Thursday, 12 November 2020

ಗೂಡುದೀಪ



ಮಾರುಕಟ್ಟೆಯಲ್ಲಿ ವೈವಿಧ್ಯಮಯ ಗೂಡುದೀಪಗಳು ಕೊಳ್ಳಲು ಸಿಗುತ್ತವಾದರೂ ಈ ಸಲ ದೀಪಾವಳಿಗೆ ಸರಳ ಸಾಂಪ್ರದಾಯಿಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸಬೇಕೆಂಬ ಉಮೇದು ನನಗೆ ಬಂತು. ಇದಕ್ಕೆ ಬಿದಿರಿನ ಸಪೂರ ಕಡ್ಡಿಗಳು ಬೇಕಾಗುತ್ತವೆ. ನಾನೆಲ್ಲಿಂದ ಅವುಗಳನ್ನು ತರಲಿ? ಅದಕ್ಕೆ ಯಾವುದು ಪರ್ಯಾಯ ಎಂದು ಯೋಚಿಸುತ್ತಿರುವಾಗ ಮನೆಯೊಳಗೆ ಸೇವೆ ಮಾಡಿ ಅರ್ಧ ಸವೆದು ಈಗ ಟೇರೇಸ್ ಗುಡಿಸಲು ಬಳಕೆಯಾಗುತ್ತಿದ್ದ ಮನೆಯಲ್ಲೇ ತಯಾರಿಸಿದ ಗಟ್ಟಿಮುಟ್ಟಾದ ತೆಂಗಿನ ಕಡ್ಡಿಗಳ ಕಸಬರಿಕೆ ಕಣ್ಣಿಗೆ ಬಿತ್ತು. ಅದರಿಂದ ಬೇಕಾಗುವಷ್ಟು ನೇರ ಕಡ್ಡಿಗಳನ್ನು ಆಯ್ದು, ತೊಳೆದು, ಅಳತೆಗೆ ತಕ್ಕಂತೆ ತುಂಡರಿಸಿ ಪ್ರಾಜೆಕ್ಟ್ ಆರಂಭಿಸಿಯೇ ಬಿಟ್ಟೆ. ಕಡ್ಡಿಗಳನ್ನು ಬಿಗಿಯಾಗಿ ಕಟ್ಟಲು ಬಳಸಿದ ಟ್ವೈನ್ ದಾರದ ಶಕ್ತಿವರ್ಧನೆ ಮಾಡಲು ಟೆಲಿಫೋನ್ ಇಲಾಖೆಯಲ್ಲಿ ಕಲಿತ ದಾರಕ್ಕೆ ಮಯಣ ಸವರುವ ವಿದ್ಯೆಯನ್ನು ಪ್ರಯೋಗಿಸಿದೆ. ಅರ್ಧ ದಿನದಲ್ಲಿ ಗೂಡುದೀಪದ ಗೂಡು ತಯಾರಾಯಿತು. ಬಣ್ಣದ ಕಾಗದ ಕತ್ತರಿಸಿ ಹಚ್ಚಲು ಇನ್ನರ್ಧ ದಿನ ಬೇಕಾಯಿತು. ಎಂದೋ ತಂದಿದ್ದ ಫೆವಿಕಾಲ್ ಲಭ್ಯ ಇದ್ದುದರಿಂದ ಹೈಸ್ಕೂಲಿನಲ್ಲಿ ಕಲಿತಂತೆ ಮೈಲುತುತ್ತು ಬೆರೆಸಿದ ಮೈದಾ ಅಂಟು ತಯಾರಿಸುವ ಅಗತ್ಯ ಬೀಳಲಿಲ್ಲ.

