
ನನಗೆ ಸುಮಾರು 60 ವರ್ಷಗಳ ನಂತರ ಈಗ ಕೇಳಲು ಸಿಕ್ಕಿರುವ, ನಿಮ್ಮಲ್ಲಿ ಹೆಚ್ಚಿನವರು ಇದುವರೆಗೆ ಕೇಳಿಯೇ ಇರಲಾರದ, ವರ್ಣರಂಜಿತ ಕನ್ನಡ ಚಿತ್ರ ಸಂಪೂರ್ಣ ರಾಮಾಯಣದ ಹಾಡು ಇದು. ಹೋಮಿವಾಡಿಯಾ ಅವರು 1961ರಲ್ಲಿ ನಿರ್ಮಿಸಿದ್ದ ಹಿಂದಿ ಸಂಪೂರ್ಣ ರಾಮಾಯಣವನ್ನು ಕನ್ನಡ ಭಾಷೆಗೆ ಡಬ್ ಮಾಡಲಾಗಿತ್ತು. ಮಹಿಪಾಲ್ ರಾಮನಾಗಿ, ಅನಿತಾ ಗುಹಾ ಸೀತೆಯಾಗಿ, ಅಚಲಾ ಸಚ್‌ದೇವ್ (ಸಂಗಮ್‌ನಲ್ಲಿ ವೈಜಯಂತಿ ಮಾಲಾ ತಾಯಿ) ಕೌಸಲ್ಯೆಯಾಗಿ, ಬಿ.ಎಮ್. ವ್ಯಾಸ್ ರಾವಣನಾಗಿ, ಸುಲೋಚನಾ (ಜಾನಿ ಮೇರಾ ನಾಮ್‌ನಲ್ಲಿ ದೇವ್ ಆನಂದ್ ತಾಯಿ) ಕೈಕೇಯಿಯಾಗಿ, ಲಲಿತಾ ಪವಾರ್ (ಶ್ರೀ 420ನ ಲೇಡಿ ಕೇಲೇವಾಲಿ) ಮಂಥರೆಯಾಗಿ, ಹೆಲನ್ ಮಾಯಾ ಶೂರ್ಪನಖಿಯಾಗಿ ಕಾಣಿಸಿಕೊಂಡಿದ್ದ ಪ್ರಮುಖರು. ಹಿಂದಿ ಚಿತ್ರದ ಮೂಲ ಸಂಗೀತ ನಿರ್ದೇಶಕರು ವಸಂತ್ ದೇಸಾಯಿ. ವಿಜಯಭಾಸ್ಕರ್ ಕನ್ನಡ ಅವತರಣಿಕೆಯ ಸಂಗೀತದ ಹೊಣೆ ಹೊತ್ತಿದ್ದರು. ಕನ್ನಡದಲ್ಲಿ ಗೀತೆಗಳನ್ನು ಬರೆದವರು ಗೀತಪ್ರಿಯ. ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್, ಎಲ್.ಆರ್. ಈಶ್ವರಿ ಮತ್ತಿತರರು ಕನ್ನಡ ಹಾಡುಗಳನ್ನು ಹಾಡಿದ್ದರು. ಆದರೆ ಡಬ್ ಆದ ಚಿತ್ರಗಳಲ್ಲಿ ಬೇರೆ ಭಾಷೆಯ ಸಂಭಾಷಣೆಯ ತುಟಿ ಚಲನೆಗೆ ಸರಿ ಹೊಂದುವಂತೆ ಕನ್ನಡ ಧ್ವನಿಯಾದ ಕಲಾವಿದರ ಹೆಸರುಗಳು ಗೋಪ್ಯವಾಗಿಯೆ ಉಳಿಯುತ್ತವೆ.
ಆ ಕಾಲದಲ್ಲಿ ಸಾಮಾನ್ಯವಾಗಿ ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗುತ್ತಿದ್ದುದು. ಕನ್ನಡದಲ್ಲಿ ಅವುಗಳ ಸಂಗೀತ ನಿರ್ವಹಣೆ ಮೂಲ ಸಂಗೀತ ನಿರ್ದೇಶಕರದ್ದೇ ಇರುತ್ತಿತ್ತು. ಆದರೆ ವೀರ ಜಬಕ್, ಜಿಂಬೊ ನಗರ ಪ್ರವೇಶ ಮತ್ತು ಸಂಪೂರ್ಣ ರಾಮಾಯಣ ಹಿಂದಿಯಿಂದ ಡಬ್ ಆದ ಚಿತ್ರಗಳು. ಮೂಲದಲ್ಲಿ ಚಿತ್ರಗುಪ್ತ ಮತ್ತು ವಸಂತ ದೇಸಾಯಿ ಸಂಗೀತವಿದ್ದ ಈ ಮೂರಕ್ಕೂ ವಿಜಯ ಭಾಸ್ಕರ್ ಅವರ ಸಂಗೀತ ನಿರ್ವಹಣೆ ಇದ್ದದ್ದು ಗಮನಿಸಬೇಕಾದ ಅಂಶ.
