Tuesday, 23 June 2020

ಮಕ್ಕಳಾಟದ ಮೂದಲಹಾಡಿಂದ ನೆನಪಾದ ಮಾವನ ಮಗಳು

ಮೂದಲಹಾಡು ಎಂಬ ಪದ ಬಹುಶಃ ಶಬ್ದಕೋಶದಲ್ಲಿ ಹುಡುಕಿದರೆ ಸಿಗಲಾರದು. ಮದುವೆ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು ಪರಸ್ಪರರನ್ನು ಮೂದಲಿಸುತ್ತಾ ಹಾಡುವುದನ್ನು   ಮಂಗನ ಮೋರೆಯ ಮುದಿ ಮೂಸಂಗಿ  ಎಂಬ  ಮಲ್ಲಿ ಮದುವೆ  ಚಿತ್ರದ ಅಂಥದೇ ಹಾಡಲ್ಲಿ ಮೂದಲಹಾಡು ಎಂದು ಹೆಸರಿಸಿದವರು  ಕು.ರ.ಸೀತಾರಾಮ ಶಾಸ್ತ್ರಿ. ಇದಕ್ಕೆ ಸಮೀಪವಾದ ಮೂದಲೆವಾತು ಎಂಬ ಪದ ಕಿಟ್ಟೆಲ್ ಶಬ್ದಕೋಶದಲ್ಲಿದೆ.  ಮಲ್ಲಿ ಮದುವೆಯ  ಮಂಗನ ಮೋರೆ  ಹಾಡನ್ನು ನಾನು ‘ಆಡೋಣ ಬಾಬಾ ಗೋಪಾಲಾ’ಕ್ಕಿಂತಲೂ  ಹೆಚ್ಚು ಇಷ್ಟಪಡುತ್ತಿದ್ದೆ. ಇದಕ್ಕೆ ಕಾರಣ ನಾಲ್ಕನೇ ಕಾಲದ ತಬ್ಲಾ ನುಡಿತದೊಂದಿಗಿನ ಅದರ ವೇಗದ ನಡೆ ಮತ್ತು ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ ಮುಂತಾದ ಪ್ರಾಸಬದ್ಧ ಪದಗಳು. ಇದನ್ನು ಬರೆದವರು ಕು.ರ.ಸೀ. ಆದರೂ ಇದನ್ನು ಕೇಳುವಾಗೆಲ್ಲ ನನಗೇಕೋ ಆರ್. ಎನ್. ಜಯ‘ಗೋಪಾಲ್ ’ ಮತ್ತು ಆ ಮೂಲಕ ಬಿಳಿಯ ಟೊಪ್ಪಿ ಧರಿಸಿ ತಲೆ ಅಲ್ಲಾಡಿಸುತ್ತಾ ಹಾಡಿಗೆ ತಬ್ಲಾ ನುಡಿಸುವವರು ಕಣ್ಣ ಮುಂದೆ ಬರುತ್ತಿದ್ದರು. ತಲೆಗೆ ಬಿಳಿ ಟೊಪ್ಪಿ ಧರಿಸುತ್ತಿದ್ದ ಉಜಿರೆ ಹೈಸ್ಕೂಲಿನ ‘ಗೋಪಾಲ’ ಮಾಸ್ಟ್ರು ಮತ್ತು ನಾನು ಕಾರ್ಕಳ ಜೈಹಿಂದ್ ಟಾಕೀಸಿನಲ್ಲಿ ನೋಡಿದ್ದ ಬರಸಾತ್ ಕೀ ರಾತ್ ಚಿತ್ರದ ಕವ್ವಾಲಿಗಳಲ್ಲಿ ತಲೆ ಅಲ್ಲಾಡಿಸುತ್ತಾ ತಬ್ಲಾ ನುಡಿಸುತ್ತಿದ್ದವರ ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದುದು ಈ ವಿಚಿತ್ರ ಲಿಂಕಿಗೆ ಕಾರಣ! ಆದರೆ ನಾನಿಲ್ಲಿ ಹೇಳ ಹೊರಟದ್ದು ಮಂಗನ ಮೋರೆ ಹಾಡಿನ ಬಗೆಗಲ್ಲ. ಅಂಥದ್ದೇ ಇನ್ನೊಂದು ಮೂದಲಹಾಡಿನ ಬಗ್ಗೆ.

ಶಾರ್ಟ್ ವೇವ್ ವಿವಿಧಭಾರತಿಯಲ್ಲಿ ಸಂಜೆ ನಾಲ್ಕೂವರೆಯ ನಂತರ ಹಿಂದಿ ಅನೌಂಸ್‌ಮೆಂಟಿನೊಂದಿಗೆ ಪ್ರಸಾರವಾಗುತ್ತಿದ್ದ ದಕ್ಷಿಣ ಭಾರತೀಯ ಭಾಷೆಗಳ ಹಾಡುಗಳಿಗೆ ಮೀಸಲಾದ ಮಧುರಗೀತಂ ಕಾರ್ಯಕ್ರಮದ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಹೇಳಿದ್ದೇನೆ.  ಬೆಳಗ್ಗೆ ಮತ್ತು ರಾತ್ರಿ ಮಾತ್ರ ಕೇಳಿಸುತ್ತಿದ್ದ ಬೆಂಗಳೂರು ಮತ್ತು ಧಾರವಾಡ ಮೀಡಿಯಂ ವೇವ್ ನಿಲಯಗಳಿಂದ ಸೀಮಿತ ಸಂಖ್ಯೆಯ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದುದರಿಂದ ಬಹುತೇಕ ಕನ್ನಡ ಹಾಡುಗಳ ಪರಿಚಯ ನಮಗಾಗುತ್ತಿದ್ದುದು ಈ ಮಧುರಗೀತಂ ಕಾರ್ಯಕ್ರಮದ ಮೂಲಕವೇ.  ಆ ಹೊತ್ತಿಗೆ ಮನೆಯಲ್ಲಿ ಕಾಫಿ ಬೀಜವನ್ನೋ ಇತರ ಮಸಾಲೆಗಳನ್ನೋ ಹುರಿಯುವ ಸಮಯವೂ ಆಗಿರುತ್ತಿದ್ದುದರಿಂದ ಈ ಕಾರ್ಯಕ್ರಮದ ನೆನಪಿನೊಂದಿಗೆ ಆ ಘಮವೂ ಸಮ್ಮಿಳಿತವಾಗಿ ಬಿಟ್ಟಿದೆ. ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದ ಕಾಲದಲ್ಲಿ   ಮಲ್ಲಿಗೆ ಅರಳಿಗೆ ಮುತ್ತಿನ ಚೆಂಡಿಗೆ  ಎಂಬ  ಮಕ್ಕಳು ಹಾಡಿದ ಹಾಡೊಂದು ಅದರಲ್ಲಿ ಪ್ರಸಾರವಾಗುತ್ತಿದ್ದು ಅದು  ಪತಿಯೇ ದೈವ  ಚಿತ್ರದ್ದೆಂದು ನನ್ನ ಮನದಲ್ಲಿ ದಾಖಲಾಗಿ ಹೋಗಿತ್ತು. ಬೇರೆ ನಿಲಯಗಳಿಂದ ಅದನ್ನು ನಾನು ಕೇಳಿದ್ದೇ ಇಲ್ಲ.   ಇತ್ತೀಚೆಗೆ  ಪತಿಯೇ ದೈವ  ಚಿತ್ರದ ಲೇಖನಕ್ಕಾಗಿ ಆ ಹಾಡೊಂದು ಎಲ್ಲಿ ಹುಡುಕಿದರೂ ಸಿಗಲಿಲ್ಲ. ಅನೇಕ ಸಮಾನ ಮನಸ್ಕ ಸ್ನೇಹಿತರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ.  ಇತ್ತೀಚೆಗೆ ಇನ್ಯಾವುದೋ ಉದ್ದೇಶಕ್ಕಾಗಿ ಅಂತರ್ಜಾಲವನ್ನು ಜಾಲಾಡುತ್ತಿದ್ದಾಗ ‘ಮಲ್ಲಿಗೆ ಅರಳಿಗೆ’ ಎಂಬ ಸಾಲೊಂದು ಕಣ್ಣಿಗೆ ಬಿದ್ದಾಗ ಪರಮಾಶ್ಚರ್ಯವಾಯಿತು.  ನೋಡಿದರೆ ಅದು  ಮಾವನ ಮಗಳು  ಚಿತ್ರದ ಹಾಡಾಗಿತ್ತು!  ಅಂದರೆ ಇದುವರೆಗೆ ನಾನು ಮಾಡಿದ್ದು ‘ಇದ್ದದ್ದೆಲ್ಲೋ  ಹುಡುಕಿದ್ದೆಲ್ಲೋ’ಎಂಬಂತಾಗಿತ್ತು. ಮಧುರಗೀತಂ ಕಾರ್ಯಕ್ರಮದಲ್ಲಿ ಹಾಡುಗಳ ಸಂಪೂರ್ಣ ವಿವರ ಒದಗಿಸುತ್ತಿದ್ದರೂ ನನ್ನ ಮನಸ್ಸಿನಲ್ಲಿ ಈ ತಪ್ಪು ದಾಖಲಾತಿ ಹೇಗಾಗಿತ್ತೋ ಏನೋ. ಈ ಹಾಡಿನ ಬಗ್ಗೆ ನಾನು ಎಷ್ಟೊಂದು ಜನರಲ್ಲಿ ವಿಚಾರಿಸಿದ್ದೆನೆಂಬುದಕ್ಕೆ ಲೆಕ್ಕವಿಲ್ಲ.



