
ಏಳು ಸ್ವರವು ಸೇರಿ ಸಂಗೀತವಾಯಿತು, ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು, ಪಂಚಮದಲ್ಲಿ ಹಾಡಿತು ಕೋಗಿಲೆ, ಇನಿಯ ಕೋಗಿಲೆಯ ಪಂಚಮದಿಂಚರ, ವಸಂತ ಕೋಗಿಲೆ ಪಂಚಮನೋಂಚರ, ಎಲ್ಲೆಲ್ಲೂ ಸಂಗೀತವೇ ಹೀಗೆ ಅನೇಕ ಜನಪ್ರಿಯ ಚಿತ್ರಗೀತೆಗಳು ನಮಗೆ ಸರಳವಾಗಿ ಸಂಗೀತಜ್ಞಾನವನ್ನು ಬೋಧಿಸಿವೆ. ಪ್ರಕೃತಿಯಲ್ಲಿ ತಾನು ಆಲಿಸಿದ ವಿವಿಧ ಶಬ್ದಗಳನ್ನು ಮಾನವ ಅನುಕರಿಸಿ ತನ್ನ ಅನುಕೂಲಕ್ಕಾಗಿ ಸ್ಥೂಲವಾಗಿ ಅವುಗಳನ್ನು ಷಡ್ಜ-ಸ, ರಿಷಭ-ರಿ, ಗಾಂಧಾರ-ಗ, ಮಧ್ಯಮ-ಮ , ಪಂಚಮ-ಪ, ಧೈವತ-ದ, ನಿಷಾದ-ನಿ ಎಂದು ವಿಂಗಡಿಸಿಕೊಂಡಿರಬಹುದು. ಸಾಮಗಾಯನದ ವಿವರಗಳನ್ನು ತಿಳಿಸುವ ನಾರದೀಯ ಶಿಕ್ಷಾ ಎಂಬ ವೇದಾಂಗ ಗ್ರಂಥದಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ.



ನಮ್ಮ ಸ, ರಿ, ಗ, ಮ, ಪ, ದ, ನಿಗಳನ್ನು C, D, E, F, G, A, Bಗೆ ಬದಲಾಯಿಸಿಕೊಂಡು ದೊ, ರೆ, ಮಿ, ಫಾ, ಸ, ಲಾ, ಟಿ ಎಂದು ಕರೆದ ಪಾಶ್ಚಾತ್ಯ ಸಂಗೀತವೂ ಸ್ವರಗಳಿಗೆ flat, natural ಮತ್ತು sharp ಎಂಬ suffixಗಳನ್ನು ಸೇರಿಸಿಕೊಂಡು 12 ಸ್ವರಗಳ ಕಲ್ಪನೆಯನ್ನು ತನ್ನದಾಗಿಸಿಕೊಂಡಿತು. ಭಾರತದ ಕರ್ನಾಟಕಿ ಮತ್ತು ಹಿಂದುಸ್ತಾನಿ ಶೈಲಿಗಳಲ್ಲಿ ಸ್ವರಗಳ ವಿಭಜನೆ ಇತ್ಯಾದಿ ಕರಾರುವಾಕ್ಕಾಗಿದ್ದರೂ ಮೂಲ ಷಡ್ಜದ ಶ್ರುತಿಯನ್ನು ನಿಗದಿಪಡಿಸುವಲ್ಲಿ ಗೊಂದಲವಿತ್ತು. ಶ್ಲೋಕದಲ್ಲಿ ವಿವರಿಸಿದಂತೆ ಹಿಂದಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳ ಧ್ವನಿಯನ್ನಾಧರಿಸಿ ಅಂದಾಜಿನ ಮೇಲೆ ಷಡ್ಜವನ್ನು ನಿರ್ಧರಿಸುತ್ತಿದ್ದರೋ ಏನೋ. ಹಾರ್ಮೋನಿಯಮ್ ನಮ್ಮ ದೇಶಕ್ಕೆ ಕಾಲಿರಿಸಿದ ಮೇಲೆ ಅದರ ಬಿಳಿ, ಕಪ್ಪು ಪಟ್ಟಿಗಳ ಆಧಾರದ ಮೇಲೆ ಶ್ರುತಿಯನ್ನು ನಿರ್ಧರಿಸಿ ಮೊದಲ ಬಿಳಿ ಪಟ್ಟಿಯ ಶ್ರುತಿಗೆ ಬಿಳಿ ಒಂದು, ಎರಡನೇ ಬಿಳಿ ಪಟ್ಟಿಗೆ ಬಿಳಿ ಎರಡು, ಒಂದು ಮತ್ತು ಎರಡನೇ ಬಿಳಿ ಪಟ್ಟಿಯ ನಡುವಿನ ಕಪ್ಪು ಪಟ್ಟಿಯ ಶ್ರುತಿಗೆ ಕಪ್ಪು ಒಂದು ಅಥವಾ ಒಂದೂವರೆ ಪಟ್ಟಿ ಹೀಗೆ ಗುರುತಿಸುವ ಪರಿಪಾಠ ಆರಂಭವಾಯಿತು. ಆದರೆ ಇಲ್ಲೂ ಅನೇಕ ಸಲ ಹಾರ್ಮೋನಿಯಂನಿಂದ ಹಾರ್ಮೋನಿಯಂಗೆ ಶ್ರುತಿಯಲ್ಲಿ ವ್ಯತ್ಯಾಸ ಇರುತ್ತಿತ್ತು. ಹೀಗಾಗಿ ನಿಶ್ಚಿತ ಶ್ರುತಿಯ ಕೊಳಲಿನಂಥ ವಾದ್ಯಗಳನ್ನು ನುಡಿಸುವವರಿಗೆ ಸಮಸ್ಯೆಯುಂಟಾಗುತ್ತಿತ್ತು. ಆಧಾರ ಶ್ರುತಿಗಳಲ್ಲಿ ಸಮಾನತೆ ಸಾಧಿಸುವ ಸಲುವಾಗಿ ಪಾಶ್ಚಾತ್ಯ ಸಂಗೀತದಲ್ಲಿ ಪಿಯಾನೋದ 4ನೇ ಸಪ್ತಕದ 6ನೇ ಬಿಳಿ ಕೀ ಅಂದರೆ A(ದ2) ಸ್ವರದ ಕಂಪನಾಂಕ 440 Hz ಇರಬೇಕೆಂಬ ನಿಯಮ ಜಾರಿಗೊಳಿಸಲಾಗಿತ್ತು. ಇದರ ಆಧಾರದ ಮೇಲೆ ತಯಾರಾದ ಪಿಚ್ ಪೈಪುಗಳು ಸಿಗಲಾರಂಭಿಸಿದ ಮೇಲೆ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರವಾಯಿತು. ಈಗ ಬರುತ್ತಿರುವ ಬಹುತೇಕ ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆಗಳು ಹಾಗೂ ಸಂಗೀತೋಪಕರಣಗಳು ಈ A 440 Hz ಆಧಾರಿತ Stuttgart ಸ್ಟಾಂಡರ್ಡ್ ಶ್ರುತಿ ಹೊಂದಿರುತ್ತವೆ.

