Tuesday 6 June 2017

ಮನಸ್ಸಿಲ್ಲದ ಮನಸ್ಸಿಂದ ಶಾಲಾ ಕಾಲೇಜಿಗೆ ಹೋದದ್ದು


ವರ್ಷಾಂತ್ಯದ ಕೊನೆಯ ಪರೀಕ್ಷೆಯ ದಿನ  ಉತ್ತರಪತ್ರಿಕೆಯನ್ನು ಅಧ್ಯಾಪಕರ ಕೈಗೆ ಕೊಟ್ಟು ಹಕ್ಕಿಯಂತೆ ಹಗುರಾಗಿ ದುಖ್ ಭರೆ ದಿನ್ ಬೀತೆರೆ ಭೈಯಾ ಅಬ್ ಸುಖ್ ಆಯೋರೇ ಎಂದು ಹಾಡುತ್ತಾ ಹೊರ ಬರುತ್ತಿದ್ದ ನಾನು ರಜೆ ಮುಗಿದು ಪುನ: ಶಾಲಾರಂಭ ಹತ್ತಿರವಾಗುತ್ತಿದ್ದಂತೆ ಆ  ಹಾಡನ್ನು ತಿರುವು ಮುರುವು ಮಾಡಿ ಸುಖ್ ಭರೆ ದಿನ್ ಬೀತೆರೆ ಭೈಯಾ ಅಬ್ ದುಖ್ ಆಯೋರೆ ಎಂದು ಹಾಡತೊಡಗುತ್ತಿದ್ದೆ. ರಜೆಯಲ್ಲಿ ಯಾವಾಗಾದರೊಮ್ಮೆ ನಾವು ಬಚ್ಚಲೊಲೆಯಲ್ಲಿ ನೀರುಳ್ಳಿಯನ್ನು ಸುಟ್ಟು ಒಂದೊಂದೇ ಪದರವನ್ನು ಬಿಡಿಸಿ ತಿನ್ನುವುದಿತ್ತು. ಒಂದೊಂದಾಗಿ ಕಳೆದು ಹೋಗುತ್ತಿರುವ ರಜಾ ದಿನಗಳನ್ನು ಈ ನೀರುಳ್ಳಿಯ ಪದರಗಳಿಗೆ ಹೋಲಿಸುತ್ತಾ ಅತ್ಯಂತ ರುಚಿಕರವಾದ ಒಳಗಿನ ತಿರುಳಾದ ಕೊನೆಯ ದಿನ ಬಂದಾಗ ಅತೀವ ಸಂಕಟವಾಗುತ್ತಿತ್ತು. ಒಂದನೇ ಕ್ಲಾಸಿನಿಂದ ಹಿಡಿದು ಡಿಗ್ರಿ ಮುಗಿಯುವವರೆಗೂ  ಬೇರೆ ನಿರ್ವಾಹವಿಲ್ಲದ್ದರಿಂದ ಶಾಲಾ ಕಾಲೇಜಿಗೆ ಹೋದದ್ದೇ ಹೊರತು  ನಾನಾಗಿ ಇಷ್ಟ ಪಟ್ಟು ಖಂಡಿತ ಅಲ್ಲ ಎಂದು ಹೇಳಲು ನನಗೆ ಯಾವ ಸಂಕೋಚವೂ ಇಲ್ಲ!  ಕೆಲ ಸಮಯದ ನಂತರ ಅಲ್ಲಿ ಧನಾತ್ಮಕ ಅಂಶಗಳು ಕಂಡು ಬರತೊಡಗಿದ್ದರೆ ಅದು ನಮಗೆ ಕಾಟ ಕೊಡುವವರನ್ನೇ ಇಷ್ಟ ಪಡುವ  Stockholm syndromeನ ಪರಿಣಾಮ ಇರಬಹುದಷ್ಟೇ ಹೊರತು ಬೇರೇನೂ ಅಲ್ಲ! ಎಲಿಮೆಂಟರಿ, ಹೈಯರ್ ಎಲಿಮೆಂಟರಿ ಮತ್ತು ಹೈಸ್ಕೂಲುಗಳಲ್ಲಿ ತಕ್ಕಮಟ್ಟಿಗೆ  ಜೀವನೋಪಯೋಗಿ ವಿಷಯಗಳು ಕಲಿಯಲು ಸಿಕ್ಕಿದ್ದರೂ ಕಾಲೇಜಿದ್ದು ಈ ನಿಟ್ಟಿನಲ್ಲಿ  ಶೂನ್ಯ ಸಂಪಾದನೆ.

ಪ್ರಾಥಮಿಕ

ಕಡು ಗೃಹಮೋಹಿಯಾಗಿದ್ದ ನಾನು ಮೊತ್ತ ಮೊದಲ ದಿನ ತಂದೆಯವರಿಂದ ಬಾಸುಂಡೆ ಬರುವಂತೆ ಬೆತ್ತದ ಏಟು ತಿಂದೇ ಕಲ್ಮಂಜದ ಶಾಲೆಯತ್ತ ಹೆಜ್ಜೆ ಹಾಕಿದ್ದು ನನಗಿನ್ನೂ ನೆನಪಿದೆ. ಆಗ ಅದು ಸಿದ್ಧಬೈಲು ಪರಾರಿ ಕಿರಿಯ ಬುನಾದಿ ಪ್ರಾಥಮಿಕ ಶಾಲೆ ಆಗಿತ್ತು.

ಈ ಶಾಲೆ ಕೆಲ ಸಮಯ ಹಿಂದಷ್ಟೇ ಆರಂಭವಾಗಿತ್ತು. ಅದಕ್ಕೆ ಮೊದಲು ಕೆಳಗಿನ ಪರಾರಿ ಲಕ್ಷ್ಮಣ ಹೆಬ್ಬಾರರ ಮನೆ, ಅದಕ್ಕಿಂತಲೂ ಮೊದಲು ನರ್ಗ ಶೀನ ಹೆಬ್ಬಾರರ ಮನೆಯಲ್ಲಿ ಖಾಸಗಿ ನೆಲೆಯ ಶಾಲೆ ಇತ್ತಂತೆ. ನನ್ನ ಹಿರಿಯ ಅಣ್ಣಂದಿರು ಮತ್ತು ಹಿರಿಯಕ್ಕ 1930-40ರ ದಶಕಗಳಲ್ಲಿ ‘ವೃದ್ಧ ಮಾಸ್ಟ್ರು’ (ಭಾಂತಾರೊ ಮಾಸ್ಟ್ರು) ಎಂದೇ ಕರೆಯಲ್ಪಡುತ್ತಿದ್ದ ಹಿರಿಯರೊಬ್ಬರು ನಡೆಸುತ್ತಿದ್ದ ಖಾಸಗಿ ಶಾಲೆಯಲ್ಲಿ ಕಲಿತದ್ದಂತೆ. ಆಗ ಆರಂಭದಿಂದಲೇ ಕನ್ನಡದ ಜೊತೆಗೆ ಇಂಗ್ಲೀಷನ್ನೂ ಕಲಿಸುತ್ತಿದ್ದರಂತೆ. ನನ್ನ ಕಿರಿಯಣ್ಣನಿಗೆ 4ನೇ ಕ್ಲಾಸ್ ವರೆಗೆ ಗಿರಿಯಪ್ಪ ಮಾಸ್ಟ್ರು ಹಾಗೂ ಮೂಲೆ ಮನೆ ರಾಮ ಮಾಸ್ಟ್ರು ಕಲಿಸಿದ್ದಂತೆ.

ಏಟು ತಿಂದು ಶಾಲೆಗೆ ಹೋದ ಹೊಸತರಲ್ಲಿ ನಾನು ಹೊಸ ಶಾಲೆಯಲ್ಲಿ 5ನೇ ಕ್ಲಾಸಿಗೆ ನೇರವಾಗಿ ದಾಖಲಾಗಿದ್ದ ಅಣ್ಣನ ಜೊತೆಯೇ ಕುಳಿತುಕೊಳ್ಳುತ್ತಿದ್ದೆ. ಕೆಲವು ತಿಂಗಳುಗಳ ನಂತರವಷ್ಟೇ ಒಂದನೇ ತರಗತಿಗೆ ಹೋಗಿರಬಹುದು.  ಅಲ್ಲಿ ಶೆಟ್ಟಿ ಮಾಸ್ಟರು ಸ್ಲೇಟಲ್ಲಿ ಅ ಮತ್ತು ಆ ವನ್ನು ಬರೆದು ಕೊಟ್ಟು ತಿದ್ದಿ ತಿದ್ದಿ ಅಜ್ಜ ಮಾಡಲು ಹೇಳುತ್ತಿದ್ದರು. ಮತ್ತೆ ಮತ್ತೆ ಬರೆಯುವ ಬದಲು ಅಡ್ಡಡ್ಡಕ್ಕೆ ಗೀಚಿ ಸುಲಭವಾಗಿ ಅಜ್ಜ ಮಾಡುವ ಅಡ್ಡದಾರಿಯನ್ನು ನಾನು ಆಗಲೇ ಕಂಡುಕೊಂಡಿದ್ದೆ!  ಕೆಲ ದಿನಗಳ ನಂತರ ಚೆಲುಗನ್ನಡ ಪಾಠಮಾಲೆಯ ಮೊದಲ ಪಾಠ ದನ ಮರ ಸರ ದ ರ ಮ ನ ಸ   ಕಲಿತದ್ದು ನೆನಪಿದೆ. ಒಂದನೇ ಕ್ಲಾಸು ಮುಗಿಯುವಷ್ಟರಲ್ಲಿ ಕ್ಷ, ತ್ರ, ಜ್ಞ ವರೆಗೆ ಅಕ್ಷರಗಳನ್ನು ಮತ್ತು ಒಂದರಿಂದ ನೂರರ ವರೆಗೆ ಅಂಕಿಗಳನ್ನು ಬರೆಯಲು ಕಲಿತಿದ್ದೆ. ಇವುಗಳನ್ನು ಸ್ಲೇಟಿನ ಒಂದೊಂದು ಬದಿಯಲ್ಲಿ ಕಾಪಿ ಬರೆದು ದಿನಾ ತೋರಿಸಬೇಕಾಗುತ್ತಿತ್ತು. ಬಳುಕುವ ನಾಗರಬೆತ್ತವೊಂದನ್ನು ಯಾವಾಗಲೂ ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದ ಶೆಟ್ಟಿ ಮಾಸ್ಟ್ರು ನನಗೆ ಅದರ ರುಚಿಯನ್ನು ಒಮ್ಮೆಯೂ ತೋರಿಸದಿದ್ದರೂ ಒಂದು ಅಪರಾಹ್ನ ಕೊಂಚ ತೂಕಡಿಸಿದ್ದಕ್ಕೆ ಮುಖಕ್ಕೆ ತಣ್ಣೀರೆರಚಿದ್ದರು.   ಎರಡನೇ ಕ್ಲಾಸಲ್ಲಿ ಪೆನ್ಸಿಲ್ , ಪುಸ್ತಕ ಉಪಯೋಗ, ಮಗ್ಗಿ ಕಲಿಕೆ ಆರಂಭವಾಗಿತ್ತು. ಜೈನ್ ಮಾಸ್ಟ್ರು ಕಲಿಸಿದ ಕೂಡಿಸುವ ಲೆಕ್ಕ  ಏನೊಂದೂ ಅರ್ಥವಾಗದೆ ಕ್ಲಾಸಲ್ಲಿ  ಕೊಟ್ಟ ಮೊತ್ತ ಮೊದಲ ಬಾಯಿ ಲೆಕ್ಕಕ್ಕೆ ಬಾಯಿಗೆ ಬಂದ ಉತ್ತರ ಹೇಳಿ ಮೊದಲ ಶೂನ್ಯ ಸಂಪಾದಿಸಿದ್ದೆ. ಆಗ ಶಾಲೆಯಲ್ಲಿದ್ದ ಟೈಮ್ ಪೀಸ್ ನನಗೆ ಆಕರ್ಷಣೆಯ ವಸ್ತುವಾಗಿದ್ದು ಮನೆಗೆ ಹೋಗಿ ರೈಲು ಚೆಂಬಿನ ಮುಚ್ಚಳವನ್ನು ಟೈಮ್ ಪೀಸ್ ಆಗಿಸಿ ಆಟವಾಡುತ್ತಿದ್ದೆ. ಅಧ್ಯಾಪಕರ ಬಳಿಯಿದ್ದ ಸ್ಟೀಲಿನ ವಿಶಲ್, ಆಟದ ಪೀರಿಯಡ್ದಲ್ಲಿ ಅವರು ಧರಿಸುತ್ತಿದ್ದ ಫೆಲ್ಟ್ ಹ್ಯಾಟುಗಳ ಮೇಲೆ ಮೋಹ ಉಂಟಾಗಿ ಒಂದಲ್ಲ ಒಂದು ದಿನ ನಾನೂ ಅಂಥವುಗಳನ್ನು ಹೊಂದಬೇಕೆಂದು ಕನಸು ಕಾಣುತ್ತಿದ್ದೆ! 


3ನೇ ಕ್ಲಾಸಿನ ನಂತರ ಶಾಲೆಯ  ವಾತಾವರಣಕ್ಕೆ ಕೊಂಚ ಹೊಂದಿಕೊಂಡೆ. ಶಾಲೆಗೆ ಹೋಗುವಾಗ ಬರುವಾಗ ದಾರಿಯಲ್ಲಿ ಸಿಗುವ ಕೇಪುಳ, ಚೂರಿ ಕಾಯಿ, ಕುಂಟಾಲ ಹಣ್ಣು ಮುಂತಾದವುಗಳ ರುಚಿ ಹತ್ತಿತ್ತು. ಮಳೆಗಾಲದ ಆರಂಭದಲ್ಲಿ ಗೇರುಮರಗಳ ಅಡಿಯ ಪೊದೆಗಳಲ್ಲಿ ಅಡಗಿರುತ್ತಿದ್ದ ಗೇರುಬೀಜಗಳು ಮೊಳೆತು ಕೊಡ್ಪಾಂಗ್ಯೆಲ್ ರೂಪದಲ್ಲಿ ತಿನ್ನಲು ಸಿಗುತ್ತಿದ್ದವು. ನಾವು ನೀರುಕಡ್ಡಿ ಎಂದು ಕರೆಯುತ್ತಿದ್ದ, ಮಳೆಗಾಲದಲ್ಲಿ ಬೆಳೆಯುತ್ತಿದ್ದ ಜಲಭರಿತ ಕಾಂಡದ  ಸಸ್ಯವೊಂದನ್ನು ಸ್ಲೇಟು ಬರಹ ಅಳಿಸುವುದಕ್ಕಾಗಿ ಚೀಲದಲ್ಲಿ ತುಂಬಿಕೊಳ್ಳುತ್ತಿದ್ದೆವು. ಬಳಪದ ತುಂಡುಗಳಿಗೆ ಬದಲಾಗಿ ಕೆಲವನ್ನು ಸ್ನೇಹಿತರಿಗೆ ಕೊಡುವುದೂ ಇತ್ತು. ವಿಜಯೀ ವಿಶ್ವ ತಿರಂಗಾ ಪ್ಯಾರಾ ಹಾಡಿದ ಮೇಲೆ ಸಿಗುವ ಸಿಹಿ ತಿಂಡಿಯಿಂದಾಗಿ ಸ್ವಾತಂತ್ರ್ಯೋತ್ಸವ ಮತ್ತು ಕೊನೆಯಲ್ಲಿ ಸಿಗುತ್ತಿದ್ದ ಅವಲಕ್ಕಿ ಪಂಚಕಜ್ಜಾಯದಿಂದಾಗಿ ಶುಕ್ರವಾರದ ಭಜನೆ ತುಂಬಾ ಇಷ್ಟವಾಗುತ್ತಿತ್ತು.  ಮರು ದಿನ ಅರ್ಧ ರಜೆಯ  ಶನಿವಾರವೆಂಬ ಖುಶಿಯೂ ಅದಕ್ಕೆ ಸೇರ್ಪಡೆಯಾಗುತ್ತಿತ್ತು. ಸಮೀಪದ ಕೊತ್ತಳಿಗೆ ಮನೆಯ ಮಂಜುನಾಥಯ್ಯ  ಪ್ರತಿ ವಾರ ತಪ್ಪದೆ ಭಜನೆಗೆ ಬರುತ್ತಿದ್ದರು. ಒಂದೊಂದು ವಾರ ಒಂದೊಂದು ಮನೆಯವರು ಕಳಿಸುತ್ತಿದ್ದ ಪಂಚಕಜ್ಜಾಯ ಎಂದಾದರೂ ಕಮ್ಮಿ ಬಿದ್ದರೆ ತಕ್ಷಣ ತಮ್ಮ ಮನೆಯಲ್ಲಿ ತಯಾರಿಸಿ ತಂದುಕೊಡುತ್ತಿದ್ದರು. ಕುಂಡೋವು ಮನೆಯ ಗುಂಡ್ರಾಯರೂ ಒಮ್ಮೊಮ್ಮೆ ಬರುತ್ತಿದ್ದರು.  ಅವರು ದೇವ ಬಂದಾ ನಮ್ಮ ಸ್ವಾಮಿ ಬಂದಾ ಎಂಬ ಭಜನೆ ಹಾಡುತ್ತಿದ್ದರು. ಅವರು ನಮ್ಮೂರಿನ ಪೋಸ್ಟ್ ಮಾಸ್ಟರ್ ಆಗಿದ್ದವರು.  

