Sunday 9 July 2017

ಸತ್ಯೆನೆಲಾ ಪಾಕಿ


ಒಂದಾನೊಂದು ಊರಲ್ಲಿ ಒಬ್ಬ ಸೆಟ್ಟಿ ಇದ್ದ.  ಆತ ಒಮ್ಮೆ ತನ್ನ ಮನೆ ಹಿತ್ತಿಲಲ್ಲಿ ಹರಿವೆ ಬೆಳೆಸಿದ.  ಆದರೆ ಹರಿವೆಸೊಪ್ಪನ್ನೆಲ್ಲ ಒಂದು ಹಕ್ಕಿ ಬಂದು ತಿಂದು ಹಾಕ್ತಾ ಇತ್ತು.   ಒಂದು ದಿನ ಆತ ಮರೆಯಲ್ಲಿ ಹೊಂಚು ಹಾಕಿ ಸೊಪ್ಪು ತಿನ್ನಲು ಬಂದ ಹಕ್ಕಿಯನ್ನು ಗಬಕ್ಕನೆ ಹಿಡಿದು ನೀರು ಕೊತ ಕೊತ ಕುದೀತಿದ್ದ ಬಚ್ಚಲು ಮನೆ ಹಂಡೆಯಲ್ಲಿ ಹಾಕಿ ಸತ್ಯೆನೆಲಾ ಪಾಕಿ ಎಂದು ಕೇಳಿದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಎಂದು ಹೇಳಿ ಹಕ್ಕಿ ಹಂಡೆಯಿಂದ ಎದ್ದು ಹಾರಿ ಹೋಯಿತು.

ಮರುದಿನ ಯಥಾ ಪ್ರಕಾರ ಸೊಪ್ಪು ತಿನ್ನಲು ಬಂದ ಹಕ್ಕಿಯನ್ನು ಹಿಡಿದು ಬಚ್ಚಲೊಲೆಯಲ್ಲಿ ಹಾಕಿ ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಅನ್ನುತ್ತಾ ಹಕ್ಕಿ ಒಲೆಯಿಂದ ಎದ್ದು  ಹಾರಿ ಹೋಯಿತು.

ಮರು ದಿನ ಪುನಃ ಬಂದ ಹಕ್ಕಿಯನ್ನು ಹಿಡಿದು ಹಗ್ಗದಲ್ಲಿ ಕಟ್ಟಿ ಪಕ್ಕದಲ್ಲಿ ಇದ್ದ ಒಣಗಿದ ಮರಕ್ಕೆ ನೇತಾಡಿಸಿ ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಎಂದು ಹೇಳಿ ಹಕ್ಕಿಯು ಹಗ್ಗದಿಂದ ಬಿಡಿಸಿಕೊಂಡು ಹಾರಿ ಹೋಯಿತು.

ಮರುದಿನವೂ ಬಂದ ಹಕ್ಕಿಯನ್ನು ಹಿಡಿದು ಬಟ್ಟೆ ಒಗೆಯುವ ಕಲ್ಲಿಗೆ ಅಪ್ಪಳಿಸಿ ಸತ್ಯೆನೆಲಾ ಪಾಕಿ ಎಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಅರೆಕಲ್ ಮೇಲೆ ಧಿಂ ಧಿಂ ಮಾಡ್ದೆ
ಅನ್ನುತ್ತಾ ಹಕ್ಕಿ ಕಲ್ಲಿಂದ ಎದ್ದು ಹಾರಿ ಹೋಯಿತು.

ಯಥಾಪ್ರಕಾರ ಮರುದಿನ ಮತ್ತೆ ಬಂದ ಹಕ್ಕಿಯನ್ನು ಹಿಡಿದು ಅಲ್ಲೇ ಪಕ್ಕದಲ್ಲಿ ಆತನ ಇಬ್ಬರು ಹೆಣ್ಣು ಮಕ್ಕಳು ಭತ್ತ ಕುಟ್ಟುತ್ತಿದ್ದ ಒನಕೆ ಅಡಿಯಲ್ಲಿ ಹಾಕಿ ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಶೆಟ್ಟಿ
ಸೆಟ್ಟಿ ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಅರೆಕಲ್ ಮೇಲೆ ಧಿಂ ಧಿಂ ಮಾಡ್ದೆ
ಅಕ್ಕತಂಗೀರಿಗೆ ಭತ್ತ ಕುಟ್ಟಿ ಕೊಟ್ಟೆ
ಎಂದು ಹೇಳಿ ಹಕ್ಕಿ ಒನಕೆ ಅಡಿಯಿಂದ ಹಾರಿ ಹೋಯಿತು.