ನಾವೇನೋ ಈಗ ಸುಲಭವಾಗಿ ವಿದ್ಯುತ್ ದೀಪವೊಂದನ್ನು ಒಳಗಿರಿಸಿ ಗೂಡುದೀಪವನ್ನು ಮಾಡಿನ ಅಂಚಿಗೆ ನೇತು ಹಾಕುತ್ತೇವೆ. ಹಿಂದಿನ ಕಾಲದಲ್ಲಿ ಎಣ್ಣೆಯ ದೀಪವನ್ನು ಒಳಗಿರಿಸಲು ಅನುಕೂಲವಾಗುವಂತೆ ಗೂಡುದೀಪದೊಳಗೆ ಮಣ್ಣು ಮತ್ತು ಸೆಗಣಿ ಬೆರೆಸಿ ಕಟ್ಟೆಯೊಂದನ್ನು ಕಟ್ಟುತ್ತಿದ್ದರು. ನಮ್ಮಣ್ಣ ಎತ್ತರ ಪ್ರದೇಶದಲ್ಲಿರುವ ಎತ್ತರವಾದ ಮರಕ್ಕೆ ಇನ್ನೂ ಎತ್ತರವಾದ ಗಳುವೊಂದನ್ನು ಕಟ್ಟಿ ಅದರ ತುದಿಗೆ ಅಳವಡಿಸಿದ ರಾಟೆಯೊಂದರ ಮೂಲಕ ಉದ್ದವಾದ ಹಗ್ಗವೊಂದರ ಸಹಾಯದಿಂದ ಎಣ್ಣೆ ತುಂಬಿದ ದೀಪದೊಂದಿಗಿನ ಗೂಡುದೀಪವನ್ನು ಸಂಜೆ ಮನೆಯಂಗಳದಿಂದಲೇ ಮೇಲೇರಿಸಿ ಮರುದಿನ ಬೆಳಗ್ಗೆ ಕೆಳಗಿಳಿಸುವ ವ್ಯವಸ್ಥೆ ಮಾಡುತ್ತಿದ್ದರು. ಆ ಗೂಡುದೀಪ ಎಷ್ಟು ಎತ್ತರದಲ್ಲಿರುತ್ತಿತ್ತು ಎಂದು ಯಾರಾದರೂ ಕೇಳಿದರೆ ಸತ್ಯ ಹರಿಶ್ಚಂದ್ರ ಚಿತ್ರದ ನಕ್ಷತ್ರಿಕ ನರಸಿಂಹರಾಜುವಿನಂತೆ ‘ಒಂದು ಮಹೋನ್ನತವಾದ ಆನೆಯ ಮೇಲೆ ದೀರ್ಘಕಾಯನೂ ಬಲಶಾಲಿಯೂ ಆದ ಮನುಷ್ಯನೊಬ್ಬನು ನಿಂತು ಒಂದು ಕವಡೆಯನ್ನು ರಿವ್ವನೆ ಆಕಾಶಕ್ಕೆ ರಿವ್ವಿದರೆ ಎಷ್ಟು ಎತ್ತರಕ್ಕೆ ಹೋಗುತ್ತದೋ ಅಷ್ಟು’ ಎಂದು ಹೇಳಬೇಕಾದೀತು! ಕೆಲವೊಮ್ಮೆ ಅನಿರೀಕ್ಷಿತವಾಗಿ ಮಳೆ ಬಂದರೆ ರಾತ್ರೆಯೇ ಅದನ್ನು ಕೆಳಗಿಳಿಸುವ ಪ್ರಸಂಗವೂ ಬರುವುದಿತ್ತು.

