ಸ್ವರ್ಣ ಗೌರಿ ಚಿತ್ರದ ಬಾರೇ ನೀ ಚೆಲುವೆ, ಜೀನೆ ಕೀ ರಾಹ್ ಚಿತ್ರದ ಆನೇ ಸೆ ಉಸ್ ಕೇ ಆಯೇ ಬಹಾರ್, ರಣಧೀರ ಚಿತ್ರದ ಯಾರೆ ನೀನು ಸುಂದರ ಚೆಲುವೆ ಈ ಹಾಡುಗಳಲ್ಲಿ ಸಾಮಾನ್ಯ ಅಂಶವೊಂದಿದೆ. ಮೇಲ್ನೋಟಕ್ಕೆ ಇವು ಹೆಣ್ಣೊಬ್ಬಳ ಕುರಿತಾದ ಹಾಡುಗಳೆಂದು ಅನ್ನಿಸಿದರೂ ವಾಸ್ತವವಾಗಿ ಇವುಗಳಲ್ಲಿ ಪ್ರಕೃತಿಯನ್ನು ಹೆಣ್ಣಿನ ರೂಪದಲ್ಲಿ ಕಲ್ಪಿಸಿ ವರ್ಣಿಸಲಾಗಿದೆ. ಕಪ್ಪು ಬಿಳುಪು ಚಿತ್ರದ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಹಾಡಿನಲ್ಲಿರುವ ಅಮ್ಮ ಅಂದರೆ ಪ್ರಕೃತಿಯೇ. ಕಣ್ತೆರೆದು ನೋಡು ಚಿತ್ರದ ಬಂಗಾರದೊಡವೆ ಬೇಕೆ ಕಾವೇರಿ ನದಿಯನ್ನು ಉದ್ದೇಶಿಸಿ ಹಾಡಿರುವುದು. ಅದೇ ರೀತಿ ಕೆ. ಎಸ್. ನರಸಿಂಹಸ್ವಾಮಿಯವರ ಅಂಥಿಂಥ ಹೆಣ್ಣು ನೀನಲ್ಲ ಕೂಡ ತುಂಗಾ ನದಿಯನ್ನು ಕುರಿತು ಬರೆದದ್ದು ಎಂದು ಕೇಳಿದ್ದೇನೆ. ಗೌರಿ ಚಿತ್ರದಲ್ಲಿ ಅಳವಡಿಸಲಾಗಿದ್ದ ಕೆ.ಎಸ್.ನ ಅವರ ಇವಳು ಯಾರು ಬಲ್ಲೆಯೇನು ಕವನವೂ ಪ್ರಕೃತಿಯನ್ನು ಹೆಣ್ಣಂತೆ ಚಿತ್ರಿಸಿ ರಚಿಸಿದ್ದಾಗಿರಬಹುದು ಎಂದು ನನ್ನ ಅನ್ನಿಸಿಕೆ. ಕವನದ ಅನೇಕ ಸಾಲುಗಳು ಇದಕ್ಕೆ ಪುಷ್ಟಿ ನೀಡುತ್ತವೆ. ವೃಕ್ಷಗಳಿಂದ ತೂಗಾಡುತ್ತಿರುವ ಲತೆಗಳು ಅಡಿಯ ಮುಟ್ಟ ನೀಳ ಜಡೆ ಆಗಿರಬಹುದು. ಅವುಗಳ ತುದಿಯಲ್ಲಿ ಅರಳಿರುವ ಹೂ ಗೊಂಚಲುಗಳು ಮುಡಿಯನ್ನು ತುಂಬಿರುವ ಹೂವು ಹೆಡೆ ಆಗಿರಬಹುದು. ಮೂರನೇ ಚರಣದ ಮುಂಗಾರಿನ ಮಿಂಚು, ಇಳೆಗಿಳಿದಿಹ ಮೋಡ ಇತ್ಯಾದಿ ವಾಚ್ಯವಾಗಿಯೇ ಇವೆ. ಏನಿದ್ದರೂ ಇವಳ ಹೆಸರ ಹೇಳಲೇನು ಎಂದು ಪ್ರಶ್ನೆ ಮಾತ್ರ ಕೇಳಿ ನಿಗೂಢತೆಯನ್ನು ಕಾಯ್ದುಕೊಂಡ ಕವಿ ಊಹೆಯ ಉತ್ತರ ಹುಡುಕಿಕೊಳ್ಳುವ ಹೊಣೆಯನ್ನು ಕೇಳುಗರ ಮೇಲೆ ಹೊರಿಸಿದ್ದಾರೆ. ಆದರೆ ಇದನ್ನು ಆಲಿಸಿದ ಲಲನೆಯರೆಲ್ಲ ಇದ್ದು ತನ್ನನ್ನು ಕುರಿತಾದದ್ದು ಎಂದೇ ತಿಳಿದುಕೊಂಡರೆ ಆಶ್ಚರ್ಯವಿಲ್ಲ. ಮಲ್ಲಿಗೆ ಕವಿ ಎಂದೇ ಖ್ಯಾತರಾದ ಕೆ.ಎಸ್.ನ ಈ ರಚನೆಯಲ್ಲೂ ಮಲ್ಲಿಗೆಯ ಉಲ್ಲೇಖ ಮಾಡಿರುವುದು ಗಮನಾರ್ಹ.
ಯಾವಾಗಲೂ ಏನನ್ನಾದರೂ ಹೊಸತು ಮಾಡಬೇಕೆಂಬ ತುಡಿತವಿದ್ದ ಜಿ.ಕೆ. ವೆಂಕಟೇಶ್ ಅದಾಗಲೇ ಬೇಂದ್ರೆ ಅವರ ಯುಗ ಯುಗಾದಿ ಕಳೆದರೂ, ವಿಸೀ ಅವರ ಎಮ್ಮ ಮನೆಯಂಗಳದಿ ಮತ್ತು ಗೋವಿಂದ ಪೈಗಳ ತಾಯೆ ಬಾರ ಮೊಗವ ತೋರ ಕವನಗಳನ್ನು ಆಕರ್ಷಕ ರಾಗಸಂಯೋಜನೆಯೊಂದಿಗೆ ಕುಲವಧು ಚಿತ್ರದಲ್ಲಿ ಅಳವಡಿಸಿದ್ದರು. ಅದೇ ವರ್ಷ ಅಂದರೆ 1963ರಲ್ಲಿ ಎಸ್.ಕೆ.ಎ.ಚಾರಿ ನಿರ್ದೇಶನದಲ್ಲಿ ಬಂದ ಗೌರಿ ಚಿತ್ರದಲ್ಲಿ ಕುವೆಂಪು ವಿರಚಿತ ಯಾವ ಜನ್ಮದ ಮೈತ್ರಿ ಮತ್ತು ಕೆ.ಎಸ್.ನ ಅವರ ಇವಳು ಯಾರು ಬಲ್ಲೆಯೇನು ಸೇರ್ಪಡೆಗೊಂಡವು. ನಿರ್ದೇಶಕ ಚಾರಿ ಅವರಿಗೆ ಕವಿಗಳ ಗೀತೆಗಳಲ್ಲಿ ಹೆಚ್ಚಿನ ಒಲವಿದ್ದು ಮನೆ ಅಳಿಯ, ಮಾವನ ಮಗಳು ಚಿತ್ರಗಳಲ್ಲೂ ಕೆ.ಎಸ್.ನ ಮತ್ತು ಕುವೆಂಪು ಕವನಗಳನ್ನು ಬಳಸಿಕೊಂಡರು.
