Tuesday, 23 June 2020

ಮಕ್ಕಳಾಟದ ಮೂದಲಹಾಡಿಂದ ನೆನಪಾದ ಮಾವನ ಮಗಳು

ಮೂದಲಹಾಡು ಎಂಬ ಪದ ಬಹುಶಃ ಶಬ್ದಕೋಶದಲ್ಲಿ ಹುಡುಕಿದರೆ ಸಿಗಲಾರದು. ಮದುವೆ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು ಪರಸ್ಪರರನ್ನು ಮೂದಲಿಸುತ್ತಾ ಹಾಡುವುದನ್ನು   ಮಂಗನ ಮೋರೆಯ ಮುದಿ ಮೂಸಂಗಿ  ಎಂಬ  ಮಲ್ಲಿ ಮದುವೆ  ಚಿತ್ರದ ಅಂಥದೇ ಹಾಡಲ್ಲಿ ಮೂದಲಹಾಡು ಎಂದು ಹೆಸರಿಸಿದವರು  ಕು.ರ.ಸೀತಾರಾಮ ಶಾಸ್ತ್ರಿ. ಇದಕ್ಕೆ ಸಮೀಪವಾದ ಮೂದಲೆವಾತು ಎಂಬ ಪದ ಕಿಟ್ಟೆಲ್ ಶಬ್ದಕೋಶದಲ್ಲಿದೆ.  ಮಲ್ಲಿ ಮದುವೆಯ  ಮಂಗನ ಮೋರೆ  ಹಾಡನ್ನು ನಾನು ‘ಆಡೋಣ ಬಾಬಾ ಗೋಪಾಲಾ’ಕ್ಕಿಂತಲೂ  ಹೆಚ್ಚು ಇಷ್ಟಪಡುತ್ತಿದ್ದೆ. ಇದಕ್ಕೆ ಕಾರಣ ನಾಲ್ಕನೇ ಕಾಲದ ತಬ್ಲಾ ನುಡಿತದೊಂದಿಗಿನ ಅದರ ವೇಗದ ನಡೆ ಮತ್ತು ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ ಮುಂತಾದ ಪ್ರಾಸಬದ್ಧ ಪದಗಳು. ಇದನ್ನು ಬರೆದವರು ಕು.ರ.ಸೀ. ಆದರೂ ಇದನ್ನು ಕೇಳುವಾಗೆಲ್ಲ ನನಗೇಕೋ ಆರ್. ಎನ್. ಜಯ‘ಗೋಪಾಲ್ ’ ಮತ್ತು ಆ ಮೂಲಕ ಬಿಳಿಯ ಟೊಪ್ಪಿ ಧರಿಸಿ ತಲೆ ಅಲ್ಲಾಡಿಸುತ್ತಾ ಹಾಡಿಗೆ ತಬ್ಲಾ ನುಡಿಸುವವರು ಕಣ್ಣ ಮುಂದೆ ಬರುತ್ತಿದ್ದರು. ತಲೆಗೆ ಬಿಳಿ ಟೊಪ್ಪಿ ಧರಿಸುತ್ತಿದ್ದ ಉಜಿರೆ ಹೈಸ್ಕೂಲಿನ ‘ಗೋಪಾಲ’ ಮಾಸ್ಟ್ರು ಮತ್ತು ನಾನು ಕಾರ್ಕಳ ಜೈಹಿಂದ್ ಟಾಕೀಸಿನಲ್ಲಿ ನೋಡಿದ್ದ ಬರಸಾತ್ ಕೀ ರಾತ್ ಚಿತ್ರದ ಕವ್ವಾಲಿಗಳಲ್ಲಿ ತಲೆ ಅಲ್ಲಾಡಿಸುತ್ತಾ ತಬ್ಲಾ ನುಡಿಸುತ್ತಿದ್ದವರ ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದುದು ಈ ವಿಚಿತ್ರ ಲಿಂಕಿಗೆ ಕಾರಣ! ಆದರೆ ನಾನಿಲ್ಲಿ ಹೇಳ ಹೊರಟದ್ದು ಮಂಗನ ಮೋರೆ ಹಾಡಿನ ಬಗೆಗಲ್ಲ. ಅಂಥದ್ದೇ ಇನ್ನೊಂದು ಮೂದಲಹಾಡಿನ ಬಗ್ಗೆ.

