Monday, 24 August 2020

60 ವರ್ಷ ಹಿಂದಕ್ಕೆ ಕರೆದೊಯ್ದ ಜಾತಕ ಬಲ


1960ನೇ ಇಸವಿ. ಮೂರನೇ ಕ್ಲಾಸಿನ ವಾರ್ಷಿಕ ಪರೀಕ್ಷೆ ಕಳೆದು ಬೇಸಗೆ ರಜೆ ಸಿಕ್ಕಿತ್ತು. ಪ್ರತೀ ವರ್ಷದಂತೆ ತಾಯಿಯವರೊಂದಿಗೆ ಮೃತ್ಯುಂಜಯಾ ಮತ್ತು ನೇತ್ರಾವತಿ ನದಿಗಳನ್ನು ದಾಟಿ ಒಂದೂವರೆ ಮೈಲು ನಡೆದು ನಿಡಿಗಲ್ಲಿನಿಂದ ಶೆಟ್ಟಿ ಬಸ್ಸಿನಲ್ಲಿ ಬೆಳ್ತಂಗಡಿಗೆ ಹೋಗಿ ಅಲ್ಲಿಂದ ಹತ್ತೂವರೆಯ ಹನುಮಾನ್ ಬಸ್ಸಿನಲ್ಲಿ ಅಳದಂಗಡಿ ತಲುಪಿ ಮಟ ಮಟ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಮತ್ತೆ  ಒಂದೂವರೆ ಮೈಲು ನಡೆದು ಸೂಳಬೆಟ್ಟಿನ    ಅಜ್ಜಿ ಮನೆಗೆ ಹೋಗಿದ್ದೆ. ಒಂದೆರಡು ದಿನಗಳ ನಂತರ ಸೋದರ ಮಾವನ ಮಗ ‘ಇಲ್ಲೇ ಸಮೀಪದ ಪಿಲ್ಯ ಶಾಲೆಯ ಸ್ಕೂಲ್ ಡೇಗೆ ಬರುತ್ತೀಯಾ?’ ಎಂದಾಗ ಕಾಡು ದಾರಿಯ ಮೂಲಕ ಸಾಕಷ್ಟು ದೂರ ನಡೆದು ಹೋಗಬೇಕಾಗಿದ್ದರೂ ಖುಶಿಯಿಂದ ಒಪ್ಪಿ ಅವರೊಡನೆ ಹೊರಟಿದ್ದೆ. ಆದರೆ ಶಾಲೆಗೆ ರಜೆ ಇರುವಾಗ ಏಕೆ ಸ್ಕೂಲ್‌ ಡೇ ಆಯೋಜಿಸಿದ್ದರು ಎಂದು ನನಗೆ ನೆನಪಿಲ್ಲ. ಪಾಠ ಪ್ರವಚನ, ಪರೀಕ್ಷೆಗಳ ರಗಳೆ ಇಲ್ಲದ ರಜಾ ಸಮಯವೇ ನಿರಾಳವಾದ ಸ್ಕೂಲ್‌ ಡೇಗೆ ಸೂಕ್ತ ಎಂದು ಯೋಚಿಸಿದ್ದರೋ ಏನೋ. ಆಗೆಲ್ಲ ಹಳ್ಳಿ ಶಾಲೆಯ ಸ್ಕೂಲ್ ಡೇಗಳು ರಾತ್ರಿ ಇಡೀ ನಡೆಯುವುದು ವಾಡಿಕೆ.  ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ಮಕ್ಕಳ ಮನರಂಜನಾ ಕಾರ್ಯಕ್ರಮಗಳು ಇತ್ಯಾದಿ ಆದ ಮೇಲೆ ಆರಂಭವಾಗುವ ಊರ ಹಿರಿಯರ ನಾಟಕ ಮುಗಿಯುವಾಗ ಸಹಜವಾಗಿಯೇ ಬೆಳಗಾಗುತ್ತಿತ್ತು.  ಆದರೆ ಅಂದು ಮಕ್ಕಳು ಯಾವ ಹಾಡು ಹಾಡಿದರು, ಯಾವ ಪೌರಾಣಿಕ ನಾಟಕ ಇತ್ತು, ಊರವರು ಯಾವ ತುಳು ನಾಟಕ ಆಡಿದ್ದರು ಇವೊಂದೂ ನನಗೆ ನೆನಪಿಲ್ಲ.  ಮಧ್ಯರಾತ್ರೆ ಸೋದರ ಮಾವನ ಮಗ ಅಲ್ಲಿಯ ಕ್ಯಾಂಟಿನಿನಲ್ಲಿ ಕೊಡಿಸಿದ ಬಿಸಿ ಬಿಸಿ ಖಾಲಿ ದೋಸೆ ತಿನ್ನುವಾಗ  ನಾಟಕದ ಸೀನುಗಳ ಮಧ್ಯದ  ವಿರಾಮದಲ್ಲಿ ಬೆಳ್ತಂಗಡಿಯ ಸೋಡಾ ನಾರಾಯಣರ ಧ್ವನಿವರ್ಧಕದಿಂದ ಕೇಳಿ ಬಂದ ‘ಜಾತಕ ಬಲವಯ್ಯಾ’ ಎಂಬ ಹಾಡು ಮಾತ್ರ ನನಗೆ ನೆನಪಿರುವುದು. ಧ್ವನಿವರ್ಧಕದಿಂದ ಬೇರೆ ಹಾಡುಗಳೂ ಕೇಳಿಸಿರುತ್ತವೆ.  ಆದರೆ ಅವೊಂದೂ ನೆನಪಿಲ್ಲ. ಆಗ ನಮ್ಮ ಮನೆಯಲ್ಲಿ ರೇಡಿಯೋ ಇರಲಿಲ್ಲ.  ಗಾಯಕರ ಬಗ್ಗೆ, ಸಿನಿಮಾ ಹಾಡುಗಳ ಬಗ್ಗೆ ನನಗೇನೂ ಗೊತ್ತೂ ಇರಲಿಲ್ಲ.  ಆದರೂ ಅದೇಕೋ ಅಂದು ಆ ಒಂದು ಹಾಡು ಮಾತ್ರ ನನ್ನ ಮನದಲ್ಲಿ  ನೆಲೆಯಾಗಿ ಬಿಟ್ಟಿತು.  ಮುಂದೆ ನಮ್ಮ ಮನೆಗೆ ರೇಡಿಯೋ ಬಂದು ಹಳೆ ಚಂದಮಾಮಗಳಲ್ಲಿ ಸಿನಿಮಾ ಜಾಹೀರಾತುಗಳನ್ನು  ಗಮನಿಸತೊಡಗಿದ ಮೇಲೆ ಆ ಹಾಡು ಜಾತಕಫಲ ಚಿತ್ರದ್ದಿರಬಹುದೆಂದು ಊಹಿಸಿದೆ.  ಜಾತಕಫಲದ ಜಾಹೀರಾತಿನಲ್ಲಿ ಆರ್. ನಾಗೇಂದ್ರರಾಯರು ಪೋಲೀಸು ಹ್ಯಾಟ್ ಧರಿಸಿದ ಚಿತ್ರ ನೋಡಿದಾಗಲೆಲ್ಲ ಅದೇ ಹಾಡು ನೆನಪಾಗುತ್ತಿತ್ತು. ಆದರೆ ಆ ಮೇಲೆ ರೇಡಿಯೋದಲ್ಲಾಗಲಿ ಬೇರೆಲ್ಲಾಗಲಿ ಆ ಹಾಡು ನನಗೆ ಕೇಳಲು ಸಿಕ್ಕಿರಲಿಲ್ಲ. ಈ ಅಂತರ್ಜಾಲದ ಯುಗದಲ್ಲೂ ಅದರ ಬಗ್ಗೆ ವಿವರಗಳು ದೊರಕಿರಲಿಲ್ಲ.


