ತಾವೇ ಸ್ವತಃ ಗಾಯಕರಾದ ಇವರು ಹಾಡಿದ ಸ್ಕೂಲ್ ಮಾಸ್ಟರ್ ಚಿತ್ರದ ರಾಧಾ ಮಾಧವ ವಿನೋದ ಹಾ, ಸ್ವಾಮಿ ದೇವನೆ ಲೋಕ ಪಾಲನೆ  ಹಾಗೂ ಸೊಂಪಾದ ಸಂಜೆ ವೇಳೆ ಹಾಡುಗಳು ಬಲು ಪ್ರಸಿದ್ಧ.  ಆದರೂ ಮುಂದೆ ಬಹಳಷ್ಟು ವರ್ಷ ಪಿ.ಬಿ.ಎಸ್ ಇವರ ಮುಖ್ಯ ಗಾಯಕರಾಗಿ ಉಳಿದರು. ಪಂತುಲು ಅವರ ಅಷ್ಟೂ ಚಿತ್ರಗಳು  ಮಧುರ ಹಾಡುಗಳನ್ನೇ ನೀಡಿವೆ. ಬೆಟ್ಟದ ಹುಲಿ ಚಿತ್ರದ ಈ ಹಾಡಿನಲ್ಲಿ ಕನ್ನಡದಲ್ಲಿ ಅಪರೂಪವಾದ ಮೌತ್ ಆರ್ಗನ್ ಬಳಕೆ  ಉಲ್ಲೇಖನೀಯ. (ಮುಂದೆ  ದೇವರ ಗುಡಿ ಚಿತ್ರದ ಹಾಡುಗಳಲ್ಲಿ ರಾಜನ್ ನಾಗೇಂದ್ರ ಅವರು ಮೌತ್ ಆರ್ಗನ್ ಬಳಸಿದ್ದಾರೆ.)  ರಾಜ್ ಗಾಯನ ಯುಗ ಆರಂಭದ ನಂತರವೂ ಆಗೊಮ್ಮೆ ಈಗೊಮ್ಮೆ ಇವರು ಪಿ.ಬಿ.ಎಸ್ ಅವರನ್ನು ಬಳಸಿದ್ದುಂಟು.  ಬಬ್ರುವಾಹನಯಾರು ತಿಳಿಯರು ನಿನ್ನ ಹಾಡನ್ನು ಮರೆಯಲುಂಟೆ?



4.  ವಿಜಯ ಭಾಸ್ಕರ್ - ತೂಗು ದೀಪ    ಚಿತ್ರದ ಮೌನವೇ ಆಭರಣ
ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ ಅಂಖೊಂಸೆ ಜೊ ಉತರೀ ಹೈ ದಿಲ್ ಮೆಂ ಹಾಡಿನ ಆರಂಭದ ಹಮ್ಮಿಂಗ್ ಈ ಹಾಡಿನ ಮೊದಲ ಸಾಲಿಗೆ ಸ್ಪೂರ್ತಿ.  ಪಿ.ಬಿ.ಎಸ್ ಅವರ ವೈಶಿಷ್ಟ್ಯವಾದ ಮುರ್ಕಿಗಳು ಅರ್ಥಾತ್ ಸಾಲಿನ ಕೊನೆಗೆ  ಬರುವ ದನಿಯ ತಿರುವುಗಳು ಈ ಹಾಡಿನ ವಿಶೇಷ.  ಇದೇ ಚಿತ್ರದ ಇನ್ನೊಂದು ಹಾಡು ನಿಮ್ಮ ಮುದ್ದಿನ ಕಂದ ನಾವು - ಇದರಲ್ಲಿ ಪಿ.ಬಿ.ಎಸ್ ಮೀಸೆ ಧರಿಸಿ ಸ್ವತಃ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.  ಇದರದ್ದು ಒಂದು ಕಥೆ ಇದೆ.  ಪಿ.ಬಿ.ಎಸ್ ಅವರಿಗೆ ಮೀಸೆ ಬಿಡಬೇಕೆಂಬ ಆಸೆ ಬಹಳ ಇತ್ತಂತೆ.  ಆದರೆ ತೀರಾ ಸಂಪ್ರದಾಯಸ್ಥರಾದ ಅವರ ಕುಟುಂಬದಲ್ಲಿ ಇದಕ್ಕೆ ಅವಕಾಶವಿರಲಿಲ್ಲವಂತೆ.  ಹಾಗಾಗಿ ಆ ಚಿತ್ರದ ನಿರ್ಮಾಪಕರಾದ ಪಿ.ಬಿ.ಎಸ್ ಅವರ ಆಪ್ತ ಮಿತ್ರ ಕೆ.ಎಸ್.ಎಲ್. ಸ್ವಾಮಿ(ರವಿ) ಅವರು ವಿಶೇಷವಾಗಿ ಈ ಹಾಡಿನ ಸನ್ನಿವೇಶ ಸೃಸ್ಟಿಸಿದರಂತೆ.  ಚಿತ್ರೀಕರಣ ಮುಗಿದ ಮೇಲೆ  ಅದೇ ಗೆಟ್ ಅಪ್ ನಲ್ಲಿ ಮನೆಗೆ ಹೋಗಿ ಎಲ್ಲರಿಗೂ ಮೀಸೆ ತೋರಿಸಿ ಪಿ.ಬಿ.ಎಸ್ ತಮ್ಮ ಆಸೆ ಪೂರೈಸಿಕೊಂಡರಂತೆ.  

     ವಿಜಯ  ಭಾಸ್ಕರ್ ಅವರ ಹಿಂದಿ ಹಾಡುಗಳ ನಂಟಿಗೆ ಇನ್ನೂ ಕೆಲವು ಉದಾಹರಣೆಗಳಿವೆ.  ಕೋಟಿ ಚೆನ್ನಯದ ಕೆಮ್ಮಲೆತ ಬ್ರಹ್ಮ, ಬೆಳ್ಳಿ ಮೋಡದ ಒಡೆಯಿತು ಒಲವಿನ ಕನ್ನಡಿ, ಉಯ್ಯಾಲೆಯ ನಗುತ ಹಾಡಲೆ, ಲಕ್ಶ್ಮಿ ಸರಸ್ವತಿ ಯ ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹಾಗೂ ನಮ್ಮ ಮಕ್ಕಳು ಚಿತ್ರದ ತಾರೆಗಳ ತೋಟದಿಂದ ಹಾಡುಗಳ interlude ಸಂಗೀತದಲ್ಲಿ ಕ್ರಮವಾಗಿ ಮಧುಮತಿಯ ಟೂಟೆ ಹುವೆ ಖ್ವಾಬೊನೆ,  ತೀಸ್ರೀ ಕಸಂನ ದುನಿಯಾ ಬನಾನೆವಾಲೆ,  ಖಾನ್ ದಾನ್ ನ ತುಮ್ಹೀ ಮೇರೆ ಮಂದಿರ್, ಸರಸ್ವತಿ ಚಂದ್ರದ ಫೂಲ್ ತುಮ್ಹೆ ಭೇಜಾ ಹೈ ಖತ್ ಮೆ ಹಾಗೂ ಸಂಗಂನ ಪ್ರೇಮ್ ಪತ್ರ ಪಢ್ ಕರ್ ಹಾಡುಗಳ ಛಾಯೆಯನ್ನು ಸ್ಪಷ್ಟವಾಗಿ ಗುರುತಿಸಬಹುದು.  ಕೋಟಿ ಚೆನ್ನಯದ  ಜೋಡು ನಂದಾ ದೀಪ ಹಾಡಂತೂ ಗೈಡ್ ರಾತ್ ಕೊ ಜಬ್ ಚಂದ್ ಚಮಕೆಯ ನೇರ ಎತ್ತುಗಡೆ.

     ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಒತ್ತಾಸೆಯಂತೆ ಪುಟ್ಟಣ್ಣ ಅವರ ಬಹುತೇಕ ಚಿತ್ರಗಳಲ್ಲಿ  ಒಂದಾದರೂ ಪಿ.ಬಿಎಸ್ ಹಾಡು ಇರುತ್ತಿತ್ತು.  ಮಾನಸ ಸರೋವರವೇದಾಂತಿ ಹೇಳಿದನು ಹಾಡಿನಲ್ಲಿ ಪಿ.ಬಿ.ಎಸ್ ಮಂದ್ರಸ್ಥಾಯಿಯ ಮಾಂತ್ರಿಕತೆ ನಾವು ಎಂತೆಂತಹ ಸಂಭಾವ್ಯ ಹಾಡುಗಳನ್ನು ಮಿಸ್ ಮಾಡಿಕೊಂಡೆವು ಎನ್ನುವುದಕ್ಕೆ ಒಂದು ಉದಾಹರಣೆ.

     ಇರಲಿ,  ಈಗ ಮೌನವೇ ಆಭರಣ ಕೇಳೋಣ.



5.  ರಾಜನ್ ನಾಗೇಂದ್ರ - ಅನ್ನಪೂರ್ಣ ಚಿತ್ರದ ಹೃದಯ ವೀಣೆ ಮಿಡಿಯೆ ತಾನೆ
ಇದೊಂದು ಅಷ್ಟೊಂದು ಪ್ರಸಿದ್ಧವಾಗದ ಆದರೆ ಬಲು ಮಧುರವಾದ ಗಜಲ್ ಶೈಲಿಯ ಹಾಡು.  ಬಿದಿರಿನ ಕೊಳಲು ಗಾನದ ಹೊನಲು ಹರಿಸದೆ ಕೃಷ್ಣನ ಕರ ಸೋಕಲು ದಂತಹ ಸುಂದರ ಸಾಲುಗಳು ಈ ಉದಯ ಶಂಕರ್ ರಚನೆಯಲ್ಲಿವೆ.  ಪಿ.ಬಿ.ಎಸ್ ನಿರ್ವಹಣೆ ಎಂದಿನಂತೆ   ಸೂಪರ್.  ಸ್ಪಷ್ಟ ಉಚ್ಚಾರ,  ಎಷ್ಟೇ ಉದ್ದದ ಸಾಲು ಹಾಡಿದರೂ ಒಂದಿನಿತೂ ಕೇಳಿಸದ ಉಸಿರಿನ ಸದ್ದು - ಇವು ಪಿ.ಬಿ.ಎಸ್ ವಿಶೇಷತೆಗಳು.  ಈಗಿನ ಪೀಳಿಗೆಯ ಹಾಡುಗಾರರ ಹಾಡುಗಳಲ್ಲಿ ಹಾಡಿಗಿಂತಲೂ ಉಸಿರೆಳೆದುಕೊಳ್ಳುವ ಸದ್ದೇ ಜೋರಾಗಿ ಕೇಳಿಸುವುದನ್ನು ಗಮನಿಸಬಹುದು.  ಪಿ.ಬಿ.ಎಸ್ ಅವರು ಫಾರ್ಮ್ ನಲ್ಲಿ ಇರುವಾಗಲೇ ವಿವಿಧ ಕಾರಣಗಳಿಂದ ಹಿನ್ನೆಲೆಗೆ ಸರಿಯುವಂತಾಗದಿದ್ದರೆ  ನಾವಾಡುವ ನುಡಿಯೆ ಕನ್ನಡ ನುಡಿ, ಎಂದೆಂದೂ ನಿನ್ನನು ಮರೆತು ಅಂತಹ ಇನ್ನೂ ಅದೆಷ್ಟೋ ಹಾಡುಗಳು ನಮಗೆ ಸಿಗುತ್ತಿದ್ದವೋ ಏನೋ.  ನಂತರವೂ ಇವರು ಕಾಲಜಯಿ ಗೀತೆ ನಾನೇ ಎಂಬ ಭಾವ ನಾಶವಾಯಿತು ಗೆ ಪಿ.ಬಿ.ಎಸ್ ಅವರನ್ನೇ ಬಳಸಿಕೊಂಡದ್ದು ಗಮನಾರ್ಹ.