ಕನ್ನಡದ ಅಮರ ಚಿತ್ರಗೀತೆಗಳಲ್ಲೊಂದಾಗಿ ಪರಿವರ್ತಿತವಾದ  ಕುವೆಂಪು ವಿರಚಿತ ನಾನೇ ವೀಣೆ ನೀನೇ ತಂತಿ ಕವನದಿಂದಾಗಿ  ಮಾವನ ಮಗಳು ಎಂಬ ಹೆಸರು ಕಿವಿಗೆ ಬೀಳುತ್ತಿದೆಯಷ್ಟೇ ಹೊರತು ಅದು ಎಂದೋ ಮರೆತು ಹೋದ ಚಿತ್ರ. ಈ ಚಿತ್ರದ ಉಳಿದ ಹಾಡುಗಳೂ ಅವಜ್ಞೆಗೊಳಗಾಗಿವೆ.  ಮೊನ್ನೆ ಅವೆಲ್ಲವುಗಳ ಅತ್ಯುತ್ತಮ ಗುಣಮಟ್ಟದ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸುವವರೆಗೆ ನಾನೂ ಅವುಗಳನ್ನು ಮರೆತಿದ್ದೆ.  ಪೂರ್ತಿ ಚಿತ್ರವೂ ಈಗ ಅಂತರ್ಜಾಲದಲ್ಲಿ ಇದೆ.  ಕಲ್ಯಾಣ್ ಕುಮಾರ್, ಜಯಲಲಿತಾ ಮುಖ್ಯ ಭೂಮಿಕೆಯಲ್ಲಿದ್ದ 1965ರ ಈ ಚಿತ್ರ ಆಶಾಪೂರ್ಣಾದೇವಿ ಎಂಬ ಬಂಗಾಲಿ ಲೇಖಕಿ ಬಾಲ್ಯವಿವಾಹದ ಸುತ್ತ ಹೆಣೆದ ಕಥೆಯನ್ನು ಆಧರಿಸಿತ್ತು. ಎಸ್.ಕೆ.ಎ. ಚಾರಿ ನಿರ್ದೇಶಿಸಿದ್ದರು. ಟಿ ಚಲಪತಿರಾವ್ ಸಂಗೀತವಿತ್ತು. ಇದೇ ಕಥೆಯನ್ನಾಧರಿಸಿ 1959ರಲ್ಲಿ ತೆಲುಗಿನಲ್ಲಿ ಮಾಂಗಲ್ಯ ಬಲಂ ಮತ್ತು ತಮಿಳಿನಲ್ಲಿ ಮಂಜಲ್ ಭಾಗ್ಯಂ   ಹಾಗೂ ಆ ಮೇಲೆ   1967ರಲ್ಲಿ ಹಿಂದಿಯ ಛೋಟೀ ಸೀ ಮುಲಾಕಾತ್  ತಯಾರಾಗಿದ್ದವು.    ಜಯಲಲಿತಾ ಕನ್ನಡದಲ್ಲಿ ನಾಯಕಿಯಾಗಿ ಅಭಿನಯಿಸಿದ ಮಾವನ ಮಗಳು, ಮನೆ ಅಳಿಯ, ಚಿನ್ನದ ಗೊಂಬೆ, ನನ್ನ ಕರ್ತವ್ಯ ಹಾಗೂ ಬದುಕುವ ದಾರಿ ಇವೆಲ್ಲವುಗಳಲ್ಲಿ ಕಲ್ಯಾಣ್ ಕುಮಾರ್ ಅವರೇ ನಾಯಕನಾಗಿದ್ದುದು ಗಮನಾರ್ಹ.

ಮಾವನ ಮಗಳು ಚಿತ್ರದ ಶೂಟಿಂಗ್ ಸಮಯದ ಅಪರೂಪದ ಚಿತ್ರವೊಂದು ಇಲ್ಲಿದೆ.  ಇದು ಆವುದೊ ಆವುದೊ ಹಾಡಿನ ಸಂದರ್ಭದ್ದಿರಬಹುದು.



ನಾನು ನೋಡಿರದ ಮತ್ತು   ನನ್ನಲ್ಲಿ ಪದ್ಯಾವಳಿ ಇಲ್ಲದ ಸಿನಿಮಾಗಳ ಪೈಕಿ  ಮಾವನ ಮಗಳು ಕೂಡ ಒಂದು.  ಇಂಥ ಸಂದರ್ಭದಲ್ಲಿ ನನಗೆ ನೆರವಾಗುವವರು ಸಿನಿಮಾ ಮತ್ತು ಟಿ.ವಿ. ಮಾಧ್ಯಮದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಿತ್ರ ಕೃಷ್ಣಪ್ರಸಾದ್. ತಮ್ಮಲ್ಲಿರುವ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕದಿಂದ ನನಗೆ ಬೇಕಿದ್ದ ಮಾಹಿತಿಯನ್ನು ಕೇಳಿದಾಕ್ಷಣ ಅವರು ಕಳಿಸಿಕೊಡುತ್ತಾರೆ. ಅದರಲ್ಲಿ ನೋಡುತ್ತೇನಾದರೆ ಈ ಚಿತ್ರದ ಹಾಡುಗಳನ್ನು ಕುವೆಂಪು ಅಲ್ಲದೆ ಎಂ.ನರೇಂದ್ರಬಾಬು, ಕು.ರ.ಸೀ, ಆರ್.ಎನ್. ಜಯಗೋಪಾಲ್ ಮತ್ತು ವಿಜಯನಾರಸಿಂಹ ಬರೆದಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ಹಾಡು ಯಾರು ಬರೆದದ್ದು ಎಂದು ತಿಳಿಯಲು ಆಕಾಶವಾಣಿ, ಗ್ರಾಮೊಫೋನ್ ರೆಕಾರ್ಡ್  ಅಥವಾ ಪದ್ಯಾವಳಿ ಮಾತ್ರ ಆಧಾರ. ಈ ಹಿಂದೆ ಅನೇಕ ಬಾರಿ ಸಹಾಯ ಮಾಡಿದ್ದ ಆಕಾಶವಾಣಿ ಮಿತ್ರರಿಂದ ಈ ಸಲ ಮಾಹಿತಿ ದೊರಕಲಿಲ್ಲ. ರೆಕಾರ್ಡ್ ಸಂಗ್ರಹ ಹವ್ಯಾಸವಿರುವ ಮಿತ್ರರಲ್ಲೂ ಈ ಚಿತ್ರದ ಹಾಡುಗಳು ಇರಲಿಲ್ಲ.  ಕೊನೆಗೆ ನೆರವಿಗೆ ಬಂದದ್ದು ಪ್ರಸಿದ್ಧ ಸಾಹಿತಿ ಮತ್ತು ಚಲನಚಿತ್ರ ಇತಿಹಾಸಜ್ಞ ಶ್ರೀಧರಮೂರ್ತಿ ಅವರು.  ವ್ಯಸ್ತತೆಯ ನಡುವೆಯೂ ಈ ಚಿತ್ರದ ಪದ್ಯಾವಳಿಯನ್ನು ತಮ್ಮ ಬೃಹತ್ ಸಂಗ್ರಹದಿಂದ ಹುಡುಕಿ ಛಾಯಾಪ್ರತಿಯನ್ನು ನನಗೆ ಒದಗಿಸಿದರು. ಅದರಲ್ಲಿರುವ ಚಿತ್ರದ ಎಲ್ಲ ಹಾಡುಗಳ ವಿವರ ಮತ್ತು ಸಾಹಿತ್ಯವನ್ನು ಇಲ್ಲಿ scroll  ಮಾಡುತ್ತಾ ನೋಡಬಹುದು.




