Sunday, 23 July 2017

ಸಂತ ತುಕಾರಾಂ ಹಾಡುಗಳೆಷ್ಟು ಸ್ವಂತ



ಅಮೃತಕ್ಕು ತಾ ರುಚಿ  ಮತ್ತು ಅಮೃತಾಹುನೀ ಗೋಡ ದ್ವಿಭಾಷಾ ಹಾಡಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮರಾಠಿಯ ಪ್ರಸಿದ್ಧ ಗಾಯಕಿ ಮಾಣಿಕ್ ವರ್ಮಾ ಹಾಡಿದ ಸಂತ ನಾಮದೇವರ ಈ ರಚನೆಯನ್ನು ತುಕಾರಾಮರ ಅಭಂಗವಾಗಿ ಕನ್ನಡೀಕರಿಸಿ  ಸಂತ ತುಕಾರಾಂ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು.  ಎಸ್.ಜಾನಕಿ ಅವರು ಮಾಣಿಕ್ ವರ್ಮಾ ಅವರಿಗೆ ಸರಿ ಸಾಟಿಯಾಗಿಯೇ ಹಾಡಿದ ಈ ಹಾಡು ಜಯತು ಜಯ ವಿಠಲ, ಬೇಡ ಕೃಷ್ಣ ರಂಗಿನಾಟಗಳಂತೆ  ಬಲು ಜನಪ್ರಿಯವೂ ಆಯಿತು. 

