Friday, 4 September 2020

ಅಮರ ಜೀವಿಯ ಕಿಲಾಡಿ ಹೆಣ್ಣು


ಕೆಲವು ಸಲ ನಮಗಿಷ್ಟವಾದ ಯಾವುದೋ ಸಣ್ಣ ವಸ್ತುವೊಂದು ಕಳೆದು ಹೋಗಿರುತ್ತದೆ.  ಅಥವಾ ಈಗ ಬೇಕೆಂದರೆ ಕೊಳ್ಳಲು ಸಿಗದ ನಿತ್ಯೋಪಯೋಗಿ ಹತ್ಯಾರೊಂದನ್ನು  ಎಲ್ಲಿಟ್ಟಿದ್ದೇವೆ ಎಂದು ಮರೆತು ಹೋಗಿರುತ್ತದೆ. ಇಂಥವು ಅಯಾಚಿತವಾಗಿ ಮತ್ತೆ ದೊರಕಿದಾಗ ಆಗುವ ಸಂತಸ ಅಸದಳ. ಅನೇಕ ವರ್ಷಗಳ ಹಿಂದೆ ನಮ್ಮ ಊರ ಮನೆಯ ಅಟ್ಟದಲ್ಲಿ ಗಂಟು ಕಟ್ಟಿಟ್ಟಿದ್ದ ಹಳೆಯ ಚಂದಮಾಮಗಳಿಂದ ಮೂವರು ಮಾಂತ್ರಿಕರು, ನಾವಿಕ ಸಿಂದಬಾದ್, ರೂಪಧರನ ಯಾತ್ರೆಗಳು, ಅದ್ಬುತ ದೀಪ ಮುಂತಾದ ಧಾರಾವಾಹಿಗಳನ್ನು ಬೇರ್ಪಡಿಸಿ ಪುಸ್ತಕ ರೂಪದಲ್ಲಿ ಒಟ್ಟುಗೂಡಿಸುವ ಕೈಂಕರ್ಯದಲ್ಲಿ ನಾನು ತೊಡಗಿದ್ದಾಗ ಮಧ್ಯದ ಯಾವುದೋ ಸಂಚಿಕೆ ಎಷ್ಟು ಹುಡುಕಿದರೂ ಸಿಗುತ್ತಿರಲಿಲ್ಲ. ಮತ್ತೆಂದಾದರೂ ಅದು  ಧುತ್ತೆಂದು ಕಣ್ಣ ಮುಂದೆ ಕಾಣಿಸಿದಾಗ ಆಗುತ್ತಿದ್ದ ಸಂತಸವೂ ಅಂಥದ್ದೇ. ಅಷ್ಟು ಮಾಡಿಯೂ ಸಿಗದೇ ಇದ್ದ ಒಂದು ಕಂತು ಪಕ್ಕದ ಮನೆಯವರಲ್ಲಿದ್ದ ಚಂದಮಾಮದಲ್ಲಿ ಸಿಕ್ಕಿ ಅವರದನ್ನು ಕೊಡಲು ಸಿದ್ಧರಾದಾಗ ಹೇಗಾಗಬೇಡ. ಈಗ ನನಗೆ ಅಂಥ ಸಂತಸದ ಸಾಕ್ಷಾತ್ಕಾರವಾದದ್ದು ನನ್ನ ಫೇಸ್ ಬುಕ್ ಮಿತ್ರ ಬಿ.ಆರ್. ಉಮೇಶ್ ಅವರ ಪರಿಚಯದ ಶ್ರೀನಾಥ್ ಮಲ್ಯ ನಿನ್ನೆ ತಾವಾಗಿ ನನಗೆ ಫೋನ್ ಮಾಡಿ ‘ನೀವು ಬಹು ಕಾಲದಿಂದ ಹುಡುಕುತ್ತಿದ್ದ ಅಮರಜೀವಿ ಚಿತ್ರದ ಭಲಾರೆ ಹೆಣ್ಣೆ ಕಿಲಾಡಿ ಹೆಣ್ಣೆ ಹಾಡು ನನ್ನಲ್ಲಿದೆ’ ಎಂದು ಹೇಳಿದಾಗ!



