Tuesday, 11 February 2020

ರೇಡಿಯೋ ಪುರಾಣ



ಬಹುತೇಕ ಎಲ್ಲ ರೇಡಿಯೋ ನಿಲಯಗಳ ಪ್ರಸಾರ ಅಂತರ್ಜಾಲದ ಮೂಲಕ ಮೊಬೈಲಲ್ಲಿ ಸಿಗುತ್ತಿರುವ ಈ ಸಮಯದಲ್ಲಿ ಅನೇಕರಿಗೆ ಹಿಂದಿನ ಕಾಲದ ರೇಡಿಯೋಗಳು ಹೇಗಿರುತ್ತಿದ್ದವು ಎಂಬುದರ ಕಲ್ಪನೆಯೇ ಇರಲಾರದು. ಕಾಲಕ್ರಮೇಣ ಸಾಂಪ್ರದಾಯಿಕ ರೇಡಿಯೋ ಪ್ರಸಾರದ  ಕುರಿತ ಮಾಹಿತಿಯೇ ಜನಮಾನಸದಿಂದ ಮರೆಯಾಗಿ ಹೋದರೂ ಆಶ್ಚರ್ಯವಿಲ್ಲ. ಶಾಲಾ ಪಠ್ಯದಲ್ಲಿ ಮಾರ್ಕೋನಿ ರೇಡಿಯೊವನ್ನು ಆವಿಷ್ಕರಿಸಿದನು ಎಂಬ ವಾಕ್ಯ ಮಾತ್ರ ಉಳಿಯಬಹುದು.

ರೇಡಿಯೋ ಪ್ರಸಾರವೆಂದರೆ ದೂರ ದೂರದ ವರೆಗೆ ಸಾಗಲು ಶಕ್ತವಾದ  ಎಲೆಕ್ಟ್ರೋ ಮ್ಯಾಗ್ನೆಟಿಕ್ ಕ್ಯಾರಿಯರ್ ಅಲೆಗಳನ್ನು ಧ್ವನಿ ತರಂಗಗಳಿಗನುಸಾರವಾಗಿ ಮಾರ್ಪಾಡುಗೊಳಿಸಿ ರೇಡಿಯೊ ಸೆಟ್ಟುಗಳಲ್ಲಿ ಮತ್ತೆ  ಆ ಮೂಲ ಧ್ವನಿ ತರಂಗಗಳನ್ನು ಬೇರ್ಪಡಿಸಿಕೊಳ್ಳಬಹುದಾದ ವ್ಯವಸ್ಥೆ.  ಇಲ್ಲಿ ಒಂದೊಂದು ಅಲೆಯ ಉದ್ದವನ್ನು wave length ಎಂದೂ, ಅಲೆಗಳ ಅಗಲವನ್ನು amplitude ಎಂದೂ, ಒಂದು ಸೆಕೆಂಡಿನ ಅವಕಾಶದಲ್ಲಿ ಎಷ್ಟು ಅಲೆಗಳು ಅಡಕವಾಗಿವೆ ಎಂಬುದನ್ನು frequency ಎಂದೂ ಹೇಳಲಾಗುತ್ತದೆ. ಅಲೆಗಳ ಉದ್ದ ಜಾಸ್ತಿಯಾದಷ್ಟು ಒಂದು ಸೆಕೆಂಡಿನಲ್ಲಿ ಹಿಡಿಸುವ ಅವುಗಳ ಸಂಖ್ಯೆ ಕಮ್ಮಿಯಾಗುವುದರಿಂದ  wave length ಮತ್ತು frequency ವಿಲೋಮ ಅನುಪಾತದಲ್ಲಿರುತ್ತವೆ(Inverse proportion). ರೇಡಿಯೋ ಪ್ರಸಾರದ wave lengthನ್ನು ಮೀಟರ್‌ಗಳಲ್ಲೂ  frequencyಯನ್ನು cycles/secondsನಲ್ಲೂ ಹೇಳುವ ಪದ್ಧತಿ ಇತ್ತು.  Electro Magnetic ಅಲೆಗಳ ಮೂಲಕ ಧ್ವನಿಯನ್ನು ದೂರದ ವರೆಗೆ ಕೊಂಡೊಯ್ಯಬಹುದು  ಎಂದು 1886ರಲ್ಲಿ ಕಂಡು ಹಿಡಿದ ಜರ್ಮನಿಯ ಹೆನ್ರಿಚ್ ಹರ್ಟ್ಜ್(Heinrich Hertz)ನ ಗೌರವಾರ್ಥ ಈಗ frequencyಯನ್ನು cycles/secನ ಬದಲಾಗಿ ಹರ್ಟ್ಜ್(Hertz) ಅನ್ನಲಾಗುತ್ತದೆ. 

Amplitude Modulation ಪದ್ಧತಿಯಲ್ಲಿ  ಧ್ವನಿಯ ತರಂಗಗಳಿಗನುಸಾರವಾಗಿ ಕ್ಯಾರಿಯರ್‌ನ amplitude ಅಂದರೆ ಅಲೆಗಳ ಅಗಲವನ್ನು ಬದಲಾಯಿಸಲಾಗುತ್ತದೆ.  ಆದರೆ ಅಲೆಗಳ frequency ಸ್ಥಿರವಾಗಿರುತ್ತದೆ.


Frequency Modulation ಪದ್ಧತಿಯಲ್ಲಿ ಕ್ಯಾರಿಯರ್‌ನ amplitude ಸ್ಥಿರವಾಗಿದ್ದು ಪ್ರಸಾರವಾಗಬೇಕಾದ ಧ್ವನಿಗೆ ಅನುಸಾರವಾಗಿ frequencyಯನ್ನು ಬದಲಾಯಿಸಲಾಗುತ್ತದೆ.