ವಾಸ್ತವವಾಗಿ ಈ ಹಾಡು ಮಾತ್ರವಲ್ಲ, 1963ರಲ್ಲಿ ಬಿಡುಗಡೆಯಾದ ಕನ್ನಡ ಸಂತ ತುಕಾರಾಂ ಚಿತ್ರವೇ 1936ರಲ್ಲಿ ಪ್ರಭಾತ್ ಕಂಪನಿ ನಿರ್ಮಿಸಿದ್ದ ಅದೇ ಹೆಸರಿನ ಮರಾಠಿ ಸಿನಿಮಾವನ್ನು ಆಧರಿಸಿ ತಯಾರಾಗಿತ್ತು. 36ರ ಪ್ರತಿಬಿಂಬ 63!  ಈ ಬಗ್ಗೆ ಎಲ್ಲೂ ಅಧಿಕೃತ ಉಲ್ಲೇಖ ಇಲ್ಲದಿದ್ದರೂ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಿರುವ ಎರಡೂ ಚಿತ್ರಗಳಲ್ಲಿನ ಪಾತ್ರಗಳ  ವೇಷ ಭೂಷಣ, ದೃಶ್ಯ, ಸನ್ನಿವೇಶಗಳಲ್ಲಿರುವ ಸಾಮ್ಯ ಗಮನಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.  ಕೆಲವು ಭಾಗಗಳು ಕೊಲ್ಹಾಪುರದ ಶಾಲಿನಿ ಸಿನಿಟೋನ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡುದೂ ಚಿತ್ರದ ಮರಾಠಿ ನಂಟಿಗೆ ಪುಷ್ಟಿ ನೀಡುತ್ತದೆ. ಮರಾಠಿಯಲ್ಲಿ ವಿಷ್ಣು ಪಂತ್ ಪಗ್ನಿಸ್ ತುಕಾರಾಮನ ಪಾತ್ರದಲ್ಲಿ ಅಭಿನಯಿಸಿದ್ದು ಕೇಶವ ರಾವ್ ಭೋಲೆಯವರ ಸಂಗೀತ ನಿರ್ದೇಶನವಿತ್ತು. ಜಯತು ಜಯ ವಿಠಲಾ, ಬೇಡ ಕೃಷ್ಣ,  ಏಳಯ್ಯ ಮನ ಮೋಹನ ಮುಂತಾದ ಹಾಡುಗಳನ್ನು ಬಿಟ್ಟರೆ  ಆ ಮರಾಠಿ ಚಿತ್ರದ  ಅನೇಕ ಅಭಂಗಗಳನ್ನೇ  ಕನ್ನಡೀಕರಿಸಿ  ಬಳಸಿಕೊಳ್ಳಲಾಗಿತ್ತು.   ಒಂದು ಹಾಡು 1942ರ ಕಿಸ್ಮತ್ ಹಿಂದಿ ಚಿತ್ರದ ಹಾಡಿನ  ಧಾಟಿಯನ್ನೂ ಹೊಂದಿತ್ತು. ಮರಾಠಿ ಸಂತನ ಕಥೆಯಾದ್ದರಿಂದ ಅಭಂಗಗಳ ಧಾಟಿ ಮತ್ತು ಅನುವಾದದ ಅಳವಡಿಕೆ  ಸಹಜ. ಮುಂದೆ ಭಕ್ತ ಕುಂಬಾರದ ಮೂಳೆ ಮಾಂಸದ ತಡಿಕೆ ಹಾಡಿಗೂ ಜಿ.ಕೆ.ವೆಂಕಟೇಶ್ ಅವರು ಮರಾಠಿಯ ಕಾನಡಾ ರಾಜಾ ಪಂಢರಿಚಾ ಧಾಟಿಯನ್ನು ಬಳಸಿದ್ದಿದೆ. ಆದರೂ ಈ ಹಿಂದಿ ಧಾಟಿಯ ಬಳಕೆಗೆ ಕಾರಣ  ತಿಳಿಯದು. ಇರಲಿ, ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಎಂಬ ಉಕ್ತಿಯಂತೆ ನಾವು original ಎಂದು ತಿಳಿದುಕೊಂಡಿರುವುದೂ ಇನ್ಯಾವುದೋ ಮೂಲದಿಂದ ಸ್ಪೂರ್ತಿ ಪಡೆದಿರುವುದೇ ಆಗಿರುತ್ತದಲ್ಲವೇ.  ಈಗ ನಾವು ಕನ್ನಡದ ಕನ್ನಡಿಯಲ್ಲಿ ಪ್ರತಿಬಿಂಬಿತವಾದ ಚಿ. ಸದಾಶಿವಯ್ಯ ವಿರಚಿತ  ಆ ಹಾಡುಗಳು ಮತ್ತು ಮೂಲ ಧಾಟಿಗಳನ್ನು ಜೊತೆ ಜೊತೆಯಾಗಿ ಕೇಳೋಣ. ಇವುಗಳಲ್ಲಿ ಕೆಲವನ್ನು ನೀವು ಇದುವರೆಗೆ ಕೇಳಿರದೆ ಇರುವ ಸಾಧ್ಯತೆಯೂ ಇದೆ.

ಅಮೃತಕ್ಕು ತಾ ರುಚಿ



ಮೃತಾಹುನಿ ಗೋಡ





ಎಂಥ ಕರುಣಾನಿಧಿಯೋ






ಸದಾ ಕಣ್ಣ ಮುಂದೆ






ಆದಿ ಬೀಜ ಒಂದೆನೇ





ಹೇ ಪಂಢರಯ್ಯ

ಇದು 1942ರ ಕಿಸ್ಮತ್ ಚಿತ್ರಕ್ಕಾಗಿ  ಕನ್ನಡದವರೇ ಆದ ಅಮೀರ್ ಬಾಯಿ ಕರ್ನಾಟಕಿ ಧ್ವನಿಯಲ್ಲಿದ್ದ ಹಾಡನ್ನಾಧರಿಸಿದ್ದು.






ಹೊರಟೆ ಸೇರೆ ನಮ್ಮ ಊರ
ತುಕಾರಾಮನು ಪುಷ್ಪಕವಿಮಾನದಲ್ಲಿ  ಸ್ವರ್ಗಕ್ಕೆ ತೆರಳುವ ಕ್ಲೈಮ್ಯಾಕ್ಸ್ ಹಾಡು.