ಶಾಲೆಗೆ ಹೋಗಲು ಗುಡ್ಡದ ಮೂಲಕ ನೇರವಾದ ಹಾದಿ ಇದ್ದರೂ ಬೇಸಗೆಯಲ್ಲಿ ಕಟ್ಟದ ನೀರು ಸಾಗುವ ಕಾಲುವೆಯ ಪಕ್ಕದ ದಾರಿಯಲ್ಲಿ ಹೋಗಿ ಕೆರೆತೋಟ ಮನೆಯ ಓಣಿಯಿಂದಾಗಿ ಹೋಗುತ್ತಿದ್ದೆವು.  ಜೊತೆಗೆ ಬೆಲ್ಲವೂ ಕೊಡುತ್ತಾರೆಂಬ ಆಸೆಗೆ ಬಾಯಾರಿಕೆಗೆ ನೀರು ಬೇಕು ಎಂದು ಅಲ್ಲಿ ಕೇಳುವುದಿತ್ತು.   ಪುನರ್ಪುಳಿ ಹಣ್ಣುಗಳನ್ನು ಕೊಯ್ದ ಸಮಯದಲ್ಲಿ  ಅವುಗಳ  ತಿರುಳನ್ನು ತಿನ್ನಲು ಕೊಡುತ್ತಿದ್ದರು.  ಆ ದಾರಿಯಲ್ಲಿ ಒಂದೆಡೆ ರೆಂಜೆ ಹೂವಿನ ಹಣ್ಣುಗಳು ಹೆಕ್ಕಲು ಸಿಗುತ್ತಿದ್ದವು.

ಆ ವರ್ಷ ನಡೆದ ವಾರ್ಷಿಕೋತ್ಸವ ಹೊಸ ಅನುಭವಗಳನ್ನು ನೀಡಿತ್ತು. ಹಗ್ಗ ಎಳೆದಾಗ ಬುಡಕ್ಕೆ ಕಟ್ಟಿದ ಬಿದಿರಿಗೆ ಸುತ್ತುತ್ತಾ ಮೇಲೇರುವ ಪರದೆಗಳು ಅಚ್ಚರಿ ಮೂಡಿಸುತ್ತಿದ್ದವು. ಆ ಪರಿಸರದಲ್ಲಿ ಆಗ ಶ್ರೀನಿವಾಸ ಅಸ್ರಣ್ಣರ್ರೊಬ್ಬರೇ ಆ ತಾಂತ್ರಿಕತೆಯನ್ನು ಬಲ್ಲವರಾಗಿದ್ದುದು. ನಾಟಕಗಳ ಸೀನ್ ಬದಲಾಗುವಾಗ ಮಾಸ್ಟ್ರು ವಿಶಲ್ ಊದಿದ ಕೂಡಲೇ ಪರದೆ ಎಳೆಯುವ ಕೆಲಸವನ್ನು ಪೋಂಕ್ರ ಎಂಬುವರು ನಿಭಾಯಿಸುತ್ತಿದ್ದರು.    ಆ ಸಂದರ್ಭದಲ್ಲಿ ಅಭಿನಯಿಸಲಾಗಿದ್ದ ಮರ್ಜಿ ಎಂಬ ನಾಟಕದಲ್ಲಿ ನನಗೂ ಒಂದು ಪಾತ್ರವಿತ್ತು.  ಅದಕ್ಕಾಗಿ ಮೊತ್ತ ಮೊದಲ ಬಾರಿ ನನಗೆ ಪ್ಯಾಂಟು ಶರ್ಟು ಹೊಲಿಸಲಾಗಿತ್ತು!  ಶೆಟ್ಟಿ ಮಾಸ್ಟ್ರು ವರ್ಗವಾಗಿ ಹೋದ ಮೇಲೆ ಅಧ್ಯಾಪಕರಾಗಿ ಬಂದಿದ್ದ  ಮಹದೇವ ಚಿಪ್ಲೂಣಕರ್ ಅವರು ‘ಏ ಮೇರೇ ದಿಲ್ ಕಹೀಂ ಔರ್ ಚಲ್’ ಧಾಟಿಯಲ್ಲಿ ‘ಏನಿದು ಎಂತಹ ಸಂತಸ’ ಎಂಬ ಸುಂದರ ಹಾಡೊಂದನ್ನು ಆ ನಾಟಕಕ್ಕಾಗಿ ರಚಿಸಿ ಹಾಡಿದ್ದರು.  ಸಂಭಾಷಣೆಗಳನ್ನು ಬರೆದುಕೊಂಡು ಕಲಿಯುವುದನ್ನು ತಪ್ಪಿಸಲು ಪಾತ್ರ ವಹಿಸಿದವರೆಲ್ಲರಿಗೂ ಆ ನಾಟಕ ಪ್ರಕಟವಾಗಿದ್ದ ಒಂದಾಣೆ ಮಾಲೆ ಪತ್ರಿಕೆಯ ಒಂದೊಂದು ಪ್ರತಿಯನ್ನೇ ತರಿಸಿಕೊಡಲಾಗಿತ್ತು. ಮಹದೇವ ಮಾಸ್ಟ್ರು ಭರತನಾಟ್ಯವನ್ನೂ ಬಲ್ಲವರಾಗಿದ್ದು ಕೆಲವು ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿ ನಮೋ ನಮೋ ನಟರಾಜ, ನಾ ನಿನ್ನ ಧ್ಯಾನದೊಳಿರಲು ಮುಂತಾದ ನೃತ್ಯಗಳನ್ನು ಸ್ಕೂಲ್ ಡೇಯಲ್ಲಿ ಪ್ರಸ್ತುತಪಡಿಸಿ ಹೊಸತನ ತಂದಿದ್ದರು.   ಆ ವರ್ಷ ಆದರ್ಶ ವಿದ್ಯಾರ್ಥಿ ಎಂದು  ವಿಶೇಷ ಬಹುಮಾನವೂ ನನಗೆ ಲಭಿಸಿತ್ತು. 

ಜೈನ್ ಮಾಸ್ಟ್ರು ಅಧ್ಯಾಪಕ ವೃತ್ತಿ ತೊರೆದು ಹೋದ ಮೇಲೆ ನಾರಾಯಣ ಮಯ್ಯರು ಬಂದರು. ಅವರು ಅಚ್ಚುಕಟ್ಟುತನ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡವರಾಗಿದ್ದರು. ಶುಭ್ರವಾದ ಬಟ್ಟೆ ಧರಿಸಿ ಕಾಲರಿಗೆ ಕೊಳೆ ತಾಗಬಾರದು ಎಂದು ಕುತ್ತಿಗೆಯ ಸುತ್ತ  ಕರವಸ್ತ್ರ ಇಟ್ಟುಕೊಳ್ಳುತ್ತಿದ್ದರು. ಊರಿನಲ್ಲಿ ಜರಗುತ್ತಿದ್ದ  ಸಮಾರಂಭ, ಔತಣಗಳಿಗೆ ಬರುತ್ತಿದ್ದರು.  ಚೊಕ್ಕವಾಗಿ ಉಣ್ಣುವುದರಲ್ಲಿ ಎತ್ತಿದ ಕೈ. ಹೋಳಿಗೆ, ಜಿಲೇಬಿಗಳನ್ನು ದಾಕ್ಷಿಣ್ಯ ಪಡದೆ ಕೇಳಿ ಹಾಕಿಸಿಕೊಳ್ಳುತ್ತಿದ್ದರು..ಒಒಮ್ಮೆ ಮಂಗಳೂರಲ್ಲಿಚೊಯಾರದೋ ಮದುವೆಗೆ ಅಂತ ಹೋದವರು ಊಟ ಮುಗಿಸಿ ಬಸ್ಸಿಗೆ ಅಂತ ಹೊರಡುವಾಗ ಹಾದಿಯಲ್ಲಿ ಇನ್ನೊಂದು ಮದುವೆ ಹಾಲಿನ ಹೊರಗೆ ಜಿಲೇಬಿ ತಿನ್ನುವ ಸ್ಪರ್ದೆ ಇದೆ ಅಂತ ಬೋರ್ಡ್ ಹಾಕಿದ್ದರಂತೆ. ಅದನ್ನು ಕಂಡು ಇವರೂ ಹೋದರಂತೆ. 23 ಜಿಲೇಬಿ ತಿಂದು ಎರಡನೆಯ ಬಹುಮಾನ ಪಡೆದ ಮೇಲೆ ‘ಊಟ ಮಾಡಿ ಆಗಿತ್ತು....ಇಲ್ಲವಾದರೆ ಮೊದಲನೇ ಬಹುಮಾನ ತನಗೇ ಸಿಗುತಿತ್ತು’ ಅಂದಿದ್ದರಂತೆ. ಇದನ್ನು ಅವರ ಆಪ್ತರೊಬ್ಬರು ನನಗೆ ಹೇಳಿದ್ದು. ಮಾವಿನ ಹಣ್ಣಿನ ಸೀಸನಿನಲ್ಲಿ ನಮ್ಮ ಮನೆಗೆ ಅವರನ್ನು ನಮ್ಮ ಮನೆಗೆ ಕರೆಯುವುದಿತ್ತು. ಯಥೇಚ್ಛವಾಗಿ ತಿಂದು ಖುಶಿ ಪಡುತ್ತಿದ್ದರು. ಅವರು ಆಗಾಗ ಮಾಡಿ ತೋರಿಸುತ್ತಿದ್ದ ರಾಗಿ ಮುದ್ದೆ ರಾಗಿ ಮುದ್ದೆ ತಿಂದು ತಿಂದು ಕ್ಷೀಣವಾದೆ ...ಕ್ಷೀಣವಾದೆ ... ಕ್ಷೀಣವಾದೆ ... ಕ್ಷೀಣವಾದೆ ...ಆದರೆ ... ಸಿದ್‌ಬೈಲ್ ಪರಾರಿ ಶಾಲೆಗೆ ಹೋಗಿ ಪಾಠ ಓದಿ ಆಟ ಆಡಿ ಈಗ ನಾನೇ ನಾನು ... ನಮಸ್ತೇ ಜೈ ಹಿಂದ್ ಜೈ ಜಗತ್’ ಎಂಬ ಅಭಿನಯ ಪಾಠಗಳ ಏಕತಾನತೆಯನ್ನು ಹೋಗಲಾಡಿಸುತ್ತಿತ್ತು. ಸ್ಕೂಲ್ ಡೇ ನಾಟಕಗಳಲ್ಲಿ ಅಬ್ಬರದ ಜಮೀನುದಾರನ ಪಾತ್ರ ಅವರಿಗೆ ಮೀಸಲಾಗಿರುತ್ತಿತ್ತು. ಅನೇಕ ವರ್ಷಗಳ ನಂತರ ಭೇಟಿಯಾಗಿದ್ದ ಜೈನ್ ಮಾಸ್ಟ್ರು ಮತ್ತು ಮಯ್ಯ ಮಾಸ್ಟ್ರು.
ಅವರ ಕಾಲದಲ್ಲಿ ಸಿದ್ದಬೈಲು ಶಾಲೆಯು ಕಿರಿಯ ಬುನಾದಿ ಶಾಲೆ ಎಂದು ಗುರುತಿಸಲ್ಪಟ್ಟಿದ್ದು ವಿದ್ಯಾರ್ಥಿಗಳಿಗೆ ನೂಲುವಿಕೆ ಕಲಿಸಿಕೊಡಲೆಂದು ತಕಲಿಗಳು, ಚರಕಗಳು, ಒಂದು ಡ್ರಮ್ ತುಂಬಾ ಹತ್ತಿ ಇತ್ಯಾದಿ ಬಂದಿದ್ದವು. ಅವರು ಒಂದೆರಡು ಸಲ ತಕಲಿ ತಿರುಗಿಸುವುದನ್ನು ಕಲಿಸಿಕೊಟ್ಟಿರಬಹುದಷ್ಟೇ. ಆ ಮೇಲೆ ಆ ಸಲಕರಣೆಗಳೆಲ್ಲ ಏನಾದವೋ ಏನೋ. ಒಮ್ಮೆ ಶಾಲೆಗೆ ಇನ್ಸ್ಪೆಕ್ಟರ್ ಒಬ್ಬರು ಬಂದಿದ್ದರು. ಕಚ್ಚೆ ಪಂಚೆ ರುಮಾಲು ಧರಿಸಿದ್ದ ಅವರು ಮಧ್ಯಾಹ್ನ ಊಟಕ್ಕೆ ಯಾರಾದರೂ ಸಂಪ್ರದಾಯಸ್ಥರ ಮನೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದರು. ಮಾಸ್ಟ್ರು ಇದಕ್ಕೆ ನಮ್ಮ ಮನೆಯನ್ನು ಆರಿಸಿದ್ದರಿಂದ ಅವರು ನನ್ನ ಜೊತೆ ಊಟಕ್ಕೆ ಬಂದರು. ಅದು ಮಳೆಗಾಲದ ಜಡಿಮಳೆಯ ದಿನವಾಗಿದ್ದು ಮನೆಯಲ್ಲಿ ಯಾವ ತರಕಾರಿಯೂ ಇಲ್ಲದ್ದರಿಂದ ಅಂದು ಗಂಜಿತಿಳಿಗೆ ಒಗ್ಗರಣೆ ಹಾಕಿದ ಸಾರು ಮಾತ್ರ ಮಾಡಿದ್ದರು. ನಮ್ಮ ತಾಯಿ ಇದನ್ನು ಸಂಕೋಚಪಟ್ಟೇ ಇನ್ಸ್ಪೆಕ್ಟರರಿಗೆ ಬಡಿಸಿದಾಗ ಅವರು 'ಆಹಾ, ಏನು ರುಚಿ' ಎನ್ನುತ್ತಾ ಎರಡೆರಡು ಸಲ ಹಾಕಿಸಿಕೊಂಡು ಹೊಟ್ಟೆ ತುಂಬಾ ಉಂಡರು.
4ನೇ ಕ್ಲಾಸಿನಲ್ಲಿ  ನನ್ನನ್ನು ಮತ್ತು ಇನ್ನೊಬ್ಬ ಸಹಪಾಠಿಯನ್ನು ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ಅಭ್ಯರ್ಥಿಗಳನ್ನಾಗಿ ಘೋಷಿಸಿ ಬಹಿರಂಗ ಮತದಾನ ಏರ್ಪಡಿಸಿದಾಗ ಹಾಗೆಂದರೇನೆಂದು ಗೊತ್ತಿಲ್ಲದ ನಾನು ಸಹಪಾಠಿಯ ಪರವಾಗಿ ಕೈ ಎತ್ತಿದ್ದೆ!  ಆದರೂ ಬಹುಮತ ನನಗೇ ಬಂದು ಆಗಸ್ಟ್ 15ರಂದು ಚೌಕಾಕಾರವಾಗಿ ನಡೆದು ಧ್ವಜವಂದನೆ ಸಲ್ಲಿಸುವ ಗೌರವ ನನಗೆ ಪ್ರಾಪ್ತವಾಗಿತ್ತು. ಅದು 1961ನೇ ಇಸವಿ ಆಗಿದ್ದು ಆ ವರ್ಷ ಮಹಾ ಜನಗಣತಿ ಇದ್ದು ಅಧ್ಯಾಪಕರು ಆ ಕಾರ್ಯವನ್ನೂ ನಿಭಾಯಿಸಬೇಕಾಗಿದ್ದುದರಿಂದ ನಮಗೆಲ್ಲ ಸುಮಾರು ಒಂದು ತಿಂಗಳು ಅರ್ಧ ದಿನ ರಜೆಯ ಬೋನಸ್ ದೊರಕಿತ್ತು! ಈ ಹೊತ್ತಿಗೆ ಓದಿನ ರುಚಿ ಹತ್ತಿದ್ದು ಮನೆಯಲ್ಲಿದ್ದ ಹಳೆ ಚಂದಮಾಮಗಳನ್ನು ಹುಡುಕಿ ಹುಡುಕಿ ಓದತೊಡಗಿದ್ದೆ. ಶಾಲೆಯಲ್ಲೂ ಚಿಕ್ಕ ಲೈಬ್ರರಿಯೊಂದು ಇದ್ದು ಅದ್ಭುತ ಲೋಕದಲ್ಲಿ ಆಲಿಸ್, ಶೀನಿನ ಶೀನ, ಮೂರು ಕರಡಿಗಳು, ಅರ್ಗಣೆ ಮುದ್ದೆ ಮುಂತಾದ ಪುಸ್ತಕಗಳನ್ನು ಮನೆಗೊಯ್ದು ಓದಿದ್ದೆ.   