1. ಮಲ್ಲಿಗೆ ಅರಳಿಗೆ.
ನಾನು ಬಹುಕಾಲದಿಂದ ಹುಡುಕುತ್ತಿದ್ದು ಇದನ್ನೇ. ವಿಜಯನಾರಸಿಂಹ ಬರೆದ ಈ ಮೂದಲಹಾಡನ್ನು ಅಜ್ಞಾತ ಬಾಲಗಾಯಕಿಯರಾದ ಸಾವಿತ್ರಿ, ಸೀತಾ ಮತ್ತಿತರರು ಬಲು ಸೊಗಸಾಗಿ ಹಾಡಿದ್ದಾರೆ. ರೇಡಿಯೋದಲ್ಲಿ ಇವರ ಹೆಸರು ಹೇಳುತ್ತಿದ್ದರೋ ಅಥವಾ ಸುಮ್ಮನೆ ಸಹಗಾನವೆಂದು ಹೇಳುತ್ತಿದ್ದರೋ ನೆನಪಿಲ್ಲ. ಚಲಪತಿ ರಾವ್ ಅವರು ಸಾಮಾನ್ಯ ಸಿನಿಮಾ ಹಾಡುಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಇದಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ.  ನಡುವೆ pause ತುಂಬಿಸಲು ಚಪ್ಪಾಳೆಗಳ ಪ್ರಯೋಗ ಗಮನ ಸೆಳೆಯುತ್ತದೆ. ಹಿರಿಯರನ್ನು ಅನುಕರಿಸುವ ಮಕ್ಕಳ ಮದುವೆಯಾಟದ ಈ ಹಾಡಿನಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು  ಪರಸ್ಪರ ತಮಾಷೆಯಾಗಿ ಮೂದಲಿಸಿಕೊಳ್ಳುತ್ತಾರೆ. ಕೊನೆಗೆ ಹಿರಿಯಳೊಬ್ಬಳು ಜಗಳ, ರಗಳೆ ಎಲ್ಲ ಮದುವೆ ಮನೆಗೆ ಚಂದವೇ, ಆದರೆ ಮದುವೆಯಾದ ಮೇಲೆ ಮನಸು ಮನಸು ಬೆರೆತು ಸಮರಸದ ಸಂಸಾರ ಸಾಗಿಸುವುದು ಮುಖ್ಯ ಎಂದು ಉಪಸಂಹಾರ ಮಾಡುತ್ತಾಳೆ.  ಆ ಕಾಲದಲ್ಲಿ ಈ ಹಾಡನ್ನು ರೇಡಿಯೋದಲ್ಲಿ ಕೇಳುತ್ತಿದ್ದಾಗ ಅಷ್ಟೊಂದು ಹೋಲಿಕೆಯಿಲ್ಲದಿದ್ದರೂ ಆಗ ಪ್ರಚಲಿತವಾಗಿದ್ದ  ಲಾಲಿ ಲಾಲಿ ಡೋಲಿಯಾ ಮೆ ಆಯೀ ರೇ ದುಲ್ಹನಿಯಾ ಎಂಬ ತೀಸ್ರೀ ಕಸಂ ಚಿತ್ರದ ಶಂಕರ್ ಜೈಕಿಶನ್ ಅವರದ್ದೆಂದು ನಂಬಲಾಗದ ಸರಳ ಸುಂದರ ಹಾಡೊಂದು ನೆನಪಾಗುತ್ತಿತ್ತು.




2. ಆವುದೊ ಆವುದೊ.
ಕು.ರ.ಸೀ ರಚನೆ. ಜಾನಕಿ ಧ್ವನಿ.  ಉತ್ಸಾಹದ ಬುಗ್ಗೆಯಾದ ನವ ತರುಣಿಯ ಭಾವನೆಗಳಿಗೆ ಸರಿ ಹೊಂದುವಂತೆ ವೇಗದ ಲಯ.  ಹಾಡಿನ ಮೂಡ್ ಮತ್ತು ಕೆಲವು ಸಾಲುಗಳು ಜಂಗ್ಲಿಯ ಜಾ ಜಾ ಜಾ ಮೇರೇ ಬಚ್‌ಪನ್ ನೆನಪಾಗುವಂತೆ ಮಾಡುತ್ತವೆ.



3. ಇನ್ನೂ ಯಾಕೆ ಅಂಜಿಕೆ.
ಕು.ರ.ಸೀ ಅವರದ್ದೇ ಸಾಹಿತ್ಯ.  ಹಾಡಿದವರು ಪೀಠಾಪುರಂ ನಾಗೇಶ್ವರ ರಾವ್ ಮತ್ತು ಬಿ.ವಸಂತ. ಇದನ್ನು ರೇಡಿಯೋದಲ್ಲಿ ಎಂದೂ ಕೇಳಿದ ನೆನಪಿಲ್ಲ.  ನರಸಿಂಹರಾಜು  ಅಭಿನಯದ ಹಾಡುಗಳು ಸಾಮಾನ್ಯವಾಗಿ ಹಿಟ್ ಆಗುತ್ತವೆ.  ಆದರೆ ಇದ್ಯಾಕೋ ಆಗಿಲ್ಲ.



4. ಮಧುರ ಮಿಲನದಾ ಸವಿ ನೆನಪೊಂದು. 
ಆರ್.ಎನ್. ಜಯಗೋಪಾಲ್ ವಿರಚಿತ ಈ ಗೀತೆ ಎಸ್. ಜಾನಕಿ ಮತ್ತು ಬಿ. ವಸಂತ ಅವರ ಯುಗಳ ಸ್ವರಗಳಲ್ಲಿದೆ. ರೇಡಿಯೋದಲ್ಲಿ ಸಾಕಷ್ಟು ಬಾರಿ ಕೇಳಿಸುತ್ತಿತ್ತು.  ಈಗ ಸಂಪೂರ್ಣ ವಿಸ್ಮೃತಿಗೆ ಒಳಗಾಗಿದೆ.  ಎಂ. ವೆಂಕಟರಾಜು ಅವರ್ ಶೈಲಿಯ ಸಂಗೀತ ನೀಡುತ್ತಿದ್ದ ಚಲಪತಿ ರಾವ್ ಅವರಿಗೆ ವೀಣೆ ಮತ್ತು ಸೋಲೋವಾಕ್ಸ್ ಪ್ರಿಯ ಸಂಗೀತೋಪಕರಣಗಳೆನಿಸುತ್ತದೆ.  ಈ ಹಾಡಲ್ಲೂ ಅವುಗಳ ವ್ಯಾಪಕ ಬಳಕೆ ಇದೆ.



5. ನಾನೆ ವೀಣೆ ನೀನೆ ತಂತಿ.
‘ಮಾವನ ಮಗಳು’ ಚಿತ್ರದ ಹೆಸರು ಉಳಿದಿರುವುದೇ ಕುವೆಂಪು ಅವರ ಈ ರಚನೆಯಿಂದ.  ಆದರೂ ಆಗಲೇ ಬಂದಿದ್ದ ಮಿಸ್. ಲೀಲಾವತಿಯ ದೋಣಿ ಸಾಗಲಿ ಹಾಡಿನ ಎದುರು ನನಗೆ ವೈಯುಕ್ತಿಕವಾಗಿ ಇದು ಸಪ್ಪೆ ಎಂದೇ ಅನಿಸುತ್ತಿದ್ದುದು. ಈಗಲೂ ನನ್ನ ಅಭಿಪ್ರಾಯ ಬದಲಾಗಿಲ್ಲ.  ಇದರ ಹೆಚ್ಚಿನ ಸಾಲುಗಳನ್ನು ಜಾನಕಿಯೇ ಹಾಡಿದ್ದು ಇಡೀ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಅವರು ಈ ಒಂದೇ ಹಾಡಿನ ಸೀಮಿತ ಸಾಲುಗಳಿಗೆ ಮಾತ್ರ ಧ್ವನಿಯಾಗಿರುವುದು ಗಮನಿಸಬೇಕಾದ ಅಂಶ.