ಇತ್ತೀಚೆಗೆ ಒಂದು ದಿನ ಎಂದೂ ಸಿನಿಮಾಗಳನ್ನು ಪ್ರಸಾರ ಮಾಡದ ಬಸವ ಟಿ.ವಿ. ವಾಹಿನಿಯಲ್ಲಿ  ಮಕ್ಕಳ ರಾಜ್ಯ ಸಿನಿಮಾ ಬರುತ್ತಿದ್ದುದನ್ನು ಗಮನಿಸಿದೆ.  ಅದರ ಮಕ್ಕಳ ರಾಜ್ಯ ಪ್ರೇಮದ ರಾಜ್ಯ ಮತ್ತು ಛಲಿಯಾ ಚಿತ್ರದ ಛಲಿಯಾ ಮೇರಾ ನಾಮ್ ಹಾಡುಗಳು ನನಗೆ ಬೆಳ್ತಂಗಡಿ ಹೈಸ್ಕೂಲ್ ಗ್ರೌಂಡಲ್ಲಿ ನಡೆದ ಜೋನಲ್ ಸ್ಪೋರ್ಟ್ಸ್ ನೆನಪಿಗೆ ತರುವಂಥವು.  ಛಲಿಯಾ ಹಾಡು ಅಪರೂಪದ್ದಲ್ಲವಾದರೂ ಮಕ್ಕಳ ರಾಜ್ಯದ ಟೈಟಲ್ ಹಾಡು ನನಗಿನ್ನೂ ಸಿಕ್ಕಿರಲಿಲ್ಲ.  ಇಂದಾದರೂ ಅದು  ಸಿಗಬಹುದೇನೋ ಎಂದು ಧ್ವನಿ ಮುದ್ರಿಸಲು ಸಿದ್ಧತೆ ಮಾಡಿಕೊಂಡು ಚಿತ್ರ ವೀಕ್ಷಿಸತೊಡಗಿದೆ. ಹಳೆ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಹಾಡು ಶುರುವಾಗುವ ಮುನ್ಸೂಚನೆ ಸಿಗುತ್ತದೆ. ಅಂಥ ಒಂದು ಎತ್ತಿನ ಗಾಡಿಯ ದೃಶ್ಯ ಬಂದಾಗ ರೆಕಾರ್ಡ್ ಬಟನ್ ಒತ್ತಿ ಸಿದ್ಧವಾದೆ.  ಏನಾಶ್ಚರ್ಯ!  ಗಾಡಿ ಓಡಿಸುವವ ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ‘ಜಾತಕ ಬಲವೇ ಬಲವಯ್ಯಾ’ ಎಂದು ಹಾಡತೊಡಗಿದ! ಆ ಹಾಡು ಈ ಚಿತ್ರದ್ದಿರಬಹುದು, ಪಿ.ಬಿ.ಶ್ರೀನಿವಾಸ್ ಹಾಡಿರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ.  ಟೊಮೆಟೊ ಕೊಯ್ಯಲು ಹೋದಾಗ ಸೇಬು ಹಣ್ಣು ಸಿಕ್ಕಿದಂತಾಯಿತು ನನಗೆ. ಆದರೆ ನನ್ನ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ.  ಚಿತ್ರದಲ್ಲಿ ಹಾಡಿನ ಒಂದು ಚರಣ ಮಾತ್ರ ಇತ್ತು.  ಪೂರ್ಣತೆ ಇಲ್ಲದ ಯಾವುದೂ ನನಗೆ ಇಷ್ಟವಾಗುವುದಿಲ್ಲ.  ನಾನು ನಿರೀಕ್ಷಿಸುತ್ತಿದ್ದ ಮಕ್ಕಳ ರಾಜ್ಯ ಪ್ರೇಮದ ರಾಜ್ಯ ಹಾಡೂ ಸಿಗಲಿಲ್ಲ.  ಕೊನೆಗೆ ಅದು ಆರಂಭದ ಟೈಟಲ್ಸ್ ಜೊತೆಗೆ ಬರುವ ಹಾಡೆಂದು ಗೊತ್ತಾಗಿ  ಯೂಟ್ಯೂಬಲ್ಲಿ ಹುಡುಕಿದರೆ ಕನ್ನಡ ಮಕ್ಕಳ ರಾಜ್ಯ ಇರಲಿಲ್ಲ.  ಆದರೆ ಅದರ ತೆಲುಗು ಅವತರಣಿಕೆ ಪಿಲ್ಲಲು ತೇಚಿನ ಚಲ್ಲನಿ ರಾಜ್ಯಂ  ಇತ್ತು. ಕೊನೆಗೆ ಅದರ CD ಹೊಂದಿರುವ ಮಿತ್ರರ ಮೂಲಕ ಆ ಹಾಡನ್ನು ಸಂಪಾದಿಸಿದೆ.  ಜಾತಕ ಬಲದ ವಿಷಯವನ್ನು ಅಲ್ಲಿಗೇ ಬಿಟ್ಟೆ.


