ನನಗೆ ಶಾಸ್ತ್ರೀಯ ಸಂಗೀತ ಕಲಿಸಿ ನಾನು ಸ್ವಯಂ ರೂಢಿಸಿಕೊಂಡಿದ್ದ ಕೊಳಲು ವಾದನ ಶೈಲಿಯನ್ನು ತಿದ್ದಿ ತೀಡಿದ ಗುರು ಗೋಪಾಲಕೃಷ್ಣ ಅಯ್ಯರ್ ಮೊನ್ನೆ 28-12-2019ರಂದು ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ವಯೋಸಹಜ ದುರ್ಬಲತೆಯಿಂದ ಬಳಲುತ್ತಿದ್ದ ಅವರು ಈಚಿನ ಕೆಲ ವರ್ಷಗಳಿಂದ ನಿವೃತ್ತ ಜೀವನ ನಡೆಸುತ್ತಿದ್ದರು. ಕೆಲವು ಸಹವರ್ತಿಗಳ ಸಹಾಯದೊಂದಿಗೆ ತಾನು ಕಟ್ಟಿ ಬೆಳೆಸಿದ ಕಲಾನಿಕೇತನದ ಬೆನ್ನೆಲುಬಾಗಿದ್ದುಕೊಂಡು ಅಂತರರಾಷ್ಟ್ರೀಯ ಖ್ಯಾತಿ ಪಡೆದವರೂ ಸೇರಿದಂತೆ ಸಾವಿರಾರು ಶಿಷ್ಯರನ್ನು ತಯಾರು ಮಾಡಿದ ಅವರು ಮಾತ್ರ ಕೊನೆ ವರೆಗೂ ಎಲೆಮರೆಯ ಫಲವಾಗಿಯೇ ಉಳಿದವರು. ಅಲ್ಲೊಮ್ಮೆ ಇಲ್ಲೊಮ್ಮೆ ಶಿಷ್ಯರೋ ಅಭಿಮಾನಿಗಳೋ ಸೇರಿ ಅವರಿಗೆ ಸನ್ಮಾನ ಮಾಡಿರಬಹುದಾದರೂ ಸಂಗೀತ ಕ್ಷೇತ್ರದಲ್ಲಿ ಅವರ ಸೇವೆಯನ್ನು ಒಟ್ಟಾರೆ ಸಮಾಜ ಸರಿಯಾಗಿ ಗುರುತಿಸಲಿಲ್ಲ. ತಾವಾಗಿ ತಮ್ಮ ಬಗ್ಗೆ ಹೇಳಿಕೊಂಡು ಅವರಿವರ ಪ್ರಶಂಸೆ ಮಾಡಿ ಪ್ರಶಸ್ತಿಗಳನ್ನು ಕೊಳ್ಳುವುದು ಅವರ ಜಾಯಮಾನವೂ ಆಗಿರಲಿಲ್ಲ. ಪ್ರತಿಭೆಯ ಮಹಾ ಸಾಗರವೇ ಆಗಿದ್ದ ಅವರಿಂದ ನಾನು ಬೊಗಸೆಯಷ್ಟನ್ನು ಮಾತ್ರ ಪಡೆಯಲು ಸಾಧ್ಯವಾದದ್ದಾದರೂ ಅವರ ಒಡನಾಟದ ದಿನಗಳ ವರ್ಣಮಯ ಚಿತ್ರಗಳು ಮನಃಪಟಲದಲ್ಲಿ ಅಚ್ಚೊತ್ತಿವೆ.
ಬಾಲ್ಯದಲ್ಲಿ ಮೊದಲು ನನ್ನನ್ನು ಆಕರ್ಷಿಸಿದ್ದು ಚಿತ್ರಕಲೆ. ಕೊಳಲು ವಾದನದತ್ತ ಮನಸ್ಸು ವಾಲಿದ್ದು ಆ ಮೇಲೆ. ಹೈಸ್ಕೂಲಿನಲ್ಲಿ ಡ್ರಾಯಿಂಗ್ ಕ್ಲಾಸ್ ಇದ್ದುದರಿಂದ ಚಿತ್ರಕಲೆಗೆ ಅಲ್ಲಿ ಪ್ರೋತ್ಸಾಹ ಸಿಕ್ಕಿತು. ಕೈಬರಹದ ಶಾಲಾ ವಾರ್ಷಿಕ ಪತ್ರಿಕೆಗೆ ಮುಖಚಿತ್ರ ಬರೆಯುವಷ್ಟು ಪ್ರಗತಿಯನ್ನೂ ಚಿತ್ರಕಲೆಯಲ್ಲಿ ಸಾಧಿಸಿದ್ದೆ. ಅಲ್ಲಿ ಸಂಗೀತ ಕ್ಲಾಸ್ ಸಹ ಇದ್ದರೂ ಅದು ಹುಡುಗಿಯರಿಗಷ್ಟೇ ಹೇಳಿಸಿದ್ದೆಂಬ ಭಾವನೆ ಆಗ ಇದ್ದುದರಿಂದ ಅತ್ತ ಮುಖ ಮಾಡಿರಲಿಲ್ಲ! ಕಾಲೇಜು ಮಟ್ಟಕ್ಕೆ ಬರುವಾಗ ಚಂದಮಾಮದ ಎಂ.ಟಿ.ವಿ. ಆಚಾರ್ಯರು ಅಂಚೆ ಮೂಲಕ ಚಿತ್ರಕಲೆಯನ್ನು ಕಲಿಸಲು ಆರಂಭಿಸಿದ್ದ ಆಚಾರ್ಯ ಚಿತ್ರಕಲಾ ಭವನದ ಎ.ಸಿ.ಬಿ. ಆರ್ಟ್ ಕೋರ್ಸ್ ಜಾಹೀರಾತು ಪತ್ರಿಕೆಗಳಲ್ಲಿ ಕಂಡು ಅದರ ಪರಿಚಯ ಪುಸ್ತಕವನ್ನೂ ತರಿಸಿಟ್ಟುಕೊಂಡಿದ್ದೆ. ಆದರೆ ಅದಕ್ಕೆ ತುಂಬಬೇಕಾದ ಶುಲ್ಕವನ್ನು ಮನೆಯಯಲ್ಲಿ ಕೇಳಲು ಸಂಕೋಚವಾಗಿ ಆ ಆಸೆಯನ್ನು ಹಾಗೆಯೇ ಅದುಮಿಟ್ಟುಕೊಂಡಿದ್ದೆ. ನನ್ನ ಏಕಲವ್ಯ ಕೊಳಲು ವಾದನವನ್ನು ಆಲಿಸುತ್ತಿದ್ದ ಹಿತೈಷಿಗಳು ಹೇಳುತ್ತಿದ್ದ ‘ನೀನು ಶಾಸ್ತ್ರೀಯ ಸಂಗೀತ ಕಲಿತರೆ ಕಬ್ಬಿನ ಮೇಲೆ ಜೇನು ಸುರಿದಂತಾದೀತು’ ಎಂಬ ನುಡಿಗಳು ಆ ಆಸೆಯನ್ನೂ ಮನದಲ್ಲಿ ಮೂಡಿಸಿದ್ದವು. ಆದರೆ ಇವೆಲ್ಲ ಏನಿದ್ದರೂ ನಾನು ಸ್ವಂತ ಕಾಲ ಮೇಲೆ ನಿಂತ ಮೇಲೆ ಎಂದು ನಿಶ್ಚಯಿಸಿದ್ದೆ.
ದೂರವಾಣಿ ವಿಭಾಗದಲ್ಲಿ ಆಯ್ಕೆಯಾಗಿ ಮಂಗಳೂರು ಸೇರಿದ ಮೇಲೆ ಮೊದಲು ಆಚಾರ್ಯ ಚಿತ್ರಕಲಾ ಭವನದ ಕನಸನ್ನು ನನಸು ಮಾಡಿಕೊಂಡೆ. ಆದರೆ ಎಂ.ಟಿ.ವಿ. ಆಚಾರ್ಯರ ವೈಯುಕ್ತಿಕ ಮಟ್ಟದ ಉತ್ಕೃಷ್ಟ ಮಾರ್ಗದರ್ಶನವಿದ್ದರೂ ತಿಂಗಳಿಗೊಂದರಂತೆ ಅಂಚೆಯಲ್ಲಿ ಪಾಠಗಳನ್ನು ಪಡೆದು ಅಭ್ಯಸಿಸುವ ಆ ವ್ಯವಸ್ಥೆಯಲ್ಲಿ ನಾನು ಹೆಚ್ಚೇನೂ ಸಾಧಿಸಲಾಗಲಿಲ್ಲ. ಈ ನಡುವೆ ಕೊಳಲು ವಾದನದ ಮೂಲಕ ಸಹವರ್ತಿಗಳ ಮನ ರಂಜಿಸುವ ಕಾಯಕ ಸಾಗಿಯೇ ಇದ್ದರೂ ಶಾಸ್ತ್ರೀಯ ತರಬೇತಿ ಪಡೆಯುವ ವಿಚಾರ ಯಾಕೋ ಹಿನ್ನೆಲೆಗೆ ಸರಿದಿತ್ತು. ಹಿರಿಯಕ್ಕನ ಮಗ ಪುರುಷೋತ್ತಮ ನನಗೆ ಕ್ರಿಯಾತ್ಮಕ ಸಲಹೆ ಕೊಡುತ್ತಿದ್ದವರ ಪೈಕಿ ಒಬ್ಬ. ಆತ ಒಮ್ಮೆ ನನ್ನನ್ನು ಭೇಟಿಯಾಗಲು ಬಂದ ಸಮಯದಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪಿಸಿದಾಗ ಚಿತ್ರಕಲೆ ಕಲಿಯುತ್ತಿರುವ ನೆವ ಹೇಳಿದೆ. ‘ಅದು ಒಂದು ಹಂತಕ್ಕೆ ಬಂತಲ್ಲ, ಇನ್ನು ಸಂಗೀತ ಸಾಧನೆ ಶುರುವಾಗಲಿ’ ಎಂದು ಹುರಿದುಂಬಿಸಿದ. ಬಾಹ್ಯ ಬಲದ ಪ್ರಯೋಗವಾದ ಹೊರತು ಯಾವುದೇ ವಸ್ತುವು ತಾನಿರುವ ಸ್ಥಿತಿಯನ್ನು ಬದಲಿಸಲು ಬಯಸುವುದಿಲ್ಲ ಎಂಬ ನ್ಯೂಟನ್ನನ ಚಲನೆಯ ಮೊದಲನೆ ನಿಯಮದಂತೆ ನಾನು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಲು ಅವನ ಈ ನುಡಿಗಳು ಕಾರಣವಾದವು.