Amplitude modulation ಮತ್ತು   frequency modulation ಎರಡರಲ್ಲೂ ವಾತಾವರಣ ಹಾಗೂ ಇತರ  ಎಲೆಕ್ಟ್ರಾನಿಕ್ ಉಪಕರಣಗಳು ಹೊರ ಸೂಸುವ ವಿಕಿರಣ ಪ್ರಸಾರವಾಗುವ ಅಲೆಗಳ ಹೊರಭಾಗವನ್ನು  ಬಾಧಿಸುತ್ತದೆ.  ಆದರೆ frequency modulationನಲ್ಲಿ ಅಲೆಗಳ ಗಾತ್ರಕ್ಕೂ ಒಳಗೊಂಡಿರುವ ಧ್ವನಿತರಂಗಗಳಿಗೂ ಸಂಬಂಧ ಇಲ್ಲದಿರುವುದರಿಂದ ವಿಕಿರಣ ಬಾಧಿಸಿರುವ ಭಾಗಗಳನ್ನು ಫಿಲ್ಟರ್ ಬಳಸಿ ಕತ್ತರಿಸಿ ತೆಗೆಯಬಹುದು. ಆದರೆ amplitude modulated ಅಲೆಗಳ ಗಾತ್ರ ಪ್ರಸಾರವಾಗಬೇಕಾದ ಧ್ವನಿತರಂಗಗಳಿಗೆ ಅನುರೂಪವಾರುವುದರಿಂದ ಹೀಗೆ ಕತ್ತರಿಸಿದರೆ ಧ್ವನಿತರಂಗಗಳ ಸ್ವರೂಪವೇ ಬದಲಾಗುತ್ತದೆ. FM ಪ್ರಸಾರ ವಿಕಿರಣಗಳ ಕರ್ಕಶ ಸದ್ದುಗಳಿಲ್ಲದೆ ಸ್ಪಷ್ಟವಾಗಿ ಕೇಳಿಸಲು ಇದುವೇ ಕಾರಣ.


AM ಪ್ರಸಾರದಲ್ಲಿ 520ರಿಂದ 1710 ಕಿಲೋಹರ್ಟ್ಜ್‌ಗಳಿಗೆ ಸಂಬಂಧಿಸಿದ 200ರಿಂದ 550  ಮೀಟರ್‌ಗಳ ವರೆಗಿನ  wavelengthನ್ನು ಮೀಡಿಯಂ ವೇವ್ ಎಂದೂ 2300ರಿಂದ 22000 ಕಿಲೋಹರ್ಟ್ಜ್‌ಗಳಿಗೆ ಸಂಬಂಧಿಸಿದ 13ರಿಂದ 120 ಮೀಟರ್‌ಗಳ ವರೆಗಿನ  wavelength‌ನ್ನು ಶಾರ್ಟ್ ವೇವ್ ಎಂದೂ ವಿಂಗಡಿಸಲಾಗಿದೆ. ಕೆಲವು ದೇಶಗಳಲ್ಲಿ 550 ಮೀಟರ್‌ಗಳಿಗಿಂತ ಹೆಚ್ಚು ಉದ್ದದ ಅಲೆಗಳನ್ನು ಬಳಸುವ ಲಾಂಗ್ ವೇವ್ ಪ್ರಸಾರ ಕೂಡ ಇದೆ.  FM ಪ್ರಸಾರದಲ್ಲಿ 87000 ಕಿಲೋಹರ್ಟ್ಜ್‌ನಿಂದ 1,08,000 ಕಿಲೋಹರ್ಟ್ಜ್ ವರೆಗಿನ frequencyಯ ಬಳಕೆಯಾಗುತ್ತದೆ.  ಇದು ದೊಡ್ಡ ಸಂಖ್ಯೆಯಾದ್ದರಿಂದ ಕಿಲೋಹರ್ಟ್ಜ್ ಬದಲಿಗೆ ಮೆಗಾಹರ್ಟ್ಜ್ ಬಳಸಿ 87 MHzನಿಂದ 108 MHz ಎನ್ನಲಾಗುತ್ತದೆ. AM ಪ್ರಸಾರದ ನಿಲಯಗಳು ‘ಆಕಾಶವಾಣಿ ಮಂಗಳೂರು. ತರಂಗಾಂತರ 275.5 ಮೀಟರ್ ಅಥವಾ 1089 ಕಿಲೋಹರ್ಟ್ಜ್' ಹೀಗೆ wave length, frequency ಎರಡನ್ನೂ ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಆದರೆ  FM ನಿಲಯಗಳು ತರಂಗಾಂತರದ frequency  ಮಾತ್ರ ಹೇಳುತ್ತವೆ. ಮೀಟರ್‌ಗಳಲ್ಲಿ wave length ಹೇಳುವ ರೂಢಿ ಇಲ್ಲ. Frequencyಯನ್ನು ತನ್ನ ಹೆಸರಿನ ಭಾಗವೇ ಆಗಿಸಿಕೊಳ್ಳುವುದು ಎಲ್ಲೆಡೆಯ FM ಪ್ರಸಾರದಲ್ಲಿ ಕಂಡುಬರುವ ಸಮಾನ ಅಂಶ.  ಇತ್ತೀಚೆಗೆ ಕೆಲವರು AM ಅಂದರೆ ಮೀಡಿಯಂ ವೇವ್ ಎಂದು ತಪ್ಪಾಗಿ ವ್ಯಾಖ್ಯಾನಿಸುತ್ತಾರೆ.



ಶಾರ್ಟ್ ವೇವ್ ಪ್ರಸಾರ  ವಾತಾವರಣದ ಅಯನೊಸ್ಪಿಯರ್(ionosphere)ನಿಂದ ಪ್ರತಿಫಲನಗೊಂಡು  ಭೂಮಿಗೆ ಮರಳುವುದರಿಂದ ದೂರ ದೂರದ ಖಂಡಾಂತರಗಳಿಗೂ ತಲುಪಬಲ್ಲದು.  ಮೀಡಿಯಂ ವೇವ್ ಪ್ರಸಾರ ಹಗಲು ಹೊತ್ತಿನಲ್ಲಿ  ಭೂಮಿಯ ಮೇಲ್ಮೈ ಮೂಲಕ ಪಸರಿಸುವುದರಿಂದ ಸೀಮಿತ ಪ್ರದೇಶವನ್ನು ತಲುಪುತ್ತದೆ.  ರಾತ್ರಿಯ ಹೊತ್ತು ಶಾರ್ಟ್ ವೇವಿನಂತೆ ionosphereನಿಂದಲೂ ಪ್ರತಿಫಲನಗೊಳ್ಳುವುದರಿಂದ ಕೊಂಚ ಹೆಚ್ಚು ದೂರ ಸಾಗುತ್ತದೆ.  FM ಪ್ರಸಾರ line of sight ತತ್ವ ಅನುಸರಿಸಿವುದರಿಂದ ಇದರ ವ್ಯಾಪ್ತಿ ಬಲು ಕಮ್ಮಿ.  ಸೂಕ್ತ antenna ಬಳಸಿದರೆ ದೂರದ FM ನಿಲಯಗಳನ್ನೂ ಆಲಿಸಲು ಸಾಧ್ಯವಿದೆ. ಹಳೆಯ ಟಿವಿ antennaದ ಭಾಗಗಳನ್ನು ಬಳಸಿ 170 ಕಿ.ಮೀ. ದೂರದ ಹಾಸನ ಮತ್ತು 137 ಕಿ.ಮೀ. ದೂರದ ಮಡಿಕೇರಿ FM ಪ್ರಸಾರ  ನನಗೆ ಮಂಗಳೂರಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಆದರೆ ದೂರ ಸಾಗಬಹುದಾದ ಶಾರ್ಟ್ ವೇವ್ ತರಂಗಗಳನ್ನು amplitude modulation ಬದಲಿಗೆ frequency modulationಗೆ ಒಳಪಡಿಸಿ ಗುಣಮಟ್ಟ ವೃದ್ಧಿಸಲು ಏಕೆ ಸಾಧ್ಯವಿಲ್ಲ ಎಂದು ನನಗೆ ಗೊತ್ತಿಲ್ಲ.


