Thursday, 17 November 2011

ಕೋಲಾಟ


ಡಾ| ರಾಜ್ ಅಭಿನಯದ ಕವಿರತ್ನ ಕಾಳಿದಾಸ ಚಿತ್ರದ  ಬೆಳ್ಳಿ ಮೂಡಿತು ಕೋಳಿ ಕೂಗಿತು ಹಾಡು ಎಲ್ಲರಿಗೂ ಗೊತ್ತು.  ಇದೇ ಕಥೆಯ ಚಿತ್ರ 50ರ ದಶಕದಲ್ಲಿ ಕು.ರ.ಸೀತಾರಾಮ ಶಾಸ್ತ್ರಿ ನಿರ್ದೇಶನದಲ್ಲಿ ಮಹಾಕವಿ ಕಾಳಿದಾಸ ಎಂಬ ಹೆಸರಿನಲ್ಲಿ  ಬಂದಿತ್ತು. ಹೊನ್ನಪ್ಪ ಭಾಗವತರ್, ಸರೋಜಾ ದೇವಿ, ನರಸಿಂಹ ರಾಜು ಮುಂತಾದವರು ತಾರಾಗಣದಲ್ಲಿದ್ದರು.    ಆ ಚಿತ್ರದಲ್ಲಿ ಈ ಸಂದರ್ಭಕ್ಕೆ ಇದ್ದ ಹಾಡು ಯಾವುದು ಗೊತ್ತೇ?  ಅದುವೇ ಕೋಲಾಟ ಅಂದಾಕ್ಷಣ ಥಟ್ಟನೆ ನೆನಪಾಗುವ ಚೆಲುವಯ್ಯ ಚೆಲುವೊ ಹಾಡು. ರಾಜ್ ಅವರಂತೆಯೇ ಗಾಯಕ-ನಟರಾದ ಸಿ. ಹೊನ್ನಪ್ಪ ಭಾಗವತರ್ ಸ್ವತಃ ಈ ಹಾಡು ಹಾಡಿದ್ದರು.  ಈ ಚಿತ್ರಕ್ಕೆ ಸಂಗೀತ ನಿರ್ದೇಶನವೂ ಅವರದೇ. ಆ ಹಾಡು ಎಷ್ಟೊಂದು ಜನಪ್ರಿಯವಾಯಿತೆಂದರೆ  ಅದೊಂದು ಕೇವಲ ಚಿತ್ರಗೀತೆಯಾಗಿ ಉಳಿಯದೆ ಶಾಲಾ ವಾರ್ಷಿಕೋತ್ಸವಗಳ ಅವಿಭಾಜ್ಯ ಅಂಗವೇ ಆಗಿ ಹೋಯಿತು! ಈ ಹಾಡಿನ ಎಷ್ಟೋ remix ಗಳು, version ಗಳೂ ಬಂದಿವೆ.  ಆದರೆ ಹಾಡಿನ ಮೂಲ ಧಾಟಿ ಬದಲಾಗಿಲ್ಲ.  ಇದರ ಸರಳತೆಯೇ ಇದಕ್ಕೆ ಕಾರಣವಿರಬಹುದು.   ಆಧುನಿಕ ಹಾಡುಗಳ ಭರಾಟೆಯ ನಡುವೆಯೂ ಆಗೊಮ್ಮೆ ಈಗೊಮ್ಮೆ ಈ ಹಾಡಿಗೆ ಸಂಯೋಜಿಸಿದ  ಕೋಲಾಟ  ಶಾಲಾ ವಾರ್ಷಿಕೋತ್ಸವಗಳಲ್ಲಿ ಸ್ಥಾನ ಪಡೆಯುತ್ತಿರುವುದನ್ನು ಈಗಲೂ ಕಾಣಬಹುದು.