6.  ವಿಜಯಾ ಕೃಷ್ಣಮೂರ್ತಿ -  ಮುರಿಯದ ಮನೆ ಚಿತ್ರದ ಮತಿಹೀನ ನಾನಾಗೆ ತಂದೆ
ವಿಜಯಾ ಸ್ಟುಡಿಯೊದ ಕಾಯಂ ಮ್ಯೂಸಿಕ್ ಅರೇಂಜರ್ ಆದ ಇವರು ಸಂಗೀತ ಒದಗಿಸಿದ ಚಿತ್ರಗಳು ಜೇನು ಗೂಡು, ಮುರಿಯದ ಮನೆ ಹಾಗೂ ವಾತ್ಸಲ್ಯ -  ಈ ಮೂರೇ ಆದರೂ ತಮ್ಮ ಶ್ರೀಮಂತ ಸಂಗೀತದಿಂದ  ಚಿರಸ್ಥಾಯಿಯಾಗಿ ಉಳಿದರು.  ಮೇಲ್ನೋಟಕ್ಕೆ ಈ ಹಾಡು ನಾಂದಿಹಾಡೊಂದ ಹಾಡುವೆ ಶೈಲಿಯದ್ದೇ ಅನಿಸಿದರೂ ಇಲ್ಲಿ ಶಂಕರ್ ಜೈಕಿಶನ್ ಮೈಂ ಗಾವೂಂ ತುಂ ಸೋ ಜಾವೊ ಹಾಡಿನಲ್ಲಿ ಮಾಡಿದಂತೆ ದೊಡ್ಡ ಆರ್ಕೆಷ್ಟ್ರಾ ಬಳಸಿಯೂ ಹೇಗೆ ರಾತ್ರಿಯ ನೀರವತೆಯನ್ನು ಸೃಷ್ಟಿಸಬಹುದು ಎಂದು ತೋರಿಸಲಾಗಿದೆ.  ಈ ಚಿತ್ರದ ಹಿಂದಿ ಅವತರಣಿಕೆ ಖಾನ್ ದಾನ್ ನಲ್ಲಿ ಈ ಸಂದರ್ಭಕ್ಕೆ  ರಫಿಯ ತೂ ಹೋಕೆ ಬಡಾ ಬನ್ ಜಾನಾ ಇತ್ತು.



7.  ಎಂ.ರಂಗ ರಾವ್ -  ಸಾಕ್ಷಾತ್ಕಾರ ಚಿತ್ರದ ಜನುಮ ಜನುಮದ ಅನುಬಂಧ
ಇವರು ಪಿ.ಬಿ.ಎಸ್ ಅವರ ಸಮೀಪ ಬಂಧು.  ಎಸ್.ಪಿ.ಬಿ ಯವರನ್ನು ನಕ್ಕರೆ ಅದೇ ಸ್ವರ್ಗ ಮೂಲಕ ಕನ್ನಡಕ್ಕೆ ತಂದವರೂ ಇವರೇ.   ಆರಂಭದ ಆಲಾಪ್ ಸಾಕ್ಷಾತ್ಕಾರ ಚಿತ್ರದ ಈ ಹಾಡಿನ ಹೈ ಲೈಟ್.  ಇಲ್ಲಿ ಪಿ.ಬಿ.ಎಸ್ ದನಿಯಲ್ಲಿ ಒಂದು ವಿಶಿಷ್ಟ ಜೀರು ಇದೆ.  ಇದೇ ಚಿತ್ರದ ಒಲವೆ ಜೀವನ ಸಾಕ್ಶಾತ್ಕಾರ ಹಾಡಿನ ಒಂದು ವಿಶೇಷ ಇದೆ.  ಒಂದೇ ಹಾಡಿನ ಒಂದು happy ಹಾಗೂ ಒಂದು sad ವರ್ಷನ್ ಗಳು ಇದ್ದರೆ ಸಾಮಾನ್ಯವಾಗಿ happy ವರ್ಷನ್ ಹೆಚ್ಚು ಜನಪ್ರಿಯವಾಗುತ್ತದೆ.  ಆದರೆ ಇಲ್ಲಿ ಪಿ,ಬಿ.ಎಸ್ ಅವರ sad ವರ್ಷನ್ ಗೆದ್ದಿದೆ.  ಸೀತಾ ಚಿತ್ರದ ಬರೆದೆ ನೀನು ನಿನ್ನ ಹೆಸ ಹಾಡಿನಲ್ಲೂ ಹೀಗೆಯೇ ಆಗಿದೆ.



8.  ಉಪೇಂದ್ರ ಕುಮಾರ್ - ವನಸುಮ ಚಿತ್ರದ ಚಂದ್ರ ಮಂಚಕೆ ಬಾ 
ಚಿತ್ರ ಬೆಳಕೇ ಕಾಣದಿದ್ದರೂ ಈ ಹಾಡು ಮಾತ್ರ ಅಮರ.  ಎಸ್.ಡಿ.ಬರ್ಮನ್ ಬಂಗಾಳಿ ಸಂಗೀತದ ಛಾಯೆಯನ್ನು ಇಲ್ಲಿ ಗುರುತಿಸಬಹುದು.  ಸಂಸ್ಕೃತಭೂಯಿಷ್ಟ ಸಾಹಿತ್ಯದ ಈ ಕುವೆಂಪು ಹಾಡಿಗೆ ಪಿ.ಬಿ.ಎಸ್ ಅಲ್ಲದೆ ಇನ್ಯಾರು ನ್ಯಾಯ ಒದಗಿಸಬಲ್ಲರು? ತಮ್ಮ ಮೊದಲ ಚಿತ್ರ ಕಠಾರಿವೀರ ದಿಂದ ಮೊದಲ್ಗೊಂಡು ಪರೋಪಕಾರಿ, ಹಸಿರು ತೋರ, ಸಿಪಾಯಿ ರಾಮು ಮುಂತಾದ ಚಿತ್ರಗಳಲ್ಲೂ ಇವರು ಉತ್ತಮ ಪಿ.ಬಿ.ಎಸ್ ಹಾಡುಗಳನ್ನು ನೀಡಿದರು.



9.  ಪೆಂಡ್ಯಾಲ ನಾಗೇಶ್ವರ ರಾವ್ - ಕೃಷ್ಣ ಗಾರುಡಿ ಚಿತ್ರದ ಬೊಂಬೆ ಆಟವಯ್ಯ
ಇವರ ನಿರ್ದೇಶನದಲ್ಲಿ ಪಿ.ಬಿ.ಎಸ್ ಹಾಡು ಇದೊಂದೇ. ಉಳಿದಂತೆ ಇವರು ಯಾವಾಗಲೂ ಘಂಟಸಾಲ ಅವರನ್ನೇ ಬಳಸಿಕೊಂಡವರು. ಈ ಹಾಡು ದರ್ಬಾರಿ ಕಾನಡಾ ರಾಗಾಧಾರಿತ.  ಬಹುಶಃ ಈ ರಾಗ ಪೆಂಡ್ಯಾಲ ಅವರಿಗೆ ಅಚ್ಚು ಮೆಚ್ಚು ಎಂದು ತೋರುತ್ತದೆ. ಹೀಗಾಗಿ ಜಗದೇಕವೀರನ ಕಥೆಯ  ಶಿವಶಂಕರಿ ಹಾಗೂ ಸತ್ಯ ಹರಿಶ್ಚಂದ್ರನಮೋ ಭೂತನಾಥ ಇದೇ ರಾಗದಲ್ಲಿ ಮೂಡಿ ಬಂದವು.  



10.  ಎಸ್.ರಾಜೇಶ್ವರ ರಾವ್ - ಅಮರ ಶಿಲ್ಪಿ ಜಕ್ಕಣ್ಣ ಚಿತ್ರದ ನಿಲ್ಲು ನೀ ನೀಲವೇಣಿ
ಕನ್ನಡದ ಮೊದಲ ವರ್ಣ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರದ ಏಕೈಕ ಪಿ.ಬಿ.ಎಸ್ ಹಾಡು ಇದು.  ಉಳಿದ ಹಾಡುಗಳನ್ನು ಘಂಟಸಾಲ ಹಾಡಿದ್ದಾರೆ.  ಹೆಣ್ಣುದನಿಯ ಆಲಾಪದೊಡನೆ ಇರುವ ಈ  ಹಾಡಿನ ಜಾಡಿನಲ್ಲೇ ಮುಂದೆ ಗೌರಿ ಚಿತ್ರದ ಇವಳು ಯಾರು ಬಲ್ಲೆಯೇನು ಹಾಗೂ ಸೊಸೆ ತಂದ ಸೌಭಾಗ್ಯರವಿವರ್ಮನ ಕುಂಚದ  ಕಲೆ ಹಾಡುಗಳು ರೂಪುಗೊಂಡವು.  ಏಕ ಕಾಲಕ್ಕೆ ಕನ್ನಡ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾದ ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ಈ ಹಾಡನ್ನು ನಿಲುವುಮಾ ನಿಲುವುಮಾ ನೀಲವೇಣಿ ಎಂದು ಘಂಟಸಾಲ ಅವರು ಹಾಡಿದ್ದಾರೆ. ಅಂದಿನ ಕಾಲದಲ್ಲಿ ಹಿಂದಿ ಚಿತ್ರಗಳ ಹಾಡುಗಳು ಚಿತ್ರ ತೆರೆಕಾಣುವುದಕ್ಕೆ  ಮುನ್ನವೇ  ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದರೂ  ಕನ್ನಡ ಹಾಡುಗಳ  ಧ್ವನಿಮುದ್ರಿಕೆಗಳು  ಮಾತ್ರ ಚಿತ್ರ ತೆರೆಕಂಡು ಎಷ್ಟೋ ಸಮಯದ ನಂತರವೇ ಬಿಡುಗಡೆಯಾಗುತ್ತಿದ್ದವು.  ಹಾಗಾಗಿ  ಅಂದಿನ ಕನ್ನಡ ಚಿತ್ರ ಪ್ರೇಕ್ಷಕರಿಗೆ ಚಿತ್ರದಲ್ಲಿ ಯಾವ್ಯಾವ ಹಾಡುಗಳಿವೆ ಎಂದು ತಿಳಿಯುತ್ತಿದ್ದುದು 10 ಪೈಸೆ ಕೊಟ್ಟು ಪದ್ಯಾವಳಿ ಕೊಂಡಾಗಲೇ!  ಆದರೆ ಅಮರ ಶಿಲ್ಪಿ ಜಕ್ಕಣ್ಣದ ಹಾಡುಗಳು ಚಿತ್ರ ಬಿಡುಗಡೆಯ ಕೆಲವು ತಿಂಗಳು ಮೊದಲೇ ರೇಡಿಯೋದಲ್ಲಿ ಪ್ರಸಾರವಾಗತೊಡಗಿ ಎಲ್ಲರಿಗೂ ಕಂಠಪಾಠವಾಗಿದ್ದವು.  ಹಾಗಾಗಿ ಪ್ರೇಕ್ಷಕರಿಗೆ  ಚಿತ್ರದಲ್ಲಿ ಹಾಡುಗಳ ವೀಕ್ಷಣೆ ಹೊಸ ಅನುಭವ ನೀಡಿತ್ತು.



Sunday, 4 December 2011

ದೇವ್ ಆನಂದ್ Top Ten

"मां, बंबइ से दिल्ली से कल्कत्ता से मद्रास से, सिंगापुर हांकांग लंडन से, न्यूयार्क  रॊम पैरिस से जो भी टूरिस्ट आता है, स्टॆशन पे उतर के क्या पूछता है - राजू गाइड कहां है  राजू गाइड "

ಗೆಲುವಿಗೆ ಹಿಗ್ಗದೆ ಸೋಲಿಗೆ ಕುಗ್ಗದೆ ಹರ್ ಫಿಕ್ರ್ ಕೊ ಧುವೆಂ ಮೆ ಉಡಾತಾ ಚಲಾ ಗಯಾ ಎನ್ನುತ್ತಾ  ಬದುಕಿಗೆ ಬೈ ಬೈ ಹೇಳಿದ  ದೇವ್ ಆನಂದ್ ತೆರೆಯ ಮೇಲೆ ಸಾಕಾರಗೊಳಿಸಿದ ಅನೇಕ ರಫಿ - ಕಿಶೋರ್ ಹಾಡುಗಳಲ್ಲಿ  ನನ್ನ ಮೆಚ್ಚಿನ ಹತ್ತು ಇಲ್ಲಿವೆ.