ನಮ್ಮ ದೇಶದಲ್ಲಿ 1926ರಲ್ಲೇ ರೇಡಿಯೋ ಪ್ರಸಾರ ಆರಂಭವಾದರೂ 50ರ ದಶಕದ ನಂತರ ಹೆಚ್ಚು ಜನಪ್ರಿಯವಾಯಿತು. ಹಿಂದಿನ ಕಾಲದಲ್ಲಿ ವಾಲ್ವ್‌ಗಳನ್ನು ಬಳಸುತ್ತಿದ್ದುದರಿಂದ ರೇಡಿಯೋಗಳು ಗಜಗಾತ್ರದ್ದಾಗಿರುತ್ತಿದ್ದವು.  ನಿಲಯಗಳನ್ನು ಸುಲಭವಾಗಿ ಟ್ಯೂನ್ ಮಾಡಿಕೊಳ್ಳಲು ಬ್ಯಾಂಡ್ ಎಂಬ ವ್ಯವಸ್ಥೆ ಇರುತ್ತಿತ್ತು. ಇಲ್ಲಿ ಬ್ಯಾಂಡ್ ಅಂದರೆ ಪಟ್ಟಿ ಎಂಬರ್ಥ. ಮೀಡಿಯಂ ವೇವ್ ಸ್ಟೇಶನುಗಳನ್ನು ಟ್ಯೂನ್ ಮಾಡುವುದು ಅಷ್ಟೇನೂ ಕಷ್ಟ ಇರಲಿಲ್ಲ.  ಹಾಗಾಗಿ ಎಷ್ಟೇ ದೊಡ್ಡ ರೇಡಿಯೋ ಆದರೂ ಮೀಡಿಯಂ ವೇವ್ ಬ್ಯಾಂಡ್ ಒಂದೇ ಇರುತ್ತಿದ್ದುದು.  ಆದರೆ ಶಾರ್ಟ್ ವೇವ್‌ನಲ್ಲಿ ನಿಲಯಗಳು ಒಂದಕ್ಕೊಂದು ತುಂಬಾ ಹತ್ತಿರದಲ್ಲಿರುತ್ತಿದ್ದುದರಿಂದ  pointer ಕೂದಲೆಳೆಯಷ್ಟು ಅಚೀಚೆ ಆದರೂ ಇನ್ನೊಂದು ಸ್ಟೇಶನ್ ಕೇಳುತ್ತಿತ್ತು. ಅದಕ್ಕೆ ಶಾರ್ಟ್ ವೇವ್ ತರಂಗಾಂತರಗಳನ್ನು ಹೆಚ್ಚು ಬ್ಯಾಂಡುಗಳಲ್ಲಿ ಹಂಚಿ ಹಾಕುತ್ತಿದ್ದರು.  ಹೆಚ್ಚು ಬ್ಯಾಂಡ್ ಇದ್ದಷ್ಟು ಶಾರ್ಟ್ ವೇವ್ ಸ್ಟೇಶನುಗಳನ್ನು ಟ್ಯೂನ್ ಮಾಡುವುದು ಸುಲಭವಾಗುತ್ತಿತ್ತು. ಬ್ಯಾಂಡುಗಳನ್ನು ಬದಲಿಸಲು ಪಿಯಾನೋ ಕೀ ರೀತಿಯ ಸ್ವಿಚ್ಚುಗಳಿರುತ್ತಿದ್ದವು.  ಕೆಲವು ರೇಡಿಯೋಗಳಲ್ಲಿ ಇದಕ್ಕಾಗಿ ತಿರುಗಿಸುವ ಕಿವಿ ಇರುತ್ತಿತ್ತು. ಬಲಬದಿಯ ಬಿರಡೆಯನ್ನು ತಿರುಗಿಸಿದರೆ ಬ್ಯಾಂಡ್ ಮತ್ತು ಮೀಟರುಗಳನ್ನು ತೋರಿಸುವ ಡಯಲಿನಲ್ಲಿರುವ ಮುಳ್ಳು  ಅತ್ತಿತ್ತ ಚಲಿಸುತ್ತಿತ್ತು. ಡಯಲಿನಲ್ಲಿ ನಿಲಯಗಳ ಹೆಸರೂ ಇರುವ ರೇಡಿಯೋಗಳೂ ಇದ್ದವು.  ಒಬ್ಬರ ಮನೆಯ ರೇಡಿಯೋದಲ್ಲಿ ಮೇಲಿಂದ ಕೆಳಗೆ ಚಲಿಸುವ ಮುಳ್ಳಿರುವ ಡಯಲ್ ನೋಡಿದಾಗ ಮೇಲಿರುವ ಸ್ಟೇಶನ್ ಟ್ಯೂನ್ ಮಾಡಿಟ್ಟರೆ ಮುಳ್ಳು ಸರ್ರನೆ ಕೆಳಗೆ ಜಾರದೇ ಎಂದು ನನಗೆ ಅನ್ನಿಸಿತ್ತು! ಡಯಲ್ ಇಲ್ಲದೆ ಅಂದಾಜಿನಿಂದ ಬಿರಡೆ ತಿರುಗಿಸಿ ಟ್ಯೂನ್ ಮಾಡುವ ರೇಡಿಯೋಗಳೂ ಇದ್ದವು.  ಎಡ ಬದಿಯ ಬಿರಡೆ ಆಫ್/ಆನ್ ಮಾಡಲು ಮತ್ತು ವಾಲ್ಯೂಮ್ ನಿಯಂತ್ರಿಸಲು ಉಪಯೋಗವಾಗುತ್ತಿತ್ತು.  ಕೆಲವು ರೇಡಿಯೋಗಳಲ್ಲಿ ಬಾಸ್, ಟ್ರೆಬಲ್ ಮುಂತಾದವುಗಳಿಗಾಗಿ ಹೆಚ್ಚಿನ ಬಿರಡೆಗಳೂ ಇರುತ್ತಿದ್ದವು.  ವಿದ್ಯುತ್ತಿನಿಂದ ನಡೆಯುವ ರೇಡಿಯೋ ಆದರೆ ಡಯಲ್ ಲ್ಯಾಂಪ್ ಕೂಡ ಇರುತ್ತಿತ್ತು.  ಸ್ಟೇಶನ್ ಸರಿಯಾಗಿ ಟ್ಯೂನ್ ಆದಾಗ ಎರಡು ಬೆಳಕುಗಳು ಒಂದನ್ನೊಂದು ಸಂಧಿಸುವ magic eye ಎಂಬ ಸಾಧನವೂ ಕೆಲವು ರೆಡಿಯೋಗಳಲ್ಲಿ ಇರುತ್ತಿತ್ತು.  ಆದರೆ 90 ವೋಲ್ಟಿನ ದೊಡ್ಡ ಡ್ರೈ ಬ್ಯಾಟರಿಯಿಂದ  ಅಥವಾ 12 ವೋಲ್ಟಿನ ಕಾರ್ ಬ್ಯಾಟರಿಯಿಂದ ನಡೆಯುವ ರೇಡಿಯೋಗಳಲ್ಲಿ ಇವು ಇರುತ್ತಿರಲಿಲ್ಲ. ಶಾರ್ಟ್ ವೇವ್ ಸ್ಟೇಶನುಗಳು ಸಿಗುವ ಸ್ಥಾನವನ್ನು ನೆನಪಿಟ್ಟುಕೊಳ್ಳಲು ಮುಳ್ಳಿನ ಸಮೀಪ ಇರುವ  ಇನ್ಯಾವುದೋ ಬ್ಯಾಂಡಿನ ಗೆರೆಯೊಂದನ್ನು ಗುರುತಿಸಿಕೊಳ್ಳುವುದು ಸುಲಭವಾಗುತ್ತಿತ್ತು.  ಕೆಲವು ರೇಡಿಯೋಗಳಲ್ಲಿ ಇದಕ್ಕೆಂದೇ log scale ಎಂಬ  ಬೇರೆಯೇ ಪಟ್ಟಿ ಇರುತ್ತಿತ್ತು. ವಾಲ್ವ್ ರೇಡಿಯೋಗಳು ಕಾರ್ಯಾರಂಭಿಸಲು ಸ್ವಿಚ್ ಆನ್ ಮಾಡಿ ಸ್ವಲ್ಪ ಹೊತ್ತು ಕಾಯಬೇಕಾಗುತ್ತಿತ್ತು.  ಮನೆಯಲ್ಲಿ ಗ್ರಾಮೋಫೋನ್ ಇದ್ದರೆ ಜೋಡಿಸಿಕೊಳ್ಳಲು ಅಂದಿನ ರೇಡಿಯೋಗಳಲ್ಲಿ ಪಿಕ್ ಅಪ್ ಸೌಲಭ್ಯ ಇರುತ್ತಿತ್ತು. ಅತಿರಿಕ್ತ ಸ್ಪೀಕರ್ ಜೋಡಿಸಿಕೊಳ್ಳುವ ವ್ಯವಸ್ಥೆಯೂ ಇರುತ್ತಿತ್ತು. ಸಿರಿವಂತರ ಬಂಗಲೆಗಳಲ್ಲಿ ರೆಕಾರ್ಡುಗಳನ್ನು ನುಡಿಸಲು ಟರ್ನ್ ಟೇಬಲ್ ಒಳಗೊಂಡ ಬೃಹತ್ ಗಾತ್ರದ ರೇಡಿಯೋಗ್ರಾಮ್ ಇರುತ್ತಿತ್ತು.