ಈ ದಿನ  ಬೆಳಗ್ಗೆ  ನಿತ್ಯದ ಅಭ್ಯಾಸದಂತೆ ಮೊಬೈಲಿನ Indian Radios App ಮೂಲಕ 7 ಗಂಟೆ ವರೆಗೆ ರೇಡಿಯೊ ಸಿಲೋನ್,  ಆ ಮೇಲೆ ಬೆಂಗಳೂರಿನ FM ಕನ್ನಡ ಕಾಮನಬಿಲ್ಲಿನ ಕಾರ್ಯಕ್ರಮವನ್ನು  12 Volt adapter ಅಳವಡಿಸಿ ನಾನು ಮನೆಯಲ್ಲಿ ಬಳಸುತ್ತಿರುವ Pioneer Car Sterioದಲ್ಲಿ  blue tooth ಮೂಲಕ ಆಲಿಸುತ್ತಿದ್ದೆ. ಇಂದು ಬಿ.ಆರ್. ಪಂತುಲು ಚಿತ್ರಗಳ ಗೀತೆಗಳು ಪ್ರಸಾರವಾಗುತ್ತಿದ್ದವು. ಪರಮಾಶ್ಚರ್ಯವೆಂಬಂತೆ ಇದುವರೆಗೆ ನಾನು ರೇಡಿಯೋದಲ್ಲಿ ಎಂದೂ ಕೇಳದಿದ್ದ  ‘ಜಾತಕ ಬಲವೇ’ ಹಾಡು ಇಂದು ಬಂತು! ಈಗಿನ RJಗಳಿಗೆ ಹಾಡುಗಳ ವಿವರ ತಿಳಿಸುವ ಅಭ್ಯಾಸ ಇಲ್ಲದ್ದರಿಂದ ನನಗೆ ಗೊತ್ತಾಗುವಷ್ಟರಲ್ಲಿ ಒಂದು ಸಾಲು ಆಗಿ ಹೋಯಿತು.  ಆದರೂ Indian Radios Appನ ರೆಕಾರ್ಡ್ ಬಟನ್ ತಕ್ಷಣ ಒತ್ತಿದೆ.  ಚಿತ್ರದಲ್ಲಿ ಇರದ ಎರಡನೇ ಚರಣವೂ ಸುಲಲಿತವಾಗಿ ಮೂಡಿ ಬಂದಾಗ ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯ್ತು.  ಕಳೆದು ಹೋದ ಮೊದಲ ಸಾಲನ್ನು ಮೊನ್ನೆ TVಯಿಂದ ಧ್ವನಿಮುದ್ರಿಸಿದ್ದ ಹಾಡಿನಿಂದ plastic surgery ಮಾಡಿ ಜೋಡಿಸಿದೆ.  ಅಂತೂ ಆ ಹಾಡಿನ ಜಾತಕದಲ್ಲಿ 60 ವರ್ಷಗಳ ನಂತರ ನನಗೆ ದೊರಕುವ ಗ್ರಹಗಳ ಫಲ ಇತ್ತು!