ಈಗಿನ ದಿನಗಳಲ್ಲಿ ನಮ್ಮಲ್ಲೂ C, C#, G ಹೀಗೆ ಪಾಶ್ಚಾತ್ಯ notationಗಳ ರೂಪದಲ್ಲೂ ಶ್ರುತಿಯನ್ನು ಗುರುತಿಸುವುದಿದೆ. ಉದಾಹರಣೆಗೆ ಯಾರಾದರೂ ‘ನಾನು G#(G sharp) ಶ್ರುತಿಯಲ್ಲಿ ಹಾಡುತ್ತೇನೆ’, ಅಥವಾ ‘ನಾನು ಕಪ್ಪು 4ರಲ್ಲಿ ಹಾಡುತ್ತೇನೆ’, ಅಥವಾ ‘ನನ್ನ ಶ್ರುತಿ ಐದುವರೆ ಪಟ್ಟಿ’ ಎಂದು ಹೇಳಿದರೆ ಎಲ್ಲದರ ಅರ್ಥ ಒಂದೇ. ಕಪ್ಪು ಕೀಗಳನ್ನು ಹಿಂದಿನ ಬಿಳಿ ಕೀಯ sharp ಅನ್ನುವ ಬದಲಾಗಿ ಮುಂದಿನ ಬಿಳಿ ಕೀಯ flat ಎಂದು ಗುರುತಿಸುವ ಪದ್ಧತಿಯೂ ಇದೆ. ಆದರೆ ನಮ್ಮಲ್ಲಿ ಈ ರೀತಿಯ ಬಳಕೆ ಕಮ್ಮಿ. ಟಿ.ವಿ.ಯ ರಿಯಾಲಿಟಿ ಸಂಗೀತ ಕಾರ್ಯಕ್ರಮಗಳ ಕೆಲವು ನಿರ್ಣಾಯಕರು ಆಗಾಗ ‘ನೀವು flat ಹಾಡಿದ್ರಿ’, ‘ ನೀವು ಹಾಡಿದ್ದು ಕೆಲವು ಕಡೆ sharp ಆಗ್ತಿತ್ತು’ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಸ್ಪರ್ಧಿಗಳು ಕೆಲವು ಸಲ ಆಧಾರ ಶ್ರುತಿಗಿಂತ ಕೆಳಗೆ ಹಾಡಿದ ಹಾಗೆ, ಕೆಲವು ಸಲ ಶ್ರುತಿ ಜಾಸ್ತಿ ಆದ ಹಾಗೆ ಅವರಿಗನ್ನಿಸಿತು ಎಂದು ಇದರರ್ಥ.

ವಿವಿಧ ರೀತಿಗಳಲ್ಲಿ ಸ್ವರಸ್ಥಾನಗಳನ್ನು ತೋರಿಸುವ ಈ ಹಾರ್ಮೋನಿಯಮ್ ರೀಡುಗಳ ಚಿತ್ರ ಸಾಂಕೇತಿಕ ಮಾತ್ರ. ಭಾರತೀಯ ಪದ್ಧತಿಯಲ್ಲಿ Cಯೇ ಷಡ್ಜವಾಗಬೇಕೆಂದಿಲ್ಲ. 12 ಸ್ವರಗಳ ಪೈಕಿ ಯಾವುದನ್ನಾದರೂ ಷಡ್ಜವಾಗಿಸಿಕೊಳ್ಳಬಹುದು. ಆಗ ಕೀ ನೊಟೇಶನ್ ಮತ್ತು ಸ್ವರಗಳ ನಂಟು ಬದಲಾಗುತ್ತದೆ. ಕೆಳಗಿನ ಚಾರ್ಟ್ ಯಾವ ಕೀಯನ್ನು ಷಡ್ಜ ಮಾಡಿಕೊಂಡಾಗ ಯಾವ್ಯಾವ ಕೀಗಳು ಯಾವ್ಯಾವ ಸ್ವರಗಳಾಗುತ್ತವೆ ಎಂಬುದನ್ನು ತೋರಿಸುತ್ತದೆ. ಯಾವ ಶ್ರುತಿಯ ಮಧ್ಯಮ, ಪಂಚಮಗಳು ಯಾವ ಶ್ರುತಿಯಾಗುತ್ತದೆ ಎಂದು ಸುಲಭವಾಗಿ ತಿಳಿಯಲು ಕೂಡ ಈ ಚಾರ್ಟ್ ಸಹಕಾರಿ.

ಈ ಕೆಳಗಿನ ತಖ್ತೆಯಲ್ಲಿ ಕರ್ನಾಟಕ, ಹಿಂದುಸ್ಥಾನಿ ಮತ್ತು ಪಾಶ್ಚಾತ್ಯ ಶೈಲಿಗಳಲ್ಲಿ 12 ಸ್ವರಸ್ಥಾನಗಳ ವಿವರಗಳನ್ನು ನೋಡಬಹುದು. ಗೊಂದಲ ಮೂಡಿಸಬಹುದಾದ ಕರ್ನಾಟಕ ಮತ್ತು ಹಿಂದುಸ್ತಾನಿ ಶೈಲಿಯ ಸ್ವರಗಳ ಹೆಸರುಗಳನ್ನೂ ಹೋಲಿಸಿ ನೋಡಬಹುದು. ಶುದ್ಧ ರಿಷಭ, ಶುದ್ಧ ಗಾಂಧಾರ, ಶುದ್ಧ ಧೈವತ ಮತ್ತು ಶುದ್ಧ ನಿಷಾದ ಹೆಸರುಗಳು ಎರಡು ಪದ್ಧತಿಗಳಲ್ಲಿ ಬೇರೆ ಬೇರೆ ಸ್ವರಸ್ಥಾನಗಳನ್ನು ಸೂಚಿಸುವುದು ಗಮನಿಸಬೇಕಾದ ಅಂಶ.


ನಾನು ಧ್ವನಿಮುದ್ರಿಸಿಕೊಂಡಿದ್ದ ಕೋಗಿಲೆ ಧ್ವನಿಯ ಸ್ಯಾಂಪಲ್ ಒಂದನ್ನು ಕಂಪ್ಯೂಟರಿನಲ್ಲಿ ವಿಶ್ಲೇಷಿಸಿದಾಗ ಅದರ ಕಂಪನಾಂಕ 1582.5 Hz ಆಗಿರುವುದು ಕಂಡು ಬಂತು. ಇದು 1567.98 Hz ಅಂದರೆ 6ನೇ ಸಪ್ತಕದ ಬಿಳಿ ಒಂದು ಶ್ರುತಿಯ ಪಂಚಮಕ್ಕೆ ಅತಿ ಸಮೀಪದಲ್ಲಿದೆ! ನಮ್ಮ ಪೂರ್ವಜರ ಗ್ರಹಿಕೆಗಳು ಕೇವಲ ಕಲ್ಪನೆಗಳಲ್ಲ ಎಂಬುದಕ್ಕೆ ಇದು ಪುರಾವೆ.

‘ಏಳು ಸ್ವರವು ಸೇರಿ ಸಂಗೀತವಾಯಿತು’ ಎಂದು ಹಾಡಿನಲ್ಲಿ ಹೇಳಲಾಗಿದ್ದರೂ ವಾಸ್ತವದಲ್ಲಿ ಬರೇ ಏಳೋ, ಹನ್ನೆರಡೋ ಸ್ವರಗಳು ಇದ್ದ ಮಾತ್ರಕ್ಕೆ ಅವುಗಳಿಂದ ಸಂಗೀತ ಸಿಗದು. ಉಪ್ಪು, ಮೆಣಸು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿದರೆ ಮಾತ್ರ ಹೇಗೆ ರುಚಿಕರವಾದ ವೈವಿಧ್ಯಮಯ ಅಡುಗೆಯಾಗುತ್ತದೆಯೋ ಹಾಗೆಯೇ ಈ ಸ್ವರಗಳನ್ನು ವಿವಿಧ ಪರ್ಮುಟೇಶನ್ ಕಾಂಬಿನೇಶನ್‍ಗಳಲ್ಲಿ ಸಂಯೋಜಿಸಿದರಷ್ಟೇ ಮಧುರ ನಾದ ಹೊಮ್ಮೀತು. ಈ ರೀತಿ 12 ಸ್ಥಾನಗಳ ಸ್ವರಗಳನ್ನು ಬೇರೆ ಬೇರೆ ರೀತಿಯ 7 ಸ್ವರಗಳ ಆರೋಹಣ ಮತ್ತು ಅವರೋಹಣ ಉಳ್ಳ ಗುಂಪುಗಳನ್ನಾಗಿಸಿ ಅವುಗಳಿಗೊಂದು ಹೆಸರು ಕೊಟ್ಟು ರಾಗ ಎಂದು ಗುರುತಿಸುವ ಪರಿಪಾಠ ಬೆಳೆದು ಬಂದಿರಬಹುದು. ಕರ್ನಾಟಕ ಸಂಗೀತ ಶೈಲಿಯಲ್ಲಿ 12 ಸ್ಥಾನಗಳಲ್ಲಿರುವ 16 ಸ್ವರಗಳನ್ನು ಬಳಸಿ ಮ1 ಹೊಂದಿರುವ 36 ಹಾಗೂ ಮ2 ಹೊಂದಿರುವ 36 ಹೀಗೆ ಒಟ್ಟು 72 ಸಂಪೂರ್ಣ ರಾಗಗಳನ್ನು ಅಂದರೆ ಆರೋಹಣದಲ್ಲಿ ಸ,ರಿ,ಗ,ಮ,ಪ,ದ,ನಿ,ಸ ಹಾಗೂ ಅವರೋಹಣದಲ್ಲಿ ಸ,ನಿ,ದ,ಪ,ಮ,ಗ,ರಿ,ಸ ಇರುವಂಥವುಗಳನ್ನು ಗುರುತಿಸಿ ಅವುಗಳನ್ನು ಮೇಳಕರ್ತ ರಾಗಗಳು ಎಂದು ಹೆಸರಿಸಲಾಯಿತು. 12 ಸ್ಥಾನಗಳಲ್ಲಿರುವ 16 ಸ್ವರಗಳಿಗೂ ಈ 72 ಎಂಬ ಸಂಖ್ಯೆಗೂ ಇರುವ ನಂಟನ್ನು ಈ ಕೆಳಗಿನಂತೆ ಅರ್ಥಮಾಡಿಕೊಳ್ಳಬಹುದು.