ಶಾರ್ಟ್‍ವೇವ್‌ನಲ್ಲಿ ಸಾಮಾನ್ಯವಾಗಿ 90, 75, 60, 49, 41, 31, 25, 19, 16 ಮತ್ತು 13 ಮೀಟರುಗಳಿರುತ್ತಿದ್ದವು.  ಮೂರು ಶಾರ್ಟ್‌ವೇವ್  ಬ್ಯಾಂಡುಗಳುಳ್ಳ ರೇಡಿಯೊ ಆದರೆ 90, 75, 60,  49 ಒಂದರಲ್ಲಿ, 41, 31, 25 ಒಂದರಲ್ಲಿ ಮತ್ತು 19,16,13 ಇನ್ನೊಂದು ಬ್ಯಾಂಡಿನಲ್ಲಿರುತ್ತಿದ್ದವು.  ಆದರೆ ಹೆಚ್ಚಿನ ನಿಲಯಗಳ ಪ್ರಸಾರ ಇರುತ್ತಿದ್ದುದು 60, 49, 41, 31 ಮತ್ತು 25 ಮೀಟರುಗಳಲ್ಲಿ.  ರೇಡಿಯೋ ಸಿಲೋನ್ ಹಗಲಿನಲ್ಲಿ 25 ಮತ್ತು  41 ಹಾಗೂ ರಾತ್ರೆ 25 ಮತ್ತು  49 ಮೀಟರುಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು.

ಇಲ್ಲಿ ಕಾಣಿಸುತ್ತಿರುವುದು ಬೇರೆಯವರ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದ್ದ ರೇಡಿಯೋ ಸಿಲೋನ್ 70ರ ದಶಕದ ಆದಿಯಲ್ಲಿ ತನ್ನ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ಜಾಹೀರಾತು. ಆದರೆ ಫ್ರೀಕ್ವೆನ್ಸಿಗಳಿಗೆ ಸಂಬಂಧಿಸಿದಂತೆ ಇದರಲ್ಲಿ ಬಹಳ ತಪ್ಪುಗಳು ನುಸುಳಿವೆ.  ಹಳೆಯ ಕಾಲದ ರೇಡಿಯೋ ಸಿಲೋನ್ ಕೇಳುಗರು ಮತ್ತು ಈ ಲೇಖನವನ್ನು ಓದಿದವರು ಅವುಗಳನ್ನು ಸುಲಭವಾಗಿ ಗುರುತಿಸಬಹುದು. 