ಈಗ ದೀಪಾವಳಿ ಸಮಯದಲ್ಲಷ್ಟೇ ಗೂಡುದೀಪಗಳು ಕಾಣಿಸುವುದಾದರೂ ಹಿಂದಿನ ಕಾಲದಲ್ಲಿ ಕೋಜಾಗರಿ ಹುಣ್ಣಿಮೆಯಿಂದ ಮೊದಲುಗೊಂಡು ದೀಪಾವಳಿ ನಂತರದ ಕಾರ್ತೀಕ ಹುಣ್ಣಿಮೆವರೆಗೂ ಗೂಡುದೀಪ ಇರಿಸುವ ಪದ್ಧತಿ ಇತ್ತು. ಈ ಸಮಯದಲ್ಲಿ ಪಿತೃಲೋಕದಲ್ಲಿ ಅಂಧಕಾರ ಕವಿದಿರುವುದರಿಂದ ಪೂರ್ವಜರಿಗೆ ಈ ಮೂಲಕ ಬೆಳಕು ಲಭಿಸಲಿ ಎಂಬುದು ಇದರ ಹಿಂದಿರುವ ನಂಬುಗೆ. ಇದು ಹಗಲು ಸಣ್ಣದಾಗುತ್ತಾ ಹೋಗಿ ಇರುಳು ದೊಡ್ಡದಾಗುವ ಕಾಲವಾಗಿರುವುದು ಈ ನಂಬುಗೆಯ ವೈಜ್ಞಾನಿಕ ಹಿನ್ನೆಲೆ ಇರಬಹುದು. ದೀಪಾವಳಿಯ ಹಣತೆಗಳು, ಕಾರ್ತೀಕ ದೀಪೋತ್ಸವ ಇವೆಲ್ಲವೂ ಇದಕ್ಕೆ ಪೂರಕ. ಗೂಡುದೀಪವನ್ನು ಏರಿಸುವಾಗ
ದಾಮೋದರಾಯ ನಭಸಿ ತುಲಾಯಾಂದೋಲಯಾ ಸಹ|
ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ||

ಎಂಬ ಶ್ಲೋಕವನ್ನು ಉಚ್ಚರಿಸುವ ಸಂಪ್ರದಾಯವೂ ಇದೆ.

ಈ ಹಿಂದೆ ದೀಪದ ಶಾಖದಿಂದ ತಾನಾಗಿ ತಿರುಗುವ ದುಂಡನೆಯ ಗೂಡುದೀಪ ನಾನು ತಯಾರಿಸಿದ್ದುಂಟು. ಆದರೆ ಸಾಂಪ್ರದಾಯಿಕ ಗೂಡುದೀಪ ತಯಾರಿಗೆ ಕೈ ಹಚ್ಚಿದ್ದು ಇದೇ ಮೊದಲು. ಅದು ಎಣಿಸಿದಷ್ಟು ಸುಲಭ ಅಲ್ಲವೆಂದು ಮನದಟ್ಟಾಯಿತು. ಆದರೆ ಕಸ(ಬರಿಕೆ)ದಿಂದ ರಸ ಬರಿಸಿದ ಸಮಾಧಾನವೂ ದೊರಕಿತು.

ಈ ರೀತಿಯ ಗೂಡುದೀಪ ಸ್ವತಃ ತಯಾರಿಸಲು ಇಚ್ಛಿಸುವವರಿಗಾಗಿ DIY ಮಾದರಿಯ ಸಚಿತ್ರ ವಿವರಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು.
ಸುಮಾರು 10" ಉದ್ದದ  ಬಿದಿರು, ಅಡಿಕೆ ಸಿಬ್ಬೆ ಅಥವಾ ನಾನು ಬಳಸಿದಂತೆ ತೆಂಗಿನ ಸೋಗೆಯ ಗಟ್ಟಿಯಾದ ಮತ್ತು ನೇರವಾದ ಸಪುರ ಕಡ್ಡಿಗಳು - 32.
ಇಂಥದೇ ಸುಮಾರು 14" ಉದ್ದದ ಕಡ್ಡಿಗಳು - 8.
ಟ್ವೈನ್ ದಾರ.
ದಾರಕ್ಕೆ ಸವರಲು ಜೇನು ಮಯಣ ಅಥವಾ ಕ್ಯಾಂಡಲ್.
ವಿವಿಧ ಬಣ್ಣದ ಟಿಷ್ಯೂ ಕಾಗದಗಳು - 5
ಕಾಗದ ಅಂಟಿಸಲು ಫೆವಿಕಾಲ್ ಅಥವಾ ಮೈದಾ ಅಂಟು.
ಮತ್ತು ಬಹಳಷ್ಟು ತಾಳ್ಮೆ!
 