1. ಕಭಿ ಖುದ್ ಪೆ - ಹಮ್ ದೊನೊ

                                         

2. ಅಕೇಲಾ ಹೂಂ ಮೈಂ - ಬಾತ್  ಏಕ್ ರಾತ್ ಕೀ

                                         


3. ತೆರೀ ಜುಲ್ಫೊಂ ಸೆ - ಜಬ್ ಪ್ಯಾರ್ ಕಿಸೀ ಸೆ ಹೊತಾ ಹೈ

                                        

4.  ಮಾನಾ ಜನಾಬ್ ನೆ ಪುಕಾರಾ ನಹೀಂ - ಪೇಯಿಂಗ್ ಗೆಸ್ಟ್
     
                                       
5. ದುಖಿ ಮನ್ ಮೆರೆ - ಫಂಟೂಶ್

                                      

6. ದಿಲ್ ಕಾ ಭಂವರ್ ಕರೆ ಪುಕಾರ್ -  ತೇರೆ ಘರ್ ಕೆ ಸಾಮ್ನೆ
                               
                                     

7. ತೆರೆ ಮೆರೆ ಸಪ್ನೆ - ಗೈಡ್

                                    

8.  ಛೇಡಾ ಮೇರೆ ದಿಲ್ ನೆ ತರಾನಾ ತೆರೆ ಪ್ಯಾರ್ ಕಾ - ಅಸಲೀ ನಕಲೀ

                                   

9.  ಜೀವನ್ ಕೀ ಬಗಿಯಾ ಮಹಕೇಗೀ - ತೇರೇ ಮೇರೇ  ಸಪ್ನೆ

                                  

10. ಪಲ್ ಭರ್ ಕೆ ಲಿಯೆ ಕೋಯಿ ಹಮೆ - ಜೋನಿ ಮೇರಾ ನಾಮ್

                                 

Thursday, 17 November 2011

ಕೋಲಾಟ


ಡಾ| ರಾಜ್ ಅಭಿನಯದ ಕವಿರತ್ನ ಕಾಳಿದಾಸ ಚಿತ್ರದ  ಬೆಳ್ಳಿ ಮೂಡಿತು ಕೋಳಿ ಕೂಗಿತು ಹಾಡು ಎಲ್ಲರಿಗೂ ಗೊತ್ತು.  ಇದೇ ಕಥೆಯ ಚಿತ್ರ 50ರ ದಶಕದಲ್ಲಿ ಕು.ರ.ಸೀತಾರಾಮ ಶಾಸ್ತ್ರಿ ನಿರ್ದೇಶನದಲ್ಲಿ ಮಹಾಕವಿ ಕಾಳಿದಾಸ ಎಂಬ ಹೆಸರಿನಲ್ಲಿ  ಬಂದಿತ್ತು. ಹೊನ್ನಪ್ಪ ಭಾಗವತರ್, ಸರೋಜಾ ದೇವಿ, ನರಸಿಂಹ ರಾಜು ಮುಂತಾದವರು ತಾರಾಗಣದಲ್ಲಿದ್ದರು.    ಆ ಚಿತ್ರದಲ್ಲಿ ಈ ಸಂದರ್ಭಕ್ಕೆ ಇದ್ದ ಹಾಡು ಯಾವುದು ಗೊತ್ತೇ?  ಅದುವೇ ಕೋಲಾಟ ಅಂದಾಕ್ಷಣ ಥಟ್ಟನೆ ನೆನಪಾಗುವ ಚೆಲುವಯ್ಯ ಚೆಲುವೊ ಹಾಡು. ರಾಜ್ ಅವರಂತೆಯೇ ಗಾಯಕ-ನಟರಾದ ಸಿ. ಹೊನ್ನಪ್ಪ ಭಾಗವತರ್ ಸ್ವತಃ ಈ ಹಾಡು ಹಾಡಿದ್ದರು.  ಈ ಚಿತ್ರಕ್ಕೆ ಸಂಗೀತ ನಿರ್ದೇಶನವೂ ಅವರದೇ. ಆ ಹಾಡು ಎಷ್ಟೊಂದು ಜನಪ್ರಿಯವಾಯಿತೆಂದರೆ  ಅದೊಂದು ಕೇವಲ ಚಿತ್ರಗೀತೆಯಾಗಿ ಉಳಿಯದೆ ಶಾಲಾ ವಾರ್ಷಿಕೋತ್ಸವಗಳ ಅವಿಭಾಜ್ಯ ಅಂಗವೇ ಆಗಿ ಹೋಯಿತು! ಈ ಹಾಡಿನ ಎಷ್ಟೋ remix ಗಳು, version ಗಳೂ ಬಂದಿವೆ.  ಆದರೆ ಹಾಡಿನ ಮೂಲ ಧಾಟಿ ಬದಲಾಗಿಲ್ಲ.  ಇದರ ಸರಳತೆಯೇ ಇದಕ್ಕೆ ಕಾರಣವಿರಬಹುದು.   ಆಧುನಿಕ ಹಾಡುಗಳ ಭರಾಟೆಯ ನಡುವೆಯೂ ಆಗೊಮ್ಮೆ ಈಗೊಮ್ಮೆ ಈ ಹಾಡಿಗೆ ಸಂಯೋಜಿಸಿದ  ಕೋಲಾಟ  ಶಾಲಾ ವಾರ್ಷಿಕೋತ್ಸವಗಳಲ್ಲಿ ಸ್ಥಾನ ಪಡೆಯುತ್ತಿರುವುದನ್ನು ಈಗಲೂ ಕಾಣಬಹುದು.

     ಮಹಾಕವಿ ಕಾಳಿದಾಸ ಚಿತ್ರದ ಈ ಹಾಡನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.  ಚಿತ್ರಗೀತೆಗಳೆಂದರೆ ಸಾಮಾನ್ಯವಾಗಿ ಇದ್ದೇ ಇರುವ  ಗಿಟಾರ್, ಸಿತಾರ್, ವಯಲಿನ್ ನಂತಹ ತಂತಿ ವಾದ್ಯಗಳಾಗಲೀ, ಕೊಳಲು, ಕ್ಲಾರಿಯೊನೆಟ್ ನಂತಹ ಊದುವ(ಸುಷಿರ) ವಾದ್ಯಗಳಾಗಲಿ  ಇಲ್ಲಿ ಇಲ್ಲವೇ ಇಲ್ಲ.  ಕೇವಲ ದೊಳ್ಳು, ಉತ್ತರ ಕರ್ನಾಟಕದ ಜಾನಪದ ವಾದ್ಯ ಚೌಡಿಕಿ ಹಾಗೂ ಕೋಲಾಟದ ಕೋಲುಗಳನ್ನು ಮಾತ್ರ ತಾಳವಾದ್ಯಗಳಾಗಿ ಉಪಯೋಗಿಸಲಾಗಿರುವುದು ಇಲ್ಲಿಯ ವಿಶೇಷ.  ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ತಾಳವಾದ್ಯಗಳನ್ನು ಮಾತ್ರ ಉಪಯೋಗಿಸಿದ ಇನ್ನೂ ಕೆಲವು ಹಾಡುಗಳಲ್ಲಿ ಒಂದು.

     ಹಾಡನ್ನು ಆಲಿಸಲು ಕ್ಲಿಕ್ಕಿಸಿ.





ಚೆಲುವಯ್ಯ ಚೆಲುವೊ                       
ಚಿತ್ರ: ಮಹಾಕವಿ ಕಾಳಿದಾಸ
ಹಾಡಿದವರು : ಸಿ.ಹೊನ್ನಪ್ಪ ಭಾಗವತರ್ ಮತ್ತು ಸಂಗಡಿಗರು.
ಸಂಗೀತ ನಿರ್ದೇಶನ :   ಸಿ.ಹೊನ್ನಪ್ಪ ಭಾಗವತರ್

ಚೆಲುವಯ್ಯ ಚೆಲುವೊ ತಾನಿ ತಂದನ                       
ಚಂದಮಾಮದಲ್ಲಿ ಪ್ರಕಟವಾಗಿದ್ದ ಜಾಹೀರಾತು
ಚಿನ್ಮಯಾ ರೂಪೇ ಕೊಲಣ್ಣ ಕೋಲೆ

ಬೆಟ್ಟದ್ ಮ್ಯಾಗಳ್ ಜಲ್ಲೆ ಬಿದಿರು
ಬೇಲಿ ಮ್ಯಾಗಳ್  ಸೋರೆ ಬುರುಡೆ
ಲೋ ಲೋ ಕಿನ್ನರಿ ನುಡಿಸೋನ್ಯಾರಯ್ಯ

ಬೋರು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಲ್ಯೊ

ನಮ್ಮ ಕೇರಿಗ್ ಬಂದರೀಗ
ಕರಿಯ ಕಂಭ್ಳಿ ಗದ್ದೀನ್ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ

ಗಂಧನಾದ್ರೂ ಧರಿಸಿಕೊಳ್ಳಿ
ವೀಳ್ಯನಾದ್ರೂ ಮೆದ್ದು ಕೊಳ್ಳಿ
ಬಂದ ಕಾರ್ಯ ಹೇಳಿ ದಮ್ಮಯ್ಯ

ಬಂದ ಕಾರ್ಯ ಹೇಳುವುದಕ್ಕೆ
ಮಂತ್ರಿ ಪ್ರಧಾನಿ ಬೇಕು
ಹಾರ ತುರಾಯಿಗಳೆಲ್ಲೇ

ಆಗದೋನೆ ಭೋಗದೋನೆ
ನಾಗ ನಡು ಕಟ್ಟಿನೋನೆ
ಕೋಗಿಲ್ಹಾಂಗೆ ಕೂಗುತ್ತೀಯಲ್ಲೋ

ಎತ್ತಿಗಂತ ನೀನು ಬಾರೆ
ಎಮ್ಮೆಗಂತ ನಾನು ಬತ್ತೀನ್
ಕುಂತು ನಿಂತು ಮಾತನಾಡೋಣ

ಊರಿಗಂತ ನೀನು ಬಾರೊ
ನೀರಿಗಂತ ನಾನು ಬತ್ತೀನ್
ದೂರ ನಿಂತು ಮಾತನಾಡೋಣ


ಚೆಲುವಯ್ಯ ಚೆಲುವೊ ತಾನಿ ತಂದನ
ಚಿನ್ಮಯಾ ರೂಪೇ ಕೊಲಣ್ಣ ಕೋಲೆ





Monday, 31 October 2011

ಜಿಗಿ ಜಿಗಿಯುವ ಹಾಡು

     ಗಾಳಿಪಟದ ಬಗ್ಗೆ ಯಾವುದಾದರೂ ಹಾಡು ಗೊತ್ತೇ ಎಂದು ಕೇಳಿದರೆ ಆಪ್ತ ಮಿತ್ರಪಟ ಪಟ ಗಾಳಿಪಟ ಅಥವಾ ಗಾಳಿಪಟ ಚಿತ್ರದ ಟೈಟಲ್ ಹಾಡು ಹೆಚ್ಚಿನವರಿಗೆ ನೆನಪಾಗಬಹುದು.  ಆದರೆ  60ರ ದಶಕದಲ್ಲಿ ಬಂದ ಜೇನುಗೂಡು ಚಿತ್ರದ ಜಿಗಿಜಿಗಿಯುತ ನಲಿ ಹಾಡು ನೆನಪು ಮಾಡಿಕೊಳ್ಳುವವರು ಕೆಲವರಷ್ಟೇ ಇರಬಹುದು.  ಅಷ್ಟೊಂದು ಹೆಸರು ಕೇಳಿ ಬರದ ಜೆ.ವಿ.ರಾಘವುಲು ಹಾಗೂ ಕ್ಯಾಬರೆ ಗಾಯಕಿ ಎಂದೇ ಸಾಮಾನ್ಯವಾಗಿ ಗುರುತಿಸಿಕೊಳ್ಳುವ ಎಲ್.ಆರ್.ಈಶ್ವರಿ  ಹಾಡಿದ ಈ ಹಾಡು ಅಂದು ಪ್ರತಿಯೊಬ್ಬರ ನಾಲಗೆಯಲ್ಲಿ ನಲಿದಾಡುತ್ತಿತ್ತು.  ಕನ್ನಡದಲ್ಲಿ ಜೇನುಗೂಡು, ಮುರಿಯದ ಮನೆ ಹಾಗೂ ವಾತ್ಸಲ್ಯ ಈ ಮೂರು ಚಿತ್ರಗಳಿಗೆ ಮಾತ್ರ ಮಧುರ ಸಂಗೀತ ನೀಡಿದ ವಿಜಯಾ ಕೃಷ್ಣಮೂರ್ತಿ ಅವರ ಮಾಸ್ಟರ್ ಪೀಸ್ ಇದು.  ಮಹಿಳೆ ಇರಬಹುದೇನೊ ಎಂದು ಸಂಶಯ ಮೂಡಿಸುವ ಹೆಸರಿನ ಇವರು ವಿಜಯಾ ಸ್ಟುಡಿಯೋದ ಕಾಯಂ ಮ್ಯೂಸಿಕ್ ಎರೇಂಜರ್ ಆಗಿದ್ದುದರಿಂದ  ವಿಜಯಾ ಪದವನ್ನು ತಮ್ಮ ಹೆಸರಿಗೆ ಪ್ರಿ ಫಿಕ್ಸ್ ಮಾಡಿಕೊಂಡಿದ್ದರಂತೆ.

     ಮುಖ್ಯವಾಗಿ ಎಕಾರ್ಡಿಯನ್, ಕೊಳಲು-ಕ್ಲಾರಿಯೊನೆಟ್ , ಬೇಸ್ ಗಿಟಾರ್ ಹಾಗೂ ಢೋಲಕ್ ಬಳಕೆಯಾಗಿರುವ ಈ ಹಾಡಿನ ವೇಗ ಹಾಗೂ ಅಚ್ಚುಕಟ್ಟುತನ ಬೆರಗು ಮೂಡಿಸುತ್ತದೆ. Accordian ನ bellows  ಒತ್ತುವಿಕೆ ಹಾಗೂ ಬೆರಳುಗಾರಿಕೆಗಳ ಚಮತ್ಕಾರ ಇಷ್ಟೊಂದು ಪರಿಣಾಮಕಾರಿಯಾಗಿ ಇನ್ಯಾವ ಹಾಡಿನಲ್ಲೂ ಬಂದಿರಲಾರದು. ಈಗಿನಂತೆ ಕಟ್ & ಪೇಸ್ಟ್ ಸೌಲಭ್ಯ ಇಲ್ಲದ ಕೇವಲ ಲೈವ್ ರೆಕಾರ್ಡಿಂಗ್ ನಡೆಯುತ್ತಿದ್ದ ಆ ಕಾಲದಲ್ಲಿ ನಮಗೆ ಹೆಸರೇ ಗೊತ್ತಿಲ್ಲದ ಆ ಕಲಾವಿದರ ಬೆರಳುಗಳು ವಾದ್ಯಗಳ ಮೆಲೆ  ಹೇಗೆ ಜಿಗಿ ಜಿಗಿಯುತ್ತ ನಲಿದಿದ್ದವೋ ಏನೋ.

    ಜೇನುಗೂಡು ಹಿಂದಿಯ ಭಾಭಿ  ಚಿತ್ರದ  ಕನ್ನಡ ಅವತರಣಿಕೆ. ಆ ಚಿತ್ರದ  ಚಲಿ ಚಲಿರೆ ಪತಂಗ್ ಮೆರಿ ಚಲಿರೆ ಹಾಡಿಗಿಂತಲೂ  ಈ ಹಾಡು ಹೆಚ್ಚು ಆಕರ್ಷಕ.

    ಆಕಾಶವಾಣಿಯಲ್ಲಿ ಅಪರೂಪಕ್ಕೊಮ್ಮೆ   ಪ್ರಸಾರವಾಗುವ ಈ ಹಾಡಿನ ಧ್ವನಿಮುದ್ರಿಕೆಯಲ್ಲಿ ಎರಡು ಚರಣಗಳು ಮಾತ್ರ ಇವೆ.  ಆದರೆ ಅಂದಿನ ದಿನಗಳಲ್ಲಿ ಹಿಂದಿಯಲ್ಲಿ ಸಾಮಾನ್ಯವಾಗಿದ್ದಂತೆ ಈ ಕನ್ನಡ ಹಾಡಿಗೂ ಚಲನ ಚಿತ್ರದಲ್ಲಿ  ಮೂರು ಚರಣಗಳಿದ್ದುದು ವಿಶೇಷ.  ಯೂ ಟ್ಯೂಬ್ ನಲ್ಲಿ ಹುಡುಕಿದರೆ ಈ ಹಾಡಿನ ವಿಡಿಯೊ ಕೂಡ ಸಿಗುತ್ತದೆ.  ಆದರೆ ದುರದೃಷ್ಟವಶಾತ್ ಈ ಹಾಡಿನ ಭಾಗ ಬಹಳಷ್ಟು  ಕ್ಷತಿಗೊಂಡಿರುವುದರಿಂದ  ರಸಭಂಗವಾಗುವ ಸಾಧ್ಯತೆಯೆ ಹೆಚ್ಚು.

     ಮೂರೂ ಚರಣಗಳ ಸಮೇತ ಬೇರೆಲ್ಲೂ ಸಿಗದ ಪೂರ್ತಿ  ಹಾಡು ಪದ್ಯಾವಳಿಯ ಪುಟದೊಡನೆ ಇಲ್ಲಿದೆ.



                                                
                                                                       




Monday, 26 September 2011

ಅರವತ್ತರಲ್ಲಿ ಮೂವತ್ತರ ನೆನಪು


     30 ವರ್ಷಗಳ ಹಿಂದೆ ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ನಾನು ನುಡಿಸಿದ್ದ ಮಹಾಗಣಪತಿಂ ಕೀರ್ತನೆ.  ಆರಂಭದಲ್ಲಿ ಆಗ ಮಂಗಳೂರಲ್ಲಿ ಉದ್ಘೋಷಕರಾಗಿದ್ದು ಈಗ  ಬೆಂಗಳೂರಲ್ಲಿ ವಾರ್ತಾ ವಾಚಕರಾಗಿರುವ K.T. ಕೃಷ್ಣಕಾಂತ್ ಅವರ  ಧ್ವನಿಯನ್ನು ಆಲಿಸಬಹುದು.  ಪ್ರಸಿದ್ಧ ಕಲಾವಿದರಾದ ಶ್ರೀ ಶ್ರೀನಾಥ ಮರಾಠೆ ಅವರು ತಂಬೂರ, ಶ್ರೀ ಹರಿಶ್ಚಂದ್ರನ್ ಅವರು ಮೃದಂಗ ಮತ್ತು ಶ್ರೀ A.R.ಕೃಷ್ಣಮೂರ್ತಿ ಅವರು ವಯಲಿನ್ ನುಡಿಸಿ ಪ್ರೋತ್ಸಾಹಿಸಿದ್ದರು.   ಈ ಕೀರ್ತನೆಯ ಒಂದು ಸಾಲು ನುಡಿಸಿದಾಕ್ಷಣ ನಿಮ್ಮ ಗುರುಗಳು ಯಾರು ಎಂದು ಯಾರಾದರೂ ಕೇಳುವಷ್ಟು ಛಾಪನ್ನು ನನ್ನಲ್ಲಿ ಮೂಡಿಸುವಲ್ಲಿ ಗುರುಗಳಾದ ಶ್ರೀ ಗೋಪಾಲಕೃಷ್ಣ ಅಯ್ಯರ್ ಅವರು ಸಫಲರಾಗಿದ್ದರು.


Monday, 19 September 2011

ನಮೋ ನಮೋ ನಟರಾಜ




ಆಗ ನಾನು ಎರಡನೆಯ ಅಥವಾ ಮೂರನೆಯ ಕ್ಲಾಸು. ನಮ್ಮ ಸಿದ್ದಬೈಲು ಪರಾರಿ ಶಾಲೆಯ ಪ್ರತಿಭಾವಂತ ಉಪಾಧ್ಯಾಯರಾಗಿದ್ದ,  ನಾವು ಮಹಾದೇವ ಮಾಸ್ಟ್ರು ಎನ್ನುತ್ತಿದ್ದ,  ಮಹದೇವ ಚಿಪ್ಳೂಣ್‌ಕರ್ ಅವರು ಈ ಹಾಡಿಗೆ ಸುಂದರ ನೃತ್ಯವನ್ನು ಸಂಯೋಜಿಸಿ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಸ್ತುತ ಪಡಿಸಿದಾಗ ನಾನು ಮೊದಲು ಈ ಹಾಡು ಕೇಳಿದ್ದು. ಕ್ಯಾಸೆಟ್ಟುಗಳು ಇನ್ನೂ ಬಂದಿರದ ಆ ಕಾಲದಲ್ಲಿ ಗ್ರಾಮೊಫೋನ್ ರೆಕಾರ್ಡ್ ನುಡಿಸಿ ಮಕ್ಕಳಿಂದ ಡ್ಯಾನ್ಸ್ ಮಾಡಿಸುವ ಕ್ರಮ ಇರಲಿಲ್ಲ.  ಇದನ್ನು ಸೈಡ್ ವಿಂಗಲ್ಲಿ ಮಿಂತು ಅವರೇ ಹಾಡಿದ್ದರು. ಇದು ಆದರ್ಶ ಸತಿ ಸಿನಿಮಾದ ಹಾಡೆಂದು ನನಗೆ ತಿಳಿದದ್ದು  ಎಷ್ಟೋ ವರ್ಷಗಳ ನಂತರ. ರೇಡಿಯೋದಲ್ಲೂ ಇದು ಪ್ರಸಾರವಾದದ್ದು ಇಲ್ಲವೆನ್ನುವಷ್ಟು ಕಮ್ಮಿ. ಎಂದೋ ಒಮ್ಮೆ ರೇಡಿಯೊ ಸಿಲೋನಿನಿಂದ ಇದನ್ನು ಕೇಳಿದ್ದೆ. ಅಂತರ್ಜಾಲ ಯುಗ ತೆರೆದುಕೊಂಡ ಮೇಲೆ ಆದರ್ಶ ಸತಿಯ  ತೆಲುಗು ಅವತರಣಿಕೆಯಾದ ನಾಗುಲ ಚವಿತಿಯಲ್ಲಿ ಇದು ನನಗೆ ಸಿಕ್ಕಿತು. ಎಲ್ಲ ಭಾರತೀಯ ಭಾಷೆಗಳ ಮಾತೃ ಸ್ಥಾನದಲ್ಲಿರುವ ಸಂಸ್ಕೃತದ ವಿಶೇಷಣಗಳು ಮಾತ್ರ ಇರುವ ಈ ಹಾಡು ಯಾವ ಭಾಷೆಗೂ ಸಲ್ಲುವಂಥದ್ದು.  ಸತ್ಯ ಹರಿಶ್ಚಂದ್ರ ಚಿತ್ರದ ನಮೋ ಭೂತನಾಥ ಕೂಡ ಇದೇ ತರದ ಯಾವ ಭಾಷೆಗೂ ಸಲ್ಲುವ ಹಾಡು.