ಮರುದಿನವೇ ಮಂಗಳೂರಲ್ಲಿ ಕೊಳಲು ಕಲಿಸುವವರು ಯಾರಿದ್ದಾರೆ ಎಂಬ ಹುಡುಕಾಟ ಶುರು ಆಯಿತು. ಭಾರತೀಯ ವಿದ್ಯಾಭವನದಲ್ಲಿ ಕಲಿಸುತ್ತಾರೆ ಎಂದು ಯಾರೋ ಅಂದಾಗ ಅಲ್ಲಿ ಹೋಗಿ ವಿಚಾರಿಸಿದ್ದಾಯಿತು. ಆದರೆ ಅಲ್ಲಿ ಕಲಿಸುವ ಹಿಂದುಸ್ಥಾನಿ ಶೈಲಿಯ ಬಾಂಸುರಿ ನನಗೆ ಸರಿಬರಲಿಕ್ಕಿಲ್ಲ ಎಂದು ಕೆಲ ಮಿತ್ರರು ಹೇಳಿದರು. ಮತ್ತೆ ಕೆಲವು ದಿನಗಳು ಹಾಗೇ ಕಳೆದವು. ನಾನು ಕೊಡಿಯಾಲಬೈಲಿನಲ್ಲಿ ವಾಸವಾಗಿದ್ದ ಸ್ಥಳದ ಸಮೀಪವೇ ಕಟ್ಟಡವೊಂದರಲ್ಲಿ ಕಲಾನಿಕೇತನ ಎಂಬ ನಾಮಫಲಕವನ್ನು ಅನೇಕ ದಿನಗಳಿಂದ ಗಮನಿಸುತ್ತಿದ್ದೆ. ಒಂದು ಸಂಜೆ ಹತ್ತಿರ ಹೋಗಿ ನೋಡಿದಾಗ ಸಣ್ಣ ಅಕ್ಷರಗಳಲ್ಲಿ ಸಂಗೀತ ನೃತ್ಯ ಪಾಠಶಾಲೆ ಎಂದೂ ಬರೆದಿರುವುದು ಕಾಣಿಸಿತು. ಒಳಗೆ ಪ್ರವೇಶಿಸಿದಾಗ ಕುರ್ಚಿಯಲ್ಲಿ ಮಹನೀಯರೊಬ್ಬರು ಆಸೀನರಾಗಿರುವುದು ಕಂಡು ಬಂತು. ನನ್ನ ಪರಿಚಯ ಹೇಳಿ ಕೊಳಲು ಕಲಿಯಬೇಕೆಂಬ ಅಭಿಲಾಷೆ ಇರುವುದನ್ನು ತಿಳಿಸಿದೆ. ಆಗ ಅವರು ‘ಕೊಳಲು ಕಲಿಸುವ ಗೋಪಾಲಕೃಷ್ಣ ಅಯ್ಯರ್ ಇವತ್ತು ಇಲ್ಲ. ನಾಳೆ ಬಂದರೆ ಸಿಗುತ್ತಾರೆ’ ಎಂದು ಹೇಳಿದರು. ಅಂದು ಅಲ್ಲಿದ್ದವರು ವಯಲಿನ್ ಕಲಿಸುವ ಶ್ರೀನಿವಾಸ ಉಡುಪರು ಎಂದು ಆ ಮೇಲೆ ತಿಳಿಯಿತು. ಮರು ದಿನ ಹೋದಾಗ ಬಿಳಿ ಪಂಚೆ, ಬಿಳಿ ಶರಟು ಧರಿಸಿ ಹಣೆಗೆ ವಿಭೂತಿ ಬಳಿದು ಭ್ರೂಮಧ್ಯದಲ್ಲಿ ಕುಂಕುಮ ತಿಲಕ ಇಟ್ಟು ಬಿಳಿ ಕೂದಲನ್ನು ಹಿಂದಕ್ಕೆ ಬಾಚಿದ ಅಯ್ಯರ್ ಅಲ್ಲಿದ್ದರು. ದೂರವಾಣಿ ಇಲಾಖೆಯಲ್ಲಿ ಉದ್ಯೋಗ, ನಾನೇ ತಯಾರಿಸಿದ ಕೊಳಲಿನಲ್ಲಿ ಯಾರ ಮಾರ್ಗದರ್ಶನವೂ ಇಲ್ಲದೆ ಹಾಡುಗಳನ್ನು ನುಡಿಸುತ್ತಿರುವುದು, ಶಾಸ್ತ್ರೀಯವಾಗಿ ಕಲಿಯಬೇಕೆಂಬ ಇಚ್ಛೆ, ಆದರೆ ಸಂಗೀತದ ಯಾವುದೇ ಪರೀಕ್ಷೆ ಪಾಸು ಮಾಡಲು ಆಸಕ್ತಿ ಇಲ್ಲದಿರುವುದು ಇತ್ಯಾದಿ ಪ್ರವರಗಳನ್ನೆಲ್ಲ ಹೇಳಿದೆ. ಶಾಂತ ಚಿತ್ತರಾಗಿ ಆಲಿಸಿದ ಅವರು ‘ನುಡಿಸುವ ಅನುಭವ ಇರುವುದು ಒಳ್ಳೆಯದೇ. ಆದರೆ ಆ ಕೊಳಲಿನಲ್ಲಿ ಶಾಸ್ತ್ರೀಯ ಸಂಗೀತ ನುಡಿಸಲು ಸಾಧ್ಯವಾಗದು. ನಾನೇ ನಾಗರಕೋಯಿಲ್ ಕೊಳಲು ಒಂದನ್ನು ತೆಗೆಸಿ ಕೊಡುತ್ತೇನೆ. ಸೋಮವಾರ ಮತ್ತು ಗುರುವಾರ ರಾತ್ರೆ ಏಳೂವರೆ ಗಂಟೆಗೆ ಕ್ಲಾಸು. ತಿಂಗಳಿಗೆ 20 ರೂಪಾಯಿ ಫೀಸು. ಇವತ್ತು ಬುಧವಾರ. ನಾಳೆಯಿಂದಲೇ ಕ್ಲಾಸು ಆರಂಭಿಸೋಣ’ ಎಂದರು. ಹೀಗೆ 24ರ ವಯಸ್ಸಿನಲ್ಲಿ ಗುರುವಾರ, 5 ಜೂನ್ 1975ರಂದು ಕಲಾನಿಕೇತನದಲ್ಲಿ ನನ್ನ ಶಾಸ್ತ್ರೀಯ ಕೊಳಲು ಕಲಿಕೆ ಆರಂಭವಾಯಿತು. ತಟ್ಟೆಯಲ್ಲಿ ದಕ್ಷಿಣೆ, ಫಲ ತಾಂಬೂಲ ಇತ್ಯಾದಿ ಏನೂ ಕೇಳದ ಅವರು ಅಂದು ಶಾಲೆಯ ಕೊಳಲಿನಲ್ಲೇ ಸ ಪ ಸ ಮತ್ತು ಮಾಯಾಮಾಳವಗೌಳದ ಸಪ್ತಸ್ವರಗಳನ್ನು ಹೇಳಿಕೊಟ್ಟರು. ನಾನು ಒಯ್ದಿದ್ದ ಪುಸ್ತಕದಲ್ಲಿ ಚಂದದ ಕನ್ನಡ ಅಕ್ಷರಗಳಲ್ಲಿ ಬರೆದೂ ಕೊಟ್ಟರು. (ಕೇರಳದಲ್ಲಿ ಜನಿಸಿ ಮನೆಯಲ್ಲಿ ತಮಿಳು ಮಾತನಾಡುತ್ತಿದ್ದ ಅವರು 1956ರಲ್ಲಿ ಮಂಗಳೂರಿಗೆ ಬಂದು ಕಲಾನಿಕೇತನ ಸಂಗೀತ ಶಾಲೆ ಆರಂಭಿಸಿದ ಮೇಲೆ ಕನ್ನಡ ಮಾತನಾಡಲು, ಓದಲು, ಬರೆಯಲು ಕಲಿತದ್ದಂತೆ). ಇತರರಿಗೆ ಕಲಿಯಲು ಕೆಲವು ವಾರ ಬೇಕಾಗುವ ಆ ಪಾಠ ನನಗೆ ಅಂದೇ ಬಂದು ಬಿಟ್ಟಿತು. ಮರು ದಿನ ನನ್ನೊಡನೆ ಶರವು ದೇವಸ್ಥಾನದ ಸಮೀಪವಿದ್ದ ಶಾರದಾ ಮ್ಯೂಸಿಕ್ ಸ್ಟೋರಿಗೆ ಬಂದ ಅವರು ಎಲ್ಲ ಸ್ವರಗಳು ಶುದ್ಧವಾಗಿ ನುಡಿಯುವ ಬಿಳಿ ಮೂರು ಶ್ರುತಿಯ 28 ರೂಪಾಯಿ ಬೆಲೆಯ ನಾಗರಕೋಯಿಲ್ ಕೊಳಲೊಂದನ್ನು ತೆಗೆಸಿ ಕೊಟ್ಟರು. ಕರ್ನಾಟಕ ಶೈಲಿಯ ಕೊಳಲುಗಳಲ್ಲಿ ಒಂದು ಬದಿಗೆ ಬಿದಿರಿನ ಸ್ವಾಭಾವಿಕ ಗಂಟನ್ನೇ ಉಳಿಸಿಕೊಂಡಿರುತ್ತಾರೆ. ಆದರೆ ಇದರಲ್ಲಿ ಗಂಟನ್ನು ತೆಗೆದು ಆ ಬದಿಯನ್ನು ಹಿಂದುಸ್ಥಾನಿ ಶೈಲಿಯ ಕೊಳಲಿನಂತೆ ಕಾರ್ಕಿನಿಂದ ಮುಚ್ಚಲಾಗಿತ್ತು. ಗಟ್ಟಿಮುಟ್ಟಾದ ಆ ಕೊಳಲು ಈಗಲೂ ನನ್ನಲ್ಲಿದೆ.
ಹೀಗೆ ವಾರಕ್ಕೆ ಎರಡು ಕ್ಲಾಸುಗಳಂತೆ ಸರಳ ವರಸೆ, ಜಂಟಿ ವರಸೆ, ದಾಟು ವರಸೆ, ತಾರಸ್ಥಾಯಿ ವರಸೆ, ಮಂದ್ರಸ್ಥಾಯಿ ವರಸೆ, ಸಪ್ತ ತಾಳ ಅಲಂಕಾರ, ಗೀತ, ಸ್ವರಜಿತ್, ವರ್ಣ, ಕೀರ್ತನೆ - ಹೀಗೆ ರಭಸವಾಗಿ ಪಾಠಗಳು ಸಾಗಲಾರಂಭಿಸಿದವು. ಹೇಳಿಕೊಟ್ಟ ಪಾಠವನ್ನು ಚೆನ್ನಾಗಿ ಅಭ್ಯಾಸ ಮಾಡಿ ಮರು ಕ್ಲಾಸಿನಲ್ಲಿ ಪುಸ್ತಕ ನೋಡದೆ ನುಡಿಸುತ್ತಿದ್ದೆ. ಹೀಗಾಗಿ ಮಾಸ್ಟ್ರು ತಡಮಾಡದೆ ಹೊಸ ಪಾಠ ಬರೆದು ಕೊಡುತ್ತಿದ್ದರು. ಸಪ್ತಸ್ವರಗಳ ಸುತ್ತ ಲೇಖನದಲ್ಲಿ ಈಗಾಗಲೇ ವಿವರಿಸಿದಂತೆ ಅಯ್ಯರ್ ಅವರದ್ದು ಸಾಹಿತ್ಯ, ತಾಳ, ಕಾಲ, ಸ್ಥಾಯಿ ಎಲ್ಲವನ್ನೂ ಕರಾರುವಾಕ್ಕಾಗಿ ತೋರಿಸುವ ಸ್ವರಲಿಪಿ ಪದ್ಧತಿ. ಹೀಗಾಗಿ ಅವರು ಬರೆದು ಕೊಟ್ಟುದನ್ನು ಅಭ್ಯಾಸ ಮಾಡುವುದು ಬಲು ಸುಲಭ. ನಾನು ರೂಮಿನಲ್ಲಿ ಅಭ್ಯಾಸ ಮಾಡುವಾಗ ನಾಗರಕೋಯಿಲ್ ಕೊಳಲಿನ ಧ್ವನಿ ಕಲಾನಿಕೇತನದ ಛಾಪಿನೊಂದಿಗೆ ಬಲು ದೂರದ ವರೆಗೆ ಕೇಳಿಸುತ್ತಿತ್ತು. ಒಂದು ದಿನ ಪಕ್ಕದ ಲೆಕ್ಚರರ್ ಒಬ್ಬರು ‘ನಿನ್ನೆ ನೀವು ಪದುಮನಾಭ ಪರಮ ಪುರುಷ ನುಡಿಸುತ್ತಿದ್ದುದು ಚೆನ್ನಾಗಿತ್ತು’ ಎಂದು ಹೇಳಿದ್ದರು. ಇನ್ನೊಮ್ಮೆ ನಾನು ಹಂಸಧ್ವನಿ ರಾಗದ ವರ್ಣವನ್ನು ಅಭ್ಯಾಸ ಮಾಡುತ್ತಿದ್ದಾಗ ಸಮೀಪದ ಮನೆಯೊಂದರ ಮಹಡಿ ಮೇಲೆ ಬಾಡಿಗೆಗಿದ್ದ ಯುವಕನೊಬ್ಬ ಕೊಳಲ ನಾದದ ಮೂಲವನ್ನು ಹುಡುಕುತ್ತಾ ಬಂದು ನನ್ನನ್ನು ಭೇಟಿಯಾಗಿದ್ದ! ಮರುದಿನ ಕೊಳಲಿನೊಂದಿಗೆ ನನ್ನನ್ನು ತನ್ನ ರೂಮಿಗೆ ಕರೆಸಿಕೊಂಡು ಮತ್ತೆ ಹಂಸಧ್ವನಿ ರಾಗವನ್ನು ಆಲಿಸಿ ಚಹಾ ಬಿಸ್ಕೆಟ್‌ಗಳ ಸತ್ಕಾರ ಮಾಡಿದ್ದ.