ಆಗಿನ ರೇಡಿಯೋಗಳಿಗೆ ಅತಿ ಎತ್ತರದ ಏರಿಯಲ್ ಮತ್ತು ಅರ್ತ್ ಕನೆಕ್ಷನ್ ಅಳವಡಿಸಲಾಗುತ್ತಿತ್ತು.  ಮಳೆಗಾಲದ ಆರಂಭ ಮತ್ತು ಅಂತ್ಯದ ಗುಡುಗು ಸಿಡಿಲುಗಳಿಂದುಂಟಾಗಬಹುದಾದ ಹಾನಿಯನ್ನು ತಪ್ಪಿಸಲು knife switch ಬಳಸಿ ಏರಿಯಲ್ ಬೇರ್ಪಡಿಸುವ ವ್ಯವಸ್ಥೆಯೂ ಇರುತ್ತಿತ್ತು. ಆರಂಭದ ದಿನಗಳಲ್ಲಿ ಮನೆಯ ಮೇಲೆ ಏರಿಯಲ್ ಇರುವುದು ಪ್ರತಿಷ್ಠೆಯ ಸಂಕೇತವಾಗಿತ್ತಂತೆ. ಕಳ್ಳ ಕಾಕರು ಇಂಥ ಮನೆಗಳ ಮೇಲೆ ಕಣ್ಣಿಡುವುದೂ ಇತ್ತಂತೆ! ಈಗಿನಂತೆ ಟಿವಿ, ಕಂಪ್ಯೂಟರ್, ಮೊಬೈಲುಗಳಂಥ  ವಿಕಿರಣ ಸೂಸುವ ಯಾವುದೇ gadgetಗಳು ಇಲ್ಲದಿದ್ದುದರಿಂದ ಬಲು ದೂರದ ನಿಲಯಗಳ ಪ್ರಸಾರ ಬಲು ಸ್ಪಷ್ಟವಾಗಿ ಕೇಳಿಸುತ್ತಿತ್ತು.  ಸೀಮಿತ ಸಂಖ್ಯೆಯಲ್ಲಿದ್ದ ನಿಲಯಗಳ ಸಮಯಸಾರಿಣಿ ಎಲ್ಲರಿಗೂ ಗೊತ್ತಿರುತ್ತಿದ್ದುದರಿಂದ ಏಕಾಗ್ರತೆಯಿಂದ ಎಲ್ಲ ಪ್ರಮುಖ ಕಾರ್ಯಕ್ರಮಗಳನ್ನು ಆಲಿಸಿ ಆನಂದಿಸಲು ಸಾಧ್ಯವಾಗುತ್ತಿತ್ತು. ವಿವರಗಳಿಗೆ ರೇಡಿಯೋ ಟೈಮ್ ಟೇಬಲ್ ನೋಡಿ.


ಟ್ರಾನ್ಸಿಸ್ಟರ್ ರೇಡಿಯೋ 1954ರಲ್ಲೇ ಆವಿಷ್ಕರಿಸಲ್ಪಟ್ಟಿದ್ದರೂ ಭಾರತದಲ್ಲಿ 1960ರ ದಶಕದಲ್ಲಿ  ಪೋರ್ಟಬಲ್ ಟ್ರಾನ್ಸಿಸ್ಟರ್ ಮತ್ತು ಟೇಬಲ್ ಟ್ರಾನ್ಸಿಸ್ಟರುಗಳು ಜನಪ್ರಿಯವಾದವು.  ಸುಮಾರು 70ರ ದಶಕದ ಆರಂಭದ ವರೆಗೆ ವಾಲ್ವ್ ರೇಡಿಯೋಗಳೂ ಬರುತ್ತಿದ್ದವು. ಟೇಬಲ್ ಟ್ರಾನ್ಸಿಸ್ಟರುಗಳು 9 ವೋಲ್ಟಿನ ಬ್ಯಾಟರಿಯಿಂದ ನಡೆಯುತ್ತಿದ್ದವು. ಅದರ ಬದಲಿಗೆ 6 ಟಾರ್ಚ್ ಸೆಲ್ಲುಗಳನ್ನು ಜೋಡಿಸಿ 9 ವೋಲ್ಟ್ ಮಾಡಿ ಕೊಟ್ಟರೂ ಆಗುತ್ತಿತ್ತು. ಇಂಥ ಟೇಬಲ್ ಟ್ರಾನ್ಸಿಸ್ಟರುಗಳು ಬಳಳಸಲ್ಪಡುತ್ತಿದ್ದ  ಪ್ರದೇಶದಲ್ಲಿ ವಿದ್ಯುತ್ ಬಂದ ಮೇಲೆ ಸೆಲ್ಲುಗಳ ಖರ್ಚು ಉಳಿಸಲು ಬ್ಯಾಟರಿ ಎಲಿಮಿನೇಟರುಗಳ ಬಳಕೆ ಆರಂಭವಾಯಿತು. ಕಳಪೆ ಗುಣಮಟ್ಟದ ಎಲಿಮಿನೇಟರ್ ಬಳಸಿ ರೇಡಿಯೋಗಳ ಆರೋಗ್ಯ ಕೆಟ್ಟದ್ದೂ ಇದೆ.


ಅತ್ತಿತ್ತ ಕೊಂಡೊಯ್ಯಬಹುದಾದ ಪೋರ್ಟೆಬಲ್  ಟ್ರಾನ್ಸಿಸ್ಟರುಗಳಲ್ಲಿ ಶಾರ್ಟ್ ವೇವ್ ಪ್ರಸಾರ ಆಲಿಸಲು ಕೆಲವಕ್ಕೆ ಟೆಲಿಸ್ಕೋಪಿಕ್ ಏರಿಯಲ್ ಇದ್ದರೆ ಇನ್ನು ಕೆಲವಕ್ಕೆ ಅಂತರ್ನಿರ್ಮಿತ ಲೂಪ್ ಏರಿಯಲ್ ಇರುತ್ತಿತ್ತು. ಮೀಡಿಯಂ ವೇವ್ ಪ್ರಸಾರ ಆಲಿಸಲು ರೇಡಿಯೋದ ಒಳಗಿರುವ Ferrite Rod Antenna ಬಳಕೆಯಾಗುತ್ತಿತ್ತು. ಮೀಡಿಯಮ್ ವೇವ್ ತರಂಗಗಳು ದಿಶಾ ಸಂವೇದಿ ಆದ್ದರಿಂದ  ರೇಡಿಯೊವನ್ನು  ನಿರ್ದಿಷ್ಟ ದಿಕ್ಕಿಗೆ ತಿರುಗಿಸಬೇಕಾಗುತ್ತಿತ್ತು. ಕೆಲವು ಸಲ ಟ್ರಾನ್ಸಿಸ್ಟರಿನ  ತಲೆ ಮೇಲೆ ಕೈ ಇಟ್ಟರೆ ಧ್ವನಿ ಚೆನ್ನಾಗಿ ಮೂಡುತ್ತಿದ್ದುದು ಅಂಗೈ plate condenserನಂತೆ ವರ್ತಿಸುತ್ತಿದ್ದುದರಿಂದಲೇ ಹೊರತು ನಮ್ಮ ಸ್ಪರ್ಶದಿಂದ ಅದಕ್ಕೆ ಖುಶಿಯಾಗಿ ಅಲ್ಲ! ಪೋರ್ಟೆಬಲ್  ಟ್ರಾನ್ಸಿಸ್ಟರುಗಳ ಬ್ಯಾಂಡ್ ಸ್ವಿಚ್ಚು ಬಲು ನಾಜೂಕಾಗಿದ್ದು ಕೆಟ್ಟು ಹೋಗುವುದು ಹೆಚ್ಚು.