ಸಾಮಾನ್ಯವಾಗಿ ಪೀಠಾಪುರಂ ನಾಗೇಶ್ವರ ರಾವ್ ಅಥವಾ ಮಾಧವಪೆದ್ದಿ ಸತ್ಯಂ ಹಾಡುವ ಶೈಲಿಯ ಈ ಹಾಡನ್ನು ಪಿ.ಬಿ.ಶ್ರೀನಿವಾಸ್ ಅವರ ಸುಸ್ಪಷ್ಟ ಉಚ್ಚಾರದಲ್ಲಿ, ಮಧುರ ಧ್ವನಿಯಲ್ಲಿ ಈಗ ಕೇಳಿ. ಅಂದು ಅರಿವಿಲ್ಲದಿದ್ದರೂ ಈ ಧ್ವನಿಯೇ ಆ ಹಾಡಿನ ನೆನಪು ಶಾಶ್ವತವಾಗಿ ನನ್ನ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿರಬಹುದು. ಪಂತುಲು ಕ್ಯಾಂಪಿನಲ್ಲಿ ಇದು ಪಿ.ಬಿ.ಎಸ್ ಅವರ ಮೊದಲ ಚಿತ್ರ. ಟಿ.ಜಿ. ಲಿಂಗಪ್ಪ ಅವರ ಸಂಗೀತವಿದೆ.  ಜಾತಕಫಲದಲ್ಲಿ ನಂಬಿಕೆ ಇರದವರೂ ಗ್ರಹಗಳ ಬಲದ ಬಗ್ಗೆ ಯೋಚಿಸುವಂತಿದೆ ಗೀತೆಯ ಸಾಹಿತ್ಯ.  ಬರೆದವರು  ಚಿ.ಸದಾಶಿವಯ್ಯ, ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರಿಬ್ಬರಲ್ಲಿ ಯಾರು ಎಂಬ ಮಾಹಿತಿ ನನ್ನಲ್ಲಿಲ್ಲ.  ಪಿ.ಬಿ. ಶ್ರೀನಿವಾಸ್ ಅವರಿಗೂ ಜಾತಕ ಫಲಕ್ಕೂ ಬಲವಾದ ನಂಟಿದೆ.  ಓರ್ವ ಜ್ಯೋತಿಷಿ ಅವರ ಜಾತಕದಲ್ಲಿ ಹಿನ್ನೆಲೆ ಹಾಡುಗಾರನಾಗುವ ಯೋಗವಿಲ್ಲ ಅಂದಿದ್ದರಂತೆ.  Though science can not be wrong a scientist can be wrong ಎಂದು ಧೈರ್ಯದಿಂದ ತನ್ನಿಚ್ಛೆಯ ಪಥದಲ್ಲಿ ಮುಂದಡಿಯಿಟ್ಟಾಗ ಹಿಂದಿಯ  Mr Sampatನ ನಂತರ ಅವರಿಗೆ ಹಿನ್ನೆಲೆ ಗಾಯನದ  ಸುವರ್ಣಾವಕಾಶ ಸಿಕ್ಕಿದ್ದು ಜಾತಕ ಫಲ ಚಿತ್ರದಲ್ಲಿ.  ಜಾತಕ ಬಲ, ಗ್ರಹಗಳ ಫಲದ ಈ ಹಾಡೂ ಅವರಿಗೇ ಸಿಕ್ಕಿತು.  ಮುಂದೆ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ವಿವಿಧ ಕಾರಣಗಳಿಂದಾಗಿ ಹಿನ್ನೆಲೆಗೆ ಸರಿಯುವಂತಾದದ್ದೂ  ಜಾತಕ ಬಲ, ಗ್ರಹಗಳ ಫಲದಿಂದಲೇ ಇರಬಹುದೇ.