ಶಾರ್ಟ್ ವೇವ್ ವಿವಿಧಭಾರತಿಯಲ್ಲಿ ಸಂಜೆ ನಾಲ್ಕೂವರೆಯ ನಂತರ ಹಿಂದಿ ಅನೌಂಸ್‌ಮೆಂಟಿನೊಂದಿಗೆ ಪ್ರಸಾರವಾಗುತ್ತಿದ್ದ ದಕ್ಷಿಣ ಭಾರತೀಯ ಭಾಷೆಗಳ ಹಾಡುಗಳಿಗೆ ಮೀಸಲಾದ ಮಧುರಗೀತಂ ಕಾರ್ಯಕ್ರಮದ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಹೇಳಿದ್ದೇನೆ.  ಬೆಳಗ್ಗೆ ಮತ್ತು ರಾತ್ರಿ ಮಾತ್ರ ಕೇಳಿಸುತ್ತಿದ್ದ ಬೆಂಗಳೂರು ಮತ್ತು ಧಾರವಾಡ ಮೀಡಿಯಂ ವೇವ್ ನಿಲಯಗಳಿಂದ ಸೀಮಿತ ಸಂಖ್ಯೆಯ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದುದರಿಂದ ಬಹುತೇಕ ಕನ್ನಡ ಹಾಡುಗಳ ಪರಿಚಯ ನಮಗಾಗುತ್ತಿದ್ದುದು ಈ ಮಧುರಗೀತಂ ಕಾರ್ಯಕ್ರಮದ ಮೂಲಕವೇ.  ಆ ಹೊತ್ತಿಗೆ ಮನೆಯಲ್ಲಿ ಕಾಫಿ ಬೀಜವನ್ನೋ ಇತರ ಮಸಾಲೆಗಳನ್ನೋ ಹುರಿಯುವ ಸಮಯವೂ ಆಗಿರುತ್ತಿದ್ದುದರಿಂದ ಈ ಕಾರ್ಯಕ್ರಮದ ನೆನಪಿನೊಂದಿಗೆ ಆ ಘಮವೂ ಸಮ್ಮಿಳಿತವಾಗಿ ಬಿಟ್ಟಿದೆ. ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದ ಕಾಲದಲ್ಲಿ   ಮಲ್ಲಿಗೆ ಅರಳಿಗೆ ಮುತ್ತಿನ ಚೆಂಡಿಗೆ  ಎಂಬ  ಮಕ್ಕಳು ಹಾಡಿದ ಹಾಡೊಂದು ಅದರಲ್ಲಿ ಪ್ರಸಾರವಾಗುತ್ತಿದ್ದು ಅದು  ಪತಿಯೇ ದೈವ  ಚಿತ್ರದ್ದೆಂದು ನನ್ನ ಮನದಲ್ಲಿ ದಾಖಲಾಗಿ ಹೋಗಿತ್ತು. ಬೇರೆ ನಿಲಯಗಳಿಂದ ಅದನ್ನು ನಾನು ಕೇಳಿದ್ದೇ ಇಲ್ಲ.   ಇತ್ತೀಚೆಗೆ  ಪತಿಯೇ ದೈವ  ಚಿತ್ರದ ಲೇಖನಕ್ಕಾಗಿ ಆ ಹಾಡೊಂದು ಎಲ್ಲಿ ಹುಡುಕಿದರೂ ಸಿಗಲಿಲ್ಲ. ಅನೇಕ ಸಮಾನ ಮನಸ್ಕ ಸ್ನೇಹಿತರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ.  ಇತ್ತೀಚೆಗೆ ಇನ್ಯಾವುದೋ ಉದ್ದೇಶಕ್ಕಾಗಿ ಅಂತರ್ಜಾಲವನ್ನು ಜಾಲಾಡುತ್ತಿದ್ದಾಗ ‘ಮಲ್ಲಿಗೆ ಅರಳಿಗೆ’ ಎಂಬ ಸಾಲೊಂದು ಕಣ್ಣಿಗೆ ಬಿದ್ದಾಗ ಪರಮಾಶ್ಚರ್ಯವಾಯಿತು.  ನೋಡಿದರೆ ಅದು  ಮಾವನ ಮಗಳು  ಚಿತ್ರದ ಹಾಡಾಗಿತ್ತು!  ಅಂದರೆ ಇದುವರೆಗೆ ನಾನು ಮಾಡಿದ್ದು ‘ಇದ್ದದ್ದೆಲ್ಲೋ  ಹುಡುಕಿದ್ದೆಲ್ಲೋ’ಎಂಬಂತಾಗಿತ್ತು. ಮಧುರಗೀತಂ ಕಾರ್ಯಕ್ರಮದಲ್ಲಿ ಹಾಡುಗಳ ಸಂಪೂರ್ಣ ವಿವರ ಒದಗಿಸುತ್ತಿದ್ದರೂ ನನ್ನ ಮನಸ್ಸಿನಲ್ಲಿ ಈ ತಪ್ಪು ದಾಖಲಾತಿ ಹೇಗಾಗಿತ್ತೋ ಏನೋ. ಈ ಹಾಡಿನ ಬಗ್ಗೆ ನಾನು ಎಷ್ಟೊಂದು ಜನರಲ್ಲಿ ವಿಚಾರಿಸಿದ್ದೆನೆಂಬುದಕ್ಕೆ ಲೆಕ್ಕವಿಲ್ಲ.



ಕನ್ನಡದ ಅಮರ ಚಿತ್ರಗೀತೆಗಳಲ್ಲೊಂದಾಗಿ ಪರಿವರ್ತಿತವಾದ  ಕುವೆಂಪು ವಿರಚಿತ ನಾನೇ ವೀಣೆ ನೀನೇ ತಂತಿ ಕವನದಿಂದಾಗಿ  ಮಾವನ ಮಗಳು ಎಂಬ ಹೆಸರು ಕಿವಿಗೆ ಬೀಳುತ್ತಿದೆಯಷ್ಟೇ ಹೊರತು ಅದು ಎಂದೋ ಮರೆತು ಹೋದ ಚಿತ್ರ. ಈ ಚಿತ್ರದ ಉಳಿದ ಹಾಡುಗಳೂ ಅವಜ್ಞೆಗೊಳಗಾಗಿವೆ.  ಮೊನ್ನೆ ಅವೆಲ್ಲವುಗಳ ಅತ್ಯುತ್ತಮ ಗುಣಮಟ್ಟದ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸುವವರೆಗೆ ನಾನೂ ಅವುಗಳನ್ನು ಮರೆತಿದ್ದೆ.  ಪೂರ್ತಿ ಚಿತ್ರವೂ ಈಗ ಅಂತರ್ಜಾಲದಲ್ಲಿ ಇದೆ.  ಕಲ್ಯಾಣ್ ಕುಮಾರ್, ಜಯಲಲಿತಾ ಮುಖ್ಯ ಭೂಮಿಕೆಯಲ್ಲಿದ್ದ 1965ರ ಈ ಚಿತ್ರ ಆಶಾಪೂರ್ಣಾದೇವಿ ಎಂಬ ಬಂಗಾಲಿ ಲೇಖಕಿ ಬಾಲ್ಯವಿವಾಹದ ಸುತ್ತ ಹೆಣೆದ ಕಥೆಯನ್ನು ಆಧರಿಸಿತ್ತು. ಎಸ್.ಕೆ.ಎ. ಚಾರಿ ನಿರ್ದೇಶಿಸಿದ್ದರು. ಟಿ ಚಲಪತಿರಾವ್ ಸಂಗೀತವಿತ್ತು. ಇದೇ ಕಥೆಯನ್ನಾಧರಿಸಿ 1959ರಲ್ಲಿ ತೆಲುಗಿನಲ್ಲಿ ಮಾಂಗಲ್ಯ ಬಲಂ ಮತ್ತು ತಮಿಳಿನಲ್ಲಿ ಮಂಜಲ್ ಭಾಗ್ಯಂ   ಹಾಗೂ ಆ ಮೇಲೆ   1967ರಲ್ಲಿ ಹಿಂದಿಯ ಛೋಟೀ ಸೀ ಮುಲಾಕಾತ್  ತಯಾರಾಗಿದ್ದವು.    ಜಯಲಲಿತಾ ಕನ್ನಡದಲ್ಲಿ ನಾಯಕಿಯಾಗಿ ಅಭಿನಯಿಸಿದ ಮಾವನ ಮಗಳು, ಮನೆ ಅಳಿಯ, ಚಿನ್ನದ ಗೊಂಬೆ, ನನ್ನ ಕರ್ತವ್ಯ ಹಾಗೂ ಬದುಕುವ ದಾರಿ ಇವೆಲ್ಲವುಗಳಲ್ಲಿ ಕಲ್ಯಾಣ್ ಕುಮಾರ್ ಅವರೇ ನಾಯಕನಾಗಿದ್ದುದು ಗಮನಾರ್ಹ.