ಮುಂಡಾಜೆ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಉತ್ಸವಕ್ಕೆ ನಮ್ಮನ್ನೆಲ್ಲರನ್ನೂ ಕರೆದುಕೊಂಡು ಹೋಗಿದ್ದರು. ‘ಹಾವಿನ ಪೊರೆ ಕಳಚುವುದು’ ಎಂಬ ಆಟವೊಂದನ್ನು ಅಲ್ಲಿ ಆಡಿದ್ದು ಚೆನ್ನಾಗಿ ನೆನಪಿದೆ. ಆ ಮೇಲೆ ಕಾಗದದ ತುಂಡಿನಲ್ಲಿ ಅವಲಕ್ಕಿ ಉಪ್ಕರಿ ಕೊಟ್ಟಿದ್ದರು.   ಅಂದು ಆ ಶಾಲೆಯಲ್ಲೇ ಹಾಲ್ಟ್ ಮಾಡಬೇಕಿದ್ದರೂ ನಾನು ಸಮೀಪದಲ್ಲೇ ಇದ್ದ  ನಮ್ಮ ಅಣ್ಣನ ಮನೆಗೆ ಹೋಗಿದ್ದೆ.   

5ನೇ ಕ್ಲಾಸಲ್ಲಿ ಇಂಗ್ಲಿಷ್ ಕಲಿಕೆ ಆರಂಭವಾಗಿತ್ತು. ಕೆಲವೇ ದಿನಗಳಲ್ಲಿ ಎಲ್ಲ ಅಕ್ಷರಗಳನ್ನು ಓದಲು ಬರೆಯಲು ಕಲಿತಿದ್ದೆ ಎಂದು ನೆನಪು.  4 ಮತ್ತು 5ರಲ್ಲಿ ನಮಗೆ ಅಧ್ಯಾಪಕರಾಗಿದ್ದ ಮಯ್ಯ ಮಾಸ್ಟ್ರು ಒಬ್ಬರೇ 3 ಕ್ಲಾಸುಗಳನ್ನು ನೋಡಿಕೊಳ್ಳಬೇಕಾಗಿದ್ದುದರಿಂದ ಪಠ್ಯ ಪುಸ್ತಕದ  ಎಲ್ಲ ಪಾಠಗಳನ್ನು ಮುಗಿಸಲಾಗುತ್ತಿರಲಿಲ್ಲ. ಹೀಗಾಗಿ ಇಂಗ್ಲಿಷ್ ಪಠ್ಯದ ಕೆಲ ಪಾಠಗಳನ್ನು ನಾನೇ ಓದಲು ಪ್ರಯತ್ನಿಸುವುದಿತ್ತು. ಅದರಲ್ಲಿ ಒಂದೆಡೆ I shall go to school ಎಂದಿದ್ದುದನ್ನು ‘ನಾನು ಶಾಲು ಧರಿಸಿ ಶಾಲೆಗೆ ಹೋಗುತ್ತೇನೆ’ ಎಂದು ಅರ್ಥೈಸಿಕೊಂಡಿದ್ದೆ! ಇಂಗ್ಲಿಷ್, ಕನ್ನಡ ಕಾಪಿಗಳಲ್ಲಿ ಯಾವಾಗಲೂ ಒಂಬತ್ತಕಿಂತ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸುತ್ತಿದ್ದೆ. ಆ ಕಾಲದಲ್ಲಿ ಸಾಮಾನ್ಯವಾಗಿ ಪಂಚಾಂಗದಂತೆ ಉದ್ದವಾದ landscape ಶೈಲಿಯ ಕಾಪಿ ಪುಸ್ತಕಗಳಿರುತ್ತಿದ್ದವು.  ಕೆಲವೊಮ್ಮೆ  ಸಾಮಾನ್ಯ exercise ಪುಸ್ತಕಗಳಂತೆ portrait ಶೈಲಿಯವೂ ದೊರಕುತ್ತಿದ್ದವು.  ಈ portrait ಶೈಲಿಯ  ಎರಡು ಗೆರೆ ಪುಸ್ತಕದಲ್ಲಿ ಕಾಪಿ ಬರೆದಾಗ ಯಾವಾಗಲೂ ಹೆಚ್ಚು ಅಂಕ ಸಿಗುತ್ತಿದ್ದುದನ್ನು ಗಮನಿಸಿದ್ದೆ. ಈ layout ಹೆಚ್ಚು appealing ಆಗಿರುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು.  ಇದು ತಿಳಿದ ಮೇಲೆ ಇಂತಹುದೇ ಪುಸ್ತಕ ತಂದುಕೊಡುವಂತೆ ಮನೆಯವರಿಗೆ ಹೇಳುತ್ತಿದ್ದೆ. ಕಾಪಿ, ಮನೆ ಲೆಕ್ಕ ಇತ್ಯಾದಿಗಳಿಗೆ ಹೊರತಾಗಿ ನಾನು ಮನೆಯಲ್ಲಿ ಪುಸ್ತಕಗಳನ್ನು  ತೆರೆಯತ್ತಲೇ ಇರಲಿಲ್ಲ. ಆದರೂ ಕ್ಲಾಸಿಗೆ ನಾನೇ ಮೊದಲಿಗನಾಗಿರುತ್ತಿದ್ದೆ. 

1961-62   ಸಿದ್ದಬೈಲು ಶಾಲೆಯ ಕೊನೆಯ ಶೈಕ್ಷಣಿಕ ವರ್ಷವಾಯಿತು.  ಮುಂದಿನ ವರ್ಷ ದೂರದ ಶಾಲೆಗೆ ಹೋಗಬೇಕಲ್ಲ ಎಂಬ ಚಿಂತೆಯಲ್ಲಿ ಆ ಸಲದ ಬೇಸಗೆ ರಜೆ ಕಳೆದೆ.  

ಹೈಯರ್ ಎಲಿಮೆಂಟರಿ

ಒಂದರಿಂದ ಐದರವರೆಗೆ ತರಗತಿಗಳಿದ್ದ ಸಿದ್ಧಬೈಲು ಪರಾರಿ ಎಲಿಮೆಂಟರಿ ಶಾಲೆ ಮನೆಗೆ ಸಮೀಪವೇ ಇದ್ದು ಮಧ್ಯಾಹ್ನ ಊಟಕ್ಕೂ ಹೋಗಿ ಬರಬಹುದಾಗಿದ್ದರಿಂದ  ಆ ಐದು ವರ್ಷಗಳು ಸಂತಸಮಯವಾಗಿಯೇ ಕಳೆದವು.  6, 7 ನೇ ತರಗತಿಗಳಿದ್ದ ಹೈಯರ್ ಎಲಿಮೆಂಟರಿ ಶಾಲೆ ದೂರದ ಮುಂಡಾಜೆಯ ಸೋಮಂತಡ್ಕದಲ್ಲಿದ್ದುದರಿಂದ ಅಲ್ಲಿಗೆ ಸಮೀಪದ  ಗುಂಡಿ ಲಕ್ಷ್ಮೀನಾರಾಯಣ ದೇವಳದ ಪೂಜಾ ಕೈಂಕರ್ಯ ಕೈಗೊಂಡಿದ್ದ  ಹಿರಿಯಣ್ಣನ ಜೊತೆ ಇರಬೇಕಾಗಿ ಬಂದು ವಾರಕ್ಕೊಮ್ಮೆ ಮಾತ್ರ  ಮನೆಗೆ ಬರಲು ಸಾಧ್ಯವಾಗುತ್ತಿತ್ತು. ಹೀಗಾಗಿ ವಾರಾಂತ್ಯ ಮತ್ತು ರಜಾದಿನಗಳ ಮೌಲ್ಯ ವರ್ಧನೆಯಾಯಿತು.  ಆ ಹೊತ್ತಿಗೆ ನಮ್ಮ ಮನೆಗೆ ರೇಡಿಯೋವೂ ಬಂದಿದ್ದರಿಂದ ವಾರಾಂತ್ಯದ ಸೆಳೆತ ಸ್ವಲ್ಪ ಜಾಸ್ತಿಯೇ ಆಗತೊಡಗಿತ್ತು. ಪೆನ್ಸಿಲಿನಿಂದ ಪೆನ್ನಿಗೆ ಪ್ರೊಮೋಷನ್, ಹಿಂದಿ ಕಲಿಕೆ ಆರನೇ ಕ್ಲಾಸಿನ ಉಪಲಬ್ಧಿಗಳಾದವು. ಹೊಸ ಪರಿಸರವಾದ್ದರಿಂದ ಆ ವರ್ಷ ನಾನು ಕೊನೆಬೆಂಚಿಗನಾಗಿಯೇ ಉಳಿದಿದ್ದೆ.   ಸ್ವಲ್ಪವೂ ಇಷ್ಟವಿಲ್ಲದ social studies ತಲೆ ತಿನ್ನತೊಡಗಿತ್ತು.




ಮೇಲಿನ ಸ್ಕೆಚ್ಚಿನಲ್ಲಿ ತೋರಿಸಿದಂತೆ ಆಗ ಮುಂಡಾಜೆ ಶಾಲಾ ಸಂಕೀರ್ಣದಲ್ಲಿ ಮೂರು ಕಟ್ಟಡಗಳಿದ್ದವು.  A ಅತ್ಯಂತ ಹಳೆಯದಾಗಿದ್ದು ಮರದ ದಳಿ ಹೊಂದಿತ್ತು.  ಒಂದರಿಂದ ಐದರ ವರೆಗಿನ ಕ್ಲಾಸುಗಳು ಅದರಲ್ಲಿ ನಡೆಯುತ್ತಿದ್ದವು. ಶುಕ್ರವಾರದ ಭಜನೆ ಮತ್ತು  ಅರ್ಧವಾರ್ಷಿಕ, ವಾರ್ಷಿಕ ಪರೀಕ್ಷೆಗಳೂ ಅಲ್ಲಿಯೇ ನದೆಯುತ್ತಿದ್ದುದು. B ಯಲ್ಲಿ ಆಫೀಸು, ಸ್ಟೇಷನರಿ ಮತ್ತು ಎಂಟನೇ ಕ್ಲಾಸು ಇತ್ತು.  ನಮ್ಮ ಏಳನೇ ಕ್ಲಾಸೂ ಅಲ್ಲೇ ಇದ್ದುದು. ಯಾವುದೋ ಲಾರಿಯದ್ದೋ ಬಸ್ಸಿನದ್ದೋ ಆಗಿರಬಹುದಾದ  ಡಿಸ್ಕನ್ನು ಬೆಲ್ ಆಗಿ ಬಳಸಲಾಗುತ್ತಿತ್ತು. C ಹೊಸದಾಗಿ ಕಟ್ಟಲ್ಪಟ್ಟಿದ್ದು ಪ್ಲಾಸ್ಟರಿಂಗ್ ಇನ್ನೂ ಆಗಿರಲಿಲ್ಲ.  ನಮ್ಮ ಆರನೇ ಕ್ಲಾಸು, ಆಗಿನ ಏಳನೇ ಕ್ಲಾಸು ಅದರಲ್ಲಿ ಇದ್ದವು. B ಯ ಎದುರಿನಲ್ಲಿ ಹೂಗಿಡಗಳಿದ್ದ   ವೃತ್ತಾಕಾರದೊಳಗೆ ಧ್ವಜಸ್ತಂಭ ಇತ್ತು. ಮೂರು ಕಟ್ಟಡಗಳ ಜಗಲಿ ಬದಿಯಲ್ಲಿ ಕಿರಾತಕಡ್ಡಿ ಗಿಡಗಳ ಸಾಲು ಇತ್ತು. ಆ ಕಟ್ಟಡಗಳಾಗಲಿ ಅವುಗಳ ಫೋಟೊ ಆಗಲಿ ಈಗಿಲ್ಲ.