ಇದು ಸುಲಭಕ್ಕೆ ತೊಲಗುವ ಪೀಡೆಯಲ್ಲ ಎಂದೆಣಿಸಿದ ಸೆಟ್ಟಿ ಮರು ದಿನ ಬಂದ ಹಕ್ಕಿಯನ್ನು ಹಿಡಿದು ಕೊಂದು ಸಾರು ಮಾಡಿ ಅನ್ನದಲ್ಲಿ ಕಲಸಿ ತಿಂದುಬಿಟ್ಟು ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಅರೆಕಲ್ ಮೇಲೆ ಧಿಂ ಧಿಂ ಮಾಡ್ದೆ
ಅಕ್ಕತಂಗೀರಿಗೆ ಭತ್ತ ಕುಟ್ಟಿ ಕೊಟ್ಟೆ
ಸೆಟ್ಟಿ ಹೊಟ್ಟೆ ಒಟ್ಟೆ ಮಾಡಿ ಪುರ್ರನೆ ಹಾರಿಬಿಟ್ಟೆ
ಅನ್ನುತ್ತಾ ಹಕ್ಕಿ ಸೆಟ್ಟಿಹೊಟ್ಟೆಗೆ ನಿಜಕ್ಕೂ ಒಟ್ಟೆ ಮಾಡಿ ಪುರ್ರನೆ ಹಾರಿ ಹೋಯಿತು.

ಸೆಟ್ಟಿಯ ಅವಸ್ಥೆ ಮುಂದೇನಾಯಿತೆಂಬುದರ ಬಗ್ಗೆ  ಮಾಹಿತಿ ಇಲ್ಲ !

********************

ಇದು ರಮ್ಯ ಬಾಲ್ಯಕಾಲದಲ್ಲಿ ನಮ್ಮನ್ನು ರಂಜಿಸುತ್ತಿದ್ದ ಅನೇಕ ಕಥೆಗಳಲ್ಲೊಂದು. ಇಲ್ಲಿ ಸರಪಣಿ ರೂಪದಲ್ಲಿರುವ ಘಟನೆಗಳಿಗೆ ಹೊಸ ಕೊಂಡಿ ಸೇರ್ಪಡೆಯಾದಾಗ  ಪ್ರತಿ ಸಲ ಹಿಂದಿನ ಘಟನೆಗಳೂ ಪುನರಾವರ್ತನೆಗೊಳ್ಳುವುದರಿಂದ ಕೇಳಿಸಿಕೊಳ್ಳುವ ಮಕ್ಕಳಿಗೆ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಪರಿಸರದ ಅನೇಕ ವಸ್ತುಗಳ, ಚಟುವಟಿಕೆಗಳ ಪರಿಚಯವೂ ಆಗುತ್ತದೆ.

ಸಸೇಮಿರಾ ಸಂದರ್ಭದಲ್ಲಿ ಈಗಾಗಲೇ ಉಲ್ಲೇಖಿಸಿದಂತೆ ನಮ್ಮ ತಂದೆಯವರು ಗಹಗಹಿಸಿ ನಗುವ ರುಂಡಗಳ ಕಥೆ, ಮರದ ಮೇಲೆ ಬೆಳೆಯುವ ಸಿಹಿ ಅಪ್ಪಗಳ ಕಥೆ, ರಾಜ, ಇಲಿ ಮತ್ತು ಟೊಪ್ಪಿಯ ಕಥೆ ಮುಂತಾದವುಗಳನ್ನು ಹೇಳಿದರೆ ತಾಯಿಯವರು  ಕಬ್ಬಿನಮಾಡು, ದೋಸೆಯ ಹೆಂಚು, ಬೆಲ್ಲದ ಗೋಡೆಯ ಮನೆಯೊಳಗೆ ಮರಿ ಇಟ್ಟಿರುವ ಬೆಕ್ಕಿನ ಕಥೆ, ಸಪ್ತಸಾಗರದಾಚೆಯ ದ್ವೀಪದಲ್ಲಿರುವ ಪಚ್ಚೆ ಗಿಳಿಯೊಳಗೆ ಜೀವ ಇರುವ ರಾಕ್ಷಸನ ಕಥೆ, ಗುಬ್ಬಚ್ಚಿಯ ಮೊಟ್ಟೆಗಳನ್ನು ಕದ್ದು ತಿನ್ನುವ ಕಾಗೆಯ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇವುಗಳೆಲ್ಲ ನಮ್ಮ ಮಾತೃಭಾಷೆ ಚಿತ್ಪಾವನಿ ಮರಾಠಿಯಲ್ಲೇ ಇರುತ್ತಿದ್ದವು.  ಆದರೆ ಈ ಸತ್ಯೆನೆಲಾ ಪಾಕಿ ಕಥೆಯ ಸರಪಣಿ ಮಾತ್ರ ಕನ್ನಡದಲ್ಲಿ ಇದ್ದು ಉಳಿದ ಭಾಗ ಮಾತ್ರ ಚಿತ್ಪಾವನಿ ಮರಾಠಿಯಲ್ಲಿ ಇರುತ್ತಿತ್ತು. ನಮ್ಮ ತಾಯಿಯವರೊಡನೆ ಪ್ರತಿ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಕಥೆಯನ್ನು ಮೊದಲ ಬಾರಿ ಕೇಳಿದ್ದೆಂದು ನೆನಪು.


* ಸತ್ಯೆನೆಲಾ ಪಾಕಿ = ಸತ್ತಿ ಏನ್ಲಾ ಪಕ್ಷಿಯೇ

ಈ ಕಥೆಯನ್ನು ಆಡಿಯೊ ರೂಪದಲ್ಲಿ ಇಲ್ಲಿ ಕೇಳಬಹುದು.







No comments:

Post a Comment

Your valuable comments/suggestions are welcome