70ರ ದಶಕದ ಉತ್ತರಾರ್ಧದಲ್ಲಿ ಟೇಪ್ ರೆಕಾರ್ಡರ್ ಮತ್ತು ರೇಡಿಯೋ ಎರಡನ್ನೂ ಒಳಗೊಂಡಿರುವ ಟೂ ಇನ್ ವನ್ ಸೆಟ್ಟುಗಳ ಆಗಮನವಾಯಿತು. ಇದರಿಂದ ಇಷ್ಟದ ಕಾರ್ಯಕ್ರಮಗಳನ್ನು ನೇರವಾಗಿ ಧ್ವನಿಮುದ್ರಿಸಿಕೊಳ್ಳುವ ಅನುಕೂಲ ಒದಗಿತು. 80ರ ದಶಕದಲ್ಲಿ integrated circuit ಬಳಸಿದ ರೇಡಿಯೊಗಳ ಯುಗ ಆರಂಭವಾಗಿ ರೇಡಿಯೊಗಳ ಗಾತ್ರದೊಡನೆ ಅವುಗಳ ಗುಣಮಟ್ಟವೂ ಕುಗ್ಗತೊಡಗಿತು. 21ನೇ ಶತಮಾನ ಸಮೀಪಿಸುತ್ತಿದ್ದಂತೆ ಡಿಜಿಟಲ್ ರೇಡಿಯೊಗಳು ಕಾಣಿಸಿಕೊಂಡವು.

ವಾಲ್ವ್ ತಂತ್ರಜ್ಞಾನದ ಕಾಲದಿಂದಲೇ ಕಾರ್ ರೇಡಿಯೋಗಳ ಬಳಕೆಯೂ ಆರಂಭವಾಗಿತ್ತು.  ಕಾರಿನ ಬಾಡಿ ದೊಡ್ಡ ಏರಿಯಲ್‌ನಂತೆ ವರ್ತಿಸುವುದರಿಂದ ಅವುಗಳ ಕಾರ್ಯಕ್ಷಮತೆ ಮನೆ ರೇಡಿಯೋಗಳಿಗಿಂತ ಹೆಚ್ಚು. ಅವುಗಳಲ್ಲಿರುತ್ತಿದ್ದ ಗುಂಡಗಿನ ಬಿರಡೆಗಳಿಂದಾಗಿ ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ರೇಡಿಯೋ ಬಟನ್ ಪದ ಬಳಕೆಗೆ ಬಂತು.  ಎಂದಾದರೂ ರೇಡಿಯೋಗಳೇ   ಕಣ್ಮರೆಯಾಗಿ ಹೋದರೂ ಈ ರೇಡಿಯೋ ಬಟನ್‌ಗಳು ಶಾಶ್ವತವಾಗಿ ಉಳಿಯುತ್ತವೆ!


ಈಗ ಗಲ್ಲಿ ಗಲ್ಲಿಗಳಲ್ಲಿ ಮೊಬೈಲ್ ‘ಶಾಪ್ಪಿ’ಗಳಿರುವಂತೆ ಆಗ ಎಲ್ಲೆಡೆ ರೇಡಿಯೊ ಮಾರ್ಟ್‌ಗಳು ಕಾಣಿಸುತ್ತಿದ್ದವು. ಸಣ್ಣ ಪೇಟೆ ಪಟ್ಟಣಗಳಲ್ಲೂ ರೇಡಿಯೋ ರಿಪೇರಿ ಮಾಡುವವರು ಇರುತ್ತಿದ್ದರು. ಪತ್ರಿಕೆಗಳ ಪುಟಗಳೂ ರೇಡಿಯೊ ಜಾಹೀರಾತುಗಳಿಂದ ತುಂಬಿರುತ್ತಿದ್ದವು. ಆಗಿನ ಜಾಹೀರಾತುಗಳಲ್ಲಿ ಎಷ್ಟು ಬ್ಯಾಂಡುಗಳೆಂದು ಹೇಳಿಕೊಳ್ಳುವುದರ ಜೊತೆಗೆ ಕೊಳ್ಳುಗನಿಗೆ ಏನೂ ಸಂಬಂಧಿಸದ ಇಂತಿಷ್ಟು ಟ್ರಾನ್ಸಿಸ್ಟರುಗಳು/ವಾಲ್ವುಗಳು, ಇಂತಿಷ್ಟು ಡಯೋಡುಗಳು ಇವೆ ಎಂಬ ಉಲ್ಲೇಖವೂ ಇರುತ್ತಿತ್ತು. 60ರ ದಶಕದಲ್ಲಿ 400ರಿಂದ 500 ರೂಪಾಯಿಗೆ ಉತ್ತಮ ಟೇಬಲ್ ರೇಡಿಯೋಗಳು ದೊರಕುತ್ತಿದ್ದವು.  ಹೆಚ್ಚು ಬೆಲೆಯವೂ ಇದ್ದವು. ಧ್ವನಿಯ ಉತ್ತಮ ಗುಣಮಟ್ಟಕ್ಕೆ ಸಹಕಾರಿ ಎಂದು ಮರದ ಕ್ಯಾಬಿನೆಟ್ ಉಳ್ಳ ರೇಡಿಯೋಗಳನ್ನು ಜನರು ಹೆಚ್ಚು ಇಷ್ಟ ಪಡುತ್ತಿದ್ದರು. ಆಗಿನ ರೇಡಿಯೋಗಳಿಗೆ ಟ್ರಾಪಿಕಲೈಸ್‌ಡ್ ಅಥವಾ ಮಾನ್ಸೂನೈಸ್‌ಡ್ ಎಂಬ ವಿಶೇಷಣವೂ ಇರುತ್ತಿತ್ತು.  ಮಳೆಗಾಲದಲ್ಲಿ ತೇವ ಬಾಧಿಸದಂತೆ ಒಳಗಿನ ಭಾಗಗಳಿಗೆ ವಾರ್ನಿಶ್ ಬಳಿಯುವುದನ್ನು ಹೀಗನ್ನುತ್ತಿದ್ದರೋ ಏನೋ. ಹೊಸ ರೇಡಿಯೋ ತಂದಾಗ ಆ ವಾರ್ನಿಶ್ ವಾಸನೆ ಘಮ್ಮೆಂದು ಮೂಗಿಗೆ ಅಡರುತ್ತಿತ್ತು.  ಆ ಕಾಲದ ಹಾಡುಗಳನ್ನು ಈಗ ಕೇಳಿದಾಗ ಅಂದಿನ ನೆನಪುಗಳೊಂದಿಗೆ ವಾರ್ನಿಶ್ ವಾಸನೆಯೂ ಮಿಳಿತವಾಗಿರುತ್ತದೆ.