ತಿಲಂಗ್ ರಾಗವನ್ನು ಆಧರಿಸಿದ ಈ ಹಾಡಿನ 3 ಚರಣಗಳ ಧಾಟಿ ಹಾಗೂ ನಡುವಿನ  interlude music ಒಂದರಂತೆ ಇನ್ನೊಂದಿಲ್ಲದಿರುವುದಷ್ಟೇ ಅಲ್ಲದೆ ಚರಣದಿಂದ ಚರಣಕ್ಕೆ ಸ್ಥಾಯಿ ಏರುತ್ತಾ ಹೋಗುವುದು ಗಮನ ಸೆಳೆಯುತ್ತದೆ.  ಈ ನೃತ್ಯಗೀತೆಯನ್ನು ಈಗಿನ ಯುವ ಪೀಳಿಗೆಯವರು ಕೇಳಿರುವ ಸಾಧ್ಯತೆ ಕಮ್ಮಿ.  ಪಾಪಿಯ ಜೀವನ ಪಾವನಗೊಳಿಸುವ ಮತ್ತು ಪ್ರಭು ನನ್ನೆದೆಯೇ ನಿನ್ನಯ ಮಹಾಮಂದಿರ ಆದರ್ಶ ಸತಿಯ ಇನ್ನೆರಡು ಜನಪ್ರಿಯ ಹಾಡುಗಳು.


ಪರಶುರಾಮ್ ರಚಿಸಿ ಸುದರ್ಶನಂ-ಗೋವರ್ಧನ್ ಸಂಗೀತ ನಿರ್ದೇಶನದಲ್ಲಿ ಟಿ.ಎಸ್. ಭಗವತಿ ಹಾಡಿರುವ  ಇದು ಚಲನಚಿತ್ರ ಗೀತೆಯಾದರೂ ಇದರ ಸಾಹಿತ್ಯ  ಯಾವ ದಾಸವರೇಣ್ಯರ ಕೃತಿಗೂ ಕಮ್ಮಿ ಇಲ್ಲ.

ಬಾಣದ ಗುರುತಿನ ಮೇಲೆ ಕ್ಲಿಕ್ಕಿಸಿ ಹಾಡು ಆಲಿಸಿ.




ಓಂ ನಮೋ ನಮೋ ನಟರಾಜ ನಮೋ
ಹರ ಜಟಾಜೂಟಧರ ಶಂಭೊ
ಓಂ ನಮೋ ನಮೋ ನಟರಾಜ
ನಮೋ ನಮೋ ನಟರಾಜ

ಗಂಗಾ ಗೌರಿ ಹೃದಯವಿಹಾರಿ
ಲೀಲಾ ಕಲ್ಪಿತ ಸಂಸಾರಿ
ಭಳಿರೆ ಭಾಸುರ ಬ್ರಹ್ಮಚಾರಿ
ಭಾವಜ ಮದ ಸಂಹಾರಿ
ಓಂ ನಮೋ ನಮೋ ನಟರಾಜ

ಫಣಿ ಭೂಷ ಭಿಕ್ಷುಕ ವೇಷ
ಈಶ ತ್ರಿಭುವನ ಸಂತೋಷ
ಅಖಿಲ ಚರಾಚರ ಅಮೃತಕಾರಿ
ಹಾಲಾಹಲಗಳಧಾರಿ
ಓಂ ನಮೋ ನಮೋ ನಟರಾಜ

ಮಹಾದೇವ ಜಯ
ಜಯ ಶಿವ ಶಂಕರ
ಜಯ ತ್ರಿಶೂಲಧರ
ಜಯ ಡಮರುಗಧರ
ಹೇ ದೇವಾದಿ ದೇವ ಮಹೇಶ
ಜಯ ಜಯ ಗೌರೀಶ
ಓಂ ನಮೋ ನಮೋ ನಟರಾಜ


ಹಾಡಿನ ವಿಡಿಯೊವನ್ನು ನೋಡಲು ಇಲ್ಲಿ  ಕ್ಲಿಕ್ಕಿಸಿ.










Friday, 26 August 2011

ಬಾರೊ ಬಾರೊ ಬಾರೊ ಗಣಪ


    
      60ರ ದಶಕದ ನಮ್ಮ ಶಾಲಾ ದಿನಗಳಲ್ಲಿ   ಬಹು ಪ್ರಸಿದ್ಧವಾಗಿದ್ದ  ಹಾಡು ಇದು.   ಪ್ರಾಸದ ಯಾವುದೇ ಕಟ್ಟುಪಾಡು ಇಲ್ಲದೆ ಗೇಯತೆಗೆ ಪ್ರಾಧಾನ್ಯವಿರುವ ಈ ಹಾಡಿನಲ್ಲಿ  ನಡುವೆ ಕೆಲವು ಇಂಗ್ಲಿಷ್ ಶಬ್ದಗಳೂ ಇವೆ.  ಪುಟ್ಟ ಮಕ್ಕಳನ್ನು ತೊಟ್ಟಿಲಲ್ಲಿ ಕೂರಿಸಿ  ಆಚೆ ಈಚೆ ಅಂಚುಗಳ ಮೇಲೆ  ಇನ್ನಿಬ್ಬರು ಕುಳಿತು ಈ ಹಾಡು ಹಾಡುತ್ತಾ ಜೋಕಾಲಿ ಆಡುವುದೆಂದರೆ ನಮಗೆಲ್ಲ ಆಗ ಬಲು ಖುಶಿ. ಇದರ ಕವಿ ಯಾರು ಎಂಬುದರ ಬಗ್ಗೆ ಮಾಹಿತಿ ಇಲ್ಲ.  ಗೊತ್ತಿದ್ದವರು ದಯವಿಟ್ಟು ತಿಳಿಸಿ.

      ಮುಂಡಾಜೆ ಆನಂಗಳ್ಳಿಯ ನಮ್ಮ ಹಿರಿಯರ ಮನೆಯ ಕೋರಲ್ ಗ್ರೂಪ್  ಕೆಲವು  ವರ್ಷಗಳ ಹಿಂದೆ ಹಾಡಿದ್ದ ಈ ಹಾಡನ್ನು ಕೇಳುತ್ತಾ ಚತುರ್ಥಿ ಸಮೀಪಿಸುತ್ತಿರುವ  ಈ ಸಂದರ್ಭದಲ್ಲಿ  ಗಣಪನನ್ನು ಕರೆಯೋಣ.





ಬಾರೊ ಬಾರೊ ಬಾರೊ ಗಣಪ                                 
ಸೊಂಡಿಲ ಮೇಲಕೆ ಎತ್ತಿಕೊಂಡು
ಕಾಲಿಗೆ ಗೆಜ್ಜೆಯ ಕಟ್ಟಿಕೊಂಡು
ಹಾವನು ಹೊಟ್ಟೆಗೆ ಬಿಗಿದುಕೊಂಡು

ಬಾರೊ ಬಾರೊ ಬಾರೊ ಗಣಪ

ಅಕ್ಕ ಬಂದಳು ಪಾಪು ಬಂತು
ಪಕ್ಕದ ಮನೆಯ ಪುಟಾಣಿಬಂತು
ಏನೇನಾಟವನಾಡೋಣಪ್ಪ
ಹೋಗೊ ಹೋಗೊ ಆಟ ಬೇಡ

ಗೌರಿ ನಿನ್ನನು ಬೈದಾಳೇನೊ
ಕಡಬು ಹೂರಣ ಕೊಡಲಿಲ್ಲವೇನೊ
ಅಮ್ಮನು ಮಾಡಿದ ಹೋಳಿಗೆ ರಾಶಿ
ಎಲ್ಲ ನಿನಗೆ ಕೊಡಿಸುವೆ ಬಾರೊ

ಎಲ್ಲಿ ಬಿದ್ದೆಯೊ ಮುರಿದಿದೆ ದಂತ
ವಾಹನ ಇಲಿಯು ಎಲ್ಲಿಗೆ ಹೋಯ್ತು
ಹೋದರೆ ಹೋಗಲಿ ಬೈಸ್ಕಲ್ ಕೊಡುವೆ
ಟಿಂ ಟಿಂ ಟಿಂ ಟಿಂ ಬಾರಿಸೊ ಬೆಲ್ಲ

ಥೈ ಥೈ ಥೈ ಥೈ ತಾಳ ಹಾಕೊ
ಧೀಂ ಧೀಂ ಧೀಂ ಧೀಂ ನಗಾರಿ ಹೊಡೆಯೊ
ಭೊಂ ಭೊಂ ಭೊಂ ಭೊಂ ಉರಿಗೊ ಶಂಖ
ತದಿನಾಂ ತಕ ತಕ ಕುಣಿಯೋಣ ಬಾರೊ

ಯುದ್ಧವಾದರೆ ನಮಗೇನಾಯ್ತು
ಅಪ್ಪನ ದುಡ್ಡಿಗೆ ಲೋಪ ಬಂತು
ಅಮ್ಮನು ತಿಂಡಿಯ ಕೊಟ್ಟೇ ಕೊಡುವಳು
ಬೈಗು ಬೆಳಗು ಕುಣಿಯೋಣ ಬಾರೊ

ಹಗಲು ಕಳೆಯಿತು ಶಾಂತಿ ನೆಲೆಸಿತು
ಮಂಗಳ ಜಗಕೆ ಮಂಗಳವಾಯ್ತು
ಭಾರತ ಮಾತೆಗೆ ಶಾಂತಿಯು ಇಂದು
ಎಲ್ಲ ಕೂಡಿ ನಲಿಯೋಣ ಬಾರೊ








Monday, 22 August 2011

ಶಮ್ಮಿ ಕಪೂರ್ Top Ten



     14-08-2011 ರಂದು ನಿಧನರಾದ  ಚಿತ್ರರಂಗದ dynamic ನಟ ಶಮ್ಮಿಕಪೂರ್ ನಿಜ ಜೀವನದಲ್ಲೂ dynamic ಆಗಿಯೇ ಇದ್ದವರು.  Wheel Chair ಗೆ ಅಂಟಿಕೊಂಡು ಕೆಲವು ವರ್ಷಗಳೇ ಆದರೂ ಅವರ ಜೀವನೋತ್ಸಾಹ ಒಂದಿನಿತೂ ಕುಂದಿರಲಿಲ್ಲ.  ಅವರ ಇತ್ತೀಚಿನ ಕೆಲವು interviewಗಳಲ್ಲಿ ಇದನ್ನು ಸ್ಪಷ್ಟವಾಗಿ ಗಮನಿಸಬಹುದು. ಅವರಲ್ಲಿ ಹಾಡುಗಳಿಗೆ ಜೀವ ತುಂಬುವ ಒಂದು ವಿಶೇಷ ಶಕ್ತಿಯಿತ್ತು.  ಎಷ್ಟೋ ಸಲ ಒಳ್ಳೆಯ ಹಾಡುಗಳು ತೆರೆಯ ಮೇಲೆ ಬಂದಾಗ ಪೇಲವವಾಗಿ ಬಿಡುವುದುಂಟು.  ಆದರೆ ಶಮ್ಮಿ ಕಪೂರ್ ನಟಿಸಿದ ಹಾಡುಗಳು ಮೌಲ್ಯ ವರ್ಧಿತ ಹಾಡುಗಳಾಗುತ್ತಿದ್ದವು. ಅವರ ನಟನೆಯ  10 ಹಾಡುಗಳು ಶ್ರದ್ಧಾಂಜಲಿಯ ರೂಪದಲ್ಲಿ ಇಲ್ಲಿವೆ..

1.  ಯೂಂ ತೊ ಹಮ್ನೆ ಲಾಖ್ ಹಸೀಂ ದೇಖೆ ಹೈಂ - ತುಮ್ ಸಾ ನಹೀಂ ದೇಖಾ.