ಕನ್ನಡದ ಕನ್ನಡಿಯಲ್ಲಿನ ಈ ಪ್ರತಿಬಿಂಬಗಳ ನಂತರ ವಿಜಯ ಭಾಸ್ಕರ್ ಅವರು ಸ್ವಂತಿಕೆ ತೋರಿದ  ಕೆಲವು ಹಾಡುಗಳನ್ನು ಆಲಿಸೋಣ.

ಹೇ ಪಾಂಡುರಂಗ
ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಶಿವರಂಜಿನಿ ರಾಗದ ಕಿರು ಹಾಡು.



ನಮ್ಮ ಮನೆ
ಸಂತ ತುಕಾರಾಂ ಚಿತ್ರ ಎಲ್.ಆರ್.ಈಶ್ವರಿಯವರಿಗೆ ತಮ್ಮ ಬಹುಮುಖ ಪ್ರತಿಭೆ ತೋರಿಸಲು ವೇದಿಕೆಯಾಗಿತ್ತು. ಈ ಚಿತ್ರದಲ್ಲಿ ಅವರೇ ಮುಖ್ಯ ಗಾಯಕಿ ಆಗಿದ್ದುದು. ಲೀಲಾವತಿಯವರ ಎಲ್ಲ ಹಾಡುಗಳನ್ನು ಅವರೇ ಹಾಡಿದ್ದರು. ಮೃದು ಮನಸ್ಸಿನ ಆದರೆ ಕಟು ಮಾತುಗಳ ಜೀಜಾ ಬಾಯಿಯ ಪಾತ್ರಕ್ಕೆ ಸೂಕ್ತವಾದ ಧ್ವನಿಯೇ ಆಗಿತ್ತದು.  ಅವರ ಧ್ವನಿಯಲ್ಲಿ ಜಾನಪದ ಶೈಲಿಯ ಈ ಹಾಡು ಆಲಿಸಿ.  



ಕಣ್ಸನ್ನೆ ಗೈದ
ಎಸ್.ಜಾನಕಿ ಹಾಡಿರುವ ಮಹಾರಾಷ್ಟ್ರದ ಲಾವಣಿ ಶೈಲಿಯ  ಈ ಹಾಡಿನಲ್ಲಿ ಢೋಲಕಿಯ ಆಕರ್ಷಕ ನುಡಿತವಿದೆ.



ಜಯತು ಜಯ ವಿಠಲ
ಸರ್ವಕಾಲಿಕ ಹಿಟ್ ಆಗಿರುವ  ಈ ಹಾಡೂ ಮರಾಠಿ ಧಾಟಿಯನ್ನಾಧರಿಸಿದ್ದು ಎಂದು ಕೆಲವರು ತಪ್ಪಾಗಿ ಹೇಳುವುದುಂಟು.  ಮರಾಠಿ ಸಂತ ತುಕಾರಾಂ ಚಿತ್ರ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದ್ದು ಅದರಲ್ಲಿ ಇದನ್ನು ಹೋಲುವ ಯಾವ ಹಾಡೂ ಇಲ್ಲ.  ಇದು ವಿಜಯಭಾಸ್ಕರ್ ಅವರದ್ದೇ ಸ್ವಂತ ಕಂಪೋಸಿಷನ್. ಚಿ. ಸದಾಶಿವಯ್ಯನವರ ಈ ರಚೆನೆಯನ್ನು ಪುರಂದರದಾಸರ ಕೀರ್ತನೆ ಎಂದು ಎಂದು ತಿಳಿದುಕೊಂಡವರುಂಟು!