ಗೋಪಾಲಕೃಷ್ಣ ಅಯ್ಯರ್ ವೇಣುವಾದನದಷ್ಟೇ ಪ್ರಾವೀಣ್ಯವನ್ನು ಹಾಡುಗಾರಿಕೆಯಲ್ಲೂ ಹೊಂದಿದ್ದವರು. ಹೀಗಾಗಿ ಅವರು ಬರೆದುಕೊಟ್ಟ ಸ್ವರಗಳನ್ನು ನುಡಿಸಿದರೆ ಸಾಹಿತ್ಯವೇ ಕೊಳಲಿನಿಂದ ಹೊಮ್ಮಿದಂತೆ ಭಾಸವಾಗುತ್ತಿತ್ತು. ಆದರೆ ಹೊಸಬರಿಗೆ ಕ್ಲಿಷ್ಟಕರವೆಂದು ಅನ್ನಿಸುವ ಕೊಳಲು ಕಲಿಯುವವರಿಗಿಂತ ಹಾಡುಗಾರಿಕೆಯ ವಿಧ್ಯಾರ್ಥಿಗಳ ಸಂಖ್ಯೆಯೇ ಜಾಸ್ತಿ ಇರುತ್ತಿದ್ದುದು. ಕೆಲವು ದಿನ ನಾನು ಹೋಗುವಾಗ ಹಾಡುಗಾರಿಕೆಯ ಕ್ಲಾಸು ಮುಗಿದಿರುತ್ತಿರಲಿಲ್ಲ. ಅಯ್ಯರ್ ಅವರು ಹಾರ್ಮೋನಿಯಮ್ ನುಡಿಸುತ್ತಾ ವಿದ್ಯಾರ್ಥಿಗಳ ಜೊತೆ ಹಾಡುವುದನ್ನು ಕೇಳುವುದು ವೇದಿಕೆಯ ಸಂಗೀತ ಕಚೇರಿ ಕೇಳುವುದಕ್ಕಿಂತಲೂ ಹೆಚ್ಚು ಆಹ್ಲಾದಕರವಾಗಿರುತ್ತಿತ್ತು. ಒಟ್ಟಿಗೆ ಆರಂಭ ಮಾಡಿದವರಿಗೆ ಈ ರೀತಿ ಸಾಮೂಹಿಕವಾಗಿ ಪಾಠ ಮಾಡುತ್ತಿದ್ದರೇ ಹೊರತು ಇತರರಿಗೆ ಅವರವರ ಕಲಿಕೆಯ ಹಂತಕ್ಕೆ ಹೊಂದಿಕೊಂಡು ಬೇರೆ ಬೇರೆಯಾಗಿಯೇ ಹೇಳಿ ಕೊಡುವುದು ಅವರ ಪದ್ಧತಿಯಾಗಿತ್ತು. ಅಯ್ಯರ್ ಅವರು ಮೃದು ಭಾಷಿ. ಪಾಠ ಒಪ್ಪಿಸುವಾಗ ವಿದ್ಯಾರ್ಥಿಗಳೇನಾದರೂ ತಪ್ಪು ಮಾಡಿದರೂ ಬೈಯುತ್ತಿರಲಿಲ್ಲ. ಮೆಲು ಮಾತಿನಲ್ಲೇ ಹಾಗಲ್ಲ ಹೀಗೆ ಎಂದು ಹೇಳುತ್ತಿದ್ದರು. ಇತರರೊಡನೆಯೂ ಅವರು ದನಿ ಏರಿಸಿ ಮಾತನಾಡಿದ್ದು ನಾನು ನೋಡಲಿಲ್ಲ. ಕಲಾನಿಕೇತನದಲ್ಲಿ ಕಾಲು ಮುಟ್ಟಿ ನಮಸ್ಕರಿಸುವ, ಮೈ ಮುಟ್ಟಿ ಆಶೀರ್ವದಿಸುವ ಪದ್ಧತಿ ಇರಲಿಲ್ಲ.
ಕೆಲವು ಕೀರ್ತನೆಗಳ ಪಾಠ ಆಗುವಷ್ಟರಲ್ಲಿ ನಾನು ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಜೂನಿಯರ್ ಎಂಜಿನಿಯರ್ ತರಬೇತಿಗಾಗಿ ಬೆಂಗಳೂರಿಗೆ ಹೋಗಬೇಕಾಗಿ ಬಂದುದರಿಂದ ನನ್ನ ಕಲಿಯುವಿಕೆಗೆ ಭಂಗ ಬಂತು. ಅಲ್ಲಿ ಬಹಳ ಸಂಗೀತ ಶಾಲೆಗಳು ಇದ್ದಿರಬಹುದಾದರೂ ನಮ್ಮ ತಾಂತ್ರಿಕ ತರಬೇತಿ ಕ್ಲಿಷ್ಟವಾಗಿದ್ದು ಸಂಪೂರ್ಣ ಸಮಯವನ್ನು ಅದಕ್ಕಾಗಿ ಮೀಸಲಿಡಬೇಕಾದ್ದರಿಂದ ನಾನು ಅತ್ತ ಗಮನ ಹರಿಸಲಿಲ್ಲ. ಆದರೂ ಸಮಯ ಸಿಕ್ಕಾಗ ಹಳೆಯ ಪಾಠಗಳ ಅಭ್ಯಾಸ ಮಾಡುತ್ತಲೇ ಇದ್ದೆ. ಅಲ್ಲಿ ನಮ್ಮ ಇಲಾಖೆ ಏರ್ಪಡಿಸುತ್ತಿದ್ದ ರಾಜ್ಯಮಟ್ಟದ ಲಲಿತ ಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಯಾವುದೇ ಹಿಮ್ಮೇಳ, ಕೊನೆಗೆ ಒಂದು ತಂಬೂರ ಶ್ರುತಿಯೂ ಇಲ್ಲದೆ ನಾನು ನುಡಿಸಿದ, ಅಯ್ಯರ್ ಅವರು ಕಲಿಸಿಕೊಟ್ಟಿದ್ದ ಹೊಸ ಶೈಲಿಯ ಸಂಗತಿಗಳನ್ನೊಳಗೊಂಡಿದ್ದ ಸಾಮಜವರಗಮನ ಕೀರ್ತನೆಗೆ ಕೊಳಲು ವಿಭಾಗದಲ್ಲಿ ಪ್ರಥಮ ಬಹುಮಾನ ಸಿಕ್ಕಿತು! ಇದು ಸಹೋದ್ಯೋಗಿಗಳ ಮಧ್ಯೆ ನನ್ನ ವರ್ಚಸ್ಸನ್ನು ಹೆಚ್ಚಿಸಿತು. ಇದರಿಂದ ಹಾಸ್ಟೆಲಲ್ಲಿ ನನ್ನೊಂದಿಗಿದ್ದ ಕೆಲವರಿಗೆ ಕೊಳಲು ಕಲಿಯುವ ಹುಮ್ಮಸ್ಸೂ ಬಂತು. ಅಂಥ ಒಬ್ಬರಿಗಾಗಿ ಕೊಳಲು ಖರೀದಿಸಲೆಂದು ಬೆಂಗಳೂರಿನ ಪ್ರಸಿದ್ಧ ಅರುಣಾ ಮ್ಯೂಸಿಕಲ್ಸ್‌ಗೆ ಹೋಗಿದ್ದೆವು. ಅಲ್ಲಿ ಕೊಳಲಿನ ಸ್ವರಸ್ಥಾನಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಲೋಸುಗ ನಾಟೆ ರಾಗದ ಆಲಾಪವೊಂದನ್ನು ನುಡಿಸಿದಾಗ ಅಂಗಡಿಯ ಮಾಲೀಕರು ‘ಈ ಕಿರು ಆಲಾಪನೆ ನಿಮಗೆ ಒಳ್ಳೆಯ ಗುರುಗಳು ಸಿಕ್ಕಿದ್ದಾರೆ ಎಂದು ಹೇಳಿತು. ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ’ ಅಂದರು! ಅಯ್ಯರ್ ಬಗ್ಗೆ ಅವರಿಗೆ ತಿಳಿಸಿದಾಗ ಸಂತೋಷ ಪಟ್ಟರು. ಆ ಮಾಲೀಕರು ಬೇರೆ ಯಾರೂ ಅಲ್ಲ. ಗಾಯಕಿ ಕಸ್ತೂರಿ ಶಂಕರ್ ಅವರ ಪತಿಯ ಅಣ್ಣ. ಅಲ್ಲೇ ಇದ್ದ ಶಂಕರ್ ಒಮ್ಮೆ ಮನೆಗೆ ಭೇಟಿ ನೀಡುವಂತೆ ನನ್ನನ್ನು ಆಹ್ವಾನಿಸಿದರು. ಕೆಲ ದಿನಗಳ ಹೋಗಿ ನಂತರ ಕಸ್ತೂರಿ ಶಂಕರ್ ಅವರನ್ನು ಮಾತನಾಡಿಸಿ ಬಂದೆ.
ಒಂದು ವರ್ಷದ ತರಬೇತಿ ಪಡೆದು ಜೂನಿಯರ್ ಎಂಜಿನಿಯರ್ ಆಗಿ ಮರಳಿ ಮಂಗಳೂರಿಗೇ ಪೋಸ್ಟಿಂಗ್ ಆದಾಗ ಮತ್ತೆ ಕಲಾನಿಕೇತನದಲ್ಲಿ ಕೊಳಲು ಕ್ಲಾಸ್ ಮುಂದುವರಿಸಬಹುದೆಂದು ಸಂತೋಷ ಆಯಿತು. ಆದರೆ ಈಗ ರಾತ್ರಿಯೂ ಸೇರಿದಂತೆ ಬೇರೆ ಬೇರೆ ಪಾಳಿಗಳಲ್ಲಿ ಡ್ಯೂಟಿಗೆ ಹೋಗಬೇಕಾದ ಸಮಸ್ಯೆ ಇತ್ತು. ಒಂದು ದಿನ ಅಯ್ಯರ್ ಅವರನ್ನು ಭೇಟಿಯಾಗಿ ಈ ವಿಷಯ ತಿಳಿಸಿದಾಗ ಪೂರ್ವಾಹ್ನದ ಹೊತ್ತಲ್ಲೂ ಕ್ಲಾಸಿಗೆ ಬರಬಹುದು ಎಂದು ಹೇಳಿ ಸಮಸ್ಯೆಯನ್ನು ಸುಲಭದಲ್ಲಿ ಬಗೆಹರಿಸಿದರು. ಈ ರೀತಿ ನನ್ನ ಕೊಳಲು ಕಲಿಯುವಿಕೆಯ ಎರಡನೇ ಇನ್ನಿಂಗ್ಸ್ ಆರಂಭವಾಯಿತು. ನೈಟ್ ದ್ಯೂಟಿ ಇದ್ದಾಗ ಪೂರ್ವಾಹ್ನ, ಹಗಲು ಡ್ಯೂಟಿ ಇದ್ದಾಗ ರಾತ್ರಿ ಕ್ಲಾಸಿಗೆ ಹೋಗತೊಡಗಿದೆ. ಆದರೆ ಅನೇಕ ಸಲ ಬೆಳಗ್ಗೆ ಹೋದಾಗ ಕಲಾನಿಕೇತನದ ಬಾಗಿಲು ಮುಚ್ಚಿರುವುದು ಕಂಡು ನಿರಾಶನಾಗಿ ಮರಳಬೇಕಾಗುತ್ತಿತ್ತು. ಒಂದು ದಿನ ಹೀಗೆಯೇ ಆದಾಗ ಅಲ್ಲಿಗೆ ಬಂದಿದ್ದ ಇನ್ನೋರ್ವ ವಿದ್ಯಾರ್ಥಿ ‘ಮಾಸ್ಟ್ರು ಮನೆಯಲ್ಲಿ ಇರುತ್ತಾರೆ, ಹೋಗಿ ಕರೆದರೆ ಬರುತ್ತಾರೆ’ ಎಂದು ಪರಿಹಾರ ಸೂಚಿಸಿದ. ಅಲ್ಲೇ ಸುದೂರದಲ್ಲಿರುವ ಅವರ ಮನೆಗೆ ದಾರಿಯನ್ನೂ ತೋರಿಸಿದ. ಆದರೆ ಮನೆಗೆ ಹೋಗಿ ಅವರನ್ನು ಡಿಸ್ಟರ್ಬ್ ಮಾಡುವುದು ಸರಿಯೇ ಎಂಬ ಅಳುಕು ನನ್ನನ್ನು ಕಾಡಿತು. ಆದರೂ ದೃಢ ಮನಸ್ಸು ಮಾಡಿ ಮನೆ ಹುಡುಕಿಕೊಂಡು ಹೋಗಿಯೇ ಬಿಟ್ಟೆ. ಎರಡೋ, ಮೂರೋ ರೂಮು ಇದ್ದ ಚಿಕ್ಕದಾದ ಬಾಡಿಗೆ ಮನೆ ಅದು. ಮನೆಯಲ್ಲಿ ಇದ್ದ ಮಾಸ್ಟ್ರು ಸ್ವಾಗತ ಕೋರಿದರು. ಕಲಾನಿಕೇತನದಲ್ಲಿ ವೀಣೆ ಹೇಳಿಕೊಡುತ್ತಿದ್ದ ಅವರ ಮಡದಿ ರಾಜಲಕ್ಷ್ಮಿ ಅಯ್ಯರ್ ಬಿಸಿ ಬಿಸಿ ಕಾಫಿಯ ಆತಿಥ್ಯ ನೀಡಿದರು. ಕೊಂಚ ಹೊತ್ತು ಲೋಕಾಭಿರಾಮ ಮಾತಾಡಿ ಮಾಸ್ಟ್ರು ಹೊರಟು ನನ್ನೊಡನೆ ಕಲಾನಿಕೇತನಕ್ಕೆ ಬಂದರು. ಆ ಮೇಲೆ ಆಗಾಗ ಅವರ ಮನೆಗೆ ಹೋಗುವ ಇಂಥ ಸಂದರ್ಭಗಳು ಬಂದು ಅವರೊಂದಿಗಿನ ಆತ್ಮೀಯತೆ ಹೆಚ್ಚಾಯಿತು. ಅವರು ಹೇಳುತ್ತಿದ್ದ ಗತಕಾಲದ ಕಥೆಗಳೂ ಕಿವಿಗೆ ಬೀಳತೊಡಗಿದವು.