ಪಿ.ಬಿ.ಶ್ರೀನಿವಾಸ್ ಎಂದಿನಂತೆ ಅನನ್ಯ ಶೈಲಿಯಲ್ಲಿ ಹಾಡಿರುವ ಈ ಕವನಕ್ಕೆ ಆಲಾಪನೆಯ ರೂಪದಲ್ಲಷ್ಟೇ ಎಸ್. ಜಾನಕಿ ಜೊತೆ ನೀಡಿರುವುದು ಕನ್ನಡದಲ್ಲಿ ಮೊದಲ ಪ್ರಯೋಗವಾಗಿತ್ತು. ಒಂದು ವರ್ಷ ಹಿಂದೆ ಅಂದರೆ 1962ರಲ್ಲಿ ತಮ್ಮ ಗುರುಗಳಾದ ವಿಶ್ವನಾಥನ್ ರಾಮಮೂರ್ತಿ ಅವರು ವೀರ ತಿರುಮಗನ್ ಚಿತ್ರದಲ್ಲಿ ಪಿ.ಬಿ.ಎಸ್ ಹಾಡಿದ್ದ ಪಾಡಾದ ಪಾಟ್ಟೆಲ್ಲಾಂ ಪಾಡವಂದಾಳ್ ಹಾಡಿಗೆ ಜಾನಕಿ ಅವರ ಆಲಾಪನೆ ಉಪಯೋಗಿಸಿಕೊಂಡದ್ದು ಜಿ.ಕೆ. ವೆಂಕಟೇಶ್ ಅವರಿಗೆ ಕನ್ನಡದಲ್ಲೂ ಈ ರೀತಿ ಮಾಡಲು ಸ್ಪೂರ್ತಿ ನೀಡಿರಬಹುದು ಅನ್ನಿಸುತ್ತದೆ. ಮುಂದೆ ಅಮರ ಶಿಲ್ಪಿ ಜಕ್ಕಣ್ಣ ಚಿತ್ರದಲ್ಲಿ ಪಿ.ಸುಶೀಲ ಅವರ ಆಲಾಪನೆಯುಳ್ಳ ನಿಲ್ಲು ನೀ ನಿಲ್ಲು ನೀ ನೀಲವೇಣಿ ಬಂತು. ಮತ್ತೆ ಜಾನಕಿ ಅವರ ಆಲಾಪದೊಂದಿಗೆ ಪಿ.ಬಿ.ಎಸ್ ಹಾಡಿದ ರವಿವರ್ಮನ ಕುಂಚದ ಕಲೆ ಅಂತೂ ಎಲ್ಲರಿಗೂ ಗೊತ್ತಿರುವಂಥದ್ದೇ.
ಕವನದಲ್ಲಿ ಒಟ್ಟು 5 ಚರಣಗಳಿದ್ದು ಚಿತ್ರಕ್ಕಾಗಿ ಮೂರನ್ನು ಮಾತ್ರ ಬಳಸಿಕೊಳ್ಳಲಾಗಿದೆ. ಬಿಳಿ 3 ಅಂದರೆ E ಶ್ರುತಿಯಲ್ಲಿರುವ ಈ ಹಾಡಿನ ಪಲ್ಲವಿ ಭಾಗ ಮೋಹನ ರಾಗದಲ್ಲಿದ್ದು ಮಂದ್ರದಲ್ಲೇ ಹೆಚ್ಚು ಸಂಚರಿಸಿ ಪಂಚಮದ ವರೆಗೂ ಇಳಿಯುತ್ತದೆ. ಸಾಮಾನ್ಯವಾಗಿ ಮೋಹನ ರಾಗದ ಹಾಡುಗಳ ಸಂಚಾರ ಮಧ್ಯ ಮತ್ತು ತಾರ ಸಪ್ತಕದಲ್ಲಿ ಇರುವುದು ವಾಡಿಕೆ. ಹೀಗಾಗಿ ಇದು ಮೇಲ್ನೋಟಕ್ಕೆ ಮೋಹನ ಅನ್ನಿಸುವುದೇ ಇಲ್ಲ. ಮಾಂಡ್ ರಾಗದ ಛಾಯೆಯ ಜಾನಕಿ ಅವರ ಆಲಾಪನೆಯೂ ತಾರ ಸಪ್ತಕದ ರಿಷಭಕ್ಕಿಂತ ಮೇಲೆ ಹೋಗುವುದಿಲ್ಲ. ಪಿ.ಬಿ.ಎಸ್ ಅವರ comfort zone ಮನಸ್ಸಲ್ಲಿಟ್ಟುಕೊಂಡೇ ಜಿ.