ಇದರ ‘ನನ್ನ ನಿನ್ನ ಹೃದಯಮೀನ‍ಕಲ್ಲಿ ಜೇನ ಸೊಗದ ಸ್ನಾನ’ ಎಂಬ ಭಾಗ ಹೆಚ್ಚು ಚರ್ಚೆಗೆ ಒಳಗಾಗಿದೆ.  ವಿಳಂಬ ಗತಿಯ 4/4 ತಾಳದಲ್ಲಿ ಸಂಯೋಜಿಸಿರುವುದರಿಂದ ಈ ಭಾಗವನ್ನು  ಹಾಡುವಾಗ ಅನಿವಾರ್ಯವಾಗಿ ಮೀನ ಮತ್ತು ಕಲ್ಲಿ ನಡುವೆ ಸುದೀರ್ಘ pause ನೀಡಬೇಕಾಗಿ ಬಂದುದರಿಂದ ಅರ್ಥೈಸುವಲ್ಲಿ ಉಂಟಾಗುವ ಗೊಂದಲ ಇದಕ್ಕೆ ಕಾರಣ. ಇತ್ತೀಚೆಗೆ facebookನಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.  ಅನೇಕರು ಕಲ್ಲಿಯನ್ನು ಮೀನದಿಂದ ಬೇರ್ಪಡಿಸಿ ಅದಕ್ಕೆ ಜೇನ ಸೇರಿಸಿ ಕಲ್ಲಿಜೇನ ಎಂಬ ಪದ ಕಲ್ಪಿಸುತ್ತಾರೆ. ಕಲ್ಲಿಜೇನು ಅಂದರೆ ವಿಶೇಷ ರೀತಿ ಗೂಡು ಕಟ್ಟುವ ಒಂದು ಜಾತಿಯ ಜೇನು ಎಂದು ವ್ಯಾಖ್ಯಾನಿಸುವವರೂ ಇದ್ದಾರೆ!  ಇನ್ನು ಕೆಲವರು ಅದು ಹೃದಯಮೀನಕಲ್ಲಿ(ಮೀನಕೆ ಅಲ್ಲಿ) ಎಂದು  ಹೇಳುತ್ತಾರೆ. ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ ಎಂಬ ಹಿಂದಿನ ಸಾಲು  ಎರಡನೆಯ ವಿಶ್ಲೇಷಣೆಗೆ ಪೂರಕವಾಗಿ  ಇದೆ. ಒಟ್ಟಿನಲ್ಲ್ಲಿ ನನ್ನ ನಿನ್ನ ಹೃದಯವೆಂಬ ಮೀನಿಗೆ ಅಲ್ಲಿ ಮಾಧುರ್ಯದ ಜೇನಿನ ಸ್ನಾನದ ಜೊತೆಗೆ ಅಮೃತ ಪಾನ  ಎಂಬ ಅರ್ಥ ಮೂಡುತ್ತದೆ.   ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ  ಹಾಡಿನಂತೆ ರೂಪಕ(ದಾದ್ರಾ - 3/4) ತಾಳದಲ್ಲಿ ಇದರ ಸಂಯೋಜನೆ ಇರುತ್ತಿದ್ದರೆ ಹಾಡುವಾಗ ಮೀನ ಮತ್ತು ಕಲ್ಲಿ ಒಟ್ಟೊಟ್ಟಿಗೆ ಬರುವುದರಿಂದ ಈ ಗೊಂದಲ ಉಂಟಾಗುತ್ತಿರಲಿಲ್ಲ. ಕವಿ ಸಹ ನಾನೇ, ನೀನೇ, ಅವನೇ ಎಂಬ ನಾಲ್ಕು ಮಾತ್ರಾಕಾಲದ  ಪದಗಳನ್ನು ಮೂರು ಮಾತ್ರೆಗಳಿಗೆ ಸರಿ ಹೊಂದುವಂತೆ ನಾನೆ, ನೀನೆ, ಅವನೆ ಎಂದೇ ಬರೆದಿರುವುದನ್ನು ಗಮನಿಸಬಹುದು. ಇದಕ್ಕೆ  ಪೂರಕವಾಗಿ ಭೀಮ್‌ಸೇನ್ ಜೋಶಿ ಅವರ ಈ ಧ್ವನಿಮುದ್ರಿಕೆಯನ್ನು ಆಲಿಸಬಹುದು.  ಆದರೆ ಈಗ ಇದ್ದಂತೆ ಆ  ಹಾಡನ್ನು ಕುವೆಂಪು ಸಹ ಖಂಡಿತ ಕೇಳಿರುತ್ತಾರೆ. ಈ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಎಲ್ಲೂ ಓದಿದ ನೆನಪಿಲ್ಲ.

ಪ್ರೇಮಕಾಶ್ಮೀರ ಕವನ ಸಂಕಲದಲ್ಲಿ ಪ್ರಕಟವಾದ ವೀಣಾಗಾನ ಶೀರ್ಷಿಕೆಯ ಮೂಲ ಕವನ ಹೀಗಿದೆ. ಇಲ್ಲಿ ಪಲ್ಲವಿ ಮತ್ತು ಚರಣಗಳು ಎಂಬ ವ್ಯತ್ಯಾಸ ಇಲ್ಲದೆ ಒಂದೇ ರೀತಿಯ ಹರಹಿನ ಮೂರು ಭಾಗಗಳು ಇರುವುದನ್ನು ಗಮನಿಸಬಹುದು.  ಎರಡನೆಯ ಚರಣದಲ್ಲಿ ಹೃದಯಮೀನದ ನಂತರದ ಕಲ್ಲಿ ಮುಂದಿನ ಸಾಲಿಗೆ ಹೋಗಬೇಕಾದಾಗ ಹೃದಯಮೀನಕಲ್ಲಿ ಒಂದೇ ಪದಪುಂಜ ಎಂದು ಸೂಚಿಸಲು ಹೈಫನ್(-) ಇರುವುದನ್ನು ಗಮನಿಸಬಹುದು.

ಸಿನಿಮಾದಲ್ಲಿ ಬಳಸುವಾಗ ಮೊದಲ ಭಾಗದ ಅರ್ಧವನ್ನು ಪಲ್ಲವಿಯಾಗಿಸಿ ಉಳಿದರ್ಧವನ್ನು ಮೊದಲ ಚರಣ ಮಾಡಿಕೊಂಡಿದ್ದಾರೆ.  ಮೂರನೆ ಚರಣ ಬಳಕೆಯಾಗಿಲ್ಲ.




6. ಒಲಿಸಿದ ದೇವನ
ಕು.ರ.ಸೀ ವಿರಚಿತವಾದ ಇದು  ಚಿತ್ರದ ಸರ್ವಶ್ರೇಷ್ಠ ಗೀತೆ ಮತ್ತು ಎಸ್. ಜಾನಕಿ ಅವರ ಅತ್ಯುತ್ತಮ ಗೀತೆಗಳಲ್ಲಿ ಒಂದು ಎಂದು ನನ್ನ ಅನಿಸಿಕೆ. ಒಲಿಸಿದವರ ರಸಪೂಜೆಗೆ ನಿಲುಕದೆ ವರಿಸಿದವರಿಗೆ ಹರಕೆಯ ಮುಡಿಪಾದವರು ಕಥೆ, ಕಾದಂಬರಿ, ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸಾಕಷ್ಟು ಇದ್ದಾರೆ. ಸಂಗಂ ಚಿತ್ರದಲ್ಲಿ ವೈಜಯಂತಿಮಾಲಾ ‘ಪ್ಯಾರ್ ಏಕ್ ಎಹಸಾಸ್ ಹೈ. ವೊ ಹೋ ಜಾತಾ ಹೈ.  ಲೆಕಿನ್ ಶಾದೀ ಏಕ್ ಧರಮ್ ಹೈ ಔರ್ ಮೈನೆ ಉಸ್ ಧರಮ್ ಕೊ ನಿಭಾಯಾ ಹೈ’ ಎಂದು ಹೇಳುವ ಸಾಲುಗಳು ನನಗಿಲ್ಲಿ ನೆನಪಾಗುತ್ತವೆ.  ಶಿವರಾಮ ಕಾರಂತರ ಯಾವುದೋ ಕಾದಂಬರಿಯಲ್ಲಿರುವ  ‘ಮುಂದಿನ ಜನ್ಮದಲ್ಲಿಯೂ ಈಗಿರುವ ಪತಿ/ಪತ್ನಿಯೇ ದೊರಕಲಿ ಎಂದು ಮನದಾಳದಿಂದ ಆಶಿಸುವವರು ಬೆರಳೆಣಿಕೆಯಷ್ಟು ಇರಬಹುದು’ ಎಂಬರ್ಥದ ಸಾಲುಗಳೂ ನೆನಪಾಗುತ್ತವೆ!


ನೀಡಿದರಾರೋ ಮಂಗಳ ಸೂತ್ರ
ಅವರೇ ಒಲವಿಗೆ ಪಾತ್ರ
ತನುಮನ ಮೀಸಲು ಅವರಿಗೆ ಮಾತ್ರ
ಅನ್ಯರು ತಂದೆಯ ಗೋತ್ರ
ಎಂಬಂಥ ಸಾಲುಗಳನ್ನು ಕು.ರ.ಸೀ ಅಲ್ಲದೆ ಇನ್ಯಾರು ಬರೆಯಲು ಸಾಧ್ಯ?



7. ಪ್ರೇಮ ಪ್ರೇಮ
ಇದು ಕೂಡ ನರಸಿಂಹರಾಜು  ಅವರ ಮೇಲೆ ಚಿತ್ರೀಕರಿಸಲಾದರೂ ಗಮನ ಸೆಳೆಯದ  ಹಾಡು.  ನಾನು ಒಮ್ಮೆಯೂ ಕೇಳಿರಲಿಲ್ಲ.  ದಾಖಲೆಗಾಗಿ ಇಲ್ಲಿ ಸೇರಿಸಿದ್ದೇನೆ. ಟಿ.ಆರ್. ಜಯದೇವ್ ಮತ್ತು  ಸ್ವರ್ಣಲತಾ ಹಾಡಿದ್ದಾರೆ.



8. ಚಂದ್ರೋದಯ ಮಂದಾನಿಲ
ನರೇಂದ್ರಬಾಬು ಬರೆದು ಎಸ್. ಜಾನಕಿ ಹಾಡಿರುವ ಇದು ನನಗೆ ಅಂದು ಹತ್ತರಲ್ಲಿ ಹನ್ನೊಂದು ಅನ್ನಿಸಿತ್ತು.  ಆದರೆ ಈಗ ಆಲಿಸಿದರೆ ಇದರಲ್ಲೇನೋ ಇದೆ ಅನ್ನಿಸುತ್ತಿದೆ.  ವಿಶೇಷವಾಗಿ ಚರಣ ಭಾಗದಲ್ಲಿ ಜಾನಕಿ ಅವರು ಒಂದೇ ಉಸಿರಲ್ಲಿ  ಹಾಡಿದ 10 ಸೆಕೆಂಡುಗಳಷ್ಟು ದೀರ್ಘ ಸಾಲಿನಲ್ಲಿ ಏನೋ ವಿಶಿಷ್ಟ ಆಕರ್ಷಣೆ ಇದೆ. ಶಂಕರ್ ಜೈಕಿಶನ್ ಶೈಲಿಯ  ವೇಗದ ಲಯದಲ್ಲಿ ವಾದ್ಯಗಳನ್ನು ನುಡಿಸಿದವರ ಕೈ ಚಳಕವೂ ಭಲೇ ಅನ್ನುವಂತಿದೆ.