ಕೇರಳದ ತ್ರಿಪುಣಿತ್ತುರದ ತಮಿಳು ಕುಟುಂಬದಲ್ಲಿ ನಾರಾಯಣಸ್ವಾಮಿ ಅವರ ಮಗನಾಗಿ ಜನಿಸಿದ ಅವರು ಸಂಗೀತ ಶಿಕ್ಷಣ ಪಡೆದದ್ದು ತನ್ನ ತಂದೆ ಮತ್ತು ಸೋದರಮಾವ ವಿಶ್ವನಾಥ ಅಯ್ಯರ್ ಅವರಿಂದಂತೆ. ವಿಶ್ವನಾಥ ಅಯ್ಯರ್ ಅಂದರೆ ಟಿ.ವಿ. ಗೋಪಾಲಕೃಷ್ಣನ್, ಟಿ.ವಿ. ರಮಣಿ, ಟಿ. ವಿ. ವಾಸನ್ ಇವರೆಲ್ಲರ ತೀರ್ಥರೂಪರು. ಸೋದರಮಾವನ ಪುತ್ರಿ ರಾಜಲಕ್ಷ್ಮಿಯನ್ನೇ ಗೋಪಾಲಕೃಷ್ಣ ಅಯ್ಯರ್ ವಿವಾಹವಾದರು. ಅವರಿಗೆ ಕೊಳಲು ಕಲಿಸಿದ್ದು ಬಾಲಪಣಿಕ್ಕರ್ ಎಂಬುವವರು. ರುಕ್ಮಿಣಿದೇವಿ ಅರುಂಡೇಲ್ ಅವರ ಕಲಾಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಮದರಾಸಿನಲ್ಲಿ ನೆಲಸಿದ್ದಾಗ ಚಲನಚಿತ್ರಗಳಿಗೆ ಹಿನ್ನೆಲೆಯಲ್ಲಿ ಕೊಳಲು ನುಡಿಸುತ್ತಿದ್ದರಂತೆ. ಆಗ ಬೇರೆಯಾಗಿ ರೆಕಾರ್ಡ್ ಮಾಡಿಕೊಂಡು ಡಬ್ಬಿಂಗ್ ಮಾಡುವ ಪದ್ಧತಿ ಇಲ್ಲದ್ದರಿಂದ ಶೂಟಿಂಗ್ ನಡೆಯುತ್ತಿರುವಾಗ ಮರೆಯಲ್ಲಿ ನಿಂತು ವಾದ್ಯಗಳನ್ನು ನುಡಿಸಬೇಕಾಗುತ್ತಿತ್ತಂತೆ. ನೃತ್ಯಪಟುವಾಗಿದ್ದ ಅವರ ಅಣ್ಣ ರಾಜನ್ ಅಯ್ಯರ್ ಅಷ್ಟರಲ್ಲಿ ಮಂಗಳೂರಿಗೆ ಬಂದು ಇಲ್ಲಿ ಭರತನಾಟ್ಯವನ್ನು ಪ್ರಚುರಪಡಿಸಿದ್ದರು. ನೃತ್ಯಕ್ಷೇತ್ರದಲ್ಲಿ ಪ್ರಸಿದ್ಧಿ ಹೆಚ್ಚಾಗತೊಡಗಿದಂತೆ ಅವರು ಇಲ್ಲಿ ಆರಂಭಿಸಿದ್ದ ಕಲಾನಿಕೇತನ ಸಂಗೀತ ನೃತ್ಯಶಾಲೆಯನ್ನು ನಿಭಾಯಿಸುವುದು ಕಷ್ಟವಾಗತೊಡಗಿದ್ದರಿಂದ 1956ರಲ್ಲಿ ಗೋಪಾಲಕೃಷ್ಣ ಅಯ್ಯರ್ ಅವರನ್ನೂ ಕರೆಸಿಕೊಂಡರಂತೆ. ಕಲಾನಿಕೇತನದ ಪ್ರಿನ್ಸಿಪಾಲ್ ಜವಾಬ್ದಾರಿಯನ್ನು ತಮ್ಮನಿಗೆ ವಹಿಸಿ ವಯಲಿನ್ ವಿದ್ವಾಂಸ ಶ್ರೀನಿವಾಸ ಉಡುಪ ಮತ್ತು ಪತ್ರಿಕೋದ್ಯಮಿ ನರಸಿಂಹ ರಾವ್ ಅವರ ಸಹಕಾರವನ್ನು ದೊರಕಿಸಿ ಕೊಟ್ಟು ರಾಜನ್ ಅಯ್ಯರ್ ತನ್ನನ್ನು ಸಂಪೂರ್ಣವಾಗಿ ನೃತ್ಯಕ್ಷೇತ್ರಕ್ಕೆ ಮುಡಿಪಾಗಿಸಿಕೊಂಡರಂತೆ. ನಂತರ ಇವರ ಮುಂದಾಳುತ್ವದಲ್ಲಿ ಇತರ ಅನೇಕ ವಿದ್ವಾಂಸರ ಸಹಕಾರದೊಡನೆ ದಶಕಗಳ ಕಾಲ ಶುದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತದ ಏಕೈಕ ವಿದ್ಯಾಲಯವಾಗಿ ಕಲಾನಿಕೇತನ ಬಾಳಿ ಬೆಳಗಿದ್ದು ಈಗ ಇತಿಹಾಸ. ಒಂದಿಬ್ಬರು ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಉಳಿದುಕೊಂಡು ಸಂಗೀತಾಭ್ಯಾಸ ಮಾಡಿದ್ದನ್ನೂ ಅಯ್ಯರ್ ಆಗಾಗ ಹೇಳುತ್ತಿದ್ದರು. ಸರಿಯಾದ ಸಾರಿಗೆ ಸಂಪರ್ಕ ಇಲ್ಲದ ಮುಂಡಾಜೆಯ ಒಳ ಪ್ರದೇಶದಲ್ಲಿ ಜರುಗಿದ ನನ್ನ ವಿವಾಹಕ್ಕೆ ಎರಡು ಕಿಲೋಮೀಟರ್ ನಡೆದು ಪತಿ ಪತ್ನಿ ಇಬ್ಬರೂ ಪುತ್ರ ರವಿತಿಲಕ್‌ನೊಂದಿಗೆ ಬಂದಿದ್ದರು. ಹಿಂತಿರುಗುವಾಗ ಅಲ್ಲೇ ಸಮೀಪದಲ್ಲಿ ಹರಿಯುವ ಮೃತ್ಯುಂಜಯಾ ನದಿಯ ಬದಿಯಿಂದ ಮೃದಂಗ ಶ್ರುತಿ ಮಾಡಲು ಬೇಕಾಗುವ ಕಲ್ಲುಗಳನ್ನು ಹೆಕ್ಕಿ ತಂದಿದ್ದರು. ಅವರು ಎಂದೂ ಬಣ್ಣ ಬಣ್ಣದ ಜುಬ್ಬಾ ಇತ್ಯಾದಿ ಧರಿಸುತ್ತಿರಲಿಲ್ಲ. ಪ್ರತಿಯೊಂದು ಬೆರಳಿನಲ್ಲಿ ಉಂಗುರಗಳೂ ಅವರಿಗಿರಲಿಲ್ಲ. ದಿನ ನಿತ್ಯವಿರಲಿ ಸಮಾರಂಭ ಇರಲಿ, ಬಿಳಿ ಪಂಚೆ ಬಿಳಿ ಷರಟೇ ಅವರ ದಿರಿಸು. ಹೆಚ್ಚೆಂದರೆ ಶರಟಿನ ಮೇಲೆ ಒಂದು ಶಾಲು ಇರುತ್ತಿತ್ತು. ಎಲೆ ಅಡಿಕೆ ಮತ್ತು ನಸ್ಯ ಹೊರತು ಬೇರೆ ಯಾವ ಅಭ್ಯಾಸವೂ ಅವರಿಗಿರಲಿಲ್ಲ. ಕದ್ರಿ ಗೋಪಾಲ್ ಪ್ರತೀ ಸಲ ಬಂದಾಗ ಏಳೆಂಟು ಬೀಡಾಗಳ ಗುರುಕಾಣಿಕೆ ತಂದೊಪ್ಪಿಸುವುದು ವಾಡಿಕೆಯಾಗಿತ್ತು.