2. ಚಾಹೆ ಕೊಯಿ ಮುಝೆ - ಜಂಗ್ಲಿ
3. ಜಾನೆ ಬಹಾರ್ ಹುಸ್ನ್ ತೆರಾ - ಪ್ಯಾರ್ ಕಿಯಾ ತೊ ಡರ್ ನಾ ಕ್ಯಾ
<
4. ಬದನ್ ಪೆ ಸಿತಾರೆ -  Prince
5. ತುಮ್ ಸೆ  ಅಚ್ಛಾ ಕೌನ್ ಹೈ - ಜಾನ್ ವರ್  
6. ತುಮ್ ನೆ ಕಿಸೀ ಕಿ ಜಾನ್ ಕೊ - ರಾಜ್ ಕುಮಾರ್
7.ದೀವಾನೆ ಕಾ ನಾಮ್ ತೊ ಪೂಛೊ - An evening in Paris
8. ಆಜ್ ಕಲ್ ತೆರೆ ಮೆರೆ ಪ್ಯಾರ್ ಕೆ -  ಬ್ರಹ್ಮಚಾರಿ
9.  ಓ ಹಸೀನಾ ಜುಲ್ಫೊಂ ವಾಲೀ - ತೀಸ್ರಿ ಮಂಜಿಲ್
10. ಯೆ ಚಾಂದ್ ಸಾ ರೊಶನ್ ಚೆಹೆರಾ - ಕಶ್ಮೀರ್ ಕಿ ಕಲಿ.

ರಫಿ ಏಕ್ ಔರ್ ಅನೇಕ್




ದಿಲ್ ಏಕ್ ಮಂದಿರ್ ಚಿತ್ರಕ್ಕಾಗಿ ರಫಿ ಮತ್ತು ಸುಮನ್ ಕಲ್ಯಾಣಪುರ್ ಹಾಡಿದ ಜಾನೆ ವಾಲೆ ಕಭೀ ನಹೀಂ ಆತೆ.  ಲತಾ ಮಂಗೇಶ್ಕರ್ ದನಿಯ ತದ್ರೂಪು ಎನ್ನಿಸಬಹುದಾದ ಸುಮನ್ ಕಲ್ಯಾಣಪುರ್ ಹಾಡಿದ solo ಹಾಡುಗಳಿಗಿಂತ ಅವರು ರಫಿ ಜತೆ ಹಾಡಿದ ಯುಗಳ ಗೀತೆಗಳೇ ಹೆಚ್ಚು ಪ್ರಸಿದ್ಧವಾದವು.  ಶಂಕರ್ ಜೈಕಿಶನ್  ಇವರೀರ್ವರನ್ನು ಬಳಸಿ ನೀಡಿದಷ್ಟು ಹಿಟ್ ಗೀತೆಗಳನ್ನು ಇನ್ಯಾರೂ ನೀಡಿರಲಾರರು.  ಸಾಮಾನ್ಯವಾಗಿ ಚಿತ್ರಗಳ ಕೊನೆಯಲ್ಲಿ ಯಾವುದಾದರೊಂದು ಹಿಟ್ ಹಾಡಿನ ಒಂದೆರಡು ಸಾಲುಗಳನ್ನು repeat ಮಾಡುವುದನ್ನು ನಾವು ಕಾಣುತ್ತೇವೆ.  ಆದರೆ ದಿಲ್ ಏಕ್ ಮಂದಿರ್ ನಲ್ಲಿ ಈ ಹಾಡು ಬರುವುದೇ ಚಿತ್ರದ ಕೊನೆಗೆ.   ಹೆಚ್ಚಾಗಿ ಚಿತ್ರ ಕೊನೆಯಾಗುತ್ತಾ ಬಂದಂತೆ ಪ್ರೇಕ್ಷಕರು ಒಬ್ಬೊಬ್ಬರಾಗಿ ಎದ್ದು ಹೊರಡತೊಡಗುವುದು ಸಾಮಾನ್ಯ.  ಆದರೆ ಈ ಹಾಡಿನಿಂದಾಗಿ ಪರದೆಯ ಮೇಲೆ The End ಬೀಳುವವರೆಗೂ  ಯಾರೊಬ್ಬರೂ ಸೀಟ್ ಬಿಟ್ಟು ಎದ್ದಿರಲಿಕ್ಕಿಲ್ಲ.









ದೇಗುಲದ ಗಂಟೆಯಂತಹ ಧ್ವನಿ ಎಂದು ಒ. ಪಿ. ನಯ್ಯರ್ ಅವರಿಂದ ಪ್ರಶಂಸಿಸಲ್ಪಟ್ಟ ಶಂಶಾದ್ ಬೇಗಂ ಮತ್ತು ರಫಿ C I D ಚಿತ್ರಕ್ಕಾಗಿ ಹಾಡಿದ ಲೆಕೆ ಪೆಹಲಾ ಪೆಹಲಾ ಪ್ಯಾರ್.  ಅಂದಿನ ಕಾಲದಲ್ಲಿ ಆಕಾಶವಾಣಿಯಲ್ಲಿ ಪ್ರತಿಬಂಧಿಸಲ್ಪಟ್ಟಿದ್ದ ಹಾರ್ಮೋನಿಯಂ ಬಳಕೆಯಿಂದಾಗಿ ಈ ಹಾಡು ಹೆಚ್ಚು ಆಪ್ತವೆನಿಸುತ್ತಿತ್ತು.  ಆ ಮೇಲೆ ಕೂಡ ನಯ್ಯರ್ ಅವರು ಸುಭಾನಲ್ಲಾ ಹಸೀಂ ಚೆಹೆರಾ, ಕಜರಾ ಮುಹಬ್ಬತ್ ವಾಲಾ ಮುಂತಾದ ಹಾಡುಗಳಲ್ಲಿ ಹಾರ್ಮೋನಿಯಮ್ ಬಳಸಿದ್ದಾರೆ.  ನಾಯಕನಿಗಾಗಿ street singer ಗಳು ಹಾಡುವ ಈ ತಂತ್ರವನ್ನು ಅಮಿತಾಭ್ ನ ಜಂಜೀರ್ ಚಿತ್ರದ ದಿವಾನೆ ಹೈಂ ದೀವಾನೊಂ ಕೊ ನ ಘರ್ ಚಾಹಿಯೆ ದಲ್ಲಿ ಮತ್ತೆ ಬಳಸಲಾಗಿತ್ತು.





ಏಕತಾನತೆಯಿಂದ ಕೂಡಿದ್ದ ಚಿತ್ರ ಸಂಗೀತಕ್ಕೆ ಲವಲವಿಕೆಯನ್ನು ತುಂಬಿದ ಮೊದಲ ಚಿತ್ರ ತನ್ನ  ಪತಿ ಗುರು ದತ್ ಅವರ ಆರ್ ಪಾರ್ ನಲ್ಲಿ  ಗೀತಾ ದತ್ತ್ ಅವರು ರಫಿಯೊಡನೆ ಹಾಡಿದ ಮುಹಬ್ಬತ್ ಕರ್ ಲೊ ಜೀ ಭರ್ ಲೊ.  O P ನಯ್ಯರ್ ಹೇಳುವಂತೆ ಗೀತಾ ದತ್ತ್ ಮತ್ತು ಶಂಶಾದ್ ಬೇಗಂ ಅವರದ್ದು  original voice. ಅವರನ್ನು ಯಾರೂ ಅನುಕರಣೆ ಮಾಡಲಾರರು.   ಈ ಹಾಡಿನ ಸಂಗೀತದಲ್ಲಿ ಎಸ್. ಹಜಾರಾ ಸಿಂಗ್ ನುಡಿಸಿದ electric guitar ನದ್ದು ವಿಶೇಷ ಪಾತ್ರ.  ಹಾಗೆಯೇ ಬೋಲ್ ಗಳನ್ನು ಅನುಸರಿಸುವ ಢೋಲಕ್  ನಡೆಗಳೂ ಬಹಳ ಚಂದ.  ಮಜರೂಹ್ ಸುಲ್ತಾನ್ ಪುರಿ ಅವರ ಸಾಹಿತ್ಯವೂ ಕೊಂಚ ಭಿನ್ನ.  ಸಾಮಾನ್ಯವಾಗಿ ಯುಗಳ ಗೀತೆಗಳಲ್ಲಿ ‘ನಿನ್ನ ಕಣ್ಣು ಕಮಲ, ನಿನೇ ನನ್ನ ಜೀವ, ನಿನ್ನನ್ನು ಬಿಟ್ಟು ಅರೆ ಕ್ಷಣವೂ ಇರಲಾರೆ’ ಇತ್ಯಾದಿ ಅರ್ಥ ಕೊಡುವ ಸಾಲುಗಳನ್ನು ಹೆಚ್ಚಾಗಿ ಕಾಣುತ್ತೇವೆ.  ಆದರೆ ಇಲ್ಲಿ ನಾಯಕ ‘ಬೇಕಾದಷ್ಟು ಪ್ರೀತಿ ಮಾಡು, ಯಾರು ಬೇಡ ಅಂತಾರೆ, ಆದರೆ ನೆನಪಿಟ್ಟುಕೋ ಇದು ಬರೀ ಮೋಸ ’ ಅಂದರೆ ನಾಯಕಿಯು ‘ಬೇಕಾದಷ್ಟು ತೆಗಳು, ಯಾರು ಬೇಡ ಅಂತಾರೆ, ಆದರೆ ನಿನ್ನಿಂದ ಪ್ರಪಂಚವನ್ನೇ ತೊರೆಯಲು ಸಾಧ್ಯವೇ. ಯಾಕೆಂದರೆ ಇಲ್ಲೂ ಎಲ್ಲಾ ಕಡೆ ಮೋಸವೇ’ ಅನ್ನುತ್ತಾಳೆ. ಬನ್ನಿ ಕೇಳೋಣ ಈ ಹಾಡು.