ನಾನು 6ನೇ ಕ್ಲಾಸಲ್ಲಿರುವಾಗ  8ನೇ ತರಗತಿಯೂ ಇತ್ತು. ಆ ತರಗತಿಯವರು ಬೇರೆ ಕಡೆ ಹೋಗಿ ಬರೆಯಬೇಕಾದ ಪಬ್ಲಿಕ್ ಪರೀಕ್ಷೆ ಇರುತ್ತಿತ್ತು. 8ನೇ ತರಗತಿ ಪಾಸಾದವರು ಹೈಸ್ಕೂಲಲ್ಲಿ ಫರ್ಸ್ಟ್ ಫಾರ್ಮ್, ಸೆಕೆಂಡ್ ಫಾರ್ಮ್ ಮತ್ತು SSLC ಓದಬೇಕಿತ್ತು. ನಾನು ಏಳನೇ ತರಗತಿಗೆ ಹೋದ ವರ್ಷದಿಂದ ನಮ್ಮ ಶಾಲೆಯಲ್ಲೇ ಪಬ್ಲಿಕ್ ಪರೀಕ್ಷೆ ಮುಗಿಸಿ ಹೈಸ್ಕೂಲಿಗೆ ಸೇರುವ ಪದ್ಧತಿ ಆರಂಭವಾಯಿತು. ಹೀಗಾಗಿ ನಮಗೆ ಒಂದು ಶಾಲಾ ವರ್ಷದ ಉಳಿತಾಯವಾಗಿತ್ತು.  ಕೆಲವು ವರ್ಷಗಳ ನಂತರ PUC ಎರಡು ವರ್ಷಗಳಾಗಿ ಮತ್ತೆ ಮೊದಲಿನಂತಾಯಿತು

ಕಾರಂತ ಮಾಸ್ಟ್ರು ನಮಗೆ ಕನ್ನಡ ಮತ್ತು ಸಮಾಜ, ವೈಕುಂಠ ಹೆಬ್ಬಾರರು ವಿಜ್ಞಾನ ಮತ್ತು ಗಣಿತ, ಕೇಶವ ಹೊಳ್ಳರು ಹಿಂದಿ ಮತ್ತು ಇಂಗ್ಲೀಷ್  ಕಲಿಸುತ್ತಿದ್ದರು. ಅಣ್ಣಿ ಪೂಜಾರಿ, ಸಂಜೀವ ಪೂಜಾರಿ, ಬಾಬು ಮಾಸ್ಟ್ರು ಮತ್ತು ರಾಮಚಂದ್ರ ಮಾಸ್ಟ್ರು ಪ್ರೈಮರಿ ತರಗತಿಗಳಿಗೆ ಕಲಿಸುತ್ತಿದ್ದರು. ರಾಮಚಂದ್ರ ಮಾಸ್ಟ್ರ ನೇತೃತ್ವದಲ್ಲಿ ಶುಕ್ರವಾರ ಭರ್ಜರಿ ಭಜನೆ ಇರುತ್ತಿತ್ತು.


ಅಣ್ಣನ ಮನೆ ಮತ್ತು ಶಾಲೆಯ ನಡುವೆ ಮೃತ್ಯುಂಜಯಾ ನದಿ ಇದ್ದುದರಿಂದ ಮಳೆಗಾಲದ ಮೂರು ತಿಂಗಳು ಒಂದೂವರೆ ಕಿಲೊಮೀಟರ್ ಸುತ್ತುಬಳಸಿ ಸೇತುವೆಯ ಮೇಲಿಂದ ಶಾಲೆಗೆ ಹೋಗಿಬರಬೇಕಾಗುತ್ತಿತ್ತು.  ಆ ದಾರಿಯಲ್ಲಿ ದಿನಾ ಬಸ್ಸು ಲಾರಿಗಳು ನೋಡಸಿಗುವುದು ಹೊಸ ಅನುಭವವಾಗಿತ್ತು.  ಬ್ರಿಟಿಷರ ಕಾಲದ ಆ ಸೇತುವೆ ಭಾರವಾದ ಲಾರಿಗಳು ಸಾಗುವಾಗ  ಕಂಪಿಸುತ್ತಿತ್ತು.  ಆ ಕಂಪನವನ್ನು ಅನುಭವಿಸಲು ಯಾವುದಾದರೂ ಲಾರಿ ಬರುವ ವರೆಗೆ ನಾವು ಸೇತುವೆಯ ಮೇಲೆ ಕಾದು ನಿಲ್ಲುವುದಿತ್ತು.  ಮಳೆಗಾಲ ಆರಂಭವಾಗುವ ಮತ್ತು ಮುಗಿಯುವ ಹೊತ್ತಿನಲ್ಲಿ  ನದಿಯಲ್ಲಿ ಅಗಾಧ ಪ್ರಮಾಣದ ನೀರಿಲ್ಲದಿದ್ದರೆ ಅಂಗಿ ಚಡ್ಡಿ ಕಳಚಿ ಚೀಲದೊಳಗಿಟ್ಟು ಬರಿ  ಲಂಗೋಟಿ ಧರಿಸಿ ಸೊಂಟಮಟ್ಟದ ನೀರಲ್ಲಿ ನದಿ ದಾಟುವ ಥ್ರಿಲ್ ಕೂಡ ಸಿಗುತ್ತಿತ್ತು .  ಅಂಥ ಸಂದರ್ಭಗಳಲ್ಲಿ ನಮ್ಮಣ್ಣ ಪರಿಸರದ ಮಕ್ಕಳನ್ನೆಲ್ಲ ಕೈ ಹಿಡಿದು ನದಿ ದಾಟಿಸುತ್ತಿದ್ದರು. ಸಾಯಂಕಾಲ ಮರಳುವಾಗಲೂ ಆಚೆ ಬದಿಯಿಂದ ಕೂ ಎಂದು ಕೂಗಿದರೆ ಮನೆಯಿಂದ ಬಂದು ನದಿ ದಾಟಲು ಸಹಾಯ ಮಾಡುತ್ತಿದ್ದರು.  ಮಳೆಗಾಲದ ಈ ಮೂರು ತಿಂಗಳು ಮಧ್ಯಾಹ್ನ ಊಟಕ್ಕೆ ಶಾಲೆಯ ಸಮೀಪದ ಮನೆಯೊಂದರಲ್ಲಿ ಬೋರ್ಡಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ನಮಗೆ ಒಂದು ವರ್ಷ ಸಹಪಾಠಿಯೊಬ್ಬನ ಮನೆಯಲ್ಲಿ ಮತ್ತು ಇನ್ನೊಂದು ವರ್ಷ ಕಾರಂತ ಮಾಸ್ಟ್ರ ಮನೆಯಲ್ಲಿ ಈ ವ್ಯವಸ್ಥೆ ಆಗಿತ್ತು.

ಈ ಅವಧಿಯಲ್ಲಿ ಒಂದೆರಡು ಪೇಚಿನ ಪ್ರಸಂಗಗಳೂ ನಡೆದವು. ಹಿರಿಯಣ್ಣ ಪೂಜೆ ಮಾಡಿಕೊಂಡಿದ್ದ ಗುಂಡಿ ದೇವಳದಲ್ಲಿ ಇಬ್ಬರು ಅರ್ಚಕರಿದ್ದು ಪೂಜಾಕಾರ್ಯ ಮತ್ತು ಪರಿಚಾರಕ ಕಾರ್ಯಗಳು ಪ್ರತೀ ತಿಂಗಳು ಅದಲು ಬದಲಾಗುತ್ತಿದ್ದವು. ಪರಿಚಾರಕದವರು ದೇವಸ್ಥಾನದೊಳಗಿನ ಪುಟ್ಟ ಪಾಕಶಾಲೆಯಲ್ಲಿ ನೈವೇದ್ಯಕ್ಕೆ ಅನ್ನ ಮಾಡಬೇಕಾಗಿತ್ತು. ಆ ನೈವೇದ್ಯ ಇಬ್ಬರೂ ಅರ್ಚಕರ ಮನೆಗಳಿಗೇ ಸೇರುವುದಾದ್ದರಿಂದ ನಮ್ಮ ಅತ್ತಿಗೆಗೆ ಮನೆಯಲ್ಲಿ ಅನ್ನ ಮಾಡುವ ಕೆಲಸ ಇರುತ್ತಿರಲಿಲ್ಲ.  ನೈವೇದ್ಯ ಬೇಯಿಸುವ ಪಾಳಿಯ ಅರ್ಚಕರಿಗೆ ಇತರ ಕೆಲಸಗಳೂ ಇರುತ್ತಿದ್ದುದರಿಂದ ಅತ್ತ ಹೆಚ್ಚು ಗಮನವೀಯಲು ಸಾಧ್ಯವಾಗದೆ ಅನ್ನ ಮುದ್ದೆ ಆಗುವುದು ಸಾಮಾನ್ಯವಾಗಿತ್ತು.  ಇನ್ನೋರ್ವ ಅರ್ಚಕರ ಪಾಳಿಯಲ್ಲಿ ಹಾಗಾದಾಗ ನಮ್ಮಣ್ಣ ಸೇರಿದಂತೆ ಮನೆಯಲ್ಲಿ ಎಲ್ಲರೂ ಆ ಬಗ್ಗೆ ಆಡಿಕೊಳ್ಳುವುದು ಸಾಮಾನ್ಯವಾಗಿತ್ತು.  ಒಮ್ಮೆ ನಮ್ಮಣ್ಣನ ಪರಿಚಾರಕದ ಪಾಳಿಯಿದ್ದಾಗ ಅವರು ಮಾಡಿದ ಅನ್ನವೇಕೋ ತುಂಬಾನೇ ಮುದ್ದೆ ಆಗಿತ್ತು.  ಶಾಲೆಯಿಂದ ಬಂದು ಊಟಕ್ಕೆ ಕುಳಿತ ನಾನು ಪೂರ್ವಾಪರ ಯೋಚಿಸದೆ ‘ಇವತ್ಯಾಕೋ ಅನ್ನ ಎದುರು ಮನೆಯವರು ಮಾಡಿದ್ದಕಿಂತಲೂ ಮುದ್ದೆಯಾಗಿ ಬಿಟ್ಟಿದೆಯಲ್ಲ’ ಅಂದು ಬಿಟ್ಟೆ.  ಅದನ್ನು ಕೇಳಿ ಕೆಂಡಾಮಂಡಲವಾದ ನಮ್ಮಣ್ಣ ‘ತಟ್ಟೆಯ ಎದುರು ಕುಳಿತು ಅನ್ನವನ್ನು ಹಳಿದರೆ ಹುಷಾರ್’ಎಂದು ಚೆನ್ನಾಗಿ ಝಾಡಿಸಿದರು! ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ’ ಎಂದು ಆಗ ನನಗೆ ಗೊತ್ತಿರಲಿಲ್ಲ!

ನಮಗೆ ಬಳಪ ಪೆನ್ಸಿಲುಗಳಿಂದ ಪೆನ್ನಿಗೆ ಪ್ರೋಮೋಷನ್ ಸಿಗುತ್ತಿದ್ದುದು ಆರನೇ ತರಗತಿ ಸೇರಿದಾಗ. ಅಧ್ಯಾಪಕರು ಬಳಸುತ್ತಿದ್ದಂಥ ಕೆಂಪು ಶಾಯಿಯ ಪೆನ್ನೊಂದು ನನಗೂ ಬೇಕು ಎಂದು ನನಗೆ ಬಲು ಆಸೆ.  ಆ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಆರುವರೆ ಆಣೆ ಮಹಲ್‌ನಿಂದ ಒಂದು ಪೆನ್ ಖರೀದಿಸಿ ಆ ಆಸೆ ಪೂರೈಸಿಕೊಂಡೆ.  ಆದರೆ ಕೆಂಪು ಶಾಯಿ ಬಳಸಲು ನಮಗೆಲ್ಲಿ ಅವಕಾಶವಿರುತ್ತದೆ.  ಒಂದು ಸಲ ಕನ್ನಡ ಪ್ರಬಂಧವೊಂದನ್ನು ಬರೆಯಲು ತಡವಾಗಿ ಅದನ್ನು ಕಾರಂತ ಮಾಸ್ಟ್ರಿಗೆ ತೋರಿಸಲಾಗಿರಲಿಲ್ಲ. ಅದು  ಗೊತ್ತಾದರೆ ಅಪಾಯ ತಪ್ಪಿದ್ದಲ್ಲ ಎನಿಸಿ  ನನ್ನ ಕೆಂಪು ಶಾಯಿಯ ಪೆನ್ನು ಬಳಸಿ ಪ್ರಬಂಧದ ಕೆಳಗೆ ಅವರದೇ ಶೈಲಿಯಲ್ಲಿ ‘Seen' ಎಂದು ಬರೆದು ಬಿಟ್ಟೆ.  ಮುಂದಿನ  ಪ್ರಬಂಧಗಳನ್ನು ಸಕಾಲದಲ್ಲೇ ಬರೆದು ಒಪ್ಪಿಸುತ್ತಿದ್ದೆ.  ಒಂದು ದಿನ ಕ್ಲಾಸಲ್ಲಿ ಏಕೋ ನನ್ನ ಪ್ರಬಂಧ ಪುಸ್ತಕದ ಪುಟಗಳನ್ನು  ತಿರುವಿ ಹಾಕಿದ ಕಾರಂತ ಮಾಸ್ಟ್ರಿಗೆ ಈ ‘Seen' ಕಾಣಿಸಿತು!  ‘ನಾನು ಪ್ರಬಂಧಗಳಿಗೆ ಯಾವತ್ತೂ Seen ಎಂದು ಬರೆಯುವುದಿಲ್ಲ. ಕಾಪಿ ಪುಸ್ತಕದಲ್ಲಿ ಮಾತ್ರ  ಬರೆಯುವುದು.  ಇದು ಯಾರ ಕೆಲಸ?’ ಎಂದು ವಿಚಾರಣೆ ಆರಂಭಿಸಿದರು. Red Penned ಆಗಿ ಸಿಕ್ಕಿ ಬಿದ್ದಿದ್ದ ನಾನು ಅದೇನೋ ಮೊಂಡು ಧೈರ್ಯ ತಾಳಿ  ‘ನನಗೇನೂ ಗೊತ್ತಿಲ್ಲ’  ಎಂದು ವಾದಿಸಿ ಅದೇ ನಿಲುವಿಗೆ ಅಂಟಿಕೊಂಡೆ.  ಪ್ರಕರಣವನ್ನು ಅವರು ಅಷ್ಟಕ್ಕೇ ಬಿಟ್ಟು ಬಿಟ್ಟದ್ದರಿಂದ ಬದುಕಿದೆ!  ಮುಂದೊಮ್ಮೆ ‘ಮಾದಕ ವಸ್ತುಗಳ ಕೆಟ್ಟ ಪರಿಣಾಮ’ ಎಂಬ ವಿಷಯದ ಬಗ್ಗೆ ನಾನು ಬರೆದ ಪ್ರಬಂಧವನ್ನು ಅವರು ಮೆಚ್ಚಿ ನನ್ನ ಹೆಸರು ಹೇಳದೆ ಕ್ಲಾಸಿಗೆ ಓದಿ ಹೇಳಿದ್ದೂ ಉಂಟು.