ಮಾವನ ಮಗಳು ಚಿತ್ರದ ಶೂಟಿಂಗ್ ಸಮಯದ ಅಪರೂಪದ ಚಿತ್ರವೊಂದು ಇಲ್ಲಿದೆ.  ಇದು ಆವುದೊ ಆವುದೊ ಹಾಡಿನ ಸಂದರ್ಭದ್ದಿರಬಹುದು.



ನಾನು ನೋಡಿರದ ಮತ್ತು   ನನ್ನಲ್ಲಿ ಪದ್ಯಾವಳಿ ಇಲ್ಲದ ಸಿನಿಮಾಗಳ ಪೈಕಿ  ಮಾವನ ಮಗಳು ಕೂಡ ಒಂದು.  ಇಂಥ ಸಂದರ್ಭದಲ್ಲಿ ನನಗೆ ನೆರವಾಗುವವರು ಸಿನಿಮಾ ಮತ್ತು ಟಿ.ವಿ. ಮಾಧ್ಯಮದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಿತ್ರ ಕೃಷ್ಣಪ್ರಸಾದ್. ತಮ್ಮಲ್ಲಿರುವ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕದಿಂದ ನನಗೆ ಬೇಕಿದ್ದ ಮಾಹಿತಿಯನ್ನು ಕೇಳಿದಾಕ್ಷಣ ಅವರು ಕಳಿಸಿಕೊಡುತ್ತಾರೆ. ಅದರಲ್ಲಿ ನೋಡುತ್ತೇನಾದರೆ ಈ ಚಿತ್ರದ ಹಾಡುಗಳನ್ನು ಕುವೆಂಪು ಅಲ್ಲದೆ ಎಂ.ನರೇಂದ್ರಬಾಬು, ಕು.ರ.ಸೀ, ಆರ್.ಎನ್. ಜಯಗೋಪಾಲ್ ಮತ್ತು ವಿಜಯನಾರಸಿಂಹ ಬರೆದಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ಹಾಡು ಯಾರು ಬರೆದದ್ದು ಎಂದು ತಿಳಿಯಲು ಆಕಾಶವಾಣಿ, ಗ್ರಾಮೊಫೋನ್ ರೆಕಾರ್ಡ್  ಅಥವಾ ಪದ್ಯಾವಳಿ ಮಾತ್ರ ಆಧಾರ. ಈ ಹಿಂದೆ ಅನೇಕ ಬಾರಿ ಸಹಾಯ ಮಾಡಿದ್ದ ಆಕಾಶವಾಣಿ ಮಿತ್ರರಿಂದ ಈ ಸಲ ಮಾಹಿತಿ ದೊರಕಲಿಲ್ಲ. ರೆಕಾರ್ಡ್ ಸಂಗ್ರಹ ಹವ್ಯಾಸವಿರುವ ಮಿತ್ರರಲ್ಲೂ ಈ ಚಿತ್ರದ ಹಾಡುಗಳು ಇರಲಿಲ್ಲ.  ಕೊನೆಗೆ ನೆರವಿಗೆ ಬಂದದ್ದು ಪ್ರಸಿದ್ಧ ಸಾಹಿತಿ ಮತ್ತು ಚಲನಚಿತ್ರ ಇತಿಹಾಸಜ್ಞ ಶ್ರೀಧರಮೂರ್ತಿ ಅವರು.  ವ್ಯಸ್ತತೆಯ ನಡುವೆಯೂ ಈ ಚಿತ್ರದ ಪದ್ಯಾವಳಿಯನ್ನು ತಮ್ಮ ಬೃಹತ್ ಸಂಗ್ರಹದಿಂದ ಹುಡುಕಿ ಛಾಯಾಪ್ರತಿಯನ್ನು ನನಗೆ ಒದಗಿಸಿದರು. ಅದರಲ್ಲಿರುವ ಚಿತ್ರದ ಎಲ್ಲ ಹಾಡುಗಳ ವಿವರ ಮತ್ತು ಸಾಹಿತ್ಯವನ್ನು ಇಲ್ಲಿ scroll  ಮಾಡುತ್ತಾ ನೋಡಬಹುದು.