1965ರ ಈ ಕಾಲಘಟ್ಟದಲ್ಲಿ ನಮ್ಮ ಹಳ್ಳಿಯ ದೊಡ್ಡ ಮನೆಯಲ್ಲಿ ವಿದ್ಯುತ್ ವಯರಿಂಗ್ ಕೆಲಸ ನಡೆಯುತ್ತಿತ್ತು.  ಅದಕ್ಕಾಗಿ ಪುತ್ತೂರಿಂದ ಬಂದ ಸಂಕಪ್ಪ ಮತ್ತು ಭಾಸ್ಕರ ಎಂಬವರು ನಮ್ಮಲ್ಲೇ  ಸುಮಾರು 15-20 ದಿನ ಉಳಿದುಕೊಂಡಿದ್ದರು.  ಒಂದು ದಿನ ಅವರು ರಾತ್ರೆ ಊಟ ಮಾಡುವಾಗ ಅಲ್ಲಿದ್ದ ಚಿಮಿಣಿ ದೀಪದ ಮಿಣುಕು ಬೆಳಕು ಸಾಲದೆಂದು ನನಗೆನಿಸಿ ಲಾಟೀನೊಂದನ್ನು ಅವರಿದ್ದಲ್ಲಿಗೆ ಒಯ್ಯುವಾಗ ರೇಡಿಯೋದಲ್ಲಿ ಈ ಹಾಡು ಬರುತ್ತಿತ್ತು.  ಈಗ ಈ ಹಾಡು ಕೇಳುವಾಗಲೆಲ್ಲ ನನಗೆ ನೆನಪಾಗುವುದು ಸಂಕಪ್ಪ,  ಭಾಸ್ಕರ ಮತ್ತು ಲಾಟೀನು!



ಅತ್ಯುತ್ತಮ ಗುಣಮಟ್ಟದಲ್ಲಿ ಧ್ವನಿಮುದ್ರಿತವಾದ ಈ ಹಾಡುಗಳ ಸಂಪೂರ್ಣ ಆನಂದ ದೊರೆಯಬೇಕಾದರೆ ಹೆಡ್‌ಫೋನ್ / ಇಯರ್‌ಫೋನ್ ಬಳಸಬೇಕು.  ಪದ್ಯಾವಳಿಯ pdf  ತೆರೆದಿಟ್ಟುಕೊಂಡರೆ  ಇನ್ನೂ ಒಳ್ಳೆಯದು.

ಈ ಹಾಡುಗಳನ್ನು ವೀಡಿಯೊ ರೂಪದಲ್ಲಿ ನೋಡಲಿಚ್ಛಿಸುವವರು ಇಲ್ಲಿ ಕ್ಲಿಕ್ಕಿಸಿ.







Friday, 5 June 2020

ನವಜೀವನ ಸವಿಗಾನ


ಚಲನಚಿತ್ರ ಸಂಗೀತದ ಸುವರ್ಣಯುಗ ಎಂದು ಗುರುತಿಸಲ್ಪಡುವ 1950-60ರ ದಶಕಗಳಲ್ಲೂ ಸಾಮಾನ್ಯವಾಗಿ ಬಹುತೇಕ  ಚಿತ್ರಗಳ ಒಂದೋ ಎರಡೋ ಹಾಡುಗಳು ಬಲು ಜನಪ್ರಿಯವಾಗಿ ಉಳಿದವು ಹಿನ್ನೆಲೆಗೆ ಸರಿಯುತ್ತಿದ್ದವು.  ಒಂದು ಚಿತ್ರದ ಎಲ್ಲಾ ಹಾಡುಗಳು  ಜನಪ್ರಿಯವಾಗಿ ಚಲಾವಣೆಯಲ್ಲಿರುವುದು ಅಪರೂಪದ ವಿದ್ಯಮಾನವೇ ಆಗಿತ್ತು. ಹಿಂದಿ, ಕನ್ನಡ, ತಮಿಳು, ತೆಲುಗು ಎಲ್ಲ ಭಾಷೆಗಳಿಗೂ ಈ ಮಾತು ಅನ್ವಯಿಸುತ್ತದೆ. 1964ರಲ್ಲಿ ಬಿಡುಗಡೆಯಾದ ರಾಜನ್ ನಾಗೇಂದ್ರ ಅವರ ಸಂಗೀತವಿದ್ದ ನವಜೀವನ ಚಿತ್ರ ಈ ಸಾಲಿಗೆ ಸೇರುತ್ತದೆ. ಈ ಚಿತ್ರದ ಎಲ್ಲ ಹಾಡುಗಳು ಏಕಪ್ರಕಾರವಾಗಿ ಜನಪ್ರಿಯಗೊಂಡು ಇಂದಿಗೂ ಆಸಕ್ತಿಯಿಂದ ಆಲಿಸಲ್ಪಡುತ್ತಿವೆ.  ತಾರೆ ಹರಿಣಿಯ ಸಹೋದರರಾದ ವಾದಿರಾಜ್-ಜವಾಹರ್ ತಮ್ಮ ‘ಭಾರತಿ ಚಿತ್ರ’ ಲಾಂಛನದಲ್ಲಿ ತಯಾರಿಸಿದ ಎರಡನೆ ಚಿತ್ರ ಇದು. ಮೊದಲನೆ ಚಿತ್ರ ನಂದಾದೀಪಕ್ಕೆ ಎಂ. ವೆಂಕಟರಾಜು ಅವರ ಸಂಗೀತವಿತ್ತು. ಅವರು ಚಿತ್ರದ ಬಜೆಟ್ ಲೆಕ್ಕಿಸದೆ ದೊಡ್ಡ ಆರ್ಕೆಸ್ಟ್ರಾ ಬೇಕೆಂದು ಪಟ್ಟು ಹಿಡಿದುದರಿಂದ ರಾಜನ್ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಯಿತು ಎಂದು ವಾದಿರಾಜ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ಕಮ್ಮಿ ವಾದ್ಯಗಳನ್ನು ಬಳಸಿಯೂ ಉತ್ತಮ ಸಂಗೀತ ಸಂಯೋಜನೆ ಮಾಡಬಹುದು ಎಂದು ರಾಜನ್ ನಾಗೇಂದ್ರ ಸಾಧಿಸಿ ತೋರಿಸಿದರು.

ಒಬ್ಬ ಹೀರೊ, ಒಬ್ಬಳು ಹೀರೊಯಿನ್, ಮರಸುತ್ತುವ ಹಾಡುಗಳ ಜನಪ್ರಿಯ ಫಾರ್ಮುಲಾಗೆ ಹೊರತಾದ ನಿರೂಪಣೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದವರು ಪ್ರಸಿದ್ಧ ಸಂಕಲನಕಾರರಾಗಿದ್ದ ಪಿ.ಎಸ್. ಮೂರ್ತಿ.  ಸೋರಟ್ ಅಶ್ವತ್ಥ್ ಅವರ ಸಂಭಾಷಣೆ ಮತ್ತು ಹಾಡುಗಳಿದ್ದು ಕೆ.ಎಸ್. ಅಶ್ವತ್ಥ್, ಆರ್.ಎನ್. ಸುದರ್ಶನ್, ನರಸಿಂಹರಾಜು, ವಾದಿರಾಜ್, ರತ್ನಾಕರ್, ಹೆಚ್.ಆರ್. ಕೃಷ್ಣ ಶಾಸ್ತ್ರಿ,  ಪಂಢರಿಬಾಯಿ,  ರೇವತಿ, ಚಿಂದೋಡಿ ಲೀಲಾ ಹಾಗೂ ರಂಗಭೂಮಿ ಹಿನ್ನೆಲೆಯ ಇತರರ ತಾರಾಗಣವಿತ್ತು.  ತನ್ನ ಸಹೋದರರ ಚಿತ್ರವೇ ಆದರೂ ಹರಿಣಿ ಇದರಲ್ಲಿ ಕೆಲವೇ ಕ್ಷಣಗಳು ಕಾಣಿಸುವ ಗೆಸ್ಟ್ ಆರ್ಟಿಸ್ಟ್  ಆಗಿದ್ದದ್ದು ವಿಶೇಷ.