7ನೇ ತರಗತಿಯಲ್ಲಿ ಮತ್ತೆ ಮುಂಚೂಣಿಗೆ ಬಂದಿದ್ದೆ. ಮೊದಲ ಬೆಂಚಿಗನಾಗಿ ಪರೀಕ್ಷೆಗಳಲ್ಲೂ ಉತ್ತಮ ಅಂಕ ಗಳಿಸುತ್ತಿದ್ದೆ. ವಿದ್ಯಾರ್ಥಿಗಳಿಗೆ  ಶಾಲಾ ದಿನಬಳಕೆಯ ವಸ್ತುಗಳನ್ನು no loss no profit ನೆಲೆಯಲ್ಲಿ ವಿಕ್ರಯಿಸುವ stationaryಯ ಸಕ್ರಿಯ ಸದಸ್ಯನಾಗಿದ್ದೆ. ಸಹಪಾಠಿಗಳಿಗೆ ಲೇಖನ ಸಾಮಗ್ರಿಗಳನ್ನು ವಿಕ್ರಯಿಸಿ ಲೆಕ್ಕ ಬರೆದಿಟ್ಟು ಸಂಜೆಗೆ ತಾಳೆ ಮಾಡುವ ಕೆಲಸ ಖುಶಿ ನೀಡುತ್ತಿತ್ತು.  ಹಾಜರಿ ಪುಸ್ತಕದಲ್ಲಿ ಪ್ರತಿ ತಿಂಗಳೂ ವಿದ್ಯಾರ್ಥಿಗಳ ಹೆಸರುಗಳನ್ನು ಬರೆಯುವ ಕೆಲಸವನ್ನೂ ಮುಖ್ಯೋಪಾಧ್ಯಾಯರು  ನನಗೆ ವಹಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಶಿವರಾಯರ ಹೋಟಲಿನಿಂದ ಅವರು ತರಿಸುತ್ತಿದ್ದ ಗೋಳಿಬಜೆಗಳಲ್ಲಿ ಒಂದೆರಡು ನನಗೂ ಸಿಗುತ್ತಿದ್ದವು.   ಅಲ್ಲದೆ ತಿಂಗಳಿಗೊಂದು ಶನಿವಾರದಂದು ಇರುವ teacher's meetingನ ಸುಳಿವು  ನನಗೆ ಮೊದಲೇ ದೊರೆತು ಸಾಕಷ್ಟು ಮುಂಚಿತವಾಗಿ ಆ  long week endನ ಕನಸು ಕಾಣಲು ಸಾಧ್ಯವಾಗುತ್ತಿತ್ತು. ಅಂತಹ ಶನಿವಾರಗಳ ಮುಂಚಿನ ಶುಕ್ರವಾರವೂ ಯಾವುದಾದರೂ ರಜೆಯಿದ್ದರೆ ಗುರುವಾರದಂದು ಸಂಜೆಯೇ ಮನೆಗೆ ಹೋಗಿ  ರಾತ್ರೆ ಮಲಗುವಾಗ ಮುಂದಿನ ಮೂರುದಿನಗಳನ್ನು ಕಲ್ಪಿಸಿ ಸುಖದಲ್ಲಿ ತೇಲಾಡುತ್ತಿದ್ದೆ.


ಹೀಗೆ ವಾರಾಂತ್ಯದಲ್ಲಿ ಮನೆಗೆ ಬಂದಾಗ ಸೋಮವಾರದಂದು ಬೆಳಗ್ಗೆ 5:30ರಿಂದ 6ರ ಒಳಗೆ ಎದ್ದು ಸ್ನಾನ ಇತ್ಯಾದಿ ಮುಗಿಸಿ ಹೊರಡಲು ತಯಾರಾಗಬೇಕಾಗುತ್ತಿತ್ತು. ತಾಯಿಯವರು ಅಥವಾ ಅತ್ತಿಗೆ ಅದಕ್ಕೂ ಮುಂಚಿತವಾಗಿ ಎದ್ದು ಬಚ್ಚಲೊಲೆಗೆ ಬೆಂಕಿ ಹಾಕಿ ಕಾಪಿ ತಿಂಡಿ ತಯಾರಿಯಲ್ಲಿ ತೊಡಗಿರುತ್ತಿದ್ದರು. ಹೀಗೆ ಒಂದು ಸೋಮವಾರ ಕಣ್ಣು ತೆರೆದಾಗ ಬೆಳ್ಳಂಬೆಳಗಾಗಿದೆ. ಗಡಿಯಾರ ನೋಡಿದರೆ ಗಂಟೆ ಆರು ಕಳೆದಿದೆ.  ಆದರೆ ಒಬ್ಬರೂ ಇನ್ನೂ ಎದ್ದಿಲ್ಲ.  ಇಂದು ಶಾಲೆಗೆ ತಡವಾಗುವುದು ಖಂಡಿತ ಎಂದೆನಿಸಿ ತಾಯಿ, ಅತ್ತಿಗೆ ಎಲ್ಲರನ್ನು ಎಬ್ಬಿಸಿದೆ.  ಈ ಗಲಾಟೆಯಿಂದ ತಂದೆಯವರೂ ಎದ್ದು ಬಂದು ಟಾರ್ಚು ಹಾಕಿ   ನೋಡಿದರೆ ಇನ್ನೂ ಮಧ್ಯ ರಾತ್ರಿ ಹನ್ನೆರಡುವರೆ ಅಷ್ಟೇ!  ಮಬ್ಬು ಬೆಳಕಿನಲ್ಲಿ ನನಗದು ಆರು ಗಂಟೆಯಂತೆ ಗೋಚರಿಸಿತ್ತು! ಹೊರಗೆ ಕಾಣಿಸುತ್ತಿದ್ದ ಬೆಳಕು ಹುಣ್ಣಿಮೆಯ ಬೆಳದಿಂಗಳಿನದ್ದು! ತಂದೆಯವರಿಂದ ಚೆನ್ನಾಗಿ ಬೈಸಿಕೊಂಡು ಮತ್ತೆ ಮಲಗಿದ್ದೆ.

ಏಳನೇ ತರಗತಿಯಲ್ಲಿರುವಾಗ ನಮ್ಮನ್ನು ಮಂಗಳೂರು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.  ಬಾಬು ಶೆಟ್ರ ಶಂಕರ ವಿಠಲಿನಲ್ಲಿ ಹೋದದ್ದು.  ಅಲ್ಲಿ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ್ದಲ್ಲದೆ ಮಂಗಳೂರಿನಿಂದ ಉಳ್ಳಾಲಕ್ಕೆ  ಟ್ರೈನಿನಲ್ಲಿ ಮತ್ತು ಅಲ್ಲಿಂದ ವಾಪಸ್ ಮಂಗಳೂರಿಗೆ ಲಾಂಚಿನಲ್ಲಿ  ಬರುವ ಹೊಸ ಅನುಭವ ದೊರೆತಿತ್ತು. ವಿಮಾನ ನೋಡಲೆಂದು  ಬಜ್ಪೆ ಎರೋಡ್ರೋಮೊಗೆ ಹೋಗುವಾಗ ಮೂತಿ ಇದ್ದ ಮಿಸ್ಕಿತ್ ಬಸ್ಸು ನಡು ದಾರಿಯಲ್ಲಿ ಕೆಟ್ಟು ಹೋದದ್ದರಿಂದ ನಾವು ತಲುಪುವಷ್ಟರಲ್ಲಿ ವಿಮಾನ ಹಾರಿ ಹೋಗಿತ್ತು.

ಆಗ ಅಮೇರಿಕ Care ಸಂಸ್ಥೆ ಶಾಲೆಗಳಿಗೆ  ಗೋಧಿ ಸಜ್ಜಿಗೆ ಮತ್ತು ಹಾಲಿನ ಪುಡಿ ಒದಗಿಸುತ್ತಿತ್ತು.  ಸಜ್ಜಿಗೆಯಿಂದ ತಯಾರಿಸಿದ ಉಪ್ಪಿಟ್ಟು ಮತ್ತು ಹಾಲನ್ನು ಬಡತನ ರೇಖೆಗಿಂತ ಕೆಳಗಿನ ವಿದ್ಯಾರ್ಥಿಗಳಿಗೆ  ಮಧ್ಯಾಹ್ನದ ಉಪಾಹಾರವಾಗಿ ಕೊಡಲಾಗುತ್ತಿತ್ತು. ನಮ್ಮ   ಏಳನೇ ತರಗತಿ ಬೀಳ್ಕೊಡುವ ಸಮಾರಂಭಕ್ಕೆ ಆ ಸಜ್ಜಿಗೆಯದ್ದೇ ಶೀರಾ ಇದ್ದದ್ದು.

ಒಮ್ಮೆ ಅಧ್ಯಾಪಕರೋರ್ವರಿಗೆ ಆಟದ ಮೈದಾನದಲ್ಲಿ ಒಂದು ಪೆನ್ನು ಹೆಕ್ಕಲು ಸಿಕ್ಕಿ ಎಷ್ಟು ವಿಚಾರಿಸಿದರೂ ಅದರ ಯಜಮಾನರು ಯಾರೆಂದು ಪತ್ತೆಯಾಗಲಿಲ್ಲ.  ಆಗ ಅವರು ಏಳನೆ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಮೊದಲಿಗರಾದವರಿಗೆ ಅದು ಬಹುಮಾನವಾಗಿ ಸಿಗಲಿದೆ ಎಂದು ಘೋಷಿಸಿದರು. ಅದು ನನಗೆ ದೊರಕಿತು.  ಆದರೆ ದ್ವಿತೀಯ ಸ್ಥಾನಿಗೆ  ಒಂದು ಹೊಸ ಪೆನ್ನು ಬಹುಮಾನರೂಪದಲ್ಲಿ ಸಿಕ್ಕಿದ್ದು ನನ್ನಲ್ಲಿ ಕೊಂಚ ಅಸಮಾಧಾನ ಉಂಟುಮಾಡಿತ್ತು.

ಹೈಸ್ಕೂಲ್

ಮುಂದೆ ಉಜಿರೆಯ ಎಸ್.ಡಿ.ಎಮ್. ಹೈಯರ್ ಸೆಕೆಂಡರಿ ಶಾಲೆ ಬಿಟ್ಟರೆ ನಮಗೆ ಬೇರೆ ಆಯ್ಕೆಯೇ ಇರಲಿಲ್ಲ. ನನ್ನ ಅಣ್ಣ ಹಾಸ್ಟೆಲಲ್ಲಿದ್ದುಕೊಂಡು ಆಗ ತಾನೇ ಅಲ್ಲಿಯ ಓದು ಮುಗಿಸಿದ್ದರಿಂದ ನಾನೂ ಹಾಗೆಯೇ ಮಾಡುವುದೆಂದು ನಿರ್ಧಾರವಾಯಿತು. ಮೊತ್ತಮೊದಲ ಬಾರಿಗೆ ದೀರ್ಘ ಸಮಯ ಮನೆಯಿಂದ ದೂರವುಳಿಯುವ ಸಂದರ್ಭ ಅದಾಗಿತ್ತು.  ಆದರೆ ನಮ್ಮೂರಿನ ಇನ್ನೂ ಕೆಲ ಹುಡುಗರೂ ಅಲ್ಲಿದ್ದುದರಿಂದ ವಾತಾವರಣ ಅಷ್ಟೊಂದು ಅಹಿತಕರವೆನಿಸಲಿಲ್ಲ.  ಹೈಸ್ಕೂಲಿನ ದೊಡ್ಡ ಕೊಠಡಿಗಳಲ್ಲಿದ್ದ ಕರಿಹಲಗೆಯಲ್ಲಿ ಬರೆದದ್ದು ಸ್ಪಷ್ಟವಾಗಿ ಕಾಣಿಸುತ್ತಿಲ್ಲವೆಂದು ಗಮನಕ್ಕೆ ಬಂದು  short sight ದೋಷಪರಿಹಾರಕ ಕನ್ನಡಕ ನನ್ನ ಮೂಗನ್ನೇರಿತು.  ಆರಂಭದಲ್ಲಿ ಶಾಲೆಯ ಪಾಠಗಳು ರುಚಿಸುತ್ತಿರಲಿಲ್ಲ. Social Studies ಅಂತೂ ತಲೆಗೇ ಹೋಗುತ್ತಿರಲಿಲ್ಲ. ಅದರಲ್ಲಿ ಒಂದೆರಡು ಸಲ ಕೆಂಪು ಗೆರೆ ಬಿದ್ದದ್ದೂ ಇದೆ.  ಆದರೆ ಹಿಂದಿ ತುಂಬಾ ಇಷ್ಟವಾಗುತ್ತಿತ್ತು.  ಅಣ್ಣನ ಹಳೆ ವಾಟರ್ ಕಲರ್ ಉಪಯೋಗಿಸಿ ಆಗಲೇ ಕುಂಚದಲ್ಲಿ ಕೈಯಾಡಿಸತೊಡಗಿದ್ದರಿಂದ  ಡ್ರಾಯಿಂಗ್ ಪೀರಿಯಡ್ ಕೂಡ ಆಕರ್ಷಕವೆನ್ನಿಸುತ್ತಿತ್ತು. ಕನ್ನಡದಲ್ಲೇ ಹೆಚ್ಚಿನ ಉತ್ತರ ಬರೆಯುವ ಸಂಸ್ಕೃತ ಕೂಡ ಪರವಾಗಿಲ್ಲ ಅನ್ನಿಸುತ್ತಿತ್ತು.   ಸಂಜೆ ಹೊತ್ತು ಉಜಿರೆ ಪೇಟೆಗೆ ಹೋಗಿ ಬಸ್ಸುಗಳ ಅಬ್ಬರ ನೋಡುವ ಅವಕಾಶ ಸಿಗುತ್ತಿತ್ತು. ಆದರೂ ಮನೆಯ ಸೆಳೆತ ಜಾಸ್ತಿಯಾಗಿ ಯಾವಾಗ ಶನಿವಾರ ಬರುವುದೋ ಎಂದು ಕಾಯುವಂತಾಗುತ್ತಿತ್ತು. ಇತರರಿಗೆ ಕಠೋರರೆಂದೆನಿಸುತ್ತಿದ್ದ ಹಾಸ್ಟೆಲ್ ವಾರ್ಡನ್ ನನ್ನ ಮಟ್ಟಿಗೆ ಯಾಕೋ ಸೌಮ್ಯವಾಗಿದ್ದು ಪ್ರತಿ ವಾರ ಮನೆಗೆ ಹೋಗಲು ಅನುಮತಿ ನೀಡುತ್ತಿದ್ದರು.  ಆ ಮೇಲೆ ಒಂದು ಸಲ ನಮ್ಮ ಮನೆಗೂ ಬಂದಿದ್ದರು.