1. 10 ಇಂಚಿನ ನಾಲ್ಕು ನಾಲ್ಕು ಕಡ್ಡಿಗಳ ತುದಿಗಳನ್ನು ಮಯಣ ಸವರಿದ ಟ್ವೈನ್ ದಾರದಿಂದ ಬಿಗಿಯಾಗಿ ಕಟ್ಟಿ ಚಿತ್ರದಲ್ಲಿರುವಂತೆ 8 ಚೌಕಾಕಾರಗಳನ್ನು ತಯಾರಿಸಬೇಕು. ದಾರಕ್ಕೆ ಮಯಣ ಸವರುವುದರಿದ  ಅದರ ಶಕ್ತಿ ಹೆಚ್ಚುತ್ತದೆ. ಕಡ್ಡಿಗಳ ಹೆಚ್ಚು ಭಾಗ ದಾರದ ಗಂಟುಗಳಿಂದ ಹೊರಗೆ  ಉಳಿಯದ ಹಾಗೆ ಜಾಗ್ರತೆ ವಹಿಸಬೇಕು.
 
2. ಅವುಗಳಲ್ಲಿ ನಾಲ್ಕು ಚೌಕಗಳ ಮೂಲೆಯಿಂದ ಮೂಲೆಗೆ ಚಿತ್ರದಲ್ಲಿರುವಂತೆ 16 ಇಂಚಿನ ಕಡ್ಡಿಯನ್ನು ಎರಡೂ ಬದಿಯಲ್ಲಿ ಸಮಾನ ಭಾಗ ಹೊರಗುಳಿಯುವಂತೆ ಕಟ್ಟಬೇಕು.
 
3. ಈ ನಾಲ್ಕು ಚೌಕಗಳ ಉದ್ದ ಕಡ್ಡಿ ಕಟ್ಟದಿರುವ B ಮೂಲೆಯನ್ನು  Cಗೆ,   Dಯನ್ನು   Eಗೆ,  Fನ್ನು  Gಗೆ ಮತ್ತು   Hನ್ನು Aಗೆ ಜೋಡಿಸಬೇಕು. 
4. ಆಗ ದೊರಕಿದ ಆಕಾರದ ಮೇಲ್ಭಾಗಕ್ಕೆ  ಮತ್ತು ಕೆಳಭಾಗಕ್ಕೆ  ಮೊದಲೇ ಸಿದ್ಧಪಡಿಸಿಟ್ಟಿರುವ 2 +2 ಚೌಕಗಳನ್ನು  ಅಳವಡಿಸಿ ಟ್ವೈನ್ ದಾರದಿಂದ ಕಟ್ಟಿದಾಗ ಹೀಗೆ ಕಾಣಿಸುತ್ತದೆ.
 
5. ಕೆಳಗಿನಿಂದ ಎರಡನೆಯ ಮತ್ತು ಮೇಲಿನಿಂದ ಎರಡನೆಯ ಚೌಕಗಳ ಮೂಲೆಯಿಂದ ಮೂಲೆಗೆ ಎರಡೆರಡು ಉದ್ದದ ಕಡ್ಡಿಗಳನ್ನು ಕಟ್ಟಬೇಕು. ಇವು ಗೂಡುದೀಪದ ಆಕಾರಕ್ಕೆ ದೃಢತೆ ಒದಗಿಸುವುದಷ್ಟೆ ಅಲ್ಲದೆ  ಮೇಲ್ಗಡೆಯ ಕಡ್ಡಿಗಳು ಬಲ್ಬು ತೂಗಾಡಿಸಲೂ ಉಪಯೋಗವಾಗುತ್ತವೆ. ಎಣ್ಣೆಯ ದೀಪ ಇರಿಸುವ ಇಚ್ಛೆ ಇದ್ದರೆ ಕೆಳಗಡೆ ಚೌಕಕ್ಕೆ ಮೂರು ಮೂರು ಹೆಚ್ಚುವರಿ ಕಡ್ಡಿಗಳನ್ನು ಕಟ್ಟಬಹುದು.

ಕೆಳಗಿನ ಚಿತ್ರಗಳು ನಾಲ್ಕೂ ಪಾರ್ಶ್ವಗಳ ನೋಟವನ್ನು ಸ್ಪಷ್ಟವಾಗಿ ತೋರಿಸುತ್ತವೆ.
 