ಪೀಠಾಪುರಂ, ರಾಮದಾಸ್ ಮತ್ತು ಭೋಜ ರಾವ್ ಧ್ವನಿಯಲ್ಲಿರುವ  ಆ ಹಾಡಿನ ಕಾಪಿ ರಾಗಾಧಾರಿತ ವರ್ಷನ್ ಕೇಳಿದ್ದೀರಾ? ಇಲ್ಲಿದೆ ನೋಡಿ.    ಇದನ್ನು ಯಾರೋ ಶಾಸ್ತ್ರೀಯ ಸಂಗೀತದ ವಿದ್ವಾಂಸರು ಹಾಡಿದ್ದಾರೆ ಎಂದೇ ನಾನು ಇತ್ತೀಚಿನವರೆಗೂ ತಿಳಿದುಕೊಂಡಿದ್ದೆ. ಲಘು ಧಾಟಿಯ ಹಾಡುಗಳಿಗಷ್ಟೇ ಸೀಮಿತರಾಗಿದ್ದ  ಪೀಠಾಪುರಂ ನಾಗೇಶ್ವರ ರಾವ್  ಇಷ್ಟು ವಿದ್ವತ್‌ಪೂರ್ಣವಾಗಿ ಹಾಡಬಲ್ಲರೆಂಬ ಕಲ್ಪನೆಯೂ ನನಗಿರಲಿಲ್ಲ. 



ಬೇಡ ಕೃಷ್ಣ
ಎಸ್. ಜಾನಕಿ  ಧ್ವನಿಯಲ್ಲಿರುವ ಈ ಹಾಡಿನಲ್ಲಿ ತಾಳವಾದ್ಯಗಳದ್ದೇ ಪ್ರಾಮುಖ್ಯ.  ಸಾಹಿತ್ಯ ಭಾಗವು  ಕಮ್ಮಿ ಇರುವುದರಿಂದ ಪುನರಾವರ್ತನೆ ಜಾಸ್ತಿ.  ರೇಡಿಯೊದಲ್ಲಿ ಈ ಹಾಡು ಕೇಳಿಸದಿದ್ದರೆ ಜನ್ಮಾಷ್ಟಮಿ ಜನ್ಮಾಷ್ಟಮಿ ಎಂದೆನಿಸದು. 78 RPM ರೆಕಾರ್ಡಿನಲ್ಲಿ ಇದರ ಇನ್ನೊಂದು ಬದಿಯಲ್ಲಿ ಜಯತು ಜಯ ವಿಠಲ ಹಾಡು ಇದ್ದದ್ದು.



ಏಳಯ್ಯ ಮನಮೋಹನ
ಎಲ್.ಆರ್. ಈಶ್ವರಿ ಧ್ವನಿಯಲ್ಲಿರುವ ಇದು ದಕ್ಷಿಣಾದಿ ಶೈಲಿಯಲ್ಲಿರುವ ಏಳಯ್ಯ ಮನಮೋಹನ, ಹಿಂದುಸ್ತಾನಿ ಶೈಲಿಯ ಜಗದಲಿ ಭೋಗ ಯೋಗ ಪೂರ್ವ ಪುಣ್ಯ ಸಂಯೋಗ ಮತ್ತು ಜಾನಪದ ಶೈಲಿಯ ತೀಡಿ ತಂಗಾಳಿ ತನು ತುಂಬಿದೆ ಎಂಬ ಮೂರು ಹಾಡುಗಳ ಗುಚ್ಛ. ಹೇ ಪಂಢರಯ್ಯ ಕೂಡ ಇದಕ್ಕೇ ಸೇರಿದ್ದಾದರೂ ಇಲ್ಲಿ ಬೇರೆಯಾಗಿಯೇ ಪ್ರಸ್ತುತಪಡಿಸಿದ್ದೇನೆ.