ನವರಾತ್ರಿಯಲ್ಲಿ ನಡೆಯುವ ಮೂರು ದಿನಗಳ ಶಾರದೋತ್ಸವ ಕಲಾನಿಕೇತನದ ವಿದ್ಯಾರ್ಥಿಗಳಿಗೆಲ್ಲ ಸಂಭ್ರಮದ ಸಮಯವಾಗಿರುತ್ತಿತ್ತು. ನಿಜವಾದ ಶಾರದಾ ಪೂಜೆಯ ಸಮಯದಲ್ಲಿ ಎಲ್ಲರೂ ಹೊರಗಡೆಯ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿರುತ್ತಿದ್ದುದರಿಂದ ಇಲ್ಲಿ ಅದನ್ನು ಕೆಲವು ದಿನ ಮೊದಲೇ ಆಚರಿಸಲಾಗುತ್ತಿತ್ತು. ಎಲ್ಲ ವಿದ್ಯಾರ್ಥಿಗಳಿಗೂ ಎರಡೆರಡು ಕೀರ್ತನೆ ನುಡಿಸುವ / ಹಾಡುವ ಅವಕಾಶ. ಸಾಕಷ್ಟು ಅಭ್ಯಾಸ ನಡೆಸಿ ಶ್ರೇಷ್ಠ ನಿರ್ವಹಣೆ ತೋರಲು ಪ್ರತಿಯೊಬ್ಬರೂ ಬಯಸುತ್ತಿದ್ದರು. ಸಾಕಷ್ಟು ಕೀರ್ತನೆಗಳ ಪಾಠ ಆದ ಮೇಲೆ ನಾನು ಕೂಡ ಇಂತಹ ಸಂದರ್ಭಗಳಲ್ಲಿ ಕಾಪಿ ರಾಗದ ಮೀವಲ್ಲ ಗುಣ ದೋಷ, ರವಿಚಂದ್ರಿಕಾ ರಾಗದ ನಿರವಧಿ ಸುಖ, ಹಿಂದೋಳದ ಸಾಮಜವರ ಗಮನ, ನಾಟೆ ರಾಗದ ಮಹಾಗಣಪತಿಂ, ಬಿಲಹರಿಯ ಪರಿಧಾನಮಿಚ್ಚಿತೆ, ಷಣ್ಮುಖಪ್ರಿಯದ ಮರಿವೇರ, ಕಲ್ಯಾಣವಸಂತ ರಾಗದ ನಾದಲೋಲುಡೈ, ಜೀಂಗ್ಳ ರಾಗದ ಅನಾಥುಡನು, ಧನಾಶ್ರೀ ರಾಗದ ತಿಲ್ಲಾನ ಮುಂತಾದವುಗಳನ್ನು ನುಡಿಸಿದ್ದು ನೆನಪಿದೆ. ಒಂದು ಸಲ ಮೋಹನ ರಾಗದ ಭವನುತ ಕೀರ್ತನೆ ನುಡಿಸಿದ್ದೆ. ಆ ದಿನ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಸಿದ್ಧ ನಾಗಸ್ವರ ವಿದ್ವಾಂಸ ಕೋಕಿಲ ನಾರಾಯಣ ಸ್ವಾಮಿ ಮರು ದಿನ ದಾರಿಯಲ್ಲಿ ಸಿಕ್ಕಿದಾಗ ತಡೆದು ನಿಲ್ಲಿಸಿ ‘ನಿನ್ನೆ ನುಡಿಸಿದ ಮೋಹನ ರಾಗದ ಕೃತಿ ಅದ್ಭುತವಾಗಿತ್ತು’ ಎಂದು ಬೆನ್ನು ತಟ್ಟಿದ್ದರು. ಕದ್ರಿ ನೃತ್ಯವಿದ್ಯಾನಿಲಯದ ಯು.ಎಸ್. ಕೃಷ್ಣರಾವ್ ಕೂಡ ಅಂದಿನ ಕಾರ್ಯಕ್ರಮವನ್ನು ಬಹುವಾಗಿ ಮೆಚ್ಚಿ ಮುಂದೆ ಸುಮಾರು ಮೂವತ್ತು ವರ್ಷಗಳ ಕಾಲ ನಾನು ಅವರ ನೃತ್ಯ ಕಾರ್ಯಕ್ರಮಗಳಲ್ಲಿ ವೇಣುವಾದಕನಾಗಿ ಭಾಗವಹಿಸುವಂತಾಯಿತು. ನವರಾತ್ರಿಯ ಕಾರ್ಯಕ್ರಮಗಳಿಗೆ ಅಯ್ಯರ್ ಅವರ ಪುತ್ರ ರವಿತಿಲಕ್ ಮೃದಂಗ, ಮಧೂರಿನ ಬಾಲಸುಬ್ರಹ್ಮಣ್ಯ ಶರಳಾಯ ವಯಲಿನ್ ನುಡಿಸುತ್ತಿದ್ದರು. ಉತ್ತಮ ನಿರ್ವಹಣೆ ತೋರಿದ ವಿದ್ಯಾರ್ಥಿಗಳಿಗೆ ಅಯ್ಯರ್ ಅವರು ಕುದ್ರೋಳಿ, ಕದ್ರಿ ಇತ್ಯಾದಿ ಕಡೆಯೂ ಅವಕಾಶ ಒದಗಿಸಿ ಕೊಡುತ್ತಿದ್ದರು. ಈ ರೀತಿ ನಾನೊಮ್ಮೆ ವೀಣಾ ವಿದ್ವಾನ್ ಶ್ರೀನಿವಾಸ ರಾವ್ ಅವರ ಪಕ್ಕವಾದ್ಯದೊಂದಿಗೆ ಕದ್ರಿಯಲ್ಲಿ ಕಾರ್ಯಕ್ರಮ ನೀಡಿದಾಗ ಪ್ರೇಕ್ಷಕರೋರ್ವರು ‘ಇವರು ಗೋಪಾಲಕೃಷ್ಣ ಅಯ್ಯರ್ ಅವರಂತೆಯೇ ನುಡಿಸುತ್ತಾಲ್ಲ!’ ಎಂದು ಉದ್ಗರಿಸಿದ್ದರು. ಬಾಲಸುಬ್ರಹ್ಮಣ್ಯ ಶರಳಾಯರ ಮುತುವರ್ಜಿಯಿಂದ ಮತ್ತು ಅಯ್ಯರ್ ಅವರ ಪ್ರೋತ್ಸಾಹದಿಂದ ಒಮ್ಮೆ ಕಾಸರಗೋಡಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸುಮಾರು ಎರಡು ಗಂಟೆಯ ನನ್ನದೇ ಸೋಲೋ ಕಾರ್ಯಕ್ರಮವೂ ಏರ್ಪಾಡಾಗಿತ್ತು. ವಯಲಿನ್‌ನೊಂದಿಗೆ ಸ್ವರಗಳನ್ನು ಹಂಚಿಕೊಂಡು ನುಡಿಸಿದ ನನ್ನ ಮೊದಲ ಕಾರ್ಯಕ್ರಮ ಅದು. ಸ್ವರ ಪ್ರಸ್ತಾರ ಮಾಡುವಾಗ ನಾನು ತಪ್ಪು ಜಾಗದಲ್ಲಿ ಪಲ್ಲವಿ ಭಾಗವನ್ನು ಎತ್ತಿಕೊಳ್ಳುತ್ತಿದ್ದುದು ಪ್ರೇಕ್ಷಕರಿಗೆ ಗೊತ್ತಾಗದಿದ್ದರೂ ಅಂದು ನಮ್ಮೊಡನೆ ಅಲ್ಲಿಗೆ ಬಂದಿದ್ದ ಟಿ.ವಿ. ವಾಸನ್ ಗಮನಿಸಿದ್ದರು! ಆ ಮೇಲೆ ವಿಷಯ ತಿಳಿದು ತಪ್ಪು ತಿದ್ದಿಕೊಂಡೆ.
ಕೊಳಲು ಕಲಿಯುವವರಲ್ಲಿ ಆಗ ಮುಖ್ಯವಾಗಿ ನಾನು ಮತ್ತು ಆಗ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು ಈಗ ಕೆ.ಎಂ.ಸಿ.ಯಲ್ಲಿ ವೈದ್ಯಾಧಿಕಾರಿ ಆಗಿರುವ ಚಕ್ರಪಾಣಿ ಮಾತ್ರ ಇದ್ದುದಾದರೂ ಅಯ್ಯರ್ ಅವರ ಪತ್ನಿ ರಾಜಲಕ್ಷ್ಮಿಯವರು ನಡೆಸುತ್ತಿದ್ದ ವೀಣೆ ಕ್ಲಾಸಲ್ಲಿ ಪುತ್ರಿ ಶೋಭಾ ಸೇರಿದಂತೆ ಹೆಚ್ಚು ವಿದ್ಯಾರ್ಥಿನಿಯರಿರುತ್ತಿದ್ದರು. ನಮ್ಮೆಲ್ಲರನ್ನೂ ಸೇರಿಸಿ ಅಯ್ಯರ್ ಅವರು ವೀಣಾ ವೇಣು ತಂಡವೊಂದನ್ನು ಕಟ್ಟಿದ್ದರು. ಅವರು ಸ್ವತಃ ಸಂಯೋಜಿಸಿದ ಕಲಾವತಿ ಮತ್ತು ಕಲ್ಯಾಣವಸಂತ ರಾಗದ ವಿಶೇಷ ರಚನೆಗಳು, ಪಂಚರತ್ನ ಕೃತಿ ಎಂದರೋ ಮಹಾನುಭಾವುಲು ಹಾಗೂ ಇನ್ನಿತರ ಕೆಲವು ಆಯ್ದ ಕೀರ್ತನೆಗಳನ್ನು ಒಳಗೊಂಡ ಕಾರ್ಯಕ್ರಮಗಳು ಶಾಲೆಯ ಶಾರದೋತ್ಸವ ಮಾತ್ರವಲ್ಲದೆ ಹೊರಗಡೆಯೂ ನಡೆದು ಜನಪ್ರಿಯತೆ ಗಳಿಸಿದ್ದವು. ಕಥನಕುತೂಹಲ ರಾಗದ ಶರ ಶರ ಸಮರೈ ವೈವಿಧ್ಯಮಯ ಸಂಗತಿಗಳನ್ನೊಳಗೊಂಡು ನಮ್ಮ ಕಾರ್ಯಕ್ರಮದ ಹೈಲೈಟ್ ಎನ್ನಿಸುತ್ತಿತ್ತು.
ನಾನು ಊರ ದೇವಸ್ಥಾನದ ದೀಪೋತ್ಸವ ಸಮಯದಲ್ಲಿ ನಡೆಸುತ್ತಿದ್ದ ಕೊಳಲು ಸೇವೆಗೂ ಈಗ ಮೆರುಗು ಬಂದು ಗುರುಗಳ ಕೀರ್ತಿ ಅಲ್ಲಿಯೂ ಹರಡುವಂತಾಯಿತು. ಮಂಗಳೂರು ದೂರವಾಣಿ ಕೇಂದ್ರದ ಕ್ಲಬ್ಬಿನ ವಾರ್ಷಿಕೋತ್ಸವದ ಭಾಗವಾಗಿ ನಾನು ನಿರ್ವಹಿಸುತ್ತಿದ್ದ ಆರ್ಕೆಷ್ಟ್ರಾ ಆಗ ಬಲು ಪ್ರಸಿದ್ಧ. ಅದರಲ್ಲಿರುತ್ತಿದ್ದುದು ಚಿತ್ರಗೀತೆ ಭಾವಗೀತೆಗಳಾದರೂ ಕಾರ್ಯಕ್ರಮ ಆರಂಭವಾಗುತ್ತಿದ್ದುದು ನಾನು ಕೊಳಲಿನಲ್ಲಿ ನುಡಿಸುವ ಮಹಾಗಣಪತಿಂ ಕೀರ್ತನೆಯೊಂದಿಗೆ. ಒಂದು ಸಲ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಬಂದಿದ್ದ ಮೇಲಧಿಕಾರಿಯೊಬ್ಬರು ಮರುದಿನ ನನಗೆ ಫೋನ್ ಮಾಡಿ ಈ ಕೀರ್ತನೆಯನ್ನುಲ್ಲೇಖಿಸಿ ಮೆಚ್ಚುಗೆ ಸೂಚಿಸಿದ್ದರು. ಕಡಕ್ ಅಧಿಕಾರಿ ಎಂದೆನಿಸಿಕೊಂಡಿದ್ದ ಡಿವಿಷನಲ್ ಎಂಜಿನಿಯರ್ ಒಬ್ಬರು ನಾನೊಬ್ಬನೇ ಸಿಕ್ಕಿದಾಗ ಈ ಕೀರ್ತನೆ ಬಗ್ಗೆ ಮೆಚ್ಚುಗೆ ಸೂಚಿಸುವುದಿತ್ತು. ಮಿತ್ರ ಮೂರ್ತಿ ದೇರಾಜೆಯವರ ಮನೆಗೆ ಬೇಟಿ ಕೊಟ್ಟಾಗ ಅವರ ತೀರ್ಥರೂಪರಾದ ದೇರಾಜೆ ಸೀತಾರಾಮಯ್ಯನವರು ಆ ಕೀರ್ತನೆಯನ್ನು ಮತ್ತೊಮ್ಮೆ ನುಡಿಸುವಂತೆ ನನ್ನಲ್ಲಿ ಹೇಳುವುದಿತ್ತು. ಇದರ ಶ್ರೇಯವೆಲ್ಲ ಸೇರಬೇಕಾದ್ದು ಅಯ್ಯರ್ ಅವರಿಗೆ.