1962ರಲ್ಲಿ ನಾನು 5ನೇ ತರಗತಿಯಲ್ಲಿರುವಾಗ ರಾಮಕಾಂತಿ ಟಾಕೀಸಿನಲ್ಲಿ ಪ್ರದರ್ಶಿತವಾಗಿದ್ದ ಈ ವರ್ಣರಂಜಿತ ಕನ್ನಡ ಸಂಪೂರ್ಣ ರಾಮಾಯಣ ಸಿನಿಮಾ ನೋಡಲೆಂದೇ ನಮ್ಮ ತಾಯಿ, ಅಣ್ಣಂದಿರು ಮುಂತಾಗಿ ಆರೇಳು ಮಂದಿ ಮಂಗಳೂರಿಗೆ ಹೋಗಿದ್ದರು. ರಜೆಯ ಸಮಯವಾಗಿದ್ದರೆ ಖಂಡಿತ ನಾನೂ ಅವರೊಡನೆ ಸೇರಿಕೊಳ್ಳುತ್ತಿದ್ದೆ. vAstavya hUDidda ಗಣೇಶ ಭವನದ ರೂಮಿನಲ್ಲಿ ಎಲ್ಲರಿಗೂ ಮಲಗಲು ಸ್ಥಳಾವಕಾಶ ಸಾಕಾಗದೆ ನಮ್ಮ ಅಣ್ಣ ಈಸಿ ಚೇರಿನಲ್ಲಿ ಕುಳಿತೇ ರಾತ್ರೆ ಕಳೆದಿದ್ದರಂತೆ! ಮಂಗಳೂರಿಂದ ಬರುವಾಗ ನಾವು ಅದು ವರೆಗೆ ನೋಡಿರದಿದ್ದ ಮಿಠಾಯಿಯ ಮುಕುಟ ಇದ್ದ ಬಿಸ್ಕತ್ತುಗಳು, ಕುಂಬಳಕಾಯಿಯ ಪೆಟ್ಠಾ ಇತ್ಯಾದಿ ತಂದಿದ್ದರು. ಸಿನಿಮಾದ ಹಾಡಿನ ಪುಸ್ತಕವನ್ನೂ ತಂದಿದ್ದರು. ಪಂಚಾಂಗದಂತೆ ಉದ್ದವಾಗಿದ್ದ ಆ ಪುಸ್ತಕ ಅನೇಕ ವರ್ಷ ಮನೆಯಲ್ಲಿದ್ದದ್ದು ಈಗ ಕಳೆದು ಹೋಗಿದೆ.

ಚಿತ್ರದಲ್ಲಿದ್ದ ಹತ್ತಾರು ಹಾಡುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಮತ್ತು ನಾವೀಗ ಚರ್ಚಿಸುತ್ತಿರುವ ಮಂದ ಮಂದ ಮನದೇ ಹಾಡುಗಳು ರೇಡಿಯೋ ನಿಲಯಗಳಿಂದ, ಅದರಲ್ಲೂ ಧಾರವಾಡದಿಂದ ಆಗಾಗ ಪ್ರಸಾರವಾಗುತ್ತಿದ್ದವು. ಮಧ್ಯದಲ್ಲಿ ತೋರೈ ಸನ್ಮಾರ್ಗ ಶ್ರೀ ರಾಮನೇ ಎಂಬ ಸಾಲು ಇರುವ ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರು ಹಾಡಿರುವ ಗೀತೆ ಕೂಡ ಕೆಲವೊಮ್ಮೆ ಪ್ರಸಾರವಾಗುತ್ತಿತ್ತು. 70ರ ದಶಕ ಬರುತ್ತಿದ್ದಂತೆ ಇವು ಹಿನ್ನೆಲೆಗೆ ಸರಿದು ಕಾಲಗರ್ಭದಲ್ಲಿ ಮರೆಯಾದವು. ಅವುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಕೆಲವು ವರ್ಷ ಹಿಂದೆ ದೊರಕಿದರೂ ಮಂದ ಮಂದ ಮನದೇ ಮಾತ್ರ ಎಲ್ಲೂ ಸಿಕ್ಕಿರಲಿಲ್ಲ. ಚಿತ್ರದ ಕನ್ನಡ ಅವತರಣಿಕೆ ಇಲ್ಲದಿದ್ದರೂ ಮೂಲ ಹಿಂದಿ ಸಂಪೂರ್ಣ ರಾಮಾಯಣ ಅಂತರ್ಜಾಲದಲ್ಲಿ ಲಭ್ಯವಿದ್ದು ಅದರಲ್ಲಿ ಸೀತೆ ಹಾಡುವ ಮೇರೆ ಜೀವನ್ ಕೀ ಪರ್ಣಕುಟೀ ಮೆಂ ಹಾಡು ಯಾಕೋ ಇಲ್ಲ. ಆದರೆ ಮಂದ ಮಂದ ಮನದೇ ಹಾಡಿನ ಹಿಂದೀ ರೂಪ ಬಾರ್ ಬಾರ್ ಬಗಿಯಾ ಮೆಂ ಕೋಯಲ್ ನ ಬೋಲೆ ಇದೆ. ಅದನ್ನು ನೋಡಿ ‘ಛೇ, ಕನ್ನಡ ಹಾಡು ಇದ್ದಿದ್ದರೆ ಹಿಂದಿ ವೀಡಿಯೊ ಮೇಲೆ ಸೂಪರ್ ಇಂಪೋಸ್ ಮಾಡಬಹುದಿತ್ತಲ್ಲ’ ಅಂದುಕೊಳ್ಳುತ್ತಿದ್ದೆ.