ಈ ರೀತಿ ಒಮ್ಮೆ ದೀಪಾವಳಿಯ ಸಮಯದ ಮೂರ್ನಾಲ್ಕು ದಿನಗಳ ರಜೆಯನ್ನು ಮುಗಿಸಿ ಮನಸ್ಸಿಲ್ಲದ ಮನಸ್ಸಿನಿಂದ ಸೋಮವಾರ ಬೆಳಗ್ಗೆ ಹಾಸ್ಟೆಲ್ ತಲುಪಿ ನೋಡಿದರೆ ಟ್ರಂಕಿನ ಬೀಗದ ಕೈ ಮನೆಯಲ್ಲೇ ಬಿಟ್ಟು ಬಂದಿದ್ದೆ.  ಇದನ್ನೇ ಪಿಳ್ಳೆ ನೆವವಾಗಿಸಿಕೊಂಡು ಯಾರಲ್ಲೂ ಹೇಳದೆ ಕೇಳದೆ ತಕ್ಷಣ ಮನೆಗೆ ವಾಪಸು ಬಂದು ಅನೇಕ ಮಕ್ಕಳು ಬರದೆ ಇದ್ದುದರಿಂದ ಈ ದಿನ ಶಾಲೆಗೆ ರಜೆ  ಅಂದೆ. ಮರುದಿನ ಅಣ್ಣನೂ ಪೇಟೆಗೆ ಬರುವವರಿದ್ದುದರಿಂದ ಅವರ ಜೊತೆಗೇ ಬಂದು ಹಾಸ್ಟೆಲಿಗೆ ಹೋಗಿ ಪುಸ್ತಕ ಜೋಡಿಸಿಕೊಂಡು ಕ್ಲಾಸಿಗೆ ಹೋದೆ.  ಆ ದಿನ ಸಂಸ್ಕೃತ ಪೀರಿಯಡ್ ಕೂಡ ಇತ್ತು.  ನಮಗೆ ಸಂಸ್ಕೃತ ಅಧ್ಯಾಪಕರಾಗಿದ್ದದ್ದು ಉಜಿರೆ ಪೇಟೆಯಲ್ಲಿ ಪ್ರಭಾತ್ ಸ್ಟೋರನ್ನೂ ಹೊಂದಿದ್ದ ಗೋಪಾಲ ಮಾಸ್ಟ್ರು.  ಕ್ಲಾಸಿಗೆ ಬಂದವರೇ ನನ್ನನ್ನು ಎದ್ದು ನಿಲ್ಲಲು ಹೇಳಿ ’ಏನೋ, ನಿನ್ನೆ ಶಾಲೆಗೆ ರಜೆ ಕೊಟ್ರು ಅಂತ ಮನೆಯಲ್ಲಿ ಹೋಗಿ ಹೇಳಿದ್ಯಂತೆ’ ಅಂದಾಗ ನನ್ನ ಜಂಘಾಬಲವೇ ಉಡುಗಿಹೋಯ್ತು!  ಆದದ್ದಿಷ್ಟೇ.  ನನ್ನೊಡನೆ ಪೇಟೆಗೆ ಬಂದ ಅಣ್ಣ ಎಂದಿನಂತೆ ಪ್ರಭಾತ್ ಸ್ಟೋರಿಗೆ ಹೋಗಿ ಅಲ್ಲೇ ಇದ್ದ  ಗೋಪಾಲ ಮಾಸ್ಟ್ರೊಂದಿಗಿನ   ಲೋಕಾಭಿರಾಮ ಮಾತುಕತೆಯಲ್ಲಿ ‘ನಿನ್ನೆ ಶಾಲೆಗೆ ರಜೆ ಅಂತೆ’ ಎಂದು ಹೇಳಿದಾಗ ನನ್ನ ಬಂಡವಾಳ ಬಯಲಾಗಿತ್ತು!  ಆ ಮೇಲೆ ನಾಚಿಕೆಯಿಂದ ಕೆಲವು ವಾರ ಮನೆಗೇ ಹೋಗಲಿಲ್ಲ.


9ನೇ ತರಗತಿಗೆ ಬರುತ್ತಿದ್ದಂತೆ ವಿಜ್ಞಾನ, ಗಣಿತ, ಭೌತ ಶಾಸ್ತ್ರ ಪಾಠಗಳೂ ರುಚಿಸತೊಡಗಿದ್ದವು. ಹಿಂದಿಯಂತೂ ಬಲು ಆಪ್ತವಾಗಿ ಆ ವರ್ಷ ವಾರ್ಷಿಕೋತ್ಸವದಲ್ಲಿ   ಅಂಧೇರ್ ನಗರಿ ಚೌಪಟ್ ರಾಜಾ  ನಾಟಕದ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮನೆಗೆ ಹೋದಾಗ ನಿರಂತರವಾಗಿ ಆಲಿಸುತ್ತಿದ್ದ ಸಿಲೋನ್ ಮತ್ತು ವಿವಿಧಭಾರತಿ ಹಿಂದಿಯತ್ತ ಒಲವು ಹೆಚ್ಚಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.  ಹೊಸ ಹಾಡಿನ ಯಾವುದಾದರೊಂದು ಪದ ಅರ್ಥವಾಗದಿದ್ದಾಗ ಅದನ್ನು ಹಿಂದಿ ಅಧ್ಯಾಪಕರಾದ ನಾಗರಾಜ ಪೂವಣಿಯವರಲ್ಲಿ ಕೇಳುತ್ತಿದ್ದೆ.  ಅವರು ಸಂತೋಷದಿಂದಲೇ ಅದರ ಅರ್ಥ ಹೇಳುತ್ತಿದ್ದರು. ಕೆಲವೊಮ್ಮೆ ನನ್ನ ಹಿಂದಿ ಹಾಡುಗಳ ಜ್ಞಾನವನ್ನು ಪರೀಕ್ಷೆಯಲ್ಲೂ ಪ್ರಯೋಗಿಸುವುದಿತ್ತು.   ಒಮ್ಮೆ  ಫೂಲಾ ನ ಸಮಾನಾ ಎಂಬುದನ್ನು ಉಪಯೋಗಿಸಿ ವಾಕ್ಯ ರಚಿಸಲಿಕ್ಕಿತ್ತು. ನಾನು ‘ನೀಲ್ ಗಗನ್ ಪರ್ ಉಡತೆ ಬಾದಲ್ ’ ಹಾಡಿನ ಒಂದು ಸಾಲನ್ನು ಕೊಂಚ ಬದಲಾಯಿಸಿ ‘ಕ್ಯಾರಿಯೊ ಮೆಂ ಬಹತಾ ಠಂಡಾ ಠಂಡಾ ಪಾನೀ ದೇಖ್ ಕರ್ ಕಿಸಾನ್ ಫೂಲಾ ನಹೀಂ ಸಮಾತಾ’ ಎಂಬ ವಾಕ್ಯ ರಚಿಸಿದ್ದೆ.

ಹತ್ತನೆ ತರಗತಿಯ ವಾತಾವರಣ ಅತ್ಯಂತ ಉತ್ಸಾಹಭರಿತವಾಗಿತ್ತು. ಆ ಕಾಲದಲ್ಲಿ ಅದು ನಿರ್ಣಾಯಕ ಘಟ್ಟವಾಗಿದ್ದರೂ ಸ್ಪೆಶಲ್ ಕ್ಲಾಸ್, ಟ್ಯೂಶನ್ ಇತ್ಯಾದಿ ಏನೂ ಇರಲಿಲ್ಲ. ಪಬ್ಲಿಕ್ ಪರೀಕ್ಷೆಯ ಬಗ್ಗೆ ನಮ್ಮನ್ನು ಯಾರೂ ಹೆದರಿಸಲೂ ಇಲ್ಲ. ಬದಲಾಗಿ ಅದು ಶಾಲಾ ಪರೀಕ್ಷೆಗಳಿಗಿಂತಲೂ ಸುಲಭವಾಗಿರುತ್ತದೆ ಎಂದು ಧೈರ್ಯ ತುಂಬುತ್ತಿದ್ದರು. ನಿಜಕ್ಕೂ ಅದು ಹಾಗೆಯೇ ಇದ್ದು ಶಾಲೆಗೆ ಎರಡನೇ ಸ್ಥಾನ ಪಡೆದು ಉತ್ತೀರ್ಣನಾದೆ. ಆ ವರ್ಷದ ಉತ್ತಮ ಸರ್ವತೋಮುಖ ನಿರ್ವಹಣೆಗೆ ಪ್ರಶಸ್ತಿಪತ್ರವೂ ಲಭಿಸಿತು.



ಆ ಮೂರು ವರ್ಷಗಳ ಹಾಸ್ಟೆಲ್ ವಾಸ ಬಲು ವರ್ಣರಂಜಿತವಾಗಿತ್ತು. ಬೇಕೆನಿಸಿದಾಗ ಅಕ್ರೋಟು, ಚಿಕ್ಕಿಗಳನ್ನು ತಿನ್ನಲು ಸಮೀಪದಲ್ಲೇ ಇಂದ್ರರ ಅಂಗಡಿ ಇತ್ತು.  ಕ್ಲಾಸಲ್ಲೇ ಪಾಠಗಳು ಚೆನ್ನಾಗಿ ಅರ್ಥವಾಗುತ್ತಿದ್ದುದರಿಂದ ಹೆಚ್ಚು ಓದಿಕೊಳ್ಳುವುದೇನೂ ಇರುತ್ತಿರಲಿಲ್ಲ.  ಹೀಗಾಗಿ ನಮ್ಮ ಹೆಚ್ಚಿನ ಸಮಯ ಸಿನಿಮಾ ಹಾಡುಗಳನ್ನು ಹಾಡುತ್ತಾ, ಅವುಗಳ ಬಗ್ಗೆ ಚರ್ಚಿಸುತ್ತಾ ಕಳೆಯುತ್ತಿತ್ತು. ಆಗಲೇ ಬೆಳ್ತಂಗಡಿಯಲ್ಲಿ ಭಾರತ್ ಟಾಕೀಸ್ ಇದ್ದರೂ ನಮಗೆ ಸಿನಿಮಾ ನೋಡುವ ಅನುಮತಿ ಇರಲಿಲ್ಲ.  ಆದರೂ ಸಂತ ತುಕಾರಾಮ್ ಚಿತ್ರ ಬಂದಾಗ ನಮ್ಮ ನಿಯೋಗವೊಂದು ವಾರ್ಡನ್ ನಾಗಪ್ಪಯ್ಯ ಅವರನ್ನು ಭೇಟಿ ಮಾಡಿ ವಿಶೇಷ ಅನುಮತಿ ಪಡೆಯುವಲ್ಲಿ ಸಫಲವಾಗಿತ್ತು.  ಆ ಒಂದು ಸಿನಿಮಾ ನೋಡಲು ಅವರು ಕೊಟ್ಟ ಅನುಮತಿಯನ್ನು ಸೀಸನ್ ಟಿಕೆಟ್ ಆಗಿ ಪರಿವರ್ತಿಸಿಕೊಂಡು ಆ ಮೇಲೆ ನಾವು ಅನೇಕ ಚಿತ್ರಗಳನ್ನು ನೋಡಿದೆವು. ಆದರೆ ಕಳ್ಳತನದಲ್ಲಿ! ರಾತ್ರಿ ಊಟವಾದೊಡನೆ ಸದ್ದಿಲ್ಲದೆ ಹೊರಬೀಳುತ್ತಿದ್ದ ನಾವು ಬಸ್ಸಲ್ಲಿ ಬೆಳ್ತಂಗಡಿ ತಲುಪಿ ಎರಡನೇ ದೇಖಾವೆ ನೋಡಿ ಸಿಕ್ಕಿದ ವಾಹನದಲ್ಲಿ ಉಜಿರೆಗೆ ಮರಳಿ ಸರಳು ಕೀಳಲು ಬರುತ್ತಿದ್ದ ಕಿಟಿಕಿಯೊಂದರ ಮೂಲಕ ರೂಮಿನೊಳಗೆ ಸೇರಿ ಏನೂ ಗೊತ್ತಿಲ್ಲದವರಂತೆ ಮಲಗಿ ಬಿಡುತ್ತಿದ್ದೆವು. ಜಂಗ್ಲಿ, ಪೂರ್ಣಿಮಾ, ಮಹಾಸತಿ ಅನಸೂಯ, ಸುಬ್ಬಾಶಾಸ್ತ್ರಿ, ಮಂಗಳ ಮುಹೂರ್ತ, ತೂಗುದೀಪ ಮುಂತಾದವು ನಾವು ಈ ರೀತಿ ನೋಡಿದ ಸಿನಿಮಾಗಳು.


ಕಾಲೇಜು

ಇಲ್ಲಿವರೆಗೆ ರಜೆ ಮುಗಿದು  ಶಾಲಾರಂಭ ಸಮೀಪಿಸುವಾಗ ಮಾತ್ರ ಹಾಡಬೇಕಾಗುತ್ತಿದ್ದ ಸುಖ್ ಭರೆ ದಿನ್ ಬೀತೆರೆ ಭೈಯಾ ಅಬ್ ದುಖ್ ಆಯೋರೇ ಮುಂದಿನ ನಾಲ್ಕು ವರ್ಷಗಳ ಶಾಶ್ವತ ಹಾಡಾಯಿತು. ನಮ್ಮ SSLC ಮುಗಿಯುವಷ್ಟರಲ್ಲಿ ಸಿದ್ಧವನ ಪರಿಸರದಲ್ಲಿ ಎಸ್.ಡಿ.ಎಮ್ . ಕಾಲೇಜು ಆರಂಭವಾಗಿತ್ತು. Pure Scienceನಲ್ಲಿ ಒಂದಿನಿತೂ ಆಸಕ್ತಿ ಇಲ್ಲದಿದ್ದರೂ ಬೇರೆ ದಾರಿ ಇಲ್ಲದೆ ನಾನೂ PUCಗೆ ಸೇರಿ ಮುಂದೆ B.Sc ಆಯ್ದುಕೊಂಡೆ.  ಆದರೆ ಕಾರಣಾಂತರಗಳಿಂದ ಹಾಸ್ಟೆಲ್ ವಾಸ್ತವ್ಯ ಮುಂದುವರಿಸಲು ಅನಾನುಕೂಲವಾಗಿ ದಿನ  ನಿತ್ಯ ಮುಂಡಾಜೆಯಿಂದ up and down ಮಾಡಬೇಕಾಯಿತು. ಮೊದಲು ಒಂದೆರಡು ವರ್ಷ ಬಸ್, ಆಮೇಲೆ ಸೈಕಲ್. ನಾನು ಡಿಗ್ರಿ ಮೊದಲ ವರ್ಷದಲ್ಲಿರುವಾಗ ಅಲ್ಲಿಯ ಮಾರ್ಗಗಳ ರಾಷ್ಟ್ರೀಕರಣವಾಯಿತು. ಕೆಂಪು ಬಸ್ಸುಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿರಲಿಲ್ಲ.  ಎಷ್ಟೋ ಸಲ ಬಸ್ಸಿಗೆ ಕಾದು ಕಾದು ಆ ಮೇಲೆ ಸಿಕ್ಕಿದ ವಾಹನದಲ್ಲಿ  ದುಬಾರಿ ದುಡ್ಡು ತೆತ್ತು ಪಯಣಿಸಿ ಕ್ಲಾಸುಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು, ಪರೀಕ್ಷೆಗಳಿಗೆ ತಡವಾಗಿ ಹೋಗಬೇಕಾಗುತ್ತಿತ್ತು.  ಕೆಲ ಸಮಯದ ನಂತರ ಮನೆಗೆ ಸೈಕಲ್ ಆಗಮನವಾದ್ದರಿಂದ ಈ ಸಮಸ್ಯೆ ನಿವಾರಣೆಯಾಯಿತು.