     ಮಹಾಕವಿ ಕಾಳಿದಾಸ ಚಿತ್ರದ ಈ ಹಾಡನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.  ಚಿತ್ರಗೀತೆಗಳೆಂದರೆ ಸಾಮಾನ್ಯವಾಗಿ ಇದ್ದೇ ಇರುವ  ಗಿಟಾರ್, ಸಿತಾರ್, ವಯಲಿನ್ ನಂತಹ ತಂತಿ ವಾದ್ಯಗಳಾಗಲೀ, ಕೊಳಲು, ಕ್ಲಾರಿಯೊನೆಟ್ ನಂತಹ ಊದುವ(ಸುಷಿರ) ವಾದ್ಯಗಳಾಗಲಿ  ಇಲ್ಲಿ ಇಲ್ಲವೇ ಇಲ್ಲ.  ಕೇವಲ ದೊಳ್ಳು, ಉತ್ತರ ಕರ್ನಾಟಕದ ಜಾನಪದ ವಾದ್ಯ ಚೌಡಿಕಿ ಹಾಗೂ ಕೋಲಾಟದ ಕೋಲುಗಳನ್ನು ಮಾತ್ರ ತಾಳವಾದ್ಯಗಳಾಗಿ ಉಪಯೋಗಿಸಲಾಗಿರುವುದು ಇಲ್ಲಿಯ ವಿಶೇಷ.  ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ತಾಳವಾದ್ಯಗಳನ್ನು ಮಾತ್ರ ಉಪಯೋಗಿಸಿದ ಇನ್ನೂ ಕೆಲವು ಹಾಡುಗಳಲ್ಲಿ ಒಂದು.

     ಹಾಡನ್ನು ಆಲಿಸಲು ಕ್ಲಿಕ್ಕಿಸಿ.





ಚೆಲುವಯ್ಯ ಚೆಲುವೊ                       
ಚಿತ್ರ: ಮಹಾಕವಿ ಕಾಳಿದಾಸ
ಹಾಡಿದವರು : ಸಿ.ಹೊನ್ನಪ್ಪ ಭಾಗವತರ್ ಮತ್ತು ಸಂಗಡಿಗರು.
ಸಂಗೀತ ನಿರ್ದೇಶನ :   ಸಿ.ಹೊನ್ನಪ್ಪ ಭಾಗವತರ್

ಚೆಲುವಯ್ಯ ಚೆಲುವೊ ತಾನಿ ತಂದನ                       
ಚಂದಮಾಮದಲ್ಲಿ ಪ್ರಕಟವಾಗಿದ್ದ ಜಾಹೀರಾತು
ಚಿನ್ಮಯಾ ರೂಪೇ ಕೊಲಣ್ಣ ಕೋಲೆ

ಬೆಟ್ಟದ್ ಮ್ಯಾಗಳ್ ಜಲ್ಲೆ ಬಿದಿರು
ಬೇಲಿ ಮ್ಯಾಗಳ್  ಸೋರೆ ಬುರುಡೆ
ಲೋ ಲೋ ಕಿನ್ನರಿ ನುಡಿಸೋನ್ಯಾರಯ್ಯ

ಬೋರು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಲ್ಯೊ

ನಮ್ಮ ಕೇರಿಗ್ ಬಂದರೀಗ
ಕರಿಯ ಕಂಭ್ಳಿ ಗದ್ದೀನ್ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ

ಗಂಧನಾದ್ರೂ ಧರಿಸಿಕೊಳ್ಳಿ
ವೀಳ್ಯನಾದ್ರೂ ಮೆದ್ದು ಕೊಳ್ಳಿ
ಬಂದ ಕಾರ್ಯ ಹೇಳಿ ದಮ್ಮಯ್ಯ

ಬಂದ ಕಾರ್ಯ ಹೇಳುವುದಕ್ಕೆ
ಮಂತ್ರಿ ಪ್ರಧಾನಿ ಬೇಕು
ಹಾರ ತುರಾಯಿಗಳೆಲ್ಲೇ

ಆಗದೋನೆ ಭೋಗದೋನೆ
ನಾಗ ನಡು ಕಟ್ಟಿನೋನೆ
ಕೋಗಿಲ್ಹಾಂಗೆ ಕೂಗುತ್ತೀಯಲ್ಲೋ

ಎತ್ತಿಗಂತ ನೀನು ಬಾರೆ
ಎಮ್ಮೆಗಂತ ನಾನು ಬತ್ತೀನ್
ಕುಂತು ನಿಂತು ಮಾತನಾಡೋಣ

ಊರಿಗಂತ ನೀನು ಬಾರೊ
ನೀರಿಗಂತ ನಾನು ಬತ್ತೀನ್
ದೂರ ನಿಂತು ಮಾತನಾಡೋಣ


ಚೆಲುವಯ್ಯ ಚೆಲುವೊ ತಾನಿ ತಂದನ
ಚಿನ್ಮಯಾ ರೂಪೇ ಕೊಲಣ್ಣ ಕೋಲೆ





1 comment:

  1. Thank you very much..keep posting such folk songs :)

    ReplyDelete

Your valuable comments/suggestions are welcome