ಸಮಾನಮನಸ್ಕರಾದ ಅನೇಕರಲ್ಲಿ ಈ ಹಾಡಿನ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಮಣ್ಣಿಗೆಸೆದ ಬೀಜ ಎಂದೋ ಒಂದು ದಿನ ಮೊಳಕೆ ಒಡೆಯುವಂತೆ ಮೊನ್ನೆ ಇಂಥ ಹಳೇ ಹಾಡುಗಳ ಅಭಿಮಾನಿ ಶ್ರೀನಾಥ್ ಮಲ್ಯ ಈ ಹಾಡು ಸಿಕ್ಕಿರುವ ಶುಭ ಸಮಾಚಾರವನ್ನು ತಿಳಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿದ್ದು ಸುಳ್ಳಲ್ಲ!
ಇನ್ನೇನು, ಕ್ಯಾಬರೆ ನಟಿಯೆಂದೇ ಗುರುತಿಸಲ್ಪಡುವ ಹೆಲನ್ ಮಾಯಾ ಶೂರ್ಪನಖಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡ ಹಿಂದಿ ವೀಡಿಯೋಗೆ ಕ್ಯಾಬರೆ ಗಾಯಕಿಯೆಂದು ಖ್ಯಾತಿ ಪಡೆದ ಎಲ್.ಆರ್. ಈಶ್ವರಿ ಹಾಡಿರುವ ಮಂದ ಮಂದ ಮನದೇ ಹಾಡನ್ನು ತಡ ಮಾಡದೆ ಕಸಿ ಕಟ್ಟಿಯೇ ಬಿಟ್ಟೆ. ಹಿಂದಿ ಪದಗಳ ತುಟಿ ಚಲನೆಗೆ ಕರಾರುವಾಕ್ಕಾಗಿ ಸರಿಹೊಂದುವಂಥ ಕನ್ನಡ ಪದಗಳನ್ನು ಹೆಣೆದು ಅರ್ಥಪೂರ್ಣವಾದ ಹಾಡು ರಚಿಸಿದ ಗೀತಪ್ರಿಯ ಮತ್ತು ಮೂಲ ಗಾಯಕಿ ಆಶಾ ಭೋಸ್ಲೆ ಅವರಿಗಿಂತ ಒಂದು ಕೈ ಮೇಲೆಯೇ ಅನ್ನುವಂತೆ ಹಾಡಿದ ಎಲ್.ಆರ್. ಈಶ್ವರಿ ಅವರ ಪ್ರತಿಭೆಗೆ ಮಾರು ಹೋದೆ.
ಹಿಂದಿ, ಕನ್ನಡ ಎರಡೂ ಹಾಡುಗಳನ್ನು ಆಲಿಸಿದಾಗ ಎರಡರ ಶ್ರುತಿ, ಬಳಸಿದ ವಾದ್ಯಗಳು, ಅವುಗಳ ನಾದ, ನುಡಿಸಿದ ಶೈಲಿ ಎಲ್ಲವೂ ತದ್ರೂಪವಾಗಿರುವುದು ತಿಳಿಯುತ್ತದೆ. ವಿಜಯಭಾಸ್ಕರ್ ಅವರಿಗೆ ಮುಂಬಯಿ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ದುಡಿದ ಅನುಭವ ಇದ್ದುದರಿಂದ ಮೂಲದಲ್ಲಿ ನುಡಿಸಿದ ವಾದ್ಯಗಳು ಮತ್ತು ವಾದ್ಯಗಾರರನ್ನೇ ಬಳಸಿ ಹಾಡುಗಳ ಮರುಸೃಷ್ಟಿ ಮಾಡಲು ಸಾಧ್ಯವಾಗಿರಬಹುದು. ಹಿಂದಿ ಹಾಡುಗಳನ್ನು ರೆಕಾರ್ಡ್ ಮಾಡುವಾಗ ಹಿನ್ನೆಲೆ ಸಂಗೀತದ ಟ್ರಾಕ್‌ಗಳನ್ನು ಟೇಪುಗಳಲ್ಲಿ ಬೇರೆಯಾಗಿಯೇ ಸಿದ್ಧಪಡಿಸಿಟ್ಟುಕೊಂಡು ಅವುಗಳನ್ನೇ ಇಲ್ಲಿ ಬಳಸಿರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
********
ಚಿತ್ರ : ಸಂಪೂರ್ಣ ರಾಮಾಯಣ.