ನ್ಯಾಶನಲ್ ಎಕ್ಕೊ ದಿನಗಳಲ್ಲಿ ಆಕಾಶವಾಣಿ ಭದ್ರಾವತಿ ನಿಲಯದಿಂದ ಹೆಚ್ಚಾಗಿ ಪ್ರಸಾರವಾಗುತ್ತಿದ್ದ 1965ರ ಅಮರಜೀವಿ ಚಿತ್ರದ ಹಾಡುಗಳ ಪೈಕಿ ಹಳ್ಳಿಯೂರ ಹಮ್ಮೀರ ಕ್ಯಾಸೆಟ್ ಮತ್ತು CDಗಳಲ್ಲೂ ಬಂದಿದ್ದು ಸುಲಭ ಲಭ್ಯ.  ಮಿಠಾಯಿ ಮಾರುವ ಸುಬ್ಬನ  ಹಾಡನ್ನು ನಾನು ಹೇಗೋ ಸಂಪಾದಿಸಿಕೊಂಡಿದ್ದೆ. ಆದರೆ ನನಗೆ ಹೆಚ್ಚು ಇಷ್ಟದ್ದಾಗಿದ್ದ ಭಲಾರೆ ಹೆಣ್ಣೆ  ಹಾಡು ಮಾತ್ರ ಎಲ್ಲೂ ಸಿಕ್ಕಿರಲಿಲ್ಲ.  ಚಿತ್ರದ ಪ್ರಿಂಟ್ ಕೂಡ ಇಲ್ಲದುದರಿಂದ ಅಂತರ್ಜಾಲದಲ್ಲಿ ಸಿಗುವ ಆಸೆಯನ್ನೂ ಬಿಟ್ಟಿದ್ದೆ. ನಿನ್ನೆ ನನ್ನೊಡನೆ ಸಂಪರ್ಕ ಸಾಧಿಸಿದ ಶ್ರೀನಾಥ್ ಮಲ್ಯ ತಡ ಮಾಡದೆ ಆ ಹಾಡನ್ನು ನನಗೆ ಒದಗಿಸಿದರು. ಕೊಂಚ ರಿಪೇರಿ, ಪ್ಲಾಸ್ಟಿಕ್ ಸರ್ಜರಿ ಇತ್ಯಾದಿಗಳ ನಂತರ ಈಗದು ಸುಲಲಿತವಾಗಿ ಆಲಿಸಲು ಯೋಗ್ಯವಾಗಿದೆ.  ಇದರ ಆಡಿಯೋ ಮುಂದಿನ ದಿನಗಳಲ್ಲಿ ಯೂಟ್ಯೂಬಲ್ಲಿ ಕಾಣಿಸಿಕೊಳ್ಳಲೂ ಬಹುದು.

ಸುಬ್ಬನ ಹಾಡಿನ ಬರಹದಲ್ಲಿ ಆಗಲೇ ಹೇಳಿದಂತೆ ಚಿತ್ರೀಕರಣ ಆರಂಭವಾದಾಗ ಅಮರ ಜೀವಿ ಚಿತ್ರದ  ಹೆಸರು ಹಳ್ಳಿಯ ಹುಡಿಗಿ ಎಂದಾಗಿತ್ತು! ಆ ಹೆಸರಿನೊಂದಿಗೆ ಚಿತ್ರದ ಜಾಹೀರಾತೂ ಬಿಡುಗಡೆಯಾಗಿತ್ತು.  ರಾಜಾ ಶಂಕರ್, ಹರಿಣಿ, ನರಸಿಂಹರಾಜು ಮುಂತಾದವರ ತಾರಾಗಣವಿದ್ದು ವಿಜಯಭಾಸ್ಕರ್ ಸಂಗೀತವಿತ್ತು. ಎಸ್.ಕೆ. ಕರೀಂ ಖಾನ್, ಕು.ರ.ಸೀ, ಕಣಗಾಲ್ ಪ್ರಭಾಕರ ಶಾಸ್ತ್ರಿ ಮತ್ತು ಗೀತಪ್ರಿಯ ಹಾಡುಗಳನ್ನು ಬರೆದಿದ್ದರು.