ಈಗ ಮ1 ಹೊಂದಿರುವ ಕಾಂಬಿನೇಶನ್ನಿನ ಪೂರ್ವಾರ್ಧವನ್ನು ಗಮನಿಸೋಣ. ಮೇಲಿನ ತಖ್ತೆಯಂತೆ ಒಟ್ಟು 9 ರೀತಿಯಲ್ಲಿ ಸ,ರಿ,ಗ ಸ್ವರಗಳನ್ನು ಸಂಯೋಜಿಸಬಹುದು. ರಿ2, ಗ1 ಹಾಗೂ ರಿ3, ಗ2 ಇವು ಒಂದೇ ಸ್ವರಸ್ಥಾನವನ್ನು ಹಂಚಿಕೊಂಡವುಗಳಾಗಿರುವುದರಿಂದ ಹಾಗೂ ರಿ3, ಗ1 ಆರೋಹಣ ಕ್ರಮದಲ್ಲಿಲ್ಲದಿರುವುದರಿಂದ ಕೆಂಪು ಹಿನ್ನೆಲೆಯುಳ್ಳ 3 ಸಾಲುಗಳು ಲೆಕ್ಕಕ್ಕಿಲ್ಲ. ಹೀಗೆ 9ರ ಪೈಕಿ 6 ಕಾಂಬಿನೇಶನುಗಳು ಮಾತ್ರ ಉಳಿಯುತ್ತವೆ. ಇದೇ ರೀತಿ ಉತ್ತರಾರ್ಧ ಪ,ದ,ನಿ ಸಂಯೋಜನೆಯಲ್ಲೂ 6 ಯೋಗ್ಯ ಕಾಂಬಿನೇಶನುಗಳು ಸಿಗುತ್ತವೆ. ಪೂರ್ವಾರ್ಧದ 6 ಮತ್ತು ಉತ್ತರಾರ್ಧದ 6 ಕಾಂಬಿನೇಶನುಗಳ ಸಂಯೋಜನೆಯಿಂದ 6 x 6 = 36 ಸ,ರಿ,ಗ,ಮ,ಪ,ದ,ನಿ,ಸ ಸ್ವರಗಳುಳ್ಳ ರಾಗಗಳು ಸಿಗುತ್ತವೆ. ಮ1 ಸ್ವರವನ್ನು ಮ2 ಆಗಿ ಬದಲಾಯಿಸಿದಾಗ ಮತ್ತೆ 36 ಕಾಂಬಿನೇಶನುಗಳು ಸಿಕ್ಕಿ ಒಟ್ಟು 36 + 36 = 72 ಮೇಳಕರ್ತ ರಾಗಗಳಾಗುತ್ತವೆ.

ಮೇಳಕರ್ತ ರಾಗಗಳ ಕೋಷ್ಟಕವನ್ನು ವಿವಿಧ ರೀತಿ ಪ್ರಸ್ತುತಪಡಿಸಲಾಗುತ್ತಿದ್ದು ಇದು ನಾನು ಮರುವಿನ್ಯಾಸಗೊಳಿಸಿದ ಅದರ ಒಂದು ಸರಳ ಸುಲಭ ರೂಪ. ಪ್ರಕೃತಿ ಸ್ವರಗಳಾದ ಸ ಮತ್ತು ಪ ಎಲ್ಲ ಮೇಳಕರ್ತ ರಾಗಗಳ ಅವಿಭಾಜ್ಯ ಅಂಗಗಳಾಗಿದ್ದು ಅವುಗಳನ್ನು ಇಲ್ಲಿ ತೋರಿಸಲಾಗಿಲ್ಲ. ಬೇಕಿದ್ದ ರಿ, ಗ ಮತ್ತು ಮ ಸ್ವರಗಳನ್ನು ಹೊಂದಿದ ಅಡ್ಡ ಸಾಲು ಹಾಗೂ ದ ಮತ್ತು ನಿ ಸ್ವರಗಳನ್ನು ಹೊಂದಿರುವ ನೀಟ ಸಾಲು ಒಂದನ್ನೊಂದು ಸೇರುವಲ್ಲಿ ಆ ಸ್ವರಗಳ ಮೇಳೈಸುವಿಕೆಯಿಂದ ಉಂಟಾಗುವ ರಾಗದ ಸಂಖ್ಯೆ ಮತ್ತು ಹೆಸರು ದೊರೆಯುತ್ತದೆ. ಉದಾಹರಣೆಗೆ ರಿ2, ಗ2 ಮತ್ತು ಮ1 ಉಳ್ಳ ಅಡ್ಡ ಸಾಲು ಮತ್ತು ದ1 ಮತ್ತು ನಿ2 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ, ರಿ2, ಗ2, ಮ1, ಪ, ದ1, ನಿ2, ಸ ಸ್ವರಗಳನ್ನು ಹೊಂದಿದ 20ನೇ ಮೇಳಕರ್ತ ನಠಭೈರವಿ ರಾಗ ಸಿಗುತ್ತದೆ. ಅಥವಾ ರಿ2, ಗ2 ಮತ್ತು ಮ2 ಉಳ್ಳ ಅಡ್ಡ ಸಾಲು ಮತ್ತು ದ1 ಮತ್ತು ನಿ3 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ, ರಿ2, ಗ2, ಮ2, ಪ, ದ1, ನಿ3, ಸ ಸ್ವರಗಳನ್ನು ಹೊಂದಿದ 57ನೇ ಮೇಳಕರ್ತ ಸಿಂಹೇಂದ್ರಮಧ್ಯಮ ರಾಗ ಸಿಗುತ್ತದೆ. ಈ ಪ್ರಕ್ರಿಯೆಯನ್ನು ತಿರುವು ಮುರುವುಗೊಳಿಸಿದರೆ ಯಾವುದೇ ರಾಗದ ಸ್ವರಗಳನ್ನು ಪಡೆಯಬಹುದು. ಉದಾಹರಣೆಗೆ 22ನೇ ಮೇಳಕರ್ತ ಖರಹರಪ್ರಿಯ ರಾಗದ ಹೆಸರಿರುವ ಅಡ್ಡ ಸಾಲಿನ ಎಡ ತುದಿಯಲ್ಲಿ ರಿ2 ಗ2 ಮತ್ತು ಮ1 ಹಾಗೂ ನೀಟ ಸಾಲಿನ ಮೇಲ್ತುದಿಯಲ್ಲಿ ದ2, ನಿ2 ದೊರೆತು ಆ ರಾಗದ ಸ್ವರಗಳು ಸ, ರಿ2, ಗ2, ಮ1, ಪ, ದ2, ನಿ2, ಸ ಎಂದು ತಿಳಿಯುತ್ತದೆ.