1. ಮಲ್ಲಿಗೆ ಅರಳಿಗೆ.
ನಾನು ಬಹುಕಾಲದಿಂದ ಹುಡುಕುತ್ತಿದ್ದು ಇದನ್ನೇ. ವಿಜಯನಾರಸಿಂಹ ಬರೆದ ಈ ಮೂದಲಹಾಡನ್ನು ಅಜ್ಞಾತ ಬಾಲಗಾಯಕಿಯರಾದ ಸಾವಿತ್ರಿ, ಸೀತಾ ಮತ್ತಿತರರು ಬಲು ಸೊಗಸಾಗಿ ಹಾಡಿದ್ದಾರೆ. ರೇಡಿಯೋದಲ್ಲಿ ಇವರ ಹೆಸರು ಹೇಳುತ್ತಿದ್ದರೋ ಅಥವಾ ಸುಮ್ಮನೆ ಸಹಗಾನವೆಂದು ಹೇಳುತ್ತಿದ್ದರೋ ನೆನಪಿಲ್ಲ. ಚಲಪತಿ ರಾವ್ ಅವರು ಸಾಮಾನ್ಯ ಸಿನಿಮಾ ಹಾಡುಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಇದಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ.  ನಡುವೆ pause ತುಂಬಿಸಲು ಚಪ್ಪಾಳೆಗಳ ಪ್ರಯೋಗ ಗಮನ ಸೆಳೆಯುತ್ತದೆ. ಹಿರಿಯರನ್ನು ಅನುಕರಿಸುವ ಮಕ್ಕಳ ಮದುವೆಯಾಟದ ಈ ಹಾಡಿನಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು  ಪರಸ್ಪರ ತಮಾಷೆಯಾಗಿ ಮೂದಲಿಸಿಕೊಳ್ಳುತ್ತಾರೆ. ಕೊನೆಗೆ ಹಿರಿಯಳೊಬ್ಬಳು ಜಗಳ, ರಗಳೆ ಎಲ್ಲ ಮದುವೆ ಮನೆಗೆ ಚಂದವೇ, ಆದರೆ ಮದುವೆಯಾದ ಮೇಲೆ ಮನಸು ಮನಸು ಬೆರೆತು ಸಮರಸದ ಸಂಸಾರ ಸಾಗಿಸುವುದು ಮುಖ್ಯ ಎಂದು ಉಪಸಂಹಾರ ಮಾಡುತ್ತಾಳೆ.  ಆ ಕಾಲದಲ್ಲಿ ಈ ಹಾಡನ್ನು ರೇಡಿಯೋದಲ್ಲಿ ಕೇಳುತ್ತಿದ್ದಾಗ ಅಷ್ಟೊಂದು ಹೋಲಿಕೆಯಿಲ್ಲದಿದ್ದರೂ ಆಗ ಪ್ರಚಲಿತವಾಗಿದ್ದ  ಲಾಲಿ ಲಾಲಿ ಡೋಲಿಯಾ ಮೆ ಆಯೀ ರೇ ದುಲ್ಹನಿಯಾ ಎಂಬ ತೀಸ್ರೀ ಕಸಂ ಚಿತ್ರದ ಶಂಕರ್ ಜೈಕಿಶನ್ ಅವರದ್ದೆಂದು ನಂಬಲಾಗದ ಸರಳ ಸುಂದರ ಹಾಡೊಂದು ನೆನಪಾಗುತ್ತಿತ್ತು.




2. ಆವುದೊ ಆವುದೊ.
ಕು.ರ.ಸೀ ರಚನೆ. ಜಾನಕಿ ಧ್ವನಿ.  ಉತ್ಸಾಹದ ಬುಗ್ಗೆಯಾದ ನವ ತರುಣಿಯ ಭಾವನೆಗಳಿಗೆ ಸರಿ ಹೊಂದುವಂತೆ ವೇಗದ ಲಯ.  ಹಾಡಿನ ಮೂಡ್ ಮತ್ತು ಕೆಲವು ಸಾಲುಗಳು ಜಂಗ್ಲಿಯ ಜಾ ಜಾ ಜಾ ಮೇರೇ ಬಚ್‌ಪನ್ ನೆನಪಾಗುವಂತೆ ಮಾಡುತ್ತವೆ.



3. ಇನ್ನೂ ಯಾಕೆ ಅಂಜಿಕೆ.
ಕು.ರ.ಸೀ ಅವರದ್ದೇ ಸಾಹಿತ್ಯ.  ಹಾಡಿದವರು ಪೀಠಾಪುರಂ ನಾಗೇಶ್ವರ ರಾವ್ ಮತ್ತು ಬಿ.ವಸಂತ. ಇದನ್ನು ರೇಡಿಯೋದಲ್ಲಿ ಎಂದೂ ಕೇಳಿದ ನೆನಪಿಲ್ಲ.  ನರಸಿಂಹರಾಜು  ಅಭಿನಯದ ಹಾಡುಗಳು ಸಾಮಾನ್ಯವಾಗಿ ಹಿಟ್ ಆಗುತ್ತವೆ.  ಆದರೆ ಇದ್ಯಾಕೋ ಆಗಿಲ್ಲ.