ಪಿ.ಬಿ.ಶ್ರೀನಿವಾಸ್  ಹಾಡಿರುವ  ಕಿಲಾಡಿ ಹೆಣ್ಣೆ ಹಾಡಿನ ಆರಂಭದಲ್ಲಿ 42 ಸೆಕೆಂಡುಗಳಷ್ಟು ದೀರ್ಘವಾದ ಹಮ್ಮಿಂಗ್ ಇದೆ. ಜೆಮಿನಿಯ ಎಸ್.ಎಸ್. ವಾಸನ್ ಬಹಳ ಹಿಂದೆಯೇ ಘೋಷಿಸಿದಂತೆ ಪಿ.ಬಿ.ಎಸ್ ಅವರ ಹಮ್ಮಿಂಗ್ ಅಂದರೆ ಕಲ್ಲನ್ನೂ ಕರಗಿಸುವಂಥದ್ದು.  ಇದರಲ್ಲಿ ನೀನೇ ನೀರೆ ಮಂದಾರ ಮಂದಿರದಿಂದ ಬಾರೆ, ಇದೇ ಇದೇ ಸವಿ ಬಾಳ ದಿನ, ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ ಹಾಗೂ ಕೊಳಲಿನ ತುಣುಕಲ್ಲಿ ಹಾಡೊಂದ ಹಾಡುವೆಯ ಛಾಯೆ ಗೋಚರಿಸಿದರೆ ನೀವು ಹಳೇ ಹಾಡುಗಳನ್ನು ತುಂಬಾ ಆಲಿಸುತ್ತೀರಿ ಎಂದರ್ಥ.  ಪಲ್ಲವಿ ಭಾಗದ ಓಡಿ ಬಾ ಎಂಬಲ್ಲಿ ಪಿ.ಬಿ.ಎಸ್ ವಿಶೇಷತೆಯಾದ ಮಂದ್ರದ ಸ್ಪರ್ಶ ಇದೆ. ಹಿಂದಿ ಹಾಡುಗಳ ಮಧ್ಯಂತರ ಸಂಗೀತವನ್ನು  recycling ಮಾಡುವ ವಿಜಯಭಾಸ್ಕರ್ ಅವರ ಹವ್ಯಾಸ ಗೊತ್ತಿರುವಂಥದ್ದೇ. ಇಲ್ಲೂ ರವಿ ಸಂಗೀತವಿದ್ದ ಆಜ್ ಔರ್ ಕಲ್ ಚಿತ್ರದ ಯೆ ವಾದಿಯಾಂ ಯೆ ಫಿಜಾಯೆಂ ಹಾಡಿನ interludeಗಳನ್ನು ಕೊಂಚ ಮಾರ್ಪಾಡುಗೊಳಿಸಿ ಬಳಸಿದ್ದಾರೆ. ಆದರವು ಹಾಡಿಗೆ ಅಷ್ಟೊಂದು ಪೂರಕವಾಗಿಲ್ಲ ಎಂದೇ ಹೇಳಬೇಕಾಗಿದೆ.  ಚರಣ ಭಾಗದಲ್ಲಿ ಹಾಡಿನ  ಮೂಡೇ ಬದಲಾದಂತೆನಿಸುತ್ತದೆ. ಆ ಮೇಲೆ ಬಂದ ಮಧು ಮಾಲತಿ ಚಿತ್ರದ ಶೋಡಷ ಚೈತ್ರದ ಸುಂದರಿ ನೀನು ಹಾಡಿನ ಧಾಟಿಯು ಇದನ್ನು ಹೋಲುತ್ತದೆಯೇ ಎಂಬ ಅನುಮಾನವೂ ನಿಮ್ಮನ್ನು ಕಾಡಬಹುದು. ಒಂದೆರಡು ಕಡೆ ಲವ್ ಲವ್ ಎಂದರೇನು ಧಾಟಿಯ ಘಾಟೂ ಹೊಡೆಯಬಹುದು. ಭಲಾರೆ ಹೆಣ್ಣೆ ಸಾಲನ್ನು ಎತ್ತಿಕೊಳ್ಳುವ ಮುನ್ನ ಬರುವ ಆಹಾ, ಒಹೋಗಳಲ್ಲಿ ಏನೋ ಒಂದು ರೀತಿ ಮಾದಕತೆ ಇದೆ.

