Monday 17 July 2017

ಮನದೇ ಮಹಾ ಬಯಕೆ



ಘಂಟಸಾಲ ಎಷ್ಟು ಒಳ್ಳೆಯ ಗಾಯಕರೋ ಅಷ್ಟೇ ಒಳ್ಳೆಯ ಸಂಗೀತ ನಿರ್ದೇಶಕರು ಕೂಡ. ನಾನು ಏಳನೇ ತರಗತಿಯಲ್ಲಿದ್ದಾಗ ಬೆಳ್ತಂಗಡಿಯ ಮರುಳ ಸಿದ್ಧೇಶ್ವರ ಟೂರಿಂಗ್ ಟಾಕೀಸಿನಲ್ಲಿ ಮೋಹಿನಿ ರುಕ್ಮಾಂಗದ ಎಂಬ ತೆಲುಗಿನಿಂದ ಕನ್ನಡಕ್ಕೆ ಡಬ್ ಆದ ಚಿತ್ರ ನೋಡಿದ್ದೆ. ಅಂದು ದೀಪಗಳು ಆರಿ ಜಾಹೀರಾತುಗಳು ಮತ್ತು ನ್ಯೂಸ್ ರೀಲ್ ಮುಗಿದು ಚಿತ್ರ ಆರಂಭವಾಗಿ ಟೈಟಲ್ಸ್ ಪರದೆಯ ಮೇಲೆ ಮೂಡುವ ಸಂದರ್ಭದಲ್ಲಿ  ಸಂಗೀತ - ಘಂಟಸಾಲ ಎಂಬ ಅಕ್ಷರಗಳು ಕಾಣಿಸುತ್ತಲೇ ಪುಳಕಿತನಾದ ಪ್ರೇಕ್ಷಕರಲ್ಲೋರ್ವ ‘ಹೋ! ಘಂಟಸಾಲನ ಸಂಗೀತ.  ಭಾರೀ ಎಡ್ಡೆ ಇಪ್ಪುಂಡುಯೇ’(ಘಂಟಸಾಲ ಅವರ ಸಂಗೀತ.  ತುಂಬಾ ಚೆನ್ನಾಗಿರುತ್ತದೆ) ಎಂದು ತುಳುವಿನಲ್ಲಿ ಹೇಳಿದ್ದು ಅವರ ಹೆಸರೇ ಮಾಧುರ್ಯಕ್ಕೊಂದು ಗ್ಯಾರಂಟಿಯಾಗಿತ್ತು ಎಂಬುದಕ್ಕೆ ಸಾಕ್ಷಿ.    ಅವರ ಮುಖ್ಯ ಕಾರ್ಯಕ್ಷೇತ್ರ ತೆಲುಗು ಚಿತ್ರರಂಗವಾದರೂ ಕನ್ನಡದಲ್ಲೂ ಅನೇಕ ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದು  ವಾಲ್ಮೀಕಿ ಅವುಗಳಲ್ಲೊಂದು.  


ವಾಲ್ಮೀಕಿ ಚಿತ್ರದ ಜಲಲ ಜಲಲ ಜಲ ಧಾರೆ  ಹಾಡನ್ನು ಅರಿಯದವರಿಲ್ಲ. ಆದರೆ ಇದೇ ಚಿತ್ರದಲ್ಲಿ ಮನದೇ ಮಹಾ ಬಯಕೆ ಎಂಬ ಉಲ್ಲಾಸ ಮತ್ತು ವಿಷಾದ ಎರಡೂ ಭಾವಗಳು ಮೋಹನ ರಾಗವೊಂದರಲ್ಲೇ ಅಭಿವ್ಯಕ್ತಗೊಂಡ ಸರಳ ಸುಂದರ  two in one ಹಾಡೊಂದು ಇರುವುದು ಅನೇಕರಿಗೆ ಮರೆತೇ ಹೋಗಿರಬಹುದು. ಘಂಟಸಾಲ ಅವರ ಕ್ಯಾಂಪಲ್ಲಿ ಹೆಚ್ಚು ಗುರುತಿಸಿಕೊಳ್ಳದ ಎಸ್. ಜಾನಕಿ ಅವರು  ಪಿ.ಲೀಲ ಜೊತೆಗೆ ಇದನ್ನು ಹಾಡಿದ್ದು ಒಂದು ವಿಶೇಷ. ಈ ಗಾಯಕಿಯರೀರ್ವರು ಜೊತೆಗೆ ಹಾಡಿದ್ದು ಬಲು  ಕಮ್ಮಿ.  ನನಗೆ ನೆನಪಿರುವ ಇವರ ಜಂಟಿಗಾಯನದ ಇನ್ನೊಂದು ಹಾಡು ನಂದಾದೀಪ ಚಿತ್ರದ ನಾಡಿನಂದ ಈ ದೀಪಾವಳಿ.