ಕೆ.ವೆಂಕಟೇಶ್ ಸೂಕ್ತ ಸ್ಥಾಯಿ ಆಯ್ಕೆ ಮಾಡಿದಂತಿದೆ. ಮೋಹನ, ಮಾಂಡ್ ಇವುಗಳಿಗೆ ಹೊರತಾದ ಅನ್ಯ ಸ್ವರಗಳೂ ಅಲ್ಲಲ್ಲಿ ಇಣುಕುವ ಮೂರು ಚರಣಗಳ ರಾಗ ಸಂಯೋಜನೆ ಏಕರೂಪವಾಗಿಲ್ಲ. ಹಿನ್ನೆಲೆ ಸಂಗೀತ ಸರಳವಾಗಿದ್ದು ಕ್ಲಾರಿನೆಟ್- ಕೊಳಲು, ಸಿತಾರ್, ಗಿಟಾರ್, ಮ್ಯಾಂಡೊಲಿನ್, ಗ್ರೂಪ್ ವಯಲಿನ್ಸ್ ಇದ್ದು ತಾಳವಾದ್ಯಗಳಾಗಿ ಢೋಲಕ್ ಮತ್ತು ತಬಲಾಗಳನ್ನು ಜೊತೆಜೊತೆಯಾಗಿ ಬಳಸಲಾಗಿದೆ. ಆಗಿನ ಹಾಡುಗಳಲ್ಲಿ ಸಾಮಾನ್ಯವಾಗಿದ್ದಂತೆ ಸೂಕ್ತ ಸ್ಥಾನಗಳಲ್ಲಿ ರಿದಂ break ಮತ್ತು take off ಇದೆ. ಮೂರನೆಯ ಚರಣದ ತಬ್ಲಾ ನಡೆ ಬಲು ಆಕರ್ಷಕ. ಕೆಲವೆಡೆ ಮಂದ್ರವನ್ನು ಸ್ಪರ್ಶಿಸುವ ಕ್ಲಾರಿನೆಟ್ ಧ್ವನಿ ನಮ್ಮದೇ ನಾಭಿಯಿಂದ ಹೊರಟಂತೆ ಭಾಸವಾಗುತ್ತದೆ! ಸಾಮಾನ್ಯವಾಗಿ ಭಾವಗೀತೆಗಳಲ್ಲಿ ಏಕತಾನತೆಯಿಂದ ಕೂಡಿದ interludeಗಳಿರುತ್ತವೆ. ಆದರೆ ಇಲ್ಲಿ ಜಿ.ಕೆ.ವಿ ಅವರ ಹೆಚ್ಚಿನ ಸಂಯೋಜನೆಗಳಲ್ಲಿರುವಂತೆ ಅವು ಹಾಡಿನ ಅವಿಭಾಜ್ಯ ಅಂಗವಾಗಿರುವುದು ಗಮನಾರ್ಹ. ಮುಕ್ತಾಯ ಭಾಗದಲ್ಲಿ ಪಿಯಾನೋ ಕೂಡ ಕೇಳಿಸುವ Preludeನ ನಂತರ ಜೆಮಿನಿಯ ಎಸ್.ಎಸ್.ವಾಸನ್ ಅವರು ಒಂದೆಡೆ ಹೇಳಿದ್ದಂತೆ ಪಿ.ಬಿ.ಶ್ರೀನಿವಾಸ್ ಅವರ ಕಲ್ಲನ್ನೂ ಕರಗಿಸಬಲ್ಲ ಆಲಾಪದೊಂದಿಗೆ ಹಾಡು ಆರಂಭವಾಗುತ್ತದೆ. ಚರಣಗಳ ಮಧ್ಯದಲ್ಲೂ ಪಿ.ಬಿ.