6.  ಇನ್ನು ಬಣ್ಣದ ಕಾಗದಗಳನ್ನು ಹಚ್ಚುವ ಕೆಲಸ.  ಅದಕ್ಕಿಂತ ಮೊದಲು ಗೂಡುದೀಪವನ್ನು ತೂಗಾಡಿಸಲಿಕ್ಕಾಗಿ ಮೇಲಿನ ಚೌಕದ ಮೂಲೆಯಿಂದ ಮೂಲೆಗೆ ಸೂಕ್ತ ಅಳತೆಯ ಗಟ್ಟಿಯಾದ ಹಗ್ಗವೊಂದನ್ನು ಕಟ್ಟಬೇಕು. ಬಣ್ಣದ ಕಾಗದವನ್ನು ಬೇಕಿದ್ದ ಅಳತೆಗೆ ನಾಜೂಕಾಗಿ ಕತ್ತರಿಸಿಕೊಳ್ಳಬೇಕು. ಮೊದಲು 1, 2, 3 ಮತ್ತು 4ನೇ ಚೌಕಗಳಿಗೆ ಒಂದಕ್ಕೊಂದು contrast ಇರುವ ಬಣ್ಣ ಆಯ್ದುಕೊಳ್ಳಬೇಕು.  ಅಂಟನ್ನು ಪೇಪರ್ ಅಂಚಿನ ಬದಲು ಕಡ್ಡಿಗಳಿಗೆ ಹಚ್ಚುವುದು ಅನುಕೂಲಕರ. ನಂತರ 8 ತ್ರಿಕೋಣಾಕಾರಗಳಿಗೆ ಅಕ್ಕಪಕ್ಕದಲ್ಲಿ ಒಂದೇ ಬಣ್ಣ ಬರದಂತೆ ಎಚ್ಚರವಹಿಸಿ ಕಾಗದ ಅಂಟಿಸಬೇಕು.  ನಂತರ ಮೇಲಿನ 4 ಮತ್ತು ಕೆಳಗಿನ 4 ಚಿಕ್ಕ ಆಯತಾಕಾರಗಳಿಗೆ ಸೂಕ್ತ ಬಣ್ಣದ ಕಾಗದ ಅಂಟಿಸಿದರೆ ಮುಖ್ಯ ಕೆಲಸ ಮುಗಿದಂತೆ.  ಗೂಡುದೀಪವನ್ನು ನೆಲದ ಮೇಲಿರಿಸಿಯೇ ಇಷ್ಟು ಕೆಲಸವನ್ನು ಮಾಡುವುದು ಅನುಕೂಲಕರ. ನಂತರ ಅದನ್ನು ಕೊಕ್ಕೆಯೊಂದಕ್ಕೆ ತೂಗಾಡಿಸಿ assorted ಬಣ್ಣಗಳ ಪೇಪರ್ ಪಟ್ಟಿಗಳನ್ನು ಕೆಳಭಾಗದ ಆಯತಾಕಾರದ ಒಳಭಾಗಕ್ಕೆ ಬಾಲಗಳಂತೆ ಅಂಟಿಸಿದಾಗ ನಿಮ್ಮ ಸರಳ ಸಾಂಪ್ರದಾಯಿಕ ಗೂಡು ದೀಪ ರೆಡಿ. ಮೂಲೆಗಳಿಗೆ ಹೂವಿನಾಕಾರಗಳನ್ನು ಅಂಟಿಸುವುದು, ಅಂಚುಗಳಿಗೆ ಬೇರೆ ಬಣ್ಣದ ಪಟ್ಟಿಗಳನ್ನು ಹಚ್ಚುವುದು ಮುಂತಾದ ಎಷ್ಟೂ ಅಲಂಕರಣಗಳನ್ನು ನಿಮ್ಮ ಕಲ್ಪನೆಯ ಪ್ರಕಾರ ಮಾಡಬಹುದು. 
 

No comments:

Post a Comment

Your valuable comments/suggestions are welcome