ಒಲವೆ ಜೀವನ ಸಾಕ್ಷಾತ್ಕಾರ, ಬರೆದೆ ನೀನು ನಿನ್ನ ಹೆಸರ ಇತ್ಯಾದಿ ಒಂದೇ ಹಾಡಿನ happy ಮತ್ತು sad ಆವೃತ್ತಿ ಇರುವ ಉದಾಹರಣೆಗಳು ಅನೇಕ ಸಿಗಬಹುದು.  ಆದರೆ ಒಂದೇ ಹಾಡಲ್ಲಿ ಒಂದೇ ರಾಗ ಒಂದೇ ಲಯವನ್ನು ಬಳಸಿಕೊಂಡು ಎರಡು ಭಾವಗಳ ಅಭಿವ್ಯಕ್ತಿ ಸುಲಭವಲ್ಲ.  ಅದನ್ನು ಗಾಯಕಿಯರಾದ ಎಸ್.ಜಾನಕಿ ಮತ್ತು ಪಿ.ಲೀಲ,  ಹಾಡು ಬರೆದ ಕಣಗಾಲ್ ಪ್ರಭಾಕರ ಶಾಸ್ತ್ರಿ ಮತ್ತು ಸಂಗೀತ ನಿರ್ದೇಶಕ ಘಂಟಸಾಲ ಇಲ್ಲಿ ಸಾಧಿಸಿ ತೋರಿಸಿದ್ದಾರೆ.

ಮ್ಯಾಂಡೊಲಿನ್ ಮತ್ತು ವೀಣೆಯ ಪಲುಕುಗಳೊಂದಿಗಿನ  ಜಾನಕಿ ಅವರ ಕಿರು ಆಲಾಪದೊಂದಿಗೆ ಹಾಡು ಆರಂಭವಾಗುತ್ತದೆ.  ಪಲ್ಲವಿಗೆ  ಹೊಂದಿಕೊಂಡಂತಿರುವ ಮೊದಲ ಚರಣಕ್ಕೆ ಮೊದಲು interlude ರೂಪದಲ್ಲಿ ಮ್ಯಾಂಡೊಲಿನ್‌ನ ಚಿಕ್ಕ bridge music ಮಾತ್ರ ಇದೆ.  ಈ ಭಾಗದ ಉಲ್ಲಾಸ ಭಾವವನ್ನು ಕಟ್ಟಿಕೊಟ್ಟದ್ದು  ಎಡ ಬಲಗಳ ಸುಂದರ ಸಮನ್ವಯದ ದ್ರುತ ತಬ್ಲಾ ನಡೆ.  ಚರಣದ ಸಾಲಿನ ಪುನರಾವರ್ತನೆಯ ನಡುವಿನ bridge music ಹಳೆಯ ಮರಾಠಿ ಹಾಡುಗಳನ್ನು ನೆನಪಿಸುತ್ತದೆ. ಕೆಲವರಿಗೆ remix  ರೂಪದಲ್ಲಿ  ಒಮ್ಮೆ ಬಲು ಪ್ರಸಿದ್ಧವಾಗಿದ್ದ ಸೈಯಾಂ ದಿಲ್ ಮೆಂ ಆನಾ ರೆ ಕೂಡ ನೆನಪಾದೀತು.  ಚರಣದ ಕೊನೆ ಭಾಗದ ಜಾನಕಿ ಅವರ ಆಲಾಪ ಭೂಪ್ ರಾಗದ ಕಿರು ಭಾಷ್ಯದಂತಿದೆ ಎಂದರೆ ತಪ್ಪಾಗಲಾರದು.

ಈ ಭಾಗ ಮುಗಿಯುತ್ತಲೇ ತಾರ್ ಶಹನಾಯಿ ಮತ್ತು ಡೋಲಿನ ವಿಳಂಬಿತ ಗತಿಯ ನುಡಿತ ಮುಂದಿನ ವಿಷಾದ ಭಾವಕ್ಕೆ ವೇದಿಕೆ ಸಿದ್ಧಪಡಿಸುತ್ತವೆ. ನುಡಿತದ ಗತಿ ಮಾತ್ರ ಬದಲಾಗಿ ಅದೇ ಲಯ ಮುಂದುವರೆಯುವುದು ಗಮನಿಸಬೇಕಾದ ಅಂಶ. ಮುಕೇಶ್ ಅವರಂತೆ ಪಿ.ಲೀಲ ಕೂಡ  ತನ್ನ ಧ್ವನಿಯಲ್ಲಿ inbuilt pathos ಹೊಂದಿದ್ದು ಭಾವಗಳ ವೈರುಧ್ಯ ಎದ್ದು ಕಾಣಲು ಅವರನ್ನು ಆಯ್ಕೆ ಮಾಡಿದ್ದು ಘಂಟಸಾಲ ಅವರ ಜಾಣ್ಮೆಯ ದ್ಯೋತಕ.  ನಡುವೆ ಅಲ್ಲಲ್ಲಿ ಜೊತೆಗೂಡುವ ತಾರ್ ಶಹನಾಯಿಯ ಮಧುರ ರೋದನ ಈ ಭಾವವನ್ನು ಮತ್ತಷ್ಟು ಎತ್ತಿಕೊಡುತ್ತದೆ.