ವಿದ್ಯಾರ್ಥಿಗಳಿಗೆ ಲಾಭವಾಗಲೆಂದು ಅವರು ಸಾಧ್ಯವಾದಾಗಲೆಲ್ಲ ಹೊರಗಿನ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ವೇಣುವಾದಕ ಪ್ರಪಂಚಂ ಸೀತಾರಾಮ್, ಮೇರು ಕಲಾವಿದ ಮಹಾರಾಜಪುರಂ ಸಂತಾನಂ ಅವರ ಕಾರ್ಯಕ್ರಮಗಳು ನಡೆದದ್ದು ನನಗೆ ನೆನಪಿದೆ. ಹೊರಗಿನ ಎಲ್ಲ ಕಲಾವಿದರಿಗೆ ಗೋಪಾಲಕೃಷ್ಣ ಅಯ್ಯರ್ ಅಂದರೆ ಬಹಳ ಗೌರವವಿದ್ದು ಮಂಗಳೂರಿಗೆ ಬಂದಾಗ ಏನು ಸಹಾಯ ಬೇಕಿದ್ದರೂ ಸಂಪರ್ಕಿಸುತ್ತಿದ್ದು ಇವರನ್ನೇ. ಜೇಸುದಾಸ್ ಮಂಗಳೂರಿನಲ್ಲಿ ಕಾರ್ಯಕ್ರಮ ನೀಡಲು ಬಂದರೆ ತಪ್ಪದೆ ಅಯ್ಯರ್ ಅವರನ್ನು ಭೇಟಿಯಾಗುತ್ತಿದ್ದರು. ಒಂದು ಸಲ ಕಚೇರಿ ನಡೆಸುವಾಗ ತಾಳ ತೋರಿಸಲು ಪಕ್ಕದಲ್ಲಿ ಕುಳ್ಳಿರಿಸಿಕೊಂಡಿದ್ದರು.
ಗೋಪಾಲಕೃಷ್ಣ ಅಯ್ಯರ್ ಆಕಾಶವಾಣಿಯ ಗ್ರೇಡೆಡ್ ಕಲಾವಿದರಾಗಿದ್ದು ಕಲ್ಲಿಕೋಟೆ ನಿಲಯದಿಂದ ನಿಯಮಿತವಾಗಿ ಅವರ ವೇಣುವಾದನ ಪ್ರಸಾರವಾಗುತ್ತಿತ್ತು. ಆಕಾಶವಾಣಿಯಲ್ಲಿ ಅವರ ನೋಂದಾಯಿತ ಹೆಸರು ಎನ್. ಗೋಪಾಲಕೃಷ್ಣನ್ ಎಂದಾಗಿತ್ತು. 1976ರಲ್ಲಿ ಮಂಗಳೂರು ನಿಲಯ ಆರಂಭವಾದ ಮೇಲೆ ಇಲ್ಲಿಂದ ಕಾರ್ಯಕ್ರಮ ನೀಡಲಾರಂಭಿಸಿದರು. ಅವರ ಈ ಆಕಾಶವಾಣಿ ನಂಟಿನಿಂದಾಗಿ ಕಲಾನಿಕೇತನದ ವಿದ್ಯಾರ್ಥಿಗಳಿಗೂ ಯುವವಾಣಿಯಲ್ಲಿ ಕಾರ್ಯಕ್ರಮ ನೀಡುವ ಅನೇಕ ಅವಕಾಶಗಳು ದೊರಕಿದ್ದವು. ಪರೀಕ್ಷಾ ಪ್ರಸಾರದ ನಂತರ ಮಂಗಳೂರು ನಿಲಯ ಅಧಿಕೃತವಾಗಿ ಉದ್ಘಾಟನೆಗೊಂಡ ದಿನದ ಯುವವಾಣಿಯಲ್ಲಿ ನಮ್ಮದೇ ಕಾರ್ಯಕ್ರಮ ಇತ್ತು. ನಾನು ಆ ದಿನ ಎ.ಆರ್. ಕೃಷ್ಣಮೂರ್ತಿ ಅವರ ವಯಲಿನ್ ಮತ್ತು ಹರಿಶ್ಚಂದ್ರನ್ ಅವರ ಮೃದಂಗ ಪಕ್ಕವಾದ್ಯದೊಡನೆ ಮಹಾ ಗಣಪತಿಂ ಮತ್ತು ಪರಿಧಾನಮಿಚ್ಚಿತೆ ಕೃತಿಗಳನ್ನು ನುಡಿಸಿದ್ದೆ. ಕೆ.ಟಿ. ಕೃಷ್ಣಕಾಂತ್ ನಿರೂಪಣೆಯೊಂದಿಗೆ ಕಾರ್ಯಕ್ರಮ ಪ್ರಸಾರವಾಗಿತ್ತು. ಆ ಮೇಲೆ ಕೂಡ ಕಲಾನಿಕೇತನದ ವಿದ್ಯಾರ್ಥಿಗಳಾಗಿ ನಾವು ಅನೇಕ ಸಲ ಯುವವಾಣಿಯಲ್ಲಿ ಕಾರ್ಯಕ್ರಮ ನೀಡಿದೆವು. ಆದರೆ ಆರೋಗ್ಯದ ಕಾರಣದಿಂದ ವೇಣುವಾದನಕ್ಕೆ ನ್ಯಾಯ ಒದಗಿಸಲಾರೆ ಎಂದು ಅನ್ನಿಸಿದ್ದರಿಂದ ಅಯ್ಯರ್ ಅವರು ಆಕಾಶವಾಣಿಯಿಂದ ಸ್ವಇಚ್ಛೆಯ ಸನ್ಯಾಸ ಪಡೆದರು. ಅವರ ವೇಣುವಾದನದ ಯಾವುದೇ ಕ್ಯಾಸೆಟ್ ಆಗಲಿ CD ಆಗಲಿ ಇದ್ದಂತಿಲ್ಲ. ಆದರೆ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದ ಅವರ ವೇಣುವಾದನ ಕಚೇರಿಯೊಂದನ್ನು ಟೂ ಇನ್ ವನ್ ಟೇಪ್ ರೆಕಾರ್ಡರಲ್ಲಿ ನಾನು ಧ್ವನಿಮುದ್ರಿಸಿಕೊಂಡಿದ್ದು ಅದು ಈಗಲೂ ನನ್ನ ಸಂಗ್ರಹದಲ್ಲಿದೆ. ನಾನು ಯುವವಾಣಿಯಲ್ಲಿ ನುಡಿಸಿದ್ದ ಪರಿಧಾನಮಿಚ್ಚಿತೆ ಕೀರ್ತನೆಯ ಬಾಲ ಪಾಠ ಮತ್ತು ಅಯ್ಯರ್ ಅವರ ಆ ಕ್ಯಾಸೆಟ್ಟಿನಿಂದ ಆಯ್ದ ಅದೇ ಕೀರ್ತನೆಯನ್ನು ಇಲ್ಲಿ ಆಲಿಸಬಹುದು.
ಇದು ನಾನು ಯುವವಾಣಿಯಲ್ಲಿ ನುಡಿಸಿದ್ದ ಬಾಲಪಾಠ.
ಇದು ಅಯ್ಯರ್ ಅವರು ಆಕಾಶವಾಣಿ ಸಂಗೀತ ಕಚೇರಿಯಲ್ಲಿ ನುಡಿಸಿದ್ದು.
ಕದ್ರಿ ಗೋಪಾಲನಾಥ್ ಅವರಿಗೆ ಆರಂಭದಲ್ಲಿ ಸಂಗೀತ ಕಲಿಸಿದ್ದು ಗೋಪಾಲಕೃಷ್ಣ ಅಯ್ಯರ್ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಗೋಪಾಲನಾಥ್ ಅವರ ಪ್ರತಿಭೆ ಜಗದಗಲ ಪಸರಿಸಲು ಕೂಡ ಗೋಪಾಲಕೃಷ್ಣ ಅಯ್ಯರ್ ಅವರೇ ಕಾರಣ ಎಂದು ಕೆಲವರಿಗೆ ಮಾತ್ರ ಗೊತ್ತು. ಅವರನ್ನು ಮದರಾಸಿನಲ್ಲಿರುವ ತಮ್ಮ ಭಾವ ಟಿ.ವಿ. ಗೋಪಾಲಕೃಷ್ಣನ್ ಬಳಿಗೆ ಕರೆದುಕೊಂಡು ಹೋಗಿ ಅಲ್ಲಿ ಅವಕಾಶಗಳು ಸಿಗುವಂತೆ ಪ್ರಯತ್ನಿಸಿದ್ದು ಅಯ್ಯರ್ ಅವರೇ. ನಾಗಸ್ವರದ ಜಾಡಿನಲ್ಲೇ ತವಿಲನ್ನು ಪಕ್ಕವಾದ್ಯವಾಗಿ ಬಳಸುತ್ತಿದ್ದ ಸ್ಯಾಕ್ಸೊಫೋನಿಗೆ ವಯಲಿನ್ ಮತ್ತು ಮೃದಂಗವನ್ನು ಜೊತೆಯಾಗಿಸಿದ್ದೂ ಅವರೇ. ಆಗ ತಾನೇ ಮಂಗಳೂರು ಆಕಾಶವಾಣಿಯ ನಿಲಯ ಕಲಾವಿದರಾಗಿ ಸೇರ್ಪಡೆಯಾಗಿದ್ದ ಮೃದಂಗ/ಘಟಂ ಕಲಾವಿದ ಟಿ.ವಿ. ವಾಸನ್ ಮತ್ತು ಕಲಾನಿಕೇತನದ ಎಲ್ಲ ಕಾರ್ಯಕ್ರಮಗಳಿಗೆ ವಯಲಿನ್ ಸಹಕಾರ ನೀಡುತ್ತಿದ್ದ ಮಧೂರಿನ ಬಾಲಸುಬ್ರಹ್ಮಣ್ಯ ಅವರ ಸಾಂಗತ್ಯ ಆ ಘಟ್ಟದಲ್ಲಿ ಅವರಿಗೆ ದೊರೆಯಿತು. ಗೋಪಾಲನಾಥ್ ಅವರ ಮೊತ್ತ ಮೊದಲ ಸ್ಟುಡಿಯೊ ಧ್ವನಿಮುದ್ರಣ ಮದರಾಸಿನಲ್ಲಿ ನಡೆದಾಗ ಸ್ಯಾಕ್ಸೋಫೋನ್ ಜೊತೆಗೆ ಅಯ್ಯರ್ ಅವರು ಕೊಳಲು ಕೂಡ ನುಡಿಸಿದ್ದರು. ಆ ರೆಕಾರ್ಡಿಂಗ್ ತುಂಬಾ ಚೆನ್ನಾಗಿ ಬಂದಿತ್ತು ಕೂಡ. ಆದರೆ ವೇದಿಕೆಯ ಮಧ್ಯದಲ್ಲಿ ಕುಳಿತು ಕೊಳಲಿಗೆ ರಾಜ ಮರ್ಯಾದೆ ಒದಗಿಸುವ ತನ್ನ ಹೆಸರು ಪಕ್ಕವಾದ್ಯಗಾರನಾಗಿ ಕಾಣಿಸಿಕೊಳ್ಳುವುದು ಬೇಡ ಎಂದು ಸ್ವಾಭಿಮಾನಿಯಾದ ಅವರಿಗೆ ಅನ್ನಿಸಿ ಆ ರೆಕಾರ್ಡಿಂಗನ್ನು ಅಳಿಸಿ ಹಾಕಲು ಹೇಳಿದರಂತೆ. ಇದನ್ನು ಅಯ್ಯರ್ ಸ್ವತಃ ನನ್ನ ಬಳಿ ಹೇಳಿದ್ದರು. ಕೊಳಲುವಾದಕರಾದ ಅಯ್ಯರ್ ಗೋಪಾಲನಾಥ್ ಅವರಿಗೆ ಸ್ಯಾಕ್ಸೋಫೋನ್ ಹೇಗೆ ಕಲಿಸಿದರು ಎಂದು ಕೆಲವರಿಗೆ ಅನ್ನಿಸಬಹುದು. ನಾನು ಕಲಾನಿಕೇತನದ ಸಂಪರ್ಕಕ್ಕೆ ಬಂದ ಸುಮಾರಿಗೇ ಗೋಪಾಲ್ ಅಲ್ಲಿಗೆ ಬರಲು ಆರಂಭಿಸಿದ್ದು. ಅವರು ಕ್ಲಾಸಿಗೆ ಸ್ಯಾಕ್ಸೊಫೋನ್ ತರುತ್ತಲೇ ಇರಲಿಲ್ಲ. ಮಾಸ್ಟ್ರು ಬರೆದುಕೊಟ್ಟು ಹಾಡಿ ತೋರಿಸಿದ್ದನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡು ಮನೆಗೆ ಹೋಗಿ ಅಭ್ಯಾಸ ಮಾಡುತ್ತಿದ್ದರು. ನಾನು ಅವರ ಸ್ಯಾಕ್ಸೋಫೋನನ್ನು ಮೊದಲು ನೋಡಿದ್ದು ಶಾಲೆಯ ನವರಾತ್ರಿ ಕಾರ್ಯಕ್ರಮದಲ್ಲಿ.