ಈ 72 ರಾಗಗಳನ್ನು 12 ಚಕ್ರಗಳಾಗಿ ವಿಂಗಡಿಸಿ ಅವುಗಳಿಗೆ ಇಂದು, ನೇತ್ರ, ಅಗ್ನಿ, ವೇದ, ಬಾಣ, ಋತು, ಋಷಿ, ವಸು, ಬ್ರಹ್ಮ, , ದಿಶಿ, ರುದ್ರ, ಆದಿತ್ಯ ಎಂಬ ಸಂಖ್ಯಾಸೂಚಕ ಹೆಸರುಗಳನ್ನು ಕೊಡಲಾಗಿದೆ. ಹಣ್ಣಿನ ಮಧ್ಯ ಭಾಗವು ಹೆಚ್ಚು ಸಿಹಿಯಾಗಿರುವಂತೆ ಇಲ್ಲಿಯೂ ಕೋಷ್ಟಕದ ಮಧ್ಯಭಾಗದಲ್ಲೇ ಅನೇಕ ಜನಪ್ರಿಯ ಮಧುರ ರಾಗಗಳಿರುವುದನ್ನು ಗಮನಿಸಬಹುದು.
ಮೇಲೆ, ಕೆಳಗೆ, ಎಡ ಅಥವಾ ಬಲಕ್ಕೆ scroll ಮಾಡಿದಾಗಲೂ ಸುಲಭವಾಗಿ ಈ ಕೋಷ್ಟಕವನ್ನು ಉಪಯೋಗಿಸಲಾಗುವಂತೆ ರಿ, ಗ, ಮ ಸ್ವರಗಳನ್ನು ಎಡ ತುದಿ ಮತ್ತು ಬಲ ತುದಿ, ದ ಮತ್ತು ನಿ ಸ್ವರಗಳನ್ನು ಮೇಲ್ತುದಿ ಮತ್ತು ಕೆಳ ತುದಿ ಎರಡೂ ಕಡೆ ತೋರಿಸಲಾಗಿದೆ.
ಪದಪುಂಜಗಳಷ್ಟು ಸುಲಭವಾಗಿ ಅಂಕೆ ಸಂಖ್ಯೆಗಳನ್ನು ನೆನಪಿಡಲಾಗದಿರುವುದು ಮಾನವನ ದೌರ್ಬಲ್ಯ. ಈಗಲೂ ಅಂತರ್ಜಾಲದಲ್ಲಿ 172.217.26.197 ಎಂಬ ವಿಳಾಸದ ತಾಣಕ್ಕೆ ಹೋಗಲು ಚಿಕ್ಕದಾಗಿ gmail.com, ಅಥವಾ 157.240.13.35 ಎಂಬ ವಿಳಾಸಕ್ಕೆ ಹೋಗಲು facebook.com ಎಂಬ ನೆನಪಿಡಲು ಸುಲಭವಾದ ಪದಗಳನ್ನಷ್ಟೇ ಟೈಪಿಸಬೇಕಾದ ವ್ಯವಸ್ಥೆ ಮಾಡಿ ಕೊಟ್ಟಿರುವುದು ಈ ಕಾರಣಕ್ಕಾಗಿಯೇ. ಆದರೆ ಮೇಳಕರ್ತ ರಾಗಗಳ ಕೋಷ್ಟಕದಲ್ಲಿ ಅವುಗಳಿಗೆ ಆಕರ್ಷಕ ಹೆಸರುಗಳನ್ನು ನೀಡುವುದು ಮಾತ್ರವಲ್ಲ, ಕಟಪಯಾದಿ ಸೂತ್ರವನ್ನು ಬಳಸಿ ಸಂಖ್ಯೆ ಮತ್ತು ಹೆಸರುಗಳ ನಡುವೆ ವಿಶಿಷ್ಟ ಸಂಬಂಧವೂ ಇರುವಂತೆ ಮಾಡಲಾಗಿದೆ.

ಕಟಪಯಾದಿ ಸೂತ್ರದಲ್ಲಿ ಮೇಲೆ ತೋರಿಸಿದಂತೆ ಕ ದಿಂದ ಹ ವರೆಗಿನ ವ್ಯಂಜನಳು 1 ರಿಂದ 0 ವರೆಗಿನ ಬೆಲೆಯನ್ನು ಹೊಂದುತ್ತವೆ. ಒಂದನೇ ನೀಟ ಸಾಲಿನ ಎಲ್ಲ ವ್ಯಂಜನಗಳು 1, ಎರಡನೇ ಸಾಲಿನಲ್ಲಿರುವವು 2, ಕೊನೆಯ ಸಾಲಿನವು 0 ಹೀಗೆ ಅಂಕೆಗಳಿಂದ ಗುರುತಿಸಲ್ಪಡುತ್ತವೆ. ಈಗ ಮೇಳಕರ್ತ ಕೋಷ್ಟಕದ ಮಾಯಾಮಾಳವಗೌಳ ರಾಗವನ್ನು ತೆಗೆದುಕೊಂಡರೆ ಅದರ ಮೊದಲ ಎರಡು ವ್ಯಂಜನಗಳು ಮ ಮತ್ತು ಯ. ಕಟಪಯಾದಿ ಸೂತ್ರದಂತೆ ಮ ಅಂದರೆ 5 ಮತ್ತು ಯ ಅಂದರೆ 1. ಇವುಗಳನ್ನು ಜೊತೆಗೂಡಿಸಿದರೆ 51. ಇದನ್ನು ತಿರುವು ಮುರುವು ಮಾಡಿದಾಗ ಸಿಗುವ 15 ಈ ರಾಗದ ಮೇಳಕರ್ತ ಸಂಖ್ಯೆ ಆಗಿರುತ್ತದೆ. ಇನ್ನೊಂದು ಉದಾಹರಣೆಯಾಗಿ ಹರಿಕಾಂಭೋಜಿಯ ಮೊದಲೆರಡು ವ್ಯಂಜನಗಳು ಹ ಮತ್ತು ರ. ಅವುಗಳ ಅಂಕೆಗಳು 8 ಮತ್ತು 2. ಜೊತೆಗೂಡಿಸಿದಾಗ 82. ತಿರುವು ಮುರುವು ಮಾಡಿದಾಗ ಆ ರಾಗದ ಮೇಳಕರ್ತ ಸಂಖ್ಯೆ 28 ಸಿಗುತ್ತದೆ. ಈ ರೀತಿ ಎಲ್ಲ 72 ರಾಗಗಳ ಹೆಸರಿನಿಂದಲೇ ಅವುಗಳ ಮೇಳಕರ್ತ ಸಂಖ್ಯೆಯನ್ನು ಸುಲಭವಾಗಿ ತಿಳಿಯಬಹುದು. ಪದಗಳನ್ನು ಸಂಖ್ಯೆಗಳೊಂದಿಗೆ ಬೆಸೆಯುವ ಇನ್ನೂ ಇಂತಹ ಎಷ್ಟೋ ಚಮತ್ಕಾರಗಳಿಗೆ ಕಟಪಯಾದಿ ಸೂತ್ರವನ್ನು ಬಳಸಲಾಗಿದೆ.
ಹಿಂದುಸ್ಥಾನಿ ಪದ್ಧತಿಯಲ್ಲಿ ಈ ರೀತಿ 72 ಮೇಳಕರ್ತ ರಾಗಗಳ ಕಲ್ಪನೆ ಇಲ್ಲ. ಅಲ್ಲಿ 10 ಮುಖ್ಯ ಥಾಟ್‍ಗಳಿದ್ದು ಅವುಗಳಿಂದಲೇ ನೂರಾರು ರಾಗಗಳು ಜನ್ಮತಾಳಿವೆ.