4. ಮಧುರ ಮಿಲನದಾ ಸವಿ ನೆನಪೊಂದು. 
ಆರ್.ಎನ್. ಜಯಗೋಪಾಲ್ ವಿರಚಿತ ಈ ಗೀತೆ ಎಸ್. ಜಾನಕಿ ಮತ್ತು ಬಿ. ವಸಂತ ಅವರ ಯುಗಳ ಸ್ವರಗಳಲ್ಲಿದೆ. ರೇಡಿಯೋದಲ್ಲಿ ಸಾಕಷ್ಟು ಬಾರಿ ಕೇಳಿಸುತ್ತಿತ್ತು.  ಈಗ ಸಂಪೂರ್ಣ ವಿಸ್ಮೃತಿಗೆ ಒಳಗಾಗಿದೆ.  ಎಂ. ವೆಂಕಟರಾಜು ಅವರ್ ಶೈಲಿಯ ಸಂಗೀತ ನೀಡುತ್ತಿದ್ದ ಚಲಪತಿ ರಾವ್ ಅವರಿಗೆ ವೀಣೆ ಮತ್ತು ಸೋಲೋವಾಕ್ಸ್ ಪ್ರಿಯ ಸಂಗೀತೋಪಕರಣಗಳೆನಿಸುತ್ತದೆ.  ಈ ಹಾಡಲ್ಲೂ ಅವುಗಳ ವ್ಯಾಪಕ ಬಳಕೆ ಇದೆ.



5. ನಾನೆ ವೀಣೆ ನೀನೆ ತಂತಿ.
‘ಮಾವನ ಮಗಳು’ ಚಿತ್ರದ ಹೆಸರು ಉಳಿದಿರುವುದೇ ಕುವೆಂಪು ಅವರ ಈ ರಚನೆಯಿಂದ.  ಆದರೂ ಆಗಲೇ ಬಂದಿದ್ದ ಮಿಸ್. ಲೀಲಾವತಿಯ ದೋಣಿ ಸಾಗಲಿ ಹಾಡಿನ ಎದುರು ನನಗೆ ವೈಯುಕ್ತಿಕವಾಗಿ ಇದು ಸಪ್ಪೆ ಎಂದೇ ಅನಿಸುತ್ತಿದ್ದುದು. ಈಗಲೂ ನನ್ನ ಅಭಿಪ್ರಾಯ ಬದಲಾಗಿಲ್ಲ.  ಇದರ ಹೆಚ್ಚಿನ ಸಾಲುಗಳನ್ನು ಜಾನಕಿಯೇ ಹಾಡಿದ್ದು ಇಡೀ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಅವರು ಈ ಒಂದೇ ಹಾಡಿನ ಸೀಮಿತ ಸಾಲುಗಳಿಗೆ ಮಾತ್ರ ಧ್ವನಿಯಾಗಿರುವುದು ಗಮನಿಸಬೇಕಾದ ಅಂಶ.

ಇದರ ‘ನನ್ನ ನಿನ್ನ ಹೃದಯಮೀನ‍ಕಲ್ಲಿ ಜೇನ ಸೊಗದ ಸ್ನಾನ’ ಎಂಬ ಭಾಗ ಹೆಚ್ಚು ಚರ್ಚೆಗೆ ಒಳಗಾಗಿದೆ.  ವಿಳಂಬ ಗತಿಯ 4/4 ತಾಳದಲ್ಲಿ ಸಂಯೋಜಿಸಿರುವುದರಿಂದ ಈ ಭಾಗವನ್ನು  ಹಾಡುವಾಗ ಅನಿವಾರ್ಯವಾಗಿ ಮೀನ ಮತ್ತು ಕಲ್ಲಿ ನಡುವೆ ಸುದೀರ್ಘ pause ನೀಡಬೇಕಾಗಿ ಬಂದುದರಿಂದ ಅರ್ಥೈಸುವಲ್ಲಿ ಉಂಟಾಗುವ ಗೊಂದಲ ಇದಕ್ಕೆ ಕಾರಣ. ಇತ್ತೀಚೆಗೆ facebookನಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.  ಅನೇಕರು ಕಲ್ಲಿಯನ್ನು ಮೀನದಿಂದ ಬೇರ್ಪಡಿಸಿ ಅದಕ್ಕೆ ಜೇನ ಸೇರಿಸಿ ಕಲ್ಲಿಜೇನ ಎಂಬ ಪದ ಕಲ್ಪಿಸುತ್ತಾರೆ. ಕಲ್ಲಿಜೇನು ಅಂದರೆ ವಿಶೇಷ ರೀತಿ ಗೂಡು ಕಟ್ಟುವ ಒಂದು ಜಾತಿಯ ಜೇನು ಎಂದು ವ್ಯಾಖ್ಯಾನಿಸುವವರೂ ಇದ್ದಾರೆ!  ಇನ್ನು ಕೆಲವರು ಅದು ಹೃದಯಮೀನಕಲ್ಲಿ(ಮೀನಕೆ ಅಲ್ಲಿ) ಎಂದು  ಹೇಳುತ್ತಾರೆ. ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ ಎಂಬ ಹಿಂದಿನ ಸಾಲು  ಎರಡನೆಯ ವಿಶ್ಲೇಷಣೆಗೆ ಪೂರಕವಾಗಿ  ಇದೆ. ಒಟ್ಟಿನಲ್ಲ್ಲಿ ನನ್ನ ನಿನ್ನ ಹೃದಯವೆಂಬ ಮೀನಿಗೆ ಅಲ್ಲಿ ಮಾಧುರ್ಯದ ಜೇನಿನ ಸ್ನಾನದ ಜೊತೆಗೆ ಅಮೃತ ಪಾನ  ಎಂಬ ಅರ್ಥ ಮೂಡುತ್ತದೆ.   ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ  ಹಾಡಿನಂತೆ ರೂಪಕ(ದಾದ್ರಾ - 3/4) ತಾಳದಲ್ಲಿ ಇದರ ಸಂಯೋಜನೆ ಇರುತ್ತಿದ್ದರೆ ಹಾಡುವಾಗ ಮೀನ ಮತ್ತು ಕಲ್ಲಿ ಒಟ್ಟೊಟ್ಟಿಗೆ ಬರುವುದರಿಂದ ಈ ಗೊಂದಲ ಉಂಟಾಗುತ್ತಿರಲಿಲ್ಲ. ಕವಿ ಸಹ ನಾನೇ, ನೀನೇ, ಅವನೇ ಎಂಬ ನಾಲ್ಕು ಮಾತ್ರಾಕಾಲದ  ಪದಗಳನ್ನು ಮೂರು ಮಾತ್ರೆಗಳಿಗೆ ಸರಿ ಹೊಂದುವಂತೆ ನಾನೆ, ನೀನೆ, ಅವನೆ ಎಂದೇ ಬರೆದಿರುವುದನ್ನು ಗಮನಿಸಬಹುದು. ಇದಕ್ಕೆ  ಪೂರಕವಾಗಿ ಭೀಮ್‌ಸೇನ್ ಜೋಶಿ ಅವರ ಈ ಧ್ವನಿಮುದ್ರಿಕೆಯನ್ನು ಆಲಿಸಬಹುದು.  ಆದರೆ ಈಗ ಇದ್ದಂತೆ ಆ  ಹಾಡನ್ನು ಕುವೆಂಪು ಸಹ ಖಂಡಿತ ಕೇಳಿರುತ್ತಾರೆ. ಈ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಎಲ್ಲೂ ಓದಿದ ನೆನಪಿಲ್ಲ.