ಸುಬ್ರಹ್ಮಣ್ಯ ಮಠಾಧೀಶರಾಗಿದ್ದು ಭಕ್ತಿಸಂಗೀತ ಕ್ಷೇತ್ರದಲ್ಲಿ ಆಗಷ್ಟೇ ಪ್ರವರ್ಧಮಾನಕ್ಕೆ ಬರತೊಡಗಿದ್ದ ವಿದ್ಯಾಭೂಷಣರ ಹಾಡುಗಾರಿಕೆ ಮುಂಚೂಣಿಗೆ ಬರುವಂತೆ ಮಾಡುವಲ್ಲಿಯೂ ಗೋಪಾಲಕೃಷ್ಣ ಅಯ್ಯರ್ ಅವರ ಅದೃಶ್ಯ ಹಸ್ತ ಇದೆ. 1979ರಲ್ಲಿ ಮೊತ್ತ ಮೊದಲ ಬಾರಿಗೆ ಅವರ ಕೆಲವು ಹಾಡುಗಳನ್ನು ಅಯ್ಯರ್ ಅವರ ಕೊಳಲು ವಾದನದ ಹಿಮ್ಮೇಳದೊಂದಿಗೆ ಧ್ವನಿ ಮುದ್ರಿಸಿ ಟಿ.ವಿ.ಗೋಪಾಲಕೃಷ್ಣನ್ ಅವರ ಸೂಚನೆ ಮೇರೆಗೆ ಮದರಾಸಿಗೆ ಆಡಿಷನ್ನಿಗೆ ಕಳಿಸಲಾಗಿತ್ತು. ನಾನು ಆಗ ತಾನೇ ಖರೀದಿಸಿದ್ದ ನ್ಯಾಷನಲ್ ಪೆನಾಸೋನಿಕ್ 543 ಟೂ ಇನ್ ವನ್ ಟೇಪ್ ರೆಕಾರ್ಡರಲ್ಲಿ ಹಸಿರು ಬಣ್ಣದ ಹೊಚ್ಚ ಹೊಸ Sony C90 ಕ್ಯಾಸೆಟ್ ಉಪಯೋಗಿಸಿ ಆ ಹಾಡುಗಳನ್ನು ಧ್ವನಿಮುದ್ರಿಸಿದ ರೆಕಾರ್ಡಿಸ್ಟ್ ನಾನೇ. ಇದಕ್ಕಾಗಿ ನಾವು 1979 ಜನವರಿ 20ರಂದು ಸುಬ್ರಹ್ಮಣ್ಯಕ್ಕೆ ಹೋದ ಘಟನೆ ನನ್ನ ದಿನಚರಿಯಲ್ಲಿ ದಾಖಲಾಗಿದೆ.
ಇವೆಲ್ಲವುಗಳ ನಡುವೆ ನನ್ನ ಪಾಠಗಳು ಮುಂದುವರಿಯುತ್ತಿದ್ದು ಸೀನಿಯರ್ ಪರೀಕ್ಷೆ ಪಾಸ್ ಮಾಡಬಹುದಾದ ಹಂತಕ್ಕೆ ತಲುಪಿದ್ದೆ. ಆದರೆ ಇಂತಹ ಪರೀಕ್ಷೆ, ಪದವಿಗಳು ನನಗೆ ಬೇಡ ಎಂದು ಮೊದಲೇ ನಿರ್ಧರಿಸಿದ್ದೆ. ಸಂಗೀತ, ನೃತ್ಯಗಳಂತಹ ಲಲಿತ ಕಲೆಗಳಿಗೆ ಕಾಗದದ ಪದವಿಗಳಿಗಿಂತ ಎದುರಿಗಿರುವ ಪ್ರೇಕ್ಷಕನ ಪ್ರತಿಕ್ರಿಯೆ ಹೆಚ್ಚು ಬೆಲೆಯುಳ್ಳದ್ದು ಎಂದು ನನ್ನ ನಂಬಿಕೆ. ರಾಗ ವಿಸ್ತಾರ ಮಾಡಿ ನೆರವಲ್, ಕಲ್ಪನಾ ಸ್ವರಗಳೊಂದಿಗೆ ಪೂರ್ಣ ಪ್ರಮಾಣದ ಸಂಗೀತ ಕಚೇರಿ ನೀಡುವ ಕಲಾವಿದನಾಗುವ ಕನಸು ನನ್ನದಾಗಿರಲಿಲ್ಲ. ಸಂಗೀತದ ಅ, ಆ, ಈ ಕಲಿತು ಶ್ರುತಿ, ರಾಗ, ಲಯಗಳ ಬಗ್ಗೆ ಒಂದಷ್ಟು ಜ್ಞಾನ ಸಂಪಾದಿಸುವ ನನ್ನ ಉದ್ದೇಶ ಈಡೇರಿದೆ ಅನ್ನಿಸಿ ನಿಯಮಿತ ಶಿಕ್ಷಣದಿಂದ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿ ಗುರುಗಳ ಒಪ್ಪಿಗೆಯನ್ನೂ ಪಡೆದೆ. ಕಲಾನಿಕೇತನದ ವಿದ್ಯಾರ್ಥಿಯಾಗಿ ಮುಂದುವರಿಯದಿದ್ದರೂ ಅಯ್ಯರ್ ಅವರ ಸಂಪರ್ಕ ಉಳಿಸಿಕೊಂಡಿದ್ದೆ. ಸಾಧ್ಯವಾದಾಗ ಅವರ ಮನೆಗೂ ಹೋಗಿ ಭೇಟಿಯಾಗುತ್ತಿದ್ದೆ. ಅವರು ಸ್ವಹಸ್ತಾಕ್ಷರದಲ್ಲಿ ಬರೆದು ಕೊಟ್ಟ ಪಾಠಗಳು ಭದ್ರವಾಗಿವೆ. ಆಗಾಗ ಅವುಗಳನ್ನು ತೆರೆದು ಅಭ್ಯಾಸ ಮಾಡುವುದಿದೆ. ಈ ಬ್ಲಾಗಿನ ಬರಹಗಳಲ್ಲಿ ಆಗಾಗ ಅವರ ಉಲ್ಲೇಖ ಬರುತ್ತಿರುತ್ತದೆ. ನನ್ನ ಮಗಳು ಪಲ್ಲವಿ ಕೂಡ ಅವರ ಶಿಷ್ಯೆಯಾಗಿದ್ದು ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಮಂಗಳೂರು ಬಿಡುವ ವರೆಗೆ ಕಲಾನಿಕೇತನದಲ್ಲಿ ಹಾಡುಗಾರಿಕೆ ಕಲಿತಳು.
ಜೀವನದ ಬಹು ಭಾಗವನ್ನು ಬಾಡಿಗೆಯ ಪುಟ್ಟ ಮನೆಗಳಲ್ಲಿ ಕಳೆದಿದ್ದ ಅವರು ಇತ್ತೀಚೆಗೆ ಚಿಕ್ಕದಾದರೂ ಸ್ವಂತ ಸೂರೊಂದನ್ನು ಹೊಂದುವಂತಾಗಿತ್ತು. ವಯಸ್ಸಾದ ಕಾರಣದಿಂದ ಕಲಾನಿಕೇತನಕ್ಕೆ ಹೋಗುವುದನ್ನು ನಿಲ್ಲಿಸಿದ ಮೇಲೂ ಕೆಲವರಿಗೆ ಮನೆಯಲ್ಲೇ ಪಾಠ ಹೇಳುತ್ತಿದ್ದರು. ದೈಹಿಕವಾಗಿ ಸದೃಢವಾಗಿಯೇ ಇದ್ದರೂ ಈಚಿನ ದಿನಗಳಲ್ಲಿ ಅವರ ಗ್ರಹಣ ಶಕ್ತಿ ತುಂಬಾ ಕಮ್ಮಿಯಾಗಿತ್ತು. ಅವರ ಪುತ್ರಿ ಶೋಭಾ ಹಮ್ಮಿ ಕೊಂಡಿರುವ ಒಂದು ಸಂಸ್ಮರಣಾ ಪ್ರಾಜೆಕ್ಟಿನ ಭಾಗವಾಗಿ ಕೆಲ ಕಾಲ ಹಿಂದೆ ಅವರ ಪುತ್ರ ರವಿತಿಲಕ್ ಮೃದಂಗ ಪಕ್ಕವಾದ್ಯದೊಂದಿಗೆ ಸುಮಾರು 40 ವರ್ಷಗಳ ನಂತರ ಅವರೆದುರು ಧನಾಶ್ರೀ ರಾಗದ ತಿಲ್ಲಾನ ನುಡಿಸುವ ಯೋಗ ಒದಗಿ ಬಂದಿತ್ತು. ಕೆಲ ಕಾಲದ ನಂತರ ಪುತ್ರ ರವಿತಿಲಕ್ 59ರ ಪ್ರಾಯದಲ್ಲಿ ಅಸೌಖ್ಯದಿಂದ ತೀರಿ ಹೋದರು. ದುರ್ಬಲವಾಗಿದ್ದ ಅವರ ಮನಸ್ಸು ಇದನ್ನು ಗ್ರಹಿಸಿತ್ತೋ ಇಲ್ಲವೋ ತಿಳಿಯದು. ಪತ್ನಿ ರಾಜಲಕ್ಷ್ಮಿ ಅಯ್ಯರ್ 1986ರಷ್ಟು ಹಿಂದೆಯೇ ಅಗಲಿ ಹೋಗಿದ್ದರು. ಈಗ ಅವರೂ ಬಿಡುಗಡೆ ಹೊಂದಿದರು. ನಾವು ಕಲಿಯುತ್ತಿದ್ದ ಕಲಾನಿಕೇತನ ಇದ್ದ ಜಾಗದಲ್ಲಿ ಬಹುಮಹಡಿ ಕಟ್ಟಡವೊಂದು ಎದ್ದು ನಿಂತಿದೆ.
ಇತ್ತೀಚೆಗೆ ನಾನು ಕೊಳಲಿನಲ್ಲಿ ನುಡಿಸಿ ಫೇಸ್ ಬುಕ್ಕಿಗೇರಿಸಿದ ಭಾಗ್ಯದ ಬಳೆಗಾರ ಹಾಡಿನ ವೀಡಿಯೊ ವೈರಲ್ ಆಗಿ ಅದನ್ನು ಮೆಚ್ಚಿಕೊಂಡ ಕೆಲವರು ‘ನಿಮ್ಮ ಗುರು ಯಾರು’ ಎಂದು ಕೇಳಿದ್ದುಂಟು. ಇದು ಶಾಸ್ತ್ರೀಯ ರಚನೆ ಅಲ್ಲದಿದ್ದರೂ ಸ್ವರಗಳ ಎತ್ತುಗಡೆಯಲ್ಲೇ ಕಲಾನಿಕೇತನದ ವಿಶಿಷ್ಟ ಛಾಪು ಕಂಡು ಅವರು ಹೀಗೆ ಕೇಳಿದ್ದಿರಬಹುದು. ಇಲ್ಲಿ ಕಾಣಿಸುವ ಕಮೆಂಟುಗಳಲ್ಲಿ ಒಂದು ಅವರು ನಿಧನರಾಗುವ ಒಂದೆರಡು ದಿನ ಮೊದಲಿನದ್ದು. ಇನ್ನೊಂದು ನಂತರದ್ದು. ಈ ಸಮಯದಲ್ಲಿ ಅವರ ಸ್ಮರಣೆ ಮಾಡುವಂತಾದದ್ದು ಕಾಕತಾಳೀಯವೇ ಇರಬಹುದು.