72 ಮೇಳಕರ್ತ ರಾಗಗಳ ಸೂಚಿಯಲ್ಲಿ ಮೋಹನ, ಹಿಂದೋಳ, ಹಂಸಧ್ವನಿ, ಅಭೇರಿಯಂಥ ಅನೇಕ ಜನಪ್ರಿಯ ರಾಗಗಳೇ ಇಲ್ಲವಲ್ಲ ಎಂದು ಕೆಲವರಿಗೆ ಅನ್ನಿಸಿರಬಹುದು. ಅವುಗಳು ಆರೋಹಣ ಅವರೋಹಣದಲ್ಲಿ ಎಲ್ಲ ಸ್ವರಗಳನ್ನು ಏಕರೂಪದಲ್ಲಿ ಹೊಂದಿದವುಗಳಾಗಿರದೆ ಯಾವುದೋ ಮೇಳಕರ್ತ ರಾಗದ ಕೆಲವು ಲಕ್ಷಣಗಳನ್ನು ಹೊಂದಿದ ಜನ್ಯ ರಾಗಗಳಾಗಿರುವುದೇ ಇದಕ್ಕೆ ಕಾರಣ. ಪಟ್ಟಿ ಮಾಡಲು ಸಾಧ್ಯವಾಗದಷ್ಟು ದೊಡ್ಡ ಸಂಖ್ಯೆಯ ಇಂತಹ ಜನ್ಯ ರಾಗಗಳಿವೆ. ಮೇಳಕರ್ತ ಇರಲಿ, ಜನ್ಯ ಇರಲಿ ಬರೇ ಆರೋಹಣ ಅವರೋಹಣದಿಂದ ರಾಗ ಆಗುವುದಿಲ್ಲ. ಉಪಯೋಗಿಸುವ ಗಮಕಗಳು, ಚಲನ, ವಿಶಿಷ್ಟ ಸ್ವರಪುಂಜಗಳು ಇವೆಲ್ಲ ಮೇಳೈಸಿದರೆ ಮಾತ್ರ ಯಾವುದೇ ರಾಗದ ಸ್ವರೂಪ ಹೊಮ್ಮುತ್ತದೆ. ಉದಾಹರಣೆಗೆ ಮೋಹನ ರಾಗದ ಸ್ವರಗಳು ಸ ರಿ2 ಗ2 ಪ ದ2 ಸ ಎಂದಿದ್ದರೂ ನುಡಿಸುವಾಗ ಅಥವಾ ಹಾಡುವಾಗ ಅದು ಸ ಗರಿ ಗ ಪ ಸದ ಸ ಎಂದು ಗಮಕಯುಕ್ತವಾಗುತ್ತದೆ. ಒಂದೇ ಆರೋಹಣ ಅವರೋಹಣ ಹೊಂದಿಯೂ ಚಲನದಲ್ಲಿ ವ್ಯತ್ಯಾಸ ಹೊಂದಿ ಬೇರೆ ಬೇರೆ ಹೆಸರಿನಿಂದ ಗುರುತಿಸಲ್ಪಡುವ ರಾಗಗಳೂ ಇವೆ.
ಶಾಸ್ತ್ರೀಯ ರಚನೆಗಳಲ್ಲಾಗಲಿ, ಲಘು ಶೈಲಿಯ ಹಾಡುಗಳಲ್ಲಾಗಲಿ ಸ್ವರಸ್ಥಾನಗಳು ಸ ರಿ ಗ ಮ ಪ ದ ನಿ ಸ್ವರಗಳನ್ನೊಳಗೊಂಡ ಮಧ್ಯ ಸಪ್ತಕಕಷ್ಟೇ ಸೀಮಿತವಾಗಿರುವುದಿಲ್ಲ. ಮಧ್ಯ ಸಪ್ತಕದ ಕೆಳಗಿನ ಮಂದ್ರ ಸಪ್ತಕದ ಮ ವರೆಗೆ, ಮೇಲಿನ ತಾರ ಸಪ್ತಕದ ಪ ವರೆಗೆ ಇವುಗಳ ಹರಹು ಇರುತ್ತದೆ. ಹೀಗಾಗಿ ಹಾಡುಗಾರರು ಈ ವ್ಯಾಪ್ತಿಯಲ್ಲಿ ಸುಲಲಿತವಾಗಿ ಸಂಚರಿಸಬೇಕಾದರೆ ಸೂಕ್ತ ಆಧಾರ ಶ್ರುತಿಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಹೆಚ್ಚಾಗಿ ಪುರುಷರು C ಅರ್ಥಾತ್ ಬಿಳಿ ಒಂದರ ಆಸುಪಾಸಿನ ಶ್ರುತಿಯನ್ನು ಆಯ್ದುಕೊಳ್ಳುತ್ತಾರೆ. ಸ್ತ್ರೀಯರಿಗೆ ಸಾಮಾನ್ಯವಾಗಿ G ಅಂದರೆ ಬಿಳಿ 5ರ ಸಮೀಪದ ಶ್ರುತಿ ಅನುಕೂಲವಾಗಿರುತ್ತದೆ. ಇದನ್ನು ಗಮನದಲ್ಲಿರಿಸದೆ ಯಾವುದೋ ಶ್ರುತಿಯನ್ನು ಆಯ್ದುಕೊಂಡರೆ ಒಂದೋ ತಾರ ಸಪ್ತಕದಲ್ಲಿ ತೊಂದರೆ ಎದುರಾಗುತ್ತದೆ ಇಲ್ಲವೇ ಮಂದ್ರ ಸಪ್ತಕದ ಚಲನೆ ಸುಲಲಿತವಾಗುವುದಿಲ್ಲ. ತೆಂಕು ತಿಟ್ಟು ಯಕ್ಷಗಾನದ ಭಾಗವತರು ಹೆಚ್ಚಾಗಿ ಬಿಳಿ ನಾಲ್ಕು ಹಾಗೂ ಬಡಗು ತಿಟ್ಟಿನ ಭಾಗವತರು ಕಪ್ಪು ಎರಡರ ಶ್ರುತಿ ಆಯ್ದುಕೊಳ್ಳುತ್ತಾರೆ. ಆಯಾ ತಿಟ್ಟಿನ ಚಂಡೆ ಮದ್ದಳೆಗಳೊಂದಿಗೆ ಸಮನ್ವಯ ಸಾಧಿಸಿ ರಸಾನುಭೂತಿ ಉಂಟುಮಾಡಲು ಹಾಗೂ ಯಕ್ಷಗಾನಕ್ಕೆ ಬೇಕಾದ ಉಠಾವ್ ಸಿಗಲು ಈ ಶ್ರುತಿಗಳು ಸೂಕ್ತವಾದವು ಎಂದು ಅನುಭವಿಗಳ ಅಂಬೋಣ. ಆದರೆ ಲಘು ಅಥವಾ ಚಿತ್ರಸಂಗೀತ ಕ್ಷೇತ್ರದಲ್ಲಿ ಗಂಡು ಹೆಣ್ಣು ಜೊತೆಯಾಗಿ ಹಾಡುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಯಾವುದೇ ಶ್ರುತಿಯಲ್ಲಿ ಮಂದ್ರ, ಮಧ್ಯ, ತಾರ ಸಪ್ತಕಗಳನ್ನು ಸುಲಲಿತವಾಗಿ ನಿಭಾಯಿಸಬಲ್ಲವರು ಮಾತ್ರ ಇಲ್ಲಿ ಮಿಂಚುತ್ತಾರೆ. ಈ ನಿಟ್ಟಿನಲ್ಲಿ ಮಹಮ್ಮದ್ ರಫಿ ಅವರಿಗೆ ಸರಿ ಸಾಟಿ ಯಾರೂ ಇಲ್ಲ. ಅವರು ಸಹಗಾಯಕಿಗೆ ಸೂಕ್ತವಾದ ಯಾವುದೇ ಶ್ರುತಿಯಲ್ಲೂ ತಾರ ಸಪ್ತಕದಲ್ಲಿ ಕಿರುಚಿದಂತಾಗದೆ, ಮಂದ್ರದಲ್ಲಿ ವಾಕರಿಸಿದಂತಾಗದೆ ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು.