ಒಂದು ಹಳ್ಳಿಯೂರಿನಿಂದ ಶಿವಮೊಗ್ಗಕ್ಕೆ ಹೋಗುವ ಕೊನೆಯ ಬಸ್ಸು ತಪ್ಪಿದುದರಿಂದ ಮಮ್ಮದು ಎಂಬವನ ವ್ಯಾನಿನಲ್ಲಿ ಪಯಣಿಸುತ್ತಿರುವ  ಪರಸ್ಪರ ಮರಿಚಯವಿಲ್ಲದ ಅಂತೋಣಿ ಎಂಬ ನಿವೃತ್ತ ಸರಕಾರಿ ನೌಕರ,  ಬಾಲಕೃಷ್ಣಯ್ಯ ಮತ್ತು ಭಾಮಾ ಎಂಬ ನವದಂಪತಿ,  ಶ್ಯಾಮಲಾ ಎಂಬ ಮಧ್ಯವಯಸ್ಸಿನ ಡಾಕ್ಟರ್, ಗೋವಿಂದಯ್ಯ ಎಂಬ ಲೇಖಕ, ರಾಜ ಎಂಬ ರಂಗಭೂಮಿ ನಟ,  ಮನೆಯಿಂದ ಓಡಿ ಬಂದ ಮಾಲತಿ ಎಂಬ ನವಯುವತಿ ಹಾಗೂ ಆ ವ್ಯಾನನ್ನು ಬೈಕಿನಲ್ಲಿ ಹಿಂಬಾಲಿಸುವ  ಶ್ರೀಧರ್ ಎಂಬ ಯುವಕ ಭೀಕರ ಮಳೆಯ ಕಾರಣ  ದಟ್ಟ ಕಾನನ ಮಧ್ಯದ ಒಂದು ಟ್ರವೆಲರ್ಸ್ ಬಂಗಲೆಯಲ್ಲಿ ತಂಗಬೇಕಾಗುತ್ತದೆ. ಆರಂಭ ಮತ್ತು ಕೆಲವು ಫ್ಲಾಷ್ ಬ್ಯಾಕ್‌ಗಳನ್ನು ಹೊರತು ಪಡಿಸಿದರೆ ಸಂಪೂರ್ಣ ಚಿತ್ರ  ಆ ಬಂಗಲೆಯಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಹಿಂದಿಯ ಗುಮ್‌ನಾಮ್ ಕೂಡ ಕೆಲವು ಆಯ್ದ ಜನರನ್ನು ಒಂದು ಬಂಗಲೆಯಲ್ಲಿ ಸೇರುವಂತೆ ಮಾಡಿ ಚಿತ್ರಿಸಲಾದ ಸಿನಿಮಾ.  ಆದರೆ ಇವೆರಡು ಚಿತ್ರಗಳಲ್ಲಿ ಬೇರೆ ಯಾವ ಸಮಾನತೆಯೂ ಇಲ್ಲ.

ಚಿತ್ರದ ಮೊದಲ ಹಾಡು ವೈಶಿಷ್ಟ್ಯಪೂರ್ಣವಾದುದು.  ಗೋವಿಂದಯ್ಯನ ಪ್ರಾರ್ಥನೆ ರೂಪದಲ್ಲಿ ಭಗವದ್ಗೀತೆಯ 7ನೇ ಅಧ್ಯಾದ 21ನೇ ಶ್ಲೋಕ, ಮಮ್ಮದುವಿನ ನಮಾಜ್ ಹಿನ್ನೆಲೆಯಾಗಿ ಮಸೀದಿಯ ಅಜಾನ್ ಮತ್ತು ಅಂತೋಣಿಗಾಗಿ ಚರ್ಚಿನ ಪ್ರಾರ್ಥನೆಯ ವಾಕ್ಯಗಳನ್ನೊಳಗೊಂಡ ಇದನ್ನು ನಿಜ ಅರ್ಥದಲ್ಲಿ ಹಾಡೆಂದು ಹೇಳಲಾಗದು. ವ್ಯಾಟಿಕನ್ ಉಚ್ಚಾರದ ಮೂರನೆಯ ಚರ್ಚ್ ಭಾಗದಲ್ಲೂ ಪಿ.ಬಿ.ಶ್ರೀನಿವಾಸ್ ಅವರದ್ದೇ ಧ್ವನಿಯಿರುವುದು ಎಂದು ಬಹಳ ಸಮಯ ನನಗೆ ಗೊತ್ತೇ ಆಗಿರಲಿಲ್ಲ.



ಯೋಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ॥

ಅಲ್ಲಾಹು ಅಕ್ಬರ್  ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್  ಅಲ್ಲಾಹು ಅಕ್ಬರ್
ಅಶ್ಶದು ಅಲ್ಲಾ ಇಲಾಹ ಇಲ್ಲಲ್ಲಾಹ
ಅಶ್ಶದು ಅನ್ನ  ಮುಹಮ್ಮದರ್ ರಸೂಲುಲ್ಲಾಹ
ಹಯ್ಯಾ ಅಲಸ್ ಸಲಾಹ
ಹಯ್ಯಾ ಅಲಲ್ ಫಲಾಹ
ಅಸ್ಸಲಾತು ಖಯ್ರುಂ ಮಿನನ್ ನೋಮ್
ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್
ಲಾ ಇಲಾಹ ಇಲ್ಲಲ್ಲಾಹ

Our father
Who art in heaven
Hallowed be thy name
Thy kingdom com
Thy will be done on earth as it is in heaven
Give us this day our daily bread
And forgive us our trespasses
As we forgive them their trespasses against us
And lead us not into temptation
But deliver us from evil
For thine is the kingdom
The power and the glory
Forever and ever
Amen


ಇದು ಮುಗಿದ ಮರುಕ್ಷಣವೇ ಡಾಕ್ಟರ್ ಶ್ಯಾಮಲಾ ಉಗಾಭೋಗ ರೂಪದಲ್ಲಿ ಬಸವಣ್ಣನವರ ವಚನ ಹಾಗೂ ಲೀಲಾಮಯ ಹೇ ದೇವ ಎಂಬ ಹಾಡನ್ನು ಪಿ.ಸುಶೀಲಾ ಧ್ವನಿಯಲ್ಲಿ ಭಗವಂತನನ್ನು ಪ್ರಾರ್ಥಿಸುತ್ತಾರೆ.  ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ ಚಿತ್ರದಲ್ಲಿ ಹಮ್ ಭೀ ಹೈಂ ತುಮ್ ಭೀ ಹೋ ಮತ್ತು ಹೋಟೊಂಪೆ ಸಚ್ಚಾಯಿ ರಹತೀ ಹೈ ಹಾಗೂ ಬಾಬ್ಬಿ ಚಿತ್ರದಲ್ಲಿ ನ ಮಾಂಗೂಂ ಸೋನಾ ಚಾಂದಿ ಮತ್ತು ಝೂಟ್ ಬೋಲೆ ಕವ್ವಾ ಕಾಟೇ ಬೆನ್ನುಬೆನ್ನಿಗೆ  ಬಂದು ಒಂದೇ ಹಾಡಿನ ಎರಡು ಭಾಗಗಳೋ ಅಥವಾ ಎರಡು ಸ್ವತಂತ್ರ ಹಾಡುಗಳೋ ಎಂಬ ಜಿಜ್ಞಾಸೆ ಇರುವಂತೆಯೇ ಇಲ್ಲೂ ಇದೆ. ಈ ಹಾಡಲ್ಲಿ ಯಾವುದೇ ನಿರ್ದಿಷ್ಟ ದೇವರ ಉಲ್ಲೇಖ ಇಲ್ಲದಿರುವುದರಿಂದ  ಕನಕದಾಸರ ದೀನ ನಾನು ಸಮಸ್ತ ಲೋಕಕೆ ದಾನಿ ನೀನು ಉಗಾಭೋಗದಂತೆ ಇದೂ ಎಲ್ಲೂ ಸಲ್ಲುವ ಪ್ರಾರ್ಥನೆ. ಪಂತುವರಾಳಿ ರಾಗವನ್ನು ಹೋಲುತ್ತದೆ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಅಳವಡಿಸಲಾಗಿದ್ದ ತನು ಕರಗದವರಲ್ಲಿ ವಚನದಿಂದ ಸ್ಪೂರ್ತಿ ಪಡೆದಿರಬಹುದು.