ಎಸ್ ಆಲಾಪಗಳಿವೆ. ಜಾನಕಿಯವರ ಆಲಾಪಗಳು interludeಗಳ ಭಾಗವಾಗಿ ಬರುತ್ತವೆ. ಮೊದಲ ಆಲಾಪವು preludeನಲ್ಲಿ ಕ್ಲಾರಿನೆಟ್-ಕೊಳಲುಗಳು ಜೊತೆಯಾಗಿ ನುಡಿಸಿದ ಒಂದು ಸಾಲೇ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ತಿಳಿಯುತ್ತದೆ. ಮುಂದಿನೆರಡು interludeಗಳಲ್ಲಿ ಬರುವ ಸನಿಸನಿದನಿಸಾ ನಿದನೀ... ಪದಪಗಪಾ ದನಿಸರಿಸನಿ ಸನಿದನಿಸಾ ಎಂಬ ಆಲಾಪ ಹಾಡಿನ ಹೈಲೈಟ್ ಅನ್ನುವಷ್ಟು ಆಕರ್ಷಕವಾಗಿದೆ. ಆದರೆ HMV ಬಿಡುಗಡೆ ಮಾಡಿದ CDಯೊಂದರಲ್ಲಿರುವ ಈ ಹಾಡಿನ ಆವೃತ್ತಿಯಲ್ಲಿ ಈ ಆಲಾಪ ಭಾಗವನ್ನೇ ಕತ್ತರಿಸಿರುವುದು ಆಶ್ಚರ್ಯಕರ. FM ಮತ್ತು ಇತರ ಆಕಾಶವಾಣಿ ನಿಲಯಗಳಲ್ಲಿ ಯಾವಾಗಲಾದರೊಮ್ಮೆ ಕೇಳ ಸಿಗುವುದು ಈ ಕ್ಷತಿಗ್ರಸ್ತ ಆವೃತ್ತಿಯೇ.
ಗೌರಿ ಚಿತ್ರದಲ್ಲಿ ಸಾಹುಕಾರ್ ಜಾನಕಿ ಜೊತೆ ರಾಜಕುಮಾರ್ ಮುಖ್ಯ ಪಾತ್ರದಲ್ಲಿದ್ದರೂ ಈ ಹಾಡನ್ನು ತೆರೆ ಮೇಲೆ ಹಾಡಿದ್ದು ಅವರ ಮಗನ ಪಾತ್ರ ವಹಿಸಿದ ಡಾಕ್ಟರ್ ಸಿ.ವಿ. ಸುಬ್ಬ ರಾವ್ ಎಂಬವರು. ಚಿತ್ರದ ಟೈಟಲ್ಸಲ್ಲಿ ಅವರ ಹೆಸರು ಶಶಿಕಾಂತ್ ಎಂದಿದೆ. ಕೆಲ ಕಾಲ ಸೇನೆಯಲ್ಲೂ ಸೇವೆ ಸಲ್ಲಿಸಿದ ಅವರು ಆ ಮೇಲೆ ವಿದೇಶಕ್ಕೆ ಹೋದರಂತೆ.
ಗೌರಿ ಚಿತ್ರದಲ್ಲಿ ಸಾಹುಕಾರ್ ಜಾನಕಿ ಜೊತೆ ರಾಜಕುಮಾರ್ ಮುಖ್ಯ ಪಾತ್ರದಲ್ಲಿದ್ದರೂ ಈ ಹಾಡನ್ನು ತೆರೆ ಮೇಲೆ ಹಾಡಿದ್ದು ಅವರ ಮಗನ ಪಾತ್ರ ವಹಿಸಿದ ಡಾಕ್ಟರ್ ಸಿ.ವಿ. ಸುಬ್ಬ ರಾವ್ ಎಂಬವರು. ಚಿತ್ರದ ಟೈಟಲ್ಸಲ್ಲಿ ಅವರ ಹೆಸರು ಶಶಿಕಾಂತ್ ಎಂದಿದೆ. ಕೆಲ ಕಾಲ ಸೇನೆಯಲ್ಲೂ ಸೇವೆ ಸಲ್ಲಿಸಿದ ಅವರು ಆ ಮೇಲೆ ವಿದೇಶಕ್ಕೆ ಹೋದರಂತೆ.
ಸುಮಾರು 5 ನಿಮಿಷ ಅವಧಿಯ ಈ ಹಾಡು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿತ್ತು. ಆಲಾಪ ಸಹಿತ ಪೂರ್ತಿ ಹಾಡು ಇಲ್ಲಿ ಕೇಳಿ.
ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು
ನನ್ನ ಸೆಳೆದಳು
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬ ಹೂವು ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆಹೆಜ್ಜೆಗೆ ಒಂದು
ದೊಡ್ಡ ಮಲ್ಲಿಗೆ
ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆಯಿಂಪು
ಮೋಹದ ಮಲ್ಲಿಗೆಯ ಕಂಪು
ಕರೆದುವೆನ್ನನು ನಾನು
ಹಿಡಿಯ ಹೋದೆನು
ಬಂಗಾರದ ಬೆಳಕಿನೊಳಗೆ
ಮುಂಗಾರಿನ ಮಿಂಚು ಬೆಳಗೆ
ಇಳೆಗಿಳಿದಿಹ ಮೋಡದೊಳಗೆ
ಮೆರೆಯುತಿದ್ದಳು ನನ್ನ
ಕರೆಯುತಿದ್ದಳು
-----------
ಇಲ್ಲಿ ಬಳಸಿಕೊಳ್ಳದ ಚರಣಗಳು
ತಾರೆಯಿಂದ ತಾರೆಗವಳು
ಅಡಿಯಿಡುವುದ ಕಂಡೆನು
ಹೂವನೆಸದು ನಡೆದಳವಳು
ಒಂದೆರಡನು ತಂದೆನು
ತಂದ ಹೂವೆ ಇನಿತು ಚಂದ
ಮುಡಿದವಳನು ನೆನೆಯಿರಿ
ಕಾಣಿಸದಾ ವೀಣೆಯಿಂದ
ಹಾಡಿಳಿವುದು ಕೇಳಿರಿ
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು
ನನ್ನ ಸೆಳೆದಳು
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬ ಹೂವು ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆಹೆಜ್ಜೆಗೆ ಒಂದು
ದೊಡ್ಡ ಮಲ್ಲಿಗೆ
ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆಯಿಂಪು
ಮೋಹದ ಮಲ್ಲಿಗೆಯ ಕಂಪು
ಕರೆದುವೆನ್ನನು ನಾನು
ಹಿಡಿಯ ಹೋದೆನು
ಬಂಗಾರದ ಬೆಳಕಿನೊಳಗೆ
ಮುಂಗಾರಿನ ಮಿಂಚು ಬೆಳಗೆ
ಇಳೆಗಿಳಿದಿಹ ಮೋಡದೊಳಗೆ
ಮೆರೆಯುತಿದ್ದಳು ನನ್ನ
ಕರೆಯುತಿದ್ದಳು
-----------
ಇಲ್ಲಿ ಬಳಸಿಕೊಳ್ಳದ ಚರಣಗಳು
ತಾರೆಯಿಂದ ತಾರೆಗವಳು
ಅಡಿಯಿಡುವುದ ಕಂಡೆನು
ಹೂವನೆಸದು ನಡೆದಳವಳು
ಒಂದೆರಡನು ತಂದೆನು
ತಂದ ಹೂವೆ ಇನಿತು ಚಂದ
ಮುಡಿದವಳನು ನೆನೆಯಿರಿ
ಕಾಣಿಸದಾ ವೀಣೆಯಿಂದ
ಹಾಡಿಳಿವುದು ಕೇಳಿರಿ
*******
ಕೊನೆಯಲ್ಲಿ ಕಲ್ಲನ್ನೂ ಕರಗಿಸಬಲ್ಲ ಪಿ.ಬಿ.ಎಸ್ hummingಗಳ ಒಂದು medley ರೂಪದ ಬೋನಸ್. ಈ ಆಲಾಪ ಭಾಗಗಳು ಯಾವ ಹಾಡುಗಳಿಗೆ ಸಂಬಂಧಿಸಿದವು ಎಂದು ಸಾಧ್ಯವಾದರೆ ಗುರುತಿಸಿ.
1. ಹಾಡೊಂದ ಹಾಡುವೆ. 3.ನೀಲಿ ಮೇಘ
ReplyDelete4. kareye kogile
Delete