ಕೊಳಲು, ನಾಗಸ್ವರ, ಕ್ಲಾರಿನೆಟ್, ಸಾಕ್ಸೋಫೋನ್ ಮುಂತಾದ ಸುಷಿರ ವಾದ್ಯಗಳ ಶ್ರುತಿ ಬದಲಾಯಿಸಲಾಗುವುದಿಲ್ಲ. ಅದಕ್ಕೇ ಕೊಳಲು ವಾದಕರು ಒಂದು ಚೀಲ ತುಂಬಾ ವಿವಿಧ ಶ್ರುತಿಗಳ ಕೊಳಲುಗಳನ್ನಿಟ್ಟುಕೊಂಡಿರುವುದನ್ನು ನೋಡುತ್ತೇವೆ. ವಯಲಿನ್, ವೀಣೆ, ಸಿತಾರ್, ಸರೋದ್, ಸಾರಂಗಿ ಮುಂತಾದ ತಂತಿ ವಾದ್ಯಗಳನ್ನು ಯಾವ ಶ್ರುತಿಗೂ ಹೊಂದಿಸಬಹುದು. ಆದರೂ ಈ ಎಲ್ಲ ವಾದ್ಯಗಳು ಒಂದು ನಿರ್ದಿಷ್ಟ ಶ್ರುತಿ ಸೀಮೆಯೊಳಗೆ ಹೆಚ್ಚು ಇಂಪಾಗಿ ನುಡಿಯುತ್ತವೆ. ಸಿತಾರ್ ವಾದ್ಯದಲ್ಲಿ ನುಡಿಸುವ ಥಾಟ್‍ಗೆ ತಕ್ಕಂತೆ ತಂತಿಯನ್ನು ಬೆರಳಿನಿಂದ ಒತ್ತಿದಾಗ ಆಧರಿಸುವ ರಚನೆ ಅಂದರೆ ‘ಪರದೆ’ಗಳನ್ನು ಅಚೀಚೆ ಸರಿಸಿ ಹೊಂದಿಸಬೇಕಾಗುತ್ತದೆ. ಚರ್ಮವಾದ್ಯಗಳ ಶ್ರುತಿಯನ್ನು ಅಗತ್ಯ ಬಿದ್ದಾಗ ಒಂದು ಅರ್ಧ ಕಟ್ಟೆಯಷ್ಟು ಮಾತ್ರ ಏರಿಳಿಸಬಹುದು. ಹೀಗಾಗಿ ಬೇರೆ ಬೇರೆ ಶ್ರುತಿಯ ಮೃದಂಗ, ತಬ್ಲಾಗಳನ್ನು ಇವುಗಳ ವಾದಕರು ಇಟ್ಟುಕೊಳ್ಳಬೇಕಾಗುತ್ತದೆ. ಕೆಲವು ಸಲ ಹೊಂದಾಣಿಕೆ ಮಾಡಿಕೊಂಡು ಮಧ್ಯಮ ಅಥವಾ ಪಂಚಮ ಶ್ರುತಿಯ ತಾಳವಾದ್ಯಗಳನ್ನು ಉಪಯೋಗಿಸುವವರೂ ಇದ್ದಾರೆ. ಹೀಗೇ ಮಾಡಿದಾಗ ಆ ಸ್ವರಗಳಿಲ್ಲದ ರಾಗಗಳ ಸಂದರ್ಭದಲ್ಲಿ ಎಡವಟ್ಟಾಗುತ್ತದೆ.. ತವಿಲ್ ಅಥವಾ ಡೋಲಿಗೆ ಶ್ರುತಿಯ ಹಂಗಿಲ್ಲ. ಹಾರ್ಮೋನಿಯಮ್ ಕೂಡ ಏಕ ಶ್ರುತಿಯ ವಾದ್ಯವಾಗಿದ್ದರೂ ಇದನ್ನು ನುಡಿಸುವ ಬಹುತೇಕ ಎಲ್ಲರೂ ಯಾವ ಪಟ್ಟಿಯನ್ನಾದರೂ ಆಧಾರ ಶ್ರುತಿಯಾಗಿಟ್ಟುಕೊಂಡು ನುಡಿಸಬಲ್ಲ ಪರಿಣತರಾಗಿರುತ್ತಾರೆ. ಆಧುನಿಕ ಕೀ ಬೋರ್ಡುಗಳಲ್ಲಿ ಯಾವುದೇ ಕೀಯನ್ನು ಯಾವುದೇ ಆಧಾರ ಷಡ್ಜಕ್ಕೆ map ಮಾಡಿಕೊಳ್ಳುವ ಸೌಲಭ್ಯ ಇರುತ್ತದೆ. ಆದರೆ ಯಾವುದೇ ಕೀ ಅಥವಾ ರೀಡ್‍ಗಳ ಅಗತ್ಯವಿಲ್ಲದೆ ಕೇವಲ ಉಸಿರಿನ ಒತ್ತಡದಿಂದ ವಿವಿಧ ಶ್ರುತಿಗಳಲ್ಲಿ ಅತಿ ಮಂದ್ರದಿಂದ ಅತಿ ತಾರದವರೆಗೆ ಸಂಚರಿಸಬಲ್ಲ ಮಾನವ ಧ್ವನಿಪೆಟ್ಟಿಗೆಗೆ ಸಮನಾದ ಯಾವ ಸಂಗೀತೋಪಕರಣವನ್ನೂ ಇದುವರೆಗೆ ತಯಾರಿಸಲು ಸಾಧ್ಯವಾಗಿಲ್ಲ!
ಭಾರತೀಯ ಸಂಸ್ಕೃತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ಹರಿದು ಬರುತ್ತಿದ್ದುದು ಶ್ರುತಿ ಮತ್ತು ಸ್ಮೃತಿ ಅಂದರೆ ಆಲಿಸುವಿಕೆ ಮತ್ತು ನೆನಪಿಟ್ಟುಕೊಳ್ಳುವಿಕೆಯ ಮೂಲಕ. ಲಿಪಿಯ ಆವಿಷ್ಕಾರ ಆದ ಮೇಲಷ್ಟೇ ಎಲ್ಲವನ್ನೂ ಬರಹದ ಮೂಲಕ ದಾಖಲಿಸುವ ಪರಿಪಾಠ ಆರಂಭವಾಯಿತು. ಸಂಗೀತವೂ ಇದಕ್ಕೆ ಹೊರತಲ್ಲ. ನಮ್ಮಲ್ಲಿ ಸಪ್ತಸ್ವರಗಳ ಮೂಲಕ ಸಂಗೀತವನ್ನು ಅಕ್ಷರ ರೂಪಕ್ಕಿಳಿಸುವ ರೀತಿಯಲ್ಲಿ ವ್ಯತ್ಯಾಸಗಳಿದ್ದು ನಮ್ಮ ಗುರು ಮಂಗಳೂರಿನ ಗೋಪಾಲಕೃಷ್ಣ ಐಯರ್ ಅವರು ಸಾಹಿತ್ಯ, ತಾಳ, ಕಾಲ ಎಲ್ಲವನ್ನೂ ಕರಾರುವಾಕ್ಕಾಗಿ ತೋರಿಸುವ ಪದ್ಧತಿಯೊಂದನ್ನು ಅನುಸರಿಸುತ್ತಿದ್ದರು. ಇದರಂತೆ ಆರೋಹಣ ಅವರೋಹಣದಲ್ಲಿ ವಿಕೃತಿ ಸ್ವರಗಳನ್ನು ಅಂಕೆಗಳೊಂದಿಗೆ ಬರೆಯಲಾಗುತ್ತದೆ. ಕೃತಿಯ ಮಧ್ಯದಲ್ಲೆಲ್ಲಾದರೂ ಅನ್ಯ ಸ್ವರದ ಪ್ರಯೋಗವಿದ್ದರೆ ಅದರ ಅಂಕೆಯನ್ನು ಅಲ್ಲೇ ಬರೆದು ಸೂಚಿಸಲಾಗುತ್ತದೆ. ಸ್ವರವನ್ನು ಹಾಗೆಯೇ ಬರೆದರೆ ಮಧ್ಯ ಸಪ್ತಕ, ಮೇಲ್ಗಡೆ ಚುಕ್ಕಿ ಇಟ್ಟರೆ ತಾರ ಸಪ್ತಕ, ಕೆಳಗೆ ಚುಕ್ಕಿ ಇಟ್ಟರೆ ಮಂದ್ರ ಸಪ್ತಕ, ಅಡಿಭಾಗದಲ್ಲಿ ಗೆರೆ ಎಳೆದರೆ ಎರಡನೇ ಕಾಲ, ಎರಡು ಗೆರೆ ಎಳೆದರೆ ಮೂರನೇ ಕಾಲ. ತಾಳದ ನಡೆಯನ್ನು ಸೂಚಿಸಲು ನೀಟ ಗೆರೆಗಳು. ಇದಕ್ಕಾಗಿ ಬಳಸಲ್ಪಡುವ ಚಿಹ್ನೆ ಇತ್ಯಾದಿಗಳು ಹೀಗಿರುತ್ತವೆ.