ಸಂಸ್ಮರಣಾ ಪ್ರಾಜೆಕ್ಟಿಗಾಗಿ ನುಡಿಸಿದ ತಿಲ್ಲಾನದ ವೀಡಿಯೊ ತುಣುಕು ಇಲ್ಲಿದೆ. ಆಲಿಸಲು ಹೆಡ್ ಫೋನ್ ಬಳಸಿದರೆ ಒಳ್ಳೆಯದು. ಅಯ್ಯರ್ ಅವರನ್ನು ಕುರಿತು ಅನೇಕರ ನೆನಪುಗಳನ್ನು ದಾಖಲಿಸಲು ಉದ್ದೇಶಿಸಿರುವ ಆ ಪ್ರಾಜೆಕ್ಟ್ ಬೇಗ ಬೆಳಕು ಕಾಣಲಿ ಎಂದು ಹಾರೈಸೋಣ.
* * * * *
ಈ ಬರಹದ ಸಂಕ್ಷಿಪ್ತ ರೂಪ 16 ಜನವರಿ 2020ರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು.
24 ಜನವರಿ 2020ರ ಉದಯವಾಣಿಯಲ್ಲಿ ಕಾಣಿಸಿಕೊಂಡದ್ದು ಹೀಗೆ.

ಸಂಗೀತ ವಿದ್ವಾನ್ ದಿವಂಗತ ಶ್ರೀ ತ್ರಿಪುನಿತ್ತುರ N ಗೋಪಾಲಕೃಷ್ಣ ಅಯ್ಯರ್ ಅವರ ಬಗ್ಗೆ ತಾವು ಬರೆದ ಲೇಖನ ತುಂಬಾ ಉತ್ತಮವಾಗಿದೆ.
ReplyDeleteಮಧೂರು ಬಾಲಸುಬ್ರಹ್ಮಣ್ಯ ಶರಳಾಯ (FB)
ನಿಮ್ಮ ಗುರುಗಳ ನಿಧನದ ವಾರ್ತೆ ತಿಳಿದು ದುಃಖವಾಯಿತು . ಮೃತರ ಆತ್ಮಕ್ಕೆ ಶಾಂತಿ ಸಿಗಲಿ . ಅವರ ಕುಟುಂಬದವರ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾಥಿಸುವೆ . ನಿಮ್ಮ ಸಂಗೀತದ ಒಲವು , ನಿಮ್ಮ ಸಾಧನೆಯ ಹಿಂದೆ ನಿಮ್ಮ ಗುರುಗಳ ಪಾತ್ರ, ಅವರ ಸ್ವಚ್ಛ ನಡೆ, ನುಡಿ ಬಗ್ಗೆ ವಿವರಿಸಿರುವುದು ಅವರ ವ್ಯಕ್ತಿತ್ವಕ್ಕೆ ಮೆರುಗು ಕೊಟ್ಟಂತಿದೆ . ಕದ್ರಿ ಗೋಪಾಲನಾಥನ್ ಅವರ ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ನಿಮ್ಮ ಗುರುಗಳ ಕೃಪೆ ಮತ್ತು ಆಶೀರ್ವಾದ ಇತ್ತೆಂದು ತಿಳಿದು ಸಂತೋಷವಾಯಿತು . ಅವರ ನೆನಪಿನಲ್ಲಿ ನಿಮ್ಮ ಸಂಗೀತದ ಪಯಣ ಮುಂದುವರೆಯಲಿ . ಅವರ ಸ್ಮರಣೆಗಾಗಿ ಅರ್ಪಿಸಿರುವ ಈ ಅಂಕಣ ಓದುವ ಭಾಗ್ಯ ನನಗೆ ಸಿಕ್ಕಿದ್ದು ಸಂತೋಷ .
ReplyDeleteಸೂರಿ ಶಿವಕುಮಾರ್ ಆಸ್ಟ್ರೇಲಿಯಾ (FB)
ಬಹಳ ಆಪ್ತ ಬರವಣಿಗೆ. ಗುರುಗಳಿಗೆ ಅನಂತ ವಂದನೆಗಳು. ಅಂತಹ ಗುರುಗಳು ಈಗ ಅಪರೂಪವಾಗಿದ್ದಾರೆ. ನಿಮ್ಮ ನೆನಪುಗಳ ಯಾತ್ರೆಗೆ ಧನ್ಯವಾದಗಳು.
ReplyDeleteKiran Surya(FB)
ಸರ್, ಈ post ನಲ್ಲಿ ಏನೇನೆಲ್ಲಾ ಮಾಹಿತಿ ಒಳಗೊಂಡಿದೆ!🙏 ಕಲಾನಿಕೇತನದಂತಾ ಕಲಿಸುವ ಕೇಂದ್ರಗಳು, ಗೋಪಾಲಕೃಷ್ಣ ಅಯ್ಯರ್ ಅಂತಹಾ ಸರಳ ಹಾಗೂ ಸಜ್ಜನಿಕೆಯ ಗುರುಗಳು, ಆ ಗುರುವಿನ ಶಿಷ್ಯರನ್ನು ಮಮತೆಯಿಂದ ಆದರಿಸುವ ಗುರು ಪತ್ನಿ- ಇವರುಗಳ ಬಗ್ಗೆ ಓದುತ್ತಾ ಹೋದಂತೆಲ್ಲಾ ಯಾವುದೋ ಚೆಂದದ , ಹಿಂದೆ ಇದ್ದ , ಒಂದೊಳ್ಳೇ ಕಾಲದ ನೆನಪುಗಳು ಒಟ್ಟೊಟ್ಟಿಗೆ ಸ್ಮೃತಿಪಟಿಲದ ಮೇಲೆ ಹಾದು ಹೋಗಿ- ಅಂದಿನ ದಿನಗಳು ಹಾಗೂ ಅಂದಿನ ಸಂಸ್ಕಾರವಂತ ಸಜ್ಜನರ ಮೇಲೆ ಗೌರವ ಉಕ್ಕಿ ಬಂತು. ಇಂದಿನ materialistic ಗುರುಪರಂಪರೆ, ಅವರ glamorous ಉಡುಗೆ ತೊಡುಗೆಗಳ ನಡುವಿರುವ ನಮ್ಮ ಈ ಸಧ್ಯದ ಸಮಾಜದಲ್ಲಿ, ನಿಮ್ಮ ಈ ಲೇಖನವನ್ನು ಓದಿ, ಕಣ್ಣಲ್ಲಿ ನೀರು ತುಂಬಿಕೊಂಡಿತು. ನಿಮ್ಮ ಮೆಚ್ಚಿನ ಹವ್ಯಾಸಗಳ ಹಿಂದೆ ಬಿದ್ದು, ಛಲ ಬಿಡದ ತ್ರಿವಿಕ್ರಮನಂತೆ, ನಿಮ್ಮ ಕಾರ್ಯಕ್ಷೇತ್ರದ ಬಾಹುಳ್ಯಗಳ ನಡುವೆಯೂ, ಆ ಹವ್ಯಾಸಗಳನ್ನು ಸಾಧಿಸುವತ್ತ ನೀವು ದಿಟ್ಟ ಹೆಜ್ಜೆ ಇಟ್ಟಿದ್ದು ಪ್ರಶಂಸನೀಯವೇ ಸರಿ. ನಿಮ್ಮ ಬಗ್ಗೆ ಹೆಮ್ಮೆ ಹಾಗೂ ಗೌರವದ ಭಾವವಿದೆ.🙏( ಅಂದ ಹಾಗೆ “ಸುದೂರ” ಪದ ಪ್ರಯೋಗವನ್ನು ಈಗಲೇ ಮೊದಲ ಬಾರಿಗೆ ಓದಿದ್ದು. ) ನನಗೆ ಜ್ಞಾಪಕವಿರುವಂತೆ, ನಮ್ಮ ಊರಲ್ಲೂ ಗುರುಗಳ ಕಾಲು ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದುಕೊಳ್ಳುವ ಪದ್ಧತಿ -ಆಗ ಇರಲಿಲ್ಲ.
ReplyDeleteMangala Gundappa (FB)
ಅಬ್ಬಾ ,ನಿಮ್ಮ ಸಂಗೀತ ಪಯಣದ ಕಥೆ ಅದ್ಭುತ ವಾಗಿದೆ. ಓದಲು ಕುತೂಹಲಕಾರಿ ಯಾಗಿದೆ.ಸಾಧಕನ ಡೈರಿಯ ಹಾಗಿದೆ.
ReplyDeleteTrivikram Hebbar (FB)
ತುಂಬಾ ವಿಸ್ತಾರವಾದ ಅದೆಷ್ಟೋ ಮಾಹಿತಿಗಳನ್ನು ಒಂದೇ ಕಡೆ ಸಿಗುವಂತೆ ಬರೆದ ಲೇಖನ. ಚಿದಂಬರ ಕಾಕತ್ಕರ್ ಅವರನ್ನು ಒಬ್ಬ ದಕ್ಷ ಅಧಿಕಾರಿಯಾಗಿ ಕಂಡಿದ್ದೆ. ಅಲ್ಪ ಸ್ವಲ್ಪ ತಿಳಿದಿದ್ದರೂ ಕೂಡಾ ಒಬ್ಬ ಅಪೂರ್ವ ಅಪರೂಪದ ಅನುಭವಿ ವೈಣಿಕನಾಗಿ ಸಂಗೀತಗಾರನಾಗಿ ಕಾಕತ್ಕರನ್ನು ತಿಳಿದುಕೊಂಡಂತಾಯಿತು ಈ ವಿಸ್ತೃತ ಬರಹವನ್ನು ಬುಡದಿಂದ ಕೊನೆಯವರೆಗೆ ಓದಿದಾಗ. ವೃತ್ತಿಯಲ್ಲಿ ಅಲ್ಲದೆ ಪ್ರವೃತ್ತಿಯಲ್ಲೂ ನಿಮ್ಮ ಪರಿಶ್ರಮ ಹಾಗೂ ಸಾಧನೆ ಗಳನ್ನು ತಿಳಿದು ನಿಮ್ಮ ಬಗೆಗಿನ ಗೌರವ ಹಾಗೂ ಅಭಿಮಾನ ಎರಡೂ ಜ್ಯಾಸ್ತಿಯಾಗಿವೆ. ನೀವೇ ಬರೆದಿರುವ ವಾಕ್ಯ .. ಕಾಗದದ ತುಣುಕುಗಳ ಆ ಪದವಿಗಳಿಗಿಂತ ಪ್ರೇಕ್ಷಕನ ಪ್ರೋತ್ಸಾಹದ ಪ್ರತಿಕ್ರಿಯೆ ಬಹಳ ಮುಖ್ಯ..ಹೌದು ಖಂಡಿತಾ ಸತ್ಯ. ಅಷ್ಟೇಅಲ್ಲ ಗುರುಪೂರ್ಣಿಮೆಯ ಶುಭ ಸಂಧರ್ಭದಲ್ಲಿ ನಿಮ್ಮ ಕೊಳಲಗುರು ಶ್ರೀ ಗೋಪಾಲಕೃಷ್ಣ ಅಯ್ಯರ್ ಬಗ್ಗೆ ಬಹಳಷ್ಟು ಮಾಹಿತಿ ನೀಡಿರುವಿರಿ.ಜೊತೆಗೆ ಮತ್ತಿಬ್ಬರು ಗೋಪಾಲಕೃಷ್ಣ ರ ಬಗ್ಗೆಯೂ ಬರಿದಿರುವುದು ವಿಶೇಷ.
ReplyDeleteಚಂದದ ಲೇಖನ ಜೊತೆಗೆ ಚಂದದ ವೇಣುವಾದನ. ಖುಶಿಯಾಯಿತು ಸರ್.👌👌👌👌👌🙏🙏🙏👍👍👍👏👏👏
K.G. Sooryanarayana(FB)