ಮುಂದಿನ ಎರಡು ಚರಣಗಳು ಸರದಿಯಂತೆ ಎರಡೂ ಭಾವಗಳನ್ನು ಅಭಿವ್ಯಕ್ತಿಸಿ ಕೊನೆಗೆ ಇಬ್ಬರು ಗಾಯಕಿಯರು  ಜೊತೆಯಾಗಿ  ಪಲ್ಲವಿ ಭಾಗವನ್ನು ಹಾಡುತ್ತಾರೆ.

ಅರ್ಥಪೂರ್ಣ ಸಾಹಿತ್ಯ, ಆಕರ್ಷಕ ಧಾಟಿ, ಸೀಮಿತ ಸಂಖ್ಯೆಯ ವಾದ್ಯಗಳು, ಭಾವಕ್ಕೆ ತಕ್ಕ ಧ್ವನಿಗಳ ಆಯ್ಕೆ,  ಧ್ವನಿ ಮತ್ತು ವಾದ್ಯಗಳನ್ನು ಸ್ಪಷ್ಟವಾಗಿ ಆಲಿಸಲು ಸಾಧ್ಯವಾಗಿಸುತ್ತಿದ್ದ ಅಂದಿನ RCA ಧ್ವನಿಮುದ್ರಣ  ಈ ಹಾಡನ್ನು ಬಲು ಎತ್ತರಕ್ಕೊಯ್ದಿವೆ. ಚಿತ್ರಗೀತೆಗಳ ಸಿದ್ಧ ಮಾದರಿಗಿಂತ ಇದು ಕೊಂಚ ಭಿನ್ನವೂ ಹೌದು. 

ಸರಿಯೋ ಬೆಸವೋ ನಾನೇ ತಂದೆ ಎಂಬ ಸಾಲಿನಲ್ಲಿ ವಿಷಮ ಸಂಖ್ಯೆ ಎಂಬುದರ ಸಮಾನಾರ್ಥಕವಾದ ಬೆಸ ಪದವನ್ನು ತಪ್ಪು ಎಂಬರ್ಥದಲ್ಲಿ ಬಳಸಿರುವುದು ಒಂದು ವಿಶಿಷ್ಟ ಪ್ರಯೋಗ.

ಆದರ್ಶ ಸತಿ, ಶ್ರೀ ಕೃಷ್ಣ ಗಾರುಡಿ, ಅಮರಶಿಲ್ಪಿ ಜಕ್ಕಣ್ಣ, ಸತ್ಯ ಹರಿಶ್ಚಂದ್ರ, ವೀರ ಕೇಸರಿಗಳಂತೆ ವಾಲ್ಮೀಕಿ ಕೂಡ ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲಕ್ಕೆ ತಯಾರಾಗಿದ್ದು ಈ ಹಾಡಿನ ತೆಲುಗು ತದ್ರೂಪಿ ಕೂಡ ಇದೆ.



ಚಿತ್ರ : ವಾಲ್ಮೀಕಿ
ಗಾಯಕರು : ಎಸ್. ಜಾನಕಿ ಮತ್ತು ಪಿ.ಲೀಲ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ಘಂಟಸಾಲ
***

ಮನದೆ ಮಹಾಬಯಕೆ
ಏನೇನೊ ರೂಪ ರೇಖೆ
ಮನದೆ ಮಹಾಬಯಕೆ

ನೀ ಬಂದಂದೆ ನಾ ಮೈ ಮರೆತೆ
ಆ ನೆನಪೊಂದೇ ನೂತನ ಕವಿತೆ
ನಿನ್ನೊಲವೇ ಮನೋರಮ್ಯ ಚರಿತೆ
ಮರೆಯದ ಮೋಹನ ಗೀತೆ

ಯಾರದೊ ಕಾಣೆ ಚಂದದ ಗೊಂಬೆ
ಸರಿಯೋ ಬೆಸವೋ ನಾನೇ ತಂದೆ
ದೈವವೆ ನೀಡಿದ ಸೌಭಾಗ್ಯವೆಂದೆ
ನಂಬಲೊ ಬಿಡಲೊ ನಾ ಮುಂದೆ

ಚಿತ್ತದೆ ನೆನೆದೆ ಚಿತ್ರವ ಬರೆದೆ
ಚಿತ್ತಜ ನಾನೇ ಪರವಶವಾದೆ
ನಾ ಮಣಿವೆ ಮನೋದೈವವೆಂಬೆ
ಪ್ರೇಮಿಸು ಅನುರಾಗವೇ

ಆಸೆಯ ದೀಪ ಆರದಂತೆ
ಅರಳಿದ ಜಾಜಿ ಬಾಡದಂತೆ
ಕಣ್ಣಿನ ಕಾಡಿಗೆ ನೀರಾಗದಂತೆ
ಕಣ್ಣಿಡು ಕಾಪಾಡು ಮಾತೆ




No comments:

Post a Comment

Your valuable comments/suggestions are welcome