ಈ ಪದ್ಧತಿಯನ್ನುಪಯೋಗಿಸಿ ಬರೆದ ಎಂದರೋ ಮಹಾನುಭಾವುಲು ಕೃತಿಯ ಒಂದೆರಡು ಸಾಂಕೇತಿಕ ಸಂಗತಿಗಳ ಸ್ವರಲಿಪಿ ಇಲ್ಲಿದೆ. ಇದರಲ್ಲಿ ರಾಗದ ಹೆಸರು, ಆರೋಹಣ ಅವರೋಹಣ, ಮಧ್ಯ, ಮಂದ್ರ, ತಾರ ಸಪ್ತಕಗಳು, ಒಂದನೇ, ಎರಡನೇ, ಮೂರನೇ ಕಾಲಗಳು, ಎಲ್ಲ ಸ್ವರಗಳ ಕಾಲ ಪ್ರಮಾಣ ಒಟ್ಟುಗೂಡಿ ಪ್ರತೀ ಸಾಲಲ್ಲಿ 16 ಅಕ್ಷರಗಳಾಗಿರುವುದು ಎಲ್ಲವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಈ ಲಿಪಿಯನ್ನು ಸರಿಯಾಗಿ ಅರ್ಥೈಸಬಲ್ಲವರು ಇಲ್ಲಿದ್ದಂತೆ ನುಡಿಸಿದರೆ ಅಥವಾ ಹಾಡಿದರೆ ಈ ಸಾಲುಗಳು ರಾಗ ತಾಳ ಲಯಬದ್ಧವಾಗಿ ಟೇಪ್ ರೆಕಾರ್ಡರಿನಿಂದ ನುಡಿದಂತೆ ಮೂಡಿ ಬರುತ್ತವೆ.

ಈ ಪದ್ಧತಿಯಲ್ಲಿ ಯಾವ ಹಾಡಿನ ಸ್ವರಲಿಪಿಯನ್ನಾದರೂ ಬರೆಯಬಹುದು. ಆದರೆ ಅದಕ್ಕೆ ಆ ಹಾಡಿನ ಆಧಾರ ಷಡ್ಜ ಯಾವುದೆಂದು ಮೊದಲು ಅರಿಯಬೇಕು. ಹಾಡನ್ನು ಗುಣುಗುಣಿಸುತ್ತಾ ಮನದಲ್ಲೇ ‘ಊಂ..... ’ ಎಂದು ದನಿ ಸೇರಿಸಿದರೆ ಸುಲಭವಾಗಿ ಷಡ್ಜ ಸಿಗುತ್ತದೆ. ಒಮ್ಮೆ ಷಡ್ಜ ಸಿಕ್ಕಿದರೆ ಇತರ ಸ್ವರಗಳನ್ನು ಗುರುತಿಸುತ್ತಾ ಹೋಗುವುದು ಕಷ್ಟವಲ್ಲ. ನುರಿತ ಹಾಡುಗಾರರಿಗೆ ಯಾವುದೇ ಧ್ವನಿಯನ್ನು ಕೇಳಿದಾಕ್ಷಣ ಸ್ವರಸ್ಥಾನವನ್ನು ಥಟ್ಟಂತ ಗುರುತಿಸುವ ಕಲೆ ಒಲಿದಿರುತ್ತದೆ. ನಾನು ಕೊಳಲಿನಲ್ಲಿ ನುಡಿಸಿ ಹಾಡಿನ ಆಧಾರ ಷಡ್ಜ ಮತ್ತು ಸ್ವರಸ್ಥಾನಗಳನ್ನು ಗುರುತಿಸುತ್ತೇನೆ. ಆದರೆ ಕೆಲವು ಸಲ ಆಧಾರ ಷಡ್ಜ ಗೊತ್ತಾದರೂ ಹಾಡು ಯಾವ ಸ್ವರದಿಂದ ಆರಂಭವಾಗುತ್ತದೆ ಎಂಬುದರ ಬಗ್ಗೆ ಗೊಂದಲ ಉಂಟಾಗುವುದಿದೆ. ಕೆಲವು ಹಾಡುಗಳನ್ನು ಅದೇ ಶ್ರುತಿಯಲ್ಲಿ ಬೇರೆ ಬೇರೆ ಸ್ವರಗಳಿಂದ ಆರಂಭಿಸಿದರೂ ಕೇಳುವವರಿಗೆ ವ್ಯತ್ಯಾಸವೇನೂ ಗೊತ್ತಾಗುವುದಿಲ್ಲ. ಆದರೆ ಸ್ವರಸ್ಥಾನಗಳು ಬೇರೆಯಾಗುತ್ತವೆ, ರಾಗವೂ ಬೇರೆಯಾಗುತ್ತದೆ. ಭಕ್ತ ಕನಕದಾಸ ಚಿತ್ರಕ್ಕಾಗಿ ಎಂ. ವೆಂಕಟರಾಜು ಸಂಯೋಜಿಸಿದ ಬಾಗಿಲನು ತೆರೆದು ಹಾಡು ಇದಕ್ಕೊಂದು ಒಳ್ಳೆಯ ಉದಾಹರಣೆ. ಷಡ್ಜದಿಂದ ಆರಂಭಿಸಿದರೆ ಇದರ ಮುಖ್ಯ ರಾಗ ಹಿಂದೋಳವಾಗುತ್ತದೆ, ಪಂಚಮದಿಂದ ಆರಂಭಿಸಿದರೆ ಶುದ್ಧ ಧನ್ಯಾಸಿಯಾಗುತ್ತದೆ. ಆದರೆ ಹಿಂದೋಳವೆಂದು ತಿಳಿದರೆ ಸಂಚಾರವೆಲ್ಲ ತಾರ ಸಪ್ತಕದಲ್ಲೇ ಇರುವಂತಾಗುವುದರಿಂದ ಈ ಹಾಡಿನ ಮೂಡಿಗೆ ಮಧ್ಯ ಮತ್ತು ಮಂದ್ರ ಸಪ್ತಕಗಳಲ್ಲಿ ಸಂಚಾರ ಸಿಗುವ ಶುದ್ಧ ಧನ್ಯಾಸಿಯೇ ಸೂಕ್ತ ಎಂದು ನನ್ನ ಅನಿಸಿಕೆ. ಶುದ್ಧ ಧನ್ಯಾಸಿಯಾದರೆ ಯಾವ ಸ್ವರಗಳ ಸಂಚಾರವಿರುತ್ತದೆ, ಹಿಂದೋಳವಾದರೆ ಯಾವುದಿರುತ್ತದೆ ಎಂದು ಹೋಲಿಸಲು ಎರಡೂ ರಾಗಗಳಲ್ಲಿ ಆ ಹಾಡಿನ ಪಲ್ಲವಿ ಭಾಗದ ಸ್ವರಲಿಪಿ ಇಲ್ಲಿದೆ.