ಗಾಯಕಿ : ಎಲ್.ಆರ್. ಈಶ್ವರಿ.
ಸಾಹಿತ್ಯ : ಗೀತಪ್ರಿಯ.
ಸಂಗೀತ : ಮೂಲ ಹಿಂದಿ - ವಸಂತ ದೇಸಾಯಿ, ಕನ್ನಡದಲ್ಲಿ - ವಿಜಯಭಾಸ್ಕರ್.
ಮಂದ ಮಂದ ಮನದೆ ಮನೋಲ್ಲಾಸ ಮೋಹ
ಮಂದ ಮಂದ ಉತ್ಸಾಹವು
ಎನ್ನ ಪ್ರಿಯ ಜೀವನವೆ ಆಡೇ ವಸಂತದೆ
ಎನ್ನ ಪ್ರಾಣ ನಲಿದಾಡಲು
ಹಾ ಪ್ರಿಯ ನಿನ್ನ ನಗೆ
ಆಡೆ ಕಣ್ಪಟದೊಳಗೆ
ಅಭಿನವ ಶೋಭೆ ಕಂಡೆ
ಕಂಡು ಕಂಡು ಮುಖದೆಡೆಗೆ
ಮಧುಮಯ ಈ ಕ್ಷಣವೆ
ರೂಪಿಸಿರೆ ಪಾಶವನೆ
ಎನ್ನ ಈ ಮಂದ ನಗೆ
ಮೆರೆಯುತ ನೋಟದಲಿ
ಸಾರಿದೆ ಪ್ರಿತಿಯನೆ ಪ್ರೀತಿಯನೆ ಪ್ರೀತಿಯನೆ
ಸೋತೆ ನಾನೀಗ ಪ್ರಿಯಾ
ಕಣ್ಣುಗಳ ಆಟದಲಿ
ನಿನ್ನ ನೋಟ ಬಾಧಿಸಿರೆ
ರೂಪಸುಮ ವರ್ಧಿಸಿರೆ
ಸಖ ಈ ಕೋಮಲೆಯ
ಈಗ ದೂರ ದೂಡದಿರು
ರುಮ ಝುಮ ನಾಟ್ಯದಲಿ
ಎನ್ನ ಪ್ರಿಯ ಪ್ರಾಣದಲಿ
ಸಾರಿಹೆ ಪ್ರೀತಿಯನೆ ಪ್ರೀತಿಯನೆ ಪ್ರೀತಿಯನೆ
******
ಈಗ ಮಾಯಾ ಶೂರ್ಪನಖಿ ರೂಪದ ಹೆಲನ್ ಎಲ್.ಆರ್. ಈಶ್ವರಿಯ ಧ್ವನಿ ಬಳಸಿ ಕನ್ನಡದಲ್ಲಿ ಹಾಡುವ ವೀಡಿಯೊ ವೀಕ್ಷಿಸಿ ಆನಂದಿಸಿ. ಅನುಕೂಲ ಇದ್ದರೆ ಹೆಡ್‌ಫೋನ್ ಬಳಸಿ.
ಅಡಿಯೋ ಮಾತ್ರ ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.
ಹೋಲಿಕೆಗಾಗಿ ಹಿಂದಿ ಹಾಡು ಇಲ್ಲಿದೆ.
******
ಶೋಭನ್ ಬಾಬು ರಾಮನಾಗಿ ಮತ್ತು ಚಂದ್ರಕಲಾ ಸೀತೆಯಾಗಿ ಕಾಣಿಸಿಕೊಂಡಿದ್ದ 1971ರ ತೆಲುಗು ಸಂಪೂರ್ಣ ರಾಮಾಯಣವೂ ಕನ್ನಡಕ್ಕೆ ಡಬ್ ಆಗಿದ್ದು ಅಂತರ್ಜಾಲದಲ್ಲಿ ಲಭ್ಯವಿದೆ.
- ಚಿದಂಬರ ಕಾಕತ್ಕರ್.