ಮನ್ನಾಡೆ ಜತೆ ಹಾಡಿದ ರಾಗಿನಿ ಚಿತ್ರದ ತೂ ಹೈ ಮೇರಾ ಪ್ರೇಮ್ ದೇವತಾ. ಪುರುಷರು ಹಾಡಿದ ಯುಗಳ ಗೀತೆಗಳಲ್ಲಿ ರಫಿ-ಮನ್ನಾಡೆ ಯವರದ್ದೇ ಸಿಂಹ ಪಾಲು.  ವೈಯುಕ್ತಿಕವಾಗಿಯೂ ಅವರಿಬ್ಬರೂ ಆತ್ಮೀಯ ಮಿತ್ರರು ಹಾಗೂ ಒಬ್ಬರು ಇನ್ನೊಬ್ಬರ ಅಭಿಮಾನಿ.  ದುನಿಯಾ ಹೈ ಮೇರೆ ಪೀಛೆ ಲೇಕಿನ್ ಮೈ ತೇರೆ ಪೀಛೆ ಎಂಬಂತೆ ‘ಜಗತ್ತಿಗೆಲ್ಲ ನನ್ನ ಹಾಡುಗಳು ಇಷ್ಟವಾದರೂ ನನಗೆ ಮನ್ನಾಡೆ ಹಾಡುಗಳು ಇಷ್ಟ’ ಅನ್ನುತ್ತಿದ್ದರಂತೆ ರಫಿ.  ‘ರಫಿಯಂತೆ ಸ್ಪಷ್ಟ ಉಚ್ಚಾರ ಹಾಗೂ voice throw ನನ್ನಿಂದ ಎಂದೂ ಸಾಧ್ಯವಾಗದು. ಒಂದು ವೇಳೆ ನಾನು ಸಂಗೀತ ನಿರ್ದೇಶಕ ಆಗಿದ್ದರೆ ಪ್ಯಾರ್ ಹುವಾ ಇಕರಾರ್ ಹುವಾ ಹಾಡಿಗೆ ನನ್ನ ಮೊದಲ ಆಯ್ಕೆ  ರಫಿ ಆಗಿರುತ್ತಿದ್ದರು’ ಎಂದು ಮನ್ನಾಡೆ ಒಂದು interview ನಲ್ಲಿ ಹೇಳಿದ್ದಾರೆ.  ರಫಿ ಮತ್ತು ಮನ್ನಾಡೆ ನಿವಾಸಗಳು ಅಕ್ಕ ಪಕ್ಕ ಇದ್ದುವಂತೆ.  ಇಬ್ಬರಿಗೂ ತಮ್ಮ ಮನೆಗಳ ತಾರಸಿ ಮೇಲಿಂದ ಗಾಳಿಪಟ ಹಾರಿಸುವ ಹುಚ್ಚು.   ಮನ್ನಾಡೆ ಗಾಳಿಪಟ ಯಾವಾಗಲೂ ಹೆಚ್ಚು ಎತ್ತರಕ್ಕೇರುತ್ತಿತ್ತಂತೆ.  ‘ಗಾಳಿಪಟದಲ್ಲಿ ನನ್ನನ್ನು ಸೋಲಿಸಿದಿಯಲ್ಲ.  ನಾಳೆ ಹಾಡಿನಲ್ಲಿ ನೊಡ್ಕೋತೀನಿ!’ ಎನ್ನುತ್ತಿದ್ದರಂತೆ ರಫಿ.  ಇಂದು ನಾವು ಕೇಳಲಿರುವ ರಾಗಿನಿ ಚಿತ್ರದ ಹಾಡಿನಲ್ಲಿ ಒಂದು ವಿಶೇಷ ಇದೆ.  ತೆರೆಯ ಮೇಲೆ ಇದನ್ನು ಇಬ್ಬರು ನರ್ತಕಿಯರು ಹಾಡುತ್ತಾರೆ ಹಾಗೂ ಹಾಡಿನ ಸಾಹಿತ್ಯವೂ ಅವರೇ ಹಾಡಿದಂತೆ ಇದೆ. ಆದರೆ ಹಿನ್ನೆಲೆ ಹಾಡುಗಾರಿಕೆ ರಫಿ ಮತ್ತು ಮನ್ನಾಡೆ!  ಇದಕ್ಕೆ ಕಾರಣವೇನಿರಬಹುದು?  ಲಲಿತ್ ರಾಗದ ಕ್ಲಿಷ್ಟಕರವಾದ ಈ ಹಾಡನ್ನು  O P  ನಯ್ಯರ್ ಅವರ ಮೆಚ್ಚಿನ ಆಶಾ ಭೋಸ್ಲೆ ಖಂಡಿತವಾಗಿಯೂ ಹಾಡಬಲ್ಲವರಾಗಿದ್ದರು. ಆದರೆ ಇನ್ನೊಂದು ಧ್ವನಿ? ಅದು ಲತಾ ಮಂಗೇಶ್ಕರ್ ಮಾತ್ರ!  ಗೀತಾ ದತ್ತ್ ಹಾಗೂ ಶಂಶಾದ್ ಬೇಗಂ ಈ ಹಾಡಿನ ಹತ್ತಿರಕ್ಕೂ ಸುಳಿಯಲಾರರು.  ಹಾಗಾಗಿ ಹಠಮಾರಿ O P ನಯ್ಯರ್ ಪುರುಷ ಧ್ವನಿಗಳಿಗೆ ಒಲವು ತೋರಿಸಿರಬಹುದು ಎಂದು ನನ್ನ ಅನಿಸಿಕೆ.  ಅಂತೂ ಈ ರೀತಿಯಲ್ಲಿ ಒಂದು master piece ಜನ್ಮ ತಾಳಿದ್ದಂತೂ ನಿಜ.





ಹಮ್ ರಾಹೀ ಚಿತ್ರಕ್ಕಾಗಿ ಮುಬಾರಕ್ ಬೇಗಂ ಜತೆ ಹಾಡಿದ ಮುಝಕೊ ಅಪನೆ ಗಲೆ ಲಗಾಲೊ.  ಅಂದಿನ ಕಾಲದಲ್ಲಿ ರಫಿ ಯಾರ ಜತೆ ಹಾಡಿದರೂ ಸುಪರ್ ಹಿಟ್ ಆಗುತ್ತಿತ್ತು ಎನ್ನುವುದಕ್ಕೆ ಈ ಹಾಡು ಸಾಕ್ಷಿ.  ಮುಬಾರಕ್ ಬೇಗಂ ಮತ್ತು ಶಂಷಾದ್ ಬೇಗಮ್ ಬಗ್ಗೆ confuse ಮಾಡಿಕೊಳ್ಳುವವರು ಬಹಳ ಮಂದಿ ಇದ್ದಾರೆ.  ಮುಬಾರಕ್ ಬೇಗಂ ಅವರ ಇನ್ನು ಕೆಲವು ಹಿಟ್ ಹಾಡುಗಳು - ಕಭೀ ತನಹಾಯಿಯೊಂ ಮೆ ಹಮಾರೀ ಯಾದ್ ಆಯೇಗೀ, ಆರಜೂ ಚಿತ್ರದ ಕವ್ವಾಲಿ ಶೈಲಿಯ ಜಬ್ ಇಶ್ಕ್ ಕಹೀಂ ಹೊ ಜಾತಾ ಹೈ ಇತ್ಯಾದಿ.  ಮುಂದೆ ಶಂಕರ್ ಅವರು ಪರಿಚಯಿಸಿದ  ತಿತಲಿ ಉಡಿ  ಯ ಶಾರದಾ ಧ್ವನಿಯಲ್ಲಿ ಮುಬಾರಕ್ ಬೇಗಂ ಛಾಯೆಯನ್ನು  ಗುರುತಿಸಬಹುದು.  ಪಕ್ಕದ ಚಿತ್ರದಲ್ಲಿ ಅಂದಿನ ಕಾಲದ ಗಾಯಕರ ಗಡಣವೇ ಇದೆ.  ರಫಿ ಹಾಗೂ ಮುಬಾರಕ್ ಅವರನ್ನು ಕೆಂಬಣ್ಣದಿಂದ ಗುರುತಿಸಲಾಗಿದೆ..  ಉಳಿದವರನ್ನು ಗುರುತಿಸಲು ಪ್ರಯತ್ನಿಸಬಹುದು.





ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರದ ಆಶಾ ಭೋಸ್ಲೆ ಜತೆ ಹಾಡಿದ ಮೈ ಪ್ಯಾರ್ ಕಾ ರಾಹೀ ಹೂಂ. O P ನಯ್ಯರ್ ಅವರ ಮಾಸ್ಟರ್ ಪೀಸ್ ಗಳಲ್ಲಿ ಒಂದು.   ಇದರಲ್ಲಿ ಢೋಲಕ್, ತಬ್ಲಾಗಳಂತಹ ತಾಳ ವಾದ್ಯಗಳೇ ಇಲ್ಲ.  ಕೇವಲ ಗಿಟಾರ್ ರಿದಂ ಮಾತ್ರ.   ಆರಂಭದ ಗಿಟಾರ್ stroke ಗಳು ಹಾಡಿಗೆ ಎಂತಹ ಉಠಾವ್  ಕೊಟ್ಟಿವೆ !  ಚರಣದಲ್ಲಿ ಬರುವ  ಸ್ಯಾಕ್ಸೊಫೋನ್ ನ ಚಿಕ್ಕ ಲಿಂಕ್ ಪೀಸ್ ನಮ್ಮನ್ನು ಇನ್ನಾವುದೋ ಲೋಕಕ್ಕೆ ಕರೆದೊಯ್ಯುತ್ತದೆ. SPB ಯವರ ಮೆಚ್ಚಿನ ಹಾಡು  ಇದು.  ಆಗಾಗ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡುತ್ತಿರುತ್ತಾರೆ.  ಆದರೆ ಚಿತ್ರದಲ್ಲಿ ಈ ಹಾಡೇ ಇಲ್ಲ!









ಲತಾ ಮಂಗೇಶ್ಕರ್ ಜತೆಗೆ  ಹಾಡಿದ ತಾಜ್ ಮಹಲ್ ಚಿತ್ರದ ಜೊ ವಾದಾ ಕಿಯಾ ವೊ ನಿಭಾನಾ ಪಡೇಗಾ ಹಾಡು.  ಇದರ ಆರಂಭದ ಸಂಗೀತವೇ ಇದ ಟ್ರಂಪ್ ಕಾರ್ಡ್. ಅದನ್ನು ಕೇಳಿದಾಕ್ಷಣ ಮನಸ್ಸಲ್ಲಿ ಏನೋ ಒಂದು ವಿಚಿತ್ರ ತಳಮಳ. ಎಲ್ಲೋ ತೇಲಾಡುತ್ತಿರುವ ಅನುಭವ. ಹಿಂದಿ ಚಿತ್ರಸಂಗೀತದ ಇತಿಹಾಸದಲ್ಲೇ ಮಾಧುರ್ಯದಲ್ಲಿ ಇದನ್ನು ಮೀರಿಸುವ ಬೇರೆ ಹಾಡಿಲ್ಲವೆಂದರೆ ತಪ್ಪಾಗಲಾರದು. ಈ ಹಾಡು ಹೊಸದಾಗಿ ಬಂದಿದ್ದಾಗ ಶಮ್ಮಿ ಕಪೂರ್ ಅವರು ಟೇಪ್ ರೆಕಾರ್ಡರಿನಲ್ಲಿ ಇಡೀ ರಾತ್ರಿ ಕೇಳುತ್ತಾ  ಕಣ್ಣೀರು ಸುರಿಸಿದ್ದರಂತೆ.







ಶರಣು ಕಾವೇರಿ ತಾಯೆ



ಚಿತ್ರ : ಕಣ್ತೆರೆದು ನೋಡು

ರಚನೆ: ಜಿ.ವಿ.ಅಯ್ಯರ್

ಸಂಗೀತ: ಜಿ ಕೆ ವೆಂಕಟೇಶ್

ಗಾಯನ: ಪಿ ಬಿ ಶ್ರೀನಿವಾಸ್ ಮತ್ತು ಸಂಗಡಿಗರು.


     ಕಣ್ಣಿನ ಚಿಕಿತ್ಸೆಗೆಂದು ಪಟ್ಟಣಕ್ಕೆ  ಹೊರಟಿರುವ ಅಂಧನಾದ ಚಿತ್ರದ ನಾಯಕ ದೋಣಿಯಲ್ಲಿ ನದಿ ದಾಟುತ್ತಿರುವಾಗ ಸಹಪ್ರಯಾಣಿಕರ ಕೋರಿಕೆಯಂತೆ  ಹಾಡುವ ಹಾಡು ಇದು.  ಜಿ ಕೆ  ವೆಂಕಟೇಶ್ ಅವರು ಜಾನಪದ ಶೈಲಿಯಲ್ಲಿ ಸಂಯೋಜಿಸಿದ ಈ ಹಾಡಿನಲ್ಲಿ ದೊಳ್ಳು, ಢೋಲಕ್, ಕೊಳಲು, ಗಿಟಾರ್, violins,ಮ್ಯಾಂಡೊಲಿನ್  ಹಾಗೂ ಕೋರಸ್ ಗಳ ಸುಂದರ ಸಂಗಮವಿದೆ. ಹಾಡಿನುದ್ದಕ್ಕೂ ಕಪ್ಪೆ ವಟಗುಟ್ಟಿದಂತೆ ಕೇಳಿಸುವ ಸದ್ದೊಂದನ್ನು ಗಮನಿಸಿ. ಇದಕ್ಕೆ Castanets (ಎರಡು  ಮರದ ಬಿಲ್ಲೆಗಳನ್ನು ದಾರದಲ್ಲಿ ಪೋಣಿಸಿದ ರಚನೆ) ನಂತಹ ಯಾವುದೋ ಉಪಕರಣ ಬಳಸಿರಬೇಕು ಅನ್ನಿಸುತ್ತದೆ. ದೊಳ್ಳಿನ ಸದ್ದಿನೊಂದಿಗೆ ಸಹಗಾಯಕರು ಹಾಡುವ ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ..... ಸಾಲುಗಳು ಈ ಹಾಡಿನ ಹೈಲೈಟ್ . ಮುಂದೆ ಜಿ ಕೆ ವೆಂಕಟೇಶ್ ಅವರು ಇದೇ ತಂತ್ರವನ್ನು   ಬಂಗಾರದ ಮನುಷ್ಯಆಹಾ ಮೈಸೂರು ಮಲ್ಲಿಗೆ ಹಾಡಿನಲ್ಲಿ ಅಲೆಅಲೆ ಚಿಮ್ಮುತಿದೆ..  ರೂಪದಲ್ಲಿ  ಮತ್ತೆ ಬಳಸಿಕೊಂಡರು.