ಕಾಲೇಜಲ್ಲೂ ಎಂದಿನಂತೆ ಹಿಂದಿ ನನ್ನ ಮೆಚ್ಚಿನ ವಿಷಯವಾಗಿ ಮುಂದುವರಿಯಿತು. ಆದರೆ ಇಂಗ್ಲೀಷ್ ಪರಕೀಯವಾಗಿಯೇ ಉಳಿಯಿತು.  ಭೌತ ಶಾಸ್ತ್ರ , ಫಿಸಿಕಲ್ ಕೆಮೆಸ್ಟ್ರಿ  ಸ್ವಲ್ಪ ರುಚಿಸುತ್ತಿದ್ದರೂ  Inorganic Chemestry, Organic Chemistryಗಳ ಯಾವುದೇ  logic ಅರ್ಥವಾಗುತ್ತಿರಲಿಲ್ಲ, ತಲೆಗೂ ಹೋಗುತ್ತಿರಲಿಲ್ಲ. ಉರು ಹೊಡೆಯುವುದು ನನ್ನ ಜಾಯಮಾನವಲ್ಲ. ಗಾಯದ ಮೇಲೆ ಬರೆ ಎಳೆದಂತೆ ಡಿಗ್ರಿಯಲ್ಲೂ social scienceನ ಕಾಟ  ತಪ್ಪಿರಲಿಲ್ಲ. ಆ ಪೀರಿಯಡಲ್ಲಂತೂ ನಿದ್ದೆ ಬರದಂತೆ ಕಣ್ಣು ತೆರೆದಿಟ್ಟುಕೊಳ್ಳುವುದೇ ಕಷ್ಟವಾಗುತ್ತಿತ್ತು.  ಆಗ ಡಿಗ್ರಿಯಲ್ಲಿ ಮೂರು ವರ್ಷ ‘ಕಲಿತ’ದ್ದನ್ನೆಲ್ಲ  ನೆನಪಿಟ್ಟುಕೊಂಡು ಕೊನೆಯ ವರ್ಷ ಪರೀಕ್ಷೆ ಬರೆಯಬೇಕಿತ್ತು.  ನಿಗದಿತ ಪಠ್ಯ ಪುಸ್ತಕಗಳೆಂದಿರಲಿಲ್ಲ. ಪ್ರಾಧ್ಯಾಪಕರೆಲ್ಲರೂ ಬಹಳ ಮುತುವರ್ಜಿಯಿಂದ ಪಾಠ ಮಾಡಿ   ನೋಟ್ಸು  ಬರೆಸುತ್ತಿದ್ದರೂ ನಿಜ ಜೀವನದ ಆಗುಹೋಗುಗಳಿಗೆ ಯಾವುದೇ ಸಂಬಂಧವಿಲ್ಲದಂತೆ ತೋರುತ್ತಿದ್ದ ಆ ಸಿಲಬಸ್ ನನ್ನಲ್ಲಿ ಆಸಕ್ತಿ ಹುಟ್ಟಿಸಲು ವಿಫಲವಾಗಿತ್ತು.  . Practicals ಇಲ್ಲದೇ ಹೋಗಿದ್ದರೆ ಡಿಗ್ರಿಯಲ್ಲಿ ನಾನು ಮೇಲೆ ಬೀಳುವುದೇ ಅನುಮಾನವಿತ್ತು. Passportನಲ್ಲಿ emigration clearance not required ಎಂಬ ಸೀಲು ಬೀಳಲು ಮತ್ತು ಉದ್ಯೋಗಕ್ಕೆ ಸೇರಿದ ಮೂರು ವರ್ಷಗಳಲ್ಲಿ ಇಲಾಖಾ ತಾಂತ್ರಿಕ ಪರೀಕ್ಷೆ ಬರೆಯಲು ಅನುಕೂಲವಾದದ್ದು ಮಾತ್ರ ನಾನು ಪಡೆದ ಡಿಗ್ರಿಯ ಉಪಲಬ್ಧಿ.  ನನಗೆ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರಕಿದ್ದು SSLC ಅಂಕಗಳ ಮೇಲೆ.

ಪ್ರತಿ ವರ್ಷ ಸಿಗುತ್ತಿದ್ದ ಸುಮಾರು ಮೂರು ತಿಂಗಳಷ್ಟು ಸಮಯದ ದೀರ್ಘ ರಜೆ ಕಾಲೇಜು ಜೀವನದ ಅತ್ಯಂತ ಸಂತೋಷದ ಸಮಯವಾಗಿರುತ್ತಿತ್ತು.  ಬೆಳಗ್ಗೆ ಕ್ಲಾಸು ಆರಂಭವಾಗುವ ಮುನ್ನ ಮತ್ತು ಮಧ್ಯಾಹ್ನ ಭೋಜನ ವಿರಾಮದ ವೇಳೆ  ಕೆಲವು ಸಮಾನ ಮನಸ್ಕರ ಸಮ್ಮುಖದಲ್ಲಿ  ನಾನು ನಡೆಸುತ್ತಿದ್ದ ಗಾನ ಗೋಷ್ಠಿ ಕೂಡ ಆ ನೀರಸ ವರ್ಷಗಳಲ್ಲಿ ಒಂದಷ್ಟು ರಸನಿಮಿಷಗಳನ್ನು ಒದಗಿಸುತ್ತಿತ್ತು.  ನಾನು ದಿನ ನಿತ್ಯ ಹಾಡುತ್ತಿದ್ದ ಮೈ ಗಾವೂಂ ತುಮ್ ಸೋ ಜಾವೊ, ದಿಲ್ ಕೆ ಝರೋಕೆ ಮೆ ತುಝ್ ಕೊ ಬಿಠಾಕರ್,  ತಾಲ್ ಮಿಲೆ ನದಿ ಕೆ ಜಲ್ ಮೆಂ, ದಿಲ್ ಕೀ ಆವಾಜ್ ಭಿ ಸುನ್, ಯೆ ಶಮಾ ತೊ ಜಲಿ ರೋಶನೀ ಕೆಲಿಯೆ,  ಕ್ಯಾ ಮಿಲಿಯೆ ಐಸೆ ಲೊಗೊಂಸೆ, ಜನಮ್ ಜನಮ್ ಕಾ ಸಾಥ್ ಹೈ, ಚರಾಗ್ ದಿಲ್ ಕಾ ಜಲಾವೊ, ಮೇರಾ ಪ್ಯಾರ್ ಭೀ ತು ಹೈ, ಚಲ್ ಅಕೇಲಾ ಚಲ್ ಅಕೇಲಾ ಮುಂತಾದ ಹಾಡುಗಳನ್ನು ಕೇಳಲು ಅಕ್ಕ ಪಕ್ಕದ ಕ್ಲಾಸುಗಳಿಂದಲೂ ಕೆಲವರು ಬರುತ್ತಿದ್ದರು. ಆದರೆ ಕಾಲೇಜಿನ ಯಾವುದೇ ಸಮಾರಂಭದಲ್ಲಿ ನಾನು ಹಾಡಿದ್ದಿಲ್ಲ. ನಾನು ಆಗಲೇ ಕೊಳಲು ನುಡಿಸಲು ಆರಂಭಿಸಿದ್ದರೂ ಕಾಲೇಜಲ್ಲಿ ಒಮ್ಮೆಯೂ ನುಡಿಸಿದ್ದಿಲ್ಲ.

ವೃತ್ತಿಯಲ್ಲಿ ಶಿಕ್ಷಣ

ಡಿಗ್ರಿ ಮುಗಿದು ಸ್ವಲ್ಪ ಸಮಯದಲ್ಲಿ SSLC ಅಂಕಗಳ ಆಧಾರದಲ್ಲಿ ದೂರವಾಣಿ ಇಲಾಖೆಯ  clerical ಹುದ್ದೆಗೆ ಆಯ್ಕೆಯಾದೆ. ಅದಕ್ಕೆ ಸಂಬಂಧಪಟ್ಟ ಒಂದು ತಿಂಗಳ ತರಬೇತಿಗಾಗಿ ಮೊತ್ತ ಮೊದಲ ಬಾರಿಗೆ ಬೆಂಗಳೂರಿಗೂ ಹೋದೆ. ಅಲ್ಲಿ ತರಬೇತಿ ಅವಧಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲೆಲ್ಲ ಮೊದಲಿಗನಾಗಿ ಹೊಮ್ಮಿದೆ. ಮಂಗಳೂರಲ್ಲಿ ಮೂರು ವರ್ಷಗಳ ಸೇವೆಯ  ನಂತರ ಇಲಾಖಾ ಪರೀಕ್ಷೆಯನ್ನೂ ಉತ್ತಮ ಅಂಕಗಳೊಡನೆ ಪಾಸು ಮಾಡಿ ತಾಂತ್ರಿಕ ವಿಭಾಗಕ್ಕೆ ಆಯ್ಕೆಯಾಗಿ ಮತ್ತೆ ಒಂದು ವರ್ಷ ತರಬೇತಿಗೆ ಬೆಂಗಳೂರಿನ Regional Telecom Training Center  ಹೋದೆ. ಶಿಕ್ಷಣಾರ್ಥಿಗಳಿಂದ Regular Test Taking Center ಎಂದೇ  ಕರೆಸಿಕೊಳ್ಳುತ್ತಿದ್ದ ಅಲ್ಲಿ ನಿಜಕ್ಕೂ ದಿನ ನಿತ್ಯ ಎಂಬಂತೆ testಗಳಿರುತ್ತಿದ್ದವು. ಎಲ್ಲವೂ ನಾನು ಇಚ್ಛೆ ಪಟ್ಟು ಆಯ್ದುಕೊಂಡ  ತಾಂತ್ರಿಕ ವಿಷಯಗಳಾದ್ದರಿಂದ ಒಮ್ಮೆಯೂ ನನಗೆ 95ಕ್ಕಿಂತ ಕಮ್ಮಿ ಅಂಕಗಳು ಬರಲಿಲ್ಲ. ಮುಂದೆ ನಿವೃತ್ತಿ ಹೊಂದುವವರೆಗೂ ಆಗಾಗ ತರಬೇತಿ, ಪರೀಕ್ಷೆಗಳು ಇದ್ದೇ ಇರುತ್ತಿದ್ದವು. ಅವೆಲ್ಲವುಗಳಲ್ಲೂ ಇದೇ ರೀತಿಯ ಫಲಿತಾಂಶ ಮರುಕಳಿಸಿತು. ಈ ರೀತಿ ತಿರುವು ಮುರುವಾಗಿದ್ದ ಹಾಡು ಮತ್ತೆ ಸರಿಯಾಗಿ ಆ ಮೇಲೆ ದುಖ್ ಭರೆ ದಿನ್ ಬೀತೆರೆ ಭೈಯಾ ಅಬ್ ಸುಖ್ ಆಯೋರೇ ಎಂದು ಹಾಡುವಂತಾಯಿತು.  ಉದ್ಯೋಗಿಗಳನ್ನು ಸಾಮಾನ್ಯವಾಗಿ ಕಾಡುವ Monday Syndrome ಕೂಡ ನನ್ನನ್ನು ಯಾವತ್ತೂ ಕಾಡಲಿಲ್ಲ ಮತ್ತು ಆ ಹಾಡನ್ನು ಮತ್ತೆ ತಿರುವು ಮುರುವುಗೊಳಿಸಿ ಹಾಡಬೇಕಾಗಿ ಬರಲಿಲ್ಲ.  ನನ್ನ ಸೇವೆಗೆ ಪ್ರತಿಫಲವಾಗಿ ಸಂಚಾರ ಸೇವಾ ಪದಕ ಪ್ರಶಸ್ತಿಯೂ ದೊರಕಿತು.



ಈಗಲೂ ಹೊಸ ಉಪಯುಕ್ತ ವಿಷಯಗಳನ್ನು ಕಲಿಯುತ್ತಲೇ ಇದ್ದೇನೆ.  ಆದರೆ ಪರೀಕ್ಷೆ ನಡೆಸಿ ಅಂಕ ಕೊಡುವವರಿಲ್ಲ ಅಷ್ಟೇ.  ನನ್ನಂತೆ ಕೂಡು ಕುಟುಂಬದ ಸವಿಯುಂಡವರನ್ನು ಬಾಧಿಸುತ್ತಿದ್ದ home sickness ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುವ ಈಗಿನ ನ್ಯೂಕ್ಲಿಯರ್ ಕುಟುಂಬಗಳ  ಒಂಟಿ ಗುಬ್ಬಚ್ಚಿಯಂಥ ಮಕ್ಕಳಿಗೆ ಇರಲಾರದೇನೋ.


6 comments:

  1. ಲೇಖನ ಚೆನ್ನಾಗಿದೆ. ಇದನ್ನು MP3 formನಲ್ಲಿ ವಾಚನ ಮಾಡಿದರೆ ಇನ್ನೂ ರಸಮಯವಾಗಬಹುದು.