ಹಾಡಿನ ಸಾಹಿತ್ಯ ಗಮನಿಸಿದರೆ ಕು.ರ.ಸೀ ಅವರ ರಚನೆ ಇರಬಹುದೇನೋ ಎಂದು ಅನ್ನಿಸುತ್ತದೆ.  ಅನುಮಾನ ಮೂಡಿಸುವ ಕೆಲವು ಪದಗಳೂ ಇವೆ.  ಹೆಡ್ ಫೋನ್ ಹಾಕಿ ಆಲಿಸಿದಾಗ ಸ್ಪಷ್ಟವಾಗಿ ಕೇಳಿಸುವ ಕಣ್ಣ ಹಸಿವೆ ಮತ್ತು ಕಾದಲುಸಿವೆ ಪದಗಳಲ್ಲಿ ವಕಾರ ರಕಾರ ಆಗಿ ಅವು ಕಣ್ಣ ಹಸಿರೆ ಕಾದಲುಸಿರೆ ಆಗಬೇಕಿತ್ತೇನೋ. ಆಗ ಕಣ್ಣಿಗೆ ಹಸಿರು ಅಂದರೆ ಅಂದವಾಗಿ ಕಾಣಿಸುವಂಥ ಮತ್ತು ಕಾದಲುಸಿರೆ ಅಂದರೆ ಪ್ರೇಮದುಸಿರೆ ಎಂದು ಅರ್ಥೈಸಬಹುದು. ತಗಾದೆ ಮಾಡುವ ನಲ್ಲೆ  ಶುದ್ಧ ತರಲೆ ಆಗಿ  ಕಾಣಿಸುವುದು ಸಹಜವಾದರೂ ಒಂದನೆ ಚರಣದಲ್ಲಿ ತರಲೆ ಎಂದು ಕೇಳಿಸುವ ಪದ ತರಳೆ ಇರಬಹುದೆಂದು ನನ್ನ ಊಹೆ. ಆದರೆ ನನಗೆ ಈ ಉಚ್ಚಾರಾಂತರಗಳು ಕೇಳಿಸಿದ್ದು ಈಗ ಹೆಡ್ ಫೋನ್ ಧರಿಸಿ ಕೇಳಿದಾಗಲೇ. ನಿಮಗೆ ಹೇಗೆ ಕೇಳಿಸುತ್ತದೆಂದು ಪರೀಕ್ಷಿಸಿ.  ಎರಡನೆ ಚರಣದಲ್ಲಿರುವ  ಚಿಮ್ಮುವ ಜೇನಿನ ಚಿಲುಮೆಗೆ ಜಾರಿ ನೂರು ಬಾರಿ ಒಲವಿನ ದಾರಿ ಕ್ರಮಿಸಬಯಸುವ ನಲ್ಲ ನಲ್ಲೆಯರ ವರ್ಣನೆ ಇದು ಕು.ರ.ಸೀ ಅವರದ್ದೇ ರಚನೆ ಇರಬಹುದು ಎಂಬ ಊಹೆಗೆ ಪುಷ್ಟಿ ನೀಡುತ್ತದೆ. ಪದ್ಯಾವಳಿ ಅಥವಾ ಹಾಡಿನ ಡಿಸ್ಕ್ ದೊರಕಿದರಷ್ಟೇ ಈ ಬಗ್ಗೆ ಖಚಿತವಾಗಿ ಹೇಳಬಹುದು. 

ಒಟ್ಟಿನಲ್ಲಿ  ಗಾಯನ,  ಸಾಹಿತ್ಯ ಮತ್ತು  ರಾಗ ಸಂಯೋಜನೆ ಸಮನಾಗಿ ಮೇಳೈಸಿದ  ಹಾಡು ಚೇತೋಹಾರಿ ಅನುಭವ ನೀಡುತ್ತದೆ. ಒದಗಿಸಿದ ಸ್ನೇಹಿತರನ್ನು ನೆನಸಿಕೊಳ್ಳುತ್ತಾ ಅದನ್ನು ಆಲಿಸಿ ಆನಂದಿಸೋಣ.