ಪ್ರೇಮಕಾಶ್ಮೀರ ಕವನ ಸಂಕಲದಲ್ಲಿ ಪ್ರಕಟವಾದ ವೀಣಾಗಾನ ಶೀರ್ಷಿಕೆಯ ಮೂಲ ಕವನ ಹೀಗಿದೆ. ಇಲ್ಲಿ ಪಲ್ಲವಿ ಮತ್ತು ಚರಣಗಳು ಎಂಬ ವ್ಯತ್ಯಾಸ ಇಲ್ಲದೆ ಒಂದೇ ರೀತಿಯ ಹರಹಿನ ಮೂರು ಭಾಗಗಳು ಇರುವುದನ್ನು ಗಮನಿಸಬಹುದು.  ಎರಡನೆಯ ಚರಣದಲ್ಲಿ ಹೃದಯಮೀನದ ನಂತರದ ಕಲ್ಲಿ ಮುಂದಿನ ಸಾಲಿಗೆ ಹೋಗಬೇಕಾದಾಗ ಹೃದಯಮೀನಕಲ್ಲಿ ಒಂದೇ ಪದಪುಂಜ ಎಂದು ಸೂಚಿಸಲು ಹೈಫನ್(-) ಇರುವುದನ್ನು ಗಮನಿಸಬಹುದು.

ಸಿನಿಮಾದಲ್ಲಿ ಬಳಸುವಾಗ ಮೊದಲ ಭಾಗದ ಅರ್ಧವನ್ನು ಪಲ್ಲವಿಯಾಗಿಸಿ ಉಳಿದರ್ಧವನ್ನು ಮೊದಲ ಚರಣ ಮಾಡಿಕೊಂಡಿದ್ದಾರೆ.  ಮೂರನೆ ಚರಣ ಬಳಕೆಯಾಗಿಲ್ಲ.




6. ಒಲಿಸಿದ ದೇವನ
ಕು.ರ.ಸೀ ವಿರಚಿತವಾದ ಇದು  ಚಿತ್ರದ ಸರ್ವಶ್ರೇಷ್ಠ ಗೀತೆ ಮತ್ತು ಎಸ್. ಜಾನಕಿ ಅವರ ಅತ್ಯುತ್ತಮ ಗೀತೆಗಳಲ್ಲಿ ಒಂದು ಎಂದು ನನ್ನ ಅನಿಸಿಕೆ. ಒಲಿಸಿದವರ ರಸಪೂಜೆಗೆ ನಿಲುಕದೆ ವರಿಸಿದವರಿಗೆ ಹರಕೆಯ ಮುಡಿಪಾದವರು ಕಥೆ, ಕಾದಂಬರಿ, ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸಾಕಷ್ಟು ಇದ್ದಾರೆ. ಸಂಗಂ ಚಿತ್ರದಲ್ಲಿ ವೈಜಯಂತಿಮಾಲಾ ‘ಪ್ಯಾರ್ ಏಕ್ ಎಹಸಾಸ್ ಹೈ. ವೊ ಹೋ ಜಾತಾ ಹೈ.  ಲೆಕಿನ್ ಶಾದೀ ಏಕ್ ಧರಮ್ ಹೈ ಔರ್ ಮೈನೆ ಉಸ್ ಧರಮ್ ಕೊ ನಿಭಾಯಾ ಹೈ’ ಎಂದು ಹೇಳುವ ಸಾಲುಗಳು ನನಗಿಲ್ಲಿ ನೆನಪಾಗುತ್ತವೆ.  ಶಿವರಾಮ ಕಾರಂತರ ಯಾವುದೋ ಕಾದಂಬರಿಯಲ್ಲಿರುವ  ‘ಮುಂದಿನ ಜನ್ಮದಲ್ಲಿಯೂ ಈಗಿರುವ ಪತಿ/ಪತ್ನಿಯೇ ದೊರಕಲಿ ಎಂದು ಮನದಾಳದಿಂದ ಆಶಿಸುವವರು ಬೆರಳೆಣಿಕೆಯಷ್ಟು ಇರಬಹುದು’ ಎಂಬರ್ಥದ ಸಾಲುಗಳೂ ನೆನಪಾಗುತ್ತವೆ!


ನೀಡಿದರಾರೋ ಮಂಗಳ ಸೂತ್ರ
ಅವರೇ ಒಲವಿಗೆ ಪಾತ್ರ
ತನುಮನ ಮೀಸಲು ಅವರಿಗೆ ಮಾತ್ರ
ಅನ್ಯರು ತಂದೆಯ ಗೋತ್ರ
ಎಂಬಂಥ ಸಾಲುಗಳನ್ನು ಕು.ರ.ಸೀ ಅಲ್ಲದೆ ಇನ್ಯಾರು ಬರೆಯಲು ಸಾಧ್ಯ?