    ReplyDelete
  2. ಓ ...!! ಫಸ್ಟಾಗಿದೆ ...ಚಿದಂಬರ್ ... ಇದ್ರಲ್ಲಿ ಸುಮಾರು ವಿಷಯ ... ನನ್ನದೇ. ...ಹೆಸರುಗಳನ್ನು ಬದಲಾಯಿಸಿದರೆ ಸಾಕು....ಆದರೆ ಒಂದು ವಿಷಯದಲ್ಲಿ ನಾನೇ ಗ್ರೇಟು.ಏನಂದ್ರೆ .... ನನ್ನನ್ನು ಶಾಲೆಗೆ ಕರಕೊಂಡು ಹೋಗಲು ಸಂಬದಿಯಾದ ಅಕ್ಕ ಒಬ್ಬಳಿದ್ದಳು.ನನ್ನಿಂದ 2-3 ಕ್ಲಾಸು ಮೇಲೆ....ಶಾಲೆಗೆಂದು ಹೊರಟು ...ಎಷ್ಟೋ ಸಾರಿ ಶಾಲೆಗೆ ಹೋಗದೇ ಮನೆಯ ಪಕ್ಕದ ಗುಡ್ಡದಲ್ಲಿ ಮದ್ಯಾಹ್ನದ ಊಟವೂ ಇಲ್ಲದೇ ಕಾಲ ಕಳೆದು ...ಆ ಅಕ್ಕನನ್ನೂ ಹೋಗಲು ಬಿಡದೆ ಸಂಜೆ ಮನೆಗೆ ಬಂದದ್ದಿದೆ. ಒಂದು ಸಾರಿ ಸೊಪ್ಪಿಗೆಂದು ಬಂದ ಕೆಲಸದವಳು ಇದನ್ನು ನೋಡಿದ ಕಾರಣ ಪ್ರಾಜೆಕ್ಟ್ ಹಾಳಾಗಿ ಹೋಯ್ತು..... ಇದು ನಿಮಗೆ ಸಾದ್ಯ ಆಗಿತ್ತೋ ..??
    ಮತ್ತೆ ಈ ಶಾಲೆಗಳು ಹೇಗೆ ಅಂದ್ರೆ... "ಧರ್ಮದಂಡಕ್ಕೆ..." ಅಂತ ಒಂದು ಮಾತು ಉಂಟಲ್ಲ ಹಾಗೆ....
    ನಾನು ...ಬ್ರಿಟಿಷರು ನಮ್ಮ ದೇಶ ಬಿಟ್ಟ ಐದು ವರ್ಷಗಳ ನಂತರ ಹುಟ್ಟಿದವ ... ಆದರೂ ಯಾರೋ ಹೇಳಿದ ಮಾತು ನೂರಕ್ಕೆ ನೂರು ನಿಜ ಅಂತ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಕಾಣಲು ಪ್ರಾರಂಭವಾಗಿತ್ತು ...ಏನೆಂದರೆ ...
    "ಬೇರೆ ದಾರಿ ಇಲ್ಲದೇ ...ಮನಸ್ಸಿಲ್ಲದ ಮನಸ್ಸಿಂದ ಭಾರತವನ್ನು ಬಿಟ್ಟು ಹೋಗಬೇಕಾದ ಬ್ರಿಟಿಷರು ... ಶತಮಾನ ಶತಮಾನಗಳ ಕಾಲ ಈ ಭಾರತದವರು ಉದ್ದಾರ ಆಗಬಾರ್ದು ಅಂತ ..."ಆಧುನಿಕ" ಎನ್ನುವ ಹೆಸರಿನಲ್ಲಿ ಅವರ ಶಿಕ್ಷಣ ಕ್ರಮವನ್ನು ಸುರು ಮಾಡ್ಸಿ ನಮ್ಮನ್ನು ನಂಬಿಸಿದ್ರು....." ಅಂತ.
    ನನಿಗೆ ಕಾಣ್ತಾ ಇರುವುದು ...ನಮ್ಮ ಹಾಗೆ ಕೆಲವು ಜನವನ್ನು ಬಿಟ್ರೆ .. ಹೆಚ್ಚಿನವರಿಗೆ ಈ ಶಿಕ್ಷಣ ಒಂದು ಪರಮ ಸೌಭಾಗ್ಯ ಅಂತ ಉಂಟಲ್ಲ ಅಂತ. ಶಾಲೆಗೆ ಹೋಗುವ ಕಾಲದಲ್ಲಿ ...ನೂರಕ್ಕೆ ತೊಂಬತ್ತೊಂಬತ್ತರಷ್ಟು ಜನರಿಗೂ ...ಶಾಲೆ ಎಂದರೆ ಎಲರ್ಜಿ. ಆದರೆ ತಮ್ಮ ಮಕ್ಕಳ ಕಾಲಕ್ಕಾಗುವಾಗ ...ಅದೆಲ್ಲಾ ಮರೆತು ಹೋಗುವುದು ಹೇಗೆ ..? ...
    ನಮ್ಮ ವಿಟ್ಲದ ದೇವಸ್ಯ ಶಾಂ ಭಟ್ ನಿಮಗೆ ಗೊತ್ತಲ್ಲ ... 40 - 50 ವರ್ಷಗಳ ಹಿಂದೆಯೇ ...ಸೋಲಾರ್ ಎನರ್ಜಿ, 35mm ಪ್ರೊಜೆಕ್ಟರ್,ಉಗಿಯಿಂದ ನಡೆಯುವ ಕೃಷಿ ಪಂಪ್, ಗೋಬರ್ ಗ್ಯಾಸ್ ಪ್ಲಾಂಟ್...ಹೀಗೆ ಅನೇಕ ವೈಜ್ಞಾನಿಕ ಸಂಶೋದನೆಗಳನ್ನು ಮಾಡಿದವರು,ಒಳ್ಳೆಯ ನಟ, ತನ್ನ ಅನುಭವದಿಂದಲೇ ಅದ್ಯಾತ್ಮವನ್ನು ಅರಿತವರು, ಹಿಂದುಸ್ತಾನಿ,ಪಾಶ್ಚಾತ್ಯ ಸಂಗೀತದ ಮಾಸ್ಟರ್, 60 ರ ದಶಕದಲ್ಲೇ ...ವಿಟ್ಲಕ್ಕೆ ಹವಾಯಿಯನ್ ಗಿಟಾರನ್ನು ಪರಿಚಯಿಸಿದವರು ...ಹೀಗೆ ಅನೇಕ ಅಪೂರ್ವ ಪ್ರತಿಭೆಗಳ ಸಾಗರವೇ ಆಗಿರುವ ಅವರು ಇವತ್ತಿಗೂ ಹೇಳುವುದು ಏನೆಂದರೆ ... ಅವರ ಬದುಕಿನ ಅತ್ಯಂತ ಕೆಟ್ಟ ದಿನಗಳು ಅಂದರೆ ...ಅವರ ಶಾಲಾದಿನಗಳಂತೆ.....
    ಇವತ್ತಿನ ದಿನದಲ್ಲಿ ಶಾಲೆ ಅನಿವಾರ್ಯ ಆಗಿರುವುದರಿಂದ ... ನಾವು ಸ್ವಲ್ಪ ರಾಜಿ ಮಾಡಿಕೊಳ್ಳುವುದಿದ್ರೆ ...ಕನಿಷ್ಟ ಹೀಗಿರ್ಲಿ .. ಹತ್ತನೇ ಕ್ಲಾಸಿನ ನಂತರ
    ಆಯಾಯ ವೃತ್ತಿಗಳಿಗೆ ಅನುಗುಣವಾದ ಶಿಕ್ಷಣ ..ಒಂದೋ ಎರಡೋ ವರ್ಷಗಳ ಏಪ್ರೆಂಟಿಸ್ ಕೋರ್ಸ್ ಅಥವಾ ಪ್ರೊಬೆಶನರಿ ಅಂತ ಹೇಳ್ತಾರಲ್ಲ ಹಾಗೆ ಸಾಕಲ್ಲ.
    ನಮ್ಮ "ರಂಗ ತರಬೇತಿ" ಯ ರೀತಿಯಲ್ಲೇ ...ಪುಸ್ತಕ,ಹೋಮ್ ವರ್ಕ್,ಒತ್ತಡ ಇಲ್ಲದೇ ಒಂದು ಶಾಲೆ ಸುರು ಮಾಡ್ಬೇಕು ಎನ್ನುವ ನನ್ನ ಆಸೆ ಇನ್ನೂ ಪೂರ್ತಿ ಸಾಯ್ಲಿಲ್ಲ.......
    ಬರೀರಿ ಇನ್ನೂ ಬರಿರಿ ..... - ಮೂರ್ತಿ ದೇರಾಜೆ,ವಿಟ್ಲ

    ReplyDelete
  3. ತುಂಬಾ ಸೊಗಸಾಗಿತ್ತು ನಿಮ್ಮ ಬರವಣಿಗೆ ಮತ್ತು ನೆನಪುಗಳ ಮೆರವಣಿಗೆ. ಇಂದಿನ ಆಧುನಿಕ ಸೌಲಭ್ಯಗಳ ದಿನಗಲ್ಲಿ ಈ ರೀತಿಯ ಅನುಭವಗಳು ಅಂದಿನ ಓದಲು /ಶಾಲೆಗೆ ಹೋಗಲು ಪಟ್ಟ ಪಡಿಪಾಟಲು ಊರಿಂದೂರಿಗೆ ನಡಿಗೆ , ಬಸ್ ಪಯಣ , ಮಳೆಗಾಲದಲ್ಲಿ ನದಿ ದಾಟುವ ಸರ್ಕಸ್ ಎಲ್ಲ ಒಂದು ನೆನಪೇ ಸರಿ. ಯಾವುದೇ ಕಹಿ ಅನುಭವವೂ , ಜೀವನದ ಮೂಸೆಯಲ್ಲಿ ಬೆಂದು ಪಳಗಿ ಪಕ್ವವಾದ ನಂತರ ಸಿಹಿ ನೆನಪಾಗುತ್ತೆ ಅನ್ನೋ ಮಾತು ಖಂಡಿತ ಸತ್ಯ. ನಿಮ್ಮ ಪಳಗಿದ ಕೈ ಬರವಣಿಗೆ ತುಂಬಾ ಆಪ್ತ ಅನುಭವ ಕೊಟ್ಟಿತು. ಈ ಅನುಭವಗಳೆಲ್ಲ ಪಟ್ಟಣದಲ್ಲಿ
    ಕೂಗಳತೆಯಲ್ಲಿದ್ದ ಶಾಲೆ ಪ್ರೌಢಶಾಲೆ ಹಾಗು ಕಾಲೇಜ್ನಲ್ಲಿ ಓದಿದ ನಮಗೆ ತುಂಬಾ ಆಶ್ಚರ್ಯವೇ ಸರಿ. ಇದು ಅಂದಿನ ದಕ್ಷಿಣ ಕನ್ನಡ ಜಿಲ್ಲೆ ಮಲೆನಾಡು ಗಳಲ್ಲಿ ಓದಿದ ಎಲ್ಲರ ಅನುಭವವೂ ಹೀಗೆ ಇರಬೇಕು ಅಲ್ಲವೇ. ನಿಮ್ಮ ದೂರವಾಣಿ ಇಲಾಖೆಗೆ ಸೇರಿದ ಅನುಭವವು ನನ್ನದೇ ಅನುಭವ ಕೂಡ. puc ಮುಗಿಸಿ ಡಿಗ್ರಿ ತರಗತಿಗೆ ಪ್ರವೇಶ ಪಡೆದು ಕಾಲೇಜು ತೆರೆಯಲು ಇನ್ನು ದಿನಗಳಿದ್ದದರಿಂದ ತುಂಬು ಗರ್ಭಿಣಿಯಾದ ನನ್ನಕ್ಕನಿಗೆ ಸಹಾಯ ಮಾಡಲು ಬೆಂಗಳೂರಿಗೆ ಬಂದ ನನಗೆ ನನ್ನ ಭಾವ ಟೆಲಿಫೋನ್ ಆಪರೇಟರ್ ಹುದ್ದೆಗೆ ಅಪ್ಲೈ ಮಾಡು ಹೇಗೂ ನಿನಗೆ sslc ಯಲ್ಲಿ ಒಳ್ಳೆ ಪರ್ಸಂಟೇಜ್ ಇದೆಯಲ್ಲ ಅಂತ ಹೇಳಿದಾಗ ಸುಮ್ಮನೆ ಹಾಕೋಣ ಸಿಕ್ಕೋದು ಅನುಮಾನ ಅಂತ ಅರ್ಜಿ ಹಾಕಿದ್ರೆ ಸಿಕ್ಕೇ ಬಿಡೋದೇ. ಒಂದಿಷ್ಟೂ ಇಷ್ಟವಿಲ್ಲದೆ ಬೇಗ ಕೆಲಸ ಬಿಟ್ಟು ಬಿಡೋಣ ಅಂತ ಸೇರಿದೆ. ಅದೇ ಕಾರಣಕ್ಕೆ ಯಾವ ಇಲಾಖಾ ಪರೀಕ್ಷೆ ಬರೆಯದೆ ಆರಾಮವಾಗಿದ್ದೆ. ಮನೆಗೆ ಹಣ ಕೊಡಬೇಕಾದ ಯಾವ ಬಂಧನವು ಇಲ್ಲದ್ದರಿಂದ ಬಂದಸಂಬಳವೆಲ್ಲ ಪಾಕೆಟ್ ಮನಿ. ಉಡಾಯಿಸಿದ್ದೆ ಉಡಾಯಿಸಿದ್ದು ಸಿನಿಮಾ ಹೋಟೆಲ್ ಸೀರೆ ಚಪ್ಪಲಿ ಅಕ್ಕ ತಂಗಿಯರಿಗೆ ಉಡುಗೊರೆಗಳು. ಕೆಲಸವಂತೂ ಬರೀ ಮಾತಾಡುವುದೇ . ಫೈಲ್ ಇಲ್ಲ ಪೆಂಡಿಂಗ್ ಇಲ್ಲ.ಆದರೆ ಇದೇ ಸಂಬಳ ಮದುವೆಯಾದ ನಂತರ ಮನೆಯವರ ಖಾಸಗಿ ಕಂಪನಿ ಉದ್ಯೋಗದ ದೆಸೆಯಿಂದ ಜೀವನೋಪಾಯವೇ ಆಗಿದ್ದು ಮಕ್ಕಳ ವಿದ್ಯಾಭ್ಯಾಸದ ಖರ್ಚು ಮನೆಯವರ ಅನಾರೋಗ್ಯ ಹೀಗೆ ಎಲ್ಲ ಕಷ್ಟ ಕಡುಕಷ್ಟ ಕಾಲದಲ್ಲಿ ನನ್ನನ್ನು ತಾಯಿಯಂತೆ ಸಲುಹಿದ್ದು ಇದೇ ಇಲಾಖೆಯ ಸಂಬಳ ಮತ್ತು ಭತ್ಯೆಗಳು. ಅಂದು ಹುಡುಗಾಟಕ್ಕೆ ಅರ್ಜಿ ಹಾಕಿ ಗಳಿಸಿದ ನೌಕರಿಗೆ ಹದಿನೆಂಟನೇ ವಯಸ್ಸಿಗೆ ಶುರುವಾದ ಪಯಣ ಅರವತ್ತನೇ ವಯಸ್ಸಲ್ಲಿ ನಿವ್ರಿತ್ತಿಯಾಗುವ ತನಕ ನಡೆದು ಬಂತು. ೨೦೧೬ ಫೆಬ್ರುವರಿ ವರೆಗೂ. ಇಂದು ನನ್ನಿಬ್ಬರ ಮಕ್ಕಳು ಉತ್ತಮ ಉದ್ಯೋಗದಲ್ಲಿದ್ದು ಕೈ ತುಂಬಾ ಸಂಬಳ ಪಡೆಯುತ್ತಿದ್ದಾರೆ . ಇಲಾಖೆಯಿಂದಲೂ ಸಾಕಷ್ಟು ಪೆನ್ಷನ್ ಬರ್ತಿದೆ. ನೀವು ಹೇಳಿದ ಹಾಡಿನೊಂದಿಗೆ ನನ್ನೀ ಟಿಪ್ಪಣಿಯನ್ನು ಮುಗಿಸುತ್ತಿದ್ದೇನೆ. ದುಖ್ ಭರೇ ದೀನ್ ಭೀತೆರೆ ಭೈಯ್ಯಾ ಸುಖ್ ದೀನ್ ಅಯೋರೆ ಎಂದು. ಧನ್ಯವಾದಗಳು !!

    Laxmi GN (FB)

    ReplyDelete
  4. ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ನನಗೂ ಹೀಗೇನೇ ಹದಿನೈದು ವರ್ಷಗಳ ವಿದ್ಯಾಭ್ಯಾಸದ ಅವಧಿ ಮುಗೀಬೇಕು ಮುಗೀತು..!!
    ಅದರಿಂದ ನಾನು ಅನ್ನ ಗಳಿಸುವ ನಂಬಿಕೆ ನನಗೆ ಮುಂಚಿನಿಂದಲೂ ಇರಲಿಲ್ಲ ಹಾಗಾಗಿ ಯಾಂತ್ರಿಕವಾಗಿ ಮುಗಿಸಿದೆ..
    ಪ್ರಾಥಮಿಕ ಶಾಲೆ ಏನೋ ಸುಳ್ಳು ನೆಪ ಹೇಳಿ ಬಂಕ್ ಮಾಡಿ ಮನೆಯಲ್ಲಿ ಅಡಗಿದ್ದರೂ ನಾಲ್ಕನೇ ಕ್ಲಾಸಿನ ಮಾನಿಟರ್ ಗಳಾದ ರೇಣುಕಾ ಹಾಗೂ ಗಿರಿಜಾ ನನ್ನ ಬುಜಗಳಿಗೆ ಕೈಹಾಕಿ ಏಸುಕ್ರಿಸ್ತನನ್ನ ಎತ್ತಿಕೊಂಡ ಹಾಗೆ ಶಾಲೆಯವರೆಗೂ ಎತ್ತಿಕೊಂಡು ಹೋಗಿ ಮೇಷ್ಟ್ರ ಮುಂದೆ ಕುಕ್ಕುತ್ತಿದ್ದರು..
    ಶಾಲಾ ಕಾಲೇಜು ಜೀವನ ಬರೆಯುವ ನೆಪದಲ್ಲಿ ನಿಮ್ಮ ಪರಿಸರವನ್ನೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ ಸರ್..

    Sudarshana Reddy DN (FB)

    ReplyDelete


  5. ಎಂದಿನ ಹಾಗೆ ಪ್ರಥಮ ದರ್ಜೆಯ ಆತ್ಮೀಯ ಬರಹ.....

    ReplyDelete
  6. I l liked this essay very much. I too enjoyed my school days almost similarly. But in these we do not find joint families and so now present children are deprived of enjoyment. Present system of education and too much expectations has made children more tense.

    ReplyDelete

Your valuable comments/suggestions are welcome