ಭಲಾರೆ ಹೆಣ್ಣೆ ಕಿಲಾಡಿ ಹೆಣ್ಣೆ
ಚೆಂದೊಳ್ಳೆ ಚೆನ್ನೆ ಬಾ
ಕಣ್ಣ ಹಸಿರೆ ಕಾದಲುಸಿರೆ
ಬಾಳಿನಾಸರೆ ಬಾ
ಓಡಿ ಬಾ  ಓಡಿ ಬಾ

ಘಲ್ ಘಲ್ ಕಂಕಣ ಕಾಲ್ನಡೆಯಲ್ಲೆ
ನನ್ನೆದೆ ತಲ್ಲಣ ಕೆರಳಿಸಬಲ್ಲೆ
ದೂರ ದೂರ ನೀನಿರಲೊಲ್ಲೆ
ನಾ ಬಲ್ಲೆ ಬಾ ನಲ್ಲೆ
ತಗಾದೆ ಮಾಡದೆ ಬಾರೆ ತರಳೆ
ಓಡಿ ಬಾ  ಓಡಿ ಬಾ

ಹೊಮ್ಮುವ ಹೊಳಪಿನ ಹೊಮ್ಮುಗಿಲೇರಿ
ಚಿಮ್ಮುವ ಜೇನಿನ ಚಿಲುಮೆಗೆ ಜಾರಿ
ನೂರು ಬಾರಿ ಒಲವಿನ ದಾರಿ
ಅರಸೋಣ ವರಿಸೋಣ
ನಿರಾಳ ಜೀವನ ಸಾಗಿಸೋಣ
ಓಡಿ ಬಾ  ಓಡಿ ಬಾ

3 comments:

  1. ಬಹಳ ಸೊಗಸಾದ ಹಾಡು!
    ನಿಮ್ಮ ಊಹೆ ಸರಿ. ಅದು ಹಸಿರೆ, ಉಸಿರೆ ಇರುತ್ತದೆ. ಅದು ಬಾಳಿನಾಸರೆ ಗೆ rhyme ಆಗುತ್ತದೆ.
    ನನಗೆ ತರಳೆ ಎಂದೇ ಕೇಳಿಸಿತು! ಲೇಖನ ಮೊದಲೇ ಓದಿದ್ದರ ಪರಿಣಾಮ!
    ಧನ್ಯವಾದಗಳು!

    ReplyDelete
  2. ಧನ್ಯವಾದಗಳು ಅಪರೂಪದ ಹಾಡನ್ನು ಎಲ್ಲರಿಗೂ ಕೇಳಿಸಿದ್ದೀರಿ. ಈ ಹಾಡಿನ ಜೊತೆಗೆ ಇದೇ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್ ಅವರು ಹಾಡಿರುವ 'ಇದೇ ಇದೇ ಇದೇ ನೋಡು ಬಾಳಿನ ಸಾರ ಮುಂದೆ ಹಾದಿ ಕಾಣದಿಹೆ ಕಂಬನಿ ಧಾರಾ' ಮತ್ತು ಎಲ್ ಆರ್ ಈಶ್ವರಿ ಅವರು ಹಾಡಿರುವ 'ಸೋಬಾನೆ ಸೋಬಾನೆ ಸೊ ಸೊ ಜಾಣೆ' ಹಾಡಿನ ಸಂಗ್ರಹ ನನ್ನ ಬಳಿ ಇದೆ.

    ReplyDelete
    Replies
    1. ಪಿ.ಬಿ.ಎಸ್.ದ್ವನಿ ಮಾಧುರ್ಯ ಮನಸೆಳೆಯುತ್ತೆ... ಮತ್ತೆ ಮತ್ತೆ ಕೇಳಬೇಕೆನಿಸುತ್ತೆ ಧನ್ಯವಾದಗಳು ಸರ್

      Delete

Your valuable comments/suggestions are welcome