ಒಂದು ಕಾಲದಲ್ಲಿ ರೇಡಿಯೋ ಇಟ್ಟುಕೊಳ್ಳಬೇಕಾದರೆ ಅಂಚೆ ತಂತಿ ಇಲಾಖೆಯಿಂದ ಲೈಸನ್ಸ್ ಪಡೆದು ವರ್ಷಕ್ಕೊಮ್ಮೆ 15 ರೂ ಕೊಟ್ಟು ನವೀಕರಿಸಬೇಕಾಗುತ್ತಿತ್ತು. ನಮೂದಾಗಿರುವ ಷರತ್ತುಗಳ ಪ್ರಕಾರ ಬಳಸಿದ antennaದಿಂದ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿತ್ತು. ರೇಡಿಯೋವನ್ನು ಖಾಸಗಿ ಆಗಿ ಮಾತ್ರ ಬಳಸಬೇಕಿತ್ತು. ಹೋಟೆಲು ಅಂಗಡಿಗಳಲ್ಲಿ ರೇಡಿಯೊ ಇಟ್ಟುಕೊಂಡಿದ್ದವರಿಗೆ ಹೆಚ್ಚಿನ ಶುಲ್ಕದ ಬೇರೆ ಲೈಸನ್ಸ್ ಇತ್ತಂತೆ. ಹೆಚ್ಚಿನ ಸ್ಪೀಕರ್ ಬಳಸಿದರೆ ಅದಕ್ಕೂ ಶುಲ್ಕ ಇತ್ತಂತೆ. ಮೀಡಿಯಮ್ ವೇವ್ ಮಾತ್ರ ಇರುವ ರೇಡಿಯೋಗಳಿಗೆ ಲೈಸನ್ಸ್ ಶುಲ್ಕದಲ್ಲಿ ವಿನಾಯಿತಿ ಇತ್ತು.  ಆಗ ವಿದೇಶಿ ರೇಡಿಯೋ ಕೊಳ್ಳುತ್ತಿದ್ದವರು ಕೇಳುತ್ತಿದ್ದ ಪ್ರಶ್ನೆ ‘ರಸೀದಿ ಇದೆಯೇ?’ ಎಂದಾಗಿತ್ತು. ಇಲ್ಲದಿದ್ದರೆ ಲೈಸನ್ಸ್ ಸಿಗುತ್ತಿರಲಿಲ್ಲ. 1984ರಲ್ಲಿ ಲೈಸನ್ಸ್ ಪದ್ಧತಿ ಕೊನೆಗೊಂಡಿತು.


1977ರಲ್ಲೇ ಭಾರತದಲ್ಲಿ FM ರೇಡಿಯೊ ಪ್ರಸಾರ ಆರಂಭವಾಗಿದ್ದರೂ 2000 ಇಸವಿಯಿಂದ ಈಚೆಗೆ ಅದು ಹೆಚ್ಚು ಜನಪ್ರಿಯವಾಯಿತು. ರೇಡಿಯೊ ಪ್ರಸಾರದಲ್ಲಿ  ಆಕಾಶವಾಣಿಯ ಏಕಸ್ವಾಮ್ಯ ಕೊನೆಗೊಂಡ ಮೇಲೆ ಅನೇಕ ಖಾಸಗಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಸಕ್ರಿಯವಾದವು. ಈಗ ರೇಡಿಯೋ ಎಂದರೆ ಬರೇ FM ಎಂದು ಜನರು ತಿಳಿಯುವಂತಾಗಿದೆ.

ಪ್ರಸಿದ್ಧವಾಗಿದ್ದ ನ್ಯಾಶನಲ್ ಎಕ್ಕೊ, ಮರ್ಫಿ, ಬುಶ್ ಮುಂತಾದ ರೇಡಿಯೊ ಕಂಪನಿಗಳು ಕಣ್ಮರೆಯಾಗಿದ್ದು ಫಿಲಿಪ್ಸ್ ಮಾತ್ರ ಈಗಲೂ ಸಾಂಪ್ರದಾಯಿಕ ಶೈಲಿಯ ಅನಲಾಗ್ ರೇಡಿಯೊಗಳನ್ನು ಉತ್ಪಾದಿಸುತ್ತಿದೆ. ಸ್ಥಳೀಯ ಬೀದಿ ಬದಿ ವ್ಯಾಪಾರಿಗಳೂ ಅಗ್ಗದ ಮಲ್ಟಿ ಬ್ಯಾಂಡ್ ರೇಡಿಯೋಗಳನ್ನು ಮಾರುತ್ತಾರೆ. ಅಂತರ್ಜಾಲದಲ್ಲಿ ಹುಡುಕಿದರೆ  ಕೆಲವು ನೂರು ರೂಪಾಯಿಗಳಿಂದ ಕೆಲವು ಸಾವಿರ ರೂಪಾಯಿ ಬೆಲೆಯ ತರಹೆವಾರಿ  ಅನಲಾಗ್ / ಡಿಜಿಟಲ್  ಮಲ್ಟಿಬ್ಯಾಂಡ್ ವಿದೇಶಿ ರೇಡಿಯೊಗಳು ಕೊಳ್ಳಲು ಸಿಗುತ್ತವೆ. ಆದರೆ  ಆಕಾಶವಾಣಿ ತನ್ನ ಶಾರ್ಟ್‌ ವೇವ್ ಟ್ರಾನ್ಸ್‌‍ಮಿಟರುಗಳನ್ನು ಒಂದೊಂದಾಗಿ ಮುಚ್ಚುವ ಕುರಿತು ಯೋಚಿಸುತ್ತಿದೆ ಎಂದು ಸುದ್ದಿ ಇದೆ. ಕ್ರಮೇಣ ಮೀಡಿಯಂ ವೇವ್ ಪ್ರಸಾರ ಕೂಡ ಕೊನೆಗೊಂಡು FM ಮಾತ್ರ ಉಳಿಯಬಹುದು.   ಹೀಗಾಗಿ ಇನ್ನು ಮಲ್ಟಿಬ್ಯಾಂಡ್ ರೇಡಿಯೊ ಕೊಂಡು ಯಾವ ಉಪಯೋಗವೂ ಇಲ್ಲ. 