ದಯೆಯಿಲ್ಲದ ಧರ್ಮವು ಆವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಮ ದೇವಾ

ಲೀಲಾಮಯ ಹೇ ದೇವ
ನೀ ತೋರು ದಯಾ ಭಾವ
ಗುರಿ ಕಾಣದಿದೆ ಜೀವ
ನೆರವಾಗೆಲೊ ದೇವ

ಸರಿದಾರಿ ಜಗದೆ ಕಾಣದಿಂತು ಪಯಣ ಸಾಗಿದೆ
ಸುಖ ಶೋಕ ಪಥದೆ ಬಾಳ ಜಾತ್ರೆ ಬರಿದೆ ಕೂಡಿದೆ
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೆ

ಕುರುಡಂಗೆ ನಿರತ ಊರುಗೋಲೆ ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ ನೀನೆ ಆಗಿರೆ
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ


ಮುಂದಿನದು ಓಡಿ ಬಂದ ಯುವತಿ ಮಾಲತಿ ಫ್ಲಾಶ್ ಬ್ಯಾಕಿನಲ್ಲಿ ತನ್ನ ಇನಿಯ ಮಾಧವನೊಡನೆ ಹಾಡುವ ಪಿ.ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ ಧ್ವನಿಯಲ್ಲಿರುವ ಯುಗಳ ಗೀತೆ.  ಸಾಕು ಮಗಳು ಚಿತ್ರದ ಒಂದೇ ಒಂದು ಹೊಸ ಹಾಡು ಗೀತೆಯನ್ನು ಸ್ವಲ್ಪ ಹೋಲುವ ಇದರಲ್ಲಿ ಶಂಕರ್ ಜೈಕಿಶನ್ ಅವರ ಸಹಾಯಕರಾಗಿದ್ದು ಸ್ವತಂತ್ರವಾಗಿಯೂ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ ದತ್ತಾರಾಂ ಅವರು ಪ್ರಚುರಪಡಿಸಿದ ‘ದತ್ತು ಢೋಲಕ್ ಠೇಕಾ’ ಇದೆ. ಸೋರಟ್ ಅಶ್ವತ್ಥ್ ಅವರು ಆದಿ ಪ್ರಾಸ ಅಂತ್ಯ ಪ್ರಾಸ ಎರಡನ್ನೂ ಬಳಸಿದ್ದಾರೆ.



ಇದೇ ಇದೇ ಸವಿಬಾಳ ದಿನ
ಕಾದು ಕಂಡಿತೆ ಮಧುರ ಮನ
ಮೈ ಮರೆಸುವ ಮನ ತಣಿಸುವ
ಪ್ರೇಮ ಮಿಲನದ ದಿನ

ಅನುರಾಗದ ಬಾಳಿನ ಗಾನ
ನೆರೆ ಹೊಮ್ಮಿ ಹಾಡೆ ಮನವೀಣಾ
ನವಜೀವನ ತುಂಬಿದ ಪ್ರಾಣ
ನವ ಪ್ರೇಮವಿಂದೆ ಪರಿಪೂರ್ಣ
ನಾವಾಡಿ ಪಾಡಿ ಮನಸಾರೆ ನೋಡುವ
ಸದಾನಲಿವ ಸದನ ಆಹಾ

ಒಲವೊಂದಿರೆ ನಮ್ಮಯ ಮುಂದೆ
ತನು ಮೆರೆವ ಒಡವೆ ತೃಣವೆಂಬೆ
ಮನ ಹೊಂದಿರೆ ಸ್ವರ್ಗವು ನಮದೆ
ಬಡತನವು ಸಿರಿಯು ಸಮವೆಂದೆ
ನಾವಿಂದು ಸೇರಿ ನಲವಿಂದ ತೇಲುವ
ಸುಧೆ ಸವಿವ ಸುದಿನ ಆಹಾ


ಆ ಮೇಲೆ ಬರುವುದು ನವವಿವಾಹಿತ ಬಾಲಕೃಷ್ಣಯ್ಯ ಕೋಪಿಸಿಕೊಂಡ ತನ್ನ ಹೊಸ ಹೆಂಡತಿ ಭಾಮಾಳನ್ನು  ಸಮಾಧಾನಪಡಿಸಲೆತ್ನಿಸುವ ನಾಗೇಂದ್ರ ಮತ್ತು ಎಲ್.ಆರ್. ಈಶ್ವರಿ ಅವರ ಧ್ವನಿಯಲ್ಲಿರುವ ಡ್ಯುಯೆಟ್.  ಬಾಲಕೃಷ್ಣಯ್ಯ ಮತ್ತು ಭಾಮಾ  ಯಾವಾಗಲೂ ಶುದ್ಧ ಕನ್ನಡದಲ್ಲೇ ಮಾತುಕತೆ ಆಡುವುದಾದರೂ ಈ ಹಾಡಲ್ಲಿ ಅಲ್ಲಲ್ಲಿ ಇಂಗ್ಲಿಷ್ ಪದಗಳಿವೆ!   ನಾಗೇಂದ್ರ ಹಾಡಿದ ಪಲ್ಲವಿ ಮುಗಿದ ಮೇಲೆ ಎಲ್.ಆರ್. ಈಶ್ವರಿ ಅವರ ಪ್ರವೇಶ ನೇರವಾಗಿ ಚರಣದಲ್ಲಿ ಆಗುವುದು ಒಂದು ಅಸಾಮಾನ್ಯ ಅಂಶ. ರತ್ನಮಂಜರಿ ಚಿತ್ರದ ಯಾರು ಯಾರು ನೀ ಯಾರು ಹಾಡಿನ ಪ್ರಭಾವ ಇದರ ಮೇಲಿದೆ.  ನರಸಿಂಹರಾಜು ಮತ್ತು ಚಿಂದೋಡಿ ಲೀಲಾ ಅವರ ಈ ಪಾತ್ರಗಳಿಗೆ ಕಥೆಯಲ್ಲಿ ಯಾವ ಪಾತ್ರವೂ ಇಲ್ಲ.!  ರತ್ನಾಕರ್ ಅಭಿನಯಿಸಿದ ಕಥೆಗಾರನ ಪಾತ್ರ ಮತ್ತು ವಾದಿರಾಜ್ ಅವರ ರಂಗಭೂಮಿ ಕಲಾವಿದನ ಪಾತ್ರಗಳು ಕೂಡ  ಕಥೆಗೆ ನೇರ ಸಂಬಂಧವಿರದೆ  ಮನರಂಜನೆಗಾಗಿಯಷ್ಟೇ ಇರುವಂಥವು.



ಭಾಮಾ ಭಾಮಾ
ನಾನರಿಯೆ ಮನದ ಮರ್ಮ
ಬಿಗುಮಾನ ಬಿಡು ಚಿನ್ನ
ನೀ ನಗುತಿರೆ ಬಲು ಚೆನ್ನ

ಈ ಥಳಕು ಮಾತುಬೇಕಿಲ್ಲ
ನಾ ಬಲ್ಲೆ ನಿಮ್ಮ ಜೋಕೆಲ್ಲ
ನನ ದಾರಿ ಬೇರೆ ನಿಮ್ಮ ದಾರಿ ಬೇರೆ
ಈ ಸಂಸಾರ ಸುಖವಿಲ್ಲ
ಹಾಗೆನ್ನಬೇಡವೇ
heart failure ಆಗುತೇ
ಹಾಗೆನ್ನಬೇಡ ನಾ ಬದುಕಲಾರೆನೇ
wife ಇಲ್ದೆ life ಇಲ್ಲ

ಅಯ್ಯೋ ರಾಮಾ
ಇದು ಏನು ಬಂತು ಖರ್ಮ
ಹೆಣಗಾಟದೀ ಜನ್ಮ ಏಕೆ
ಕೊಟ್ಟನೊ ಆ ಬ್ರಹ್ಮ

ಕೋಮಲೆ ಕೇಳೆ ಮಾತನ್ನ
ಕೋಪಕ್ಕೆ ಹಾಕೆ ಬ್ರೇಕನ್ನ
ಸಾಕಿನ್ನು ಫೈಟು ನಿನ್ನ ಮಾತೆ ರೈಟು
ಮನ ಒಂದಾದ್ರೆ ಸುಖ ಉಂಟು
ಅಂದಂತೆ ನಡೆವಿರಾ
ಆಲ್ ರೈಟು ಮೈ ಡಿಯರ್
ಅಂದಂತೆ ನಡೆದು ಆನಂದ ತಳೆದು
ನಾವೆಂದೆಂದು ಬಾಳೋಣ