ಸರಳವಾದ ಲಘು ಶೈಲಿಯ ಹಾಡುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಾಹಿತ್ಯ ನೋಡಿ ಆಲಿಸಿ ಕಲಿಯುವುದು ಒಳ್ಳೆಯದು. ಶಾಶ್ವತ ದಾಖಲೆಯ ರೂಪದಲ್ಲಿ ರಕ್ಷಿಸಿಡಲು ಬೇಕಿದ್ದರೆ ಸ್ವರಲಿಪಿಯನ್ನೂ ಬರೆದಿಟ್ಟುಕೊಳ್ಳಬಹುದು.
ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲೂ ಸ್ಟಾಫ್ ನೊಟೇಶನ್ ಎಂದು ಕರೆಯಲಾಗುವ ಅತ್ಯುತ್ತಮ ಸ್ವರಲಿಪಿ ವಿಧಾನ ಇದೆ. ಅದರಲ್ಲಿ ನಮ್ಮ ಪದ್ಧತಿಯಲ್ಲಿರುವ ಎಲ್ಲ ಅನುಕೂಲಗಳಲ್ಲದೆ ಹೆಚ್ಚುವರಿಯಾಗಿ 1/8, 1/16, 1/32, 1/64 ವರೆಗಿನ ಮಾತ್ರಾಕಾಲವನ್ನು ಗುರುತಿಸುವ ಸೌಲಭ್ಯವೂ ಇದೆ. ನಮ್ಮ ಪದ್ಧತಿಯಲ್ಲಿ ಸಾಮಾನ್ಯವಾಗಿ ಇದನ್ನು 1/4ಕ್ಕಿಂತ ಹೆಚ್ಚು ವಿಭಜಿಸಲು ಹೋಗುವುದಿಲ್ಲ. ಆದರೆ ನಮ್ಮ ಸ್ವರಲಿಪಿ ವಿಧಾನವು ಯಾವ ಆಧಾರ ಶ್ರುತಿಗೂ ಸಲ್ಲುವಂಥದ್ದಾಗಿದ್ದು ಪಾಶಾತ್ಯ ಪದ್ಧತಿಯಲ್ಲಿ ಶ್ರುತಿ ಬದಲಾದರೆ ಸಂಪೂರ್ಣ ನೊಟೇಶನ್ ಕೂಡ ಬದಲಾಯಿಸಬೇಕಾಗುತ್ತದೆ. C ಅಂದರೆ ಬಿಳಿ 1 ಶ್ರುತಿಯಲ್ಲಿ ರಾರವೇಣು ಗೋಪಾಬಾಲ ಸ್ವರಜತಿಯ ಮೊದಲ ಸಾಲಿಗೆ ಸ್ಟಾಫ್ ನೋಟೇಶನ್ ಬರೆದರೆ ಹೀಗಿರುತ್ತದೆ.

ಕೆಲವು ಅಪವಾದಗಳಿರಬಹುದಾದರೂ ಹಿಂದಿ ಮತ್ತು ದಕ್ಷಿಣ ಭಾರತ ಚಿತ್ರರಂಗದ ಎಲ್ಲ ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ, ವಾದಕರಿಗೆ ಆಳವಾದ ಶಾಸ್ತ್ರೀಯ ಸಂಗೀತ ಜ್ಞಾನ ಇತ್ತು ಎನ್ನಲಾಗುವುದಿಲ್ಲ. ಆದರೆ ಯಾವುದನ್ನು ಹೇಗೆ ಪ್ರಸ್ತುತಪಡಿಸಬೇಕೆಂಬ ಅರಿವು ಅವರಿಗಿದ್ದುದರಿಂದ ಚಿತ್ರಗಳಲ್ಲಿ ಬಂದ ಶಾಸ್ತ್ರೀಯ ರಾಗಾಧಾರಿತ ಗೀತೆಗಳೆಲ್ಲ ಗೆದ್ದಿವೆ. ಯಕ್ಷಲೋಕದ ಕಿನ್ನರರ ಕೃಪೆಯೂ ಅಂದಿನ ಕಲಾವಿದರ ಮೇಲಿದ್ದಿರಬಹುದು. ತನಗೆ ಶಾಸ್ತ್ರೀಯ ಸಂಗೀತದ ಓನಾಮವೂ ಗೊತ್ತಿಲ್ಲ ಎಂದು ಸ್ವತಃ ಹೇಳಿಕೊಳ್ಳುತ್ತಿದ್ದ ಓ.ಪಿ. ನಯ್ಯರ್ ನಿರ್ದೇಶನದಲ್ಲೂ ಕೆಲವು ಅತಿ ಉತ್ಕೃಷ್ಟ ಶಾಸ್ತ್ರೀಯ ಗೀತೆಗಳು ಮೂಡಿಬಂದಿರುವುದು ಪರಮಾಶ್ಚರ್ಯವೇ ಸರಿ. ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಯದೆಯೂ ಎಷ್ಟೋ ಮಂದಿ ಶ್ರುತಿ ಲಯಬದ್ಧವಾಗಿ ಹಾಡುವುದನ್ನು, ನುಡಿಸುವುದನ್ನು ನಾವು ಇತರೆಡೆಗಳಲ್ಲಿಯೂ ಆಗಾಗ ಕಾಣುತ್ತೇವೆ. ಬೀದಿಬದಿಯಲ್ಲಿ ಹಾರ್ಮೋನಿಯಮ್ ನುಡಿಸುತ್ತಾ ಹಾಡುವ ಕೆಲವರ ಶ್ರುತಿಜ್ಞಾನ ಸಂಗೀತದಲ್ಲಿ ಪದವಿ ಪಡೆದವರಿಗಿಂತ ಚೆನ್ನಾಗಿರುವುದುಂಟು.
ಹಾಗೆ ನೋಡುವುದಾದರೆ ನಾವು ಗುರುತಿಸಿದ ಏಳೋ ಹನ್ನೆರಡೋ ಸ್ವರಗಳಿಂದ ಹೊರಡುವ ಗಾನ ಮಾತ್ರ ಸಂಗೀತವೆನ್ನಲಾಗದು. ಹೆತ್ತ ಮಗುವಿನ ಮೊದಲ ಅಳು ತಾಯಿಗೆ ಸಂಗೀತವಾಗಬಹುದು, ಗುಡುಗಿನ ಗರ್ಜನೆ ಮಳೆಗಾಗಿ ಕಾತರಿಸಿದ ರೈತನ ಕಿವಿಗೆ ಸಂಗೀತವಾಗಬಹುದು, ಶಾಲೆ ಬಿಡುವಾಗಿನ ಗಂಟೆಯ ಸದ್ದು ವಿದ್ಯಾರ್ಥಿಗೆ ಸಂಗೀತವಾಗಬಹುದು, ಹನ್ನೊಂದನೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಆದಾಗ ಹೊರಡಿಸಿವ ಕರ್ಕಶ ಸದ್ದು ಅದರ ಒಡೆಯನಿಗೆ ಸಂಗೀತವಾಗಬಹುದು. ಒಟ್ಟಿನಲ್ಲಿ ಎಲ್ಲೆಲ್ಲೂ ಸಂಗೀತವೇ ಇದೆ. ಕೇಳುವ ಕಿವಿ ಇರಬೇಕು, ಆನಂದಿಸುವ ಮನ ಇರಬೇಕು ಅಷ್ಟೇ.
**********
ಈ ಲೇಖನವು ಉತ್ಥಾನ ಮಾಸಪತ್ರಿಕೆಯ ಅಗಸ್ಟ್ 2019ರ ಸಂಚಿಕೆಯಲ್ಲಿ ಪ್ರಕಟವಾಗಿದ್ದು ಅದನ್ನು ಇಲ್ಲಿ ಕ್ಲಿಕ್ಕಿಸಿ ಓದಬಹುದು.
ಉತ್ಥಾನದ ಕೆಲ ಪ್ರಾಜ್ಞ ಓದುಗರು ಈ ಲೇಖನ ಮೆಚ್ಚಿ ಬರೆದ ಪತ್ರಗಳು ಇವು.