7. ಪ್ರೇಮ ಪ್ರೇಮ
ಇದು ಕೂಡ ನರಸಿಂಹರಾಜು  ಅವರ ಮೇಲೆ ಚಿತ್ರೀಕರಿಸಲಾದರೂ ಗಮನ ಸೆಳೆಯದ  ಹಾಡು.  ನಾನು ಒಮ್ಮೆಯೂ ಕೇಳಿರಲಿಲ್ಲ.  ದಾಖಲೆಗಾಗಿ ಇಲ್ಲಿ ಸೇರಿಸಿದ್ದೇನೆ. ಟಿ.ಆರ್. ಜಯದೇವ್ ಮತ್ತು  ಸ್ವರ್ಣಲತಾ ಹಾಡಿದ್ದಾರೆ.



8. ಚಂದ್ರೋದಯ ಮಂದಾನಿಲ
ನರೇಂದ್ರಬಾಬು ಬರೆದು ಎಸ್. ಜಾನಕಿ ಹಾಡಿರುವ ಇದು ನನಗೆ ಅಂದು ಹತ್ತರಲ್ಲಿ ಹನ್ನೊಂದು ಅನ್ನಿಸಿತ್ತು.  ಆದರೆ ಈಗ ಆಲಿಸಿದರೆ ಇದರಲ್ಲೇನೋ ಇದೆ ಅನ್ನಿಸುತ್ತಿದೆ.  ವಿಶೇಷವಾಗಿ ಚರಣ ಭಾಗದಲ್ಲಿ ಜಾನಕಿ ಅವರು ಒಂದೇ ಉಸಿರಲ್ಲಿ  ಹಾಡಿದ 10 ಸೆಕೆಂಡುಗಳಷ್ಟು ದೀರ್ಘ ಸಾಲಿನಲ್ಲಿ ಏನೋ ವಿಶಿಷ್ಟ ಆಕರ್ಷಣೆ ಇದೆ. ಶಂಕರ್ ಜೈಕಿಶನ್ ಶೈಲಿಯ  ವೇಗದ ಲಯದಲ್ಲಿ ವಾದ್ಯಗಳನ್ನು ನುಡಿಸಿದವರ ಕೈ ಚಳಕವೂ ಭಲೇ ಅನ್ನುವಂತಿದೆ.

1965ರ ಈ ಕಾಲಘಟ್ಟದಲ್ಲಿ ನಮ್ಮ ಹಳ್ಳಿಯ ದೊಡ್ಡ ಮನೆಯಲ್ಲಿ ವಿದ್ಯುತ್ ವಯರಿಂಗ್ ಕೆಲಸ ನಡೆಯುತ್ತಿತ್ತು.  ಅದಕ್ಕಾಗಿ ಪುತ್ತೂರಿಂದ ಬಂದ ಸಂಕಪ್ಪ ಮತ್ತು ಭಾಸ್ಕರ ಎಂಬವರು ನಮ್ಮಲ್ಲೇ  ಸುಮಾರು 15-20 ದಿನ ಉಳಿದುಕೊಂಡಿದ್ದರು.  ಒಂದು ದಿನ ಅವರು ರಾತ್ರೆ ಊಟ ಮಾಡುವಾಗ ಅಲ್ಲಿದ್ದ ಚಿಮಿಣಿ ದೀಪದ ಮಿಣುಕು ಬೆಳಕು ಸಾಲದೆಂದು ನನಗೆನಿಸಿ ಲಾಟೀನೊಂದನ್ನು ಅವರಿದ್ದಲ್ಲಿಗೆ ಒಯ್ಯುವಾಗ ರೇಡಿಯೋದಲ್ಲಿ ಈ ಹಾಡು ಬರುತ್ತಿತ್ತು.  ಈಗ ಈ ಹಾಡು ಕೇಳುವಾಗಲೆಲ್ಲ ನನಗೆ ನೆನಪಾಗುವುದು ಸಂಕಪ್ಪ,  ಭಾಸ್ಕರ ಮತ್ತು ಲಾಟೀನು!



ಅತ್ಯುತ್ತಮ ಗುಣಮಟ್ಟದಲ್ಲಿ ಧ್ವನಿಮುದ್ರಿತವಾದ ಈ ಹಾಡುಗಳ ಸಂಪೂರ್ಣ ಆನಂದ ದೊರೆಯಬೇಕಾದರೆ ಹೆಡ್‌ಫೋನ್ / ಇಯರ್‌ಫೋನ್ ಬಳಸಬೇಕು.  ಪದ್ಯಾವಳಿಯ pdf  ತೆರೆದಿಟ್ಟುಕೊಂಡರೆ  ಇನ್ನೂ ಒಳ್ಳೆಯದು.

ಈ ಹಾಡುಗಳನ್ನು ವೀಡಿಯೊ ರೂಪದಲ್ಲಿ ನೋಡಲಿಚ್ಛಿಸುವವರು ಇಲ್ಲಿ ಕ್ಲಿಕ್ಕಿಸಿ.







4 comments:

  1. ತುಂಬಾ ಚೆನ್ನಾಗಿದೆ. ತಂತಿ ಇಂಚರದಿ ವಿಪಂಚಿ ರಸ ಪುಳಯಿಸೆ... ಎಂಬ ಚರಣ ಬಳಕೆಯಾಗಿಲ್ಲ ಎಂದು ಹೇಳಿದ್ದೀರಿ. ಮೂಲಸಾಹಿತ್ಯ ಪೂರ್ತಿ ಇದ್ರೆ ಕಳುಹಿಸಿ. ಲಯವಿನ್ಯಾಸವನ್ನರಿಯುವ ಕುತೂಹಲಕ್ಕಾಗಿಯಷ್ಟೆ.