ಭಾಮಾ ಭಾಮಾ
ಈಗರಿತೆ ಮನದ ಮರ್ಮ
ಬಿಗುಮಾನ ಬಿಡು ಚಿನ್ನ ನೀ
ನಗುತಿರೆ ಬಲು ಚೆನ್ನ


ಬಂಗಲೆಯಲ್ಲಿ ವಾಸ್ತವ್ಯದ ವೇಳೆ ನಡೆಯುವ ಕೆಲವು ಘಟನೆಗಳಿಂದ ಮಾಲತಿ ತನ್ನ ಮಗಳು ಎಂದು ಡಾಕ್ಟರ್ ಶ್ಯಾಮಲಾಗೆ ಗೊತ್ತಾಗುತ್ತದೆ.  ಸಲ್ಲದ ಅಪವಾದ ಹೊತ್ತು ಪತಿಯಿಂದ ಪರಿತ್ಯಕ್ತಳಾಗುವ ಮುನ್ನ ತನ್ನ ಪುಟ್ಟ ಮಗಳಿಗಾಗಿ ಹಾಡಿದ್ದ  ಜೋಗುಳವೊಂದು ಆಕೆಗೆ ನೆನಪಾಗುತ್ತದೆ. ಪ್ರತಿ ಸಾಲಲ್ಲೂ  ಮಾರ್ಮಿಕ ಮಾರ್ಮಿಕ ಸಾಹಿತ್ಯ ಹೊಂದಿರುವ ಈ ಹಾಡಿನಲ್ಲಿ  ಸಂಗೀತದ ಸ್ವರ ಲಹರಿಗಳ ಮೂಲಕ ರಾತ್ರೆಯ ನೀರವತೆಯನ್ನು ಹೇಗೆ ಸೃಷ್ಟಿಸಬಹುದೆಂದು ರಾಜನ್ ನಾಗೇಂದ್ರ  ತೋರಿಸಿಕೊಟ್ಟಿದ್ದಾರೆ.  ಇದೇ ಮಧ್ಯಮಾವತಿ ರಾಗ ಮತ್ತು ಇದೇ ತಂತ್ರವನ್ನುಪಯೋಗಿಸಿ  ಈ ಸಂಸ್ಥೆಯ ಮುಂದಿನ ಚಿತ್ರ  ನಾಂದಿಯಲ್ಲಿ ವಿಜಯಭಾಸ್ಕರ್ ಹಾಡೊಂದು ಹಾಡುವೆ  ಹಾಡು ಸೃಷ್ಟಿಸಿದರು. ಮುಂದೆ ಇದೇ ಶೈಲಿಯಲ್ಲಿ ಬ್ರಹ್ಮಚಾರಿ ಚಿತ್ರದ ಮೈ ಗಾವೂಂ ತುಮ್ ಸೋ ಜಾವೋ ಹಾಡು ಬಂತು. ಈ ಹಾಡಿನ ಆರಂಭದಲ್ಲಿ ಬರುವ ಹಿನ್ನೆಲೆ ಸಂಗೀತದ ತುಣುಕೊಂದು ಪ್ಯಾಸಾ ಚಿತ್ರದ ಜಿನ್ಹೆ ನಾಜ್ ಹೈ ಹಿಂದ್ ಪರ್ ವೊ ಕಹಾಂ ಹೈಂ ಮತ್ತು ಸುಜಾತಾ ಚಿತ್ರದ ಜಲ್ತೆ ಹೈಂ ಜಿಸ್ ಕೆ ಲಿಯೆ ಹಾಡಿನಲ್ಲಿ ಎಸ್.ಡಿ.ಬರ್ಮನ್ ಬಳಸಿದ ತುಣುಕನ್ನು ನೆನಪಿಸುತ್ತದೆ.






ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆ
ಜೋ ಜೋ

ಹೂವಂಥ ಚೆಲುವೇ ಹಾಲಂಥ ಮನವೇ
ತಾಯಾಸೆ ಒಲವೆಲ್ಲ ಏಕೆಂದೆ
ನನ ನೋಡಿ ನಗುವೆ ನೆನೆದೇನು ಅಳುವೆ
ಈ ನೋಟ ಸಂಕೇತ ಏನೆಂದೆ
ಹೇಳೆ ಕಂದ ಬಾಳಿಗಂದ
ನಗು ಮುಂದೆ ಅಳು ಹಿಂದೆ ನೀನೆಂಬೆಯಾ

ಅನುವಾಗಿ ಬರುವ ನಿನಗಾದ ದಿನವ
ಈ ತಾಯ ಮಡಿಲಲ್ಲಿ ನೀ ನೋಡೆ
ಮಗುವಾಗಿ ಇರುವೆ ತಾಯಾಗಿ ಮೆರೆವೆ
ನನ್ನಂತೆ ಈ ಹಾಡ ನೀ ಹಾಡೆ
ಕಾದು ನಿಂದ ನಾಳಿಗಂದ
ನಿನಗಾಗಿ ಗೆಲುವಿಂದ ಕೈ ನೀಡಿದೆ


ಕಾಡಿನ ಮಧ್ಯೆ ಸಿಲುಕಿಕೊಂಡು ಬಂಗಲೆಯಲ್ಲಿ  ಸಿಲುಕಿಕೊಂಡಿದ್ದವರಿಗೆ ದೇವರಂತೆ ಸಮಯಕ್ಕೊದಗಿದವರು ಆ ಹಳ್ಳಿಯ ಸಾಹುಕಾರ ಹೊಂಬಾಳಯ್ಯ.  ಮಾಲತಿ ವೀಣೆ ನುಡಿಸಬಲ್ಲಳೆಂದು ತಿಳಿದ ಅವರು ತನ್ನ ಮನೆಯಲ್ಲಿದ್ದ ವೀಣೆಯನ್ನು ಹೊರಿಸಿಕೊಂಡು ಬಂಗಲೆಗೆ ಬರುತ್ತಾರೆ.  ಮಾಲತಿ ವೀಣೆ ನುಡಿಸುತ್ತಾ ತನ್ನಿಂದ ದೂರಾದ ಪ್ರಿಯಕರ ಮಾಧವನಿಗೆ ಪ್ರಿಯವಾದ   ಕರೆಯೇ ಕೋಗಿಲೆ ಮಾಧವನ ಹಾಡನ್ನು ಎಸ್. ಜಾನಕಿ ಧ್ವನಿಯಲ್ಲಿ ಹಾಡುತ್ತಾಳೆ.  ದರ್ಬಾರಿ ಕಾನಡಾ ರಾಗಾಧಾರಿತ ಈ ಹಾಡಿನಲ್ಲಿ ವೀಣೆಯನ್ನು ಅದ್ಭುತವಾಗಿ ನುಡಿಸಿದ ವಿದ್ವಾಂಸ ಯಾರೆಂದು ತಿಳಿದಿಲ್ಲ.



ಕರೆಯೆ ಕೋಗಿಲೆ ಮಾಧವನ
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ
ಕರೆಯೆ ಕೋಗಿಲೆ ಮಾಧವನ

ಈ ಅನುರಾಗದ ಕರೆಯನು ತಿಳಿಸೆ
ವೀಣೆಯ ನಾದಕೆ ನೀ ದನಿ ಬೆರೆಸೆ
ಹಾಡೇ ಪಾಡೇ ಒಲವಿರಿಸೇ
ವಿರಹಿ ರಾಧೆಯ ಮನ ತಣಿಸೇ

ಮುನಿದಿಹನೇನೆ ನೀ ಹೇಳೆ
ಮನಸಿನ ಚಿಂತೆ ನಾ ತಾಳೆ
ಏಕೋ ಏನೋ ಭಯವಿಂದೆ
ಇನಿಯನ ಕಾಣದೆ ನಾ ನೊಂದೆ


ಈ ಚಿತ್ರದ ಆರಂಭದಲ್ಲಿ ಸ್ಟ್ರೀಟ್ ಸಿಂಗರ್‌ ಒಬ್ಬ ನಮ್ಮೂರೆ ಚಂದ  ನಮ್ಮೋರೆ ಅಂದ ಹಾಡಿನ ಸಾಲನ್ನು ಹಾರ್ಮೋನಿಯಂನಲ್ಲಿ ನುಡಿಸಿ  ಎಕ್ ಪರ್‌ದೇಸಿ ಮೇರಾ ದಿಲ್ ಲೇಗಯಾ ಧಾಟಿಯಲ್ಲಿ  ವಾರೆ ನೋಟ ನೋಡಿ ಮಳ್ಳ ಮಾಡಿದನವ್ವ ಎಂದು ಹಾಡುವ   ತುಣುಕೊಂದಿದೆ.  ವಾಸ್ತವವಾಗಿ ಹಿಂದಿಯ ಪ್ರಸಿದ್ಧ ಗಾಯಕಿಯಾಗಿದ್ದ ಅಮೀರ್ ಬಾಯಿ ಕರ್ನಾಟಕಿ ಅವರ ಧ್ವನಿಯಲ್ಲಿ ಈ ಹಾಡಿನ ಧ್ವನಿಮುದ್ರಿಕೆ ತಯಾರಾಗಿತ್ತು. ಚಿತ್ರದಲ್ಲಿರುವ ಭಾಗ ಮತ್ತು  ಅಮೀರ್ ಬಾಯಿ ಅವರ ರೆಕಾರ್ಡ್ ಎರಡನ್ನೂ ಇಲ್ಲಿ ಆಲಿಸಬಹುದು.






ಅಂತರ್ಜಾಲದಲ್ಲಿ ಲಭ್ಯವಿರುವ  ವಿಭಿನ್ನ ಶೈಲಿಯ ಈ ಚಿತ್ರವನ್ನು ಸಮಯವಿದ್ದಾಗ ಅಗತ್ಯವಾಗಿ ನೋಡಿ ಆನಂದಿಸಿ. ‘ನವಜೀವನ’ ಎಡದಿಂದಲೂ ಬಲದಿಂದಲೂ ಓದಬಹುದಾದ ಗತಪ್ರತ್ಯಾಗತ ಪದ (palindrome). ಈ ರೀತಿ ಗತಪ್ರತ್ಯಾಗತ ಪದ ಶೀರ್ಷಿಕೆಯಾಗುಳ್ಳ ಬೇರೆ ಯಾವುದಾದರೂ ಸಿನಿಮಾ ಗೊತ್ತಿದ್ದರೆ ತಿಳಿಸಿ.