     ನದಿನೀನ್ನು ಕೇಂದ್ರವಾಗಿರಿಸಿ ಜೀವನ ದರ್ಶನವನ್ನು ಸಾರುವ ಈ ಗೀತೆಯಲ್ಲಿ ಜಿ.ವಿ.ಅಯ್ಯರ್ ಅವರು ಕಾರಕ್ಕೆ ಪ್ರಾಧಾನ್ಯ ನೀಡಿದ್ದಾರೆ.  ಪೂರ್ತಿ ಹಾಡು ಕೇಳಿ ಮುಗಿಸುವುದರೊಳಗೆ 64 ಸಲ ಕಾರ ನಮ್ಮ ಕಿವಿಗೆ ಬಿದ್ದಿರುತ್ತದೆ!.  ಅರುಣಾಚಲಂ ಸ್ಟುಡಿಯೊದವರು ನಿರ್ಮಿಸಿ ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿ  ಗುರ್ ಜಾಡ ಕೃಷ್ಣದಾಸ್ ವೆಂಕಟೇಶ್ ಸಂಗೀತವಿರುವ ಕಣ್ತೆರೆದು ನೋಡು ಚಿತ್ರಕ್ಕಾಗಿ ಪಿ.ಬಿ.ಶ್ರೀನಿವಾಸ್ ಮತ್ತು ಕೋಸ್ ಈ ಹಾಡನ್ನು ಹಾಡಿರುವುದರಿಂದ ಗಣಪತಿ ವೆಂಕಟರಾಮ ಅಯ್ಯರ್ ಕಾರಕ್ಕೆ ಇಷ್ಟು ಪ್ರಾಧಾನ್ಯ ಕೊಟ್ಟಿರಬಹುದೇ?
  
     ಬಹಳಷ್ಟು ವರುಷ ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ  ದೀಪಗಳು ಆರಿ ತೆರೆಯಮೇಲೆ ಜಾಹೀರಾತುಗಳು  ಬೀಳಲು ಆರಂಭವಾಗುವ ಸಮಯ ಇದೇ ಹಾಡನ್ನು ಹಾಕುತ್ತಿದ್ದರು. 
  
     ಪೂರ್ಣ ಸಾಹಿತ್ಯದೊಡನೆ ಈ ಹಾಡು ನಿಮಗಾಗಿ ಇಲ್ಲಿದೆ.   ಲಿಖಿತ ರೂಪದ ಹಾಡನ್ನು ಎದುರಿಗಿರಿಸಿ  ಆಲಿಸಿದರೆ ಚಿಕ್ಕವರಾಗಿದ್ದಾಗ  ಪದ್ಯಾವಳಿ ಎದುರಿಗಿಟ್ಟುಕೊಂಡು ರೇಡಿಯೊದಲ್ಲಿ ಹಾಡು ಕೇಳುತ್ತಿದ್ದುದು ನೆನಪಾಗುತ್ತದೆ. ಪ್ರಯತ್ನಿಸಿ ನೋಡಿ.  ಈ ಹಾಡು ಪೂರ್ಣರೂಪದಲ್ಲಿ ನಿಮಗೆ ಬೇರೆಲ್ಲೂ ಸಿಗದು.  ಅಂತರ್ಜಾಲದಲ್ಲಿ ಹುಡುಕಿದರೆ ಛಿದ್ರವಿಚ್ಛಿದ್ರವಾದ ವೀಡಿಯೊ ಒಂದು ಸಿಗಬಹುದು.



ಶರಣು ಕಾವೇರಿ ತಾಯೆ
ಶರಣು ಕಾವೇರಿ ತಾಯೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ಶರಣು ಕಾವೇರಿ ತಾಯೆ
ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ
ತುಂತುರು ತುಂತುರು ನೀರಹನಿ
ಕಲ ಕಲ ಮಾಡೆ ದನಿ

ಪುರದ ಪುಣ್ಯವತಿ ..........
ಪುರದ ಪುಣ್ಯವತಿ ಗಂಗೆ ತಾಯೆ
ಪುರದ ಪುಣ್ಯವತಿ ಗಂಗೆ ತಾಯೆ
ಕರೆದು ಕಣ್ತೆರೆದು ನೋಡೆಲೆ ನೀಯೆ
ಓ ----
ಕರೆದು ಕಣ್ತೆರೆದು ನೋಡೆಲೆ ನೀಯೆ
ಕುರುಡು ಬಾಳಿನ ಸಾಗರಕೊಂದೆ
ಕುರುಡು ಬಾಳಿನ ಸಾಗರಕೊಂದೆ
ಹರಿಯ ನಾಮ ಹರಿಗೋಲೆಂಬೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ಶರಣು ಕಾವೇರಿ ತಾಯೆ
ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ
ತುಂತುರು ತುಂತುರು ನೀರಹನಿ
ಕಲ ಕಲ ಮಾಡೆ ದನಿ

ಒಹೊ ಹೊ ...............
ಅಲೆಯ ಒಂದರಲಿ........
ಅಲೆಯ ಒಂದರಲಿ ಆಸೆಯು ಆರು
ಅಲೆಯ ಒಂದರಲಿ ಆಸೆಯು ಆರು
ಬಲೆಯ ತಾ ಬೀಸೆ ಬೀಳದೆ ಜಾರು
ಓ...........
ಬಲೆಯ ತಾ ಬೀಸೆ ಬೀಳದೆ ಜಾರು
ಮದವು ಮೋಹ ತುಂಬಿದ ಮೇಲೆ
ಮದವು ಮೋಹ ತುಂಬಿದ ಮೇಲೆ
ಬದುಕು ಬಾಳೆ ಬರಿ ಸಂಕೋಲೆ

ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ


ತುಳು ಚಿತ್ರಗೀತೆಗಳ ಸಾರ ಸಂಗ್ರಹ


" ಇದ್ ಇಲಂಗ ವಾನುಲಿ ವರ್ತಗ ಒಲಿಪರಪ್ಪು. ಇಪ್ಪುಡುದು ನೇರಂ ಎರಂಡ್ ಮಣಿ.  ಎರಂಡ್ ಮುಪ್ಪದ್ ವರೈ ಕನ್ನಡ ಪಾಡಲ್.  ಮೊದಲಾವದಾಕ ದಾರೆದ ಬುಡೆದಿ ಎಂದ ಪಡತ್ತಿಲ್ ಪಿ.ಬಿ.ಶ್ರೀನಿವಾಸ್ ಪಾಡಿಯ ಪಾಟ್ ".  ಮುಂದೆ  ಅಲೆ ಅಲೆಯಾಗಿ ತೇಲಿ ಬಂತು "ನಿಕ್ಕಾದೆ ಯಾನ್ ದುಂಬಿಯಾದ್ ಬರ್ಪೆ..." ಇದು 1972 ರ ಒಂದು ಮಧ್ಯಾಹ್ನ ರೇಡಿಯೊ ಸಿಲೋನ್ ನ  ಕನ್ನಡ ಕಾರ್ಯಕ್ರಮದಲ್ಲಿ  ತಮಿಳು ಉದ್ಘೋಷಣೆಯೊಂದಿಗೆ ಪ್ರಸಾರವಾದ ಮೊತ್ತ ಮೊದಲ ತುಳು ಚಿತ್ರಗೀತೆ.  ತುಳು ಸಿನೆಮಾ ತಯಾರಾಗುತ್ತಾ ಇದೆ, H M V ಯ H.M. ಮಹೇಶ್ ಪ್ರಯತ್ನದಿಂದ ರೇಡಿಯೊ ಸಿಲೋನ್ ನಲ್ಲಿ ಇದರ ಹಾಡುಗಳು ಬಿತ್ತರಗೊಳ್ಳಲಿವೆ ಎಂದು ಪೇಪರಿನಲ್ಲಿ ಓದಿ ಗೊತ್ತಿತ್ತು.  ಆದರೆ  ಹಾಡುಗಳು ಯಾವ ರೀತಿ ಇರಬಹುದೆಂಬ ಕಲ್ಪನೆ ಇರಲಿಲ್ಲ.  ಸಾಮಾನ್ಯವಾಗಿ ತುಳು ನಾಟಕಗಳಲ್ಲಿ ಅಳವಡಿಸಲಾಗುತ್ತಿದ್ದಂತೆ  ಹಿಂದಿ ಟ್ಯೂನ್ ಆಧಾರಿತ   ಹಾಡುಗಳು ಇರಬಹುದೆಂದು ಅಂದುಕೊಂಡಿದ್ದ ನಮಗೆ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ  ಪಿ.ಬಿ.ಎಸ್,  ಜಾನಕಿ ಮುಂತಾದವರ ಧ್ವನಿಯಲ್ಲಿ ತುಳು ಹಾಡುಗಳನ್ನು ಕೇಳಿದಾಗ ಥ್ರಿಲ್ ಎನಿಸಿತ್ತು.  ಮುಂದೆ ಬಿಡುಗಡೆಗೊಂಡ  ಇನ್ನೂ ಹಲವು ತುಳು ಚಿತ್ರಗಳ ಹಾಡುಗಳನ್ನು ಕೇಳಲು ಶಾಲಾ ವಾರ್ಷಿಕೋತ್ಸವ ಹಾಗೂ ಇತರ ಸಮಾರಂಭಗಳಲ್ಲಿ ಅಳವಡಿಸುತ್ತಿದ್ದ ಧ್ವನಿ ವರ್ಧಕಗಳನ್ನು ಬಿಟ್ಟರೆ  ಬಹಳಷ್ಟು ವರ್ಷ ರೇಡಿಯೊ ಸಿಲೋನ್ ಒಂದೇ ಆಸರೆಯಾಗಿತ್ತು. ಮುಂದೆ ಮಂಗಳೂರು ಆಕಾಶವಾಣಿ ಜನ್ಮ ತಾಳಿದ ಮೇಲೆ ಹೆಚ್ಚು ಹೆಚ್ಚು ತುಳು ಗೀತೆಗಳು ಕೇಳಿಬರತೊಡಗಿದವಾದರೂ  ವರುಷಗಳು ಸಂದಂತೆ ರೇಡಿಯೊ ಸಿಲೋನ್ ಹಿನ್ನೆಲೆಗೆ ಸರಿಯುತ್ತಾ ಬಂತು, ಗಾನ ತಟ್ಟೆಗಳು ಅಟ್ಟ ಸೇರಿದವು, ತುಳು ಹಾಡುಗಳು ಮತ್ತೆ ಅಪರೂಪವಾಗತೊಡಗಿದವು.  ಈಗಲೂ "ಎಕ್ಕ ಸಕ", "ಮೋಕೆದ ಸಿಂಗಾರಿ" ಮುಂತಾದ ಹಾಡುಗಳು  ರೇಡಿಯೋದಲ್ಲೋ, ಆರ್ಕೆಷ್ಟ್ರಾಗಳಲ್ಲೊ ಅಥವಾ remix ರೂಪದಲ್ಲೊ ಆಗೊಮ್ಮೆ  ಈಗೊಮ್ಮೆ ಕಿವಿಗೆ ಬೀಳುವುದುಂಟು.  ಆದರೆ ಬಹುತೇಕ original ಹಾಡುಗಳು ಜನಮಾನಸದಿಂದ ಮರೆಯಾಗಿವೆ.  ಈಗ ವಿಶೇಷ ಪ್ರಯತ್ನದಿಂದ 1970-80 ರ ದಶಕದ ಸುಮಾರು 12 ಚಿತ್ರಗಳ ಹಾಡುಗಳ ಸಾರವನ್ನು  ವಿಶಿಷ್ಟ ರೂಪದಲ್ಲಿ ಪ್ರಸ್ತುತ ಪಡಿಸಿದ್ದೇನೆ.  ಆಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿ,  ಈ ಪ್ರಯತ್ನ ನಿಮಗೆ ಹೇಗನ್ನಿಸಿತು ಎಂದು ತಿಳಿಸಿ.