4 comments:

  1. ಅಮೃತಕ್ಕು ತಾ ರುಚಿ ಮರಾಠಿ ಹಾಡಿನ ಅನುವಾದ ಮಾತ್ರವಲ್ಲ ಚಿತ್ರೀಕರಣವನ್ನು ಮರಾಠಿ ಗ್ರಾಮಾಪೋನ್‍ ಪ್ಲೇಟ್ ಹಾಕಿಕೊಂಡೇ ಮಾಡಲಾಗಿತ್ತು. ಅದರ ತುಟಿ ಚಲನೆ ನೋಡಿ ಕೊಂಡು ಸದಾಶಿವಯ್ಯನವರು ಸಾಹಿತ್ಯ ಬರೆದಿದ್ದರು. ಅಪಾರ ಪ್ರತಿಭಾವಂತರಾದ ಪಿ.ಶಾಮಣ್ಣನವರಿಗೆ ಜಗನ್ಮೋಹನಿಯ ಅನುಕರಣೆ ಒಪ್ಪಲು ಕಷ್ಟವಾದರೂ ಸಂಗೀತ ನಿರ್ದೇಶನದ ಅವಕಾಶಕ್ಕಾಗಿ ಒಪ್ಪಲೇ ಬೇಕಾಯಿತು ಎಂದು ನನ್ನ ಸಂದರ್ಶನದಲ್ಲಿ ಹೇಳಿದ್ದರು. ಜಿ.ಕೆ.ವೆಂಕಟೇಶ್ ಅವರಲ್ಲಿ ಕೆಲವು ಅನಿವಾರ್ಯ ಅನುಕರಣೆಗಳಿವೆ. ಕಣ್ಣಂಚಿನ ತಮಿಳು ಗೀತೆಯೊಂದರ ಅನುಕರಣೆ ಎಂದು ಅವರೇ ನನಗೆ ಹೇಳಿದ್ದರು ಇದಕ್ಕೆ ಕಾರಣವೂ ಅದೇ ನಿರ್ಮಾಪಕರ ಒತ್ತಡ. ಸಲೀಲ್ ಚೌಧರಿ ಸಿದ್ದವಾಗಿದ್ದ ಟ್ಯೂನ್‍ ಕೊಟ್ಟೇ ಕು.ರ.ಸೀತಾರಾಮ ಶಾಸ್ತ್ರಿಗಳಿಗೆ ಇದು ಅನುಕರಣೆ ಎನ್ನಿಸಿದಂತೆ ಸಾಹಿತ್ಯ ರಚಿಸ ಬೇಕು ಎಂದು ಸವಾಲು ಎಸೆದಿದ್ದರು ಈ ಕುರಿತು ಲೇಖನವನ್ನೂ ಬರೆದಿದ್ದೇನ. ಒಟ್ಟಿನಲ್ಲಿ ಇದೊಂದು ವಿಶೇಷ ಪ್ರಯತ್ನ. ಹಲವು ನೆನೆಪುಗಳನ್ನು ನನಗೆ ತಂದಿತು.

    ಶ್ರೀಧರ ಮೂರ್ತಿ (FB)

    ReplyDelete
  2. ಅಧ್ಬುತ ಸಾರ್, ಅದ್ಭುತ. ಬಹಳ ದಿವಸಗಳಿಂದ ಮರಾಠಿ ಹಾಡಿನ ಕನ್ನಡ ಆವತರಣಿಕೆಯ ಹಾಡು ಕೇಳಲು ತವಕ ಇತ್ತು. ಯಾವಾಗಲೋ ಒಮ್ಮೆ ಬಿ.ಆರ್.ಛಾಯಾ ರವರು ಹಾಡಿದ್ದು ಕೇಳಿದ್ದೆ. ತುಂಬಾ, ತುಂಬಾ ಧನ್ಯವಾದಗಳು.

    ReplyDelete
  3. ಇಷ್ಟೆಲ್ಲಾ ಅದ್ಭುತವಾದ ಹಾಡುಗಳನ್ನು ಮರಾಠಿಯಿಂದ ಕನ್ನಡಕ್ಕೆ ಭಾಷಾ೦ತರಿಸಿದ್ದು ನೋಡಿ ಆಶ್ಚರ್ಯ ಹಾಗೂ ಕೌತುಕವಾಯಿತು.

    ReplyDelete
  4. Enjoyed listening to all the songs.

    ReplyDelete

Your valuable comments/suggestions are welcome