ಅಂತರ್ಜಾಲ ಪ್ರಸಾರವನ್ನು ರೇಡಿಯೊದಲ್ಲೇ  ಕೇಳುವ ಅನುಭವ ಬೇಕೆನಿಸಿದರೆ  ಮೊಬೈಲಿಗೆ ಚಿಕ್ಕ FM ಟ್ರಾನ್ಸ್‌ಮಿಟರ್ ಒಂದನ್ನು  ಅಳವಡಿಸಿ  ಯಾವುದೇ  FM ರೇಡಿಯೋದಲ್ಲಿ ಆ ಪ್ರಸಾರ ಆಲಿಸಬಹುದು. ರೇಡಿಯೋದಲ್ಲಿ line in ವ್ಯವಸ್ಥೆ ಇದ್ದರೆ ಅದಕ್ಕೆ ಬ್ಲೂ ಟೂತ್ ರಿಸೀವರ್ ಒಂದನ್ನು ಅಳವಡಿಸಿ ಮೊಬೈಲಿನಿಂದ ನೇರ ಸಂಪರ್ಕ ಪಡೆಯಬಹುದು. ಏನೇ ಮಾಡಿದರೂ ಹಿಂದಿನ ಕಾಲದ ಅನಲಾಗ್ ರೇಡಿಯೋ ಪ್ರಸಾರವನ್ನು ಆಲಿಸುವಾಗಿನ ಸುಖ ಇನ್ನು ಕನಸು ಮಾತ್ರ.


ಅನೇಕ ಚಲನ ಚಿತ್ರಗಳಲ್ಲಿ ಹಳೆಯ ಕಾಲದ ರೇಡಿಯೋಗಳು ಕಾಣಸಿಗುತ್ತವೆ. ಜಿಂದಗೀ ಭರ್ ನಹೀಂ ಭೂಲೇಗಿ, ನೀ ಮೊದಲು ಮೊದಲು ನನ್ನ ನೋಡಿದಾಗ,  ಕನ್ನಡವೇ ತಾಯ್ನುಡಿಯು, ನಾ ನಿನ್ನ ಮೋಹಿಸಿ ಬಂದಿಹೆನು, ಜೀವ ವೀಣೆ ನೀಡು ಮಿಡಿತದ ಸಂಗೀತ ಮುಂತಾದ ಹಾಡುಗಳಲ್ಲಿ  ರೇಡಿಯೋ ಪ್ರಮುಖ ಪಾತ್ರಧಾರಿ. ನನಗೇಕೋ ಈ ದೊಡ್ಡ ರೇಡಿಯೋಗಳ ಮೇಲೆ ಬಲು ಮೋಹ.  ನನ್ನಲ್ಲಿ ವಿವಿಧ ಗಾತ್ರದ ಹತ್ತಾರು ಆಧುನಿಕ ರೇಡಿಯೋಗಳಿದ್ದರೂ ಡಯಲ್ ಲ್ಯಾಂಪ್ ಇರುವ ದೊಡ್ಡ ರೇಡಿಯೋ ಒಂದನ್ನು ನಾನು ಹೊಂದಿದಂತೆ ಈಗಲೂ ನನಗೆ ಕನಸು ಬೀಳುವುದಿದೆ!
 
11-2-20

4 comments:

  1. ನಾನು ಸಣ್ಣವನಾಗಿದ್ದಾಗ ರೇಡಿಯೋ ಟ್ಯೂನ್
    ಮಾಡುವಾಗ ಕಿವಿಯನ್ನು ಸ್ಟೇಶನ್
    ಇಂಡಿಕೇಟರ್ ಆಗಿದ್ದ ಕೆಂಪು ಕಡ್ಡಿಯ ಹತ್ತಿರ ಇಟ್ಟುಕೊಳ್ಳುತ್ತಿದ್ದೆ.ಕಾರಣ ನನಗೆ ಶಬ್ದವೂ ಆ ಕಡ್ಡಿಯಿಂದಲೇ ಹೊರಡುತ್ತಿದೆಯೆಂಬ ಭಾವನೆಯಿತ್ತು!

    ReplyDelete
    Replies
    1. ನನಗೆ ಈಗಲೂ ಹಾಗೆಯೇ ಅನ್ನಿಸುವುದು.

      Delete
  2. Namaskara, I am Uday Kalburgi from Basaweshwar Nagar Bangalore. Recently on 13th Feb, on World Radio Day, I opened my private Vintage Radio museum. I have about 110 valve radios from 1920- 1970. Just to showcase vintage technology to youngsters. Your article is very informative. I am on 9845043014 whatsapp and udaykalburgi@gmail.com - Regards Uday K

    ReplyDelete
  3. ನಮ್ಮ ಮನೆಯಲ್ಲಿ ತಂದೆ ಅವರು ನ್ಯಾಷನಲ್ ಏಕೋ ರೇಡಿಯೋ ತಂದಾಗ ಸಂತೋಷವೇ ಸಂತೋಷ. ಮುಂದೆ ನಾನು ಜಾಬ್ ಮಾಡಲು ಸೂರತ್ ಗುಜರಾತ್ ಗೆ ಹೋದ ಮೇಲೆ ನನ್ನ ಪ್ರಥಮ ಸಂಬಳದಲ್ಲಿ ಫಿಲಿಪ್ಸ್ ಜವಾನ್ ರೇಡಿಯೋ ತಗೆದು ಕೊಂಡಿದ್ದು ಅದು ಚೆನ್ನಾಗಿ ಸಾಗುತ್ತ ಕಳೆದ ಎರಡು ವರ್ಷದ ಹಿಂದೆ ರಿಪೇರಿ ಆಗದೆ ನೆಟ್ ಮೂಲಕ ಇತ್ತೀಚೆಗೆ ಹೊಸ ರೇಡಿಯೋ ತಗೆದು ಕೊಂಡಿದ್ದು ಈಗಲೂ ರೇಡಿಯೋ ಕೇಳುವ ಹವ್ಯಾಸ ಮುಂದುವರೆದಿದೆ. ನಿಮ್ಮ ರೇಡಿಯೋ ಬಗೆಗಿನ ಲೇಖನ ಹಳೆ ನೆನಪು ಮೆಲಕು ಹಾಕಿದ್ದು ಸುಂದರ ಅನುಭವ.

    Vittal Rao Kulakarni (FB)

    ReplyDelete

Your valuable comments/suggestions are welcome