    ReplyDelete
  2. ಎಂಥಾ ಕಾಕತಾಳೀಯ ಎಂದರೆ ಶ್ರೀವತ್ಸ ಜೋಶಿಯವರು ಮಾವನ ಮಗಳು ಚಿತ್ರದ ನಾನೇ ವೀಣೆ ನೀನೆ ತಂತಿ ಹಾಡಿನ ಪದಚ್ಛೇದದ ಬಗ್ಗೆ ಅವರ ಅಂಕಣದಲ್ಲಿ ಬರೆದಿದ್ದರೆ ನೀವೂ ಅದೇ ಚಿತ್ರದ ಹಾಡಿನ ಬಗ್ಗೆ ಲೇಖನ ಬರೆದಿದ್ದೀರಿ. ಅದರಲ್ಲೂ ಮಲ್ಲಿಗೆ ಅರಳಿಗೆ ಮುತ್ತಿನಾ ಚೆಂಡಿಗೆ ಹಾಡು ನೆನಪಿಸಿ ನನ್ನ ಬಾಲ್ಯಕ್ಕೆ ಹಿಂದಿರುಗಿ ಹೋಗುವಂತೆ ಮಾಡಿದ್ದೀರಿ. ನಿಜಕ್ಕೂ ಈ ಹಾಡು ಪೂರ್ತಿ ಮರೆತು ಹೋಗಿತ್ತು. ಈ ಸಿನಿಮಾ ಬಂದಾಗ ನನಗೆ ಒಂದು ಎಂಟು ವರ್ಷ ಇರಬಹುದು. ಆಗ ಚಿಕ್ಕ ವಯಸ್ಸಿನ ಮಕ್ಕಳಿಗೆಲ್ಲ ಬಲು ಪ್ರಿಯವಾದ ಮಕ್ಕಳ ಹಾಡು. ಶಾಲೆಗಳಲ್ಲಿ ಎರಡು ಗುಂಪು ಮಾಡಿಕೊಂಡು ಸವಾಲ್ ಜವಾಬ್ ರೀತಿ ಹೇಳುತ್ತಿದ್ದದ್ದು ಈಗ ನೆನಪಿಗೆ ಬರುತ್ತಿದೆ. ನಿಮ್ಮ ಲೇಖನ ಓದಿದ ಮೇಲೆ ಯು ಟ್ಯೂಬಿನಲ್ಲಿ ಈ ಹಾಡಿನ ವಿಡಿಯೋ ಸಹ ನೋಡಿದೆ. ತುಂಬಾ ಇಷ್ಟವಾಯಿತು. ಅಷ್ಟು ಚಿಕ್ಕ ಮಕ್ಕಳ ಪ್ರತಿಭೆ ನೋಡಿ ಅಚ್ಚರಿಯೇ ಆಯಿತು. ಬೇರೆ ಯಾವ ಹಾಡು ಕೇಳಲು ಮನಸ್ಸಾಗಲಿಲ್ಲ. ಇದೆ ಆವರಿಸಿಕೊಂಡಿದೆ.
    Lakshmi G.N (FB)

    ReplyDelete
  3. ಹಾಡು ಹುಟ್ಟಿದ ಸಮಯ ಇದ್ದಂತೆಯೇ ಹಾಡುಕೇಳಿದ ಸಮಯವೂ ಇರುತ್ತದೆ ಸಾರ್...

    ನಮ್ಮ ಪ್ರೈಮರಿಶಾಲೆಯ ಮೇಷ್ಟ್ರು ಹಾಗೂ ನಾನು ಹೊಸಕೋಟೆಗೆ ಒಂದು ಪ್ರೈವೇಟ್ ಬಸ್ಸಿನಲ್ಲಿ ಹೋಗುವಾಗ ಮೊದಲಬಾರಿಗೆ ನಾನು 'ಜನುಮಜನುಮದಾ ಅನುಬಂಧಾ...ಹೃದಯಹೃದಯಗಳ ಪ್ರೇಮಾನುಬಂಧ ' ಕೇಳಿದ ನೆನಪು ಮನಸಿನಲ್ಲಿ ದಾಖಲಾಗಿದೆ...ಫೆಜ್ ಟೋಪಿ ಹಾಕ್ಕೊಂಡಿದ್ದ ಡ್ರೈವರ್ ನನಗೆ ಸಾಕ್ಷಾತ್ ಪಿ.ಬಿ.ಶ್ರೀನಿವಾಸರಂತೆ ಕಾಣಿಸಿದ!!!

    Sudarshan Reddy (FB)

    ReplyDelete
  4. ಅಹಾ! ಎಂಥಾ ಸಾಹಿತ್ಯ! ಅದಕ್ಕೆ ಹೊಂದುವ ದಿವ್ಯ ಸ್ಂಗೀತ! ಈ ಹಾಡುಗಳೆಲ್ಲಾ ನೆನೆದರೂ ನೆನಪಾಗದಷ್ಟು ಮರೆತುಹೋಗಿದ್ದವು. ‘ಒಲಿಸಿದ ಜೀವನ...’ ಹಾಡು ಕೇಳುತ್ತಿದ್ದಂತೆ ಈ ಹಾಡು ರೇಡಿಯೋದಲ್ಲಿ ಆಗಾಗ ಪ್ರಸಾರವಾಗುತ್ತಿದ್ದುದು ನೆನಪಾಯಿತು! ಈ ಚಿತ್ರದ ‘ನಾನೇ ವೀಣೆ.. ನೀನೇ ತಂತಿ’ ಮಾತ್ರ ಇವತ್ತಿಗೂ ಜನಪ್ರಿಯವಾಗಿದ್ದು, ಉಳಿದೆಲ್ಲವೂ ಯಾಕೋ ಹಿನ್ನೆಲೆಗೆ ಸರಿದಿವೆ!.

    Triveni Rao (FB)

    ReplyDelete

Your valuable comments/suggestions are welcome