ಹಾಡು ಆಲಿಸಲು ಬಾಣದ ಗುರುತಿನ ಮೇಲೆ ಕ್ಲಿಕ್ಕಿಸಿ.



ಜಾತಕ ಬಲವೇ ಬಲವಯ್ಯಾ
ಗ್ರಹಗಳ ಒಲವೇ ಫಲವಯ್ಯಾ
ಗಣಿತ ವಿಜ್ಞಾನ ವಿಲಾಸವಿದಯ್ಯಾ
ಜಾಣರ ಅನುಭವ ಸತ್ಯವಿದಯ್ಯಾ

ಮಡೆಯನ ಒಡೆತನ ಮಾಡಿಪುದಯ್ಯಾ
ಮೂಢನ ಮೇಧಾವಿ ಎನ್ನಿಪುದಯ್ಯಾ
ಬೇಡದ ಭಾಗ್ಯವ ನೀಡುವುದಯ್ಯಾ
ಕಡುಗಲಿ ಪೌರುಷ ಕಲಿಸುವುದಯ್ಯಾ
ಆಡದ ಆಟವ ಆಡಿಪುದಯ್ಯಾ
ನಡೆಯದ ಕುದುರೆಯ ನಡೆಸುವುದಯ್ಯಾ

ಅಡವಿಗೆ ದೂಡುತ ಅಲೆಸುವುದಯ್ಯಾ
ಒಡಲುರಿ ತಾಪದೆ ಕಾಡುವುದಯ್ಯಾ
ಸಾಯಲು ಸಮ್ಮತಿ ಸೂಚಿಸದಯ್ಯಾ
ಬಾಳಲು ಬೆಂಬಲ ತಾ ಕೊಡದಯ್ಯಾ
ಬ್ರಹ್ಮನ ಬರಹದ ಮುನ್ನುಡಿಯಯ್ಯಾ
ಭೂತ ಭವಿಷ್ಯದ ಕನ್ನಡಿಯಯ್ಯಾ

1 comment:

  1. ತುಂಬಾ ಧನ್ಯವಾದಗಳು ಸರ್. ಈ ಹಾಡು ಕೇಳಿ ಅತಿ ಸಂತೋಷವಾಯಿತ್ತು ಸರ್. ಏಕೆಂದರೆ ಪಿ.ಬಿ.ಶ್ರೀನಿವಾಸರವರ ಅಭಿಮಾನಿ.

    ReplyDelete

Your valuable comments/suggestions are welcome